‘ಮಜಾ ವಿತ್ ಸೃಜನ್’ – ಕಿರು ಹಾಸ್ಯನಾಟಕ

ಕನ್ನಡ ಬಳಗದಲ್ಲಿ  ‘ಮಜಾ ವಿತ್  ಸೃಜನ್’ ಕಿರು ಹಾಸ್ಯನಾಟಕ

ರಚನೆ: ಡಾ. ಜಿ.ಎಸ್. ಶಿವ ಪ್ರಸಾದ್

shiva-prasad-with-srujan-lokesh
ಸೃಜನ್ ಜೊತೆಗೆ ಶಿವಪ್ರಸಾದ್

ಹಿನ್ನೆಲೆ ಕನ್ನಡ ಕಿರು ತೆರೆಯ ಕಾಮಿಡಿ ಶೋ ಮಜಾ ಟಾಕೀಸ್ನ ಹೀರೋ/ಸ್ಟಾರ್ ಸೃಜನ್ ಲೋಕೇಶ್ ಅವರು ಕನ್ನಡ ಬಳಗ ಯು.ಕೆ.ಯ ಆಹ್ವಾನದ ಮೇರೆಗೆ ಇಂಗ್ಲೆಂಡಿಗೆ ಬಂದಿದ್ದಾರೆ. ಕನ್ನಡ ಬಳಗ ಏರ್ಪಡಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಅವರು ವೇದಿಕೆಯ ಮೇಲೆ ಬಂದು, ಇನ್ನೊಬ್ಬ ಪಾತ್ರಧಾರಿಯೊಂದಿಗೆ ಜೊತೆಗೂಡಿ ನಟಿಸಿ ಈ ಕಿರು ನಾಟಕವನ್ನು ಪ್ರದರ್ಶಿಸಲು ಒಪ್ಪಿರುತ್ತಾರೆ. ಆ ಪಾತ್ರಧಾರಿ  ಕನ್ನಡ ಬಳಗದ ಸದಸ್ಯ. 

ದೃಶ್ಯ –  ಒಂದು

ಪಾತ್ರಧಾರಿ ಹಾಡುತ್ತಾ ಪ್ರವೇಶ ಮಾಡುತ್ತಾನೆ: ‘ಬೆಳ್ಳಿ ಮೂಡಿತೋ ಕೋಳಿ ಕೂಗಿತೋ’… ‘ಬೆಳ್ಳಿ ಮೂಡಿತೋ ಕೋಳಿ ಕೂಗಿತೋ’…

ಸೃಜನ್: ಅಲ್ಲ ನೋಡಿ, ನಾನು ಮೂರ್ ದಿವಸದಿಂದ ಇಂಗ್ಲೆಂಡ್ನಲ್ಲಿ ಇದ್ದೀನಿ. ಒಂದು ದಿವಸಾನೂ ಕೋಳಿ ಕೂಗಿದ್ದು ಕೇಳಿಸಲಿಲ್ಲ!

ಪಾತ್ರಧಾರಿ: ಸೃಜನ್, ಅದು ಹೇಗೆ ಸಾಧ್ಯ? ಇಲ್ಲಿ ಜನ ಇರೋ ಕೋಳಿಗಳನ್ನ ಹಿಡ್ಕಂಡು ತಿಂದ್ರೆ, ಕೂಗಕ್ಕೆ ಕೋಳಿ ಇದ್ರೆ ತಾನೇ!

ಒಂದು ವೇಳೆ ಕೆಲವು ಕೋಳಿ ಇನ್ನೂ ಉಳಿದಿದ್ರೆ ಅವು ಚಳಿಗೆ ಬೆಚ್ಚಗೆ ಮಲ್ಗಿರ್ತಾವೆ!

ಇನ್ನೂ ಕೆಲವು ಚುರುಕಾದ ಮರಿ ಕೂಗಿದರೂ ನಿಮ್ಗೆ ಕೇಳಿಸಿಲ್ಲ ಅಂತ ಅನಿಸುತ್ತೆ?

ಸೃಜನ್: ಹೇಯ್, ನಾನೇನು ಕೆಪ್ಪ ಅಲ್ಲ, ದೊಡ್ಡ ದೊಡ್ಡ ಶೋ ನಡುಸ್ಕೊಡ್ತೀನಿ?!

ಪಾತ್ರಧಾರಿ: ಸೃಜನ್ ನಾನು ನಿಮ್ಮನ್ನ ಕೆಪ್ಪ ಅಂದಿಲ್ಲ ರೀ, ನೋಡಿ, ನೀವು ಅಲ್ಲಿಂದ ಬಂದಿದ್ದೀರಿ, ಸ್ವಲ್ಪ ಜೆಟ್ ಲ್ಯಾಗ್ ಇರಬಹದು ಅಷ್ಟೆ … ಹಾಗೆ… ಇಲ್ಲಿ ಮನೆಗಳ ಕಿಟಕಿಗೆ ಡಬಲ್ ಗ್ಲೇಝಿನ್ಗ್ ಹೊಡೆದಿದ್ದಾರೆ. ಹೊರಗೇನಾಗ್ತಿದ್ರು ಒಳಗೆ ಕೇಳಿಸೋಲ್ಲ, ಒಳಗೆ ಕಳ್ಳ ಬಂದು ನಾವು ಬೊಬ್ಬೆ ಹೊಡಕೊಂಡ್ರು ಹೊರಗೆ ಯಾರಿಗೂ ಕೇಳಿಸೋಲ್ಲ!!

ಸೃಜನ್: ಇದ್ಯಂಥ ಲೈಫ್ ರೀ ನಿಮ್ಮದು!! ಬೆಳ್ಳಿ ಮೂಡಿತೋ ಅಂತ ಹಾಡ್ತಾ ಇದ್ದೀರಾ? ಮೂರ್ ದಿವಸದಲ್ಲಿ ನಾನು ಬೆಳ್ಳಿ ಮೂಡಿದ್ದನ್ನು ನೋಡಲೇ ಇಲ್ಲವಲ್ಲ!

ಪಾತ್ರಧಾರಿ: ಸೃಜನ್, ಇದು ಇಂಗ್ಲೆಂಡ್ ರೀ …‘ಸೂರ್ಯ ಮುಳುಗದ ಸಾಮ್ರಾಜ್ಯ’ ಇಲ್ಲಿ ಸೂರ್ಯ ಮುಳುಗಿದರೆ ತಾನೇ ಹುಟ್ಟುಕ್ಕೆ!

ಸೃಜನ್: ಅದೆಲ್ಲ ಹಳೆ ಕಂತೆ ಬಿಟ್ಟಹಾಕ್ರಿ. ನಿಮ್ಮ ಇಂಗ್ಲಂಡ್ Brexit ಆದ್ಮೇಲೆ ಅದ್ಯಾವ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಅಂತ ಎಲ್ಲರಿಗು ಗೊತ್ತು ಬಿಡ್ರಿ ! ಇಮಿಗ್ರೇಷನ್ ಇಮಿಗ್ರೇಷನ್ ಅಂತ ಎಲ್ಲ ಬಾಗಿಲು ಮುಚ್ಚಿ ಕುತ್ಕೊಂಡ್ರೆ ದೇಶ ಉದ್ದಾರ ಆಗುತ್ತಾ ಹೇಳಿ? ಅದೇನೋ ಗಾದೆ ಇದೆಯಲ್ಲ … ‘ಮಾಡಿದ್ದು ಉಣ್ಣೋ ಮಹರಾಯ’ ಅಂತ…

ಇಂಥ lousy weather ಇದ್ದರೆ ಸೂರ್ಯ ಎಲ್ಲಿ ಕಾಣಿಸ್ತಾನೆ ಹೇಳಿ. ಅಂದ ಹಾಗೆ ಇಲ್ಲಿ ಜನ ಮೂರೂ ಮೂರೂ ದಿವಸಕ್ಕು ಅದೇನೋ Holiday ಅಂತ ಬಿಸಿಲಿರೋ ಜಾಗಕ್ಕೆ ಓಡಿಹೋಗಿ ಬಟ್ಟೆ ಬಿಚ್ಕೊಂಡು ಪಾಪ ಬಿಸಿಲು ಕಾಯಿಸ್ತಾರೆ ಅಂತ ಕೇಳಿದ್ದೆ. ಅಂದ ಹಾಗೆ ನಮ್ಮ ಗೋವ ಬೀಚ್ಗೆ ವಿಮಾನದ ತುಂಬಾ ಬಿಳಿ ಜನ ಸೂರ್ಯನ್ನ ಕಾಣಕ್ಕೆ ಬರ್ತಾರೆ!!

ಇದ್ಯಂಥ ಲೈಫ್ ರೀ ನಿಮ್ದು!

ಪಾತ್ರಧಾರಿ: ಸೃಜನ್, ಸರಿ ನಾನು ಹೊರ್ಡ್ತೀನಿ, Thank you very much.

ಸೃಜನ್: ಅಲ್ಲಾರಿ, ನಿಮ್ಮ ಇಂಗ್ಲಂಡ್ ನಲ್ಲಿ ಜನ ಯಾಕೆ ಎಲ್ಲದುಕ್ಕೂ ಥ್ಯಾಂಕ್ಸ್ ಹೇಳ್ತಾರೆ? ಕೂತರೆ ಥ್ಯಾಂಕ್ಸ್, ನಿಂತರೆ ಥ್ಯಾಂಕ್ಸ್, ಕೆಮ್ಮಿದರೆ sorry, ತೇಗಿದರೆ pardon me! ಇವರೆಲ್ಲ ನಮ್ಮ ಮದುವೆ ಮನೆಗೆ ಅಥವಾ ಸಮಾರಾಧನೆಗೆ ಬಂದು ನೋಡಬೇಕು. ಜನ ಹೇಗೆ ಸಂತೃಪ್ತಿಯಾಗೆ ತರಾವರಿ ತೇಗತಾರೆ ಅಂತ!! ನಿಮ್ಮ ಥರ ಸಾವಿರಾರು ಸಾರಿ Thank you, pardon me ಅಂತಾ ಇದ್ರೆ ನಮ್ಮ ಬಾಯಿ ಬಿದ್ದು ಹೊಗುತ್ತೆ!

ಪಾತ್ರಧಾರಿ: ಸೃಜನ್ ಅವರೇ, ಇಲ್ಲಿ ಜನ ಬರಿ ಮಾತಲ್ಲಿ thanks ಅಂತ ಹೇಳ್ತಾರೆ. ನೀವು ಯಾವತ್ತಾದ್ರು ಜಪಾನ್ ದೇಶಕ್ಕೆ ಹೋಗಿದ್ದಿರ??

ಸೃಜನ್: ಇಲ್ವಲ್ಲ, ಅಲ್ಲಿ ಏನು ವಿಶೇಷ?

ಪಾತ್ರಧಾರಿ: ಅಲ್ಲಿ ಜನ Hello ಮತ್ತೆ Thanks ಹೇಳೋದು ನೋಡಿದ್ರ?? ಪ್ರತಿ ಸಾರಿ ಬಗ್ಗಿ ಬಗ್ಗಿ ಬೆನ್ನು ಮುರ್ಕೊಬೇಕಾಗುತ್ತೆ! England ನಲ್ಲಿ ಬಾಯಿಗೆ ಸ್ವಲ್ಪ ಕೆಲಸ ಅಷ್ಟೆ. ಅಂದ ಹಾಗೆ ಇಲ್ಲಿ ಇರೋ ಮೊಳೆ ಡಾಕ್ಟರ್ಗಳು ಅವ್ರಿಗೆನಾದ್ರು ಜಪಾನೀಸ್ ಭಾಷೆ ಬಂದಿದ್ರೆ … ಅಲ್ಲಿ ಹೋಗಿ ಪ್ರೈವೇಟ್ ಪ್ರಾಕ್ಟೀಸ್ ಮಾಡೇ ಬಿಡ್ತಾಯಿದ್ರು.

ಪಾತ್ರಧಾರಿ: ಅಂದ ಹಾಗೆ Orthpoedic ಡಾಕ್ಟರ್ ಗಳ ಬಗ್ಗೆ ಒಂದು ಜೋಕು ಜ್ಞಾಪಕ್ಕೆ ಬಂತು…

ಸೃಜನ್: ಹೇಳಿ ನೋಡೋಣ…

ಪಾತ್ರಧಾರಿ: ನಮ್ಮ ಪಕ್ಕದ ಮನೆ ಪುಟ್ಟ ಹುಡುಗಿ ಕಾಜಲ್ ಅವಳ ಪ್ರೈಮರಿ ಸ್ಕೂಲ್ನಲ್ಲಿ ಮೇಡಂ ನಿಮ್ಮಪ್ಪ ಏನು ಕೆಲಸ ಮಾಡ್ತಾರೆ ಮರಿ ಅಂತ  ಕೇಳಿದಾಗ ಅವಳು ನಮ್ಮಪ್ಪ Octopus surgeon ಅಂದಳಂತೆ. ಮೇಡಂ ಗೆ ತಲೆಬುಡ ಏನು ತಿಳಿಲಿಲ್ಲ. ಅವತ್ತು ಸಂಜೆ ಕಾಜಲ್ ಅಪ್ಪ ಗಿರೀಶ್ ಸ್ಕೂಲಿಗೆ ಬಂದಾಗ ಅಪ್ಪನನ್ನೇ ಮೇಡಂ  ನೇರವಾಗಿ ಕೇಳಿದರು. ಅಪ್ಪ ತಾನು Orthopedic surgeon ಅಂದಾಗಾ ಮೇಡಂ ಗೆ ಸಕತ್ ನಗುಬಂತು, ಅಪ್ಪ ಮತ್ತು ಕಾಜಲ್ ಕೂಡ ಬಿದ್ದು ಬಿದ್ದು ನಕ್ಕಿದ್ರು.

ಎಲ್ಲ Orthopedic surgeonಗಳು ಇದರ ಬಗ್ಗೆ ಯೋಚಿಸಿರಬೇಕು. ಎಲ್ಲ ಮನುಷ್ಯರಿಗೂ Octopus ತರಹ ಎಂಟು ಕೈ ಕಾಲುಗಳಿದ್ದರೆ ತಮ್ಮ ಪ್ರೈವೇಟ್ ಪ್ರಾಕ್ಟೀಸ್ ಇನ್ನು ಹತ್ತು ಪಟ್ಟು ಹೆಚ್ಚಾಗಿರ್ತಿತ್ತು ಅಂತ!!

ಪಾತ್ರಧಾರಿ: ಸೃಜನ್ ಅವರೇ, ನಿಮಗೆ ಈಗ ಒಂದು ಜೋಕ್ ಹೇಳಿಯಾಯಿತು. ಈಗ ಒಂದು ತಮಾಷೆ ಪದ್ಯ ಓದಬಹುದೇ?

ಸೃಜನ್: ಹೇಳಿ ನೋಡೋಣ.

ಪಾತ್ರಧಾರಿ: ನೀವು ಜನಪ್ರಿಯವಾದ ಡಾ.ಜಿ.ಎಸ್.ಎಸ್ ಅವರ ‘ಎದೆ ತುಂಬಿ ಹಾಡಿದೆನು’ ಕವಿತೆ ಕೇಳಿರಬಹುದು. ಇದನ್ನು ನಮ್ಮ ಬಳಗದ ದಿವಂಗತ ಡಾ.ರಾಜಾರಾಂ ಕಾವಳೆಯವರು ಬೇರೆ ರೀತಿಯಲ್ಲಿ ಬಳಸಿಕೊಂಡು ಹಾಸ್ಯ ಕವನವನ್ನು ರಚಿಸಿದ್ದಾರೆ.

ಇದನ್ನು ನೀವೇ ಯಾಕೆ ಹಾಡಬಾರದು?

ಸೃಜನ್: ಓ.ಕೆ. ಟ್ರೈ ಮಾಡ್ತೀನಿ… ಸೃಜನ್ ಹಾಡುತ್ತಾರೆ…

ಎಡೆಬಿಡದೆ ಮಾಡಿದೆನು ಅಡುಗೆ ನಾನು
ಮನಃ ತೃಪ್ತಿ ಮಾಡಿದಿರಿ ಊಟ ನೀವು.
ಪಾತ್ರಧಾರಿ: ಬರ್ತೀನಿ ಸೃಜನ್ ಅವರೇ, ನಮಸ್ಕಾರ.

srujan-cartoon-1
ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ

*****

ದೃಶ್ಯ 2 ಮತ್ತು ದೃಶ್ಯ 3

ಹಿನ್ನೆಲೆ – ಈ ದೃಶ್ಯದಲ್ಲಿ ಪಾತ್ರಧಾರಿ ಕನ್ನಡ ಬಳಗದ ಕಿರಿಯ ಸದಸ್ಯ. ಅವನು ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಗೆ ಬಂದಿರುವವರಲ್ಲಿ ಒಬ್ಬ. ಅವನಿಗೆ ಸೃಜನ್ ಜೊತೆ ಮಂಡ್ಯ ಕನ್ನಡದಲ್ಲಿ ಮಾತಾಡುವ ಖಯಾಲಿ!  

ಹಾಡುತ್ತ ಪಾತ್ರಧಾರಿಯ ಪ್ರವೇಶ, “ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು…”

ಸೃಜನ್: ಅಲ್ಲಾಪ್ಪ, ಇನ್ನು 3 ಘಂಟೆ! ಆಗಲೇ ಗುಂಡಿನ ಬಗ್ಗೆ ಯೋಚಿಸ್ತಾ ಇದ್ದೀಯ?!

ಪಾತ್ರಧಾರಿ: ಸೃಜನ್ ಅಣ್ಣ, ಇದು ಇಂಗ್ಲೆಂಡ್, ಇಲ್ಲಿ ಜನ ಮಧ್ಯಾನ್ಹ ರಾತ್ರಿ ಉಟಕ್ಕೆ ಬೀರ್ ವೈನು ನಾವು ನೀರ್ ಕುಡಿದಂಗೆ ಕುಡಿತಾರೆ. ಮೇಲಾಗಿ ಸ್ಕಾಚ್ ವಿಸ್ಕಿ ಕಂಡ್ ಹಿಡಿದಿದ್ದು ಪಕ್ಕದ ಸ್ಕಾಟ್ ಲ್ಯಾಂಡ್ ನಲ್ಲಿ.

ಸೃಜನ್: ಅಯ್ಯೋ ಅವ್ರ ಅರೋಗ್ಯ ಕೆಟ್ಟರೆ ಆಸ್ಪತ್ರೆಗೆ ದುಡ್ಡು ಯಾರ್ ಕಟ್ತಾರೆ? ನಾವೇನೋ ಇಂಡಿಯಾದಲ್ಲಿ ಪಾರ್ಟಿ ಗೀರ್ಟಿನಲ್ಲಿ ಸೂರ್ಯ ಕೆಳಗೊದ್ಮೇಲೆ ಕುಡಿತೀವಿ.

ಪಾತ್ರಧಾರಿ: ಅಣ್ಣಾ ಇದು ರಾಮರಾಜ್ಯ. ಇಲ್ಲಿ ಆಸ್ಪತ್ರೆ Free, ಕೆಲಸ ಇಲ್ಲ ಅಂತ ಕೈ ಎತ್ ದವ್ರಗೆ ಮನೆ ಮತ್ತೆ ಊಟ ಎಲ್ಲ free!

ಸೃಜನ್: ಎ ಹಂಗಾರೆ ನಾನು ಇಮಿಗ್ರೇಷನ್ ತಗೊಂಡ್ರೆ ಹೇಗೆ, ಪರ್ಮೆನೆಂಟ್ ಆಗಿ ಇಲ್ಲೇ ಇದ್ ಬಿಡನ ಅಂತ ಆಸೆ ಆಗ್ತಾ ಇದೆ!!

ಪಾತ್ರಧಾರಿ: ಪರ್ಪಂಚ್ ದಲ್ಲಿ ಇರೊ ಜನ ಇಂಗ್ಲಂಡ್ ನಲ್ಲಿ ಬಂದು ಸೆಟ್ಲ್ ಆಗ್ತಾರೆ ಅಂತ ಇಲ್ಲಿ ಜನ ಅದೇನೋ Brexit ಅಂತ ಬಾಗಲ್ ಮುಚ್ತಾ ಅವ್ರೆ. ನೀವೇನಾದ್ರು ಇಲ್ಲಿ ಸೆಟ್ಲ್ ಆದ್ರೆ ನಿಮ್ಮ ಕನ್ನಡ ಭಾಷೆ ಇಂಡಿಯಾದಲ್ಲಿ ಬಿಟ್ ಬನ್ನಿ.

ಇಲ್ಲಿ ಯು. ಕೆ. ಕನ್ನಡಿಗರು ಕನ್ನಡ ಮಾತನ್ನು ಮರೆತು ಎಲ್ಲ ಟಸ್ಸ್ ಪುಸ್ ಅಂತ… ಇಂಗ್ಲಿಷಲ್ಲಿ ಮಾತಾಡಿಕೊಂಡು ಮಕ್ಕಳಿಗೂ ಕನ್ನಡ ಕಲಿಸ್ತಿಲ್ಲ, ನೀವು ಅವರಿಗೆಲ್ಲ ಸ್ವಲ್ಪ ಬುದ್ಧಿವಾದ ಹೇಳಿ ಸೃಜನ್ ಅಣ್ಣ…

ಸೃಜನ್: ಹೌದ, ನಾನು ಈಗ ಕನ್ನಡದ ಬಗ್ಗೆ, ಭಾಷೇ ಅಭಿಮಾನದ ಬಗ್ಗೆ ಯು.ಕೆ ಕನ್ನಡಿಗರಿಗೆ ಭಾಷಣ ಶುರುಮಾಡಬಹುದಾ?

ಪಾತ್ರಧಾರಿ: ಅಣ್ಣ ಹಾಗ್ ಮಾಡಬೇಡಿ. ಯಾಕೆ ಅಂದ್ರೆ ಯು.ಕೆ ಕನ್ನಡಿಗರಿಗೆ ಭಾಷಣ ಅಂದ್ರೆ ಅಲರ್ಜಿ! ಭಾಷಣ ಬೇಕಾದ್ರೆ ನೀವು ಇಲ್ಲಿ ಒಂದು ಬುದ್ಧಿ ಜೀವಿಗಳ ಗುಂಪು KSSVV ಅಂತ ಐತೆ, ಅಲ್ಲಿ ಮಾಡ್ ಬಹದು. ಕನ್ನಡ ಬಳಗದಲ್ಲಿ ಭಾಷಣ ತಂದು ನಮ್ಮ ಕಾರ್ಯದರ್ಶಿ ಡಾ.ಪ್ರಸಾದ್ ಅವರು ಎಲ್ರಿಂದ ಸಾಕಷ್ಟು ಚೀಮಾರಿ ಹಾಕುಸ್ಕೊಂಡವ್ರೆ.

ಡಾ.ಪ್ರಸಾದ್ ಅವರು ಹಿಂದೆ ಭಾಷಣ ಮಾಡಿ ಮಾಡಿ… ಅವರು ಎದ್ನಿಂತ್ರೆ ಜನ ಭಾಷ್ಣ ಮಾಡಕ್ಕೆ ನಿಂತವ್ರೆ ಅಂತ ಗಾಬ್ರಿ ಬೀಳ್ತಾರೆ. ಅದ್ಕೆ ಡಾ.ಪ್ರಸಾದ್ ಅವ್ರು ಕನ್ನಡ ಬಳಗದ್ ಫಂಕ್ಷನ್ ನಲ್ಲಿ ಕುಂತೆ ಇರ್ತಾರೆ! ನೀವೇನಾದ್ರು ಈ ಜನಕ್ಕೆ ಹೇಳ್ಬೇಕ್ ಅಂದ್ರೆ ಅವರಿಗೆ ಹಾಡು ಅಥವಾ ಡ್ಯಾನ್ಸ್ ಮೂಲ್ಕ ಹೇಳಿದ್ರೆ ಮಾತ್ರ ಅರ್ಥವಾಗೋದು.

ನೀವು ಇವತ್ತಿನ ಪ್ರೊಗ್ರಾಮ್ ನೋಡಿಲ್ವಾ ಅದು ಬರಿ ಹಾಡು ಅಥ್ವಾ ಡ್ಯಾನ್ಸ್  ಅಷ್ಟೆ…

ಸೃಜನ್: ತುಂಬಾ ಒಳ್ಳೆ ಆಲೋಚನೆ, ಸರಿ ನಾನು ಹಾಡಲ್ಲಿ ಕನ್ನಡಿಗರಿಗೆ ಅಭಿಮಾನ ತುಂಬತೀನಿ… (ಕಂಠ ಸರಿ ಮಾಡಿಕೊಳ್ಳುತ್ತಾ ಹಾಡು ಶುರು ಮಾಡುತ್ತಾರೆ)

ಸೃಜನ್: ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು… (ಎಂದು ಕೆಲವು ನಿಮಿಷ ಹಾಡುತ್ತಾರೆ)

ಪಾತ್ರಧಾರಿ: ಸೃಜನ್ ಅಣ್ಣ ಒಳ್ಳೆ ಸಂದೇಶ ಬಿಡಿ, ಮತ್ತೊoದು ವಿಚಾರ…

ಸೃಜನ್: ಇನ್ನೆನಪ್ಪ?

ಪಾತ್ರಧಾರಿ: ಇತ್ತೀಚ್ಗೆ ಯು.ಕೆ ನಲ್ಲಿ ಇರೋ ಕನ್ನಡಿಗ್ರು ಹಾದಿಗೊಂದು ಬೀದಿಗೊಂದು ಕನ್ನಡ ಸಂಘ ಕಟ್ಕೊಂಡ್ ಅವ್ರೆ. ಎಲ್ಲ ಒಟ್ಟಾಗಿ ಅಂತ ರಾಮ್ ಮೂರ್ತಿ, ವಿವೇಕ್, ಮತ್ತೆ ಭಾನುಮತಿ ಅವ್ರು ಹೋದ್ಕಡೆ ಎಲ್ಲಾ ಬೇಡ್ ಕೊಂಡ್ರು. ಆದ್ರೆ ಜನ ಮುಂದಕ್ ಹೋಗಿ ಅಂತಾರೆ! ರಾಮ್ ಮೂರ್ತಿ, ವಿವೇಕ್,  ಮತ್ತೆ ಭಾನುಮತಿ ಅವ್ರು Mission Impossible ಅಂತ ತಲೆಮೇಲೆ ಕೈ ಹೊತ್ಕೊಂಡು ಕುಂತವ್ರೆ. ಸೃಜನ್ ಅಣ್ಣ ನೀವಾದ್ರೂ ವಸಿ ಯು.ಕೆ. ಕನ್ನಡಿಗ್ರ್ನ  ಒಟ್ಟಿಗೆ ಸೇರ್ಸಿ…

ಸೃಜನ್: ಇದು ಬಹಳ ಜವಾಬ್ದಾರಿ ಕೆಲಸ. ಒಂದ್ ಹಾಡಿನ ಮೂಲಕ ಪ್ರಯತ್ನ ಮಾಡ್ ಬಿಡ್ತೀನಿ (ಕಂಠ ಸರಿ ಮಾಡಿಕೊಳ್ಳುತ್ತಾ ಹಾಡು ಶುರು ಮಾಡುತ್ತಾರೆ). “ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನೀವಾದವೆನ್ನಿ.” (ಎರಡು ನಿಮಿಷ ಹಾಡುತ್ತಾರೆ)

****

ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ
ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ

ದೃಶ್ಯ 3

ಪಾತ್ರಧಾರಿ: ಸೃಜನ್ ಅಣ್ಣ, ನೀವು ಬೆಂಗಳೂರಿನಲ್ಲಿ ಅದೇನೋ ‘ನಿಜ ಟಾಕೀಸ್ ‘ ಅಂತ ನಡಸಿ ತುಂಬಾ ಫೇಮಸ್ ಆಗ್ಬುಟ್ಟು ಈಗ ಸೆಲಿಬ್ರಿಟಿ ಅಂತ ಎಲ್ಲ ಹೇಳ್ತಾವ್ರೆ.

ಸೃಜನ್: ಎ ಬೆಪ್ ತಕಡಿ, ಅದು ‘ಮಜಾ ಟಾಕೀಸ್’ ಕಣೋ!!

ಪಾತ್ರಧಾರಿ: ಅಲ್ಲ ನೀವು ಸಿನ್ಮ ಸೆಟ್ ಹಾಕಿ ಆಡಿಯನ್ಸ್ ಕರಸಿ ಸಿನಮಾ ನಟ ನಟಿಯರನ್ನ ಕರ್ದು ಲೈವ್ ಮ್ಯೂಸಿಕ್ ಬ್ಯಾಂಡ್ ಇಟ್ಮೇಲೆ ಅದು ‘ನಿಜಾ  ಟಾಕೀಸ್’ ಅಲ್ದೆ ಇನ್ನೇನು?

ಸೃಜನ್: ಅಲ್ಲ ನೀ ಹೇಳದೇನೋ ಸರಿ ಇರಬಹದು. ಅಂದ ಹಾಗೆ ‘ನಿಜ’ ಅಂದ್ರೆ ಒಂದು ಅರ್ಥದಲ್ಲಿ ‘Reality’ ಅಂತ. ಮುಂದಕ್ಕೆ ‘ನಿಜಾ ಟಾಕೀಸ್’ ಅಂತ ಒಂದು ‘Reality’ ಷೋ ಮಾಡೋದಕ್ಕೆ ಒಳ್ಳೆ ಐಡಿಯಾ ಕೊಟ್ಟೆ ಕಣೋ, ಭೇಷ್! ನಾನು ಇಂಗ್ಲೆಂಡ್ಗೆ ಬಂದಿದಿಕ್ಕೆ ಒಂದು ಒಳ್ಳೆ ಐಡಿಯಾ ಸಿಕ್ತು ಬಿಡು!!

ಪಾತ್ರಧಾರಿ: ಅಣ್ಣ ನಿಮ್ಮ ಷೋ ನಲ್ಲಿ ಇಂದ್ರಜಿತ್ ಅಂತ ಒಬ್ಬರು ಹೋಸ್ಟ್ ಸೋಫಾ ಮೇಲೆ ಕುಂತ್ಕಂಡು ಮಾತ್ ಮಾತ್ಗೆ ಚಪ್ಪಾಳೆ ತಟ್ಟಿ ನಗ್ತಾರಲ್ಲ ಅವ್ರು ವಾರಾ ವಾರಾ ತಿರುಪತಿಗೆ ಹೋಗ್ತಾರ? ತಲೆ ಯಾಕ್ ಅಂಗೆ ಬೋಳುಸ್ಕಂಡವ್ರೆ?!

ಸೃಜನ್: ಏ ಅವ್ರು ಯಾರ್ ಗೊತ್ತ? ನಮ್ಮ ಕನ್ನಡ ಸಾಹಿತಿ, ಮೇಸ್ಟ್ರು, ಲಂಕೇಶ್ ಪತ್ರಿಕೆಯ ಲಂಕೇಶಪ್ಪ ಅವ್ರ ಮಗ ಕಣೋ. ಅವ್ರು ಅಪ್ಪಂತರ ಒಬ್ಬ ಸೆಲೆಬ್ರಿಟಿ. ಕನ್ನಡದ ಪತ್ರಕರ್ತ ಮತ್ತೆ ಫಿಲಂ ನಿರ್ದೇಶಕರು. ಈಗಿನ್ ಕಾಲ್ದಲ್ಲಿ ಬಾಲ್ಡ್ ಆಗಿರವ್ರು ಗುಂಡ್ ಹೊಡಸ್ಕೊಳದೆ ಫ್ಯಾಷನ್ನು. ಅವ್ರು ಎದ್ರಿಗೆ ಕುಳ್ತಿದ್ರೆ ನಂಗೆ ಕನ್ನಡಿನೆ ಬೇಡ!

ಪಾತ್ರಧಾರಿ: ಅಣ್ಣ ಅವ್ರು ಅವರಪ್ಪನ ಪತ್ರಿಕೆ ನಡೆಸೋದ್ಬಿಟ್ಟು ನಿಮ್ಮ ಷೋ ನಲ್ಲಿ ಯಾಕೆ ಕುಂತ್ಕೊತಾರೆ?

ಸೃಜನ್: ಅವ್ರ ಖುಷಿ! ನಿನಗ್ಯಾಕೋ ಅದು?

ಪಾತ್ರಧಾರಿ: ನಿಮ್ಮ ಟಿ.ವಿ ಷೋದಲ್ಲಿ ಅಪರ್ಣ ಅಂತ ತುಂಬಾ ಚನ್ನಾಗಿ ಕನ್ನಡ ಮಾತ್ ಆಡ್ತಾರಲ್ಲ, ಅವ್ರು ಕನ್ನಡ ಮೇಡಂ ಅ? ಇಂಗ್ಲೆಂಡ್ ಗೆ ಬಂದು ಮಕ್ಕಳಿಗೆ ಕನ್ನಡ ಹೇಳ್ಕೊಡ್ತಾರ? ಯು ಕೆ ಕನ್ನಡ ಬಳಗ್ ದವರು ಇಲ್ಲಿ ‘ಕನ್ನಡ ಕಲಿ’ ಕ್ಲಾಸ್ ಮಾಡ್ತಿವಿ ಅಂತ ಕರ್ನಾಟ್ಕ ಗೊವೆರ್ ಮೆಂಟ್ ಇಂದ ದುಡ್ಡ್ ಇಸ್ಕಂಡ್ ಅವ್ರೆ, ಅವ್ರ್ಗೆ ಒಳ್ಳೆ ಕನ್ನಡ ಮೇಡಂ ಇನ್ನು ಸಿಕ್ಕಿಲ್ಲ?!

ಸೃಜನ್: ಎ ಅವ್ರುನ ಜನ ಮರ್ಯಾದೆ ಇಂದ ‘ಅಪರ್ಣ ಮೇಡಂ’ ಅಂತ ಕರಿತಾರೆ ಅವ್ರು ನಿಜವಾದ ಸ್ಕೂಲ್ ಮೇಡಂ ಅಲ್ವೋ. ಅವ್ರು ಎಲ್ಲಾ ಸಭೆಯಲ್ಲಿ ಚನ್ನಾಗಿ ಕನ್ನಡ ಮಾತಾಡಿ Compere ಮಾಡ್ತಾರೆ. ಮತ್ತೆ ಒಳ್ಳೆ ಸಿನಿಮಾ ಮತ್ತೆ ಟಿವಿ ಆಕ್ಟರ್, ಪ್ರೆಸೆಂಟರ್ ಕಣೋ… In fact ‘one and only’ Aparna, ಕನ್ನಡಿಗರ ಅಪರಂಜಿ!!

ಪಾತ್ರಧಾರಿ: ನಿಮ್ಮ ಷೋದಲ್ಲಿ ‘ಡಿಂಗಿಚಿಕ’ ಅಂತ ಡ್ಯಾನ್ಸ್ ಮಾಡಿ ಬಣ್ಣ ಬಣ್ಣ ಬಟ್ಟೆ ಹಾಕೊಂಡು ಕೂಲಿಂಗ್ ಗ್ಲಾಸ್ ಹಾಕೊಂಡು ಜನನ ನಗಸ್ತರಲ್ಲ, ಅವ್ರು ಸ್ಟೇಜ್ ಮೇಲೆ ಕತ್ಲೆ ಹೊತ್ತಲ್ಲಿ ಅದ್ಯಾಕೆ ಕೂಲಿಂಗ್ ಗ್ಲಾಸ್ ಹಾಕೊಂಡ್ ಅವ್ರೆ. ಇಂಗ್ಲೆಂಡಿಗೆ ಅವ್ರೆನಾದ್ರು ಬಂದ್ರೆ ಪಾಪ ಕುರುಡಾ ಅಂತ ಒಂದು ಕಡ್ಡಿನೋ ಅಥವಾ ಒಂದ್ ಗೈಡ್ ನಾಯಿನೋ ಕೊಡ್ತಾರೆ!!

ಪಾತ್ರಧಾರಿ: ಸೃಜನ್ ಅಣ್ಣ, ನಿಮ್ಮ ‘ಮಜಾ ಟಾಕೀಸ್’ ಬಗ್ಗೆ ನಮ್ಮ ಕನ್ನಡ ಬಳಗದವ್ರ್ಗೆ ಸ್ವಲ್ಪ Detail ಆಗಿ ತಿಳಸ್ತೀರ?

ಸೃಜನ್: ನಾನ್ ಯಾಕ್ ತಿಳಸ್ ಬೇಕು?! ನೀವೆಲ್ಲ ಇಲ್ಲಿ ಟಿ.ವಿ ನಲ್ಲಿ ನೋಡ್ಕಳಿ!

ಪಾತ್ರಧಾರಿ: ಅಣ್ಣ ಇಲ್ಲಿ ಕನ್ನಡ ಚಾನಲ್ ಬರಕ್ಕಿಲ್ಲ, ನಮಗೆಲ್ಲ You tubeನಲ್ಲಿ ಹಳಸಿದ್ದು ಮಾತ್ರ ಸಿಕ್ಕತ್ತೆ. ಇಲ್ಲಿ ತಮಿಳ್ ಚಾನೆಲ್ ಇದೆ, ಹಿಂದಿ ಇದೆ, ಬಂಗಾಳಿ ಇದೆ. ಕನ್ನಡ ಮಾತ್ರ ಇಲ್ಲ. ನಾವು ಕನ್ನಡ ಜನ, ನಮ್ಮ ಭಾಷೆ ಬಗ್ಗೆ ಅಭಿಮಾನ ಕಡಿಮೆ, ನಮಗೆ ಗಲಾಟಿ ಮಾಡಿ ಗೊತ್ತಿಲ್ಲ, ನಾವು ಸಾಧು ಜನಗಳು ನೋಡಿ. ನಮ್ಮ ಕನ್ನಡ ಬಳಗದ ಫಂಕ್ಷನ್ ಗೆ ಬನ್ನಿ ಬನ್ನಿ ಅಂತ ಜನಕ್ಕೆ ಅರಿಶಿನ ಕುಂಕುಮ ಕೊಟ್ಟು ಕರಿಬೇಕು. ಮಾತ್ ಎತ್ತಿದರೆ ಅವರ್ಗೆ ಬಳಗದ  ಫಂಕ್ಷನ್ ನಲ್ಲಿ ಡಿಸ್ಕೌಂಟ್ ಕೊಡಿ ಅಂತ ಕೇಳ್ತಾರೆ. ನಿಮ್ ತರ ಫಿಲಂ ಸ್ಟಾರ್ ಕರ್ಸೋದಿಕ್ಕೆ ಎಷ್ಟು ಕರ್ಚ್ ಆಗುತ್ತೆ ಅಂತ ಯೋಚನೆ ಮಾಡಲ್ಲ. “ಕೊಡೋದು ಮೂರ್ ಕಾಸು, ಕೋಣೆ ತುಂಬಾ ಹಾಸು” ಅಂದ್ರೆ ಹೆಂಗೆ ಸಾಧ್ಯ?

ಸೃಜನ್: ನೀವೆಲ್ಲ ಏನು ಬೇಜಾರ್ ಮಾಡ್ಕೋಬೇಡಿ. ಹೀಗೆ ಕನ್ನಡಕ್ಕೆ ಅಂತ ಒಳ್ಳೆ ಕೆಲಸ ಮಾಡಿ, ಎಲ್ಲ ಒಂದಾಗಿ ಕನ್ನಡ ಉಳಿಸಿ ಬೆಳಸಿ. ನಾನು ನಮ್ಮ ಕಲರ್ಸ್ TV ಮತ್ತೆ ಬೇರೆ ಬೇರೆ ಚಾನಲ್ ಗಳ್ಗೆ ಶಿಫಾರಸ್ ಮಾಡ್ತೀನಿ. ನೀವೆಲ್ಲ ಮುಂದೆ ಮಜಾ ಟಾಕೀಸ್ ಲೈವ್ ಪ್ರೊಗ್ರಾಮ್ ನೋಡಬಹುದು. ಸರಿ, ನಾನು ವಾಪಸ್ ಬೆಂಗಳೂರಿಗೆ  ಹೊರಡಬೇಕು. ಯು ಕೆ ಕನ್ನಡಿಗರು ನಮ್ಮ ಷೋಗೆ ಬರಬೇಕು. ಅದಕ್ಕೆ ವ್ಯವಸ್ಥೆ ಮಾಡ್ತೀನಿ.

A day without laughter is a day wasted!

ಬರ್ತೀನಿ ನಮಸ್ಕಾರ.

  ***