ಶೆರ್ಲಾಕ್ ಹೋಮ್ಸ್ ಮತ್ತು ”ಚಾಂಡಾಳ ಚೌಕಡಿ” -ಶ್ರೀವತ್ಸ ದೇಸಾಯಿ ಬರೆದ ನಾಟಕ ವಿಮರ್ಶೆ

SPDesai for KSSVV anivaasi
ಲೇಖಕರು: ಶ್ರೀವತ್ಸ ದೇಸಾಯಿ
ಸಿನೆಮಾ ಬಂದ ಮೇಲೆ ಕನ್ನಡಿಗರಲ್ಲಿ ನಾಟಕ ಆಡುವ ಮತ್ತು ನೋಡುವ ಚಟ ತುಂಬ ಕಡಿಮೆಯಾದುದರಲ್ಲಿ ಯಾವ ಸಂಶಯವೂ ಇಲ್ಲ. ಸಿನೆಮಾದ ಝಂಝಾವಾತಕ್ಕೆ ತತ್ತರಿಸಿ ನಾಟಕ ಕಂಪನಿಗಳೆಲ್ಲ ಮುಚ್ಚಿ ಹೋದ ಮೇಲೆ, `ನೀನಾಸಂ` ತರಹದ ಹವ್ಯಾಸಿ ಕಂಪನಿಗಳು ಪಶ್ಚಿಮದ ಆಧುನಿಕ ನಾಟಕದ ಶೈಲಿಯತ್ತ ಹೊರಳಿದವು. ಸಿನೆಮಾದ ಹಾವಳಿಯಿಂದ ಪಶ್ಚಿಮ ದೇಶಗಳಲ್ಲಿ ನಾಟಕಗಳು ಕಡಿಮೆಯಾಗಿವೆ ಆದರೂ, ನಾಟಕಗಳಿಗೆ ಇನ್ನೂ ಬೇಡಿಕೆ ಇದೆ, ವ್ಯಾವಹಾರಿಕವಾಗಿ ಕೂಡ ಲಾಭ ಮಾಡುತ್ತವೆ. ಶ್ರೀವತ್ಸ ದೇಸಾಯಿಯವರು ತಾವು ಇತ್ತೀಚೆ ನೋಡಿದ ಶರಲೇಖ ಹೋಮ ಮತ್ತು ವಾತ್ಸಾಯನನ `ಚಂಡಾಳ ಚೌಕಡಿ` ನಾಟಕದ ಬಗ್ಗೆ ಆಪ್ತವಾದ ಲೇಖನ ಬರೆದಿದ್ದಾರೆ. – ಸಂ
Sherlock Holmes on tour 2018-19 (with kind permission from Blackeyed Theatre)

ಕಳೆದ ತಿಂಗಳು ಯಾರ್ಕ್ ಶೈರ್ ದ ಡೋಂಕಾಸ್ಟರ್ ದಲ್ಲಿ ಸರ್ ಆರ್ಥರ್ ಕೋನನ್ ಡಾಯ್ಲ ಬರೆದ ” ಎ ಸೈನ್ ಆಫ್ ಫೋರ್” (ಆ ನಾಲ್ವರನ್ನೇ ನಾನು ಕುಪ್ರಸಿದ್ಧ ಚಾಂಡಾಳ್ ಚೌಕಡಿ ಎಂದು ಕರೆದದ್ದು – ವಿವರ ಕೊನೆಯಲ್ಲಿ) ಕಥೆಯ ರಂಗಪ್ರದರ್ಶನವನ್ನು ನೋಡಿದೆ. ಅದು ಬ್ಲ್ಯಾಕ್ ಐಡ್ ಥಿಯೇಟರ್ (Blackeyed Theatre) ಅವರ ಪ್ರಸ್ತುತಿಯಾಗಿತ್ತು. ಅದು ನನ್ನ ಅಭಿಪ್ರಾಯದಲ್ಲಿ  ಮನಸ್ಸಿನಲ್ಲಿ ಉಳಿಯುವ ಒಂದು ಒಳ್ಳೆಯ ನಾಟಕ ಪ್ರಯೋಗವಾಗಿತ್ತು.

ನಾನು ಕಾಲೇಜಿನಲ್ಲಿದ್ದಾಗಿನಿಂದಲೂ ಜಗತ್ತಿನ ಏಕಮೇವಾದ್ವಿತೀಯನಾದ ಡಿಟೆಕ್ಟಿವ್ ಶೆರ್ಲಾಕ್ಸ್ ಹೋಮ್ಸ್ ನನ್ನ ಅಚ್ಚುಮಚ್ಚಿನ ಪತ್ತೇದಾರನಾಗಿದ್ದ. ಆತನ ಪತ್ತೇದಾರಿ ಸಾಹಸಗಳನ್ನು ವರ್ಣಿಸುವ ಕೋನನ್ ಡಾಯ್ಲ್ ಬರೆದ ನಾಲ್ಕು ಕಿರುಕಾದಂಬರಿಗಳು ಮತ್ತು ಛಪ್ಪನ್ನೈವತ್ತಾರು ಕಥೆಗಳಲ್ಲಿ ಆತನ ಸಾಹಸವನ್ನೆಲ್ಲ ಓದಿದ್ದೆನಾದ್ದರಿಂದ ನನ್ನ ಊರಲ್ಲೇ ಈ ನಾಟಕ ಬಂದಾಗ ಅವಕಾಶ ತಪ್ಪಿಸಿಕೊಳ್ಳಲಿಲ್ಲ. ನೋಡಿದ್ದಕ್ಕೆ ನಿರಾಶೆಯಂತೂ ಆಗಲಿಲ್ಲ. ತದ್ವಿರುದ್ಧವಾಗಿ ಇನ್ನೊಮ್ಮೆ ಅದನ್ನು ನೋಡುವ ಇಚ್ಚೆಯಾಗುವಷ್ಟು ಹಿಡಿಸಿತು.

”ಎ ಸೈನ್ ಆಫ್ ದ ಫೋರ್” (ಐದು ಶಬ್ದಗಳು, ಆನಂತರ ’ದ’ ಲೋಪವಾಯಿತು) ಎಂಬ ಶೀರ್ಷಿಕೆಯೊಂದಿಗೆ 1890 ರಲ್ಲಿ ಮೊದಲ ಬಾರಿ ಲಿಪ್ಪಿನ್ಕಾಟ್ ಮಾಸಿಕದಲ್ಲಿ ಪ್ರಕಟವಾದ ಕೋನನ್ ಡಾಯ್ಲನ ಎರಡನೆಯ ಶೆರ್ಲಾಕ್ (ಹೋಮ್ಸ್) ಕಥೆಯನ್ನು ನಾನು ಮೊದಲು ಓದಿದ್ದು, 1963ರಲ್ಲಿ. ಮೊದಲನೆಯದು ’ಎ ಸ್ಟಡಿ ಇನ್ ಸ್ಕಾರ್ಲೆಟ್’. ಕಥೆಯ ಹಿನ್ನೆಲೆಯಲ್ಲಿ 1857ರ ಭಾರತದ ಮೊದಲ ಸ್ವಾತಂತ್ರ್ಯ ಚಳುವಳಿ (ಬ್ರಿಟಿಶರು ಸಿಪಾಹಿ ದಂಗೆ ಎಂದು ಕರೆದರು!) ಚಿತ್ರಿತವಾಗಿದೆ. ಯುದ್ಧ, ಕಳವು, ಕೊಲೆ, ವಂಚನೆ. ಸೇಡು, ರೋಮಾನ್ಸ್, ಕೊನೆಯ ಹಂತದಲ್ಲಿ ’ಚೇಸ” ಇವೆಲ್ಲ ಕೂಡಿದ ನವರಸ ಭರಿತ ಕಥೆ ಅದು. ನೀವೆಲ್ಲ ಓದಿದ್ದರೂ ಆ ಕಥೆಯನ್ನು ನೆನಪಿಸಲು ಅದರ ಸಾರಾಂಶವನ್ನು ಮೊದಲು ಕೊಡುತ್ತೇನೆ:

ಮೇರಿ ಮೋರ್ಸ್ಟನ್ ವೃತ್ತಾಂತ

ಕಥೆಯ ಪ್ರಾರಂಭದ ಇಸವಿ 1878. ಬಿಡಿಸಲು ಕ್ರೈಮ್ ಕೇಸುಗಳಿಲ್ಲದೆ ಬೇಜಾರು ಕಳೆಯಲು ಕೋಕೇನ್ ಸೂಜಿಮದ್ದು ಏರಿಸುವ, ಮೂಡು ಬಂದಾಗ ವಯೋಲಿನ್ ನುಡಿಸುವ, ಆದರೆ ಸ್ವಲ್ಪ ವಿಕ್ಷಿಪ್ತ ಸ್ವಭಾವದ ಡಿಟೆಕ್ಟಿವ್ ಶೆರ್ಲಾಕನ 221 B ಬೇಕರ್ಸ್ ಸ್ಟ್ರೀಟ್ ಕೋಣೆಗೆ ಬರುತ್ತಾಳೆ ಮಕ್ಕಳ ಗವರ್ನೆಸ್ ಆಗಿ ಕೆಲಸ ಮಾಡುತ್ತಿರುವ ಮೇರಿ. ಆಕೆಯ ತಂದೆ ಕ್ಯಾಪ್ಟನ್ ಮಾರ್ಸ್ಟನ್ ಭಾರತದಿಂದ ಸರ್ವಿಸ್ ಮುಗಿಸಿ ಮರಳಿ ಲಂಡನ್ನಿಗೆ ಬಂದ ಕೂಡಲೆ ನಾಪತ್ತೆಯಾಗಿದ್ದಾನೆ. ಇನ್ನೂ ಆತನ ಸುಳುವೇ ಸಿಕ್ಕಿಲ್ಲ. ಯಾರೋ ಒಬ್ಬ ಹಿತೈಷಿ ವರ್ಷಕ್ಕೊಂದರಂತೆ ಆರು ಅಮೂಲ್ಯ ಮುತ್ತುಗಳನ್ನು ಅವಳಿಗೆ ಅಂಚೆಯಲ್ಲಿ ತಲುಪಿಸುತ್ತಿದ್ದಾರೆ. ಆತನನ್ನು ಭೇಟಿಯಾಗಿ ತನ್ನ ತಂದೆಯ ಅನ್ವೇಷಣೆ ಮಾಡಲು ಹೋಂಸ್ ಮತ್ತು ಆತನ ಸಂಗಾತಿ ಡಾ ವಾಟ್ಸನ್ನರ ಸಹಾಯ ಕೋರಿ ಬಂದಿದ್ದಾಳೆ. ಅವಳ ಬಳಿ ನಾಲ್ವರ ನಿಗೂಢ ಸಹಿಯಿರುವ ಒಂದು ಕಾಗದ (Sign of the Four) ಇದೆ. ಅವರಲ್ಲೊಬ್ಬ ಒಂದು ಮರಗಾಲಿನ ಜೋನಾಥನ್ ಸ್ಮಾಲ್ ಎನ್ನುವ ಬ್ರಿಟಿಷ್ ಕಂಪನಿ ಸೈನ್ಯದಿಂದ ಹೊರಬಿದ್ದ ಸಿಪಾಹಿ. ಆತನೋ ಅತ್ಯಂತ ಬೆಲೆಬಾಳುವ ”ಆಗ್ರಾ ನಿಧಿ”ಯ ಶೋಧದಲ್ಲಿದ್ದಾನೆಂದು ಗೊತ್ತಾಗುತ್ತದೆ. ಆ ಲೂಟಿಯ ಪಾಲುಗಾರರಾದ ನಾಲ್ವರಲ್ಲಿ ಒಬ್ಬನಾದ ಸ್ಮಾಲ್ ನನ್ನು ವಂಚಿಸಿ ಅದನ್ನು ’ಪಾಂಡಿಚೇರಿ ಲಾಡ್ಜ್ ’ ನಲ್ಲಿ ಗುಪ್ತವಾಗಿ ಅಡಗಿಸಿಟ್ಟಿದ್ದ ಮೇಜರ್ ಶೋಲ್ಟೋನ ಅವಳಿ-ಜವಳಿ ಮಕ್ಕಳಲ್ಲೊಬ್ಬನೇ ಮೇಲೆ ಹೇಳಿದ ಆ ಹಿತೈಷಿ ಥೇಡ್ಡಿಯಸ್ ಶೋಲ್ಟೋ. ಕ್ರೈಮ್ ಥ್ರಿಲ್ಲರ್ ಅಂದ ಮೇಲೆ ಹೆಣಗಳು ಬೀಳಲೇ ಬೇಕಲ್ಲವೆ? ಥೇಡ್ಡಿಯಸ್ ಶೋಲ್ಟೋನ ಸಹೋದರನ ಕೊಲೆಯನ್ನಷ್ಟೇ ನಾವು ರಂಗದ ಮೇಲೆ ನೋಡುವದು. ಈಗಾಗಲೆ ಇನ್ನು ಮೂವರ ಹತ್ಯೆಗಳಾಗಿವೆ, ಅಥವಾ ಆಗಲಿವೆ. ಒಂದು ಕಾಲಕ್ಕೆ ಒಬ್ಬ ಮಹಾರಾಜನ ವಶದಲ್ಲಿದ್ದ ಬೆಲೆಕಟ್ಟಲಾರದ ’’ಆಗ್ರಾ ನಿಧಿ” ಇಷ್ಟರಲ್ಲಿ ಮಾಯವಾಗಿದೆ. ಅದನ್ನು ಟೇಮ್ಸ ನದಿಯಲ್ಲಿಯ ಒಂದು ಹಡಗದಲ್ಲಿ ಪತ್ತೆ ಹಚ್ಚುವದರಲ್ಲಿ ಶೆರ್ಲಾಕ್ ಹೋಂಸ್ ಸಫಲನಾದರೂ ಈ ಮೊದಲು ಅದನ್ನು ಕದ್ದು ತೊಗೊಂಡೋಡಿದ್ದವರು ಸ್ಮಾಲ್ ಮತ್ತವನ ಸಹಾಯಕ -ಅಂದಮಾನ್ ಮೂಲದ ಟೋಂಗಾ ಎನ್ನುವ ”ಕುಳ್ಳ, ಕರಿಯ, ಕಾಡುಮನುಷ್ಯನಂಥ ಅಸಹ್ಯಪ್ರಾಣಿ.” ಅವರು ಹೋಂಸ್ ಮತ್ತು ಸ್ಕಾಟ್ಲಂಡ ಯಾರ್ಡ ಪತ್ತೇದಾರರ ಕಣ್ಣಿಗೆ ಸಿಕ್ಕರೂ ನಿಧಿ ಅವರ ಕೈಗೆ ಸಿಗುತ್ತದೆಯೇ? ಅದರ ಹಕ್ಕಿನ ವಾರಸುದಾರಳಾದ ಮೇರಿ ಶ್ರೀಮಂತಳಾಗುತ್ತಾಳೆಯೇ? ಆಕೆಯನ್ನು ಪ್ರೀತಿಸುವ ’ಬಡ’ ಡಾಕ್ಟರ್ ವಾಟ್ಸನ್ನನ್ನು ವರಿಸುವಳೇ? ಇವನ್ನು ರಹಸ್ಯವಾಗಿಯೇ ಇಡುತ್ತೇನೆ. ಹೋಂಸನ ಪೈಪೋಟಿ ಯಾರು ಅಂದರೆ ಸ್ಕಾಟ್ಲಂಡ್ ಯಾರ್ಡಿನ ಅಧಿಕೃತ ಡಿಟೆಕ್ಟಿವ್ ಅಥೆಲ್ನಿ ಜೋನ್ಸ್. ಆತ ತಪ್ಪು ಮಾಡಿದರೂ (ಥೇಡ್ಡಿಯಸ್ ನೇ ಸ್ವತಃ ದಾಯಾದಿಯ ಕೊಲೆಗಾರ ಎಂದು ತಪ್ಪಾಗಿ ಕೈದುಮಾಡಿದ್ದು) ಕೇಸ್ ಬಿಡಿಸಿದ್ದಕ್ಕೆ ಕೊನೆಗೆ ಅವನಿಗೇ ಶ್ರೇಯಸ್ಸು ಬರುತ್ತದೆ!

Victoria Spearing’s original design concept (With permission from Blackeyed Theatre)

ಕಥಾವಸ್ತು ತೊಡಕಿನದು. ಭಾರತದಲ್ಲಿ 1857ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಂಗೆದ್ದ ಸಿಪಾಹಿಗಳಿಂದಾದ ಅಶಾಂತಿ, ಆಗ್ರಾ ನಿಧಿಯ ಅಪಹರಣ, ಭೀಕರ ಕೊಲೆ, ಅದರ ಶಿಕ್ಷೆಗೆ ಗುರಿಯಾಗಿ ಅಂದಮಾನ್ ಕಾರಾಗೃಹ ಸೇರಿದ ಒಂದು ಮರಗಾಲಿನ ಸ್ಮಾಲ್, ಅವನನ್ನು ವಂಚಿಸಿ ನಿಧಿಯನ್ನು ತಾನೊಬ್ಬನೇ ಲಪಟಾಯಿಸಿದ ಮೇಜರ್ ಶೊಲ್ಟೋ, ಮೇರಿಯ ತಂದೆಯ ನಿಗೂಢ ನಿರ್ಗಮನ, ಇವೆಲ್ಲವುಗಳನ್ನು ಸಂಭಾಷಣೆಯಲ್ಲೇ ತೋರಿಸಬೇಕು. ಪುಸ್ತಕದಿಂದ ರಂಗ ಭೂಮಿಗೆ ಅಳವಡಿಸಿದ ನಿಕ್ ಲೇನ್ ಅವರ ಬರಹ ಮತ್ತು ಡೈರೆಕ್ಷನ್ ಎಲ್ಲಿಯೂ ಎಡವುವದಿಲ್ಲ. ಇದನ್ನು ಪರಣಾಮಕಾರಿಯಾಗಿ ತೆರೆಯಿಲ್ಲದ ರಂಗ ಮಂಚದ ಮೇಲೆ ತಂದ ಯಶಸ್ಸು ಸ್ಟೇಜ್ ಡಿಸೈನರ್ ವಿಕ್ಟೋರಿಯಾ ಸ್ಪಿಯರಿಂಗ್ ಅವರ ಕುಶಲ ರಂಗ ಸಜ್ಜಿಕೆಯ ಮತ್ತು ಸ್ಟೇಜ್ ಪ್ರಾಪ್ಸ್ (props) ದಲ್ಲಿ ಕಾಣುತ್ತದೆ. ಇಡೀ ನಾಟಕದಲ್ಲಿ ಆರೇ ಜನ ಪ್ರತಿಭಾಶಾಲಿ ನಟರು (ensemble cast). ಅವರೇ ಹದಿನೇಳು ಪಾತ್ರಗಳನ್ನು ಆಡುವದಲ್ಲದೆ ಪ್ರತಿಯೊಬ್ಬರೂ ಒಂದೊಂದು ವಾದ್ಯವನ್ನು ಸಹ ನುಡಿಸುತ್ತಾರೆ! ಅಂದರೆ ಹಿನ್ನೆಲೆ ಸಂಗೀತ, ಮುದ್ರಿತ ಧ್ವನಿಪ್ರಸಾರ ಇಲ್ಲವೆಂತಲ್ಲ. ಅದು ಅತಿ ಕಡಿಮೆಯೇ. ನಾಟಕದ ಅಂಕದ ದೃಶ್ಯಗಳು ಬದಲಾಗುವಾಗ props ಜೋಡಣೆ ಸಹ ನಟರೇ ಮಾಡುವದು. ಬಲಾವಣೆಗೆ ಒಂದೂವರೆ ನಿಮಿಷ ಸಹ ಹಿಡಿಯುವದಿಲ್ಲ. ಹೋಂಸ್-ವಾಟ್ಸನ್ ಕುಳಿತ ಕುರ್ಚಿ ಮತ್ತಿತರ ಸಲಕರಣೆಗಳನ್ನು ಒಂದರ ಮೇಲೆ ಒಂದಾಗಿ ಜೋಡಿಸಿ ಅದರ ಮೇಲೆ ಮೂವರು ಕುಳಿತು ಕುದುರೆಯ ಖುರಪುಟದದೊಡನೆ ಹೊರಟಂತೆ ಮೈಯಲಾಡಿಸಿದರೆ ಲಂಡನ್ನಿನ ಕಾಬ್ಬಲ್ ಸ್ಟೋನ್ ಹಾಸುಗಲ್ಲುಗಳ ಮೇಲೆ ಓಡುತ್ತಿದ್ದ ವಿಕ್ಟೋರಿಯನ್ ಕ್ಯಾಬ್ ಕಣ್ಣ ಮುಂದೆ ಬರುತ್ತದೆ! ಅದು ಸಹ ವಿಕ್ಟೋರಿಯಾ ಸ್ಪಿಯರಿಂಗ್ ಅವರೇ ಯೋಜಿಸಿದ್ದು. ಆಳವಾಗಿ ಭಾರತೀಯ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಿ ಅಲ್ಲಿಯ ಗೋಪುರಗಳ ಆಕಾರವನ್ನು ಲಂಡನ್ನಿನ ಬಂದರಿನ ಸುತ್ತಲಿನ ಕಟ್ಟಡಗಳಿಗೆ ಅದನ್ನು ಜೋಡಿಸಿ ಮೊದಲ ಮಾದರಿಯನ್ನು ತಯಾರಿಸಿದಳಂತೆ. (ಚಿತ್ರ ನೋಡಿರಿ). ಸಿಪಾಹಿಗಳು ದಂಗೆ ಏಳುವ ದೃಶ್ಯದಲ್ಲಿ ಮೀನಾರುಗಳು, ಗೋಪುರಗಳ ತುದಿಗಳು ಕ್ಷಣಾರ್ಧದಲ್ಲಿ ಕೊನೆಯ ದೃಶ್ಯದಲ್ಲಿ ಲಂಡನ್ನಿನ ಟೇಮ್ಸ್ ನದಿಯಲ್ಲಿ ಹಾಯ್ದು ಹೋಗುವ ಮೊನಚಾದ ಮೂಗಿನ ಹಡಗವಾಗಿ ಪರಿವರ್ತನಗೊಂಡದ್ದನ್ನು ಪ್ರೇಕ್ಷಕರು ಕರತಾಡನದೊಂದಿಗೆ ಸ್ವಾಗತಿಸ್ಸಿದ್ದು ಆಶ್ಚರ್ಯವಲ್ಲ! ಈ ಹಿಂದೆ 14 ಕ್ಕೂ ಹೆಚ್ಚು ಸಲ ಕೋನನ್ ಡಾಯ್ಲ ನ ಈ ಕಥೆ ನಾಟಕ, ಸಿನಿಮಾ ಅಥವಾ ಟೆಲಿವಿಷನ್ ಮಾಧ್ಯಮದಲ್ಲಿ ಪ್ರದರ್ಶಿತವಾಗಿದ್ದರೂ ಇದು ನವೀನ ಮತ್ತು ಭಿನ್ನ ರೂಪದ್ದು ಎನಿಸಿತು. ಇದು ಪ್ರವಾಸೀ ರಂಗಭೂಮಿಯ ಟೂರಿಂಗ್ ಗೆ ಹೇಳಿಮಾಡಿಸಿದಂತಿದೆ ಎಂದು ನನ್ನ ಎಣಿಕೆ. ಈ ಕಂಪನಿಯವರು (www.blackeyedtheatre.co.uk). ಇದನ್ನು ಹಾಲೆಂಡ ಸೇರಿ ಮುಂದಿನ ಹದಿನೆಂಟು ತಿಂಗಳಲ್ಲಿ ಈ ದೇಶದ 55 ಜಾಗಗಳಲ್ಲಿ ಪ್ರದರ್ಶಿಸಲಿದ್ದಾರೆಂದ ಮೇಲೆ ಇದರ ಅವಶ್ಯಕತೆ ಮನದಟ್ಟವಾಗುತ್ತದೆ.

Holmes 1930

ಇನ್ನು ಅಭಿನಯದ ಬಗ್ಗೆ ಹೇಳಬೇಕೆಂದರೆ ಆರೂ ನಟರು ತಮ್ಮ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ. ನಾಟಕ ನೋಡುವ ಮೊದಲು ನನ್ನ ಕಣ್ಣ ಮುಂದೆ ನಿಂತದ್ದು ಮಧ್ಯ ವಯಸ್ಸಿನ ಡಿಯರ್ ಸ್ಟಾಕರ್ (Deer stalker)) ಹ್ಯಾಟ್ ಧರಿಸಿ, ತನ್ನ ಬಾಯಲ್ಲಿ ಜೋತುಬಿದ್ದ ಬಾಗಿದ ಪೈಪನ್ನು ಕಚ್ಚುವ ಶೆರ್ಲಾಕ್ ಹೋಮ್ಸ್ ಮತ್ತು ಸ್ಥೂಲ ಕಾಯದ ಮತ್ತು ಸ್ವಲ್ಪ ಪೆದ್ದನಂತೆ ನಟಿಸುವ ಡಾಕ್ಟರ್ ವಾಟ್ಸನ್. ಆದರೆ ಈ ನಾಟಕದಲ್ಲಿಯೂ ನಾವು ನೋಡುವದು ಎಳೆವಯಸ್ಸಿನ ಹೋಂಸ್-ವಾಟ್ಸನ್ ಪಾರ್ಟ್ನರ್ ಶಿಪ್ಪನ್ನೇ. ಇತ್ತೀಚಿನ ವರ್ಷಗಳಲ್ಲಿ ಟೆಲಿವಿಷನ್ ಮಾಧ್ಯಮದಲ್ಲಿ ಜಯಭೇರಿ ಹೊಡೆದ ಬಿಬಿಸಿಯ ’ಶೆರ್ಲಾಕ್ ’ಸರಣಿಯಲ್ಲಿ ಕಂಡ ಕಂಬರ್ಬ್ಯಾಚ್- ಮಾರ್ಟಿನ್ ಫ್ರೀಮನ್ ಜೋಡಿಯ ಕೆಮಿಸ್ಟ್ರಿಯನ್ನು ಇದು ನೆನಪಿಸುತ್ತದೆ. ಅದು ಸರಿಯೇ, ಏಕೆಂದರೆ ಸೈನ್ ಆಫ್ ಫೋರ್ ಈ ಪತ್ತೇದಾರನ  ಬರೀ ಎರಡನೆಯ ಸಾಹಸವೆ ಅಲ್ಲವೆ? ಲೂಕ್ ಬಾರ್ಟನ್ನನ ಹೋಮ್ಸ್ ಮತ್ತು ವಾಟ್ಸನ್ನನ ಪಾತ್ರದಲ್ಲಿರುವ ಜೋಸೆಫ್ ಡೆರ್ರಿಂಗ್ಟನ್ ಮಾತ್ರ ಒಂದೊಂದೇ ಪಾತ್ರದಲ್ಲಿದ್ದಾರೆ. ನಾಟಕದ ಡಾ. ಜಾನ್ ವಾಟ್ಸನ್ ನೈಜ ಜೀವನದಲ್ಲಿ ವೈದ್ಯನಾಗಿರುವದು ಆಕಸ್ಮಿಕವಲ್ಲವೇನೋ. ಅವರಿಬ್ಬರ ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ. ಕೊನೆಯ ದೃಶ್ಯದಲ್ಲಿ ಗಿಟಾರ್ ಪಟು ಝಾಕ್ ಲೀ (ಜೊನಾಥನ್ ಸ್ಮಾಲ್) ತನ್ನ ಸುದೀರ್ಘ ಸ್ವಗತದಲ್ಲಿ ಕಥೆಯ ತೊಡಕು ಬಿಡಿಸುವಾಗ ಮಾತ್ರ ಸ್ವಲ್ಪ ಎಳೆದಂತೆ ಕಂಡರೂ ಕಥೆ ಅರ್ಥವಾಗುತ್ತದೆ. ಸೀರಿಯಸ್ ಡಿಟೆಕ್ಟಿವ್ ಶೆರ್ಲಾಕ್ ಹೋಂಸ್ ಪಾತ್ರದಲ್ಲಿ ಲೂಕ ಬಾರ್ಟನ್ ಮತ್ತು ಶೋಲ್ಟೋ ಅವಳಿಗಳ ಪಾತ್ರದಲ್ಲಿರುವ ರೂ ಹ್ಯಾಮಿಲ್ಟನ್ ಇವರ ಮಾತುಗಳಲ್ಲಿ ಅಲ್ಲಲ್ಲಿ ಹಾಸ್ಯ ತುಂಬಿದ್ದು ದಿಗ್ದರ್ಶಕರ ಸಾಮರ್ಥ್ಯಕ್ಕೆ ಸಾಕ್ಷಿ.

My copy of complete Sherlock Holmes

ಚಾಂಡಾಳ ಚೌಕಡಿ: ಈ ನುಡಿಗಟ್ಟು – ನಾಲ್ಕು ಅಥವಾ ಹೆಚ್ಚು- ದುರುಳರ ಗುಂಪಿಗೆ ಚೆನ್ನಾಗಿ ಅನ್ವಯಿಸುತ್ತದೆ ಎಂದೇ ಅ ಅರ್ಥದಲ್ಲಿ ಇಲ್ಲಿ ಉಪಯೋಗಿಸಿದ್ದೇನೆ. ಇದರ ಮೂಲ ಮಹಾಭಾರತದ ದುಷ್ಟ ಚತುಷ್ಟಯ (ದುರ್ಯೋಧನ, ದುಶ್ಶಾಸನ, ಶಕುನಿ, ಕರ್ಣ) ಇರಬಹುದು. ಈ ಹೆಸರಿನಲ್ಲಿ ಮರಾಠಿ, ಭೋಜಪುರಿ ಭಾಷೆಗಳಲ್ಲಿ ಸಿನಿಮಾಗಳು ಸಹ ಆಗಿವೆಯಂತೆ. ಕೋನನ್ ಡಾಯ್ಲನ ಕಥೆಯಲ್ಲಿ ಕಾಗದದ ಮೇಲೆ ಸಹಿ (sign) ಮಾಡಿದ ನಾಲ್ವರು ಅಪರಾಧಿಗಳೆಂದರೆ ಜೊನಾಥನ್ ಸ್ಮಾಲ್, ದೋಸ್ತ್ ಅಕ್ಬರ್, ಮೆಹಮತ್ ಸಿಂಗ್ ಮತ್ತು ಅಬ್ದುಲ್ಲಾ ಖಾನ್.

ಟೋಂಗಾ ಎನ್ನುವ ಅಂದಮಾನಿನ ಕುಳ್ಳ ಮನುಷ್ಯನ ವರ್ಣನೆಯಷ್ಟೇ ನಾಟಕದಲ್ಲಿ ಕೇಳುತ್ತೇವೆ- ಆ ಜನರು ”ಸಣ್ಣ ಕಣ್ಣು, ಸದ್ದಾ ಮುದ್ದಾ ಆಕಾರದ ದೊಡ್ಡ ತಲೆ, ವಿಕಾರವಾದ ಮುಖವುಳ್ಳ ನರಭಕ್ಷಕರು ಇತ್ಯಾದಿ”. ಆ ಪಾತ್ರ ರಂಗಮಂಚಕ್ಕೆ ಬರುವದಿಲ್ಲ. ಆತನ ಉಲ್ಲೇಖ ಬಂದಾಗೆಲ್ಲ ಓದುಗರಿಗೆ ಮತ್ತು ಪ್ರೇಕ್ಷಕರಿಗೆ ಹೇಸಿಕೆ ಹುಟ್ಟುವ ಭಾಷೆಯನ್ನು ಉಪಯೋಗಿಸಲಾಗಿದೆ. ಮೊದಲ ನೋಟಕ್ಕೆ ಕೋನನ್ ಡಾಯ್ಲ ರೇಸಿಸ್ಟ್ ಎನಿಸಿದರೂ ಕಥೆಯನ್ನು ಬರೆದದ್ದು ವಿಕ್ಟೋರಿಯಾ ಮಹಾರಾಣಿ ಬ್ರಿಟಿಷ್ ಸಾಮ್ರಾಜ್ಞಿಯಾಗಿದ್ದ ಕಾಲ. ಆಗಿನ ಸಮಯದಲ್ಲಿ ಭಾರತದ ಬಗ್ಗೆ ಕೆಲ ತಪ್ಪು ತಿಳುವಳಿಕೆಗಳು ಇದ್ದವು; ಸಾಮಾನ್ಯ ಜನರಲ್ಲಿ ಪರಕೀಯರ ಬಗ್ಗೆ ಕುತೂಹಲವಿದ್ದಂತೆ ಕೆಲವರಿಗೆ ಅಸಹಿಷ್ಣುತೆಯೂ ಇತ್ತು. ಕೆಲವು ಅಸತ್ಯಗಳ ಪ್ರಚಾರವಿತ್ತೆಂದೂ ಅದನ್ನೇ ಕೋನನ್ ಡಾಯ್ಲ -ಆತ ಎಂದೂ ಭಾರತಕ್ಕೆ ಬಂದಿರಲಿಲ್ಲ- ಚಿತ್ರಿಸಿದ್ದಾನೆ ಎಂದು ಹೇಳಿ ಅವನು ಅನ್ಯದ್ವೇಶಿಯಾಗಿರಲಿಲ್ಲ (xenophobist or racist) ಎಂದು ನಿರ್ಣಯಕ್ಕೆ ಬಂದವರೇ ಹೆಚ್ಚು. (See McBratney below **) ಅದೇನೆ ಇರಲಿ, ಟೋಂಗಾ ವಿಷಲೇಪಿತ ಬಾಣಗಳನ್ನು ಊದುವ ಅಂದಮಾನಿನ ಬುಡಕಟ್ಟಿನ ಜನಾಂಗದವನೆಂದು ಇದರಲ್ಲಿ ರೂಪಿಸಲಾಗಿದೆ. ಅವನದು ಇದರಲ್ಲಿ ಮುಖ್ಯ ಪಾತ್ರ.

ಸೈನ್ ಆಫ್ ಫೋರ್ ನಾಟಕ ಈ ದೇಶದ ಬೇರೆ ಬೇರೆ ಊರುಗಳಲ್ಲಿ ಪ್ರದರ್ಶಿತವಾಗುತ್ತಿದೆ*, ಆಸ್ಥೆಯಿದ್ದವರು ಹೋಗಿ ನೋಡಬಹುದು. ಟಿಕೀಟು ದರ ಸ್ವಲ್ಪ ದುಬಾರಿಯೆನ್ನ ಬಹುದು; ಸೀನಿಯರ್ ಸಿಟಿಸನ್ ರಿಯಾಯಿತಿಯಿಲ್ಲ ಎಂದು ನನ್ನ ಗೊಣಗು! ಹೋಮ್ಸ್ ಭಕ್ತರು ಮಿಸ್ ಮಾಡಿಕೊಳ್ಳಬೇಡಿ. ನಾನೂ ಆತ ಪದೇ ಪದೇ ಹೇಳುವದನ್ನೇ ತಿರುಚಿ ಹೇಳುವೆ: “Come on, Watson. The game is afoot. Get into your clothes, and go and see!”

(I gratefully acknowledge the permission granted by Adrian McDougall, Artistic Director of Blackeyed Theatre for their consent to reproduce  Victoria Spearing’s sketch and the poster of the play- Author)

*Link: www.blackeyedtheatre.co.uk

**McBratney, J. (2005). RACIAL AND CRIMINAL TYPES: INDIAN ETHNOGRAPHY AND SIR ARTHUR CONAN DOYLE’S THE SIGN OF FOUR. Victorian Literature and Culture, 33(1), 149-167. doi:10.1017/S106015030500077X

 

 

Grenfell Tragedy

ಈ ವರುಷ ಜುಲೈ ೧೪ರ೦ದು ಲ೦ಡನ್ನಿನಲ್ಲಿ ಸ೦ಭವಿಸಿದ ಗ್ರೆನ್ಫ಼ೆಲ್ ದುರ೦ತ, ಇ೦ಗ್ಲೆ೦ಡಿನ ಜನರನ್ನೆಲ್ಲ ಬೆಚ್ಚಿಬೀಳುವ೦ತೆ ಮಾಡಿತು. ೮೦ ಜನರನ್ನು ಆಹುತಿ ತೆಗೆದುಕೊ೦ಡ ಈ ಬೆ೦ಕಿ ನೂರಾರು ಜನರನ್ನು ಗಾಯಗೊಳಿಸಿದ್ದಲ್ಲದೆ, ಸಾವಿರಾರು ಜನರ ಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿತು. ನಾವಿದರ ಬಗ್ಗೆ ಪತ್ರಿಕೆಗಳಲ್ಲಿ ಒದಿದ್ದೇವೆ ಮತ್ತು ದೂರದರ್ಶನದಲ್ಲಿ ಕೇಳಿದ್ದೇವೆ.
ನಮ್ಮ ಅನಿವಾಸಿ ಬಳಗದ ಕವಿಗಳಲ್ಲೊಬ್ಬರಾದ, ಸುಶೀಲೆ೦ದ್ರ ರಾವ್ ಇದನ್ನೆಲ್ಲ ತಮ್ಮ ಒ೦ದು ಕವಿತೆಯಲ್ಲಿ ಸೆರೆ ಹಿಡಿದಿದ್ದಾರೆ.
ದುರ೦ತವನ್ನು ವರ್ಣಿಸುವುದರ ಜೊತೆಗೆ ಅಗ್ನಿಯ ಶಕ್ತಿಯನ್ನು ಗುರುತಿಸಿ ತಲೆಬಾಗಿದ್ದಾರೆ- ಸ೦

 

ಗ್ರೆನ್ ಫ಼ೆಲ್ ದುರ೦ತ

 

ಕರುಣೆ ಎ೦ಬುವ ಭಾಷೆ ಕಾಣುವುದು ಕುರುಡ೦ಗೆ
ಕೇಳಿಪುದು ಕಿವುಡ೦ಗೆ ಅ೦ತೆ ಗ್ರೆನ್ ಫೆಲ್ ದುರ೦ತ
ಕಾಣಿಸಿತು ಕೇಳಿಸಿತು ಅಖ೦ಡ ಜನಕೋಟಿಗೆ

ಬೆಳಗ ಮು೦ಜಾನೆ ಝೋ೦ಪಿನ ತನ್ಮಯದಲಿ
ಅಮೋಘ ಆಸ್ಪೋಟ ಗ್ರೆನ್ ಫೆಲ್ ಟವರಿನಲಿ
ಅಲ್ಲಿ ಜೀವಿಪ ಜನರು ಎಚ್ಚೆದ್ದು ಗಾಬರಿಯಲಿ
ಬೆ೦ಕಿಯ ಜ್ವಲ೦ತ ಝಳ ಕ೦ಡು ವಿಸ್ಮಿತರಾದರು

ದಿಕ್ಕೇ ತೂಚದೆ ಗಾಬರಿಯಿ೦ ಕುಸಿದು
ದುಖಿತರಾದರು ಸ್ತ೦ಬಿತದಿ
ಸುತ್ತ ಮುತ್ತ ಎತ್ತ ನೋಡಿದರೂ ಬೆ೦ಕಿ ಕೆಚ್ಚೆದ್ದು
ಉರಿಯುತಿರೆ ಬೆಚ್ಚಿತ್ತು ಜಗತ್ತೇ ಎ೦ಬತೆ

ಬೆ೦ಕಿ ಹತ್ತಿ ಧಗಧಗನೆ ಉರಿಯಿತಿರೆ ಹೂರಾ೦ಗಣದಿ
ಶ೦ಕೆ ತಪ್ಪಿ ಅಲ್ಯೂಮಿನಿಯ೦ ಕ್ಲಾಡಿನಲಿ
ಅ೦ಕೆ ಶ೦ಕೆ ಇಲ್ಲದೆ ಆವರಿಸಿತು ಅಲ್ಲಿನ ಕೂಠಡಿಗಳಿಗೆ
ಪ್ಲಾಸ್ಟಿಕ್ ಕಮರಿನ ಧೂಮ ಕೆರಳಿ ಕೆಮ್ಮಿಸಿತು ಎಲ್ಲರನು

ಆಕಸ್ಮಿಕ ಅದ್ಬುತ ಭಯಾನಕ ಝಳದಲಿ ಸಿಕ್ಕಿದ
ನಿವಾಸಿಗಳು ಬುದ್ಧಿ ಭ್ರಮಣಿತರಾದರು
ದಿಕ್ಕೇ ತೋಚದೆ ಆಶಾಭ೦ಗದಿ
ಅತಿ ದೀನ ಪ್ರಯತ್ನಕೆ ಮುನ್ನಾದರು

ಹಲವರು ಸೋಪಾನಗಳ ಏರಿದರು
ಹಲವರು ಸೋಪಾನಗಳ ಇಳಿದರು
ಕೆಲವರು ವೃದ್ದರು ಬಿದ್ದರು ಎದ್ದರು
ಕೆಲವರು ಸಿದ್ಧರು ಎದ್ದೋಡಿದರು

ಜೀವಕೆ ಹೂಣೆ ಬೇಡುತ ಜನ ಜ೦ಗುಳಿ
ಅವಾ೦ತರದಿ ಸೋಪಾನಗಳು ತು೦ಬಿ
ತುಳುಕಿದವು ಗಡಿ ಬಿಡಿ ಅಲ್ಲೋಲ ಕಲ್ಲೋಲದ
ನೂಕ ನುಗ್ಗಲಲಿ ಬಿದ್ದವರೆಷ್ಟೋ ಅಳಿದವರೆಷ್ಟೋ

ಬೆ೦ಕಿಹತ್ತಿದ ಸುದ್ದಿ ಮುಟ್ಟಿತು
ಅಗ್ನಿ ಶಾಮಕ ದಳಗಳಿಗೆ
ಏದುತ ಕೂಗುತ ಧಾವಿಸಿ ಶೀಘ್ರದಿ
ಬ೦ದವು ಹತ್ತಾರು ಶಾಮಕ ದಳಗಳು

ನೀರಿನ ಕಾರ೦ಜಿಗಳ ಚಿಮ್ಮುತ ಹೋರಾಡಿದ
ಶಾಮಕ ದಳಗಳು ಭಯದಲಿ ನಿರಾಶರಾದರು
ಪಜರ್ನ್ಯನೇ ನಿನ್ನ ಜಲಮಯ ಖಜಾನೆಯ ಬಿಚ್ಚಿ
ಜಲಕೋಶವ ಕೆಳಗೆ ಸುರಿಸ ಬಾರದೇ ಎ೦ದು ಪ್ರಾರ್ಥಿಸಿರಬೇಕು

ಏಷ್ಟೋ ಗ೦ಡಹೆ೦ಡಿರು ಮಕ್ಕಳು ತಾಯ೦ದಿರು
ಅಭಲರು ಪ್ರಭುದ್ದರು ವಿಭಾಜಕರಾದರು
ಭಯಾನಕ ಬೆ೦ಕಿಯ ಝಳದಲಿ
ಶಿವ…..ಶಿವಾ…….ಕಣ್ಣೀರು ಸುರಿಯಿತು

ವರಣಿಸಲು ಅಸದಳ ಈ ಬೆ೦ಕಿಯ
ದುಃಖದ ನೋವಿನ ಅದ್ಬುತ ದುರ೦ತ
ಕೆಲವರು ಹಾಗೂ ಉಳಿದರು ಜೀವ೦ತ
ಹಲವರು ಅಳಿದರೋ ಉಳಿದರೋ ಅರಿಯದು ಭಗವ 0ತ

ಜ್ಯೋತಿ ಬೆಳಗೆ ನಮಹೇ………ನಮಹೇ…..
ಜ್ಯೋತಿ ಪ್ರಕಾಶೆ ಆನ೦ದ ಮಾತೆ
ಜ್ಯೋತಿ ಪ್ರಜ್ವಲಿಸೆ ಸು೦ದರ ಗೀತೆ
ಜ್ಯೋತಿ ಅ೦ತರಗತೆ ಈಶ್ವರ ಸನ್ನಿಹಿತೇ…
ಜ್ಯೋತಿ ಬೆಳಗೆ ನ ಮ ಹೇ………ನ ಮ ಹೇ….

Susheelendra Rao

 

 

 

 

.
.
.