ಪ್ರಿಯ ಓದುಗರೇ, ಈ ವಾರ ಅನಿವಾಸಿ ಅಂಗಳದಲಿ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೊತ್ತು ಎರಡು ಕವಿತೆಗಳು ನಿಮಗಾಗಿ ಕಾಯುತ್ತಿವೆ. ನಾವು ಭಾರತೀಯರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಆ ನೆಲದ ಆಚರಣೆಯ ಸೊಬಗಿನಲ್ಲಿ ನಮ್ಮ ನಾಡಿನ ಯಾವುದೋ ಛಾಯೆಯನ್ನು ಅರಸುತ್ತೇವೆ. ಸಂಗೀತ ಸಾಹಿತ್ಯ ಲೋಕವೂ ಇದಕ್ಕೆ ಹೊರತಲ್ಲ. ಅದೇ ನೆಲೆಯಲ್ಲಿ ಈ ವಾರದ ಅನಿವಾಸಿ ಸಂಚಿಕೆ ನಮ್ಮನಾಡಿನ ಹೆಮ್ಮೆಯ ಕವಿ ಬೇಂದ್ರೆಯವರ ಕವಿತೆಯ ಧಾಟಿಯಲ್ಲಿ ಡಾ ಜಿ ಎಸ್ ಶಿವಪ್ರಸಾದ ಮತ್ತು ಡಾ ಶ್ರೀವತ್ಸ ದೇಸಾಯಿ ಅವರು ಬರೆದ ಎರಡು ಮಜಾಶೀರ ಕ್ರಿಸ್ಮಸ್ ಸಂಬಂಧಿ ಕವಿತೆಗಳೊಂದಿಗೆ ನಿಮ್ಮ ಮುಂದಿದೆ. ಜೊತೆಗೆ ಬೆಲ್ಫಾಸ್ಟ್ ನಗರದ ಕ್ರಿಸ್ಮಸ್ ಮಾರ್ಕೆಟ್ ನ ಒಂದಷ್ಟು ಚಿತ್ರಗಳಿವೆ. ತಮ್ಮೆಲ್ಲರಿಗೂ ಕ್ರಿಸ್ಮಸ್ ಸಂಭ್ರಮಾಚಾರಣೆಯ ಶುಭಾಶಯಗಳು. -ಸಂಪಾದಕಿ
ಇನ್ನು ಯಾಕ ಬರಲಿಲ್ಲವ್ವ ?
ಡಾ ಜಿ ಎಸ್ ಶಿವಪ್ರಸಾದ್, ಶೇಫೀಲ್ಡ್

ಸ್ಯಾಂಟ ಇನ್ನು ಯಾಕೆ ಬರಲಿಲ್ಲ? ( ದ.ರಾ.ಬೇಂದ್ರೆ ಅವರ ಕ್ಷಮೆಯಾಚಿಸಿ) ಇನ್ನು ಯಾಕೆ ಬರಲಿಲ್ಲವ್ವ ಅಜ್ಜ ನಮ್ಮವ ವರ್ಷ ವರ್ಷ ಕ್ರಿಸ್ಮಸ್ಸಿಗಂತ ಬಂದು ಹೋಗಾವಾ ಕೆಂಪು ಮೂಗಿನ ಜಿಂಕಿ ಮ್ಯಾಲೆ ಜಾರಿ ಬರುವವ ಮನಿಮ್ಯಾಲಿನ ಚಿಮ್ನಿಯೊಳಗ ತೂರಿ ಬರುವವ ಬಿಳಿ ಗಡ್ಡ, ಬಿಳಿ ಮೀಸೆ ಹೊತ್ತು ನಿಂತವ ಡೊಳ್ಳುಹೊಟ್ಟೆ ಮ್ಯಾಲೆ ಕೆಂಪು ಅಂಗಿತೊಟ್ಟವ ಕೂಸು ಕೂಸಿನ ಕೆನ್ನೆ ಸವರಿ ಉಡುಗೊರೆ ಕೊಟ್ಟವ ಚಿಣ್ಣರ ಕನಸಿಗೆ ಬಣ್ಣ ತುಂಬಿ ನಕ್ಕು ನಲಿದವ ಬೆನ್ನಿನ ಮ್ಯಾಲೆ ಬಯಕೆಯ ಭಾರವ ಹೊತ್ತು ತಂದವ ಕತ್ತಲಲ್ಲಿ ಬೆಳಕನು ಚಲ್ಲಿ ಮಾಯವಾದವ ಮೂರು ಬಾರಿ ಕೋವಿಡ್ ವ್ಯಾಕ್ಸಿನ್ ಹಾಕಿಸಿ ಕೊಂಡವ ಓಮೈಕ್ರಾನಿನ ಹೆಸರ ಕೇಳಿ ಅಂಜಿ ಕೂತವ! ಡಾ ಜಿ ಎಸ್ ಶಿವಪ್ರಸಾದ್
ಕ್ರಿಸ್ಮಸ್ ಕ್ಯಾರಲ್
ಡಾ ಶ್ರೀವತ್ಸ ದೇಸಾಯಿ
ಯುಗ ಯುಗಾದಿ ಕಳೆದರೂ ನಾತಾಳ* ಮರಳಿ ಬರುತಿದೆ ಅದರ ಬೆನ್ನು ಹತ್ತಿದ ಬೇತಾಳದಂತೆ ಹೊಸವರ್ಷವು ಮರಳಿ ಬರುತಿದೆ ಚಾಕಲೇಟು, ಪ್ರೆಸೆಂಟ್ ಬಿಲ್ ಹೊತ್ತು ಬೆನ್ನೂ ಬಿಲ್ಲಾಗಿ ಬಾಗಿದೆ, ಕಿಸಿಗೆ ತೂತು ಬಿದ್ದಿದೆ ಬ್ಯಾಂಕು ಬ್ಯಾಲನ್ಸ್ ಅಂತೂ ಪಾತಾಳ ಸೇರಿದೆ! * * * * * ಅಲ್ಲಿ ಪಾರ್ಟಿಯಂತೆ, ಜನಜಂಗುಳಿ ಸೇರಿ ಹಂಗಾಮಾ ಮಾಡಿದೆ ಆದರೆ ನಿಮಗೊಂದು ಎಚ್ಚರಿಕೆ! ಮುತ್ತಿನಂಥ ನಿಮ್ಮ ಹಳೆಗೆಳತಿಯೊಬ್ಬಳು ‘ಮಿಸಲ್ ಟೋ‘ ದಡಿ ಕಾದುಕೂತಿದ್ದಾಳೆ ಅಪ್ಪಿ ಮುತ್ತುಗಳ ಮಳೆಗರೆಯಲು ಕಾಡುವ ಹಳೆಯ ನೆನಪುಗಳ ಓಕುಳಿಯಾಡಿದ್ದಾಳೆ ಕಂಡರೂ ಕಾಣದಂತೆ ಮಡದಿ ಕಿಡಿಕಿಡಿಯಾಗಿದ್ದಾಳೆ! ಬರುತ್ತದೆ ನಿಮ್ಮತ್ತ ಒಂದು ಪಾರ್ಟಿ ಕ್ರಾಕರ್, ಜೋಕೆ! *ನಾತಾಳ= ಕ್ರಿಸ್ಮಸ್














ಚಿತ್ರಗಳು – ಅಮಿತಾ ರವಿಕಿರಣ್