ಸಜ್ಜಿಗೆ ಕೈಗಳ ಸಿಹಿ; ವಿನತೆ ಶರ್ಮ


ಈ ಕೆಳಗಿನ ಭಾವ ಪೂರ್ಣ ಕವನಕ್ಕೆ ಹಿನ್ನೆಲೆಯನ್ನು ಅದನ್ನು ರಚಿಸಿದ ಕವಯಿತ್ರಿ ವಿನತೆ ಶರ್ಮ ಅವರೇ ಒದಗಿಸಿದ್ದಾರೆ.
ನಾನು ಟಿಪ್ಪಣಿ ಬರೆಯುವ ಅಗತ್ಯವಿಲ್ಲ. ನೆನೆಪಿಗೆ ಅದೆಷ್ಟು ಶಕ್ತಿಯಿದೆ! ಭಾವನೆಯನ್ನು ಕವಿತೆಯಾಗಿ ಮೂಡಿಸುವ ನೆನಪುಗಳು ಸಜ್ಜಿಗೆಯಷ್ಟೇ ಸಿಹಿ.
“ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ” ಎಂಬ ಕವನದ ಸಾಲುಗಳನ್ನು ನಾವು ಕೇಳಿದ್ದೇವೆ
ಇನ್ನೊಂದು ಪರಿಭಾಷೆಯಲ್ಲಿ ಹೀಗೂ ಅರ್ಥೈಸಿಸಬಹದು
ಎದೆಯ ಭಾವ ಹೊಮ್ಮುವುದಕೆ ಕವಿತೆ ಒಂದು ಸಾಧನ!

ಈ ಕವನ ಮದರ್ಸ್ ಡೇ ಹೊತ್ತಿಗೆ ಮೇ ತಿಂಗಳಲ್ಲಿ ಪ್ರಕಟಿತವಾಗಬೇಕಾಗಿದ್ದು ಸ್ವಲ್ಪ ತಡವಾಗಿಯಾದರೂ ಈಗ ದಕ್ಕಿದೆ. ಈ ಕವನ ನನ್ನ ಅಭಿಪ್ರಾಯದಲ್ಲಿ ಸರ್ವ ಕಾಲಕ್ಕೂ ಪ್ರಸ್ತುತ!

 

ಪೀಠಿಕೆ

ಆಸ್ಟ್ರೇಲಿಯಾದಲ್ಲಿ ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನ – Mother’s Day. ಇಂಗ್ಲೆಂಡಿನಲ್ಲಿರುವಂತೆಯೇ ಈ ದೇಶದಲ್ಲೂ ಕೂಡ ಅಮ್ಮಂದಿರ ಪ್ರೀತಿ ವಾತ್ಸಲ್ಯಗಳನ್ನು ಅವರ ಕುಟುಂಬದ ಇತರರು ಗೌರವಿಸಿ, ಆನಂದಿಸುವ ದಿನ. ಎಷ್ಟಾದರೂ ಇಂಗ್ಲೆಂಡ್ ತಾಯಿ ತವರು, ಆಸ್ಟ್ರೇಲಿಯಾ ಅದರ ಮಗಳು ಅಲ್ಲವೇ, ಎಂದು ಜನ ನಗಾಡುತ್ತಾರೆ. ನನ್ನ ಮಕ್ಕಳಿಬ್ಬರೂ ಆಸ್ಟ್ರೇಲಿಯನ್ Mother’s Day ಕಳೆದಾದ ವಾರದಲ್ಲೇ ಹುಟ್ಟಿದ್ದರಿಂದ ನನ್ನ ಸ್ನೇಹಿತರು, ‘They are your real gifts for Mother’s Day’, ಎಂದೆನ್ನುತ್ತಿದ್ದರು. ಎಷ್ಟಾದರೂ ಇಂಗ್ಲೆಂಡ್ ತಾಯಿ ತವರು, ಆಸ್ಟ್ರೇಲಿಯಾ ಅದರ ಮಗಳು ಅಲ್ಲವೇ, ಎಂದು ಜನ ನಗಾಡುತ್ತಾರೆ.
ಸ್ವಲ್ಪ ಕಾಲದ ಹಿಂದೆ ಒಂದೆರಡು ವರ್ಷಗಳ ಕಾಲ ಸತತವಾಗಿ ತೋಟಗಾರಿಕೆಯ ಹುಚ್ಚು ಹತ್ತಿ ಪರಾಕಾಷ್ಠೆ ತಲುಪಿತ್ತು. ಆಗ ನನ್ನ ಉಗುರುಗಳು ಕಂದು ಬಣ್ಣಕೆ ತಿರುಗಿ, ಕೈಗಳಲ್ಲಿ ಸದಾ ಒಡಕು, ಬಿರುಕು ಇದ್ದೇ ಇತ್ತು. ಒಮ್ಮೆ ನನ್ನ ಕಿರಿಯ ಮಗು, ‘ಅಮ್ಮ ನಿನ್ನ ಕೈಗಳು ಬಹಳ ಒರಟು’ ಎಂದಾಗ ಅದೇ ಮಾತನ್ನ ನಾನು ಬಾಲ್ಯದಲ್ಲಿ ನನ್ನ ತಾಯಿಗೆ ಹೇಳಿದ್ದ ನೆನಪು ಮರುಕಳಿಸಿತು. ಆದರೆ ಆಕೆಯ ಕೈಗಳು ಬಿರುಸಾಗಿದ್ದು ತೋಟಗಾರಿಕೆ ಎಂಬ ಹವ್ಯಾಸದಿಂದಲ್ಲ. ಬೆಳಗ್ಗೆ ಐದೂಮುಕ್ಕಾಲು ಗಂಟೆಯಿಂದ ರಾತ್ರಿ ಹತ್ತೂಕಾಲಿನವರಗೆ ಒಂದು ಕ್ಷಣವೂ ಪುರುಸೊತ್ತಿಲ್ಲದ ಅವಿರತ ಶ್ರದ್ಧಾಭಕ್ತಿಯ ದುಡಿಮೆಯಿಂದಾಗಿದ್ದು. ಅದನ್ನು ನೆನೆದು ಕಣ್ಣು ಒದ್ದೆಯಾಗಿತ್ತು. ಆ ಸಂದರ್ಭದಲ್ಲಿ ಬರೆದ ಕವಿತೆಯಿದು.

ವಿನತೆ ಶರ್ಮ

 

ಸಜ್ಜಿಗೆ ಕೈಗಳ ಸಿಹಿ

ಗುಲಾಬಿ ಪಕಳೆ ಎಳೆ ಮೈಮನವ
ದಿಟ್ಟಿಸುತ ಕಾಲಮಾನ ಕಾಯುತ್ತಿದೆ
ಪರಪಂಚವೆಲ್ಲಾ ಆ ಮಿದುವಿನಲ್ಲೇ ಮಿಂದು
ಕೂತಿದೆ ಎಂದೆಂಬ ಅರೀದ ಮಗುವಿಗೆ
ಹಣೆ ನೇವರಿಸಿದ ತಾಯ ಕೈ ಗೆರೆ
ಕೂಸಿಗೆ ಗಡುಸು ಬಿರುಸಿನ ಭ್ರಮೆಯಾಯಿತು.

ಚಳಿಗಾಲದ ಮಂದನೆ ತಂಪಿಗೆ ಸೀರೆ ಸೆರಗಿನ
ಸೆರೆಯೊಟ್ಟಿ ಕಂದನ ತಲೆ ತಟ್ಟುತ …
ಚರ್ಮವೊಡೆದ ಕೈಗಳ ಒಡತಿ ಆ ತಾಯಿ
ಅವಳ ಕೈಗಳು ಅವಳಮ್ಮನ ಪಡಿಯಚ್ಚು
ಬರೀ ಗೆರೆ, ಬಿರುಕುಗಳು, ನವೆದ ಚರ್ಮ
ಅಲ್ಲುಂಟು ದಿಕ್ಪಾಲಕರ ಹಗಲಿರುಳಿನ ಎಚ್ಚರ.

ಅವಳಮ್ಮನ ಬೆರಳು ಸಂದುಗಳು ಜರಡಿ ಹಿಡಿದಂತೆ
ಸುರಿಸಿದ ಪುಡಿ ರಂಗೋಲಿಯಾದ ಮಯಕದಲ್ಲಿ
ಬೆಳೆಯುವ ಹುಡುಗಿ ಮಗಳ ಬೆರಳುಗಳಿಗೆ
ಬಣ್ಣ ಹಚ್ಚುವ ಗಮನದಲ್ಲಿ ಅವಳಮ್ಮನ
ಒಡೆದ ಉಗುರುಗಳು, ತರೆದುಹೋದ ಬೆರಳು
ಉಗುರು ಕಣ್ಣಿನಾಳದಲಿ ಒಣಗಿದ್ದ ತುಸು ರಕ್ತ ಛಾಯೆ.

ತಿಕ್ಕಿ ತೀಡಿ ಮಡಿಸಿದ ಗರಿಗರಿ ಬಟ್ಟೆಗಳಲ್ಲಿ
ಚರ್ಮ ನವೆದು ಗೆರೆಗೆರೆಗಳಾಗಿ ಹೋದವೇ
ಹಾ ಜೀವವೇ! ಅಮ್ಮ ತಟ್ಟಿದ ಅಕ್ಕಿ ರೊಟ್ಟಿಯಲಿ
ತಿರುತಿರುವಿ ಸಿಹಿಯಾಗಿಸಿದ ಸಜ್ಜಿಗೆಯಲಿ
ಬಿಸಿಬಿಸಿ ಹಬೆಯಾಡುವ ಅನ್ನದ ಅಗಳನ್ನ
ಬಿಡಿಬಿಡಿಸಿ ಬೆರೆಸಿದ ಬೆರಳುಗಳಲಿ, ಅಯ್ಯೋ ನನ್ನಮ್ಮ!.

ಥಳಥಳಿಸುವ ಹೊಳೆಹೊಳೆಯುವ ಒಪ್ಪದಿ
ಓರಣದಿ ಜೋಡಿಸಿದ ಪಾತ್ರೆಗಳು ಹೇಳಿದ
ಪಿಸುಗುಡುವ ತರಿದುಹೋದ ಕೈಗಳ ಬಿರುಕುಗಳ
ಕತೆ ಜೀವ ಮೂಡಿ ಪಾತ್ರಗಳಾಗಿ ಬಂದ ಈ ಹೊತ್ತು
ಯಾಕೋ ನನ್ನ ನಿಟ್ಟುಸಿರು ಶಬ್ದವಾಯಿತೆಂಬ ಗಾಬರಿ
ಕೆನ್ನೆಯಿಂದಿಳಿದ ಕಂಬನಿ ಕಂದನ ತಾಕೀತೆಂಬ ಆತಂಕ.

ಹಣೆ ನೇವರಿಸುತ್ತಿದ್ದ ಕೈಯನ್ನೆಳೆದು ಮಗು ಮೆಲ್ಲನೆ
ಕೆನ್ನೆಯ ಕೆಳಗಿರಿಸಿ ಮುಖವೊತ್ತಿದಾಗ ಕತೆಗಳು
ನಲಿನಲಿದಾಡಿದವು, ಆ ಗೆರೆ ಬಿರುಕುಗಳಲಿ
ಅಮ್ಮನ ಪ್ರೀತಿ ಬಣ್ಣ ಬಳಿದ ಸಂಧ್ಯಾರಾಗ
ಒಡೆದ ಕೈಗಳ ಬೆರಳುಗಳ ಸ್ಪರ್ಶ ಅವಳು
ತಿರುತಿರುವಿದ ಸಿಹಿ ಸಜ್ಜಿಗೆಯಷ್ಟೇ ಹಿತ.

***

Advertisements

ಕರ್ತವ್ಯ ಮತ್ತು ಕರ್ಮ

 

ಕರ್ತವ್ಯ ಮತ್ತು ಕರ್ಮ
ನಮ್ಮ ಸ್ಥಳೀಯ ಲೇಖಕಿ ಕವಯಿತ್ರಿ ಡಾ ಪ್ರೇಮಲತಾ ಅವರ ‘ಕರ್ತವ್ಯ ಮತ್ತು ಕರ್ಮ’ ಎಂಬ ಕವಿತೆ, ಇಂಗ್ಲೆಂಡಿನ ಅನಿವಾಸಿ ವೈದ್ಯ ಅಥವಾ ದಂತ ವೈದ್ಯರ ಬದುಕಿನ ಒಳನೋಟವನ್ನು ಒದಗಿಸುವ ಕವನ. ಕರ್ತವ್ಯದಲ್ಲಿ ಎದುರುಗೊಳ್ಳುವ ರೋಗಿಗಳ ಬಣ್ಣ ರೂಪು ಮತ್ತು ವೇಷ ಹಲವಾರು. ಹಾಗೆಯೇ ಅವರ ಕಥೆಗಳು ನೂರಾರು. ರೋಗಿಗಳ ನೋವು ಬಾಧೆಗಳ ಜೊತೆಗೆ ಅವರ ವೈಯುಕ್ತಿಕ ಬದುಕಿನ ವಿಚಾರಗಳನ್ನು ವೈದ್ಯರು ತಿಳಿದುಕೊಳ್ಳ ಬೇಕಾಗುವ ಪರಿಸ್ಥಿತಿ ಅನಿವಾರ್ಯ. ಕರ್ತವ್ಯ ಮುಗಿದ ಮೇಲೆ ಕರ್ಮವೆಂಬ ಒತ್ತಡಗಳ ಅಧ್ಯಾಯವೇ ಬೇರೆ!
ಈ ರೀತಿಯ ಕವನ ವೈದ್ಯಕೀಯ ವೃತ್ತಿಯಲ್ಲಿರುವ ಕವಿಗಳಿಂದಲೇ ಸಾಧ್ಯ ಎಂಬುದು ನನ್ನ ಅಭಿಪ್ರಾಯ
ಡಾ ಪತ್ತಾರರ ಐಸ್ಲ್ಯಾಂಡ್ ಚಿತ್ರಗಳ ಭಾಗ ೨ ಮುಂದುವರಿದಿದೆ. ವಿಸ್ಮಯ ಗೊಳಿಸುವ ಮೋಹಕ ಭಿತ್ತಿಗಳನ್ನು ಒದಗಿಸಿದ ಅವರಿಗೆ ಧನ್ಯವಾದಗಳು
(ಸಂ )

ಕರ್ತವ್ಯ ಮತ್ತು ಕರ್ಮ
ಡಾ.ಪ್ರೇಮಲತ ಬಿ.

“’ಹಲ್ಲೋ ಐ ಯಾಮ್ ಸೊ & ಸೊ.
ನೈಸ್ ಮೀಟಿಂಗ್ ಯು”..
ಇಪ್ಪತ್ತೊಂದನೇ ಸಲ ಹೇಳುತ್ತೇನೆ
ನಲವತ್ತಾಯ್ತೆಂಬ ಗತ್ತಿನಲಿ

ಬಂದವರು ಕೋಟು ಬಿಚ್ಚುತ್ತಾರೆ
ಕೈ ಕುಲುಕುತ್ತಾರೆ
“ಟೇಕ್ ಎ ಸೀಟ್ “ ಎನ್ನುತ್ತೇನೆ ಸ್ವೀಟಾಗಿ
ಹೇಳಿದ್ದ ಪಾಲಿಸುತ್ತಾರೆ ನೀಟಾಗಿ

ಬಾಯ್ತೆರೆದು ಬಡಬಡಿಸುತ್ತಾರೆ ಬಹುತೇಕರು
ಕೆಲವರಿಗೆ ಮಾತ್ರ ಮೈ ನಡುಕ
ಅನ್ನಿಸುತ್ತದೆ ಇವನು ಕುಡುಕ
ಮೂವತ್ತಾದರೂ ಸೇದುತ್ತಿರಬೇಕು ದಿನಕ್ಕೆ
ಅವನಂತೆ ಇವಳ ಚರ್ಮವೂ ಸುಕ್ಕೆ

ಜೀವಗಳು, ಜೀವಗಳು ಮತ್ತು ಜೀವಗಳು
ಎಷ್ಟೊಂದು ಬಣ್ಣ, ರೂಪು,ವೇಷ
ಅವನದೊಂದು ಕಥೆ, ಇವಳದಿನ್ನೊಂದು
ಕಳೆದುಕೊಂಡ ಸಂಗಾತಿ, ದಿಗ್ಭ್ರಾಂತಿ

ನೋವು,ಹೊಸ ಬಾಧೆ,ಭಯ ಮತ್ತು ರೋಗ
ಕೇಳುತ್ತ , ನಗುತ್ತ ಮಾಡುವುದು ಪರೀಕ್ಷೆ
ಮದ್ದು. ಮೈ ಬಾಯಿ ಮನಸ್ಸಿನ ಚಿಕಿತ್ಸೆ

“ಕಳೆದ ಭೇಟಿಯಿಂದ ಮುಂದಕ್ಕೆ ಏನಾದರೂ ಬದಲಾವಣೆ?.”
“ಮೊದಲಿಗಿಂತ ಆರು ತಿಂಗಳು ವಯಸ್ಸಾಗಿದೆ ಅಷ್ಟೆ
ನಾನಿನ್ನೂ ತೊಂಭತ್ತರ ಯುವಕ..”
ಬೊಚ್ಚು ಬಾಯಿ ಬಿಟ್ಟು ನಗುವ ಮುದುಕ…!

ದಿನವೊಂದಕ್ಕೆ ಇಪ್ಪತ್ತೈದು ಜೀವ, ಜೀವನ
ಮುಟ್ಟಿದ ಪ್ರತಿಬಾರಿ ಕೈ ತೊಳೆಯುತ್ತೇನೆ
ತಗುಲಿಕೊಂಡದ್ದನ್ನೆಲ್ಲ ಕೊಡವಿಕೊಳ್ಳುತ್ತ
ವೇಷ ಕಳಚುತ್ತೇನೆ
ಧಾವಿಸುತ್ತ ಮನೆಯ ಮುಟ್ಟಿ

“ ಯಾಕೆ ಲೇಟು? ಊಟ ಯಾವಾಗ? “
ಮತ್ತೊಂದೆರಡು ಜೀವ ,ಭಾವ
ಕರ್ತವ್ಯ ಮುಗಿದರೇನು? ಕರ್ಮ ಮೊರೆಯುತ್ತದೆ
ಮತ್ತೊಂದು ಬದುಕು ತೆರೆಯುತ್ತದೆ
ಒಂಟಿ ಬದುಕಿನ ಕನಸು ಕರೆಯುತ್ತವೆ
ಕಣ್ಣೀರು ಕರೆಯದಿದ್ದರೂ ಹೊರಟ ನಿಟ್ಟುಸಿರಿಗೆ
ಗೋಡೆಯ ಮೇಲಿನ ಹಲ್ಲಿ ಲೊಚಗುಡುತ್ತದೆ !

***

______________________________________________

ಕಣ್ಣೋಟ

ಜಯಪ್ರಕಾಶ ಪತ್ತಾರರು ಸೆರೆಹಿಡಿದ ಅರೋರಾ ಬೋರಿಯಾಲಿಸ್ (ನಾರ್ತರ್ನ್ ಲೈಟ್ಸ್). ಅರೋರಾ, ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಕತ್ತಲ ಆಗಸವನ್ನು ಹೊಳಪಿಸುವ ವಿಸ್ಮಯ ಬೆಳಕು. ಐಸ್ಲ್ಯಾಂಡ್ ದೇಶದ ತಮ್ಮ ಪ್ರವಾಸದಲ್ಲಿ ಆಸಕ್ತಿಯಿಂದ ಇದನ್ನು ಸೆರೆಹಿಡಿಡಿರುವ ಪತ್ತಾರರು, ಅನಿವಾಸಿಯೊಂದಿಗೆ ಈ ಆಕರ್ಷಕ ಚಿತ್ರಗಳ ಜೊತೆಗೆ, ಅವನ್ನು ಸೆರೆಹಿಡಿಯುವ ತಂತ್ರವನ್ನು ಸಹ ಹಂಚಿಕೊಂಡಿದ್ದಾರೆ. ಮಂದ ಬೆಳಕಿನಲ್ಲಿ ಫೋಟೋ ತೆಗೆಯುವ ಆಸಕ್ತರಿಗೆ ಇದೊಂದು ಉತ್ತಮ ಉದಾಹರಣೆ ಮತ್ತು ಉಪಯುಕ್ತ ಮಾಹಿತಿ. 

ಪತ್ತಾರರ ಮಾತುಗಳಲ್ಲಿ:

image.png

ಅರೋರಾ ಬೆಳಕು ಕಾಣಿಸುವದಕ್ಕೆ ಸೌರಮಾರುತದ ಕಣಗಳ ಉತ್ತೇಜನವೆಂದು ವಿಜ್ಞಾನ ತಿಳಿಸಿದ್ದರೂ ಮನಸ್ಸೇಕೋ ನಾರ್ಡಿಕ್ ಸಮುದಾಯದ ದಂತಕಥೆಗಳನ್ನೇ ನಂಬಬಯಸುತ್ತದೆ. ತೀರಿ ಹೋದ ಪೂರ್ವಜರ ಮತ್ತು ಮಿತ್ರರ ಆತ್ಮಗಳು ಪುನಃ ಭೇಟಿ ಮಾಡಲು ಭೂಮಿಗೆ ಬರುವದರ ಚಿನ್ಹೆ ಎಂದು ಅವರ ನಂಬಿಕೆ. ಕೊರೆವ ಚಳಿ, ಬೀಸುವ ಗಾಳಿಯ ದಟ್ಟ ಕಪ್ಪು ರಾತ್ರಿಯಲ್ಲಿ ಮೋಡ ಸರಿದಾಕ್ಷಣ ಮಂದ ಹಸಿರಿನ ಬಣ್ಣದ ಬೆಳಕು ಘಾಡವಾಗುತ್ತ ಬಾನಂಗಳದಲ್ಲಿ ಕುಣಿದಾಡಿ ನೇರಳೆ, ಕೆಂಪು ಬೆಳಕಿನ ಸೆರಗು ತೋರಿಸಿ ವಿಸ್ಮಯಗೊಳಿಸುವ ಪರಿ ವರ್ಣಿಸಲು ಕಷ್ಟಕರ.

 

 

ಚಿತ್ರ ತೆಗೆಯಲು ಸಹಾಯಕ ಅಂಶಗಳು.
೧. ಟ್ರೈಪೋಡ್ ಅತ್ಯವಶ್ಯ.
೨. ಸಾಧ್ಯವಿದ್ದಷ್ಟು ಕಡಿಮೆ f ನಂಬರ್
೩. ಮಾನ್ಯುಯಲ್ ಫೋಕಸ್  ಇನ್ಫಿನಿಟಿ ಗೆ
೪. ೧೦ ರಿಂದ ೨೦ ಸೆಕೆಂಡ್ಸ್ exposure
೫. ರಿಮೋಟ್ ರಿಲೀಸ್ ಅಥವಾ ಟೈಮರ್

 

image.png18mm, f/3.5, 15 Sec, ISO 800: ಹುಣ್ಣಿಮೆ ರಾತ್ರಿಯಲ್ಲಿ ಅರೋರಾ ಸ್ಪಷ್ಟವಾಗಿ ಕಾಣುವುದು ವಿರಳ. ನನ್ನ ಅದ್ರಷ್ಟ, ಗಾರ್ಡುರ್ ಎಂಬ ಮೀನುಗಾರ ಹಳ್ಳಿಯ ಕಡಲ ತೀರದಲ್ಲಿ ತೆಗೆದ ಚಿತ್ರ.

 

image.png18mm f/3.5, 13 sec, ISO 800: ನೇರಳೆ ಹಾಗು ಕೆಂಪು ಸೆರಗಿನ ಹಸಿರು ಅರೋರಾ.

 

 

 

image.png24mm, f/4, 25 sec, ISO 1600: ಈ ಅಮೇರಿಕಾ ಪ್ರವಾಸಿಗಳು  ನನ್ನ ಚಿತ್ರ ತೆಗೆಯುವ ವಿಧಾನವನ್ನು ಕೇಳಿ ತಮ್ಮದೂ ಒಂದು ಚಿತ್ರವನ್ನು ಆರೋರಾದ ಜೊತೆ ತೆಗೆಯಲು ಕೇಳಿದರು. ಕತ್ತಲೆಯಲ್ಲಿ ಅವರ ಮುಖದ ಮೇಲೆ ಟಾರ್ಚ್ ಬೆಳಕು ಹರಿಸುತ್ತಾ ೨೫ ಸೆಕೆಂಡು ಅಲುಗಾಡದೆ ನಿಂತಿರಲು ಹೇಳಿದ್ದೆ. ನಾನು ಅವರಿಗೆ  photo ಇಮೇಲ್ ಮಾಡಿದಾಗ  ತುಂಬಾ ಧನ್ಯತಾ ಭಾವದಿಂದ ಚಿರಋಣಿಯಾಗಿದ್ದೇವೆ ಎಂದು ತಿಳಿಸಿದರು.