ಶ್ರೀನಿವಾಸ ಮಹೇಂದ್ರಕರ್ ಅವರ ಎರಡು ಕವಿತೆಗಳು

Shrinivas
ಲೇಖಕರು: ಶ್ರೀನಿವಾಸ ಮಹೇಂದ್ರಕರ್
(ಶ್ರೀನಿವಾಸ ಮಹೇಂದ್ರಕರ್, ಅನಿವಾಸಿ ಲೇಖಕರ ಬಳಗಕ್ಕೆ ಹೊಸ ಸೇರ್ಪಡೆ. ಶ್ರೀನಿವಾಸ ಅವರಿಗೆ ಸ್ವಾಗತ. ಅವರು ಮೂಲತಃ ಕರ್ನಾಟಕದ ಹೃದಯಭಾಗವಾದ ದಾವಣೆಗೆರೆ ಜಿಲ್ಲೆಯ ಹರಿಹರ ತಾಲೂಕಿನವರು. ಲಂಡನ್ನಿಗೆ ವಲಸೆಯಾಗಿ ಸುಮಾರು ಹತ್ತು ವರುಷಗಳಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಂಗಾತಿ ಕಸ್ತೂರಿ ಮತ್ತು ಇಬ್ಬರು ಮಕ್ಕಳು ಹೃಷೀಕ ಮತ್ತು ಉಜ್ವಲರೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿದ್ದಾರೆ. ಶಾಲೆಯ ಪ್ರಾಂಶುಪಾಲರ ಸಹವಾಸ ದೋಷದಿಂದ ಕವನಗಳನ್ನು ಓದುವುದು ಮತ್ತೆ ಬರೆಯುವುದು ಹವ್ಯಾಸವಾಯಿತು ಅನ್ನುತ್ತಾರೆ. ಆಗಲೊಮ್ಮೆ ಈಗಲೊಮ್ಮೆ ಈಗಲೂ ಕವನ ಬರೆಯುತ್ತಾರೆ. ಅವರು ಬರೆದ ಎರಡು ಕವನಗಳು ನಿಮ್ಮ ಮುಂದಿವೆ. ಓದಿ, ಆನಂದಿಸಿ, ಕೊಮೆಂಟಿಸಿ – ಸಂ)

ಕೇಳಿದ್ನಾ ನಿಂಗ್ ನಾ ಬಡ್ತಿ

ಬ್ಯಾಡ್ ಬ್ಯಾಡ್ ಅಂದ್ರೂ ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ

ಒಳಗಿದ್ದಾಗ್ ನಾನಿಂಗಿರ್ಲಿಲ್ಲ
ಲೋಕದ್ ಬ್ಯಾನಿ ತಿಳಿದಿರ್ಲಿಲ್ಲ
ನಂಪಾಡ್ಗ್ ನಾನ್ ಆಡ್ಕೊಂಡಿದ್ದೆ
ಬ್ಯಾಡ್ ಬ್ಯಾಡ್ ಅಂದ್ರು ಹಾಕ್ಕೊಂಡ್ ದಬ್ಡಿ
ಕೇಳಿದ್ನಾ ನಿಂಗ್ ನಾ ಬಡ್ತಿ
ಕೇಳಿದ್ನಾ ನಿಂಗ್ ನಾ ಬಡ್ತಿ

ನೀನ್ ಅಂದ್ಕೊಂಡ್ ಅಂದ್ಕೊಂಡ್ ಬಣ್ಣ ತೋರ್ಸಿ
ಅಂದ್ಕೊಂಡ್ ಜಾಗ್ದಾಗ್ ಬುದ್ದಿ ಬೆಳ್ಸಿ
ಒಳ್ಳೆವ್ರ್ ಕೆಟ್ಟೋವ್ರ್ ಮಾಡ್ತಿ
ಬ್ಯಾಡ್ ಬ್ಯಾಡ್ ಅಂದ್ರು ದೊಡ್ದೊನಾದ್ನಿ
ಕೇಳಿದ್ನಾ ನಿಂಗ್ ನಾ ಬಡ್ತಿ
ಕೇಳಿದ್ನಾ ನಿಂಗ್ ನಾ ಬಡ್ತಿ

ಹಾರ್ತೀನಂದ್ರೆ ಗಾಳಿ ಕೊಟ್ಟಿ
ಈಜ್ತೀನಂದ್ರೆ ನೀರ್ ಕೊಟ್ಟಿ
ಕಷ್ಟ ಸುಖದ್ ಜೀವನ್ದಾಗೆ
ಎಂಥೆಲ್ಲ ಸೊಗ್ಸ ನೀನಿಟ್ಟಿ
ಗಂಡ ಹೆಂಡ್ತಿ ಮಕ್ಕಳ್ ಮರಿ
ಸೊಗಸಾದ್ ಗಂಟನ್ ಕಟ್ಟಿ
ಸೊಗಸಾದ್ ಗಂಟನ್ ಕಟ್ಟಿ

ಬ್ಯಾಡ್ ಬ್ಯಾಡ್ ಅಂದ್ರು ಕಟ್ಬಿಚ್ತೀಯ
ಎಲ್ರು ಮನಸನ್ ನೋಯ್ಸಿ
ಕಾಣದ್ ಊರ್ಗೆ ವರ್ಗ ಮಾಡ್ತಿ
ಉಳಿದೋರ್ ಕಣ್ಗಳ್ ತೊಯ್ಸಿ
ಉಳಿದೋರ್ ಕಣ್ಗಳ್ ತೊಯ್ಸಿ

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ
———————————————————–

ದುಂಡುಹೊಟ್ಟೆ ತುಂಟ

ದುಂಡುಹೊಟ್ಟೆ ತುಂಟನದು
ಇಲಿಯ ಜಂಬೂಸವಾರಿ
ಮುರಿದ ಹಲ್ಲು ಆನೆ ಮುಖ
ಇವನ ಸ್ಟಂಟು ನೋಡಿರಿ

ವರ್ಷ ವರ್ಷ ಬರುವನಿವನ
ಭಿನ್ನ ಭಿನ್ನ ಮಾದರಿ
ಗಾಂಧಿ ಗಣಪ  ನೆಹರು ಗಣಪ
ಇಂದು ಮೋದಿಗೂನು ಸೊಂಡಲಿ

ಗೂಟ ನೆಟ್ಟು ಪೆಂಡಾಲಾಕಿ
ಕಟ್ಟೆಮೇಲೆ ಗಣಪನು
ನಲಿವ ಕುಣಿವ ಪಡ್ಡೆಗಳ
ರಾಜ್ಯಕಿವನೇ ರಾಜನು

ಕೆಂಪುಪಟ್ಟಿ ಹಣೆಯ ಮೇಲೆ
ಕಪ್ಪಾಯಿತು ಕುಣಿಯುತ
ಗಣೇಶಪಟ್ಟಿ ಜೇಬು ತುಂಬಿ
ಹೊಟ್ಟೆ ಪಾನಾವೃತ

ಮನೆಗಳಲ್ಲಿ ಪುಟ್ಟ ಗಣಪ
ಮಕ್ಕಳಿಗೆ “ಬಾಲಗಣೇಶ್”
ಎಲ್ಲರೊಡನೆ ಫೈಟು ಮಾಡಿ
ಗೆದ್ದು ಬರುವ ನಾಟಿ ಗಣೇಶ್

ಬಿದ್ದು ನಗಿಸಿ  ಎದ್ದು ನಗುವ
ಪಾರ್ವತಿಯ ಕಂದನು
ಮೂರೇ ಕ್ಷಣದಿ ಮೂರು ಲೋಕ
ಸುತ್ತುವ ಪ್ರಚಂಡನು

Advertisements

ಭಾಮೆಯ … ವತ್ಸಲಾ ರಾಮಮೂರ್ತಿ ಬರೆದ ಕವನ

(ಯು ಕೆ ಕನ್ನಡ ಬಳಗದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಕ ಸಾ ಸಾಂ ವಿ ವಿ)ಯವರು ಇತ್ತೀಚೆಗೆ ಹೊರತಂದ ಧ್ವನಿ ಸುರುಳಿಯಲ್ಲಿಯ ಇನ್ನೊಂದು ರಚನೆಯನ್ನು ಈ ವಾರ ಪ್ರಕಟಿಸುತ್ತಿದ್ದೇವೆ. ಈ ಹಾಸ್ಯ-ವಿಡಂಬನೆ ಭರಿತ ಹಾಡಿಗೆ ವತ್ಸಲಾ ಅವರೇ ಈ ಕೆಳಗೆ ಹಿನ್ನೆಲೆ ಕೊಟ್ಟಿದ್ದಾರೆ. CD ಯಲ್ಲಿ ಇದನ್ನು ಕೇಳಿ ನೀವೆಲ್ಲ ಆನಂದಿಸಿ, ’ವಧು ಪರೀಕ್ಷೆ’ ಗೆಂದು ಬಂದ ಆನಂದನ ಪಾಡು ಏನೇ ಇರಲಿ!-ಸಂ)

ನಾವು ಆಗ ತಾನೆ ವ್ಯದ್ಯಕೀಯ ಪರೀಕ್ಷೆ ಮುಗಿಸಿ ಹಾಯಾಗಿ ಇದ್ದೆವು. ಆಗ ಶುರುವಾಯಿತು ಮದುವೆ ಕಾಟ . ನಾನಂತು ನನ್ನ ಅಪ್ಪನಿಗೆ ಹೇಳೇಬಿಟ್ಟೆ “ನೋಡು ನೀನು ತಿಪ್ಪರಲಾಗ ಹಾಕಿದರೂ ನಾನು ಅಮೆರಿಕಾದ ಹುಡುಗನ್ನ ಮದುವೆ ಆಗಲ್ಲ ” ಅಂತ . ಪಾಪ ನನ್ನ ಫ್ರೆಂಡ್ ರಮನಿಗೆ ಅಷ್ಟ್ಟು ಸ್ವಾತಂತ್ರ್ಯ ಮತ್ತು ಧೈರ್ಯ ಇರಲ್ಲಿಲ . ಅವಳು ನನ್ನ ಹತ್ತಿರ ಬಂದು ಗೋಳಾಡಿದಳು .”ನೋಡೇ ,ಯಾರೋ ತಲೆ ಮಾಸಿದವ ಅಮೇರಿಕನ್ನು ಬರುತ್ತಾನಂತ್ತೆ . ಅವನಿಗೆ ಹಳೆಕಾಲದ ಹುಡಿಗಿ ಬೇಕಂತ್ತೆ. ಸೀರೆ ಒಟ್ಟು ಕುಂಕುಮ ಅರಸಿನ ಹಚ್ಚಿ ಹೂವ ಮುಡಿದರಬೇಕೆಂತೆ . ನಾನೇನು ಹಸುವೇ ನೋಡಿ ಮೂಗುದಾರ ಹಾಕಿ ಎಳೆಯುವುದಕ್ಕೆ?,” ಅಂತ ಗೋಗರೆದಳು. ಆಗ ನಾವು ಒಂದು ನಾಟಕ ಆಡಿದೆವು . ಅದೇ ಅದರ ಹಿನ್ನಲೆ. –ವತ್ಸಲಾ ರಾಮಮೂರ್ತಿ

 ಭಾಮೆಯ ನೋಡಲು ಬಂದ ನಮ್ಮ ಆನಂದ!!!!

ಭಾಮೆಯನು ನೋಡಲು ಬಂದ

ಕಚ್ಚೆ ಪಂಚೆ, ಶಾಲು ಹೊದ್ದು ಬಂದ  ಆನಂದ

ಅಮೆರಿಕಾದಲ್ಲಿ ಅಧಿಕಾರಿ ಅವನಾಗಿದ್ದ

ಇಡ್ಲಿ, ದೋಸೆ, ರಾಗಿ ರೊಟ್ಟಿಯೆಂದರೆ ಪ್ರಾಣ ಬಿಡುತ್ತಿದ್ದ

 

ವಧುವನ್ನು ನೋಡಲು ಕಾತುರನಾಗಿದ್ದ

ಹೆಸರು ನಾಗವೇಣಿಯೆಂದ ಭಾವಮೈದುನ

ಪಟ್ಟೆ ಸೀರೆಯುಟ್ಟು ಮಲ್ಲಿಗೆ ಮುಡಿದು

ವಜ್ರದ ಓಲೆ, ಮೂಗು ಬಟ್ಟು ಹೊಳೆಸುತ್ತ ನಾಚುತ್ತಾಳೆಂದುಕೊಂಡ

ಅಂತಿಂತ ಹೆಣ್ಣಲ್ಲ  ಅವಳು ಭಾಗ್ಯವತಿ ಎಂದು ಕನಸುಕಂಡ

 

ವಧು ಬಂದಳು ವರನ ಪರೀಕ್ಷೆಗೆ

ಕೆಂಪು, ಹಸಿರು ಬಣ್ಣ ಬಳಿದು ಕೇಶ ರಾಶಿಗೆ

ತುಟಿಯಲ್ಲಿ ಕೆಂಪು, ಕಣ್ಣಲ್ಲಿ ನೀಲಿ ಬಣ್ಣ

ಮೈಗೆಲ್ಲ ಚಿನ್ನದ ಬಣ್ಣದ ಪುಡಿಯ ಮಿಣ ಮಿಣಿಸುತ್ತ

Bhameya nodalu banda Ananda 1 (3)

ಕಾಲಲ್ಲಿ ಆರಿಂಚಿನ ಮೊಸಳೆ ಚರ್ಮದ ಮೆಟ್ಟು

ತಲೆ ಎತ್ತಿ ಧಿಮಕ್, ಧಿಮಕ್ ಧಾವಂತದಲ್ಲಿ

ಕೈಯಲ್ಲಿ ಮದ್ಯಪಾನದ ಬಟ್ಟಲು ಹಿಡಿದಿದ್ದಳು

ಹೈ  ದೇರ್ !! ಹುಸಿನಗೆ ಬೀರುತ್ತ  ಅಂದಳು

 

ಕಾದಿದ್ದನವ ರೇಶ್ಮೆ ಸೀರೆಯ ನಾಗವೇಣಿಗೆ

ಉಪ್ಪಿಟ್ಟು ಬೋಂಡ ಜಾಮೂನ್ ನಿಪ್ಪಟ್ಟಿಗೆ

ನಾಚುತ್ತ ಮಲ್ಲಿಗೆ ಮುಡಿದು ಬರುವ ಹೆಣ್ಣಿಗೆ

ಕೃಷ್ಣ ನೀ ಬೇಗನೆ ಬಾರೋ ಎನ್ನುವ ಹಾಡಿಗೆ

ಭಾಮೆಯ ನೋಡಲು ಬಂದ ನಮ್ಮ ಆನಂದ!!!!

ಡಾ ವತ್ಸಲಾ ರಾಮಮೂರ್ತಿ 

 

(ವ್ಯಂಗ ಚಿತ್ರ : ಡಾ. ಲಕ್ಷ್ಮಿನಾರಾಯಣ ಗುಡೂರ್)