ನಿನ್ನೆಗಳು ಬರೆದ ನಾಳೆಗಳು – ಮುರಳಿ ಹತ್ವಾರ್ ಬರೆದ ಕವನ

ಕವಿ: ಮುರಳಿ ಹತ್ವಾರ್

ಮುರಳಿ ಹತ್ವಾರ್ ಅವರ ಕವನಗಳು ನನಗೆ ಗೋಪಾಲಕೃಷ್ಣ ಅಡಿಗರ ಕವನಗಳನ್ನು ನೆನಪಿಸುತ್ತವೆ. ಹಾಗೆಂದು ಅವರು ಅಡಿಗರನ್ನು ಅನುಕರಿಸಿ ಬರೆಯುತ್ತಿಲ್ಲ. ಅಡಿಗರು ಹಾಕಿದ ಹಾದಿಯಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿದ್ದಾರೆ ಈ ಕವನದಲ್ಲಿ.  ಐದು ನಿಮಿಷದಲ್ಲಿ ಎರಡು ವಾಕ್ಯ ಬರೆದು, ಐದು ಸಲ ತುಂಡರಿಸಿ, ಹತ್ತು ಸಾಲು ಮಾಡಿ, ಅದಕ್ಕೊಂದು ಹೆಸರನಿಟ್ಟು, ಪತ್ರಿಕೆಗಳಲ್ಲಿ, ಜಾಲಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ತುಂಬಿ ತುಳುಕುತ್ತಿರುವ ಈ ಇ-ಯುಗದಲ್ಲಿ ಹತ್ವಾರ್ ಅವರು ಶ್ರದ್ಧೆಯಿಂದ, ತಾದಾತ್ಮ್ಯದಿಂದ ಒಂದೊಂದೇ ಪದಗಳನ್ನು ಹೆಕ್ಕಿ ಬರೆಯುತ್ತಾರೆ. `ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ?` ಎನ್ನುವ ಅಡಿಗರ ಕವನದಂತೆ, ಹತ್ವಾರ್ ಅವರು ಈ ಕವನವನ್ನು ಧ್ಯಾನಿಸಿ ಬರೆದಿದ್ದಾರೆ. 

ಸ್ಟೀಫನ್ ಹ್ವಾಕಿಂಗ್ ಬರೆದ ಕೊನೆಯ ಪುಸ್ತಕ

`ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದತ್ತ ಸಂಬಂಧವಯ್ಯ` ಎನ್ನುವ ಅಲ್ಲಮನ ನುಡಿಯಂತೆ, ಎತ್ತಣ ಕನ್ನಡ ಕವನ ಎತ್ತಣ ಸ್ಟೀಫನ್ ಹ್ವಾಕಿಂಗ್ ಎನ್ನಬಹುದೇ? ಈ ಶತಮಾನ ಕಂಡ ಅದ್ವಿತೀಯ ಚಿಂತಕ, ಭೌತವಿಜ್ಞಾನಿ, ಅಂತರಿಕ್ಷಜ್ಞ ಸ್ಟೀಫನ್ ಹ್ವಾಕಿಂಗ್ ಬರೆದ ಈ ಕೊನೆಯ ಪುಸ್ತಕವನ್ನು ಓದಿ, ಚಿಂತಿಸಿ, ಮಥಿಸಿ, ಧ್ಯಾನಿಸಿ ಕನ್ನಡಕ್ಕೊಂದು ಅಪರೂಪದ ಕವನವನ್ನು ಕೊಟ್ಟಿದ್ದಾರೆ. ಒಂದೇ ಸಲಕ್ಕೆ ತೆರೆದುಕೊಳ್ಳದೇ ಇರಬಹುದು. ಮತ್ತೆ ಮತ್ತೆ ಓದಿದಂತೆ ಪದರುಗಳನ್ನು ಬಿಚ್ಚುತ್ತ ಪರಮಣುವೊಂದು ಅನಂತವಾಗುವ ದಿವ್ಯ ಅನುಭೂತಿಯನ್ನು ನಾನಂತೂ ಪಡೆದುಕೊಂಡಿದ್ದೇನೆ. ಇನ್ನು ನೀವುಂಟು, ಈ ಕವನವುಂಟು – ಸಂ

ನಿನ್ನೆಗಳು ಬರೆದ ನಾಳೆಗಳು

ಅಣು ಬೆಳೆದ ತೃಣದ ಹುಟ್ಟಿನ
ಹಿಂದಡಗಿದೆಯಂತೆ ಇದರ ಗುಟ್ಟು
ಬೆಳಕಿಗಿಂತಲೂ ವೇಗದಲಿ ಹೋಗೆ
ಸಿಗಬಹುದಂತೆ ಅದರ ತುದಿ ಜುಟ್ಟು
ಹೋದ ಮನಸುಗಳು ಬೇಯಿಸಿವೆ
ಹಸಿ-ಹಸಿ ಸಿದ್ಧಾಂತಗಳ ಒಬ್ಬಟ್ಟು

ಎಲ್ಲವೂ ಸೂತ್ರಗಳ ನಿಯಮವಂತೆ
ಅಪ್ರಮೇಯನೂ ಅದರ ಬಂಧಿಯಂತೆ!
ಶೂನ್ಯದಿಂದೆಂದೋ ಘನ ಘಣಿಸಿ
ಮತ್ತೆ ಗುಣಿಗುಣಿಸಿ ಭುವಿಯುದಿಸಿ
ಲಕ್ಷಲಕ್ಷ ಕ್ಷಣಗಳು ಕರಗಿದ ಮೇಲೆ
ಮನುಕುಲದ ಮೊದಲಳುವಂತೆ!

ಬಿಡೆನೆನ್ನುವ ಬಂಧನದಲೆಗಳು
ಕಾಲ, ಲೋಕ, ಗಗನ, ನಾಕಗಳ
ಹಿಡಿಹಿಡಿದೆಳೆಯುತಿವೆಯಂತೆ
ನಮ್ಮರಿವಿನ ಕಾಲದೋಟದ ದಿಕ್ಕು
ಹಿಂದೋಡಿ ಆಡುವ ಕಾಲವೂ
ಮುಂದೆಂದೋ ಬರಬಹುದಂತೆ!

ಸೆಳೆವಲೆಗಳ ಬಲದೊಂದು ತುದಿ
ಬಿಡದೆಲ್ಲನುಂಗೋ ಕರಿಕಿಂಡಿಯಂತೆ
ಇಂದು-ನಿನ್ನೆ-ನಾಳೆಗಳ ಹಂಗಿಲ್ಲದ
ಇರುವು-ಅರಿವು-ಮರೆವುಗಳ ಇಂಗಿಲ್ಲದ
ಇರುಳು ಲೋಕದ ಕರುಳಿನ ತಿರುಳು
ತಿಳಿದು ಹೇಳುವವ ನಾಳಿನ ದೊರೆಯಂತೆ!

ಜಗದ ಹುಟ್ಟನು ಹುಡುಕುವ ಹಮ್ಮು
ಅವನೊಳ ತಳತಳ ಗಬ್ಬು ಕತ್ತಲು
ಕೊನೆಯಿಲ್ಲದ ಆಸೆ ಮೋಸಗಳ ಸೆಳೆತ
ಧಿಕ್ಕರಿಸಿ ಚಿಮ್ಮುವ ಬೆಳಕನು ಬೆಳೆಯುವ
ಹೊಸ ಸೂತ್ರಗಳ ಬರೆಯಬಲ್ಲನೇ?
ತನ್ನ ಅಳಿವ ತಾ ತಡೆಯಬಲ್ಲನೇ?

ಯಾರು ಏನೇ ಹೇಳಲಿ. ಮನೆ, ಮಡದಿ, ಮಕ್ಕಳು;
ಕಾರು-ಬಾರುಗಳು, ಕೂಡಿಟ್ಟ ಡೆಪಾಸಿಟ್ಟುಗಳು
ಎಣಿಸಿ, ಎಣಿಸಿ, ಎಣಿಸಿ ಕಡೆಗೊಮ್ಮೆ
ಎಣಿಕೆಯಿಲ್ಲದ ಕೋಟಿ-ಕೋಟಿ ಜೀವಗಳಂತೆ
ಸುಟ್ಟು ಕರಗಿ ತೊಲಗುವದೇ ನನ್ನ
ನಿನ್ನೆಗಳು ಬರೆದ ನಾಳೆಗಳು!

ಎಷ್ಟು ಬರೆದರೂ ಮೂಡದ ಅಕ್ಷರಗಳು
ಹೇಗೆ ಹಿಡಿದರೂ ಕಾಣದ ಬರಹಗಳು
ಬದುಕಿನ ಬಿಳಿ ಹಾಳೆಗಳು
ನಿನ್ನೆಗಳು ಬರೆದ ನಾಳೆಗಳು!

Advertisements

ಶ್ರೀನಿವಾಸ ಮಹೇಂದ್ರಕರ್ ಅವರ ಎರಡು ಕವಿತೆಗಳು

Shrinivas
ಲೇಖಕರು: ಶ್ರೀನಿವಾಸ ಮಹೇಂದ್ರಕರ್

(ಶ್ರೀನಿವಾಸ ಮಹೇಂದ್ರಕರ್, ಅನಿವಾಸಿ ಲೇಖಕರ ಬಳಗಕ್ಕೆ ಹೊಸ ಸೇರ್ಪಡೆ. ಶ್ರೀನಿವಾಸ ಅವರಿಗೆ ಸ್ವಾಗತ. ಅವರು ಮೂಲತಃ ಕರ್ನಾಟಕದ ಹೃದಯಭಾಗವಾದ ದಾವಣೆಗೆರೆ ಜಿಲ್ಲೆಯ ಹರಿಹರ ತಾಲೂಕಿನವರು. ಲಂಡನ್ನಿಗೆ ವಲಸೆಯಾಗಿ ಸುಮಾರು ಹತ್ತು ವರುಷಗಳಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಂಗಾತಿ ಕಸ್ತೂರಿ ಮತ್ತು ಇಬ್ಬರು ಮಕ್ಕಳು ಹೃಷೀಕ ಮತ್ತು ಉಜ್ವಲರೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿದ್ದಾರೆ. ಶಾಲೆಯ ಪ್ರಾಂಶುಪಾಲರ ಸಹವಾಸ ದೋಷದಿಂದ ಕವನಗಳನ್ನು ಓದುವುದು ಮತ್ತೆ ಬರೆಯುವುದು ಹವ್ಯಾಸವಾಯಿತು ಅನ್ನುತ್ತಾರೆ. ಆಗಲೊಮ್ಮೆ ಈಗಲೊಮ್ಮೆ ಈಗಲೂ ಕವನ ಬರೆಯುತ್ತಾರೆ. ಅವರು ಬರೆದ ಎರಡು ಕವನಗಳು ನಿಮ್ಮ ಮುಂದಿವೆ. ಓದಿ, ಆನಂದಿಸಿ, ಕೊಮೆಂಟಿಸಿ – ಸಂ)

ಕೇಳಿದ್ನಾ ನಿಂಗ್ ನಾ ಬಡ್ತಿ

ಬ್ಯಾಡ್ ಬ್ಯಾಡ್ ಅಂದ್ರೂ ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ

ಒಳಗಿದ್ದಾಗ್ ನಾನಿಂಗಿರ್ಲಿಲ್ಲ
ಲೋಕದ್ ಬ್ಯಾನಿ ತಿಳಿದಿರ್ಲಿಲ್ಲ
ನಂಪಾಡ್ಗ್ ನಾನ್ ಆಡ್ಕೊಂಡಿದ್ದೆ
ಬ್ಯಾಡ್ ಬ್ಯಾಡ್ ಅಂದ್ರು ಹಾಕ್ಕೊಂಡ್ ದಬ್ಡಿ
ಕೇಳಿದ್ನಾ ನಿಂಗ್ ನಾ ಬಡ್ತಿ
ಕೇಳಿದ್ನಾ ನಿಂಗ್ ನಾ ಬಡ್ತಿ

ನೀನ್ ಅಂದ್ಕೊಂಡ್ ಅಂದ್ಕೊಂಡ್ ಬಣ್ಣ ತೋರ್ಸಿ
ಅಂದ್ಕೊಂಡ್ ಜಾಗ್ದಾಗ್ ಬುದ್ದಿ ಬೆಳ್ಸಿ
ಒಳ್ಳೆವ್ರ್ ಕೆಟ್ಟೋವ್ರ್ ಮಾಡ್ತಿ
ಬ್ಯಾಡ್ ಬ್ಯಾಡ್ ಅಂದ್ರು ದೊಡ್ದೊನಾದ್ನಿ
ಕೇಳಿದ್ನಾ ನಿಂಗ್ ನಾ ಬಡ್ತಿ
ಕೇಳಿದ್ನಾ ನಿಂಗ್ ನಾ ಬಡ್ತಿ

ಹಾರ್ತೀನಂದ್ರೆ ಗಾಳಿ ಕೊಟ್ಟಿ
ಈಜ್ತೀನಂದ್ರೆ ನೀರ್ ಕೊಟ್ಟಿ
ಕಷ್ಟ ಸುಖದ್ ಜೀವನ್ದಾಗೆ
ಎಂಥೆಲ್ಲ ಸೊಗ್ಸ ನೀನಿಟ್ಟಿ
ಗಂಡ ಹೆಂಡ್ತಿ ಮಕ್ಕಳ್ ಮರಿ
ಸೊಗಸಾದ್ ಗಂಟನ್ ಕಟ್ಟಿ
ಸೊಗಸಾದ್ ಗಂಟನ್ ಕಟ್ಟಿ

ಬ್ಯಾಡ್ ಬ್ಯಾಡ್ ಅಂದ್ರು ಕಟ್ಬಿಚ್ತೀಯ
ಎಲ್ರು ಮನಸನ್ ನೋಯ್ಸಿ
ಕಾಣದ್ ಊರ್ಗೆ ವರ್ಗ ಮಾಡ್ತಿ
ಉಳಿದೋರ್ ಕಣ್ಗಳ್ ತೊಯ್ಸಿ
ಉಳಿದೋರ್ ಕಣ್ಗಳ್ ತೊಯ್ಸಿ

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ
———————————————————–

ದುಂಡುಹೊಟ್ಟೆ ತುಂಟ

ದುಂಡುಹೊಟ್ಟೆ ತುಂಟನದು
ಇಲಿಯ ಜಂಬೂಸವಾರಿ
ಮುರಿದ ಹಲ್ಲು ಆನೆ ಮುಖ
ಇವನ ಸ್ಟಂಟು ನೋಡಿರಿ

ವರ್ಷ ವರ್ಷ ಬರುವನಿವನ
ಭಿನ್ನ ಭಿನ್ನ ಮಾದರಿ
ಗಾಂಧಿ ಗಣಪ  ನೆಹರು ಗಣಪ
ಇಂದು ಮೋದಿಗೂನು ಸೊಂಡಲಿ

ಗೂಟ ನೆಟ್ಟು ಪೆಂಡಾಲಾಕಿ
ಕಟ್ಟೆಮೇಲೆ ಗಣಪನು
ನಲಿವ ಕುಣಿವ ಪಡ್ಡೆಗಳ
ರಾಜ್ಯಕಿವನೇ ರಾಜನು

ಕೆಂಪುಪಟ್ಟಿ ಹಣೆಯ ಮೇಲೆ
ಕಪ್ಪಾಯಿತು ಕುಣಿಯುತ
ಗಣೇಶಪಟ್ಟಿ ಜೇಬು ತುಂಬಿ
ಹೊಟ್ಟೆ ಪಾನಾವೃತ

ಮನೆಗಳಲ್ಲಿ ಪುಟ್ಟ ಗಣಪ
ಮಕ್ಕಳಿಗೆ “ಬಾಲಗಣೇಶ್”
ಎಲ್ಲರೊಡನೆ ಫೈಟು ಮಾಡಿ
ಗೆದ್ದು ಬರುವ ನಾಟಿ ಗಣೇಶ್

ಬಿದ್ದು ನಗಿಸಿ  ಎದ್ದು ನಗುವ
ಪಾರ್ವತಿಯ ಕಂದನು
ಮೂರೇ ಕ್ಷಣದಿ ಮೂರು ಲೋಕ
ಸುತ್ತುವ ಪ್ರಚಂಡನು