ನನ್ನ ಕತೆ – ಕೇಶವ ಕುಲಕರ್ಣಿ

ಈ ವಾರದ ಪ್ರಕಟಣೆ ವಿಳಂಬವಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ಈ ವಾರದ ಪ್ರಕಟನೆ ನಾನು ೨೦ ವರ್ಷಗಳ ಹಿಂದೆ ಬರೆದ ಕತೆ, `ತರಂಗ`ದಲ್ಲಿ `ತಿಂಗಳ ಬಹುಮಾನಿತ ಕಥೆ`ಯಾಗಿ ಪ್ರಕಟವಾಗಿತ್ತು. ಎರಡು ದಶಕಗಳ ನಂತರದ ಈ ಆಧುನಿಕ ಕಾಲದಲ್ಲಿ ಈ ಕಥೆ ಅಪ್ರಸ್ತುತ ಎನಿಸಬಹುದು. ಈ ಹಿಂದೆ ಪ್ರಕಟವಾದ ಕಥೆಯನ್ನೇ ಇಲ್ಲಿ ನಿಮ್ಮ ಮುಂದಿಡುತ್ತಿರುವುದಕ್ಕೂ ಕ್ಷಮೆ ಕೋರುತ್ತೇನೆ. – ಕೇಶವ

ಇದೆನ್ನೆಲ್ಲ ನಿಮ್ಮ ಮುಂದೆ ಕಕ್ಕಿಬಿಡಬೇಕು ಎಂದು ನಾನು ನಿಮ್ಮ ಎದುರಿಗೆ ಇದೀಗ ಕುಳಿತಿದ್ದೇನೆ. ಏಕೆಂದರೆ ಕಕ್ಕುವುದು ನನಗೀಗ ಅನಿವಾರ್ಯವಾಗಿದೆ. ಅದರ ಸಲುವಾಗಿಯೇ ಈಗ ಎಲ್ಲವನ್ನೂ ಒಂದೂ ಬಿಡದೇ ಸಾವಕಾಶವಾಗಿ ಹೇಳುತ್ತೇನೆ. ಇಷ್ಟಾದರೂ ಈಗ ಎಲ್ಲಿಂದ ಶುರು ಮಾಡಲಿ ಎಂದು ತಿಳಿಯಲಾರದೇ ಒದ್ದಾಡುತ್ತಿದ್ದೇನೆ. ಎಲ್ಲಿಂದ ಶುರುಮಾಡಿದರೆ ನಿಮ್ಮಗೆ ಪೂರ ಅರ್ಥವಾದೀತು ಎಂದು ನನಗೆ ಅರ್ಥವಾಗುತ್ತಿಲ್ಲ.

ಅವತ್ತೂ ಹೀಗೆಯೇ ಆಯಿತು. ರೂಪಾ ಕುಲಕರ್ಣಿಯ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ಹನ್ನೊಂದ್ದಕ್ಕೆ ಖೋಲಿಗೆ ಬಂದಾಗ ಹೀಗೆಯೇ, ಎಲ್ಲವನ್ನೂ ಕಕ್ಕಿ ಬಿಡಬೇಕು ಅನಿಸಿತು. ಖೋಲಿಯಲ್ಲಿ ಉಳಿದವರಿಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಕೈಗೆ ಸಿಕ್ಕ ವಹಿ ತೆಗೆದುಕೊಂಡು ಹೀಗೆಯೇ ಶುರು ಮಾಡಿ, ಬರ್ತ್‌ಡೇ ಪಾರ್ಟಿಯಲ್ಲಿ ನಡೆದುದನ್ನು, ಅದು ನನ್ನ ಮೇಲೆ ಮಾಡಿದ ಪರಿಣಾಮವನ್ನು, ನಾನು ಬೆಳೆದ ವಾತಾವರಣವು ಅಲ್ಲಿ ತಂದ ಸಂದಿಗ್ಢತೆಯನ್ನು ಬರೆಯುತ್ತ ಹೋದೆ. ಬರ್ತ್‌ಡೇ ಪಾರ್ಟಿ ತೆಲೆಯನ್ನು ಪೂರ ಕೆಡೆಸಿತ್ತು. ಸುಮಾರು ಇಪ್ಪತ್ತು ಪಾನು ಗೀಚಿದೆ. ಏಕೆಂದರೆ ಆಗಲೂ ಹಾಗೆಯೇ, ಕಕ್ಕುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ನಾನು ನನ್ನ ಮನಸ್ಸಿನ ತಳಮಳದಿಂದ ಹೊರಬರಲು ಸಾಧ್ಯಗಲಾರದೇ ಒದ್ದಾಡುತ್ತಿದ್ದೆ. 

ಹೀಗೆಲ್ಲ ಹೇಳಿದರೆ ನಿಮ್ಮಗೆ ತಿಳಿಯುವದಿಲ್ಲವೆಂದು ಗೊತ್ತು. ಹಾಗೆಂದು ಆವತ್ತು ಬರೆದ ಇಪ್ಪತ್ತು ಪಾನುಗಳನ್ನು ಇಲ್ಲಿ ಹೇಳುವುದಿಲ್ಲ; ಅವುಗಳನ್ನು ಹೇಳುವ ಮನಸ್ಸೂ ಇಲ್ಲ. ನನಗೆ ಆದಕ್ಕಿಂತ ಮುಂದಿನದನ್ನು ಹೇಳಬೇಕಾಗಿದೆ. ಆದರೆ ಹಿಂದಿನದು ಗೊತ್ತಿರದೇ  ಮುಂದಿನದು ತಿಳಿಯಲಿಕ್ಕಿಲ್ಲವೆಂದು ಹಿಂದಿನದನ್ನು ಹೇಳಿ ಮುಂದೆ ಸಾಗುತ್ತೇನೆ.

ನಾನೊಬ್ಬ ವಿಚಿತ್ರ ವ್ಯಕ್ತಿತ್ವದ ಮನುಷ್ಯ. ನನ್ನ ಸ್ವಭಾವ ಪರಿಚಯ ಮಾಡಿ ಕೊಡಲು ಇದೆಲ್ಲ ಹೇಳಿದರೆ ಸಾಕು ಅನಿಸುತ್ತದೆ. ಈಗಿನ ಕಾಲ: ೧೯೯೨. ಹೆಸರು (ಏನಾದರೂ ನಡೆದೀತು), ವಯಸ್ಸು: ಇಪ್ಪತ್ತು, ಓದುತ್ತಿರುವುದು: ಬಿ. ಇ (ಮೆಕ್ಯಾನಿಕಲ್) ಜಾತಿ: ಬ್ರಾಹ್ಮಣ; ಹವ್ಯಾಸ: ಕಥೆ-ಕವನ ಓದುವುದು, ಬರೆಯುವುದು. ನಮ್ಮ ಮನೆಯಲ್ಲಿ ಒಟ್ಟೂ ನಾಕೇ ಮಂದಿ – ಸಣ್ಣ ಪಗಾರದ ಧಾರ್ಮಿಕ ನಡೆವಳಿಕೆಯ ಬಾಳುತ್ತಿರುವ ಅಪ್ಪ, ಅಪ್ಪನ ಮಾತು ಕೇಳಿಕೊಂಡು ಬದುಕುತ್ತಿರುವ ಕ್ಯಾನ್ಸರಿನಿಂದ ನವೆಯುತ್ತಿರುವ ಅಮ್ಮ, ಮೂರೂವರೆ ವರ್ಷದಿಂದ ಮೂಲೆಯಲ್ಲಿ ಪಾರ್ಸಿ ಹೊಡೆದು ಮಲಗಿದ ಅಜ್ಜಿ ಮತ್ತು ನಾನು. ಮನೆಯಲ್ಲಿ ಪೂರ ಧಾರ್ಮಿಕ ವಾತಾವರಣ. ನಮ್ಮಜ್ಜ ನಮ್ಮಪ್ಪ ಮಗುವಾಗಿರುವಾಗಲೇ ಸತ್ತನಂತೆ; ಅಂದಿನಿಂದ ನಮ್ಮಜ್ಜಿ ಮಾಡಿಯಾಗಿದ್ದಾಳೆ ( ಈ ಕಥೆ ಮುಗಿಯುವುದರೊಳಗಾಗಿ ಸಾಯುತ್ತಾಳೆ). ದಿನಾಲು ಮಡಿ ಊಟವೇ ಆಗಬೇಕು. ತನೆಗೇ ಏಡಿರೋಗ ಬಡಿದಿದ್ದರೂ ಅವ್ವ ದೇವರು-ದಿಂಡಿರೆಂದು ಕಷ್ಟಪಟ್ಟು ಮಡಿ ಅಡಿಗೆ ಮಾಡುತ್ತಾಳೆ. ದಿನಾಲೂ ದೇವರ ಪೂಜೆ, ವೈಶ್ವದೇವ, ರಾಯರ ಹಸ್ತೋದಕ ಆಗಲೇಬೇಕು. ಪ್ರತಿ ಗುರುವಾರ ತಾರತಮ್ಯ ಭಜನೆ, ಕಡ್ಡಾಯವಾಗಿ ಎರಡು ಹೊತ್ತು ಸಂಧ್ಯಾವಂದನೆ ಇವನ್ನೆಲ್ಲ ಅಪ್ಪ ಶ್ರದ್ದೆಯಿಂದ ಮಾಡುತ್ತಾನೆ. ಔಷಧಿಗಾಗಿ ಪೈಸೆ ಪೈಸೆ ಕೊಡಿಸಿ ಅಮ್ಮ, ಅಜ್ಜಿಯರನ್ನು ಡಾಕ್ಟರಿಗೆ ತೋರಿಸುತ್ತಾನೆ. ಅಂತಹುದರಲ್ಲಿ ಮುಂಚಿನಿಂದಲ್ಲು ಚಲೋ ಓದಿದ್ದರಿಂದಲೋ ಏನೋ, ಚಲೋ ಮಾರ್ಕ್ಸ್ ಬಂದು ನಾನು ಹದಿನೆಂಟನೆಯ ವಯಸ್ಸಿಗೆ ಬಾಗಲಕೋಟೆಯಿಂದ ಹುಬ್ಬಳ್ಳಿಗೆ (ಬಿವಿಬಿ ಕಾಲೇಜು) ಬರಬೇಕಾಗಿ ಬಂತು. ಅಪ್ಪ ಹಾಗೂ ಹೀಗೊ ತಿಂಗಳಿಗೆ ನಾನೂರೋ ಐನೂರೋ ಕಳಿಸುತ್ತಾನೆ.

ಇಲ್ಲಿ ಹುಬ್ಬಳ್ಳಿಗೆ ಬಂದ ಮೇಲೆ ನನ್ನಲ್ಲಿ ಒಂದೊಂದೇ ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾದವು. ನಾನು ಹೈಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಗಾಂಧಿ-ಟಾಲ್ಸ್ಟಾಯ್ ಭಜನೆಗಳು ಸಾವಕಾಶವಾಗಿ ಕಡಿಮೆಯಾಗಲು ಹತ್ತಿದವು. ಹಾಸ್ಟೆಲಿನಲ್ಲಿ ಬೇರೆ ಬೇರೆ ತರಹದ ಗೆಳೆಯರು ಸುತ್ತುವರಿದಿದ್ದಾರೆ. ಹುಡುಗಿಯರ ಬಗೆಗೆ ಹೇಸಿಗೆಯಿಲ್ಲದೇ ಹೊಲಸು ಮಾತಾಡುತ್ತಾರೆ. ಮುಂಚಿ ಇಂತಹುದನ್ನೆಲ್ಲ ಎಂದೂ ಕೇಳಿದವನಲ್ಲ. ಮನಸ್ಸಿನಲ್ಲೇ ಖುಷಿಯಾದರೂ ಮಾತನಾಡಲು, ನಗಲು ನನ್ನ ಸಂಸ್ಕಾರದ ಅಡ್ಡಿ.

ದಾರಿಯಲ್ಲಿ ಹೊರಟ ಹುಡುಗಿಯರನ್ನು ನೋಡಲು ಕಡಿವಾಣ ಹಾಕಿಕೊಂಡಿದ್ದರೂ ಒಬ್ಬನೇ ಇದ್ದಾಗ ದಾರಿಯಲ್ಲಿನ ಹುಡುಗಿಯರನ್ನು ಕಣ್ತುಂಬ ತುಂಬಿಕೊಳ್ಳಲು ಶುರು ಮಾಡಿದೆ; ಮನಸ್ಸಿನಲ್ಲೇ ಮಂಡಿಗೆ ತಿನ್ನಹತ್ತಿದೆ. ಇಂಥ ಹೊತ್ತಿನಲ್ಲೇ ಹುಬ್ಬಳ್ಳಿಯ ಸಿನಿಮಾ ಚಾಳಿ ಬೇರೆ ಅಂಟಿಕೊಳ್ಳಹತ್ತಿತ್ತು. ಆಗಲೇ ಸಾಹಿತ್ಯದ ಕೆಲವು ಪ್ರಮುಖ ಕೃತಿಗಳನ್ನು ಓದುವ ಅವಕಾಶ ಪಡೆದುಕೊಂಡೆ. ಎಲ್ಲದಕ್ಕೂ ಭಗವಂತೆನೇ ಕಾರಣ, ಬದುಕಿನಲ್ಲಿ ಆದರ್ಶ- ಗುರಿಗಳೇ ಮುಖ್ಯ, ಅವುಗಳಿಗಾಗಿ ಮಾಡುವ ಸತತ ಪ್ರಯತ್ನ ಇವುಗಳನ್ನು ನಂಬಿದ್ದ ನಾನು ಇವುಗಳನ್ನೇ ಸಂಶೆಯದಿಂದ ನೋಡಲಿಕ್ಕೆ ಹತ್ತಿದೆ. ಆದರೆ ಹಿಂದಿನದನ್ನು ಬಿಡಲಾಗದೇ ಹೊಸಹಾದಿ ತಿಳಿಯದೇ ಒದ್ದಾಡಿ ಕಥೆ-ಕವನ ಗೀಚಲು ಶುರುಮಾಡಿದೆ. ಸಾಹಿತ್ಯಿಕ ಸ್ಪರ್ಧಗಳಲ್ಲಿ ಬಹುಮಾನ ಬಂದದ್ದರಿಂದ, ಹುಡುಗಿಯರ ಬಗೆಗೆ ಜೋಕು ಮಾಡದ್ದರಿಂದ, ಮೊದಲನೆಯ ವರ್ಷ ಚಲೋ ಮಾರ್ಕ್ಸ್ ಬಂದದ್ದಿರಿಂದ , `ಗಾಂಧಿ`;`ಕವಿ`, `ಪುಸ್ತಕದಾಗಿನ ಹುಳ` ಆದೆ. ಇಷ್ಟರೊಳಗಾಗಿ ಒಳಗಿನ ನಾನು, ಹೊರಗಿನ ನಾನು ಬೇರೆ ಬೇರೆಯಾಗಿದ್ದು ನನ್ನ ಗಮನಕ್ಕೆ ಬಂತು.

ಇಷ್ಟಲ್ಲದೇ ಅಪ್ಪ ಈಗೀಗ ರೊಕ್ಕ ವೇಳೆಗೆ ಸರಿಯಾಗಿ ಕಳಿಸುತ್ತಿಲ್ಲ (ಅಜ್ಜಿಯ ರೋಗ ಜಾಸ್ತಿಯಾಗಿದೆಯಂತೆ). ನನಗೆ ಇದಲ್ಲದರಿಂದ ಬೇಡುಗಡೆ ಬೇಕಾಗಿತ್ತು. ಆದರೆ ಆಧ್ಯಾತ್ಮದ ಜೀವಾತ್ಮ – ಪರಮಾತ್ಮ, ಸಾಹಿತ್ಯದ ಕಾಮ-ಸಾವು-ಅಹಂಗಳು ಒಂದಕ್ಕೊಂದು ಹೊಂದಲಾರದೇ ನಾನು ಅಂತರ್ಮುಖಿಯಾಗಹತ್ತಿದೆ. ಅಷ್ಟಲ್ಲದೇ ಅಮೆರಿಕದ ವಿದ್ಯಾರ್ಥಿಗಳಂತೆ ನಾನೇಕೆ ದುಡಿಯುತ್ತ ಕಲಿಯಬಾರದು? ಅಪ್ಪನಿಗೇಕೆ ಕಷ್ಟ ಕೊಡಬೇಕು ಎನಿಸಲು ಹತ್ತಿತು. ಹೀಗೆ ಇನ್ನೆಷ್ಟನ್ನೋ ತಲೆಯಲ್ಲಿ ತುಂಬಿಕೊಂಡು ನಾನು ನನ್ನನ್ನೇ ನೋಡಲು ಶುರುಮಾಡಿದಾಗ ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬಾ ಎಂದು ಆಹ್ಹಾನಿಸಿದ್ದಳು.

ಅದು ಆಗಸ್ಟ್ ತಿಂಗಳ ಕೊನೆ. ನನ್ನ ಕಿಸೆ ಪೂರ ಜಾಲಾಡಿಸಿದರೂ ಆರೇಳು ರೂಪಾಯಿ ಸಿಗಬಹುದಿತ್ತು. ರಾತ್ರಿ ಬಹಳ ಹೊತ್ತು ಓದುತ್ತ ಕುಳಿತಿದ್ದರಿಂದ ಮುಂಜಾನೆ ಎದ್ದಕೂಡಲೇ ತಲೆ ಚಿಟಿಚಿಟಿ ಎನಿಸಿ ಒಂದು ರೂಪಾಯಿ ಖರ್ಚು ಮಾಡಿ ಚಹಾ ಕುಡಿದೆ. ಕಾಲೇಜಿನಲ್ಲಿದ್ದಾಗ ರೂಪಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬರಲು ಆಹ್ವಾನವಿತ್ತಳು. ನಾನು ಸಬೂಬು ಹೇಳಿ ತಪ್ಪಿಸಿಕೊಳ್ಳಹೋದೆ. ಆದರೆ ಬಾಜು ನಿಂತ ಅರುಣ ನನ್ನ ಸತ್ತ್ವವನ್ನೇ ಕೆಣಕಿ ಜೋಕು ಹೊಡೆದು ಒಪ್ಪಿಸಿಬಿಟ್ಟ. ರೂಪಕುಲಕರ್ಣಿಗೆ ಪ್ರೆಸೆಂಟೇಶನ್ ತರಲು ಪ್ರತಿಯೊಬ್ಬ ಇಪ್ಪತ್ತು ರೂಪಾಯಿ ಹಾಕಬೇಕೆಂದು ಹೇಳಿದ. ನಾನು ಇಲ್ಲಿಯ ತನಕ ಯಾವುದೇ ಪಾರ್ಟಿಗೊ ಹೋದವನಲ್ಲ. ಅಲ್ಲದೆ ಇಪ್ಪತ್ತು ರೂಪಾಯಿ ಬೇರೆ ಕೊಡಬೇಕು. ತಲೆಕೆಟ್ಟು, ಖೋಲಿಗೆ ಬಂದೆ. ಮನಸ್ಸು ವಿಚಿತ್ರ ರೀತಿಯಲ್ಲಿ ತಳಮಳಿಸುತ್ತಿತ್ತು. ಆ ಭಾವಗಳನ್ನು ಶಬ್ದಮಾಡುವ ವ್ಯರ್ಥಪ್ರತಿಮೆಗಳನ್ನು ಹುಡುಕುತ್ತ ಕಾಗದದ ಮೇಲೆ ಗೀಚಿತ್ತ ಕೂತಿದ್ದೆ. ಆವಾಗಲೇ ಬಾಗಲಕೋಟೆಯಿಂದ ಮಗ್ಗಲ ಮನೆ ಬಿಂದಪ್ಪ ಬಂದ. ಅಪ್ಪ-ಅಮ್ಮ-ಅಜ್ಜಿ ಅರಾಮವೆಂದು ಕೇಳಿ ಅಪ್ಪನ ಚೀಟಿ ಕೊಟ್ಟಿದ್ದ. ಅಪ್ಪ ಆಶೀರ್ವಾದ ತಿಳಿಸಿ ಬರೆದಿದ್ದ, `ಮುಂದಿನ ತಿಂಗಳು ದುಡ್ಡು ಕಳಿಸಲು ಆಗುವುದಿಲ್ಲ. ಬಾಳು ಮಾಮಾಗೆ ಪತ್ರ ಹಾಕಿ ತರಿಸಿಕೊ,` ಅಂತ. ಬಿಂದಪ್ಪ ಉಂಡಿ-ಅವಲಕ್ಕಿ ಚೀಲ ಕೊಟ್ಟುಹೋದ. ನಾನು ಪೂರ ಕುಸಿದೆ. ನನಗೆ ಖೋಲಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅಂಗಿ-ಪ್ಯಾಂಟು ಹಾಕಿಕೊಂಡು ಬರ್ತ್‌ಡೇಗೆ ಹೋಗಲು ತಯಾರಿ ನಡೆಸಿದೆ.

ಪಾರ್ಟಿಯಲ್ಲಿ ಏನೇನು ನಡೆಯಿತು ಎಂದು ವಿವರವಾಗಿ ಹೇಳುವುದಿಲ್ಲ, ಏಕೆಂದರೆ ಅದನ್ನೆಲ್ಲ ಪಾರ್ಟಿಯಿಂದ ಬಂದಕೊಡಲೇ ಬರ್ತ್‌ಡೇ ಸಲುವಾಗಿ ಮನೆಯನ್ನು ಅಲಂಕರಿಸಿದ ರೀತಿ, ವಿದ್ಯುತ್ ಪ್ರಕಾಶ ಕುರಿತು ಬರೆದೆ. ಕೇಕೊಂದಕ್ಕೇ ಎರಡು ನೂರ ಐವತ್ತು ಎಂದು ರೂಪಾಕುಲಕರ್ಣಿ ಜಂಭ ಕೊಚ್ಚಿ ಕೊಂಡಿದ್ದನ್ನೊ ಬರೆದೆ. ಗೆಳೆಯರು ಗೆಳತಿಯರಿಗೆ ಇಂಪ್ರೆಶನ್ ಹೊಡೆಯಲು, ಗೆಳತಿಯರು ಗೆಳೆಯರು ಎದುರು ಡೌಲು ಬಡೆಯಲು ವ್ಯವಹರಿಸುತ್ತಿದ್ದ ಕ್ಷುದ್ರರೀತಿಯನ್ನು ಬರೆದೆ. ಪಾರ್ಟಿಗೆ 

ಬರದವರ ಬಗ್ಗೆ ಹೇಗೆ ಅಶ್ಲೀಲವಾಗಿ ಮಾತನಾಡಿ ಗೇಲಿ ಮಾಡುತ್ತಿದ್ದರು; ನಗು ಬರದಿದ್ದರೂ ಮನಃಪೂರ್ವಕವಾಗಿ ನಕ್ಕಂತೆ ಹೇಗೆ ಗೊಳ್ ಎಂದು ನಗುವಿನ ಸೋಗು ಹಾಕುತ್ತಿದ್ದರು; ಪೋಲಿ ಜೋಕುಗಳನ್ನು ಎಗ್ಗಿಲ್ಲದೇ ಹೇಳಿ ಹೇಗೆ ಸ್ಯಾಡಿಸ್ಟ್ ಖುಷಿ ತೆಗೆದುಕೊಂಡರು – ಎಂಬುದನ್ನೆಲ್ಲ ಗೀಚಿದೆ. ನಾನು ಬೆಳೆದ ರೀತಿ, ನನ್ನ ಮನೆಯ ಪರಿಸರ, ನನ್ನ ಮನಸ್ಸಿನ ರೀತಿ, ನನ್ನ ಹಣದ ಕೊರತೆ ಎಲ್ಲವನ್ನೂ ಬರೆದು, ಅಂಥ ಮನಃಸ್ಥಿತಿಯಲ್ಲಿದ್ದ ನನ್ನ ಮೇಲೆ ಪಾರ್ಟಿ ಮಾಡಿದ ಪರಿಣಾಮವನ್ನು ಬರೆದೆ. ಪಾರ್ಟಿ ಮಾಮೂಲಾಗೇ ಸಾಗಿದ್ದರೂ ಎಲ್ಲ ನನಗೆ ವಿಚಿತ್ರವಾಗಿ ಕಾಣಿಸುತ್ತಿರುವುದನ್ನು, ಹಾಗೆ ಕಾಣಿಸಲು ಕಾರಣವಾದ ನನ್ನ ಸಂಸ್ಕೃತಿಯನ್ನು, ಮನೆಯ ಧಾರ್ಮಿಕ ವಾಟವನದಲ್ಲಿ ಜಿಡ್ಡುಹಿಡಿದ ರೋಗದ ನಂಟನ್ನು, ಮಗನಿಗೆ ಕಳಿಸಲು ರೊಕ್ಕವಿರದಿದ್ದರೂ ಸಾಲ ಮಾಡಿಯಾದರೂ ಬ್ರಾಹ್ಮಣರನ್ನು ಕರೆದು ಊಟಹಾಕಿಸಿ ದಕ್ಷಿಣೆಕೊಡುವ ಅಪ್ಪನನ್ನು, ಕೈಯಿಂದ ಕುಂಡೆ ತೊಳೆದುಕೊಳ್ಳಲು ಬರದಿದ್ದರೂ, ಅಮ್ಮನ ಮೇಲೆ ದರ್ಪ ತೋರುವ ಅಜ್ಜಿಯನ್ನು, ಇದೆಲ್ಲವನ್ನು ಸಹಿಸಿಕೊಂಡು ತನ್ನ ರೋಗವನ್ನು ತುಟಿಕಚ್ಚಿ ಮುಚ್ಚಿಕೊಂಡು ಮಡಿಯೆಂದು ಬಡಿದುಕೊಳ್ಳುವ ಅವ್ವನನ್ನು ಕುರಿತು ಬರೆದೆ. ಹಾಗೆಯೇ ಪಾರ್ಟಿಯಲ್ಲಿ ರೂಪಾಳ ಅಪ್ಪ ದರ್ಪದಿಂದ ಹಲ್ಲು ಕಿರಿಯುತ್ತ ಓಡಾಡಿದ ರೀತಿಯನ್ನು ಬರೆದೆ. ಹಾಗೆಯೇ ನನ್ನನ್ನು ಪೂರ ಹುಚ್ಚ ನನ್ನಾಗಿಸುವ ಸನ್ನಾಹದಲ್ಲಿದ್ದ ‘ಪಿಕ್ ಆ್ಯಂಡ ಆ್ಯಕ್ಟಿ’ ನ ಎಲ್ಲ ಘಟನೆಗಳನ್ನು ಸವಿವರವಾಗಿ ಬರೆದೆ.

[ಒಂದೆರಡು ಸ್ಯಾಂಪಲ್ ಕೊಡುತ್ತೇನೆ;

೧. ಮಿಲಿಂದ ಚೀಟಿ ಎತ್ತುತ್ತಿದ್ದಾಗ ಒಂದರೆ ನಿಮಿಷದ ಮೌನ. ಚೀಟಿ ಒಡೆದವನೇ `ಹುರ್ರಾ,`; ಎಂದು ಕೆಟ್ಟದಾಗಿ ಅರಚಿ ಕುಣಿದಾಡಿದ. ಗಟ್ಟಿಯಾಗಿ ಓದಿದ: `Take Sulochana on double ride on your imaginary bicycle,.` ಎಂದು. ಸುಲೋಚನಾಳತ್ತ ತಿರುಗಿ ಇಂಗ್ಲಿಷಿನಲ್ಲೇ ಕೂಗಿಡಾ, `ಗಾಡ್ಸ್ ಮಸ್ಟ್ ಬಿ ಕ್ರೇಜಿ ಪಾರ್ಟ್ ಟು`ನಲ್ಲಿ ಇರುವಂತೆ ನಿನ್ನನ್ನು ಕೂಡಿಸಿ ಕೊಂಡು ರೈಡ್ ಮಾಡುತ್ತೇನೆ` ಎಂದು. ಸುಲೋಚನಾ ಸಿಟ್ಟಿನಿಂದ, ನಾಚಿಕೆಯಿಂದ ಕೆಂಪಾಗಿ, `ನೊ! ನೆವರ್!!`; ಎಂದು ಅರಚಿದಳು. ಎಲ್ಲರೂ ಆಕೆಯನ್ನು ಸುತ್ತುಗಟ್ಟಿ ಅರಚತೊಡಗಿದಾಗ ಆಕೆ ಮಣಿದು ಮಿಲಿಂದನ ಮುಂದೆ ಕುಳಿತಂತೆ ನಟನೆ ಮಾಡಿದಳು. ಆತ ಪೆಡಲ್ ತಿರಿಗಿಸುತ್ತಿರುವಂತೆ ಕಾಲು ತಿರುಗಿಸುತ್ತ ಆಕೆಯ ಹಿಂಭಾಗವನ್ನು ಕಾಲಿನಿಂದ ಒತ್ತುತ್ತಿದ್ದ, ಪ್ರತಿಸಾರಿ ಹಾಗೆ ಮಾಡಿದಾಗಲೂ ಎಲ್ಲರೂ ಹೋ ಎಂದು ಕೂಗಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲರನ್ನೂ ಝಾಡಿಸಿ ಒದೆಯಲೇ ಎನಿಸಿ ನಾನು ಥರಥರ ನಡುಗಿದೆ ಒಳಗೊಳಗೆ.

೨. “Select your partner and ask him/her for marriage”.ಗಂಡುಬೀರಿ ಮಾಲತಿ ಸರದಿಯದು ಟೀಶರ್ಟ್ ಮತ್ತು ಗಿಡ್ಡ ಸ್ಕರ್ಟ್ ಹಾಕಿಕೊಂಡಿದ್ದಳು. ಕೆದರಿದ ಕೂದಲನ್ನು ಆಲುಗಾಡಿಸುತ್ತ ನನ್ನ ಹೆಸರನ್ನೇ ಕೂಗಬೇಕೇ? ಸೋಫಾದಲ್ಲಿ ನೋಯುತ್ತಿದ್ದ ತಲೆ ಹಿಡಿದು ಕೊಂಡು ಕೂತ ನಾನು ತಣ್ಣಗಾದೆ ತುಟಿ ಮೇಲೆ ನಗೆ ಆಡಿಸಿಕೊಂಡು, `ಹೆ, ಹೆ! ಹೇ!!`, ಎಂದು ವಿಚಿತ್ರವಾಗಿ ಹಲ್ಲು ಬೀರಿದೆ. ಆಕೆ ಸ್ಟೈಲಾಗಿ ಬಳುಕುತ್ತ ಬಂದು ನಾಟಕೀಯವಾಗಿ, `ಪ್ರಿಯಾ, ನಾವಿಬ್ಬರೂ ಜನ್ಮ ಜನ್ಮಾಂತರದ ಪ್ರೇಮಿಗಳಲ್ಲವೆ?` ಎಂದು ವೈಯಾರ ಮಾಡಿ ನನ್ನ ಮುಂದೆ ಬಗ್ಗಿದಳು. ನಾನೊಮ್ಮೆ ಉಗುಳುನುಂಗಲು ಪ್ರಯತ್ನಿಸುತ್ತಿದ್ದಂತೆ ಆಕೆಯ ಮುಂದೆ ಜಾರಿದ ಟೀಶಾರ್ಟಿನೊಳಗಿಂದ ಎದೆಯ ಸೀಳು ಕಾಣಿಸಿ ಬೆವರಿಹೋದೆ. ಕಾಲು ನೆಲದಲ್ಲೇ ಸಿಕ್ಕಿಹೋದಂತೆ ಅನಿಸಿತು. ಆಕೆ, `ಪ್ರಾಣಕಾಂತಾ, ಈ ಜನ್ಮದಲ್ಲಿ ನಮ್ಮಮದುವೆ ಯಾವಾಗ?` ಎಂದು ಕಿಲಿಕಿಲಿ ನಕ್ಕಳು. ಎಲ್ಲರೂ ಚಪ್ಪಾಳೆ ತಟ್ಟಿ ಜೋರಾಗಿ ನಕ್ಕರು. ನಾನೂ ಹೇಗೊ ಸಾವರಿಸಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದೆ.]

ಹಾಗೆಯೇ ಪಾರ್ಟಿ ಮುಗಿಸಿಕೊಂಡು ಕೊಪ್ಪಿಕರ್ ರಸ್ತೆಯಲ್ಲಿ ರಾತ್ರಿ ಒಂಬತ್ತಕ್ಕೆ ಹೇಗೆ ಕಾಲಳೆಯುತ್ತ ದಿಕ್ಕು ತಪ್ಪಿದವನಂತೆ ಅಲೆದೆ ಎಂಬುದನ್ನು, ಅಂಗಡಿಯೊಂದನ್ನು ಹೊಕ್ಕು ಕೆಲಸ ಖಾಲಿ ಇದೆಯೇ ಎಂದು ಕೇಳಿ ಛೀಮಾರಿ ಹಾಕಿಸಿಕೊಂಡಿದ್ದನ್ನು ಬರೆದೆ. ಪಾರ್ಟಿಯ ವೈಭವ, ನನ್ನ ಖಾಲಿ ಕಿಸೆ (ಇನ್ನೂ ಆರು ರೂ. ಇತ್ತು) ಎಲ್ಲ ಒಟ್ಟಿಗೆ ಒಕ್ಕರಿಸಿ ಕೆಲಸ ಕೇಳುವಂತೆ ಮಾಡಿದ್ದವು. ಆಮೇಲೆ ಮುಂದೆ ಮೋಹನ ಟಾಕೀಜಿಗೆ ಬಂದಾಗ, ಕಿಸೆಯಲ್ಲಿ ಆರು ರೂಪಾಯಿ ನೆನಪಾಗಿ ಟಾಕೀಜಿನೊಳಗಡೆ ಹೋದುದನ್ನು ಯಾವುದೋ ಹೊಲಸು ಇಂಗ್ಲೀಶ್ ಚಿತ್ರ ಶುರುವಾಗಿ ಚುಂಬನಗಳು, ಅರೆಬೆತ್ತಲೆ, ಬೆತ್ತಲೆ ದೇಹಗಳು, ನರಳಾಟಗಳು ನನ್ನ ತಲೆ ಕೆಡಿಸಿದ್ದನ್ನು ಬರೆದೆ. ಅರ್ಧಸಿನಿಮಾಕ್ಕೇ ಎದ್ದು ತಲೆಕೆಟ್ಟಂತಾಗಿ ಹುಚ್ಚು ಹಿಡಿದವಂತೆ ಓದುತ್ತ ಹೋಸ್ಟೆಲಿಗೆ ಬಂದುದನ್ನು ಬರೆಯಲು ಕುಳಿತುದನ್ನು ಬರೆದು ಪೆನ್ನು ಮುಚ್ಚಿದೆ. 

ಬರೆದು ಮುಗಿಸಿದಾಗ ರಾತ್ರಿ ಹನ್ನೆರಡೂವರೆ, ಅಷ್ಟರಲ್ಲಿ ರೂಮ್ಮೇಟುಗಳಿಬ್ಬರೂ ಸಿನಿಮಾ ಮುಗಿಸಿಕೊಂಡು ಬಂದರು. ಸಟ್ಟನೆ ಬರೆದದ್ದನ್ನೆಲ್ಲ ಮುಚ್ಚಿಟ್ಟು ಮಲಗಿದಂತೆ ನಟನೆ ಮಾಡಿದೆ. ಮುಂಜಾನೆ ಎದ್ದ ಮೇಲೆ ಅವರಿಗೆ ಓದಲು ಕೊಡಬೇಕು ಎಂದುಕೊಂಡಿದ್ದವನಿಗೆ ಹಾಗೆ ಮಾಡಲು ಧ್ಯರ್ಯ ಸಾಲಲಿಲ್ಲ. ಸುಮಾರು ವಾರಗಳು ಕಳೆದರೂ ಅದನ್ನು ಯಾರಿಗೂ ತೋರಿಸಲಾಗದೇ ಒದ್ದಾಡುತ್ತಿದ್ದಾಗ ಪತ್ರಿಕೆಯೊಂದಕ್ಕೆ ಕಳಿಸಿದರೆ ಹೇಗೆ ಎನಿಸಿತು. ಹೆಸರುಗಳನ್ನು ಬದಲಾಯಿಸಿ ಬರೆದುದನ್ನೆಲ್ಲ ಕಾಪಿ ಮಾಡಿ ಕಳಿಸಿದೆ. ಡಿಸೆಂಬರಿನಲ್ಲಿ ಪ್ರಕಟವೂ ಆಯಿತು.

ಅಂದು ಸಂಜೆ ಪತ್ರಿಕೆಯನ್ನು ಹಿಡಿದಿಕೊಂಡು, ಖುಷಿಯಲ್ಲಿ ಓದುತ್ತಲೇ ಖೋಲಿಗೆ ಬಂದೆ. ನನಗೆ ವಿಪರೀತ ಸಂತೋಷವಾಗಿತ್ತು. ಮೊತ್ತ ಮೊದಲ ಕಥೆ ಮೊದಲ ಬಾರಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಖೋಲಿಗೆ ಬಂದೊಡನೇ `ಕೇಹುಹೊss,; ಎಂದು ಕೂಗಿ, ರೂಮ್ಮೇಟ್ ಮಾಧವ ಏನಾಯಿತೆಂದು ಆಶ್ಚರ್ಯದಿಂದ ನೋಡುತ್ತಿರುವಂತೆಯೇ, ನನ್ನ ಕಥೆ ಛಾಪಿಸಿದ ವಿಷಯ ತಿಳಿಸಿ, ಪತ್ರಿಕೆ ಅವನ ಕೈಗೆ ಕೊಟ್ಟೆ. ಆತ ಅಭಿನಂದನೆ ಸಲ್ಲಿಸಿ, `ಪಾರ್ಟಿ ಯಾವಾಗ?` ಎಂದ. `ಕೊಡೊನಲ್ಲ, ಅದಕ್ಕೇನು?`; ಎಂದೆ. ಅಷ್ಟರಲ್ಲಿ ನನ್ನ ಆವಾಜ ಕೇಳಿ ಬಾಜು ಖೋಲಿ ಶಿವರಾಮ (ಆತ ಸಾಹಿತ್ಯದ ಬಗ್ಗೆ ಮುರನಾಲ್ಕು ತಾಸು ಕೊರೆಯುತ್ತಾನೆ) ಬಂದು ನನ್ನನ್ನು ಬಿಗಿದಪ್ಪಿಕೊಂಡ. ಆತ ಖುಷಿಯಲ್ಲಿದ್ದುದನ್ನು ಆತನ ಕಣ್ಣುಗಳೇ ಹೇಳುತ್ತಿದ್ದವು. ಆತ ನನ್ನ ಕೈಹಿಡಿದು ಕುಳಿತುಕೊಂಡ. ಆತ ಆ ಕಥೆಯಿಂದ ನನಗೇ ಗೊತ್ತಿರದ ಎಷ್ಟೆಷ್ಟೋ ವಿಷಯಗಳನ್ನು ಹೆಕ್ಕಿ ವಿವರಿಸತೊಡಗಿದ. ಆಧುನಿಕತೆಯ ಅಟ್ಟಹಾಸದಲ್ಲಿ ಸಂಪ್ರದಾಯಸ್ಥ ಧಾಮಿ೯ಕ ನಂಬಿಕೆಗಳು ಅರ್ಥಕಳೆದುಕೊಳ್ಳುತ್ತಿರಿವುದನ್ನು. ವ್ಯಕ್ತಿ ಅಂಥ ತ್ರಿಶಂಕು ಸ್ಥಿತಿಯಲ್ಲಿದ್ದಾಗಿನ ಭಾವನೆಗಳನ್ನು ರಿಯಲಿಸ್ಟಿಕ್ ಅಗಿ ಬರೆದು ಕಥೆಗೆ ಧಾಮಿ೯ಕ ತಳಹದಿ ಬಂದಿದೆ ಎಂದ. ರೂಪಾ ಕುಲಕಣಿ೯ಯ ಅಪ್ಪ ರೋಟರಿಕ್ಲಬ್ಬಿನ ಮುಖ್ಯ ಸದಸ್ಯನಾಗಿರುವುದರಿಂದ ಮತ್ತು ಕಾಂಗ್ರೆಸ್ಸಿನಲ್ಲಿ ಬಹಳ ಓಡಾಡುವುದರಿಂದ ಅತ ಪಾರ್ಟಿಯಲ್ಲಿ ಆಡಿದ ಮಾತುಗಳು ಕಥೆಗೆ ರಾಜಕೀಯ ಬಣ್ಡ ತಂದಿದೆ ಎಂದ. ಆರ್ಥಿಕಸ್ಥಿತಿ ಮನುಷ್ಯನ ಭಾವನೆಗಳಲ್ಲಿ ಹೇಗೆ ಬದಲಾವಣೆ ತರುತ್ತದೆ; ಭಾರತ ಪಾಶ್ಚಾತ್ಯೀಕರಣದತ್ತ ವಾಲಿರುವಾಗ ಹೇಗೆ ತುಮುಲವೆಳುತ್ತದೆ; ಹದಿನೆಂಟು ವರ್ಷಗಳಿಂದ ಬ್ರಾಹ್ಮಣ್ಯದಲ್ಲಿ ಬಂಧಿತನಾದ ವ್ಯಕ್ತಿ ಬಿಡುಗಡೆ ಹೊಂದಿದಾಗ ಹೇಗೆ ಕಾಮಜಾಗೃತಿ ಉಂಟಾಗುತ್ತದೆ ಎಂಬುದು ಕಥೆಯಲ್ಲಿ ಬಂದಿರುವುದನ್ನು ವಿವರಿಸಿದ. ಮುಂದಿನ ಬರವಣಿಗೆಯನ್ನು ಹೇಗೆ ತಿದ್ದಿಕೊಳ್ಳಬೇಕು, ಪ್ರತಿಮೆಗಳನ್ನು 

ಸಹಜವೆನ್ನುವಂತೆ ಪ್ರಯತ್ನಪೂವ೯ಕವಾಗಿ ತುರುಕಿ ಕಥೆಯ ಹರಹನ್ನು ಹೇಗೆ ಹಿಗ್ಗಿಸಬೇಕು (ಉದಾ: ರೂಪಾ ಕುಲಕರ್ಣಿಯ ಬರ್ತ್‌ಡೇ ದಿನವೇ ಕಥಾನಾಯಕನ ಬತ್೯ಡೇ ಇರುವುದು) ಎಂಬುದನ್ನು ಹೇಳಿದ. ನನ್ನಲ್ಲಿ ನಾನು ಉಬ್ಬಿಹೋದೆ. ಕಂಡವರಿಗೆಲ್ಲ ಸುದ್ದಿಹೇಳುತ್ತ ಸಾಗಿದೆ. ರಾತ್ರಿ ಚಾದರ ಹೊದ್ದು ಮಲಗಿಕೊರಿಡೇ ಕಥೆ ಓದಿದೆ. ಅವೇ ಪಾತ್ರಗಳು. ಹೆಸರುಗಳು ಮಾತ್ರ ಬೇರೆ . ಅವೇ ಘಟನೆಗಳು. ಸಮಾಧಾನವೆನಿಸಿ ಚಾದರ ಎಳೆದು ಮುಸುಕು ಹಾಕಿಕೊಂಡು ಕನಸು ಕಾಣತೊಡಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೆಸರು. ಚಿತ್ತಾರದ ನಂತರ ಕನ್ನಡದಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಎಂದೆಲ್ಲ. 

ಕದ ತಟ್ಟಿದ ಆವಾಜಿನಿಂದ ಎಚ್ಚರವಾದಾಗ ಇನ್ನೂ ಮಧ್ಯರಾತ್ರಿ. ಕತ್ತಲಲ್ಲಿ ಬಾಗಿಲು ತೆರೆಯುತ್ತಲೇ ಓರ್ವ ವೈಕ್ತಿ. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದು ಕದ ಹಾಕಿದ್ಧೇ ಫಟೀರ್ ಎ೦ದು ಕಪಾಳಕ್ಕೆ ಹೊಡೆಯಿತು. ನಾನು ಏನಾಗುತ್ತಿದೆ ಎಂದುಕೊಳ್ಳುವಷ್ಪರಲ್ಲಿ ಪಕಡಿಗೆ ಇನ್ನೊಂದು ಹೊಡೆತ ಬಿತ್ತು. ‘ಅವ್ವಾSS’ ಎ೦ದು ಚೀರಿ ಕೆಳಕ್ಕೆ ಬಿದ್ಧೆ. ರೂಮ್ ಮೇಟುಗಳಿಗೆ ಎಚ್ಚರವಾಗಿ ಲೈಟು ಹಚ್ಚಿದರು. ಎದುರಿಗೆ ಮಿಲಿಂದ ನಿಂತಿದ್ದ. ಕಾಲರ್ ಹಿಡಿದು ಎತ್ತಿದವನೇ, `ಬಡ್ದಿಮಗನೇ. ನನ್ನ ಬಗ್ಗೆ ಕಥೇನಲ್ಲಿ ಬರೀತೀಯಾ? ನಾನು ಬಾರ್‌ಗೆ ಹೋಗ್ತೇನೆ. ಸಿಗರೇಟು ಸೇದ್ತೇನೆ ಎಂದು ಬರೀತೀಯಾ? ಬಿಎಫ್ ನೋಡ್ತೇನೆ ಅಂತೀಯಾ?`. ಪ್ರತಿ ಪ್ರಶ್ನೆಗೂ ಒ೦ದೊ೦ದು ಹೊಡೆತ. ಒದೆತ ಕೊಡುತ್ತಿದ್ದ. ರೂಮ್ ಮೇಟುಗಳಿಬ್ಬರೂ ಕಷ್ಟದಿಂದ ಬಿಡಿಸಿ ನಡೆದದ್ಧಾದರೂ ಏನೆಂದು ಕೇಳಿದರು.& `ನನ್ನನ್ನೇನು ಕೇಳ್ತೀಯಾ ಗುರು? ಕೇಳು ಈ ಸೂಳೆಮಗನ್ನ,` ಎಂದ. ಮಿಲಿಂದ ಕಾವ್ಯಾಳನ್ನು ಲವ್ ಮಾಡುತ್ತಿರಿವುದನ್ನು ಬರೆದಿದ್ದೆ. ಅವಳನ್ನು ಮೆಚ್ಚಿಸಲು ಪಾರ್ಟಿಯಲ್ಲಿನ ಅವನ ಧರ್ತಿ ಬಗ್ಗೆ ಬರೆದಿದ್ದೆ. ಅವಳನ್ನು ಅತ ಸಂಜೆ ಮಾತನಾಡಿಸಲು ಹೋದಾಗ (ಇಬ್ಬರೂ ಒ೦ದೇ ಊರಿನವರು) ನಾನು ಬರೆದ ಕಥೆ ವಿಷಯ ಹೇಳಿ ಛೀಮಾರಿ ಹಾಕಿ ಕಳಿಸಿದಳೆಂದು ಮಿಲಿಂದ ಕಿರುಚಾಡಿದ. ನಾನು `ಸಾರಿ`, ಎಂದು ಹಲುಬಿ ಆತನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಯಿತು.

ಮುಂಜಾನೆ ಎದ್ದಾಗ ಇನ್ನೂ ಹೊಟ್ಟೆ ನೋಯುತ್ತಿತ್ತು ತಲೆ ತುಂಬ ಕಥೆಯ ಪಾತ್ರಗಳು ಒದೆಯುತ್ತಿದ್ದವು. ಕಾಲೇಜಿನಲ್ಲಿ ಕೆಲವರು ಕಂಗ್ರಾಟ್ಸ್ ಹೇಳಿದರು. ಕೆಲವರು ನನ್ನನ್ನು ಹೊಸ ವಿಚಿತ್ರವಾಗಿ ದಿಟ್ಟಿಸಿದರು. ನನ್ನ ಕಥೆ ಛಾಪಿಸಲ್ಪಟ್ವ ಸುದ್ದಿ ಬಹಳ ವೇಗವಾಗಿ ಹಬ್ಬಿತ್ತು. ನನಗೆ ಪಿರಿಯಡ್ನಲ್ಲಿ ಕೂಡಲಾಗದೇ ಗಂಗಾಮಾ೦ಶಿ ಮನೆಗಾದರೂ ಹೋಗೋಣವೆಂದು ಬಸ್ ಸ್ಟಾಪಿಗೆ ಬಂದೆ. ಎದುರಿನಲ್ಲಿ ಮಾಲತಿ ನಾಕಾರು ಗೆಳತಿಯ ರೊ೦ದಿಗೆ ನನ್ನ ಕಡೆಗೇ

ಬಂದಳು. ನನ್ನ ಬನಿಯನ್ನೆಲ್ಲ ಹಸಿಯಾಯಿತು. ಬಂದವಳೇ ಇರಿಗ್ಲಿಷಿನಲ್ಲಿ ನನ್ನನ್ನು ತರಾಟೆಗೆ ತೆಗೆದುಕೊರಿಡಳು. ಅವಳ ಟೀಶಟ್೯ ಒಳಗೆ ಇಣುಕಿರುವುದನ್ನು ಬರೆದಿರುವುದನ್ನು ಹೀನಾಯವಾಗಿ ಬಯ್ದು (ಇಣುಕಿದರೆ ತಪ್ಪಿಲ್ಲವಂತೆ, ಬರೆಯಬಾರದಂತೆ), ನನ್ನನ್ನು ಕಾಗದದ ಕಾಮುಕ ಎಂದರಚಿ, ಸ್ಯಾಡಿಸ್; ಎಂದು ಬಿರುದು ಕೊಟ್ಟಳು. ನಾನು ಹತ್ತು ಸರ್ತಿಯಾದರೂ ಸಾರಿ ಎಂದಿರಬಹುದು. ಅಂತಹುದರಲ್ಲಿ ಅರುಣ, ವೆಂಕಟೇಶ ರಾಜು, ಧಾರವಾಡಕರ್. ಶೆಟ್ವ. ಪ್ರಕಾಶ್ ತ್ರಿವೇದಿ ಬಂದು ಸೇರಿಕೊಂಡರು. ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ಬಯ್ಡರು,`ಕಾಮಣಿ ಅದವರಿಗೆ ಜಗತ್ತೆಲ್ಲಾ ಹಳದಿ`, `ಥತ್ ತೇರಿಕೇ, ನೀ ಯಾವ್ ಗಾ೦ಧಿ ಲೇ, ರಾತ್ರಿ ಚೂಡಿದ ಇಂಗ್ಲಿಷ್ ಸಿನಿಮಾ ಹೇಗಿತ್ತೋ”, “ಕಿಸೆನ್ಯಾಗ ನಾಕ ಪೈಸಾ ಇರಲಿಕ್ರೂ ಗೋಮಾಜಿಕಾಪ್ಸೆನ ಗತೆ ಹೆ೦ಗ ನಿಂತಾನ ನೋಡ್ರ್ಯೋs” ಎಲ್ಲ ಚುಚ್ಚುತ್ತಿದ್ಡವು. ನಾನು ಪೂರ ತತ್ತರಿಸಿ ಹೋದೆ. ಎಲ್ಲರೂ ತಾವು ಎಷ್ಟು ಒಳ್ಳೆಯವರು ಎಂದು ಉದಾಹರಣೆ ಸಮೇತ ಸಿದ್ಬಮಾಡಿದರು. ನಾನೊಬ್ಬನೇ ಈ ಸಮಾಜದಲ್ಲಿ ಕೊಳೆತು ನಾರುತ್ತಿರುವವ ಎಂದು ಹಂಗಿಸಿದರು. ರೂಪಾ ಕುಲಕರ್ಣಿ ಶ್ರೀಮಂತಳಾದರೂ ಆಕೆಗೆ ಸೊಕ್ಕಿಲ್ಲದಿದ್ದೂರಿಂದಲೇ 

ನನ್ನಂಥವನನ್ನೂ ಪಾರ್ಟಿಗೆ ಕರೆದಳು ಎಂದರು. ಆಕೆಗೆ ನನ್ನ ಕಥೆಯ ವಿಷಯ ತಿಳಿದು ಮನಸ್ಸಿಗೆ ಬೇಸರವಾಗಿಯೇ ಕಾಲೇಜಿಗೆ ಬಂದಿಲ್ಲವೆಂದು ಹೇಳಿ. ಪಾಪ. ಆಕೆ ಎಷ್ಟು ನೊಂದುಕೊಂಡಿರುವಳೋ ಎಂದು ಕನಿಕರ ವ್ಯಕ್ತಪಡಿಸಿದರು. ಅಷ್ಟರಲ್ಲಿ ರೂಮ್-ಮೇಟ್ ಮಾಧವ. ದೀಪಕ. ಬಾಜು ಖೋಲಿ ಶಿವರಾಮ ಬಂದಾಗಲೇ ನನಗೆ ಇವರಿಂದ ಬಿಡುಗಡೆ ಸಿಕ್ಕಿತು. ನನ್ನನ್ನು ಗಾಢ ಮೌನ ಆವರಿಸಿತ್ತು. ಮೂವರೂ ಖುಷಿಯಲ್ಲಿ ಜೋಕು ಹೂಡಯುತ್ತ ಪಾರ್ಟಿಗೆ ದು೦ಬಾಲು ಬಿದ್ದರು. ಬಸ್ಸು ಬಂದಾಗ ಹತ್ತಿ ‘ಐಸ್‍ಲ್ಯಾಂಡಿ’ಗೆ ಹೋಗಿ ಎರಡು ತಾಸು ಕೂತು ತಿಂದು. `ಹಿ೦ಗs ಮ್ಯಾಲಿಂದ ಮ್ಯಾಲೆ ಕತೀ ಬರಿ. ಪಾರ್ಟಿ ಮೇಲೆ ಪಾರ್ಟಿ’ ಎಂದು ಹೇಳಿ. ಕಂಗ್ರಾಟ್ಸ್; ಹೇಳಿದರು. ನೂರಾಹದಿನೈದು ರೂಪಾಯಿ ಬಿಲ್ಲು ತೆತ್ತು ಖಾಲಿ ಕಿಸೆ ಹೊತ್ತು ಖೋಲಿಗೆ ಬಂದಾಗ. ಜೀವನದಲ್ಲಿ ಎಲ್ಲ ಖಾಲಿ ಖಾಲಿ ಎನಿಸಿ ಹಾಸಿಗೆ ಮೇಲೆ ಬಿದ್ಧುಬಿಟ್ಟೆ. 

ಎದ್ದಾಗ ಚಲೋ ಬಿಸಿಲು ಏರಿ ಕಿಟಕಿಯಿಂದ ಸೀದಾ ನನ್ನ ಮಾರಿಗೇ ಬಡಿಯುತ್ತಿತ್ತು. ಸ೦ಡಾಸಕ್ಕೆ ಹೋಗಿ ಬರುವುದರೊಳಗಾಗಿ ಮತ್ತೊoದು ಆಕಸ್ಮಿಕ ನನ್ನನ್ನು ಕಾದಿತ್ತು. `Grandmother Serious; start immediately` ಟೆಲಿಗ್ರಾಂ. ನಾನಾಗಲೇ ಯೋಚನೆ ಮಾಡುವ ಸ್ಥಿತಿಯನ್ನು ಮೀರಿ ಬಿಟ್ಟಿದ್ದೆ, ಶೂನ್ಯ ಮನಸ್ಸಿನಿಂದ ಬಾಗಲಕೋಟೆ ಬಸ್ಸುಹಿಡಿದೆ.

ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಕಿಟ್ಟಕ್ಕತ್ಯಾ ನನ್ನನ್ನು ನೋಡಿ ಅಳಲು ಆರಂಭಿಸಿದಳು. ಅಪ್ಪನ ಜೊತೆ ಹೊಲದ ವಿಷಯದಲ್ಲಿ. ಅಜ್ಜಿಯಿಂದ ಆಭರಣ ಕಿತ್ತುಕೊಂಡ ವಿಷಯದಲ್ಲಿ ಜಗಳಾಡಿದ ವೆಂಕುಕಾಕಾ ಎಂದೂ ಹಣಿಕಿ ಹಾಕದಿದ್ದವ ಮೂಲೆಹಿಡಿದು ಬಾಯಿಗೆ ಅಡ್ಡ ಪಂಜೆ ಹಿಡಿದುಕೊಂಡು. ಕಣ್ಣುತುಂಬಿಕೊಂಡು ಕೂತಿದ್ದ. ಅಪ್ಪ ಸ್ಥಿತಪ್ರಜ್ಞನಂತೆ ಮೌನದರಿಸಿದ್ದ. ಅವ್ವ ಗರಬಡಿದವಳಂತೆ ಅಧೀರಳಾಗಿ ನಿಂತಿದ್ದಳು. ಅಜ್ಜಿಗೆ ಬಿಪಿ ಸಿಕ್ಕಾಪಟ್ಟೆ ಜಾಸ್ತಿಯಾಗಿ ಮತ್ತೆ ಲಕ್ವಾ ಹೊಡೆಯಿತಂತೆ. ಅನಂತರ ಎರಡು ದಿನಗಳಲ್ಲಿ ಮಿದುಳಿನಲ್ಲಿ ರಕ್ತಸ್ರಾವವಾಯಿತಂತೆ. ಸಾಯುವುದಕ್ಕೆ ಮುಂಚೆ ಅಜ್ಜಿ ನನ್ನನ್ನು ಸನ್ನೆಮಾಡಿ ಕೇಳಿದಳಂತೆ. ಕಿಟ್ಟಕ್ಕತ್ಯಾ ಎಲ್ಲವನ್ನು ಅಳುತ್ತಲೇ ಹೇಳಿದಳು. ಅವ್ವನನ್ನು ಹಿಡಿದುಕೊಂಡಾಗ ಆಕೆ ನನ್ನ ತಲೆಬಳಸಿ ಆಳತೊಡಗಿದಳು. ಅಪ್ಪ ಒ೦ದು ಹನಿ ಕಣ್ಣೀರು ಹಾಕದೇ 

ಚಟ್ವದ ಸಿದ್ದತೆಯಲ್ಲಿ ತೊಡಗಿದ್ದ. ನಾನು ಕಥೆಯಲ್ಲಿ ನನ್ನ ಅಜ್ಜಿ ತೋರಿದ ದಪ೯ವಮ್ನ. ತನಗೆ ಲಕ್ವಾ ಹೊಡೆದಿದ್ದರೂ ಕ್ಯಾನ್ಸರಿನಿಂದ ಬಳಲುತ್ತಿರುವ ಅವ್ವನನ್ನು ಮಡಿಯ ಸಲುವಾಗಿ ದುಡಿಸಿಕೊಳ್ಳುತ್ತಿರುವ ಹೊಲಸು ಧಮಾ೯ಚರಣೆಯನ್ನು ಬರೆದದ್ದು ಈಗ ಅದು ಆಥ೯ ಕಳೆದುಕೊಂಡು ನನ್ನ ಮು೦ದೆ ನೇತಾಡತೊಡಗಿದಂತೆ ಈಗ ಅನ್ನಿಸುತ್ತಿದೆ. ಅಜ್ಜಿ ನಾನು ಬರೆದ ಕಥೆಯನ್ನು ಓದಿದ್ದರೆ ಸಾಯುವಾಗ ನನ್ನನ್ನು ನೋಡಲು ಹಾತೊರೆಯುತ್ತಿದ್ದಳೇ ಎಂಬ ಪ್ರಶ್ನೆ ಈಗ ನಿಲ್ಲುತ್ತಿದೆ. ಎದ್ದಾಗಿನಿಂದ ಹಾಸಿಗಗೆ, ಹೋಗುವವರೆಗೆ (ಒಮ್ಮೊಮ್ಮೆ ಮಲಗಿದ ಅನಂತರವೂ) ಕಾಟ ಕೊಟ್ಟ ಅತ್ತೆ ಸತ್ತಿದ್ದಕ್ಕಾಗಿ ಅಮ್ಮ ಬಿಕ್ಕಿ ಬಿಕ್ಮಿ ರೋದಿಸುತ್ತಿದ್ದಳು. ಅತ್ತೆ-ಸೊಸೆ ಸಂಬಂಧ ನಾನು ಊಹಿಸಿ ಬರೆದುದಕ್ಕಿಂತ ಭಿನ್ನವಾಗಿತ್ತೇ ಎಂದೀಗ ಭೀತನಾಗಿದ್ದೇನೆ.

ಎರಡು ದಿನ ಕಳೆಯುವಷ್ಟರಲ್ಲಿ ಎಲ್ಲರ ದುಃಖ ಎಷ್ಟೋ ಕಡಿಮೆಯಾಗಿತ್ತು. ವೆಂಕುಕಾಕಾ ಚುಟ್ಟಾ ಸೇದುತ್ತ ಪತ್ರಿಕೆ ಓದುತ್ತ ಕುಳಿತಿದ್ದ. ನನ್ನ ಕಥೆ ಅದರಲ್ಲೇ ಪ್ರಕಟವಾಗಿತ್ತು. ನನ್ನೆದೆ ಧಸಕ್ಕೆಂದಿತು. ಅದೇ ವೇಳೆಗೆ ವೆಂಕುಕಾಕಾ ಮಾರಿ ಇಷ್ಟಗಲ ಮಾಡಿ ನನ್ನನ್ನು ಕೂಗಿಯೇ ಬಿಟ್ಟ. “ಏನೋ ? ಈ ಕತೀ ನೀನ ಬರೆದದ್ದು ಹೌದಲ್ಲೋ ?”; ಎಂದು. ಹೌದೆಂದೆ. ಕಾಕು, ಕಿತ್ತಕ್ಕತ್ಯಾ, ಅಪ್ಪ, ಅವ್ವ, ಸುತ್ತಲಿದ್ದ ಎಲ್ಲರನ್ನೂ ವೆಂಕುಕಾಕಾ ಕೂಗಿ ಸುದ್ದಿ ಹೇಳಿದ. ದುಃಖದ ವಾತಾವರಣದಲ್ಲಿ ಸ್ವಲ್ಪ ಸಂತೋಷದ ಗಾಳಿ ಸೇರಿಕೊಂಡಂತೆ ಆಯಿತು. ಅವ್ವ, `ಏನೂಂತ ಬರೆದೀಯೋ?” ಎಂದಳು. `ನನ್ನೇನ ಕೇಳ್ತಿ? ಕತಿ ಓದಲಾ`, ಎಂದೆ. ನಾನು ಏನೆಂದು ಬರೆದಿದ್ದೇನೆ ಎನ್ನಬೇಕಿತ್ತು ಎಂದು ತೋಚದೇ ಹಾಗೆ ಹೇಳಿದೆ. ವೆಂಕುಕಾಕಾ ಜೋರಾಗಿಯೇ ಎಲ್ಲರೂ ಆತನನ್ನು ಸುತ್ತುವರಿದು ಕೂತಾಗ ಓದತೊಡಗಿದ, `ಕತಿ ಹೆಸರು: ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿ`. ಎಲ್ಲರೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನಗೆ ಅಲ್ಲಿ ನಿಂತುಕೊಳ್ಳಲಾಗಲಿಲ್ಲ. ಎದ್ದು ಅಟ್ಟದ ಮೇಲೆ ಹೋದೆ. ನನ್ನೆದೆ ಡವಡವ ಹೊಡೆದುಕೊಳ್ಳುತ್ತಿತ್ತು. ದಿನಪೂರ್ತಿ ಮಡಿಯೆಂದು ಸಾಯುತ್ತ ಪಾರ್ಸಿ ಹೊಡೆದು ನಾರುತ್ತಿರುವ ಅಜ್ಜಿ, ಧರ್ಮವೆಂದು ಹಲುಬಿ ಕಣ್ಣೀರಿನಲ್ಲಿ ಅವ್ವನನ್ನು ನೆನೆಸುವ ಅಪ್ಪ, ತನೆಗೆ ಕ್ಯಾನಸರಾಗಿದ್ದರು ನಾಯಿಯಂತೆ ದುಡಿಯುವ ಅವ್ವ. ಮನೆಯ ಇಷ್ಟೆಲ್ಲ ತೊಂದರೆ ಗೊತ್ತಿದ್ದೂ ರೊಕ್ಕದ ಸಲುವಾಗಿ ಕೌರವರಂತೆ ಜಗಳಾಡಿ ದೂರವಾದ ಕಾಕಾ-ಎಲ್ಲವನ್ನೂ ಕಾಕಾ ಓದುತ್ತಿದ್ದ. ನಾನು ಮಾಲತಿಯ ಟೀಶರ್ಟ್ ಒಳಗೆ ಇಣುಕಿರುವುದನ್ನು ಎರಡೆರಡು ಸಲ ಓದಿದ. ಅವ್ವ ಅಳುತ್ತಿರುವುದು ಕೇಳಿಸಿತು. ಅಪ್ಪ ಅರಚತೊಡಗಿದ. `ಅಂವ ಬಂದರ ಬರ್ಲಿ. ಓದ್ಲಿಕ್ಕೆ ಅಂತ ಹುಬ್ಬಳ್ಳಿಗೆ ಕಳಿಸಿದ್ರ ನಮ್ಮ ಪಿಂಡಾ ಕಟ್ತಾನ ನಿನ್ನ ಮಗ`. ನಾನು ಅಟ್ಟದಲ್ಲಿ ಮಲಗಿಕೊಂಡಂತೆ ನಟಿಸುತ್ತಿದ್ದೆ. ಅಷ್ಟರಲ್ಲಿ ಪುಟ್ಟಿ (ವೆಂಕುಕಾಕಾನ ಆರು ವರ್ಷದ ಮಗಳು) ಅಟ್ಟದ ಮೇಲೆ ಬಂದು, ನನ್ನನ್ನು ನೋಡಿದವಳೇ, `ಇಂವ ಇಲ್ಲೇ ಮಲಗ್ಯಾನ, ನೋಡ ಬಾ`; ಎಂದಳು. ನನ್ನ ಸಿಟ್ಟು ನೆತ್ತಿಗೇರಿ ಎರಡು ಕೊಟ್ಟೆ, ಅವಳು ಜೋರು ದನಿ ತೆಗೆದು ಅಳತೊಡಗಿದಳು. ನಾನು ಅವಳನ್ನು ಎತ್ತಿಕೊಂಡವನೇ ಕೆಳಗಿಳಿದು ಬಂದುಬಿಟ್ಟೆ. 

ಅವ್ವ ಮೂಗಿಗೆ ಸೆರಗು ಮುಚ್ಚಿಕೊಂಡು ಅಳುತ್ತಿದ್ದಳು. ವೆಂಕುಕಾಕಾ ದುರುಗುಟ್ಟಿಕೊಂಡು ನನ್ನನ್ನೇ ನೋಡಿತ್ತಿದ್ದ. ಪುಟ್ಟಿ ಒಮ್ಮೆಲೇ ಅಳು ನಿಲ್ಲಿಸಿದಾಗ ಎಲ್ಲ ನಿಶಬ್ದವಾಯಿತು. ನಾನು ಗಪ್ಪು ನಿಂತಿದ್ದೆ. ಅಪ್ಪ ಪತ್ರಿಕೆಯನ್ನು ಮಾರಿಯ ಮೇಲೆ ಬೀಸಿ ಒಗೆದು, `ಬರೀಪಾ, ಇನ್ನೂ ಏನೇನ ಬರೆದು ಎಲ್ಲರ ಮಾನ ಹರಾಜು ಹಾಕಬೇಕಂತೀ ಹಾಕಿಬಿಡು,` ಎಂದ. ನಾನು ಬಗ್ಗಿ ಪತ್ರಿಕೆಯನ್ನೆತ್ತಿಕೊಂಡು ಗಟ್ಟಿಯಾಗಿ ಹಿಡಿದು ಕೊಂಡೆ. `ನಿಂಗ ರೊಕ್ಕ ಕಡಿಮೇಬಿದ್ರ ಕಾಗದ ಬರ್ದು ತಿಳ್ಸೊ. ಕತಿ ಒಳಗ ಬರ್ದು ಯಾಕ ನಮ್ಮನಿ ರಂದಿ ಎಲ್ಲಾ ಹೊರಗ ಚೆಲ್ತಿ?` ಎಂದು ಅವ್ವ ಗಳಗಳನೇ ಅಳಲು ಶುರು ಮಾಡಿದಳು. ಅಪ್ಪ ಅವ್ವನತ್ತ ಸಿಟ್ಟಿನಿಂದ ತಿರುಗಿ, `ಅಂವಗೆಲ್ಲಿ ರೊಕ್ಕ ಕಡಿಮಿ ಬೀಳ್ತಾವ? ತಿಂಗಳ ಕಡೀ ಆಖ್ಯರಿದ್ರೂ ಇಂಗ್ಲೀಷ್ ಸಿನಿಮಾ ನೋಡ್ತಾನ, ಅದೂ ಹೊಲಸ,` ಎಂದು ಬಯ್ದು, `ಎಂಥಾ ಮಗನ್ನ ಹಾಡದ್ಯ? ನಮ್ಮನಿ ಗೋಪುರಕ್ಕ ಕಳಸಾ ಇಡ್ತಾನ,` ಎಂದು, ನನ್ನತ್ತತಿರುಗಿ, `ಏ ರಂಡೆಗಂಡ, ಹೆತ್ತ ಹೊಟ್ಟಿಗಿ ಬೆಂಕಿ ಹಾಕ್ಲಿಕ್ಕ ಯಾಕ ಹುಟ್ಟಿದ್ಯೋ? ಹೋಗ, ಯಾವಕಿದರ ಅಂಗಿ ಒಳಗ ಹಣಿಕಿ ಹಾಕಹೋಗ, ಯಾವ್ದಾರ ಇಂಗ್ಲೀಷ್ ಸಿನಿಮಾ ನೋಡ ಹೋಗ,` ಎಂದು ರಭಸದಿಂದ ನನ್ನತ್ತ ಬಂದು, ಹಲ್ಲನ್ನು ಕಟಕಟನೇ ಕಡಿದು, `ಸಾಯ್, ಹಾಳಾಗು, ಎಲ್ಲೆರೆ ಸಾಯ್ ಹೋಗು,` ಎಂದು ನನ್ನನ್ನು ಕಂಡಕಂಡಲ್ಲಿ ಒದೆಯತೊಡಗಿದ. ಪುಟ್ಟಿ ದೊಡ್ಡ ದನಿ ತೆಗೆದು ಆಳಹತ್ತಿದಳು. ಅಪ್ಪನ ಆವೇಶವೆಲ್ಲ 

ಮುಗಿದ ಮೇಲೆ ನಿಂತಲ್ಲಿಯೇ ಕುಸಿದ, `ನಾ ಪಾಲಸೋ ಧರ್ಮಕ್ಕ ಅರ್ಥ ಇಲ್ಲಂತ, ನಾ ಗಂಟೇ ಬಾರ್ಸೊದು ಮಗ್ಗಲ ಮೇನಿಯವ್ರು ಕೇಳಲಿ ಅಂತ, ಏನ, ನೀ ಅತ್ತೀ ಸೇವಾ ಮಾಡಿದ್ದು ನನ್ನ ಹೆದರಿಕಿಗಂತ, ನಾ ನಿನ್ನ ಬೆಳೀಲಕ್ಕೆ ಬಿಡಲಿಲ್ಲಂತ,` ಅಪ್ಪ ಹಲುಬತೊಡಗಿದ.

ನಾನು `ಅಪ್ಪಾ` ಎನ್ನಲು ಬಾಯಿ ತೆಗೆದೆ. ಆದರೆ ಗಂಟಲಿನಿಂದ ಯಾವುದೇ ಶಬ್ದ ಹೊರಬರದೇ ಮತ್ತೆ ನಿಶ್ಚಲನಾದೆ. ಅವ್ವ ಅಳುತ್ತಲೇ, `ಛಲೋ ಬಿರುದು ಕೊಟ್ಯಲ್ಲೋ, ಪೈಸಾ ಪೈಸಾ ಗಳಿಸಲಿಕ್ಕ ಅವ್ರು ಎಷ್ಟು ಬೆವರ ಹರಸ್ತಾರಂತ ನಿಂಗೇನ ಗೊತ್ತೂ? ನಿನ್ನ ದೇವ್ರು ಎಂದೂ ಕ್ಷಮಿಸೂದಿಲ್ಲ,`ಎಂದಳು. `ಶ್ಯಾಣ್ಯಾ, ಶ್ಯಾಣ್ಯಾ ಅಂತ ಎಲ್ಲರೂ ಅಂತಿದ್ರು. ರಾಯರ ಕುದರಿ ಕತ್ತಿ ಆತು,` ಎಂದಳು ಕಾಕು. ನನಗೀಗ ಸುಮ್ಮನಿರಲಾಗಲಿಲ್ಲ. `ನೀವು ಸುಮ್ಮ ಕೂಡ್ರೀ, ಕಾಕು, ನಮ್ಮೆಪ್ಪ ಅವ್ವಾ ನಂಗ ಬೇಕಾದ್ದ ಬಯ್ತಾರ, ನೀವಡ್ಡ ಬಾಯಿ ಹಾಕಬ್ಯಾಡ್ರಿ,` ಎಂದರಚಿದೆ. ಅಪ್ಪ ಸಿಟ್ಟಿನಿಂದ,`ಯಾಕ, ದೊಡ್ಡವರಿಗೆ

ತಿರತಿರಗಿ ಮಾತಾಡ್ಲೀಕತ್ತಿ ? ಮರ್ತಬಿಟ್ಟೀನ ನಾ ಹೇಳಿದ್ದು?` ಎಂದು, ಒಂದರೆ ಕ್ಷಣ ಬಿಟ್ಟು, `ನೀ ಭಾಳ ಓದಿದವಲ್ಲಾ, ನಿನ್ನ ಮುಂದ ನಾ ಬುದ್ದಿ ಹೇಳ್ತೀನಲ್ಲಾ, ನಾ ಎಂಥಾ ಹುಚ್ಚ. ನೀ ಭಾಳ ದೊಡ್ಡವ ಆಗಿ ನೋಡು, ದೊಡ್ಡ ದೊಡ್ಡ ಪುಸ್ತಕ ಓದಿ , ಕತೀ ಬರೀತಿ. ನಿನ್ನ ಮುಂದೆ ನಾವೆಷ್ಟರವರಪ್ಪಾ, ದೊಡ್ಡಮನಷ್ಯಾ,` ಎಂದು ಹಂಗಿಸಿದ. ನನ್ನ ಕಟ್ಟಿದ ಗಂಟಲು ಕಣ್ಣೀರಾಗಿ ಹರಿಯಿತು. ನಾನು ಅಳಲಿಕ್ಕೆ ಶುರುಮಾಡಿದೆ. ಅಪ್ಪ, ಅವ್ವ, ಕಾಕಾ, ಕಾಕು ಎಲ್ಲ ಕೂಡಿ ಬಯ್ಯತೊಡಗಿದರು. ಅಜ್ಜಿ ಅವ್ವನನ್ನು ಮಗಳಂತೆ ನೋಡಿ ಕೊಳ್ಳುತ್ತಿದ್ದುದನ್ನು, ಅಪ್ಪನಿಗೆ ನನ್ನ ಮೇಲಿರುವ ಆಗಾಧ ಪ್ರೀತಿಯನ್ನು, ನನ್ನನ್ನು ಉಳಿದವರ ಮುಂದೆ ಹೊಗಳುವುದನ್ನು, ನನ್ನ ಪತ್ರ ಬಂದಾಗ ಓದೊಂದು ಅಕ್ಷರವನ್ನು ಓದಿ ಓದಿ ಆನಂದಿಸುವುದನ್ನು ಅವ್ವ ಬಿಕ್ಕಿ ಬಿಕ್ಕಿ ಆಳುತ್ತ ಹೇಳಹತ್ತಿದಳು. ಅಪ್ಪನಿಗೆ ಆವೇಶ ತಡೆಯಲಾಗಲಿಲ್ಲ. ನನ್ನನ್ನು ದರದರ ಎಳೆದವನೆ, `ಎಲ್ಲೆರೆ ಹಾಳಾಗಿ ಹೋಗು,` ಎಂದು 

ದಬ್ಬಿ, ಬಾಗಿಲನ್ನು ಹಾಕಿಕೊಂಡ, ಮನೆಯ ಅಜುಬಾಜು ಮಂದಿ ಸುತ್ತಲೂ ಮುಕುರಿದ್ದರು. ನಾನು ತೆಲೆತಗ್ಗಿಸಿ ಕೈಯಲ್ಲಿದ್ದ ಪತ್ರಿಕೆಯನ್ನು ನೋಡುತ್ತ ನಡೆಯಹತ್ತಿದೆ. ಕಿಲ್ಲಾದ ಸಂದಿಯನ್ನು ದಾಟಿ ಹೊರಟೆ. ದುಃಖಿಸಿ ಅಳುತ್ತ ಕತ್ತೆಹೊಳೆಗೆ (ಘಟಪ್ರಭಾ ನದಿ) ಬಂದು ಕೂತು ಎಲ್ಲ ದುಗುಡವನ್ನೂ ಹರಿಸಿಬಿಟ್ಟೆ. 

ಈಗಲೂ ಅಲ್ಲೇ ನದಿ ದಂಡೆ ಮೇಲೆ ಕೂತಿದ್ದೇನೆ. ಎಷ್ಟು ಅತ್ತರೂ ಸಮಾಧಾನವಾಗಲಿಲ್ಲ. ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡಬೇಕು ಎನಿಸಿತು. ಅರ್ಧತಾಸು ಸುಮ್ಮನೆ ಕೂತು, ಮನಸ್ಸನ್ನು ತಹಬದಿಗೆ ತಂದುಕೊಂಡು, ಒಂದೊಂದೆ ಘಟನೆಗಳನ್ನು ಜೋಡಿಸಿಕೊಂಡು ಸಿದ್ದನಾದೆ. ನನ್ನ ಮುಂದೆ ನೀವು ಕೂತಿದ್ದೀರೆಂದು ಕಲ್ಪಿಸಿಕೊಂಡು ಎಲ್ಲವನ್ನೂ ಒಂದೂ ಬಿಡದೇ ಅದೇ ಪತ್ರಿಕೆಯ ಖಾಲಿ ಜಾಗದಲ್ಲೆಲ್ಲ ಬರೆದಿದ್ದೇನೆ. ಕಕ್ಕಬೇಕೆನಿಸಿದ್ದನ್ನೆಲ್ಲವನ್ನೂ ಕಕ್ಕಿದ್ದರೂ ಇನ್ನೂ ಸಮಾಧಾನವಾಗೆಲ್ಲ. ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅನುಭವದ ಜಾಡು ಹಿಡಿದು ಪ್ರಾಮಾಣಿಕವಾಗಿ ಬರೆಯಬೇಕೆನ್ನುವ ಹಟ ತೊಟ್ಟು ಕಥೆ ಬರೆದು ನಾನು ಸಾಧಿಸಿದ್ದಾದರೂ ಏನು ಎಂದು ಅನಿಸುತ್ತಿದೆ. ನನ್ನ ಕಥೆ ಮೆಚ್ಚಿ ಒಂದೆರಡು ಕಾಗದಗಳು ಬರಬಹುದು. ಸತ್ತ ಅಜ್ಜಿಯ ನಂಬಿಕೆಗಳು ನನ್ನನ್ನು ದಿನವೂ ಪೀಡಿಸುತ್ತವೆ. ಅಪ್ಪ, ಅವ್ವನ ನಂಬಿಕೆಗಳು, ಪರಿಕಲ್ಪನೆಗಳು ನನ್ನನ್ನು ಭೂತದಂತೆ ಬೆನ್ನು ಹತ್ತುತ್ತವೆ. ಇನ್ನು ಮುಂದೆ ಅಪ್ಪ, ಅವ್ವ ನನ್ನನ್ನು ಮಗನ ಹಾಗೆ ಪ್ರೀತಿಸುವುದೇ ಇಲ್ಲ, ಅಪರಿಚಿತನಂತೆ ನಿರುಕಿಸುತ್ತಾರೆ. ಮತ್ತೆ ನಾನು ಕಾಲೇಜಿಗೆ ಹೋದ ಕೂಡಲೇ ರೂಪಾ ಕುಲಕರ್ಣಿ ತರಾಟೆಗೆ ತೆಗೆದುಕೊಳ್ಳುತ್ತಾಳೆ, ಎಲ್ಲ ಗೆಳೆಯರಿಗೂ ನಾನು ಅಪರಿಚಿತನಾಗುತ್ತೇನೆ. ನನಗೆ ಒಂದು ಥರ ಹುಚ್ಚು ಹಿಡಿದರೂ ಹಿಡಿಯಬಹುದು. ಏಕಾಂಗಿಯಾಗಿ ಖೋಲಿಯಲ್ಲಿ ಗೋಡೆಯನ್ನು ನೋಡುತ್ತಾ ಗಪ್ಪು ಕೂಡುವ ಕೆಲಸ ನನ್ನ ದಿನಚರಿಯಾಗಬಹುದು. ಇದನ್ನೆಲ್ಲ ನಾನು ಕಥೆ ಬರೆದು ಪ್ರಕಟಿಸುವುದಕ್ಕೆ ಮುಂಚೆ ಯೋಚಿಸಬೇಕಾಗಿತ್ತು, ಅಲ್ಲವೇ ?

ಅಯ್ಯೋ, ಆಗಲೇ ಸೂರ್ಯ ಮುಳುಗಿಯೇ ಹೋದ. ಮನೆಯಿಂದ ಬಿಟ್ಟಾಗ ಮಧ್ಯಾಹ್ನದ ಹೊತ್ತು. ಇನ್ನೂ ಯಾರ ಊಟವೂ ಆಗಿಲ್ಲ. ಅವ್ವ ಅಳುತ್ತ , ನನ್ನ ದಾರಿ ಕಾಯುತ್ತಾ ಏನೇನೋ ಕೆಟ್ಟ ಯೋಚನೆ ಮಾಡುತ್ತ ( ನಾನು ಜೀವಕ್ಕೇ ಅಪಾಯ ತಂದುಕೊಂದನೆಂದು ಅಥವಾ ಮನೆಬಿಟ್ಟು ಓಡಿ ಹೋದೆನೆಂದು) ಕೂತಿರಬಹುದು. ಅಪ್ಪ ಕಾಲು ಸುಟ್ಟ ಬೆಕ್ಕಿನಂತೆ ಪರದಾಡುತ್ತ, ತನ್ನನ್ನು ಶಪಿಸಿ ಕೊಳ್ಳುತ್ತ ಊಟ ಮಾಡದೇ ಪರಿತಪಿಸುತ್ತಿರಬಹುದು. ಎಲ್ಲರೂ ಹುಚ್ಚು ಹಿಡಿದವರ ಹಾಗೆ ನಾನು ಹೋದ ದಾರಿ ಕಾಯುತ್ತ ಕೂತಿರುತ್ತಾರೆ, ಇನ್ನು ತಡಮಾಡುವುದಿಲ್ಲ ಹೋಗಿಬರುತ್ತೇನೆ.

ಕವನ ಗುಚ್ಛ: ವಿ.ಕೆ. ಭಗವತಿ ಹಾಗೂ ಅಮರಪ್ರೇಮ (ಭಾಗ-೨): ಕೇಶವ ಕುಲಕರ್ಣಿ

ಅನಿವಾಸಿ ಸತತವಾಗಿ ಇಂದು ತನ್ನ ಐನೂರನೇ ಸಂಚಿಕೆಯನ್ನು ಪ್ರಕಟಿಸುತ್ತಿದೆ. ನಮ್ಮೆಲ್ಲರಿಗೂ ಇದು ಹೆಮ್ಮೆಯ, ಸಂತೋಷದ ವಿಷಯ. ಈ ಸಾಧನೆಯ ಹಿಂದೆ ಅನಿವಾಸಿ ಸದಸ್ಯರ ಅವಿರತ ಶ್ರಮವಿದೆ, ಕಣ್ಣೀರಿದೆ, ಕಕ್ಕುಲತೆಯಿದೆ, ಕನ್ನಡ ನಾಡಿನ – ಭಾಷೆಯ ಮೇಲಿನ ಅಪಾರ ಪ್ರೇಮವಿದೆ.

ತಾಯ್ನಾಡಿನ ಕೊಂಡಿಯನ್ನು ಪ್ರತಿನಿಧಿಸುತ್ತಿರುವವರು ಅತಿಥಿ ಕವಿ ಡಾ. ವಿ.ಕೆ. ಭಗವತಿ. ವಿಕೆಬಿ, ವೃತ್ತಿಯಲ್ಲಿ ವೈದ್ಯರು. ಈಗಿನ ಗದಗ ಜಿಲ್ಲೆಯಲ್ಲಿರುವ ರೋಣ ತಾಲೂಕಿನ ಲಕ್ಕಲಕಟ್ಟಿಯಲ್ಲಿ ಹುಟ್ಟಿ, ಹುಬ್ಬಳ್ಳಿಯ ಕೆ ಎಂ ಸಿ ಯಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದು, ಹಾವೇರಿಯಲ್ಲಿ ವೃತ್ತಿ ನಿರತರಾಗಿದ್ದರು. ಮೊದಲಿನಿಂದಲೂ ಸಾಹಿತ್ಯ, ನಾಟಕ, ಸಂಗೀತ ಹಾಗು ಸುತ್ತುವ ಹವ್ಯಾಸವಿರುವ ವಿಕೆಬಿ, ಕನ್ನಡ ಹಾಗೂ ಉರ್ದುಗಳಲ್ಲಿ ಕವನ, ಗಝಲ್ ಗಳನ್ನ ರಚಿಸಿದ್ದಾರೆ. ವೃತ್ತಿಯಿಂದ ನಿವೃತ್ತರಾದಮೇಲೆ, ದೇಶ ವಿದೇಶಗಳ ಪ್ರವಾಸ ಮುಗಿಸಿ, ಶಿರಸಿಯ ಹತ್ತಿರದ ಹಳ್ಳಿಯೊಂದರಲ್ಲಿ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಜೀವನದ ಎರಡನೇ ಇನ್ನಿಂಗ್ಸ್ ಆಡುತ್ತಿದ್ದಾರೆ. ರೈತ ಮನೆತನದಲ್ಲಿ ಹುಟ್ಟಿದ ವಿಕೆಬಿ ಅವರ ಕವನಗಳಲ್ಲಿ ಮಣ್ಣಿನ ಸಾಮೀಪ್ಯತೆಯ ಅರಿವಾಗುತ್ತದೆ. ಅವರ ವಿಭಿನ್ನ ರೀತಿಯ ಪದಗಳ ಬಳಕೆ; ಗಝಲ್ ಶೈಲಿ ನಿಮ್ಮ ಗಮನಕ್ಕೆ ಬರಬಹುದು ಈ ಮೂರು ಕವನಗಳಲ್ಲಿ.

ಐನೂರನೇ ಸಂಚಿಕೆಯ ಇಂಗ್ಲೆಂಡಿನ ಪ್ರತಿನಿಧಿಯಾಗಿ ಎರಡನೇ ಭಾಗದಲ್ಲಿ ಓದುಗರು ಕಾತುರದಿಂದ ಕಾದಿರುವ ಕೇಶವ್ ಬರೆದಿರುವ ‘ಅಮರ ಪ್ರೇಮ’ ಕಥೆಯ ಮುಂದಿನ ಕಂತಿದೆ. ಅಮರನ ‘ಪ್ರೇಮ’ ಸಿಕ್ಕಳೇ? ಆತನ ಪ್ರೇಮ ಗಗನ ಕುಸುಮವಾಗಿಯೇ ಉಳಿಯಿತೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೇ ಯಾ ಕೇಶವ್ ಇನ್ನೂ ನಿಮ್ಮನ್ನು ಕೌತುಕದ ಸುಳಿಯಲ್ಲಿ ಸಿಕ್ಕಿಸಿ ಒದ್ದಾಡಿಸುವರೇ? – ರಾಂ

ವಿ ಕೆ ಭಗವತಿಯವರ ಮೂರು ಕವನಗಳು

ಜೀವನ

ಬಿತ್ತಲು ಬೇಕಾದ ಮಣ್ಣು ಕತ್ತಲು

ನನ್ನಲಿ ಕೈತುಂಬಾ ಕಾಳು ಬಿತ್ತಲು

ಆಸೆ ಅಂಜಿಕೆ ಬಿಟ್ಟರೆ ನೀ ಬೆತ್ತಲು

ವಿಜಯಕೇ ಬೇಕಾದ ಮೆಟ್ಟಲು ಹತ್ತಲು

ದಾಟದೇ ಹಾಯಾದ ಗೆರೆಗಳ ಸುತ್ತಲು

ಬುಗ್ಗೆಯೇ ಬೇಕೇನು ಬದುಕಿನ ಬಟ್ಟಲು

ಅಂಕೆ ಸಂಖೆಯ ಆಟದೆ ನಿನ ಎತ್ತಲು

ಸಂಜೆಯಾಯಿತು ಕಣ್ಣ ಮುಚ್ಚಲು ಕತ್ತಲು

ಮದುವೆ

ನಿನ್ನ ಬಳುಕು ಮೈ ಮೋಹನವಾದರೆ

ಮುರಳಿಯಾಗದಿರುವುದೇ ನನ್ನ ಮನ

ಕೊಳವಿದೆ ಅಲ್ಲಿ ನನ್ನ ಅಂಗಳದಲ್ಲಿ

ಅದರೊಳಗೆ ಮುಳುಗಿ ಮಿಂದು ಬಾ

ಬಿಗುಮಾನಗಳ ಕಳೆದು, ತೊಳೆದು

ಗಂಟು ಗುಣಿಕೆಗಳ ಸಡಿಲಿಸಿ ಬಾ

ದಿಂಡೆ ಬಾಳೆಯಂತಾದರೆ ನಿನ್ನ ಕಾಲಿಗೆ

ನೂರಡಿಯಾಗದೇನು ನನ್ನ ಜೊಲ್ಲು ನಾಲಿಗೆ

ಕೈಗೆ ಕೈಯಿಟ್ಟು, ಬಾಯಿಗೆ ಮುತ್ತಿಟ್ಟರೆ ನೀನು

ನಾಳೆ ನಾಳೆಗಳಿಗೆ ತೊತ್ತಿಡುವೆ ನಾನು

ಮೋಹನವಲ್ಲದ ಮೈ, ದಿಂಡಲ್ಲದ ಕಾಲ್ಗಳಿದ್ದರೆ

ಹಸಿರಾಗು ನೀ ಹೆಮ್ಮರವಾಗಿ

ಮುರಳಿಯಾಗದ ನನ್ನ ಮನ

ಟೊಂಗೆ ಟೊಂಗೆ ಜಿಗಿಯುವುದು ಮರ್ಕಟವಾಗಿ

ಪಯಣ

ಪಯಣದ ರೀತಿ ನೀತಿ ಸರಳ ಶುದ್ಧ ದಾರಿಯಾಗಿದೆ

ಇನ್ನೂ ಸ್ವಲ್ಪ ಕ್ರಮಿಸಿ ನೋಡೋಣ

ಅಲ್ಪ ವಿರಮಿಸಿ, ಶ್ರಮಿಸಿ ನೋಡೋಣ

ಸಂಬಂಧಗಳಡಿ ಬಂಧಿಯಾಗಲಾತುರವೇಕೆ

ಸಡಿಲ ದಾರಗಳ ಮೇಲೆ ಕಟ್ಟಿದ ಸೇತುವೆ ಬೀಳಿಸಲು ಒಂದೇ ಪ್ರಶ್ನೆ ಯಾಕೆ

ಬಂಧಗಳ ಸಾರ ಕರಗಿದಾಗ ದಾರ ಹರಿಯದೆ?

ಆ ದಿನ ಬಂದಾಗ, ಬಗ್ಗದ ಈ ಬಿದಿರು ಮುರಿಯದೆ?

ದಾರದ ಸತ್ವ ಕರಗುವ ಮುನ್ನ ಸ್ವಲ್ಪ ತಗ್ಗಿಸಿ ನೋಡೋಣ

ಬೆದರದ ಬಿದಿರು ಮುರಿಯುವ ಮುನ್ನ ಸ್ವಲ್ಪ ಬಗ್ಗಿಸಿ ನೋಡೋಣ

ಹೇಳಲು ಒಂದು ಮನೆಯಿದೆ, ಬೇರೆಯಲ್ದು ಒಂದು ಭ್ರಮೆಯಿದೆ

ಬೇರೆಯಾದ ಭ್ರಮೆಯಾಚೆ, ಅಗಣಿತ ಅಪರಿಮಿತ ನಲುಮೆಯಿದೆ

ನೀ ನಡೆಯಲೊಪ್ಪದ ದಾರಿಯ ಕೊನೆಯಲ್ಲಿ ಮಸಣವಿದೆ

ನೀ ಓಡುವ ಗೆಲುವಿನ ದಾರಿ ಅದೇ ಅಲ್ಲವೇ

ಸಂಕುಚಿತ ಸೀಮೆಗಳಿಂದಾಚೆ ಅವಕಾಶಗಳ ಎನಿಸಿ ನೋಡೋಣ

ಅಲ್ಲಿಗೆ ಹತ್ತಿರದ ದಾರಿ ಬಿಟ್ಟು ಸುತ್ತದ ದಾರಿ ಬಳಸಿ ನೋಡೋಣ

ಪಯಣದ ರೀತಿ ನೀತಿ ಸರಳ ಶುದ್ಧ ದಾರಿಯಾಗಿದೆ

ಇನ್ನೂ ಸ್ವಲ್ಪ ಕ್ರಮಿಸಿ ನೋಡೋಣ

ಅಲ್ಪ ವಿರಮಿಸಿ, ಶ್ರಮಿಸಿ ನೋಡೋಣ

ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಎರಡನೇ ಕಂತು)

ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಭಾಗ 2: ಇಸ್ವಿ 1989

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಮತ್ತೆ ಹುಟ್ಟಿದ್ದು, ತನ್ನ ಮಗುವಿನ ನಾಮಕರಣದ ಸಮಯದಲ್ಲಿ.  

ಅಮರ ಮತ್ತು ಉಷಾ ತಮ್ಮ ಹೆಣ್ಣುಮಗುವಿಗೆ ಹೆಸರು ಹುಡುಕುತ್ತಿದ್ದರು. ಹುಟ್ಟುವ ಮೊದಲು ಮಗು ಗಂಡೋ ಹೆಣ್ಣೋ ಗೊತ್ತಿರಲಿಲ್ಲ. ಗರ್ಭದಲ್ಲಿನ ಮಗು ಗಂಡೋ ಹೆಣ್ಣೋ ಎಂದು ಪತ್ತೆ ಮಾಡುವುದು ತನ್ನ ಆದರ್ಶದ ವಿರುದ್ಧವೆಂದು ಅಮರ ಬಗೆದಿದ್ದ (ಆಗಿನ್ನೂ ಕಾನೂನು ಅಷ್ಟು ಗಡುಸಾಗಿರಲಿಲ್ಲ) . ಮಗುವಿನ ಹೆಸರನ್ನು ಮಗು ಹುಟ್ಟುವ ಮೊದಲು ನಿರ್ಧಾರ ಮಾಡಿದರೆ ಅಪಶಕುನವೆಂದು ಉಷಾ ನಂಬಿದ್ದಳು. 

ಹೆಣ್ಣು ಮಗು ಹುಟ್ಟಿ ಮೂರು ವಾರದ ಬಳಿಕ ಗಂಡ ಹೆಂಡತಿ ಇಬ್ಬರೇ ಮಗುವಿಗೆ ಏನು ಹೆಸರು ಇಡುವುದೆಂದು ಒಂದು ಚಂದದ ಜಗಳವಾಡುತ್ತಿದ್ದರು. ಅಮರ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದ. ಉಷಾ ಒಂದು ಹೆಸರು ಹೇಳುವುದು, ಅದಕ್ಕೆ ಅಮರ ಏನಾದರೂ ತಗಾದೆ ತೆಗೆಯುವುದು, ಅಮರ ಒಂದು ಹೆಸರು ಹೇಳುವುದು, ಅದಕ್ಕೆ ಉಷಾ ಮೂಗು ಮುರಿಯುವುದು, ಅವಳು ಹೇಳಿದ ಹೆಸರನ್ನು ಚಿಕ್ಕದಾಗಿ ಕರೆದರೆ ಚೆನ್ನಾಗಿರುವುದಿಲ್ಲ ಎಂದು ಇವನು ಹೇಳುವುದು, ಇವನು ಹೇಳಿದ ಹೆಸರಿನ ಮೊದಲ ಅಕ್ಷರದ್ದೋ ಕೊನೆಯ ಅಕ್ಷರದ್ದೋ ಉಚ್ಚಾರ ಸರಿ ಇಲ್ಲ ಎಂದು ಇವಳು ಹೇಳುವುದು ನಡೆಯುತ್ತಿತ್ತು. 

ಹೀಗೆ ವಾದ ನಡೆಯುತ್ತಿರಬೇಕಾದರೆ, ಉಷಾ, `ಪ್ರೇಮಾ ಎನ್ನುವ ಹೆಸರು ಹೇಗೆ?` ಎಂದಳು. ಉಷಾ `ಓಂ` ಮತ್ತು `ನಮ್ಮೂರ ಮಂದಾರ ಹೂವೇ` ಸಿನೆಮಾಗಳಲ್ಲಿ ನಟಿಸಿದ ಪ್ರೇಮಾಳ ಫ್ಯಾನ್ ಆಗಿದ್ದಳು. ಅಮರನ ಕಣ್ಣುಗಳಲ್ಲಿ ಒಂದು ಸಾವಿರ ವ್ಯಾಟಿನ ಮಿಂಚು ಮಿನುಗಿತು, ಮುಖದಲ್ಲಿ ಒಂದು ಕ್ಷಣ ಚಹರೆಯೇ ಬದಲಾಯಿತು; ಆದರೆ ತಕ್ಷಣವೇ ಸಾವರಿಕೊಂಡು `ಉಹುಂ, ಚೆನ್ನಾಗಿಲ್ಲ, ತುಂಬಾ ಹಳೆಯ ಹೆಸರು,` ಎಂದ. ಆದರೆ ಉಷಾ ಅವನ ಕಣ್ಣುಗಳಲ್ಲಿ ಮೂಡಿದ ಮಿಂಚನ್ನು, ಮುಖದ ಚಹರೆ ಬದಲಾದದ್ದನ್ನು ಗಮನಿಸಿದ್ದಳು, ಅವನಿಗೆ ‘ಪ್ರೇಮಾ` ಎನ್ನುವ ಹೆಸರು ಇಷ್ಟವಾಗಿದೆ, ಸುಮ್ಮನೇ ತನ್ನನ್ನು ಸತಾಯಿಸಲು ಇಷ್ಟವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದುಕೊಂಡಳು. `ಪ್ರೇಮಾ ಎನ್ನುವ ಹೆಸರು ತುಂಬ ಚೆನ್ನಾಗಿದೆ, ಇವಳು ನಮ್ಮಿಬ್ಬರ ಪ್ರೇಮದ ಫಲವಲ್ಲವೇ?` ಎಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಪಟ್ಟು ಹಿಡಿದಳು. ಅಮರ ಏನೇನೋ ಸಾಬೂಬು ಹೇಳಲು ಹೋದ, ಆದರೆ ಉಷಾ ಪಟ್ಟು ಬಿಡಲಿಲ್ಲ. ಆ ಹೆಸರು ಅವನ ಅಮ್ಮನಿಗೂ ತುಂಬ ಇಷ್ಟವಾಯಿತು. ವಿಧಿಯಿಲ್ಲದೇ ಒಪ್ಪಿಕೊಂಡ. 

ಅದೇ ಸಮಯಕ್ಕೆ ಪುಟ್ಟ ಮಗು ಉಚ್ಚೆ ಮಾಡಿ ಅವನ ಪ್ಯಾಂಟನ್ನೆಲ್ಲ ಒದ್ದೆ ಮಾಡಿತು. ತಕ್ಷಣವೇ ಮಕ್ಕಳ ವಿಭಾಗ ಪೋಸ್ಟಿಂಗಿನಲ್ಲಿ ತಾನು ಮಗುವೊಂದನ್ನು ಪರೀಕ್ಷೆ ಮಾಡಲು ಎತ್ತಿಕೊಂಡಾಗ, ಆ ಮಗು ತನ್ನ ಪ್ಯಾಂಟಿನ ಮೇಲೆ ಉಚ್ಚೆ ಮಾಡಿದಾಗ ಮೂಗಿಗೆ ಬಡಿದ ವಾಸನೆ, ಆಗ ಪಕ್ಕದಲ್ಲೇ ಇದ್ದ ಪ್ರೇಮಾ ನಗು ತಡೆಯಲಾಗದೇ ಐದು ನಿಮಿಷ ನಕ್ಕಿದ್ದು ನೆನಪಾಯಿತು. 

ಅವತ್ತಿನಿಂದ ಮಗಳಿಗೆ `ಪ್ರೇಮಾ` ಎಂದು ನಾಮಕರಣ ಮಾಡುವ ದಿನದವರೆಗೂ ಪ್ರತಿದಿನ ಅಮರನಿಗೆ ಪ್ರೇಮಾಳನ್ನು ನೋಡುವ ಹಂಬಲ ಹೆಚ್ಚಾಗುತ್ತಲೇ ಹೋಯಿತು. ತನ್ನ ಬಳಿಯಿದ್ದ ಪ್ರೇಮಾಳ ಬೆಂಗಳೂರಿನ ನಂಬರಿಗೆ ಫೋನು ಮಾಡಿದ. ಯಾರೂ ಎತ್ತಲಿಲ್ಲ (ಪ್ರೇಮಾಳ ತಾಯಿ ತಂದೆ ಅಮೇರಿಕಕ್ಕೆ ಮಗಳ ಹತ್ತಿರ ಹೋಗಿದ್ದರು). 

ಭಾಗ 3: ಇಸ್ವಿ 1996

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಮತ್ತೆ ಹುಟ್ಟಿದ್ದು, ಅವನ ಎಂ.ಬಿ.ಬಿ.ಎಸ್ ರೂಮ್-ಮೇಟ್ ಮಲ್ಲಿಕಾರ್ಜುನನಿಗೆ ಫೋನು ಮಾಡಿ ಇಟ್ಟ ಮೇಲೆ.  

ಅಮರ ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ, ಪುಣೆಯಲ್ಲಿ ಪಿ.ಜಿ ಮಾಡಲು ಹೋದಾಗಲೇ ಮೈಸೂರಿನ ಅವನ ಬಹುತೇಕ ಕ್ಲಾಸ್‍ಮೇಟುಗಳೆಲ್ಲ ಅಮೇರಿಕ ಮತ್ತು ಇಂಗ್ಲಂಡಿಗೆ ಹಾರಲು ತಯಾರಿ ಮಾಡಿದ್ದರು. ಅಮರನ ಬಹುತೇಕ ಕ್ಲಾಸ್‍ಮೇಟುಗಳೆಲ್ಲ ಬೆಂಗಳೂರು ಮೈಸೂರು ಮಂಗಳೂರಿನ ಕಡೆಯವರು ಬೇರೆ. ಉತ್ತರ ಕರ್ನಾಟಕದವರು ಬೆರಳಣಿಕೆಯಷ್ಟು ಮಾತ್ರ ಇದ್ದರು. ಹೀಗಾಗಿ ಇಂಟರ್ನೆಟ್ಟು ಮೊಬೈಲುಗಳಿಲ್ಲದ ಆ ಕಾಲದಲ್ಲಿ ಜಮಖಂಡಿಯ ಅಮರ ಮೈಸೂರು ಬಿಟ್ಟು ಪಿ.ಜಿ ಮಾಡಲು ಪುಣೆ ಸೇರಿದ ಮೇಲೆ ಅವನ ಸಂಪರ್ಕದಲ್ಲಿ ಇದ್ದುದು ಗೋಕಾಕಿನಿಂದ ಬಂದಿದ್ದ ಅವನ ರೂಮ್‍ಮೇಟ್ ಆಗಿದ್ದ ಮಲ್ಲಿಕಾರ್ಜುನನ ಜೊತೆ ಮಾತ್ರ. ಮಲ್ಲಿಕಾರ್ಜುನ ಎಂ.ಬಿ.ಬಿ.ಎಸ್ ಮುಗಿಸಿ ಪಿ.ಜಿ ಮಾಡದೇ ಗೋಕಾಕಿಗೇ ಹೋಗಿ ತಂದೆಯಿಂದ ಇನ್ನೂರು ಎಕರೆ ಜಮೀನಿನ ಉಸ್ತುವಾರಿ ತೆಗೆದುಕೊಂಡು ಪ್ರಾಕ್ಟೀಸನ್ನೂ ಆರಂಭಿಸಿದ್ದ. ಅಮರ ಆರು ತಿಂಗಳು ವರ್ಷಕ್ಕೊಮ್ಮೆ ಜಮಖಂಡಿಗೆ ಬಂದಾಗ ಮಲ್ಲಿಕಾರ್ಜುನನ್ನು ತಪ್ಪದೇ ಭೇಟಿಯಾಗುತ್ತಿದ್ದ. ಮಲ್ಲಿಕಾರ್ಜುನ ಜಮಖಂಡಿಗೆ ಬರುತ್ತಿದ್ದ, ಇಲ್ಲವೇ ಅಮರ ಗೋಕಾಕಿಗೆ ಹೋಗುತ್ತಿದ್ದ. ಹೀಗೆ ಮಲ್ಲಿಕಾರ್ಜುನ ಮೈಸೂರು ಮೆಡಿಕಲ್ ಕಾಲೇಜಿನ ಏಕೈಕ ಕೊಂಡಿಯಾಗಿದ್ದ. ಅಮರ ಪಿ.ಜಿ ಮುಗಿದ ಮೇಲೆ ಪುಣೆಯಲ್ಲೇ ಪ್ರಾಕ್ಟೀಸು ಮಾಡುತ್ತಿದ್ದ.  ಉಷಾಳನ್ನು ಮದುವೆಯಾದ, ಮಗಳಾದಳು, ಪುಣೆಯಲ್ಲೇ ಮನೆ ಕಟ್ಟಿದ. 

ಇಷ್ಟೆಲ್ಲ ಕಾಲ ಕಳೆದಿದ್ದರೂ ಇನ್ನೂ ಮೊಬೈಲು ಅದೇ ತಾನೆ ಕಾಲಿಡುತ್ತಿದ್ದ, ಮನೆಯಲ್ಲಿ ಫೋನು ಇದ್ದರೆ ಶ್ರೀಮಂತರು ಎಂದು ಅಂದುಕೊಳ್ಳುವ ಕಾಲವದು. ಆದರೆ ಲ್ಯಾಂಡ್‍ಲೈನಿನಿಂದ ಎಸ್.ಟಿ.ಡಿ ಸುಲಭವಾಗಿತ್ತು ಅನ್ನುವಷ್ಟರ ಮಟ್ಟಿಗೆ ಸಂವಹನ ತಂತ್ರಜ್ಞಾನ ಮುಂದುವರೆದಿತ್ತು. ಆಸ್ಪತ್ರೆಯ ಕೆಲಸ ಮುಗಿಸಿ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದಂತೆಯೇ, ಹೆಂಡತಿ ಉಷಾ ಮಲ್ಲಿಕಾರ್ಜುನ ಫೋನ್ ಮಾಡಿರುವುದಾಗಿಯೂ ಯಾವ ವಿಷಯನ್ನು ಹೇಳದೇ ಸುಮ್ಮನೆ ಮಾಡಿದ್ದೇನೆಂದು ಹೇಳಿ ಫೋನು ಇಟ್ಟನೆಂದೂ ಹೇಳಿದಳು. ಮಲ್ಲಿಕಾರ್ಜುನ ಹಾಗೆಲ್ಲ ಸುಮ್ಮಸುಮ್ಮನೇ ಫೋನು ಮಾಡುವವನಲ್ಲವೇ ಅಲ್ಲ. ಕೂಡಲೇ ಮಲ್ಲಿಕಾರ್ಜುನನಿಗೆ ಫೋನಿಸಿದ. 

`ಜುಲೈ ೧೫ ನೇ ತಾರೀಖು ಮೈಸೂರಿನಲ್ಲಿ ನಮ್ಮ ಎಂಬಿಬಿಎಸ್ ಬ್ಯಾಚಿನ ಇಪ್ಪತ್ತನೇ ವರ್ಷದ ಪುನರ್ಮಿಲನವಿದೆ, ನಾನು ಹೋಗುತ್ತಿದ್ದೇನೆ ಸುಕುಟುಂಬ ಸಮೇತ, ನೀನೂ ಅಷ್ಟೇ, ತಪ್ಪಿಸಬೇಡ, ಫ್ಯಾಮಿಲಿ ಜೊತೆ ಬಾ`, ಎಂದು ಮಲ್ಲಿಕಾರ್ಜುನ. ಫೋನು ಇಡುತ್ತಿದ್ದಂತೆಯೇ ಅಮರನಿಗೆ ಪ್ರೇಮಾಳನ್ನು ನೋಡುವ ಆಸೆ ಮತ್ತೊಮ್ಮೆ ಮೂಡಿತು. ಅಮೇರಿಕದಲ್ಲಿರುವ ಪ್ರೇಮಾಳಿಗೆ ಈ ವಿಷಯ ಗೊತ್ತಿದೆಯೋ ಇಲ್ಲವೋ, ಗೊತ್ತಾದರೂ ಅವಳು ಬರುತ್ತಾಳೋ ಇಲ್ಲವೋ ಎಂದು ಪ್ರಶ್ನೆಗಳೆದ್ದವು. ಕೂಡಲೇ ಮತ್ತೆ ಮಲ್ಲಿಕಾರ್ಜುನನಿಗೆ ಫೋನು ಮಾಡಿ, ಯಾರು ಆರ್ಗನೈಸ್ ಮಾಡುತ್ತಿದ್ದಾರೆ, ಯಾವ ಹೊಟೇಲಿನಲಿ ಇಳಿದುಕೊಳ್ಳುವ ವ್ಯವಸ್ಥೆಯಾಗಿದೆ, ಎಷ್ಟು ದುಡ್ಡು, ಎಷ್ಟು ದಿನ, ಯಾರು ಯಾರು ಬರುತ್ತಿದ್ದಾರೆ ಎಂದೆಲ್ಲ ಕೇಳಿ ಒಂದಿಷ್ಟು ವಿಷಯ ತಿಳಿದುಕೊಂಡ. ಅಮೇರಿಕಕ್ಕೆ ವಲಸೆ ಹೋದ ಕೆಲವು ಗೆಳೆಯರು ಬರುತ್ತಾರೋ ಇಲ್ಲವೋ ತಿಳಿದುಕೊಂಡ. ಅಮೇರಿಕ ಮತ್ತು ಇಂಗ್ಲಂಡಿನಲ್ಲಿ ಇರುವವರಿಗೆ ರಜೆ ಇರುವ ಸಮಯ ನೋಡಿಯೇ ಜುಲೈನಲ್ಲಿ ಇಟ್ಟುಕೊಂಡಿರುವುದಾಗಿ ಮಲ್ಲಿಕಾರ್ಜುನ ಹೇಳಿದ. ನೇರವಾಗಿ ಪ್ರೇಮಾಳಿಗೆ ಈ ವಿಷಯ ಗೊತ್ತೋ ಇಲ್ಲವೋ ಕೇಳಲು ಹೋಗಲಿಲ್ಲ, ಏಕೆಂದರೆ ಮಲ್ಲಿಕಾರ್ಜುನನಿಗೂ ಕೂಡ ತನಗೆ ಆ ಕಾಲದಲ್ಲಿ ಪ್ರೇಮಾಳನ್ನು ಕಂಡರೆ ಇಷ್ಟ ಎಂಬ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲವಲ್ಲ. 

ಉಷಾ, `ಏನು ಸಮಾಚಾರ? ನಿನ್ನ ಫ್ರೆಂಡಿಗೆ ಫೋನು ಮಾಡಿ ತುಂಬ ಖುಷಿಯಲ್ಲಿ ಇದ್ದೀಯಾ?` ಎಂದು ಅಮರನನ್ನು ಕೇಳಿದಳು. 

ಅಮರ ಖುಷಿಖುಷಿಯಲ್ಲಿ ಮೈಸೂರಿನಲ್ಲಿ ನಡೆಯುವ `ಪುನರ್ಮಿಲನ`ದ ಬಗ್ಗೆ ಹೇಳಿದ. ಎಂದೂ ಜಾಸ್ತಿ ಮಾತಾಡದ ಅಮರ, ಊಟ ಮಾಡುತ್ತ, ಊಟವಾದ ಮೇಲೆ ತನ್ನ ಎಂ.ಬಿ.ಬಿ.ಎಸ್ ದಿನಗಳ ಬಗ್ಗೆ, ಗುರುಗಳ ಬಗ್ಗೆ, ಕಾಲೇಜಿನ ಬಗ್ಗೆ, ಮೈಸೂರಿನ ರಸ್ತೆ-ಗಲ್ಲಿಗಳ ಬಗ್ಗೆ, ಹೊಟೇಲುಗಳ ಬಗ್ಗೆ ಕಥೆಗಳನ್ನು ಹೇಳುತ್ತ ಹೋದ. ಮಲ್ಲಿಕಾರ್ಜುನ ಕುಟುಂಬ ಸಮೇತ ಬರುತ್ತಿರುವುದಾಗಿ ಹೇಳಿದ. ಉಷಾ ಇದನ್ನೆಲ್ಲ ಆಗಲೇ ನೂರಾರು ಸಲ ಕೇಳಿದ್ದಳು. ಆದರೂ ಈಗ ಹುಟ್ಟಿರುವ ಉತ್ಸಾಹಕ್ಕೆ ಏಕೆ ತಣ್ಣೀರೆರೆಯುವುದೆಂದು ಕೇಳಿಸಿಕೊಂಡಂತೆ ನಟಿಸಿದಳು. 

ಉಷಾ, `ನಾನೂ ಕೂಡ ಮೈಸೂರು ನೋಡಿ ಯಾವ ಕಾಲವಾಯಿತು? ಮಗಳು ಕೂಡ ಮೈಸೂರು ನೋಡಿಲ್ಲ,` ಎಂದಳು. 

ಅಮರ ಮಾರನೆಯ ದಿನವೇ ಪುಣೆಯಿಂದ ಬೆಂಗಳೂರಿಗೆ ಮೂವರಿಗೂ ರೈಲು ರಿಸರ್ವೇಶನ್ ಮಾಡಿದ.  

ಅಂದಿನಿಂದ ಅಮರನಿಗೆ ಪ್ರೇಮಳನ್ನು ನೋಡುವ ಆಸೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಇದುವರೆಗೂ ಒಂದೇ ಒಂದು ಸಲವೂ ಪ್ರೇಮದ ಸುಳಿವು ಬಿಟ್ಟುಕೊಡದ, ತುಟಿ ಸೋಕದ, ಮೈಮುಟ್ಟದ ಪ್ರೇಮಾಳನ್ನು ನೋಡುವ ಕಾತರ ಇಷ್ಟು ವರ್ಷವಾದ ಮೇಲೂ ಮತ್ತೆ ಚಿಗುರಿ ಪೆಡಂಭೂತದಂತೆ ಬೆಳೆಯುತ್ತಿರುವುದನ್ನು ನೋಡಿ ಅಮರನಿಗೆ ದಿಗಿಲಾಯಿತು, ಅದೇ ಸಮಯಕ್ಕೆ ತನ್ನ ವಯಸ್ಸು ಇಪ್ಪತ್ತು ವರ್ಷ ಹಿಂದೆ ಚಲಿಸುತ್ತಿರುವಂತೆ ಅನಿಸಿ ರೋಮಾಂಚನವೂ ಆಯಿತು.

(ಮುಂದುವರೆಯುವುದು…)