ಯುಗಾದಿ ಎನ್ನುವ ಪ್ರಬುದ್ಧ ಹಬ್ಬ- ಡಾ. ಪ್ರೇಮಲತ ಬಿ.

“ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ“. ವರಕವಿ ದ.ರಾ.ಬೇಂದ್ರೆಯವರ ಈ ಕವಿತೆ ವಸಂತಮಾಸದ ಸೊಗಸು, ಸೌಂದರ್ಯದಲ್ಲಿ ತೊನೆಯುತ್ತಿರುವ ಪ್ರಕೃತಿಯನ್ನು ನೋಡಿದಾಗಲೆಲ್ಲ ನನ್ನ ನೆನಪಿಗೆ ಬರುತ್ತದೆ. ವಸಂತಮಾಸದ ಜೊತೆಗೇ ಬರುತ್ತದೆ ಯುಗಾದಿ ಹಬ್ಬ. ಈ ಹಬ್ಬವನ್ನು ನಾವೆಲ್ಲ ತಪ್ಪದೇ ಆಚರಿಸುತ್ತಾ ಬಂದಿದ್ದರೂ, ಈ ಹಬ್ಬದ ಹಿಂದಿರುವ ಮಾಹಿತಿ ಬಹಳ ಮಂದಿಗೆ ತಿಳಿದಿರುವುದಿಲ್ಲವೆಂದು ನನ್ನ ಊಹೆ. ಈ ವಾರದ ಲೇಖನದಲ್ಲಿ ಪ್ರೇಮಲತಾರವರು, ನಮ್ಮ ನಾಡಿನ ಹಬ್ಬಗಳಲ್ಲಿ ಯುಗಾದಿಗಿರುವ ಪ್ರಭುದ್ಧ ಪಾತ್ರದ ಬಗೆಗೆ ನಮಗೆ ತಿಳಿಸಿಕೊಟ್ಟಿದ್ದಾರೆ. ಕೋವಿಡ್ ನ ಕರಾಳ ಕತ್ತಲಲ್ಲಿ ನಲುಗಿ, ನುಣುಚಿಕೊಳ್ಳಲು ಹೆಣಗುತ್ತಿರುವ ಮಾನವನ ಇಂದಿನ ಹೋರಾಟಕ್ಕೆ, ವಿವೇಕ, ಜ್ನಾನಗಳನ್ನು ಪ್ರತಿನಿಧಿಸುವ ಈ ಪ್ಲವ ಸಂವತ್ಸರ ವಿಜಯವನ್ನು ತರಲಿ ಮತ್ತು ನಮ್ಮ, ನಿಮ್ಮೆಲ್ಲರ ಬಾಳಿನಲ್ಲಿ ಹರುಷದ ಹೊನಲನ್ನು ಹರಿಸಲೆಂದು ಹಾರೈಸುತ್ತೇನೆ – ಸಂ

ಯುಗಾದಿ ಎನ್ನುವ ಪ್ರಬುದ್ಧ ಹಬ್ಬ

ಯುಗಾದಿ ಅಂದರೆ…. ಹೊಸವರ್ಷದ ಆರಂಭ. ಜಗತ್ತು ಮುಂದುವರಿಯಬೇಕೆಂದರೆ ಎಲ್ಲವೂ ಮರಳಿ ಸಂಭವಿಸಬೇಕು. ಕಾಲದ ಹುಟ್ಟು, ಪ್ರಕೃತಿಯ ಚೈತನ್ಯ, ಮನುಷ್ಯನ ಸಂಕಲ್ಪ, ಬದುಕು, ಬೆಳೆಗಳು ಎಲ್ಲವೂ ಹೊಸ ಕುಡಿಗಳೊಂದಿಗೆ ಮರಳಿ ಹುಟ್ಟಬೇಕು, ಹೊಸತನ್ನು ಪ್ರತಿಪಾದಿಸಬೇಕು.  ಪ್ರಕೃತಿಯ ಚಿಗುರು,ಹೂ,ಹೊಸ ಕುಹೂ,ಸಂತೋಷ, ಸಂಭ್ರಮ ಇತ್ಯಾದಿ ಎಲ್ಲ ಹೊಸತನ್ನೂ ಕಾಲದಲ್ಲಿ  ಗುರುತಿಸಿ ಆ ಸಂತೋಷವನ್ನು ಆಚರಿಸುತ್ತ, ಬರುವ ವರ್ಷದ ದಿವಸಗಳೆಲ್ಲ , ಸಂತೋಷವಾಗಿ, ಸಮತೋಲಿತವಾಗಿ ಕಳೆಯಲೆಂದು ಆಶಿಸಿ ಸಮಾಜದ ಜನರೆಲ್ಲ ಒಟ್ಟುಗೂಡಿ ಆಚರಿಸುವ ಹಬ್ಬವೇ ಯುಗಾದಿ. ಈ ಹಂಬಲದೊಂದಿಗೆ ಮತ್ತೆ ಮರಳಿ ಬರುತ್ತಿದೆ ಇದೋ ಈ ಯುಗಾದಿಯ ಸಂಭ್ರಮ.

ಮಾರ್ಚ್ ೨೦ ರಂದು ನಾವು ಇಲ್ಲಿನ ಕ್ಯಾಲೆಂಡರಿನ ಪ್ರಕಾರ ಅಧಿಕೃತವಾಗಿ ವಸಂತ ಋತುವಿಗೆ ಕಾಲಿಟ್ಟಿದ್ದೇವೆ. ಅದರ ಮೊದಲಲ್ಲೇ ಬರುವ ಯುಗಾದಿಗೆ ಸರಿಯಾಗಿ ಪ್ರಕೃತಿ ಹೊಸ ಹಸಿರು-ಚಿಗುರಿನ ಅಂಗಿತೊಟ್ಟು ಸಂಭ್ರಮಿಸುವ ಮುದ್ದು ಮಗುವೊಂದರಂತೆ ಕಂಗೊಳಿಸುವುದು, ನಮ್ಮಲ್ಲಿ ಸಂಭ್ರಮದ ಹೊಸ ಚೈತನ್ಯವನ್ನು ತುಂಬುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಬದುಕುವ ನಮ್ಮ ಸೌಭಾಗ್ಯವೂ ಹೌದು.

ಭಾರತದಲ್ಲಿ ಜನರು ಬೇಸಿಗೆಯ ದಿನಗಳಲ್ಲಿದ್ದರೆ ಇಲ್ಲಿ ನಾವು ಯುಗಾದಿಯ ಎಳೆ ಬಿಸಿಲಿನ ನವೋಲ್ಲಾಸಕ್ಕೆ ತೆರೆದುಕೊಳ್ಳುತ್ತಿರುತ್ತೇವೆ.

ಹಬ್ಬಗಳು ಸಮಾಜದ ಅತಿ ಮುಖ್ಯ ಅಂಗಗಳು. ಹಬ್ಬಗಳ ಇರುವು ಸಮುದಾಯದ ಒಗ್ಗಟ್ಟನ್ನು, ಆರೋಗ್ಯದ ಸುಸ್ಥಿತಿಯನ್ನು ಬಿಂಬಿಸುತ್ತದೆ. ಹಬ್ಬಗಳು ಸಮಾಜದ ಜನರ ಚೈತನ್ಯವನ್ನು ಒಗ್ಗೂಡಿಸಿ, ಸಮುದಾಯದಲ್ಲಿ ಸಾರ್ಥಕತೆಯನ್ನು ತುಂಬುತ್ತವೆ.ನಮ್ಮ ನಾಡಿನ ಮತ್ತು ದೇಶದ ಬಹುತೇಕ ಹಿಂದೂ ಹಬ್ಬಗಳು ದೇವರ ಕಥೆ-ಉಪಕಥೆಗಳ ಆಧಾರದ ಮೇಲೆ ಸೃಷ್ಟಿಯಾದವು.ಇವುಗಳ ಜೊತೆ,ಪ್ರಕೃತಿಯ ಬದಲಾವಣೆಗಳ ಆಧಾರದ ಮೇಲೂ ಕೆಲವು ಹಬ್ಬಗಳು ಸೃಷ್ಟಿಯಾಗಿವೆ. ಕೃಷಿಯನ್ನು ಅಧರಿಸಿದ ರೈತಾಪಿ ಹಬ್ಬಗಳೂ ಇವೆ.ಆದರೆ ಸೃಷ್ಟಿಲೋಕದ ಕಾಲ ಮಾಪನವನ್ನು ಆಧರಿಸಿ ಬರುವ ಕೆಲವೇ ಹಬ್ಬಗಳಲ್ಲಿ ಯುಗಾದಿ ಅತ್ಯಂತ ಮುಖ್ಯವಾದ್ದು.

ಸೂರ್ಯ-ಚಂದ್ರರ ಪಥ ಗತಿಯನ್ನು ಅನುಸರಿಸಿ ಧರಿತ್ರಿ ಹೊಸ ಉಡುಗೆ ತೊಡುವ ಚೈತ್ರ ಮಾಸಕ್ಕೆ ಮತ್ತು ವಸಂತ ಋತುವಿಗಂತೂ ವರ್ಷದಲ್ಲಿ ಇನ್ನಿಲ್ಲದ ಪ್ರಾಧಾನ್ಯತೆ. ಭಾರತವೇ ಅಲ್ಲದೆ ಇತರೆ ದೇಶಗಳಲ್ಲೂ ಬೇರೆ ಬೇರೆ ಹೆಸರಿನಲ್ಲಿ ಈ ವಸಂತ ಋತುವಿಗೆ ಸ್ವಾಗತ ಸಿಗುತ್ತದೆ. ಅದರಿಂದಲೇ ಹೊಸವರ್ಷದ ಆರಂಭವೆಂದು ನಮ್ಮ ಹಿರಿಯರು ನಂಬಿದ ಸಂಪ್ರದಾಯವನ್ನೇ ನಾವು ಯುಗಾದಿ ಮತ್ತು ಇತರೆ ಹೆಸರುಗಳಲ್ಲಿ ಹಬ್ಬವಾಗಿ ಆಚರಿಸುತ್ತೇವೆ.

 ಚಳಿಗಾಲದ ಕತ್ತಲೆ, ಕಡಿಮೆ ಬೆಳಕು, ಸಣ್ಣ ದಿನಗಳನ್ನು ತೊಡೆದು ಚೈತ್ರ ಮಾಸ ತರುವ ಉಲ್ಲಾಸ ಅವರ್ಣನೀಯವಾದ್ದು. ಈ ಸಂಭ್ರಮದ ದಿಬ್ಬಣ ಶುರುವಾಗುವುದೇ ಯುಗಾದಿಯ ದಿನ. ನವೋಲ್ಲಾಸ, ಹೊಸ ಚಿಗುರಿನ ಜೊತೆ ಆಗ ತಾನೆ ಹುಟ್ಟಿ ಚಂಗನೆಂದು ನೆಗೆವ ಸಣ್ಣ ಮರಿಗಳಿಂದ ಹಿಡಿದು ,ಪುಟ್ಟ ಮಕ್ಕಳು, ಮುದುಕರು ಎಲ್ಲರೂ ಯುಗಾದಿಯ ಸಮಯದಲ್ಲಿ ನವ ಮುನ್ನುಡಿಯನ್ನು ಬರೆಯುತ್ತಾರೆ.ಸುತ್ತಲಿನ ಪರಿಸರದಲ್ಲೆಲ್ಲ ಪ್ರಸನ್ನತೆಯನು ಹರಡಿ, ಹೊಸ ಉಲ್ಲಾಸವನ್ನು ತುಂಬಿ ಬದುಕನ್ನು ಮತ್ತೆ ಪ್ರಚೋದಿಸುವ ಈ ಕಾಲವನ್ನು ಯುಗದ ಆದಿಯೆಂದೂ, ಹೊಸವರ್ಷವೆಂದೂ ನಮ್ಮ ಸಮಾಜ ಗುರುತಿಸಿರುವುದರಲ್ಲಿ ಅಪಾರವಾದ ಅರ್ಥ ಅಡಗಿದೆ.

 ಪ್ರತಿ  ದಿನವೂ ಹೊಸತೇ ಆದರೂ, ಕಾಲವನ್ನು ಗುಣಿಸುವವರು ಹಲವಾರು ವರ್ಷಗಳನ್ನು ಒಂದು ಕಾಲವಧಿಯಡಿ ಗುರುತಿಸಿ ಅದನ್ನು ಸಂವತ್ಸರವೆಂದು ಕರೆದಿದ್ದಾರೆ. ಈ ಪ್ರತಿ ಸಂವತ್ಸರದಲ್ಲಿ 60 ವರ್ಷಗಳನ್ನು ಕೂಡಿಹಾಕುತ್ತಾರೆ.ಈ ಗಣನೆಯ ಪಂಚಾಂಗದ ಪ್ರಕಾರ ವರ್ಷದ ಮೊದಲ ತಿಂಗಳೇ ಚೈತ್ರಮಾಸ. ಸಂಸ್ಕೃತ ಪದವಾದ ಯುಗ (ಕಾಲ) ಆದಿ(ಶುರುವಾತು) ಇನ್ನೂ ಕ್ಲಿಪ್ತವಾಗಿ ಹೇಳಬೇಕೆಂದರೆ ಕಲಿಯುಗದಲ್ಲಿ ಮಾತ್ರ ಆರಂಭವಾದ ಹಬ್ಬ. ಕಲಿಯುಗ ಶುರುವಾದ್ದು ಕೃಷ್ಣ ಈ ಲೋಕವನ್ನು ಬಿಟ್ಟು ತೆರಳಿದ ಬಳಿಕ. ಮಹರ್ಷಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ “ ಯೆಸ್ಮಿನ್ ಕ್ರಿಷ್ಣೋ ದಿವಂವ್ಯತಃ, ತಸೇವ ಪ್ರತಿ ಪನ್ನಂ ಕಲಿಯುಗಃ “ ಎನ್ನುತ್ತಾರೆ. ಈ ಕಲಿಯುಗ ಶುರುವಾದ್ದು 3102 ಬಿ.ಸಿ. ಯ ಫೆಬ್ರವರಿ 17-18 ನೇ ತಾರೀಖಿನಂದಂತೆ.

ಗೌತಮೀಪುತ್ರ ಶತಕರ್ಣಿ, ಶತವಹಾನದ ರಾಜ  ವಸಂತಕಾಲದ ಈ ಮಹತ್ತನ್ನು ಗುರುತಿಸಿ ಯುಗಾದಿಯ ಆಚರಣೆಯನ್ನು ಶುರುಮಾಡಿದ ಎಂದು ನಂಬುವ ಚರಿತ್ರಕಾರರಿದ್ದಾರೆ. ಇದೇ ರಾಜವಂಶಜರು ಕರ್ನಾಟಕ, ಆಂಧ್ರಪ್ರದೇಶ  ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಆಳಿದ ಕಾರಣ ಈ ಹಬ್ಬವನ್ನು ಮುಖ್ಯವಾಗಿ ಈ ಮೂರು ರಾಜ್ಯಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರ ದಲ್ಲಿ ಇದನ್ನು ‘ಗುಡಿಪಾಡ್ವ’ ಎಂದು ಕರೆಯುತ್ತಾರೆ.ಇದೇ ದಿನವನ್ನು ಉತ್ತರಭಾರತದವರು ‘ಚೈತ್ರ ನವರಾತ್ರಿ ‘ ಹಬ್ಬದ ಮೊದಲ ದಿನವಾಗಿ ಆಚರಿಸುತ್ತಾರೆ. ರಾಜಾಸ್ಥಾನದಲ್ಲಿ ‘ತಪ್ನಾ’ ಎನ್ನುವ, ಸಿಂಧಿಗಳು ‘ಚೇತಿ ಚಂದ್’ ಎನ್ನುವ ಮಣಿಪುರದವರು ‘ಸಜಿಬು ನೊನ್ಗ್ಮ ಪನ್ಬ’ ಎನ್ನುವ ಹೆಸರಿನ ಹಭ್ಭಗಳನ್ನು ಹೊಸವರ್ಷದ ಹೆಸರಲ್ಲಿ ಇದೇ ದಿನ ಆಚರಿಸಿದರೆ,  ಬಾಲಿ ಮತ್ತು ಇಂಡೋನೇಶಿಯಾದಲ್ಲಿರುವ ಹಿಂದೂಗಳು ‘ನ್ಯೇಪಿ’ ಎನ್ನುವ ಹೆಸರಲ್ಲಿ ಯುಗಾದಿಯ ತತ್ವ ಇರುವ ಹಬ್ಬವನ್ನು ಆಚರಿಸುತ್ತಾರೆ.

‘ಚಂದ್ರಮಾನ ಯುಗಾದಿ’ ಮತ್ತು ‘ಸೂರ್ಯಮಾನ ಯುಗಾದಿ’ ಗಳೆಂದು ಎರಡು ಬಗೆಯನ್ನು ಯುಗಾದಿಯಲ್ಲಿ ಜನರು ಆಚರಿಸಿದರೂ ಚೈತ್ರ ಶುದ್ದ ಪಾಡ್ಯಮಿ ಸೂಚಿಸುವುದು ಚಂದ್ರಮಾನ ಯುಗಾದಿಯನ್ನು. ಪ್ರಕಾಶಮಯವಾದ ಚೈತ್ರದ ಆಮೇಲಾರ್ಧದ ಮೊದಲನ್ನು ಯುಗಾದಿಯ ದಿನ ಸೂಚಿಸುತ್ತದೆ.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ‘ಬಾರ್ಹಸ್ಪತ್ಯಮಾನ’ ಎಂಬ ಆಚರಣೆಯೂ ಭಾರತದಲ್ಲಿ ಚಾಲ್ತಿಯಲ್ಲಿದೆ.

ಪ್ರಕೃತಿಯ ನಾಲ್ಕು ಕಾಲಗಳು ತಮ್ಮಿಂದ ತಾವೆ ಪುನರಾವರ್ತಿತವಾಗುತ್ತಲೇ ಬಂದಿವೆ. ಆದರೆ ಮಾನವನಿಗೆ ಅದನ್ನು ಅಳೆಯುವ ಬಯಕೆ. ಆಯಾ ಕಾಲಗಳಲ್ಲಿ ನಡೆವ ಪ್ರಕೃತಿಯ ವಿದ್ಯಮಾನಗಳನ್ನು ಗಮನಿಸಿ , ಅದಕ್ಕೆ ಸೂಕ್ತ ಹೆಸರಿಟ್ಟು ಅದರ ಸಂಭ್ರಮಗಳಲ್ಲಿ ತಾನು ಕೂಡ ಭ್ರಮಿತನಾಗುವ ಬಯಕೆ. ಈ ಪರಿಭ್ರಮಣೆಯ ಪರಿಣಾಮವೇ ಯುಗಾದಿ ಹಬ್ಬದ ಆಚರಣೆಗೆ ಕಾರಣ. ಮನುಜನಲ್ಲಿ ಕೂಡ ಒಂದು ರೀತಿಯಲ್ಲಿ ಭಾವ ಪುನರುತ್ಥಾನವಾಗುವ ಕಾಲವಿದು. ಜೀವನದ ಅನುಭವವಿರುವ ಹಿರಿಯರು, ಬದುಕನ್ನು ಅದರ ನಿಜರೂಪದಲ್ಲಿ ನೋಡಿದವರು ಕಾಲದಲ್ಲಿ ಒಳಿತೂ-ಕೆಡುಕೂ ಇರುವುದನ್ನು ಗಮನಿಸಿ ಅದನ್ನು ಜೀವನದ ಬೇವು (ಕಹಿ) ಬೆಲ್ಲ (ಸಿಹಿ)ಗಳಲ್ಲಿ ಗುರುತಿಸಿದ್ದಾರೆ. ಅವೆರಡೂ ಸಮನಾಗಿದ್ದಲ್ಲಿ ಬದುಕು ಸಮತೋಲಿತವಾ್ಗಿರಬಲ್ಲದು ಎಂಬ ಅಪಾರವಾದ ಅರಿವನ್ನು ತೋರುತ್ತ, ಅಷ್ಟನ್ನಾದರೂ ಅನುಗ್ರಹಿಸು ಎಂಬ ಬೇಡಿಕೆಯನ್ನು ದೇವನ ಮುಂದಿಡುತ್ತ ಯುಗಾದಿಯಲ್ಲಿ ದೇವರನ್ನು ಅನುನಯಿಸುತ್ತಾರೆ. ಜನ ಸಮುದಾಯಗಳಲ್ಲಿ, ಸಮಾಜದಲ್ಲಿ, ಕುಟುಂಬಗಳಲ್ಲಿ ,ಪ್ರಕೃತಿಯಲ್ಲಿ ವರ್ಷದ ಕಾಲಾವಧಿಯಲ್ಲಿ ಆಗಿರಬಹುದಾದ ಹಲವು ಒಳ್ಳೆಯ-ಕೆಟ್ಟ ಘಟನೆಗಳು ಬದುಕಿನ ಸಹಜವಾದ ಕ್ರಿಯೆ ಎಂದು ಸಾರುವಲ್ಲಿ ಅಪಾರ ಪ್ರಬು್ದ್ಧತೆಯನ್ನು ಮನುಜ ಈ ಹಬ್ಬದ ಮೂಲಕ ಮೆರೆದಿದ್ದಾನೆ.

ಯುಗಾದಿಯಲ್ಲಿ ಇದೇ ತಿಳಿವಿನ ಹೂರಣವನ್ನು ಒಬ್ಬಟ್ಟಿನಲ್ಲಿಟ್ಟು ತಟ್ಟಿದ್ದಾನೆ. ಪುಳಿಯೋಗರೆಯ ಹಿತವಾದ ಹುಣಸೆ ಹುಳಿಯಲ್ಲಿ,ಮಸಾಲೆಯಲ್ಲಿ ಸವಿದಿದ್ದಾನೆ. ಮಾವನ ಕಾಯಿ ಚಿತ್ರಾನ್ನವೂ ಜನಪ್ರಿಯ. ಆದರೆ ಯುಗಾದಿಯ ಸಾಂಕೇತಿಕ ಅಡುಗೆ ಅಂದರೆ ಉಗಾದಿ ಪಚಡಿ!

ಬೆಲ್ಲ, ಹಸಿಮೆಣಸಿನಕಾಯಿ,ಬೇವಿನೆಲೆ, ಹುಣಿಸೇಹಣ್ಣು, ಉಪ್ಪನ್ನು ಬಳಸಿ ಮಾಡುವ ಈ ನೈವೇದ್ಯದಡುಗೆಯಲ್ಲಿ ಬದುಕಿನ ಸುಖ,ದುಗುಡ, ಕಹಿ,ಕೋಪ,ಮತ್ತು ಆಶ್ಚರ್ಯ ಭಾವಗಳನ್ನು ಮೇಳೈಸಿ ಮತ್ತೆ  ಬದುಕು ಹೇಗೆ ಎಲ್ಲ ಅನುಭವಗಳ ಮಿಷ್ರಣ ಎನ್ನುವುದನ್ನು ಸಾಬೀತುಮಾಡಿ  ಜನರಿಗೆ ಸರಳವಾಗಿ ಅನುಭವಕ್ಕೆ ಬರುವಂತೆ ಮಾಡಿ, ಹೀಗೇ ಬದುಕನ್ನು ಎಲ್ಲ ರುಚಿಗಳಲ್ಲಿ ಅಸ್ವಾದಿಸಿ ಎನ್ನುವ ಕರೆಯನ್ನು ಯುಗಾದಿ ಹಬ್ಬದ ಮೂಲಕ ನೀಡಿದ್ದಾನೆ.ಈ ನಿಟ್ಟಿನಲ್ಲಿ ಯುಗಾದಿ ಬರೀ ಹೊಸವರ್ಷದ ಆಚರಣೆಯನ್ನು ಪ್ರತಿಪಾದಿಸುವ ಹಬ್ಬಮಾತ್ರವಾಗಿರದೆ ಬದುಕಿನ ಅನುಭವವನ್ನು ಸಮಚಿತ್ತನಾಗಿ ಸ್ವೀಕರಿಸಿರುವ ಮನುಷ್ಯನ ಪ್ರಬುದ್ಧತೆಯ ಶಿಖರ ಶೃಂಗವನ್ನು ತಿಳಿಸುವ ಹಬ್ಬವಾಗಿದೆ. ಬದುಕಲ್ಲಿ ಕಹಿ ಮಿಳಿತವಾಗಿದ್ದರೂ ಇನ್ನೆಲ್ಲ ಅನುಭವಗಳನ್ನು ಸೇರಿಸಿ ನೋಡಿದಲ್ಲಿ ಹೇಗೆ ಇದು ಸರಳವಾಗಿ ಸ್ವೀಕೃತವಾಗಬಲ್ಲುದು  ಎಂಬ ಸಂದೇಶವನ್ನು ಸಾರುವ ಹಬ್ಬವಿದು.

ಈ ಹಬ್ಬಕ್ಕೆ ದೇವರ ಕಥೆಗಳ ಜೋಡನೆ ಮಾಡುವ ಪ್ರಯತ್ನವೂ ಆಗಿವೆ. ಕೆಲವರು ಇದನ್ನು ಆದಿಕರ್ತ ಬ್ರಹ್ಮನು ಸೃಷ್ಟಿಯನ್ನು ಶುರುಮಾಡಿದ ಮೊದಲ ದಿನವೆಂದು ನಂಬುತ್ತಾರೆ. ಈ ದಿನ ಮನೆಗಳು ಇನ್ನಿಲ್ಲದಂತೆ ಬೇವು ಮತ್ತು ಮಾವಿನೆಲೆಗಳಿಂದ ಅಲಂಕೃತವಾಗುವುದನ್ನು ಗಮನಿಸಿದ್ದೀರಷ್ಟೆ? ಇದಕ್ಕೂ ಒಂದು ಉಪಕಥೆಯಿದೆ. ಆ ಪ್ರಕಾರ  ಗಣೇಶ ಮತ್ತು ಕಾರ್ತಿಕೇಯರಿಬ್ಬರಿಗೂ ಮಾವು ಎಂದರೆ ಅಪಾರ ಪ್ರೀತಿ. ಮಾವಿನ ಚಿಗುರು ಶುರುವಾಗುವುದು ಈ ವಸಂತದ ಸಮಯದಲ್ಲೇ.ಅಪತ್ತುಗಳ ನಿವಾರಕ ಗಣೇಶನನ್ನು ಈ ಸಮಯದಲ್ಲಿ ಪೂಜಿಸುವ ಪರಿಪಾಠವಿರುವುದರಿಂದ ಈ ಹಬ್ಬಕ್ಕೆ ಮಾವಿನೆಲೆಯ ತೋರಣ ಪ್ರತಿ ಮನೆಯನ್ನು ಸಿಂಗರಿಸುತ್ತದೆ. ಹೀಗೆ ಮಾಡಿರೆಂದು ಕಾರ್ತಿಕೇಯನು ಜನರಿಗೆ ಹೇಳಿದನೆಂಬ ಪ್ರತೀತಿಯಿದೆ.

ಬೇವು ಬೆಲ್ಲವನ್ನು ತಿಂದರೆ ದೇಹವು ವಜ್ರಕಾಯವಾಗಬಲ್ಲುದು ಎಂದು ಕೂಡ ಕೆಲವರು ಬರೆದಿದ್ದಾರೆ. ಹಾಗೆಂದೇ ಗಣೇಶನನ್ನು ಸ್ತುತಿಸುವ ಒಂದು ಶ್ಲೋಕ ಹೀಗೆ ಹೇಳುತ್ತದೆ.”ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ “ ಎಂದು ನಂಬಿ ಬೇವು ಬೆಲ್ಲವನ್ನು ತಿಂದು, ಇತರರಿಗೂ ಹಂಚುತ್ತಾರೆ.

ಸಂಪ್ರದಾಯದ ಪ್ರಕಾರ ಯುಗಾದಿಯ ಆಚರಣೆ  ಎಣ್ಣೆ ಸ್ನಾನ,ಪೂಜೆ, ಪ್ರಾರ್ಥನೆ, ಹೋಳಿಗೆ ಊಟ, ಹೊಸಬಟ್ಟೆ, ಹೊಸ ಆಶಯಗಳು, ಇತರರಿಗೆ ಒಳಿತನ್ನು ಕೋರುವುದನ್ನು ಬಿಟ್ಟರೆ ಮತ್ತೇನು ವಿಶೇಷವಿಲ್ಲ. ಆದರೆ, ಹಳ್ಳಿಗಳಲ್ಲಿ ಹಾಗೂ ಇನ್ನೂ ಸಂಪ್ರದಾಯ, ಆಚರಣೆ ಉಳಿಸಿಕೊಂಡಿರುವ ಅಗ್ರಹಾರಗಳಲ್ಲಿ,ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಕುಲದೇವರನ್ನೂ,ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ. ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.

ಪ್ರತಿದೇಶದಲ್ಲೂ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಮಾರ್ಪಾಟು ಮಾಡಿಕೊಳ್ಳುವುಸು ಸಹಜವೇ.ಯುಗಾದಿಯ ಹಬ್ಬವನ್ನು ಕೂಡ ಇದು ಹೊರತುಪಡಿಸಿಲ್ಲ. ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಯ ಭಾಗಗಳಲ್ಲೊಂದು.ಹಾಗಾಗಿ ಕೆಲವರಿ ಯುಗಾದಿಯ ಮಜಾ ಮಾರನೆಯ ದಿನದ ವರ್ಷ ತೊಡಕಿನಲ್ಲಿ ಸಿಗುತ್ತದೆ.

ಹಾಗಾಗಿ ಯುಗಾದಿ ಅಂದರೆ…. ಚಿಗುರಿನೆಲೆಗಳು ಹಾಡುವ ಪಲ್ಲವಿ, ಹಳೆಯ ಕೆಟ್ಟ ನೆನಪಿನ ಕೊನೆ, ಹೊಸತಿನ ಆಗಮನ, ಕಳೆದ ದಿನಗಳಿಗೆ ವಿದಾಯ ಮತ್ತು ಮುಂದಿನ ದಿನಗಳ ಬಗ್ಗೆ ಇತರರಿಗೆ ಶುಭವನ್ನು ಕೋರುವ, ದೇವರಲ್ಲಿ ಪ್ರಾರ್ಥಿಸುವ  ಕವನ.

 ಅಚ್ಚುಕಟ್ಟಾಗುವ ಮನೆ, ಬಾಗಿಲಿಗೆ  ತಳಿರು ತೋರಣ ,ದೇವರ ಮನೆಯ ಬಾಗಿಲಿಗೆ ಚಿಗುರು ಹಸಿರಿನ ಮಾವಿನೆಲೆಯ ಸಿಂಗಾರ, ಮನೆಯ ಮುಂದೆ ಚಿಕ್ಕಿಯ ಬಣ್ಣದ ರಂಗೋಲಿ, ಶುಭ್ರವಾಗುವ ರಾಸುಗಳು, ಅಭ್ಯಂಗನದ ಸ್ನಾನ, ಬೆಳಗುವ ಮನಸ್ಸು, ಪೂಜೆ ,ಪುನಸ್ಕಾರ, ಮುಂದಿನ ಶುಭ ದಿನಗಳಿಗಾಗಿ ದೇವರಲ್ಲಿ ಪ್ರಾರ್ಥನೆ, ಹೊಸ ಬಟ್ಟೆ, ಒಬ್ಬಟ್ಟಿನ ತಟ್ಟೆ, ಒಳ್ಳೆಯ ಮಾತು, ಶುಭ ಹಾರೈಕೆ, ಸಂಕಲ್ಪಗಳ ಹೂ ಮಾಲೆಯನ್ನು ಹೊಸೆಯುವ ಮತ್ತು ಕಳೆದ ಕಾಲದ ಪುನರಾವಲೋಕನಕ್ಕೆ ಅವಕಾಶ- ಎಲ್ಲವೂ  ಹೌದು.

 ಜೊತೆಗೆ ಯುಗಾದಿಯ ದಿನ ಮುಂಬರುವ ವರ್ಷದ ಬಗ್ಗೆ ಮುನ್ನುಡಿಯ ಉವಾಚವನ್ನು ಕೇಳುವ ಪರಿಪಾಠವೂ ಇದೆ. ಯುಗಾದಿಯ ದಿನ ಶುರು ಮಾಡುವ ಎಲ್ಲ ಹೊಸ ಯೋಜನೆಗಳು ಶುಭದಾಯಕ ಎನ್ನುವ ನಂಬಿಕೆಯೂ ಇದೆ.

ಹೊಸ ಸೇರ್ಪಡೆ ಎಂದರೆ ವಿಶ್ವರತ್ನ ಮಹಾನ್ ಮಾನವತಾವಾದಿ, ಶೋಷಿತ ಜನ ವಿಮೋಚಕ ಮತ್ತು ಬಹುಜನ ಬಂಧು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಜನ್ಮದಿನವನ್ನೂ ಜನರು  ’ಭೀಮ ಯುಗಾದಿ ’ ಎಂದು ಕರೆದಿರುವುದು. ಈ ವರ್ಷ ಆಚರಿಸುವ ಚಂದ್ರಮಾನ ಯುಗಾದಿಯು ಏಪ್ರಿಲ್ 13 ರಂದು ಮಂಗಳವಾರ ಬಂದಿದೆ. ಏಪ್ರಿಲ್ 14 ರ ಬುಧವಾರ ಬರುವ ಅಂಬೇಡ್ಕರರ ಜನ್ಮ ದಿನವನ್ನು(ವರ್ಷ ತೊಡಕಿನ ದಿನವನ್ನು) ಭೀಮ ಯುಗಾದಿ ಎಂದು ಕರೆಯಲಾಗುತ್ತಿದೆ.

ಯುಗಾದಿ ನಮ್ಮ ನಾಡಿನ ಪ್ರಬುದ್ಧ ಹಬ್ಬ. ಹಿಂದೂಗಳ ಹಬ್ಬವೇ ಆದರೂ, ಈ ಹಬ್ಬದ ಹಿಂದಿನ ಮೌಲ್ಯ ಲೋಕಕ್ಕೇ ಅನ್ವಯವಾಗುವಂತದ್ದು.ಹಾಗಾಗಿ ತತ್ವದಲ್ಲಿ ಇದು ಧರ್ಮವನ್ನು ಮೀರಿದ್ದು. ಮನು ಕುಲದ ಪ್ರಬುದ್ಧತೆಯನ್ನು, ಕಾಲವನ್ನು ಅಳೆವ, ಗುಣಿಸುವ ಬೌದ್ಧಿಕ ಮಟ್ಟದ್ದು. ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗುರುತಿಸಿ ಅದರೊಡನೆ ತನ್ನನ್ನು ಜೋಡಿಸಿಕೊಳ್ಳುವ ಮನುಷ್ಯನ ತಾತ್ವಿಕತೆಯನ್ನು ಮತ್ತು ಹೊಂದಾಣಿಕೆಯನ್ನು ತೋರುವಂತದ್ದು. ಸಾಮಾಜಿಕವಾಗಿ ಭಾರತದಲ್ಲಿದ್ದ ಸಮುದಾಯಗಳಲ್ಲಿನ ಅರೋಗ್ಯವಂತ ಮನೋಧರ್ಮವನ್ನು ಬಿಂಬಿಸುವಂತಹ ಹಬ್ಬ ಯುಗಾದಿ. ಅದಕ್ಕೆಂದೇ ಪ್ರತಿಯೊಬ್ಬರ ಬದುಕಲ್ಲಿ ಯುಗಾದಿ ಮತ್ತೆ ಮತ್ತೆ ಮರಳಿ ಬರಲಿ ಮತ್ತು  ಇನ್ನಷ್ಟು ಸಂಭ್ರಮವನ್ನು ,ಸಂತೋಷವನ್ನು ತರಲಿ.

ಎಲ್ಲರಿಗೂ ಯುಗಾದಿ ಹಬ್ಬದ ಶುಭ ಹಾರೈಕೆಗಳು.

ಡಾ. ಪ್ರೇಮಲತ ಬಿ.

ಜಾಗತಿಕ ಪುರಂದರೋತ್ಸವ…ಒಂದು ಇಣುಕು ನೋಟ – ಶ್ರೀಮತಿ ಗೌರಿಪ್ರಸನ್ನ

ಜಾಗತಿಕ ಪುರಂದರ ಉತ್ಸವವನ್ನು ಈ ವರ್ಷ ೧೨ ದಿನಗಳ ಕಾಲ (ಫೆ ೨೨-ಮಾರ್ಚ್ ೫) ಆಚರಿಸಲಾಯಿತು. ಇಂದು ಈ ಕಾರ್ಯಕ್ರಮದ ೧೨ ನೆಯ ದಿನ. ದಾಸ ಸಾಹಿತ್ಯ ಮತ್ತು ಸಂಗೀತ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗ. ಈ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಿರೂಪಿಸಿದ ಶ್ರೀಮತಿ ಗೌರಿಪ್ರಸನ್ನ ಈ ಕಾರ್ಯಕ್ರಮದ ಪಕ್ಷಿನೋಟವನ್ನು ಈ ಲೇಖನದಲ್ಲಿ ನಮ್ಮ ಮುಂದಿಟ್ಟಿದ್ದಾರೆ.

‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ಎಂದು ವರಕವಿ ಬೇಂದ್ರೆಯವರು ಹಾಡಿದಂತೆ ಕನ್ನಡ ಸಾಹಿತ್ಯದ ಐಸಿರಿ ರಸಿಕರ,ಭಾವುಕರ ಮೈಮರೆಸುವಂಥದ್ದು.ಕನ್ನಡ ಸಾಹಿತ್ಯ ನಡೆದು ಬಂದ ದಾರಿಯಲ್ಲಿ ದಾಸ ಸಾಹಿತ್ಯಕ್ಕೆ ತನ್ನದೇ ಆದ ಒಂದು ವಿಶಿಷ್ಟ ಹೆಜ್ಜೆ ಗುರುತಿದೆ. ದಾಸ ಸಾಹಿತ್ಯವು ಯಾವೊಂದು ವಗ೯ ಅಥವಾ ಮತಕ್ಕೆ ಸೀಮಿತವಾಗದೇ ಅಪಾರ ಜ್ಞಾನಕೋಶವನ್ನೂ, ಸಶಕ್ತ ಸಾಹಿತ್ಯ ಭಂಡಾರವನ್ನೂ, ಭಕ್ತಿ -ಭಾವ,ವೈರಾಗ್ಯಗಳನ್ನೂ, ಸಾಮಾಜಿಕ ಕಳಕಳಿ, ವಿಡಂಬನೆ, ಸಮಕಾಲೀನ ಪ್ರಜ್ಞೆ ಇತ್ಯಾದಿಗಳನ್ನೊಳಗೊಂಡ ಅಪೂವ೯ ಕಣಜ. ಜನಸಾಮಾನ್ಯರಿಗೂ ಅಥ೯ವಾಗುವಂಥ ಸುಲಭ ಸರಳ ಭಾಷೆಯಲ್ಲಿದ್ದು ಸುಮಾರು ಆರುನೂರು ವರುಷಗಳನಂತರವೂ ಇಂದಿಗೂ ಎಲ್ಲರ ನಾಲಗೆಯ ಮೇಲೆ ನಲಿದಾಡುವ ಸತ್ವ, ಪ್ರಸ್ತುತತೆಯನ್ನು ಉಳಿಸಿಕೊಂಡದ್ದು ಈ ದಾಸ ಸಾಹಿತ್ಯ.

ಅಂಥ ದಾಸವರೇಣ್ಯರಲ್ಲಿ ಅಗ್ರಗಣ್ಯರಾದವರು ಪುರಂದರ ದಾಸರು. ತಮ್ಮ ಗುರುದೇವನಿಂದಲೇ ‘ದಾಸರೆಂದರೆ ಪುರಂದರ
ದಾಸರಯ್ಯ’ ಎಂಬ ಹೆಗ್ಗಳಿಕೆ ಪಡೆದುಕೊಂಡವರು. ‘ಕನಾ೯ಟಕ ಸಂಗೀತದ ಪಿತಾಮಹ’ರಾದ ಇವರ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಹಾಗೂ ‘ಲಂಬೋದರ ಲಕುಮಿಕರ’ ದೊಂದಿಗೇ ಸಂಗೀತಾಭ್ಯಾಸ ಆರಂಭವಾಗುವುದು ಇಂದಿಗೂ ರೂಢಿಯಲ್ಲಿದೆ.
ನವಕೋಟಿ ನಾರಾಯಣನಾಗಿ ಸಿರಿಸಂಪತ್ತು ತುಂಬಿ ತುಳುಕಾಡುತ್ತಿದ್ದರೂ ಒಂದಗಳನ್ನೂ ಹೆರವರಿಗೆ ನೀಡಲರಿಯದ ಜಿಪುಣಾಗ್ರೇಸರ ಶೀನಪ್ಪನಾಯಕ ಅದಾವುದೋ ಪುಣ್ಯ ಗಳಿಗೆಯಲ್ಲಿ ಐಹಿಕ ಭೋಗದ ನಶ್ವರತೆಯನ್ನರಿತು ಇದ್ದೆಲ್ಲ ಆಸ್ತಿಯ ಮೇಲೆ
ತುಳಸೀದಳವನ್ನಿಟ್ಟು’ಕೃಷ್ಣಾಪ೯ಣ’ ಎಂದವರೇ ಕಾಲಿಗೆ ಗೆಜ್ಜೆ ಕಟ್ಟಿ,ಗೋಪಾಳಬುಟ್ಟಿ,ತಂಬೂರಿ ಹಿಡಿದು ಹೊರಟೇ ಬಿಟ್ಟರು. ಮುಂದೆ ಕನ್ನಡನಾಡಿನ ಮಹಾನ್ ಸಾಮ್ರಾಟ್ ಕೃಷ್ಣದೇವರಾಯ ನೀಡ ಬಯಸಿದ ಪದವಿ-ಪುರಸ್ಕಾರಗಳನ್ನೆಲ್ಲ ತಿರಸ್ಕರಿಸಿ ‘ನಿಮ್ಮ ಭಾಗ್ಯ ದೊಡ್ಡದೋ ..ನಮ್ಮ ಭಾಗ್ಯ ದೊಡ್ಡದೋ’ ಎಂದು ಅರಸನಿಗೇ ಸವಾಲು ಹಾಕಿದವರು.
ತಮ್ಮ ಜೀವಮಾನದಲ್ಲಿ ಇಡಿಯ ದಕ್ಷಿಣ ಭಾರತವನ್ನೆಲ್ಲ ಸಂಚರಿಸಿದ ಇವರು ಸುಮಾರು ೪ ಲಕ್ಷ ೭೫ ಸಾವಿರ ಕೃತಿಗಳನ್ನು
ರಚಿಸಿದ್ದಾರೆಂಬ ಪ್ರತೀತಿಯಿದೆ. ಸಂಗೀತ-ಸಾಹಿತ್ಯ-ಅನುಭಾವಗಳ ಸಂಗಮವಾದ ಇಂಥ ದಾಸವಯ೯ರು ಇಡಿಯ ಕನ್ನಡನಾಡಿನ ಪುಣ್ಯ.

ಅಂಥ ಪುರಂದರದಾಸರ ಆರಾಧನೆಯು ಕಳೆದ ಫೆಬ್ರುವರಿ ೧೧, ೨೦೨೧ ರಂದು ಜರುಗಿತು. ಅದರ ಅಂಗವಾಗಿ ವಿದ್ವಾನ್ ಅರಳುಮಲ್ಲಿಗೆ ಪಾಥ೯ಸಾರಥಿಯವರ ಮಾಗ೯ದಶ೯ನದಲ್ಲಿ ಅಂತರಾಷ್ಟ್ರೀಯ ಕನ್ನಡ ಬಾನುಲಿ ರೇಡಿಯೊ ಗಿರಮಿಟ್,ಮೂಕಟ್ರಸ್ಟ್, ವಿವಿಡ್ಲಿಪಿ ಹಾಗೂ ಅರಳುಮಲ್ಲಿಗೆ ಫೌಂಡೇಶನ್ ಸಹಯೋಗದಲ್ಲಿ ‘ ಜಾಗತಿಕ ಪುರಂದರ ಉತ್ಸವ – ೨೦೨೧’ ಕಾಯ೯ಕ್ರಮ ಬಲು ಸಡಗರದಿಂದ ಫೆಬ್ರುವರಿ ೨೨ ರಂದು ಆರಂಭವಾಯಿತು. ಮಾಚ್೯ ೫ ರವರೆಗೆ (*ಈಗ ೬ನೆಯ ತಾರೀಖಿಗೆ ಮುಂದೂಡಲಾಗಿದೆ. -ಸಂ) ನಡೆಯಲಿರುವ ಈ ಕಾಯ೯ಕ್ರಮದ ಹೆಗ್ಗಳಿಕೆಯೆಂದರೆ ವಿಶ್ವದ ನಾನಾ ಮೂಲೆಗಳಿಂದ ನಾನಾ ವಿಖ್ಯಾತ ಕಲಾವಿದರು, ಮಕ್ಕಳು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ, ಶ್ರದ್ಧಾಭಕ್ತಿಗಳನ್ನು ತೋರುತ್ತಿರುವುದು. ಬೇರೆ ಬೇರೆ ಸಮಯ ವಲಯದಲ್ಲಿರುವ, ಬೇರೆ ಬೇರೆ ಖಂಡಗಳಲ್ಲಿರುವ ಕಲಾವಿದರನ್ನೆಲ್ಲ ಒಂದೇ ತತ್ವದಡಿ ಒಂದೇ ವೇದಿಕೆಯಲ್ಲಿ ಕಲೆಹಾಕಿರುವುದರ ಹಿಂದಿರುವ ಶ್ರಮ, ಸಂಘಟನಾ ಜವಾಬುದಾರಿಗಳಿಗೆ ಬೆಲೆ ಕಟ್ಟಲಾಗದು.ಭಾರತ, ಆಸ್ಟ್ರೇಲಿಯಾ , ಸಿಂಗಾಪುರ, ಯು.ಎಸ್.ಎ. ಮತ್ತು ಯು.ಕೆ.ಯ ಖ್ಯಾತ ಹಾಗೂ ಹವ್ಯಾಸಿ ಕಲಾವಿದರು ನಡೆಸಿಕೊಟ್ಟ ಕಾಯ೯ಕ್ರಮಗಳು ವಿಭಿನ್ನ ಮಾದರಿಯವು.

ಫೆಬ್ರವರಿ ೨೨ ರಂದು ಡಾ.ಅರಳುಮಲ್ಲಿಗೆಯವರ ವಿದ್ವತ್ಪೂರ್ಣ ಭಾಷಣದೊಂದಿಗೆ ಕಾಯ೯ಕ್ರಮವು ಉದ್ಘಾಟಿಸಲ್ಲಟ್ಟಿತು. ಹೆಸರಿಗೆ
ತಕ್ಕಂತೆ ಅರಳು ಮಲ್ಲಿಗೆಯವರ ಮಾತು ಮಲ್ಲಿಗೆ ಅರಳಿದಂತೆ..ಅರಳು ಸಿಡಿದಂತೆ. ಹಲವಾರು ದಶಕಗಳಿಂದ ಹರಿದಾಸ ಸಾಹಿತ್ಯದ
ಅಧ್ಯಯನ, ಸಂಶೋಧನೆ, ಗ್ರಂಥ ಸಂಪಾದನೆಯಂಥ ಕಾಯ೯ಗಳಲ್ಲಿ ತಮ್ಮನ್ನು ಸಂಪೂಣ೯ವಾಗಿ ತೊಡಗಿಸಿಕೊಂಡ
ಪಾಥ೯ಸಾರಥಿಯವರು ಈಗಷ್ಟೇ ಕೆಲಸಮಯದ ಹಿಂದೆ ‘ಹತ್ತುಸಾವಿರ ಹರಿದಾಸರ ಹಾಡುಗಳು’ ಎಂಬ ಸುಮಾರು ನಾಲ್ಕೂವರೆ
ಕೆ.ಜಿ. ತೂಕದ ಬೃಹತ್ ಪುಸ್ತಕವೊಂದನ್ನು ಹೊರತಂದಿದ್ದು ಅದಕ್ಕಾಗಿ ಕನಾ೯ಟಕದ ಹಳ್ಳಿ ಹಳ್ಳಿಗೂ ಅಲೆದು ಹಾಡುಗಳನ್ನು
ಸಂಗ್ರಹಿಸಿದ್ದಾರೆ.

ಅದಲ್ಲದೇ ‘ಪುರಂದರ ಸಂಪುಟ’ ಎಂಬ ಪುಸ್ತಕವನ್ನೂ ಹೊರತಂದಿದ್ದಾರೆ. ಈ ಎರಡೂ ಪುಸ್ತಕಗಳ ಬಗ್ಗೆ ಅವುಗಳನ್ನಾಗಲೇ ಓದಲು ತೊಡಗಿದ ನಮ್ಮ ಅನಿವಾಸಿಯ ನಿಯಮಿತ ಓದುಗರೂ, ಬೆಂಬಲಿಗರೂ ಆದ ಶ್ರೀಮತಿ ಸರೋಜಿನಿ ಪಡಸಲಗಿಯವರು ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. (ಕೆಳಗೆ ನೋಡಿರಿ).
ಅನಿವಾಸಿಯ ಹಿರಿಯ ಸದಸ್ಯರೊಬ್ಬರ ಆ ಪುಸ್ತಕದ ನಂಟಿನ ಅಚ್ಚರಿಯ ವಿಚಾರ ತಾವೂ ತಿಳಿಯಬಹುದು (ಕೊನೆಯ ಪ್ಯಾರಾಗ್ರಾಫ್).

ಫೆಬ್ರುವರಿ ೨೩ ರಂದು ಯು.ಎಸ್.ಎ.ದ ವ್ಯಾಸ ಭಜನಾ ಮಂಡಳಿಯಿಂದ ಸಂಗೀತಗೋಷ್ಟಿ, ಫೆ.೨೪ರಂದು ಖ್ಯಾತ ಸಂಗೀತ ನಿದೇ೯ಶಕಿ ಜಯಶ್ರೀ ಅರವಿಂದ ಅವರ ನಿರೂಪಣೆಯೊಂದಿಗೆ ರಕ್ಷಾ ಪ್ರಿಯರಾಮ್ ಅವರಿಂದ ಸಂಗೀತ ಸುಧೆ, ಫೆ. ೨೫ ರಂದು ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಅನಂತ ಭಾಗವತ್ ಅವರಿಂದ ಸಂಗೀತ ಸೇವೆ, ಫೆ.೨೬ ರಂದು ನಮ್ಮ ಅನಿವಾಸಿಯ ಶ್ರೀಮತಿ ಅಮಿತಾ ರವಿಕಿರಣ್ , ಶ್ರೀಮತಿ ಸುಮನಾ ಧ್ರುವ್ ಅವರೇ ಮೊದಲಾದ ಯು.ಕೆ. ಯ ಹಲವಾರು ಕಲಾವಿದರಿಂದ ‘ಪುರಂದರ ಗೀತ ನಮನ’ ಕಾಯ೯ಕ್ರಮಗಳು ತುಂಬ ಸುಂದರವಾಗಿ ಮೂಡಿಬಂದವು.( ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಯು.ಕೆ.ಯ ಕಾಯ೯ಕ್ರಮವನ್ನು ತಾವು ವೀಕ್ಷಿಸಬಹುದಾಗಿದೆ.).

ಒಟ್ಟಿನಲ್ಲಿ ಈ ಪುಸ್ತಕಗಳು ಸಂಗ್ರಹಯೋಗ್ಯವಾದ, ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗಬಹುದಾದ ಅತ್ಯುತ್ತಮ ಕಾಣಿಕೆಗಳೆನ್ನಲಡ್ಡಿಯಿಲ್ಲ.

ಫೆ.೨೭ರಂದು ದೇಶವಿದೇಶದ ಚಿಣ್ಣರಿಂದ ‘ಆದದ್ದೆಲ್ಲ ಒಳಿತೇ ಆಯಿತು’ ಎಂಬ ದಾಸರ ಜೀವನಾಧಾರಿತ ನಾಟಕ ಹಾಗೂ ದಾಸರ ಹಲವಾರು ರಚನೆಗಳ ಸುಂದರ ಪ್ರಸ್ತುತಿ ಜರುಗಿತು.ಫೆ.೨೮ರಂದು ವಿದುಷಿ ಪುಷ್ಪಾ ಜಗದೀಶ ಹಾಗೂ ಆಸ್ಟ್ರೇಲಿಯಾದ ಗಾಯಕಿಯರು ಪುರಂದರ ಸಂಗೀತ ಕಾಯ೯ಕ್ರಮ ನಡೆಸಿಕೊಟ್ಟರು.ಮಾಚ್೯ ೧ ರಂದು ಸಿಂಗಾಪುರದ ಡಾ.ಭಾಗ್ಯಮೂತಿ೯ ಹಾಗೂ ತಂಡದವರಿಂದ ಸಂಗೀತ ಕಾಯ೯ಕ್ರಮ , ಮಾಚ್೯ ೨ ರಂದು ಸುವಣ೯ ಮೋಹನ್ ಹಾಗೂ ತಂಡದವರಿಂದ, ಮಾಚ್೯ ೩ ರಂದು ಡಾ. ಅಚ೯ನಾ ಕುಲಕಣಿ೯ಯವರಿಂದ ಹಾಗೂ ಮಾಚ್೯ ೪ ರಂದು ಸಖಿ ವೃಂದ ತಂಡದಿಂದ ಪುರಂದರ ಸಂಗೀತ ಕಾಯ೯ಕ್ರಮ ನಡೆಯಿತು.ಇಂದು ಮಾಚ್೯ ೫ ರಂದು ಪಾಥ೯ಸಾರಥಿಯವರ ಉಪನ್ಯಾಸ ಹಾಗೂ ವಿಭಿನ್ನ ಸಂಗೀತ ನಾಟಕ ಪ್ರದಶ೯ನ ನಡೆಯಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ http://www.vividlipi.com/gpf ನ್ನು ನೋಡಬಹುದು.

ಒಟ್ಟಾರೆ ಕಾಯ೯ಕ್ರಮದಲ್ಲಿ ಹಲಕೆಲವು ಕುಂದು ಕೊರತೆಗಳಿರಬಹುದಾದರೂ ಕಾಯ೯ಕ್ರಮದ ಹಿಂದಿನ ಉದ್ದೇಶ್ಯ, ಪಟ್ಟ ಪರಿಶ್ರಮ ಶ್ಲಾಘನೀಯ. ಇದರ ರೂವಾರಿಯಾದ ಸತ್ಯಪ್ರಮೋದ ಲಕ್ಕುಂಡಿ ಹಲವಾರು ದೈಹಿಕ ತೊಂದರೆ, ಅನಾನುಕೂಲದ ಮಧ್ಯೆ, ನಿದ್ದೆಗೆಟ್ಟು,ಕೆಲಸಲ ಊಟಬಿಟ್ಟು ಕೆಲಸ ಮಾಡಿದ್ದಾರೆ. ಅವರ ಹುಚ್ಚಿಗೆ, ಕೆಚ್ಚಿಗೆ ನನ್ನ ಮೆಚ್ಚುಗೆಯಿದೆ. ರಾತ್ರಿ ೧೦ ಗಂಟೆಯ ಮೇಲೆ ಊಟ-ಕೆಲಸ ಮುಗಿಸಿ ಸೀರೆಯುಟ್ಟು ತಯಾರಾಗಿ ಮಧ್ಯರಾತ್ರಿಯವರೆಗೆ ರೆಕಾಡಿ೯೦ಗ್ ಮಾಡಿದ್ದು..ಹತ್ತುಸಲ ಚಿಕ್ಕಪುಟ್ಟ ತಪ್ಪುಗಳಾಗಿ ಇದಕ್ಕಿಂತ ನೂರು ಜನರ ಸಭೆಯಲ್ಲಿ ಮುಖಾಮುಖಿಯಾಗಿ ಮಾತಾಡುವುದೇ ಒಳ್ಳೆಯದೆನ್ನಿಸಿ ಕಿರಿಕಿರಿ ಮಾಡಿಕೊಂಡರೂ ಇದೊಂದು ಅನನ್ಯ ಅನುಭವವೆಂಬುದು ಸುಳ್ಳಲ್ಲ. ಸುಮನಾ ಧ್ರುವ್ ಅವರೂ ಅಷ್ಟೇ..’ ಅಯ್ಯೋ ಏನ ಕೇಳತೀರಾ? ಮಕ್ಕಳೆಲ್ಲ ಮಲಗಿದ ಮೇಲೆ ಸೀರೆ ಉಟಗೊಂಡು, ಸಿಂಗಾರ ಮಾಡಿಕೊಂಡು , ಅಲ್ಲೊಂಚೂರು ವಿಡಿಯೋ ಸರಿಬರಲಿಲ್ಲ, ಇಲ್ಲೊಂಚೂರು ರಾಗ ಸರಿಯಾಗಲಿಲ್ಲ ಅಂತ ಎಡಿಟ್ ಮಾಡಿ ಅಂತೂ ಮುಗಿಸಿದಾಗ ಬೆಳಗಿನ ೪:೩೦ ಗೌರಿಯವರೇ’ ..ಅಂತ ಹೇಳಿದಾಗ ನಗುವಿನ ಜೊತೆಗೇ ಪಾಪ ಅಂತಲೂ ಅನ್ನಿಸಿತ್ತು. ( sorry ಸುಮನಾ..ನಿಮ್ಮನ್ನು ಕೇಳದೇ ನಿಮ್ಮ ಮಾತು ಬರೆದುಬಿಟ್ಟೆ) ಬಹುಶ: ಈ ಕಾಯ೯ಕ್ರಮದ ಎಲ್ಲ ಕಲಾವಿದರದೂ ಇಂಥದೇ ಪರಿಶ್ರಮದ ಕಥೆಗಳಿದ್ದರೂ ಇರಬಹುದು. ಸಹೃದಯರಾದ ತಾವು ಕುಂದು ಕೊರತೆಗಳನ್ನು ಅವಗಾಣಿಸಿ ಕಾಯ೯ಕ್ರಮಕ್ಕೊಂದು ಮೆಚ್ಚುಗೆಯ ಮಾತಾಡಿದರೆ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಮತ್ತೊಂದಿಲ್ಲ. ಅಂತೂ ಇದೊಂದು “ನ ಭೂತೋ ನ ಭವಿಷ್ಯತಿ” ಎನ್ನುವಂಥ ಕಾಯ೯ಕ್ರಮಗಳ ಸಾಲಿನಲ್ಲಿ ನಿಲ್ಲುವುದರಲ್ಲಿ ಯಾವ ಸಂಶಯವಿಲ್ಲ.

​–ಶ್ರೀಮತಿ ಗೌರಿಪ್ರಸನ್ನ

ಅನಿವಾಸಿ ಓದುಗರಾದ ಸರೋಜಿನಿ ಪಡಸಲಗಿಯವರು ದಾಸಸಾಹಿತ್ಯದ ತಮ್ಮ ಅನುಭವವನ್ನು ಈ ಕೆಳಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ:

ಅರಳು ಮಲ್ಲಿಗೆ ಪಾರ್ಥಸಾರಥಿಯವರ ಎರಡು ಬೃಹದ್ಗ್ರಂಥಗಳ ಬಗ್ಗೆ ಎರಡು ಮಾತು:

ಈ ವರ್ಷ ವಿವಿಡ್ಲಿಪಿ ಯವರು ಅರಳುಮಲ್ಲಿಗೆ ಪಾರ್ಥಸಾರಥಿ ಯವರ ಸಾರಥ್ಯದಲ್ಲಿ ಆಚರಿಸಿದ , ಇನ್ನೂ ನಡೆದಿರುವ ಪುರಂದರದಾಸರ ಆರಾಧನೆ ಒಂದು ವಿಶೇಷ ಹಾಗೂ ವಿಶಿಷ್ಟ.ಅದಕ್ಕೆ ಅರಳು ಮಲ್ಲಿಗೆ ಪಾರ್ಥಸಾರಥಿ ಯವರ “ಹರಿದಾಸರ ಹತ್ತು ಸಾವಿರ ಹಾಡುಗಳು” ಹಾಗೂ ” ಪುರಂದರ ಮಹಾಸಂಪುಟ” ಎಂಬ ಎರಡು ಬ್ರಹದ್ಗೃಂಥಗಳ ಸ್ವರ್ಣ ಗರಿಯುಳ್ಳ ಕಿರೀಟ! ಅವರ ಅನಂತ, ಅನುಪಮ ಶ್ರದ್ಧೆ , ಸಾಧನೆಯ ಫಲ ಈ ಅಪ್ಪಟ ಚಿನ್ನವೇ ಎಂಬಂತಹ ಅಮೂಲ್ಯ ಕೃತಿಗಳು !ಹರಿದಾಸರ ಹತ್ತು ಸಾವಿರ ಹಾಡುಗಳು ಒಂದೇ ಕಡೆ ಸಿಗುವಂತಾದದ್ದು ನಮ್ಮ ಅಹೋಭಾಗ್ಯ! ಈ ಒಂದೊಂದು ಬೆಳಕಿನ ಕಿರಣಗಳ ಸಂಗ್ರಹಕಾರ್ಯ ಅರಳು ಮಲ್ಲಿಗೆ ಪಾರ್ಥಸಾರಥಿಯವರು ಹೇಗೆ ಮಾಡಿದರೆಂಬುದು ಊಹೆಗೂ ಮೀರಿದ್ದು, ಎಟುಕದ ವಿಷಯ.ಎಲ್ಲವೂ ಗ್ರಂಥಸ್ತವಾಗಿದ್ದಿಲ್ಲ ಎಂಬುದು ಗಮನಾರ್ಹ ಅಂಶ.
ಇನ್ನು “ಪುರಂದರ ಮಹಾಸಂಪುಟ”ವಂತೂ ಪುರಂದರದಾಸರ ಒಂದೊಂದು ವಿಶೇಷತೆಗಳ, ಪ್ರತಿ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿತೋರಿಸುವ , ಬೆಳಕು ಚೆಲ್ಲುವ ವೇದಸದೃಶ ಗ್ರಂಥ. ಪ್ರವಚನಕಾರರಿಗೆ, ಸಾಹಿತ್ಯಾಸಕ್ತರಿಗೆ ಮಹಾನಿಧಿ ಅದು.ಅದರಲ್ಲಿಯ  180 ನೇ ಪುಟದಲ್ಲಿರುವ ಒಂದು ವಿಶೇಷ ವಿಷಯ ಬಲು ಆಸಕ್ತಿ ಪೂರ್ಣ! ಪುರಂದರದಾಸರ ಬಗ್ಗೆ ಅಧಿಕೃತ ಮಾಹಿತಿಯ ,ಮೊದಲ ಐತಿಹಾಸಿಕ ಆಧಾರವಾದ ಮೊದಲ ಶಿಲಾಶಾಸನವನ್ನು ಕಮಲಾಪುರದಲ್ಲಿ ಸಂಶೋಧಿಸಿದ್ದು ಡಾ.ಪಾಂಡುರಂಗ ದೇಸಾಯಿಯವರು- ಶ್ರೀವತ್ಸ ದೇಸಾಯಿಯವರ ತಂದೆಯವರು !

ಜನ್ಮಾಂತರಗಳ  ಪುಣ್ಯದಿಂದ ದೊರಕಿದ ಅಮೂಲ್ಯ ಆಸ್ತಿ ಈ ಬೃಹದ್ಗ್ರಂಥಗಳು ಎಂಬುದು ಅನಂತ ಸತ್ಯ!

ಸರೋಜಿನಿ ಪಡಸಲಗಿ
03-03-2021

ಯು ಕೆ ತಂಡದವರು ೨೬ ಫೆಬ್ರುವರಿ, ೨೦೨೧ ರಂದು ಪ್ರಸ್ತುತ ಪಡಿಸಿದ ಪುರಂದರ ಸಂಗೀತ ಕಾರ್ಯಕ್ರಮ ನೋಡಲು ಕೆಳಗಿನ ಕೊಂಡಿಯನ್ನು ಒತ್ತಿರಿ.