ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಮ್ಮನ್ನೆಚ್ಚರಿಸುವ ಒಂದು”ಜಿಮ್ನಾಸ್ಟಿಕ್ ಶೋ’ದ ಪರಿಚಯ ಇಲ್ಲಿದೆ.
ಕಳೆದ ವಾರ ನನ್ನ ಪಕ್ಕದ ಊರಿನ ’ರೋದರಂ ಶೋ’ದ (Rotherham Show at Clifton Park) ಒಂದು ಮುಖ್ಯ ಆಕರ್ಷಣೆ ಎಂದರೆ ಮೈದಾನದ ಮಧ್ಯದಲ್ಲಿಯ ಏಳು ಮೀಟರುಗಲ ಉದ್ದದ ಮರಳು ಗಡಿಯಾರದಲ್ಲಿ ಸಮತೋಲ ಕಾಯಲು ಯತ್ನಿಸುತ್ತಿರುವ ನಾಲ್ವರು. ಅವರು ಭಾಗವಹಿಸಿದ್ದು ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) ಎನ್ನುವ ಶೋ. ಅಷ್ಟು ದೊಡ್ಡ ಮರಳು ಗಡಿಯಾರ (Hour glass) ಯಾಕೆ ಬೇಕಿತ್ತು? ಅದಕ್ಕೂ ಗ್ಲೋಬಲ್ ವಾರ್ಮಿಂಗ್ (ಜಾಗತಿಕ ಉಷ್ಣೋದ್ದೀಪನ)ಗೂ ಏನು ಸಂಬಂಧ? ಲಂಡನ್ನಿನ ಯು ಸಿ ಎಲ್ ದ ಪ್ರೊಫೆಸರ್, ಅಂಕಣ ಮತ್ತು ಪುಸ್ತಕಗಳ, ವೈಜ್ಞಾನಿಕ ಲೇಖನಗಳ ಬರಹಗಾರ ಬಿಲ್ ಮ್ಯಾಗ್ವೈಯರ್ ಅವರ ಈ ವಾರದ ಹೇಳಿಕೆಯ ಪ್ರಕಾರ ನಾವು 2030 ತಲುಪುವ ಮೊದಲೇ ಜಗತ್ತಿನ ಉಷ್ಣತಾಮಾನದ ಏರಿಕೆ 1.5 ಡಿಗ್ರಿ ಸೆಲ್ಸಿಯಸ್ ಕೆಳಗೆ ಬರುಬೇಕೆಂದು ಪಣ ತೊಟ್ಟ ಗುರಿ ತಲುಪುವದು ಈಗ ಅಸಾಧ್ಯ ಎನಿಸುತ್ತದೆ. ಇತ್ತೀಚೆಗೆಯಷ್ಟೇ ನಾವೆಲ್ಲ ಪಾಕಿಸ್ತಾನದ ಮಹಾಪೂರದಿಂದಾಗಿ ಮೂರೂಕಾಲು ಕೋಟಿಗಿಂತ ಹೆಚ್ಚಿನ ಜನ ಸಂತ್ರಸ್ತರಾದ ಫೋಟೊಗಳನ್ನು ಸಾಕಷ್ಟು ನೋಡಿದ್ದೇವೆ. ಇದೇ ವರ್ಷ ಮೊದಲ ಬಾರಿ ಇಂಗ್ಲೆಂಡಿನ ಉಷ್ಣತಾಮಾನ 40.3 ಸೆ ಮುಟ್ಟಿದ ಹೆಡ್ಲೈನ್ ವರದಿಗಳನ್ನು ಕೇಳಿದ್ದೇವೆ.ಇವು ಗ್ಲೋಬಲ್ ವಾರ್ಮಿಂಗಿನ ಪ್ರತ್ಯಕ್ಷ ಪರಿಣಾಮಗಳೆಂದು ತಿಳಿದು ಬಂದಿದೆ. ಇನ್ನು ’1.5 ಡಿಗ್ರಿ’ ಗುರಿ ಸಾಧಿಸಲು ನಮಗೆ ಸಮಯದ ಅಭಾವವಿದೆ. ಗಡಿಯಾರದ ಮರಳು ಶೀಘ್ರಗತಿಯಲ್ಲಿ ಸೋರಿಹೋಗುತ್ತಿದೆ ಎನ್ನುವ ಸರ್ವವಿದಿತ ಸತ್ಯವನ್ನೇ ಮನದಟ್ಟ ಮಾಡಲು ನೃತ್ಯ, ಸರ್ಕಸ್ ಮತ್ತು ಕಸರತ್ತುಗಳನ್ನು (gymnastics) ಹೆಣೆದು ಜನರಿಗೆ ಪ್ರಸ್ತುತಪಡಿಸುವ ಒಂದು ಕಲಾತ್ಮಕ ಪ್ರದರ್ಶನವೇ ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) - ಕಾಲಾತೀತ ಎನ್ನುವ ಶೋ. ತಾಪೋದ್ದೀಪನದ ಜೊತೆಗೆ ಪರಿಸರ ಮತ್ತು ಪ್ರಾಣಿಸಂಕುಲನದ ಸಂರಕ್ಷಣೆಯೂ ಆಗ ಬೇಕಾಗಿದೆ. ಆಸಿಡ್ ಮಳೆ, ಹವೆಯಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್ ಇವೆಲ್ಲ ಹಾನಿಕರ. ಇವೆಲ್ಲದರ ಸುಧಾರಣೆಗೆ ಟೈಮ್- ಲೆಸ್, ಸಮಯ ಬಹಳ ಕಡಿಮೆ ಎನ್ನುವ ಸಂದೇಶವೂ ಅದರಲ್ಲಿದೆ.
ಅಂದು ಇಂಗ್ಲೆಂಡಿನ ರಾಣಿಯ ಮೃತ್ಯುವಿನ ಹಿಂದಿನ ರವಿವಾರ. ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿ ಹರಿಯುವ ಡಾನ್ ನದಿಯ ಉಪನದಿಯಾದ ”ರಾದರ್’ ದಂಡೆಯಮೇಲೆ ಬೆಳೆದ ಲಕ್ಷಕ್ಕಿಂತಲೂ ಜಾಸ್ತಿ ಜನವಸತಿಯ ರಾದರಮ್ಮಿನ ವಿಶಾಲವಾದ ಕ್ಲಿಫ್ಟನ್ ಪಾರ್ಕದ ತುಂಬ ವಿವಿಧ ವಸ್ತುಗಳನ್ನು ಮಾರುವ ಮಳಿಗೆಗಳು, ಫುಡ್ ಸ್ಟಾಲ್ ಗಳು ಹರಡಿಕೊಂಡಿದ್ದವು. ಆ ಮಧ್ಯೆ ವಿಂಟೇಜ್ ಕಾರುಗಳ ಮಾಲಕರು ತಮ್ಮ ’ಕೂಸು’ಗಳನ್ನು ತಂದು ಪ್ರದರ್ಶಿಸಿದರು. ಪ್ರದರ್ಶನಗಳ ಸುತ್ತ ಕಿಕ್ಕಿರಿದು ತುಂಬಿದ ಜನಸಂದಣಿ. ಕಳೆದ 43 ವರ್ಷಗಳಿಂದ ಸಾವಿರಾರು ಮಕ್ಕಳು, ತಂದೆತಾಯಿಗಳೊಂದಿಗೆ ಅನೇಕ ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಟ, ಓಡಾಟ ತಿಂಡಿ, ಬರ್ಗರ್, ಪಿಡ್ಝಾ, ಕೋಲಾ, ಪೆಪ್ಸಿ, ಮ್ಯೂಸಿಕ್, ಬ್ಯಾಂಡ್, ಲೌಡ್ ಸ್ಪೀಕರ್, ಇತ್ಯಾದಿಗಳ ಸುತ್ತಲೂ ಜನ. ನೀವು ಊಹಿಸಿರಬಹುದು, ಆ ದೃಶ್ಯವನ್ನು.
’ಟೈಮ್ಲೆಸ್ ’ ಶೋಗೆ ಜೋಲಿ ವಯನ್ ಆರಿಸಿಕೊಂಡಿದ್ದ ಜಾಗ ಸಮತಟ್ಟಾದ ಹುಲ್ಲಿನ ಮೈದಾನದ ಮಧ್ಯದಲ್ಲಿ. ಕಳೆದ ಹತ್ತು ವರ್ಷಗಳಿಂದ ಈ ಪುಟ್ಟ ಸಂಸ್ಥೆ ಅಕ್ರೋಬಾಟಿಕ್ ’ಡೊಂಬರಾಟ’ಯುಕ್ತ ಕಥಾನಕಗಳನ್ನು ಸರ್ಕಸ್-ಡಾನ್ಸ್ ಮತ್ತು ಜಿಮ್ನಾಸ್ಟಿಕ್ಸ್ಗಲ ಮಿಶ್ರಣದ ನಾಲ್ಕು ಹೊರಾಂಗಣದ ಮತ್ತು ಎರಡು ಒಳಾಂಗಣದ ಪ್ರದರ್ಶನಗಳನ್ನು ಈ ದೇಶದಲ್ಲಷ್ಟೇ ಅಲ್ಲದೆ ದಕ್ಷಿಣ ಕೊರಿಯಾದಲ್ಲೂ ಪ್ರದರ್ಶಿಸುತ್ತಿದೆ. ಒಲೀವಿಯಾ ಕೇಲ್ ಮತ್ತು ಯಾನ್ ಪ್ಯಾಟ್ಸ್ಕೀ ಎರಡೂ ಕಲೆಗಳಲ್ಲಿ ನುರಿತವರು.
ಆ ದಿನ ಅಂಗ ಸೌಷ್ಠವವುಳ್ಳ ಧೃಡಕಾಯದ ಇಬ್ಬರು ಗಂಡಸರು ಮತ್ತು ಇಬ್ಬರು ಬೆಡಗಿನ ಯುವತಿಯರು ಪಾಲ್ಗೊಂಡಿದ್ದರು. ಮೊದಲು ಯಾಕೆ ತಾವು ಮನುಕುಲವನ್ನು ಕಾಡುತ್ತಿರುವ ಈ ಸಮಸ್ಯೆಗಳ ಪರಿಹಾರದ ಅವಶ್ಯಕತೆಯನ್ನು ಬಿಂಬಿಸಲು ಮರಳು ಗಡಿಯಾರದ ಆಯ್ಕೆ ಅರ್ಥವತ್ತಾದುದೇ ಅಂತ ಹೇಳಿ ತಮ್ಮ ಅರ್ಧ ಗಂಟೆಯ ’ಆಟ’ವನ್ನು ಪ್ರಾರಂಭಿಸಿದರು. ಮೊದಲು ಒಂದು ಚಿಕ್ಕ ರೂಪಕದಲ್ಲಿ ನಾಲ್ವರೂ ಮಾನವನ ಆದಿಕಾಲದ ಜೀವನದಪರಿಚಯ ಮಾಡಿ ಇಂದಿನ ವರೆಗಿನ ಪ್ರಗತಿಯನ್ನು ನೃತದಲ್ಲಿ ತೋರಿಸಿಕೊಟ್ಟರು. ನಂತರ ಒಬ್ಬೊಬ್ಬ ಗಂಡಸು ಮರಳು ಗಡಿಯಾರದ (hourglass) ಎರಡೂ ಗಾಜಿನ ಗೋಲಕಗಳಲ್ಲಿ ಹೊಕ್ಕು ಸಮತೋಲನ ಸ್ಥಾಪಿಸಿದ ಮೇಲೆ ಇಬ್ಬರು ಹೆಂಗಸರು ಕೋರಿಯೋಗ್ರಫಿಗನುಗುಣವಾಗಿ ನರ್ತಿಸುತ್ತ ಆ ಎರಡು ಗೊಲಕಗಳಲ್ಲಿ ಸೇರಿಕೊಂಡು ಅದರ ಮಧ್ಯದ ಅಚ್ಚಿನ ಸುತ್ತ ಅವರ್ ಗ್ಲಾಸನ್ನು ತಿರುಗಿಸಿದರು. ಕೆಲವಿ ನಿಮಿಷಗಳ ನಂತರ ಅದನ್ನು ನಿಲ್ಲಿಸಿ ಹೊರಬಂದು ಒಂದರಲ್ಲಿ ಮರಳಿನ ಬದಲಾಗಿ ಮರದ ಗೋಲಕಗಳನ್ನು ತುಂಬಿ ಒಂದರಿಂದ ಇನ್ನೊಂದಕ್ಕೆ ಸ್ವಲ್ಪೇ ಸಮದಲ್ಲಿ ಇಳಿದದ್ದನ್ನು ತೋರಿಸಿ ಚಲಿಸುತ್ತಿರುವ ಸಮಯದ ರೂಪಕವಾಗಿ ಪ್ರದರ್ಶಿಸಿದರು. ಆಟದ ಪ್ರದರ್ಶನ ಮುಗಿದಮೇಲೆ ಚಿಕ್ಕ ಪ್ರಶ್ನೋತ್ತರದ ಸಂವಾದದೊಂದಿಗೆ ಆ ಕಾರ್ಯಕ್ರಮ ಮುಕ್ತಾಯವಾಯಿತು.
ಮನುಕುಲಕ್ಕೊದಗಿದ ಈ ಗ್ಲೋಬಲ್ ವಾರ್ಮಿಂಗ್ ಗಂಡಾಂತರವನ್ನು ನಾವು ಹೇಗೆ ಎದುರಿಸುತ್ತೇವೆ ನೋಡಬೇಕಾಗಿದೆ.
ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: Luke Witcomb ವಿಡಿಯೋ: ಜೋಲಿ ವೈಯಾನ್
ಈ ಬರಹವನ್ನು ಓದುವವರು ಕ್ರಿಕೆಟ್ ಭಕ್ತರೇ ಇರಬೇಕೆಂದಿಲ್ಲ ಇರದ್ದಿದ್ದರೂ ಕನ್ನಡಿಗರಿಗೆಲ್ಲ ಇದು ಹಿಡುಸುತ್ತೆ ಅಂತ ನನಗೆ ಭರವಸೆ ಇದೆ!
ಟಿ ಎಮ್ ಎಸ್ ಕಮೆಂಟ್ರಿ ತಂಡ; (ಹೆನ್ರಿ ಬ್ಲೋಫೆಲ್ಡ್ ಎಡಗಡೆ ಮೊದಲನೆಯವರು (ಕನ್ನಡಕದೊಂದಿಗೆ)
ಟಿ ಎಮ್ಎಸ್ (TMS)
ಟಿ ಎಂ ಏಸ್ (TMS) ಅಂದರೆ ಟೆಸ್ಟ್ ಮ್ಯಾಚ್ ಸ್ಪೆಷಲ್. ಇದು ಬಿ ಬಿ ಸಿ ರೇಡಿಯೊದ ಕ್ರಿಕೆಟ್ ಕಾಮೆಂಟರಿ ಕಾರ್ಯಕ್ರಮ. (ಅದರ theme tune ಕೇಳಲು ಕೊನೆಯಲ್ಲಿ ಕೊಟ್ಟ ಕೊಂಡಿ ಒತ್ತಿರಿ!)
“ಕಿಂ ಕುರ್ವತಿ, ಸಂಜಯ?”
ಈ ಕ್ರಿಕೆಟ್ ವೀಕ್ಷಕ ವರದಿ ಪ್ರಸಾರ ಶುರುವಾದದ್ದು ಮೇ ತಿಂಗಳು 1957 ರ 30 ನೆಯ ತಾರೀಕು. ಇದಕ್ಕು ಮೊದಲು 1927ರಿಂದ ಬಿ ಬಿ ಸಿ ರೇಡಿಯೊ ಪ್ರಸಾರದಲ್ಲಿ ಕ್ರಿಕೆಟ್ ಬಗ್ಗೆ ವರದಿ ಮಾತ್ರ ಇತ್ತು (ಹಾವರ್ಡ್ ಮಾರ್ಶಲ್ ಅವರಿಂದ). ನಿಮಗೆ ಕ್ರಿಕೆಟ್ ಬಗ್ಗೆ ತುಂಬಾ ಆಸಕ್ತಿ ಇದ್ದರೆ ಈ ವಿಚಾರ ಗೊತ್ತಿರುತ್ತೆ. ಇಲ್ಲಾ ಅಂದರೆ ಪರವಾಗಿಲ್ಲ ಬಿಡಿ! ಈ ಪ್ರಸಾರ ಇಂಗ್ಲೆಂಡ್ ನಲ್ಲಿ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮವಾಗಿದೆ. ಇದು ಪ್ರಾರಂಭ ಆದಾಗ ಬರೀ ಟೆಸ್ಟ್ ಮ್ಯಾಚ್ ಗಳನ್ನು ಮಾತ್ರ ರೇಡಿಯೋದಲ್ಲಿ ಪ್ರಸಾರ ಮಾಡಿದರು. ಆದರೆ ಈಗ ಎಲ್ಲಾ ರೀತಿಯ ಅಂತರರಾಷ್ತ್ರೀಯ ಮ್ಯಾಚ್ ಗಳ ಪ್ರತ್ಯಕ್ಷ ವೀಕ್ಷಕ ವರ್ಣನೆಯೊಂದಗೆ ಅತನ ಬಳಿಯಲ್ಲೇ ಕುಳಿತ ಒಬ್ಬ ಕ್ರಿಕೆಟ್ ಪಟುವಿನ ವಿಶ್ಲೇಷಣೆಯೂ ಇರುತ್ತೆ. ಇದರ ಪ್ರತೀತಿ ಏನು ಅಂತ ನೀವು ಕೇಳಬಹುದು. ನಿಜವಾಗಿ ಹೇಳಬೇಕಂದ್ರೆ ಇದು “ಗಂಭೀರದ ಮನೋರಂಜನೆ” ಅಂತ ಹೇಳಿದರೆ ಏನು ತಪ್ಪಿಲ್ಲ. ಅಂಧರು ಮತ್ತು ತೀವ್ರ ದೃಷ್ಟಿ ದೋಷವಿದ್ದವರೂ ಇದರ ’ಫ್ಯಾನ್’ಗಳು. ಏಕೆಂದರೆ ಬಿ.ಬಿ.ಸಿ.ಯ ”ರೇಡಿಯೋ ಟೈಮ್ಸ್” ಘೋಷಿಸಿದಂತೆ (“Don’t miss a ball, we broadcast them all”) ಒಂದು ಚೆಂಡೆಸೆತವನ್ನೂ ಬಿಡದೆ ಕಾಮೆಂಟೇಟರ್ ವರ್ಣಿಸುತ್ತಾರೆ. ಅಂತಲೇ ದೃಷ್ಟಿ ಇಲ್ಲದವರಿಗೂ ಈ ಪ್ರಸಾರದಿಂದ ಆಟ ಹೇಗೆ ನಡೆಯುತ್ತಿದೆ ಅನ್ನುವುದು ತಿಳಿಯುತ್ತೆ. ಕುರುಕ್ಷೇತ್ರದ ಯುದ್ಧ ನಡೆಯುತ್ತಿದ್ದಾಗ ದೂರದಲ್ಲಿ ಕುಳಿತ ಧೃತರಾಷ್ಟ್ರ ದಿವ್ಯ ದೃಷ್ಟಿಯ ಸಂಜಯನಿಗೆ ”ಮಾಮಕಾ ಪಾಂಡವಾಶ್ಚೈವ ಕಿಂ ಕುರ್ವತಿ, ಸಂಜಯ?” ಎಂದು ಯುದ್ಧದ ವರ್ಣನೆ ಮಾಡು ಅಂತ ಕೇಳಿದಂತೆ! ಅಷ್ಟೇ ಏಕೆ, ಕ್ರೀಡಾಂಗಣದ ವೀಕ್ಷಕರೂ ಸಹ ಮೋಬೈಲ್ ರೇಡಿಯೋದಲ್ಲಿ ಇಯರ್ಫೋನು ಹಾಕಿಕೊಡು ಕೇಳುವದು ಸರ್ವೇಸಾಮಾನ್ಯ ದೃಶ್ಯ! ಅಂಥ ಜನಪ್ರಿಯತೆ ಇದಕ್ಕೆ. ಇದು ಜಗತ್ಪ್ರಸಿದ್ಧ.
Vizzi
ನಾನು ಇಂಡಿಯಾ ದಲ್ಲಿದ್ದಾಗ 1950 ದಶಕದಲ್ಲಿ ಕ್ರಿಕೆಟ್ ಮ್ಯಾಚ್ ಕಾಮೆಂಟರಿ ಕೇಳಿದ್ದು ಚೆನ್ನಾಗಿ ಜ್ಞಾಪಕ ಇದೆ. ನಮ್ಮ ಮನೆಯಲ್ಲಿ ರೇಡಿಯೊ ಇರಲಿಲ್ಲ. ಆದರೆ ಮನೆ ಹತ್ತಿರ ಇದ್ದ ಗಜಾನನ ಭವನ್ ನಲ್ಲಿ ಇತ್ತು. ಹೋಟೆಲ್ ಹೊರಗೆ ನಿಂತು (ಒಳೆಗೆ ಹೋಗುವುದಕ್ಕೆ ದುಡ್ಡು ಇರಲಿಲ್ಲ!!) ನಾನು ಮತ್ತು ಕೆಲವು ಸ್ನೇಹಿತರು ಶಾಲೆ ಆದಮೇಲೆ ಕಾಮೆಂಟರಿ ಕೇಳುತ್ತಾ ಇದ್ದವಿ. ಅವಾಗ ವಿಜ್ಜಿ (Maharajkumar of Vijayanagaram) ಅನ್ನುವವರ ಕಾಮೆಂಟ್ರಿ ಇರುತ್ತಿತ್ತು. ಆತ ಆಟ ಹೇಗೆ ನಡೆಯುತ್ತಿದೆ ಅಂತ ಹೇಳದೆ ತಾನು ಇಂಗ್ಲೆಂಡ್ ಗೆ ಹೋಗಿದ್ದ ವಿವರಣೆ ಮಾಡುವುದರಲ್ಲಿ 2 ಅಥವಾ 3 ವಿಕೆಟ್ ಹೋಗಿರುತಿತ್ತು ! ಆಗ ಭಾರತದ ಕ್ರಿಕೆಟ್ ತಂಡದಲ್ಲಿ ವಿಜಯ್ ಹಜಾರೆ, ವಿನೂ ಮಂಕಡ್, ವಿಜಯ್ ಮರ್ಚೆಂಟ್ ಮುಂತಾದ ಪ್ರಸಿದ್ಧ ಆಟಗಾರರಿದ್ದರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪಂದ್ಯದ ಕಾಮೆಂಟರಿ ರೇಡಿಯೋದ short wave (ತರಂಗಾಂತರ) ದಲ್ಲಿ ಬಂದಾಗ ಕೇಳಿ ನಾವೆಲ್ಲ ಇನ್ನೊಬ್ಬರ ಮುಂದೆ ಹೋಗಿ ಜಂಬ ಕೊಚ್ಚುವುದು -ಇಂಗ್ಲಿಷ್ ಉಚ್ಚಾರಣೆ ಅರ್ಥವಾಯಿತು ಅಂತ! ಮೈಸೂರು ಆನಂದ್ ಅವರು ಇದನ್ನು ಗೇಲಿ ಮಾಡಿ ಅಭುನಯಿಸುತ್ತಿದ್ದುದನ್ನು ನೀವು ನೋಡಿರಬಹುದು.
ಕಮೆಂಟೇಟರ್ ಬಳಗ
ಟಿ ಎಮ್ ಎಸ್ ದ ವ್ಯಾಖ್ಯಾನಗಾರರು ( commentators) ಹೆಚ್ಚ್ಹಗಿ ಕ್ರಿಕೆಟ್ ಆಡಿ ನಿವೃತಿ ಆದವರೆ ಇರುತ್ತಾರೆ. ಆದ್ದರಿಂದ ಇವರಿಗೆ ಆಟದ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಆಟದ ಮೈದಾನದಲ್ಲಿ ನಡೆಯುತ್ತಿರುವದರ ಬಗ್ಗೆ ಮಾತ್ರವಲ್ಲ, ಇವರ ಮಾತು ತಮಾಷೆಯಾಗಿ ಇನ್ನೂ ಅನೇಕ ಸಂಗತಿಗಳಲ್ಲದೆ, ಕ್ರಿಕೆಟ್ ಸಂಬಂಧದ ಇತಿಹಾಸ, ರೆಕಾರ್ಡು, ಅದ್ಭುತ ಘಟನೆಗಳು,ಅಪರೂಪದ ವ್ಯಕ್ತಿಗಳು, ಕೆಲವು ವಿಕ್ಷಿಪ್ತ ಆಟಗಾರರು, ಆಡಳಿತೆಗಾರರು ಇತ್ಯಾದಿಗಳನ್ನೂ ಹೇಳಿ ಮನೋರಂಜನೆ ಪಡಿಸುತ್ತಾರೆ. ಮಳೆ ಬಂದು ಆಟ ನಿಂತಾಗ ಇವರುಗಳು ನಿರ್ಗಳವಾಗಿ ಹರಟೆ ಕೊಚ್ಚುವುದು ಕೇಳುವುದಕ್ಕೆ ಕೇಳುಗರಿಗೆ ಎಲ್ಲಿಲ್ಲದ ಆನಂದ.
ಬ್ರಯನ್ ಜಾನ್ ಸ್ಟನ್ (Jonners)
Henry Blofeld (Blowers)
ಟಿ ಎಮ್ ಎಸ್ ’ಬಳ”ದವರು ಅದರಲ್ಲಿ ಭಾಗವಹಿಸುವ ಕೆಲವರಿಗೆ ಅಡ್ಡ ಹೆಸರುಗಳನ್ನು ಇಡುವ ಸಂಪ್ರದಾಯ ಬೆಳೆದು ಬಂದಿದೆ.ಅದು ಮೊದಲು ಪ್ರಾರಂಭವಾದುದು ಬ್ರಯನ್ ಜಾನ್ ಸ್ಟನ್ ನಿಂದ ಎಂದೆನಿಸುತ್ತದೆ. ಉದಾಹರಣೆಗೆ, ಜೋನಾಥನ್ ಆಗ್ನೂ (Aggers), ಫಿಲ್ ಟಫ್ನೆಲ್ (Tuffers,) ಹೆನ್ರಿ ಬ್ಲೋಫೆಲ್ಡ್ (Blowers) ಇತ್ಯಾದಿ. ಇವರೆಲ್ಲ ಆತನನ್ನು ಜಾನ್ನರ್ಸ ಎಂದು ಕರೆಯುತ್ತಾರೆ! ಕೆಲವೇ ದಿನಗಳ ಹಿಂದೆ ಹೆನ್ರಿ ಬ್ಲೋಫೆಲ್ಡ್ ಸುಮಾರು ೪೦ ವರ್ಷ ಈ ಕೆಲಸ ಮಾಡಿ ಟಿ ಎಮ್ ಎಸ್ನಿಂದ ನಿವೃತ್ತರಾದರು. ಅದೊಂದು ಮರೆಯಲಾರದ ವಿದಾಯ. ಆತನ ಕೊನೆಯ ಚೆಂಡೆಸತದ ಕಮೆಂಟರಿ ಸಹ ಯೂ ಟೂಬಿನಲ್ಲಿದೆ. ಹೆನ್ರಿಯ ಸ್ಪೆಷಾಲಿಟಿ ಅಂದರೆ ಕ್ರಿಕೆಟ್ ಪಿಚ್ ಮೇಲೆ ನಡೆಯುವ ಆಟ ಬಗ್ಗೆ ಮಾತ್ರವಲ್ಲದೆ ಸುತ್ತ ಮುತ್ತ ನಡೆಯುಯ ಸನ್ಯವೇಶಗಳ ಬಗ್ಗೆ ತಮಾಷೆಯಾಗಿ ತನ್ನ ”ಅಪ್ಪರ್ ಕ್ಲಾಸ್ ಇಂಗ್ಲಷ್”ನಲ್ಲಿ ಮಾಡನಾಡುವ ಚಾತುರ್ಯ. “Dear Old Thing” ಅಂತ ಎಲ್ಲಾರನ್ನೂ ಸಂಬೋಧಿಸುವದೆ ಇವರ ಟ್ರೇಡ್ ಮಾರ್ಕ್. ಆಟದ ಮೈದಾನದ ಹುಲ್ಲಿನ ಮೇಲೆ ಎಷ್ಟು ಪಾರಿವಾಳಗಳು ಇವೆ ಅಥವಾ ಸ್ಟೇಡಿಯಂನ ಸುತ್ತಿನ ರಸ್ತೆಯಲ್ಲಿ ಯಾವ ಬಸ್ ಹೋಗ್ತಾ ಇದೆ ಮುಂತಾದ ”ಕ್ಷುಲ್ಲಕ” ವಿಷಗಳನ್ನು ತಿಳಿಸುತ್ತಾ ಹೋಗುತ್ತಾರೆ, ವೀಕ್ಷಕ ವಿವರಣೆಯೊಂದಗೆ. ನೀವು ಟಿ ಎಮ್ ಸ್ ಅಭಿಮಾನಿಗಳಾಗಿದ್ದರೆ ಮಾತ್ರ ಇಂತಾ ಮಾತುಗಳು ಹಿಡಿಸುವುದು. ಇಲ್ಲದೆ ಇದ್ದರೆ ಪಾರಿವಾಳಕ್ಕೂ ಕ್ರಿಕೆಟ್ಟಿಗೂ ಏನು ಸಂಬಂಧ ಅಂತ ಕೇಳುತ್ತೀರಿ ಅಲ್ಲವೆ?
ಜಾನ್ನರ್ಸ್ ಜಾನ್ರ (genre)
ದಿವಂಗತ ಜಾನ್ ಆರ್ಲಟ್ ಇನ್ನೊಬ್ಬ ಪ್ರಸಿದ್ಧ ಬ್ರಾಡ್ ಕಾಸ್ಟರ್ ಆಗಿದ್ದರು. ಗಂಭೀರತೆಯಿಂದ ತನ್ನ ಹ್ಯಾಮ್ಸ್ ಶೈರ್ ಉಚ್ಚಾರಣೆ(accent) ಯಲ್ಲಿ ಪಂದ್ಯದ ವಿವರಣೆಯಿಡುತ್ತಿದ್ದರು. ಅದರ ತದ್ವಿರುದ್ಧವಾದ ಮನೋಧರ್ಮ ಹೊಂದಿದವರು ಜಾನ್ನರ್ಸ ಬ್ರಯನ್ ಜಾನ್ ಸ್ಟನ್. ಅವರದು ತುಂಬಾ ಕೀಟಲೆ ಮಾಡುವ ಸ್ವಭಾವ. ಈಗ ಇವರು ಇಲ್ಲ. ಕೆಲವು ವರ್ಷದ ಹಿಂದೆ (1991) ಒಂದು ಅಚಾತುರ್ಯ ನಡೆದು ಹೋಯಿತು. ಬ್ಯಾಟಿಂಗ್ ಮಾಡುತ್ತಿದ್ದಾಗ ಇಂಗ್ಲಂಡ್ ಪಂಗಡದ ಇಯನ ಬೋಥಮ್ ಅಕಸ್ಮಾತ್ತಾಗಿ ಅವರ ದೇಹದ ಆಯಕಟ್ಟಿನ ಭಾಗ ಸ್ಟಂಪ್ಸ್ ಗೆ ತಾಗಿ ’ಹಿಟ್ ವಿಕೆಟ” ಆಗಿ ’ಔಟ”ದರು. ಆಗ ಕಮೆಂಟರಿ ಡ್ಯೂಟಿಯಲ್ಲಿದ್ದವರು ಜಾನ್ನರ್ಸ್ ಮತ್ತು ಆಗ್ಗರ್ಸ್. ಈ “leg over” ಘಟನೆಯ ಬಗ್ಗೆ ಇವರಿಬ್ಬರ ನಡುವೆ ನಡೆದ ಹಾಸ್ಯಭರಿತ ಸಂಭಾಷಣೆ ಎಷ್ಟು ರಮ್ಯವಾಗಿತ್ತೆಂದರೆ ಅದನ್ನು ಕೇಳಿ ನಗು ತಡೆಯಲಾರದ ವಾಹನದ ಚಾಲಕರು ತಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಸಬೇಕಾಯಿತು. (https://www.youtube.com/watch?v=KsVTpX7LdZQ). ಇದು 2005ರಲ್ಲಿ ಅತ್ಯಂತ ಮಹತ್ವದ ಸ್ಪೋರ್ಟ್ ಕಮೆಂಟರಿಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಇಂಗ್ಲಂಡಿನ 1966ರ ಫುಟ್ ಬಾಲ್ ಜಯಕ್ಕೆ ಕಲಶವಿಟ್ಟ ವರ್ಣನೆಯನ್ನು (”they think it’s all over. Now it IS”) ಹಿಂದೆ ಹಾಕಿತ್ತು.
ನಾನು ಟಿ ಎಮ್ಮೆಸ್ ನಲ್ಲಿ ಕೇಳಿದ ಇನ್ನೊಂದು ರೋಚಕ ಘಟನೆಯೆಂದರೆ ಬ್ರಯನ್ ಜಾನ್ ಸ್ಟನ್ ಆಸ್ಟ್ರೇಲಿಯಾದ ಮೆಲ್ಬರ್ನ್ ಏರ್ಪೋರ್ಟಿನಲ್ಲಿ ಇಳಿದು ಇಮಿಗ್ರೆಷನ್ ಅಧಿಕಾರಿಯನ್ನು ಕಂಡಾಗ. ಅವರ ಸಂವಾದ ಹೀಗೆ ನಡೆಯಿತಂತೆ:(Looking at his passport):” I see you have no criminal record Mr Johnston
Brian said: ”I am sorry I didn’t realise that this is still a requirement her’e.
ಇವರ ಚುಟಕಗಳು, (gaffes) ಅನೇಕ. ”The bowler is Holding the batsman’s Willey!” ಇತ್ಯಾದಿ. (ಇದು ಅವರೇ ಹೇಳಿದ್ದು ಅಂತ ಪ್ರತೀತಿ). ಈತ ಕ್ರಿಕೆಟ್ ಇಲ್ಲದಿದ್ದಾಗ Down Your Way ಅನ್ನುವ ಬಹಳ ಒಳ್ಳೆ ರೇಡಿಯೊ ಪ್ರೋಗ್ರಾಮ್ ನಡೆಸಿ ಕೊಡುತ್ತಿದ್ದರು.
ಕೇಕ್ ಬಂದಿತೆಂದು ಕೇಕೆ ಹಾಕು!
ದೇಶದ ಅನೇಕ ಕಡೆಗಳಿಂದ ಬಿ ಬಿ ಸಿ ಸ್ಟುಡಿಯೋಗೆ ಕೇಕ್ ಗಳು ಬರುತ್ತೆ. ಈ ಸಂಪ್ರದಾಯದ ಮೂಲ ಪ್ರವರ್ತಕನೂ ಜಾನ್ ಸ್ಟನ್ ಅವರೇ. ಒಮ್ಮೆ ಅವರು ಮಧ್ಯಂತರದಲ್ಲಿ ತನಗೆ ಕೇಕ್ ಸಿಗಲೇ ಇಲ್ಲ ಅಂತ ಗೊಣಗಿದಾಗಿಂದ! ಕೆಲವು ವರ್ಷದ ಹಿಂದೆ ಬಕ್ಕಿಂಗಂ ಅರಮನೆಯಿಂದ ರಾಣಿ ಎಲಿಜಬೆತ್ ಫ್ರುಟ್ ಕೇಕ್ ಕಳಿಸಿದ್ದರು. ಇದನ್ನು ರಾಣಿ ಅವರೇ ಸ್ವತಃ ಮಾಡಿದ್ದಾರೆಯೇ ಅಂತ Aggers ಸಂಶಯ ಪಟ್ಟರಂತೆ. ಇದನ್ನು ಕೇಳಿ ಬಕ್ಕಿಂಗಂ ಅರಮನೆಯಿಂದ ತಕ್ಷಣ ಒಂದು ಸಂದೇಶ ಬಂತು: “Baked under close supervision of Her Majesty! ” ಒಮ್ಮೆ ಬೇರೆ ಒಬ್ಬ ’nice lady’ ಇಂಗ್ಲಂಡ್ ಕ್ರಿಕೆಟ್ ತಂಡ ನ್ಯೂಝಿಲಂಡಿನ ಟೂರ್ ಮಾಡುತ್ತಿದ್ದಾಗ ಅವರ ಸಲುವಾಗಿ ಸ್ವತಃ ತಾನೇ ಮಾಡಿದ ಒಂದು ಕೇಕ್ ಹೊತ್ತುಕೊಂಡು ಡನೀಡನ್ ಮೈದಾನಕ್ಕೆ ಮುಟ್ಟಿಸಿದಳಂತೆ!
ಥೆರಿಸಾ ಮೇ ಜೊತೆಗೆ ’ಆಗ್ಗರ್ಸ್’
ಆಟದ ಮದ್ಯ, ಊಟದ ವಿರಾಮದಲ್ಲಿ ಒಬ್ಬ ಗಣ್ಯ ವ್ಯಕ್ತಿ ಜೊತೆಯಲ್ಲಿ ಸಂಭಾಷಣೆ ನಡೆಯುತ್ತೆ. ಈಚೆಗೆ ನಡೆದ West Indies ODI ಮ್ಯಾಚ್ ನಲ್ಲಿ ಈಗಿನ ಪ್ರಧಾನ ಮಂತ್ರಿ ತೆರೇಸಾ ಮೇ ಬಂದು ಅವರು ಬೆಳದಿದ್ದು ಓದಿದ್ದು ಮತ್ತು ರಾಜಕೀಯಕ್ಕೆ ಇಳದಿದ್ದು ಮುಂತಾದ ವಿಷಯಗಳ ಮೇಲೆ ಮಾತಾನಾಡಿದರು. ನಂತರ ”ಕಳೆದ ವರ್ಷ ಟಪ್ಪರ್ವೇರ್ ಡಬ್ಬಿಯಲ್ಲಿ ನಾನು ಕೇಕ್ ಕಳಿಸಿದ್ದೆ ಆದರೆ ಖಾಲಿ box ನನಗೆ ವಾಪ ಸ್ಸು ಬರಲಿಲ್ಲ” ಅಂತ ದೂರು ಕೊಟ್ಟರಂತೆ! ಹೋದ ವರ್ಷ ನೊಬೆಲ್ ಪದಕ ಪಡೆದ ಹುಡಗಿ ಮಲಾನ ಮಹಿಳೆಯರ ವಿದ್ಯಾಭ್ಯಾಸದ ಮೇಲೆ ಮಾತನಾಡಿದಳು. ಹಿಂದಿನ ಪ್ರಧಾನ ಮಂತ್ರಿ ಜಾನ್ ಮೇಜರ್ ಮಾತ್ರ ಓವಲ್ ಅಥವಾ ಲಾರ್ಡ್ಸ್ ಕ್ರಿಕೆಟ್ ಮೈದಾನಗಳಲ್ಲಿ ನಡೆಯುವ ಮ್ಯಾಚ್ ಗಳಿಗೆ ತಪ್ಪದೆ ಹಾಜರಿರುತ್ತಿದ್ದರು.
ವ್ಯಾಖ್ಯಾನಗಾರ ಜೊತೆಯಲ್ಲಿ ಒಬ್ಬ “ತಜ್ಞ (expert ) ಇರುತ್ತಾರೆ. ಕೆಲವು ವರ್ಷದ ಹಿಂದೆ ಫ್ರೆಡ್ ಟ್ರೂಮನ್ ಈಗ Tuffers ಮತ್ತು ಮೈಕೆಲ್ ವಾನ್. ಇವರ ಕೆಲಸ ಆಟ ಮತ್ತು ಆಟಗಾರರ ಬಗ್ಗೆ ಕಾಮೆಂಟ್ ಮಾಡುವುದು. ಜಫರಿ ಬಾಯ್ ಕಾಟ್ ಪ್ರಸ್ಸಿದ್ದ ಆಟಗಾರ; ಈತ ತನ್ನ ಯಾರ್ಕ್ ಶೈರ್ ಉಚ್ಚಾರಣೆಯಲ್ಲಿ ತನಗೆ ಎಲ್ಲಾ ಗೊತ್ತಿದೆ (Mr Know-it-all) ಅಂತ ಮಾತನಾಡುವ ವ್ಯಕ್ತಿ!
ಅಡೆ ತಡೆಗಳನ್ನು ಎದುರಿಸಿ …
ಯಾವಾಗಲೂ ಈ ತಂಡದಲ್ಲಿ ಅನ್ಯೋನ್ಯತೆ ಇರುವುದಿಲ್ಲ ಅಂತ Aggers ಒಮ್ಮೆ ಹೇಳಿದ್ದಾರೆ, ಒಂದು ಕುಟುಂಬ ದಲ್ಲಿ ಹೇಗೆ ಮನಸ್ತಾಪಗಳು ಇರತ್ತೋ ಹಾಗೇ ಇಲ್ಲೂ ಸಹ. ಹಲವಾರು ವರ್ಷದ ಹಿಂದೆ ವರ್ಣಭೇದ (ಅಪಾರ್ಥೇಡ್) ಮೇಲೆ ತುಂಬಾ ಚರ್ಚೆ ನಡೆಯಿತು. ಜಾನರ್ಸ್ ಮತ್ತು ಜಾನ್ ಅರ್ಲಟ್ ಬೇರೆ ಬೇರೆ ಪಂಗಡಗಳಿಗೆ ಸೇರಿ ಚರ್ಚೆ ನಡೆಸಿದರು. ಇಂಗ್ಲೆಂಡ್ ತಂಡ ಬೇರೆ ದೇಶಕ್ಕೆ ಹೋದಾಗ ರೇಡಿಯೋ ಪ್ರಸಾರದ ಹಕ್ಕು ಆ ದೇಶದವರದ್ದು, ಎಂಬ ತಿಳುವಳಿಕೆ. 2001 ನಲ್ಲಿ ಶ್ರೀಲಂಕಾದಲ್ಲಿ ರಾಜಕೀಯ ಕಾರಣಗಳಿಂದ ಬಿ ಬಿ ಸಿ ರೇಡಿಯೋ ವಿತರಣಾ ತಂಡಕ್ಕೆ ಗಾಲ್ (Galle) ಊರಿನ ಸ್ಟೇಡಿಯಮ್ ಗೆ ಅನುಮತಿ ಸಿಗಲಿಲ್ಲ. ಆದರೆ Aggers ಹಿಂದೆ ಬೀಳದೆ ಕ್ರಿಡಾಂಗಣದ ಅಂಚಿನಲ್ಲೇ ಇದ್ದ ಗಾಲ್ ಕೋಟೆಯ ಮೇಲಿನಿಂದ ಆಟ ನೋಡಿ ಮೋಬೈಲ್ ಫೋನ್ ನಿಂದ ಕಾಮೆಂಟರಿ ಕೊಟ್ಟರು, ಭೋಜನ ವಿರಾಮದ ನಂತರ ಅನುಮತಿ ಸಿಗುವ ವರೆಗೆ! ವ್ಯಾಖ್ಯಾನಗಾರರ ಜೊತೆಯಲ್ಲಿ ಯಾವಾಗಲೂ ಒಬ್ಬ Statistician ಇರುತ್ತಾರೆ. ಶ್ಮರ್ಶುಧರ (ದಾಡಿವಾಲ) Bill Flindall (Bearders). ಉದಾಹರಣೆಗೆ, ತೆಂಡೂಲ್ಕರ್ ಕೊನೆ ಪಂದ್ಯದಲ್ಲಿ ಎಷ್ಟು ರನ್ನು ಹೊಡೆದರು ಅಂತ Blowers ಅವರು ಕೇಳಿದರೆ ಉತ್ತರ ತಕ್ಷಣ ಬರುತ್ತೆ. ಈಗ ಎಲ್ಲಾ ಅಂಕಿ ಸಂಕ್ಯೆಗಳು ಕಂಪ್ಯೂಟರ್ನಲ್ಲಿ ಇದೆ. ಆದರೆ 20-30 ವರ್ಷದಹಿಂದೆ ಇಂತಹ ಮಾಹಿತೆ ಕೊಡುವುದು ಕಷ್ಟವಾಗಿತ್ತು.
ಶನಿವಾರ ಮ್ಯಾಚ್ ನಡೆಯುವಾಗ ಕೆಲವು ವ್ಯಾಖ್ಯಾನಗಾರರು Primary Club ಟೈ ಧರಿಸುತ್ತಾರೆ. ಈ ಕ್ಲಬ್ ಗೆ ಸೇರಬೇಕಾಗಿದ್ದರೆ ನೀವು ಕ್ರಿಕೆಟ್ ಅಡಿದಾಗ ಮೊದಲಿನ ಬಾಲ್ ಗೆ ಔಟ್ ಆಗಿರಬೇಕು! ಟೈ ಮಾರಾಟದಿಂದ ಬಂದ ಹಣವನ್ನು ಅಂಧರ ಸಹಾಯಕ್ಕೆಂದು RNIB ಸಂಸ್ಥೆಗೆ ಕಳಿಸುತ್ತಾರೆ.
TMS: 60 ನಾಟ್ ಔಟ್ …The Ashes series: 69 ನಾಟ್ ಔಟ್ !
1782-83 ದಲ್ಲಿ ಶುರುವಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ ಆಶಿಸ್ (Ashes) ಪಂದ್ಯದ 70 ನೆಯ ಸರಣಿ ಈ ವರ್ಷ ನಡೆಯುತ್ತೆ. ಬಿ.ಬಿ.ಸಿ. ರೇಡಿಯೋದಲ್ಲಿ ಕಾಮೆಂಟ್ರಿ ಕೇಳಿ ಆನಂದಿಸಿ. ನನ್ನ ಪ್ರಕಾರ ಇನ್ನಾವ ದೇಶದಲ್ಲೂ ಟಿ ಮ್ ಸ್ ಸಮಾನ ಇಲ್ಲ,
ಟಿ ಎಂ ಸ್ ಈ ದೇಶದ ಒಂದು National Institution. ಅನೇಕ ಜನರಿಗೆ ಈ ಕಾರ್ಯಕ್ರಮ ಅತ್ಯಂತ ಸಂತೋಷವನ್ನು ತಂದಿದೆ., ಇದು ಹೀಗೆ ಬಹಳ ವರ್ಷ ಮುಂದೆವರಿಯಲಿ ಎಂದು ಹಾರೈಸುತ್ತೇನೆ
ರಾಮಮೂರ್ತಿ, ಬೇಸಿಂಗ್ ಸ್ಟೋಕ್
ಶ್ರೀವತ್ಸ ದೇಸಾಯಿ ಬರೆಯುತಾರೆ:
ನಾನೂ ಒಬ್ಬ ಟಿ ಎಮ್ ಎಸ್ ಫ್ಯಾನ್ ಎಂದು ಮೊದಲೇ ಡಿಕ್ಲೇರ್ ಮಾಡಿಬಿಡುತ್ತೇನೆ! ಕ್ರಿಕೆಟ್ ಸೀಸನ್ ಬಂತೆಂದರೆ ನನ್ನ ಧರ್ಮ ಬದಲಾಗಿಬಿಡುತ್ತದೆ!
ಅತ್ತ ಕ್ರಿಕೆಟ್ ಆಟ ನಡೆದಾಗೆಲ್ಲ ಒಂದು ಕಿವಿಯಲ್ಲಿ ಸದಾ ಇಯರ್ ಫೋನು ಇಟ್ಟುಕೊಂಡು ಹಿಂದಿನ ತೋಟದಲ್ಲಿ ’ಗಾರ್ಡನಿಂಗ್’ ಮಾಡುವ ಅಭ್ಯಾಸ ನನಗೆ. ಎರಡರಲ್ಲೂ ಎಷ್ಟು ತನ್ಮಯ ಎಂದರೆ, ಕಾಫಿ ಮಾಡಿ ಕಿಡಕಿ ತೆರೆದು ಮಡದಿ ಕೂಗಿದ್ದು ಕೇಳಿಸುತ್ತಿರಲೇ ಇಲ್ಲ. ಕೊನೆಗೆ ಇದುರಿಗೆ ಬಂದು ನಿಂತು ”ಡ್ರಿಂಕ್ಸ್ ಬ್ರೆಕ್” ಅಂತ ಆಮಂತ್ರಣವಿಡುತ್ತಿದ್ದಳು!
ಕ್ರಿಕೆಟ್ ಒಂದು ರಿಲಿಜನ್ ಅಂದರೆ ಕಮೆಂಟರಿ ಅದರ ಹರಿಕಥೆ (ಕಾಲಕ್ಷೇಪ) ಅನ್ನ ಬಹುದು. ಚಿಕ್ಕವನಿದ್ದಾಗ ಇಂಡಿಯಾದಲ್ಲಿ ನನಗೆ ಸಹ ರೇಡಿಯೋ ಕಾಮೆಂಟ್ರಿ ಕೇಳುವ ಹುಚ್ಚು. ಗೆಳೆಯರೊಂದಿಗೆ ಅದನ್ನು ಕೇಳುತ್ತ ಪರೀಕ್ಷೆಗೆ ಓದದೆ ಕಾಲಹರಣ ಮಾಡುತ್ತೀರಿ, ಅದು ಕಾಲಕ್ಷೇಪವೇ ಸರಿ ಅಂತ ತಂದೆ ತಾಯಿಗಳಿಂದ ಬೈಗಳು! ಈಗ ಅಷ್ಟೋತ್ತರದ ಅಂಕಿ (108) ಮರೆತರೂ 198 LW (ಟಿ ಎಂ ಎಸ್ ಪ್ರಸಾರದ ತರಂಗಾಂತರ) ಮರೆಯುವಂತಿಲ್ಲ!
ಟೀ ಮತ್ತು ಟೀ-ಟವೆಲ್ ಕಲ್ಚರ್!
ಆಂಗ್ಲರ ಟಿ ಕುಡಿಯುವ ಚಟ, ಮಧ್ಯಾಹ್ನದ ಟೀ ಬ್ರೆಕ್ ಇವೆಲ್ಲ ಅವರ ಕಲ್ಚರ್ ನಲ್ಲಿ ಹಾಸು ಹೊಕ್ಕಾಗಿರುವದು ಎಲ್ಲರಿಗೂ ಗೊತ್ತೇ ಇದೆ. ಅದರೆ ಹಿಂದೆಯೇ ಬಂದದ್ದು ಟೀ ಟ್ರೆ ಮೇಲಿನ ತಿಂಡಿಗಳ ಮೇಲೆ ಚಹದ ಹನಿ ಬೀಳದಿರಲೆಂದು ಹೊದಿಸುವ ಟೀ ಟವಲ್ ಮತ್ತು ವಿವಿಧ ತರಹದ ಟೀ ಟವೆಲ್ ಸಂಗ್ರಹಿಸುವ ಹವ್ಯಾಸ. ಪರದೇಶದವನಿಗೆ (ಅಮೆರಿಕನ್ ಅನ್ನಿರಿ) ಕ್ರಿಕೆಟ್ ಆಟದ ಪರಿಚಯ ಮಾಡಿಕೊಡುವ ಟೀ ಟವಲ್ ಮಾರಾಟ 1970 ರ ದಶಕದಲ್ಲಿ ಅರಂಭವಾಯಿತು. ನನ್ನ ಹತ್ತಿರವೂ ಒಂದು ಇದೆ. ಆ ಕ್ರಿಕೆಟ್ ಟದ ನಿಯಮಗಳ ವಿವರಣೆ ಬಹಳ ತಮಾಷೆಯಾಗಿದೆ, ಆದರೂ ನಿಜ. ಓದಿ ನೋಡಿ.
ಮಳೆ ಬಂದು ಮ್ಯಾಚ್ ನಿಂತಾಗ …
ಶಾಲೆಯಲ್ಲಿದ್ದಾಗ ಕೇಳಿದ ಮಾತು ನೆನಪಾಗುತ್ತದೆ: ನೀನು ನೋಡಿದ ಕ್ರಿಕೆಟ್ ಮಾಚಿನ ಬಗ್ಗೆ ಒಂದು ಪುಟದಷ್ಟು ನಿಬಂಧ ಬರೆಯಿರಿ ಅಂತ ಹೇಳಿ ಟೀಚರ್ ಹೊರಗೆ ಹೋಗಿ, ಅರ್ಧ ಗಂಟೆಯ ಮೇಲೆ ಬಂದು ಹುಡುಗರ ಬರಹಗಳನ್ನು ಪರೀಕ್ಷಿಸಿದಾಗ ಅವರ ಕಣ್ಣಿಗೆ ಬಿದ್ದದ್ದು ಒಬ್ಬ ಹುಡುಗ ಹರಸಾಹಸ ಮಾಡಿ ಬರೆದದ್ದು. ಇಡೀ ಹಾಳೆಯಲ್ಲಿ ಆ ಶೀರ್ಷಿಕೆಯ ಕೆಳಗೆ ಒಂದೇ ವಾಕ್ಯ: There was no play due to rain. (ಮಳೆಯಿಂದಾಗಿ ಆಟ ಆಗಲೇ ಇಲ್ಲ). ಎಷ್ಟೋ ಸಲ ಮಳೆ ಬಂದು ಆಟ ನಿಂತಾಗ ದುಡ್ಡು ಕೊಟ್ಟು ನೋಡಲು ಹೋದವರ ಫಜೀತಿ ಕೇಳ ಬೇಡಿ. ಆದರೆ ಮನೆಯಲ್ಲಿ ಕುಳಿತು ಕ್ರಿಕೆಟ್ ಹರಟೆ ಕೇಳುವದು ಟಿ ಎಮ್ ಎಸ್ ಭಕ್ತರಿಗೆ ರಸದೌತಣ. ಆಗ ಕಾಮೆಂಟ್ರಿ ಬಾಕ್ಸ್ ನಲ್ಲಿ ರಂಗೇರಿರುತ್ತದೆ ಎಂದರೆ ತಪ್ಪಿಲ್ಲ. ಹೀಗೆ ಆದಾಗ ಒಮ್ಮೆ 1984-85 ಇರಬಹುದು, ಇಳಿ ವಯಸ್ಸಿನಲ್ಲಿ ಕ್ರಿಕೆಟ್ ಆಟಗಾರರು ಕೆಲವರು ದೃಷ್ಟಿ ದೋಷಕ್ಕೆ ತುತ್ತಾಗುವದರ ಬಗ್ಗೆ ಚರ್ಚೆ ನಡೆದಿತ್ತು. ಒಬ್ಬ ’ಎಕ್ಸ್ ಪರ್ಟ್’ ಹೇಳಿದ್ದು, ಅದು ಜಗತ್ತಿನ ಬೇರೆ ಬೇರೆ ದೇಶಗಳ ಮೈದಾನದಲ್ಲಿ ತೀಕ್ಷ್ಣ ಬಿಸಿಲಲ್ಲಿ ತಾಸುಗಟ್ಟಲೆ ಸಮಯ ಕಳೆಯುವದೇ ಅದಕ್ಕೆ ಕಾರಣ ಎಂದು. ಅದನ್ನು ರೇಡಿಯೋದಲ್ಲಿ ಕೇಳುತ್ತಿದ್ದ ನಾನು (ಕಣ್ಣಿನ ವೈದ್ಯ) ಅದರ ಸತ್ಯಾಸತ್ಯತೆ ಬಗ್ಗೆ ಬರೆದು ಟಿ ಎಮ್ ಎಸ್ ಗೆ ಒಂದು ಕಾಗದ ಪೋಸ್ಟ್ ಮಾಡಿ (ಪಿಜನ್ ಪೋಸ್ಟ್!) ಅದನ್ನು ಮರೆತು ಬಿಟ್ಟಿದ್ದೆ. ಆಗ ಈ-ಮೇಲ್ ಬಳಕೆ ಇರಲಿಲ್ಲ. ಮರುದಿನ ಮತ್ತೆ ಮಳೆ ಬಂದು ಆಟ ನಿಂತಿತ್ತು. ಅಂದು ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದೆ. ಆಪರೇಷನ್ ಥೇಟರಿಗೆ ಹೋದಾಗ ನನ್ನನ್ನು ಸ್ವಾಗತಿಸಿದ ಸಿಬ್ಬಂದಿ ನನ್ನ ಪತ್ರಕ್ಕೆ ಶುಭಾಶಯಗಳೊಂದಿಗೆ. ನನಗೋ ಆಶ್ಚರ್ಯ. ಅವರಿಗೆ ಹೇಗೆ ಗೊತ್ತಾಯಿತು? ”ಈಗ ತಾನೆ ರೇಡಿಯೊದಲ್ಲಿ ಅದನ್ನು ಓದಿ ಹೇಳಿದರು, ನಿಮ್ಮ ಹೆಸರು, ಊರು ಎಲ್ಲದರ ಬಿತ್ತರಣೆಯಾಯಿತು,” ಅಂದರು. CMJ ಎಂಬ ಅಡ್ಡಹೆಸರಿನ ಕಮೆಂಟೇಟರ್ ಕ್ರಿಸ್ಟೋಫರ್ ಮಾರ್ಟಿನ್-ಜೆಂಕಿನ್ಸ್ ಅವರು ನನ್ನ ’ಕೀರ್ತ” ಹರಡಿದ್ದರು! ಮುಂದೆ ಎಷ್ಟೋ ತಿಂಗಳು ಅದರ ’ಹಾವಳಿ” ಅನುಭವಿಸಬೇಕಾಯಿತು! ಹೂವಿನೊಂದಗೆ ನಾರು ಸ್ವರ್ಗಕ್ಕೆ? ಅಥವಾ ’ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವೇತ್”! ಬ್ರಿಟಿಷ್ ಮಳೆಯ ಪ್ರಭಾವ ನೋಡಿ!
ಮೇಲೆ ರಾಮಮೂರ್ತಿಯವರು ಶ್ರೀಲಂಕೆಯ ಗಾಲ್ ನಲ್ಲಿ ”ಆಗ್ಗರ್ಸ್ ಮೋಬೈಲ್ ಕಮೆಂಟರಿ ಪ್ರಸಾರ”ದ ಬಗ್ಗೆ ಬರೆದು ’ಬ್ರಿಟಿಷರ ಜಿಗುಟಿ’ನ ವರ್ಣನೆ ಮಾಡಿದ್ದಾರೆ. ಪಾಕಿಸ್ತಾನದ ಫೈಸಲಾಬಾದದಲ್ಲಿ ಇಂಗ್ಲಂಡಿನ ಮೈಕೆಲ್ ಗ್ಯಾಟಿಂಗ್-ಶಕೂರ್ ರಾಣಾ ಚಕಮಕಿಯ ಅಸಹ್ಯ ಘಟನೆ ಕ್ರಿಕೆಟ್ ಗೆ ತಂದ ಕಳಂಕ. ನಾನು ಕೇಳುತ್ತ ಕುಳಿತಿದ್ದೆ. ಆಗ ಮೂರನೆಯ ದಿನದ ಆಟ ಶುರುವೇ ಆಗದಿದ್ದರೂ ತಾಸುಗಟ್ಟಲೆ ಟಿ ಎಮ್ ಎಸ್ ಪ್ರಸಾರ ನಡೆದೇ ಇತ್ತು, ಏನೇನೋ ಮಾತು ಕತೆ ಕಮೆಂಟೇಟರ್ಗಳ ಮಧ್ಯೆ. ”Men may come and men may go, TMS goes on forever” ಅನ್ನುವಂತೆ. ಏನು ನಡೆಯುತ್ತಿದೆ, ಆಟ ಯಾವಾಗ ಪ್ರಾರಂಭ ಎಂದು ಯಾರಿಗೂ ಗೊತ್ತಿಲ್ಲ. ಎರಡು ತಾಸಿನ ವರೆಗೆ ಕೇಳಿ ನಂತರ ನಾನು ರೇಡಿಯೋ ಆಫ್ ಮಾಡಿದ್ದೆ!
ನೀವು ಟಿ ಎಮ್ ಎಸ್ ಭಕ್ತರಾದರೆ ನೀವು ಸುಸಂಸ್ಕೃತರು ಎಂದು ಗಣಿಸಲ್ಪಡುತ್ತೀರಿ! ಎಚ್ಚರಿಕೆ: ಆದರೆ ಅದು Life changer ಸಹ ಆಗಬಹುದು, ವ್ಯಂಗ ಚಿತ್ರದಲ್ಲಿ ತೋರಿಸಿದಂತೆ!