ಸರ್ ಅರ್ಥರ್ ಕಾನನ್ ಡೊಯ್ಲ್ ಬರೆದ The Story of the Black Doctor ಕಥೆಯ ಅನುವಾದ. ಈ ಕಥೆ The Strand magazine ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
Bishop’s Crossing ಅನ್ನುವ ಸಣ್ಣ ಊರು ಲಿವರ್ ಪೂಲ್ ಪಟ್ಟಣದಿಂದ ಸುಮಾರು ಹತ್ತು ಮೈಲಿ. ೧೮೭೦ ವರ್ಷದಲ್ಲಿ ಡಾ. ಅಲೋಸಿಸ್ಸ್ ಲಾನಾ ಎಂಬ ವೈದ್ಯ ತನ್ನ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಲು ಈ ಊರಿಗ ಬಂದ, ಈ ವೈದ್ಯನ ಕೇವಲ ಎರಡು ವಿಷಯಗಳು ಮಾತ್ರ ಊರಿನ ಜನಗಳಿಗೆ ಗೊತ್ತಿತ್ತು, ಒಂದು, ಈತ ಗ್ಲಾಸ್ಗೋ (Glasgow ) ವಿಶ್ವ ವಿದ್ಯಾಲಯದಿಂದ ಉನ್ನತ ವರ್ಗದ ಪದವಿ ಪಡೆದಿದ್ದು ಮತ್ತು ಕಪ್ಪು ಮೈಬಣ್ಣ, ಆದರೆ ಹೊರ ದೇಶದ ಪ್ರಜೆ, ಯಾವ ದೇಶ ಅನ್ನುವುದು ಗೊತ್ತಿಲ್ಲ. ಇವನ ನಡತೆ, ಹಾಕುವ ಬಟ್ಟೆಗಳು ಮತ್ತು ವೈಲಕ್ಷಣ್ಯ ಯುರೋಪಿಯನ್ ಮಾದರಿ. ವೈದ್ಯಕೀಯ ವೃತ್ತಿ ಯಲ್ಲಿ ನಿಪುಣ. ಇಷ್ಟಾದರೂ ಈತ ಒಂಟಿಯಾಕಿದ್ದಾನೆ ಎಂಬ ಮಾತು ಊರಿನವರ ಬೀದಿ ಮಾತಾಗಿತ್ತು. ವರ್ಷದ ನಂತರ ಲಿವರ್ ಪೂಲ್ ದಿನ ಪತ್ರಿಕೆಯಲ್ಲಿ ಈ ಪ್ರಕಟಣೆ ಯನ್ನು ನೋಡಿ ಜನರಿಗೆ ಸಂತೋಷ ಮತ್ತು ಆಶ್ಚರ್ಯ ಆಯಿತು.
The engagement is announced between Dr Aloysius Lana of Bishop’s Crossing and Frances, daughter of Late James Morton of Leigh Hall.
ಇವರಿಬ್ಬರ ಪರಿಚಯ ಹೇಗಾಯಿತು ಅನ್ನುವದು ಸಹಾ ಊರಿನ ಸಣ್ಣ ಮಾತಾಯಿತು. ಫ್ರಾನ್ಸೆಸ್ ತಂದೆ ಮತ್ತು ತಾಯಿ ತೀರಿದ್ದರಿಂದ ಮನೆಯಲ್ಲಿ ಅವಳ ಅಣ್ಣ ಆರ್ಥರ್ ಮಾತ್ರ ಈ ಮನೆಯಿದ್ದರು. ಇದು ಆ ವರ್ಷದ ಫೆಬ್ರುವರಿ ತಿಂಗಳಲ್ಲಿ, ಜೂನ್ ತಿಂಗಳಲ್ಲಿ ಡಾ.ಲಾನಾಗೆ ಹೊರದೇಶದ ಒಂದು ಲಕೋಟೆ ಅಂಚೆಯಲ್ಲಿ ಬಂತು. ಊರಿನ ಅಂಚೆ ಮಾಸ್ಟರ್ ಇದನ್ನು ಕುಶಾಲವಾಗಿ ನೋಡಿ ಇದು ಬ್ಯೋನಸ್ ಏರಿಸ್ ಅಂಚೆಮುದ್ರೆ ಅರ್ಜಂಟೈನ ದೇಶದ್ದು ಎಂದು ತಿಳಿದ; ಈ ವಿಚಾರ ಊರಿನವರ ಹತ್ತಿರ ಹರಟೆ ಹೊಡೆಯುವಾಗ ಬೇಕಾಗಬಹುದು ಅಲ್ಲವೇ?
ಮಾರನೇ ದಿನ ಡಾ. ಲಾನಾ ಫ್ರಾನ್ಸೆಸ್ ಮನೆಯಲ್ಲಿ ಬಹಳ ಹೊತ್ತು ಇದ್ದು ಹೊರಗೆ ಬಂದಾಗ ಮಖದ ಮೇಲೆ ಉದ್ರೇಕ ಇದ್ದಿದ್ದು ಅವಳ ಮನೆ ಸೇವಕಿ ಗಮನಿಸಿದಳು ಅದೂ ಅಲ್ಲದೆ ಫ್ರಾನ್ಸೆಸ್ ದಿನವೆಲ್ಲ ತನ್ನ ಕೋಣೆಯಿಂದ ಹೊರಗೂ ಸಹ ಬರಲಿಲ್ಲ.
ವಾರದ ನಂತರ ಈ ಸಂಬಂಧ ಮುರಿದಿದೆ ಅನ್ನುವ ಮಾತು ಊರಿನ ಜನರ ಮಾತಾಯಿತು. ಡಾ. ಲಾನಾ ಫ್ರಾನ್ಸಸ್ ಗೆ ಹೀಗೆ ಮೋಸ ಮಾಡ ಬಾರದಾಗಿತ್ತು ಅನ್ನುವ ಮಾತು ಎಲ್ಲರ ಬಾಯಿನಲ್ಲಿ ಇತ್ತು. ಅವಳ ಅಣ್ಣ ಅರ್ಥರ್ ಇದಕ್ಕೆ ತಕ್ಕ ಶಿಕ್ಷೆ ಆಗಬೇಕು ಅಂತ ಕೆಲವರ ಹತ್ತಿರ ಬೆದರಿಕೆ ಹಾಕಿದ್ದನಂತೆ.
ಭಾನುವಾರ ಚರ್ಚಿನಲ್ಲಿ ನಡೆಯುವ ಪ್ರಾರ್ಥನೆಗೂ ಡಾ. ಲಾನಾ ಬರುತ್ತಿರಲಿಲ್ಲ. ವೈದ್ಯಕೀಯ ಮಾಸಪತ್ರಿಕೆ Lancet ನಲ್ಲಿ ಬಿಷಪ್’ಸ್ ಕ್ರಾಸ್ಸಿಂಗ್ ನಲ್ಲಿ ಒಂದು ವೈದ್ಯಕೀಯ ನಡೆಸುವ ಮನೆ ಮಾರಾಟಕ್ಕೆ ಇದೆ ಅನ್ನುವ ಜಾಹಿರಾತು ಸಹ ಬಂದಿತ್ತು.
ಸೋಮವಾರ, ಜೂನ್ ೨೫ ನೇ ತಾರೀಕು, ಇಷ್ಟುದಿನ ಊರಿನ ವದಂತಿ ಹಬ್ಬಿದ್ದ ಮಾತಿನ ಬದಲು ಒಂದು ದುರಂತವಾದ ಸುದ್ದಿ ಕಾಡುಕಿಚ್ಚಿನಂತೆ ಹರಡಿತು. ಇದರ ಬಗ್ಗೆ ವಿವರಣೆ ಹೀಗಿದೆ.
ಡಾ. ಲಾನಾ ಮನೆಯಲ್ಲಿ ಇಬ್ಬರು ಮಹಿಳೆಯರು ಕೆಲಸದಲ್ಲಿದ್ದರು, ಮಾರ್ಥಾ ಅನ್ನುವ Housekeeper ಮತ್ತು ಮೇರಿ ಸೇವಕಿ. ಕುದುರೆ ಗಾಡಿ ಓಡಿಸುವನು ಮತ್ತು ಕೈಕೆಲಸಕ್ಕೆ ಇದ್ದ ಒಬ್ಬ ಹುಡುಗ ಮನೆಯ ಹೊರಗೆ ಒಂದು ಸಣ್ಣ ಕೊಠಡಿಯಲ್ಲಿ ಮಲಗುತ್ತಿದ್ದರು. ಡಾ. ಲಾನಾ ರಾತ್ರಿ ಬಹಳ ಹೊತ್ತು ತನ್ನ ಓದಿನಕೋಣೆಯಲ್ಲಿ (Study) ಇರುವುದು ಇವರಿಗೆಲ್ಲ ತಿಳಿದಿತ್ತು. ಇದರ ಪಕ್ಕದಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುವ ಕೊಠಡಿ; ಇದಕ್ಕೆ ಹೊರಗಿನಿಂದ ಬರುವವರಿಗೆ ಪ್ರತ್ಯೇಕ ಬಾಗಿಲು ಇತ್ತು.
ಅವತ್ತಿನ ದಿನ, ಮಾರ್ಥಾ ಸುಮಾರು ರಾತ್ರಿ ೯ ೩೦ ನೋಡಿದಾಗ ಡಾ. ಲಾನಾ ತನ್ನ ಕೊಣೆ ಯಲ್ಲಿ ಬರೆಯುತ್ತಿದ್ದನ್ನು ಗಮನಿಸಿ ಶುಭರಾತ್ರಿ ಹೇಳಿ ಮೇರಿಯನ್ನು ಮಲಗಲು ಕಳಿಸಿದಳು. ಮಾರ್ಥಾಳ ಮನೆ ಕೆಲಸ ಮುಗಿದಾಗ ಗಡಿಯಾರ ೧೧ ಹೊಡೆದಿದ್ದು ಕೇಳಿ ಅವಳ ಕೋಣೆ ಸೇರಿದಳು. ಸುಮಾರು ಇಪ್ಪತ್ತು ನಿಮಿಷದ ನಂತರ ಯಾರೋ ಗಟ್ಟಿಯಾಗಿ ಕಿರಿಚಿದ್ದು ಕೇಳಿ ಕೆಳಗೆ ಬಂದು ಡಾ. ಲಾನಾ ಕೋಣೆಯ ಮುಂದೆ ನಿಂತು ಬಾಗಿಲನ್ನು ತಟ್ಟಿದಾಗ ಒಳಗಿಂದ ಕರ್ಕಶ ದನಿಯಲ್ಲಿ “ಯಾರು ಅಲ್ಲಿ?” ಎಂದರು. “ನಾನು ಮಾರ್ಥಾ” ಎಂದಾಗ, “ನನ್ನನ್ನು ಸುಮ್ಮನೆ ಬಿಟ್ಟು ಹೋಗು” ಅನ್ನುವ ಉತ್ತರ ಬಂತು. “ನನ್ನನ್ನು ಕರೆದಿದ್ದ ಹಾಗಿತ್ತು ಸರ್” ಎಂದರೂ ಉತ್ತರ ಬರಲಿಲ್ಲ. ಆ ರೀತಿಯಾಗಿ ಡಾ. ಲಾನಾ ಯಾವತ್ತೂ ಮಾತನಾಡಿರಲಿಲ್ಲ. ಆದ್ದರಿಂದ ಈ ಗಡುಸಾದ ಧ್ವನಿ ಕೇಳಿ ಅವಳಿಗೆ ಸ್ವಲ್ಪ ಅನುಮಾನ ಬಂದರೂ ಇದು ಇರಬೇಕೆಂದು ಹಿಂತಿರಿಗಿದಳು.
ಸುಮಾರು ೧೨ ಗಂಟೆಗೆ ಶ್ರೀಮತಿ ಮಾಡಿಂಗ್ ಅನ್ನುವ ಮಹಿಳೆ ತನ್ನ ಗಂಡನ ಆರೋಗ್ಯ ಹದಗೆಟ್ಟಿರುವ ಕಾರಣದಿಂದ ಈ ವೈದ್ಯನ ಕೋಣೆಯ ಬಾಗಿಲು ತಟ್ಟಿದಳು. ಒಳಗೆ ದೀಪ ಉರಿಯುತಿತ್ತು, ಆದರೆ ಉತ್ತರ ಸಿಗಲಿಲ್ಲ. ನಿರಾಶೆಯಿಂದ ವಾಪಸ್ಸು ಹೋಗುತ್ತಿದ್ದಾಗ, ರಸ್ತೆಯಲ್ಲಿ ಒಬ್ಬ ಮನುಷ್ಯ ಕೈಯಲ್ಲಿ ಒಂದು ಚಾವಟಿ ತರಹ ಕಂಡ ವಸ್ತುವನ್ನು ಹಿಡಿದು ವೈದ್ಯನ ಮನೆ ಒಳಗೆ ಪ್ರವೇಶಿದ್ದನ್ನು ಈಕೆ ಕಂಡು ತಲೆಯೆತ್ತಿ ನೋಡಿದಾಗ ಆ ಮನುಷ್ಯ ಅರ್ಥರ್ ಮಾರ್ಟನ್ ಎನ್ನುವುದು ಗೊತ್ತಾಯಿತು. “ವೈದ್ಯರು ಮನೆಯಲ್ಲಿ ಇರುವಂತೆ ಕಾಣಿವುದಿಲ್ಲ ಸರ್” ಅಂದಳು. ಅರ್ಥರ್ ಕೋಪದಿಂದ “ನಿನಗೆ ಹೇಗೆ ಗೊತ್ತು? ದೀಪ ಒಳಗೆ ಉರಿಯುತ್ತಿದೆ” ಎಂದು ಹೇಳಿ ವೈದ್ಯನ ಮನೆ ಬಳಿಗೆ ಹೋದ.
ಮಹಿಳೆ ಮಾಡಿಂಗ್ ಮನೆಗೆ ಹಿಂತಿರುಗಿದಳು. ಆದರೆ ಸುಮಾರು ಮೂರು ಗಂಟೆಗೆ ಗಂಡನ ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದರಿಂದ ಪುನ್ಹ ವೈದ್ಯರನ್ನು ನೋಡಲು ವಾಪಸ್ಸು ಬಂದಳು. ಮನೆ ಹತ್ತಿರ ಗಿಡಗಳ ಮಧ್ಯ ಯಾರೋ ಹೊಂಚು ಹಾಕುತ್ತಿದ್ದು ಕಾಣಿಸಿತು, ಒಳಗೆ ದೀಪ ಇನ್ನೂ ಬೆಳಗುತ್ತಿತ್ತು. ಆದರೆ ಬಾಗಿಲನ್ನು ಅನೇಕ ಸಲ ತಟ್ಟಿದಾಗಲೂ ಉತ್ತರವಿರಲಿಲ್ಲ. ಬಾಗಿಲ ಪಕ್ಕದಲ್ಲೇ ಇದ್ದ ಕಿಟಕಿಗೆ ಹಾಕಿದ್ದ ಪರದೆ ಸ್ವಲ್ಪ ತೆಗದಿತ್ತು. ನೋಡಿದಾಗ ದೀಪವು ಸಹ ಉರಿಯುತ್ತಿತ್ತು. ಆದರೆ ಯಾರೂ ಕಾಣಸಲಿಲ್ಲ. ಮೇಜಿನ ಮೇಲೆ ಅನೇಕ ಪುಸ್ತಕಗಳು ಮತ್ತು ವೈದ್ಯನಿಗೆ ಬೇಕಾದ ಕೆಲವು ಸಲಕರಣೆಗಳು ಹರಡಿತ್ತು. ನೆಲದ ಮೇಲೆ ಬಿಳಿಯದೊಂದು ಕೈಚೀಲ (glove) ಬಿದ್ದಿದ್ದು ಕಾಣಿಸಿತು. ಆದರೆ ಇನ್ನೂ ಸರಿಯಾಗಿ ನೋಡಿದಾಗ ಇದು ಬರಿ ಕೈ ಚೀಲ ಅಲ್ಲ, ಒಬ್ಬ ಮನುಷ್ಯನ ತೋಳು ಮತ್ತು ದೇಹ ನೆಲದ ಮೇಲಿತ್ತು. ಇಲ್ಲಿ ದೊಡ್ಡ ಅನಾಹುತವೇ ನಡೆದಿದೆ ಅಂತ ತಿಳಿದು ಮನೆಯ ಮುಂಬಾಗಿಲಿಗೆ ಬಂದು ಕರೆಗಂಟೆ (ಡೋರ್ ಬೆಲ್) ಬಾರಿಸಿ ಮಾರ್ಥಾಳನ್ನು ಎಬ್ಬಿಸಿ ಗಾಬರಿಯಿಂದ ತಾನು ನೋಡಿದನ್ನು ವಿವರಿಸಿದಳು. ಮಾರ್ಥಾ ತಕ್ಷಣ ವೈದ್ಯನ ಕೋಣೆಗೆ ಹೋಗಿ ನೋಡಿದಾಗ ಡಾ . ಲಾನಾ ನೆಲದಮೇಲೆ ಬಿದ್ದಿರುವುದನ್ನು ಕಂಡು ಮೇರಿಯನ್ನು ಪೊಲೀಸರನ್ನು ಕರೆಯಲು ಕಳಿಸಿದಳು. ವೈದ್ಯನ ಒಂದು ಕಣ್ಣು ಕಪ್ಪಾಗಿತ್ತು, ಅಲ್ಲದೆ ಮುಖದ ಮೇಲೆ ಮತ್ತು ನೆತ್ತಿಯ ಮೇಲೆ ಗಾಯಗಳ ಕಲೆ ಸಹ ಇತ್ತು. ಅಂದರೆ ಯಾರೋ ಸಾಯುವುದಕ್ಕೆ ಮುಂಚೆ ಹಿಂಸೆ ಮಾಡಿರಬೇಕು ಅನ್ನುವುದು ಖಚಿವಾಯಿತು. ವೈದ್ಯನ ಬಟ್ಟೆಗಳಲ್ಲಿ ಬದಲಾವಣೆ ಇರಲಿಲ್ಲ. ಕಾಲಿನ ಬಿಳಿಯ ಚಪ್ಪಲಿಗಳ (slippers) ಮೇಲೆ ಕೊಳೆ ಇರಲಿಲ್ಲ, ಆದರೆ ನೆಲದ ಮೇಲಿ ಹಾಸಿದ್ದ ರತ್ನಕಂಬಳಿ ಮೇಲೆ ಗಲೀಜಾದ ಬೂಟಿನ ಕಲೆಗಳಿತ್ತು. ಅಂದರೆ ಯಾರೋ ಹೊರಗಿನಿಂದ ಬಂದು ವೈದ್ಯನ ಕೊಲೆ ಮಾಡಿ ಪರಾರಿ ಆಗಿರಬೇಕು. ಬೂಟಿನ ಗಾತ್ರ ನೋಡಿ ಇದು ಒಬ್ಬ ಗಂಡಿನ ಕೆಲಸ ಎಂದು ಪೋಲಿಸರು ಊಹೆಪಟ್ಟರು. ಇದು ಬಿಟ್ಟರೆ ಅವರಿಗೆ ಇನ್ನೇನು ಸುಳಿವು ಇರಲಿಲ್ಲ. ವೈದ್ಯನ ಚಿನ್ನದ ಗಡಿಯಾರ ಜೇಬಿನಲ್ಲೇ ಇತ್ತು. ಮೇಜಿನ ಮೇಲೆ ದುಡ್ಡಿನ ಪೆಟ್ಟಿಗೆ (cash box) ಇದ್ದು, ಅದರಲ್ಲಿ ದುಡ್ಡು ಇರಲಿಲ್ಲ. ಮಾರ್ಥಾಳ ಪ್ರಕಾರ ಅವತ್ತೇ ಡಾ. ಲಾನಾ ಮನೆ ಕಂದಾಯದ ಹಣ ಕೊಟ್ಟಿದ್ದರು; ಅಂದರೆ ಕಳ್ಳತನ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು. ಇನ್ನೊಂದು ಮುಖ್ಯವಾದ ವಿಷಯ ಮಾರ್ಥಾಳ ಗಮನಕ್ಕೆ ಬಂದಿದ್ದು ಫ್ರಾನ್ಸೆಸ್ನ ಭಾವಚಿತ್ರ ಚೌಕಟ್ಟಿನಲ್ಲಿರಲಿಲ್ಲ. ಅದೇ ಸಾಯಂಕಾಲ ಈ ಭಾವಚಿತ್ರವನ್ನು ಮಾರ್ಥಾ ನೋಡಿದ್ದಳು. ನೆಲದ ಮೇಲೆ ಬಿದ್ದಿದ್ದ ಒಂದು ಹಸಿರು ಬಣ್ಣದ ಕಣ್ಣಿಗೆ ಕಟ್ಟುವ ಬಟ್ಟೆ (Eye Patch) ಇವಳ ಗಮನಕ್ಕೆ ಬಿತ್ತು. ಇದನ್ನು ಹಿಂದೆ ನೋಡಿದ ಹಾಗೆ ಅವಳಿಗೆ ಜ್ಞಾಪಕವಿರಲಿಲ್ಲ.
ಪೊಲೀಸರಿಗೆ ಅರ್ಥರ್ ಮಾರ್ಟನ್ ಬಿಟ್ಟರೆ ಇನ್ನಾರ ಮೇಲೂ ಸಂಶಯ ಬರಲಿಲ್ಲ. ಇವನು ಮಧ್ಯರಾತ್ರಿಯ ವೇಳೆಯಲ್ಲಿ ವೈದ್ಯನ ಮನೆಯ ಮುಂದೆ ಇದ್ದ ಮತ್ತು ಕೈಯಲ್ಲಿ ಒಂದು ಚಾವಟಿ ಬೇರೆ ಇತ್ತು. ಅವನ ತಂಗಿಗೆ ಈ ವೈದ್ಯ ಮಾಡಿದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದ. ಸಾಕಷ್ಟು ಆಧಾರಗಳಿಂದ ಪೊಲೀಸರಿಗೆ ಇವನನ್ನು ದಸ್ತಗಿರಿ ಮಾಡಿದರು. ಮರಣೋತ್ತರ ಪರೀಕ್ಷೆಯ ಪ್ರಕಾರ ಮೃತನ ಹೃದಯ ಬಹಳ ದುರ್ಬಲವಾಗಿತ್ತು; ಆದರೆ ಡಾ. ಲಾನಾ ಗಟ್ಟಿಮುಟ್ಟಾಗಿದ್ದವನು, ಆತನ ಮರಣ ಹಿಂಸೆ ಮತ್ತು ಗಾಯಗಳಿಂದ ಆದದ್ದು; ಆರ್ಥರ್ ಮಾರ್ಟನ್ ವೈದ್ಯನ ಕೊಲೆ ಮಾಡುವ ಮುಂಚೆ ಹೊರಗೆ ಪೊದೆಗಳಲ್ಲಿ ಮುಚ್ಚಿಟ್ಟಿಕೊಂಡಿದ್ದ – ಇತ್ಯಾದಿಯಾಗಿ ಫಿರ್ಯಾದಿ ವಕೀಲರು ಮತ್ತು ಪೊಲೀಸರು ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟರು. ಆದರೆ ಅರ್ಥರ್ ಮಾರ್ಟನ್ ಕಡೆಯ ವಕೀಲ ಮಿಸ್ಟರ್ ಹಂಫ್ರಿ, “ನಮ್ಮ ಕಕ್ಷಿಗಾರ ಬಹಳ ಗಣ್ಯವ್ಯಕ್ತಿ. ಸಮಾಜದಲ್ಲಿ ಅವನಿಗೆ ಬಹಳ ಗೌರವ ಇದೆ. ಆದರೆ ಆತನಿಗೆ ಸ್ವಲ್ಪ ಅಹಂಕಾರ ಇದೆ ಅಂದರೆ ತಪ್ಪಾಗಲಾರದು, ಕೊಲೆ ಮಾಡುವ ಕೆಟ್ಟತನ ಖಂಡಿತ ಇಲ್ಲ. ಇವನು ಡಾ. ಲಾನಾ ಅವರನ್ನು ನೋಡುವುದಕ್ಕೆ ಹೋಗಿದ್ದು ನಿಜ. ಅವರ ಸಂಸಾರದ ಒಂದು ಸಮಸ್ಯೆಯನ್ನು ಬಗೆಹರಿಸುವ ಉದ್ದೇಶ ಇತ್ತು. ಆದರೆ ಅವನು ಡಾ ಲಾನಾ ಮನೆ ಒಳಗೆ ಹೋಗಲಿಲ್ಲ. ವೈದ್ಯ ಮನೆಯಲ್ಲಿ ಇಲ್ಲ ಅನ್ನುವುದು ಗೊತ್ತಾದದ್ದರಿಂದ ಸುಮಾರು ಮೂರು ಗಂಟೆಯವರೆಗೂ ಕಾದು ಮನೆಗೆ ಬಂದ. ನನ್ನ ಕಕ್ಷಿಗಾರ ಕೊಲೆ ಮಾಡಿಲ್ಲ. ವೈದ್ಯನ ಕೊಲೆಯ ವಿಚಾರ ಇವನಿಗೆ ಗೊತ್ತಾಗಿದ್ದು ಪೊಲೀಸರು ದಸ್ತಗಿರಿ ಮಾಡಲು ಬಂದಾಗ ಮಾತ್ರ, ಆದ್ದರಿಂದ ಈತ ನಿರಪರಾಧಿ” ಎಂದು ವಾದಿಸಿದರು.
ಮಾರನೆ ದಿನ ನ್ಯಾಯಾಲಯದಲ್ಲಿ ಇಬ್ಬರ ವಕೀಲರೂ ವಾದ ನಡೆಸಿದರು. ಹಲವಾರು ಸಾಕ್ಷಿಗಳು ಹೇಳಿಕೆ ಕೊಟ್ಟರು. ಶ್ರೀಮತಿ ಮಾಡಿಂಗ್ ತನ್ನ ಸಾಕ್ಷಿಯಲ್ಲಿ ತಾನು ನೋಡಿದ್ದನ್ನು ಹೇಳಿದಳು. ಅರ್ಥರ್ ಮಾರ್ಟನ್ ಮನೆಯ ಸೇವಕಿ ಅವಳ ಯಜಮಾನ ಮನೆಗೆ ಬಂದಾಗ ಸುಮಾರು ಮೂರು ಗಂಟೆ ಅನ್ನವುದು ಕೇಳಿ ಕೆಲವರಿಗೆ ಸಂಶಯ ಉಂಟಾಯಿತು.
ನ್ಯಾಯಾಧೀಶರು ಮರುದಿನಕ್ಕೆ ತಮ್ಮ ವಾದವನ್ನು ಮುಂದುವರೆಸಲು ವಕೀಲರಿಗೆ ಕರೆಕೊಟ್ಟಾಗ, ಮಿಸ್ಟರ್ ಹಂಫ್ರಿ ಎದ್ದು ನಿಂತು “ನ್ಯಾಯಾಧೀಶರೇ, ನಮ್ಮ ಕಡೆಯಿಂದ ಒಬ್ಬರು ಸಾಕ್ಷಿ ಕೊಡಲು ಬಂದಿದ್ದಾರೆ. ಅವರಿಗೆ ಅವಕಾಶ ಇವತ್ತೇ ಕೊಡಿ” ಅಂತ ಮನವಿ ಮಾಡಿದರು.
“ಮಿಸ್ ಫ್ರಾನ್ಸೆಸ್ ಮಾರ್ಟನ್ ” ಎಂದು ಕರೆದಾಗ ಎಲ್ಲರಿಗೂ ಆಶ್ಚರ್ಯ – ಈಕೆ ಇದುವರೆಗೂ ಯಾವ ರೀತಿಯಲ್ಲೂ ಈ ಮೊಕದ್ದಮೆಯಲ್ಲಿ ಭಾಗವಾಗಿರಲಿಲ್ಲ! ಫ್ರಾನ್ಸೆಸ್ ಮಖದಲ್ಲಿ ಯಾವ ಆತಂಕವೂ ಇರಲಿಲ್ಲ. ಸಾಕ್ಷಿಸ್ಥಾನದಲ್ಲಿ ನಿಂತು ಬೈಬಲ್ ಹಿಡಿದು ಸತ್ಯವನ್ನು ಹೇಳುತ್ತೇನೆ ಎಂದು ಪ್ರಮಾಣವಚನ ಮಾಡಿ, “ತನ್ನ ಮತ್ತು ಡಾ. ಲಾನಾ ಅವರ ಸಂಬಂಧ ಕೊನೆಗಾಣಿಸಿದ್ದರಲ್ಲಿ ಡಾ. ಲಾನಾ ತಪ್ಪು ಏನೂ ಇಲ್ಲ. ಆತ ಈ ವಿಚಾರದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಾರೆ. ಅವರ ಮನೆಯಲ್ಲಿ ಏನೋ ಪ್ರಸಂಗ ನಡೆದು ನಮ್ಮಿಬ್ಬರ ಸಂಬಂಧ ಮುರಿಯುತು. ಎಷ್ಟೇ ನೋವಾದರೂ ನನಗೆ ಅವರ ಇಕ್ಕಟ್ಟು ಅರ್ಥವಾಗಿದೆ. ಅರ್ಥರ್ ಮುಂದೆ ಇದನ್ನು ವಿವರಿಸಿದೆ, ಆದರೆ ಅವನು ಬಹಳ ಕೋಪದಲ್ಲಿದ್ದ. ಸರಿಯಾದ ಬುದ್ದಿ ಕಲಿಸಬೇಕು, ಡಾ. ಲಾನಾ ಹತ್ತಿರ ಇವತ್ತೇ ಮಾತನಾಡುತ್ತೇನೆ ಮತ್ತು ಪರಿಹಾರ ಕಾಣಿಸುತ್ತೇನೆ ಅಂತ ಹೇಳಿ ಹೊರಟುಹೋದ. ಅರ್ಥರ್ ಸ್ವಲ್ಪ ಕೋಪಿಷ್ಠ, ನನ್ನ ಮಾತು ಕೇಳಲಿಲ್ಲ” ಎಂದಾಗ ಈ ಮಾತುಗಳನ್ನು ಕೇಳಿ ಆರ್ಥರ್ ಕೊಲೆಗಾರ ಇರಬೇಕು ಅನ್ನುವ ಸಂಶಯ ಕೆಲವರಿಗೆ ಬಂದಿದ್ದು ಸಹಜ.
ಮಿಸ್ಟರ್ ಹಂಫ್ರಿ: ಮಿಸ್ ಫ್ರಾನ್ಸೆಸ್, ನಿಮ್ಮ ನಂಬಿಕೆಯಲ್ಲಿ ನಿಮ್ಮ ಅಣ್ಣ ಕೊಲೆಗಾರನೇ?
ನ್ಯಾಯಾಧೀಶರು: ಈ ಪ್ರೆಶ್ನೆಯನ್ನು ನೀವು ಕೇಳುವುದಕ್ಕೆ ನಮ್ಮ ಅನುಮತಿ ಇಲ್ಲ, ಇದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತೆ.
ಮಿಸ್ಟರ್ ಹಂಫ್ರಿ: ಸರಿ. ಮಿಸ್ ಫ್ರಾನ್ಸೆಸ್ ಡಾ. ಲಾನಾ ಮರಣಕ್ಕೆ ನಿಮ್ಮ ಅಣ್ಣ, ಹೊಣೆ ಅಲ್ಲ ಅನ್ನುತ್ತೀರಾ?
ಮಿಸ್ ಫ್ರಾನ್ಸೆಸ್: ಹೌದು.
ಮಿಸ್ಟರ್ ಹಂಫ್ರಿ: ನಿಮಗೆ ಹೇಗೆ ಗೊತ್ತು?
ಮಿಸ್ ಫ್ರಾನ್ಸಸ್: ಡಾ. ಲಾನಾ ಬದುಕಿದ್ದಾರೆ, ಆದ್ದರಿಂದ.
ಇದನ್ನು ಕೇಳಿ ಎಲ್ಲರೂ ಚಕಿತರಾದರು ಮತ್ತು ಗುಸು ಗುಸು ಮಾತು ಕೇಳಿ ನ್ಯಾಯಾಧೀಶರು “order, order ” ಅಂತ ಕೂಗಿ ಮಿಸ್ಟರ್ ಹಂಫ್ರಿ ಅವರನ್ನು ಮುಂದುವರೆಸುದಕ್ಕೆ ಆಜ್ಞಾಪಿಸಿದರು.
ಮಿಸ್ಟರ್ ಹಂಫ್ರಿ: ಇದು ನಿಮಗೆ ಹೇಗೆ ಗೊತ್ತು?
ಮಿಸ್ ಫ್ರಾನ್ಸಸ್: ಅವರಿಂದ ನನಗೆ ಒಂದು ಕಾಗದ ಬಂದಿದೆ, ಈ ಪ್ರಕರಣ ಆದಮೇಲೆ ಬರೆದಿದ್ದು.
ಮಿಸ್ಟರ್ ಹಂಫ್ರಿ: ಈ ಕಾಗದ ನಿಮ್ಮ ಬಳಿ ಇದೆಯೇ?
ಮಿಸ್ ಫ್ರಾನ್ಸಸ್: ಹೌದು, ಅದನ್ನು ತೋರಿಸುವ ಉದ್ದೇಶ ಇಲ್ಲ.
ಮಿಸ್ಟರ್ ಹಂಫ್ರಿ: ಲಕೋಟೆ ನಿಮ್ಮ ಹತ್ತಿರ ಇದೆಯೇ?
ಮಿಸ್ ಫ್ರಾನ್ಸಸ್: ಇದೆ.
ಮಿಸ್ಟರ್ ಹಂಫ್ರಿ: ಅದರ ಮೇಲೆ ಅಂಚೆ ಗುರುತು ಇದೆಯೇ?
ಮಿಸ್ ಫ್ರಾನ್ಸಸ್: ಇದೆ, ಲಿವರ್ ಪೂಲ್
ಮಿಸ್ಟರ್ ಹಂಫ್ರಿ: ತಾರೀಕು?
ಮಿಸ್ ಫ್ರಾನ್ಸಸ್: ೨೨ ಜೂನ್.
ಮಿಸ್ಟರ್ ಹಂಫ್ರಿ: ಹಾಗಾದರೆ ಡಾ. ಲಾನಾ ಮರಣದ ಸುದ್ದಿ ಹರಡಿದ ಮೇಲೆ, ಅವರದ್ದೇ ಬರವಣಿಗೆ ಎಂಬುದನ್ನ ನೀವು ಪ್ರಮಾಣ ಮಾಡುತ್ತೀರಾ?
ಮಿಸ್ ಫ್ರಾನ್ಸಸ್: ಖಂಡಿತವಾಗಿ.
ಮಿಸ್ಟರ್ ಹಂಫ್ರಿ: ನ್ಯಾಯಾಧೀಶರೇ, ನಾನು ಇನ್ನೂ ಆರು ಸಾಕ್ಷಿಗಳನ್ನು ಕರೆಯುತ್ತೇನೆ, ಈ ಬರವಣಿಗೆ ಡಾ. ಲಾನಾ ಅವರದ್ದು ಅನ್ನುವ ಬಗ್ಗೆ.
ನ್ಯಾಯಾಧೀಶರು ಇದನ್ನು ಒಪ್ಪಿ ನಾಳೆ ಮುಂದುವರೆಸೋಣ ಅಂದರು.
ಆದರೆ ಫಿರ್ಯಾದಿ ವಕೀಲ, ಮಿಸ್ಟರ್ ಕಾರ್ಟರ್, “ಈ ಕಾಗದ ನಮ್ಮ ವಶಕ್ಕೆ ಕೊಡಿ, ನಾವು ಇದನ್ನು ಪರಿಶೀಲಿಸಿ ಬರವಣಿಗೆ ಡಾ ಲಾನಾ ಅವರದ್ದೋ ಎಂಬುದನ್ನು ತಿಳಿಯಬೇಕು. ಈ ಕಾಗದ ಮಿಸ್ ಫ್ರಾನ್ಸೆಸ್ ಹತ್ತಿರ ಇದ್ದಿದ್ದರೆ, ಇದನ್ನು ಮುಂಚೆಯೇ ಪೊಲೀಸರಿಗೆ ತಿಳಿಸಿದ್ದರೆ ಈ ಮೊಕ್ಕದ್ದಮೆಯ ಅವಶ್ಯಕತೆ ಇರುತ್ತಿರಲಿಲ್ಲ. ಈ ನಾಟಕ ಅರ್ಥರ್ ಹೇಳಿ ಮಾಡಿಸಿರಬೇಕು, ನಮಗೆ ಈ ವಿಚಾರದಲ್ಲಿ ನಂಬಿಕೆ ಬರುತ್ತಿಲ್ಲ” ಅಂದರು.
ಮಿಸ್ಟರ್ ಹಂಫ್ರಿ: ಮಿಸ್ ಫ್ರಾನ್ಸೆಸ್, ಈ ಅಪವಾದನೆಗೆ ಉತ್ತರ ಕೊಡಿ.
ಮಿಸ್ ಫ್ರಾನ್ಸೆಸ್: ಡಾ. ಲಾನಾ ಈ ಕಾಗದಲ್ಲಿ ಇರುವ ವಿಚಾರವನ್ನು ಬಹಿರಂಗ ಮಾಡುವುದು ಬೇಡ ಅಂದಿದ್ದರು.
ಮಿಸ್ಟರ್ ಕಾರ್ಟರ್: ಹಾಗಾದರೆ ಈಗ ಏಕೆ ಬಹಿರಂಗ ಮಾಡಿದರಿ?
ಮಿಸ್ ಫ್ರಾನ್ಸೆಸ್: ನನ್ನ ಅಣ್ಣನನ್ನು ಉಳಿಸುವುದಕ್ಕೆ.
ನ್ಯಾಯಾಧೀಶರು: ಮಿಸ್ಟರ್ ಹಂಫ್ರಿ, ಹಾಗಾದರೆ ಮರಣಹೊಂದಿದ ವ್ಯಕ್ತಿ ಯಾರು? ಶವ ಪರೀಕ್ಷೆ ಮಾಡಿದವರು, ಡಾ. ಲಾನಾ ಅವರ ಸೇವಕರು ಮತ್ತು ಇತರರು ಇದರ ಬಗ್ಗೆ ಯಾವ ಸಂದೇಹವನ್ನು ತೋರಿಸಿಲ್ಲ. ಆದರೆ, ಮಿಸ್ ಫ್ರಾನ್ಸೆಸ್ ಡಾ . ಲಾನಾ ಬದುಕಿದ್ದಾರೆ ಅಂತ ಹೇಳಿದ್ದಾರೆ. ಇದನ್ನು ಪರಿಶೀಲಿಸಿ ನಾಳೆ ಇಲ್ಲಿಗೆ ಬನ್ನಿ.
ಮಿಸ್ಟರ್ ಹಂಫ್ರಿ: ನಾಳೆ ಇದನ್ನು ಪರಿಹರಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ.
ಮಾರನೇ ದಿನ ನ್ಯಾಯಾಯಲದಲ್ಲಿ ಜನರು ಕಿಕ್ಕಿರಿದ್ದರು. ನ್ಯಾಯಾಧೀಶರು ಬಂದು ಕೂರುವ ಮುಂಚೆ, ಮಿಸ್ಟರ್ ಹಂಫ್ರಿ ಮತ್ತು ಮಿಸ್ಟರ್ ಕಾರ್ಟರ್ ಕೆಲವು ನಿಮಿಷಗಳು ಗುಟ್ಟಾಗಿ ಮಾತನಾಡಿದರು. ಮಿಸ್ಟರ್ ಕಾರ್ಟರ್ ಮಖದಲ್ಲಿ ದಿಗ್ಬ್ರಮೆ ಕಾಣುತಿತ್ತು. ಮಿಸ್ಟರ್ ಹಂಫ್ರಿ ನ್ಯಾಯಾಧೀಶರಿಗೆ ನಮಸ್ಕರಿಸಿ ಮಿಸ್ ಫ್ರಾನ್ಸೆಸ್ ಅವರನ್ನು ಪುನಃ ಸಾಕ್ಷಿಯಾಗಿ ಕರೆಯುವುದಿಲ್ಲವೆಂದು ಅರುಹಿದರು.
ನ್ಯಾಯಾಧೀಶರು: ಮಿಸ್ಟರ್ ಹಂಫ್ರಿ, ನಿಮ್ಮ ನಿರ್ಧಾರ ಈ ಮೊಕದ್ದಮೆಗೆ ಅತೃಪ್ತಿಕರವಾಗಿ ಕಾಣಿಸುತ್ತೆ, ಇದಕ್ಕೆ ಫಿರ್ಯಾದಿ ವಕೀಲರದ್ದು ಸಮ್ಮತಿ ಇದೆಯೆ?
ಮಿಸ್ಟರ್ ಹಂಫ್ರಿ: ಇದೆ, ನಮ್ಮ ಮುಂದಿನ ಸಾಕ್ಷಿ ಈ ಸಮಸ್ಯೆಯನ್ನು ಬಗೆಹರಿಸಬಹುದು.
ನ್ಯಾಯಾಧೀಶರು: ಸರಿ, ಈ ಸಾಕ್ಷಿಯನ್ನು ಕರೆಯಿರಿ.
ಮಿಸ್ಟರ್ ಹಂಫ್ರಿ: ನಾನು ಡಾ ಅಲೋಸಿಸ್ಸ್ ಲಾನಾ ಅವರನ್ನು ಕರೆಯುತ್ತಿದ್ದೇನೆ ನ್ಯಾಯಾಧೀಶರೇ.
ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಮತ್ತು ದಿಗ್ಬ್ರಮೆ ಉಂಟಾಗಿ ಗುಸು ಗುಸು ಮಾತುಗಳು ಪ್ರಾರಂಭವಾಯಿತು, ಆದರೆ ನ್ಯಾಯಾಧೀಶರು “ಆರ್ಡರ್, ಆರ್ಡರ್” ಅಂತ ಹೇಳಿದ ನಂತರ ಎಲ್ಲರೂ ಸಾಕ್ಷಿಕಟ್ಟೆ ಕಡೆ ಗಮನವಿಟ್ಟರು.
ಡಾ. ಲಾನಾ, ಪ್ರಮಾಣವಚನ ಮಾಡಿ, ತನ್ನ ಕಡೆಯಿಂದ ಒಂದು ಹೇಳಿಕೆ ಕೊಡುವುದಕ್ಕೆ ಅಪ್ಪಣೆ ಕೇಳಿ ಹೀಗೆ ಹೇಳಿದರು.
“ನನ್ನ ಉದ್ದೇಶ ಜೂನ್ ೨೧ರ ದಿನ ನಡೆದಿದ್ದನ್ನು ಮುಚ್ಚುಮರೆ ಇಲ್ಲದೆ ಇಲ್ಲಿ ಹೇಳುವುದಾಗಿದೆ. ಇಲ್ಲಿ ಕೆಲವರಿಗೆ ಅರ್ಜಂಟೈನ್ ದೇಶದ ರಾಜಕೀಯ ಗೊತ್ತಿದ್ದರೆ, ಲಾನಾ ಮನೆತನದವರ ಬಗ್ಗೆ ಗೊತ್ತಿರಬೇಕು. ನಮ್ಮ ತಂದೆ ಸ್ಪೇನ್ ದೇಶದ ಮೂಲದವರು; ಆದರೆ ಅರ್ಜೆಂಟೈನಾದಲ್ಲಿ ನೆಲಸಿ ಉನ್ನತ ಹುದ್ದೆಗಳಲ್ಲಿದ್ದವರು. ಕೊನೆಗೆ ಆ ದೇಶದ ರಾಷ್ಟ್ರಪತಿ ಆಗುವ ಮುಂಚೆ ಸಾನ್ ಹುವಾನ್ ನಲ್ಲಿ ನಡೆದ ಗಲಭೆಯಲ್ಲಿ ಸಿಕ್ಕಿಕೊಂಡು ತಮ್ಮ ಅಸ್ತಿ ಮತ್ತು ಪ್ರಾಣವನ್ನು ಕಳೆದುಕೊಂಡರು. ಹೀಗಾಗಿ ನಾನು ಮತ್ತು ನನ್ನ ಅವಳಿ ಸಹೋದರ ಅರ್ನೆಸ್ಟ್ ಬದುಕುವುದು ಬಹಳ ಕಷ್ಟವಾಯಿತು. ನಾವಿಬ್ಬರೂ ಒಟ್ಟಿಗೆ ಇದ್ದಾಗ ಜನರಿಗೆ ವ್ಯತ್ಯಾಸ ಕಾಣುತ್ತಿರಲಿಲ್ಲ, ಹೋಲಿಕೆ ಅಷ್ಟಿತ್ತು. ಆದರೆ ನಮ್ಮ ಗುಣಗಳು ಅಜಗಜಾಂತರ. ಅವನ ದುಷ್ಟತನ ನನ್ನಿಂದ ಸಹಿಸುವುದಕ್ಕೆ ಸಾದ್ಯವಿರಲಿಲ್ಲ, ಆದಷ್ಟು ಅವನಿಂದ ದೂರವಾಗಬೇಕೆಂಬ ಅಸೆ ಬಲವಾಯಿತು. ಕೊನೆಗೆ ಸಾಕಷ್ಟು ಹಣ ಕೂಡಿಸಿ ಅರ್ಜಂಟೈನ್ ಇಂದ ಯುರೋಪಿನಲ್ಲಿ ಕೆಲಸ ಹುಡುಕುವ ಉದ್ದೇಶ ಮಾಡಿ ಬಂದೆ. ಕೊನೆಗೆ ಗ್ಲಾಸ್ಗೋ (Glasgow) ಯೂನಿವೆರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ Bishop’s Crossingನಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದೆ. ಅರ್ನಸ್ಟ್ ನನ್ನನ್ನು ಇಲ್ಲಿ, ಅಂದರೆ ಲ್ಯಾಂಕಾಶೈರ್ ನ ಒಂದು ಸಣ್ಣ ಊರಿನಲ್ಲಿ, ಹುಡುಕುವುದು ಸಾಧ್ಯವೇ ಇಲ್ಲವೆಂಬುದೇ ನನ್ನ ನಂಬಿಕೆಯೂ ಸಹ ಕಾರಣವಾಗಿತ್ತು. ಆದರೆ ಹೇಗೋ ನನ್ನ ವಿಳಾಸ ಪತ್ತೆ ಮಾಡಿ, ಅವನು ಇಲ್ಲಿಗೆ ಬರುತ್ತೇನೆಂದು ಕಾಗದ ಬರೆದ. ಇವನು ಬಂದರೆ ನನಗೆ ಬೇಕಾದವರ ಮುಂದೆ ಅವಮಾನವಾಗುವುದು ಖಂಡಿತ.
“ಅವನ ಕಾಗದ ಬಂದ ಕೆಲವು ವಾರದಲ್ಲಿ ಒಂದು ರಾತ್ರಿ ನಾನು ನನ್ನ ಕೋಣೆಯಲ್ಲಿ ಕುಳಿತಿದ್ದಾಗ ಹೊರಗೆ ಯಾರೋ ಬಂದ ಶಬ್ದ ಕೇಳಿಸಿತು. ಕಿಟಕಿ ಸ್ವಲ್ಪ ತೆಗದಿತ್ತು ಒಬ್ಬರ ಮಖ ಕಾಣಿಸಿತು. ಒಂದು ಕ್ಷಣ ನನ್ನ ಮುಖವನ್ನೇ ಗಾಜಿನ ಕನ್ನಡಿಯಲ್ಲಿ ನೋಡುತಿದ್ದೇನೆ ಅನ್ನುವ ಭ್ರಮೆ! ಬಾಗಿಲಿಗೆ ಹೋಗಿ ನೋಡಿದರೆ ಅದು ಅರ್ನೆಸ್ಟ್! ಇದು ಸುಮಾರು ಹತ್ತು ಗಂಟೆ ಸಮಯ. ಅವನ ಸ್ಥಿತಿ ನೋಡಿ ನನಗೆ ಗಾಬರಿ ಆಯಿತು. ಮಖದ ಮೇಲೆ ಕೆಲವು ಗಾಯಗಳಿತ್ತು, ಕಣ್ಣಿಗೆ ಹಸಿರು ಬಟ್ಟೆ ಕಟ್ಟಿತ್ತು ಮತ್ತು ಮದ್ಯ ಕುಡಿದ ವಾಸನೆ ಬಂತು. ಮನೆ ಒಳಗೆ ನುಗ್ಗಿ ಕಣ್ಣಿನ ಮೇಲಿದ್ದ ಬಟ್ಟೆಯನ್ನು ಕಿತ್ತು ಬಿಸಾಕಿ, ಕಾಡುಮೃಗದಂತೆ ಶತಪಥ ಓಡಾಡಿ ಕುಡಿಯೋದಕ್ಕೆ ಬೀರ್ ಕೊಡು ಮತ್ತು ದುಡ್ಡು ಕೊಡು ಅಂತ ಕೂಗಾಡಿದ. ನಾನು ತಾಳ್ಮೆಯಿಂದ ಇದ್ದಿದ್ದು ಅವನಿಗೆ ಇನ್ನೂ ಕೋಪ ಬಂದು ನನ್ನ ಮೇಲೆ ಕೈ ಮಾಡಲು ಪ್ರಯತ್ನಿಸಿದಾಗ ಅವನು ಪ್ರಜ್ಞೆ ತಪ್ಪಿ ಕಿರುಚುತ್ತಾ ಕೆಳಗೆ ಕುಸಿದು ಬಿದ್ದ. ತಕ್ಷಣ ಅವನನ್ನು ಎತ್ತಿ ಸೋಫಾ ಹತ್ತಿರ ಮಲಗಿಸಿ ನಾಡಿಯನ್ನು ಪರೀಕ್ಷಿದಾಗ ಅವನು ಇನ್ನಿಲ್ಲ ಎನ್ನುವುದು ಖಚಿತವಾಯಿತು. ಮರಣ ಬಹುಶಃ ಹೃದಯಘಾತದಿಂದ. ಬಹಳ ಹೊತ್ತು ಕಕ್ಕಾಬಿಕ್ಕಿಯಾಗಿ ಅಲ್ಲೇ ಅವನ ಮುಂದೆ ಕುಳಿತೆ. ಮಾರ್ಥಾ ಬಾಗಿಲು ತಟ್ಟಿದ್ದು ಕೇಳಿಸಿತು, ಆದರೆ ಅವಳನ್ನು ಗದರಿಸಿ ಕಳಿಸಿಬಿಟ್ಟೆ. ನಂತರ, ಬಹುಶಃ ಒಬ್ಬ ರೋಗಿ ಇರಬೇಕು, ಬಾಗಿಲನ್ನು ತಟ್ಟುತ್ತಿರುವ ಶಬ್ದ ಕೇಳಿದರೂ ನಾನು ಗಮನ ಕೊಡಲಿಲ್ಲ.
“ಅನೇಕ ಯೋಚನೆಗಳು ನನ್ನ ಮನಸ್ಸಿಗೆ ಬಂದವು; ನನ್ನ ವೈದ್ಯಕೀಯ ವೃತ್ತಿ ಇಲ್ಲಿ ಯಶಸ್ವಿಯಾಗಿದ್ದರೂ, ಮುಂಚೆ ನಡೆದಿದ್ದ ಘಟನೆಯೂ ನನ್ನನ್ನು ಕಾಡುತಿತ್ತು. ಊರಿನ ಜನರ ಮನಸ್ಸು ನನ್ನ ಬಗ್ಗೆ ದ್ವೇಷತಾಳಲು ಆರಂಭಿಸಿತ್ತು. ನಾನು ನಿರೀಕ್ಷಿಸಿದ ಅನುಕಂಪದ ಬದಲು ದ್ವೇಷಪೂರ್ಣ ನಡುವಳಿಕೆ ನನ್ನನ್ನು ಕಾಡಲಾರಂಭಿಸಿತು. ನಡೆದಿದ್ದ ಅರ್ನೆಸ್ಟ್ ಪ್ರಕರಣ ಮುಗಿದಿರಬಹುದು, ಆದರೆ ಇನ್ನು ಮುಂದೆ ನನ್ನ ಜೀವನ ಹೇಗಿರುತ್ತೋ ಅನ್ನುವ ಚಿಂತೆ ಮುಸುಕಿತು. ಈ ಊರಿನಿಂದ ದೂರ ಹೋಗುವ ಆಲೋಚನೆಯು ಸಹ ಹಿಂದೆ ಆಗಾಗ್ಗೆ ಬಂದಿತ್ತು; ಸರಿ, ಆ ಸಮಯ ಈಗ ಬಂದಿದೆ ಅನ್ನುವ ನಿರ್ಧಾರಕ್ಕೆ ಬಂದೆ. ಮೃತನಾಗಿ ಮಲಗಿದ್ದ ಅರ್ನಸ್ಟ್ ನನ್ನು ನೋಡಿದಾಗ ನನಗೂ ಅವನಿಗೂ ಬಹಳ ವ್ಯತ್ಯಾಸವಿಲ್ಲದಿರುವುದು ಅರಿವಾಯಿತು. ಅವನು ಒಳಗೆ ಬಂದಿದ್ದು ಯಾರೂ ನೋಡಿರಲಾರರು; ಅವನಿಗೆ ನನ್ನ ಬಟ್ಟೆಗಳನ್ನು ತೊಡಿಸಿ, ಅವನ ಬಟ್ಟೆಯನ್ನು ನಾನು ಧರಿಸಿ ಇಲ್ಲಿಂದ ಪರಾರಿ ಆದರೆ, ಡಾ. ಲಾನಾ ಅವರ ಕೋಣೆಯಲ್ಲೇ ಪ್ರಾಣ ಬಿಟ್ಟಿದ್ದಾರೆ ಅಂತಲೇ ಜನ ಅಂದುಕೊಳ್ಳುತ್ತಾರೆ. ಹೀಗನ್ನಿಸಿದ ಒಂದು ಗಂಟೆಯ ನಂತರ, ಪೆಟ್ಟಿಗೆಯಲ್ಲಿದ್ದ ಹಣ ಮತ್ತು ಒಬ್ಬರ ಭಾವಚಿತ್ರ ಎರಡನ್ನೇ ನನ್ನ ಜೋಬಿನಲ್ಲಿ ಇಟ್ಟಿಕೊಂಡು ಮನೆಯಿಂದ ಯಾರಿಗೂ ಕಾಣದಿರುವ ರಸ್ತೆಯಲ್ಲಿ ಲಿವರ್ ಪೂಲ್ ಕಡೆ ಹೊರಟು ಬೆಳಗ್ಗೆ ಬಂದು ಸೇರಿದೆ. ಅಲ್ಲಿ ಕೊರುನಕ್ಕೆ (Corunna) ಹೊರಡಲಿದ್ದ ಹಡಗನ್ನು ಹತ್ತಿದೆ. ನನ್ನ ಉದ್ದೇಶ, ಈ ಊರಿನ ಕೆಲವರಿಂದ ದೂರವಾಗಬೇಕೆಂದಾಗಿತ್ತು – ಇದನ್ನು ನೀವು ನಂಬಬೇಕು ಅನ್ನುವುದು ನನ್ನ ಕೋರಿಕೆ. ಈ ಸಮುದ್ರಯಾನದ ಸಮಯದಲ್ಲಿ ನನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡುವುದಕ್ಕೆ ಸಮಯ ಸಿಗಬಹುದೆಂದು ನನ್ನ ಊಹೆಯಾಗಿತ್ತು. ಈ ಪ್ರಪಂಚದಲ್ಲಿ ನನಗೆ ಬೇಕಾದ ಒಬ್ಬರಿಗೆ ನೋವು ತರುವುದು, ಆಕೆ ಮನಸ್ಸಿಲ್ಲೇ ಕೊರಗುವುದು ಮತ್ತು ಇತರರು ನನ್ನ ಬಗ್ಗೆ ಅಸಡ್ಡೆಯಿಂದ ಮಾತನಾಡಿ ಆಕೆ ನೋವು ಅನುಭವಿಸುವುದು ಸರಿಯಲ್ಲವೆಂದನಿಸಿ, ಅಲ್ಲಿಂದಲೇ ನಡೆದಿದ್ದ ವಿಚಾರವನ್ನು ವಿವರಿಸಿ ಒಂದು ಪತ್ರವನ್ನು ಬರೆದು, ಆಕೆಯ ಹೆಸರಿಗೆ ತುರ್ತು ಅಂಚೆಯಲ್ಲಿ ಕಳಿಸಿದೆ. ಈ ವಿಷಯ ರಹಸ್ಯವಾಗಿ ನಮ್ಮಲ್ಲಿ ಮಾತ್ರ ಇರಲಿ ಅನ್ನುವುದನ್ನು ಸಹ ಬರೆದಿದ್ದೆ. ಅಕಸ್ಮಾತ್ತು ಈ ರಹಸ್ಯವನ್ನು ಆಕೆ ಒತ್ತಡದಿಂದ ಬಹಿರಂಗಪಡಿಸಿದ್ದರೆ ಆಕೆಯ ಮೇಲೆ ನನ್ನ ಸಹಾನುಭೂತಿ ಖಂಡಿತ ಇರುತಿತ್ತು.
“ನಿನ್ನೆ ರಾತ್ರಿ ತಾನೇ ನಾನು ಇಂಗ್ಲೆಂಡಿಗೆ ವಾಪಸ್ಸು ಬಂದೆ. ಬಂದು ಮುಟ್ಟುವವರೆಗೂ ನನಗೆ ಈ ಪ್ರಕರಣ ಬಗ್ಗೆ ಏನೂ ಗೊತ್ತಿರಲಿಲ್ಲ. ಇಲ್ಲಿನ ದಿನ ಪತ್ರಿಕೆಯಲ್ಲಿ ಅರ್ಥರನ ಮೇಲೆ ನನ್ನ “ಕೊಲೆ” ಮಾಡಿದ ಅಪವಾದ ಇದೆ ಎಂದು ತಿಳಿಯಿತು. ಆದ್ದರಿಂದ ಆದಷ್ಟು ಬೇಗ ಈ ನ್ಯಾಯಾಲಯದಲ್ಲಿ ಸಾಕ್ಷಿ ಕೊಡುವುದಕ್ಕೆ ಬಂದಿದ್ದೇನೆ.”
ಡಾ. ಲಾನಾ ಮಾಡಿದ ಇಂತಹ ಅಸಾಧಾರಣವಾದ ಹೇಳಿಕೆಯಿಂದ ಮೊಕದ್ದಮೆಯು ಕೊನೆಗಂಡಿತು. ನ್ಯಾಯಾಲಯವು ಮುಂದಿನ ತನಿಖೆ ಮಾಡಿದಾಗ ಅರ್ನಸ್ಟ್ ದಕ್ಷಿಣ ಅಮೆರಿಕದಿಂದ ಬಂದ ಹಡಗಿನ ವೈದ್ಯರ ಸಾಕ್ಷಿಯಲ್ಲಿ ಈತ ಹೃದಯ ರೋಗದಿಂದ ನರಳುತಿದ್ದ ಮತ್ತು ಇದಕ್ಕೆ ಚಿಕಿತ್ಸೆ ಕೊಡಲಾಗಿತ್ತು ಎಂಬುದು (ಅವನ ಶವಪರೀಕ್ಷೆಯಲ್ಲಿ ಹೇಳಿದಂತೆ) ಅರಿವಾಯಿತು.
ಡಾ. ಲಾನಾ Bishop’s Crossing ಗೆ ಹಿಂತಿರುಗಿದಾಗ ಅರ್ಥರ್ ತಾನು ಈ ವಿಚಾರದಲ್ಲಿ ಸಭ್ಯತೆಯಿಂದ ನಡೆದಿಲ್ಲ ಅನ್ನುವದನ್ನು ಅರಿತು ಕ್ಷಮೆ ಕೋರಿದ ಮತ್ತು ಅವನ ತಂಗಿ ಮತ್ತು ಡಾ ಲಾನಾ ಸಂಬಂಧದ ಬಗ್ಗೆ ಏನೂ ಅಡಚಣೆ ಇಲ್ಲವೆಂದ.
ಕೆಲವು ವಾರದಲ್ಲಿ ಲಿವರ್ ಪೂಲ್ ದಿನ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಯಿತು:
“ಸೆಪ್ಟೆಂಬರ್ ೧೯ನೇ ತಾರೀಕು Bishop ‘s Crossing ಚರ್ಚಿನಲ್ಲಿ, ಅರ್ಜಂಟೈನ್ ರಾಜ್ಯದ ವಿದೇಶಮಂತ್ರಿಗಳಾಗಿದ್ದ ದಿವಂಗತ ಡಾನ್ ಲಾನಾ ಅವರ ಪುತ್ರ ಡಾ ಅಲೋಯ್ಸಿಯಸ್ ಲಾನಾ ಮತ್ತು ಫ್ರಾನ್ಸಿಸ್ ಮೊರ್ಟನ್ (ದಿವಂಗತ ಜೇಮ್ಸ್ ಮೊರ್ಟನ್ ಪುತ್ರಿ) ಅವರ ಮದುವೆಯನ್ನು ರೆವರೆಂಡ್ ಜಾನ್ಸನ್ ಅವರು ನೆರವೇರಿಸಿದರು.”
*********************************************************************************************************
Like this:
Like Loading...