ಮತ್ತೊಂದು ಕಳ್ಳತನದ ಕಥೆ!

 ಆತ್ಮೀಯ ಓದುಗರೇ, 
ಈ ವಾರ ಮತ್ತೊಂದು ಕಳ್ಳತನದ ಕಥೆ ನಿಮ್ಮ ಓದಿಗೆ ಸಿದ್ಧವಿದೆ, ಅನಿವಾಸಿಯ ಹಿರಿಯ ಸದಸ್ಯರಲ್ಲೊಬ್ಬರಾದ ಡಾ ಶ್ರೀರಾಮುಲು ಅವರು ತಮ್ಮ ಮನೆಗೆ ಕಳ್ಳರಿಂದ ಕರುಣಿಸಲ್ಪಟ್ಟ ‘ಶ್ರೀವತ್ಸ’ದ ಕುರಿತು ಹಾಸ್ಯಮಯ ಘಟನೆಯನ್ನು ಅನನ್ಯ ಶೈಲಿಯಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಡಾ ಶ್ರೀವತ್ಸ ದೇಸಾಯಿಯವರು ರಸವತ್ತಾದ ವಿವರಣೆಯನ್ನು ನೀಡಿ, ಡಾ ಗುಡೂರ್ ಅವರ ವ್ಯಂಗ್ಯಚಿತ್ರಗಳು, ಬರಹಗಳಿಗೆ ಮತ್ತಷ್ಟು ಮೆರುಗನ್ನು ತಂದಿದೆ. 
ಈ ವಾರದ ಓದಿಗೆ ತಮಗಿದೊ ಸ್ವಾಗತ.
-ಸಂಪಾದಕಿ 

।।ಸರ್ವಂ ಶ್ರೀವತ್ಸಮಯಂ।। – ಡಾ ಶ್ರೀರಾಮುಲು

ಚಿತ್ರ: ಡಾ ಎಲ್ಲೆನ್ ಗುಡೂರ್
ಅನಿವಾಸಿಯ ಇತರ ಬರಹಗಾರರ ಕಳ್ಳರ ಕಥೆಗಳನ್ನು ಕೇಳಿ ನನಗೂ ಒಂದು ಪ್ರಸಂಗ ಜ್ಞಾಪಕಕ್ಕೆ ಬಂತು. ನನ್ನ ಲೇಖನ ಸ್ವಲ್ಪ ಲೇಟ್ ಆಯಿತು ಅನಿಸಿತು. ಆದರೆ ಕಳ್ಳತನಕ್ಕೆ ಭೂತವೇನು, ವರ್ತಮಾನವೇನು ಅಥವಾ ಭವಿಷ್ಯವೇನು?
ಒಬ್ಬ ಫ್ಯೂನರಲ್ ಡೈರೆಕ್ಟರ್ ಹೇಳಿದ್ದು ನೆನಪಿಗೆ ಬರುತ್ತದೆ: 'You know doc, ours is never a dying trade!' ಅಂತ ಕಳ್ಳತನವು ಅದೇ ಗುಂಪಿಗೆ ಬರುತ್ತದೆ ಅನಿಸುತ್ತದೆ. ಈ ಉದ್ಯೋಗ ಅಂದರೆ ಅಪಹರಣ, ಕಳ್ಳತನ ಇತ್ಯಾದಿ. ಅದರ ವಸ್ತು, ರೂಪ, ಅಥವಾ ವಿಧಾನ ಸ್ವಲ್ಪ ಬದಲಾಗಿರಬಹುದು ಈ ಕಳ್ಳರು ಹಿಂದೆಯೂ ಇದ್ದರೂ, ಈಗಲೂ ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ. ತ್ರೇತಾಯುಗದಲ್ಲಿ ರಾಮ ಕಳೆದುಕೊಂಡ. ದ್ವಾಪರ ಯುಗದಲ್ಲಿ ಗೋಗ್ರಹಣವಾಯಿತು. ಇದು ಕಲಿಯುಗ, ಇನ್ನೂ ದುಷ್ಟ ಕಾಲ! ನನ್ನ ನಿಷ್ಠಾವಂತ ಮಡದಿಗೆ ವಿಷ್ಣುಸಹಸ್ರನಾಮದ ಮೇಲೆ ಅಪಾರ ನಂಬಿಕೆ. ಆದರೂ ನಮ್ಮ ಮನೆಯಲ್ಲೇ ಶ್ರೀವತ್ಸ ಉದ್ಭವಿಸುತ್ತಾನೆಂದು ಮಾತ್ರ ಕನಸಿನಲ್ಲಿಯೂ ಎಣಿಸಿಸಿರಲಿಲ್ಲ. ಮುಂದೆ ಓದಿ, ಎಲ್ಲ ತಿಳಿಯಾಗುತ್ತದೆ.

 ಆಗತಾನೆ ಈಗ ವಾಸವಾಗಿರುವ ಮನೆಗೆ ಬಂದಿದ್ದವು. ಒಂದು ಬೆಳಗ್ಗೆ ಮಹಡಿಯಿಂದ ಇಳಿದುಬಂದೆ ಅಡಿಗೆಮನೆಯಿಂದ ಗ್ಯಾರೇಜ ಗೆ ಹೋಗುವ ಹಿಂದಿನ ’ಬಾಗಿಲು’ ಏನೋ ವಿಚಿತ್ರವಾಗಿ ಕಾಣುತ್ತಿತ್ತು; ಬೆಳಗಿನ ಮಂಪರ. ಒಂದೆರಡು ಕ್ಷಣಗಳಲ್ಲಿ ತಿಳಿಯಿತು ಬಾಗಿಲದ ಅಗಲಕ್ಕೂ ಒಂದು ಹೊಸ ಕಿಂಡಿ ಹುಟ್ಟಿದೆ ಅಂತ - ಕನಕನ ಕಿಂಡಿಯಲ್ಲದಿದ್ದರೂ, ಮನೆಯಲ್ಲಿರದ ಕನಕ ಕದಿಯಲು ಬಂದ ಕಳ್ಳನ ಕಿಂಡಿ! ದಿಕ್ಕು ತೋಚದೆ ತೊದಲುತ್ತ ಪೋಲಿಸ್ ಗೆ ಫೋನ್ ಮಾಡಿದೆ. ನನ್ನ ಕಳ್ಳತನದ ಪ್ರಕರಣದ ಕರೆಯನ್ನು ನಿರೀಕ್ಷಿತ್ತಿದ್ದರು ಎಂಬಂತೆ ಪೋಲಿಸ್ ದ್ವಯರು ಬಂದೇಬಿಟ್ಟರು. ಒಬ್ಬನ ಮೊಟ್ಟಮೊದಲನೆ ಪ್ರಶ್ನೆ: 'You have got a nice house! What do you do for living?' ಆಗ ತಾನೆ ಗೃಹ ಪ್ರವೇಶ ಮಾಡಿದ ಮನೆಯ ನವ್ಯ ಕಾರ್ಪೆಟ್ಗಳು, ತೂಗು ದೀಪಗಳನ್ನು (ಶಾಂಡೆಲಿಯರ್) ಬೆರಗುಗಣ್ಣಿನಿಂದ ನೋಡಿದ ಅವನಿಗೆ ಆಶ್ಚರ್ಯವಾಗಿರಬೇಕು. ಕಳ್ಳನ ಮನಸ್ಸಿನಲ್ಲೂ ಅದೇ ಪ್ರಶ್ನೆಯೆದ್ದಿದ್ದಕ್ಕೇ ಕನ್ನ ಹಾಕಿರಬೇಕಲ್ಲವೆ? ಈಗ ಮೂವತ್ತು ವರ್ಷಾದಮೇಲೆ ಬಂದು ಕಣ್ಣು ಹಾಯಿಸಿ ಮಾಸಿದ ಓಡಾಡಿ ಪೆಟ್ಟುಬಿದ್ದ ಕಾರ್ಪೆಟ್, ಬೆಳಗಲು ಬೇಡವೋ ಅಂತ ಹಿಂಜರಿಯುವ ಲೈಟ್ಗಳನ್ನು ನೋಡಿದರೆ ’ಯಾವಾಗ ರಿಟೈರ್ ಆದರಿ’ ಅಂತ ಕೇಳುತ್ತಾನೇನೋ! ಆತನ ಜೊತೆಗಿದ್ದ ಇನ್ನೊಬ್ಬಾತ ಕೊಟ್ಟ ಸಾಂತ್ವನ ಪರ ಮಾತು ಕೇಳಿ: I know this is work of south Yorkshire gang. They use Bunsen like burner to get in. They specialise in it ಅಂತ ಸುಟ್ಟ ಬಾಗಿಲಿನತ್ತ ಬೊಟ್ಟು ಮಾಡಿ ಹೇಳಿದ. ಬರ್ನರ್ನಿಂದ ಕಟ್ಟಿಗೆಯ ಬಾಕಿಲಿಗೆ ಕೊರೆದ ರಂಧ್ರ ನನ್ನನ್ನೇ ಕಬಳಿಸುವಂತೆ ಬಾಯಿ ತೆಗೆದುಕೊಂಡು ಆ’ಕಳಿಸುತ್ತಿತ್ತು! ಇನ್ಸಿಡೆಂಟ್ ನಂಬರ್ ಕೊಟ್ಟು ಹೊರಟೇಬಿಟ್ಟರು.

ಈ ವಿಚಾರ ಹೇಳಿದಾಗ ನನ್ನ ಸಹೋದ್ಯೋಗಿ ಆ ಪೊಲೀಸರ ಹೆಸರುಗಳು ಗೊತ್ತೇ ಅಂದ. ಅದಕ್ಕೆ ನನ್ನ ಉತ್ತರ ಅವರು ನನ್ನ ಹೆಸರು ಕೇಳಲಿಲ್ಲ ನಾನು ಅವರ ಹೆಸರುಗಳನ್ನೂ ಕೇಳಲಿಲ್ಲ , quits,ಅಂದೆ. ಯಾವಾಗಲು ಅವರ ಡೀಟೇಲ್ಸ್ ತಿಳಿದುಕೊಳ್ಳುವುದು ಒಳ್ಳೆಯದು ಅಂತ ಕಿರು ಉಪದೇಶ ಕೊಟ್ಟ. ಆದ್ರೆ ಮನೆಯಲ್ಲಿಂದ ಏನೂ ಕಳುವಾದಂತೆ ಕಾಣಲಿಲ್ಲ. ಹಾಗೆ ಕಳುವಾಗಿದ್ದರೂ, ಅದರ ಅವಶ್ಯಕತೆ ಬೀಳಲೇ ಇಲ್ಲ. ಬಹುಶಃ ಆತನನ್ನು ಅಥವಾ ಕಳ್ಳರನ್ನು ಏನೋ ಡಿಸ್ಟರ್ಬ್ ಮಾಡಿರಬಹುದು. ಅದು ಮಹಡಿಯ ಮೇಲೆ ಮಲಗಿದ್ದ ನನ್ನ ಗೊರಕೆಯೋ, ಬಡಬಡಿಕೆಯೋ ಇರಲೂ ಬಹುದು! ತಮ್ಮ ಕೆಲಸವನ್ನು ಅರ್ಧಕ್ಕೇ ಬಿಟ್ಟು ಓಡಿ ಹೋಗಿರಬಹುದೆ ಎನಿಸುತ್ತದೆ. ನನ್ನ ಅದೃಷ್ಟ ತೆರೆದುಕೊಂಡಿತ್ತು! ಇನ್ಶೂರನ್ಸ್ ಕಂಪೆನಿಯಿಂದ ಹೊಸ ಬಾಗಿಲು ಏನೋ ಬಂತು.

 ಇನ್ನು ಶ್ರೀವತ್ಸನ ಮಾತು? ಅನಿವಾಸಿಯಲ್ಲಿ ದೇಸಾಯಿಯವರು ಕಳ್ಳತನದ ಈ ಸರಣಿಯಲ್ಲಿ ಬರೆದ ಲೇಖನವೇನೋ ನಮ್ಮ ಮನೆಯ ಘಟನೆಯನ್ನು ನೆನಪಿಸಿತು, ಸರಿ. ಇನ್ನೊಂದು ಸಂಬಂಧವೆಂದರೆ ಸಂಸ್ಕೃತ ಮತ್ತು ಕನ್ನಡದ ನಿಘಂಟು ತೆಗೆದು ನೋಡಿರಿ. ಶ್ರೀವತ್ಸ ಶಬ್ದಕ್ಕೆ ವಿಷ್ಣುವನ್ನು ಬಿಟ್ಟು ಇನ್ನೊಂದು ಅರ್ಥ ಕನ್ನ ಹಾಕುವ ಕಳ್ಳ ಮನೆಗೆ ಕೊರೆದ ಒಂದು ’ವಿಶಿಷ್ಟ ತರದ’ ತೂತು ಎಂದು. ಸರ್ವಂ ವಿಷ್ಣು ಮಯಂ ಅಥವಾ ಸರ್ವಂ ಶ್ರೀವತ್ಸಮಯಂ.
ಚಿತ್ರ : ಡಾ ಎಲ್ಲೆನ್ ಗುಡೂರ್

ಶ್ರಿರಾಮುಲು ಅವರ ’ಕಳ್ಳನ ಕಿಂಡಿ’ ಲೇಖನಕ್ಕೆ ಒಂದು ಟಿಪ್ಪಣಿ – ಡಾ ಶ್ರೀವತ್ಸ ದೇಸಾಯಿ
ಸಂಪಾದಕಿಯ ಸೌಜನ್ಯದಿಂದ ಮೇಲಿನ ಲೇಖನ ನನ್ನ ಅವಗಾಹನೆಗೆ ಬಂದಿತು. ಶ್ರಿರಾಮುಲು ಅವರು ಸರಣಿಯ ಪ್ರಾರಂಭದಲ್ಲಿಯ ನನ್ನ ಲೇಖನವನ್ನು ಉಲ್ಲೇಖಿಸುತ್ತಾರೆ. ಅದನ್ನು ಓದಿದಾಗ ನನಗೆ ನೆನಪಾದುದು ಅಂಗ್ಲ ಭಾಷೆಯ ಪ್ರಚಲಿತ ನುಡಿಗಟ್ಟು: hoist by his own petard, ಅಂತ. ಅಂದರೆ ತನ್ನ ಕಾರುಬಾರು ತನಗೇ ಕುತ್ತಾಗಿ ಬಂದುದು, ಎನ್ನುವ ಅರ್ಥದಲ್ಲಿ. ನಿಮ್ಮ Yo-Yo ನಿಮ್ಮ ಮುಖಕ್ಕೇ ಬಂದು ಅಪ್ಪಳಿಸಿದಂತೆ ಅಥವಾ ಆಸ್ಟ್ರೇಲಿಯದ ಆದಿವಾಸಿ ಒಗೆದ ಬೂಮರ್ಯಾಂಗ್ ಅತನಿಗೇ ಗಾಯ ಮಾಡಿದಂತೆ. ಈ ನುಡಿಗಟ್ಟಿನ ಮೂಲದ ಜಾಡನ್ನು ಹಿಡಿದು ಹೋದಾಗ ಅನೇಕ ಸ್ವಾರಸ್ಯಕರ ಸಂಗತಿಗಳು ತಿಳಿದವು. ಹ್ಯಾಮ್ಲೆಟ್ ನಾಟಕದಲ್ಲಿ ಈ ವಾಕ್ಯ ಬರುತ್ತದೆ. ತಾನು ಹಚ್ಚಿದ ’ಪಿಟಾರ್ಡ್’ (ಕೈಬಾಂಬು) ತನ್ನನ್ನೇ ಕೊಲ್ಲಲು ಹೊರಟಂತೆ, ಅಂತ ಇದನ್ನು ಅರ್ಥೈಸಬಹುದು. ಅವೆಷ್ಟೋ ಶೇಕ್ಸ್ಪಿಯರನ ಮಾತುಗಳು ಇಂದಿಗೂ ಬಳಕೆಯಲ್ಲಿದ್ದು ಅದನ್ನರಿಯದೆ ನಾವು ಪ್ರತಿದಿನವೂ ಬಳಸುತ್ತಿರುತ್ತೇವೆ. ಉದಾ: foregone conclusion, the world’s my oyster, good riddance ಇತ್ಯಾದಿ. OED (ಅಧಿಕೃತ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿಯ) ಪ್ರಕಾರ: Petard: A small bomb made of a metal or wooden box filled with powder, used to blow in a door, gate, etc., or to make a hole (ಶ್ರೀವತ್ಸ?) in a wall. ಫ್ರೆಂಚ್ ಭಾಷೆಯ pétarade ಆ ಶಬ್ದದ ವ್ಯುತ್ಪತ್ತಿ ಅಂತ ಕೆಲವರ ವಾದ. ಆ ಪದದ ಇನ್ನೊಂದು ಅರ್ಥ ಸಂಸ್ಕೃತದ ’ಪರ್ದತೇ’ ಶಬ್ದಕ್ಕೆ ಹತ್ತಿರವಾಗಿದೆ. ಅಂದರೆ ಅಪಾನವಾಯುವನ್ನು ಬಿಡುವುದು ಎನ್ನುವ ’ಹ’ಕಾರದ ಶಬ್ದ! ಇಲ್ಲಿ ನನ್ನ ಮಿತ್ರ ಶ್ರಿರಾಮುಲು ಅವರು ನನ್ನ ಬಗ್ಗೆ ’he’s an old fart’ ಅಂತ ಉದ್ಗಾರ ತೆಗೆಯುತ್ತಿದ್ದಾರೆಯೇ?

ರೇಡಿಯೋ ಕಳ್ಳನ ಕಥೆ!

ಆತ್ಮೀಯ ಓದುಗರೇ,

ಈ ಮೊದಲು ‘ಕಳ್ಳ ಮತ್ತು ಕಳ್ಳತನದ’ ಬಗ್ಗೆ ಪ್ರಕಟವಾಗಿದ್ದ ಹಾಸ್ಯ ಲೇಖನಗಳು ನಿಮ್ಮಲ್ಲಿ ಹಲವರಿಗೆ ನಿಮ್ಮ ಜೀವನದಲ್ಲಾದ ಘಟನೆಗಳನ್ನು ನೆನಪಿಸಿದ್ದಿರಬಹುದು,ಈ ಬಾರಿಯ ಸಂಚಿಕೆಯಲ್ಲಿ ಡಾ ಲಕ್ಷ್ಮೀನಾರಾಯಣ್ ಗುಡೂರ್ ಅವರು ತಮ್ಮ ಶಾಲಾದಿನಗಳಲ್ಲಿ ನಡೆದ ಅಂಥದ್ದೇ ಒಂದು ರೋಚಕ ಘಟನೆಯನ್ನ ಸುಂದರ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಬರಹ ನಿಮಗೂ ನಿಮ್ಮ ಜೀವನದಲ್ಲಾದ ಇಂಥ ಯಾವುದಾದರು ಘಟನೆಯನ್ನು ನೆನಪಿಸಿದರೆ ದಯಮಾಡಿ ‘ಅನಿವಾಸಿ’ ಓದುಗರೊಂದಿಗೆ ಹಂಚಿಕೊಳ್ಳಿ. ಅನಿವಾಸಿಯ ಅಕ್ಷರ ಪಾತ್ರೆ ಅಕ್ಷಯವಾಗಲಿ ಎಂಬ ಆಶಯದೊಂದಿಗೆ

– ಸಂಪಾದಕಿ 

ನಾವೂ ಕಳ್ಳನನ್ನು ಹಿಡಿದೆವುಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್

ನಾನು, ಮುರಲಿ ಇಬ್ಬರೂ ಕಲಬುರ್ಗಿಯಲ್ಲಿ ಅಜ್ಜಿ-ತಾತನ ಮನೆಯಲ್ಲಿದ್ದೆವು.  ನಾನಾಗ ಹತ್ತನೆಯ ತರಗತಿಯಲ್ಲಿದ್ದೆ, ನನ್ನ ಸೋದರತ್ತೆಯ ಮಗ ಮುರಲಿ ಪಿಯುಸಿ 1ನೇ ವರ್ಷ. ನಮ್ಮ ಮನೆಯಂಗಳದಲ್ಲಿ ಹಲವಾರು ಹಣ್ಣಿನ,ಹೂವಿನ ಗಿಡಗಳು ಇದ್ದು, ಕರಿಬೇವು, ಕಿರುನೆಲ್ಲಿಕಾಯಿ, ಪಾರಿಜಾತದ ಹೂಗಳು ಇತ್ಯಾದಿ ಯಥೇಚ್ಛ ಬೆಳೆಯುತ್ತಿದ್ದವು. ನೆಲ್ಲಿಕಾಯಂತೂ ಗಿಡ ಮುಟ್ಟಿದರೆ ಸಾಕು ಆಲಿಕಲ್ಲಿನ ಮಳೆ ಬಂದಂತೆ ನಮ್ಮ ತಲೆಯ ಮೇಲೆ ಉದುರುತ್ತಿದ್ದವು. ನಮ್ಮ ಮನೆಯಿದ್ದ ಜಾಗದ ಸುತ್ತಮುತ್ತ ಹಲವಾರು ಶಾಲೆಗಳಿದ್ದು, ಹುಡುಗರು ಹೊಗುವಾಗ, ಬರುವಾಗ, ಮಧ್ಯಂತರದಲ್ಲಿ ನಮ್ಮ ಮನೆಗೆ ಬಂದು ಅಜ್ಜಿ-ತಾತನನ್ನು ಕಾಡಿ, ಬೇಡಿ ನೆಲ್ಲಿಕಾಯಿ ಆಯ್ದುಕೊಂಡೊಯ್ಯಲು ಬರುತ್ತಿದ್ದರು. ನೆಲ್ಲಿಕಾಯಿಯ ಜೊತೆಗೆ, ಪಕ್ಕದಲ್ಲಿದ ನಿಂಬೆಹಣ್ಣು, ಕರಿಬೇವನ್ನೂ ಕೆಲವರು ಹೇಳದೇ ಕೇಳದೇ ಕಿತ್ತಿಕೊಂಡು ಹೋಗುವವರೂ ಇದ್ದರು. ಆದರೂ ಅಜ್ಜಿ-ತಾತ ಯಾರಿಗೂ ಇಲ್ಲವೆಂದದ್ದು ನಾನು ನೋಡಿರಲೇ ಇಲ್ಲ; ನೀವಿಬ್ಬರೇ ಇರುವಾಗ (ಇಬ್ಬರಿಗೂ 70+ ವಯಸ್ಸು, ಅಜ್ಜಿಯ ಬೆನ್ನು ಬಗ್ಗಿ ಮುಖ ನೆಲ ಮುಟ್ಟುತ್ತಿತ್ತು) ಯಾರನ್ನೂ ಮನೆಯೊಳಗೆ ಬಿಡಬೇಡಿ ಅಂದರೂ, “ಪಾಪ ಸಣ್ಣ ಹುಡುಗ್ರು, ತಿಂತಾವ ಬಿಡು; ನಮಗೇನು ಮಾಡ್ತಾವ” ಅಂದು ನಮ್ಮನ್ನು ಸುಮ್ಮನಾಗಿಸುತ್ತಿದ್ದರು. ಬಂದವರಲ್ಲಿ ಹೆಚ್ಚಿನ ಹುಡುಗರೂ ಅಜ್ಜಿ-ತಾತನನ್ನು ಗೌರವದಿಂದಲೇ ನೋಡುತ್ತಿದ್ದರೆನ್ನಿ; ಅಷ್ಟೇ ಅಲ್ಲ, ಪರೀಕ್ಷೆಯ ಹೋಗುವ ಮುನ್ನ ಅವರಿಗೆ ನಮಸ್ಕಾರ ಮಾಡಲೂ ಎಷ್ಟೋ ಮಕ್ಕಳು ಬರುತ್ತಿದ್ದರು. ಅವರಲ್ಲಿ ಕೆಲವರು ಕೇಳಿ ನೀರು ಕುಡಿಯುತ್ತಿದ್ದರು. 46 ಡಿಗ್ರಿಯ ಬಿಸಿಲಲ್ಲಿ ಬಂದವರಿಗೆ ನೀರು ಕೊಡಲೆಂದೇ ಬೋರ್ ವೆಲ್ಲಿನಿಂದ ಒಂದು ಕೊಡ ಹೆಚ್ಚೇ ತಂದು ಇಟ್ಟಿರುತ್ತಿದ್ದೆವು.


ಇಂಥ ಒಂದು ದಿನ, ಒಬ್ಬ ಹುಡುಗ ನೀರು ಕೇಳಿ ಬಾಗಿಲಿಗೆ ಬಂದ. ಅಜ್ಜಿ ಒಳಗೆ ಹೋಗಿ ನೀರು ತಂದು ಕೊಟ್ಟರು, ಹುಡುಗ ಕುಡಿದು ಹೋದ. ನಾನು ಸಾಯಂಕಾಲ ಮನೆಗೆ ಬಂದು ರೇಡಿಯೋ ಹಾಕೋಣವೆಂದು ನೋಡಿದರೆ, ಪಡಸಾಲೆಯ ಗಣಪತಿ / ಗೌರಿ / ರೇಡಿಯೋ ಮಾಡ ಖಾಲಿ ಹೊಡೆಯುತ್ತಿದೆ! ಟಿವಿಯಿಲ್ಲದ ಆ ಕಾಲದ ಮನೆಗಳಲ್ಲಿ, ರೇಡಿಯೊ ಮನೆಯವರೆಲ್ಲರ ಏಕಮಾತ್ರ ಎಂಟರ್ಟೇನ್ಮೆಂಟ್ ಫೆಸಿಲಿಟಿ ಆಗಿದ್ದು, ಅದಿಲ್ಲದ ನಮ್ಮ ದಿನಗಳು ಓಡುವುದು ಹೇಗೆ? ನಮ್ಮ ಚಿತ್ರಗೀತೆ, ಅಭಿಲಾಷಾ ಕಾರ್ಯಕ್ರಮಗಳೂ ಇಲ್ಲ; ತಾತನ ಮೂರು ಭಾಷೆಯ ಆರು ನ್ಯೂಸುಗಳೂ ಇಲ್ಲ! ಅಜ್ಜಿಯ ವಂದನಾ ಭಕ್ತಿಗೀತೆಗಳು, ನಮ್ಮೆಲ್ಲರ ಇಷ್ಟದ ರಾತ್ರಿ 9.30ರ ನಾಟಕಗಳು, 11ರ ವರೆಗಿನ ಶಾಸ್ತ್ರೀಯ ಸಂಗೀತ – ಒಟ್ಟಿನಲ್ಲಿ ರೇಡಿಯೋ ಇಲ್ಲದ ಒಂದು ಸಂಜೆ, ಮೊನ್ನೆಯ ವ್ಹಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಿಲ್ಲದ ಸಂಜೆಯಂತಾಗಿತ್ತು.

ಆಗ ನಮ್ಮನೆಗೆ, ನಮ್ಮ ಅಜ್ಜಿಯ ತಂಗಿ ಅಕ್ಕೂ ಅಜ್ಜಿಬಂದಿದ್ದರು. ಭಾರೀ ಚಾಲಾಕಿನ ಅಜ್ಜಿ ಅವರು. ಅವರಿಗೂ ರೇಡಿಯೋ ಇಲ್ಲದ ದಿನಗಳನ್ನು ಹೇಗೆ ಕಳೆಯುವುದೋ ಅನ್ನಿಸಿಬಿಟ್ಟಿತ್ತು, ಕೆಲವೇ ಗಂಟೆಗಳ ರೇಡಿಯೋ-ವಿರಹದಲ್ಲೇ! ಸರಿ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ತಯಾರಾದರು. “ಇಂದಕ್ಕಾ, ಬಾ ಇಲ್ಲಿ” ಅಂತ ಅವರಕ್ಕ, ನಮ್ಮ ಅಜ್ಜಿಯನ್ನು ಸಮನ್ ಮಾಡಿ, ಇಂಟೆರೊಗೇಶನ್ ಶುರು ಮಾಡಿದರು. ಮಧ್ಯಾನ ನಾವಿಲ್ಲದ ವೇಳೆ ಬಾಗಿಲು ತೆಗೆದಿಟ್ಟು ಮಡಿ ಅಡಿಗೆಯಲ್ಲಿ ಕೂತಿದ್ದೆಯಾ, ಹಿಂದೆ ಹೂವು ತರಲು ಹೋಗಿದ್ದೆಯಾ, ಊಟಕ್ಕೆ ಕೂತಾಗ ಬಾಗಿಲು ಹಾಕಿತ್ತೋ ಇಲ್ಲವೋ…… ಇತ್ಯಾದಿ, ಇತ್ಯಾದಿ ನಡೆಯಿತು ಸ್ವಲ್ಪ ಹೊತ್ತು. ಕೊನೆಗೂ ಅಜ್ಜಿಯಿಂದ ಮಧ್ಯಾಹ್ನ ನೆಲ್ಲಿಕಾಯಿಗೆ ಬಂದ ಹುಡುಗನಿಗೆ ನೀರು ಕೊಟ್ಟ ವಿಷಯವನ್ನು ಹೊರತೆಗೆದರು, ಅಕ್ಕೂ ಅಜ್ಜಿ. ಅಲ್ಲಿಂದ ಅವನ ಬಗ್ಗೆ ವಿವರವಾಗಿ ಪ್ರಶ್ನೆಗಳು ಶುರುವಾದವು – ಹೆಸರೇನು, ಯಾವ ಶಾಲೆ, ನೋಡಲು ಹೇಗಿದ್ದ, ಯೂನಿಫಾರ್ಮ್ ಹಾಕಿದ್ದನೋ, ಹಾಕಿದ್ದರೆ ಯಾವ ಬಣ್ಣದ್ದು ಮುಂತಾಗಿ ನಡೆಯಿತು. ಆಗ ನಮ್ಮಜ್ಜಿ ಅದುವರೆಗೂ ಮರೆತಿದ್ದ ಒಂದು ವಿಷಯ ಹೊರಬಿತ್ತು – ಆ ಹುಡುಗ ತನ್ನ ಹೆಸರು ಹೇಳಿದ್ದಲ್ಲದೇ, ತನ್ನ ಅಪ್ಪ-ಅಮ್ಮನ ಹೆಸರು, ಇರುವ ಓಣಿ ಇತ್ಯಾದಿ ಹೇಳಿ, ಅವರ ಅಪ್ಪ-ಅಮ್ಮ ತಾತಾ ಅಜ್ಜಿಯ ಪರಿಚಯದವರು ಎಂತಲೂ ಹೇಳಿಕೊಂಡಿದ್ದ (ನೆಲ್ಲಿಕಾಯಿ ಜಾಸ್ತಿ ಸಿಗುವ ಆಸೆಗೆ). ಸರಿ, ಪತ್ತೇದಾರಿಣಿ ಅಕ್ಕೂ ಅಜ್ಜಿ ಕಾಲಿಗೆ ಚಪ್ಪಲಿ ತೂರಿಸಿಕೊಂಡು ಹತ್ತಿರದ ವಿಟ್ಠಲ ಮಂದಿರಕ್ಕೆ. ಅರ್ಧ ಗಂಟೆಯಲ್ಲಿ, ಗೆಲುವಿನ ಮುಖದೊಂದಿಗೆ ವಾಪಸು ಬಂದು, ನಮ್ಮನ್ನು ಕರೆದು ಆ ಹುಡುಗನ ಹೆಸರು, ಅಡ್ರೆಸ್ಸು, ಮುಂಚೆ ಮಾಡಿದ ಕಳ್ಳತನದ ಇತಿಹಾಸ ಹೇಳಿ, ಅವನೇ ನಮ್ಮ ರೇಡಿಯೋ ಕಳ್ಳ ಅಂತ ತೀರ್ಪನ್ನೂ ಕೊಟ್ಟರು. ಮುಂದಿನ ಹಂತ ಅವನನ್ನು ಹಿಡಿತರುವುದು. ಮೊದಲು, ಪೋಲಿಸ್ ಸ್ಟೇಶನ್ನಿಗೆ ಹೋಗಿ, ನಮಗೆ ಗೊತ್ತಿದ್ದ ಒಬ್ಬ ಪೋಲಿಸರಿಗೆ ಕಂಪ್ಲೇಂಟ್ ಬರೆದು ಕೊಟ್ಟು ಬಂದೆವು. ಅವರು ಮರುದಿನ ಒಬ್ಬ ಪ್ಯಾದೆಯನ್ನು ಕಳಿಸುವುದಾಗಿ ಹೇಳಿದ ಮೇಲೆ, ಮನೆಗೆ ಬಂದು ಸುಖವಾಗಿ ಮಲಗಿದೆವು.


ಎರಡು ದಿನ ಕಳೆಯಿತು. ಪರಿಚಯದ ಪೋಲಿಸಪ್ಪ ಬಂದು, “ನಾನs ಹೋಗಿದ್ದೆನ್ರೀ, ಪಾರ (ಹುಡುಗ) ಸಿಗಲಿಲ್ಲ; ಏನ ಮಾಡ್ಲಿಕಾಗಂಗಿಲ್ಲ, ಕಾಯssಬೇಕು” ಅಂತ ಹೇಳಿದ. ಮರುದಿನಕ್ಕೆ, ನಮ್ಮ ಕಮಾಂಡರ್ ಅಕ್ಕೂಅಜ್ಜಿಯ ಸಹನೆ ಮುಗಿದು, ಕಮಾಂಡೋ ಆಕ್ಷನ್ನೇ ಸರಿ; ನಾವೇ ಹೋಗಿ ಅವನನ್ನು ಹಿಡುಕೊಂಡು ಬರೋದು ಒಳ್ಳೇದು ಅಂತ ತೀರ್ಮಾನಿಸಿದರು. ನಾನು, ಮುರಲಿ ಮತ್ತು (ಸಾಕಷ್ಟು ಗಟ್ಟಿಮುಟ್ಟಾಗಿಯೇ ಇದ್ದ) ನಮ್ಮ ಸಣ್ಣಕಾಕಾ ಎರಡು ಬೈಸಿಕಲ್ಲು ತೊಗೊಂಡು ದಂಡಯಾತ್ರೆಗೆ ಹೊರಟವರಂತೆ ಹೊರಟೆವು, ರಾತ್ರಿ 9-30 ಕ್ಕೆ. ನಾಲ್ಕೈದು ಮೈಲಿ ಸೈಕಲ್ಲು ಹೊಡೆದುಕೊಂಡು ಅವರ ಮನೆಗೆ ಹೋಗಿ, ಮಲಗಿದ್ದವರನ್ನು ಬಾಗಿಲು ಬಡಿದು ಎಬ್ಬಿಸಿದೆವು. ನಿದ್ದೆಗಣ್ಣಲ್ಲಿದ್ದವರಿಗೆ ಎಲ್ಲವನ್ನೂ ಹೇಳಿ, ಅವರಿಂದ ಮಗನನ್ನು ನಮ್ಮ ವಶಕ್ಕೆ ತೆಗೆದುಕೊಂಡು, ಮತ್ತೆ 4 ಮೈಲಿ ಸೈಕಲ್ಲು ಹೊಡೆದುಕೊಂಡು ರೇಲ್ವೆಸ್ಟೇಶನ್ ಪೋಲಿಸ್ ಸ್ಟೇಶನ್ನಿಗೆ ಹೊರಟೆವು. ನಾನು ಮತ್ತು ಮುರಲಿ ಒಂದು ಸೈಕಲ್ಲಿನ ಮೇಲೆ ಇದ್ದರೆ, ಕಳ್ಳನನ್ನು ಮುಂದೆ ಕೂರಿಸಿಕೊಂಡು ನಮ್ಮ ಕಾಕಾ ಇನ್ನೊಂದು ಸೈಕಲ್ಲಿನ ಮೇಲೆ.

ಇನ್ನೇನು ಪೋಲಿಸ್ ಸ್ಟೇಶನ್ 200 ಮೀಟರ್ ಇದೆ, ಅದುವರೆಗೂ ಆರಾಮವಾಗಿ ಕೂತಿದ್ದ ಕಳ್ಳ ಒಮ್ಮೆಲೆ ಜೋರಾಗಿ ಸೈಕಲ್ಲಿನ ಹ್ಯಾಂಡಲನ್ನು ಅಲುಗಾಡಿಸಿದ. ನಮ್ಮ ಕಾಕಾ ಅದರ ಶಾಕಿನಿಂದ ಎಚ್ಚೆತ್ತುಕೊಳ್ಳುವುದರೊಳಗೆ ಕಳ್ಳ ಹಾರಿ, ಎದುರಿನ ಗಲ್ಲಿಯೊಳಗೆ ಓಡಿದ. ನಮ್ಮ ಕಾಕಾನನ್ನು ಸೈಕಲಿನ ಹತ್ತಿರಕ್ಕೆ ಬಿಟ್ಟು, ನಾವಿಬ್ಬರೂ ಹುಮ್ಮಸ್ಸಿನಿಂದ ತೆಲುಗು ಸಿನಿಮಾದಲ್ಲಿ ಮಧ್ಯರಾತ್ರಿ ಕತ್ತಲೆಯಲ್ಲಿ (’ಶಿವಾ’ ನೆನಪಿಸಿಕೊಳ್ಳಿ) ವಿಲನ್ನುಗಳ ಹಿಂದೆ ಓಡುವ ಹೀರೊ ಮತ್ತವನ ಪ್ರಾಣಸ್ನೇಹಿತನಂತೆ, ಪ್ರಾಣದ ಹಂಗು ತೊರೆದು ಕಳ್ಳನ ಹಿಂದೆ ಓಡಿದೆವು. ಆಗ ಸಮಯ ರಾತ್ರಿಯ ಹನ್ನೆರಡು-ಹನ್ನೆರಡೂವರೆ ಇರಬೇಕು. ನಾವಿಬ್ಬರೂ ಚಿಕ್ಕ ಚಿಕ್ಕ
ಗಲ್ಲಿಗಳ ನೆಟ್ವರ್ಕಿನಲ್ಲಿ ಹದಿನೈದು-ಇಪ್ಪತ್ತು ನಿಮಿಶ ಓಡಿದೆವು. ಅವನೇನೋ ತಪ್ಪಿಸಿಕೊಂಡ. ನಾವೂ ಸ್ವಲ್ಪ ಸುಧಾರಿಸಿಕೊಳ್ಳಲು ನಿಂತೆವು. ಆಗ ನಾವಿರುವ ಜಾಗದ ಅರಿವಾಯಿತು. ಅದೊಂದು ಅಷ್ಟೇನೂ ಒಳ್ಳೆಯ ಹೆಸರಿಲ್ಲದ ಭಾಗ; ಅಲ್ಲಿ ಹಾಡುಹಗಲೇ ಆಗುತ್ತಿದ್ದ ಹೊಡೆದಾಟ, ಬಡಿದಾಟಗಳ ಸುದ್ದಿಗಳು ನೆನಪಾದವು. ನಾವು ಓಡುತ್ತಿದ್ದ ಪರಿಗೆ, ಜನ ಎದ್ದು ನಮ್ಮನ್ನೇ ಹಾಕಿ ತದುಕಬಹುದು ಅನ್ನುವ ಜ್ಞಾನೋದಯವಾಗುತ್ತಿದ್ದಂತೆ ಬಂದದ್ದರ ಎರಡು ಪಟ್ಟು ವೇಗದಲ್ಲಿ ವಾಪಸ್ಸು ಓಡಿಬಂದೆವು.
ಬದುಕಿದೆಯಾ ಬಡಜೀವವೇ ಅಂತ ಮೇನ್ ರೋಡಿಗೆ ಬಂದು ಮುಟ್ಟಿದೆವು. ನಮ್ಮ ಕಾಕಾ ಇನ್ನೂ ನಾವು ಅಂಥ ಜಾಗದಲ್ಲಿ ಕಳ್ಳನ ಹಿಂದೆ ಓಡಿಹೋದ ರೀತಿಯನ್ನು ನೋಡಿದ ಶಾಕಿನಲ್ಲೇ ಇದ್ದ! ಸೈಕಲ್ಲುಗಳನ್ನು ತಳ್ಳಿಕೊಂಡು, ಸುಧಾರಿಸಿಕೊಳ್ಳುತ್ತಾ ಬೆಳಗಿನ ಜಾವ ಎರಡಕ್ಕೆ ಮನೆಗೆ ಬಂದು ಮುಟ್ಟಿದೆವು.

ಮರುದಿನ ಬೆಳಗ್ಗೆ ಎದ್ದು ನೋಡಿದರೆ, ನಮ್ಮ ಕಮಾಂಡರ್ ಅಜ್ಜಿ ನಾಪತ್ತೆ. “ಇಂದವ್ವಾ, ನಾ ಈಗ ಬಂದೆ” ಅಂತ ಹೇಳಿ ಹೋದವರು, ಮಟಮಟ ಮಧ್ಯಾಹ್ನ ಬಂದು “ಏ ಹುಡುಗ್ರಾ, ನಡೀರಿ ನಂಜೊತಿಗೆ” ಅಂದ್ರು. ಮತ್ತೆ ರಿಕ್ಷಾ ಹತ್ತಿ 5 ಮೈಲು ಹೋಗಿ ಅಲ್ಲಿದ್ದ ಒಂದು ಸ್ಲಮ್ಮಿಗೆ ಹೋದೆವು. ದಾರಿಯಲ್ಲಿ ಅಜ್ಜಿಯ ಪತ್ತೇದಾರಿಕೆಯ ವಿವರಗಳು ತಿಳಿದವು. ಪರಿಚಯದ ಪೋಲಿಸಪ್ಪನ ಜೊತೆಗೆ ಕಳ್ಳನ ಮನೆಗೆ ಹೋಗಿ, ಅವನ ಅಪ್ಪ-ಅಮ್ಮನನ್ನು ಒಳ್ಳೆಯದಾಗಿ ಮಾತಾಡಿಸಿ, ಆ ಹುಡುಗ ಮನೆಗೆ ಒಂದು ರೇಡಿಯೊ (ಗೆಳೆಯನದೆಂದು ಹೇಳಿ) ಹಿಡಿದುಕೊಂಡು ಬಂದದ್ದನ್ನೂ, ಆ ಗೆಳೆಯನಿಗೆ ಕೊಡಲು ಹೋಗಿರುವುದನ್ನೂ ತಿಳಿದುಕೊಂಡಿದ್ದರು. ರೇಡಿಯೊ ವಾಪಸ್ಸು ಬಂದರೆ, ಕೊಟ್ಟ ಕಂಪ್ಲೇಂಟ್ ವಾಪಸ್ಸು ತೆಗೆದುಕೊಳ್ಳುವದಾಗಿ ಹೇಳಿದ ಮೇಲೆ, ಗೆಳೆಯನ ಮನೆಯ ಪತ್ತೆಯೂ ಸಿಕ್ಕಿತ್ತು. ಪೋಲಿಸಪ್ಪನನ್ನು ಬ್ಯಾಕ್ ಅಪ್ ತರಲು ಕಳಿಸಿ, ನಮ್ಮನ್ನು ಕರೆಯಲು ಮನೆಗೆ ಬಂದಿದ್ದರು. ಅಲ್ಲಿಗೆ ಅವಾಂತರ ಮುಗಿದು ರೇಡಿಯೊ ಸಿಕ್ಕಿತೆಂದೆನಲ್ಲ, ಆ ಗೆಳೆಯ ಯಾರಿಗೋ ಮಾರಿಬಿಟ್ಟಿದ್ದ. ನಮ್ಮ ಜೊತೆ ಈಗ ಪೋಲಿಸರಿದ್ದರಲ್ಲ, ಕೈಯಲ್ಲಿನ ಕೋಲಿಗಿಂತ ಸಣಕಲಾದರೇನಂತೆ, ಜೋರಿಗೇನೂ ಕಡಿಮೆಯಿರಲಿಲ್ಲ, ಹಾಗಾಗಿ ಮಾರಿದ್ದ ರೇಡಿಯೋ ಕಿತ್ತಿಕೊಂಡು
ತಂದೆವು. ಅಷ್ಟೆ ಅಲ್ಲ, ಆ ಹುಡುಗ ನಮ್ಮ ಮನೆಯ ಕಡೆಗೇನಾದರೂ ಬಂದರೆ …… ಅಂತ ಹೆದರಿಸಿಯೂ ಬಂದೆವು.

ಮತ್ತೆ, ನಮ್ಮ ಮನೆಯಲ್ಲಿ ರೇಡಿಯೋದ ಪ್ರತಿಷ್ಠಾಪನೆಯಾಯಿತು, ಗಣಪತಿ ಮಾಡದಲ್ಲಿ. ಅದರಿಂದ ಹೊಮ್ಮಿದ ಸುದ್ದಿ, ಸಂಗೀತ, ನಾಟಕಗಳು ನಮ್ಮ ಜೀವನವನ್ನು ಸಂತೋಷಮಯಗೊಳಿಸಿದವು ಎನ್ನುವಲ್ಲಿಗೆ ರೇಡಿಯೋಕಳ್ಳನ ವೃತ್ತಾಂತವು ಮುಕ್ತಾಯವಾಯಿತು.
*ಶುಭಂ*