ಬಾಸ್ವರ್ತ್ ಯುದ್ಧರಂಗ ಎನ್ನುವ ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳ -ಶ್ರೀವತ್ಸ ದೇಸಾಯಿ

ಒಂದು ರೀತಿಯಿಂದ ಇದು ಇಂಗ್ಲೆಂಡಿನ ದೊರೆ ಮೂರನೆಯ ರಿಚರ್ಡ್ ನ ಇತಿಹಾಸದ ಬಗ್ಗೆ ನಾನು ಬರೆದ ಲೇಖನದ (https://wp.me/p4jn5J-3Sw) ಹಿಂದೆ ಸರಿದ ಭಾಗ! ಅದರಲ್ಲಿ ಆತನ ಮರಣದ ನಂತರದ ಘಟನೆಗಳ ವಿಶ್ಲೇಷಣೆಯಿದ್ದರೆ ಇದರಲ್ಲಿ ಆತ ಸಾವನ್ನಪ್ಪಿದ ಜಾಗದ ಸ್ಥಳಪುರಾಣ ಇದೆ. ಅಲ್ಲಿ ನೋಡುವದೇನು ಇದೆ? ಇದೇ ಪ್ರಶ್ನೆಯನ್ನು ಸ್ಟೇನ್ಸ್ಟಪಕ್ಕದ ರನ್ನಿಮೀಡ್ ಬಗ್ಗೆಯೂ ಕೇಳಬಹುದು. ಅಲ್ಲಿ ಮ್ಯಾಗ್ನಾ ಕಾರ್ಟಾದ ಮೇಲೆ ಸಹಿ ಆಗಿತ್ತು. ಅಲ್ಲಿ ಇತಿಹಾಸವಿದೆ. ಇಂಥ ಐತಿಹಾಸಿಕ ಸ್ಥಳಗಳಲ್ಲೆಲ್ಲ ಅದರ ಹಿಂದಿನ ಐತಿಹಾಸಿಕ ಸಂಗತಿಗಳೇ ರೋಚಕ. ಇತಿಹಾಸ ಎದ್ದು ಬರುತ್ತದೆ; ವ್ಯಕ್ತಿಗಳು, ರಾಜರು ಜೀವ ತಳೆದು ಮಾತಾಡುತ್ತಾರೆ! ಒಂದು ವಿಷಯ: ನಾವು ಲ್ಯಾಂಕಾಸ್ಟರಿನ ಕೆಂಪು ಮತ್ತು ಯಾರ್ಕ್ ಶೈರಿನ ಬಿಳಿ ಗುಲಾಬಿ ಲಾಂಛನಗಳ ಬಗ್ಗೆ ಓದುತ್ತೇವೆ. ಆದರೆ ಅವುಗಳು ಆಗ ಲಾಂಛನವಾಗಿರಲಿಲ್ಲ. ಸೈನಿಕರು ಹೊತ್ತ ಬಿಳಿ ಬ್ಯಾಜಿನ ದಾಖಲೆ ಮಾತ್ರ ಇದೆ. ಶೇಕ್ಸ್ಪಿಯರನ ನಾಟಕದಲ್ಲಿ ಮತ್ತು ನಂತರದ ಹತ್ತೊಂಬತ್ತನೆಯ ಶತಮಾನದ ಬರವಣಿಗೆಗಳಲ್ಲಿ ಈ ಸಂಜ್ಞೆಗಳಿಗೆ ಪ್ರಚಾರ ಬಂದಿತು. -(ತತ್ಕಾಲ ಸಂ!)
king-richard-iii-
ಮೂರನೆಯ ರಿಚರ್ಡ್               ಮೊದಲು ಸ್ವಲ್ಪ ಇತಿಹಾಸ

ಮೇಲಿನ ಮಾತುಗಳ ಅರ್ಥವಾಗಲು ಕೆಲವು ಐತಿಹಾಸಿಕ ವಿಷಯಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರಿಗೆ ಇಂಗ್ಲೆಂಡಿನ ಎರಡು ಎರಡು ಪ್ರಮುಖ ರಾಜವಂಶ ಪಂಗಡಗಳಾದ ಲ್ಯಾಂಕಾಸ್ಟರ್ ಮನೆತನ (ಲಾಂಛನ ಕೆಂಪು ಗುಲಾಬಿ) ಮತ್ತು ಯಾರ್ಕ್ ಮನೆತನಗಳ (ಬಿಳಿ ಗುಲಾಬಿ) ಮಧ್ಯೆ 30 ವರ್ಷಗಳ ಕಾಲ ನಡೆದ 15 ಯುದ್ಧಗಳ ಬಗ್ಗೆ (”ದ ಬ್ಯಾಟಲ್ ಆಫ್ ದಿ ರೋಸಸ್”) ಗೊತ್ತಿದ್ದರೂ ಅದು ಮುಕ್ತಾಯವಾದ ಬಾಸ್ವರ್ತ್ಎನ್ನುವ ಊರಿನ ಹತ್ತಿರದ ಈ ತಗ್ಗು, ದಿನ್ನೆ ಮತ್ತು ಚೌಗು ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಕ್ಕಿಲ್ಲ. ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಕಾದ ದಾಯಾದಿಗಳಾದ ಕೌರವ ಪಾಂಡವರಂತೆಯೇ ಇಂಗ್ಲೆಂಡಿನ ಕಿರೀಟಕ್ಕಾಗಿ ಹೋರಾಡಿದ ಈ ಎರಡೂ ಮನೆತನಗಳೂ 14 ನೆಯ ಶತಮಾನದಲ್ಲಿ ಆಳಿದ ಮೂರನೆಯ ಎಡ್ವರ್ಡ್ ಪ್ಲಾಂಟಾಂಜನೆಟ್ ದೊರೆಯ ಸಂತತಿಗಳೇ! ಅ ಕರಾಳ ದಿನ ಬೆಳಗಿನ ಸಮಯ (22ನೆಯ ಆಗಸ್ಟ್, 1485) ಬಾಸ್ವರ್ತ್ ಯುದ್ಧದಲ್ಲಿ ಮೂರನೆಯ ರಿಚರ್ಡ್ ಇಂಗ್ಲೆಂಡಿನ ಪಟ್ಟಕ್ಕಾಗಿ ಎದುರಾಳಿಯಾದ (ಮುಂದೆಏಳನೆಯ ಹೆನ್ರಿ ಎಂದು ಕರೆಯಲ್ಪಡಲಿರುವ) ಹೆನ್ರಿ ಟ್ಯೂಡರ್ ನ ದಂಡಿನ ಮೇಲೆ ರಾಜ ಸ್ವತಃ ಏರಿ ಹೋದಾಗ ತಲೆಗೆ ವೈರಿಯ ಹ್ಯಾಲ್ಬರ್ಡ್ (halberd) ಎನ್ನುವ ಭೀಕರ ಶಸ್ತ್ರದ ಪ್ರಹಾರದಿಂದ ಮರಣಹೊಂದಿದ. ಆತನ ಕುದುರೆಯ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಕೆಳಗಿಳಿಯಬೇಕಾಗಿ ಅಲ್ಲಿಂದಲೆ ಧೈರ್ಯದಿಂದ ಮುನ್ನುಗ್ಗಿದ್ದ ರಿಚರ್ಡ್ ಯುದ್ಧರಂಗದಲ್ಲಿ ಮೃತನಾದ ಇಂಗ್ಲೆಂಡಿನ ಕೊನೆಯ ಅರಸನೂ ಆಗಿದ್ದಾನೆ. ಆತ ಆಳಿದ್ದು ಬರೀ ಹದಿನಾಲ್ಕು ವರ್ಷ ಮಾತ್ರ.

ಬಾಸ್ವರ್ತ್ ಯುದ್ಧರಂಗ

ನೆರಳು ಗಡಿಯಾರ (Sun dial with the crown of Richard III)

ಧರ್ಮಕ್ಷೇತ್ರೇ ಕುರುಕ್ಷೇತ್ರೇ!

ಆಗ ಪ್ರಾಟೆಸ್ಟೆಂಟ್ ಮತ ಹುಟ್ಟಿರಲಿಲ್ಲ. ರಿಚರ್ಡನ ಪೂರ್ವಜರಿಗೆ ಫ್ರಾನ್ಸ್ ದೇಶದ ಸಂಬಂಧವಿತ್ತು ಅಂತ ಆತನೂ ಕ್ಯಾಥಲಿಕ್ ಆಗಿದ್ದ. ಆತ ಮೃತನಾದ ಮೇಲೆ ಆತನ ದೇಹವನ್ನು ಹತ್ತಿರದ ಲೆಸ್ಟರಿನ ಫ್ರಾನ್ಸಿಸ್ಕನ್ ಫ್ರಯರಿ ಚರ್ಚಿನಲ್ಲಿ ಗಡಿಬಿಡಿಯಿಂದ ಮಣ್ಣು ಮಾಡಲಾಗಿತ್ತು. ಅದರ ಗುರುತುಗಳೆಲ್ಲ ಮಾಯವಾಗಿದ್ದವು. ಮುಂದೆ ಆ ಸ್ಥೂಲಕಾಯದ, ಷಟ್ಪತ್ನಿವ್ರತ (!) ಎಂಟನೆಯ ಹೆನ್ರಿ ಪೋಪನನ್ನು ಮಾನ್ಯ ಮಾಡದೆ ಪ್ರಾಟೆಸ್ಟೆಂಟ್ ಆದ. ಆತ ಫ್ರಯರಿಗಳನ್ನು (Friary) ರದ್ದುಗೊಳಿಸಿದ. ಸೋರ್ ನದಿಯಲ್ಲಿ ರಿಚರ್ಡನ ಅಸ್ಥಿಯನ್ನು ಚೆಲ್ಲಲಾಯಿತೆಂದೆಲ್ಲ ವದಂತಿ ಹಬ್ಬಿತ್ತು. ಅದಕ್ಕೆ ಅದನ್ನು ಪತ್ತೆ ಹಚ್ಚಲು ಐದು ಶತಮಾನಗಳೇ ಬೇಕಾಯಿತು. ಆತನ ನಿಷ್ಟ ಅಭಿಮಾನಿಗಳ ಪ್ರಯತ್ನದಿಂದ ಸಂಶೋಧನೆ ಪ್ರಾರಂಭವಾಗಿ ಆ ಚರ್ಚಿನ ಗುರುತು ಹಿಡಿದು ಕಾರ್ ರ್ಪಾರ್ಕಿನಡಿ ಉತ್ಖನನ ಮಾಡಿ ರಿಚರ್ಡನನ್ನು ವಿಜೃಂಭ್ಹಣೆಯಿಂದ ಲೆಸ್ಟರ್ ಕೆಥಿಡ್ರಲ್ನಲ್ಲಿ ಸಮಾಧಿ ಮಾಡಿದ್ದು ಕ್ಯಾಥಲಿಕ್ ಮತದ ಕ್ರಿಶ್ಚಿಯನ್ನರಿಗೆ ಅಸಮಾಧಾನವಾಗಿತ್ತು! 

ಕೊನೆಯುಸಿರೆಳೆದವರೆಷ್ಟು ಜನ?

ಹಾಗೆ ನೋಡಿದರೆ ಒಂದು ಸಾವಿರ ಜನ ಮೃತರಾದರೂ, ಎರಡೂ ಕಡೆ ಸೇರಿ ಪಾಲುಗೊಂಡ 22,000 ಯೋಧರ ಸಂಖ್ಯೆ ಕುರುಕ್ಷೇತ್ರದ ಹದಿನೆಂಟು ಅಕ್ಷೌಹಿಣಿ ಸೈನ್ಯಕ್ಕೆ ಹೋಲಿಸಲಾಗದು. ಅದರಲ್ಲಿ ಎರಡುಸಾವಿರ ಯೋಧರು ಫ್ರಾನ್ಸಿನಿಂದ ಬಂದ ಕೂಲಿ ಸೈನಿಕರು (mercenaries). ಈ ದೇಶದ ಅತ್ಯಂತ ಭೀಕರವಾದ ಯಾದವೀ ಕಾಳಗವೆಂದು ಪ್ರಸಿದ್ಧವಾದ ಐವತ್ತು ಸಾವಿರ ಜನ ಭಾಗವಹಿಸಿದ್ದ ಟೌಟನ್ ಯುದ್ಧಕ್ಕೆ ಸಮ ಇದು ಆಗಿರಲಿಲ್ಲ. ಆದರೂ ಇದು ಈ ದೇಶದ ಇತಿಹಾಸಕ್ಕೆ ಅತ್ಯಂತ ಮಹತ್ವದ ತಿರುವು ಕೊಟ್ಟಿತ್ತು. ರಿಚರ್ಡನ ಪತನದಿಂದ ಇಂಗ್ಲೆಂಡಿನ ದೊರೆಯಾದ ಏಳನೆಯ ಹೆನ್ರಿ ಯಾರ್ಕ್ ಮಹಿಳೆಯನ್ನು ಮದುವೆಯಾಗಿ ಎರಡೂ ಪಂಗಡಗಳನ್ನು ಒಂದುಗೂಡಿಸಿದ. ಆತನ ಲಾಂಛನವೇ ಮುಂದೆ ಬಿಳಿ-ಕೆಂಪು ಎರಡೂ ಬಣ್ಣದ ಹೂಗಳೊಂದಿಗೆ ಟ್ಯೂಡರ್ ರೋಸ್ ಆಯಿತು.

ರಿಚರ್ಡನ ಕೊನೆಯ ಮಾತುಗಳು

ಬಾಸ್ವರ್ತ್ ರಣರಂಗದ ಸುತ್ತಲೂ ನಡೆದಾಡಲು ಅನುಕೂಲವಾಗುವ ಪಥ ಅದೆ. ಅಲ್ಲಲ್ಲಿ ಉತ್ತಮ ಮಾಹಿತಿ ಫಲಕಗಳನ್ನು ನಿರ್ಮಿಸಿದ್ದರಿಂದ 500 ವರ್ಷಗಳ ಹಿಂದಿನ ಇತಿಹಾಸ ಜೀವ ತಳೆದು ಸಮರ ಇದುರಿಗೇ ನಡೆಯುತ್ತಿದೆಯೇನೋ ಅಂತ ರೋಮಾಂಚನವಾಗುತ್ತದೆ. ಕುದುರೆಗಳ ಖುರಪುಟ, ಕತ್ತಿ ಗುರಾಣಿಗಳ ಘರ್ಷಣೆಯ ಖಟ್ – ಖಡಲ್, ಮರಣವನ್ನಪ್ಪುತ್ತಿರುವ, ಗಾಯಗೊಂಡ ಸೈನಿಕರ ಆರ್ತ ನಾದ, ಕಿವಿಯನ್ನು ಗಡಚಿಕ್ಕುತ್ತವೆ. ಇಂಥ ಕಾಳಗಗಳಲ್ಲಿ ಕುದುರೆ ಸವಾರರದೇ ಮೇಲುಗೈಯೆಂದ ಮೇಲೆ ಕುದುರೆಯನ್ನು ಕಳೆದುಕೊಂಡು ಕುದುರೆಯಿಂದ ಕೆಳಕ್ಕುರುಳಿದ ರಿಚರ್ಡ್ ದೊರೆ ’ಒಂದು ಕುದುರೆಗಾಗಿ ಏನನ್ನು (ನನ್ನ ರಾಜ್ಯವನ್ನೂ) ಕೊಡಲಾರೆ” ಅಂದನಂತೆ. ಆತನ ಕಿರೀಟ ಹಾರಿತ್ತು ಎದುರಾಳಿಗಳ ಭರ್ಚಿ-ಕೊಡಲಿ ಕೂಡಿದ ಹ್ಯಾಲ್ಬರ್ಡ್ ಶಸ್ತ್ರದಿಂದ ಭೀಕರ ಹತ್ಯೆಯಾಯಿತು..ಶೇಕ್ಸ್ಪಿಯರನ ನಾಟಕದ ಪ್ರಸಿದ್ಧ ಸಾಲುಗಳ ಪ್ರಕಾರ “A horse, a horse, My kingdom for a horse” ಅಂತ ಕನವರಿಸುತ್ತ ಮಡಿದನಂತೆ

ರಾಜನ ಕೊನೆಯ ನೀರಿನ ಗುಟುಕು?

ಬಾಸ್ವರ್ತ್ ರಣಭೂಮಿಯ ಸುತ್ತಿನ ದಾರಿಯ ಹದಿನೇಳನೆಯ ಮತ್ತು ಕೊನೆಯ ವೀಕ್ಷಣಾ ಸ್ಥಾನದಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ಊರ್ಜಿತವಾದ ಒಂದು ಕಲ್ಲುಗುಡ್ಡೆ (Cairn) ಇದೆ. ಅದು ಅಲ್ಲಿ ಹರಿವ ನೀರಿನ ಸೆಲೆಯ ಮೇಲೆ ಕಟ್ಟಲಾಗಿದೆ ಅನ್ನುತ್ತದೆ ಒಂದು ಫಲಕ. ಅದರ ಪಕ್ಕದಲ್ಲೇ ರಿಚರ್ಡನ ಸೈನ್ಯಯುದ್ಧ ಪೂರ್ವ ’ಡೇರೆ’ ಹಾಕಿತ್ತು. ಅಲ್ಲಿಯೇ ಆತ ಕೊನೆಯ ಬಾರಿ ನೀರು ಕುಡಿದನೆಂದು ಪ್ರತೀತಿ. ಆ ಸ್ಥಳವನ್ನು ಇಂದಿಗೂ ನೋಡಿ ನಿಮ್ಮ ಇತಿಹಾಸ ಪಿಪಾಸೆಯನ್ನು ತಣಿಸಿಕೊಳ್ಳಬಹುದು.

ಕೊನೆಗೂ ವಿಜ್ಞಾನದ ತೀರ್ಪು

ಯುದ್ಧದ ನಾಮೋ ನಿಶಾನೆ ಎಲ್ಲ ಅಳಿಸಿ ಹೋಗಿರುವಾಗ ಈ ಜಾಗದಲ್ಲೇ ಆ ರಣರಂಗವಿತ್ತು ಅಂತ ಹೇಗೆ ಸಾಬೀತು ಮಾಡಲಾಯಿತು? ಅದಕ್ಕೆ ಸಹಾಯ ಬಂದುದು ಆಧುನಿಕ ಕಾರ್ಬನ್ ಡೇಟಿಂಗ್ ವಿಜ್ಞಾನ. ಈ ದೇಶದಲ್ಲಿ ಅತ್ಯಂತ ಹಳೆಯ ಚರ್ಚುಗಳಲ್ಲೂ ಉಳಿದಿರುವ ದಾಖಲೆಗಳು ಇತಿಹಾಸವನ್ನು ಜೋಡಿಸಲು ಬಹಳ ಸಹಾಯ ಮಾಡುತ್ತವೆ. ಹುಟ್ಟು, ಬಾಪ್ಟಿಸಮ್ (ನಾಮಕರಣ), ಮದುವೆ, ಶವಸಂಸ್ಕಾರದ ದಾಖಲೆಗಳನ್ನು ಮುತವರ್ಜಿಯಿಂದ ಕಾದಿಡಲಾಗುತ್ತದೆ. ಪಕ್ಕದ ಡಾಡ್ಲಿಂಗ್ಟನ್ ಚರ್ಚಿನ ಶವಸಂಸ್ಕಾರ ದಾಖಲೆಗಳಿಂದ ಇತಿಹಾಸದ ತುಣುಕುಗಳನ್ನು ಜೋಡಿಸಿದ ಮೇಲೆಯೂ ಉಳಿದಿರಬಹುದಾದ ಸಂಶಯಗಳನ್ನು ನಿವಾರಿಸಲು ಆಧುನಿಕ ವಿಜ್ಞಾನ ಸಹಾಯಕ್ಕೆ ಬಂದಿದೆ. ಶತಮಾನಗಳ ಹಿಂದೆ ಲೆಸ್ಟರಿನ ಮಧ್ಯೆ ನೆಲಸಮವಾಗಿ ಹೂತುಹೋದ ಫ್ರಯರಿ ಚರ್ಚಿನಲ್ಲಿ ಸಿಕ್ಕ ಎಲುಬುಗಳು ರಿಚರ್ಡ್ ದೊರೆಯದೇ ಅಂತ ಹಲ್ಲಿನ ಡಿ ಎನ್ ಏ ಸಾಬೀತು ಮಾಡಿದಂತೆ ಬಾಸ್ವರ್ತ್ ಹತ್ತಿರದ ಆಳದ ಮಣ್ಣಿನ ಪೀಟ್ (peat) ಸ್ಯಾಂಪಲ್ಲುಗಳನ್ನು ಕಾರ್ಬನ್ ಡೇಟಿಂಗ್ ಮಾಡಿ ಪರೀಕ್ಷಿಸಿದ ಅಮೇರಿಕೆಯ ಲ್ಯಾಬೋರಟರಿ ಐದು ನೂರು ವರ್ಷಗಳ ಹಿಂದೆ ಇಲ್ಲಿರುವುದೇ ಜವುಳು ಪ್ರದೇಶ (marshland) ಅಂತ ಖಚಿತಪಡಿಸಿತು. ಅದರಿಂದ ರಣರಂಗದ ಸರಿಯಾದ ಜಾಗ ಇದು ಅಂತ ನಿಶ್ಚಿತವಾಯಿತು.ಇವೆಲ್ಲ ಮಾಹಿತಿ ಪಕ್ಕದಲ್ಲಿರುವ ವಿಸಿಟರ್ ಸೆಂಟರ್ ನಲ್ಲಿರುವ ಉತ್ತಮ ಮ್ಯೂಸಿಯಮ್ ದಲ್ಲಿ ದೊರಕುತ್ತವೆ.

ಕೊನೆಯ ಮಾತು

ಇತಿಹಾಸದಿಂದ ಏನು ಉಪಯೋಗ ಎಂದು ಅನೇಕರ ಅಭಿಪ್ರಾಯವಾದರೂ ಜಾರ್ಜ್ ಸಾಂಟಾಯನ ಹೇಳಿದಂತೆ ಇತಿಹಾಸವನ್ನರಿಯದವರು ಮತ್ತೆ ಮತ್ತೆ ಅವೇ ತಪ್ಪುಗಳನ್ನು ಮಾಡುವ ಶಾಪಗ್ರಸ್ತರಾಗುತ್ತಾರೆ! ಇತಿಹಾಸವನ್ನು ತುಳಿದರೆ ಅದು ನಿನ್ನನ್ನು ನೆಲಸಮಮಾಡುತ್ತದೆ! ಆದರೆ ಮಾನವ ಇತಿಹಾಸದ ತುಂಬೆಲ್ಲ ಈರ್ಷೆ, ದ್ವೇಷಗಳಿಂದ ಯುದ್ಧಗಳಾಗುತ್ತಿರುವಾಗ ಅತ್ಯಂತ ಪುರಾತನ ಉಪನಿಷತ್ತಿನ ವಾಕ್ಯ ’ಮಾ ವಿದ್ವಿಷಾವಹೈ’ (ವೈಮನಸ್ಸು, ದ್ವೇಷ ಬೇಡ) ಯನ್ನು ಯಾರೂ ಕೇಳಿಸಿಕೊಂಡಿಲ್ಲವೇ? ಎಂದೆನಿಸುತ್ತದೆ

ಶ್ರೀವತ್ಸ ದೇಸಾಯಿ.

(ಈ ವಾರದ ಕನ್ನಡಪ್ರಭದಲ್ಲಿಯ ನನ್ನ ಲೇಖನದ ವಿಸ್ತೃತ ಆವೃತ್ತಿ)

ಫೋಟೋಗಳು: ಲೇಖಕರವು; Photo of Peat: CC BY-SA 3.0, https://commons.wikimedia.org/w/index.php?curid=244694

Links: My article: https://wp.me/p4jn5J-3Sw

https://www.bosworthbattlefield.org.uk/

11 thoughts on “ಬಾಸ್ವರ್ತ್ ಯುದ್ಧರಂಗ ಎನ್ನುವ ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳ -ಶ್ರೀವತ್ಸ ದೇಸಾಯಿ

 1. ಸರೋಜಿನಿ ಪಡಸಲಗಿ ಅವರ ಅಭಿಪ್ರಾಯ

  ಅನಿವಾಸಿ ಯಲ್ಲಿ ಓದಿದ ಈ ವಾರದ ಬರಹ ಇಂಗ್ಲೆಂಡ್ ನ ಇತಿಹಾಸದ ಒಂದು ಪುಟದ ಮೇಲೆ ಚೆಲ್ಲಿದ ಹೊಳವು ನಿಜಕ್ಕೂ ಕೌತುಕಕಾರಿ. ಯಾವಾಗಲೂ ಇತಿಹಾಸ ಹೊಸ ವಿಷಯಗಳತ್ತ ಬೆಳಕು ಚೆಲ್ಲುವದಾದರೂ ಶ್ರೀವತ್ಸ ದೇಸಾಯಿಯವರ ಬರಹ ತುಂಬ ವಿಶಿಷ್ಟ ಅನಿಸ್ತು.ಒಬ್ಬ ನುರಿತ ಇತಿಹಾಸ ತಜ್ಞನ ಶೈಲಿ ಬೆರಗು ಮೂಡಿಸಿದ್ದರಲ್ಲಿ ಸಂಶಯವಿಲ್ಲ; ಹಾಗೆಯೇ ಆಸಕ್ತಿ ಹೆಚ್ಚಿಸುವಲ್ಲೂ. ಈ ಬರಹ ಓದಿದಾಗ ಒಂದು ಯೋಚನೆ ನಂಗೆ ಗೊತ್ತಿಲ್ಲದೇ ನುಸುಳಿದ್ದಂತೂ ಅಗದೀ ಖರೆ. ನಮ್ಮ ಭಾರತೀಯ ಇತಿಹಾಸದ, ಪರಂಪರೆಯ ಒಂದೊಂದೇ ಪುಟಗಳು ಶ್ರೀವತ್ಸ ದೇಸಾಯಿಯವರ ಲೇಖನಿಯಿಂದ ಮೂಡಿದರೆ ಹೇಗಿದ್ದೀತು ಆ ಸೊಗಸು ಅಂತ. ನಿಜಕ್ಕೂ ಕಾಯ್ತಿದೀನಿ ನಿಮ್ಮದೇ ಶೈಲಿಯಲ್ಲಿ ಹೊರ ಬರುವ ಆ ಬರಹಗಳಿಗಾಗಿ .
  ಸುಂದರ, ಮಾಹಿತಿ ಪೂರ್ಣ ಬರಹ ನೀಡಿದ್ದಕ್ಕೆ ಧನ್ಯವಾದಗಳೊಂದಿಗೆ ಅಭಿನಂದನೆಗಳು ಶ್ರೀವತ್ಸ ದೇಸಾಯಿಯವರೇ.

  ( ಮಾನ್ಯರೇ, ಯಾಕೋ ಅನಿವಾಸಿಯ ಕಾಮೆಂಟ್ ಬಾಕ್ಸ್ ನಲ್ಲಿ ಕಳಿಸಲಾಗುತ್ತಿಲ್ಲ. ಅದಕ್ಕೇ ಇಲ್ಲಿ ಕಳಿಸಿದೆ. ದಯವಿಟ್ಟು ಈ ಕಾಮೆಂಟ್ ನ ಪ್ರಕಟಿಸ್ತೀರಾ?
  ವಂದನೆಗಳೊಂದಿಗೆ,
  ಸರೋಜಿನಿ ಪಡಸಲಗಿ
  ಬೆಂಗಳೂರು)

  Like

  • ಧನ್ಯವಾದಗಳು, ಸರೋಜಿನಿ ಪಡಸಲಗಿಯವರೇ -ಓದಿ ಕಮೆಂಟ್ ಮಾಡಿದ್ದಕ್ಕೆ. ನಿಮಗೆ ಈ ನಾಡಿನ ಇತಿಹಾಸದಲ್ಲೂ ಇಷ್ಟೊಂದು ಆಸಕ್ತಿ ಇರುವುದು ಕಂಡು ಆಶ್ಚರ್ಯ, ಸಂತೋಷವಾಯಿತು. ಅನಿವಾಸಿಯನ್ನು ಓದುತ್ತಾ ಬನ್ನಿ. ನಿಮ್ಮ ಅನಿಸಿಕೆಗಳನ್ನು ತಿಳಿಸುತಾ ಇರಿ.

   Like

 2. ದೇಸಾಯಿಯವರಿಂದ ಮತ್ತೊಂದು ಇತಿಹಾಸದ ಉತ್ಖನನ. ಬಿಳಿ ಮತ್ತು ಕೆಂಪು ಗುಲಾಬಿಗಳ ಮಹತ್ವ ಗೊತ್ತಾದದ್ದೇ ಈ ಲೇಖನ ಓದಿದ ಮೇಲೆ. ಲೇಖನಕ್ಕೆ ಮಹಾಭಾರತದ ಟಚ್ ಕೊಡಲು ನಿಮಗೆ ಮಾತ್ರ ಸಾಧ್ಯ. ಎಷ್ಟೆಲ್ಲ ಓದಿಕೊಂಡಿದ್ದೀರಿ, ಎಲ್ಲೆಲ್ಲಿ ಸುತ್ತುತ್ತೀರಿ, ಅದು ಹೇಗೆ ಅಷ್ಟು ಚಂದವಾಗಿ ಬರೆಯುತ್ತೀರಿ!

  – ಕೇಶವ

  Like

  • ಬಹಳ ದೊಡ್ಡ ಮಾತು ಹೇಳಿದಿರಿ, ಕೇಶವ ಅವರೇ! “ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ!” ಎಲ್ಲವೂ ಎಲ್ಲರೂ ಹೇಳಿಯಾಗಿದೆ. ಬರೀ ಅನ್ಯರ ‘ಉಚ್ಛಿಷ್ಟ ‘ಗಳನ್ನು ಹೆಕ್ಕಿ ಜೋಡಿಸುವದಷ್ಟೇ ಈ ಕೆಲಸ! ಇಷ್ಟೇ ಅದರಲ್ಲಿ ಸ್ವಾರಸ್ಯ ಕಂಡವರು ನಿಮ್ಮಂಥ ರಸಿಕರು! ಬೇಂದ್ರೆ ‘ಅಜ್ಜನ’ ಮಾತಿನಲ್ಲಿ “ಅದನ್ನು ಕಂಡ ಕಂಡವರು ಕಾಣೋ ಹಂಗಿಲ್ಲ!” ಧನ್ಯವಾದಗಳು ಓದಿ ಕಂಡುಕೊಂಡಿದ್ದಕ್ಕೆ!

   Like

 3. Shri Ramamurthy comments:
  ನಮಸ್ಕಾರ
  I seem to have some problems to enter a comment in ಅನಿವಾಸಿ.
  I had put the following but has not appeared. pl look in to it.
  ಶ್ರೀವತ್ಸರ ಬಾಸ್ವರ್ತ್ ಕದನದ ಬಗ್ಗೆ ಬರೆದ ಸ್ವಾರಸ್ಯವಾದ ಲೇಖನ ಈ ದೇಶದಲ್ಲಿ ನಡೆದ ಅನೇಕ ಘಟನೆಗಳಲ್ಲಿ ಒಂದು. ಸುಮಾರು ಸಾವಿರ ವರ್ಷಗಳಿಂದ ಈ ದೇಶ, ಅಂದರೆ ಇಂಗ್ಲೆಂಡ್ , ಹೋರಾಡಿರುವ ಯುದ್ಧಗಳು , ಉದಾಹರಣೆಗೆ, ಪಕ್ಕದ ರಾಷ್ಟ್ರ ಸ್ಕಾಟ್ಲೆಂಡ್ ಮೇಲೆ , ಸ್ಪೇನ್ ಮತ್ತು ಫ್ರೆಂಚ್ ದೇಶಗಳಮೇಲೆ , ವಾರ್ ಆಫ್ ರೋಸಸ್ ಮತ್ತು ಇಂಗ್ಲಿಷ್ ಸಿವಿಲ್ ಯುದ್ಧ. ಇದೂ ಸಾಲದು ಅಂದರೆ ಇಂಡಿಯಾ ಮತ್ತು ಅಮೇರಿಕ ದಲ್ಲಿ ನಡೆದ ಯುದ್ಧಗಳು , ಲೆಕ್ಕಕ್ಕೆ ಇಲ್ಲ. ಆದರೆ ಇದರ ದಾಖಲೆಗಳನ್ನು ಇಂದಿಗೂ ಜೋಪಾನವಾಗಿ ಕಾಪಾಡಿದ್ದಾರೆ.
  ಲೆಸ್ಟರ್ car park ನಲ್ಲಿ ಮೂರನೆಯ ರಿಚರ್ಡ್ನ ನ ಮೂಳೆಗಳು ಇರಬಹುದೆಂದು ಊಹಿಸಿ ಅಲ್ಲಿ ಹುಡುಕಿ ಯಶಸ್ವಿ ಆಗಿದ್ದು ಆಶ್ಚರ್ಯವೇ ಹೌದು.
  ಇವನ ಕೊನೆ ಮಾತುಗಳ (“a horse ,a horse ,My kingdom for a horse “) ಜೊತೆಗೆ London Tower ನಲ್ಲಿ ಸೆರೆವಾಸದಲ್ಲಿ ಇಟ್ಟಿದ್ದ ಇಬ್ಬರು ರಾಜಕುಮಾರರ ಬಗ್ಗೆ ಹೇಳಿದ್ದರೆ , ಈ ಮಕ್ಕಳು ಏನಾದರೂ ಅನ್ನುವ ಸಂಶಯ ಈಗ ಇರುತ್ತಿರಲಿಲ್ಲ

  Ramamurtny

  Like

  • Thank you, Ramamurthy avare. I wasn’t surprised youf deep interest in history of home and this country grabbed your interest. But I am surprised thd comment didn’t get logged in. Perhaps you havd to log into WordPress for the comment to be recognised. In any case ….
   ಇಮ್ಮ ಆಸ್ಥೆಗೆ ಮತ್ತು ಚರ್ಚೆಗೆ, ವಿಚಾರಗಳಿಗೆ ಧನ್ಯವಾದಗಳು. ನಿಮ್ಮ ಕಮೆಂಟಿನ ಕೊನೆಯ ಮಾತುಗಳೂ ಸ್ವಾರಸ್ಯಕರವಾಗಿವೆ. Perhaps his last words could be: A horse, a horse! O my kingdom for a horse… perhaps not mine, but legitimately belonged to one of my nephews! ಇಂಗ್ಲೆಂಡಿನ ಇತಿಹಾಸವೇ ಆಗ ಬದಲಾಗುತ್ತಿತ್ತೇನೋ! ನಿಮ್ಮ ವಿಚಾರಗಳಿಗೆ ಯಾವಾಗಲೂ ಸ್ವಾಗತ. ಶ್ರೀವತ್ಸ

   Like

   • Many thanks, I did login to enter my comments, but I didn’t get the usual reply to say that the comments are under review or words to this effect.

    Like

   • ದೇಸಾಯಿಯವರ ಐತಿಹಾಸಿಕ ಬರಹ ಅವರ ಅನನ್ಯ ಶೈಲಿಯಿಂದ ಕೇವಲ ಮಾಹಿತಿ ಪತ್ರವಾಗದೇ ಸಾಹಿತ್ಯಿಕ ಲೇಖನವಾಗಿದೆ. ಇತಿಹಾಸದ ಆಸಕ್ತಿ ಆನುವಂಶಿಕವಾಗಿ ಬಂದಿದೆ ಎನ್ನುವುದಕ್ಕೆ ಅವರ ಬಹಹಗಳು ಸಾಕ್ಷಿ.
    ಅನಿವಾಸಿಯಲ್ಲಿ ಬಂದ ಅವರ , ರಾಮಮೂರ್ತಿಯವರ ಐತಿಹಾಸಿಕ ಲೇಖಗಳನ್ನು ಒಟ್ಟುಗೂಡಿಸಿ ಒಂದು ಹೊತ್ತಿಗೆಯನ್ನೇ ತರಬಹುದು.

    – ರಾಂ

    Like

 4. This is a very intersting article full of information and educating us readers about history of Britain .

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.