ರಿಚರ್ಡ್ ಅಟೆನ್ಬರೋ ಅವರ ಸಾಕ್ಷ್ಯಚಿತ್ರಗಳನ್ನು ನೋಡಿರುತ್ತೀರ. ಆಫ್ರಿಕಾದ ಹುಲ್ಲುಗಾವಲಿನ ದೃಶ್ಯ. ಸೋಮಾರಿ ಗಂಡು ಸಿಂಹ ಮರದ ನೆರಳಲ್ಲಿ ತೂಕಡಿಸುತ್ತಲೋ, ಉರುಳಾಡುತ್ತಲೋ ಬಿದ್ದಿರುತ್ತದೆ. ಅನತಿ ದೂರದಲ್ಲಿ ಸಿಂಹಿಣಿಗಳು ಅವಿತು ಬೇಟೆಗೆ ಹೊಂಚು ಹಾಕುತ್ತಿರುತ್ತವೆ. ಮೈಮರೆತು, ಸಿಂಹಿಣಿಗಳ ದಿಕ್ಕಿನಲ್ಲಿ ಬಂದಿರುವ ಎಮ್ಮೆಯ ಕರುವಿನೆಡೆ ಅವು ದಾಳಿ ಮಾಡಿದಾಗ ನಿಮ್ಮ ಮೈ ಝುಮ್ ಎಂದಿರದೇ? ಇದನ್ನು ಗ್ರಹಿಸಿ ವೇಗವಾಗಿ ಧಾವಿಸಿ ಬಂದ ಎಮ್ಮೆ ತನ್ನಿರುವನ್ನು ಲೆಕ್ಕಿಸದೆ ಹೋರಾಡಿ, ಮರಿಯನ್ನು ರಕ್ಷಿಸಿಕೊಂಡಾಗ ನೀವು, ನಿಮ್ಮೊಡನೆ ಕುಳಿತ ನಿಮ್ಮ ಮಗು ಚಪ್ಪಾಳೆ ತಟ್ಟಿರುವುದಿಲ್ಲವೇ? ಆಗ ಅದೇ ಮಗುವನ್ನೇ “ಅಯ್ಯೋ, ನನ್ನ ಕಂದ” ಎಂದು ಭಾವೋದ್ವೇಗದಿಂದ ಅಪ್ಪಿ ಮುದ್ದಾಡಿದ್ದರೆ, ನೀವು ಅಮ್ಮ. ಆ ಕ್ಷಣದಲ್ಲಿ, ಎಮ್ಮೆಯ ಕರು ಸಿಂಹಿಣಿಯ ಬಾಯಿಂದ ಬಚಾವಾದ ಸಂತೋಷದೊಡನೆ, ನನ್ನ ಮನೆಯಲ್ಲಿ, ನನ್ನ ಮಗು ಸುರಕ್ಷಿತವಾಗಿದೆ ಎಂಬ ಸಮಾಧಾನದ ನಿಟ್ಟುಸಿರು ಬಿಡುವ ಸ್ವಭಾವ ಜೀವ ತಂತುಗಳಲ್ಲಿ ಹಾಸುಹೊಕ್ಕಾಗಿರುವುದು ಅಮ್ಮ ಎಂಬ ಜೀವದಲ್ಲಿ ಮಾತ್ರ.
ಆಕೆ ಹುಟ್ಟಿದ್ದು ಬೆಟ್ಟಗಳಲ್ಲಿ. ಮದುವೆಯಾಗಿ ಬಂದಿದ್ದು ಕಡಲಿನ ತಟಕ್ಕೆ. ಬೆಳೆದ ವಾತಾವರಣವೇ ಬೇರೆ, ಗಂಡನ ಮನೆಯ ಆಚಾರ-ವಿಚಾರಗಳೇ ಬೇರೆ; ಮಾತನಾಡುವ ಭಾಷೆಯೂ ಬೇರೆ. ಹೊರಟಿದ್ದು ದೊಡ್ಡ ಕುಟುಂಬದಿಂದ, ಹೊಕ್ಕಿದ್ದು ದೊಡ್ಡ ಕುಟುಂಬ; ಇದೊಂದೇ ಸಾಮ್ಯ. ಕಷ್ಟಪಟ್ಟು, ಬಾಳ ಸಂಗಾತಿಯ, ಆತನ ಮನೆಯವರ ಮನ ಗೆದ್ದಳು, ಭಾಷೆ ಕಲಿತು ಹಾಲಲ್ಲಿ ನೀರಾದಳು. ಆಕೆ ವಿದ್ಯಾವಂತೆ, ಪ್ರತಿಭಾವಂತೆ, ಉದ್ಯೋಗವತಿ. ಮನೆ ಒಳಗೆ, ಹೊರಗೆ ಕೆಲಸ ತೂಗಿಸಿಕೊಂಡು ಹೋಗುವ ಗಟ್ಟಿಗತಿ. ಆಕೆಗೆ ಇಬ್ಬರು ಮಕ್ಕಳು. ತನ್ನಂತೆ ಅವರು ಕಷ್ಟ ಪಡಬಾರದೆನ್ನುವುದು ಆಕೆಯ ಹಠ. ಅದರ ಹಾದಿಯ ನಕ್ಷೆಯನ್ನು ಆಕೆ ಮನದಲ್ಲೇ ಬಿಡಿಸಿಟ್ಟಳು. ಆ ದಿಸೆಯಲ್ಲಿ ಆಕೆಯದು ಅವಿರತ ಶ್ರಮ. ಅಡಿಗೆ ಮಾಡುತ್ತ, ಮಕ್ಕಳ ಕಿವಿ ಹಿಂಡಿ ಪಾಠ, ಬುದ್ಧಿ ಹೇಳುವುದು ಆಕೆಗೆ ಎಡಗೈ ಕೆಲಸ. ಬೆಳಿಗ್ಗೆ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಚಹಾನೋ, ಕಾಫಿಯೋ ಕುಡಿಸಿ, ತೂಕಡಿಸುವಾಗ ತಲೆಗೆ ತಟ್ಟಿ ಎಬ್ಬಿಸಿ ಓದಿಸುವುದು ಆಕೆಯ ದಿನಚರಿ; ಕಠಿಣ ವಜ್ರದ ಹೊರಮೈ ಒಳಗಿರುವುದು ಬೆಣ್ಣೆಯಂತೆ ಮೃದುವಾದ ತಿರುಳು. ರಾತ್ರಿ ಮಲಗುವಾಗ ಹೇಳುವ ಕಥೆಗಳಲ್ಲಿ ಬರುವ ಅದ್ಭುತ ವ್ಯಕ್ತಿತ್ವಗಳನ್ನು ಮಾದರಿಯಾಗಿಸಿದಳು. ಮಕ್ಕಳ ಬಹುಮುಖ ಬೆಳವಣಿಗೆಗೆ ಆಸರೆಯಾದಳು. ನೀರಮೇಲಿನ ತಾವರೆಯ ಎಲೆಯಾದ ಗಂಡನನ್ನೂ ತನ್ನ ಕಾಯಕಕ್ಕೆ ಹುರಿದುಂಬಿಸಿದಳು. ಮಕ್ಕಳ ಸುರಕ್ಷತೆಗೆ ಧಕ್ಕೆ ಬಂದರೆ ಕರುಣಾಮಯಿ, ದುರ್ಗಿಯಾದಾಳು. ಕಣ್ಣಲ್ಲಿ ಕಣ್ಣಿಟ್ಟು, ದಾರಿ ತಪ್ಪದಂತೆ, ಮಕ್ಕಳು ಗಮ್ಯ ತಲುಪುವವರೆಗೂ ಕಾದಳು. ಅದಾದ ಮೇಲೂ ಮಕ್ಕಳು ಕರೆದಾಗ, ಕರ್ತವ್ಯವೆಂದು ಅವರಿದ್ದಲ್ಲಿ ಹೋಗಿ, ಕೈಲಾದಷ್ಟು ಸಹಾಯ ಮಾಡಿದಳು. ಮಕ್ಕಳ ಕರೆಗೆ, ಅಪ್ಪುಗೆಗೆ ಕರಗಿ ನೀರಾದಳು. ಈ ಕಥೆ ನನ್ನಮ್ಮಂದೋ ನಿಮ್ಮ ಅಮ್ಮಂದೋ? ಎಲ್ಲರ ಅಮ್ಮಂದೂ ಅಲ್ಲವೇ.

(ಚಿತ್ರ ಕೃಪೆ: ಗೂಗಲ್)
“ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ” : ಶಂಕರಾಚಾರ್ಯರ ಮಾತು ಸಾರ್ವಕಾಲಿಕ ಸತ್ಯ; ಎಲ್ಲ ಪ್ರಾಣಿ ವರ್ಗಗಳಿಗೂ ಅನ್ವಯವಾಗುವಂತಹ ಮಾತು. ಇಂತಹ ಅದ್ಭುತ ಜೀವಕ್ಕೆ ಧನ್ಯವಾದ ಎಂದು ಹೇಳಲು ಸಾಧ್ಯವೇ! ಆದರೂ ಅದು ಆಗಾಗ ಬೇಕಾಗುವಂತಹ ಟಾನಿಕ್. ಅದಕ್ಕಾಗೇ ಬಂದಿದೆ ಈ ರವಿವಾರ ‘ಮದರ್ಸ್ ಡೇ’. ಬ್ರಿಟನ್ನಿನಲ್ಲಿ ಇದು ಈ ರವಿವಾರವಾದರೆ, ಅಮೆರಿಕ – ಭಾರತಗಳಲ್ಲಿ ಇನ್ನೆರಡು ತಿಂಗಳುಗಳಲ್ಲಿ. ನಮ್ಮಂಥ ಎಡಬಿಡಂಗಿಗಳಿಗೆ ಎರಡೂ ಆದೀತು. ಅಮ್ಮನಿಗೆ ಎರಡುಸಲವೇನು ಕ್ಷಣಕ್ಷಣವೂ ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ.
ಮದರ್ಸ್ ಡೇ ಬಂದಂತೇ, ವ್ಯಾಪಾರಿಗಳು ಅದರ ಲಾಭ ಪಡೆಯಲು ವಿಶೇಷ ಗಾಳಗಳೊಂದಿಗೆ ಕಾಯುತ್ತಲೇ ಇರುತ್ತಾರೆ ಧನ್ಯವಾದಕ್ಕೊಂದು ಕಾಣಿಕೆ ಸಿಕ್ಕಿಸಲು. ಭಟ್ಟರು ಬರೆದಂತೆ ನಾವು ಅಮ್ಮನ ಗಾಳಕ್ಕೆ ಸಿಕ್ಕಿದ್ದರೂ ವ್ಯಾಪಾರಿಯ ಗಾಳಕ್ಕೆ ಇನ್ನೊಮ್ಮೆ ಬೀಳುವುದು ಲೌಕಿಕದ ಸತ್ಯ. ಹಾಗೇ ಹಲವು ಹನ್ನೆರಡು ಗಾಳಗಳಿಗೆ ಸಿಕ್ಕಿದ್ದರೂ, ಅಮ್ಮನ ಗಾಳದ ಶಕ್ತಿಯೇ ಬೇರೆ. ಹಾಗಿರುವಾಗ ಅಮ್ಮ ಮಗುವಿನಿಂದ ಅಪೇಕ್ಷಿಸುವುದು ಏನು? ನನಗನಿಸಿದಂತೆ ಆಕೆಗೆ ಬೇಕಿರುವುದು ನನ್ನ ಮಗು ತಾನು ಹುಟ್ಟಿ ಬೆಳೆದ ನೆಲದ ಮಣ್ಣಲ್ಲಿ ಭದ್ರವಾಗಿ ಹೆಜ್ಜೆ ಊರಿ ನಿಲ್ಲುವುದು. ಅದು ಸಾಧ್ಯವಿಲ್ಲದಿದ್ದರೆ, ಎಲ್ಲೇ ಇದ್ದರೂ ಸ್ವಾವಲಂಬಿಯಾಗಿ, ಉತ್ತಮ ನಾಗರೀಕರಾಗಿರುವುದು. ನಮ್ಮ ಮಕ್ಕಳ ಅಮ್ಮನಿಗೆ ಆಸರೆಯಾಗಿ, ಆಕೆಯನ್ನು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ಆಕೆ ಬಯಸುತ್ತಾಳೆ. ನಮ್ಮ ಸುತ್ತಲಿನ ಅಮ್ಮಂದಿರೊಡನೆ ಗೌರವಯುತವಾಗಿ ನಡೆಯುವುದನ್ನು ಅಪೇಕ್ಷಿಸುತ್ತಾಳೆ. ನಮ್ಮ ಮನೆಯಲ್ಲೇ ಇರುವ ಬಾಲೆ ಆತ್ಮ ವಿಶ್ವಾಸದಿಂದ ಮುಂದಿನ ಸುಧೃಡ ಪೀಳಿಗೆಯ ಅಡಿಪಾಯವಾಗಿ ಬೆಳೆಯುವುದನ್ನು ನಿರೀಕ್ಷಿಸುತ್ತಾಳೆ. ಮಮತೆಯ ಗಾಳದ ಕೊಂಡಿಯಿಂದ ಸೂಸಿದ ‘ಅಮ್ಮ’ ಎಂಬ ಜೀವತಂತು ಭವಿಷ್ಯದ ಮಕ್ಕಳಲ್ಲಿ ಹಾಸುಹೊಕ್ಕಾಗುವುದರಲ್ಲಿ ಸಾರ್ಥಕ್ಯವನ್ನು ಕಾಣುತ್ತಾಳೆ. ದೂರದಲ್ಲಿರುವ ನನಗೆ, ದೂರವಾಣಿಯಲ್ಲಿ ಅಮ್ಮನಿಗೆ ಮದರ್ಸ್ ಡೇಯಂದು ಹಾರೈಸಿ, ಆಶೀರ್ವಾದ ಪಡೆಯುವುದರ ಜೊತೆಗೆ, ಆಕೆಯ ಅಪೇಕ್ಷೆಗಳನ್ನು ಕೈಲಾದಷ್ಟು ನಿರ್ವಹಿಸುವುದೇ ನಾನು ಕೊಡುವ ಕಾಣಿಕೆ.
- ರಾಂ
ರಾಂ ಅವರ ಈ ಬರಹ ಗದ್ಯಕಾವ್ಯ.
ಎರಡನೇ ಪ್ಯಾರಾ ಅನ್ನು ಕತ್ತರಿಸಿದರೆ ಅದೊಂದು ಸುಂದರ ಕವನ.
ಇಂಗ್ಲೆಂಡಿನಲ್ಲಿ ನೆಲೆಸಿರುವ ಅನಿವಾಸಿಗಳಿಗೆ ವರ್ಷಕ್ಕೆ ಎರಡು ಸಲ ಬರುವ ಅಮ್ಮನ ದಿನ. ಪ್ರತಿದಿನವೂ ಅಮ್ಮನ ದಿನವೇ!
ಅಟೆನ್-ಬರೋ ಅವರ ಚಿತ್ರದ ತುಣುಕು ಕಣ್ಣಿಗೆ ಕಟ್ಟುತ್ತದೆ.
ತುಂಬ ಸುಂದರ ಬರಹ, ರಾಂ.
– ಕೇಶವ
LikeLike
ಸರಳವಾದ ಸುಂದರವಾದ ನುಡಿನಮನಗಳು. ಭಾಷೆ ಉತ್ಕೃಷ್ಠ ವಾಗಿದೆ. ಉಪಮೆಗಳು ಸೂಕ್ತವಾಗಿದೆ. ನಿಸ್ವಾರ್ಥ ಪ್ರೇಮದ ಹಲವು ಆಯಾಮಗಳ ಉಲ್ಲೇಖ.
LikeLiked by 1 person
ಉತ್ಪ್ರೇಕ್ಷೆಯಿಲ್ಲದೆ, ಸರಳ, ಸುಲಲಿತವಾಗಿ ಹರಿದಿದೆ ಈ ಬರಹ. ಅಲ್ಲಲ್ಲಿ ಕವಿತೆಯಂತೆ, ಭಾವನೆಗಳ ಮೂಟೆಯನ್ನು ಹೊತ್ತರೂ ಭಾವುಕ ಆಗದಂತೆ, ನಮ್ಮಂಥ ಅನಿವಾಸಿಗಳ ಕಥೆಯನ್ನೇ ಹೇಳುತ್ತ, ಕೊನೆಯಲ್ಲಿ ನಮ್ಮ ತ್ರಿಶಂಕುಲೋಕವಾಸಿಗಳಿಗೆ ಒಂದು ಕಿವಿಮಾತನ್ನು ಸಹ ಹೇಳುತ್ತ ನೂರಾರು ಮದರ್ಸ್ ಡೇ ಕಾರ್ಡುಗಳಲ್ಲಿಯ, ಸಾವಿರಾರು ಸಮಾಜ ತಾಣಗಳಲ್ಲಿಯ ಹಗುರಾದ ಮೆಸೇಜುಗಳಿಗಿಂತ ಶಕ್ತಿಯುತ ಹೃದಯಸ್ಪರ್ಶಿ ಅಭಿವ್ಯಕ್ತಿ. ಓದಿದ ತಾಯಂದಿರೆಲ್ಲ ಅಭಿಮಾನ- ಸಮಾಧಾನ ಪಟ್ಟುಕೊಳ್ಳುವಂಥದು, ರಾಮ್! ಬದುಕಿರುವ ತಾಯಂದಿರಿಗೆ ರವಾನಿಸಿರಿ. ಕಳೆದುಕೊಂಡಿದ್ದರೆ ನೆನೆಯುತ್ತ ಇದನ್ನೂ ತೋರಿಸಿರಿ!
LikeLiked by 1 person