‘ಸಂಕಟ ಬಂದಾಗ ವೆಂಕಟರಮಣ’

ಸಂಕಟ ಬಂದಾಗ ವೆಂಕಟರಮಣ ಎಂಬುದು ಕನ್ನಡದಲ್ಲಿ ಬಹಳೇ ಪ್ರಚಲಿತ ಇರುವ ಗಾದೆ . ನಮ್ಮ ಪೂರ್ವಜರು ಬಹಳ
ಅನುಭವದಿಂದ ಹೇಳಿರುವ ಮಾತು . ನನಗೂ ಸಹ ಯಾಕೋ ಇದರ ಮೇಲೆ ಸ್ವಲ್ಪ ಹರಟೆ ಹೊಡೆಯಬೇಕು ಎಂದು ಅನಿಸಿತು .
ಹರಟೆ ಎಂದ ತಕ್ಷಣ ನಮ್ಮೂರಿನ ಆಲದ ಮರದ ಹರಟೆಯ ಕಟ್ಟೆಯ ನೆನಪು ಬರುತ್ತದೆ . ಸಂಜೆಯಾದರೆ ಊರ ಜನರು ಸೇರಿ
ಹರಟೆ ಹೊಡೆಯುತ್ತಿದ್ದ ಆ ಕಟ್ಟೆ ಇನ್ನೂ ಇದೆ , ಆದರೆ ಈಗ ಹರಟೆ ಹೊಡೆಯುವರಿಲ್ಲ ಬದಲು ಫೋನು ಹಿಡಿದುಕೊಂಡು
ವಿಡಿಯೋ ನೋಡುವ ಪಡ್ಡೆ ಹುಡುಗರು ಇದ್ದಾರೆ . ನಾನೂ ಇಲ್ಲಿ ಕುಳಿತು ಒಂದು ಕಟ್ಟೆ ನೋಡುತ್ತಿದ್ದೆ , ಹರಟೆ ಹೊಡೆಯಲು .
ಅನಿವಾಸಿ ಕಟ್ಟೆ ಸಿಕ್ಕಿತು . ಒಬ್ಬನೇ ಕುಳಿತು ಹರಟೆ ಹೊಡೆದಿದ್ದೇನೆ. ಸಮಯ ಸಿಕ್ಕರೆ ಓದಿ , ಹಾಗೆಯೆ ಒಂದೆರಡು ಸಾಲು
ಅನಿಸಿಕೆಗಳನ್ನು ದಯವಿಟ್ಟು ಗೀಚಿ .


ಸಂಕಟ ಬಂದಾಗ ಸಹಾಯಕ್ಕೆ ಮೊರೆಹೋಗುವುದು ಎಲ್ಲ ಜೀವಿಗಳ ಸಹಜವಾದ ಸ್ವಭಾವ . ಭೂಮಂಡಲದಲ್ಲಿ ತಾನೇ
ಶ್ರೇಷ್ಠನೆಂದು ಬೀಗುವ ಮನುಜ ಇದಕ್ಕೇನು ಹೊರತಾಗಿಲ್ಲ . ಸಂಕಟ ಬಂದಾಗ ಅಥವಾ ಬರಿಸಿಕೊಂಡಾಗ ಹತ್ತು ಹಲವಾರು
ಮಾರ್ಗಗಳ ಅನ್ವೇಷಣೆಯಲ್ಲಿ ತೊಡಗುತ್ತಾನೆ . ಅಡ್ಡದಾರಿ ಹುಡುಕುವದು , ಮೋಸ ಮಾಡುವದು , ಇನ್ನೊಬ್ಬರಿಗೆ
ಅನ್ಯಾಯವೆಸಗುವದು , ಲಂಚ ಕೊಡುವದು ಇವೆಲ್ಲವೂ ಫಲ ನೀಡದಿದ್ದಾಗ ಕೊನೆಯ ಪ್ರಯತ್ನವಾಗಿ ದೇವರಿಗೆ ಮೊರೆ
ಹೋಗುವದು ಸಾಮಾನ್ಯ . ಎಷ್ಟೋ ಜನರಿಗೆ ನಿತ್ಯ ಜೀವನದಲ್ಲಿ ಲಂಚವನ್ನು ಕೊಟ್ಟು, ಪಡೆದು ಅಸಾಧ್ಯವಾದ ಕೆಲಸಗಳನ್ನು
ಸರಾಗವಾಗಿ ಗಿಟ್ಟಿಸಿಕೊಂಡು , ಬಂದ ಸಂಕಟವನ್ನು ಹಾಗೆಯೆ ಪರಿಹರಿಸಿಕೊಂಡ ಅಭ್ಯಾಸ .

ಸಂಕಟದ ಪರಿಸ್ಥಿತಿ ಬಂದಾಗ , ತಮ್ಮ ಮನಸಿನಂತೆ ದೇವರ ಮನಸೂ ಇರಬಹುದೆಂದು ಊಹಿಸಿ , ದೇವರಿಗೂ ಸಹ
ಲಂಚಕೊಡಲು ಮುಂದಾದ ಮಹಾಶಯರಿಗೆ ಏನೂ ಕೊರತೆಯಿಲ್ಲ . ಲಂಚ ಕೊಡುವ ರೀತಿ ಮಾತ್ರ ವಿಭಿನ್ನವಾಗಿರಬಹುದು .
ಇತ್ತೀಚಿಗೆ ನಮ್ಮ ಹಳ್ಳಿಯಲ್ಲಿ ನಡೆದ ಪಂಚಾಯತ ಸದಸ್ಯರ ಚುನಾವಣೆಗೆ ಬಸಪ್ಪ ಶೆಟ್ಟಿ ಸ್ಪರ್ಧಿಸಿದ್ದ . ಅಂಗಡಿಯ ವ್ಯವಹಾರ
ಚನ್ನಾಗಿದ್ದಿದ್ದರಿಂದ ಒಳ್ಳೆಯ ಹಣವನ್ನು ಸಂಪಾದಿಸಿದ್ದ . ಅದೆಷ್ಟೇ ಹಣ ಖರ್ಚಾದರೂ ಚುನಾವಣೆಯನ್ನು ಗೆಲ್ಲಲೇ ಬೇಕೆಂದು
ಶಪಥಪಟ್ಟಿದ್ದ . ಮೊದಲಿನಿಂದಲೂ ದಾಯಾದಿಯಾಗಿದ್ದ ಎದುರು ಮನೆಯ ನಂಜಪ್ಪನಿಗೆ ವಿಷಯ ಗೊತ್ತಾಗಿ ಹೊಟ್ಟೆಯಲ್ಲಿ ಕಸಿವಿಸಿ ಉಂಟಾಗಿ ನಿದ್ರೆಬಾರದಾಗಿತ್ತು. ಹೇಗಾದರೂ ಮಾಡಿ ಶೆಟ್ಟಿಯನ್ನು ಸೋಲಿಸಲೇ ಬೇಕೆಂದು ತಂತ್ರವನ್ನು ಹೂಡತೊಡಗಿದ್ದ .ಆದರೆ ಶೆಟ್ಟಿಯಲ್ಲಿದ್ದಷ್ಟು ಹಣವೂ ಇರಲಿಲ್ಲ ಜನಬಲವೂ ಇರಲಿಲ್ಲ . ಹಗಲೂ ರಾತ್ರಿ ಕೊರಗುತ್ತಿದ್ದ ಅವನಿಗೆ ಕೊನೆಗೊಂದು ದಿನ ಸರಳ ಉಪಾಯ ಹೊಳೆಯಿತು . ತಿರುಪತಿ ತಿಮ್ಮಪ್ಪನಿಗೆ ಮೊರೆ ಹೋದ . ಶೆಟ್ಟಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ತಿಮ್ಮಪ್ಪನ
ಹುಂಡಿಗೆ ೫೦೦೧ ರೂಪಾಯಿ ಹಾಕುವದಾಗಿ ಹರಕೆ ಹೊತ್ತ . ವಿಷಯ ಶೆಟ್ಟಿಗೆ ಗೊತ್ತಾಗಿ ಅವನಿಗೂ ಕಸಿವಿಸಿಯಾಗತೊಡಗಿತು .
ಊರ ಜನರಿಗೆ ತಾನು ಎಷ್ಟೊಂದು ಹಣವನ್ನು ಖರ್ಚು ಮಾಡಿದರೂ ತಿಮ್ಮಪ್ಪನ ಕರುಣೆ ನಂಜಪ್ಪನಿಗೆ ಗಿಟ್ಟಿಬಿಟ್ಟರೆ ಏನು ಗತಿ ?
ಎಂದು ದಿನವಿಡೀ ತವಕಾಡತೊಡಗಿದ . ಯಾವುದಕ್ಕೂ ಸ್ವಲ್ಪನೂ ಅಪಾಯವನ್ನು ತೆಗೆದುಕೊಳ್ಳಬಾರದು ಎಂದು ಅವನ
ಸ್ನೇಹಿತರೆಲ್ಲ ಹೇಳತೊಡಗಿದ್ದರು . ನಿದ್ರೆಬಾರದ ರಾತ್ರಿಯಲ್ಲಿ ಒಂದು ನಿರ್ಧಾರ ತೆಗೆದೇಕೊಂಡ . ನಂಜಪ್ಪನಿಗಿಂತ ಎರಡು ಪಟ್ಟು
ಹಣವನ್ನು ಹುಂಡಿಗೆ ಹಾಕುವದಾಗಿ ತಾನೂ ಸಹ ತಿಮ್ಮಪ್ಪನಿಗೊಂದು ಹರಕೆ ಹೊತ್ತೇಬಿಟ್ಟ . ಈಗ ನೀವೇ ಹೇಳಿ ತಿಮ್ಮಪ್ಪ ಏನು
ಮಾಡಬೇಕೆಂದು ? ತಾವೇ ಬರಿಸಿಕೊಂಡ ಇವರ ಸಂಕಟವನ್ನು ಅವನು ಹೇಗೆ ಬಗೆಹರಿಸಬೇಕೆಂದು ? . ಇವರಿಬ್ಬರು ತಮ್ಮ
ವಯಕ್ತಿಕ ಕಿತ್ತಾಟದಲ್ಲಿ ತಿಮ್ಮಪ್ಪನನ್ನು ಇಕ್ಕಟ್ಟಿಗೆ ಸಿಕ್ಕಿಸಿಹಾಕಿದ್ದು ಮಾತ್ರ ನಿಜ .ಎಲ್ಲ ಕಡೆಯಲ್ಲೂ ಇಂಥ ಮಹಾಶಯರಿಗೇನು
ಕೊರತೆಯಿಲ್ಲ ಹಾಗೆಯೆ ದೇವರನಿಗೂ ಸಂಕಟ ತಪ್ಪಿದ್ದಲ್ಲ .
ಹಣವಿದ್ದವರು ದೇವರಿಗೆ ಈ ರೀತಿಯ ಹಣದಾಸೆ ತೋರಿಸಿದರೆ ಇನ್ನು ಹಣವಿಲ್ಲದವರು ಏನು ಮಾಡಬೇಕು ? ಹಾಗೇನೆಂದುಕೊಳ್ಳಬೇಡಿ ! ಏನೂ ಇಲ್ಲದಿದ್ದರೂ ಏನೋ ಒಂದು ವಿಚಾರಿಸಿ ಕೊನೆಗೊಂದು ಮಾರ್ಗವನ್ನು ಕಂಡುಕೊಳ್ಳುವವರಿಗೇನು ಕೊರತೆಯಿಲ್ಲ.

ನಮ್ಮ ‘ಕೆ ಎಂ ಸಿ’ ಯ ಕಾಲೇಜಿನ ಅವರಣದಲ್ಲೊಂದು ಹನುಮಪ್ಪನ ಮಂದಿರವಿತ್ತು . ಪ್ರತಿ ಶನಿವಾರ ಸಾಯಂಕಾಲ ತಪ್ಪದೆ ಕೆಲವು ಹುಡುಗರು ಮತ್ತು ಹುಡುಗಿಯರು ಹನುಮಪ್ಪನನ್ನು ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದರು . ಅವರು ನಿಜವಾದ ಭಕ್ತರು ಎಂಬುದರಲ್ಲಿ ಸಂಶಯವಿಲ್ಲ . ಆದರೆ ವಾರ್ಷಿಕ ಪರೀಕ್ಷೆಗಳು ಹತ್ತಿರ
ಬರುತ್ತಿದ್ದಂತೆ ಹನುಮಪ್ಪನ ಭಕ್ತರ (?) ಸಂಖ್ಯೆ ತ್ರಿಗುಣಗೊಳ್ಳುತ್ತಿತ್ತು . ಇನ್ನು ಕೆಲವರು ತಾಸುಗಂಟಲೇ ಸಂಚರಿಸಿ ದೂರದಲ್ಲಿದ್ದ ರಾಯರ ಮಂಟಪಕ್ಕೆ ದರ್ಶನಕೊಡುತ್ತಿದ್ದರು . ನಿಜವಾದ ಭಕ್ತರಿಗೆ ಯಾವಾಗಲು ಭಕ್ತಿಯ ಭಾವ ಇದ್ದಿದ್ದು ಬೇರೆ ಸಂಗತಿ ಆದರೆ ,
ವರ್ಷವಿಡೀ ಮಜಾ ಮಾಡಿ , ಸರಿಯಾಗಿ ಓದದೆ , ಕೊನೆಯಲ್ಲಿ ಪರೀಕ್ಷೆಯ ಬಿಸಿ ತಟ್ಟಿದ್ದಾಗ ದೇವರನ್ನು ಪ್ರದಕ್ಷಣೆ ಹಾಕುತ್ತಿದ್ದ
ಇವರಿಗೆ ಏನೆನ್ನಬೇಕು ? ( ಅವರಲ್ಲಿ ನಾನೂ ಒಬ್ಬ ಎಂಬುದು ಬೇರೆ ವಿಷಯ!).
ಇನ್ನು ಪಾಪ , ಹನುಮಪ್ಪ ಏನು ಮಾಡಬೇಕು ಹೇಳಿ ? . ಖಂಡಿತ ಅವನೂ ಸಹ ಗೊಂದಲದಲ್ಲಿ ಬಿದ್ದಿರಬಹುದು . ಈ
ಅವಕಾಶವಾದಿ ‘ ಮೊಸಳೆ ಕಣ್ಣೀರಿನ ‘ ಪ್ರದಕ್ಷಣೆಗಾರರಿಗೆ ಸಹಾಯಮಾಡಬೇಕೆ ? ಅಥವಾ ವರ್ಷವಿಡೀ ಓದಿದ ಶ್ರಮಜೀವಿಗಳಿಗೆ
ಅಸ್ತು ಅನ್ನಬೇಕೆ ?. ಇವರೆಲ್ಲಾ ತಮ್ಮ ನಡುವಳಿಕೆಯಿಂದ , ಸಂಕಟವನ್ನು ತಾವೇ ಬರಿಸಿಕೊಂಡು , ಕೊನೆಯ ಗಳಿಗೆಯಲ್ಲಿ
ಹನುಮಪ್ಪನ ಮೊರೆ ಹೋಗಿ , ಅವನಿಗೂ ಸಂಕಟ ತಂದೊದಗಿದ್ದು ಸುಳ್ಳೇನಲ್ಲ . ತಾಸುಗಂಟಲೆಯ ಸಮಯವನ್ನು ಪ್ರದಕ್ಷಣೆಗಾಗಿ
ಕಳೆಯುವದಕ್ಕಿಂತ , ಅವನನ್ನು ಮನದಲ್ಲೇ ನೆನೆದು , ಅದೇ ಸಮಯವನ್ನು ಓದಿಗಾಗಿ ಉಪಯೋಗಿಸಿದ್ದಿದ್ದರೆ ಹನುಮಪ್ಪ
ಪ್ರಸನ್ನವಾಗಿರುತ್ತಿದ್ದಿದ್ದು ಮಾತ್ರ ಸತ್ಯ .

ಇಂಥವರದೊಂದು ಕಥೆಯಾದರೆ ಬೇರೆಯವರದು ಇನ್ನೊಂದು ಕಥೆ . ನಮ್ಮ ಪಕ್ಕದ ಮನೆಯ ಗೌರಕ್ಕನಿಗೆ ಒಳ್ಳೆಯ ಗಂಡ
ಸಿಕ್ಕು ಅದ್ದೂರಿಯಿಂದ ಮದುವೆ ಆಗಿ ಹೋಯಿತು . ಗೌರಕ್ಕ ನಮ್ಮ ಅಕ್ಕನಿಗಿಂತ ಒಂದು ವರ್ಷ ದೊಡ್ಡವಳು .ಪೂಜೆ ಪುರಸ್ಕಾರ
ಮತ್ತು ಉಪವಾಸಗಳಲ್ಲಿ ತುಂಬಾ ಆಸಕ್ತಿ . ಅವಳ ಭಕ್ತಿಗೆ ಮೆಚ್ಚಿ ದೇವರು ಒಳ್ಳೆಯ ಗಂಡನನ್ನು ದಯಪಾಲಿಸಿದನೆಂಬುವದು ಊರ
ಜನರ ನಂಬಿಕೆ. ಇದನ್ನು ಕಂಡು ನಮ್ಮಕ್ಕನಿಗೆ ಏನಾಯಿತೋ ಕಾಣೆ ( ಬಹುಶಃ, ಮನದಲ್ಲಿ ಸಂಕಟ ಆರಂಭವಾಗಿರಬಹುದು ) .

ಅವಳ ಹಾಗೆ ತನಗೂ ಸಹ ಒಳ್ಳೆಯ ಗಂಡನು ಸಿಗಲೆಂದು ಒಮ್ಮಿಂದೊಮ್ಮಲೆ ಸೋಮಪ್ಪನ ಭಕ್ತೆಯಾಗಿ ಬಿಟ್ಟಳು .ಪ್ರತಿ ಸೋಮವಾರ ಬೆಳಿಗ್ಗೆ ಮನೆಯಲ್ಲಿ ತಾಸುಗಂಟಲೇ ಪೂಜೆ ಪುರಸ್ಕಾರ ನಡೆಯತೊಡಗಿತು . ಬರಿ ಪೂಜೆ ಮಾಡಿದರೆ ಸಾಕಾಗಿತ್ತೇನೋ ಅದರ ಜೊತೆಗೆ ”ಉಪವಾಸವನ್ನು” ಕೂಡ ಸುರು ಹಚ್ಚಿಕೊಂಡಿದ್ದಳು . ಉಪವಾಸ ಎಂದ ಕ್ಷಣ ಸ್ವಲ್ಪ ಹೆಚ್ಚಿಗೇನೇ ಹೇಳಬೇಕೆನಿಸುತ್ತಿದೆ .
ಉಪವಾಸ ಮಾಡುವವರಲ್ಲಿ ಬೇರೆ ಬೇರೆ ವರ್ಗಗಳಿವೆ . ಉಪವಾಸವೆಂದರೆ ಕೆಲವರು ಆಹಾರ ಬಿಡಿ ! ನೀರನ್ನೂ ಸಹ
ಮುಟ್ಟುವದಿಲ್ಲ . ಕೆಲವರಿಗೆ ಉಪವಾಸವೆಂದರೆ ಲಘು ಆಹಾರ ಸೇವನೆ . ಇನ್ನು ಕೆಲವರು ಊಟಕ್ಕಿಂತಲೂ ಹೆಚ್ಚು ಉಪಹಾರ
ತಿಂದು , ಉಪವಾಸವಿದ್ದೆ ಎಂದು ಸಂತೋಷಪಡುವದುಂಟು . ನಮ್ಮ ಅಕ್ಕಳು ಸಹ ಈ ಕೊನೆಯ ಗುಂಪಿಗೆ ಸೇರಿದವಳು .ಅವಳ
ಉಪವಾಸ ಬೆಳಿಗ್ಗೆ ಎಂಟು ಘಂಟೆಗೆ ಪಾವ್ ಕಿಲೋ ನೆನೆಸಿದ ಅವಲಕ್ಕಿಯನ್ನು ತಿಂದು ಪ್ರಾರಂಭವಾಗುತ್ತಿತ್ತು . ಮಧ್ಯಾಹ್ನ
ಕೇವಲ ? ನಾಲ್ಕೈದು ಬಾಳೆ ಹಣ್ಣು , ಒಂದು ಹಿಡಿ ಖರ್ಜುರು ಮತ್ತು ಒಂದು ದೊಡ್ಡ ಗ್ಲಾಸು ಹಾಲು , ಮತ್ತೆ ಸುಮಾರು ಇಳಿಹೊತ್ತಿಗೆ
ಇನ್ನೆರಡು ಬೇರೆ ತರಹದ ಹಣ್ಣುಗಳು . ಪಾಪ !! ಹೆಸರಿಗೆ ಊಟ ಮಾತ್ರ ಇರಲಿಲ್ಲ . ಅವಳಿಗೆ ಸಿಗುತ್ತಿದ್ದ ಈ ವಿಶೇಷ ಸೇವನೆಗಳನ್ನು ನೋಡಿ ನನಗೂ ಆ ಸಣ್ಣ
ವಯಸಿನಲ್ಲಿ ಉಪವಾಸ ಮಾಡಬೇಕೆಂದಿನಿಸಿತ್ತು . ಅವಳ ಉಪವಾಸದ ಫಲವಾಗಿ ಮೈತೂಕ ಹೆಚ್ಚಾಗಿತ್ತೆ ವಿನಃ
ಕಡಿಮೆಯಾಗಿರಲಿಲ್ಲ . ಪಾಪ !! ಇಂಥ ಭಕ್ತರಿಗೆ ದೇವರು ಹೇಗೆ ಸಹಾಯಮಾಡಬೇಕು ? . ಮೈತೂಕ ಇಳಿಸಲು ಕೋರಿ ಇವಳು
ಇನ್ನೊಂದು ಪೂಜೆಯ ಮೊರೆ ಹೋದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಿರಬಹುದು ಸೋಮಪ್ಪ . ಹಾಗು ಹೀಗೂ
ನಮ್ಮಕ್ಕನಿಗೆ ಒಳ್ಳೆಯ ಗಂಡ ಸಿಕ್ಕಿದ್ದ ನಿಜ ಆದರೆ ಅವಳ ಉಪವಾಸದಿಂದ ಅಲ್ಲ ಎಂಬುವುದು ನನ್ನ ನಂಬಿಕೆ .

ಕಳೆದ ವರುಷ ನಮ್ಮ ಹಳ್ಳಿಗೆ ಹೋಗಿದ್ದೆ. ವಿಪರೀತ ಮಳೆ . ನಾನು ಬಂದಿರುವ ವಿಷಯ ತಿಳಿದು ನನ್ನ ‘ ಚಡ್ಡಿ ದೋಸ್ತ ‘ ಕಲ್ಲೇಶಿ
ನನ್ನನ್ನು ಭೇಟಿಯಾಗಲು ಬಂದಿದ್ದ . ಹಳೆಯ ಗೆಳೆತನ ತಾನೆ ? ಸಲುಗೆಯಿಂದ ಮಾತು ಪ್ರಾರಂಭಿಸಿದ್ದೆ . “ಏನ್ ಕಲ್ಲ್ಯಾ ಹ್ಯಾಂಗ್
ಆದಿ ” ಅಂತ ಅಂದಿದ್ದೆ ಸಾಕು , ತನ್ನ ಗೋಳನ್ನು ಸುರು ಮಾಡಿಕೊಂಡುಬಿಡುವುದೆ ?. ” ಏನ್ ಹೇಳುದು ಬಿಡಪ್ಪಾ ಎರಡ
ವರ್ಷದಿಂದ ಬರೇ ಮಳಿ ಹತ್ತಿ , ಬೆಳಿಯೆಲ್ಲ ಹಾಳಾಗಿ ಹೋಗಿ , ಸಾಲಾ ಜಾಸ್ತಿ ಆಗಿ ಬಿಟ್ಟೈತಿ ಅದಕ್ಕ ಈ ಸಾರಿ ಒಂದ್ ಉಪಾಯ
ಮಾಡೀನಿ ” . ನಾನು ಅಂದುಕೊಂಡೆ, ಏನಾದರು ನನ್ನ ಹತ್ತಿರ ಹಣದ ಸಹಾಯ ಕೇಳಲು ಬಂದಿರಬಹುದೆಂದು . “ಅದೇನು
ಉಪಾಯಪ್ಪ ” ಎಂದೆ , ” ಊರ ದೇವಿ ದ್ಯಾಮವ್ವ ಬಾಳ ಸಿಟ್ಟ ಮಾಡಿಕೊಂಡಂಗೈತಿ ಅದಕ್ಕ ಇಷ್ಟೊಂದ್ ಸಂಕಟ , ಅದಕ್ಕ
ಇನ್ನಷ್ಟ್ ಸಾಲ ಅದರೂ ಸರಿ ಈ ಸರಿ ಜಾತ್ರಿಗೆ ಒಂದು ಕುರಿ ಕೊಯ್ಯಬೇಕಂತ ವಿಚಾರ ಮಾಡೀನಿ ” ಎಂದ . “ಅಲ್ಲೋ ಇನ್ನಷ್ಟ
ಸಾಲಾ ಮಾಡಿ , ಅವಳ ಹೆಸರಲ್ಲಿ ಕುರಿ ಕೊಯ್ದು, ನೀನು ಮತ್ತು ನಿಮ್ಮ ಸಂಸಾರಾ ಕುರಿ ತಿಂದರ ದ್ಯಾಮವ್ವ ಮಳಿ ಹ್ಯಾಂಗ್
ನಿಲ್ಲಸತಾಳು ? ” ಎಂದೆ . ” ನಿಮ್ಮಂತ ಓದಿದವರಿಗೆ ಇದೆಲ್ಲ ಗೊತ್ತಾಗುದಿಲ್ಲ ಬಿಡಪ್ಪಾ ” ಎಂದು ಮಾತು ಮುಂದುವರಿಸದೆ
ಹಾಗೆಯೆ ಹೋಗಿಯೇ ಬಿಟ್ಟ . ನನಗಂತೂ ಗೊತ್ತಾಗಲಿಲ್ಲ ಅದು ‘ ದ್ಯಾಮವ್ವನ ತಪ್ಪೋ , ಕಲ್ಲೇಶಿಯ ತಪ್ಪೋ ಅಥವಾ ನನ್ನ
ತಪ್ಪೋ ‘ಎಂದು .
ಹೋಗಲಿ ಬಿಡಿ ಹಾಗೆಯೆ ಹರಟುತ್ತ ಹೋದರೆ ಇದು ಮುಗಿಯುವ ವಿಷಯವಲ್ಲ . ಇದಂತು ನಿಜ , ಇಂಥ ಜನರು , ಇಂಥ ನಂಬಿಕೆ
ನಮ್ನ ದೇಶಕ್ಕೆ ಅಥವಾ ಧರ್ಮಕ್ಕೆ ಮಾತ್ರ ಸೀಮಿತವಲ್ಲ . ಎಲ್ಲ ದೇಶಗಳಲ್ಲೂ , ಪಂಗಡಗಳಲ್ಲೂ ಇದು ಇರುವುದು ಕಟು ಸತ್ಯ .
ಆದರೆ ಪದ್ಧತಿ ಬೇರೆ ಇರಬಹುದು .
” ಸಂಕಟ ಬಂದಾಗ ವೆಂಕಟರಮಣ ” ಅಂತ ಅನ್ನುವದಕ್ಕಿಂತಲೂ –
” ಸಂಕಟ ಬಂದಾಗ ಧೈರ್ಯವೇ ಭೂಷಣ ” ಅಂತ ತಿಳಿದರೆ ಎಷ್ಟೊಂದು ಚನ್ನಾಗಿರುತ್ತಲ್ಲವೆ ?
ಇನ್ನು, ರಾತ್ರಿಯೆಲ್ಲಾ ಪುರಾಣವನ್ನು ಹೇಳಿ ಬೆಳಿಗ್ಗೆ ಬದನೇಕಾಯಿ ತಿನ್ನದೇ ಇರಲಿಕ್ಕೆ ಸಾಧ್ಯವೇ ? ಇದಕ್ಕೆ ನಾನೇನು
ಹೊರತಾಗಿಲ್ಲ . ನಾನೂ ಹತ್ತು ಹಲುವಾರು ಹರಕೆಗಳನ್ನು ಹೊತ್ತಿರುವೆ, ಆದರೆ ಇನ್ನೂ ತೀರಿಸಲು ಆಗಿಲ್ಲ . ನೀವೂ ಏನಾದರು
ಹರಕೆಗಳನ್ನು ಹೊತ್ತಿದ್ದರೆ , ನಿಮ್ನ ಅಭ್ಯಂತರವಿಲ್ಲದಿದ್ದರೆ ನನಗೂ ಸ್ವಲ್ಪ ತಿಳಿಸಿಬಿಡಿ . ನಿಮ್ಮ ಹರಕೆಗಳನ್ನು ನನ್ನಂತೆ ಇನ್ನೂ
ಪೂರೈಸದಿರಲು ಸಾಧ್ಯವಾಗಿಲ್ಲದಿದ್ದರೂ ಪರವಾಗಿಲ್ಲ , ನೀವೇನು ಚಿಂತಿಸದಿರಿ . ಏಕೆಂದರೆ – ಹರಕೆ ತೀರಿಸಲು ಹತ್ತು ವರುಷ
ಇರುತ್ತದೆ ಅಂತ, ನಮ್ಮ ಅಜ್ಜಿ ಹೇಳುತ್ತಿದ್ದಳು .

-ಡಾ . ಶಿವಶಂಕರ ಮೇಟಿ

3 thoughts on “‘ಸಂಕಟ ಬಂದಾಗ ವೆಂಕಟರಮಣ’

  1. ಕೋಟಿ ವಿದ್ಯೆಗಳಲ್ಲಿ ಹರಟಿ ವಿದ್ಯೆಯೇ ಮೇಲು ಎಂದು ಮೇಟಿಯವರು ಈ ಸಲ ಸಾಧಿಸಿ ತೋರಿಸಿದ್ದಾರೆ. ದೇಸಾಯಿಯವರು ಹೇಳಿರುವಂತೆ ಸುದರ್ಶನ ಮತ್ತು ಗೌರಿಯವರಾದ ಮೇಲೆ ‘ಅನಿವಾಸಿಯ ಕಟ್ಟೆ’ಗೆ ಮತ್ತೊಂದು‌ ಸೇರ್ಪಡೆ.

    ಮನಿ ಮುಂದಿನ ಕಟ್ಟಿ, ಹಿತ್ತಲ, ಆಲದ ಕಟ್ಟಿ, ಗುಡಿ ಕಟ್ಟಿ, ಸಾಲಿ ಕುಂಬಿ, ಛಾದಂಗಡಿ ಬಾಕಾ, ಒಂದs ಎರಡs ಹರಟಿ ಹೊಡ್ಯೂ ಜಾಗಗಳು. ಈಗ ಅದ್ಯಾವುದೂ ಆಗುವುದಿಲ್ಲ ಅಂತ ಡಿಜಿಟಲ್ ಹರಟೆ!

    ಸಂಕಟ ಬಂದಾಗ ದೇವರ ಮೊರೆ ಹೋಗುವುದನ್ನು ಲಘುಹಾಸ್ಯಭರಿತವಾಗಿ ಬರೆದಿದ್ದಾರೆ. ಚುನಾವಣೆ, ಉಪವಾಸಗಳೂ ಅದರಲ್ಲಿ ಮಿಳಿತವಾಗಿವೆ.

    ಇನ್ನಷ್ಟು ಹರಟೆಗಳು ಬರಲಿ.

    – ಕೇಶವ

    Like

  2. “ಲೇ, ಕುಂತ್ ಹರಟಿ ಹೊಡಿಯೋಣ ಬಾ!”ಅನ್ನುವ ಕರೆ ಈಗ ಕೇಳಿಸೋದಿಲ್ಲ! ಮಿಸಳ್ , ಅವಲಕ್ಕಿ,ಇಲ್ಲದಿದ್ರ ಮಂಡಕ್ಕಿ, ಗಿರ್ಮಿಟ್ ಇ ಭೋಗೋಣಿ ತುಂಬ ಇದುರಿಗೆ ಇಟ್ಟು ಕೂತು ಆ ಹರಟೆ cloud 9 ನಾಗ ತೇಲಿ ಹೋಗೋ ಮಜಾ ಈಗೆಲ್ಲಿ? ಈಗಿನವರಿಗೆಲ್ಲಿ? ಹರಟೆ ಅಂದ್ರ ಎಲ್ಲಾರೂ ಇಕ್ವಲ್ – equal -ಇಕ್ವಲ್ಯಾಕ! It is a great leveller and anything goes, any topic, jumping from topic to topic, too! Nothing serious but nothing to brush off! ಅದರ ರಂಗ್ ತಂದಾರ ಈ ವಾರ ಮೇಟಿಯವರು! ಹಿಂದಿನ ಪತ್ರಿಕೆಗಳಲ್ಲಿ ಹರಟೆ ರೆಗ್ಯುಲರ್ ಆಗಿ ಬರೋದು. ನಮ್ಮಲ್ಲಿ ರೇಡಿಯೋ ಗಿರ್ಮಿಟ್ ಖ್ಯಾತಿಯ “ಹರಟೆಮಲ್ಲಿ” ಗೌರಿಯವರು ಬಂದು ಸೇರೋ ಮುನ್ನ ಸುದರ್ಶನ ಒಂದೆರಡು ಸಲ ಅನಿವಾಸಿಯೊಳಗ ಹರಟುತ್ತಿದ್ದರು. ಈಗ ಮತ್ತ ಶಿವು ಮೇಟಿ ಯವರು ಬಂದು ಗಿರ್ಮಿಟ್ ತಿಂದಂಗ ಆತು. ಇನ್ನು ಸಂಕಟ ಬಂದಾಗ ಅವರ ಶರಣು ಹೊಡಿಯೋಣ. ಈ ಅಂಕಣದಾಗ ಪರೀಕ್ಷಾ ಕಾಲದ ಹುಡುಗ- ಹುಡುಗಿ ಹನುಮಪ್ಪನ ಜಾತ್ರಿ ವಿಷಯ ಓದಿ ಬಾಯಾಗ ಮೆಣಸಿನಕಾಯಿ ಸಿಕ್ಕು ಕಡದಂಗ ಎಲ್ಲರ ಮೈಯಾಗ ಬಿಸಿತುಂಬಿತು! ಮೇಟಿ ಅವುರು ಪಾಸಾದ್ರು ಬಿಡ್ರಿ! ಮಸ್ತ ಆತ್ರಿ! ಅವರಿಗೆ ಕೈಮುಗಿತೀನಿ! 🙏🏽

    Like

  3. ಮೇಟಿಯ ಹರಟೆಗೆ ಕಮೆಂಟು ಹೊಡೆದರೆ ನಾವೂ ಜೊತೆಗೆ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆದ ಹಾಗೇ ಅಲ್ಲವೇ? ಸಾಯಂಕಾಲ ಹಾಸ್ಟೆಲ್ ಬದಿಯ ಗಾಡಿಯ ಸುತ್ತ ಗೆಳೆಯರು ಕೈಯ್ಯಲ್ಲಿ ಚಾ ಕಪ್ಪು ಹಿಡಿದು ನಿಂತಂತೆ.

    ಹಣಮಪ್ಪನ ಗುಡಿಗೆ ಹೋಗುವ ಹುಡುಗರ ಉದ್ದೇಶವೂ ಬೇರೆ ಇರುತ್ತಿತ್ತೆನ್ನಿ. ಅದರ ಹಿಂದೆ ಅಗಾಧವಾದ ಸಂಶೋಧನಾ ಕಾರ್ಯವೂ ಇರುತ್ತಿತ್ತು. ಯಾವ ಹುಡುಗಿ ಎಷ್ಟು ಹೊತ್ತಿಗೆ ಹೋಗುತ್ತಾಳೆ ಎಂಬ ಖಚಿತ ಮಾಹಿತಿ ಇರುತ್ತಿತ್ತು. ಜೋಡಿಯಾದ ಮೇಲೆ ಯಾವ ಜೋಡಿ ಯಾವ ದಿನ ಎಷ್ಟು ಹೊತ್ತಿಗೆ ಹೋಗುತ್ತಿತ್ತೆಂಬ ಮಾಹಿತಿಯೂ ಸಿಗುತ್ತಿತ್ತು, ಹಾಸ್ಟೆಲ್ ಡೇಟಾ ಕೇಂದ್ರಗಳಲ್ಲಿ. ಒಟ್ಟಿನಲ್ಲಿ ವೆಂಕಟರಮಣನ ಮೊರೆಯಿಂದ ಇನ್ನೊಬ್ಬರ ಹಾನಿಗೆ ದಾರಿಯಾಗದಿದ್ದರೆ, ಮನಸ್ಥಿತಿಗೆ ಮಾರಕವಾಗಗಿದ್ದರೆ ಸಾಕಷ್ಟೆ!

    – ರಾಂ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.