ಶ್ರೀಮತಿ ಮೈದಾಸ – ಗೌರಿ ಪ್ರಸನ್ನ

ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).

ಜೂನ್ ತಿಂಗಳ ಮೊದಲ ಮುಂಗಾರು ಮಳೆ.. 
ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ..
ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ..
ತುಂಬು ಸಜೀವತೆಯ ಪ್ರತೀಕ..
ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ

ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು
ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ..
ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು..
ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು..
ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು
ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು..
ಅರೇ! ಇದೇನಿದು!!..

ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ
‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ

ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ..
ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ
ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..

ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.

ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.

‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ
‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ
ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು
ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ

‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ.
ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ
‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.

ಕೊಪ್ಪರಿಗೆಯೋ, ಕೊಳಗವೋ, ಕ್ವಿಂಟಲ್ಲೋ ಬೇಡಿದರಾಗುತ್ತಿರಲಿಲ್ಲವೇ?
ಬೇಡುವವ ಮೂರ್ಖನಾದರೇನಂತೆ ನೀಡುವವಗಾದರೂ ಬುದ್ಧಿ ಬೇಡವೇ?
‘ಮುಟ್ಟಿದ್ದೆಲ್ಲ ಚಿನ್ನ’ವಾಗಿಸುವ ದುರಾಸೆ ಏಕೆ ಬೇಕಿತ್ತು?
ಗೆರೆ ದಾಟಿದ ಮೇಲಷ್ಟೇ ಅರಿವಾಗುವುದಲ್ಲವೇ ಆಪತ್ತು?

‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು
ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು
ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು
‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು..
ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು

ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ
ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ
ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ.
ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.

ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ
ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?

ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ.
ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ
ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ
ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.


- ಗೌರಿ ಪ್ರಸನ್ನ

*************************************

2 thoughts on “ಶ್ರೀಮತಿ ಮೈದಾಸ – ಗೌರಿ ಪ್ರಸನ್ನ

  1. ನಾನು ಗೌರಿಯವರ ಕನ್ನಡ ಕವನವನ್ಮು ಓದಿ ನಂತರ ಇಂಗ್ಲೀಷ್ ಕವನವನ್ನು ಓದಿದೆ. ಇದು ಒಂದು ‘ಪ್ರೇರಿತ’ ಕವನವಾಗಿರುವುದರಿಂದ ಇದೊಂದು ಸ್ವತಂತ್ರ ಕವನದಂತೆಯೇ ಓದಿದ್ದೇನೆ.

    ಚಿನ್ನ ಅಥವಾ ಬಂಗಾರ ಮತ್ತು ಮುಟ್ಟಿದ್ದೆಲ್ಲ ಬಂಗಾರವಾಗುವ ಮೈದಾಸದ ರೂಪಕಗಳು ತುಂಬ ಕ್ಲೀಷೆಯಾಗಿದ್ದರೂ ಈ ಕವನದಲ್ಲಿ ಅದು ಕೆಲಸ ಮಾಡುತ್ತದೆ. ಹಿಂದೆ‌ ಇರುವ ರೂಪಕಗಳನ್ನೇ ಎತ್ತಿಕೊಂಡು ಕನ್ನಡದಲ್ಲಿ ಅದೆಷ್ಟು ಉತ್ಕೃಷ್ಟ ಕವನಗಳು ಬಂದಿಲ್ಲ! ಈ ಕವನವೂ ಹಳೆಯ ಪ್ರತಿಮೆಗಳನ್ನು ಹಿಡಿದು ಬರೆದಿದ್ದರೂ ಅದು ಕೊನೆಯಲ್ಲಿ ಉಳಿಸುವ ಭಾವ ಕಾಡುತ್ತದೆ.

    ಕೆಲವು ಸಾಲುಗಳು ತುಂಬ ಇಷ್ಟವಾದವು:

    ‘ನನ್ನ ಅಡುಗೆ ಕಟ್ಟೆ: ತುಂಬು ಸಜೀವತೆಯ ಪ್ರತೀಕ’

    ‘ಬೇಡುವವ ಮೂರ್ಖನಾದರೇನಂತೆ, ನೀಡುವವನಿಗಾದರೂ ಬುದ್ಧಿ ಬೇಡವೇ?’

    ‘ನಾನೂ ರಗಳೆ ಮಾಡಿ ಅವನ ಕೆಂಗೆಡಿಸಿದ್ದಿದೆ ಕಿಂಚಿತ್ತು’

    ಚಿಹ್ನೆಗಳ ಉಪಯೋಗವು ಗದ್ಯ ಬರಹಗಳಿಗೆ ಎಷ್ಟು ಮುಖ್ಯವೋ ಕವನಗಳಿಗೂ ಅಷ್ಟೇ ಮುಖ್ಯ ಎಂದು ನಂಬಿದವನು ನಾನು. ಈ ಕವನದಲ್ಲಿ ಎಲ್ಲೆಂದರಲ್ಲಿ ಬರುವ ಎರಡೆರಡು ಪೂರ್ಣವಿರಾಮಗಳು ಮತ್ತಿ ಎರಡೆರಡು ಉದ್ಗಾರವಾಚಕಗಳು ಓದುವಾಗ ನನಗೆ ಕಿರಿಕಿರಿ ಮಾಡಿದ್ದಂತೂ ನಿಜ.

    ನಾನು ಈ ಕವನವನ್ನು ಮೊದಲು ಫೋನಿನಲ್ಲಿ ತರೆದೆ, ಬಹುಷಃ ಫೋನಿನಲ್ಲಿ ಸಾಲುಗಳು ಅಸ್ತವ್ಯಸ್ತವಾಗಿರಬಹುದೆಂದು ಕಂಪ್ಯೂಟರಿನಲ್ಲಿ ತೆರೆದೆ, ಅಲ್ಲೂ ಹಾಗೇ ಇದೆ. ಇದನ್ನು ಹೀಗೆ ಬರೆದಿದ್ದೋ ಅಥವಾ ಸಂಪಾದಕರ ಕೈಚಳಕವೋ ಗೊತ್ತಾಗಲಿಲ್ಲ.

    ಏಲಿಯಟ್ ಬರೆದ ವೇಸ್ಟ್ ಲ್ಯಾಂಡ್ ಕವನವನ್ನು ಎಜ್ರಾಪೌಂಡ್ ಎಡಿಟ್ ಮಾಡುತ್ತಾನೆ. ಇಲ್ಲಿಯೂ ಯಾರಾದರೂ ಎಡಿಟ್ ಮಾಡಿದ್ದರೆ ಇದೊಂದು ಕನ್ನಡದ ತುಂಬ ಆಪ್ತ ಕವನವಾಗುತ್ತಿತ್ತೇನೋ ಎಂದು ಅನಿಸದೇ ಇರಲಿಲ್ಲ.

    Like

  2. ಹಿಂದೊಮ್ಮೆ ಗೌರಿಯವರು ಈ ಕವಿತೆಯನ್ನು ಹಂಚಿಕೊಂಡಾಗ ನನ್ನದೂ ತಲೆಯನ್ನು ತಿಂದಿತ್ತು. ಈಗ ಎರಡೂ ಕವನಗಳನ್ನು ಇನ್ನೂ ಅಸ್ಥೆಯಿಂದ ಓದಿದ ಮರುಓದು ಇನ್ನಷ್ಟು ಕಾಡುತ್ತಿದೆ. ಎರಡು ಕವಿತೆಗಳನ್ನು ಜೊತೆಗೆ ಇಟ್ಟುಕೊಂಡು ನೋಡಿದರಲ್ಲಿ ಸಾಮ್ಯತೆ ಕಂಡು ಅವು ಎರಡರ ರಸ್ವಾದವನ್ನೂ ಅನುಭವಿಸುವದು ಮುಖ್ಯವೇ ಹೊರತು, ಇಂದು ಪ್ರಕಟವಾದದ್ದನ್ನು ಏನಂತ ಕರೆಯಬೇಕೆನ್ನುವದು ಗೌಣ, ನನ್ನ ಪ್ರಕಾರ!
    ಎರಡೂ ಆರಂಭವಾಗುವದು ’ನಾಯಕಿ’ಯ ಅಡುಗೆ ಮನೆಯಲ್ಲಿ. ’ಸೀದಾ ಸಾದಾ’ ಗೃಹಿಣಿಯಂತೆ ಇಬ್ಬರೂ mundane ಕಾರ್ಯ ಅಡಿಗೆಯಲ್ಲಿ ತೊಡಗಿ ಘಮಲು (ಇಂಗ್ಲಿಷಿನಲ್ಲಿ smell) ಅಂತ ಕಿಡಕಿ ತೆರೆದದ್ದೇ ತಡ ಹೊಸ ಲೋಕಕ್ಕೆ ಕರೆದೊಯ್ಯುತ್ತಾರೆ. ಇನಿಯ ಏನು ಮಾಡುತ್ತಾನೆ? ’ನಾವೇ ನಟ್ಟ’ ಮರದ ಮಾವು (ಅಲ್ಲಿ posh French named pear) ಕಿತ್ತಿ ಬಂಗಾರವಾದಾಗ ಅದು ಅನಾಹುತಗಳ ಬರೀ ಆರಂಭ ಅಷ್ಟೇ! ಇಲ್ಲಿ ಬೈಬಲ್ಲಿನ ಈಡನ್ ಗಾರ್ಡನ್ನಿನ ಆಡಮ್ಮಿನ ನೆನಪು ಬೇಕಂತಲೇ ಉಂಟು ಮಾಡುತ್ತಿದೆಯಾ? ಆತ ಬೇಡಿದ ಮೈದಾಸ್ ಸ್ಪರ್ಷದ ಪರಿಣಾಮವನ್ನು ನೋಡಿ ಆಕೆ ಹೌಹಾರುವಂತೆ ಮಾಡುತ್ತದೆ. ತನಗೂ ಸ್ವಲ್ಪ ಆಸೆಯಿದ್ದರೂ ಈ ದೀರ್ಘಕ್ಕೆ ಹೋಗ ಬೇಕೇ? ತನಗೂ ಸ್ವಲ್ಪ ಸ್ವಾರ್ಥ- ಆಸೆಯೇನೋ ಇತ್ತು. (ಪಶ್ಚಿಮದ ಹೆಂಗಸಿಗೆ ಟಾಯ್ಲೆಟ್ ಸೀಟೂ ಪೀತವಾಗಿದ್ದರೆ ಆಕ್ಷೇಪವಿರಲಿಲ್ಲ. ಆದರೆ ಈಕೆಗೆ ಆ ವಿಚಾರವೂ ವರ್ಜ್ಯವಲ್ಲವೆ?) ಆದರೆ ಈ ಪರಿಯ ಮೂರ್ಖತನ? ಕೊನೆಯ ಸಾಲುಗಳಲ್ಲಿ ಇಬ್ಬರೂ ನಾಯಕಿಯರು ಕಳೆದು ಹೋದ ಒಲವು, ಸಾಂಗತ್ಯ, ಬಾಹುಬಂದನಕ್ಕೆ ಹಪಹಪಿಸುತ್ತಾರೆ. ಆಕೆಗೆ ಬಿಸಿರಕ್ತದ ಉನ್ಮಾದ, ದೈಹಿಕ ಸಂಬಂಧ, ಇತರರ ವಾಮ ದೃಷ್ಟಿಯ ಹೆದರಿಕೆ (I drove him up under cover of dark; parking the car a good way off, then walking) ಇವೇ ಮುಖ್ಯ. ಈಕೆ, ವಾಟ್ಸಪ್ಪಿನಲ್ಲಿ ಪ್ರೇಮಲತಾ ಅವರು ಹೇಳಿದಂತೆ,( -ಸುವರ್ಣ ಪುಷ್ಪ ದಕ್ಷಿಣೆ ಸಮರ್ಪಿರ್ಪಿಸುವ, ಧರ್ಮೇಚ-ಅರ್ಥೇಚ-ಕಾಮೇಚ ಅನ್ನುವ ಶ್ರದ್ಧಾಪೂರ್ಣ, ವಿಧೇಯ-) ಭಾರತೀಯ ಸಾಧ್ವಿ! ಆದರೆ ’ನಾತಿಚರಾಮಿ’ ಅಂತ ಅತನಿಗೂ ತಿಳಿದಿರ ಬಾರದೇ? ಗೌರಿಯವರ ’ಕವನ’ದ ರಚನೆ, ಮುಕ್ತಛಂದಿಸ್ಸಿನಲ್ಲೂ ಅನುರಣಿಸುವ ಹೇರಳ ಪ್ರಾಸಗಳು, ಬಂಗಾರಕ್ಕೆ ವಿಪುಲವಾದ ಪರ್ಯಾಯ ಶಬ್ದಗಳು (ಪೀತ ವರ್ಣ. ಚಿನ್ನದಂತ, ಹೊಂಬಣ್ಣ, ಸುವರ್ಣ,ಕನಕ, ಇತ್ಯಾದಿ. ಅತ್ತ ಕ್ಯಾರಲ್ ಡಫಿಯ ಇಂಗ್ಲಿಷ್ ಕವನದಲ್ಲಿ Gold,Ore, Aurum, Honeyed, Amber, Lemon mistake, luteous stem ), ಸಜೀವ ಅಡುಗೆ ಮನೆಯ ಚಿತ್ರ ಇವೆಲ್ಲ ರಸಸ್ವಾದನೆಗೆ ಅನುವು ಮಾಡಿಕೊಡುತ್ತವೆ.
    ಜಯಂತ ಕಾಯ್ಕಿಣಿ ಅವರು ಹೇಳುತ್ತಿರುವಂತೆ ಕವಿತೆಯನ್ನು ಓದಿ ಅನುಭವಿಸ ಬೇಕು ಅಂತ . ನಾನಂತೂ ಇವೆರಡನ್ನೂ ಓದಿ ಅಪಾರ ಸಂತಸಗೊಂಡೆ. ಇದನ್ನು ಬರೆದ ಗೌರಿಯವರಿಗೆ ಅಷ್ಟೇ ಅಲ್ಲ, ಮತ್ತೆ ನಮ್ಮ ಅವಗಾಹನೆಗೆ ತಂದ ಅಕ್ಷತಾ ಮತ್ತು ರಾಂ ಅವರಿಗೂ ಅಭಿನಂದನೆಗಳು. (ಅವಸರದಿ ಸಂಪಾದಿಸಿ ಪ್ರಕಟಿಸಿದ ಗುಡೂರ್ ಅವರಿಗೂ!)
    ಶ್ರೀವತ್ಸ ದೇಸಾಯಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.