ಅಮರಪ್ರೇಮ (ಕತೆ) – ಕೇಶವ ಕುಲಕರ್ಣಿ

ಭಾಗ 1: ಇಸ್ವಿ 1987 

ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಅದಮ್ಯ ಹಂಬಲ ಹುಟ್ಟಿದ್ದು ಇದೇ ಮೊದಲ ಸಲವೂ ಅಲ್ಲ, ಕೊನೆಯ ಸಲವೂ ಅಲ್ಲ. 

ಅಂಥ ಒಂದು ಬಯಕೆ ಅಮರನಲ್ಲಿ ಹುಟ್ಟಿದ್ದು, ತನ್ನ ಮತ್ತು ಉಷಾಳ ಮದುವೆಯ ಆಮಂತ್ರಣ ಪತ್ರಿಕೆ ಕೈಗೆ ಸಿಕ್ಕಾಗ. ಅಪ್ಪ-ಅಮ್ಮ ಗೊತ್ತು ಮಾಡಿದ ಹುಡುಗಿಯಾಗಿದರೂ, ಅಮರನಿಗೆ ಉಷಾ ಮೊದಲ ನೋಟಕ್ಕೇ ಇಷ್ಟವಾಗಿದ್ದಳು, ಮೊದಲ ಮಾತಿನಲ್ಲೇ ಆತ್ಮೀಯಳಂತೆ ಕಂಡಿದ್ದಳು. ನಿಶ್ಚಿತಾರ್ಥವಾದ ಮೇಲೆ ಪುಣೆಯಿಂದ ಹುಬ್ಬಳ್ಳಿಗೆ ಬಂದಾಗಲೆಲ್ಲ ಉಣಕಲ್ ಕೆರೆ, ನೃಪತುಂಗ ಬೆಟ್ಟ, ಕರ್ನಾಟಕ ವಿಶ್ವವಿದ್ಯಾಲಯ, ಅಪ್ಸರಾ ಸುಜಾತಾ ಥೇಟರುಗಳ ತುಂಬೆಲ್ಲ ಓಡಾಡಿದ್ದರು, ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅನ್ನುವಂತೆ. 

ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ತರಲು ಅಮರ ಪ್ರಿಂಟಿಂಗ್ ಪ್ರೆಸ್ಸಿಗೆ ಹೋಗಿದ್ದ. ಕೈಯಲ್ಲಿ ಐನೂರು ಆಮಂತ್ರಣ ಪತ್ರಗಳನ್ನು ಹಿಡಿದು, ಅದರಲ್ಲಿಯ ಒಂದು ಕಾರ್ಡನ್ನು ತೆಗೆದು, ಆ ಕಾರ್ಡಿನಲ್ಲಿ ತನ್ನ ಭಾವಿ ಮಡದಿ, ‘ಉಷಾ‘ ಎಂಬ ಹೆಸರನ್ನು ನೋಡಿ ಪುಲಕಿತಗೊಂಡು, ಆ ಹೆಸರಿನ ಮೇಲೆ ಕೈಯಾಡಿಸಿ, ಕಣ್ಣು ಮುಚ್ಚಿ ಆ ಹೆಸರಿನ ಮೇಲೊಂದು ಮುತ್ತು ಕೊಡಬೇಕು ಎಂದು ಕಾರ್ಡನ್ನು ತುಟಿಯ ಬಳಿ ತಂದದ್ದೇ, ಆ ಹೊಸ ಮದುವೆ ಕಾರ್ಡಿನ ವಾಸನೆ ಮೂಗಿಗೆ ಬಡಿದು, ಇದ್ದಕ್ಕಿದ್ದಂತೆ ಪ್ರೇಮಾಳನ್ನು ನೋಡಬೇಕು ಅನಿಸಿಬಿಟ್ಟಿತು. ಇಂಥ ರೋಮ್ಯಾಂಟಿಕ್ ಮೂಡಿನಲ್ಲಿ ಇರಬೇಕಾದರೆ ಪ್ರೇಮಾಳ ನೆನಪು ಏಕೆ ಆಯಿತು, ಅವಳನ್ನು ನೋಡುವ ಆಸೆ ಯಾಕೆ ಹುಟ್ಟಿತು ಎಂದು ತನ್ನ ಮೇಲೆ ತನಗೆ ಕೋಪ ಬಂದಿತು. 

***

1976ನಲ್ಲಿ ಎಂ.ಬಿ.ಬಿ.ಎಸ್ ಓದಲು ‘ಮೈಸೂರು ಮೆಡಿಕಲ್ ಕಾಲೇಜು’ ಸೇರಿದಾಗಿನಿಂದಲೂ ಅಮರನ ಕಣ್ಣಿದ್ದುದು ತನ್ನ ಜೊತೆಗೇ ಓದುತ್ತಿದ್ದ, ಒಂದೇ ಬ್ಯಾಚಿನಲ್ಲಿದ್ದ, ದಿನವೂ ಸಿಗುತ್ತಿದ್ದ ಪ್ರೇಮಾಳ ಮೇಲೆ. ಅಮರ ಚರಂತಿಮಠ ಜಮಖಂಡಿಯವನು, ಪ್ರೇಮಾ ಗೌಡ ಬೆಂಗಳೂರಿನವಳು. ಅಮರ ಲಿಂಗಾಯತ, ಪ್ರೇಮಾ ಒಕ್ಕಲಿಗಳು. ಅಮರ ಶಾಲಾಮಾಸ್ತರನ ಮಗ, ಪ್ರೇಮಾ ಇಂಜಿನಿಯರನ ಮಗಳು. ಅಮರನ ಮನೆಯಲ್ಲಿ ಒಬ್ಬಳು ಅಕ್ಕ, ಇಬ್ಬರು ತಂಗಿಯರು ( ತಂಗಿಯರ ಮದುವೆಯ ಜವಾಬ್ದಾರಿ ಅಮರನದು ಎನ್ನುವುದು ಅಲಿಖಿತ ನಿಯಮ), ಪ್ರೇಮಾಳೇ ಅವಳ ಮನೆಯಲ್ಲಿ ಹಿರಿಯಳು, ಅವಳಿಗೆ ಒಬ್ಬ ತಮ್ಮ. ಅಮರ ಕನ್ನಡ ಮಾಧ್ಯಮ, ಪ್ರೇಮಾ ಇಂಗ್ಲೀಷ್ ಮೀಡಿಯಂ. ಅಮರ ಸಂಕೋಚದ ಮುದ್ದೆ, ಪ್ರೇಮಾ ಉತ್ಸಾಹದ ಬುಗ್ಗೆ. ಅಮರನಿಗೆ ಹಿಂದಿ ಹಾಡುಗಳೆಂದರೆ ಪ್ರಾಣ, ಪ್ರೇಮಾಳಿಗೆ ಇಂಗ್ಲೀಷ್ ಹಾಡುಗಳ ಹುಚ್ಚು. ಒಟ್ಟಿನಲ್ಲಿ ಅವರಿಬ್ಬರೂ ‘ಮೈಸೂರು ಮೆಡಿಕಲ್ ಕಾಲೇಜಿ’ನಲ್ಲಿ ಒಂದೇ ಕ್ಲಾಸಿನಲ್ಲಿ ಅದರಲ್ಲೂ ಒಂದೇ ಬ್ಯಾಚಿನಲ್ಲಿ ಇರುತ್ತಾರೆ ಎನ್ನುವುದರ ಹೊರತಾಗಿ, ಇಬ್ಬರಲ್ಲೂ ಹೊಂದುವ ಒಂದೇ ಒಂದು ಗುಣವೂ ಇರಲಿಲ್ಲವಾದರೂ, ಅಮರನಿಗೆ ಪ್ರೇಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದಳು.   

ಮೊದಲ ವರ್ಷದ ಅಂಗರಚನಾಶಾಸ್ತ್ರದಿಂದ ಹಿಡಿದು ಕೊನೆಯ ವರ್ಷದ ಕೊನೆಯ ಕ್ಲಿನಿಕ್‍ವರೆಗೆ ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಏಕವಚನದಲ್ಲಿ ಮಾತಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಅವರಿಬ್ಬರ ನಡುವೆ ಅಂಥ ಸಲಿಗೆ ಏನೂ ಇರಲಿಲ್ಲ. ಗುಂಪಿನಲ್ಲಿ ಎಲ್ಲರೂ ಮಾತಾಡುವಂತೆ ಮಾತಾಡುತ್ತಿದ್ದರು. ಆದರೆ ಅಮರ ಅವಳು ಬೆಳಿಗ್ಗೆ ಸಿಗುವುದನ್ನೇ ಕಾಯುತ್ತ ಪ್ರತಿ ರಾತ್ರಿ ನಿದ್ದೆ ಹೋಗುತ್ತಿದ್ದ. ಅಮರನಿಗೆ ಕನಸುಗಳನ್ನು ಹೆಣೆಯಲು, ಅವಳ ಒಂದು ‘ಗುಡ್ ಮಾರ್ನಿಂಗ್’, ಒಂದು ಮುಗುಳ್ನಗು, ಒಂದು ಹಿಡಿಯಷ್ಟು ಮಾತು ಸಾಕಾಗುತ್ತಿತ್ತು. ತನಗೆ ಅವಳನ್ನು ಕಂಡರೆ ಇಷ್ಟ ಎನ್ನುವ ಸುಳಿವನ್ನು ಅವಳಿಗೇನು, ತನ್ನ ಹಾಸ್ಟೇಲಿನ ರೂಮ್‍ಮೇಟ್ ಮಲ್ಲಿಕಾರ್ಜುನನಿಗೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲಿ ಅವಳ ಆ ಒಂದು ನಗು ಮತ್ತು ಒಂದಿಷ್ಟು ಮಾತು ಕೂಡ ಕಳೆದು ಹೋಗಿ ಬಿಡುವುದೋ ಎನ್ನುವ ಭಯ. ಗುಂಪಿನಲ್ಲಿ ಗೋವಿಂದನಾಗಿ ಕ್ಯಾಂಟೀನಿಗೆ ಹೋಗುತ್ತಿದ್ದ, ಆಗಾಗ ಡಿನ್ನರಿಗೆ ಗೆಳೆಯರೆಲ್ಲ ಸೇರಿ ಆರ್-ಆರ್-ಆರ್-ಗೆ (ಮೈಸೂರಿನ ಪ್ರಸಿದ್ಧ ಆಂಧ್ರದ ಚಿಕನ್ ಬಿರಿಯಾನಿ ಸಿಗುವ ಹೊಟೇಲು) ಹೋಗುತ್ತಿದ್ದರು (ಪ್ರೇಮಾ ಚಿಕನ್ ಬಿರಿಯಾನಿ ತಿನ್ನುವಾಗ, ತಾನು ಸೊಪ್ಪಿನ ಸಾರು ಹಾಕಿಕೊಂಡು ಅನ್ನ ತಿನ್ನುತ್ತಿದ್ದ). ಬೈಕಿನಲ್ಲಿ ಚಾಮುಂಡಿ ಬೆಟ್ಟಕ್ಕೋ, ಕನ್ನಂಬಾಡಿಗೋ (ಕೆ ಆರ್ ಎಸ್ ಆಣೆಕಟ್ಟು) ಹೋಗುತ್ತಿದ್ದರು; ಅಂಥ ದಿನಗಳಲ್ಲಿ ಅವಳು ಒಬ್ಬಳೇ ಒಂದೈದು ನಿಮಿಷ ಮಾತಿಗೆ ಸಿಕ್ಕರೂ ಆಕಾಶದಲ್ಲಿ ಹಾರಾಡುತ್ತಿದ್ದ. ಇಷ್ಟೆಲ್ಲ ಆದರೂ ಅಮರ ನಾಕೂವರೆ ವರ್ಷದಲ್ಲಿ ಪ್ರೇಮಾಳ ಜೊತೆ ಒಂದೇ ಒಂದು ಗೆರೆ ಮುಂದೆ ದಾಟಲಿಲ್ಲ, ಒಂದೇ ಒಂದು ಮಾತು ಹೆಚ್ಚು ಆಡಲಿಲ್ಲ. 

ಎಂ.ಬಿ.ಬಿ.ಎಸ್ ಮುಗಿದು ಜ್ಯೂನಿಯರ್ ಡಾಕ್ಟರ್ (ಇಂಟರ್ನ್‍‍ಶಿಪ್) ಆಗಿ ಕೆಲಸ ಬರುತ್ತಿದ್ದಂತೆ ಅಮರ ಸ್ವಲ್ಪ ಚಿಗುರಿಕೊಂಡ, ಏಕೆಂದರೆ ಮೊಟ್ಟಮೊದಲ ಬಾರಿಗೆ ಸ್ಟೈಪೆಂಡ್ ಎಂಬ ಹೆಸರಿನಲ್ಲಿ ಕೈಯಲ್ಲಿ ಒಂಡಿಷ್ಟು ದುಡ್ಡು ತಿಂಗಳೂ ತಿಂಗಳೂ ಕೈಬರುವ ದಿನಗಳವು. ಮೊಟ್ಟಮೊದಲ ಬಾರಿಗೆ ಅವಳ ಜೊತೆ ಕಾಲೇಜ್ ಕ್ಯಾಂಟೀನಿನಲ್ಲಿ ಒಬ್ಬನೇ ಕೂತು ಕಾಫಿ ಕುಡಿಯುತ್ತಿದ್ದ. ಕಲ್‍ಬಿಲ್ಡಿಂಗನ್ನೂ ದಾಟಿ, ಧನ್ವಂತ್ರಿ ರೋಡಿನ ‘ಗಾಯತ್ರಿ ಭವನ’ದಲ್ಲಿ ಅವಳೊಟ್ಟಿಗೆ ದೋಸೆ ತಿನ್ನುತ್ತಿದ್ದ. ಪ್ರೇಮಾ ಕೂಡ ಅವನು ಕರೆದಾಗಲೆಲ್ಲ ಖುಷಿ ಖುಷಿಯಲ್ಲಿ ಬರುತ್ತಿದ್ದಳು. ಆರು ತಿಂಗಳು ಮುಗಿಯುತ್ತಿದ್ದಂತೆ ಅವರ ರೂರಲ್ ಪೋಸ್ಟಿಂಗುಗಳು ಶುರುವಾದವು. ಆಗ ಅಮರನು ಎಲ್ಲೊ, ಪ್ರೇಮಳು ಏಲ್ಲೋ. ಆಗಿನ್ನೂ ಮೊಬೈಲು ಇಂಟರ್ನೆಟ್ಟು ಯಾವುದೂ ಇರಲಿಲ್ಲ. ಹೀಗಾಗಿ ಅವರಿಬ್ಬರ ಸಂಪರ್ಕ ಮತ್ತು ಭೇಟಿ ಹೆಚ್ಚು ಕಡಿಮೆ ನಿಂತೇ ಹೋಯಿತು. ಇತ್ತ ಪಿ.ಜಿ ಎಂಟ್ರನ್ಸ್ ಪರೀಕ್ಷೆ ಕೂಡ ಹತ್ತಿರ ಬರುತ್ತಿತ್ತು. ಎಲ್ಲರೂ ಪರೀಕ್ಷೆಯ ತಯಾರಿಯಲ್ಲಿ ತೊಡಗಿದರು. ಅಮರನೂ ಓದಲು ಕೂತ, ಒಳ್ಳೆಯ ಕಡೆ ಪಿ.ಜಿ ಸೀಟು ಸಿಕ್ಕಿದರೆ ಪ್ರೇಮಾಳಿಗೆ ತನ್ನ ಮನಸ್ಸಿನ ಹಂಬಲ ಹೇಳಿ ಬಿಡುವ ಆಸೆಯಿಂದ ಎಲ್ಲರಿಗಿಂತ ತುಸು ಚೆನ್ನಾಗಿಯೇ ಓದಿದ. ಎಂಟ್ರನ್ಸ್ ಬರೆಯುವಾಗ ಪ್ರೇಮಾ ಸಿಕ್ಕಿದಳು, ಪರೀಕ್ಷೆ ಮುಗಿದ ಮೇಲೆ ಗೆಳೆಯರ ಗುಂಪಿನಲ್ಲಿ `ಮೈಲಾರಿ`ಗೆ ಹೋಗಿ ದೋಸೆ ತಿಂದು, ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ಹೋಗಿ ತಮಗೆ ಓಳ್ಳೆಯ ರ‍್ಯಾಂಕ್‌ ಬರಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು. ಆಗ ಪ್ರೇಮಾ ಅವನ ತಲೆಗೆ ತಿಲಕವನ್ನು ಇಟ್ಟು `ಬೆಸ್ಟ್ ಆಫ್ ಲಕ್` ಹೇಳಿದಳು. ಚಾಮುಂಡೇಶ್ವರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದ ಅಮರನಿಗೆ ಆಕಾಶಕ್ಕೆ ಮೂರೇ ಗೇಣು.    

ಜ್ಯೂನಿಯರ್ ಡಾಕ್ಟರ್ ಮುಗಿಯುವ ಸಮಯದಲ್ಲಿ ಪಿ.ಜಿ ಎಂಟ್ರನ್ಸಿನ ಫಲಿತಾಂಶ ಬಂತು. ಅಮರನಿಗೆ ಒಳ್ಳೆಯ ರ‍್ಯಾಂಕ್‌ ಬಂದ್ದಿತ್ತು, ಅವನ ರ‍್ಯಾಂಕಿಗೆ ಅವನಿಗೆ ಒಳ್ಳೆಯ ಕಡೆ ಸೀಟು ಸಿಗುವುದು ಖಾತ್ರಿ ಇತ್ತು. ರಿಸಲ್ಟು ಗೊತ್ತಾದ ತಕ್ಷಣ ಮೊಟ್ಟಮೊದಲು ಅವನಿಗೆ ಹೇಳಬೇಕು ಅನಿಸಿದ್ದು ಪ್ರೇಮಾಳಿಗೆ. ಗೈನೆಕಾಲಾಜಿ ಪೋಸ್ಟಿಂಗಿನಲ್ಲಿದ್ದ ಪ್ರೇಮಾಳಿಗೆ ವಿಚಾರ ತಿಳಿಸಲು ಲಗುಬಗೆಯಿಂದ ನಡೆದ. ಪ್ರೇಮಾಳಿಗೆ ಕೂಡ ಒಳ್ಳೆಯ ರ‍್ಯಾಂಕ್‌ ಬಂದಿತ್ತು. ಚಲುವಾಂಬಾ ಆಸ್ಪತ್ರೆಯ ಹತ್ತಿರ ಹೋಗುತ್ತಿರಬೇಕಾದರೆ, ಪ್ರೇಮಾ ಕೂಡ ಅಷ್ಟೇ ಲಗುಬಗೆಯಿಂದ ಹೊರಬರುತ್ತಿದ್ದಳು. ಅಮರನನ್ನು ನೋಡುತ್ತಿದ್ದಂತೆ ಅವಳ ಕಣ್ಣುಗಳೂ ಅರಳಿದವು, ದೂರದಿಂದಲೇ ಕೈಯಾಡಿಸಿದಳು. ಇಬ್ಬರೂ ಹತ್ತಿರ ಬರುತ್ತಿದ್ದಂತೆ, ಇಬ್ಬರೂ ಒಟ್ಟಿಗೇ `ಕಾಂಗ್ರ್ಯಾಟ್ಸ್` ಹೇಳಿದರು, ನಂತರ ಇಬ್ಬರೂ ಒಟ್ಟಿಗೇ ನಕ್ಕರು, ನಂತರ ಮತ್ತೆ ಒಟ್ಟಿಗೇ `ಕಾಂಗ್ರಾಟ್ಸ್` ಹೇಳಿದರು, ಮತ್ತೆ ನಕ್ಕರು. ಅಮರನಿಗೆ ಪಿಜಿ ಸೀಟು ಸಿಕ್ಕಿದ್ದು ಸಾರ್ಥಕವೆನಿಸಿಬಿಟ್ಟಿತು. ಇಬ್ಬರೂ ಹೊಸ ಊರಿನಲ್ಲಿ (ಮುಂಬೈ ಅಥವಾ ದಿಲ್ಲಿ) ಒಂದೇ ಕಾಲೇಜಿನಲ್ಲಿ ಪಿ.ಜಿ ಮಾಡಬಹುದು, ತನ್ನ ಪ್ರೇಮ ಚಿಗುರೊಡೆಯಬಹುದು ಎಂದೆಲ್ಲ ಅವನ ಮುಂದಿನ ಮೂರು ವರ್ಷದ ಕನಸುಗಳು ಮೂರು ಸೆಕೆಂಡಿನಲ್ಲಿ ಅವನ ಮನಸ್ಸಿನ ಪರದೆಯ ಮೇಲೆ ಚಲಿಸಿದವು. ಆಗ ಪ್ರೇಮಾ ತನ್ನ ಬ್ಯಾಗಿನಿಂದ ಒಂದು ಲಕೋಟೆಯನ್ನು ಕೊಟ್ಟಳು. ಅದೊಂದು ಗ್ರೀಟಿಂಗ್ ಕಾರ್ಡು ತರಹ ಇತ್ತು, ಅದು `ಕಾಂಗ್ರ್ಯಾಚುಲೇನ್` ಕಾರ್ಡಿರಬಹುದು, ಅದರೊಳಗೆ ಪ್ರೇಮಾ ತನ್ನ ಪ್ರೇಮಪತ್ರವನ್ನು ಇಟ್ಟಿರಬಹುದು ಎಂದುಕೊಂಡ. ಲಕೋಟೆಯನ್ನು ಕೈಗೆ ತಗೆದುಕೊಂಡಾಗ ಅವನ ಹೃದಯ ಬಡಿತ ನಗಾರಿಯಾಗಿ ಎಲ್ಲಿ ಪ್ರೇಮಳಿಗೆ ಕೇಳಿಸಿಬಿಡುತ್ತೋ ಎಂದು ನಾಚಿಕೊಂಡ. 

`ಇಲ್ಲೇ ತೆಗೆಯಬಹುದಾ?` ಎಂದ.

`ಪ್ಲೀಸ್,` ಎಂದಳು ಪ್ರೇಮಾ. ಅವಳ ಕಣ್ಣುಗಳು ಮಿಂಚುತ್ತಿದ್ದವು.

ಲಕೋಟೆ ಹರಿದರೆ, ಒಳಗೆ ಕಾರ್ಡು. ಕಾರ್ಡು ಹೊರ ತೆರೆದರೆ ಲಗ್ನಪತ್ರಿಕೆ! ಅದೂ ಪ್ರೇಮಾಳ ಲಗ್ನಪತ್ರಿಕೆ!! 

ಹುಡುಗನೂ ಡಾಕ್ಟರಂತೆ, ಅಮೇರಿಕದಲ್ಲಿ ಪಿ.ಜಿ ಮಾಡುತ್ತಿದ್ದಾನಂತೆ, ತನಗಿಂತ ಬರೀ ಮೂರು ವರ್ಷ ದೊಡ್ಡವನಂತೆ, ಬೆಂಗಳೂರಿನವನಂತೆ, ಬೆಂಗಳೂರಿನಲ್ಲೇ ಎಂ.ಬಿ.ಬಿ.ಎಸ್ ಮಾಡಿದ್ದಂತೆ, ಫ್ಯಾಮಿಲಿ ಫ್ರೆಂಡ್ಸ್ ಅಂತೆ, ಮದುವೆ ಮುಂದಿನ ತಿಂಗಳು ಬೆಂಗಳೂರಿನಲ್ಲಂತೆ, ಖಂಡಿತ ಬರಬೇಕಂತೆ, ಪಿ.ಜಿ.ಯನ್ನು ಅಮೇರಿಕದಲ್ಲೇ ಮಾಡುತ್ತಾಳಂತೆ, ಇನ್ನೂ ತುಂಬಾ ಜನರಿಗೆ ಕಾರ್ಡು ಕೊಡಬೇಕಂತೆ…ಎಂದೆಲ್ಲ ಹೇಳಿ ಪ್ರೇಮಾ ಹೊರಟು ಹೋದಳು. 

ಅಮರ ಕಾರ್ಡನ್ನು ಹಿಡಿದು ಏನೂ ತೋಚದೇ ನಿಂತುಬಿಟ್ಟ. ಕಾರ್ಡಿನ ಮೇಲಿನ ಪ್ರೇಮಾಳ ಹೆಸರಿನ ಪಕ್ಕದಲ್ಲಿ ಇರುವ `ಡಾ. ರಾಜಶೇಖರ ಕೃಷ್ಣೇಗೌಡ` ಎನ್ನುವ ಹುಡುಗನ ಹೆಸರನ್ನು ಬೆರಳಿನಿಂದ ಮುಚ್ಚಿ, ಲಗ್ನಪತ್ರಿಕೆಯನ್ನು ಮುಖದ ಹತ್ತಿರ ತಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಒಂದು ಸಲ ತುಟಿ ಆಡಿಸಿದ, ಮೂಗಿಗೆ ಘಮ್ಮೆಂದು ಲಗ್ನಪತ್ರಿಕೆಯ ವಾಸನೆ! 

***

ಅದೇ ವಾಸನೆ! ತನ್ನ ಲಗ್ನಪತ್ರಿಕೆಗೂ ಅದೇ ವಾಸನೆ! ಅದಕ್ಕೇ ಪ್ರೇಮಾಳ ನೆನಪಾದದ್ದು. ಅದಕ್ಕೇ ಪ್ರೇಮಾಳನ್ನು ನೋಡುವ ಆಸೆ ಮೂಡಿದ್ದು ಎಂದು ಅಮರ ತನಗೆ ತಾನೇ ಸಮಾಧಾನ ಮಾಡಿಕೊಂಡು, ತನ್ನ ಮತ್ತು ಉಷಾಳ ಲಗ್ನಪತ್ರಿಕೆಗಳನ್ನು ಹಿಡಿದುಕೊಂಡು ಪ್ರಿಂಟಿಂಗ್ ಪ್ರೆಸ್ಸಿನಿಂದ ಹೊರಬಂದ. 

ಆದರೆ ದಿನ ಕಳೆದಂತೆ ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ತನ್ನ ನಿಶ್ಚಿತಾರ್ಥ ಆಗಿದೆ, ತನ್ನ ಭಾವಿ ಪತ್ನಿ ಉಷಾ, ತಾನು ಅವಳ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೇನೆ. ಅತ್ತ ಪ್ರೇಮಾ ಮದುವೆಯಾಗಿ ದೂರದ ಅಮೇರಿಕಕ್ಕೆ ಹೋಗಿದ್ದಾಳೆ. ಅಂಥದರಲ್ಲಿ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ಪದೇ ಪದೇ ಮೂಡಿದ್ದಕ್ಕೆ ತನ್ನ ಬಗ್ಗೆ ತನಗೇ ಕಳವಳವಾಯಿತು. ಅವಳ ಮದುವೆಗೆ ಹೋಗಿದ್ದರೆ ಬಹುಷಃ ಇಂಥ ಹುಚ್ಚು ಆಸೆ ಮೂಡುತ್ತಿರಲಿಲ್ಲ ಎನಿಸಿತು. ಅವಳ ಹತ್ತಿರ ಮಾತಾಡಿ ಅವಳಿಗೆ ಈಗ ಆಗುತ್ತಿರುವ ತನ್ನ ಮದುವೆಯ ಬಗ್ಗೆ ಹೇಳಿದರೆ ಈ ಭ್ರಾಂತಿ ಕಳೆಯಬಹುದು ಎನಿಸಿತು.

ಎಂ.ಬಿ.ಬಿ.ಎಸ್ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರ ಹೆಸರು, ಜನ್ಮದಿನಾಂಕ ಮತ್ತು ಮನೆಯ ಫೋನ್ ನಂಬರ್ ಇರುವ ಒಂದು ಚಿಕ್ಕ ಹೊತ್ತಿಗೆಯನ್ನು ಎಲ್ಲರಿಗೆ ಕೊಟ್ಟಿದ್ದರು. ಆಗಿನ್ನೂ ಮೊಬೈಲು, ಇ-ಮೇಲು ಇರಲಿಲ್ಲವಲ್ಲ. ಅದರಲ್ಲಿ ಹುಡುಕಿ ಪ್ರೇಮಾಳ ಬೆಂಗಳೂರಿನ ಮನೆಗೆ ಎಸ್.ಟಿ.ಡಿ ಬೂತಿನಿಂದ ಫೋನ್ ಮಾಡಿದ. ಪ್ರೇಮಾಳ ಅಮ್ಮ ಫೋನ್ ಎತ್ತಿಕೊಂಡರು. 

`ಓ ಅಮರನಾ? ಪ್ರೇಮಾ ನಿನ್ನ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾಳಪ್ಪಾ. ಏನು? ನಿನ್ನ ಮದುವೆನೇನಪ್ಪಾ? ತುಂಬ ಸಂತೋಷ ಆಯ್ತಪ್ಪಾ! ಅವಳು ಅಮೇರಿಕದಿಂದ ಫೋನ್ ಮಾಡಿದಾಗ ಪ್ರೇಮಾಗೂ ಹೇಳ್ತೀನಪ್ಪಾ. ಅವಳಿಗೂ ತುಂಬ ಸಂತೋಷ ಆಗುತ್ತಪ್ಪಾ` ಎಂದು ಬಿಡದೇ ಮಾತಾಡಿದರು. 

ಪ್ರೇಮಾಳ ಅಮೇರಿಕದ ನಂಬರು ಕೇಳಬೇಕು ಎಂದುಕೊಂಡವನು ಕೇಳದೇ ಹಾಗೆಯೇ ಫೋನು ಇಟ್ಟುಬಿಟ್ಟ. 

(ಮುಂದುವರೆಯುವುದು…)

8 thoughts on “ಅಮರಪ್ರೇಮ (ಕತೆ) – ಕೇಶವ ಕುಲಕರ್ಣಿ

  1. Kathe bahala chanda barediddeeri, Keshav.
    Wonder if there is another story inside it, the inner journey to how they come to appear in the outside.. telling about tte inner one can be jolt the narration.,that can be more up and down and will add few more sections! I can see you are someone who can get into that but must have chosen consciously to keep the way it is .. like peaceful or sweet Sankranti !?

    Like

  2. Very interesting story. Enjoyed reading the young mind’s true love. Eagerly waiting to see the turn story takes. Keshav keeps the readers in suspense.

    Like

  3. ಕೇಶವ್ ನಿಮ್ಮ ಕಥೆಯನ್ನು ಈ ಹಂತದಲ್ಲಿ ಕಾಮೆಂಟಿಸುವುದು ಸ್ವಲ್ಪ premature ಅನ್ನಿಸುತ್ತಿದೆ. ಬದಲಿಗೆ ನೀವು ಉಪಯೋಗಿಸಿದ ತಂತ್ರದ ಬಗ್ಗೆ ನನ್ನ ಒಂದೆರಡು ಅನಿಸಿಕೆಗಳು ಹೀಗಿವೆ. ಒಂದು ಕಥೆಯನ್ನು linear ಆಗಿ ನೇರವಾಗಿ ಹೇಳಬಹುದು ಇಲ್ಲವೇ ಒಂದು ಕಥೆಯನ್ನು ಒಡೆದು ತುಣುಕುಗಳನ್ನು ಮಾಡಿ ಮತ್ತೆ re-arrange ಮಾಡಿ flash back ತಂತ್ರವನ್ನು, re-call ತಂತ್ರವನ್ನು ಅಳವಡಿಸಿ ಅಲ್ಲಿ ಓದುಗರ ಆಲೋಚನೆಯನ್ನು ಹಿಂದೆ ಮುಂದೆ ತಿರುಗಿಸಿ ಅವರ ಮನಸ್ಸಿಗೆ ಒಂದಿಷ್ಟು ಕಸರತ್ತನ್ನು ಕೊಡಬಹುದು. ಕಥೆಯನ್ನು ಹೀಗೆ ನಲ್ಲಿಯಲ್ಲಿ ಹರಿಯುವ ನೀರಿನಂತೆ stop start ಮಾಡಿ ಅಲ್ಲಿ ಒಂದು ವಿಶೇಷತೆಯನ್ನು ತರಬಹುದು. ಈ ಒಂದು ತಂತ್ರವನ್ನು ಯಶಸ್ವಿಯಾಗಿ ಬಳಸಿದ್ದೀರಿ. ಈ ತಂತ್ರ ಈ ನಿಮ್ಮ ಕಥೆಗೆ ಪೂರಕವಾಗಿ ಒಂದು ವಿಶೇಷತೆಯನ್ನು ತಂದುಕೊಟ್ಟಿದೆ. ಓದುಗರು ವೈದ್ಯರಾಗಿದ್ದಲ್ಲಿ ಅಮರ ಮತ್ತು ಪ್ರೇಮಾಳನ್ನು ಅವರವರಲ್ಲಿ ಗುರುತಿಸಿಕೊಳ್ಳಲು ಮೊದಲಾಗುತ್ತಾರೆ. ಓದುಗರು ಕಥೆಗೆ connect ಮಾಡಿಕೊಂಡಾಗ ಓದುಗನಿಗೆ ಕಥೆ ಆತ್ಮೀಯವಾಗುತ್ತದೆ. ಅಮರನ ಪ್ರೇಮ ಅಮರಪ್ರೇಮ ಆಗಲಿಲ್ಲ ಎನ್ನುವುದು disappointing! But as an author who knows what is in your mind and what twist are you going to bring, just can’t wait!!!

    Like

  4. Nice 👌🏾, waiting for the next part, you have a way with words. Everyone can relate with this story.

    Like

  5. ಅನಿವಾಸಿಯ ಅನೇಕ ಓದುಗರಿಗೆ ತಮ್ಮ ಮೆಡಿಕಲ್ ದಿನಗಳನ್ನು ಜ್ಞಾಪಿಸುವ, ಕಥೆಯ ಕಾಲಘಟ್ಟವನ್ನು ಸ್ಪಷ್ಟಪಡಿಸಿ ಕೇಶವ ಕುಲಕರ್ಣಿಯವರು ಆಗಿನ social context ದ ಹಿನ್ನೆಲೆಯ ನೈಜ ಚಿತ್ರಣದ ಜೊತೆಗೆ ಪ್ರಾರಂಭ ಮಾಡಿದ ಕಥೆ ಕುತೂಹಲಕರವಾಗಿದೆ. Love struck ಯುವಜೋಡಿಯ ಮುಂದಿನ ಜೀವನವನ್ನು ಅರಿತುಕೊಳ್ಳಲು ಒಂದು ವರ್ಷ ಕಾಯಬೇಕೆ? 😀ಬೇಗನೆ ಬರಲಿ ಮುಂದಿನ ಕಂತು!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.