ನಾಗಾಭರಣಾಯಣ

 

ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.

ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ  ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು. 

ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.

ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:

೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)

೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)

೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩) 

೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭) 

೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩) 

೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧) 

ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ  ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ. 

ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ.  ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು. 

ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು. 

‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ. 

ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು. 

-ರಾಂ 

3 thoughts on “ನಾಗಾಭರಣಾಯಣ

  1. Thankyou, Ram, for writing the report so quickly and effectively. You have captured the essence so effectively. Delayed start happens in every event and this time was no exception. I wish more KSSVV/Anivaasi members attended the meet and participated in it.

    Thank you, Gudur and Ram, for handling the show effectively. Thanks to Desai for editing the video clippings.

    Like

  2. ಚೆನ್ನಾಗಿದೆ ವರದಿ ರಾಂ. ಎಲ್ಲಾ ವಿಚಾರ ತಿಳಿಯಿತು.

    Liked by 1 person

  3. ನಾಗಾಭರಣರಂಥ ಸಿನಿಮಾ ಬ್ರಹ್ಮರ ಚಿತ್ರಗಳ ತುಣುಕುಗಳನ್ನು ಅವರೆದುರೇ ಪ್ರದರ್ಶಿಸಿ ವಿಮರ್ಶಿಸಿದರೆ Lion’s den ಹೊಕ್ಕು ಹೊರಬಂತಾಗಿರಬೇಕು, ಆದರೆ ಆಗಲಿಲ್ಲ ಮತ್ತು ತದ್ವಿರುದ್ಧವಾಗಿ ಅವರಿಂದ ಬೆನ್ನು ಚಪ್ಪರಿಸಿಕೊಂಡಿದ್ದಲ್ಲದೆ ( “ಫಿಲಂ ಕ್ಲಿಪ್- ಮಾತು- ಸಂಭಾಷಣೆ ಈ ಫಾರ್ಮ್ಯಾಟ್ ಚೆನ್ನಾಗಿದೆ” – TSN) ) ಅವರಿಂದ ಪ್ರತಿಯೊಂದು ಚಿತ್ರದ ಹಿನ್ನೆಲೆಯಲ್ಲಿ ಹುದುಗಿದ್ದ ಅನೇಕ ಸ್ವಾರಸ್ಯಕರ ವಿಷಯಗಳನ್ನೂ ಹೊರಗೆಳೆಯುವ ಪ್ರಯೋಗವಾಗಿದ್ದರಿಂದ ಭಾಗವಹಿಸಿದವರೆಲ್ಲರಿಗೂ ಅಭಿನಂದನೆಗಳು. ಒಳ್ಳೆಯ ಸಿನಿಮಾ ನಿರ್ಮಾಪಕ- ನಿರ್ದೇಶಕರಷ್ಟೇ ಅಲ್ಲದೆ ಒಳ್ಳೆಯ ಮಾತುಗಾರರು ಸಹ ಅನ್ನುವ ವಿಷಯವನ್ನೂ ಆ ದಿನ ಅರಿತೆವು. ಅನಿವಾಸಿ ತಂಡದವರು ಏರ್ಪಡಿಸಿದ ಅನೇಕ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಇದೂ ಒಂದು. ಅವರು ಹೇಳಿದ ಮಾತುಗಳನ್ನು ನೆನಪಿಟ್ಟುಕೊಂಡು ಆ ಸಿನಿಮಾಗಳನ್ನು ಮತ್ತೊಮ್ಮೆ ಮತ್ತು ಹೊಸ ದೃಷ್ಟಿಕೋನದಲ್ಲಿ ನೋಡುವಂತೆ ಪ್ರೇರಿಸಿದರು ಎನ್ನುವದು ಎಲ್ಲರೂ ಒಪ್ಪುವಂಥದು. ಆ ವೃತ್ವಾಂತವನ್ನೆಲ್ಲ ಈ ಕಿರು ಲೇಖನದಲ್ಲಿ ಸಂಗ್ರಹಿಸಿ ಬರೆಯುವದರಲ್ಲಿ ರಾಂ ಸಫಲರಾಗಿದ್ದಾರೆ ಅಂದರೆ ಅದು ಉತ್ರೇಕ್ಷೆಯಲ್ಲ!

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.