ದಿನನಿತ್ಯದ ತತ್ವಜ್ಞಾನ – ರವಿರಾಜ ಉಪ್ಪೂರರ ಕವನಗಳು

ಅನಿವಾಸಿಯ ಬಂಧುಗಳಿಗೆಲ್ಲ ನಮಸ್ಕಾರಗಳು. ಈ ಶುಕ್ರವಾರ ದಿಢೀರ್ ದೋಸೆಯಂತೆ ಕೊನೆಯ ಗಳಿಗೆಯಲ್ಲಿ ಬಡಿಸುತ್ತಿರುವ ಕವನಗಳು, ಡಾ. ರವಿರಾಜ್ ಉಪ್ಪೂರರ ಹಂಚಿನಲ್ಲಿ ತಯಾರಾದವು. ಮೂಲತಃ ಉಡುಪಿಯವರಾದ ರವಿರಾಜ್, ವೃತ್ತಿಯಲ್ಲಿ ಕ್ಷ-ಕಿರಣ ತಜ್ಞರು. 2010ರಿಂದ ಇಂಗ್ಲಂಡಿನಲ್ಲಿ ತಮ್ಮ ಪತ್ನಿ-ಪುತ್ರರೊಂದಿಗೆ ವಾಸವಾಗಿರುವ ರವಿರಾಜ್ ಕವನ ಗೀಚುವುದಲ್ಲದೇ (ಅವರದೇ ಮಾತಿನಲ್ಲಿ), ಯಕ್ಷಗಾನದಲ್ಲೂ ಆಸಕ್ತಿ ಉಳ್ಳವರು. ಬನ್ನಿ, ಏನು ಹೇಳುತ್ತಾರೋ ನೋಡೋಣ – ಲಕ್ಷ್ಮೀನಾರಾಯಣ ಗುಡೂರ, ಸಂಪಾದಕ (ಸಬ್ಸ್ಟಿಟ್ಯೂಟ್).

***********************************************************************

ಪಯಣವೆಲ್ಲಿಗೋ ತಿಳಿಯದೇ ಹೊರಟಿರುವೆ 
ಗಾಣದೆತ್ತಿನಂತೆ ತಿರುಗುತಿರುವೆ ಗುರಿ ಇಲ್ಲದೇ 
ಬಂದಿರುವುದು ಒಬ್ಬನೇ... ಹೋಗುವುದೂ ಒಬ್ಬನೇ 
ನಡುದಾರಿಯಲೊಂದಿಷ್ಟು ನಲಿಯಬಾರದೇ 
ಕಲೆಯಬಾರದೇ ಒಂದಿಷ್ಟು ನಿನ್ನಿಷ್ಟದ ಜೀವಗಳೊಡನೆ ?
ಯಾಕೀ ಬಿಗುಮಾನ ... ಇಲ್ಲಿಯದೇನೂ ನಿನ್ನದಲ್ಲ 
ಜೋಳಿಗೆಯ ಭರಿಸಿಕೋ ಪ್ರೀತಿ ಸ್ನೇಹದ ಭಂಡಾರವ
ನಿನ್ನೀ ಬಾಳಿಗೆ ಅದುವೇ ನಿನಗಾಧಾರವು

*******

ಮೊದಮೊದಲು ತೊದಲಿ ನಡೆಯುವಾಗ 
ಕೈ ಹಿಡಿದು ನಡೆಸಿದೆ ನೀನೆನ್ನ 
ಮಡದಿಯ ಕೈ ಹಿಡಿದೊಡೇ ಮರೆವೆನೇ 
ನೀನಿತ್ತ ಕೈಯ ಆಸರೆಯ?
ನಿನಗಾಗುವೆ ನಾನಾಸರೆ 
ಮುಪ್ಪಿನಲಿ ನಿನ್ನ ಕೈಗೋಲಾಗಿ ತಾಯೆ

*******

ಹಳೆಯ ನೆನಪುಗಳು 
ಸುರುಳಿ ಬಿಚ್ಚಿದರೆ 
ಉರುಳಿ ಹೋಗುವುದು 
ಮರಳಿ ಬಾರದ ಕಾಲದ 
ವಿರಳ ಕ್ಷಣಗಳು ಮನದಾಳದಲ್ಲಿ

*******

ಮಿನುಗುವ ನಕ್ಷತ್ರ ಕಂಡಾಗಲೆಲ್ಲ 
ಮಲಗುವ ಅನಿಸುತ್ತದೆ 
ಮನಸಿನ ತುಂಬೆಲ್ಲ ತುಂಬಿರುತ್ತೆ 
ತಾರೆಯರ ತಾರಾಗಣ 
ಎದ್ದು ನೋಡಿದರೆ ಇನ್ನೂ 
ಬೆಳಕೇ ಹರಿದಿಲ್ಲ .... ಬರೀ ಕನಸುಗಳು 
ರವಿಯ ಆಗಮನಕೆ ಮಾಯವಾಯಿತೆಲ್ಲಾ 
ಕನಸಿನ ತಾರಾಗಣ .... 
ಮರೆಯಾದವು ಎಲ್ಲಾ  ಅಸಂಖ್ಯ ಮಿನುಗುತಾರೆಗಳು 
ಉಳಿದದ್ದು ಬರೀಯ ನಿದ್ರೆಗೆಟ್ಟ ರಾತ್ರಿಯು,
ಹಗಲಿಡೀ ಕಾಯಬೇಕಲ್ಲ ಇನ್ನು 
ಮಿನುಗು ತಾರೆಯರ ನೋಡಲು ... 
ಕನಸಿನ ರಾತ್ರೆಯ ಕಳೆಯಲು

*******

ನೀಲಾಕಾಶ ಹೊಂಬಣ್ಣದ ರಾತ್ರಿಯುಡಿಗೆ ತೊಟ್ಟು 
ಕಾಯುತಿರುವಳು ಪ್ರಣಯಕ್ಕಾಗಿ ತಿಂಗಳೊಂದಿಗೆ 
ಬಾಗಿಲಲಿ ನಿಂತು ಇಣುಕಿ ನೋಡುತಿಹನು ಬೆಳಗಿನ ಗೆಳೆಯ ರವಿ 
ದಣಿವಾಗಿಹ ನಮಗೆಲ್ಲ ಇವರಿಬ್ಬರ ಪ್ರಣಯ ಪ್ರಸಂಗವೇ ಒಂದು ಮನೋರಂಜನೆ ..

*******

ಗೌತಮನಿಗಾಯಿತು ಜೀವನ್ಮರಣದ ಲೆಖ್ಖಾಚಾರ
ಅರಳೀಮರದಡಿಯಲ್ಲಿ 
ನನಗರಿವಾಯಿತು ಮುಂದಿನ ಜೀವನದ ಸಾಕ್ಷಾತ್ಕಾರ 
ಅಡುಗೆಮನೆಯ ಸಿಂಕಿನಲ್ಲಿ 
ಹತ್ತಾರು ಪಾತ್ರೆಗಳ ತಿಕ್ಕಾಟದೊಂದಿಗೆ 
ತಿಳಿದಿರಲಿ ನಿನಗೆ ಸಹಬಾಳ್ವೆಯ ಮರ್ಮ ಇದೆಂದು 
ಆಸೆಯೇ ದುಃಖ್ಖಕ್ಕೆ ಮೂಲ ಎಂಬುದೀಗರಿವಾಯ್ತು 
ಸಾವೇ ಇರದ  ಮನೆಯ ಸಾಸಿವೆಯಂತೆ
ನೀ ಆಸೆ ಪಡದಿರು ಜೀವನದಿ ಬರೀ ಸುಖವ 
ಅದುವೇ ಬುದ್ದನಿಗೆ ನೀ ನೀಡುವ ಗೌರವ

*******

ದಟ್ಟ ಕಾಡಿನಲಿ  ಮದ್ದಾನೆಯ ಮದಿಸಬಲ್ಲೆ 
ಇಟ್ಟ ಬಾಣದ ಗುರಿಯ ಬದಲಿಸಬಲ್ಲೆ 
ಕೊಟ್ಟ ಮಾತನೂ ಮುರಿಯಬಲ್ಲೆ 
ಮಾರುತತನುಜನ ಮುರಿದಿಕ್ಕಬಲ್ಲೆ 
ಆದರೆ ನನ್ನಾಕೆಯನು ಸೋಲಿಸಲಾರೆ, ಮಾತಿನ ಮಲ್ಲೆ 
ಏನಾದರೂ ಆಕೆಯೇ ನನ್ನ ನಲ್ಲೆ

*******

ನಿನ್ನ ಮಡಿಲಲ್ಲಿ ಮರೆಯಾಗಿಸಬಲ್ಲೆ ಪ್ರಖರ ರವಿಕಿರಣವನ್ನೇ 
ಕರಗಿ ನೀರಾಗಿ ಸುರಿಸುವೆ ನೀ ಮಳೆಯ ಬರೀ ವರ್ಷಋತುವಿನಲ್ಲಿ 
ನನ್ನಾಕೆಯೋ ... ಮರೆಯಾಗಿಸಬಲ್ಲಳು ನನ್ನಾಲೋಚನೆಗಳನು 
ತನ್ನ ಮಾತಿನ ಮೋಡಿಯಲ್ಲಿ 
ಮತ್ತೊ ... ಸುರಿಸಬಲ್ಲಳು ಕಣ್ಣೀರಿನ ಮಳೆಯ 
ಸರ್ವ ಋತುಗಳಲ್ಲೂ!

*******

ರೀ... ತರಕಾರಿಯ ತರಲು ಹೊರಟಿರೇ 
ನನ್ನವಳು ಅಡುಗೆಮನೆಯಿಂದಲೇ ಉಲಿದಳು 
ಚರ್ಚೆ ಮಾಡದೆ ತಂದರೆ 
ಸಿಡುಕುವಳು ನಿಮಗೇನೂ ಬಾರದು ಉಳಿಸಲು 
ಮತ್ತೆ ... ತಂದಿರುವ ತರಕಾರಿಗಳೋ ಬರೀ ಹುಳಗಳು !!!.

*******

ಕಾಳ್ಗಪ್ಪು ನಾನು ನಿಶೆ
ಎಂದವಳು ದುಃಖದಲಿ
ಕಣ್ಣೀರ ಸುರಿಸುತಿರೆ
ಅವಳಶ್ರು ಬಿಂದುಗಳು
ಬಾನ ಬಯಲಿನ ತುಂಬ
ನಗೆಯ ನಕ್ಷತ್ರ ಮಿನುಗಿದವು

*************************

- ರವಿರಾಜ್ ಉಪ್ಪೂರ್

4 thoughts on “ದಿನನಿತ್ಯದ ತತ್ವಜ್ಞಾನ – ರವಿರಾಜ ಉಪ್ಪೂರರ ಕವನಗಳು

  1. ರವಿರಾಜ ಉಪ್ಪೂರರ ಕವನಗಳು ಒಂದು ರೀತಿಯಲ್ಲಿ ಮಿಕ್ಸ್ಡ್ ಬ್ಯಾಗ್ (mixed bag) ದಂತಿವೆ- ಉದ್ದದಲ್ಲಿ, ಗುಣಮಟ್ಟದಲ್ಲಲ್ಲ. ಇಲ್ಲಿ ಗಪದ್ಯಗಳಿವೆ, ಮಿನಿಗವನಗಳಿವೆ, ಹನಿಗವನಗಳೂ ಸಹ. ‘ಹನಿ’ ಅಂದ ಮೇಲೆ ಅದರಲ್ಲಿ ಹಾಸ್ಯ ಮತ್ತು ಚಾಟೋಕ್ತಿ ಸಹ ಇರಲೇ ಬೇಕಲ್ಲ. ಸಂಪಾದಕರು ಶೀರ್ಷಿಕೆಯಲ್ಲಿ ಬರೆದಂತೆ ಹಲವು ನಿತ್ಯ ತತ್ತ್ವಜ್ಞಾನದ ಝಲಕುಗಳಿವೆ. ಜೀವನದಲ್ಲಿ ಕಂಡ ಅನೇಕ ತರದ ಅನುಭವಗಳನ್ನು ಕವನದ ಭಟ್ಟಿಯಲ್ಲಿಳಿಸಿದ್ದಾರೆ. ಅವೆಲ್ಲವೂ ಅವರದೇ ಆಗಿರುವ ಖಾತ್ರಿಯಿಲ್ಲ ( ಪಲ್ಯೆ ಕಾಯಿ ಖರೀದಿಯ ಮಿನಿಗವನ ನೋಡಿರಿ!) ಆದರೆ ನನ್ನಂತೆ ಇಂಥ ಪರ್ಯಾಯ ಅನುಭವ ‘ಸವಿದವ’ ಅಂತ ಸಹಾನುಭೂತಿ ಸೂಚಿಸಲು ಇಲ್ಲಿ ಅನೇಕ ಓದುಗರು ಸಿಕ್ಕಾರು! ಇಲ್ಲಿಯ ಕವಿತೆಗಳನ್ನು ಒಂದೊಂದಾಗಿ ದಿನಕ್ಕೊಂದು, ಎರಡರಂತೆ ಓದಿದರೆ ಇನ್ನೂ ಹೆಚ್ಚು ಸ್ವಾರಸ್ಯ ಇರುತ್ತದೆ.ಕೆಲವು ಹೋಲಿಕೆಯಲ್ಲಿ ಮಬ್ಬು ಬೆಳಕಿನಲ್ಲಿ ಕಾಣಿಸುತ್ತವೆ. ಅದೇನೇ ಯಿರಲಿ, ನಮ್ಮ ಅನಿವಾಸಿಯ ಹೊಚ್ಚ ಹೊಸ ಬರಹಗಾರ ರವಿರಾಜ ಉಪ್ಪೂರರಿಗೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಮತ್ತೆ ಮತ್ತೆ ಜೋಳಿಗೆ ತರುತ್ತ ಬನ್ನಿ .

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.