ಪ್ರಧಾನಿ ರಿಷಿ ಸುನಾಕ್ – ಬ್ರಿಟನ್ ಕಂಡ ಅಪೂರ್ವ ಪ್ರತಿಭೆ

ಡಾ ಜಿ ಎಸ್ ಶಿವಪ್ರಸಾದ್

ಫೋಟೋ – ಗೂಗಲ್ ಕೃಪೆ

ಭಾರತೀಯ ಮೂಲದವರಾದ ರಿಷಿ ಸುನಾಕ್ ಅವರು ಪ್ರಧಾನಿಯಾದ ಹಿನ್ನೆಲೆಯಲ್ಲಿ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ಒಂದು ವಿಚಾರ ಸಂಕೀರಣದಲ್ಲಿ ನೀಡಿದ ಉಪನ್ಯಾಸವನ್ನು ಆಧರಿಸಿದ ಮತ್ತು ಆ ಉಪನ್ಯಾಸಕ್ಕೆ ಕೆಲವು ಅಂಶಗಳನ್ನು ಸೇರಿಸಿ ಬರೆದಿರುವ ಲೇಖನ. ಈ ಲೇಖನದಲ್ಲಿ ರಿಷಿ ಅವರ ವೈಯುಕ್ತಿಕ ಹಿನ್ನೆಲೆ, ಅವರು ರಾಜಕಾರಣಿಯಾಗಿ ನಡೆದು ಬಂದ ದಾರಿ, ಪ್ರಧಾನಿಯಾಗುವ ಮುನ್ನ ನಡೆದ ರೋಚಕ ಸಂಗತಿಗಳು, ಜನಾಭಿಪ್ರಾಯ ಮುಂತಾದ ವಿಷಯಗಳನ್ನು ನನ್ನ ಕೆಳಗಿನ ಧೀರ್ಘ ಬರಹ ಒಳಗೊಂಡಿದೆ. ರಾಜಕಾರಣಿಗಳನ್ನು ಕುರಿತ ಲೇಖನಗಳು ಅನಿವಾಸಿ ಜಾಲ ಜಗುಲಿಯಲ್ಲಿ ವಿರಳ. ಹೀಗಾಗಿ ಇದು ಓದುಗರನ್ನು ಆಕರ್ಷಿಸಬಹುದು  ಎಂದು ನಂಬಿರುತ್ತೇನೆ. ರಿಷಿ ಇದೀಗಷ್ಟೇ ಪ್ರಧಾನಿಯಾಗಿದ್ದು ಈ ಬರಹ ಸಮಯೋಚಿತವಾಗಿದೆ ಎಂದು ಭಾವಿಸುತ್ತೇನೆ. 
    -ಸಂಪಾದಕ
***
ರಿಷಿ ಸುನಾಕ್ ಅವರು ೨೪ ಅಕ್ಟೊಬರ್ ೨೦೨೨ ದೀಪಾವಳಿಯ ಹಬ್ಬದ ದಿನದಂದು ಬ್ರಿಟನ್ನಿನ ಪ್ರಧಾನ ಮಂತ್ರಿಯಾದರು. ಐತಿಹಾಸಿಕವಾಗಿ ಇದು ಒಂದು ಮೈಲಿಗಲ್ಲು ಮತ್ತು ಮಹತ್ವದ ಘಳಿಗೆ. ರಿಷಿ ಹುಟ್ಟಿನಲ್ಲಿ ಬ್ರಿಟಿಷರಾದರೂ ಅವರು ಭಾರತೀಯ ಮೂಲದವರು. ಆಂಗ್ಲನಾಡಿನಲ್ಲಿ ಮೈನಾರಿಟೀ ಸಮುದಾಯದಿಂದ ಬಂದು ಎತ್ತರಕ್ಕೆ ಏರಿ ಪ್ರಧಾನಿಯಾಗುವುದು ಇದುವರೆವಿಗೂ ಅಸಾಧ್ಯವಾಗಿತ್ತು. ಆಂಗ್ಲರು ಜಾನಾಂಗವಾದಿಗಳೆಂಬ ಒಂದು ಕಳಂಕ ಇದ್ದು ರಿಷಿ ಅವರನ್ನು ಪ್ರಧಾನಿಯಾಗಿ ಆಯ್ಕೆಮಾಡಿದ ಮೇಲೆ ಅವರು ಆ ಕಳಂಕದಿಂದ ಮುಕ್ತರಾಗಿದ್ದಾರೆ. ಇದಷ್ಟೇ ಅಲ್ಲದೆ ರಿಷಿ ರಾಜಕೀಯ ಕ್ಷೇತ್ರದಲ್ಲಿ ಕಾಲಿಟ್ಟು ಕೇವಲ ಏಳು ವರ್ಷಗಳಾಗಿದ್ದು ಇಷ್ಟು ಕಡಿಮೆ ಸಮಯದಲ್ಲಿ ಎಲ್ಲರ ಮನ್ನಣೆ ಮತ್ತು ವಿಶ್ವಾಸಗಳನ್ನು ಗಳಿಸಿಕೊಂಡು ಪ್ರಧಾನಿ ಪಟ್ಟಕ್ಕೇರಿದ್ದಾರೆ ಮತ್ತು ಕೇವಲ ೪೨ ವರ್ಷ ವಯಸ್ಸಿನಲ್ಲಿ ಪ್ರಧಾನಿಯಾಗಿರುವುದೂ ವಿಶೇಷ. ಈ ಕಾರಣಕ್ಕಾಗಿ ಇದು ಮಹತ್ವ ಘಳಿಗೆ ಎಂದು ಭಾವಿಸಬಹುದು. 

‘ಋಷಿ ಮೂಲ ಹುಡುಕಬಾರದಾದರೂ’ ಇಲ್ಲಿ ರಿಷಿ ಅವರ ಕೆಲವು ವೈಯುಕ್ತಿಕ ಹಿನ್ನೆಲೆಯನ್ನು ಪ್ರಸ್ತಾಪಿಸುವುದು ಉಚಿತ. ರಿಷಿ ಅವರು ಬ್ರಿಟನ್ನಿನಲ್ಲಿ ಹುಟ್ಟಿದ್ದರೂ ಅವರ ಪೂರ್ವಜರು ಹಿಂದಿನ ಅವಿಭಾಜಿತ ಭಾರತದ, ಈಗಿನ ಪಂಜಾಬ್ ಪ್ರಾಂತ್ಯದಿಂದ ಬಂದವರು. ಅವರ ಪರಿವಾರದವರು ಮೊದಲಿಗೆ ಈಶಾನ್ಯ ಆಫ್ರಿಕಾದ ದೇಶಗಳಿಗೆ ವಲಸೆ ಹೋಗಿ ಅಲ್ಲಿ ನೆಲಸಿ ೬೦ರ ದಶಕದಲ್ಲಿ ರಿಷಿ ಅವರ ತಂದೆ ತಾಯಿ ಇಂಗ್ಲೆಂಡಿಗೆ ವಲಸೆ ಬಂದು ಸೌತ್ ಹ್ಯಾಂಪ್ಟನ್ ನಗರದಲ್ಲಿ ನೆಲೆಸಿದರು. ಅವರ ತಂದೆ ಒಬ್ಬ ಸಾಧಾರಣ ವೈದ್ಯ ಮತ್ತು ತಾಯಿ ಫಾರ್ಮಸಿಸ್ಟ್ ಆಗಿದ್ದು ಆರ್ಥಿಕವಾಗಿ ಅವರು ಮಧ್ಯಮ ವರ್ಗದವರೇ. ಅವರಿಗೆ ಲಕ್ಷಿ ಕಟಾಕ್ಷ ಪ್ರಾಪ್ತವಾಗಿದ್ದು ನಂತರದಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ ರಿಷಿ ಬಹಳ ಪ್ರತಿಭಾವಂತರಾಗಿ ಆಕ್ಸ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪದವಿ ಪಡೆದುಕೊಂಡು ನಂತರ ಕ್ಯಾಲಿಫೋರ್ನಿಯಾದಲ್ಲಿ ಎಂಬಿಎ ಪದವಿ ಪಡೆದು ಕ್ಯಾಲಿಫೋರ್ನಿಯಾ ಮತ್ತು ಲಂಡನ್ನಿನ ಫೈನ್ಯಾನ್ಸ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಅವರು ಕ್ಯಾಲಿಫೋರ್ನಿಯಾದಲ್ಲಿ ಇದ್ದಾಗ ಇನ್ಫೋಸಿಸ್ ಕಂಪನಿಯ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿ ಪ್ರೇಮಾಂಕುರವಾಗಿ ಮದುವೆಯಾದರು. ಈ ಒಂದು ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕದ ಅಳಿಯ ಎಂದು ಕನ್ನಡಿಗರು ಸಂಭೋದಿಸುವುದು ಸಮಂಜಸವಾಗಿದೆ. 

೨೦೧೫ ರಲ್ಲಿ ಉತ್ತರ ಇಂಗ್ಲೆಂಡಿನ ಯಾರ್ಕ್ ಶೈರ್ ಪ್ರಾಂತ್ಯದ ರಿಚ್ಮಂಡ್ ಎಂಬ ಊರಿನಲ್ಲಿ ಪ್ರಭಾವಿತ ಮಂತ್ರಿಗಳಾಗಿದ್ದ ವಿಲಿಯಂ ಹೇಗ್ ಅವರು ನಿವೃತ್ತಿಯಾದ ಬಳಿಕ ಅದೇ ಕ್ಷೇತ್ರದಿಂದ ಕನ್ಸರ್ವೇಟಿವ್ ಪಾರ್ಟಿ ಟಿಕೆಟ್ ಹಿಡಿದು ರಿಷಿ ಎಂಪಿಯಾಗಿ ಆಯ್ಕೆಗೊಂಡರು. ಅಲ್ಲಿಂದ ಮುಂದಕ್ಕೆ ೨೦೧೯ರಲ್ಲಿ ಬೋರಿಸ್ ಜಾನ್ಸನ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಆ ಕೆಲಸವನ್ನು ದಕ್ಷತೆಯಿಂದ ನಿಭಾಯಿಸಿ ಬೋರಿಸ್ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ೨೦೨೦ರ ಸಮಯದಲ್ಲಿ ಛಾನ್ಸೆಲರ್ ಆಫ್ ಎಕ್ಸ್ ಚೆಕರ್ ಅಂದರೆ ಆರ್ಥಿಕ ಮಂತ್ರಿಯಾಗಿ ಬೋರಿಸ್ ಅವರ ಮಂತ್ರಿ ಮಂಡಳವನ್ನು ಸೇರಿಕೊಂಡರು. ಅದೇ ಸಮಯಕ್ಕೆ ಯೂರೋಪಿನಲ್ಲಿ ಕೋವಿಡ್ ಕಾಣಿಸಿಕೊಂಡು ಬ್ರಿಟನ್ನಿನಲ್ಲಿ ಈ ವೈರಸ್ ಪಿಡುಗು ವ್ಯಾಪಕವಾಗಿ ಹಬ್ಬಿಕೊಂಡಿತು. ಇದರ ಪರಿಣಾಮವಾಗಿ ಜನಸಾಮಾನ್ಯರು ನಿರುದ್ಯೋಗಿಗಳಾಗಿ ಆರ್ಥಿಕ ತೊಂದರೆಯನ್ನು ಅನುಭವಿಸಿದರು. ರಿಷಿ ಅವರು ಈ ಒಂದು ಸಂದರ್ಭದಲ್ಲಿ, ಫರ್ಲೊ ಎಂಬ ಆಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪರಿಹಾರ ನಿಧಿಯನ್ನು ಒದಗಿಸಿದರು. ರಿಷಿ ಅವರು 'ಹೆಲ್ಪ್ ಟು ಇಟ್ ಔಟ್' ಎಂಬ ಯೋಜನೆಯನ್ನು ಹುಟ್ಟು ಹಾಕಿ ರೆಸ್ಟೋರೆಂಟ್ ಮಾಲೀಕರಿಗೆ ಮತ್ತು ಜನರಿಗೆ ಸಹಾಯವಾಗುವಂತೆ ಊಟ ತಿಂಡಿ ಬಿಲ್ಲಿನಲ್ಲಿ ಹತ್ತು ಪೌಂಡಿನ ವರೆಗೆ ಶೇಕಡಾ ೫೦% ರಿಯಾಯ್ತಿ ಒದಗಿಸಲಾಗಿತ್ತು. ಒಟ್ಟಾರೆ ಈ ಸಂಕಷ್ಟಗಳ ನಡುವೆ ರಿಷಿ ಅವರು ಅನೇಕ ಜನಪರ ಆರ್ಥಿಕ ಯೋಜನೆಗಳನ್ನು ಹಾಕಿಕೊಟ್ಟರು. ತಮ್ಮ ಸಹೋದ್ಯೋಗಿ ಎಂಪಿ ಮತ್ತು ಜನರ ವಿಶ್ವಾಸವನ್ನು ಗಳಿಸಿಕೊಂಡರು.

ಕೋವಿಡ್ ಪಿಡುಗಿನ ಮಧ್ಯೆ ಲಾಕ್ ಡೌನ್ ಸಮಯದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೆಲವು ಸಾರ್ವಜನಿಕ ಆರೋಗ್ಯ ನಿಯಮಗಳ ಉಲ್ಲಂಘನೆ ಮಾಡಿದ್ದು ಅದು 'ಪಾರ್ಟಿಗೇಟ್' ಹಗರಣವೆಂಬ ಹೆಸರಿನಲ್ಲಿ ಬಹಿರಂಗಗೊಂಡಿತು. ಬೋರಿಸ್ ಅದಕ್ಕೆ ದಂಡ ತೆತ್ತು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಯಿತು. ಇದಾದನಂತರ ಬೋರಿಸ್ ಅವರು ತಮ್ಮ ರಾಜಕೀಯ ಪಕ್ಷದ 'ಚೀಫ್ ವಿಪ್' ಕ್ರಿಸ್ ಪಿಂಚೆರ್ ಅವರ ನೇಮಕಾತಿಯಲ್ಲಿ ಕೆಲವು ಮುಖ್ಯ ಅಂಶಗಳನ್ನು ಬಚ್ಚಿಟ್ಟಿದ್ದರು ಎಂಬ ಅಪವಾದದಲ್ಲಿ ಮತ್ತೆ ಸಿಕ್ಕಿಕೊಂಡರು. ಈ ಎಲ್ಲ ಹಗರಣಗಳ ಹಿನ್ನೆಲೆಯಲ್ಲಿ ತಮ್ಮ ಮಂತ್ರಿಮಂಡಳದ ಸಹೋದ್ಯೋಗಿಗಳ ವಿಶ್ವಾಸಗಳನ್ನು ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ರಿಷಿ ಅವರು ತಾವು ರಾಜಕೀಯ ಮೌಲ್ಯಗಳಿಗೆ ಬದ್ಧರೆಂದು ಬೋರಿಸ್ ಅವರ ಈ ಹಗರಣದ ಹಿನ್ನೆಲೆಯಲ್ಲಿ ಅವಿಶ್ವಾಸದ ಮೇಲೆ ರಾಜೀನಾಮೆ ನೀಡಿದರು, ಅವರ ಹಿಂದೆ ಉಳಿದೆಲ್ಲ ಕ್ಯಾಬಿನೆಟ್ ಮಂತ್ರಿಗಳು ರಾಜೀನಾಮೆ ನೀಡಲು ಮೊದಲುಗೊಂಡರು. ಬೋರಿಸ್ ಕೊನೆಗೆ ತಮ್ಮ ನೈತಿಕ ಜವಾಬ್ದಾರಿಯ ನಷ್ಟದ ಸಲುವಾಗಿ ರಾಜೀನಾಮೆ ನೀಡ ಬೇಕಾಯಿತು. 

ಬೋರಿಸ್ ಅವರ ರಾಜೀನಾಮೆಯಿಂದ ತೆರವಾದ ಪ್ರಧಾನಿ ಹುದ್ದೆಗೆ ರಿಷಿ ಸುನಾಕ್ ಮತ್ತು ಲಿಜ್ ಟ್ರಸ್ಸ್ ನಡುವೆ ಪೈಪೋಟಿ ಉಂಟಾಯಿತು. ಎಂಪಿಗಳ ಬೆಂಬಲವಿದ್ದರೂ ಪ್ರಧಾನಿಯ ಆಯ್ಕೆ ಇಲ್ಲಿಯ ನಿಯಮಾನುಸಾರವಾಗಿ 
ಸಾರ್ವಜನಿಕರ ವೋಟಿನ ಅಗತ್ಯವಿಲ್ಲದೆ, ಕನ್ಸರ್ವೇಟಿವ್ ಪಾರ್ಟಿ ಸದಸ್ಯರಿಂದ ನಡೆದು ಕೊನೆಗೆ ಲಿಜ್ ಟ್ರಸ್ಸ್ ಪ್ರಧಾನಿಯಾದರು. ರಿಷಿಗೆ ಪ್ರಧಾನಿಯಾಗುವ ಅರ್ಹತೆ ಇದ್ದರೂ ಅವರು ಹಿಂದೆ ಉಳಿಯಬೇಕಾದುದು ಬಹಳ ಜನರಿಗೆ ನಿರಾಸೆ ಉಂಟಾಯಿತು. ಅಂದಹಾಗೆ ಲಿಜ್ ಟ್ರಸ್ ಪ್ರಧಾನಿಯಾದ ನಂತರ ಅವರು ಕೈಗೊಂಡ ಆರ್ಥಿಕ ಯೋಜನೆಗಳು ನಿಷ್ಫಲವಾಗಿ ಎಲ್ಲ ಮಾರುಕಟ್ಟೆಗಳಲ್ಲಿ ಪೌಂಡ್ ಬೆಲೆ ಕುಸಿಯಲು ಮೊದಲುಗೊಂಡಿತು.  ಮೊದಲೇ ನರಳುತ್ತಿದ್ದ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡುವ ಸೂಚನೆಗಳು ಕಾಣತೊಡಗಿದವು. ಇದರ ಬಗ್ಗೆ ರಿಷಿ ಎಚ್ಚರಿಕೆಯ ಕರೆಗೆಂಟೆಯನ್ನು ಕೊಟ್ಟಿದ್ದರು ಎಂದುದನ್ನು ಇಲ್ಲಿ ನೆನೆಯಬಹುದು. ಇದೇ ಹಿನ್ನೆಲೆಯಲ್ಲಿ ಲಿಜ್ ಟ್ರಸ್ಸ್ ರಾಜೀನಾಮೆ ನೀಡಬೇಕಾಯಿತು. ಯಶಸ್ವಿಯಾದ ನಾಯಕತ್ವವಿಲ್ಲದ ಬ್ರಿಟನ್ ಇತರ ದೇಶಗಳ ನಗೆಪಾಟಲಿಗೆ ಗುರಿಯಾಯಿತು. ಈ ಒಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ರಿಷಿ ಸುನಾಕ್ ಪ್ರಧಾನಿಯಾಗಲು ಮತ್ತೆ ಅರ್ಜಿಸಲ್ಲಿಸಿದರು. ಅವರ ಜೊತೆ ಪೆನ್ನಿ ಮಾರ್ಡೆಂಟ್ ಎಂಬ ಜನಪ್ರಿಯ ಎಂಪಿ (ಪಾರ್ಲಿಮೆಂಟ್ ಸದಸ್ಯೆ) ತಾನೂ ಪ್ರಧಾನಿಯಾಗಲು ಅರ್ಜಿ ಸಲ್ಲಿಸಿದಳು. ಇದರ ಮಧ್ಯೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತ್ತಿದ್ದ ಬೋರಿಸ್ ಜಾನ್ಸನ್ ತಾನು ಮತ್ತೆ ಪ್ರಧಾನಿಯಾಗಿ ಬರುತ್ತೇನೆ ಎಂದು ಅರ್ಜಿ ಸಲ್ಲಿಸಿದ ವಿಚಾರ ಎಲ್ಲರಿಗೂ ಆಶ್ಚರ್ಯದ ಜೊತೆಗೆ ಹಾಸ್ಯಾಸ್ಪದವಾಗಿ ಕಾಣಿಸಿತು. ಬೋರಿಸ್ ಜಾನ್ಸನ್ ಹಗರಣಗಳ ತನಿಖೆ ವಿಚಾರಣಾ ಹಂತದಲ್ಲಿ ಇರುವಾಗ ಅರ್ಜಿಸಲ್ಲಿಸಿರುವುದು ಸರಿಯಲ್ಲವೆಂದು ನಿರ್ಧರಿಸಿ ಕೊನೆಗೆ ಬೋರಿಸ್ ಅರ್ಜಿಯನ್ನು ಹಿಂದೆ ತೆಗೆದುಕೊಳ್ಳಬೇಕಾಯಿತು. ದೇಶದ ಸದರಿ ಆರ್ಥಿಕ ಪರಿಸ್ಥಿಯ ಹಿನ್ನೆಲೆಯಲ್ಲಿ ಮತ್ತು ಎಂಪಿಗಳ ಬೆಂಬಲ ಇಲ್ಲದ ಪೆನ್ನಿ ಮಾರ್ಡೆಂಟ್ ಕೊನೆ ಘಳಿಗೆಯಲ್ಲಿ ತಮ್ಮ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡರು. ಅತಿ ಹೆಚ್ಚಿನ ಎಂಪಿಗಳ ಬೆಂಬಲವಿರುವ ರಿಷಿ ಕೊನೆಗೂ ಪ್ರಧಾನಿಯಾದರು. 

ಪಾಶ್ಚಿಮಾತ್ಯ ದೇಶಗಳಲ್ಲಿ ರಾಜಕಾರಣ ಕೆಲವು ಮೌಲ್ಯಗಳಿಗೆ ಬದ್ಧವಾಗಿದೆ. ಇಲ್ಲಿಯ ವ್ಯವಸ್ಥೆಯಲ್ಲಿ ನೈತಿಕ ಜವಾಬ್ದಾರಿ, ನಿಯಮಗಳ ಪಾಲನೆ, ಆಡಳಿತಾಂಗ, ನ್ಯಾಯಾಂಗ ಮತ್ತು ಸಂವಿಧಾನದಕ್ಕೆ ಗೌರವ ಇವುಗಳನ್ನು ಕಾಣಬಹುದು. ಒಬ್ಬ ಜನ ನಾಯಕನ ನಿರ್ಣಯದಿಂದ ಮೌಲ್ಯ ನಷ್ಟವಾದಲ್ಲಿ ಕೂಡಲೇ ಅವರು ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡುತ್ತಾರೆ. ಅಭಿವೃದ್ಧಿ ಗೊಳ್ಳುತ್ತಿರುವ ಕೆಲವು ದೇಶಗಳಲ್ಲಿ ನೈತಿಕ ಹೊಣೆಗಾರಿಕೆಯ ಕಾರಣವಾಗಿ ರಾಜೀನಾಮೆ ನೀಡುವವರು ವಿರಳ. ಹಗರಣಗಳ ಮೇಲೆ ಹಗರಣಗಳು ನಡೆದರೂ ತಾವು ಮಾಡಿದುದು ಸರಿಯೇ ಎಂದು ಸಮರ್ಥಿಸಿಕೊಳ್ಳುತ್ತ, ಮಾಧ್ಯಮಗಳ ಬಾಯಿ ಮುಚ್ಚಿಸುತ್ತಾ ಕುರ್ಚಿಗೆ ಅಂಟುಕೊಳ್ಳುವ ರಾಜಕಾರಣವನ್ನು ಕಾಣಬಹುದು. ಇನ್ನು ಕೆಲವು ರಾಷ್ಟ್ರಗಳಲ್ಲಿ ನಾಯಕತ್ವದ ಮತ್ತು ರಾಜಕೀಯದ ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಪಕ್ಕಕ್ಕೆ ತಳ್ಳಿ ಮಿಲಿಟಿರಿ ಸರ್ವಾಧಿಕಾರಿಗಳು ಬಂದು ಕೂರುವುದನ್ನು ಕಾಣಬಹುದು. ಬ್ರಿಟನ್ನಿನಲ್ಲಿ ಪ್ರತಿಭೆಗಷ್ಟೇ ಪುರಸ್ಕಾರ. ಹೀಗೆ ಹೇಳುತ್ತಾ ಬ್ರಿಟನ್ನಿನಲ್ಲಿ ಎಲ್ಲ ಸುಗಮವಾಗಿದೆ ಎಂದು ಹೇಳಲಾಗದು. ಎಲ್ಲ ಪ್ರಜಾಪ್ರಭುತ್ವದಲ್ಲಿ ಅನಿಶ್ಚಿತ ತಿರುವುಗಳು ಇರುತ್ತವೆ.  ರಾಜಕೀಯ ಕ್ಷೇತ್ರದ ಕಸುಬೇ ಹೀಗೆ. ಅನಿರೀಕ್ಷಿತ ಸನ್ನಿವೇಶಗಳು ಅಲೆಗಳಂತೆ ಅಪ್ಪಳಿಸುತ್ತವೆ. ಈ ಅಲೆಗಳಲ್ಲಿ ಎದ್ದವರು ಬಿದ್ದವರು ಇರುತ್ತಾರೆ.  ಪ್ರಪಂಚದಲ್ಲಿ ಎಲ್ಲೇ ಆದರೂ ರಾಜಕೀಯ ವಿದ್ಯಮಾನಗಳ ಇತಿಹಾಸವನ್ನು ಗಮನಿಸಿದಾಗ ಒಬ್ಬರು ಇನ್ನೊಬ್ಬರ ಬೆನ್ನ ಹಿಂದೆ ಚೂರಿ ಹಾಕುವುದು, ಪಿತೂರಿ-ಒಳಸಂಚನ್ನು ಹೂಡುವುದು ಇವುಗಳನ್ನು ಕಾಣಬಹುದು. ರಾಜಕಾರಣದಲ್ಲಿ ಒಳಪಂಗಡಗಳು, ಚಿಂತನೆಗಳ ಸಂಘರ್ಷಣೆಗಳು, ಬಲಪಂಥ ಎಡ ಪಂಥ ವಿಭಜನೆಗಳು ಸಾಮಾನ್ಯ. ಬ್ರಿಟನ್ನಿನ ರಾಜಕಾರಣದಲ್ಲಿ ಜಾತಿ, ಮತ, ಧರ್ಮಗಳ ವಿಚಾರದಲ್ಲಿ ಬೇಧವಿಲ್ಲ. ಇಲ್ಲಿ ಧರ್ಮ ಮತ್ತು ರಾಜಕೀಯ ಇವೆರಡು ಬೇರೆ ಬೇರೆ. ಪ್ರಪಂಚದ ಇತರ ದೇಶಗಳಲ್ಲಿ ಕೆಲವು ಕಡೆ ಇರುವಂತೆ ರಾಜಕೀಯ ಮತ್ತು ಧರ್ಮಗಳ ಬೆರಕೆ ಇಲ್ಲ.
ಅವರವರ ಧರ್ಮ ಅವರಿಗೆ ವೈಯುಕ್ತಿಕವಾದ ವಿಚಾರ. ಬಹಿರಂಗದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಅದರ ಪ್ರಸ್ತಾಪವೂ ಇರುವುದಿಲ್ಲ. ಹೀಗಿದ್ದರೂ ಪಕ್ಕದ ಐರ್ಲೆಂಡಿನಲ್ಲಿ ಧರ್ಮ ಬಹಳ ಮುಖ್ಯವಾದ ವಿಚಾರ. ಉತ್ತರ ಮತ್ತು ದಕ್ಷಿಣ ಐರ್ಲೆಂಡಿನಲ್ಲಿ ಧರ್ಮದ ಹೆಸರಿನಲ್ಲಿ, ಕ್ರೈಸ್ತ ಮತದ ಒಳಪಂಗಡದಲ್ಲೇ ಸಾಕಷ್ಟು ರಾಜಕೀಯ ನಡೆದಿದೆ ಎನ್ನ ಬಹುದು.

ರಿಷಿ ಸುನಾಕ್ ಅವರು ಪ್ರಧಾನಿಯಾದ ವಿಚಾರ ಎಲ್ಲರಿಗು ಸಂತಸವನ್ನು ತಂದಿದ್ದು ಆ ಸಂಭ್ರಮದಲ್ಲಿ ನಾವೆಲ್ಲಾ ವಿಜೃಂಭಿಸುತ್ತಿರಬಹುದು. ಆದರೆ ಈಗ ಬ್ರಿಟನ್ನಿನ ಪ್ರಸ್ತುತ ರಾಜಕೀಯ ಸಾಮಾಜಿಕ ಪರಿಸ್ಥಿತಿ ಬಹಳ ಬಿಕ್ಕಟ್ಟಿನಲ್ಲಿದೆ. ರಿಷಿ ಅವರು ಎದುರಿಸ ಬೇಕಾದ ಸವಾಲುಗಳು ಬಹಳಷ್ಟಿದೆ. ಕನ್ಸರ್ವೇಟಿವ್ ಪಾರ್ಟಿಯ ಒಳಗೇ ಬಿರುಕಗಳಿವೆ. 
ರಿಷಿ ಸುನಾಕ್ ಅವರು ಪ್ರಧಾನಿಯಾದ ಮೊದಲ ಕ್ಷಣದಿಂದಲೇ ಅಪಸ್ವರಗಳು ಕೇಳಿ ಬರುತ್ತಿದೆ. ರಿಷಿ ಅವರು ತಮ್ಮ ಮಂತ್ರಿ ಮಂಡಳ ರಚಿಸಿದ ಹಿನ್ನೆಲೆಯಲ್ಲಿ, ಮಂತ್ರಿಗಳ ಆಯ್ಕೆಯಲ್ಲಿ ತೆಗೆದುಗೊಂಡ ನಿರ್ಣಯದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಬ್ರಿಟನ್ನಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಬೆಲೆಯುಬ್ಬರದ ಬವಣೆಗಳನ್ನು ("ಕಾಸ್ಟ್ ಆಫ್  ಲಿವಿಂಗ್  ಕ್ರೈಸಿಸ್") ನಿಭಾಯಿಸುವುದು ರಿಷಿ ಅವರಿಗೆ ದೊಡ್ಡ ಸವಾಲಾಗಿದೆ. ಯುಕ್ರೇನ್ ಯುದ್ಧದ ಪರಿಣಾಮದಿಂದ ಇಂಧನದ ಸರಬರಾಜು ಸ್ಥಗಿತಗೊಂಡು ಬೆಲೆ ಹೆಚ್ಚಾಗಿದೆ. ಚಳಿಗಾಲದಲ್ಲಿ ಬ್ರಿಟನ್ನಿನ ಮನೆಗಳನ್ನು ಬೆಚ್ಚಗಿಡಲು ಹೆಣಗಬೇಕಾಗಿದೆ. ಯುದ್ಧದಲ್ಲಿ ಸ್ಥಳಾಂತರಗೊಂಡ ಮತ್ತು ಇತರ ಬಡ ದೇಶಗಳಿಂದ ವಲಸೆ ಬರುತ್ತಿರುವ ನಿರಾಶ್ರಿತರನ್ನು ನಿಯಂತ್ರಿಸಬೇಕಾಗಿದೆ. ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ನರ್ಸ್ಗಳು, ಮತ್ತು ಸಾರಿಗೆ ವಿಭಾಗದಲ್ಲಿ ರೈಲ್ವೆ ಸಿಬ್ಬಂಧಿಗಳು ಮುಷ್ಕರವನ್ನು ಶುರುಮಾಡಿದ್ದಾರೆ. ಹಣದುಬ್ಬರದಿಂದ ಆಹಾರ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಏರಿವೆ.  ಇಡೀ ರಾಷ್ತ್ರದ ಆತ್ಮವಿಶ್ವಾಸವನ್ನು ರಿಷಿ ಅವರು ಹಿಡಿದೆತ್ತಬೇಕಾಗಿದೆ.  ರಿಷಿ ಅವರ ಮುಂದಿನ ದಾರಿ ಸುಗಮವಂತೂ ಅಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯಾರಿಗೆ ತಾನೇ ಬೇಕು ಈ ಪ್ರಧಾನಿ ಪಟ್ಟ? ಎಂದು ಬಿ.ಬಿ.ಸಿಯ ಖ್ಯಾತ ವರದಿಗಾರರಾದ ಲಾರಾ ಕೂನ್ಸ್ ಬರ್ಗ್ ಪ್ರಶ್ನಿಸಿದ್ದಾರೆ. 

ರಿಷಿ ಅವರು ಪ್ರಧಾನಿಯಾದಾಗ ಹಲವಾರು ಮಾಧ್ಯಮಗಳು ಜನಾಭಿಪ್ರಾಯವನ್ನು ಪಡೆಯಲು ಮುಂದಾದವು. ಜನರು ಒಬ್ಬ ಪ್ರಧಾನಿಯ ಯೋಗ್ಯತೆಯನ್ನು ಅವನ ಅವಧಿಯ ಕೊನೆಗೆ ಅಳೆಯಬೇಕೆ ಹೊರತು ಪ್ರಾರಂಭದಲ್ಲಿ ಅಲ್ಲ! ಇದೇನೆಯಿರಲಿ ಸುಶೀಕ್ಷಿತರು, ರಾಜಕಾರಣಿಗಳು ರಿಷಿ ಬಗ್ಗೆ ತಮ್ಮ ವಿಶ್ವಾಸವನ್ನು, ಒಳ್ಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಮಿಕ ವರ್ಗದವರು, ಬಡ ಜನಸಾಮಾನ್ಯರು ರಿಷಿ ಶ್ರೀಮಂತ ವರ್ಗದವರು ಅವರಿಗೆ ಬಡತನದ ಬವಣೆಗಳು ಹೇಗೆ ಅರ್ಥವಾದೀತು? ಎಂಬ ಅಭಿಪ್ರಾಯವನ್ನು ನೀಡಿ ರಿಷಿ ಅವರ ಸಾಮರ್ಥ್ಯದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದರು. ಹಾಗೆ ನೋಡಿದರೆ ರಿಷಿ ಮೂಲದಲ್ಲಿ ಮಾಧ್ಯಮವರ್ಗದವರೇ, ತಮ್ಮ ಸ್ವಪ್ರತಿಭೆಯಿಂದ ಮೇಲೆ ಬಂದು ಈಗ ಹಣವಂತರಾಗಿದ್ದಾರೆ ಅಷ್ಟೇ. ಇನ್ನು ಕೆಲವು ದಿನಪತ್ರಿಕೆಗಳು ರಿಷಿ "ಮತಗಳಿಸದೆ ಪಟ್ಟಕ್ಕೇರಿದ ಪ್ರಧಾನಿ" ಎಂದು ಕಟುವಾಗಿ ಟೀಕಿಸಿತು. ಬ್ರಿಟನ್ನಿನ ಜನತೆ ಎಂಪಿಗಳನ್ನು ಚುನಾಯಿಸಿದ್ದು, ಅದೇ ಎಂಪಿಗಳು ರಿಷಿಯನ್ನು ಬಹುಮತದಿಂದ ಪ್ರಧಾನಿಯಾಗಿ ಆರಿಸಿದ್ದಾರೆ ಎಂದ ಮೇಲೆ ಇದು ಸತ್ಯಕ್ಕೆ ದೂರವಾದ ಮಾತು ಮತ್ತು ಅಸಂಗತ ಪ್ರಲಾಪ. ಅಂದಹಾಗೆ ಬ್ರಿಟನ್ನಿನ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರು ಒಂದು ಪಾರ್ಟಿಗೆ ತಮ್ಮ ಮತವನ್ನು ನೀಡುತ್ತಾರೆ ಹೊರತು ಒಬ್ಬ ಪ್ರಧಾನ ಮಂತ್ರಿಗಲ್ಲ. ಆ ಪ್ರಧಾನಮಂತ್ರಿಯನ್ನು ಪಾರ್ಟಿ ಸದಸ್ಯರು ಚುನಾಯಿಸುತ್ತಾರೆ. ಬ್ರಿಟನ್ನಿನ ನಿವಾಸಿಗಳು ಯಾರು ಬೇಕಾದರೂ ಸ್ವಲ್ಪ ಹಣ ತೆತ್ತು ಪಾರ್ಟಿಯ ಸದಸ್ಯತ್ವವನ್ನು ಪಡೆಯಬಹುದು. ಇನ್ನು ನಮ್ಮ ಭಾರತೀಯ ಮೂಲದ ಅನಿವಾಸಿಗಳಿಗೆ ರಿಷಿ ಸುನಾಕ್ ಪ್ರಧಾನಿಯಾದದ್ದು ಅತ್ಯಂತ ಹೆಮ್ಮೆಯ ವಿಷಯ. ಈ ಸುವಾರ್ತೆಯನ್ನು ಎಲ್ಲರು ಹಂಚಿಕೊಂಡು ಸಂಭ್ರಮಿಸಿದರು. ಇಷ್ಟೇ ಅಲ್ಲದೆ ರಿಷಿ ಪೂರ್ವಜರು ಇಂದಿನ ಪಾಕಿಸ್ತಾನದ ಪಂಜಾಬಿನ ಮೂಲದವರು ಎಂದು ತಿಳಿದ ಕೂಡಲೇ ಪಾಕಿಸ್ಥಾನಿಗಳೂ ರಿಷಿ ಅವರ ಕೀರ್ತಿಯಲ್ಲಿ ಪಾಲುದಾರರಾಗಲು ಹವಣಿಸುತ್ತಿದ್ದಾರೆ.  ಬಿದ್ದವರನ್ನು ಕಡೆಗಣಿಸಿ ಗೆದ್ದವರ ಯಶಸ್ಸಿನಲ್ಲಿ ಭಾಗಿಗಳಾಗಲು ಹಾತೊರೆಯುವುದು ಲೋಕಾರೂಢಿಯಲ್ಲವೇ?

ರಿಷಿ ಸುನಾಕರಿಂದ ವಿಶೇಷವಾಗಿ ಭಾರತೀಯ ಮೂಲದವರು ಏನನ್ನು ನಿರೀಕ್ಷಿಸಬಹುದು? ಎಂಬ ಪ್ರಶ್ನೆ ಮೂಡುವುದು ಸಹಜ. ರಿಷಿ ಸುನಾಕ್ ಬಹಿರಂಗವಾಗಿ ಭಾರತದವರಂತೆ ಕಂಡರೂ ಇಲ್ಲಿ ಹುಟ್ಟಿ ಬೆಳೆದ ನಮ್ಮ ಅನಿವಾಸಿ ಎರಡನೇ ಪೀಳಿಗೆಯವರಂತೆ ಅವರೂ ಅಂತರಂಗದಲ್ಲಿ ಬ್ರಿಟಿಷ್ ಅಸ್ಮಿತೆಯನ್ನು ಉಳ್ಳವರು. ಇಂತಹ ಹಿನ್ನೆಲೆಯಲ್ಲಿ ಅವರಿಂದ ಯಾವುದೇ ವಿಶೇಷ ರಿಯಾಯ್ತಿಯನ್ನು ನಾವು ನಿರೀಕ್ಷಿಸುವುದು ತರವಲ್ಲ. ಇದೆಲ್ಲಕ್ಕೂ ಮಿಗಿಲಾಗಿ ಮೇಲೆ ಪ್ರಸ್ತಾಪಿಸಿದಂತೆ ಬ್ರಿಟನ್ನಿನ ಪ್ರಸಕ್ತ ಆರ್ಥಿಕ ಮತ್ತು ಇನ್ನೂ ಅನೇಕ ಸವಾಲುಗಳನ್ನು  
ರಿಷಿ ಬಗೆಹರಿಸಬೇಕಾಗಿದೆ. ಭಾರತ ಮತ್ತು ಬ್ರಿಟನ್ನಿನ ನಡುವೆ ವಾಣಿಜ್ಯ ಮತ್ತು ತಂತ್ರಜ್ಞಾನ ವಿನಿಮಯ, ವೀಸಾ ಪಡೆಯುವ ವಿಧಾನದಲ್ಲಿ ಸರಳೀಕರಣ, ಭಾರತೀಯ ಮೂಲದ ಪರಿಣಿತರಿಗೆ ಬ್ರಿಟನ್ನಿನಲ್ಲಿ ಉದ್ಯೋಗಾವಕಾಶ, ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗದ ಅವಕಾಶ ಇವುಗಳನ್ನು ನಾವು ನೀರೀಕ್ಷಿಸುವುದು ಸಹಜ. ಈ ವಿಚಾರದಲ್ಲಿ ರಿಷಿ ಅವರ ಸಹಕಾರವನ್ನು ನಾವು ಪಡೆಯುವ ಸಾಧ್ಯತೆಗಳಿವೆ. ರಿಷಿ ಅವರು ಬ್ರಿಟನ್ನಿನ ಹೊರಗೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಯೂರೋಪಿನ ಒಕ್ಕೂಟದ ಜೊತೆಗೂಡಿ ಯುಕ್ರೇನಿನಲ್ಲಿ ಸಮರವನ್ನು ನಿಲ್ಲಿಸಲು ಸಾಧ್ಯವೇ? ರಷ್ಯಾ ಮತ್ತು ಚೈನಾದಂತಹ ಪ್ರಬಲವಾದ ಎದುರಾಳಿಗಳನ್ನು ನಿಭಾಯಿಸುವ ರಾಜತಾಂತ್ರಿಕ ಅನುಭವವಿದೆಯೇ? ಸಾಮರ್ಥ್ಯವಿದೆಯೇ? ಈ ವಿಚಾರದ ಬಗ್ಗೆ ನಾವೆಲ್ಲಾ ಸ್ವಲ್ಪ ಅನುಮಾನದಿಂದಲೇ   ಗಮನಿಸುತ್ತಿದ್ದೇವೆ. ರಿಷಿ ಅವರು ಆಗಲೇ ಆರ್ಥಿಕ ಮಂತ್ರಿಯಾಗಿದ್ದು ಮತ್ತು ಅವರ ಶಿಕ್ಷಣ ಇದಕ್ಕೆ ಪೂರಕವಾಗಿದ್ದು ಅವರು ಬ್ರಿಟನ್ನಿನ ಸಧ್ಯದ ಆರ್ಥಿಕ ಬಿಕ್ಕಟನ್ನು ಬಗೆಹರಿಸುವುದರ ಬಗ್ಗೆ ಎಲ್ಲರಿಗೂ ಸಂಪೂರ್ಣ ವಿಶ್ವಾಸವಿದೆ ಎನ್ನ ಬಹುದು.

ಒಟ್ಟಿನಲ್ಲಿ ರಿಷಿ ಸುನಾಕ್ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ.  ಬ್ರಿಟನ್ನಿನ ಅತ್ಯಂತ ಕಠಿಣವಾದ ಪರಿಸ್ಥಿತಿಯಲ್ಲಿ ಆಂಗ್ಲ ಜನತೆ ಅವರನ್ನು ತಮ್ಮ ಜನನಾಯಕನಾಗಿ ಒಪ್ಪಿರುವುದು ಐತಿಹಾಸಿಕವಾಗಿ ಮಹತ್ವವಾದ ವಿಷಯ. ಇದು ಬ್ರಿಟಿಷ್ ಜನರ ಸಹಿಷ್ಣುತೆಗೆ ಮತ್ತು ಉದಾರತೆಗೆ ಸಾಕ್ಷಿಯಾಗಿದೆ. ಈ ನೆಲದಲ್ಲಿ ಯಾವ ವರ್ಣದವರಾದರೂ, ಯಾವ ಜನಾಂಗದವರಾದರೂ, ಯಾವ ಜಾತಿ, ಮತ, ಧರ್ಮಾದವರಾದರೂ ಅವನಿಗೆ ಅಥವಾ ಅವಳಿಗೆ ಪ್ರತಿಭೆ ಮತ್ತು ಸಾಮರ್ಥ್ಯವಿದ್ದಲ್ಲಿ ಈ ದೇಶದ ಪ್ರಧಾನಿಯಾಗಬಹುದು. ನಮ್ಮ ಭಾರತದಲ್ಲಿ ಯುರೋಪಿಯನ್ ಅಥವಾ ಆಫ್ರಿಕಾ ಮೂಲದ ವಲಸಿಗನೊಬ್ಬ ಬಂದು ನೆಲೆಯೂರಿ, ದೇಶದ ನಿಯಮಗಳು ಒಂದು ವೇಳೆ ಅವಕಾಶ ಮಾಡಿಕೊಟ್ಟರೆ ಆ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವೇ? ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಭಾರತದಲ್ಲೇ ಹುಟ್ಟಿದ್ದು ಹಿಂದೂ ಧರ್ಮದ ಹೊರಗಿನವರು ಎಷ್ಟು ಜನ ಮಂತ್ರಿ ಮಂಡಳದಲ್ಲಿ ಇದ್ದಾರೆ? ಅನ್ಯ ಧರ್ಮೀಯರು ಪ್ರಧಾನಿಯಾಗಲು ಸಾಧ್ಯವೇ? ಎಂಬ ಮುಜುಗರದ 
ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜ. ಬ್ರಿಟಿಷ್ ಜನರಿಗಿರುವ ಆ ಸಹಿಷ್ಣುತೆ, ಉದಾರತೆ ನಮ್ಮಲ್ಲಿ ಇದೆಯೇ? ಎಂಬ ವಿಚಾರದ ಬಗ್ಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. 

 ಕೀನ್ಯಾ ಮೂಲದ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತೀಯ ಮೂಲದ ಬ್ರಿಟನ್ನಿನ ರಿಷಿ ಸುನಾಕ್, ಐರ್ಲೆಂಡಿನ ಭಾರತೀಯ ಮೂಲದ ಮಾಜಿ ಪ್ರಧಾನಿ ಲಿಯೋ ವರಾಡ್ಕರ್ ಮತ್ತು ಇಟಲಿ ಮೂಲದ ಸೋನಿಯಾ ಗಾಂಧಿ, ಈ ಜನನಾಯಕರಲ್ಲಿ ಒಂದು ಸಾದೃಶ್ಯವಿದೆ. ಇವರು ಅಥವಾ ಇವರ ಪೂರ್ವಜರು ವಲಸಿಗರು. ಅವರು ಹಲವು ಕನಸುಗಳನ್ನು ಹೊತ್ತು ವಿದೇಶಗಳನ್ನು ತಮ್ಮ ದೇಶವಾಗಿಸಿಕೊಂಡು ಅಲ್ಲಿಯ ಸಂಸ್ಕೃತಿಯನ್ನು ಹೀರಿಕೊಂಡು ಸತ್ಪ್ರಜೆಗಳಾಗಿ ಕೊನೆಗೆ ಆಯಾ ದೇಶಗಳ ನಾಯಕರಾಗಿದ್ದಾರೆ. ಇದಕ್ಕೆ ಮೂಲ ಕಾರಣಗಳು ಇವರ ಪ್ರತಿಭೆ, ಶ್ರದ್ಧೆ ಮತ್ತು ಪ್ರಾಮಾಣಿಕತೆ. ಇನ್ನೊಂದು ಕಡೆ ಜಾಗತೀಕರಣ, ಅವಕಾಶ, ಆಯಾದೇಶದ ಜನರ ಉದಾತ್ತ ಮೌಲ್ಯಗಳು, ಎಲ್ಲರನ್ನೂ ಒಳಗೊಳ್ಳುವ ಆಶಯ ಮತ್ತು ಮತಾತೀತ ನಿಲುವುಗಳು ಕಾರಣವಿರಬಹುದು. 


ರಿಷಿ ಸುನಾಕ್ ಅವರ ಮುಂದಿನ ದಾರಿ ಸುಗಮವಾಗಲಿ ಅವರು ಒಬ್ಬ ಅದ್ವಿತೀಯ ಪ್ರಧಾನಿ ಮತ್ತು ಲೋಕನಾಯಕನಾಗಲಿ ಎಂದು ಹಾರೈಸೋಣ.

ಡಾ ಜಿ ಎಸ್ ಶಿವಪ್ರಸಾದ್
***



 

5 thoughts on “ಪ್ರಧಾನಿ ರಿಷಿ ಸುನಾಕ್ – ಬ್ರಿಟನ್ ಕಂಡ ಅಪೂರ್ವ ಪ್ರತಿಭೆ

  1. ಸಮಯೋಚಿತವಾದ ಲೇಖನ. ಈಗ ಸುಮಾರು ಹತ್ತು ವರ್ಷಗಳ ಹಿಂದೆ, ಕನ್ಸರ್ವೇಟಿವ್ ಪಕ್ಷದ ನಾಯಕರಾಗಿದ್ದ ಅಂದಿನ ಪ್ರಧಾನಮಂತ್ರಿ ಡೇವಿಡ್ ಕ್ಯಾಮರೂನ್ ಬ್ರಿಟನ್ನಿನಲ್ಲಿ ಸಧ್ಯದಲ್ಲೇ ಒಬ್ಬ ಅಶ್ವೇತ ವ್ಯಕ್ತಿ ಪ್ರಧಾನಿಯಾಗಬಹುದು ಎನ್ನುವ ಭವಿಷ್ಯ ನುಡಿದದ್ದು ನೆನಪಿದೆ. ಅವರ ಭವಿಷ್ಯವಾಣಿ ನಿಜವಾಗಿದೆ. ಬ್ರಿಟ್ಟನ್ನಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಆರ್ಥಿಕ ಪರಿಸ್ಥಿತಿಯು ಬಹಳ ಸವಾಲಾತ್ಮಕವಾಗಿಯೇ ಇದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, ಪ್ರಧಾನಿ ಪಟ್ಟಕ್ಕೇರಿದ, ಭಾರತೀಯ ಮೂಲದ ರಿಷಿ ಶುನಕ್ ಅವರ ಮುಂದೆ, ದೇಶವನ್ನು ಮುನ್ನಡೆಸುವ ದೊಡ್ಡ ಯುದ್ಧವೇ ಇದೆ. ಕೇವಲ ಪ್ರತಿಭೆಯಿಂದ, ಅಲ್ಪಕಾಲದಲ್ಲೇ, ಪ್ರಪಂಚವನ್ನಾಳುತ್ತಿದ್ದ ದ್ವೀಪಗುಚ್ಛದ ನಾಯಕರಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕನ್ನಡ ಮಹಿಳೆಯನ್ನು ವರಿಸಿ, ಕರ್ನಾಟಕದ ಅಳಿಯನಾಗಿರುವ ರಿಷಿ ಅವರ ಬಗ್ಗೆ ಬರೆದ ಶಿವಪ್ರಸಾದ್ ಅವರ ಲೇಖನ ಅನಿವಾಸಿ ವೇದಿಕೆಯ ಮೊದಲ ರಾಜಕೀಯ ವಿಷಯದ್ದು ಎನ್ನಬಹುದು. ಮುಂದೆಯೂ ಇಂತಹ ವಿಚಾರಾತ್ಮಕ ಲೇಖನಗಳು ಪ್ರಕಟವಾಗಲಿ. ಇಂತಹ ಮಾಹಿತಿಪೂರ್ಣ ಲೇಖನ ಒದಗಿಸಿದ ಶಿವಪ್ರಸಾದ್ ಅವರಿಗೆ ಧನ್ಯವಾದಗಳು.
    ಉಮಾ ವೆಂಕಟೇಶ್

    Like

  2. Informative and good Article. I am of the opinion that UK is still racist. Survey done by you.govern revealed significant numbers very unhappy .
    Sunanda is from Asian heritage not white British. Inspite of all the odds he has fulfilled his Ambition.

    Like

  3. Prasad’s article is a comprehensive account of Rishi Sunak’s meteoric rise to one of the top offices in UK. When he presented orally at Vishwawani club recently it was well appreciated all round. Now put in printed words in a slightly extended form it is as appealing. Kudos.

    Like

  4. ಪ್ರಸಾದ್ ಸಮತೋಲನದ ಲೇಖಕರು. ಯಾವುದನ್ನೂ ಅತಿಯಾಗಿಸದೇ, ಹೇಳಬೇಕದುದನ್ನು ಸೂಕ್ಷ್ಮವಾಗಿ ವಿವರಿಸುತ್ತಾರೆ.

    ಇಂಗ್ಲೆಂಡಿನಲ್ಲಿ ಅಶ್ವೇತರು ಪ್ರಮುಖ ಮಂತ್ರಿಗಳ ಸ್ಥಾನಗಳಲ್ಲಿ ನಾನು ಈ‌ ದೇಶಕ್ಕೆ ಬಂದಾಗಿನಿಂದ ನೋಡಿದ್ದೇನೆ. ಪ್ರದಾನಮಂತ್ರಿಯಾಗಬಹುದು ಎಂದು ಊಹಿಸಿರಲಿಲ್ಲ. ಇದು ಒಂದು ರೀತಿ ಪ್ರಜಾಪ್ರಭುತ್ವದ ಗೆಲುವು, ಆಂಗ್ಲನಾಡು ಶತಮಾನಗಳ ವರ್ಣತಾರತಮ್ಯವನ್ನು ರಾಜಕೀಯವಾಗಿ ಮೆಟ್ಟಿನಿಂತ ಕುರುಹು.

    ಪ್ರಸಾದ್ ಅವರು ರಿಷಿಯ ಮೂಲವನ್ನು ಅರಸುತ್ತ ಇಂಗ್ಲೆಂಡಿನ ಪ್ರಸ್ತುತ ಆರ್ಥಿಕ ದುರವಸ್ಥೆಯ ಚಿತ್ರಣವನ್ನೂ ಕೊಡುತ್ತಾರೆ, ಭಾರತ ಏನನ್ನು ನಿರೀಕ್ಷಿಸಬಹುದು ಅಥವಾ ನಿರೀಕ್ಷಿಸಬಾರದು ಎನ್ನುವ ಎಚ್ಚರವನ್ನೂ.

    ಕೇಶವ

    Liked by 1 person

  5. ಉತ್ತಮ ಲೇಖನ ! ಪಟ್ಟಕ್ಕೇರಿದ ಈ ರಾಮನ ಕತೆ ನಿಜವಾಗಿಯೂ ಸಮಯೋಚಿತ. ಖಂಡಿತ ಸಂಭ್ರಮ, ಸಂತೋಷ ಮತ್ತು ಹೆಮ್ಮೆ ತಂದ ಅಪರೂಪದ ಘಟನೆಯೇ ಇದು.
    ರಾಮ ನ ಪತ್ನಿ ಸೀತೆ ಯ ಬಗ್ಗೆ ಯೂ ಬರೆಯಿರಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.