ಅನಿವಾಸಿ ಓದುಗರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ‘ಕನ್ನಡವೆಂದರೆ ಬರೀ ನುಡಿಯಲ್ಲ ; ಹಿರಿದಿದೆ ಅದರರ್ಥ’ ಎಂದ ನಮ್ಮ ನಿತ್ಯೋತ್ಸವದ ಕವಿ ನಿಸಾರರ ಮಾತು ಅಕ್ಷರಶ: ಸತ್ಯ ಎಂಬುದನ್ನು ನಮ್ಮಂಥ ಅನಿವಾಸಿಗಳಿಗಿಂತ ಮಿಗಿಲಾಗಿ ಬಲ್ಲವರಾರು ಅಲ್ಲವೇ? ನಿಜ; ಕನ್ನಡ ಬರೀ ನಾಡು-ನುಡಿಯಲ್ಲ.. ಅದು ನಮ್ಮ ಇರವು,ಅರಿವು,ಹರವು,ಕಸುವು, ಜಸವು..ಅದೆಮ್ಮ ಬಲವು, ಒಲವು, ಗೆಲುವು..ಅದ ಬಿಟ್ಟರಾವ ಅಸ್ಮಿತೆಯೂ ಎಮಗಿಲ್ಲ. ಅದಕ್ಕೆಂದೇ ಕನ್ನಡವೇ ಸತ್ಯ..ಕನ್ನಡವೇ ನಿತ್ಯ.
ನಲುಮೆಯ ಓದುಗರೇ, ಈ ರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಚೈತನ್ಯಮೂರ್ತಿ ಶ್ರೀಯುತ ನಂದ ಕುಮಾರ ಅವರ ಸುಂದರ-ಸುಲಲಿತ ಪದ್ಯವೊಂದು ಓದಿಗಾಗಿ ನಿಮ್ಮ ಕೈ ಸೇರಲಿದೆ. ಓದಿ, ಆನಂದಿಸಿ.
ಜೊತೆಗೇ ನಾನೊಂದು ಹೋಟೆಲಿನ ಪರಿಚಯ ಮಾಡಿಸುತ್ತಿದ್ದೇನೆ. ‘ ಪುಸ್ತಕ, ಸಿನೆಮಾ, ಕವಿ-ಕೃತಿ ಪರಿಚಯಗಳೇನೋ ಸರಿ..ಆದರೆ ಇದೇನಿದು ಹೋಟೆಲ್ ಪರಿಚಯ?!’ ಎಂದು ಹುಬ್ಬೇರಿಸಬೇಡಿ..ನೋಡಿ ಹೇಳಿ.
~ ಸಂ
ಕನ್ನಡಮ್ಮನ ಬಳಸಿರಿ
ಹಸುರು ಸೊಬಗಿನ, ಬಯಲುಗಿರಿಗಳ ಉದಧಿನದಿಗಳ ನಾಡಿದು
ನಗೆಯಮಲ್ಲಿಗೌ, ಚಿಗುರುಕೇದಗೆ, ಸಕಲಸುಮಗಳ ಬೀಡಿದು
ಬಸವ ಸರ್ವಜ್ಞಾದಿ ದಾಸರ, ನಾರಣಪ್ಪನ ಮಾಡಿದು
ಹೊನ್ನ ಸಿರಿನುಡಿ ಕನ್ನಡಮ್ಮನ ಕಂದರೆಲ್ಲರ ಗೂಡಿದು ⎮⎮
ಮುಗಿಲುಮುಟ್ಟುವ, ದಿಗಿಲುಗೊಳಿಸುವ ತರುವರಂಗಳ ಕಾನನ
ನವಿಲು ಕೋಗಿಲೆ, ಗಿಳಿಯ ಚಿಲಿಪಿಲಿ ವಿಹಗಗಳ ಬೃಂದಾವನ
ಆನೆ ಹುಲಿ ನರಿ ಮೃಗಗಳೆಲ್ಲಕು ಆಸರೆಯು ಈ ತಾಯ್ನೆಲ
ಅಲ್ಲಿ ಅಗೋ ಬಲು, ಸುಂದರತರ, ಗುಡಿಯಗೋಪುರ ನೋಡುವಾ ⎮⎮
ಸ್ವಾರ್ಥವೆಣಿಸದೇ ನಾಡಹಿತವನು ಬಯಸಿ ದುಡಿದರ ನೆಲೆಯಿದು
ಕಲಿಕೆ ಎಲ್ಲರ ಸ್ವತ್ತು ಹಿಂದಡಿಯಿಡದಿರೆಂದರ ಸೆಲೆಯಿದು
ಸಕಲ ಉನ್ನತ ಗುಣಗಣಂಗಳ ಪಡೆದ ಸುಜನರ ಕುಲವಿದು
ಭೇದವೇ ಇರದಿರುವ ಬಾಳನು ಬಾಳಿದಂತರ ನೆಲವಿದು ⎮⎮
ಬಯಸಿದೆಲ್ಲವ ಆಗು ಮಾಡಿದ ಭಾರತಾಂಬೆಯ ಕರುವಿದು
ಬಯಸದೆಯೆ ನಮಗೆಲ್ಲ ನೀಡಿಹ ನಮ್ಮಗಳ ಕರುನಾಡಿದು
ಮನದ ಭಾವವ ಮೂಡಿಸಲು ಸರಿಯುಂಟೆ ನಮ್ಮೀಭಾಷೆಗೆ?
ನೆನೆಯುತಲಿ ತಾಯೊಲವ ಗೆಳೆಯಾ ಉಬ್ಬಿಹೋಗಿದೆ ನನ್ನೆದೆ ⎮⎮
ಭಾಷೆ ದೇಶದ ಭಾವನಾಡಿಯು ಭಾಷೆ ಬದುಕಿಗೆ ಕನ್ನಡಿ
ಕನ್ನಡದ ಕಸ್ತೂರಿ ಮರೆತರೆ ನಷ್ಟ ನಮಗೇ ನೆನಪಿಡಿ!
ನೂರುಭಾಷೆಯ ದಾಳಿಯಾಗುವ ಮುನ್ನ ಏಳಿರಿ ಬನ್ನಿರಿ
ಭಾರತದ ಕಣ್ಮಣಿಯ, ಹನುಮನ, ಕನ್ನಡಮ್ಮನ ಬಳಸಿರಿ. ⎮⎮
~ಮತ್ತೂರು ನಂದಕುಮಾರ, ಭಾರತೀಯ ವಿದ್ಯಾಭವನ.
ಕರ್ನಾಟಿಕ್ ಕೆಫೆ
ಕಳೆದ ವರುಷ ಹೀಗೇ ಚಳಿ ಸಣ್ಣಗೆ ಬಾಲ ಬಿಚ್ಚುತ್ತಿರುವ ನವೆಂಬರ್ ತಿಂಗಳು. ಹೊರಗೆ ಮೋಡ ಕವಿದು ಹಗಲು ಹನ್ನೆರಡರ ಹೊತ್ತಿನಲ್ಲೂ ಮಬ್ಬುಗತ್ತಲು. ಹೊರೆ ಕೆಲಸವಿದ್ದರೂ ಮಾಡಲು ಮೂಡಿಲ್ಲದೇ ‘ಥ್ರೋ’ ಮೈಮೇಲೆ ಥ್ರೋ ಮಾಡಿಕೊಂಡು, ಕೈಯಲ್ಲಿ ಜಂಗಮವಾಣಿಯನ್ನು ಸ್ಥಾಪಿಸಿಕೊಂಡು ಸೋಫಾದ ಮೂಲೆಯಲ್ಲಿ ಮುದುಡಿ ಕುಳಿತ ಸೋಮಾರಿ ಹಗಲು. ಒಮ್ಮೆಲೇ ದೆಹಲಿಯಲ್ಲಿರುವ ಮಗರಾಯನ ಕಾಲು.( ಇಂಗ್ಲೀಷಿನ call ಕನ್ನಡದ ಪ್ರಥಮಾ ‘ಉ” ವಿಭಕ್ತಿಯೊಂದಿಗೆ) ‘ಇದೇನಿದು’ ಎಂದು ನನಗೆ ದಿಗಿಲು. ಹತ್ತು ಸಲ ನಾ call ಮಾಡಿದರೇ ಎತ್ತಿ ಉತ್ತರಿಸದ ಭೂಪ.ಅವನದೇ call, ಅದೂ ನನಗೆ ಬಂದರೆ ಅದು ‘ಗಾಡಿ ಮ್ಯಾಲಿಂದ ಬಿದ್ದೆ, ನಂದೇನೂ ತಪ್ಪಿರಲಿಲ್ಲ. ಬರೇ ಒಂಚೂರು ಕೈ ಫ್ರಾಕ್ಚರ್ ಆಗೇದ. ಒಂದೂವರೆ ತಿಂಗಳು ಪ್ಲಾಸ್ಟರ್ ಹಾಕ್ಕೋಬೇಕಷ್ಟೇ.. ಹಂಗೇ ಗಾಡಿಗೊಂಚೂರು ಅಲ್ಲಿಲ್ಲೆ ರಿಪೇರಿಗೆ ಒಂದ ಹತ್ತ-ಹದಿನೈದು ಖರ್ಚಾಗಬಹುದು’ ಅಂತಲೋ ಅಥವಾ, ‘ ನಿನ್ನೆ ರಾತ್ರಿ ಶಿವಾಂಶನ ಮನಿಯಿಂದ ಬರೂ ಮುಂದ ನಾಯಿ ಕಡಿಸಿಕೊಂಡೆ. ನೀ ಏನ ಗಾಬರಿಯಾಗಬ್ಯಾಡ..ಇಂಜಕ್ಷನ್ ಮಾಡಸಗೊಂಡು ಬಂದೀನಿ. ಆದ್ರ ಆ ನಾಯಿ ಮ್ಯಾಲ ಕಣ್ಣಿಟ್ಟರಲಿಕ್ಕೆ ಹೇಳ್ಯಾರ ಡಾಕ್ಟರು..ಅದು ಸಾಯಬಾರದಂತ. ಸತ್ರ ಸ್ವಲ್ಪ ಡೇಂಜರ್ ಅಂತ’(ಅದ್ಯಾವುದೋ ಬೀದಿನಾಯಿ ಮ್ಯಾಲ ಕಣ್ಣಿಡಲಿಕ್ಕೆ ಅದೇನು ತನ್ನ ಅಡ್ರೆಸ್ ಹೇಳಿರತದಾ ಇವಂಗ?!) ಅಂತಲೋ ಎದೆ ಒಡೆಸೋ ವಿಷಯಾನೇ ಇರತಾವ. ಅದಕ್ಕೇ ಸ್ವಲ್ಪ ಗಾಬರಿಯಿಂದಲೇ ಎತ್ತಿ ‘ ಹಲೋ ಮತ್ತೇನಾತಪಾ’ ಎಂದೆ. ‘ಅಮ್ಮಾ, ಇಷ್ಟ ದಿನಾ ಆದ್ರೂ ನೀ ನಂಗ ಒಮ್ಮೆನೂ ಹಂಪಿಗೆ ಯಾಕ ಕರಕೊಂಡು ಹೋಗಿಲ್ಲ? ಈ ಸಲ ಬಂದಾಗ ಅಲ್ಲೇ ಹೋಗೂಣು ಸೂಟಿಗೆ’ ಅಂದವನೇ ‘ ನಾ ಈಗ ಹೋಟೆಲ್ ಗೆ ಬಂದಿದ್ದೆ. ಆ ಮ್ಯಾಲೆ ಮಾಡತೀನಿ’ ಅಂತ ಫೋನಿಟ್ಟ..
ಈ ಹೋಟೆಲ್ ಮತ್ತ ಹಂಪಿಯ ಬಾದರಾಯಣದ ತಲೆಬುಡ ತಿಳಿಯಲಿಲ್ಲ ನನಗೆ. ಆದರೂ ಮಗ ಹಂಪಿ ನೋಡಬೇಕು ಅಂದಿದ್ದೇ ಖುಷಿಯ ವಿಚಾರವಾಗಿತ್ತು. ಕನ್ನಡ ಇತಿಹಾಸಕ್ಕೆ ಸುವರ್ಣ ಯುಗ ಸೇರಿಸಿದ ಹಂಪೆ, ಕೃಷ್ಣದೇವರಾಯ-ಚಿನ್ನಾದೇವಿ-ತಿರುಮಲಾಂಬೆಯರ ಹಂಪೆ, ರಸ್ತೆ ಬದಿಯಲ್ಲಿ ಸೇರಿನಿಂದ ಮುತ್ತುರತ್ನವನಳೆದ ಹಂಪೆ, ವಿರೂಪಾಕ್ಷ-ವಿಜಯವಿಠ್ಠಲರ ದಿವ್ಯ ಸಾನಿಧ್ಯದ ಹಂಪೆ, ಕಲ್ಲುಕಲ್ಲಿನಲೂ ಕನ್ನಡ ನುಡಿ ಮೊಳಗಿಸಿದ ಹಂಪೆ, ಶಿಲೆಯಲ್ಲೂ ಸರಿಗಮದ ಸಂಗೀತದಲೆ ಹೊಮ್ಮಿಸುವ ಹಂಪೆ, ಹನುಮನ ಹಂಪೆ, ಹರಿದಾಸ ಗುರು ವ್ಯಾಸರಾಯರ, ಪುರಂದರರ ಹಂಪೆ, ತುಂಗಭದ್ರೆ ಹರಿವ ಹಂಪೆ..ವಸುಧೇಂದ್ರರ ಇತ್ತೀಚಿನ ಕಾದಂಬರಿ ತೇಜೋತುಂಗಭದ್ರಾದ ಹಂಪೆ..ಎಂದೆಲ್ಲ ನನ್ನ ಮನ ಭಾವುಕವಾಯಿತು. ‘ಆತ ಬಿಡ್ರಿ, ಏನೋ ಹೋಟೆಲ್ ಅಂದು ಇದೇನು ಇತಿಹಾಸ, ಪುರಾಣ ಹಚಗೊಂಡ ಕೂತೀರಿ ಆವಾಗಿಂದ’ ಅಂತ ನಿಮ್ಮ ಸಹನೆ ಕಳಕೋಬ್ಯಾಡ್ರಿ
ಈಗ ಸೀದಾ ಅಲ್ಲೇ ಕರಕೊಂಡು ಹೋಗತೀನಿ. ಇದು ದೆಹಲಿ NCR ದಲ್ಲಿರುವ CARNATIC CAFE. ಮತ್ತ ಹೋಟೆಲ್ ಅಂದ್ರೆಲಾ ಅಂತಿರೇನು? ಖರೇ ಹೇಳತೀನಿ ಈ ಹೋಟೆಲ್, ರೆಸ್ಟೋರೆಂಟ್, ಕೆಫೆ ಇತ್ಯಾದಿಗಳ ವ್ಯತ್ಯಾಸ ಅಷ್ಟ ಖಾಸೇನ ತಿಳ್ಯಂಗಿಲ್ರಿ ನನಗ. ನಮ್ಮೂರ ‘ ಸಂಗಮೇಶ್ವರ ಟೀ ಕ್ಲಬ್’, ಧಾರವಾಡದ ಕಾಮತ್, ಬಸಪ್ಪನ ಖಾನಾವಳಿ, ಹೈ ವೇ ದ ಢಾಬಾ, ಹುಬ್ಬಳ್ಳಿಯ ಉಡುಪಿ ಹೋಟೆಲ್, ಶಿರಸಿಯ ಸತ್ಕಾರ್, ಬಿಜಾಪೂರದ ಮೈಸೂರ ರೆಸ್ಟಾರೆಂಟ್, ಬೆಂಗಳೂರಿನ ಓಣ್ಯೋಣಿ ದರ್ಶಿನಿಗಳು, ದೆಹಲಿಯ ಕರ್ನಾಟಕ ಭವನ. ಕೊನೆಗೆ ಇಲ್ಲಿನ ಮೋಟರ್ ವೇ ಸರ್ವೀಸಿನ costa, subway ಹೊಟ್ಟೆ ತುಂಬಿಸುವ ತಾಣಗಳೆಲ್ಲ ನನ್ನ ಮಟ್ಟಿಗೆ ಹೋಟೆಲ್ ಗಳೇ..
ಹತ್ತು ಹಲವಾರು,ಥರದ ದೋಸೆಗಳು, ಇಡ್ಲಿ-ವಡೆ-ಸಾಂಬಾರ್ ಗಳು, ಬಿಸಿಬೇಳೆ-ಮೊಸರನ್ನಗಳು, ಕರುನಾಡ ಎವರ್ ಗ್ರೀನ್ ಸ್ಪೆಷಲ್ ಕೇಸರಿಭಾತು, ಮೈಸೂರುಪಾಕು, ಒಬ್ಬಟ್ಟುಗಳು, ಘಮಘಮಿಸುವ ಫಿಲ್ಟರ್ ಕಾಫಿ..ಇದಿಷ್ಟೇ ಆಗಿದ್ದರೆ ವಿಶೇಷವಿರುತ್ತಿರಲಿಲ್ಲ..ನಾನಿಲ್ಲಿ ಅದರ ಬಗ್ಗೆ ಪ್ರಸ್ತಾಪಿಸುತ್ತಲೂ ಇರುತ್ತಿರಲಿಲ್ಲ. (ಉತ್ತರ ಭಾರತದಲ್ಲಿ ನಮ್ಮ ದಕ್ಷಿಣದವರ ಅಥೆಂಟಿಕ್ ಟೇಸ್ಟ್ ನ ಖಾದ್ಯಗಳು ದೊರೆವುದು ಸಹ ಅಪರೂಪವೇ ಎನ್ನಿ.) ಇಲ್ಲಿ ನನ್ನ ಸೆಳೆದದ್ದು ಅಪರೂಪದ ಮೆನ್ಯು ಕಾರ್ಡ್.. ಮಧ್ಯೆ ಪುರಂದರದಾಸರ ಅಂಚೆಚೀಟಿ, ಪಕ್ಕದಲ್ಲಿ ರಾಮನಾಮ ಪಾಯಸಕ್ಕೆ ಹಾಡು. ಪಕ್ಕದ ಗೋಡೆಗಳ ಮೇಲೆ ದಾಸವರೇಣ್ಯರ ಹಾಗೂ ಯಂತ್ರೋದ್ಧಾರನ ಫೋಟೊ, ಎದುರಿನ ಗೋಡೆಯ ಟಿ.ವಿ.ಯ ದೊಡ್ಡ ಸ್ಕ್ರೀನ್ ಮೇಲೆ ಅನವರತವಾಗಿ ನಡೆಯುತ್ತಲೇ ಇರುವ ಗಿರೀಶ್ ಕಾರ್ನಾಡರ ನಿರ್ದೇಶನದ, ಶಂಕರ್ ನಾಗ್, ಅರುಂಧತಿ ನಾಗ್ ಹಾಗೂ ಶ್ರೀನಿವಾಸ ಪ್ರಭು ಅವರ ಅಭಿನಯದ ‘ಕನಕ-ಪುರಂದರ’ ಡಾಕ್ಯುಮೆಂಟರಿ. ಹೊರನಾಡಿನಲ್ಲಿ ನಮ್ಮ ನೆಲದ ಸವಿ ಕಣ್ಣು, ಕಿವಿ, ನಾಲಗೆಗಳಿಗೆ ಸಿಕ್ಕರೆ ಆಗುವ ಆನಂದಾನುಭೂತಿ ಎಂಥದೆಂದು ನಮ್ಮ ಅನಿವಾಸಿ ಬಳಗಕ್ಕೆ ವಿವರಿಸಬೇಕಾದ್ದಿಲ್ಲ ಅಲ್ಲವೇ? ತೆಂಗಿನ ಪರಟಿಯಲ್ಲಿ ಬಂದ ಬಡೇಸೋಪು ಸಹ ವಿಶೇಷವೆನ್ನಿಸಿತು ನನಗೆ. ದೆಹಲಿ, ನೊಯಿಡಾ ಕಡೆಗೇನಾದರೂ ಹೋದರೆ ಖಂಡಿತ ಇಲ್ಲೊಮ್ಮೆ ಭೇಟಿಕೊಡಿ..ಕರುನಾಡಿನವನು(ಳು) ನಾನೆಂದು ಹೆಮ್ಮೆ ಪಡಿ. ‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ ಎಂದೊಮ್ಮೆ ಮನದಲ್ಲೇ ಹಾಡಿ.( ನಿಮ್ಮ ಸ್ವರತಾಳಲಯದ ಬಗ್ಗೆ ನಂಬುಗೆಯಿದ್ದವರು ದನಿ ತೆಗೆದೇ ಹಾಡಲಡ್ಡಿಯಿಲ್ಲ.) ಕನ್ನಡ ತಾಯ ಜಯಕಾರ ಮಾಡಿ.
ಜೈ ಭುವನೇಶ್ವರಿ.
~ ಗೌರಿಪ್ರಸನ್ನ
4 thoughts on “ಸಿರಿಗನ್ನಡಂ ಗೆಲ್ಗೆ..ಸಿರಿಗನ್ನಡಂ ಬಾಳ್ಗೆ”
`ತಪ್ಪು ನೋಡದೇ ಬಂದೆಯಾ`, ಹಾಡಿನಲ್ಲಿ ಬಿಟ್ಟರೆ ಈ ವಾರ ಮತ್ತೆ `ಉದಧಿ` ಶಬ್ದ ನೋಡಿ ತುಂಬ ಖುಷಿಯಾಯಿತು. `ನಗೆಯ ಮಲ್ಲಿಗೌ` ಎಂದಿದೆ, `ನಗೆಯ ಮಲ್ಲಿಗೆ`ಯಾಗಬೇಕಿತ್ತಾ ಅಥವಾ `ಮಲ್ಲಿಗೌ`ಗೆ ಏನಾದರೂ ವಿಶೇಷಾರ್ಥವಿದೆಯಾ ಗೊತ್ತಾಗಲಿಲ್ಲ. ಮತ್ತೂರು ಅವರ ಕವನ ಕನ್ನಡದ ಮೇಲಿನ ಕವನಗಳಿಗೆ ಇನ್ನೊಂದು ಸುಂದರೆ ಸೇರ್ಪಡೆ.
ಗೌರಿಯವರ ಪ್ರಬಂಧ ಇನ್ನೂ ಇದೆ ಎನ್ನುವಷ್ಟರಲ್ಲೇ ಮುಗಿದು ಬೇಸರವಾಯಿತು. ಕಟ್ಟಿ ಮ್ಯಾಲ ಕೂತು ಹರಟಿ ಹೊಡ್ಯೂಹಂಗ ಬರೆಯುವ ಅನನ್ಯ ಪ್ರತಿಭೆ. ನೀವು ವಾರ ವಾರ ಒಂದು ಅಂಕಣ ಶುರುಮಾಡುವುದು ಒಳ್ಳೆಯದು. `ಕೆಂಡಸಂಪಿಗೆ`ಯೊಳಗ ಶುರುಮಾಡಿಕೋರಿ.
ರಾಜ್ಯೋತ್ಸವದಂದು ಕನ್ನಡಾಂಬೆಗೆ ಗೀತ ನಮನ ಮತ್ತು ರುಚಿ ನಮನ. ನಂದ ಕುಮಾರ್ ಅವರ ‘ಕನ್ನಡಮ್ಮನ ಉಳಿಸಿರಿ’ ಎಂಬ ಕವನದ ಪ್ರಾಸ, ಆದಿಪ್ರಾಸ, ಲಯ, ಕನ್ನಡ ಮತ್ತು ಸಂಸ್ಕೃತ ಪದಗಳ ಆಯ್ಕೆಯಿಂದ ಶ್ರೀಮಂತವಾಗಿದೆ. “ಗುಡ್ ಫುಡ್ ಇಸ್ ಪಾರ್ಟ್ ಆಫ್ ಗುಡ್ ಕಲ್ಚರ್” ಅದ್ದುದರಿಂದ ನಮ್ಮ ದಕ್ಷಿಣ ಭಾರತದ/ ಕರ್ನಾಟಕ ಖಾದ್ಯಗಳ ಸವಿರುಚಿಯ ಗುಣಗಾನ ಒಂದು ರೀತಿಯಲ್ಲಿ ನಮ್ಮ ಉತ್ತಮ ಸಂಸ್ಕೃತಿಯ ಗುಣಗಾನ !
ಈ ಲೇಖನವನ್ನು ಓದಿದ ಮೇಲೆ ಹಿಂದೊಮ್ಮೆ ಚೈನ ಪ್ರವಾಸದಲ್ಲಿ, ಮೂರುವಾರ ಅವಧಿಯಲ್ಲಿ ಬರೀ ಅನ್ನ, ಸೊಪ್ಪು ತಿಂದು ಸಾಕಾಗಿದ್ದ ನಮಗೇ ಪ್ರವಾಸದ ಕೊನೆಯಲ್ಲಿ ಹಾಂಗ್ ಕಾಂಗ್ ತಲುಪಿದಾಗ ಅಲ್ಲಿ ಸರ್ವಾಣ ಭವನ ಇರುವುದೆಂಬ ಸುದ್ದಿ ತಿಳಿದೊಡನೆ ಅಂತರ್ಜಲವನ್ನು ಜಾಲಾಡಿ ಅದನ್ನು ಪತ್ತೆ ಹಚ್ಚಿ ಹೋಗಿ ದೋಸೆ ತಿಂದ ನೆನಪು ಮರುಕಳಿಸಿದೆ. ಮರಳು ಗಾಡಿನಲ್ಲಿ ಓಯಸಿಸ್ ಸಿಕ್ಕ ಅನುಭವ. ನಿಮ್ಮ ಬರಹ, ಅಲ್ಲಿ ಪ್ರಸ್ತಾಪಿಸಿರುವ ಖಾದ್ಯದಷ್ಟೇ ರಸವತ್ತಾಗಿದೆ.
’ಅನಿವಾಸಿ’ಯ ಕನ್ನಡ ರಾಜ್ಯೋತ್ಸವ ಸಂಚಿಕೆಯಲ್ಲಿ ಇಬ್ಬರು ಅನಿವಾಸಿಗಳ ಲೇಖನಗಳು. ಲಂಡನ್ನಿನಲ್ಲಿ ಕನ್ನಡದ ಪತಾಕೆಯನ್ನು ಬಹುಕಾಲ ಹಾರಿಸುತ್ತಿರುವ ಮತ್ತೂರು ಮನೆತನದ ನಂದಕುಮಾರರು ಮತ್ತೊಮ್ಮೆ ’ ನೂರುಭಾಷೆಯ ದಾಳಿಯಾಗುವ ಮುನ್ನ ಏಳಿರಿ’ ಅಂತ ಎಚ್ಚರಿಸುತ್ತಿದ್ದರೆ. ಸಿರಿಗನ್ನಡವನ್ನೇ ಬಳಸಿರಿ ಅಂತ ಕೇಳಿಕೊಳ್ಳುತ್ತಿದ್ದಾರೆ ತಮ್ಮ ಗಂಭೀರ ಶೈಲಿಯ ಕವನದಲ್ಲಿ.
ಇತ್ತ ಗೌರಿ ಪ್ರಸನ್ನ ಅವರು ತಮ್ಮ ಮಗರಾಯನ ಮೇಲೊಂದು ನವಿರಾದ ಕಂಪ್ಲೇಂಟು ಜೊತೆಗೆ (ಇದೂ ಒಂದು ”ಉಕಾರದ ಪ್ರಥಮಾ ವಿಭಕ್ತಿ ಪ್ರತ್ಯಯ’’- ಈ ಡೆಫೆನೀಷನ್ -ಉ ನನಗೆ ಬಹಳ ಹಿಡಿಸಿತು!) ಪ್ರಾರಂಭ ಮಾಡಿ, ತಮ್ಮೂರಿನಿಂದ ಶುರು ಮಾಡಿ ಕರ್ನಾಟಕದ ತಮ್ಮ ’ಹೋಟೆಲ್’ ತಿಂಡಿ ಸೇವನೆಯ ಯಾದಿ ಎಲ್ಲಾ ಕೊಟ್ಟು ತಾವು ತಮ್ಮ ತಿಂಡಿ ತೀರಿಸಿ ದೆಹಲಿಗೆ ಹೋಗಿ ಕರ್ನಾಟಿಕ್ ಕೆಫೆಯ ಬಾಯಲ್ಲಿ ನೀರು ತರುವ ಮೆನುವಿನ ಕಾಪಿಯನ್ನೇ ಹಾಕಿ ನಮಗೆ ಹೊಟ್ಟೆ ಕಿಚ್ಚು, ನೋಸ್ಟಾಲ್ಜಿಯಾ ಎಲ್ಲ ಹುಟ್ಟಿಸಿದ್ದಾರೆ. ಅದರಲ್ಲಿ ಮಲ್ಲೇಶ್ವರಂ 18th Cross ದೋಸೆ ಮತ್ತು Manina maga ದೋಸೆ (ಅಲ್ಲಿಯ ಮಣ್ಣಿನ ಗುಣದ ಸ್ಪೆಲ್ಲಿಂಗ್ ದೋಷ ಬಿಡಿ) ಇವೆರಡು ನನ್ನ ಗಮನ ಸೆಳೆದವು. ಬಡೇಸೊಪ್ಪಿನ ಕೆಳಗಿನ ಬಿಲ್ಲು -ಇಷ್ಟೇನಾ?- ಪೂರ್ತಿ ಕಾಣಿಸಲಿಲ್ಲ. ಇಲ್ಲಾಂದರೆ ನಾವು ಇಲ್ಲಿಗೆ ಬಂದ ಹೊಸತರಲ್ಲಿ ಎಷ್ಟು ದುಬಾರಿ ಬೆಲೆ ತೆತ್ತು ಕಿಂಗ್ಸ್ ಕ್ರಾಸ್ ಪಕ್ಕದ ’ಹೋಟೆಲ್’ನಲ್ಲಿ ಎಪ್ಪತ್ತರ ದಶಕದಲ್ಲಿ ತಿಂದ ಮೊದಲ ಸೌಥ್ ಇಂಡಿಯನ್ ತಿಂಡಿಯ ನೆನಪಾಗಿ ಹೊಟ್ಟೆ ಇನ್ನೂ ಉರಿಯುತ್ತಿತ್ತು! ಆದಿಯಲ್ಲೇಓಬಿರಾಯನ ಕಾಲದ ಹದಿನೈದು ಪೈಸಾ ಟಪಾಲಿನ ತಿಕೀಟಿನ ಚಿತ್ರ ಮತ್ತು ರಾಮನಾಮ ಸಕ್ಕರೆಯ ಉಲ್ಲೇಖ ಖುಷಿ ಕೊಟ್ಟಿತು. ಇನ್ನೂ ಎರಡು ತಿಂಗಳ ಕಾಯಬೇಕು ಗೌರಿಯವರು ಸಂಪಾದಿಸುವ ಮುಂದಿನ ಲೇಖನಕ್ಕೆ?
ನೋಡಿರಿ ನೋಡಿರಿ ಕನ್ನಡದಳಿಯನ
ಮಂತ್ರಿಯ ಪಟ್ಟವನೇರಿದ ಧೀರನ
ಡೌವ್ನಿಂಗ್ ರಸ್ತೆಯ ಒಡೆಯನು ಈತ
ಕರುನಾಡಿನ ಹೆಮ್ಮೆಯ ಕಿರೀಟ
ನೋಡಿರಿ ನಮ್ಮ ಅಕ್ಷತಾಳ ಆತಿಥ್ಯ
ಜೋಳದ ಬಕರೀ ತಗೋರಿ ಅತ್ಯಾ !
ಸತ್ಕರಿಸುವಳು ತೋರಿ ಪ್ರೀತಿಯ
ಇಂಗ್ಲೆಂಡಲಿ ನಡೆವುದು ಅದ್ಭುತ ರಾಜಾಭಿಷೇಕ
ಆಳಿದವರನ್ನೇ ಆಳುವನು ರಿಷಿ ಸುನಾಕ
ಕೀರ್ತಿ ಯಶಸ್ಸು ಇವರದಾಗಲಿ
ಹರಸೋಣ ಬನ್ನಿ ಒಕ್ಕೊರಲಲಿ

– ಕೇಶವ
LikeLike

LikeLiked by 1 person

Celebrating Rajyotsava with *ರಿಷಿ ಮಹಾರಾಜ*
ನೋಡಿರಿ ನೋಡಿರಿ ಕನ್ನಡದಳಿಯನ
ಮಂತ್ರಿಯ ಪಟ್ಟವನೇರಿದ ಧೀರನ
ಡೌವ್ನಿಂಗ್ ರಸ್ತೆಯ ಒಡೆಯನು ಈತ
ಕರುನಾಡಿನ ಹೆಮ್ಮೆಯ ಕಿರೀಟ
ನೋಡಿರಿ ನಮ್ಮ ಅಕ್ಷತಾಳ ಆತಿಥ್ಯ
ಜೋಳದ ಬಕರೀ ತಗೋರಿ ಅತ್ಯಾ !
ಸತ್ಕರಿಸುವಳು ತೋರಿ ಪ್ರೀತಿಯ
ಇಂಗ್ಲೆಂಡಲಿ ನಡೆವುದು ಅದ್ಭುತ ರಾಜಾಭಿಷೇಕ
ಆಳಿದವರನ್ನೇ ಆಳುವನು ರಿಷಿ ಸುನಾಕ
ಕೀರ್ತಿ ಯಶಸ್ಸು ಇವರದಾಗಲಿ
ಹರಸೋಣ ಬನ್ನಿ ಒಕ್ಕೊರಲಲಿ
LikeLiked by 1 person