ಕೃಷ್ಣಾ ನೀ ಬೇಗನೆ ಬಾರೋ  

  • ರಾಂ

ಪ್ರಾಚೀನವೂ ಪ್ರಬುದ್ಧವೂ ಆದ ಭಾರತೀಯ ನಾಟ್ಯ ಪದ್ಧತಿಯ ವೃಕ್ಷದ ಶಾಖೆಗಳು ಹಲವು.  ದಕ್ಷಿಣ ಭಾರತದಲ್ಲೇ ಭಾರತ ನಾಟ್ಯ, ಕುಚಿಪುಡಿ ಹಾಗೂ ಮೋಹಿನಿ ಅಟ್ಟಂ ಎಂಬ ಮೂರು ಪ್ರಮುಖ ಪ್ರಕಾರಗಳನ್ನು ಕಾಣುತ್ತೇವೆ. ವಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಭಾರತೀಯ ನೃತ್ಯ ಪದ್ಧತಿಯ ಪರಿಚಯವಾಗುವುದು ಸುಲಭವಲ್ಲ. ಪರಿಚಯವಾದರೂ ಅದರಲ್ಲಿ ತರಬೇತಿಗೆ ಸಿಗುವ ಅವಕಾಶ ಕಡಿಮೆ. ಅವಕಾಶ ಸಿಕ್ಕರೂ ಅದರ ಪ್ರಯೋಜನ ಪಡೆದುಕೊಳ್ಳಲು ಹಲವಾರು ಅಡೆತಡೆಗಳು ಬರುವುದು ಸಹಜ, ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಿಕ್ಕ ಅವಕಾಶದ ಸದುಪಯೋಗ ಪಡೆದುಕೊಂಡು, ಪರಿಣತಿ ಪಡೆದ ಯುವತಿಯ ಪರಿಚಯ ಮಾಡಿಕೊಡುವ ಸುಯೋಗ ನನ್ನದು. ರಂಗಪ್ರವೇಶದ ಒಂದು ವಿಡಿಯೋ ತುಣುಕು, ಮನಮೋಹಕ ಸಂಗೀತದ ಧ್ವನಿಮುದ್ರಿಕೆಯನ್ನು ಕೂಡ ನಿಮ್ಮೊಡನೆ ಹಂಚಿಕೊಳ್ಳಲಾಗಿದೆ. ಒಟ್ಟಂದದಲ್ಲಿ ನಿಮಗೆ ಕಾರ್ಯಕ್ರಮದ ಒಳ ನೋಟ ಕೊಡುವ ಪ್ರಯತ್ನವಿದು.

ಅಭಿನಯ ಪ್ರಧಾನವಾದ ಕುಚಿಪುಡಿ ನೃತ್ಯ ಪ್ರಕಾರದಲ್ಲಿ ಹಲವಾರು ವರ್ಷ ತರಬೇತಿ ಪಡೆದು, ಪರಿಣತಿಯನ್ನು ಹೊಂದಿ ರಂಗಪ್ರವೇಶ ಮಾಡಿರುವ ಅದಿತಿಯ ರಂಗ ಪ್ರವೇಶದ ಒಲ್ಮೆಯ ಆಮಂತ್ರಣ ಕೈ ಸೇರಿದಾಗ ಆದ ಸಂತೋಷ, ಹೆಮ್ಮೆ; ಕನ್ನಡತಿ, ಅನಿವಾಸಿ ಬಳಗದ ಲಕ್ಷ್ಮೀನಾರಾಯಣ ಗುಡೂರ್ ಅವರ ಮಗಳು ಎಂದರೆ KSSVVಯ ಹೊಸ ಚಿಗುರು, ಬಾಲ್ಯದಿಂದ ಕಂಡ ಸಿರಿ ಎಂಬ ಹಲವು ಮಟ್ಟದ್ದಾಗಿತ್ತು. 

ಐದು ವರ್ಷದ ಅದಿತಿ ಮೊದಲ ದಿನ ನೃತ್ಯ ಕಲಿಯಲು ಹೋದಂದು ತೋರಿದ ಉತ್ಸಾಹ ಗುಲಗಂಜಿಯಷ್ಟೂ ಬತ್ತಿಲ್ಲ ಎಂದು ಅದಿತಿಯ ಅಮ್ಮ ವಿದ್ಯಾ ಹೇಳಿದ ವಿಷಯ ಅದಿತಿಯ ಶಬ್ದಗಳಲ್ಲೂ ಪ್ರತಿಧ್ವನಿಸುತ್ತದೆ. ಶಾಸ್ತ್ರೀಯ ನೃತ್ಯ ಕಷ್ಟಕರವಾದರೂ ತನ್ನನ್ನು ಪರಿಚಯಿಸಿದ್ದಕ್ಕೆ ಅದಿತಿ ಸದಾ ತನ್ನ ತಾಯಿಗೆ ಕೃತಜ್ಞಳು. ನೃತ್ಯವಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದುದು ಅಸಾಧ್ಯವೆಂದು ಹೇಳುತ್ತಾಳೆ. ನೃತ್ಯ ಇಂದು ಅದಿತಿಗೆ ತನ್ನ ಬಾಲ್ಯದ ಸಾಕಾರ ರೂಪ, ತನ್ನನ್ನೇ ಅರಿಯಲು ಸಿಕ್ಕ ಅವಕಾಶ, ಭಾರತೀಯ ಸಂಸ್ಕೃತಿಗೆ ಸಂಪರ್ಕ ಕಲ್ಪಿಸಿದ ಸೇತು. ಇವು ಕೇವಲ ಸಂದರ್ಶನಕ್ಕೆ ಬಳಸಿದ ಪೊಳ್ಳು ಶಬ್ದಗಳಲ್ಲ, ಹೃದಯಾಳದಿಂದ ಹೊಮ್ಮಿದ ಅಪ್ಪಟ ಭಾವನೆಗಳೆಂಬುದು ಆಕೆಯ ನೃತ್ಯ ಪ್ರದರ್ಶನ ನೋಡಿದವರೆಲ್ಲರಿಗೂ ಅನಿಸಿದ್ದರೆ ಆಶ್ಚರ್ಯವಲ್ಲ. 

 ರಂಗಪ್ರವೇಶದಂದು ಹಬ್ಬದ ವಾತಾವರಣವಿತ್ತು. ಅದಿತಿಯ ನರ್ತನ ಭಂಗಿಯ ಚಿತ್ರ ಅತಿಥಿಗಳನ್ನು ಸ್ವಾಗತಿಸುತ್ತಿದ್ದರೆ, ಅವರ ದಾಹ ನಿವಾರಣೆಗೆ ನೀರು-ಬೆಲ್ಲ ಸಾಂಪ್ರದಾಯಿಕ ಮೆರುಗನ್ನು ನೀಡುತ್ತಿದ್ದವು. ಸಮಯಕ್ಕೆ ಸರಿಯಾಗಿ, ಪದ್ಧತಿಯಂತೆ ಗಣಪತಿ, ನಂತರ ಅರ್ಧನಾರೀಶ್ವರನ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುರಂದರ ದಾಸರ “ಗಜವದನಾ ಬೇಡುವೆ” ಭಜನೆ ರಂಗಪ್ರವೇಶದ ಮೊದಲ ನೃತ್ಯವಾಗಿದ್ದು ಮಾತೃಭಾಷೆಯಾದ ಕನ್ನಡದವನ್ನು ಸರಾಗವಾಗಿ ಬಳಸಬಲ್ಲ ಅದಿತಿಯ ಕನ್ನಡ ಪ್ರೇಮಕ್ಕೆ ದ್ಯೋತಕವಾಗಿತ್ತು. ಕುಚಿಪುಡಿ ಪದ್ಧತಿಗೆ ವಿಶೇಷವಾದ ತಟ್ಟೆಯ ಮೇಲೆ ನಿಂತು ತಲೆಯ ಮೇಲೆ ತಂಬಿಗೆಯನ್ನಿಟ್ಟುಕೊಂಡು ಮಾಡುವ “ತರಂಗಂ” ನೃತ್ಯದ ತಾಂತ್ರಿಕತೆ ವೀಕ್ಷಕರನ್ನು ಮೋಡಿ ಮಾಡಿತು. 

“ಕೃಷ್ಣಾ ನೀ ಬೇಗನೆ ಬಾರೋ” ಚಿಕ್ಕಂದಿನಿಂದಲೂ ನನ್ನ ಮೆಚ್ಚಿನ ಭಜನೆಗಳಲ್ಲೊಂದು. ವಂಶಿಕೃಷ್ಣರ ಹಾಡುಗಾರಿಕೆ ಪದ್ಯದ ಭಾವವನ್ನು, ವಾತಾವರಣವನ್ನು ಸೃಷ್ಟಿಸಿದರೆ; ಅದಿತಿಯ ಮನಮೋಹಕ ಭಾವಪೂರ್ಣ ಅಭಿನಯ ಯಶೋದೆಯ ಮಾತೃತ್ವ, ಕೃಷ್ಣನ ತುಂಟತನಗಳನ್ನು ನಮ್ಮ ಮುಂದೆ ಮೂರ್ತಗೊಳಿಸಿದ್ದಲ್ಲದೆ, ಮಂತ್ರಮುಗ್ಧರನ್ನಾಗಿಸಿತು. ತನ್ನ ಅಚ್ಚು ಮೆಚ್ಚಿನ ಭಜನೆಯನ್ನು ನಮ್ಮ ಮುಂದೆ ಸಾಕಾರಗೊಳಿಸಿದ ಯಶಸ್ಸಿಗೆ ತನ್ನ ಬದುಕಿನ ಅನುಭವಗಳೇ ಸ್ಫುರ್ತಿಯೆನ್ನುತ್ತಾಳೆ ಅದಿತಿ.  ತನ್ನ ತಂಗಿಯ ತುಂಟತನದಲ್ಲಿ ಕೃಷ್ಣನ ತುಂಟತನವನ್ನು ಕಾಣುವ ಅದಿತಿ, ಎಲ್ಲ ವಯಸ್ಸಿನವರಿಗೂ, ಕಾಲಕ್ಕೂ ಅನ್ವಯವಾಗುವ ಕೃಷ್ಣನ ವ್ಯಕ್ತಿತ್ವ ತನಗೆ ಅಪ್ಯಾಯಮಾನ ಎನ್ನುತ್ತಾಳೆ. ಅವಳ ನಾಟ್ಯ-ನಟನಾ ಪರಿಣತಿ ಸಂಪೂರ್ಣವಾಗಿ ಈ ನೃತ್ಯದಲ್ಲಿ ಅಭಿವ್ಯಕ್ತವಾಗಿತ್ತು. ಅಂದು ನಿಸ್ಸಂದೇಹವಾಗಿ “ಕೃಷ್ಣ ನೀ ಬೇಗನೆ ಬಾರೋ” ಸಭಿಕರೆಲ್ಲರ ಮೆಚ್ಚಿನ ನೃತ್ಯವಾಗಿತ್ತೆಂಬುದು ಕರತಾಡನದಲ್ಲೇ ಅರ್ಥವಾಗಿತ್ತು.

“ಕಾಮಾಕ್ಷಿ ಸ್ತುತಿ” ಹಾಗೂ “ನಮೋ ನಮೋ  ಲಕ್ಷ್ಮೀ ನರಸಿಂಹ” ನೃತ್ಯಗಳಲ್ಲಿ ಬರುವ ಭಕ್ತಿ, ಶೃಂಗಾರ, ಶಾಂತ, ಕ್ರೋಧ, ಭಯ, ಕರುಣಾ ರಸಗಳ ಪ್ರದರ್ಶನ ಅದಿತಿಯ ನಟನಾ ಪ್ರಬುದ್ಧತೆಗೆ ದ್ಯೋತಕವಾಗಿದ್ದವು. ಅಂತ್ಯದಲ್ಲಿ ಪ್ರದರ್ಶಿಸಿದ ವೇಗ ಪ್ರಧಾನವಾದ ತಿಲ್ಲಾನ ವೀಕ್ಷಕರನ್ನು ಸಂತೃಪ್ತಿಯ ಶಿಖರಕ್ಕೇರಿಸಿತ್ತು. 

ಅದಿತಿಯ ಪ್ರತಿಭೆಗೆ ಪುಟ ಕೊಟ್ಟು ಬೆಳಗಿಸಿದ ಗುರು ಅಭಿನಂದನಾ ಕೋದಂಡ ಅವರ ಅಪಾರ ಪರಿಶ್ರಮದ ಅರಿವು ನಮಗೆ ಅಂದಿನ ಪ್ರದರ್ಶನದಲ್ಲಾಯಿತು. ಪ್ರಾರಂಭದಿಂದಲೇ ಅದಿತಿಯ ಪ್ರತಿಭೆಯನ್ನು ಗುರುತಿಸಿ, ಅವಕಾಶ ಕೊಟ್ಟು ಬೆಳೆಸಿದ ಹಿರಿಮೆ ಅವರದ್ದು. ರಂಗಪ್ರವೇಶದ ಯಶಸ್ಸಿಗೆ ಹಿಮ್ಮೇಳದ ಕೊಡುಗೆ ಸರಿಸಮನಾಗೇ ಇರುವುದು ಅತ್ಯವಶ್ಯ. ವಂಶಿಕೃಷ್ಣ ವಿಷ್ಣುದಾಸ್ ಒಬ್ಬ ಅದ್ಭುತ ಹಾಡುಗಾರ ಎಂಬ ಅನುಭವ ಅಂದು ನಮಗಾಯಿತು. ವಿಜಯವೆಂಕಟ್ ಕೊಳಲು ವಾದನದಿಂದ ಕೃಷ್ಣನ ಮೋಡಿ ಹಾಕಿದ್ದರು ಸಭಿಕರ ಮೇಲೆ. ಪ್ರತಾಪ್ ರಾಮಚಂದ್ರರ ಮೃದಂಗ ವಾದನಕ್ಕೆ ವೀಕ್ಷಕರು ಕುಳಿತಲ್ಲೇ ಹೆಜ್ಜೆ ಹಾಕಿದ್ದರು ಕಾರ್ಯಕ್ರಮದುದ್ದ. 

ತನ್ನ ನೃತ್ಯ ಪ್ರಯಾಣದ ಹಾದಿಯಲ್ಲಿ ಹಲವು ಗೆಳೆಯರನ್ನು ಪಡೆದಿರುವ ಅದಿತಿಗೆ ಇಂದು ನೃತ್ಯ ಜೀವನದ ಅಂಗವಾಗಿದೆ, ತನ್ನ ಭಾವನೆಗಳ ಅಭಿವ್ಯಕ್ತಿಗೆ ಸಾಧನವಾಗಿದೆ. ಕಲೆ ಆಕೆಗೆ ಜೀವನಾನುಭವಗಳ ಕಿಟಕಿ ತೆರೆಯುವ ಮಾಧ್ಯಮ.  ರಂಗಪ್ರವೇಶಕ್ಕೆ ಹಾರೈಸಲು ಬಂದವರನ್ನು, ಅನಾಥ ಮಕ್ಕಳ ಬದುಕನ್ನು ರೂಪಿಸಲು ಹಲವು ವರ್ಷಗಳಿಂದ ನಿರತವಾಗಿರುವ ಚಾಮರಾಜಪೇಟೆಯ ದೀನಬಂಧು ಸಂಸ್ಥೆಗೆ ಕೈಲಾದಷ್ಟು ದಾನ ಮಾಡಿರೆಂಬ ಅದಿತಿಯ ವಿನಂತಿ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗನ್ನು ನೀಡಿತು. 

ವಿಡಿಯೋ ಕೃಪೆ: ಶ್ರೀಮತಿ ಶಾಂತಾ ರಾವ್, ಅನ್ನಪೂರ್ಣ ಇಂಡಿಯನ್ ಡಾನ್ಸ್ ಅಕ್ಯಾಡೆಮಿ, ಯುಕೆ.

**************************************************************************

3 thoughts on “ಕೃಷ್ಣಾ ನೀ ಬೇಗನೆ ಬಾರೋ  

  1. ಅದಿತಿಯ ರಂಗಪ್ರವೇಶದ ಬಗೆಗಿನ ಬರಹದಲ್ಲಿ ಆತ್ಮೀಯತೆಯಿದೆ, ಪ್ರಶಂಸೆಯಿದೆ, ಧನ್ಯತೆಯೂ.

    ಈ ವರ್ಷ ನನಗೇ ಪರಿಚಯವಿರುವ ಎರಡನೇ ತಲೆಮಾರಿನ ಮೂವರು ಹುಡುಗಿಯರು ರಂಗಪ್ರವೇಶ ಮಾಡಿದ್ದಾರೆ ಎಂದರೆ ಭಾರತೀಯ ನೃತ್ಯಪ್ರಕಾರಗಳನ್ನು ಕಲಿಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಅನಿಸುತ್ತದೆ.

    ಬಹಳಷ್ಟು ಕಲಾಪ್ರಕಾರಗಳನ್ನು ಪಿತೃಗಳ ಒತ್ತಡಕ್ಕೆ ಕಲಿಯಲು ಶುರುಮಾಡುವ ಮಕ್ಕಳು ತಮಗಿಷ್ಟವಾದ ಕಲೆಯನ್ನು ಕಂಡುಕೊಳ್ಳಲು ತಡಮಾಡುವುದಿಲ್ಲ. ಬರೀ ಪ್ರತಿಭೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ, ನಿರಂತರ ಪರಿಶ್ರಮ ಮತ್ತು ಸತತ ಸಾಧನೆಯಿಂದ ಮಾತ್ರ ಎನ್ನುವುದನ್ನು ದೇಶದಿಂದ ದೂರವಿದ್ದರೂ ರಂಗಪ್ರವೇಶ ಮಾಡಿದ ಅದಿತಿಯೇ ನಿದರ್ಶನ.

    ರಾಂ ಲೇಖನ ಚೆನ್ನಾಗಿ ಇದನ್ನೆಲ್ಲ ಸೆರೆ ಹಿಡಿದಿದೆ.

    – ಕೇಶವ

    Like

  2. ರಾಮ್ ಅದಿತಿಯ ರಂಗ ಪ್ರವೇಶದ ಪರಿಚಯ ಮಾಡಿಸಿದ ನಿಮಗೆ ವಂದನೆಗಳು. ವಿದೇಶದಲ್ಲಿ ಹುಟ್ಟಿ ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿಯನ್ನು ಪಡೆದು ಕೂಚುಪುಡಿ ನೃತ್ಯವನ್ನು ಕಲಿತಿರುವ ಅದಿತಿಯ ಪ್ರಯತ್ನ ಶ್ಲಾಘನೀಯ. ತಾನು ಬೆಳೆಯುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರವಾಹದಲ್ಲಿ ಕೊಚ್ಚಿ ಹೋಗದೆ ತನ್ನ ಸಾಂಪ್ರದಾಯಿಕ ಹಿನ್ನೆಲೆಗಳ ಮಹತ್ವವನ್ನು ಅರಿತುಕೊಂಡು, ಉಳಿಸಿ ಮತ್ತು ಬೆಳೆಸಿಕೊಂಡು ಬಂದಿರುವ ಅದಿತಿ ಇಲ್ಲಿ ಇರುವ ಅನಿವಾಸಿ ಭಾರತೀಯರಿಗೆ ಆದರ್ಶಪ್ರಾಯಳಾಗಿದ್ದಾಳೆ. ಅವಳ ಆಸಕ್ತಿ ಮತ್ತು ಶ್ರದ್ಧೆ ಎದ್ದು ತೋರುತ್ತದೆ. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ಚ್ಯಾರಿಟಿ ಹಣವನ್ನು ಅನಾಥ ಮಕ್ಕಳ ‘ದೀನಬಂಧು’ ಸಂಸ್ಥೆಗೆ ಮುಡಿಪಾಗಿಟ್ಟಿದ್ದು ಅದು ಅವಳ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. ಅವಳು ಕಳೆದ ಬೇಸಿಗೆ ರಜದಲ್ಲಿ ಇಂಡಿಯಾ ಪ್ರವಾಸದಲ್ಲಿ ದೂರದ ಚಾಮರಾಜ ನಗರಕ್ಕೆ ಖುದ್ದಾಗಿ ಹೋಗಿ, ಅಲ್ಲಿ ಅನಾಥ ಮಕ್ಕಳನ್ನು ಭೇಟಿಮಾಡಿ ಬಂದಿದ್ದಳು ಎಂಬುದನ್ನು ಇಲ್ಲಿ ಪ್ರಸ್ತಾಪಿಸುವುದು ಉಚಿತ. ಅದಿತಿ ಇನ್ನು ಎತ್ತರಕ್ಕೆ ಬೆಳೆಯಲಿ ಮತ್ತು ಇನ್ನು ಹೆಚ್ಚಿನ ಚ್ಯಾರಿಟಿ ಕಾರ್ಯವನ್ನು ಕೈಗೊಳ್ಳಲ್ಲಿ ಎಂದು ಆಶಿಸೋಣ. ಅವಳಿಗೆ, ಮತ್ತು ಅವಳ ಪ್ರತಿಭೆಯನ್ನು ಆಶೋತ್ತರಗಳನ್ನು ಪೋಷಿಸಿದ ತಂದೆ ತಾಯಿ ಡಾ. ಗುಡೂರ್ ದಂಪತಿಗಳಿಗೆ, ಮತ್ತು ಮಾರ್ಗದರ್ಶನ ನೀಡಿದ ಗುರುಗಳಿಗೆ ಅಭಿನಂದನೆಗಳು.

    Like

  3. ಸ್ವದೇಶದಿಂದ ದೂರ ಬಂದ ಎಲ್ಲ ತಂದೆತಾಯಿಗಳಿಗೂ ಮಗಳಿಗೆ ತಮ್ಮ ಸಂಸ್ಕೃತಿಯ ಪರಿಚಯಿಸಲು ನೃತ್ಯ ಕಲಿಸುವದು ಅಪರೂಪವಲ್ಲ . ಅದನ್ನು ಆಸ್ಥೆ, ಶ್ರದ್ಧೆಯಿಂದ ಮುಂದುವರೆಸಿಕೊಂಡು ಹೋಗುವವರು ಕಡಿಮೆ. ಅದರಲ್ಲೂ ರಂಗಪ್ರವೇಶ ಮಾಡುವವರು ಇನ್ನೂ ಕಡಿಮೆ. ಆ ಸಂದರ್ಭದಲ್ಲಿ ತನ್ನ ಪ್ರತಿಭೆಯಿಂದ ಪ್ರೇಕ್ಷಕರಿಂದ ಬಾಯಿಯ ಮೇಲೆ ಬೆರಳಿಡಿಸುವವರು ಒಂದೋ ಎರಡೋ ಮಕ್ಕಳು. ಆದರೆ ಅದಿತಿಯ ಕಣ್ಣಲ್ಲಿ , ಪ್ರತಿ ಹೆಜ್ಜೆಯಲ್ಲಿ , ಮುದ್ರೆಯಲ್ಲಿ ಕಾಣುವ ಆ ಆತ್ಮವಿಶ್ವಾಸ, ಉತ್ಸಾಹಗಳನ್ನೂ ಕಾಣಲು ಆ ಯೂಟ್ಯೂಬ್ ತುಣುಕು ಅಷ್ಟೇ ಅಲ್ಲ, ಆ ದಿನ ಅದನ್ನು ವೀಕ್ಷಿಸಿದ ನೃತ್ಯ ಪಟು ಶಿಕ್ಷಕಿಯ ವರದಿಯಿಂದಲೂ ಅರಿತಿದ್ದೆ. ಅನ್ನ ಬೆಂದಿದೆಯೇ ನೋಡಲು ಒಂದಗಳು ಸಾಲದೇ? ಆಕೆಗೆ ಒಳ್ಳೆಯ ಗುರು ಸಿಕ್ಕಿದ್ದಾರೆ. ತನ್ನ ‘ಬೆಂಜಿನ’ ಲೋಗೋಯುಕ್ತ ಕಾರ್ಟೂನಿನಿಂದ ಅನಿವಾಸಿಗೆ ಈಗಾಗಲೆ ಪರಿಚವಾದ ಅದಿತಿ ಮತ್ತೊಮ್ಮೆ ತನ್ನ ನೃತ್ಯದಿಂದ ಮರು ಪರಿಚಯವಾಗುತ್ತಿರುವದು ಹೆಮ್ಮೆಯ ಸಂಗತಿ. ಆಕೆಗೆ, ಮತ್ತು ಇನ್ನೂ ಉನ್ನತೋನ್ನತ ಪ್ರಗತಿಗೆ ಶುಭ ಕೋರುವೆ. ಬರಹ, ಶ್ರವಣ ಮತ್ತು ದೃಶ್ಯದಿಂದ ಪರಿಚಯಿಸಿದ ರಾಮ್, ಗುಡೂರ್ ಶಾಂತಾ ಅವರಿಗೂ ಧನ್ಯವಾದಗಳು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.