ಈ ವಾರ ನಾನು ಬರೆದ ಐದು ಕವನಗಳಿವೆ. ವಿಭಿನ್ನ ರೀತಿಯ ಪ್ರಯತ್ನದ ಕವನಗಳು ಎಂದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ಮರೆಯಬೇಡಿ. ಇಲ್ಲಿರುವ ಎಲ್ಲ ಚಿತ್ರಗಳನ್ನು ಬರೆದದ್ದು ಕೃತಕ ಬುದ್ಧಿಮತ್ತೆ (AI)! – ಕೇಶವ ಕುಲಕರ್ಣಿ
ಸ್ಕ್ರಿಪ್ಟ್

ನನಗೆ ಬೇಕಾದಂತೆ
ನನ್ನ ಬದುಕಿನ ಸ್ಕ್ರಿಪ್ಟ್ ಬರೆಯಬೇಕು
ಆದರೆ ನನ್ನೊಳಗಿನ ಕತೆಗಾರನ ಪಕ್ಕದಲ್ಲಿ
ಕೂತಿದ್ದಾನೆ ನಿರ್ಮಾಪಕ
He needs a hit.
BLOCK BUSTER!
M-O-N-E-Y-S-P-I-N-N-E-R !!
ಹೇಳುತ್ತಾನೆ ಕತೆಗಾರನಿಗೆ,
“ನಿನ್ನಂತೆ ಬರೆದರೆ
ಒಂದೇ ಒಂದು ಥೇಟರು ಸಿಗುವುದಿಲ್ಲ
ಸಿಕ್ಕರೂ ಎರಡನೇ ದಿನ ನೊಣ ಹೊಡೆಯಲೂ ಜನ ಸಿಗುವುದಿಲ್ಲ
ಅವಾರ್ಡು ಬರುತ್ತೆ ಅನ್ನುತ್ತೀಯಾ?
ಆ ಕಾಲವೂ ಮುಗಿಯಿತಯ್ಯಾ
ಅಲ್ಲಿ ಕೂತವರೂ ನನ್ನಂಥವರೇ
ನಿನ್ನ ಭಾಷೆ ನಮಗೆ ಅರ್ಥವಾಗುವುದಿಲ್ಲ
ಅಪ್ಪಿ ತಪ್ಪಿ ಅವಾರ್ಡು ಬಂತು ಅಂದುಕೋ
ಹೊಟ್ಟೆಗೆ ಏನು ಮಾಡ್ತೀಯಾ?
ಹಾಕಿದ ದುಡ್ಡು ಹೇಗೆ ವಾಪಸ್ಸು ತೆಗೀತೀಯಾ?
ಮಾಡಿದ ಸಾಲ ಹೇಗೆ ತೀರಸ್ತೀಯಾ?”
ಕತೆಗಾರ ಬರೆಯುತ್ತಿದ್ದಾನೆ
ನಿರ್ಮಾಪಕ ಹೇಳಿದಂತೆ…
ಪೆಂಡಾಲು ಕಟ್ಟುವ ಹುಡುಗ

ಕತ್ತಲಿನ ಕೊಳಕಲ್ಲಿ ಚರಂಡಿ ಗಲ್ಲಿಗಳಲ್ಲಿ ಚಿಂದಿ ಬಟ್ಟೆಗಳಲ್ಲೇ ಬೆಳೆದ ನನ್ನ
ಕಾಯಿಸಿದೆ ಪ್ರೀತಿಸಿದೆ ಚುಂಬಿಸಿದೆ ಕಾಮಿಸಿದೆ ನಿನ್ನ ಪ್ರೀತಿಗೆ ನನ್ನೇ ಎರಕಹೊಯ್ದೆ
ರದ್ದಿಹಾಳೆಯ ಖಾಲಿ ಜಾಗಗಳ ಮೂಲೆಯಲಿ ನಿನ್ನದೇ ಕನಸುಗಳ ಕವಿತೆಗಾಗಿ
ಬರೆದ ಪದಗಳ ಮೇಲೇ ಪದಗಳನು ಬರೆಬರೆದು ಹಾಳೆಹರಿದಿತ್ತು ಮಸಿಯ ನುಂಗಿ
ನಿನ್ನ ಪ್ರೀತಿಗೆ ನನ್ನ ಮಾತುಗಳ ಮುತ್ತುಗಳು, ನುಣುಪು ಕೊರಳಿಗೆ ನನ್ನ ತೋಳು ಸರಮಾಲೆ
ನಿನ್ನ ಪ್ರೇಮದ ಮದಕೆ ನಾ ಮದಿರೆಯಾದೆ, ನಿನ್ನಿಷ್ಟದಂತೆ ನಾ ಎಲ್ಲ ಮುಚ್ಚಿಟ್ಟೆ
ನನ್ನ ಬಳಿಯಿದ್ದ ಹಣ ವಿದ್ಯೆ ಜಾತಿಗಳಿಂದ ನಿಮ್ಮಪ್ಪ ಬಗ್ಗುವುದೇ ಇಲ್ಲವೆಂದು…
ಅವರಿವರ ಬಳಿಯಿದ್ದ
ಅವುಗಳನ್ನು ಗಳಿಸಲು
ಏನನ್ನೂ ಕದಿಯಲಿಲ್ಲ
ಬಾಗಿಸಲಿಲ್ಲ ಬೆನ್ನನ್ನು
ಮಂಡೆಯೂರಿ ಬಿಕ್ಕಿ ಬೇಡಲಿಲ್ಲ
ಗೋಗೆರೆಯಲಿಲ್ಲ, ಅಳಲಿಲ್ಲ, ಕನಿಕರವ ಬೇಡಲಿಲ್ಲ
ನೀನದನ್ನು ಸೊಕ್ಕಾದರೂ ಅನ್ನು
ತಿಕ್ಕಲುತನವಾದರೂ ಅನ್ನು
ನಿನ್ನ ಮದುವೆಯ ದಿನ
ಯಾವ ಮುಜುಗರವಿಲ್ಲದೇ ಪೆಂಡಾಲು ಕಟ್ಟಿದ್ದೇನೆ
’ಎಲ್ಲ ಮಾನವ ನಿರ್ಮಿತ, ಇದೆಲ್ಲ ಮಾಯೆ’
ಎನ್ನುವ ನಿಮ್ಮಪ್ಪನ ವೇದಾಂತ
ಮಾಡಿದ ಕೆಲಸಕ್ಕೆ ದುಡ್ಡು ಎಣಿಸುವಾಗ ಚೌಕಾಸಿಗಿಳಿದಿತ್ತು
ಅದೇ ಮೊಟ್ಟಮೊದಲ ಬಾರಿಗೆ
ನಾನು ಮುಖವನೆತ್ತಿ ನಿಮ್ಮಪ್ಪನ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು
ಮುಖಕ್ಕೆ ಉಗಿದು ಬಾಯಿ ಒರೆಸಿಕೊಂಡಿದ್ದು
ನಮ್ಮ ಮನೆಯ ನಾಯಿ

ನಮ್ಮ ಮನೆಯ ನಾಯಿ
ಅಂಗಳದಲ್ಲಿ
ಬಿಸಿಲನ್ನು ಕಾಯಿಸಿಕೊಳ್ಳುತ್ತ
ನೆರಳಿನ ಜೊತೆ ಜಗಳವಾಡುತ್ತ
ಕಿವಿ ಕೆರೆದುಕೊಳ್ಳುತ್ತ
ಮುಚ್ಚಿದ ಗೇಟಿನವರೆಗೂ ಓಡುತ್ತ
ಮತ್ತೆ ತಲಬಾಗಿಲವರೆಗೂ ತೇಗುತ್ತ
ನಾಲಗೆಯಿಂದ ಮೈಯನ್ನೆಲ್ಲ ನೆಕ್ಕಿಕೊಳ್ಳುತ್ತ
ಆಗಾಗ ಆಕಳಿಸಿತ್ತ, ಮೈಮುರಿಯುತ್ತ, ಮೈಕೊಡವುತ್ತ
ಇರಲು
ಆಚೆ ಓಣಿಯ ಬೀದಿನಾಯೊಂದು
ನಮ್ಮ ಮನೆ ಮುಂದಿನ ರಸ್ತೆಯಲಿ
ವಯ್ಯಾರದಲ್ಲಿ ಬರುತ್ತಿರುವ
ವಾಸನೆ ಮೂಗಿಗೆ
ಬಡಿದದ್ದೇ
ಈ ನಮ್ಮ ನಾಯಿ
ತಲೆಯೆತ್ತಿ
ಕಿವಿ ನಿಮಿರಿಸಿ
ಬಾಲ ನಿಗುರಿಸಿ
ಗೇಟಿನವರೆಗೂ ಧಡಪಡಿಸಿ
ಇಸ್ಟಗಲ ಬಾಯಿ ತೆರೆದು
ಬೊಗಳಿದ್ದೇ ಬೊಗಳಿದ್ದು
ಆದರೆ ಆ ನಾಯಿ
ಈ ನಮ್ಮ ನಾಯಿಯನ್ನು
ನೋಡೇ ಇಲ್ಲ ಎನ್ನುವಂತೆ
ತನ್ನ ಪಾಡಿಗೆ ತಾನು
ಕ್ಯಾರೇ ಎನ್ನದೇ
ಆರಾಮವಾಗಿ ನಮ್ಮ ಓಣಿಯನ್ನು
ದಾಟಿ ಹೊರಟುಹೋಯಿತು
ಆ ನಾಯಿ ಕಣ್ಣಿಂದ ದೂರಾಗುವವರೆಗೂ
ಬೊಗಳಿದ ನಮ್ಮ ನಾಯಿ
ಮರಳಿ
ನೆರಳಲ್ಲಿ ಕಾಲು ಚಾಚಿ
ಎಲ್ಲಂದರಲ್ಲಿ ತನ್ನ ಮೈಯ
ನೆಕ್ಕತೊಡಗಿತು
ಇದೆಲ್ಲ ನಡೆಯುತ್ತಲೇ ಇಲ್ಲ
ಅಥವಾ ನಡೆದರೂ ಏನಂತೆ
ಎನ್ನುವ ದಿವ್ಯ ನಿರ್ಲಿಪ್ತತೆಯಲ್ಲಿ
ಅಂಗಳದಲ್ಲೇ ಕುಳಿತಿದ್ದ ನನ್ನ ಅಜ್ಜಿ
ಹೂಬತ್ತಿ ಗೆಜ್ಜೆವಸ್ತ್ರ ಬಸಿಯುತ್ತ
ದಾಸರ ಪದ ಒಟಗುಟ್ಟುತ್ತಿದ್ದಳು,
‘ಬಂದದ್ದೆಲ್ಲ ಬರಲಿ
ಗೋವಿಂದನ ದಯವೊಂದಿರಲಿ’
ಬ್ಯೂಟಿಫುಲ್ ಹುಡ್ಗೀರು

ಈ ಬ್ಯೂಟಿಫುಲ್ ಹುಡ್ಗೀರು ಬಿಎಂಟಿಸಿ ಬಸ್ಸಿದ್ದಂಗೆ
ಕಾದಿದ್ದೂ ಕಾದಿದ್ದೇ!
ಅಗೋ ಒಂದು
ಬಂತು
ನಿಂತು
ಅನ್ನುತ್ತಿರುವಾಗಲೇ
ಒಂದರ ಹಿಂದೆ ಮತ್ತೊಂದು ಮುಗದೊಂದು!
ಯಾವುದು ಫುಲ್ಲು ಯಾವುದು ಎಂಪ್ಟಿ
ಯಾವುದು ಹೋಗೋದು ಎಲ್ಲಿಲ್ಲಿಗೆ
ಟೈಮು ಬಹಳಷ್ಟಿಲ್ಲ ಡಿಸೈಡು ಮಾಡೊಕ್ಕೆ
ಒಂಚೂರು ಮಿಸ್ಟೀಕು ಆಯ್ತೋ
ಆಯ್ತು!
ಏನ್ಮಾಡೋಕಾಗುತ್ತೆ?
ಜಂಪ್ ಮಾಡಿದ್ರೆ ಕಾಲ್ ಮುರೀಬೌದು
ಫುಲ್ ಇದ್ರೆ ನಿಂತು ಕಾಲ್ ನೋಯಬೌದು
ತಪ್ಪು ಬೋರ್ಡಾಗಿದ್ರೆ ಮುಂದಿನ ಸ್ಟಾಪು ಇಳಿಬೌದು
ಖಾಲಿ ಇದ್ರೆ ನಿದ್ದೆ ಮಾಡಬೌದು
ಇಲ್ಲಾ ಕಿಟಕಿಯಿಂದ
ಮಾರುತಿಯಿಂದ ಹಿಡಿದು ಬೆಂಜ್‍ವರೆಗೆ
ಸಾಗುವ ನೂರಾರು ಕಾರುಗಳನ್ನು
ನೋಡುತ್ತ
ಹೊಟ್ಟೆ ಉರಿಸಿಕೊಳ್ಳಬಹುದು
(ಪ್ರೇರಣೆ: Wendy Cope ಬರೆದ ‘Serious Concerns’ ಸಂಕಲನದ ’Bloody men’ ಕವನ)
ಪಾಪ ಪುಣ್ಯ

ಈ ಭೂಮಿಯಾಚೆ ದೂರದೊಂದು ಗ್ರಹದಲ್ಲಿ
ಜನ ಬದುಕಿದ್ದಾರಂತೆ
ಅಲ್ಲಿ ಸತ್ತವರೆಲ್ಲ ಈ ಭೂಮಿ ಮೇಲೆ
ನಾವು ನೀವಾಗಿ ಹುಟ್ಟುತ್ತಾರಂತೆ
ಅಲ್ಲಿ ಪಾಪ ಮಾಡಿದವರು
ಇಲ್ಲಿ ಬದುಕುತ್ತಾರಂತೆ ಕಷ್ಟಪಟ್ಟು
ಸಾಲೊಲ್ಲ ತಿಂಗಳ ಸಂಬಳ ತಿಂಗಳಿಗೆ
ಸೇದಲ್ಲ ಕುಡದಿಲ್ಲ
ಹೆಂಡತಿಯ (ಅಥವಾ ಗಂಡನ)ಬಿಟ್ಟಿನ್ನೊಬ್ಬರನು ಮುಟ್ಟಿಲ್ಲ
ಮಗನಗಿನ್ನೂ ನೌಕರಿಯಿಲ್ಲ
ಮಗಳಿಗೆ ಮದುವೆಯಾಗಿಲ್ಲ
ಜೊತೆಗಿದೆ ಬಿಪಿ ಸಕ್ಕರೆಕಾಯಿಲೆ
ಆಸ್ಪತ್ರೆಯಲ್ಲಿ ನರಳಿ ತಿಂಗಳುಗಟ್ಟಲೇ
ಸಾಲಬಿಟ್ಟು ಸಾಯುತ್ತಾರೆ
ಮತ್ತೆ ಆ ಲೋಕದಲ್ಲಿ ಹುಟ್ಟುತ್ತಾರೆ
ಅಲ್ಲಿ ಪುಣ್ಯ ಗಳಿಸಿದವರು
ಬೆಳ್ಳಿ ಚಮಚ ಬಾಯಲ್ಲಿಟ್ಟು ಇಲ್ಲಿ ಹುಟ್ಟುತಾರಂತೆ
ಬ್ಲ್ಯಾಕ್ ಮನಿ ಮನೆ ತುಂಬಿ
ಮಗನ ಅಮೇರಿಕಕೆ ಕಳಿಸುತ್ತಾರೆ
ನೆಗಡಿಯಾದರೆ ಸಾಕು
ಅಪೋಲೊ ಆಸ್ಪತ್ರೆ ಸೇರುತ್ತಾರೆ
ಹೆಂಡತಿ (ಅಥವಾ ಗಂಡ)ಯ ಹಿಂದಿಂದೆ
ಮಗಳ (ಅಥವಾ ಮಗನ) ವಯಸಿನ ಸುಂದರಿಯ ಸವರಿ
ಎಪ್ಪತ್ತರಲ್ಲಿ ವಯಾಗ್ರ ನುಂಗಿ ಯಯಾತಿಯಾಗುತ್ತಾರೆ
ಕೇಶವ್ ಅವರ ಕವನ ಮತ್ತು ಬರಹಗಳು ಸಂಪ್ರದಾಯ ಕಟ್ಟಳೆಗಳನ್ನು ಮುರಿದು ಹೊರನಿಲ್ಲುವ ಪ್ರಯತ್ನ. ಅವರು ಹೊಸ ಹೊಸ ಪ್ರಯೋಗಗಳ ಅನ್ವೇಷಣೆಯಲ್ಲಿ ತೊಡಗುವ ಲೇಖಕ. ಅವರ ಬರಹದಲ್ಲಿನ ಪದಗಳ ಆಯ್ಕೆ, ಜೋಡಣೆ, ಆಲೋಚನೆ, ಶೈಲಿ ಇವುಗಳಲ್ಲಿ ಯಥಾಸ್ಥಿತಿಯನ್ನು ಪ್ರಶ್ನಿಸುವ ಒಂದು ಬಂಡಾಯವಿದೇ ಎಂಬುದು ನನ್ನ ಅನಿಸಿಕೆ. ಸಮಕಾಲೀನ ಬದುಕಿನ ಹಲವಾರು ಮಜಲುಗಳನ್ನು ತೂರಿ ಬದುಕಿನ ವಾಸ್ತವತೆಯನ್ನು, ಕಠೋರ ಸತ್ಯಗಳನ್ನು, ನಂಬಿಕೆ, ನಿರಾಶೆಗಳನ್ನು , ಸಮಾಜದ ಅಂಕು ಡೊಂಕುಗಳನ್ನು ವಿಮರ್ಶಿಸುವ ಯತ್ನ ಕೇಶವ್ ಅವರದ್ದು. ಬದಲಾಗದೆ ಯಥಾ ಸ್ಥಿತಿಗೆ ಮರಳುವ ಮತ್ತು ಸಂಪ್ರದಾಯದಲ್ಲೇ ವಿಜೃಂಭಿಸುವ ಬದುಕಿನ ಬಗ್ಗೆ ಕವಿಗೆ ವ್ಯಥೆ ಇರುವುದು ‘ಮನೆಯ ನಾಯಿ’ ಎಂಬ ಕವನದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕವನ ನನಗೆ ವಿಶೇಷವಾಗಿ ಕಾಣಿಸಿತು. ಈ ಕವನಕ್ಕೆ ಸಾವಿಲ್ಲ. ಬದುಕಿನ ಹಲವಾರು ಸನ್ನಿವೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಕವಿತೆ ಇದು. ಈ ಕವಿತೆಯಲ್ಲಿ ಬರುವ “ಆ ನಾಯಿ”, “ಈ ನಾಯಿ” ಮತ್ತು “ದಾಸರ ಪದ ಒಟಗುಟ್ಟುವ ಅಜ್ಜಿ” ಒಂದು ವಿಡಂಬ ನಾಟಕದ ಪಾತ್ರಧಾರಿಗಳಂತೆ ಕಾಣುತ್ತಾರೆ. ಈ ಕವನವನ್ನು ಮತ್ತೆ ಮತ್ತೆ ಓದಿದಾಗ ಅದು ಹೊಸ ಪ್ರಸಂಗಳನ್ನು, ಹೊಸ ಅರ್ಥವನ್ನು ನೀಡುತ್ತದೆ. ಇದೇ ಕವನದ ಶಕ್ತಿ ಎನ್ನಬಹುದು. ‘ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ’ ಎಂಬ ಉಕ್ತಿಯನ್ನು ನೆನಪಿಗೆ ತರುತ್ತದೆ. ಈ ಕವನ ಹಲಾವಾರು ರಾಜಕೀಯ ಸಾಮಾಜಿಕ ಆಗುಹೋಗುಗಳ ಹಿನ್ನೆಲೆಯಲ್ಲಿ ಹೊಸ ಹೊಳಹನ್ನು ನೀಡುತ್ತದೆ. ಇದೇ ಮಾದರಿಯಲ್ಲಿ, ಇದೆ ರೀತಿ ರೂಪಕಗಳನ್ನು ಬಳಸಿಕೊಂಡು ಕೇಶವ್ ಒಂದು ಪ್ರಾಯೋಗಿಕ ನಾಟಕವನ್ನು ಬರೆಯಬಹುದು. ಅದನ್ನು ಅವರು ಪರಿಗಣಿಸಲಿ ಎಂದು ಆಶಿಸುತ್ತೇನೆ.
ಬ್ಯುಟಿಫುಲ್ ಹುಡುಗಿಯರು ಎಂಬ ಕವಿತೆ ಕಟ್ಟಾ ಸ್ತ್ರೀವಾದಿಗಳಿಗೆ ಇಷ್ಟವಾಗದಿರಬಹುದು. ಸೀರಿಯಸ್ ಕವಿತೆಗಳ ನಡುವೆ ಒಂದಿಷ್ಟು ನಗೆಹನಿಯನ್ನು ತರಬೇಕೆಂಬುದು ಕವಿಯ ಆಶೆ ಇರಬಹುದಷ್ಟೇ. ಎಲ್ಲ ಕವಿತೆಗಳು ಒಂದೇ ಓದಿಗೆ ಎಟುಕುವ ಸರಳ ಕವಿತೆಗಳು. ಇಲ್ಲಿ ಪದಗಳ ವಿಜೃಂಭಣೆ ಇಲ್ಲ, ಅತಿಯಾದ ಅಲಂಕಾರಗಳಿಲ್ಲ, ಪ್ರಾಸವಿಲ್ಲ, ಭಾವುಕತೆ ಇಲ್ಲ, ಬದಲಾಗಿ ಹೊಸ ತಾಜಾತನವಿದೆ, ನಮಗೆ-ನಿಮಗೆ ಪ್ರಸ್ತುತವಾದ ಸಾಧಾರಣ ವಿಚಾರಗಳ ಬಗ್ಗೆ ಚಿಂತನೆಗಳಿವೆ. ಉತ್ಕೃಷ್ಟ ಕವನ ಗುಚ್ಛ.
LikeLike
ಈ ಸಲ ಕೇಶವ ಅವರ 5 ಕವನಗಳನ್ನು ’ವಿಭಿನ್ನ’ ಕವನಗಳು. ವಿಭಿನ್ನ ’ಕೃತಕ ಬುದ್ಧಿಮತ್ತೆ’ಯ ಚಿತ್ರಗಳೊಂದಗೆ. ಮೊದಲ ಸಲ ’ಅನಿವಾಸಿ’ಯಲ್ಲಿ ಅವರ ‘ಮಾವು’ ಕವನದಿಂದ (14-2-2014) ಹಿಡಿದು ಹಲವಾರು ಕಥೆ, ಕವನ್, ವಿಮರ್ಶೆಗಳನ್ನು ಒಡಿದ್ದೇನೆ, ಅವರು ಬರೆದ ಹೆಚ್ಚು ಕಡಿಮೆ 1000 ’ನೀಲು’ಗಳಲ್ಲಿ ಅರ್ಧದಷ್ಟು ಓದಿದ್ದೇನೆ, ಕೆಲವನ್ನು ಅವರೊಡನೆ ಇಂಗ್ಲೀಷಿಗೆ ಅನುವಾದ ಮಾಡಿದ್ದೇನೆ. ಅವರ ಬರವಣೆಗೆಯಲ್ಲಿ ಯಾವಾಗಲೂ ಭಿನ್ನತೆ ಮತ್ತು ಹೊಸ ಹೊಸತು ಕಾಣುತ್ತಿರುತ್ತದೆ. ಮೊದಲ ಸಲ ಅನಿವಾಸಿಯಲ್ಲಿ AI (artificial intelligence) ಚಿತ್ರಗಳು ಅವರಿಂದ. ಈ ಕವನಗಳಲ್ಲಿ ಕಾಣುವದು, ತಮ್ಮ ಅನುಭವದ ಮೂಸೆಯಿಂದ ಬಂದ ಪ್ರಾಮಾಣಿಕ ಅಭಿವ್ಯಕ್ತಿ, ನೀಲುವಿನಲ್ಲಿ ಕಾಣುವಂಥ ಅನೇಕ aphorisms. ಎಂದೂ ಸಾಯದ ಕಥೆಗಾರ-ನಿಮಾಪಕ ನಡುವಿನ ಭಿನ್ನಾಭಿಪ್ರಾಯ, ಬೊಗಳುವ ನಾಯಿಯ ರೂಪಕದಲ್ಲಿ ನಮಗೂ ಕನ್ನಡಿ ಹಿಡಿಯುತ್ತ, Bloody Men ಕವನವನ್ನು ’ನಮ್ಮ ಬೆಂಗಳೂರಿಗೆ ಅಳವಡಿಸಿದ ರೀತಿ, ಕೊನೆಯ ಕವನದಲ್ಲಿ ಆಧ್ಯಾತ್ಮದ ಜೊತೆಗೆ ಆಧುನಿಕತೆಯ ವಿಡಂಬನೆ-ಇವೆಲ್ಲವುಗಳಲ್ಲಿ ಒಂದು ಹೊಸತನ-ಭಿನ್ನತೆ ಎರಡನ್ನೂ ಕಾಣುತ್ತೇವೆ. ಎರಡನೆಯ ಕವಿತೆಯೆಲ್ಲಿಯ ’ಮುಜುಗರವಿಲ್ಲದೆ ಪೆಂಡಾಲು ಕಟ್ಟುವ ಹುಡುಗ’ ”ಭಗ್ನ ಪ್ರೇಮಿಗಳ ರಾಷ್ಟ್ರಗೀತೆ” ಎಂದೇ ಪ್ರಸಿದ್ಧವಾದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕವನದ ’ನಿನ್ನ ಮದುವೆಯ ರಾತ್ರಿ ಮೆರವಣಿಗೆಯಾಗುತಿರೆ ಕಣ್ಣ ಗುಡ್ಡಿಗಳ ಹಿಲಾಲನ್ನೇ ಹಿಡಿದೇನು’ ಸಾಲನ್ನು ನೆನಪಿಸಿತು. ಅದೇ ಭಾವ, ಅಷ್ಟೇ ಚಂದವಾಗಿ ಬಂದಿದೆ. ಕವಿಯಾಗಿ, ಸಂಪಾದಕರಾಗಿ ಹೊಸ ಮೆನ್ಯು ಬಡಿಸಿದ ಕೇಶವ ಅವರಿಗೆ ಅಭಿನಂದನೆಗಳು.AI ಚಿತ್ರಗಳು ಮತ್ತು A1 ಕವನಗಳು!
ಶ್ರೀವತ್ಸ ದೇಸಾಯಿ
LikeLike
Hari haridu baredaroo
Bare baredu haridaroo
Ninnante bareyalare
Vimarsisalare
LikeLike
ಎಲ್ಲ ಪದ್ಯಗಳು ಭಿನ್ನ ಪ್ರಯೋಗ ಅಂತ ಕವಿ ಹೇಳಿದ್ದರೂ- ಎಲ್ಲವನ್ನೂ ತಳುಕು ಹಾಕಬಲ್ಲ ವಿಚಾರಗಳಿವೆ.
ಮೊದಲಿನ ಮಾರ್ದವತೆ, ನಂತರದ ಆಳ ಇರಿತ ಮತ್ತು ಲೋಕ ಸತ್ಯ!
1)ಮೊದಲ ಪದ್ಯದಲ್ಲಿ ಮೊದಲಿಗೆ ವಾಸ್ತವ ಸ್ಥಿತಿಯ ವಿಶ್ಲೇಷಣೆ ಮಧ್ಯದಲ್ಲಿ ಅಸಹಾಯಕ ಸ್ಥಿತಿಯ ವಿಡಂಬನೆ ಮತ್ತು ಕೊನೆಯ ಭಾಗದಲ್ಲಿ ಸಂಧಾನಗಳ ವಿಡಂಬನೆಯಿದೆ. ಇದನ್ನು ಬಹಳಷ್ಟು ವಿಷಯಗಳಿಗೆ ಅನ್ವಯಿಸಿ ಕೊಳ್ಳುವ ಹರವಿದೆ.
2) ಎರಡನೇಯದರಲ್ಲಿ ಬದುಕಿನ ತಾರತಮ್ಯ ಗಳು, ಪ್ರೀತಿ ಪ್ರೇಮದ ಮಾಯೆ ಇದ್ದರೂ ಕವಿತೆ ತುಂಬಾ defensive ಆಗಿಬಿಡುತ್ತದೆ. ಕಳೆದುಕೊಳ್ಳುತ್ತಿರುವ ದುಃಖವನ್ನು ಇನ್ಯಾವುದನ್ನೋ ಪ್ರಶ್ನಿಸುವ, ಟೀಕಿಸುವ ಸೆಡ್ಡು ಹೊಡೆಯುವ ಅರ್ಥದಲ್ಲಿ ಸ್ವಾಭಿಮಾನವನ್ನು ಬಿಂಬಿಸುತ್ತದೆ. ಆದರೆ ಢಾಳಾಗಿ ಕಾಣುವ ಪೊಗರಿನ ಹಿಂದೆ ಅಲ್ಲಿರುವುದು ಕೂಡ ನೋವಿನ ಅಸಹಾಯಕತೆಯೆ! ಎನ್ನುವಲ್ಲಿ ಆ ಭಗ್ನ ಪ್ರೇಮಿಯ ಬಗ್ಗೆ ಮನಸ್ಸು ಮಿಡಿಯುತ್ತದೆ.
3) ತಡೆ, ತುಡಿತ, ಗೆರೆಗಳು, ಅಸಹಾಯಕತೆ, ಅನುಭವ ಮತ್ತು ಒಂದಿಷ್ಟು ಆಧ್ಯಾತ್ಮಿಕತೆಗಳನ್ನು ರೂಪಕಗಳಲ್ಲಿ ಇಟ್ಟ ಕವಿತೆ.
4) Dangerous! ಗಂಡಸಿಗೆ ಹುಡ್ಗೀರು ಹತ್ತಿಳಿದು ಬಿಡಲು ಸಹಾಯ ಮಾಡುವ ವಾಹಗಗಳಾಗಿ ಕಂಡಿರುವುದನ್ನು ಸ್ತ್ರೀ ಯರು ವಿರೋಧಿಸುವ risk ಇದೆ.
ಅದು BMTS ಕೆಂಪು ಬಸ್ಸುಗಳೇ ಆದರು ಕವಿಗಳು ಇಲ್ಲಿ ಹುಷಾರಾಗಿರಬೇಕಾದ್ದು ಅನಿವಾರ್ಯ!
ಅದರ ಜೊತೆಗೆ ಐಶಾರಾಮಿ ಕಾರುಗಳು ಮೇಲೆ ಬೇರೆ ಕಣ್ಣು 😎 ಯಪ್ಪಾ 🤔😅
ಜೊತೆಗೆ ಹೆಲ್ಮೆಟ್ ಇದ್ದರೆ ಒಳಿತು
I enjoyed the thought process of the poem for sure.
5) ವ್ಯೋಮ ಕಾಯದ ಕಲ್ಪನೆ. ಸ್ವರ್ಗ- ನರಕಗಳ ವರ್ಣನೆ.ಅದಲಿ – ಬದಲಿನ ಪರ್ಯಟನೆ ನಾವು ಭೂಮಿಯ ಮೇಲೆ ಅನುಭವಿಸುತ್ತಿರುವುದರ ವಿಡಂಬನೆ ಯಾಗಿ ಕವನ ಗಮನ ಸೆಳೆಯುತ್ತದೆ.
ವಿಫುಲವಾದ ಸಂಚಿಕೆ. ಸಂಪಾದಕ ಮತ್ತು ಕವಿ ಕೇಶವರಿಗೆ ಅಭಿನಂದನೆಗಳು 💐👏👏👏
LikeLike
ವಾಸ್ತವದ ವಕ್ರತೆಗಳನ್ನು ಸರದಂತೆ ಜೋಡಿಸಿದ್ದಾರೆ ಕೇಶವ ತಮ್ಮ ಕವಿತೆಗಳಲ್ಲಿ. ತೀಕ್ಷ್ಣ, ಒಣ ವಿಡಂಬನೆಯ ಬ್ರಿಟಿಷುತನದ ಹುರಿಯ ಸಾಲುಗಳು. “ ವಯಾಗ್ರದ ಯಯಾತಿಗಳು” ನಿಗ್ರಹವಿರದ “ಯತಿ”ಗಳಿಗೆ ಪದಗಳ ಛಡಿ.
ಕತೆಗಾರನದೊಂದು ದೃಷ್ಟಿ
ನಿರ್ಮಾಪಕನದೊಂದು ದೃಷ್ಟಿ
ಅವರವರ ದೃಷ್ಟಿ ಅವರವರಿಗೆ ಬಲ
ಆ ದೃಷ್ಟಿ ಬೆಳೆದ ಫಸಲು ಎಲ್ಲರಿಗನುಕೂಲ
ಇಲ್ಲದಿದ್ದರೆ ತೇಜಸ್ವಿಯ ತಬರ ಕಾಸರವಳ್ಳಿಯ ಕಣ್ಣಿನಲ್ಲರುಳುತ್ತಿರಲಿಲ್ಲ!
ಕಾಯ್ಕಿಣಿಯ ಕಲಮು ಜನಜನರ ಮನಸ್ಸಿನಲ್ಲಿ ಕುಣಿಯುತ್ತಿರಲಿಲ್ಲ!
ಇಲ್ಲದಿದ್ದರೆ ಕಥೆಗಾರರ ಪಾಡು ತಿರುಗಿಯೂ ನೋಡದ ನಾಯಿಯತ್ತ ಬೊಗಳಿ ಸುಮ್ಮನಾಗುವ ನಾಯಿಯಂತೆ!
ಖಾಲಿ ಪೆಂಡಾಲಿನ ರದ್ದಿ ಕಾಗದದಂತೆ
ಬೆಂಜ್ ಕಾರಿಗೆ ಹೊಟ್ಟೆ ಉರಿಸಿಕೊಂಡಂತೆ
ಗ್ರಹಚಾರದ ತಲೆಗೆ ಸಾಲ ಕಟ್ಟಿದಂತೆ
ಕಥೆಯ ಚೌಕಟ್ಟಿಗೆ, ಕಟ್ಟೆಗೆ, ಕಿಟಕಿಗೆ ಕಥೆಗಾರನ ಕಲ್ಪನೆಯ ನೋಟವೂ ಬೇಕು; ನಿರ್ಮಾಪಕನ ವ್ಯಾವಹಾರಿಕ ದೃಷ್ಟಿಯೂ ಬೇಕು. ಒಪ್ಪಿಕೊಳ್ಳುವ ಮುಕ್ತತೆ ಇದ್ದರೆ ತಂಡ, ಇಲ್ಲದಿರೆ. . .
ಮುರಳಿ
LikeLike