ಜೋಲಿ ವೈಯಾನ್ ಮರಳು ಗಡಿಯಾರ – ಶ್ರೀವತ್ಸ ದೇಸಾಯಿ

‘Timeless’

ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಮ್ಮನ್ನೆಚ್ಚರಿಸುವ ಒಂದು”ಜಿಮ್ನಾಸ್ಟಿಕ್ ಶೋ’ದ ಪರಿಚಯ ಇಲ್ಲಿದೆ.
ಕಳೆದ ವಾರ ನನ್ನ ಪಕ್ಕದ ಊರಿನ ’ರೋದರಂ ಶೋ’ದ (Rotherham Show at Clifton Park) ಒಂದು ಮುಖ್ಯ ಆಕರ್ಷಣೆ ಎಂದರೆ ಮೈದಾನದ ಮಧ್ಯದಲ್ಲಿಯ ಏಳು ಮೀಟರುಗಲ ಉದ್ದದ ಮರಳು ಗಡಿಯಾರದಲ್ಲಿ  ಸಮತೋಲ ಕಾಯಲು ಯತ್ನಿಸುತ್ತಿರುವ ನಾಲ್ವರು. ಅವರು ಭಾಗವಹಿಸಿದ್ದು ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) ಎನ್ನುವ ಶೋ. ಅಷ್ಟು ದೊಡ್ಡ ಮರಳು ಗಡಿಯಾರ (Hour glass) ಯಾಕೆ ಬೇಕಿತ್ತು? ಅದಕ್ಕೂ ಗ್ಲೋಬಲ್ ವಾರ್ಮಿಂಗ್ (ಜಾಗತಿಕ ಉಷ್ಣೋದ್ದೀಪನ)ಗೂ ಏನು ಸಂಬಂಧ? ಲಂಡನ್ನಿನ ಯು ಸಿ ಎಲ್ ದ ಪ್ರೊಫೆಸರ್, ಅಂಕಣ ಮತ್ತು ಪುಸ್ತಕಗಳ, ವೈಜ್ಞಾನಿಕ ಲೇಖನಗಳ ಬರಹಗಾರ ಬಿಲ್ ಮ್ಯಾಗ್ವೈಯರ್ ಅವರ ಈ ವಾರದ ಹೇಳಿಕೆಯ ಪ್ರಕಾರ ನಾವು 2030 ತಲುಪುವ ಮೊದಲೇ  ಜಗತ್ತಿನ ಉಷ್ಣತಾಮಾನದ ಏರಿಕೆ 1.5 ಡಿಗ್ರಿ ಸೆಲ್ಸಿಯಸ್ ಕೆಳಗೆ ಬರುಬೇಕೆಂದು ಪಣ ತೊಟ್ಟ ಗುರಿ ತಲುಪುವದು ಈಗ ಅಸಾಧ್ಯ ಎನಿಸುತ್ತದೆ. ಇತ್ತೀಚೆಗೆಯಷ್ಟೇ ನಾವೆಲ್ಲ ಪಾಕಿಸ್ತಾನದ ಮಹಾಪೂರದಿಂದಾಗಿ ಮೂರೂಕಾಲು ಕೋಟಿಗಿಂತ ಹೆಚ್ಚಿನ ಜನ ಸಂತ್ರಸ್ತರಾದ ಫೋಟೊಗಳನ್ನು ಸಾಕಷ್ಟು ನೋಡಿದ್ದೇವೆ. ಇದೇ ವರ್ಷ ಮೊದಲ ಬಾರಿ ಇಂಗ್ಲೆಂಡಿನ ಉಷ್ಣತಾಮಾನ 40.3 ಸೆ ಮುಟ್ಟಿದ ಹೆಡ್ಲೈನ್ ವರದಿಗಳನ್ನು ಕೇಳಿದ್ದೇವೆ.ಇವು ಗ್ಲೋಬಲ್ ವಾರ್ಮಿಂಗಿನ ಪ್ರತ್ಯಕ್ಷ ಪರಿಣಾಮಗಳೆಂದು ತಿಳಿದು ಬಂದಿದೆ. ಇನ್ನು ’1.5 ಡಿಗ್ರಿ’ ಗುರಿ ಸಾಧಿಸಲು ನಮಗೆ ಸಮಯದ ಅಭಾವವಿದೆ. ಗಡಿಯಾರದ ಮರಳು ಶೀಘ್ರಗತಿಯಲ್ಲಿ ಸೋರಿಹೋಗುತ್ತಿದೆ ಎನ್ನುವ ಸರ್ವವಿದಿತ ಸತ್ಯವನ್ನೇ ಮನದಟ್ಟ ಮಾಡಲು ನೃತ್ಯ, ಸರ್ಕಸ್ ಮತ್ತು ಕಸರತ್ತುಗಳನ್ನು (gymnastics) ಹೆಣೆದು ಜನರಿಗೆ ಪ್ರಸ್ತುತಪಡಿಸುವ ಒಂದು ಕಲಾತ್ಮಕ ಪ್ರದರ್ಶನವೇ ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) - ಕಾಲಾತೀತ ಎನ್ನುವ ಶೋ. ತಾಪೋದ್ದೀಪನದ ಜೊತೆಗೆ ಪರಿಸರ ಮತ್ತು ಪ್ರಾಣಿಸಂಕುಲನದ ಸಂರಕ್ಷಣೆಯೂ ಆಗ ಬೇಕಾಗಿದೆ. ಆಸಿಡ್ ಮಳೆ, ಹವೆಯಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್ ಇವೆಲ್ಲ ಹಾನಿಕರ. ಇವೆಲ್ಲದರ ಸುಧಾರಣೆಗೆ ಟೈಮ್- ಲೆಸ್, ಸಮಯ ಬಹಳ ಕಡಿಮೆ ಎನ್ನುವ ಸಂದೇಶವೂ ಅದರಲ್ಲಿದೆ. 

ಅಂದು ಇಂಗ್ಲೆಂಡಿನ ರಾಣಿಯ ಮೃತ್ಯುವಿನ ಹಿಂದಿನ ರವಿವಾರ. ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿ ಹರಿಯುವ ಡಾನ್ ನದಿಯ ಉಪನದಿಯಾದ ”ರಾದರ್’ ದಂಡೆಯಮೇಲೆ ಬೆಳೆದ ಲಕ್ಷಕ್ಕಿಂತಲೂ ಜಾಸ್ತಿ ಜನವಸತಿಯ ರಾದರಮ್ಮಿನ ವಿಶಾಲವಾದ ಕ್ಲಿಫ್ಟನ್ ಪಾರ್ಕದ ತುಂಬ ವಿವಿಧ ವಸ್ತುಗಳನ್ನು ಮಾರುವ ಮಳಿಗೆಗಳು, ಫುಡ್ ಸ್ಟಾಲ್ ಗಳು ಹರಡಿಕೊಂಡಿದ್ದವು. ಆ ಮಧ್ಯೆ ವಿಂಟೇಜ್ ಕಾರುಗಳ ಮಾಲಕರು ತಮ್ಮ ’ಕೂಸು’ಗಳನ್ನು ತಂದು ಪ್ರದರ್ಶಿಸಿದರು. ಪ್ರದರ್ಶನಗಳ ಸುತ್ತ ಕಿಕ್ಕಿರಿದು ತುಂಬಿದ ಜನಸಂದಣಿ. ಕಳೆದ 43 ವರ್ಷಗಳಿಂದ ಸಾವಿರಾರು ಮಕ್ಕಳು, ತಂದೆತಾಯಿಗಳೊಂದಿಗೆ ಅನೇಕ ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಟ, ಓಡಾಟ ತಿಂಡಿ, ಬರ್ಗರ್, ಪಿಡ್ಝಾ, ಕೋಲಾ, ಪೆಪ್ಸಿ, ಮ್ಯೂಸಿಕ್, ಬ್ಯಾಂಡ್, ಲೌಡ್ ಸ್ಪೀಕರ್, ಇತ್ಯಾದಿಗಳ ಸುತ್ತಲೂ ಜನ. ನೀವು ಊಹಿಸಿರಬಹುದು, ಆ ದೃಶ್ಯವನ್ನು.
’ಟೈಮ್ಲೆಸ್ ’  ಶೋಗೆ ಜೋಲಿ ವಯನ್ ಆರಿಸಿಕೊಂಡಿದ್ದ ಜಾಗ ಸಮತಟ್ಟಾದ ಹುಲ್ಲಿನ ಮೈದಾನದ ಮಧ್ಯದಲ್ಲಿ. ಕಳೆದ ಹತ್ತು ವರ್ಷಗಳಿಂದ ಈ ಪುಟ್ಟ ಸಂಸ್ಥೆ ಅಕ್ರೋಬಾಟಿಕ್ ’ಡೊಂಬರಾಟ’ಯುಕ್ತ ಕಥಾನಕಗಳನ್ನು ಸರ್ಕಸ್-ಡಾನ್ಸ್ ಮತ್ತು ಜಿಮ್ನಾಸ್ಟಿಕ್ಸ್ಗಲ ಮಿಶ್ರಣದ ನಾಲ್ಕು ಹೊರಾಂಗಣದ ಮತ್ತು ಎರಡು ಒಳಾಂಗಣದ ಪ್ರದರ್ಶನಗಳನ್ನು ಈ ದೇಶದಲ್ಲಷ್ಟೇ ಅಲ್ಲದೆ ದಕ್ಷಿಣ ಕೊರಿಯಾದಲ್ಲೂ ಪ್ರದರ್ಶಿಸುತ್ತಿದೆ. ಒಲೀವಿಯಾ ಕೇಲ್ ಮತ್ತು ಯಾನ್ ಪ್ಯಾಟ್ಸ್ಕೀ ಎರಡೂ ಕಲೆಗಳಲ್ಲಿ ನುರಿತವರು.

ಆ ದಿನ ಅಂಗ ಸೌಷ್ಠವವುಳ್ಳ ಧೃಡಕಾಯದ ಇಬ್ಬರು ಗಂಡಸರು ಮತ್ತು ಇಬ್ಬರು ಬೆಡಗಿನ ಯುವತಿಯರು ಪಾಲ್ಗೊಂಡಿದ್ದರು. ಮೊದಲು ಯಾಕೆ ತಾವು ಮನುಕುಲವನ್ನು ಕಾಡುತ್ತಿರುವ ಈ ಸಮಸ್ಯೆಗಳ ಪರಿಹಾರದ ಅವಶ್ಯಕತೆಯನ್ನು ಬಿಂಬಿಸಲು ಮರಳು ಗಡಿಯಾರದ ಆಯ್ಕೆ ಅರ್ಥವತ್ತಾದುದೇ ಅಂತ ಹೇಳಿ ತಮ್ಮ ಅರ್ಧ ಗಂಟೆಯ ’ಆಟ’ವನ್ನು ಪ್ರಾರಂಭಿಸಿದರು. ಮೊದಲು ಒಂದು ಚಿಕ್ಕ ರೂಪಕದಲ್ಲಿ ನಾಲ್ವರೂ ಮಾನವನ ಆದಿಕಾಲದ ಜೀವನದಪರಿಚಯ ಮಾಡಿ ಇಂದಿನ ವರೆಗಿನ ಪ್ರಗತಿಯನ್ನು ನೃತದಲ್ಲಿ ತೋರಿಸಿಕೊಟ್ಟರು. ನಂತರ ಒಬ್ಬೊಬ್ಬ ಗಂಡಸು ಮರಳು ಗಡಿಯಾರದ (hourglass) ಎರಡೂ ಗಾಜಿನ ಗೋಲಕಗಳಲ್ಲಿ ಹೊಕ್ಕು ಸಮತೋಲನ ಸ್ಥಾಪಿಸಿದ ಮೇಲೆ ಇಬ್ಬರು ಹೆಂಗಸರು ಕೋರಿಯೋಗ್ರಫಿಗನುಗುಣವಾಗಿ ನರ್ತಿಸುತ್ತ ಆ ಎರಡು ಗೊಲಕಗಳಲ್ಲಿ ಸೇರಿಕೊಂಡು ಅದರ ಮಧ್ಯದ ಅಚ್ಚಿನ ಸುತ್ತ ಅವರ್ ಗ್ಲಾಸನ್ನು ತಿರುಗಿಸಿದರು. ಕೆಲವಿ ನಿಮಿಷಗಳ ನಂತರ ಅದನ್ನು ನಿಲ್ಲಿಸಿ ಹೊರಬಂದು ಒಂದರಲ್ಲಿ ಮರಳಿನ ಬದಲಾಗಿ ಮರದ ಗೋಲಕಗಳನ್ನು ತುಂಬಿ ಒಂದರಿಂದ ಇನ್ನೊಂದಕ್ಕೆ ಸ್ವಲ್ಪೇ ಸಮದಲ್ಲಿ ಇಳಿದದ್ದನ್ನು ತೋರಿಸಿ ಚಲಿಸುತ್ತಿರುವ ಸಮಯದ ರೂಪಕವಾಗಿ ಪ್ರದರ್ಶಿಸಿದರು. ಆಟದ ಪ್ರದರ್ಶನ ಮುಗಿದಮೇಲೆ ಚಿಕ್ಕ ಪ್ರಶ್ನೋತ್ತರದ ಸಂವಾದದೊಂದಿಗೆ ಆ ಕಾರ್ಯಕ್ರಮ ಮುಕ್ತಾಯವಾಯಿತು.

ಮನುಕುಲಕ್ಕೊದಗಿದ ಈ ಗ್ಲೋಬಲ್ ವಾರ್ಮಿಂಗ್ ಗಂಡಾಂತರವನ್ನು ನಾವು ಹೇಗೆ ಎದುರಿಸುತ್ತೇವೆ ನೋಡಬೇಕಾಗಿದೆ.

ಶ್ರೀವತ್ಸ ದೇಸಾಯಿ

ಚಿತ್ರ ಕೃಪೆ: Luke Witcomb ವಿಡಿಯೋ: ಜೋಲಿ ವೈಯಾನ್

7 thoughts on “ಜೋಲಿ ವೈಯಾನ್ ಮರಳು ಗಡಿಯಾರ – ಶ್ರೀವತ್ಸ ದೇಸಾಯಿ

  1. ದೇಸಾಯಿವರ ಪರಿಧಿಗೆ ಸಿಗದ ವಸ್ತು, ಸ್ಥಳ ಮತ್ತು ವಿವರಗಳೇ ಇಲ್ಲ ಎನ್ನಬಹುದು. ಅವರು ಆಸಕ್ತಿ ಮತ್ತು ವಿವರಗಳನ್ನು ನೆನಪಿಟ್ಟುಕೊಂಡು ಸಕಾಲದಲ್ಲಿ ಬರೆಯುವ ಕುಶಲತೆ ಮತ್ತು ಕಲೆಗಾರಿಕೆಗೆ ಅವರೇ ಸರಿಸಾಠಿ.

    ಜಾಗತಿಕ ತಾಪಮಾನದ ಬಗ್ಗೆ ಎಷ್ಟೇ ಎಚ್ಚೆತ್ತುಕೊಂಡರೂ ಮುಂದಿನ ಪೀಳಿಗೆಗಳಿಗೆ ಈ ಭೂಮಿಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುವಲ್ಲಿ ಜಗತ್ತಿನ ಎಲ್ಲ ಶಕ್ತಿಗಳು ಒಟ್ಟಾಗಿ ಕೆಲಸಮಾಡಿದರೂ ಸಾಲದು ಎನಿಸುವಂತಿದೆ. ರಾಜಕೀಯ ಮಸಲತ್ತುಗಳು, ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ಕಂದರ, ಎಷ್ಟು ದೊರಕಿದರೂ ಇನ್ಮಷ್ಟು ಬೇಕೆನ್ನುವ ಮನುಷ್ಯ ಜಾತಿಯ ಲೋಭಗಳು ಪ್ರತಿರೋಧ ಮಾಡುತ್ತಲೇ ಇವೆ.‌

    – ಕೇಶವ

    Like

  2. ತುಂಬ ಪ್ರಸ್ತುತ ಲೇಖನ ಶ್ರೀವತ್ಸ ದೇಸಾಯಿಯವರದು. ಓಡುವ ಕಾಲನ ಅಬ್ಬರದ ದಾಂಗುಡಿಗೆ ಯಾವುದೇನು ಈಡಾದೀತು ಮಾನವಾ ಎಚ್ಚರ, ಎಚ್ಚರ ಎಂಬುದನ್ನು ತುಂಬ ಪ್ರಭಾವಯುತವಾಗಿ ಆ Timeless ಶೋದ ಮೂಲಕ ವಿವರಿಸಿದ್ದು ಟೈಮಿಲ್ಲದ ಟೈಂ ನಲ್ಲೂ ಯೋಚನೆಗೆ ತಳ್ಳುವದರಲ್ಲಿ ಸಂಶಯವಿಲ್ಲ. ಕಂಡೂ ಕಂಡೂ ಈ ಎಲ್ಲ ಪ್ರಳಯಾಂತಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇನೋ ಮನುಕುಲ ಅಂತ ತಲ್ಲಣ ಉಂಟು ಮಾಡುತಿದೆ. ಆ ಗೋಲಕದಲ್ಲಿನ ಸಣ್ಣ ಸಣ್ಣ ಮರುಳುಕಣ ದೊಡ್ಡ ದೊಡ್ಡ ಮರದ ಗೋಲಕರೂಪೀ ಆಗುವುದು ಸಮಸ್ಯೆಯ ಪ್ರಖರತೆಯನ್ನು ತೋರಿಸುವತ್ತಣ ಪ್ರಯತ್ನ ತುಂಬ ಸಮಯೋಚಿತ ಕಟು ಸತ್ಯ. ಎಚ್ಚತ್ತುಕೊಂಡಾನೇ ಮನುಷ್ಯ; ಯೋಚಿಸಿಯಾನೇ ತಾ ಎಲ್ಲಿದ್ದೀನಿ ಅಂತ. ಆತನನ್ನ ಎಚ್ಚರಿಸುವ ನಿಟ್ಟಿನಲ್ಲಿ ಜೋಲಿ ವಯನ್ನಿನ ಮರಳುಗಡಿಯಾರದ ಈ ಶೋ ತುಂಬ ಪ್ರಭಾವ ಬೀರುವ ಶೋ. ಈ ಎಲ್ಲ ಪ್ರಳಯಾಂತಕ ಸಮಸ್ಯೆಗಳನ್ನು ಬಿಂಬಿಸುವ ಲೇಖನ, ಇಂಥ ಲೇಖನಗಳು ನಿಜಕ್ಕೂ ಬೇಕು. ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.
    ಸರೋಜಿನಿ ಪಡಸಲಗಿ

    Like

    • ಲೇಖನವನ್ನು ಓದಿ ನಿಮ್ಮ ವೈಚಾರಿಕ ಕಮೆಂಟ ಮಾಡಿದ್ದಕ್ಕೆ ಧನ್ಯವಾದಗಳು, ಸರೋಜಿನಿ ಅವರೇ.

      Like

  3. ಉಮಾ ವೆಂಕಟೇಶ್ ಅವರು ಬರೆಯುತ್ತಾರೆ:
    “ಈ ವಾರದ ಅನಿವಾಸಿ ವೇದಿಕೆಯಲ್ಲಿ ಮಾನ್ಯ ದೇಸಾಯಿ ಅವರು ಬರೆದ ಲೇಖನ ಬಹಳ ಸಮಯೋಚಿತವಾಗಿದೆ. ಮನುಕುಲ ಸಧ್ಯದಲ್ಲೇ ಎದುರಿಸಬೇಕಾಗಿರುವ ಗಂಭೀರ ಪರಿಸ್ಥಿತಿಯನ್ನು ಅವರು ಇತ್ತೀಚಿಗೆ ವೀಕ್ಷಿಸಿದ ಜೋಲಿ ವೈಯನ್ ಮರಳು ಗಡಿಯಾರದ ಉತ್ತಮ ಪ್ರದರ್ಶನದ ಮೂಲಕ ನಮ್ಮೆಲ್ಲರಿಗೂ ಪರಿಚಯಿಸಿರುವುದು ಒಳ್ಳೆಯದು. ಅಮೆರಿಕೆಯಲ್ಲಿ ಕಳೆದ ವಾರ ಫ್ಲೋರಿಡಾದಲ್ಲಿ “ಇಯಾನ್” ಚಂಡಮಾರುತ ಎಸಗಿರುವ ವಿನಾಶದ ಕೃತ್ಯ ನೋಡಿದ ನಂತರವೂ, ಮಾನವ ಎಚ್ಛೆತ್ತುಕೊಳ್ಳದೆ ತನ್ನ ಪ್ರವೃತ್ತಿಯನ್ನು ಬದಲಿಸದೆ ಹೀಗೆ ಮುಂದುವರಿದಲ್ಲಿ, ಮಾನವ ಸಂತತಿಯ ವಿನಾಶ ಇನ್ನು ಬಹಳ ದೂರವೇನಿಲ್ಲ. ಬಹಳ ಎಚ್ಚರಿಕೆಯಿಂದ ಹೆಜ್ಜೆ ಮುಂದಿಡಬೇಕು ಎನ್ನುವುದನ್ನು ಈ ಮರಳು ಗಡಿಯಾರ ಬಹಳ ಸೊಗಸಾಗಿ ತೋರಿಸಿದೆ. ಇಂತಹ ಪ್ರದರ್ಶನವನ್ನು ಲೇಖನದ ಮೂಲಕ ನಮ್ಮ ಮುಂದಿಟ್ಟ ದೇಸಾಯಿ ಅವರಿಗೆ ಧನ್ಯವಾದಗಳು. ಇನ್ನು ಇಂತಹ ಲೇಖನಗಳು ಪ್ರಕಟವಾಗಲಿ.
    ಉಮಾ ವೆಂಕಟೇಶ್ “

    Like

    • ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಅಮೇರಿಕೆಯಲ್ಲಿ ವಾಸಿಸುವ್ಸ್ ನೀವು ಇಯನ್ ಎನ್ನುವ ದೈತ್ಯ. ಚಂಡ ಮಾರುತದ ಅನಾಹುತಗಳನ್ನು ಹತ್ತಿರದಿಂದ ನೋಡಿ ನಾವು ಎಚ್ಚರಿಕೆ ಕೊಟ್ಟದ್ದರಲ್ಲಿ ಆಶರ್ಯವಿಲ್ಲ. ನಮ್ಮೆಲ್ಲರಿಗೂ wake up
      Call!

      Like

  4. ಕಡೆಯ ಗಳಿಗೆಯಲ್ಲಿ ಅನಿವಾಸಿಯ ವಾರದ ಲೇಖನವನ್ನು ಪ್ರಕಟಿಸಿದ ದೇಸಾಯಿಯವರಿಗೆ ಧನ್ಯವಾದಗಳು. ‘ನೆಲ ಹೊತ್ತಿ ಉರಿದೊಡೆ’ ಎಂಬ ವಚನದ ಸಾಲನ್ನು ನಾವಿಂದು ಅಕ್ಷರಶಃ ಅನುಭವಿಸುವ ಕಾಲ ಬಂದಿದೆ ಎಂಬುದನ್ನು ನೆನಪಿಸಿದ್ದೀರಿ.

    ಹೆಚ್ಚುತ್ತಿರುವ ತಾಪಮಾನ ಮತ್ತು ಭೂಮಿಯ ಮೇಲೆ ಮಾನವ ನಡೆಸುತ್ತಿರುವ ಅತ್ಯಾಚಾರ ಒಂದಕ್ಕೊಂದು ಪೂರಕವಾಗಿ ಜಗತ್ತನ್ನು ವಿಷ ವರ್ತುಳದಲ್ಲಿ ಸಿಕ್ಕಿಸಿರುವುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಅವಶ್ಯವಾಗಿ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ.

    ಕಲ್ಲಿದ್ದಲು, ಪೆಟ್ರೋಲ್ – ಡೀಸಲ್ ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜೊತೆಗೆ ನೀರಿನ ಪೋಲು, ಮನೆಗಳಲ್ಲಿ ಉಷ್ಣಾಂಶವನ್ನು ೧-೨ ಡಿಗ್ರಿ ಕಡಿಮೆ ಮಾಡುವುದು, ಹೆಚ್ಚಾಗಿ ಸಸ್ಯಾಹಾರದ ಬಳಕೆ ಮಾಡುವುದು ಕೂಡ ಹನಿ ಹನಿಯಾಗಿ ಭೂಮಿಯಲ್ಲಿ ಪ್ರಾಣಿ – ಸಸ್ಯ ವರ್ಗಗಳ ಬದುಕು ಸಹ್ಯವಾಗುವಲ್ಲಿ ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ.

    – ರಾಂ

    Like

    • ಧನ್ಯವಾದಗಳು ರಾಂ. ಈಗಿನ ‘ಧರೆ ಹತ್ತಿ ಉರಿದೊಡೆ’ ಹತ್ತಲು ಮರಗಳಿಲ್ಲ, ನಂದಿಸಲು ನೀರಿಲ್ಲ ಅನ್ನುವ ಸಂದೇಶವನ್ನು ಚಿಕ್ಕ ‘ಆಟದ’ ಮುಖಾಂತರ ಎಚ್ಚರಿಸಿದ ಶೋ ಅದಾಗಿತ್ತು. ಗಡ್ಡಕ್ಕೆ ಬೆಂಕಿ ಹತ್ತಿದೆ. ಬಾವಿ ಯಾವಾಗ ತೋಡುವೆವು? ಮರಳು ಸೋರುತ್ತಿದೆ! ಕೊನೆಯ ಗಳಿಗೆಯಲ್ಲೇ ಎಚ್ಚತ್ತುಕೊಳ್ಳುವದೇ ರೂಢಿಯಾಗಿದೆ, ಎಲ್ಲ ರಂಗದಲ್ಲಿಯೂ!

      Like

Leave a comment

This site uses Akismet to reduce spam. Learn how your comment data is processed.