ಒಂದೋ ಎರಡೋ ಬಾಳೆಲೆ ಹರಡೋ ಮತ್ತು ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಆತ್ಮೀಯ  ಓದುಗರಿಗೆ ನಮಸ್ಕಾರ

ರುಚಿಯಾದ ಅಡಿಗೆ ಮಾಡುವದು ಕಷ್ಟವೆಂದರೆ ಮಾಡಿದ್ದನ್ನು ತಿನ್ನುವುದೂ ಕೂಡ  ಕಷ್ಟವೆಂಬುವುದು  ಬಹು ಜನರಿಗೆ ಗೊತ್ತಿರಿಲರಾರದ ಸಂಗತಿ ಇರಬಹುದು . ಪ್ರಪಂಚದ ಬೇರೆ ಬೇರೆ ದೇಶಗಲ್ಲಿ ತಿನ್ನುವ ಆಹಾರ ವಿಭಿನ್ನವಾಗಿದ್ದರೆ, ತಿನ್ನುವ ಪದ್ಧತಿ ಕೂಡ ಅಷ್ಟೇ ವಿಭಿನ್ನವಾಗಿದೆ. ನಾನು ಮೊದಲು ಸಲ ಈ ದೇಶಕ್ಕೆ ಬಂದಾಗ ಫೋರ್ಕ್ ಮತ್ತು ಚಮಚ ಹಿಡಿದು ತಿನ್ನಲು ಹೋಗಿ ಹಾಗು ಜಪನೀಸ ನೂಡಲ್ಸನ್ನು ಕಡ್ಡಿಯಿಂದ ಎತ್ತಲು ಹೋಗಿ ನಗೆಪಾಡಾಗಿದ್ದು ಇನ್ನೂ ನೆನಪು. ಡೈನಿಂಗ್ ಟೇಬಲ್ ಮೇಲೆ ಕುಳಿತು ಆರಾಮವಾಗಿ ತಿನ್ನುವವರಿಗೆ ನಮ್ಮ ಹಳ್ಳಿಗೆ ಕರೆದೊಯ್ದು ಹಾಸಿದ ಚಾಪೆಯ ಮೇಲೆ ಕುಳಿತು ತಿನ್ನಲು ಹೇಳಿದರೆ ಎಂಥ ಕಷ್ಟವಾದೀತು? ಇಂಥ ವಿಷಯದ ಮೇಲೆ ಸರಾಳವಾಗಿ ಜುಳು ಜುಳು ನೀರಿನಂತೆ ಹರಿಯುವ ‘ ಹರಟೆ ‘ ಓದಲು ಸಿಕ್ಕರೆ ಮನಸಿಗೆ ಎಷ್ಟೊಂದು ಖುಷಿ ! ಇಷ್ಟು ಸಲೀಸಾಗಿ  ಹರಟೆಯನ್ನು ಬರೆಯಲು ಗೌರಿ ಪ್ರಸನ್ನನವರನ್ನು ಬಿಟ್ಟರೆ ಇನ್ನ್ಯಾರಿಗೆ ಸಾಧ್ಯ? ಬನ್ನಿ, ತಪ್ಪದೆ ಅವರ ಹರಟೆಯನ್ನು ಓದಿ ಆನಂದಿಸಿ .

ಒಬ್ಬೊಬ್ಬರ ಜೀವನದಲ್ಲೂ ಇನ್ನೊಬ್ಬ ಪ್ರಭಾವಿತ ವ್ಯಕ್ತಿಯ ಪ್ರಭಾವ ಇರುವದು ಸಹಜ. ನನ್ನ ಚಿಕ್ಕ ವಯಸಿನಲ್ಲಿ ಕನ್ನಡ ಸಾಹಿತ್ಯದತ್ತ ಅಭಿರುಚಿ ಬೆಳೆಯಲು ಕಾರಣರಾದವರು ನನ್ನ ನೆಚ್ಚಿನ ಕಾದಂಬರಿಕಾರ್ತಿ ‘ತ್ರಿವೇಣಿ’ ಯವರು . ಸೆಪ್ಟೆಂಬರ್ ೧ ಅವರ ಹುಟ್ಟುದಿನ . ಈ ಸಮಯದಲ್ಲಿ ನಾನು ಅವರಿಗೊಂದು ಹೃತ್ಪೂರ್ವಕ ನಮನ ಸಲ್ಲಿಸಲು ಸಣ್ಣ ಬರಹವನ್ನು ಬರೆದಿರುವೆ , ತಾವೆಲ್ಲಾ ಓದುವಿರೆಂದು ಭಾವಿಸಿರುವೆ 

ದಯವಿಟ್ಟು ಎರಡೂ ಬರಹಗಳನ್ನು ಸಮಯ ಸಿಕ್ಕಾಗ ಓದಿ , ಹಾಗೆಯೇ ಎರಡಕ್ಷರದ ಅನಿಸಿಕೆಯನ್ನು ಬರೆಯಲು ಮರೆಯಬೇಡಿ 

–  ಸಂಪಾದಕ 

ಒಂದೋ ಎರಡೋ ಬಾಳೆಲೆ ಹರಡೋ

ಗೌರಿ ಪ್ರಸನ್ನ

‘ಒಂದೋ ಎರಡೋ ಬಾಳೆಲೆ ಹರಡೋ’ ಅನ್ನುವ ಹಾಡಿನಿಂದಲೇ ನಮ್ಮ ಒನ್ನೆತ್ತಾ ಶುರುವಾಗಿ ನಾವು ರಾಕ್ಷಸ ಗಣದಿಂದ ಸಾಕ್ಷರರಾಗುವತ್ತ ಮೊದಲ ಹೆಜ್ಜೆಯಿಟ್ಟದ್ದು. ನಮಗೆ ಆಗಲೂ, ಈಗಲೂ ಊಟದ ಆಟ ಕೊಟ್ಟಷ್ಟು ಖುಷಿ ಬೇರಾವುದೂ ಕೊಟ್ಟಿಲ್ಲ ಅನಬಹುದು. ನಾ ಎಷ್ಟೋ ಸಲ ವಿಚಾರ ಮಾಡತಿರತೀನಿ. ಈ ‘ಊಟ’ ಅನ್ನೂದು ಇರಲಿಲ್ಲಂದ್ರ ಕೆಲಸನs ಇರತಿರಲಿಲ್ಲ ಅಂತ. ನಾವೂ ಗಿಡಮರಬಳ್ಳಿಗಳ ಗತೆ ಅಥವಾ ಕೋಯಿಮಿಲ್ ಗಯಾದ ‘ಜಾದೂ’ ನ ಗತೆ ಬರೀ ಸೂರ್ಯನ ಬಿಸಿಲೋ, ನೀರೋ ಇವುಗಳಿಂದನೇ ಬದುಕೂ ಹಂಗಿದ್ರ ಯಾವ ಕೆಲಸದ ರಗಳೆನೇ ಇರತಿರಲಿಲ್ಲ. ಕನಿಷ್ಠ ಪಕ್ಷ ಪಶುಪಕ್ಷಿಗಳ ಗತೆ ಸೊಪ್ಪು, ಹುಲ್ಲು, ಹಣ್ಣುಹಂಪಲ, ಹಸಿಮಾಂಸಗಳನ್ನು ಹಂಗೇ ನೇರವಾಗಿ ತಿನ್ನೂ ಹಂಗಿದ್ರ ಹೆಂಗಿರತಿತ್ತು..?! ಆವಾಗ ಈ ಭಾಂಡಿ ತೊಳಿ, ಕಟ್ಟಿ ಒರಸು, ಕಿರಾಣಿ ತಗೊಂಬಾ, ಕಾಸು, ಕಟ್ಟು, ಕುದಿಸು, ಬೇಯಿಸು, ಹೆಚ್ಚು, ಕೊಚ್ಚು, ತೊಳಿ, ಬಳಿ ಅನ್ನೋ ಯಾವ ಉಸಾಬರಿನೂ ಇರತಿರಲಿಲ್ಲ. ಹಂಗಂದ್ರ ಈ ಊಟನೇ ಎಲ್ಲಾದಕ್ಕೂ ಮೂಲ ಅಂದ್ಹಂಗಾತು. ದಾಸರೂ ಸಹಿತ ಅದಕ್ಕಾಗೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅಂತ ಇನ್ ಡೈರೆಕ್ಟ್ ಆಗಿ ಈ ಊಟದ ಬಗ್ಗೆನೇ ಹೇಳ್ಯಾರ ಅನಸತದ.  ‘ತಂಡುಲದ ಹಿಡಿಯೊಂದು, ತುಂಡು ಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ’ ಅಂತಾರ ನಮ್ಮ ತಿಮ್ಮ ಗುರು.

 ಊಟಾ ಏನೋ ಎಲ್ಲಾರೂ ಮಾಡತಾರ. ಮಾಡಿದ್ದಣ್ಣೋ ಮಹರಾಯ ಅಂತ ಕೆಲವರು ತಾವೇ ಕೈ ಸುಟಗೊಂಡು ಬಾಯಿನೂ ಸುಟಗೋತಾರ. ಇನ್ನ ಕೆಲವರು ಏನೂ ಬಿಸಿಯಿಲ್ಲದೇ ಖಮ್ಮಗ ಮತ್ತೊಬ್ಬರು ಮಾಡಿ ಹಾಕಿದ್ದನ್ನ ಸುಮ್ಮ ತಿಂದು ಬಿಮ್ಮಗಿರತಾರ. ಮತ್ತೂ ಕೆಲವರು ತಿನ್ನೂತನಾ ತಿಂದು ಆಮ್ಯಾಲೆ “ಹೋಳ ಭಾಳ ಹಣ್ಣ ಬೆಂದಾವ ಅಂತಲೋ, ಬ್ಯಾಳಿ ಬೆಂದೇ ಇಲ್ಲ” ಅಂತನೋ ಕಿಟಿಪಿಟಿ ನಡಸಿರತಾರ. ಅಂತೂ ಊಟ ಅಂಬೋ ಆಟ ಅವರವರದೇ ರೀತಿಯೊಳಗ ಎಲ್ಲಾರೂ ಆಡತಿರತಾರ. ಈ ಊಟ ಮಾಡೂ ರೀತಿ, ಅದರ ವಿಧಿ -ವಿಧಾನಗಳು ಎಷ್ಟೊಂದ ನಮೂನೀರಿ?! ಜಾಗಾದಿಂದ ಜಾಗಾಕ್ಕ ಈ ಊಟದ ರೀತಿ-ನೀತಿಗಳು ಬ್ಯಾರೆ ಬ್ಯಾರೆ ಆಗತಾವ ಅನ್ರಿ. ನಮ್ಮ ಕಡೆ ಅಂದ್ರ ದಕ್ಷಿಣ ಭಾರತದಾಗ ಬಾಳೆ ಎಲೆಗಳ ಸಂಭ್ರಮ. ಏನರೇ ಹಬ್ಬ-ಹುಣ್ಣಿಮಿ, ಮದುವಿ-ಮುಂಜಿವಿ, ಆರಾಧನಿ-ಸಮಾರಾಧನಿ ಅಂತೆಲ್ಲ ಇದ್ರ  ಬಾಳೆಎಲೆ ಊಟ ಗ್ಯಾರಂಟೀರಿ. ನಾವು ಸಣ್ಣವರಿದ್ದಾಗ ರವಿವಾರಕ್ಕೊಮ್ಮೆ ಸಂತ್ಯಾಗ ಬಾಳಿ ಎಲಿ ತಂದು, ದಿಂಡ ತಗದು, ಅವನ್ನ ಹೆಚ್ಚಿ ಸಣ್ಣಸಣ್ಣ ಎಲೆಗಳನ್ನಾಗಿ ಮಾಡಿ ಒಂದು ತಟ್ಟಿನ ಚೀಲ ‘ನಮ್’ ಅನ್ನೂ ಅಷ್ಟು ಒದ್ದಿ ಮಾಡಿ ಅದರಾಗ ಸುತ್ತಿ ಇಡತಿದ್ರು ನಮ್ಮ ಮುದ್ದಣ್ಣ ಮಾಮಾ. 15-20 ದಿನಗಟ್ಟಲೇ ಛಲೋ ಇರತಿದ್ವು. ಸ್ವಲ್ಪ ಹಳದಿ ಒಡದ್ರೂ ನಮಗೇನ ಫರಕ ಬೀಳತಿರಲಿಲ್ಲ.( ಯಾಕಂದ್ರ ನಮ್ಮ ಕಣ್ಣೆಲ್ಲ ಎಲೆಯ ಮೇಲಿನ ಖಾದ್ಯಗಳ ಬಣ್ಣದೆಡೆ ನೆಟ್ಟಿರುತ್ತಿದ್ದವೆನ್ನಿ) ಊಟಾ ಆದಮ್ಯಾಲೆ ಅವೇ ಎಲೆಗಳು ಸಾಳುಂಕೆ ಅವರ ಮನೆಯ ಎಮ್ಮೆ-ಆಕಳುಗಳಿಗೆ  ಸುಗ್ರಾಸ ಭೋಜನವಾಗುತ್ತಿದ್ದವು. 

 ಈ ಬಾಳೆ ಎಲಿ ಹೆಂಗ ಹಾಕಬೇಕು ಅನ್ನೂದೇ ಒಂದು ಸಮಸ್ಯೆ ಹಲವರಿಗೆ. ಉದ್ದ ಹಾಕಬೇಕೋ, ಅಡ್ಡ ಹಾಕಬೇಕೋ, ಅದರ ಮಾರಿ ಯಾವ ಕಡೆ ಇರಬೇಕು, ಕುಡಿ ಬಾಳೆ ಎಲಿ ಹಾಕಬೇಕೋ ಬ್ಯಾಡೋ ..ಹೀಂಗ ನೂರಾ ಎಂಟು ಪ್ರಶ್ನೆ ಇರತಾವರೀ ( ಯಾಕಂದ್ರ ಚೊಚ್ಚಲ ಗಂಡಸ ಮಕ್ಕಳಿದ್ದವರು ಕುಡಿ ಬಾಳಿ ಎಲ್ಯಾಗ ಉಣಬಾರದಂತ ಶಾಸ್ತ್ರ ಅದ ಅಂತರಿ).  ಎಲಿ ಹಾಕಿದ ಮ್ಯಾಲೆ ಇನ್ನ ಸಾಲಕ ಉಪ್ಪಿನ ಹಿಡಕೊಂಡು ಚಟ್ಟಿ, ಕೋಸಂಬ್ರಿ, ಪಲ್ಯಾ, ಕಾರೇಸಾ, ಬುರಬುರಿ, ಪಾಯಸ, ಅನ್ನ, ತೊವ್ವೆಗಳಿಗಲ್ಲ ಅದರದರದೇ ನಿರ್ದಿಷ್ಟ ಜಾಗ ಇರತಾವರೀ. ಉಪ್ಪು ಎಡಕ್ಕ, ಪಾಯಸ ಬಲಕ್ಕ, ಅನ್ನದ ಬಲಬದಿಗೆ ತೊವ್ವೆ, ಅದರ ಮೇಲೆ ತುಪ್ಪ … ಹೀಂಗ ಏನೇನೋ. ಅವೆಲ್ಲ ಅದಲು ಬದಲು ಆಗೂ ಹಂಗಿಲ್ರೀ. ನೀವೇನರೇ ಪಾಯಸ ಎಡಕ್ಕ ಬಡಸಿದಿರೋ ‘ಹುಚ್ಚ ಖೋಡಿ’ ಅಂತ ಗ್ಯಾರಂಟಿ ಬಯ್ಯಿಸಿಕೋತಿರಿ. ಕೆಲವು ಮಂದಿ ಅಂತೂ ವಾಗತ್ಯ ಮಾಡಿಕೋತಾರ. ಹಂಗಂತ ಇದೇ ಸರಿ ಅಂತ ಅಲ್ರಿ. ಕೆಲವರಲ್ಲಿ ಉಪ್ಪಿಲ್ಲದೇ ಊಟ ಬಡಿಸುವಂತಿಲ್ಲ. ಇನ್ನ ಕೆಲವರಲ್ಲಿ ಮೊದಲು ಉಪ್ಪು ಹಾಕುವಂತಿಲ್ಲ. ಕೆಲವರಲ್ಲಿ ಪಾಯಸ- ಪರಮಾನ್ನದಿಂದ ಊಟ ಆರಂಭ ಆದ್ರ, ಇನ್ನ ಕೆಲವರಲ್ಲಿ ‘ಡೆಸರ್ಟ್’ಅಂತ ಊಟ ಆದಮ್ಯಾಲೆ ತಿಂತಾರ. ಕೆಲವೆಡೆ ಶುಭ ಸಂದರ್ಭಗಳಲ್ಲಿ ಮುದ್ದಿಪಲ್ಯ ನಿಷಿದ್ಧ. ಇನ್ನು ಕೆಲವೆಡೆ ಅದು ಕಂಪಲ್ಸರಿ ಇರಲೇಬೇಕು. ಕೆಲವರಿಗೆ ಭಕ್ರಿ-ಬದನೆಕಾಯಿ ಹಬ್ಬಹರಿದಿನಗಳಲ್ಲಿ ನಿಷಿದ್ಧ.  ಇನ್ನು ಕೆಲವರಲ್ಲಿ ಮದುವೆ ಊಟಕ್ಕೂ ಅವು ಬೇಕು. ಹೀಂಗ ದೇಶ-ಕಾಲ ಭೇದಗಳು ಭಾಳ ಇರತಾವ್ರಿ ಈ ಊಟದಾಗ.

ಈ ಬಾಳಿ ಎಲಿ ಊಟದ ಮಜಾನೇ ಬ್ಯಾರೆ ಇರತದ್ರಿ. ಮದುವಿ ಭೂಮದಾಗಂತೂ ಇಷ್ಟುದ್ದ ಏಕ ಎಲಿ ಮ್ಯಾಲೆ ಬಡಿಸಿದ ನಾನಾ ನಮೂನಿ ಸಂಡಿಗಿ-ಹಪ್ಪಳ-ಮಂಡಿಗೆಗಳು, ಶ್ಯಾವಿಗೆ-ಬಟವಿ ಪಾಯಸಗಳು, ಎಲೆ ಮುಂದೆ ಹಾಕಿದ ಬಣ್ಣಬಣ್ಣದ ಮನಸೆಳೆವ ರಂಗೋಲಿಗಳು, ಬೆಳಗುತ್ತಿರುವ ಸಮೆಗಳು… ನೋಡೂ ಹಂಗ ಇರತದ. ಆದ್ರ ಮಣೆ ಮ್ಯಾಲೆ ಕೂತು ಎಲೆ ತುದಿಯ ಖಾದ್ಯಗಳನ್ನೆಲ್ಲ ಬಗ್ಗಿ ಬಗ್ಗಿ ಹೆಕ್ಕಿ ತಿನ್ನೂದರಾಗ ದೊಡ್ಡ ಸರ್ಕಸ್ಸೇ ಆಗತದ. ಮೊನ್ನೆ ಇಲ್ಲೊಬ್ಬರ ಮನ್ಯಾಗ ವಾಸ್ತುಶಾಂತಿಗಂತ ಊಟಕ್ಕ ಕರದಿದ್ರು. ತಾಜಾ ಹಸರ ದೊಡ್ಡದೊಡ್ಡ ಬಾಳಿಎಲಿ ಮ್ಯಾಲೆ ಛಂದಾಗಿ ಬಡಸಿದ್ರು. ಆದ್ರ ಆ ಭಾರೀ ಜರದ ರೇಶ್ಮೆ ಸೀರೆ ಉಟಗೊಂಡು , ನಮ್ಮ ಗಜಗಾತ್ರದ ದೇಹ ಹೊತಗೊಂಡು , ಕೆಳಗ ನೆಲದ ಮ್ಯಾಲೆ ಕೂತು ಊಟಾ ಮಾಡೂದರಾಗ ‘ಊಟಾನೂ ಇಷ್ಟ ತ್ರಾಸಿಂದs’ ಅಂತ ಅನ್ನಿಸಿಬಿಡತರೀ. ಯಾಕಂದ್ರ ಕೋಸಂಬ್ರಿ, ಅಂಬೊಡೆ, ಮೈಸೂರ ಪಾಕು ಎಲ್ಲಾ ಮುಂದ ಹಾಕಿಬಿಟ್ಟಾರ್ರೀ. ಬಗ್ಗಬೇಕಂದ್ರ ನಮ್ಮ ಹೊಟ್ಟಿ ಅಡ್ಡ. ಕಡೀಕೆ ನಾ ಬಡಸಲಿಕ್ಕೆ ಬಂದವರಿಗೆ ಹೇಳೇಬಿಟ್ಟೆ. ’ಇಲ್ಲೇ ಇತ್ತತ್ತೇ ಹಾಕಿಬಿಡ್ರಿ. ಬಗ್ಗಲಿಕ್ಕೆ ಆಗಂಗಿಲ್ಲ’ ಅಂತ. ಅವರೂ ನನ್ನ ಮಾರಿ ನೋಡಿ ನಕ್ಕೋತ ಹಾಕಿ ಹೋದ್ರ ಬಿಡ್ರಿ. ಮತ್ತೇನ ಮಾಡೂದ್ರಿ? ಊಟದ ವಿಷಯ ನಾಚಿಕೊಂಡ ಕೂತರ ಹೆಂಗ ನಡೀತದ್ರೀ? 

ಈ ಬಾಳಿ ಎಲಿ ಆವಾಂತರ ಒಂದೊಂದ ಅಲ್ರೀ. ಒಂದ ಸಲ ಶಿರಸಿಗೆ ನನ್ನ ಗೆಳತಿ ಊರಿಗೆ ಹೋಗಿದ್ದೆ. ಅಕಿ ಎಲ್ಲೋ ತಮ್ಮ ನೆಂಟರ ಮನಿಗೆ ನಮ್ಮನ್ನ ಕರಕೊಂಡು ಹೋಗಿದ್ಲು. ಅವರು ನಾವು ಬಯಲುಸೀಮಿಯಿಂದ ಬಂದವರು, ತಮ್ಮೂರಿನ ಸ್ಪೆಷಲ್  ತಿನಸಬೇಕೆಂದು ತೋಟದಿಂದ ತಾಜಾ ಬಾಳಿ ಎಲಿ ಕತ್ತರಿಸಿಕೊಂಡು ಬಂದು ಮನೆಯ ತೋಟದ ರುಚಿರುಚಿಯಾದ ಘಮಗುಡುವ ಮಾವಿನಹಣ್ಣಿನ ಸೀಕರಣೆಯನ್ನು ಹಲಸಿನ ಹಪ್ಪಳದ ಜೋಡಿಗೆ ಅದರಾಗ ಬಡಿಸಿದರು. ನಾ ಕಕ್ಕಾಬಿಕ್ಕಿ. ಬಾಳಿಎಲ್ಯಾಗ ಸೀಕರಣಿ ಹೆಂಗ ತಿನ್ನೂದ್ರಿ?! ಅದು ಹರಕೊಂಡು ಹೊಂಟದ. ಕೈಯಾಗ ತಗೊಂಡು ನೆಕ್ಕಲಿಕ್ಕ ಹೋದ್ರ ಮೊಣಕೈತನಾ ಸೋರಿ ಸೀರಿ ಮ್ಯಾಲೆ ಬೀಳಲಿಕ್ಹತ್ತೇದ. ಅವರು ಆದರ ಮಾಡಿ ಬಲವಂತ ಮಾಡಿದರೂ ಹಾಕಿಸಿಕೊಳ್ಳಲಾರದಂಥ ಪರಿಸ್ಥಿತಿ. ಒಂದ ಬಟ್ಟಲದಾಗೋ, ದೊನ್ನ್ಯಾಗೋ ಹಾಕಿಕೊಡಬಾರದs ಅಂತ ಮನಸಿನಾಗ ಬಯ್ಯಕೋತ ಅಂಥ ರುಚಿಯಾದ ಸೀಕರಣೀನ್ನ ಸುಡ್ಲಿ ಈ ಬಾಳಿ ಎಲ್ಯಾಗ ಬಡಿಸಿದ್ರು ಅಂತ ತಿನ್ನಲಾರದ ಬಿಡೂದಾತು.

ಈ ಬಾಳಿ ಎಲಿ ಊಟೇನೋ ಛಂದ. ಆದ್ರ ಆಮ್ಯಾಲೇನರೇ ಎಂಜಲಾಗ್ವಾಮಾ ಮಾಡೂ ಪಾಳಿ ಬಂತೋ .. ಭಾರೀ ತ್ರಾಸರೀ. 

ಅಂತೂ ಊಟಾ ಮಾಡೂದು (ಅದೂ ಬಾಳೆ ಎಲಿದು)  ಆಟಾ ಆಡೂದರಷ್ಟ ಸರಳ ಅಲ್ಲಾ ಅನ್ನೂದು ನನ್ನ ಅಂಬೋಣ. ನೀವೇನಂತೀರಿ? 

ವಿ.ಸೂ. ಇನ್ನ ನನ್ನ ಕೊರೆತ ಮುಗದಿಲ್ಲಾ. ಈಗ ಒಂದೋ, ಎರಡೋ.. ಆಗೇದ. ಇನ್ನ ಮೂರೋ, ನಾಕೋ, ಐದೋ, ಆರೋ ಎಲ್ಲಾ ಬಾಕಿ ಅವ. ಮಾನಸಿಕವಾಗಿ ಸಿದ್ಧವಾಗಿರಿ ಕೊರೆಸಿಕೊಳ್ಳಲು..

ಮೂಲ ಕವಿಯ ಕ್ಷಮೆ ಯಾಚಿಸಿ..

ಒಂದೋ, ಎರಡೋ ..ಬಾಳೆಲೆ ಹರಡೋ

( ನೀರ ತಗೋರಿ..ಎರಡೆಳಿ ರಂಗೋಲಿ ಹಾಕ್ರಿ)

ಮೂರೋ, ನಾಕೋ ಅನ್ನವ ಹಾಕೋ

(ಚಟ್ನಿ,ಕೋಸಂಬ್ರಿ, ಪರಮಾನ್ನ??!!)

ಐದೋ, ಆರೋ ಬೇಳೆಯ ಸಾರೋ

(ತವ್ವಿ, ತುಪ್ಪ ತಗೋರಿ ಮದಲs)

ಏಳೋ, ಎಂಟೋ ಪಲ್ಯಕೆ ದಂಟೋ

(ಪಲ್ಯಾ ಮದಲs ಬರಬೇಕಿತ್ತಲ್ರೀ .)

ಒಂಬತ್ತೋ, ಹತ್ತೋ ಎಲೆ ಮುದುರೆತ್ತು

(ಸ್ವೀಟು, ಚಿತ್ರಾನ್ನ, ಮೊಸರನ್ನ ಎಲ್ರಿ?)

ಒಂದರಿಂದ ಹತ್ತು ಹೀಗಿತ್ತು..

(ಒಂದರಿಂದ ನೂರಿದ್ರೂ ನಡೀತಿತ್ರೀ..

ಯಾವುದೂ ಐಟಂ ಬಿಡಬಾರದಿತ್ರಿ)

ಊಟದ ಆಟವು ಮುಗಿದಿತ್ತು

(ಉಸಿರಿನ ಓಟವೂ  ನಿಂತಿತ್ತು..)

ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಶಿವಶಂಕರ ಮೇಟಿ

(ಚಿತ್ರ: ಗೂಗಲ್ ಕೃಪೆ)

ಸೆಪ್ಟೆಂಬರ್ ೧ ಕನ್ನಡದ  ಕಾದಂಬರಿಗಾರ್ತಿಯರ ಇತಿಹಾಸದಲ್ಲಿ ನೆನಪಿಡುವ ದಿನ . ಏನಿದರ ವಿಶೇಷತೆ ಎನ್ನುತ್ತೀರಾ ?

ಇದು ಕನ್ನಡದ  ಕಾದಂಬರಿ ಲೋಕ ಕಂಡ ಅಪರೂಪದ ಲೇಖಕಿ ತ್ರಿವೇಣಿಯವರ ಜನುಮ ದಿನ . ಬಾಲ್ಯದಿಂದಲೂ ನನಗೆ ಅವರ ಮೇಲಿರುವ ಅಪಾರ ಗೌರವದ ಋಣಿಯಾಗಿ,  ಇದೊಂದು ಸಣ್ಣ ಲೇಖನದ ಮೂಲಕ ಅವರಿಗೊಂದು ನಮನ .

ಕನ್ನಡದ ‘ಜೇನ್ ಆಸ್ಟಿನ್ ‘ ಎಂದೇ ಹೆಸರಾಗಿದ್ದ ತ್ರಿವೇಣಿಯವರು ಹುಟ್ಟಿದ್ದು ಸೆಪ್ಟೆಂಬರ್ ೧ , ೧೯೨೮ ರಲ್ಲಿ . ಮೈಸೂರಿನ ಚಾಮರಾಜಪುರದಲ್ಲಿ ಜನನ . ಭಾಗೀರಥಿ ಜನ್ಮನಾಮವಾದರೂ ‘ಅನಸೂಯಾ’ ಆಗಿ ಶಾಲೆಗೆ ಸೇರಿ, ‘ತ್ರಿವೇಣಿ ‘ಎಂಬ  ಲೇಖನಿ ಹೆಸರಿನಿಂದ ಕನ್ನಡ ಸಾಹಿತ್ಯಕ್ಕೆ ಚಿರ ಪರಿಚಿತರಾದವರು. ಸಾಹಿತ್ಯ ಸಂಸ್ಕೃತಿಯ ಮನೆಯ ವಾತಾವರಣದಲ್ಲಿ ಬೆಳೆದ ಅವರಿಗೆ ಬಾಲ್ಯದಿಂದಲೂ ಓದುವ ಹುಚ್ಚು ಸಹಜವಾಗಿತ್ತು ( ಬಿ ಎಂ ಶ್ರೀ  ಚಿಕ್ಕಪ್ಪ ಮತ್ತು ವಾಣಿ ಸೋದರ ಸಂಬಂಧಿ ). ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಂಗಾರದ ಪದಕದೊಂದಿಗೆ ಬಿ. ಎ ಮುಗಿಸಿದ  ಅವರಿಗೆ  ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ಬಗ್ಗೆ ತುಂಬ ಆಸಕ್ತಿ ಇತ್ತು. 

ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರೂ ಅಂತರಾಳದಲ್ಲಿ ಅಡಗಿದ್ದ ಸಾಹಿತ್ಯದ ಒಲವು ಅವರನ್ನು ಕಾದಂಬರಿ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಹೆಣ್ಣಿನ ಆಸೆಗಳಿಗೆ ಪುರುಷ ಪ್ರಧಾನವಾದ ಸಮಾಜದಲ್ಲಿ ಬೆಲೆಯೇ ಇಲ್ಲವೆಂದು ಪ್ರತಿಪಾದಿಸುವ ಅವರ ಮೊದಲು ಕಾದಂಬರಿ ‘ ಅಪಸ್ವರ ‘ ೧೯೫೩ ರಲ್ಲಿ ಪ್ರಕಟವಾಯಿತು. ಹೆಣ್ಣಿನ ಮಾನಸಿಕ ತುಮುಲ, ಶೋಷಣೆ, ಸಮಾಜದಲ್ಲಿ ಅವಳೆದಿರಿಸುವ ಸಮಸ್ಯೆಗಳು ಅವರ ಕಾದಂಬರಿಯ ಜೀವಾಳವಾಗಿದ್ದವು . ಮಾನಸಿಕ ರೋಗಿ ಗುಣಮುಖವಾದರೂ ಸಮಾಜ ಅವರನ್ನು ನೋಡುವ ಪರಿಯನ್ನು ‘ ಶರಪಂಜರದಲ್ಲಿ ‘ ಬಿಂಬಿಸಿದ್ದರೆ, ಯೌವ್ವನದ  ಹೊಳೆಯಲ್ಲಿ ಉಕ್ಕುವ ಕಾಮದಾಸೆ ಮತ್ತು ತಪ್ಪು ಪುರುಷನಿಗೆ ಮಾತ್ರ ಸೀಮಿತವಲ್ಲ ಹೆಣ್ಣಿಗೂ ಅನ್ವಯವಾಗುತ್ತದೆ  ಹಾಗು ಒಬ್ಬರನೊಬ್ಬರು  ಕ್ಷಮಿಸಿ ನಡೆದರೆ ಜೀವನ ಸಾರ್ಥಕವೆಂಬುವದನ್ನು ‘ಸೋತು ಗೆದ್ದವಳು’ ಎಂಬ ಕಾದಂಬರಿಯಲ್ಲಿ  ಚಿತ್ರಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ದಲ್ಲಿ ವಿಧವಾ ವಿವಾಹದ ವಿಷಯವಿದ್ದರೆ ‘ಹೂವು ಹಣ್ಣು’ ನಲ್ಲಿ ಅಸಹಾಯಕ ಹೆಣ್ಣು ವೇಶ್ಯಾ ವೃತ್ತಿಯ  ಜಾಲದಲ್ಲಿ ಸಿಲುಕುವ ವ್ಯಥೆಯಿದೆ. ಅವರ ಒಂದೊಂದು ಕಾದಂಬರಿಗಳನ್ನು ವಿಮರ್ಶಿಸಲು ನೂರಾರು ಪುಟಗಳೇ ಬೇಕಾಗಬಹುದು . ಅವರು ಬರೆದ ೨೧ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ೨೧ ಮುತ್ತುಗಳು ಎಂದರೆ ತಪ್ಪಾಗಲಾರದು.

ಐವತ್ತರಿಂದ  ಅರವತ್ತರ ದಶಕದಲ್ಲಿ ಬರೆದ ಅವರ ಕಾದಂಬರಿಗಳು ಹಳೆಯದಾದರೂ , ಕಾದಂಬರಿಯ ಕಥೆಗಳಲ್ಲಿ ಇರುವ ವಿಚಾರಧಾರೆ ಮತ್ತು ಪಾತ್ರಗಳು ಇಂದಿನ ಆಧುನಿಕ ಸಮಾಜದಲ್ಲೂ ನವ್ಯವೆಂದು ಅನಿಸುತ್ತವೆ. ಅವರ ಹಲವಾರು ಕಾದಂಬರಿಗಳು ಬೇರೆ  ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಾಮಾನ್ಯ ಓದುಗರನ್ನು ಮಾತ್ರವಲ್ಲ ಪ್ರಸಿದ್ಧ ಚಿತ್ರ ನಿರ್ದೇಶಕರನ್ನು ಕೂಡಾ ಆಕರ್ಷಿಸಿದ್ದವು . ಇಪ್ಪತ್ತೊಂದರಲ್ಲಿ ಏಳು ಕಾದಂಬರಿಗಳು ಸುಪ್ರಸಿದ್ದ ಕನ್ನಡ ಚಿತ್ರಗಳಾಗಿ ಬೆಳ್ಳಿ ತೆರೆಯನ್ನು ಕಂಡಿವೆ. ಶರಪಂಜರ , ಬೆಕ್ಕಿನ ಕಣ್ಣು ಮತ್ತು ಬೆಳ್ಳಿಮೋಡ  ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರೆ , ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು, ಕಂಕಣ ಮತ್ತು ಮುಕ್ತಿ  ಬೇರೆ ಪ್ರಸಿದ್ಧ ನಿರ್ದೇಶಕರಿಂದ  ತೆರೆಯನ್ನು ಕಂಡಿವೆ.

ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು . ‘ಅವಳ ಮನೆ’ ಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ , ‘ಕಂಕಣ’ ದ ಕಥೆಗೆ ಕರ್ನಾಟಕ ಮೋಶನ್ ಪಿಕ್ಚರ್ ಪ್ರಶಸ್ತಿ ಬಂದಿತ್ತು . 

ಸಾಹಿತ್ಯ ಜೀವನದಲ್ಲಿ ಸವಿಯಿದ್ದರೂ ಅವರ ಸ್ವಂತ ಜೀವನದಲ್ಲಿ ನೋವಿನ ಅಲೆಯಿತ್ತು. ಮೆಚ್ಚಿ ಕೈ  ಹಿಡಿದ ಪ್ರೋತ್ಸಾಹಕ ಪತಿಯಿದ್ದರೂ (ಪ್ರೊಫೆಸ್ಸರ್ ಶಂಕರ್), ಹನ್ನೆರಡು ವರ್ಷದ ದಾಂಪತ್ಯ ಜೀವನದಲ್ಲಿ ಮಕ್ಕಳಾಗಲಿಲ್ಲ ಎಂಬ ಕೊರಗು ಸದಾ ಅವರನ್ನು ಕೊರೆಯುತಲಿತ್ತು . ಎರಡು ಸಲ ಗರ್ಭಪಾತವಾದಾಗ ಅವರು ಕುಸಿದು ಹೋಗಿದ್ದರು. ತಮ್ಮ ಮಾನಸಿಕ ವೇದನೆಯನ್ನು ‘ಅತಿಥಿ ಬರಲೇ ಇಲ್ಲ’ ಎಂಬ ಕಥೆಯಲ್ಲಿ ತೋಡಿಕೊಂಡಿದ್ದಾರೆ.

ಆದರೆ  ಕೊನೆಗೂ ಅತಿಥಿ ಬಂದಾಗ ವಿಧಿ ಅವರ ಅದೃಷ್ಟದ ಪುಟವನ್ನು ಬೇರೆ ರೀತಿಯಲ್ಲಿ ಬರೆದಿತ್ತು ಜುಲೈ ೧೯ , ೧೯೬೩ ರಲ್ಲಿ ಅವರು ಹೆಣ್ಣು ಮಗುವಿಗೆ  ಜನ್ಮವಿತ್ತಿದ್ದರು. ಹತ್ತು ದಿನಗಳ ನಂತರ ಪಲ್ಮನರಿ ಎಂಬೋಲಿಸಂ (ಶ್ವಾಸಕೋಶದಲ್ಲಿ ಸಿಲುಕಿದ ರಕ್ತದ ಹೆಪ್ಪು) ಗೆ ಬಲಿಯಾಗಿ  ಕೊನೆಯ ಉಸಿರನ್ನು ಎಳೆದರು . ಮೂವತ್ತೈದರ ಹರೆಯದಲ್ಲಿ ಇನ್ನೂ ಬಾಳಿ , ಬದುಕಿ ಹೆಮ್ಮರವಾಗಬೇಕಿದ್ದ ಪ್ರತಿಭೆಯ ಸಸಿ ಕಮರಿ ಹೋಯಿತು. ಕನ್ನಡದ  ಕಾದಂಬರಿ ಲೋಕ ಒಬ್ಬ ಮಹಾನ್  ಲೇಖಕಿಯನ್ನು ಕಳೆದುಕೊಂಡಿತು. ಅವರು ಇನ್ನು ಹೆಚ್ಚಿಗೆ ಬಾಳಿ  ಬದುಕಿದ್ದರೆ  ಅದೆಷ್ಟು ಪ್ರಸಿದ್ಧ ಕಾದಂಬರಿಗಳು  ಕನ್ನಡ ಸಾಹಿತ್ಯವನ್ನು ಸೇರುತ್ತಿದ್ದವೋ? ಇನ್ನೆಷ್ಟೋ ರಂಜಿತ ಚಲನ ಚಿತ್ರಗಳು ತೆರೆ ಕಾಣುತಿದ್ದವೋ ಎಂಬುದು ಕಲ್ಪನೆ ಮಾತ್ರ ಅವರು ಬದುಕಿರುವಾಗ ಅವರ ಯಾವುದೇ ಕಾದಂಬರಿಗಳು ಚಲನ ಚಿತ್ರಗಳಾಗಿರಲಿಲ್ಲ ಎಂಬುದು ವಿಷಾದನೀಯ .

ಅವರ ಮಗಳು  ಮೀರಾ ಶಂಕರ್ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಚಾಮರಾಜಪುರದಲ್ಲಿ ಸುಮಾರು ಇನ್ನೂರು ವರ್ಷದಷ್ಟು ಹಳೆಯದಾದ ಅವರ ಮನೆಯನ್ನು ‘ತ್ರಿವೇಣಿ ಮ್ಯೂಸಿಯಂ’ ಆಗಿ ಪರಿವರ್ತಿಸಲಿದ್ದಾರೆ. ಮ್ಯೂಸಿಯಂನ ಜೊತೆಗೆ ಅವರ ಹೆಸರು ನವ ಪೀಳಿಗೆಗೆ ಗೊತ್ತಾಗಲಿ ಮತ್ತು ಅಮರವಾಗಿ ಉಳಿಯಲಿ ಎಂಬುವದು ನನ್ನ ಆಸೆ.

ತ್ರಿವೇಣಿಯವರು ಇಂದಿಗೂ ನನ್ನ ನೆಚ್ಚಿನ ಲೇಖಕಿ . ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ದೊರೆತ ಅವರ ಎರಡು ಕಾದಂಬರಿಗಳು ನನಗೆ ಕನ್ನಡ ಸಾಹಿತ್ಯ ಲೋಕಕ್ಕೆ ದಾರಿಯನ್ನು ತೋರಿಸಿದ್ದವು . ಪುಸ್ತಕಗಳನ್ನು ಓದುವ ಹುಮ್ಮಸ್ಸವನ್ನು ಹುಟ್ಟಿಸಿದ್ದವು. ಅವರ  ಉಳಿದ  ಕಾದಂಬರಿಗಳನ್ನು ಓದುವ ತವಕ ಮನಸಿನಲ್ಲಿ ಸದಾ ಇತ್ತು ಆದರೆ  ಅವಕಾಶ ಸಿಕ್ಕಿರಲಿಲ್ಲ . ಹೈಸ್ಕೂಲಿಗೆಂದು ಪಕ್ಕದ ಬೈಲಹೊಂಗಲಕ್ಕೆ ಸೇರಿದಾಗ ನಾನು ಮೊದಲು ಮಾಡಿದ ಕೆಲಸ ಗ್ರಂಥಾಲಯದ ಸದಸ್ಯನಾಗಿದ್ದು (ಸುಳ್ಳು ವಯಸ್ಸು ಹೇಳಿ ). ಅವರ  ಎಲ್ಲ  ಕಾದಂಬರಿಗಳು ಗ್ರಂಥಾಲಯದಲ್ಲಿ ಸಿಗದೇ ಇದ್ದರೂ ಸುಮಾರು ಪುಸ್ತಕಗಳು ಸಿಕ್ಕಿದ್ದು ಮನಸಿಗೆ ಖುಷಿ ತಂದಿತ್ತು. ತನ್ಮಯನಾಗಿ ಅವರ ಕಾದಂಬರಿಯನ್ನು ಓದುತ್ತಿದ್ದರೆ ನನಗೆ  ಆ ಕಥೆ ಎಲ್ಲೋ ನಮ್ನ ಪಕ್ಕದ ಮನೆಯಲ್ಲಿಯೇ ನಡೆದಿದೆ ಎಂದು ಅನಿಸುತಿತ್ತು. ಕಾದಂಬರಿಯ ಕಥೆ ಅಷ್ಟೊಂದು ಸರಳ  ಮತ್ತು ಸಹಜವಾಗಿರುತಿತ್ತು . 

ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದಾಗ , ಅವರ ಉಳಿದ ಕಥೆಗಳನ್ನು ಓದಲು ಅವಕಾಶ  ಸಿಕ್ಕಿದ್ದು ನನ್ನ ಜೀವನದ ಸಂತೋಷದ ಘಟನೆಗಳಲ್ಲಿ ಒಂದು ಎಂದು ಹೇಳಬಲ್ಲೆ . ಅವರ ಎಲ್ಲಾ ಪುಸ್ತಕದ ಕಿಟ್ಟು ಇಂದಿಗೂ  ‘ಅಮೆಜಾನ್  ‘ ಮಾರುಕಟ್ಟೆಯಲ್ಲಿ ಐದು ಸ್ಟಾರ್ ರಿವ್ಯೂನೊಂದಿಗೆ ಮಾರಾಟವಾಗುತ್ತಿದೆ ಎಂಬುದು ಹೆಮ್ಮೆಯ ಸಂಗತಿ .

6 thoughts on “ಒಂದೋ ಎರಡೋ ಬಾಳೆಲೆ ಹರಡೋ ಮತ್ತು ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

  1. ಗೌರಿಯವರು ಬಾಳೆ ಎಲೆಯ ಮೇಲೆ ಹರಡಿಟ್ಟ ಪದಗಳು ಹದವಾದ ಸಿಹಿಯ ಹಾಲಿನಲ್ಲಿ ಅರಳಿದ ಪೇಣಿಯ ಹೆರಳಿನಂತೆ ನಲಿದಿವೆ. ಹುರುಪಿನಿಂದ ಭಕ್ಷ್ಯದಿಂದ ಭಕ್ಷ್ಯಕ್ಕೆ ಜಿಗಿಯುವ ಊಟದ ಓಟ, ಎಂದೋ ಮೊಣಕೈ ಸವರಿದ್ದ ಮಾವಿನ ರಸಾಯನವನ್ನು ಮತ್ತೆ ನೆಕ್ಕುವಷ್ಟು ನೆನಪುಗಳನ್ನು ತಾಜಾಗೊಳಿಸಿವೆ.

    ತ್ರಿವೇಣಿಯವರನ್ನು ನೆನೆದದ್ದು ಮತ್ತೆ ಮನಸ್ಸನ್ನು ನೆನೆಸಿದೆ

    ಅನಿವಾಸಿಯರ ಅಕ್ಷರದ ಹಸಿವು ಹತ್ತಿಕ್ಕದಂತೆ ಬೆಳೆಯುತ್ತಿರಲಿ, ಹಳೆಯ ನೆನಪಿನ ಕೂಟಕ್ಕೆ ಹೊಸ ನೆನಪುಗಳ ಬುತ್ತಿ ತುಂಬಿಸುತ್ತಾ. . .

    ಮುರಳಿ

    Like

  2. ಮೇಟಿಯವರು ಅನಿವಾಸಿಯ ಮೊದಲ ಮೆಟ್ಟಿಲಲ್ಲೇ ಮಾಟಮಾಡಿದ್ದಾರೆ. ತಿನ್ನುವ ಕಷ್ಟದ ಬಗ್ಗೆ ಬರೆದಿರುವ ಟಿಪ್ಪಣೆಯಲ್ಲಿ ಒಂದು ಪ್ರಬಂಧಕ್ಕೆ ಸಾಕಾಗುವಷ್ಟು ಹೂರಣವನ್ನು ಕೊಟ್ಟಿದ್ದಾರೆ.

    ಗೌರಿಯವರ ಹರಟೆಕಟ್ಟಿ ಪ್ರತಿವಾರ ಬರಲಿ. ನೀವು ಬರೆದರೂ ಎದುರುಗಡೆ ಕೂತು ಮಾತಾಡಿದಂಗ ಇರತದ, ಥೇಟ ನಮ್ಮ ಮಾಮಿ ಗತೆ. ‘ಜಾದೂ’ ಇಲ್ಲಿ ಹಣಿಕಿ ಹಾಕಿದ್ದು ನಿಮ್ಮ ಅದಮ್ಯ ಪ್ರತಿಭೆಗೆ ಸಾಕ್ಷಿ. ಉತ್ತರ ಕರ್ನಾಟಕದ ಶಬ್ದಭಾಂಡಾರ ನಿಮ್ಮ ಲೇಖನದಾಗ ಪುಷ್ಕಳ. ಬಾಳಿ ಎಲಿ ಊಟ ಮಾಡದ ದಕ್ಷಿಣ ಭಾರತೀಯ ಇಲ್ಲವೆಂದೇ ಹೇಳಬೇಕು, ಅದರ ವರ್ಣನಾ ಓದತಿದ್ರ ಬಾಯೆಲ್ಲ‌ ನೀರು.

    ತ್ರಿವೇಣಿಯವರನ್ನು ಅವರ ಜನ್ಮದಿನದ ನೆಪದಲ್ಲಿ ಮೇಟಿಯವರು ನೆನಪಿಸಿಕೊಂಡಿದ್ದಾರೆ. ಕನ್ನಡ ಕಾದಂಬರಿಪ್ರಿರೆಲ್ಲರೂ ತ್ರಿವೇಣಿಯನ್ನು ಓದಿ ಬೆಳೆಸವರೇ. ನವ್ಯಸಾಹಿತ್ಯದ ಅಲೆಯಲ್ಲಿ ತ್ರಿವೇಣಿಯವರನ್ನು ವಿಮರ್ಶಕರು ಅಲಕ್ಷ್ಯ ಮಾಡಿದರು, ಕೆಲವರು ಅವರ ಕಾದಂಬರಿಗಳನ್ನು ಉಢಾಫೆ ಮಾಡಿ ಬರೆದರು. ಆದರೂ ಅವರ ಜನಪ್ರಿಯತೆ ಕಡಿಮೆಯಾಗಲಿಲ್ಲ, ಇಂದಿಗೂ ಕೂಡ. ಪುಟ್ಟಣ್ಣನಂಥ ಸಶಕ್ತ ನಿರ್ದೇಶಕರು, ಕಲ್ಪನಾರಂಥಹ ನಟರು ತ್ರವೇಣಿಯವರ ಕಾದಂಬರಿಗಳಿಗೆ ಪಾತ್ರಗಳಿಗೆ ಜೀವ ತುಂಬಿ ಕನ್ನಡದ ಮನೆಮನಗಳನ್ನು ತಟ್ಟಿದರು.

    ಸುಂದರ ರುಚಿಕರವಾದ ಸಂಚಿಕೆ.

    – ಕೇಶವ

    Like

  3. ಹೊಸ ಸಂಪಾದಕ ಮೇಟಿಯವರಿಗೆ ಸ್ವಾಗತ. ಚೊಚ್ಚಲ ಇನಿಂಗ್ಸ್ ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿದ್ದಾರೆ.

    ಹರಟೆಯಲ್ಲೇ ಮೃಷ್ಟಾನ್ನ ಭೋಜನ ಉಣಿಸಿಬಿಟ್ಟಿರಿ ಗೌರಿಯವರೇ. ನಾವು ಬರಿದೇ ಬಾಯಿಯಲ್ಲಿ ನೀರು ಸುರಿಸುವಂತಾಯ್ತು. ಈಗ ಊರಲ್ಲೂ ಟೇಬಲಲ್ಲೇ ಮದುವೆ – ಮುಂಜಿ ಊಟ ಬಡಿಸುವುದರಿಂದ ಕಂಠ ಮಟ್ಟ ಉಂಡರೂ ಏಳಲು ಇನ್ನೊಬ್ಬರ ಸಹಾಯ ಬೇಕಾಗುವ ಅವಶ್ಯಕತೆ ಕಡಿಮೆ. ಟೇಬಲ್ ಬೆಂಚುಗಳ ನಡುವೆ ಸಂತೃಪ್ತ ಹೊಟ್ಟೆ ಸಿಕ್ಕಿಕೊಂಡಾಗ ಭೂರಿ ಭೋಜನದ ಪಾವತಿ ಸಂದಂತೆ. ನಿಮ್ಮಿಂದ ಇನ್ನೂ ಕೊರೆಸಿಕೊಳ್ಳಲು ನಾವು ತಯ್ಯಾರು. ನಿಮ್ಮ ಕೊರೆತ ಗರಗಸದಂತಲ್ಲ, ತಾಳೆಗರಿಗಳ ಮೇಲೆ ಕಾದಿರಿಸುವಂತ ಪದಗಳ ಕೊರೆತ.

    ತ್ರಿವೇಣಿಯವರನ್ನು ನೆನೆಸಿ ಮೇಟಿಯವರು ಬರೆದಿರುವ ಮಾಹಿತಿ ಪೂರ್ಣ ಲೇಖನ ಸಮಯೋಚಿತ. ಅನಿವಾಸಿಯಲ್ಲಿ ನಾವು ಹೆಚ್ಚಾಗಿ ಕವಿಗಳನ್ನು ನೆನೆಸಿ ಬರೆದಿದ್ದೇವೆ. ಕೇಂಬ್ರಿಜ್ ನ ಸಭೆಯಲ್ಲಿ ಮಹಿಳಾ ಲೇಖಕಿಯರ ಬದುಕು /ಸಾಹಿತ್ಯದ ಚರ್ಚೆಯಾದ ಮೇಲೆ ಬಂದ ಮುಖ್ಯ ಲೇಖನವೆಂದು ನನ್ನ ಅನಿಸಿಕೆ.

    – ರಾಂ

    Like

  4. ಉಮಾ ವೆಂಕಟೇಶ್ ಅವರು ಬರೆಯುತ್ತಾರೆ:
    (ತಾಂತ್ರಿಕ ತೊಂದರೆಯಿಂದ ಅವರಿಗೆ ಅಪ್ಲೋಡ ಆಗುತ್ತಿಲ್ಲ ಅಂತ ನನಗೆ ಈ ಮೇಲ್ ಮಾಡಿದ್ದಾರೆ):
    ಗೌರಿ ಅವರ ಊಟದ ಆಟ ಪದ್ಯದ ಅನುಕರಣೆ ಜೋರಾಗಿದೆ. ಬಾಳೆಲೆ ಮೇಲೆ ಭೋಜನ ಮುಗಿದ ನಂತರ, ಎಂಜಲೆಲೆ ಎತ್ತುವ ಸಮಯ ಬಂದರೆ, ಯಾರಿಗೂ ಬಗ್ಗುವ ಮನಸ್ಸಿಲ್ಲ. ಹೊಟ್ಟೆ ತುಂಬಿದ ನಂತರ ಊಟದ ಆಟದಲ್ಲಿ ಸ್ವಾರಸ್ಯವಿಲ್ಲ! ಗೌರಿ ಅವರ ಪದಗಳ ಜೋಡಣೆ ಸೊಗಸಾಗಿದೆ. ಧಾರವಾಡದ ಭಾಷೆಯಲ್ಲಿ ಬರೆಯುವುದು ಅವರಿಗೆ ಕರಗತವಾಗಿದೆ. ಮೇಟಿ ಅವರ ಸಂಪಾದಕೀಯ ಮತ್ತು ತ್ರಿವೇಣಿ ಕುರಿತ ಲೇಖನ ಮಾಹಿತಿಪೂರ್ಣವಾಗಿದೆ. ಮೈಸೂರಿನ ಚಾಮರಾಜಪುರಂ ಬಡಾವಣೆಯಲ್ಲಿರುವ ಅವರ ಮನೆಯ ಮುಂದೆ ಎಷ್ಟು ಬಾರಿ ಓಡಾಡಿದ್ದೇವೋ ನೆನಪಿಲ್ಲ. ಈಗ ಅದನ್ನು ಅವರ ಮಗಳು ಮೀರಾ ಮ್ಯೂಸಿಯಂ ಆಗಿ ಪರಿವರ್ತಿಸಿರುವುದು ಸಂತೋಷದ ವಿಷಯ. ಅವರನ್ನು ಕನ್ನಡದ ಜೇನ್ ಆಸ್ಟಿನ್ ಎನ್ನುವುದು ನನ್ನ ಮನಸ್ಸಿಗೆ ಸಮ್ಮತವಿಲ್ಲ. ಸಮಾಜದ ಸಮಸ್ಯೆಗಳನ್ನು, ಅದರಲ್ಲೂ ಮಹಿಳಾ ಪ್ರಧಾನ ವಿಷಯಗಳನ್ನು ಒಳಹೊಕ್ಕು ವಿಶ್ಲೇಷಿಸಿ ಓದುಗರಿಗೆ ಮುಟ್ಟಿಸುತ್ತಿದ್ದ ತ್ರಿವೇಣಿ, ಜೇನ್ ಆಸ್ಟಿನ್ ಗಿಂತ ಭಿನ್ನ ಲೇಖಕಿ. ಬಿ.ಎಂ.ಶ್ರೀ ಅಂತಹ ಅದ್ಭುತ ಸಾಹಿತಿಯ ಕುಟುಂಬದಲ್ಲಿ ಜನಿಸಿದ್ದ ತ್ರಿವೇಣಿಗೆ, ಸಾಹಿತ್ಯ, ಬರೆಯುವ ಕಲೆ ಜನ್ಮಸಿದ್ಧವಾದ ಕಲೆಯಾಗಿತ್ತು. ಆಕೆಯ ಪುಸ್ತಕಗಳನ್ನು ಎಷ್ಟು ಬಾರಿ ಓದಿದದರು, ಅದರ ಪ್ರಭಾವ ಮೊದಲ ಬಾರಿ ಓದಿದಷ್ಟೇ ಆಳವಾಗಿರುತ್ತದೆ ಎನ್ನುವುದು ನನ್ನ ಅಭಿಮತ. ಶರಪಂಜರದ ಕಾವೇರಿ, ಬೆಳ್ಳಿಮೋಡದ ಇಂದಿರೆ, ಅಪಸ್ವರ, ಅಪಜಯದ ಮೀರಾ, ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ನಿಂತ ಪಾತ್ರಗಳು. ಅಂದಿನ ಸಮಾಜದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಈ ಹೆಂಗಳೆಯರ ಸುತ್ತ ಹೆಣೆದ ಕಥೆಗಳು, ಎಂದಿಗೂ ಗತಕಾಲ ಅನಿಸುವುದಿಲ್ಲ. ಕನ್ನಡ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದ ದಿನಗಳಲ್ಲಿ, ತ್ರಿವೇಣಿ ಕಥೆಗಳು ನನ್ನ ಮೊದಲ ಆಯ್ಕೆ. ಆಕೆಯ ಜನ್ಮ ದಿನದ ಸಂಧರ್ಭದಲ್ಲಿ, ಕನ್ನಡ ಸಾಹಿತ್ಯಕ್ಕೆ ಆಕೆ ನೀಡಿರುವ ಮಹಾನ್ ಕೊಡುಗೆಯನ್ನು ನೆನಪಿಸಿಕೊಂಡು, ಮೇಟಿ ಅವರು ಉತ್ತಮವಾದ ಬರಹ ನೀಡಿದ್ದಾರೆ. ೫೦-೬೦ ರ ದಶಕದಲ್ಲಿ ರಚಿತವಾದ ಆಕೆಯ ಪುಸ್ತಕಗಳು, ಇಂದಿಗೂ ಅಮೆಜಾನ್ ಸೈಟಿನಲ್ಲಿ, ೫ * ಶ್ರೇಣಿ ಗಳಿಸಿದ್ದಾರೆ, ಆಶ್ಚರ್ಯವಿಲ್ಲ. ಆಕೆಯ ಕಾದಂಬರಿಗಳನ್ನಾಧರಿಸಿ ನಿರ್ಮಾಣವಾದ ಯಶಸ್ವಿ ಚಲನಚಿತ್ರಗಳ ಕರ್ತೃ ಪುಟ್ಟಣ್ಣ ಕಣಗಾಲ್ ಅವರಿಗೂ ಕನ್ನಡಿಗರು ಚಿರಋಣಿಗಳಾಗಿರಬೇಕು. ಈ ಪುಸ್ತಕಗಳನ್ನು ಮತ್ತಷ್ಟು ಯಶಸ್ವಿಯಾಗಿ, ಕರ್ನಾಟಕದ ಮೂಲೆಮೂಲೆಗೆ ತಲುಪಿಸಿದ ಕೀರ್ತಿ ಅವರದು. ಕನ್ನಡ ಇತರ ಸಾಹಿತಿಗಳ ಬಗ್ಗೆಯೂ, ಇಂತಹ ಲೇಖನಗಳು ಮೂಡಿ ಬರಲಿ.
    ಧನ್ಯವಾದಗಳು.
    ಉಮಾ ವೆಂಕಟೇಶ್

    Like

  5. “ಹರಟೆ ಕಟ್ಟೆ’ಯ ರೂವಾರಿ ಗೌರಿಯವರು ಅಡಿಗೆ ಮನೆ ಕಟ್ಟೆ ತೊಳೆಯದೆ ಬಾಳೆ ಎಲೆಯ ಊಟದ ಬಗ್ಗೆ ಹರಟೆಯಲ್ಲಿ ನಮ್ಮನ್ನೂ ತೇಲಿಸಿಕೊಂಡು ಹೋಗುತ್ತಾರೆ, ಸಿರ್ಸಿ ಸೀಕರಣೆ ಸುರಿದಂತೆ! ಮೊಣಕೈ ತುದಿಯ ಓಲೆಕ್ರನಾನ್ ನಿಂದ ತುದಿಬೆರಳವರೆಗೆ ಕ್ರಮೇಣ ನೆಕ್ಕುವ ರುಚಿಯ ಝಲಕ್ ಕೊಟ್ಟರು. ಓದುತ್ತ ಓದುತ್ತ ವಿವಿದ ಲಿಪಿಯ ವಿವಿಧ ಹರಟೆಗಳನ್ನೂ ನೆನಪಿಸಿದರು. ಹರಟೆ ಹೊಡೆಯುವದು ಸುಲಭ- ಕಬ್ಬು ತಿಂದಂತೆ, ಹೇಗಾದರೂ ಸರಿ, ಆಧಾರ್ ಅದನ್ನು ಬರೆಯುವದರಲ್ಲಿ ಒಂದು ಚಮತ್ಕಾರವಿದೆ. ಅದರಲ್ಲಿ ಇವರು ‘ನಕ್ಕಿ’ ಸಿದ್ಧ ಹಸ್ತರು! ತಿಂಗಳಿಗೊಮ್ಮೆ ಹರಟೆ ಜಗಲಿಯಲ್ಲಿ ಕೂಡುವಾ! ಮುಂದಿನ ‘ಕೊರೆತ’ಕ್ಕೆ ಸಿದ್ಧ, ನಾವು!
    ಮೇಟಿಯವರದು ಇದು ಮೊದಲ ‘ಮೀಟು’ ಅನಿವಾಸಿಯಲ್ಲಿ! ಬಾಳೆಹಣ್ಣು ಸುಲಿದಂತೆ ಸುಲಭ ಆಗದಿದ್ದರೂ ನಿಭಾಯಿಸಿದ್ದಾರೆ, ಎಡಿಟಿಂಗ್ ‘ರಾಂ ರಾಮ್’ ‘ಅಂತ ಅನ್ಕೋತ! ‘Oops’ ಅಂತ ಮಧ್ಯದಲ್ಲಿ ಅಪಸ್ವರವೂ ಕೇಳಿಸಿದರೂ ಸರಿಪಡಿಸಿದ್ದಾರೆ! ಅಭಿನಂದನೆಗಳು, ಅದಕ್ಕೆ ಮತ್ತು. ತ್ರಿವೇಣಿಯವರ ಮೇಲಿನ ‘ಆಲಾಪನೆ, ಕೃತಿಗಳ ಪರಿಚಯಕ್ಕೂ. ಮೊನ್ನೆಯ ಮೀಟಿಂಗಿನ ನಂತರ ಪ್ರಥಮ ಓಪನಿಂಗ್ ಬಾಟ್ಸ್ಮನ್ ಆಗಿ ಕಾಲಿಟ್ಟು, ಅನಿವಾಸಿ ‘ಪಿಚ್” ನಲ್ಲಿ ಮೊದಲ ಓವರ್ ನ ಬಂಪರ್ಗಳನ್ನು ಸಫಲವಾಗಿ ಎದುರಿಸಿದ್ದಾರೆ! ಅದಕ್ಕೂ 👏👏

    Like

  6. ಏನ್ ಬರದ್ ಬಡಿಸೀರಿ ಗೌರಿಯವರ, ಆಲ್ಮೋಸ್ಟ್ ಶಂಬರ್ ಟಕ್ಕ ಮಾರ್ಕ್ ಕೊಡಬೇಕು ನೋಡ್ರಿ. ಒಂದು ಪಾನ್ ಕೈಯಾಗ ಕೊಟ್ಟು ಮುಗಿಸಿದ್ರಿ ಅಂದ್ರ ನೂರಕ್ಕ ನೂರೇ! ನಿಮ್ ಭಾಷಾ, ಬರೆದ ಧಾಟಿ ಎಲ್ಲಾ ಮುಂದ ಕೂತು ಹೇಳಿಧಾಂಗ ಇರ್ತದ. ಭಾಳ ಮಜಾ ಬಂತು.
    ಮೇಟಿಯವರಂತೆ ತ್ರಿವೇಣಿಯವರ ಕಾದಂಬರಿಗಳನ್ನು ಒಂದೇ ಏಟಿಗೆ, ಪುಸ್ತಕ ಕೆಳಗಿಡದೆ ಓದಿ ಮುಗಿಸುವ ಹುಚ್ಚು ಹಿಡಿಸಿಕೊಂಡವರಲ್ಲಿ ನಾನೂ ಒಬ್ಬ. ಬೇಸಿಗೆ ರಜೆಯಲ್ಲಿ ಮಸ್ಕಿಯ ಊರ ಲೈಬ್ರರಿಗೆ ದಿನಕ್ಕೆ 5 ಬಾರಿ ಅಲೆದು ಪುಸ್ತಕ ಬದಲಾಯಿಸಿ ತಂದು ಓದಿದ್ದ ಮಜಾ ಬೇರೆಯೇ ಇತ್ತು. ತ್ರಿವೇಣಿಯವರ ಬರೆಯುವ ಶೈಲಿ, ಕಥೆಗಳು ಎಲ್ಲವೂ magical ಅನ್ನಬಹುದು.
    ಎರಡೂ ಲೇಖನಗಳು ಮನಸ್ಸಿಗೆ ಹಿಡಿಸಿದವು. ಧನ್ಯವಾದಗಳು, ಬರೆದವರಿಗೂ ಮತ್ತು ನಮಗೆ ಹಂಚಿದವರಿಗೂ.
    – ಲಕ್ಷ್ಮೀನಾರಾಯಣ ಗುಡೂರ.

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.