‘ಕೃಷ್ಣ’ ಕವನ ಮತ್ತು ಒಂದೆರಡು ನಗೆ ಹನಿ

ಡಾ. ನಂದ ಕುಮಾರ್ ಯುಕೆಯಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಿಗೆ ಚಿರಪರಿಚಿತರು. ಕಳೆದ ಹಲವಾರು ದಶಕಗಳಿಂದ ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ನಿರ್ದೇಶಕರಾಗಿ, ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ, ವಿಶೇಷವಾಗಿ ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಭಾಷೆಯ ಪ್ರೇಮಿಯಾಗಿ, ಪ್ರತಿನಿಧಿಯಾಗಿ ನಮಗೆ ಪರಿಚಿತರಾಗಿದ್ದಾರೆ. ಅವರು ಮೂಲದಲ್ಲಿ ಸಂಸ್ಕೃತ ವಿದ್ವಾಂಸರೂ ಹೌದು. ಅವರು ಹಲವಾರು ಕನ್ನಡ ಕವನಗಳನ್ನು ರಚಿಸಿದ್ದು ಇಂಡಿಯಾ ವರ್ಸಸ್ ಇಂಗ್ಲೆಂಡ್ ಎಂಬ ಕನ್ನಡ ಚಲನಚಿತ್ರದಲ್ಲಿ ಅವರ ಒಂದು ಪದ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಅವರು ಯುಕೆ ಕನ್ನಡ ಬಳಗದ ಮುಖ್ಯ ಅತಿಥಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇಂದು ಅವರ ‘ಕೃಷ್ಣಾ’ ಎಂಬ ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ. ಇದ್ದೂ ಇರದ, ಕಂಡೂ ಕಾಣದ, ಮೌನದಲ್ಲೂ ಕಿವಿಗೆ ತಟ್ಟುವ, ಕಲ್ಪನೆ ಮತ್ತು ವಾಸ್ತವ ಲೋಕದಲ್ಲಿ ಹರಿದಾಡುವ, ಅಧ್ಯಾತ್ಮ ಮತ್ತು ಲೌಕಿಕ ಆಲೋಚನೆಗಳ ನಡುವೆ ಸುಳಿದಾಡುವ ಮಾಯಾವಿ ಕೃಷ್ಣ ಮತ್ತು ಅವನ ವ್ಯಕ್ತಿತ್ವದ ಬೆರಗನ್ನು, ಮೆರುಗನ್ನು ಅಂದವಾದ ಪದಗಳಿಂದ ಅಲಂಕರಿಸಿ ಈ ಕವನವನ್ನು ರಚಿಸಿದ್ದಾರೆ. ಅವರ ಈ ‘ಕೃಷ್ಣ’ ಎಂಬ ಚೆಂದದ ಕವನವನ್ನು ಅನಿವಾಸಿಯಲ್ಲಿ ಪ್ರಕಟಿಸುತ್ತಾ ಡಾ.ನಂದಕುಮಾರ್ ಅವರನ್ನು ಸ್ವಾಗತಿಸೋಣ.

ಭಾರತದಲ್ಲಿ ವೈದ್ಯಕೀಯ ವೃತ್ತಿ ಶಿಕ್ಷಣ ಪಡೆದ ವೈದ್ಯರು ಮೊಟ್ಟ ಮೊದಲಿಗೆ ಯುಕೆಗೆ ಕೆಲಸ ಮಾಡಲು ಬಂದಾಗ ಇಲ್ಲಿಯ ವ್ಯವಸ್ಥೆ, ಸಿಬ್ಬಂದಿಗಳು, ರೋಗಿಗಳು, ವೈದ್ಯರು ಇವರ ಒಡನಾಟ, ಸಾಮಾಜಿಕ ವಿಭಿನ್ನತೆಗಳು ಹಲವಾರು ಸೋಜಿಗಗಳನ್ನು, ಲಘು ಘಳಿಗೆಗಳನ್ನು, ತಿಳಿ ಹಾಸ್ಯ ಪ್ರಸಂಗಗಳನ್ನು ಒದಗಿಸುತ್ತದೆ. ಇಂಥ ಸನ್ನಿವೇಶದಲ್ಲಿ ಬಹುಪಾಲು ವೈದ್ಯರು ಜೋರಾಗಿ ನಕ್ಕು ಅಲ್ಲೇ ಮರೆತರೆ, ಡಾ ಉಮೇಶರಂತಹ ಕೂತುಹಲ ಮತ್ತು ಹಾಸ್ಯ ಪ್ರಜ್ಞೆ ಉಳ್ಳ ವೈದ್ಯರು, ಈ ಪ್ರಸಂಗಗಳನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ದಾಖಲಿಸಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಉಮೇಶ್ ಅವರಿಂದ ಮತ್ತೊಮ್ಮೆ ನಗೆಹನಿಗಳು. ಬನ್ನಿ ಆಸ್ವಾದಿಸೋಣ. 
 -ಸಂಪಾದಕ
ಫೋಟೋ ಕೃಪೆ ಗೂಗಲ್
ಕೃಷ್ಣಾ : ಕವನ – ಡಾ.ಮತ್ತೂರ್ ನಂದಕುಮಾರ್ ಅವರ ರಚನೆ


ಜ್ಞಾನಕ್ಕೆ ಮೊಗವುಂಟೆ?
ಮೌನಕ್ಕೆ ನಗೆಯುಂಟೆ?
ಎಲ್ಲ ಮಾಡಿಯೂ ಏನು ಮಾಡದವರುಂಟೆ?
ಮೈಯಲ್ಲ ರೋಮಾಂಚ 
ಎಲ್ಲೆಲ್ಲೂ ಮಧುಮಾಸ
ಕಂಡ ಕಂಡರಿಗೆಲ್ಲ ಕಂಡರಿವನಂತೆ 

ಪ್ರೇಮದಲಿ ಜ್ಞಾನವನು 
ಪೋಣಿಸಿದ ಜಾಣನನು 
ದಿನವೂ ನೋಡಿಯೂ ನೋಡದವರಂತೆ ನಾವು!
ಯುಕ್ತಿಯಲಿ ಭಕ್ತಿಯನು 
ರಕ್ತಿಯಲಿ ವಿರಕ್ತಿಯನು 
ಮುಕ್ತಿಯನು ಕೊಡುವಾತ-ಕೃಷ್ಣ- ನೀನು

ನಿನ್ನ ನಡಿಗೆಯದೊಂದು 
ನಿನ್ನ ಮೆಲುನುಡಿಯೊಂದು 
ಮನಮನದಿ ಹರಿದಾಡಿ ತುಂಬಿತಲ್ಲೋ 
ಕೊಳಲು ಬಾರಿಸು ಎನದೆ 
ಕೇಳುತಿದೆ ಕೊಳಲ ದನಿ 
ಮತ್ತೇನು ಭವ ಮೋಹ ಕಳೆಯಿತಲ್ಲೋ

***
ಇಂಗ್ಲೆಂಡಿನ ಚಂದದ ವೈದ್ಯೆಯರು - ಇಂಗ್ಲೆಂಡಿನ ಚಂದದ ವೈದ್ಯೆಯರು - ಉಮೇಶ ನಾಗಲೋತಿಮಠ್ ಅವರ ನಗೆಹನಿಗಳು


ನಾನು ವೈದ್ಯನಾಗಿ ಇಂಗ್ಲೆಂಡಿಗೆ ಬಂದ ಹೊಸತು . ಆಸ್ಪತ್ರೆಯಲ್ಲಿನ ಆಪರೇಷನ್ ಕೊಠಡಿಗೆ ಹೋಗಿದ್ದೆ . ಅಲ್ಲಿ ಒಂದು ಕಿವಿಯ ಆಪರೇಷನ್ ನಡೆದಿತ್ತು . ನಮ್ಮ ಪ್ರೊಫೆಸರ್ ಅದನ್ನು ಮಾಡುತ್ತಿದ್ದರು . 
ಅಲ್ಲಿಗೆ ಬಂದ ಇಬ್ಬರು ಲಲನೆಯರು ನನ್ನನ್ನು ಕುರಿತು “ ಇದು ಯಾವ ಆಪರೇಷನ್ ?” ಎಂದು ಕೇಳಿದರು . ನಾನು ಅವರಿಗೆ ಅದು ಕಿವುಡುತನ ಪರಿಹಾರಕ್ಕಾಗಿ ಮಾಡುವ ಆಪರೇಷನ್ ಎಂದು ಹೇಳಿದೆ . 
ಅವರಿಬ್ಬರೂ ಬಹಳ ಅಂದವಾಗಿ ಮೇಕ್ ಅಪ್ ಮಾಡಿಕೊಂಡು ಒಳ್ಳೆಯ ಅಪ್ಸರೆಯರಂತೆ ಕಾಣುತ್ತಿದ್ದರು . ನಮ್ಮ ಕನ್ನಡ ಸಿನಿಮಾ ನಟಿಯರನ್ನು ನಾಚಿಸುವಂತೆ ಕಾಣುತ್ತಿದ್ದರು . ನಾನು ಮನಸ್ಸಿನಲ್ಲೇ ಅಬ್ಬಾ ಇವರು ಎಂತಹ ಸುರ ಸುಂದರಾಂಗಿ ವೈದ್ಯೆಯರು ಎಂದುಕೊಂಡೆ . 

ಆಪರೇಷನ್ ಮುಗಿದು ರೋಗಿಯನ್ನು ಮಂಚ ಸಮೇತ ವಾರ್ಡಿಗೆ ಒಯ್ದರು. ನಂತರ ಈ ಇಬ್ಬರು ಸುರ ಸುಂದರಾಂಗಿಯರು ಬಕೀಟಿನಲ್ಲಿ ಸೋಪು ನೀರು ತಂದು ನೆಲ ಒರೆಸತೊಡಗಿದರು . 😧😧. ಆಗ ನನಗೆ ಗೊತ್ತಾಗಿದ್ದು - ಇವರು ಇಲ್ಲಿನ ಆಸ್ಪತ್ರೆಯ ಆಯಾ ಎಂದು . 
ಭಾರತದ ಆಸ್ಪತ್ರೆಗಳಲ್ಲಿನ ಆಯಾ ಅವರನ್ನು ನೋಡಿದ್ದ ನನಗೆ ಇಲ್ಲಿನ ಆಯಾಗಳು ಇಷ್ಟೊಂದು ಲಲನಾಮಣಿ ಇರುತ್ತಾರೆಂದು ಗೊತ್ತಿರಲಿಲ್ಲ . 
ಮನೆಗೆ ಬಂದು ನನ್ನ ಹೆಂಡತಿಗೆ ನಗುತ್ತ ಈ ವಿಷಯ ತಿಳಿಸಿದಾಗ ಅವಳು “ ನೋಡ್ರಿ ಮತ್ತ , ನೀವು ಡಾಕ್ಟರ್ ಹೆಂಡ್ತಿ ಬಿಟ್ಟ ಬ್ಯಾರೆ ಯಾರನಾರ ಬೆನ್ನ ಹತ್ತಿದರ ನಿಮಗ ಹಿಂತಾವ ಗಂಟ ಬೀಳತಾವ , ಉಷಾರ ಇರ್ರಿ” ಎಂದು ನಗತೊಡಗಿದಳು. 
😄😄😄

 ಜಂಪರ್ ಹಾಕಿದ್ದು 

ನಾನು ಇಂಗ್ಲೆಂಡಿಗೆ ಬಂದ ಹೊಸತು ಭಾರತದಿಂದ ತಂದ ಹೊಸ ಸ್ವೆಟರ್ ಅನ್ನು ಹಾಕಿಕೊಂಡು ಕೆಲಸಕ್ಕೆ ಹೋದೆ. ಒಬ್ಬ ಸಹೋದ್ಯೋಗಿ ನನಗೆ “ ಒಹ್ ನಿ ಹಾಕಿಕೊಂಡಿರುವ ಜಂಪರ್ ಬಹಳ ಚನ್ನಾಗಿ ಕಾಣುತ್ತಿದೆ “ ಎಂದ. 
ನನಗೋ ಗಡಬಡಿ . ಏಕೆಂದರೆ ಭಾರತದಲ್ಲಿ ಜಂಪರ್ ಎಂದರೆ ಹೆಂಗಸರು ತೊಡುವ ಅಂಗಿ . 
ನನಗೆ ನನ್ನ ಬಾಸ್ ಸಹಿತ “ಈ ಜಂಪರ್ ನಿನಗೆ ಚನ್ನಾಗಿ ಕಾಣುತ್ತಿದೆ ” ಎಂದ . 
ನಂತರ ಗೊತ್ತಾಗಿದ್ದು “ ಜಂಪರ್ ಎಂದರೆ ಸ್ವೆಟರ್ ಅಂತಹ ಅಂಗಿ “ಎಂದು . 
ಭಾರತದಲ್ಲಿ ನೀವು ಯಾರಾದರು ಗಂಡಸರಿಗೆ ನೀವು ಜಂಪರ್ ಹಾಕುತ್ತೀರಾ ಎಂದು ಕೇಳಿ ನೋಡಿ 😄
ಬಯ್ಯಿಸಿಕೊಳ್ಳುವುದು ಗ್ಯಾರಂಟೀ .

***

8 thoughts on “‘ಕೃಷ್ಣ’ ಕವನ ಮತ್ತು ಒಂದೆರಡು ನಗೆ ಹನಿ

 1. ನಂದರು ಬರೆದ ಚಂದದ ಕವನ
  ಹೇಳಿ ಮುಗಿವುದೇ ಕೃಷ್ಣನ ಕಥನ ?

  Like

 2. ಮತ್ತೂರು ನಂದಕುಮಾರ್ ಅವರು `ಅನಿವಾಸಿ`ಗೆ ಬರೆದಿರುವುದು `ಅನಿವಾಸಿ` ಬಳಗದ ಭಾಗ್ಯ.

  ಅನುಪ್ರಾಸ, ಛಂದೋಬದ್ಧ ಲಯಗಳ ಪದ ಲಾಲಿತ್ಯದಿಂದ ಮತ್ತು ಅರ್ಥವಂತಿಕೆಯಿಂದ ಮನೋಹರ ಭಾವಗೀತಾತ್ಮಕ ಭಕ್ತಿಗೀತೆಯಾಗಿದೆ.

  ಉಮೇಶ್ ಅವರ ಪ್ರಸಂಗಗಳು ನಗೆ ಉಕ್ಕಿಸುತ್ತವೆ, ನಮಗೂ ಆದ ಇಂಥ ಅದೆಷ್ಟು ಪ್ರಸಂಗಗಳನ್ನು ನೆನಪಿಗೆ ತರುತ್ತವೆ.

  – ಕೇಶವ

  Like

 3. ನಂದಕುಮಾರ್ ನಮಸ್ಕಾರು ಕವನ ಸುಂದರವಾಗಿ ಸರಳರೀತಿಯಲ್ಲಿ ಅಧ್ಯಾತ್ಮವನ್ನು ಬೋಧಿಸುತ್ತದೆ. ಅಭಿನಂದನೆಗಳು

  Like

 4. ಈ ವಾರದ ಕವನ ಮತ್ತು ನಗೆಹನಿ ಎರಡೂ ಬಹಳ ಸೊಗಸಾಗಿವೆ. ನಂದಕುಮಾರ್ ಅವರ ಕವನಗಳ ಶೈಲಿ, ಪದಗಳ ಜೋಡಣೆ ಬಹಳ ಅನನ್ಯವಾದದ್ದು. ಉಮೇಶ್ ಅವರ ಇಂಗ್ಲೆಂಡಿನ ಚಂದದ ವೈದ್ಯೆಯರು ಓದಿ ಒಂದೆರಡು ಬಾರಿ ನಕ್ಕೆ.
  ಉಮಾ ವೆಂಕಟೇಶ್

  Like

 5. ರಾಮ ಮೂರ್ತಿಯು ಅವರ ಅನಿಸಿಕೆಗಳು –
  ಶ್ರೀ ನಂದಕುಮಾರ ಬರೆದ ಕವನ ಬಹಳ ಸೊಗಸಾಗಿದೆ, ಸಂಪಾದಕರು ಹೇಳಿದಂತೆ ಭಾರತೀಯ ಸಂಸ್ಕತಿಯ ರಾಯಭಾರಿ ಇವರೇ

  ಡಾ ಉಮೇಶ್ ಬರೆದಿರುವ ನೆನಪುಗಳು ಹಾಸ್ಯಾಪೂರಕವಾಗಿದೆ , ೧೯೬೬ ರಲ್ಲಿ ನಾನು Boots ಅಂಗಡಿಯಲ್ಲಿ ಒಂದು bottle snow ಕೇಳಿದಾಗ ಆಕೆ “ no dear , we get snow only in winter ,you cant buy it in a bottle “ ಅಂದಳು , ನಾನು ಕೇಳಿದ್ದು ಇಂಡಿಯಾ ದಲ್ಲಿ ಮಾರುವ Afghan Snow ! (ಕ್ಷಮಿಸಿ ಇದನ್ನು ಹಿಂದೆ ಬರೆದಿದ್ದೇನೆ )
  ಹೀಗೆ ಅನೇಕ , ನನ್ನ ಹೆಂಡತಿ “Match box” ಕೇಳಿದಾಗ ಅದು box of matches ಅಂತ ಹೇಳಿದರು ,

  Like

 6. ಉಮೇಶ ಅವರ ನಗೆಹನಿ ಓದಿದಾಗ ನಮ್ಮ ಮಿತ್ರ ಡಾ ದೇಸಾಯಿ ಹೇಳಿದ ಒಂದು ಘಟನೆ ನೆನಪಾಯಿತು. ರೆಡ್ಡಿ ಎಂಬ anesthetist ಇಂಗ್ಲೆಂಡಿನಲ್ಲಿ ಇದ್ದರು. ಅವರನ್ನು ಆಂಗ್ಲರು ready ಎಂದು ಉಚ್ಚರಿಸುತ್ತಿದ್ದರು. ಒಂದು ಬಾರಿ ರೆಡ್ಡಿ ಅವರು ತಮಗೆ ಪರಿಚಯವಿರದ surgeon ರ ಜೊತೆ ಕೆಲಸ ಮಾಡುವ ಪ್ರಸಂಗ. Surgeon operation theaterಗೆ ಬಂದು ರೆಡ್ಡಿ ಅವರಿಗೆ Are you ready ಅಂತ ಕೇಳಿದರು. ರೆಡ್ಡಿ ಅವರು ತಮ್ಮ ಹೆಸರು ಕೇಳುತ್ತಿದ್ದಾರೆ ಎಂದು ಭಾವಿಸಿ ಹೌದು ಎಂದರು. Surgeon ಅವರು scalpel ನಿಂದ concession ಮಾಡಿದರು. ರೋಗಿ ಬಾಯಿ ಬಾಯಿ ಬಡಕೊಂಡ. ಅದಕ್ಕೆ ಹೇಳುವದು surgeon was ready, anesthetist was ready but patient was not ready ಅಂತ.

  Like

  • ಅರುಣ ನಾಡಗೀರ ಅವರು ಹೇಳುವ ನಿಜ ಘಟನೆಯಲ್ಲಿ concession ಬದಲು incision ಅಂತ ಓದಿಕೊಳ್ಳ ಬೇಕೆಂದು ವಿನಂತಿ. ಅವರು (ಅರುಣ) ಡಾಕ್ಟರ್ ಅಲ್ಲದ ಕಾರಣ ಅವರಿಗೊಂದು concession ಕೊಡಬಹುದಲ್ಲ!

   Like

 7. ಇವತ್ತಿನ ಅಂಕಣದಲ್ಲಿ ಕೃಷ್ಣನ ಬಗ್ಗೆ ಸರಳ ಸುಂದರ ಕವನ – ಮತ್ಯಾರಿಂದ? ಶ್ರೀ ನಂದಕುಮಾರರಿಂದ! ಚಿಕ್ಕ ಪದಗಳ ಪದ್ಯದಲ್ಲಿ ಸಣ್ಣದೆನಿಸಿದರೂ ಮಹತ್ವದ ಸಂದೇಶ ಕೊಡುತ್ತಾರೆ: ಆತನ ಸೂಚನೆಗಳನ್ನು ಗಮನಿಸದೆ, clues ಅಲಕ್ಷಿಸಿ “ಪ್ರೇಮದಲಿ ಜ್ಞಾನವನು
  ಪೋಣಿಸಿದ ಜಾಣನನು
  ದಿನವೂ ನೋಡಿಯೂ ನೋಡದವರಂತೆ ನಾವು!” ಅದು ಮನನೀಯ!
  ಉಮೇಶ್ ನಾಗಲೋಟಿಮಠ ಅವರ ನಗೆ ಹನಿಗಳು ನಮ್ಮ ಆರಂಭದ ದಿನಗಳನ್ನು ನೆನಪಿಸಿತು. ನನ್ನ ಸಹಪಾಠಿಯೊಬ್ಬ ಆಗ ತಾನೇ ಹೀತ್ರೋ ವಿಮಾನ ನಿಲ್ದಾಣದಿಂದ ಬಂದು ಮೊದಲ ಸಲ ಆಸ್ಪತ್ರೆಯ ಪೋರ್ಟರ್ಸ್ ಗೇಟಿನಲ್ಲಿ ಬಂದಿಳಿದಾಗ ಆತನ ಟ್ಯಾಕ್ಸಿಯನ್ನು ತರುಬಿದ ಪೋರ್ಟರನ್ನೇ ತನ್ನೊಡನೆಪತ್ರ ವ್ಯವಹಾರ ಮಾಡಿದ ಪ್ರೊ ಪ್ಯಾಥಿ ಎಂದು ತಿಳಿದು ನಾಮಕಾರ ಮಾಡಿ ‘ಸರ್ , ಸರ್ ‘ ಅನ್ನುತ್ತಾ ಅವನಿಗೆ ತನ್ನ ಹೆಣಭಾರದ ಸೂಟ್ ಕೇಸನ್ನು ಹಿಡಿಯಲು ಸಹ ಕೊಡದೇ ಹೊತ್ತು ಕೊಂಡು ದಣಿವಿನಿಂದ ತೂಗಾಡುತ್ತಾ ಅಟ್ಟ ಹತ್ತಿ ಕೊನೆಗೆ ಹೋದನಂತೆ!
  ಕಿವಿ- ಮೂಗು- ಗಂಟಲಿನ ತಜ್ಞ ಉಮೇಶ ಅವರು ತಮ್ಮ ಮೊದಲ ಅನುಭವದ ನಂತರ ಬೇಗನೆ ಪಾಠ ಕಲಿತಿರಬೇಕು- ಯಾರಿಗೆ ಕಿವಿಗೊಡಬೇಕು, ಯಾರ ಕಿವಿ ತೊಗೋ ಬೇಕು ಅಂತ! ಶ್ರೀವತ್ಸ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.