ತಸ್ಮೈಶ್ರೀಗುರವೇನಮಃ

ಫೋಟೋ ಕೃಪೆ ಗೂಗಲ್ L>R ರಾಧಾ ಕೃಷ್ಣನ್, ಬಿಎಂಶ್ರೀ, ಕುವೆಂಪು, ಹೆಚ್ ಏನ್
ಕಳೆದ ಕೆಲವು ದಿನಗಳ ಹಿಂದೆ ನಾವೆಲ್ಲಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ನಮ್ಮ ಬದುಕಿನಲ್ಲಿ ನಮಗೆ ಸ್ಫೂರ್ತಿ ನೀಡಿ, ಜ್ಞಾನ ದೀವಿಗೆಯನ್ನು ಕೈಗಿತ್ತ ಗುರುಗಳನ್ನು ಸ್ಮರಿಸಿಕೊಂಡಿದ್ದೇವೆ.  ಇಂದು ಗೌರಿ ಪ್ರಸನ್ನ ಮತ್ತು ಡಾ. ದೇಸಾಯಿಯವರು ತಮ್ಮ ಗುರುವಿನ ಬಗ್ಗೆ ಆತ್ಮೀಯವಾದ ಬರಹಗಳನ್ನು ಇಲ್ಲಿ ಸಮರ್ಪಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ, ಸಂಬಂಧಗಳಿಗೆ ಉಚ್ಚ ಸ್ಥಾನಮಾನಗಳಿವೆ. 'ಗುರು ಸಾಕ್ಷಾತ್ ಪರಬ್ರಹ್ಮ' ಎಂದು ಪರಿಗಣಿಸುತ್ತೇವೆ. ಇದು ಒಂದು ಪವಿತ್ರವಾದ ನಂಟು. ಗುರುವಿಗೆ ಒಂದು ಜವಾಬ್ದಾರಿಯಿದೆ, ಜ್ಞಾನಾರ್ಜನೆಯ ಕರ್ತವ್ಯ ಮತ್ತು ಕೈಂಕರ್ಯವಿದೆ. ನಿಜವಾದ ಗುರುವಿಗೆ ತನ್ನ ಶಿಷ್ಯರ ಬಗ್ಗೆ ಪಕ್ಷಪಾತವಿರಬಾರದು, ಅಲ್ಲಿ ಜಾತಿ ಮತಗಳ ಭಾವನೆಗಳು ನುಸುಳಿ ಬರಬಾರದು. ಬಹಳ ಹಿಂದೆ ಗುರುಕುಲಗಳಲ್ಲಿ ಕೆಳಜಾತಿ ವರ್ಗದವರಿಗೆ, ಹೆಂಗಸರಿಗೆ  ವಿದ್ಯೆಯನ್ನು ಪಡೆಯುವ ಅರ್ಹತೆ ಇಲ್ಲವೆಂದು ಅವರನ್ನು ದೂರ ಇಡಲಾಗಿತ್ತು. ಏಕಲವ್ಯನಂಥವರು ತಮ್ಮ ಕಲಿಕೆಯನ್ನು ತ್ಯಜಿಸಬೇಕಾಯಿತು. ಅದು ಗುರುಭಕ್ತಿಯ ಪರಾಕಾಷ್ಠೆ  ಹಾಗೂ ಉತ್ತಮ ನಿದರ್ಶನವೂ ಹೌದು. ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣ ಎಲ್ಲರ ಹಕ್ಕು. ಹಿಂದೆ ಮತ್ತು ಇಂದಿಗೂ ಕೆಲವೆಡೆ ಶಿಕ್ಷಕರು ಶಿಷ್ಯನಿಗೆ ಬಹಳ ಅಸಡ್ಡೆಯಿಂದ, ಕೆಲವೊಮ್ಮೆ ಎಲ್ಲರ ಮುಂದೆ ತೇಜೋವಧೆ ಮಾಡಿ ಹೀನೈಸಿ ವಿದ್ಯೆ ಕಲಿಸುವ ವಿಧಾನ ಸರಿಯೆಂದು ಭಾವಿಸಿದ್ದಾರೆ. (Learning by humiliation) ಇಂತಹ ಗುರುಗಳು ಮತ್ತು ಇಂತಹ ಶಿಕ್ಷಣ ವ್ಯವಸ್ಥೆ ಕಲಿಕೆಗೆ ತದ್ವಿರುದ್ಧ ಪರಿಣಾಮಗಳನ್ನು ತರಬಹುದು.  ನಿಜವಾದ ಗುರು ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ 
(Holistic Development) ಪೂರಕವಾಗುವ ಶಿಕ್ಷಣವನ್ನು ಆಸ್ಥೆಯಿಂದ, ಪ್ರೀತಿಯಿಂದ ನೀಡಬೇಕಾಗಿದೆ. ಶಿಷ್ಯನನ್ನು ಗೌರವದಿಂದ ಕಂಡು, ಅವನು ತನ್ನ ಪೈಪೋಟಿ ಎಂದೆನಿಸದೆ  ಶಿಷ್ಯನು ತನ್ನಷ್ಟೇ ಅಥವಾ  ತನಗಿಂತ  ಉನ್ನತ ಸ್ಥಾನವನ್ನು ಏರಬೇಕೆಂದು ನೀರೀಕ್ಷೆಯಿಟ್ಟುಕೊಂಡಲ್ಲಿ ಅದು ಶಿಕ್ಷಣದ ಉದ್ದೇಶವನ್ನು ಪೂರೈಸುತ್ತದೆ. ಶಿಷ್ಯರಿಂದ ಶಿಷ್ಯರಿಗೆ ಜ್ಞಾನದ ಬೆಳಕು ಇನ್ನು ಪ್ರಖರವಾಗಿ ಬೆಳಗಬೇಕೆ ಹೊರತು ಅದು ಕುಂದಬಾರದು. ಈ ಜ್ಞಾನದಿಂದ ಒಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಒಂದು ಸಮಾಜದ ವಿಕಾಸವೂ  ಆಗಬೇಕು, ಅಲ್ಪ ಮಾನವ ವಿಶ್ವಮಾನವನಾಗಬೇಕು, ಅದೇ ಶಿಕ್ಷಣದ ಗುರಿ. ಕೆಲವು ವಿಶೇಷ ಗುರು-ಶಿಷ್ಯ ಸಂಬಂಧಗಳು, ಶಿಷ್ಯ ಗುರುವಿಗೆ ಸಲ್ಲಿಸಿರುವ ಕಾಣಿಕೆಗಳು ಕಾವ್ಯ ರೂಪದಲ್ಲೂ ಅಭಿವ್ಯಕ್ತಗೊಂಡಿವೆ. ಗೌರಿ  ಅವರು ಕೆಳಗೆ ತಮ್ಮ ಬರಹದ ಕೊನೆಯಲ್ಲಿ ಪ್ರಸ್ತಾಪಿಸಿರುವಂತೆ, ಜಿ ಎಸ್ ಎಸ್  ತಮ್ಮ ಗುರುಗಳಾದ ಕುವೆಂಪು ಅವರನ್ನು ಗೌರವದಿಂದ, ನಿಶ್ಶಬ್ದದಲ್ಲಿ ನಿಂತು ನೆನೆಯುತ್ತಾರೆ. ಗುರುಗಳು ಕೊಟ್ಟ ಹೊಸ ಹುಟ್ಟುಗಳನ್ನು ಹಿಡಿದು, ದೋಣಿಯೇರಿ ಜ್ಞಾನವೆಂಬ ಸಾಗರವನ್ನು ಪ್ರವೇಶಿಸುತ್ತಾರೆ. ಅವರ ಗುರುಗಳಾದ ಕುವೆಂಪುರವರು ತಮ್ಮ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ಮುಗಿಸಿ ಅದನ್ನು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಿಸಿ; 

"ಇದೋ ಮುಗಿಸಿ ತಂದಿಹೆನ್  ಈ ಬೃಹದ್ ಗಾನಮಂ, 
ನಿಮ್ಮ ಸಿರಿಯಡಿಗೆ ಒಪ್ಪಿಸಲ್ಕೆ, ಓ ಪ್ರಿಯ ಗುರುವೇ, ಕರುಣಿಸಿಂ 
ನಿಮ್ಮ ಹರಕೆಯ ಬಲದ ಶಿಷ್ಯನಂ"  

ಎಂದು ವಿನಂತಿಸುತ್ತಾರೆ. ಹೀಗೆ ಗುರು ಶಿಷ್ಯರ ಪ್ರೀತಿ ವಿಶ್ವಾಸಗಳ ಪರಂಪರೆಯನ್ನು ಮತ್ತು ಅದರ ಸಮೃದ್ಧಿಯನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಆದರ್ಶ ಗುರುಗಳು  ನಮಗೆ ಸ್ಫೂರ್ತಿಯನ್ನು ನೀಡಿ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾರೆ. ಸಮರ್ಥಗುರುಗಳು ನಮ್ಮ ಸ್ಮೃತಿಯಲ್ಲಿ ಅಮರರಾಗಿರುತ್ತಾರೆ. ಇಂತಹ ಮಹಾನುಭಾವಿ ಮಹನೀಯರನ್ನು ಮಹಿಳೆಯರನ್ನು ಶಿಕ್ಷಕರ ದಿನದಂದು ಸ್ಮರಿಸುವುದು, ನಮನಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ. 

***

ನಮ್ಮೆಲ್ಲರ ನೆಚ್ಚಿನ ರಾಣಿ ಎಲಿಝಬೆತ್ ಇಂದು ತೀರಿಕೊಂಡಿದ್ದಾಳೆ. ಅವಳ ಕರ್ತವ್ಯ ನಿಷ್ಠೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ತನಗೆ ದೊರಕಿದ ಆಯುಷ್ಯದುದ್ದಕ್ಕೂ ಜನರ ಸೇವೆಯನ್ನು ಮಾಡುವುದಾಗಿ ಪಣತೊಟ್ಟಿದ್ದು ಅದನ್ನು ಇಂದು ಪೂರೈಸಿದ್ದಾಳೆ. ಕಳೆದ ಕೆಲವು ತಿಂಗಳ ಹಿಂದೆ ರಾಣಿಯ ೭೦ ವರ್ಷ ಆಳ್ವಿಕೆಯ ಸಂದರ್ಭದಲ್ಲಿ ಅನಿವಾಸಿ ಬಳಗ ವಿಶೇಷ ಸಂಚಿಕೆ ತಂದಿದ್ದನು ಇಲ್ಲಿ ಸ್ಮರಿಸಬಹುದು. ರಾಣಿಯ ಆತ್ಮಕ್ಕೆ ಶಾಂತಿಯನ್ನು ಕೊರೋಣ. 

 - ಸಂಪಾದಕ 

*************
ಫೋಟೋ ಕೃಪೆ ಗೂಗಲ್ L>R ಅನಿ ಬೆಸೆಂಟ್, ರೋಮಿಲಾ ಥಾಪರ್ ಮತ್ತು ಚೀ.ನಾ. ಮಂಗಳ
ಶಿಕ್ಷಕರ ದಿನಾಚರಣೆ –  ಶ್ರೀಮತಿ  ಗೌರಿ ಪ್ರಸನ್ನ 

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಹ 
 ಸುಮಾರು ೩-೫ ವರುಷಗಳ ಹಿಂದಿನ ಮಾತು. ಅದೊಂದು ಸುಂದರ ಶಾಲೆ. ಅಂದು ಶಿಕ್ಷಕರ ದಿನಾಚರಣೆ. ಹತ್ತನೆಯ ತರಗತಿಯ ವಿದ್ಯಾಥಿ೯ನಿಯರೆಲ್ಲ ತಮ್ಮ ನೆಚ್ಚಿನ ಗುರುವೃಂದಕ್ಕಾಗಿ ಒಂದು ಪುಟ್ಟ ಸಮಾರಂಭವನ್ನೇಪ೯ಡಿಸಿದ್ದರು.  ಗುರುಶಿಷ್ಯರ ನಡುವಿನ ಸಂಬಂಧ ಅದೂ ಆ ಹದಿವಯಸ್ಸಿನಲ್ಲಿ ಬಹಳ ಮನೋಹರವೂ, ಆತ್ಮೀಯವೂ ಆಗಿರುತ್ತದೆಯಲ್ಲವೇ? ತಮ್ಮ ಪ್ರೀತಿಯ ಗುರುಗಳಿಗೊಂದು ಕೃತಜ್ಞತೆ ಸಲ್ಲಿಸುವ ಸದಾವಕಾಶ. ಜೀವನದ ವಕ್ರತೆಗಿನ್ನೂ ಅಪರಿಚಿತರಾದ ಆ ಹುಡುಗಿಯರ ಮೊಗದ ತುಂಬ ಮುಗ್ಧತೆಯ ಮುಗುಳ್ನಗು; ಹೃದಯಗಳಲ್ಲಿ ಪ್ರೀತಿ-ಗೌರವಗಳ ಮಹಾಪೂರ. ತಮ್ಮ ಪ್ರೀತ್ಯಾದರಗಳ ದ್ಯೋತಕವಾಗಿ ತಮಗೆ ತಿಳಿದಂತೆ ನಾಲ್ಕಾರು ಮಾತಾಡಿ, ಎಲ್ಲ ಶಿಕ್ಷಕವೃಂದಕ್ಕೂ ಒಂದೊಂದು ಗುಲಾಬಿ ಹೂ ಕೊಟ್ಟರು. ಶಿಕ್ಷಕರೆಲ್ಲ ಅವರ ಖುಷಿಯಲ್ಲಿ ತಾವೂ ಪಾಲ್ಗೊಂಡು ತಮ್ಮ ತಮ್ಮ ಅಂಗಿಯ ಕಿಸೆಗೆ ಸಿಕ್ಕಿಸಿಕೊಂಡರೆ ಶಿಕ್ಷಕಿಯರೆಲ್ಲ ತಮ್ಮ ಮುಡಿಗೆ ಮುಡಿದುಕೊಂಡರು. ಆದರೆ ಯಾವಾಗಲೂ ಬಳೆ-ಕುಂಕುಮವಿಲ್ಲದೇ, ಬರೀ ಸಾಧಾರಣ ಸೀರೆಗಳನ್ನುಟ್ಟು  ಸೈಕಲ್ ಮೇಲೆ ಶಾಲೆಗೆ ಬರುವ ಒಬ್ಬ P.E .ಟೀಚರ್, ದೈಹಿಕ ಶಿಕ್ಷಕಿ ಮಾತ್ರ ಅದನ್ನು ಮುಡಿಯದೇ ಕೈಯಲ್ಲಿ ಹಿಡಿದು ಯಾವುದೋ ಚಿಂತನೆಯಲ್ಲಿ ಮುಳುಗಿದ್ದಾರೆ. 'ಪಾಪ! ಗಂಡ ಇರಲಿಕ್ಕಿಲ್ಲ. ಅದು ಹೇಗೆ ತಾನೇ ಮುಡಿದಾರು?!' ಎನ್ನುವ  ಅನುಕಂಪ ನನಗೆ.  ಆಷ್ಟರಲ್ಲೇ ಮತ್ತೋವ೯ ಹುಡುಗಿ ಜಯಶ್ರೀ ಯಾಳವಾರ  ಅನ್ನುವವಳು ಕೇಳಿಯೇಬಿಟ್ಟಳು.' ಮೇಡಂ,ನಾವಷ್ಟು ಪ್ರೀತಿಯಿಂದ  ಕೊಟ್ಟೇವಿ. ನೀವು ಇಟ್ಟುಕೊಳ್ಳಲೇ  ಇಲ್ಲ?' ನಸುನಕ್ಕ ಅವರು ಉತ್ತರಿಸಿದರು - ' ಇಲ್ಲ ಮರೀ,ಖಂಡಿತ ನಿಮ್ಮ ಪ್ರೀತಿಗೆ ಸರಿಯಾದ  ಸ್ಥಾನವನ್ನೇ ಅದು ಸೇರುತ್ತದೆ'. ಶಾಲೆಯಲ್ಲಿದ್ದ ಅರವಿಂದರ ಫೋಟೋವನ್ನದು ಅಲಂಕರಿಸಿತು. ನಮಗೆಲ್ಲ 'ಅಯ್ಯೋ! ಜಯಶ್ರೀ ಎಂಥ ಅನಾಹುತದ ಪ್ರಶ್ನೆ ಕೇಳಿಬಿಟ್ಟಳಲ್ಲ?' ಎಂಬ ಆತಂಕ.

      ಮರುದಿನ  ೧೧ ಗಂಟೆ. ಕಿಲಕಿಲ ನಗುತ್ತ , ಜೋರುಜೋರಾಗಿ ಹರಟೆ ಹೊಡೆಯುತ್ತ ನಮ್ಮೆಲ್ಲ  ಗೆಳತಿಯ ಸವಾರಿ  ಇಡಿಯ ರೋಡನ್ನೇ  block ಮಾಡಿಕೊಂಡು ಶಾಲೆಗೆ ಹೊರಟಿತ್ತು. 'ಟ್ರಿಣ್..ಟ್ರಿಣ್..' ಹಿಂದೆ ಮ್ಯಾಡಂ ನ ಸೈಕಲ್ ನ ಬೆಲ್ ದನಿ. ಹಿಂತಿರುಗಿ ನೋಡಿ ದಾರಿ ಮಾಡಿಕೊಟ್ಟ ನಮ್ಮ ಪಕ್ಕದಲ್ಲೇ ಸೈಕಲ್ ನಿಂದ ಇಳಿದ ಅವರು ನನ್ನನ್ನೇ ನೋಡುತ್ತ ಗಂಭೀರವಾಗಿ ' ನಿನ್ನೆ ಹೂವು ಯಾಕೆ ಮುಡಿದುಕೊಳ್ಳಲಿಲ್ಲ ಎಂದು ನೀನಲ್ಲವೇ ಕೇಳಿದ್ದ?' ಎಂದರು. ನನಗೋ ಒಮ್ಮೆಲೇ ಎದೆ ಝಲ್ಲೆಂದಿತು, ಖಂಡಿತ  ಬಯ್ಯುತ್ತಾರಿವರು ಎಂದು. ಕೆಲಸಮಯದ ಹಿಂದೆ ಅಮ್ಮ ಅರಿಶಿನ-ಕುಂಕುಮಕ್ಕೆ ಎಲ್ಲರನ್ನೂ ಕರೆದು ಬಾ ಎಂದು ಹೇಳಿಕಳಿಸಿದಾಗ ನಮ್ಮೂರಿನ ಮಡಿಹೆಂಗಸು ಪದ್ದಕ್ಕಜ್ಜಿಯನ್ನೂ 'ಅರಿಶಿನ-ಕುಂಕುಮಕ್ಕ ಬರಬೇಕಂತ್ರಿ' ಎಂದು ಕರೆದು ' ನಿಮ್ಮವ್ವ ಹೇಳಿದ್ಲಾ ನನ್ನ ಕರಿ ಅಂತ. ಹುಚ್ಚು ಮುಂಡೆದೇ..' ಅಂತ ಅವರಿಂದ ಬಯ್ಯಿಸಿಕೊಂಡದ್ದು ನೆನಪಾಗಿ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದ ನಾನು ಹೆದರಿದ್ದೆ.' ಓಹೋ! ಇವರು ಆ ಪ್ರಶ್ನೆ ಕೇಳಿದವಳು ನಾನೇ ಅಂದುಕೊಂಡಿದ್ದಾರೆ. ನಾನಲ್ಲ; ಜಯಶ್ರೀ ಎಂದು ಅವಳ ಹೆಸರು ಹೇಳಿ ಅವಳಿಗೆ ಬಯ್ಯಿಸಬಾರದು. ಪಾಪಾ! ಅವಳು ಮೊದಲೇ ಮೆತ್ತನೆಯ ಹುಡುಗಿ. ಏನೋ ತಿಳಿಯದೇ ಕೇಳಿದ್ದಾಳೆ' ..ಎಂದೆಲ್ಲ ಅನ್ನಿಸಿ 'ಹೌದ್ರಿ.ನಾನೇ' ಎಂದುಬಿಟ್ಟೆ. ನಾನಂದುಕೊಂಡಂತೆ ಅವರು ಬಯ್ಯಲಿಲ್ಲ;ರೇಗಲೂ ಇಲ್ಲ. ''ನೋಡು ಮರೀ, ನೀನಿನ್ನೂ ಸಣ್ಣವಳು.ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿ , ವಸ್ತುವೂ ತನ್ನ ಆತ್ಯಂತಿಕ ಗುರಿಯನ್ನು ಮುಟ್ಟಲು ಉದ್ಯುಕ್ತವಾಗಿರುತ್ತದೆ; ಸಾಥ೯ಕತೆಯನ್ನು ಪಡೆಯಲು ತುಡಿಯುತ್ತಿರುತ್ತದೆ. ನೀವು ನಿನ್ನೆ ಕೊಟ್ಟ ಹೂ ..ದೇವನ, ಗುರುವಿನ ಶಿರವನ್ನೋ, ಪಾದವನ್ನೋ ಸೇರುವುದೇ ಅದರ ತಪಸ್ಸು. ನಾ ಮುಡಿದುಕೊಂಡರೆ  ಒಂದೆರಡು ಗಂಟೆಯಲ್ಲಿ ಒಣಗಿ ಮುದುರಿ ಹೋಗುತ್ತಿತ್ತು. ಅದಕ್ಕೆಂದೇ ನಿಮ್ಮೆಲ್ಲರ ಯಶಸ್ಸಿಗಾಗಿ, ಶ್ರೇಯಸ್ಸಿಗಾಗಿ  ಪ್ರಾಥಿ೯ಸಿ ಅದನ್ನು ಅರವಿಂದರ ಭಾವಚಿತ್ರಕ್ಕೆ ಸಮಪಿಸಿದ್ದು' ಎಂದರು. ಅವರು ಹೇಳಿದ್ದು ಬಹಳಷ್ಟೇನೂ ಅಥ೯ವಾಗದಿದ್ದರೂ ಅವರ ದನಿಯಲ್ಲಿನ ನೈಜ ಕಳಕಳಿ, ಪ್ರೀತಿ ನೇರವಾಗಿ ನನ್ನ  ಹೃದಯವನ್ನು ಸ್ಪಶಿ೯ಸಿತು. ಅವರ ಆ ರೀತಿಯ ವಿಚಾರ-ಚಿಂತನೆ ನಮ್ಮ ಆಗಿನ ಬೌದ್ಧಿಕ ವಲಯಕ್ಕೊಂದು ಕ್ರಾಂತಿ ಎಂದರೂ ಸರಿಯೇ.  'ಮಗೂ, ಸಸ್ಯಗಳಿಗೆ, ಹೂಗಳಿಗೆ, ಗಿಡಮರಬಳ್ಳಿಗಳಿಗೆ ಎಲ್ಲಕ್ಕೂ ಜೀವವಿರುತ್ತದೆ. ಅವಕ್ಕೂ ನಮ್ಮಂತೆಯೇ ಭಾವನೆಗಳಿರುತ್ತವೆ. ನಿಮ್ಮ ಪಾಠದಲ್ಲಿ ಜಗದೀಶ್ ಚಂದ್ರ  ಬೋಸ್ ರ ವಿಷಯ ಬಂದಿಲ್ಲವೇ? ಇವತ್ತು ಶಾಲೆ ಬಿಟ್ಟ ಮೇಲೆ ನನ್ನನ್ನು ಕಾಣು. ಅವರ ಪುಸ್ತಕ ಕೊಡುತ್ತೇನೆ.'' ಎಂದರು. ಆ ಪುಸ್ತಕ, ಅದರಲ್ಲಿ ಅವರು ನನಗೆಂದು ಬರೆದಿಟ್ಟ ಚಂದದ ಪತ್ರ ನಂತರದ ಕತೆಯೇ ಬೇರೆ.ಆ ಶರಾವತಿ ಹೆಗಡೆ ಮ್ಯಾಡಂ ನನ್ನ ಪ್ರೀತಿಯ ಶತ೯ಕ್ಕನಾಗಿ ಜೀವನದ ಎತ್ತರದ ಸ್ತರಗಳನ್ನು ತೋರಿಸಿಕೊಟ್ಟು, ನೈತಿಕತೆ, ಪ್ರಾಮಾಣಿಕತೆ, ಪ್ರೀತಿ, ಅಧ್ಯಾತ್ಮ, ಸಾಹಿತ್ಯ, ಸಂಗೀತದಂಥ ಧನಾತ್ಮಕ ಚಿಂತನೆಗಳ ಸಹಸ್ರ ಗರಿ ಮೂಡಿಸಿ, ಅಂತ:ಕರಣದ ಹೊಳೆಯಲ್ಲಿ ನನ್ನನ್ನು ಮೀಯಿಸಿ, ತೊಯ್ಯಿಸಿ,  ಮೈ-ಮನ-ಚೇತನಗಳನ್ನೆಲ್ಲ ಸಂತೃಪ್ತಗೊಳಿಸಿ , ಜೀವನದ ಇಂದಿನ ಹಂತದವರೆಗೂ ತನ್ನ ಕೃಪಾ ಶಕ್ತಿಯಿಂದಲೇ ಎಲ್ಲ ಕಷ್ಟಗಳಲ್ಲೂ ಪಾರುಮಾಡಿ ...ಓಹ್! ಅದ್ಭುತ!! ಅದನ್ನೆಲ್ಲ ಬರೆಯಲಾಗದು. ಬರೆದು,ಮಾತಾಡಿ  ಅದರ ಭಾವತೀವ್ರತೆಯ ಸೊಗವನ್ನು ಕಡಿಮೆ ಮಾಡಿಕೊಳ್ಳಲಾಗದು.

''ಸದ್ದುಗದ್ದಲದ  ತುತ್ತೂರಿ ದನಿಗಳಾಚೆಗೆ ನಿಂತು 
ನಿಶ್ಶಬ್ದ ದಲ್ಲಿ  ನೆನೆಯುತ್ತೇನೆ ಗೌರವದಿಂದ.
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ.
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ'' 
 ( ಮೂಲ ಡಾ. ಜಿ. ಎಸ್. ಎಸ್ )

***********************************************
ನಾಡಗೀರ ಮಾಸ್ತರ್ (1915-2011)

ನನ್ನಶಾಲೆ ಮತ್ತು ನನ್ನ ಇಂಗ್ಲಿಷ್ ಟೀಚರ್ ನಾಡಗೀರ ಮಾಸ್ತರ್ (1915-2011) ಶ್ರೀವತ್ಸ ದೇಸಾಯಿ

ಪ್ರತಿ ವರ್ಷ ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವೆಂದು ಸಾಮೂಹಿಕವಾಗಿ ಆಚರಿಸುತ್ತೇವೆಯಾದರೂ ಪ್ರತಿದಿನದ ಯೋಗಾಭ್ಯಾಸದ ಪ್ರಾರಂಭದಲ್ಲಿ ನಮ್ಮ ಯೋಗಾಮಾ ಹೇಳಿದಂತೆ ನನ್ನ ಶಾಲಾಗುರುಗಳು ನನಗೆ ಪ್ರಾತಃಸ್ಮರಣೀಯರಾಗುತ್ತಾರೆ. ಸುಮಾರು ಎಂಬತ್ತು ವರ್ಷಗಳ ಕೆಳಗೆ ಕರ್ನಾಟಕ ಎಜುಕೇಶನ್  ಸೊಸೈಟಿ ಎನ್ನುವ  ಹೆಸರಿನಿಂದ ಸ್ಥಾಪಿತವಾಗಿ ಮುಂದೆ ಮಹತ್ವದ ಶೈಕ್ಷಣಿಕ ಸಂಸ್ಥೆ ಯ(K E Board) ಧಾರವಾಡದ ಮಾಳಮಡ್ಡಿಯಲ್ಲಿರುವ ಕೆ ಇ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ನಾನು. ಗುರುರಾಜ ಕರಜಗಿಯವರು ಅನೇಕ ಸಲ ಹೇಳಿದಂತೆ ನಿಸ್ವಾರ್ಥ, ಅಪ್ಪಟ ದೇಶಪ್ರೇಮಿ ಆದರ್ಶ ಮಾಸ್ತರರ ಪಡೆಯೇ ಅಲ್ಲಿ ಇತ್ತು. ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳೆಲ್ಲರ ಹೆಸರು ತೊಗೊಳ್ಳದೆ ಅವರೆಲ್ಲರಿಗೂ ವಂದಿಸಿ ಈ ಚಿಕ್ಕ ಲೇಖನದಲ್ಲಿ ಇಂಗ್ಲಿಷ್ ಟೀಚರ್ ನಾಡಗೀರವರ ಬಗ್ಗೆಯಷ್ಟೇ ಸ್ವಲ್ಪ ಬರೆಯುತ್ತೇನೆ. ಬರೆಯುತ್ತ ಹೋದರೆ ಪರೀಕ್ಷೆಯ ದಿನ ಕೊಡುತ್ತಿದ್ದ ’ಸಪ್ಲಿಮೆಂಟೆಲ್ಲ’ ತುಂಬಿಸುವಷ್ಟಿದೆ. ನಮ್ಮೆಲ್ಲ ಗೆಳೆಯರಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ಶಿವರಾವ್ ಜಿ ನಾಡಗೀರ್ ಮಾಸ್ತರರು. ಇನ್ನೂ ಹತ್ತಿರದವರು ಅವರನ್ನು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು. ನಮ್ಮ ’ಸಾಲಿ” ಅಂದರೆ ಉತ್ತರ ಕರ್ನಾಟಕ ಭಾಷೆಯಲ್ಲಿ ಶಾಲೆ -ನಾಡಗೀರ್ ಮಾಸ್ತರರ ಸಾಲಿ ಅಂತ ಎಲ್ಲೆಡೆ  ಪ್ರಸಿದ್ಧವಾಗಿತ್ತು. ಕೆ ಇ ಬೋರ್ಡ್ ಹೈಸ್ಕೂಲಿನಲ್ಲಿ ಅವರು ಸೇವೆ ಸಲ್ಲಿಸಿದ ನಾಲ್ಕು ದಶಕಗಳಲ್ಲಿ (1938-1976) ಅದೆಷ್ಟೊಂದು ಕೆಲಸ ಮಾಡಿದ್ದರು! ಅದರಲ್ಲಿ 20 ವರ್ಷ ಹೆಡ್ಮಾಸ್ಟರ್ ಆಗಿದ್ದರು. ಅವರು ಕಲಿಸಿದ ವಿದ್ಯಾರ್ಥಿಗಳು ಸಾವಿರಾರು. ಅವರೆಲ್ಲರ ಮನದಲ್ಲಿ ಅವರು ಸ್ಥಿರವಾಗಿ ನೆಲೆಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. 1975ರಲ್ಲಿ ರಾಷ್ಟ್ರಪತಿಗಳ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯಿಂದ ಭೂಷಿತರಾದರು. ಅವರ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು. ಹೆಚ್ಚಿನ ಕೋಚಿಂಗಿನಿಂದ ನೂರಕ್ಕೂ ಹೆಚ್ಚು ’ರಾಂಕ್’ ಗಳಿಸಿ Rank Bank ಅಂತ ನಮ್ಮ ಶಾಲೆ ಕರೆಸಿಕೊಳ್ಳಲಾರಂಭಿಸಿತು.

ಕೆ. ಯೀ. ಬೋರ್ಡ್ ಮಹಾವಿದ್ಯಾಲಯ, ಧಾರವಾಡ
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕಾರ – ನಾಡಿಗೇರ್ ಮಾಸ್ತರ್ ಮತ್ತು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
 ’ನನ್ನ ಮಾಸ್ತರ್-ನನ್ನ ಪೆನ್ ಫ್ರೆಂಡ್ ಸಹ’.
ಆ ಶಾಲೆಯಲ್ಲಿ ನಾನು  ಕಲಿತದ್ದು ಮೂರೇ ವರ್ಷಗಳಾದರೂ ಅವರೊಡನೆ ನನ್ನ ಸಂಬಂಧ, ಮತ್ತು ಪತ್ರ ವ್ಯವಹಾರ ಅವರು ನಿಧನರಾಗುವ ತನಕ ಇತ್ತು. ಅವರು ಅತ್ಯಂತ ಶಿಸ್ತಿನ ಮನುಷ್ಯ. ವ್ಯತಿರಿಕ್ತವಾಗಿ ನಡೆದರೆ ಶಿವನ ಮೂರನೆಯ ಕಣ್ಣಿಗೆ ಆಹುತಿಯೇ ಸೈ. ನಾವೆಲ್ಲ ಅವರೆದುರು ಥರ ಥರ ನಡುಗುತ್ತಿದ್ದೆವು. ನಾನು ಸಾಲಿ ಬಿಟ್ಟ ನಂತರವೇ ಅವರು ನನಗೆ ಇನ್ನೂ ಹತ್ತಿರವಾದರು. ತಮ್ಮ ತೊಂಬತ್ತಾರನೆಯ ವಯಸ್ಸಿನವರೆಗೆ ನನ್ನೂಡನೆ ಪತ್ರವ್ಯವಹಾರ ನಡೆಸುತ್ತಿದ್ದರು: ಅದರಲ್ಲಿ ಹಾಸ್ಯವಿರುತ್ತಿತ್ತು, ಬೋಧನೆಯಿರುತ್ತಿತ್ತು; ಚೇಷ್ಟೆ ಸಹ! ಅದೇ ತರಹ ಇನ್ನುಳಿದ ಅಗಣಿತ ಹಳೆಯ ವಿದ್ಯಾರ್ಥಿಗಳಿಗೂ ಸ್ವಹಸ್ತದಿಂದಲೇ ಪತ್ರಗಳನ್ನು ಬರೆಯುತ್ತಿದ್ದರೆಂದು ನನಗೆ ಆಮೇಲೆ ಗೊತ್ತಾಯಿತು.ಅವರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರ ಸ್ಖಾಲಿತ್ಯವಿರದ ಪತ್ರಗಳ ತುಂಬ ಶೇಕ್ಸ್ಪಿಯರಿನ ನಾಟಕಗಳ,  ಥಾಮಸ್ ಗ್ರೇ, ಕಾರ್ಲೈಲ್, ಟೆನ್ನಿಸನ್ ಮುಂತಾದ ಆಂಗ್ಲ ನಾಡಿನ ಸಾರಸ್ವತ ಪುತ್ರರ ಕೊಟೇಶನ್ ಗಳಿರುತ್ತಿದ್ದವು. ಅವರ ಜನ್ಮಶತಾಬ್ದಿಯ ಸ್ಮರಣಸಂಚಿಕೆಗಾಗಿ ಆ ’ಪತ್ರ ಪರಾಚಿಯ’ ಆಧಾರದ ಮೇಲೆಯೇ ಒಂದು ಲೇಖನ ಬರೆದಿದ್ದೆ. ಅದರ ಶೀಷಿಕೆ: 'Nadgir master -my guru and my pen pal!'  ಅಂತ!  "A good teacher teaches well at school; a great teacher continues to teach even after you've left the school!" ಅಂತ ಉಲ್ಲೇಖಿಸಿದ್ದೆ.
’ಆರಂಕು”ಶಮಿಟ್ಟೊಡಂ ...

ಅವರ ಇಂಗ್ಲಿಷ್ ಪಾಠದಿಂದಲೆ ನನಗೆ ಆ ಭಾಷೆಯ ಮೇಲಿನ ಒಲವು ಶುರುವಾಗಿತ್ತು. ಅವರು ಕನ್ನಡ ಸಹ ಕಲಿಸುತ್ತಿದ್ದರು. ನಾನು ಪರದೇಶಕ್ಕೆ ಬಂದ ಮೇಲೆ ಒಂದು ವರ್ಷ ಇನ್ನೊಬ್ಬ ಸಹಪಾಠಿಯ ಜೊತೆ ಸೇರಿ ನಾವೇ ಹೊಸದಾಗಿ ಕಲಿತ ಕಂಪ್ಯೂಟರಿನಿಂದ ಅವರಿಗೊಂದು ಬರ್ತ್ ಡೇ ಕಾರ್ಡ್ ಮಾಡಿ ಪ್ರಿಂಟ್ ಕಳಿಸಿಕೊಟ್ಟಿದ್ದೆವು. ಅವರ ಸೂಕ್ಷ್ಮ ಕಣ್ಣು ನಾವು ಟೈಪು ಮಾಡುವಾಗ ಒಂದಕ್ಷರ ('r') ಬಿಟ್ಟು ಹೋಗಿ ”ಅದು ’ಬಿಥ ಡೇ’ ಆಗಿತ್ತಲ್ಲೋ,” ಅಂತ ಅವರು ಟೀಕಿಸಿ ತಿದ್ದಿದ್ದನ್ನು ಮರೆಯುವಂತಿಲ್ಲ. ಈಗಲೂ ಪ್ರತಿ ಸಲ ನಾನು 'Happy birthday' ಅಂತ ಬರೆಯುವಾಗಲೆಲ್ಲ ಅಂಕುಶದಿಂದ ತಿವಿದು ಮರೆಯ ಬೇಡ ’’r' ಅಂತ ”ಏಡಿಸಿ ಕಾಡುತ್ತದೆ, ಶಿವನ ಡಂಗುರ!” ಅದಕ್ಕೇ ಎಚ್ಚರಿಕೆಯಿಂದ ತಪ್ಪು ಮಾಡದೆ ಬರೆಯಲು ಪ್ರಯತ್ನಿಸುತ್ತೇನೆ. ಆರಂಕುಶಮಿಟ್ಟೊಡಮ್ ನೆನೆವುದೆನ್ನ ಮನಂ ಧಾರವಾಡ ದೇಶಮಮ್!

ನಾಡಗೀರ್ ಸರ್ ತಮ್ಮನ್ನು ಶಾಲೆಯ ಉನ್ನತಿಗಾಗಿಯೇ ಹಗಲು ರಾತ್ರಿ ತೂಡಗಿಸಿಕೊಂಡಿರುತ್ತಿದ್ದರು. ಉಳಿದವರಿಂದಲೂ ಅದೇ ಶಿಸ್ತನ್ನೇ ಅಪೇಕ್ಷಿಸುತ್ತಿದ್ದರು. ಅವರ ಮೇಜಿನ ಮೇಲಿನ ಮರದ ತುಂಡಿನಮೇಲೆ ಎರಡೂ ಬದಿಯಲ್ಲಿ ಭಾರತದ ಹಿಂದಿನ ಒಬ್ಬ ಪ್ರಧಾನಿ ಹೇಳಿದ ಬರಹವನ್ನು ಬರೆಸಿ ಇಟ್ಟಿದ್ದರು, ಮತ್ತು ಅದರಂತೆ ನಡೆದುಕೊಳ್ಳುತ್ತಿದ್ದರು. ಅದು ಹೀಗೆ ಇತ್ತು: I am interested in getting things done. I am not interested in the cause of delay.
ಉಪದೇಶ ಮಾಡುವದಕ್ಕಿಂತ ಮಾಡಿ ತೋರಿಸುವದು ಅವರ ಮಾದರಿಯಾಗಿತ್ತು. ಎಲ್ಲಿಯೇ ಇದ್ದರೂ ರಾಷ್ಟ್ರಗೀತೆ ಹಾಡುತ್ತಿರುವಾಗ ಇದ್ದಲ್ಲೇ ನಿಂತು ಗೌರವ ತೋರಿಸುವದನ್ನು ಬಿಂಬಿಸಲು ಒಂದಿ ದಿನ ಬೇಕಂತಲೇ ತಡವಾಗಿ ಶಾಲೆಯ ಮೈದಾನದ ಮಧ್ಯ ಬಂದು ತಲುಪಿದಾಗ ಎಂದಿನಂತೆ ಶಾಲೆಯ ಪ್ರಾರ್ಥನೆ ಆರಂಭವಾಯಿತೆಂದು ಎಲ್ಲರಿಗೂ ಕಾಣುತ್ತಿದ್ದಂತೆಯೇ ಅಲ್ಲೇ ನಿಂತುಬಿಟ್ಟರು, ಮುಗಿಯುವ ವರೆಗೆ. ನನಗೆ ಇನ್ನೂ ನೆಪಿನಲ್ಲಿರುವ ಆ ನಿದರ್ಶನ ಎಲ್ಲ ಶಾಲಾ ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು ಮತ್ತು ಆ ಆದರ್ಶವನ್ನು ಪಾಲಿಸಲು ಪ್ರೇರಿಸಿತು. ಶಾಲೆಯಲ್ಲಿ ಅವರು ಎಲ್ಲರಿಗೂ ಕಾಣಿಸುವಂತೆಒಂದು ಬರಹವನ್ನು ಬರೆಸಿ ಹಾಕಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದರು ಸಹ. ಅದು ಹೀಗಿತ್ತು: 
"Henceforth you and the school are one, what you are, the school shall be. Here shall beat the heart of us, the best school of all. Your alma mater expects everyone to do their duty. For her, no contribution is too great and no sacrifice is too small."

ಆಗ ಶಾಲೆಗಳಿಗೆ ಸರಕಾರದ ಅನುದಾನದ ವ್ಯವಸ್ಥೆ ಇರುತ್ತಿರಲಿಲ್ಲ. ಮಕ್ಕಳು ಕೊಡುವ ಫೀಸ್ ಹಣದಿಂದಲೇ ಶಾಲೆಯ ಖರ್ಚು, ಸಿಬ್ಬಂದಿಯ ಸಂಬಳ, ಇವೆಲ್ಲವನ್ನು ನೋಡಿಕೊಳ್ಳಬೇಕು, ಹೆಡ್ಮಾಸ್ಟರ್. ಹೆಡ್ ಮಾಸ್ಟರ್ ಆಗಿದ್ದ ಅವರ ಮನೆ ಶಾಲೆಯ ಆವರಣದಲ್ಲಿಯೇ ಇತ್ತು. ಅವರ ಮಗ ಅರುಣನೂ ನನ್ನ ಕ್ಲಾಸಿನಲ್ಲಿಯೇ ಇದ್ದ. ಅವನಲ್ಲದೆ ಇನ್ನೂ ಹದಿನೈದು ಮಾಸ್ತರರ ಮಕ್ಕಳೂ ನನ್ನ ಕ್ಲಾಸಿನಲ್ಲಿದ್ದರು. ಅವರಿಗೆ ಫೀ ಮಾಫಿ ಇತ್ತು. ಅನೇಕ ಬಡ ವಿದ್ಯಾರ್ಥಿಗಳಿಗೂ ಅದೇ ತರಹ ರಿಯಾಯತಿ ಕೊಡುತ್ತಿದ್ದರಿಂದ ಹಲವಾರು ಸಲ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡಲು ಕಷ್ಟವಾಗುತ್ತಿತ್ತು. ತಾವು ಮಾತ್ರ ತಮ್ಮ ಅವಧಿಯ ಪೂರ್ತಿ ಅರ್ಧ ಪಗಾರ ಅಷ್ಟೇ ತೆಗೆದುಕೊಂಡು ಪೂರ್ತಿ ಸ್ವೀಕರಿಸಿದೆ ಅಂತ ಸಹಿಮಾಡುತ್ತಿದ್ದರು. ಅದೆಷ್ಟೋ ಸಲ ಬಡಮಕ್ಕಳು ಹಸಿದ ಹೊಟ್ಟೆಯಲ್ಲಿ ಬಂದಿದ್ದನ್ನು ಗಮನಿಸಿ ಆವರಣದಲ್ಲಿದ್ದ ತಮ್ಮ ಮನೆಗೇ ತಿಂಡಿ ತಿಂದು ಬರಲು ಕಳಿಸಿ ಕೊಡುತ್ತಿದ್ದರು. ”ಎಷ್ಟೋ ಸಲ ಇಂತಹ ಮಕ್ಕಳೊಂದಿಗೆ ನಾನು ನನ್ನ ರೊಟ್ಟಿಯನ್ನು ಹಂಚಿಕೊಂಡಿದ್ದೇನೆ”’ ಅಂತ ಸನ್ನ ಸಹಪಾಠಿಯಾಗಿದ್ದ ಅರುಣ ತನ್ನ ಸ್ಮರಣೆಯನ್ನು ಇತ್ತೀಚೆಗೆ ಒಂದು ಪುಸ್ತಕದಲ್ಲಿ ಹಂಚಿಕೊಂಡಿದ್ದಾನೆ. National scholarship ಪರೀಕ್ಷೆಯಲ್ಲಿ ಉತ್ತಮ ತರಗತಿಯಲ್ಲಿ ಪಾಸಾಗಿದ್ದರೂ means tested ಇದ್ದುದರಿಂದ ಸ್ವತಃ ಅರ್ಧ ಸಂಬಳವನ್ನೇ ಮನೆಗೆ ಒಯ್ಯುತ್ತಿದ್ದರೂ ಆ ಶಿಷ್ಯವೇತನದ ಪೂರ್ಣ ಫಲ ತನಗೆ ಲಭ್ಯವಾಗಿರಲಿಲ್ಲ ಅಂತ ಮಾಸ್ತರರ ಎರಡನೆಯ ಮಗನಿಗೆ ಇತ್ತು ಕೊರಗು! 

ಬಡತನ ಕಷ್ಟ ಕಾರ್ಪಣ್ಯಗಳೊಡನೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅನೇಕ ಗುರುಗಳು ಶಾಲೆಯಲ್ಲಿದ್ದರು. ಬದುಕಿದ್ದಷ್ಟು ದಿನ ಬಡತನ. ಅವರ ಆಸ್ತಿಯೆಂದರೆ ಅವರ ಶಿಷ್ಯವೃಂದ. ಆ ದಿನಗಳ ನೆನಪಿನ ಭಂಡಾರವೇ ನಮ್ಮ ಜೀವನಕ್ಕೆ ಭಂಡವಲು. ಅವರ ಆದರ್ಶ ನಮಗೆ ದಿಕ್ಸೂಚಿ.
'ವಾತ್ಸಲ್ಯ’ ಎನ್ನುವ ಅಭಿನಂದನಾ ಗ್ರಂಥದಲ್ಲಿ ತಮ್ಮ ಆತ್ಮಚರಿತ್ರೆ ಬರೆಯುತ್ತ ತಮ್ಮ ’ಪ್ರಸಿದ್ಧ’ ಸಿಟ್ಟಿನ ಬಗ್ಗೆ ಹೀಗೆ ಬರೆದಿದ್ದಾರೆ (’ವಾತ್ಸಲ್ಯ’; ಪು. 9): ’ನನ್ನದು ಸಿಟ್ಟಿನ ಸ್ವಭಾವ. ಅದು ಅಪ್ಪನಿಂದ ಬಂದ ಆನುವಂಶಿಕ ಗುಣವೂ ಇರಬಹುದು, ಅಥವಾ (ಎಳೆವಯಸ್ಸಿನಲ್ಲೇ ತಾಯಿಯನ್ನೆ ಕಳೆದುಕೊಂಡ) ಮಾತೃವಾತ್ಸಲ್ಯದ ಅಭಾವದಿಂದಲೂ ಇರಬಹುದು. ಏನೇ ಇರಲಿ, ”ಹೊಲೆಸಿಟ್ಟು” ನನ್ನ ಜೀವನದ ಬಹುಭಾಗವನ್ನು ನುಂಗಿ ಹಾಕಿದೆ. ಬರೆದ ಚಿತ್ರವೆಲ್ಲ ಮಸಿ ನುಂಗಿದಂತೆ, ಸ್ವಚ್ಛ ಮನಸ್ಸಿನಿಂದ ಮಾಡಿದ ಒಳ್ಳೇ ಕೆಲಸಗಳು ನಿಷ್ಪ್ರಯೋಜಕವಾಗಿರುವುದರ ಅರಿವೂ ನನಗಾಗಿದೆ. ನನ್ನ ಸಿಟ್ಟಿನ ರುಚಿಯನ್ನು ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಕುಟುಂಬದವರೂ ಸಾಕಷ್ಟು ಉಂಡಿದ್ದಾರೆ'.

 ಶಿಸ್ತಿನ ಸಾಕಾರ ಸ್ವರೂಪರಾಗಿದ್ದ ಅವರು  ಆಗಾಗ್ಗೆ ಸಿಟ್ಟಿನ ಪ್ರತಿರೂಪ ತಳೆದು ’ದೂರ್ವಾಸ ಮುನ್ನಿ’ ಅನ್ನುವ ಉಪನಾಮ ಗಳಿಸಿದ್ದರೂ ಅವರ ಶಿಷ್ಯ ವಾತ್ಸಲ್ಯ ಅಪಾರ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಂಥ ಒಂದು ಪ್ರಸಂಗದಲ್ಲಿ ತಮಗೆ ಕಪಾಳ ಮೋಕ್ಷ ಕೊಟ್ಟಿದ್ದ ನಾಡಗೀರ್ ಮಾಸ್ತರರೇ ತಾವು ಪ್ರಸಿದ್ಧ ವಾಗ್ಮಿಗಳಾಗಲು ಕಾರಣವೇನೋ ಎಂದು ನನ್ನ ಶಾಲೆಯಲ್ಲೇ ಕಲಿತ ಗುರುರಾಜ ಕರಜಗಿಯವರು ಒಂದು ಲೇಖನದಲ್ಲಿ ಉದ್ಗಾರ ತೆಗೆದಿದ್ದಾರೆ! 

ಕೆಲವು ಸ್ವಾರಸ್ಯಕರ ಘಟನೆಗಳೊಂದಿಗೆ ಈ ಲೇಖನವನ್ನು ಮುಗಿಸುವೆ.

ಮೂರು ವರ್ಷಗಳ ಕೆಳಗೆ 75 ದಾಟಿದ (ಒಬ್ಬರನ್ನು ಬಿಟ್ಟು) ಇಪ್ಪತ್ತೆರಡು ಹಳೆಯ ವಿದ್ಯಾರ್ಥಿಗಳು ಧಾರವಾಡದಲ್ಲಿ ಸೇರಿ ನಮ್ಮ ಶಾಲೆಗೆ ಹೋಗಿ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಂಡೆವು. ಶಾಲಾ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮೋಹನನಿಗೆ ’ಟೆನ್ಷನ್.’ ತನಗೆ ಏನೂ ನೆನಪಾಗುವದಿಲ್ಲ ಅಂತ ಬೆವರಿಳಿಯುತ್ತದೆ. ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಕುಲಕರ್ಣಿ ಮಾಸ್ತರರು ಆತನ ಬಿನ್ನು ಸವರುತ್ತ, ”ಡೋಂಟ್ ವರ್ರಿ; ಬಂದಷ್ಟು ಬರಿ!” ಅಂತ ಅರಿಪ್ರಾಸವನ್ನು (ಅರಿಸಮಾಸದಂತೆ, ಆಂಗ್ಲ-ಕನ್ನಡ ಭಾಷೆಯ ಕಲಬೆರಕೆ) ಜೋಡಿಸಿ ಹೇಳಿದ್ದನ್ನು ಒಬ್ಬರು ನೆನೆದಾಗ ಕೋಣೆಯ ತುಂಬ ನಗು.
ಶ್ಲೇಷಾಲಂಕಾರ, homonym ಗಳನ್ನು ಮೊದಲ ಬಾರಿ ನಾಡಗೀರ್ ಮಾಸ್ತರ್ ಕಲಿಸಿದ್ದು ನನಗೆ ಇಂದೂ ನೆನಪಿದೆ: The vicar told the sexton (ಚರ್ಚಿನ ಗಂಟೆಯನ್ನು ಬಾರಿಸುವವ) and he tolled the bell (ಬಾರಿಸಿದ). Who is going to bell the cat ಅನ್ನುವ ಪದಗುಚ್ಛದ ಅರ್ಥವನ್ನು ಅವರೇ ಕಲಿಸಿದ್ದು:'to undertake a very dangerous mission.' ಅದರ ಪ್ರಾತ್ಯಕ್ಷಿಕೆಯನ್ನೂ ಮಾಡಬೇಕಾದ ಪ್ರಸಂಗವೂ ಒಮ್ಮೆ ಒದಗಿ ಬಂದಿತ್ತು.

ಕತ್ತಲೆ-ಬೆಳಕು
Epitaph (ಗೋರಿ ಬರಹ) ಅಂದರೇನು ಅಂತ ಕಲಿಸುವಾಗ ಮಾಸ್ತರರು ಹೇಳಿದ’ಕಥೆ.’ ಶೋಕಗ್ರಸ್ತ ಪಾಶ್ಚಿಮಾತ್ಯ ವಿಧವೆಯೊಬ್ಬಳು ಪತಿಯ ಅಗಲುಕೆಯಿಂದ ತನ್ನ ಬದುಕನ್ನು ಆವರಿಸಿದ ಅಂಧಕಾರವನ್ನು ಸೂಚಿಸಲು ಚರ್ಚಿನ ಸೆಮೆಟ್ರಿಯಲ್ಲಿ ಕಲ್ಲಿನ ಮೇಲೆ ಕೆತ್ತಿಸಿದ್ದು: Since the demise of my husband, I'm left in utter darkness ಅಂತ. ಎರಡು ವರ್ಷಗಳ ನಂತರ ಚೇತರಿಸಿಕೊಂಡು ಪುನರ್ವಿವಾಹ ಆದಾಗ ಆ epitaph ಗೆ ಇನ್ನೊಂದು ಸಾಲು ಸೇರಿಸಿದಳಂತೆ: But now I have struck a match!
ಕ್ಷಮಾಪಣೆ ಕೇಳಲು 36 ವರ್ಷಗಳ ಕಾಲ ಕಾಯ್ದ ಪ್ರೀತಿಯ ವಿದ್ಯಾರ್ಥಿ!

’ತಪ್ಪು ಮಾಡುವದು ಸಹಜವೇ. ಆದರೆ ಅದನ್ನು ಒಪ್ಪಿಕೊಂಡು ಕ್ಷಮಾಪಣೆ ಬೇಡಲು ಸಿದ್ಧರಿರುವುದು ದೊಡ್ಡ ಗುಣ ಅಂತ ಅವರು ಕಲಿಸಿದರು. 1977ರಲ್ಲಿ ನಡೆದ ಒಂದು ಘಟನೆಯನ್ನು ನೆನೆದು ನನ್ನ ಸಹಪಾಠಿ ಅರುಣ ಬರೆದದ್ದನ್ನು ಇಲ್ಲಿ ಕೊಡುವೆ:
” 1960ರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳನ್ನು (ನಾಡಗೀರ್ ಮಾಸ್ತರರು) ಕಲಿಸುತ್ತಿದ್ದರು.ಆವಾಗ ಒಂದು ಅಹಿತಕರ ಘಟನೆ ನಡೆದು ನಮ್ಮ ಸಹಪಾಠಿಗಳಿಗೆ ಬೇಸರವಾಯಿತು. ಅವರೆಲ್ಲಾ ಸೇರಿ ನಾಡಗೀರ ಮಾಸ್ತರರು ನಮಗೆ ಕಲಿಸುವದು ಬೇಡ ಎಂದು ಅರ್ಜಿ ಬರೆದು ನಾಡಗೀರ ಮಾಸ್ತರರ ಮೇಜಿನ ಮೇಲೆ ಇಟ್ಟು ಬಂದರು. ಮರುದಿನ ವರ್ಗದಲ್ಲಿ ಎಲ್ಲರಿಗೂ ಬಲು ಭಯ. ಯಾಕೆಂದರೆ ಮಾಸ್ತರ ಸಿಟ್ಟಿಗೆ ಎಲ್ಲರೂ ಅಂಜುತ್ತಿದ್ದರು. ಆದರೆ ಮಾಸ್ತರರು ಏನೂ ಆಗಲಿಲ್ಲ ಎಂಬಂತೆ ಆ ದಿನದ ಪಾಠ ಮಾಡಿದರು. ಎಲ್ಲರಿಗೂ ಅಚ್ಚರಿ ಹಾಗೂ ನಿರಾಳ. ಎಲ್ಲರೂ ಈ ಘಟನೆಯನ್ನು ಮರೆತರು. (Who will bell the cat? ಅಂತ ಕೊನೆಗೆ ಆ ಚೀಟಿಯನ್ನು ಇಟ್ಟು ಬಂದಿದ್ದ ವಿದ್ಯಾರ್ಥಿ ಮಾತ್ರ ಆ ಅಪರಾಧವನ್ನು ಎಂದೂ ಮರೆತಿರಲಿಲ್ಲ. ಅದನ್ನು ಬಚ್ಚಿಟ್ಟಿದ್ದ ಆತನ ಎದೆಯಗೂಡಿನ ಭಾರ ಅವನಿಗೇ ಗೊತ್ತು!) ಮುಂದೆ 1997ರಲ್ಲಿ ಮಾಸ್ತರರಿಗೆ 82 ವರ್ಷ ತುಂಬಿದ ಪ್ರಯುಕ್ತ ಅವರಿಗೆ ವಿದ್ಯಾರ್ಥಿಗಳು ಸಹಸ್ರ ಚಂದ್ರ ದರ್ಶನ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲೆಂದೇ ನಮ್ಮ ಇಬ್ಬರು ಸಹಪಾಠಿಗಳು ಇಂಗ್ಲೆಂಡ್ ನಿಂದ ಬಂದಿದ್ದರು. ಸಮಾರಂಭ ಮುಗಿದ ಮೇಲೆ ಗುರು-ಶಿಷ್ಯಂದಿರ ಸ್ನೇಹಕೂಟ ಒಂದು ಹೋಟೆಲ್ಲಿನಲ್ಲಿ ಏರ್ಪಾಡಾಗಿತ್ತು. ಹೋಟೆಲ್ ಧಾರವಾಡಕ್ಕೆ ಅವರು ಬಂದಾಗ ಇಲಿಯಾಗಿ ’ಬೆಕ್ಕಿಗೆ ಗಂಟೆ ಕಟ್ಟಿದ’ ಆ ಸಹಪಾಠಿ 36 ವರ್ಷಗಳ ಕೆಳಗೆ ತಾನೇ ಆ ಕಾಗದ ಇಟ್ಟಿದ್ದಕ್ಕೆ ಕ್ಷಮೆ ಬೇಡಿ ಎದೆ ಹಗುರು ಮಾಡಿಕೊಂಡ. ಆಗ ಅವರು ಉತ್ತರಿಸಿದ್ದು ಅತ್ಯಂತ ಮಾರ್ಮಿಕವಾಗಿತ್ತು: ”ಹೌದು, ಅದರ ಹಿಂದಿನ ಅಹಿತಕರ ವರ್ತನೆಗೆ ಕಾರಣನಾದ ... ಎಂಬ ಹುಡುಗನ ವರ್ತನೆ ಸಹಿಸದೆ ನಾನು ಅವನ ಕಪಾಳಕ್ಕೆ ಜೋರಾಗಿ ಹೊಡೆದೆ, ಅದರಿಂದ ಅವನ ಶ್ರವಣ ಶಕ್ತಿ ಕ್ಷೀಣಿಸಿತು. ನಿಮಗೆ ಸಿಟ್ಟು ಬಂದು ಅರ್ಜಿ ಬರೆದಿರಿ. ನಾನು ಸಿಟ್ಟಿನಿಂದ ಆ ರೀತಿ ಮಾಡಬಾರದಾಗಿತ್ತು. ಅವನಿಗೆ ನಾನು ಕ್ಷಮೆ ಕೇಳಲುತಯಾರಿದ್ದೇನೆ.” ಎಂದು ಅವರೂ ತಮ್ಮ ವ್ಯಥೆ ವ್ಯಕ್ತಪಡಿಸಿದರು. ಎಂಥ ದೊಡ್ಡ ಗುಣ!”
ಇಂಗ್ಲೆಂಡಿನಿಂದ ಸಮಾರಂಭಕ್ಕೆಂದು ಧಾರವಾಡಕ್ಕೆ ಹೋಗಿ ಕ್ಷಮಾಪಣೆ ಬೇಡಿದ ವಿದ್ಯಾರ್ಥಿಯೇ ಈ ಲೇಖನದ ಲೇಖಕ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯು ಕೆ

ಆಕರ ಪುಸ್ತಕಗಳು: ೧.ವಾತ್ಸಲ್ಯ (1997) :ಎಸ್ ಜಿ ನಾಡಗೀರ ಅವರ ಅಭಿನಂದನಾ ಗ್ರಂಥ ಸಂ: ಡಾ ಕೆ ಹೆಚ್ ಕಟ್ಟಿ
 ೨: ವಿದ್ಯಾ ವಿಕಾಸ (2002)  ಲೇ:  ಪ್ರಿ. ಎಸ್ ಜಿ ಣಾಡಗೀರ
೩: ಅಪ್ಪನು ನನಗಿಷ್ಟ: (2021) ಸಂ: ಡಾ ಶರಣಮ್ಮ ಅ. ಗೋರೇಬಾಳ

*******************


13 thoughts on “ತಸ್ಮೈಶ್ರೀಗುರವೇನಮಃ

  1. ಪ್ರಸಾದ್ ಅವರ ಸಂಪಾದಕೀಯ/ಪೀಠಿಕೆಯು ಯಾವಾಗಲೂ ವಿದ್ವತ್ಪೂರ್ಣ್ಶ್, ಸಮತೋಲಿತ ಮತ್ತು ಸಂಕ್ಷಿಪ್ತ. ಪುರಾಣ ಮತ್ತು ಇತಿಹಾಸದಿಂದ ಹಿಡಿದು ಇಲ್ಲಿಯವರೆಗೆ ಶಿಕ್ಷಣ ನಡೆದುಕೊಂಡು ಬಂದ ಹಾದಿಯನ್ನು ತೋರಿಸಿ, ಆ ಹಾದಿಯಲ್ಲಿ ನೊಂದವರ ಬೆಂದವರನ್ನು ನೆನಪಿಸುತ್ತಾರೆ.

    ಶರಾವತಿ ಮೇಡಂ ಮಕ್ಕಳ ಎಳೆಯ ಹೃದಯಗಳಲ್ಲಿ ಪ್ರೀತಿಯ ಬೀಜ ಬಿತ್ತಿ ಅದಕ್ಕೆ ನೈತಿಕತೆಯ ನೀರುಣಿಸಿ ಹೇಗೆ ಗೌರಿಯವರಂಥ ಅದ್ಭುತ ಮರಗಳನ್ನು ಬೆಳೆಸಿದ್ದಾರೆ! ತುಂಬ ಆತ್ಮೀಯ ಬರಹ.

    ನನ್ನ ಶಾಲಾ ಸಮಯದಲ್ಲಿ ಬೇಸಿಗೆಯ ರಜೆಯ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಬಂದಾಗಲೆಲ್ಲ ಒಂದು ಸಲವಾದರೂ ಕೆ ಇ ಬೋರ್ಡ್ ಸಾಲಿಯ ಮುಂದೆ ಹೋಗುವುದನ್ನು ಬಿಡುತ್ತಿರಲಿಲ್ಲ. ಆ ಸಾಲಿಯ ಗೇಟಿನ ಮುಂದೆ ನಿಂತು, ಚಪ್ಪಲಿ ಬಿಚ್ಚಿ ನಿಂತು, ಆ ಸಾಲಿಗೆ ನಮಸ್ಕರಿಸಿ ಮುಮ್ದೆ ಸಾಗುತ್ತಿದ್ದೆ. ಆ ಶಾಲೆಯ ಪ್ರಖ್ಯಾತಿಯೇ ಉತ್ತರ ಕರ್ನಾಟಕದಲ್ಲಿ ಅಂಥದ್ದು. ಎಸ್ ಎಸ್ ಎಲ್ ಸಿ ಯಲ್ಲಿ ಆ ಸಾಲಿಗೆ ಒಂದಾದರೂ ರ‍್ಯಾಂಕ್ ಬಂದೇ ಬರುತ್ತಿತ್ತು, ಬಹಳಷ್ಟು ಸಲ ಎರಡು ಅಥವಾ ಮೂರು. ಅಲ್ಲಿಯ ಮಾಸ್ತರುಗಳು ಬಾಗಲಕೋಟೆಯಲ್ಲೂ ದಂತಕತೆಯಾಗಿದ್ದವರು. ಅಂಥ ಸಾಲಿಯಲ್ಲಿ ಓದಿದ ಸಾಲಿ ರಾಮಚಂದ್ರರಾಯರ ಮೊಮ್ಮಗ ತಮ್ಮ ನಾಡಿಗೇರ್ ಮಾಸ್ತರರನ್ನು ನೆನೆಪಿಸಿಕೊಂಡ ರೀತಿ, ಅವರ ಜೊತೆ ಪತ್ರವ್ಯವಹಾರದ ನಂಟು, ಅವರ ಅದಮ್ಯ ಉತ್ಸಾಹಗಳು, ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತ, ಕೆ ಇ ಬೋರ್ಡಿನ ಕಲಿಕೆಯ ಪರಿಣಾಮವೇ ಇರಬೇಕು.

    – ಕೇಶವ

    Like

    • ಪ್ರತಿಯೊಂದು ಅನಿವಾಸಿ ಲೇಖನಕ್ಕೂ ಸಾಲಿ ತಪ್ಪಿಸದ ಹುಡುಗನಂತೆ ತಪ್ಪದೆ ಕೇಶವ ಅವರ ಕಮೆಂಟು ಬರಲೇ ಬೇಕು- ಅಂದರೇನೇ ಗಂಟೆ ಬಾರಿಸಿ ಮನೆಗೆ ಕಳಿಸುವ ಶಾಲೆಯಂತೆ! ಅದರಲ್ಲೂ ಒಂದೊಂದು ಪದವೂ ಆರಿಸಿ ಪರಕಿಸಿ ಸ್ಥಾಪಿಸಿದಂತೆ- ನಮ್ಮ ಶಾಲೆಯ ವಿಧೇಯ ‘ಸೇವಕ’ ಲಕ್ಷ್ಮಣ ಹೆಡ್ಮಾಸ್ಟರ್ ನಾಡಗೀರ ಮಾಸ್ತರರ ಕೋಣೆಯ ಹೊರಗೆ ತೂಗು ಬಿಟ್ಟ ಗಂಟೆಗೆ ತನ್ನ ಸುತ್ತಿಗೆಯನ್ನು ತಾಗಿಸುವ ಲಯದಂತೆ! ನೀವು ಸಹ ನನಗಿಂತ ಎಷ್ಟೋ ಕಿರಿಯರಾಗಿದ್ದರೂ ಆ ಶಾಲೆಯ ಕೀರ್ತಿಯಿಂದ ಪ್ರಭಾವಿತರಾದದ್ದು ಗೊತ್ತಿರಲಿಲ್ಲ. Even those visits must have ‘rubbed on you!’ ಅನಂತ ಧನ್ಯವಾದಗಳು.

      Like

  2. ಅನಿವಾಸಿಯ ಈ ವಾರದ ಬರಹಗಳು ಮನಕ್ಕೆ ತಟ್ಟುವಂತಹವು. ಮೆಲ್ಲಗೆ ಅಲ್ಲಿ ಗೂಡುಗಟ್ಟಿದ ನೆನಪುಗಳನ್ನು ಕೆದಕಿ ಮೆಲುಕು ಹಾಕುವಂತೆ ಮಾಡುವಂಥವು. ಗೌರಿಯವರ ಶರತಕ್ಕ ನನ್ನ ಮಾಲನ ಅಕ್ಕಾವರನ್ನು ಮರೆಯಾಗದ ನೆನಪಿನೊಂದಿಗೆ ನನ್ನೊಡನಿದ್ದ ಅವರನ್ನು ಮತ್ತೆ ನೆನಪಿಸ್ತು ತನ್ನದೇ ರೀತಿಯಲ್ಲಿ. ಏನೋ ಒಂದು ವಿಚಿತ್ರ ಧನ್ಯತಾ ಭಾವ; ಕ್ಷಣಕಾಲ ಅವರೊಡನೆ ಇದ್ದಂತೆ. ನಾಡಗೀರ ಮಾಸ್ತರ ಅವರ ಬಗ್ಗೆ
    ಶ್ರೀವತ್ಸ ದೇಸಾಯಿಯವರ ಲೇಖನದಿಂದ ಮೂಡಿದ ಸುಂದರ ಸಾಲುಗಳು, ತುಂಬ ಭಾವಪೂರ್ಣ, ಗೌರವಪೂರ್ಣ ಆಪ್ತ ಬರಹ ಅನಿಸ್ತು. ಬಹುಶಃ ನಾನೂ ಒಬ್ಬ ಕಟ್ಟುನಿಟ್ಟಿನ, ಪ್ರಾಮಾಣಿಕವಾದರೂ ಖಂಡಿತ ವಾದಿ, ಸರಳವಾದರೂ ನೇರ ಮಾತುಗಳ, ಅಷ್ಟೇ ವಾತ್ಸಲ್ಯ ಪೂರ್ವಕ ನಡೆಯ, ಕಲಿಸುವಿಕೆಯಲ್ಲೇ ಸಾರ್ಥಕತೆ ಕಂಡುಕೊಂಡ, ವಿದ್ಯಾರ್ಥಿಗಳೇ ತನ್ನ ಆಸ್ತಿ ಎಂದ ಒಬ್ಬ ಮಾಸ್ತರ ಮಗಳು ನಾನೂ ಇದ್ದಿದ್ದಕ್ಕೆ ನೇರವಾಗಿ ಎದೆ ತಟ್ಟಿತದು. ನಾಡಗೀರ ಮಾಸ್ತರು ಕೆ.ಇ.ಬೋರ್ಡ್. ಸ್ಕೂಲ್ ನ ಜೀವಾಳ ಅಂತ ಕೇಳಿ ಬಲ್ಲೆ. ಅಂತಹ ಗುರುಗಳ ಶಿಷ್ಯನಾಗಿ ಓದುವ ಕಲಿಯುವ ಅವಕಾಶ ಸಿಕ್ಕಿದ್ದು ಅತ್ಯಮೂಲ್ಯ ಕೊಡುಗೆ ಅನಕೋತೀನಿ ದೇಸಾಯಿಯವರಿಗೆ ಆ ದೇವನದು.
    ಗೌರಿಯವರಿಗೂ, ಶ್ರೀವತ್ಸ ದೇಸಾಯಿಯವರಿಗೂ ಅನಂತ ಧನ್ಯವಾದಗಳು , ನಮನಗಳು.
    ಸರೋಜಿನಿ ಪಡಸಲಗಿ

    Like

  3. ಪ್ರೇಮಲತಾ ಅವರೇ,
    ನಮ್ಮ ಮಿತ್ರ ಡಾ ದೇಸಾಯಿ ಅವರು ನಿಮ್ಮನ್ನು ಧಾರವಾಡದಲ್ಲಿ ಭೇಟಿಯಾಗಲು ಹೇಳಿದಾಗಲೇ ಅಂದುಕೊಂಡೆ ನೀವು ಒಬ್ಬ ವಿಶೇಷ ವ್ಯಕ್ತಿ ಎಂದು. ಅಂದು ನೀವು ಮುಖ್ಯ ಅತಿಥಿಗಳು ಆದರೂ ನೀವು ನನಗೆ ಸಮಯ ಕೊಟ್ಟಿರಿ. ನಾವು ಕಳೆದ ಕೆಲವೇ ನಿಮಿಷಗಳಲ್ಲಿ ಆತ್ಮೀಯರಾದೆವು. ನಮ್ಮ ಗುರುಗಳ ಬಗ್ಗೆ ನೀವು ಹೇಳಿದ ಮಾತುಗಳಿಗೆ ವಂದನೆಗಳು.

    Like

  4. ದೇಸಾಯಿಯವರ ನಾಡಿಗೇರ್ ಮಾಸ್ತರರು ಬರಹವಂತೂ ಬಹಳ ಆಪ್ತವಾಗಿದೆ. ಅಂತಹ rank bank ಶಾಲೆಯಲ್ಲಿ ಓದಿದ ಅವರದ್ದೇ ಪುಣ್ಯ. ಅದರಲ್ಲು ಆಂಗ್ಲ ಭಾಷೆಗೆ ಉತ್ತಮ ತಳಹದಿ ಹಾಕುವ ವಿದ್ವತ್ತುಳ್ಳ, ಹಸಿದವರಿಗೆ ಅನ್ನು ನೀಡುವ ಅಂತಃಕರಣದ , ತಮ್ಮ ಒಂದೇ ಒಂದು ಬಲಹೀನತೆಗಾಗಿ ಮರುಗುವ ಪ್ರಬುದ್ಧ ತೆಯ ಮಾಸ್ತರಿನ ಮೂಸೆಯಲ್ಲಿ ತಯಾರಾದ ದೇಸಾಯರು ಮತ್ತಿತರರು ಬಹಳ ಪುಣ್ಯ ವಂತರು 🙏
    ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಅತ್ಯಂತ ಸೂಕ್ತ ವಾಗಿದೆ.
    75 ರ ಹರೆಯದ 23 ಜನರು re union ನಲ್ಲಿ ಸೇರುವುದು ಎಂದರೆ ಹುಡುಗಾಟದ ಮಾತಲ್ಲ. ಆ ಶಾಲೆಯ ಪ್ರಭಾವ ನಿಮ್ಮೆಲ್ಲರ ಮೇಲೆ ಎಷ್ಟಿದ್ದಿರಬೇಕು? ಇನ್ನು ಮಾಸ್ತರರನ್ನೂ ಕರೆಸಿ ಹಳೆ ನೆನಪುಗಳು ಹೊನಲಲ್ಲಿ ತೇಲಿ ಕಣ್ಣೀರು ಸುರಿಸುವ ಸುಖ ಎಷ್ಟು ಜನರಿಗೆ ದೊರಕೀತು?
    ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಿ ಕ್ರಾಂತಿ ಮಾಡಿದ ನೀವೂ ಪರವಾಗಿಲ್ಲಪಾ ಅನ್ನಿಸಿಬಿಟ್ಟಿತು.
    ಮೇಷ್ಟರದ್ದೇ ಆದರ್ಶಗಳನ್ನು ಅವರಿಗೆ ಹಿಂತುರುಗಿಸಿದ ಹಾಗೆ.
    Life becomes more meaningful with such rich memories. Fantastic read.

    Liked by 1 person

  5. ಉತ್ತಮ ಮತ್ತು ಸಾರ್ಥಕ ಬರಹ.
    ಗೌರಿಯವರ ಟೀಚರ್ ಬಹಳ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿಯೆನಿಸುತ್ತಾರೆ. ಆ ವಯಸ್ಸಿನಲ್ಲಿ ಅಂತಹ ಟೀಚರ್ ಗಳು ನಮಗೆ ಹತ್ತಿರವಾಗುವವರೆಗೆ ಬಹಳ ಸಪ್ಪೆ ಎನ್ನಿಸಿದರೆ ಆಶ್ಚರ್ಯ ವೇನಿಲ್ಲ.
    ಅವರ ನೆನಪಿನಲ್ಲಿ ಬರೆಯುವಾಗ ಅಂತಹ ಗುರುವನ್ನು ಪಡೆದ ಧನ್ಯತೆ, ಅವರ ಮೇಲಿನ ಗೌರವ ಮತ್ತು ಅವರ ಸಂಗದ ಸುಖ ಗೌರಿಯರು ಬರಹದಲ್ಲಿ ಎದ್ದು ಕಾಣುತ್ತದೆ. ಉತ್ತಮ ಗುರು ನಮನ.

    Like

  6. ಗೌರಿ ಪ್ರಸನ್ನರ ಬರಹ:
    ತಮಗೆ ದಾರಿದೀಪವಾದ ಕರುಣಾಸಾಗರ ಶರ್ತಕ್ಕನ ಬಗ್ಗೆ ಗೌರಿಯವರದು ಎಂಥ ಆತ್ಮೀಯ ಬರಹ! ನೀವೊಮ್ಮೆ ಅವರ ಬಗ್ಗೆ ನಿಮಾಗಿದ್ದ ಗೌರವವದ ಸುಳಿವು ನನಗೆ ತಿಳಿದಿತ್ತು, ಪಾಂಡಿಚೇರಿಯಲ್ಲಿ ಅವರ ತಲಾಶ್ ಮಾಡಲು ಸಹಾಯ ಕೋರಿದಾಗಲೇ. ಅಂಥವಾರ ಸಾನ್ನಿಧ್ಯದ ಸಿಹಿಜೇನು ಉಂಡವರು ನೀವು. ಅದರ ಛಾಯೆಯನ್ನು ಅದರ ಕೆಳಗಿನ ನನ್ನ ಲೇಖನದಲ್ಲಿ ಕೆಲವರು ಕಂಡಾರು. ಇಷ್ಟೇ, ನಿಮಗಿಂತ ಮೂರು ಪಟ್ಟು ವರ್ಷಗಳ ನಂತರ ನಮ್ಮ ಸತ್ಕಾರ ಗುರುಗಳಿಗೆ.ಅದರಲ್ಲೇ ನನ್ನ – ಪ್ರೇಮಲತಾ ಹೇಳಿದ – ‘ಕ್ರಾಂತಿಕಾರ್ಯ’ದ ಕ್ಷಮಾಪಣೆ! ನನ್ನ ಕ್ಷಮೆಗಿಂತ ಜಯಶ್ರೀಯ ‘ಕ್ರಾಂತಿ’ಯಾ ಅಪವಾದಕ್ಕೆ ನೀವು ಎದೆ ನೀಡಿ ಗುಂಡು ತಿಂದದ್ದು ಹೆಚ್ಚಿನ ಮಾತು. ಅದಕ್ಕೇ ಅಲ್ಲವೇ ನಿಮಗೆ ಸಿಕ್ಕಿತು ಆ ಸಂಬಂಧದ ‘ಮೆಡಲ್”ಎದೆಯ ಮೇಲೆ ಶಾಶ್ವತವಾಗಿ ಧರಿಸಲು? ಇಂಥ ಘಟನೆಗಳು life changing! ಹುಟ್ಟಿಸಿದವರಿಗೆ ಮೊದಲು ನಮಸ್ಕರಿಸಿ ಹೀಗೆ ಹುಟ್ಟು ಕೊಟ್ಟು ನಾವೆ ಹತ್ತಿಸಿದ ಗುರುಗಳನ್ನು ಎಷ್ಟು ನೆನೆದರೂ ಸಾಲದು. ನಿಮ್ಮ ಶರ್ತಕ್ಕನು ಕಲಿಸಿದ ಸಹಪಾಠಿಗಳು ನಿಮ್ಮ ಈ ಲೇಖನ ಓದಿ ಸಂತೋಷಪಟ್ಟಾರು – ನನ್ನ ಹದಿ-ಎಪ್ಪತ್ತೈದರ ಮಿತ್ರರು ಈಗಾಗಲೇ ನನಗೆ ಅದನ್ನು ತಿಳಿಸಿದಂತೆ!

    Like

  7. ನಮ್ಮ ಮಿತ್ರ ಶ್ರೀವತ್ಸ ದೇಸಾಯಿ ನಮ್ಮ ಗುರುಗಳ ಬಗ್ಗೆ ಅತೀ ಸುಂದರವಾಗಿ ಬರೆದಿದ್ದಾರೆ. ಅವರಿಗೆ ಧನ್ಯವಾದಗಳು. ನಾಡಗೀರ ಮಾಸ್ತರರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರ ಶಿಷ್ಯರಿಂದ ಬರೆದ ನೆನಪಿನ ಸಂಚಿಕೆಯನ್ನು ಹೊರತರಲಾಯಿತು. ಎಲ್ಲರೂ ಬರೆದ ಲೇಖನಗಳ ಸಾರಾಂಶವನ್ನೇ ದೇಸಾಯಿಯವರು ತಮ್ಮ ಲೇಖನದಲ್ಲಿ ತಂದಿದ್ದಾರೆ. ನಾನು ನಾಡಗೀರ ಮಾಸ್ತರರ ಮಗನಾಗಿದ್ದರೂ ನನ್ನಷ್ಟೇ ಸಲಿಗೆ ದೇಸಾಯಿಯವರಿಗೂ ಇತ್ತು. ನನ್ನ ಆಂಗ್ಲ ಭಾಷೆ ಕಚ್ಚಾ ಇತ್ತು, ದೇಸಾಯಿ ಆಂಗ್ಲ ಭಾಷೆಯಲ್ಲಿ ಪ್ರಭುದ್ದ. ಅದಕ್ಕೆ ಮಾಸ್ತರು ಅವನಿಗೆ ಬರೆದ ಪತ್ರಗಳಲ್ಲಿ ಆಂಗ್ಲ ಭಾಷೆಯ ಬಗ್ಗೆ ಬರೆಯುತ್ತಿದ್ದರು. ನಮ್ಮ ವ್ಯಕ್ತಿತ್ವ ರೂಪಿಸಿದ ನಮ್ಮ ಎಲ್ಲ ಶಿಕ್ಷಕರಿಗೂ ಈ ಮೂಲಕ ವಂದನೆ ಹೇಳಬಯಸುತ್ತೇನೆ

    Like

    • ಅರುಣ ಅವರಿಗೆ ಧನ್ಯವಾದಗಳು. ಅವರೇ ಕಲಿಸಿದ ‘a chip off the old block’ಅನ್ನುವ ಮಾತು ನಿಮಗೂ ಅನ್ವಯಿಸುತ್ತದೆ!ನಿಜ, ನನ್ನ ಸಲಿಗೆ ಎಷ್ಟಿತ್ತೆಂದರೆ ನಾನು ಭಾರತಕ್ಕೆ ಬಂದು ಅವರ ಮನೆಯಲ್ಲಿ ಕಂಡಾಗಲೆಲ್ಲ ನನ್ನನ್ನು ‘The prodigal son is back!’ಅಂತ ಸ್ವಾಗತಿಸುತ್ತಿದ್ದರು. ’ನಾನು ಅಂಥದೇನು ಮಾಡೀನಿ, ಸರ್?’ ಅಂತ ಕೇಳುತ್ತಿದ್ದೆ! ನೆನಪಿಲೆ ’’ಯಾಕಂತ ನಿಂಗ ನಾ ಹೇಳೀನಿ” ಅನ್ನುವಷ್ಟು ನೆನಪಿನ ಶಕ್ತಿ ಅವರದು.ನಿಜ,ಈ ಮಣ್ಣಿನ ಮುದ್ದೆಗೆ ರೂಪಕೊಟ್ಟ ಶಿಷ್ಯವೃಂದದಲ್ಲಿ ಅವರು ಪ್ರಮುಖರು. ನೀನೂ ಧನ್ಯ. ಶ್ರೀವತ್ಸ

      Like

    • ನಿಜ ಹೇಳಬೇಕೆಂದರೆ, ಸೀನಿಯರ್ ನಾಡಗೀರರ ಚಿತ್ರವನ್ನು ನೋಡಿ, ಧಾರವಾಡಕ್ಕೆ ಇವರೇ ಬಂದಿದ್ದಲ್ಲವಾ? ಅಂತ ಮೊದಲಿಗೆ ಗೊಂದಲವಾಯ್ತು.
      ನಿಮ್ಮಿಬ್ಬರ ನಡುವೆ ಅಷ್ಟೊಂದು ಹೋಲಿಕೆಯಿದೆ!

      ಒಬ್ಬ ಆದರ್ಶವಾದಿ ತಂದೆಯೇ ಶಾಲೆಯಲ್ಲಿ ಗುರುವೂ ಆಗುವುದು ನನ್ನ ಊಹೆಗೆ ನಿಲುಕದ ವಿಚಾರ. ದೇಸಾಯರ ಬರಹದಿಂದ ಮಾಸ್ತರರ ಧೀಮಂತ ವ್ಯಕ್ತಿ ತ್ವದ ಪರಿಚಯ ನಮಗೆಲ್ಲರಿಗೂ ದೊರಕಿತು.ಆದರೆ ಈ ಮೊದಲೂ ದೇಸಾಯರ ನಾಡಿಗೇರ ಮಾಸ್ತರರು ನಮ್ಮೆಲ್ಲರ ಗೌರವವನ್ನು ಪಡೆದುಕೊಳ್ಳುವಷ್ಟು ಅವರು ಹೇಳುತ್ತಲೇ ಬಂದಿದ್ದಾರೆ.
      ರ್ಯಾಂಕ್- ಬ್ಯಾಂಕ್ ಶಾಲೆಯ ಹುಡುಗರಾಗಿ ನಿಮ್ಮಿಬ್ಬರ ವ್ಯಕ್ತಿತ್ವ ಮತ್ತು ಗೆಳೆತನ ( ಅದರಲ್ಲು ಕ್ಲಾಸ್ ಮೇಟ್ ಜೊತೆ + ಇನ್ನೂ ಹಲವಾರು ಜೊತೆ ಸಂಪರ್ಕ ಇಟ್ಟುಕೊಂಡ ತಂದೆಯಿದ್ದೂ ಕೂಡ)ಬಹಳ ವಿರಳ ಮತ್ತು ಆನಂದ ತರುವ ವಿಚಾರ.
      ಅವತ್ತು ನಿಮ್ಮ ಬಳಿ ಹೆಚ್ಚು ಮಾತಾಡಲಾಗಲಿಲ್ಲ ಕ್ಷಮಿಸಿ.

      Like

      • ಡಾ. ಪ್ರೇಮಲತಾ ಅವರಿಗೆ ಧನ್ಯವಾದಗಳು. ನನ್ನ ತಂದೆಯನ್ನು 25 ವರ್ಷ ಹಿಂದೆ ಭೇಟಿಯಾದವರು ನನ್ನನ್ನೇ ಭೇಟಿಯಾಗಿದ್ದೇನೆ ಎಂದವರು ಇದ್ದಾರೆ. ಅಹುದು, ನಾನು ನನ್ನ ತಂದೆಯನ್ನೇ ಹೋಲುತ್ತೇನೆ. ನಿಮ್ಮನ್ನು ಧಾರವಾಡದಲ್ಲಿ ಭೇಟಿಯಾಗಿ ಸಂತೋಷವಾಯಿತು. ಅಂದು ನೀವು ಮುಖ್ಯ ಅತಿಥಿ ಆದರೂ ನನಗಾಗಿ ಸಮಯವನ್ನು ಕೊಟ್ಟಿರಿ. ಶ್ರೀಮತಿ ಹೇಮಾ ಅವರು ಇದ್ದುದು ಸಂತೋಷ. ಡಾ ದೇಸಾಯಿ ಅವರು ನಿಮ್ಮನ್ನು ಭೇಟಿಯಾಗಲು ಹೇಳಿದಾಗಲೇ ಅಂದುಕೊಂಡೆ, ನೀವು ಒಬ್ಬ ವಿಶೇಷ ವ್ಯಕ್ತಿ ಎಂದು. ನಿಮ್ಮನ್ನು ಭೇಟಿ ಆದಾಗ ಅದು ನಿಜ ಅನಿಸಿತು. ನಾನು ಬೇರೆ ಕೆಲಸ ಇದ್ದುದರಿಂದ ಬೇಗ ಹೋದೆ. ಡಾ ದೇಸಾಯಿ ಅವರಿಗೆ ನಮ್ಮ ಗುರುಗಳ ಬಗ್ಗೆ ಅಪಾರ ಅಭಿಮಾನ. ಮುಂದಿನ ಸಾರೆ ಭಾರತಕ್ಕೆ ಬರುವಾಗ ತಿಳಿಸಿ, ತುಮಕೂರಿಗೆ ಬಂದು ಹೆಚ್ಚು ಸಮಯ ನಿಮ್ಮ ಜೊತೆ ಕಳೆಯುವೆ.

        Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.