ಗೌರಿ ಗಣೇಶ ಹಬ್ಬದ ವಿಶೇಷಾಂಕ ಭಾಗ ೨ – ನೆನಪುಗಳ ಮೆರವಣಿಗೆ

ರೇಖಾ ಚಿತ್ರ ಕೃಪೆ – ಡಾ ಲಕ್ಷ್ಮಿ ನಾರಾಯಣ ಗುಡೂರ್
ಪ್ರಪಂಚದ ಯಾವುದೇ ದೇಶ, ಧರ್ಮ, ಸಂಸ್ಕೃತಿಯನ್ನು ಗಮನಿಸಿದಾಗ ಅಲ್ಲಿ ಹಬ್ಬಗಳು ಉತ್ಸವಗಳು ಕಂಡುಬರುತ್ತದೆ. ಯಾಂತ್ರಿಕವಾಗಿರುವ ನಮ್ಮ ಬದುಕಿನಲ್ಲಿ ಒಂದೆರಡು ದಿನ ದೇವರ ಹೆಸರಿನಲ್ಲಿ ನೆಪದಲ್ಲಿ ಮೈ ಮನಸ್ಸಿಗೆ ಮುದ ನೀಡುವ ಸಮಯವನ್ನು ಕಳೆಯುವುದು ಒಂದು ಅಗತ್ಯವೇ ಸರಿ. ಒಂದು ಹಬ್ಬ ನಮ್ಮ ಕೌಟುಂಬಿಕ ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ. ಮನೆಯ ಹೊರಗಿನ ಸಾಮೂಹಿಕ ಆಚರಣೆಯು ಒಂದು ಸಮುದಾಯದಲ್ಲಿ ಸ್ನೇಹ, ಸಹಕಾರ ಮತ್ತು ಒಮ್ಮತಗಳ ಬೆಸುಗೆಯನ್ನು ವೃದ್ಧಿಸುತ್ತದೆ. ಒಂದು ಹಬ್ಬಕ್ಕೆ ಧಾರ್ಮಿಕ ವಿಧಿ, ಪೂಜೆ ಪುನಸ್ಕಾರಗಳು ಬುನಾದಿಯಾಗಿದ್ದರೂ ಅದು ನಿಜವಾಗಿ ಪ್ರಸ್ತುತವಾಗಿರುವುದು ಸಾಂಸ್ಕೃತಿಕ ಆಚರಣೆಯ ಕಾರಣಕ್ಕೆ ಎನ್ನಬಹುದು. ಮನೆ ಮನೆಗಳಲ್ಲಿ ಗಣೇಶನ ವಿಗ್ರಹ ಕೊಂಡು ತರುವುದು, ಅದನ್ನು ಹಬ್ಬದ ದಿನ ಕುಳ್ಳಿರಿಸಿ ಸಿಂಗರಿಸುವುದು, ಮಂಟಪ, ತೋರಣ, ರಂಗೋಲೆ ಹೂವಿನ ಅಲಂಕಾರ, ಪೂಜೆ, ನೈವೇದ್ಯ, ನಂತರ ರುಚಿಯಾದ ಭೋಜನ ಹೀಗೆ ಅನೇಕ ಕಾರ್ಯಗಳು ನಡೆಯುತ್ತವೆ, ಮನೆ ಮಂದಿಯಲ್ಲಾ ಈ ಕಾರ್ಯದಲ್ಲಿ ಭಾಗಿಗಳಾಗಿ ಒಟ್ಟಿಗೆ ಬರುವುದು, ಸೇರುವುದು ಈ ಹಬ್ಬಗಳ ಮುಖ್ಯ ಉದ್ದೇಶ. ಒಂದು ಹಬ್ಬ ನಮ್ಮ ಹಳೆ ಸಂಪ್ರದಾಯಗಳನ್ನು ಉಳಿಸುವ ಬೆಳೆಸುವ ಅವಕಾಶವನ್ನು ಒದಗಿಸುತ್ತದೆ. ನಮ್ಮ ಹಿಂದೂ ಧರ್ಮದ, ಸಂಸ್ಕೃತಿಯ ವಿಶೇಷವೆಂದರೆ ಅಲ್ಲಿ ಹಬ್ಬದ ಆಚರಣೆಗೆ, ಹೊಸ ಹೊಸ ಸಾಧ್ಯತೆಗಳನ್ನು ತರುವ ಅವಕಾಶವಿದೆ. ಅನ್ಯ ಧರ್ಮಗಳ ರೀತಿಯಲ್ಲಿ ಕಟ್ಟು ನಿಟ್ಟಾದ ನಿಬಂಧನೆಗಳಿಲ್ಲ. ಕಾಲಕ್ಕೆ ತಕ್ಕಂತೆ, ಸಮಾಜ ಬದಲಾದಂತೆ ನಮ್ಮ ಆಚಾರ ವಿಚಾರಗಳೂ ಬದಲಾವಣೆಗಳನ್ನು ಕಂಡಿವೆ. ಗಣೇಶ ಹಬ್ಬದ ಮೆರೆವಣಿಗೆಯಲ್ಲಿ ಸಿನಿಮಾ ಹಾಡುಗಳೂ ಸಲ್ಲುತ್ತವೆ! (ಈ ವಿಚಾರವನ್ನು ಕೆಳಗಿನ ಲೇಖನಗಳಲ್ಲಿ ಕಾಣಬಹುದು) ಒಂದು ಸಂಸ್ಕೃತಿಯು ಜೀವಂತವಾಗಿರಬೇಕಾದರೆ ಅದು ನಿಂತ ನೀರಾಗದೆ ಮುಂದಕ್ಕೆ ಹರಿಯಬೇಕು. 

ಗಣೇಶ ಹಬ್ಬದ ಸಾಮೂಹಿಕ ಭಾವನೆ ಹಬ್ಬದ ಎರಡನೇ ಅರ್ಧದಲ್ಲಿ ಮನೆಯಿಂದಾಚೆಗೆ ತಲುಪಿ ಬೀದಿಗಿಳಿಯುತ್ತದೆ. ಬೀದಿ ಬೀದಿಗಳಲ್ಲಿ ಪೆಂಡಾಲು, ಸಜ್ಜಿಗೆ, ಅದರ ಮೇಲೆ ಕುಳಿತ, ನಿಂತ, ಮಲಗಿದ, ಹಲವು ಭಂಗಿಗಳ ಗಣಪತಿ ಮೂರ್ತಿ, ಪೂಜೆ, ಸಂಗೀತ, ನೃತ್ಯ ಕೊನೆಗೆ ವಿಸರ್ಜನೆ ಮೆರವಣಿಗೆ ಇವುಗಳಲ್ಲಿ ಒಂದು ಸಮುದಾಯವೇ ಒಟ್ಟಿಗೆ ಬರುತ್ತದೆ. ಗಣೇಶ ಹಬ್ಬ ಈ ನಿಟ್ಟಿನಲ್ಲಿ ನಮಗೆಲ್ಲ ಸಾಮೂಹಿಕ ಹಬ್ಬವಾಗಿಯೂ ಪರಿಣಮಿಸಿದೆ. ಹಲವಾರು ಕಡೆ ಸಂಗೀತೋತ್ಸವಗಳು ನಡೆಯುತ್ತವೆ. ಗಣೇಶ ನಮ್ಮಲ್ಲಿನ ಕಲೆ ಮತ್ತು ಸಾಹಿತ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದಾನೆ. ಹಬ್ಬದ ಆಚೆಯೂ ಒಂದು ನಾಟಕ, ನೃತ್ಯ ಮುಂತಾದ ಸಾಂಸ್ಕೃತಿಕ ಸನ್ನಿವೇಶಗಳಲ್ಲಿಯೂ ಗಣೇಶನನ್ನು ನಾವು ಸ್ಮರಿಸುತ್ತೇವೆ. ಕರ್ನಾಟಕ ಸಂಗೀತದಲ್ಲಿ ವಾತಾಪಿ ಗಣಪತಿಮ್ ಭಜೇ ಎನ್ನುವ ಜನಪ್ರೀಯ ಶಾಸ್ತ್ರೀಯ ಸಂಗೀತ ಅವನಿಗೆ ಮುಡುಪಾಗಿದೆ. ಅವನ ಆನೆತಲೆ, ಡೊಳ್ಳು ಹೊಟ್ಟೆ, ಮುರಿದ ದಂತ ಕಲಾವಿದರ ಕಲ್ಪನೆಗಳಿಗೆ ಸ್ಫೂರ್ತಿ ನೀಡಿದೆ.

ಈ ಹಬ್ಬ ನಾವು ಮಕ್ಕಳಾಗಿದ್ದಾಗ ನಮ್ಮಲ್ಲಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದು, ನಾವು ಸಕ್ರಿಯವಾಗಿ ಭಾಗವಹಿಸಿದ್ದು ಅದು ಒಂದು ಸ್ಮರಣೀಯ ಅನುಭವವಾಗಿ ನಮ್ಮ ಸ್ಮೃತಿಯಲ್ಲಿ ಸವಿನೆನಪುಗಳಾಗಿ ದಾಖಲಾಗಿದೆ. ಗೌರಿ ಪ್ರಸನ್ನ, ಮುರಳಿ, ರಾಮ್ ಶರಣ್ ಮತ್ತು ಅಮಿತ ಅವರ ಇಂದಿನ ಬರಹಗಳೇ ಇದಕ್ಕೆ ಸಾಕ್ಷಿ. ಈ ಲೇಖಕರೆಲ್ಲ ಗೌರಿ ಗಣೇಶ ಹಬ್ಬದ ತಮ್ಮ ಹಳೇ ಸವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇವರ ಬರಹಗಳನ್ನು ಗಮನಿಸಿದಾಗ ಗಣೇಶ ಹಬ್ಬದ ಮೂಲ ದೈವ ಒಂದೇ ಆದರೂ ಅದರ ಆಚರಣೆಯಲ್ಲಿ ಕಂಡುಬರುವ ಪ್ರಾದೇಶಿಕ ವಿಶೇಷತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಕಂಡುಬರುತ್ತದೆ. ಈ ವಿಶೇಷ ಸಂದರ್ಭದಲ್ಲಿ ಡಾ. ಗುಡೂರ್ ಅವರು ಗಣೇಶನ ಒಂದು ಸುಂದರ ಚಿತ್ರವನ್ನು ಬರೆದುಕೊಟ್ಟು ಅದರ ಕಲಾವಿದನ ಕೈ ಬೆರಳುಗಳನ್ನು ನವುರಾದ ಕುಂಚವನ್ನು ಚಿತ್ರಿಸಿ ಅದಕ್ಕೆ ಇನ್ನೊಂದು ಆಯಾಮವನ್ನು ಕೊಟ್ಟು ಮತ್ತು ಒಂದು ಪರ್ಸನಲ್ ಟಚ್ ಒದಗಿಸಿದ್ದಾರೆ. ಇನ್ನು ವಿಶೇಷ ಸಂಗತಿಯೆಂದರೆ ಡಾ. ಗುಡೂರ್ ಅವರ ಪುತ್ರಿ ಯಾಮಿನಿ ಗುಡೂರ್ ಗಣೇಶನ ಸುಂದರವಾದ ರೇಖಾ ಚಿತ್ರವನ್ನು ಬರೆದುಕೊಟ್ಟಿದ್ದಾಳೆ. ಈ ಹನ್ನೆರಡು ವರ್ಷದ ಬಾಲಕಿ ಕಲಾ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ. ಇಂದಿನ ಲೇಖಕರು ತಮ್ಮ ಬರಹಕ್ಕೆ ಪೂರಕವಾದ ಚಿತ್ರಗಳನ್ನು ಒದಗಿಸಿದ್ದಾರೆ, ಅವರಿಗೆಲ್ಲ ಅನಿವಾಸಿ ಬಳಗದ ಪರವಾಗಿ ಕೃತಜ್ಞತೆಗಳು. ಶ್ರೀರಂಜನಿ ಅವರು ಈ ಸಂಚಿಕೆಯಲ್ಲಿ ಗಣೇಶನಿಗೆ ಗೀತ ನಮನವನ್ನು ಸಲ್ಲಿಸಿದ್ದಾರೆ, ಅವರ ಸುಶ್ರ್ಯಾವ ಗೀತೆಯನ್ನು ಕೆಳಗಿನ ವಿಡಿಯೋದಲ್ಲಿ ಕೇಳಬಹುದು. ಅವರಿಗೂ ಅನಂತ ವಂದನೆಗಳು.ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
  -ಸಂಪಾದಕ 
ಫೋಟೋ ಕೃಪೆ – ಗೌರಿ ಪ್ರಸನ್ನ
ಗಣೇಶ ಚೌತಿ..
 ಗೌರಿ ಪ್ರಸನ್ನ 

 ಗಣೇಶಚೌತಿಯೆಂದರೆ ಎರಡೆರಡು ಸಂಭ್ರಮ ನನಗೆ. ಪಟಾಕಿ,ಗಣಪ್ಪ,ಕಡಬು – ಮೋದಕಗಳ ಸಂಭ್ರಮ ಒಂದೆಡೆಯಾದರೆ ನನ್ನ ಹುಟ್ಟು ಹಬ್ಬದ ಸಡಗರ ಇನ್ನೊಂದೆಡೆ. ಹೌದು; ಗೌರಿ-ಗಣೇಶರೊಂದಿಗೇ ನಾನೂ ಈ ಭೂಮಿಗೆ ಬಂದದ್ದು. 1970ರಲ್ಲಿ ತದಿಗೆ-ಚೌತಿ ತಿಥಿಗಳೊಟ್ಟಿಗಿದ್ದು ಸ್ವರ್ಣಗೌರಿ ಹಾಗೂ ಗಣೇಶ ಹಬ್ಬಗಳೆರಡೂ ಒಂದೇ ದಿನ ಇದ್ದವಂತೆ. ಅವತ್ತು ಆಸ್ಪತ್ರೆಯಲ್ಲಿ ನನ್ನಮ್ಮನ ಡೆಲಿವರಿ ಮಾಡಿಸಿದ ಡಾಕ್ಟರ್ ‘ ಗಣೇಶನ ಹಬ್ಬದಂದು ಗೌರಿ ಬಂದಳಲ್ಲ’ ಎಂದರಂತೆ. ಅವತ್ತಿನಿಂದಲೇ, ಸೋದರತ್ತೆ ಎಲ್ಲರಿಂದ ಗುದ್ದು ತಿನ್ನುತ್ತ, ತೊಟ್ಟಿಲಿಗೆ ಹಾಕಿ ‘ಕುಟುಕುಟು ಕುರ್’ ಎಂದು  ಹೆಸರಿಡುವ ಮೊದಲೇ ಎಲ್ಲರ ಬಾಯಲ್ಲಿ ‘ ಗೌರಿ’ ಎಂಬ ನನ್ನ ಹೆಸರು ನಲಿದಾಡುತ್ತಿತ್ತೆನ್ನಿ. ಸ್ವಚರಿತ್ರೆ ಬಹಳವಾಯಿತಲ್ಲವೇ? ಆದರೆ ನನಗೆ ಗಣೇಶಚೌತಿ ಎಂದೊಡನೇ ಇವೆಲ್ಲ default ಆಗಿ ನೆನಪಾಗೇ ಬಿಡುವುದರಿಂದ ನಿಮಗೂ ಹೇಳಿದೆ ಅಷ್ಟೇ.

 ನನ್ನೂರು ಬಿಜಾಪೂರದ ಗಣಪ್ಪನ ಆರ್ಭಟ, ಗದ್ದಲ,ವೈಭವ ಅನುಭವಿಸಿಯೇ ತಿಳಿಯಬೇಕು. ತಿಂಗಳುಗಟ್ಟಲೆಯಿಂದ ಗಣಪತಿ ಪಟ್ಟಿ ಕೇಳಲು ಬರುವವರ ಧಾಂಧಲೆ, ವಾರಗಟ್ಟಲೆಯಿಂದ ಮಂಟಪದ ತಯಾರಿ, ಬ್ಯಾಂಡು-ಭಜಂತ್ರಿ, ಮೈಕಾಸುರರ ಗದ್ದಲ, ಗಣೇಶೋತ್ಸವದ ಸಲುವಾಗಿ ವಿವಿಧ ಸಂಘಸಂಸ್ಥೆಗಳಿಂದ ಆಯೋಜಿಸಲಾಗುವ ಹತ್ತುಹಲವು ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳು, ಗಜೇಂದ್ರಮೋಕ್ಷ, ರಾಮಾಂಜನೇಯ ಯುದ್ಧ, ಗೀತೋಪದೇಶದಂಥ ಪೌರಾಣಿಕ ಕತೆಗಳಿಂದ ಹಿಡಿದು ಇಂದಿರಾ ಗಾಂಧಿ ಹತ್ಯೆ, ಹಸಿರುಕ್ರಾಂತಿ, ಕ್ರಿಕೆಟ್, ರಾಕೆಟ್ ಉಡ್ಡಯನದಂಥ ಪ್ರಸ್ತುತ ರಾಜಕೀಯ – ಸಾಮಾಜಿಕ ವಿಷಯಗಳು,ಕಲಾವಿದರ ಕೈಯಲ್ಲಿ ಬೆಂಡು-ಬ್ಯಾಗಡಿಯಿಂದ ಅಚ್ಚುಕಟ್ಟಾಗಿ ಮೈದಳೆದ ಮೈಸೂರಿನ ಅರಮನೆ, ಬೆಂಗಳೂರಿನ ಲಾಲ್ ಬಾಗ್, ಅಮೃತಸರದ ಸ್ವರ್ಣಮಂದಿರದಂಥ ಇತಿಹಾಸ ಪ್ರಸಿದ್ಧ ಸ್ಥಳ-ಸ್ಮಾರಕಗಳಂಥ ನಾನಾ ವಿಧದ ಥೀಮಿನ ನಾನಾ ನಮೂನೆಯ ಗಣೇಶರಿಂದ ಅಲಂಕೃತಗೊಂಡ ಗಲ್ಲಿ ಗಲ್ಲಿಗಳು..ಎಲ್ಲಿ ನೋಡಿದರೂ ಹೊಳೆಹೊಳೆವ ಬಣ್ಣಬಣ್ಣದ ಲೈಟಿನ ಬೆಳಕು, ನಾರೀಮಣಿಯರ , ಮಕ್ಕಳ ರೇಶ್ಮೆ, ಜರೀ ಸೀರೆ-ಲಂಗಗಳ ಥಳಕು, ವಿನಾಕಾರಣ ಹಲ್ಲು ಕಿಸಿವ, ಪಿಸಿಪಿಸಿ- ಗುಸುಗುಸು ಮಾಡುವ ಹದಿಹರೆಯದ ಹುಡುಗಿಯರು, ಅವರ ಹಿಂದೆ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರದಂತೆ ಕುಚೋದ್ಯ, ಉಡಾಳತನದ ಜೋರು ನಗು ಗದ್ದಲದ ಹುಡುಗರ ದಂಡು..ಹೀಗೆ ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ತಲ್ಲೀನ. ಯಾವ ಜಾತಿಮತ ಲಿಂಗ ವರ್ಗಗಳ ತಾರತಮ್ಯವಿಲ್ಲದೇ ನಾವೆಲ್ಲ ಮನೆಯ ಗಣಪ್ಪ, ಓಣಿಯ ಗಣಪ್ಪ, ಊರಿನೆಲ್ಲ ಗಣಪ್ಪರನ್ನು ಅಷ್ಟೇ ಆದರದಿಂದ ಬರಮಾಡಿಕೊಳ್ಳುತ್ತಿದ್ದೆವು. ಮಂಟಪದ ತೆಂಗಿನ ಗರಿ, ಬಾಳೆಕಂಬ ಕಟ್ಟಲು, ಡೆಕಾರೇಶನ್ ಮಾಡಲು ನಮ್ಮೋಣಿಯ ಅತ್ತಾರ ಸಾಬರ ಮಕ್ಕಳಾದ ಸಲ್ಯಾ,ಸಪ್ಪ್ಯಾ(ಸಲೀಂ, ಸಫೀಕ್ ಅಂತ ಅವರ ಹೆಸರು. ಚಂದನೆಯ ಹೆಸರನ್ನು ಕೆಡಿಸಿ ಕರೆದರಷ್ಟೇ ನಮ್ಮ ಉತ್ತರ ಕರ್ನಾಟಕದ ಮಂದಿಗೆ ಆತ್ಮೀಯ ಭಾವ, ಅಪನಾಪನ್ ಅನ್ನಿಸುವುದು ಸುಳ್ಳಲ್ಲ) ಸದಾ ಸಿದ್ಧರಾಗಿರುತ್ತಿದ್ದರು. ಅವರಕ್ಕ ಜೈದಾನ ಫ್ರೀಹ್ಯಾಂಡ್ ರಂಗೋಲಿಯಲ್ಲಿ ಮಂಟಪದ ಮುಂದೆ ಚಂದದ ಕಮಲಗಳು ಅರಳುತ್ತಿದ್ದವು; ಸುಂದರ ನವಿಲುಗಳು ನರ್ತಿಸುತ್ತಿದ್ದವು; ಬಣ್ಣಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದವು. ಗಣಪತಿ ತರುವಾಗ ಹಿಂದು-ಮುಸ್ಲಿಂ ಅನ್ನದೇ ಎಲ್ಲರ ತಲೆಯಮೇಲೆ ಬಿಳಿಯ ವಾರೆ ಟೋಪಿ, ಬಾಯಲ್ಲಿ ಗಣಪತಿ ಬಪ್ಪಾ ಮೋರಯಾ ಇದ್ದೇ ಇರುತ್ತಿತ್ತು. ಅಂತೆಯೇ ಅದೇ ಸಮಯದಲ್ಲಿ ಬರುವ ಮೊಹರಂದ ಆಚರಣೆಯಲ್ಲಿ ಅವರ ಮನೆಗೆ ಬರುವ ಮುಲ್ಲಾ(ಮೌಲ್ವಿ)ನ ನವಿಲುಗರಿ ಹರಕೆ ನಮ್ಮ ತಲೆಯ ಮೇಲೇ ಮೊದಲು ನಲಿದಾಡಬೇಕಿತ್ತು. ಸಾಲಾಗಿ ಬರುವ ಡೋಲಿಗಳನ್ನು ನೋಡುವುದಕ್ಕಾಗಿ ಎತ್ತರದ ಮನೆ-ಮಾಳಿಗೆಯೇರಿ ಮುಂದಿನ ಜಾಗ ಹಿಡಿವುದು, ಮೊಹರಂ ಹುಲಿವೇಷ, ಕುಣಿತಗಳನ್ನು ಬಾಯ್ ತೆರೆದು ಅಚ್ಚರಿಯಿಂದ ನೋಡುವುದು ನಮ್ಮ ನೆಚ್ಚಿನ ಕೆಲಸವಾಗಿದ್ದವು. ‘ಅಸಹಿಷ್ಣುತೆ’ ಎಂಬ ಪದದ ಪರಿಚಯವೇ ಇರದ ನಮ್ಮ ಆ ಬಾಲ್ಯದ ದಿನಗಳು ಅದೆಂಥ ದಿವಿನ!!


 ಇನ್ನು ಮನೆಯ ಹಬ್ಬದ ತಯಾರಿಯೂ ಅಷ್ಟೇ ಹಬ್ಬದ ಮೊದಲ ರವಿವಾರದ ಸಂತೆಯಿಂದಲೇ ಆರಂಭವಾಗುತ್ತಿತ್ತು. ಊಟಕ್ಕೆ ಬೇಕಾಗುವ ಬಾಳೆಲೆ, ವೀಳ್ಯದೆಲೆಗಳು, ಹಣ್ಣು-ಹಂಪಲಗಳು, ತೆಂಗಿನಕಾಯಿಗಳು, ಬಾಳೆಕಂಬ-ಕೇದಿಗೆಗಳು, ಗಣಪ್ಪನಿಗೆ ಪ್ರಿಯವಾದ ಕೆಂಪುಹೂ, ಗೌರಿಗೆಂದೇ ಇರುವ ಕಡುಗೆಂಪಿನ ಗೌರಿ ಹೂವು, ಸಣ್ಣಸಣ್ಣ ನೀಲಿ- ಗುಲಾಬಿ -ಹಸಿರು ಬ್ಯಾಂಗಡಿಗಳಿಂದ ಅಲಂಕರಿಸಿ ಕಟ್ಟಿದ ಕತ್ತೆ ಶ್ಯಾವಂತಿಗೆ ಹೂವಿನ ಮಾಲೆ, ಬಿಡಿ ಕಾಕಡಾ ಮಲ್ಲಿಗೆ ಹೂಗಳು, ಕರಕಿ-ಪತ್ರಿಗಳು, ತೋರಣಕ್ಕಾಗಿ ಮಾವಿನೆಲೆ, ಗಣಪ್ಪನ ಮಾಡದ ಅಲಂಕಾರಕ್ಕಾಗಿ ಬಂಗಾರ ಬಣ್ಣದ ಸೋನೇರಿ ಪೇಪರ್, ಗುಲಾಬಿ ಬಣ್ಣದ ಪರಪರಿ ಹಾಳೆ, ಬ್ಯಾಂಗಡಿ,ಹರಳು-ಟಿಕಳಿ, ಅಂಟು-ಫೆವಿಕಾಲ್ ಗಳು..ಹೀಗೆ ದಂಡಿಯಾಗಿ ಸಾಮಾನು ಬಂದು ಬೀಳುತ್ತಿದ್ದವು. ಚೌತಿಗಿಂತ ಮೊದಲು ಬರುವ ಸ್ವರ್ಣಗೌರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಳು ನನ್ನಾಯಿ ಓಣ್ಯಾಯಿ. ಹತ್ತಾರು ದಿನ ಮೊದಲೇ ಅಡುಗೆಯ ಅಹಲ್ಯಾಬಾಯಿಯನ್ನೋ, ರಮಾಬಾಯಿಯನ್ನೋ ಮನೆಗೆ ಕರೆಸಿ ಅವಲಕ್ಕಿ-ಚಹಾ, ಆತ್ಮೀಯ ಹರಟೆಯೊಂದಿಗೆ ಅವರನ್ನು ಬುಕ್ ಮಾಡುತ್ತಿದ್ದಳು. ನಂತರ ಮೆನ್ಯುದ ಡಿಸ್ಕಶನ್..ಗಣಪ್ಪಗ ಮರುದಿನ ಹೂರಣಗಡಬು ಹೇಗೂ ಇರುವುದರಿಂದ ಅವತ್ತು ಹೂರಣ ಆರತಿ ಮತ್ತ ನೈವೇದ್ಯಪೂರ್ತೇಕ್ಕ(ಅಂದರೂ ಸೇರೋ, ಸೊಲಿಗೆಯೋ ಬೇಳೆ ಹಾಕಲಾಗುತ್ತಿತ್ತು) ಮಾಡಿ ಬೇಸನ್ ಉಂಡಿಯ ಜೊತೆಗೆ ಪಾಕಿನ ಚಿರೋಟಿಯನ್ನೋ, ಮಂಡಿಗೆ, ಬಾದಾಮಿ ಪೂರಿಯನ್ನೋ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ನಾವು ಮಕ್ಕಳು ಆ ಮಹತ್ವಪೂರ್ಣ ನಿರ್ಣಯಕ್ಕಾಗಿ ನಮ್ಮದೇ ಆದ ಸಲಹೆ-ಸೂಚನೆಗಳನ್ನು ಮಧ್ಯೆ ಮಧ್ಯೆ ಕೊಡುತ್ತ, ಹಿರಿಯರಿಂದ ಗದ್ದರಿಸಿಕೊಳ್ಳುತ್ತ ಕಾತರದಿಂದ ಕಾಯುತ್ತಿದ್ದೆವು. ನಂತರ ಗೆಸ್ಟ್ ಗಳ ಊಟದ ಲಿಸ್ಟಿನ ತಯಾರಿ. ತಪ್ಪಿಲ್ಲದೇ ಒಪ್ಪಾದ ಅಕ್ಷರ ಬರೆವ ಮಕ್ಕಳು ಉದ್ದನೆಯ ಹಾಳೆ ಪೆನ್ನು ತೆಗೆದುಕೊಂಡು ಅವಳೆದಿರು ಕೂತರೆ ‘ ಮದಲ ಮ್ಯಾಲೆ ಶ್ರೀಕಾರ ಬರಿ. ಆಮ್ಯಾಲ ಊಟಕ್ಕ ಕರೆವ ಯಾದಿನಾಗ ಶ್ರೀ ಲಕ್ಷ್ಮೀನಾರಾಯಣ ಅಂತ ಬರಿ’ ಎಂದು ಶುರುಮಾಡಿದರೆ ನಮ್ಮಲ್ಯಾರಾದರೂ ಕಿಡಿಗೇಡಿಗಳು ‘ ಅವರಿಗೆ ಎಣ್ಣಿ-ಕುಂಕುಮಾ ಕೊಡಲಿಕ್ಕೆ ಯಾರ ಹೋಗವರು ವೈಕುಂಠಕ್ಕ?’ ಅಂತಲೋ, ‘ಅವರು ಆ ದೊಡ್ಡ ಗರುಡನ ಮ್ಯಾಲೆ ಕೂತು ಬಂದ್ರಂತಿಟ್ಕೋ..ಆಮ್ಯಾಲೆ ಆ ಗರುಡಪ್ಪನ್ನ ಎಲ್ಲಿ ಕೂಡಸತೀ’ ಅಂತಲೋ ಕಾಡುತ್ತಿದ್ದರೆ ‘ ಹುಚ್ಚ ಮುಂಡೆವೇ’ ಅಂತ ಜಬರಿಸಿ, ತಾನೂ ನಮ್ಮೊಡನೆ ದೊಡ್ಡ ನಗು ನಕ್ಕು ‘ ಹೂಂ ಬರಕೋ ದೇಶಪಾಂಡೆ ಡಾಕ್ಟರ್ ಮನಿಯಿಂದ ಇಬ್ಬರು..ವಕೀಲರ ಮನ್ಯಾಗ ಮೂರುಮಂದಿ..ಶಿವಮೊಗ್ಗಿ ಅವರ ಮನ್ಯಾಗ ಅತ್ತಿ-ಸೊಸಿ, ಮಗಳೇನರ ಬಂದ್ರ ಅಕಿನ್ನೂ ಕರಕೊಂಡ ಬರಲಿಕ್ಕೆ ಹೇಳ್ರಿ..ಅಂದ್ರ ಅವರ ಮನ್ಯಾಗ ಮೂರಂತ ಹಿಡೀರಿ, ಇನ್ನ ಉಕ್ಕಲಿ ಅವರ ಮನ್ಯಾಗ ಇರವರೇ ನಾಕ ಮಂದಿ’.. list at least ಮೀಟರ್ ಉದ್ದ ಆಗಲೇಬೇಕಿತ್ತು.

ಬೆಳ್ಳಿಯ ತಂಬಿಗೆಯ ಮೇಲೆ ಇಡಿಗಾಯಿಯೊಂದನ್ನಿಟ್ಟು ಬೆಳ್ಳಿಯ ಕಣ್ಣುಬೊಟ್ಟು, ಮೂಗು ಮೂಗಿಗೆ ನತ್ತು ಎಲ್ಲ ಮೇಣದ ಸಹಾಯದಿಂದ ಅಂಟಿಸಿ, ಉದ್ದನೆಯ ಗಿರಿಕುಂಕುಮದ ಬೊಟ್ಟು ತೀಡಿ, ಒಂದು ಉದ್ದನೆಯ ಚೌರಿಜಡೆಗೆ ಕೇದಗೆ ಹೆಣೆದು ಗೌರಮ್ಮನ ಹೆಗಲ ಮೇಲಿಂದ ಇಳಿಬಿಟ್ಟರೆ ಸಾಕ್ಷಾತ್ ಶಿವೆಯೇ ಕೈಲಾಸದಿಂದಿಳಿದು ಬಂದಂತೆ ತೋರುತ್ತಿತ್ತು. ಪಾಂಕ್ತವಾಗಿ ಪೂಜೆ, ಪಂಕ್ತಿಯೂಟ ಮುಗಿಸಿ ಮತ್ತೆ ಮರುದಿನದ ಗಣಪ್ಪನ ತಯಾರಿ. ನಾವೆಲ್ಲ ಮಕ್ಕಳೂ ಬೇಗನೆದ್ದು, ‘ಕಲ್ಲಾಗು..ಗುಂಡಾಗು..ಅಗಸಿಮುಂದಿನ ಬೋರ್ಗಲ್ಲಾಗು’ ಅಂತ ಅಜ್ಜಿಯೋ, ಅಮ್ಮನೋ, ಮಾಮಿಯೋ ಯಾರಾದರೊಬ್ಬರಿಂದ ಹರಸಿ ಎಣ್ಣೆ ಹಚ್ಚಿಸಿಕೊಂಡು (ಆ ಹರಕೆಯ ಫಲವಾಗಿಯೇ ಇಂದಿಗೂ ಗುಂಡುಕಲ್ಲಿನಂತೆ ಗುಂಡುಗುಂಡಾಗಿರುವುದು) ಅಭ್ಯಂಜನ ಮುಗಿಸಿ ಗಣಪತಿ ತರಲು ರೆಡಿಯಾಗುತ್ತಿದ್ದೆವು. ಜಾಗಟೆ, ಗಂಟೆ, ಪಟಾಕ್ಷಿ, ಮಣೆ, ಪಂಚಪಾಳ ..ಎಲ್ಲವನ್ನೂ ಒಬ್ಬೊಬ್ಬರು ಹಿಡಿದುಕೊಂಡು ಪೂರ್ತಿ ಸನ್ನದ್ಧರಾಗಿ ಮಾಮನೊಡನೆ ಬಳಿಗಾರ ಓಣಿಗೆ ಹೋಗಿ ಜನಿವಾರ, ಇಲಿ, ಎಡಕ್ಕೆ ಸೊಂಡಿಲು, ಹಸ್ತದಲ್ಲಿ ಮೋದಕ, ಅಂಕುಶ, ಮುಖಲಕ್ಷಣ ಎಲ್ಲ ಇರೂ ಗಣಪತಿಯನ್ನ ಆರಿಸಿಕೊಂಡು ಅತ್ಯಂತ ಹುರುಪಿನಿಂದ ಜೈಕಾರ ಹಾಕುತ್ತ ಮನೆಗೆ ತಂದು ಅವನಿಗೆಂದು ಅಲಂಕರಿಸಿದ ಮಾಡದಲ್ಲಿ ಅಕ್ಕಿಯ ಪೀಠದಲ್ಲಿ ಕುಳ್ಳಿರಿಸಿದರೆ ನಂತರ ಗಣಪ್ಪ ಅಜ್ಜನ ಸುಪರ್ದಿಗೆ. ವಿಧಿವಿಧಾನಪೂರ್ವಕವಾಗಿ ಅಜ್ಜನ ಪೂಜೆ, ಆರತಿಯೆಲ್ಲ ಆದಮೇಲೆ ತರಗು,ಲಡ್ಡಿಗೆ, ಮೋದಕ, ಕರಿಗಡಬು,ಪಾಯಸ,ಬುರಬುರಿ,ಚಿತ್ರಾನ್ನಗಳ ಬಾಳೆಲೆ ಊಟ. ಅವತ್ತು ಹುಟ್ಟುಹಬ್ಬವೆಂದು ಸ್ವಲ್ಪ ಹೆಚ್ಚಿಗೇ ಅಚ್ಛಾ. ಅವತ್ತು ಕಸಬಳಿವ, ಎಂಜಲುಗೋಮಯ ಮಾಡುವ ಕೆಲಸದಿಂದಲೂ ರಜಾ ಇರುತ್ತಿತ್ತು. ಸಂಜೆ ಗಣಪ್ಪನ ಮುಂದೆ ಕೈಮುಗಿದು ‘ ಪ್ರಣಮ್ಯ  ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ’ ಎಂದು ಸಂಕಷ್ಟಹರ ಮಂತ್ರ ಅಂದು ಗಣಪ್ಪನೆದಿರು ಯಥಾಶಕ್ತಿ ಉಠಾಬಸಿ ತೆಗೆದಾದ ಮೇಲೆ ಸೊಂಡಿಲಿಗೆ ಮೊಸರವಲಕ್ಕಿ ಹಚ್ಚಿ ಉತ್ತರ ಪೂಜಾ ಮುಗಿಸಿದ ಮೇಲೆ ನಮ್ಮ ಬರ್ತಡೇ ಸೆಲಿಬ್ರೇಷನ್ನು. ಹಾಸಿದ ಹೊಸ ಜಮಖಾನೆಯ ಮೇಲೆ ನಮ್ಮನ್ನು ಕೂಡಿಸಿ( ನಮ್ಮಜ್ಜಿ ಚೌತಿಯ ಆಚೀಚೆ ಹುಟ್ಟಿದ ತನ್ನ ಮಕ್ಕಳು ಹಾಗೂ ಮೊಮ್ಮಕ್ಕಳನ್ನೆಲ್ಲ ಸೇರಿಸಿ ಹೋಲ್ ಸೇಲ್ ಬರ್ತಡೇ ಮಾಡಿಬಿಡಾಕಿ.) ಆರತಿ ಮಾಡಿ ಕೈಗೆ ಖೊಬ್ರಿಸಕ್ರಿ ಹಾಕಿ, ನಮಸ್ಕಾರ ಮಾಡಿಸಿಕೊಂಡು ‘ಉದ್ಧಂಡ ಆಯುಷ್ಯವಂತಾಗು’ಅಂತ ಆಶೀರ್ವಾದ ಮಾಡಿದ್ರ ಮುಗೀತು ಅಕಿನ್ನ ಕೆಲಸ. ಆಮ್ಯಾಲೆ ನಮ್ಮಜ್ಜ ಮುನ್ನಾದಿನವೇ ಬ್ಯಾಂಕಿನಿಂದ ತೆಗೆಸಿಕೊಂಡು ತಂದಿಟ್ಟ ಹೊಚ್ಚ ಹೊಸ ಎರಡು ರೂಪಾಯಿಯ ನೋಟನ್ನು ತಪ್ಪದೇ ಕೊಡುವವರು. ಅಲ್ಲದೇ ಎಲ್ಲ ಮಕ್ಕಳು, ಮೊಮ್ಮಕ್ಕಳ ಹೆಸರೂ ಬರೂಹಂಗ ನಿಂತನಿಂತಲ್ಲೇ ಒಗಟು ಕಟ್ಟಿ ಹೇಳುವವರು. ನಮ್ಮ ಉತ್ತರ ಕರ್ನಾಟಕದಲ್ಲಿ ಯಾವುದೇ ಶುಭಸಂದರ್ಭದಲ್ಲೂ ಈ ಒಗಟಿನ ಕಾರ್ಯಕ್ರಮ ಇರಲೇಬೇಕು. ನಾವೆಲ್ಲ ನಮ್ಮ ಹೆಸರು ಬರುತ್ತಿದ್ದಂತೆಯೇ ಖುಷಿಯಿಂದ ಹೋ ಎಂದರಚಿ ಇನ್ನೊಂದು, ಮತ್ತೊಂದು ಅಂತ ಕಾಡಿಸಿ ಹತ್ತಾರು ಒಗಟು ಹೇಳಿಸಿಕೊಳ್ಳುವುದು ನಡೆಯುತ್ತಿತ್ತು.
ನಂತರ ಮನೆಯ ಹತ್ತಿರವಿರುವ ಗುಂಡಬಾವಡಿಗೆ ಗಂಟೆ-ಜಾಗಟೆ-ಪಟಾಕ್ಷಿಗಳ ಸದ್ದಿನೊಂದಿಗೆ ಅವನ ವಿಸರ್ಜನಾ ಮೆರವಣಿಗೆ. ಅಂದು ಚೌತಿಯ, ಚಂದಿರನನ್ನು ನೋಡಬಾರದೆಂದು ಎಷ್ಟೇ ಮುನ್ನೆಚ್ಚರಿಕೆವಹಿಸಿದರೂ ಯಾವುದೋ ಮಾಯೆಯಲ್ಲಿ ಅವ ನಮ್ಮನ್ನು ಅಡ್ಡಗಟ್ಟಿ ನಕ್ಕೇ ಬಿಡುತ್ತಿದ್ದ. ಮನೆಗೆ ಬಂದು ಶ್ಯಮಂತೋಪಾಖ್ಯಾನ ಕೇಳಿ ಅಪವಾದದ ಭಯ ಪರಿಹರಿಸಿಕೊಂಡಾದ ಮೇಲೆ ಹಸಿವಿರದಿದ್ದರೂ ಹಬ್ಬದಂದು ರಾತ್ರಿ ಉಪವಾಸ ಮಲಗಬಾರದು ..ಬಾಯಿ ಮುಸುರಿ ಮಾಡಬೇಕು ಎನ್ನುವ ಬಲವಂತಕ್ಕೆಊಟಕ್ಕೆ ಕುಳಿತರೂ ಕೂತಾದ ಮೇಲೆ  ಬಿಸಿ ಅನ್ನದೊಂದಿಗೆ ಕಟ್ಪಿನ ಸಾರು, 2-3 ಕಡಬು, ಮೊಸರನ್ನದ ಫುಲ್ ಮೀಲ್ಸ್ ನೊಂದಿಗೇ ಊಟ ಮುಕ್ತಾಯವಾಗುವುದರೊಂದಿಗೆ ನಮ್ಮ ಗಣೇಶ ಹಬ್ಬದಾಚರಣೆ ಸಂಪನ್ನವಾಗುತ್ತಿತ್ತು.

 ಹೀಗೆ ಅವು ನನಗೆ ಕೇವಲ ಹಬ್ಬಗಳಾಗಿರದೇ ನನ್ನ ಭಾವಕೋಶದಲ್ಲಿ ಹಾಸುಹೊಕ್ಕಾದ ಜೀವತಂತುಗಳು. ಈಗಲೂ ಸಾಕಷ್ಟೇ ಅದ್ಧೂರಿಯಾಗಿ,ವಿಧಿಬದ್ಧವಾಗೇ ಗಣೇಶಚೌತಿಯ ಆಚರಣೆ ಜರಗುತ್ತದಾದರೂ ಯಾಕೋ ಆ ಮುಗ್ಧ ಸಂಭ್ರಮ ಕೈಗೆಟುಕದೇ ನುಣುಚಿಕೊಳ್ಳುತ್ತಿರುವ ಆಭಾಸ. ನಿಮಗೂ ಹಾಗೇನಾ?!
ಆದಿ ಪೂಜಿತ, ವಿಘ್ನವಿನಾಶಕ ಗಣಪತಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ತಮಗೆಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
  
*******
ರೇಖಾ ಚಿತ್ರ- ಯಾಮಿನಿ ಗುಡೂರ್ ( ೧೨ ವರ್ಷ ವಯಸ್ಸು)
ಗಣಪತಿಗಳ ಮೆರವಣಿಗೆ 
- ಡಾ ಮುರಳಿ ಹತ್ವಾರ್ 

ನೆನಪುಗಳೇ ಹಾಗೆ. ಒಮ್ಮೆ ತಲೆಯೊಳಗೆ ಕುಳಿತರೆ ಆಯಿತು, ಹೊಸತೆಲ್ಲವನ್ನು ಅವುಗಳ ಕನ್ನಡಕದಲ್ಲೇ ನೋಡುವಂತೆ ಒತ್ತಾಯಿಸುತ್ತವೆ. ಅದರಲ್ಲೂ, ಬೆಳೆಯುವ ವಯಸ್ಸಿನಲ್ಲಿ, ಕುತೂಹಲವೋ ಆಸಕ್ತಿಯೋ ತುಂಬಿಸಿಕೊಂಡ ನೆನಪುಗಳಂತೂ ತಮ್ಮ ಅಳತೆಗೋಲಲ್ಲಿ ಪಾಸಾದ ಹೊಸ ನೆನಪುಗಳಿಗಷ್ಟೇ ಸಂಭ್ರಮದ ಜಾಗ ಕೊಡೋದು. ಹಾಗೆ ನಿತ್ಯದ ಪಯಣದಲ್ಲಿ ಸೇರಿಕೊಂಡ ನೆನಪುಗಳು, ಹೆಚ್ಚು ಹೆಚ್ಚು ನಿನ್ನೆಗಳು ಕಳೆದಂತೆ ಪದರ ಪದರಗಳ ಸಿಹಿ ಸೋನಪಾಪಡಿಯಂತೊ, ಅಥವಾ ಕಹಿ ಹಾಗಲಕಾಯಿ ಉಪ್ಪಿನಕಾಯಿಯಂತೋ ನೆನಪಿನ ಜಾಡಿಯಲ್ಲಿ ಶೇಖರವಾಗುತ್ತವೆ. ಅವು ಅವುಗಳಿಷ್ಟದಂತೆ ಆಗಾಗ ಕಣ್ಮುಂದೆ ಬಂದು ನಿಲ್ಲುತ್ತವೆ: ಕೆಲವೊಮ್ಮೆ ಒಂಟಿ ಸಲಗದಂತೆ; ಕೆಲವೊಮ್ಮೆ ವಿಸರ್ಜನೆಗೆ ಹೊರಟ ಗಣಪತಿಗಳ ಮೆರವಣಿಗೆಯಂತೆ. 

ಗಣಪತಿ ಎಂದಾಗ ನೆನಪಿಗೆ ಬರೋದು, ಬಳ್ಳಾರಿ ಮುನಿಸಿಪಲ್ ಸ್ಕೂಲ್ ಮೈದಾನದಲ್ಲಿ ಕೇಳಿದ ಭದ್ರಗಿರಿ ಅಚ್ಯುತದಾಸರ ಹರಿಕಥೆ. ಅವರ ಕಂಚಿನ ಕಂಠದ ಏರಿಳಿತದ ಲಯದಲ್ಲಿ ಭೀಮ-ಅರ್ಜುನರ ಅಹಂಕಾರ ಕಟ್ಟು ಹಾಕಿದ ಕೃಷ್ಣ ಗಾರುಡಿಯ ಕಥೆ, ಕೇಳಿ ಮೂವತ್ತು-ಮೂವತ್ತೈದು ವರ್ಷಗಳಾದರೂ, ನೆನಪಿನ ಅಂಗಳದಲ್ಲಿ ಇನ್ನೂ ಹೂಬಿಡುತ್ತ, ಮತ್ತೆ ಮತ್ತೆ ಚಿಗುರುವ ಬಳ್ಳಿ ಅದು. ಅವರ ಕಥೆಗಳಲ್ಲಿ ಹೇಳಿದ, ದಾಸರು ಮಳೆ ಬರುತ್ತೆ ಎಂದು ಹೇಳಿದರೆಂದು ಮೋಡದ ಕುರುಹಿಲ್ಲದಿದ್ದರೂ ಕೊಡೆ ತಂದ ಬಾಲಕನೊಬ್ಬನ ಗಟ್ಟಿ ನಂಬಿಕೆ, ಅದಕ್ಕೆ ತಕ್ಕಂತೆ ಮಳೆ ಸುರಿದ ಕಥೆಯೊಂದು ನಿನ್ನೆಯಷ್ಟೇ ಕೇಳಿದಷ್ಟು ಹಸಿಯಾಗಿ ನೆನಪಿನ ಕುಡಿಕೆಯಲ್ಲಿ ಕುಳಿತಿದೆ. ಅವರ ಹರಿಕಥೆಗಳ ಸುತ್ತ, ಆ ವಾರವಿಡೀ ಸಡೆಯುತ್ತಿದ್ದ ತರತರದ ಕಾರ್ಯಕ್ರಮಗಳಿಗೆ ಉತ್ಸಾಹದಿಂದ, ಬೇರಾವುದೇ ಒತ್ತಾಯವಿಲ್ಲದೇ, ಸೇರುತ್ತಿದ್ದ ಸಾವಿರಾರು ಜನ, ಆ ಜಂಗುಳಿಯಲ್ಲಿ ಮನೆಯವರೊಟ್ಟಿಗೋ. ಗೆಳೆಯರೊಟ್ಟಿಗೋ ಹಾಕಿದ ಹೆಜ್ಜೆಗಳ ಸದ್ದು ಇನ್ನೂ ಕೇಳಿಸುತ್ತಿದೆ. 

ಆ ಕಾಲದ ಎಲ್ಲ ಗಣಪತಿಗಳ ಲೆಕ್ಕವಿಟ್ಟಿವೆ ಆ ಹೆಜ್ಜೆಗಳು. ಮುನಿಸಿಪಲ್ ಮೈದಾನದ ಪಕ್ಕದ ಸೆಂಟೆನರಿ ಹಾಲಿನ ದೊಡ್ಡ ಗಣಪನಿಂದ ಹಿಡಿದು, ಸಣ್ಣ ಮಾರ್ಕೆಟ್, ದೊಡ್ಡ ಮಾರ್ಕೆಟ್, ಮೇದಾರ ಓಣಿ, ಕುಂಬಾರ ಓಣಿ, ಗೌಳಿ ಹಟ್ಟಿ, ಸಿಂಧಿಗಿ ಕಂಪೌಂಡ್, ತೇರು ಬೀದಿ, ಕಾಳಮ್ಮ ಬೀದಿ. . . ಹೀಗೆ ಪಂಡಾಲಿನಿಂದ ಪಂಡಾಲಿಗೆ ಓಡುತ್ತಿದ್ದ, ಅಲ್ಲಿ ಯಾವ ದಿನ ಯಾವ ಕಾರ್ಯಕ್ರಮವಿದೆ, ಎಷ್ಟು ಹೊತ್ತಿಗೆ ಏನೇನು ಎಲ್ಲ ಪಟ್ಟಿ ಮಾಡುತ್ತಾ, ಆ ಪಂಡಾಲಿನಲ್ಲಿ ಕೊಡುತ್ತಿದ್ದ ಸಿಹಿ ಹಿಟ್ಟು ಇಲ್ಲ ಗುಗ್ಗರಿ ತಿನ್ನುತ್ತಾ ಮುಂದೋಡುವುದು, ಸಂಜೆಯ ಹೊತ್ತಿಗೆ ಆ ಪಟ್ಟಿಯನ್ನ ಮನೆಯವರಿಗೆ ತಲುಪಿಸಿ ಅವರೊಟ್ಟಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವದು, ಗೆಳೆಯರೊಟ್ಟಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವದು ಎನ್ನುವ 'ನೆಗೋಷಿಯೇಷನ್' ಮಾಡಿಕೊಂಡರೆ ಹಬ್ಬದ ಡೈರಿ ಫುಲ್. 

ಎಲ್ಲ ಗಣಪತಿಗಳಿಗಿಂತ, ಕಾಳಮ್ಮ ಬೀದಿಯ ಗಣಪ ಸ್ವಲ್ಪ ಹತ್ತಿರ. ನಮ್ಮ ಸ್ಕೂಲ್ ಹತ್ತಿರವಿದ್ದುದು ಒಂದು ಕಾರಣವಾದರೆ, ಆ ವಿನಾಯಕನನ್ನ ಕಟ್ಟುವ 'ಅಣ್ಣಂದಿರ' ತಮ್ಮಂದಿರು ಕ್ಲಾಸಿನಲ್ಲಿದ್ದುದು ಮುಖ್ಯ ಕಾರಣ. ಹಬ್ಬಕ್ಕೆ ಸುಮಾರು ಮೊದಲೇ ಶುರುವಾಗುತ್ತಿತ್ತು 'ಲೀಕ್ಸು': 'ಜೇಡಿ ಮಣ್ಣು ತಂದವ್ರೆ', ' ಈ ಸಲ ಕ್ರಿಕೆಟ್ ಗಣಪ, ಗ್ಯಾರಂಟಿ', 'ಇಲ್ಲಲೇ, ಸಿದ್ದಿ-ಬುದ್ದಿ ಗಣಪ, ನಂಗ್ ಗೊತ್ ಲೇ'. . . ಆಗಾಗ ಇನ್ನೂ ರೂಪು ತಾಳುತ್ತಿರುವ ಗಣಪನ ಸೀಕ್ರೆಟ್ ದರ್ಶನದ ಅವಕಾಶ ಬೇರೆ. ನೆನಪಿನಲ್ಲಿ ಉಳಿಯದೆ ಇನ್ನೇನು?

ಸಂಜೆಯ ಕಾರ್ಯಕ್ರಮಗಳಲ್ಲಿ, 'ಸ್ಟೇಟ್ ಲೆವೆಲ್' ಹಾಡು, ಹರಿಕಥೆ, ಡಾನ್ಸ್ ಎಲ್ಲ ಮುನಿಸಿಪಲ್ ಮೈದಾನದಲ್ಲಿ. ಸಣ್ಣ ಸ್ಟೇಜುಗಳ ಪಂಡಾಲುಗಳಲ್ಲಿ ಒಂದೋ ಉತ್ತರ ಕರ್ನಾಟಕದ ಉದಯೋನ್ಮುಖ ಗಾಯಕರ ಜಾನಪದ ಹಾಡು, ಇಲ್ಲ ಲೋಕಲ್ ಹುಡುಗರ ಹಾಡು, ಡ್ಯಾನ್ಸು. ಆಗ ಕೇಳಿದ, 'ಕುದುರೆಯ ತಂದೀವ್ನಿ, ಜೀನಾವ ಬಿಗಿದಿವ್ನಿ,,,' ತಾಯಿ ಸತ್ತಮೇಲೆ ತವರಿಗೆ ಎಂದೂ ಹೋಗಬಾರದವ್ವ. . .', 'ಕಲಿತ್ತ ಹುಡುಗಿ ಕುದುರಿ ನಡಿಗಿ, , ,' ಹಾಡುಗಳು ಇನ್ನೂ ಆಗಾಗ ಪ್ರಸಾರ ಆಗುತ್ತಿರುತ್ತವೆ ನನ್ನ ನೆನಪಿನ ರೇಡಿಯೋದಲ್ಲಿ. 

ಆ ಸ್ಟೇಜುಗಳಲ್ಲಷ್ಟೇ ಆಗ ನೋಡಲು ಸಿಗುತ್ತಿದ್ದದ್ದು ತರತರದ 'ಬ್ರೇಕು' ಡಾನ್ಸುಗಳು. ಮಿಥುನ್ ಚಕ್ರವರ್ತಿಯ ಡಿಸ್ಕೊ ಡಾನ್ಸ್ ಹಾಡುಗಳು; ಮೈಕೆಲ್ ಜಾಕ್ಸನ್ನನ ಈಗಲೂ ಅರ್ಥವಾಗದ ಹಾಡುಗಳಿಗೆ ಅವನ ಅವತಾರವೆಂದುಕೊಂಡು ಕುಣಿಯುತ್ತಿದ್ದ ಬಾಲಕರು, ಯುವಕರು ಈಗಲೂ ನೆನಪಿನ ತೆರೆಯ ಮೇಲೆ ಕುಣಿದು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. 

ಈ ಕಾರ್ಯಕ್ರಮಗಳೆಲ್ಲ ಹೆಚ್ಚು ಪಂಡಾಲಿನಲ್ಲಿ ಐದು ದಿನಗಳಷ್ಟೇ. ಐದನೇ ರಾತ್ರಿ ವಿಸರ್ಜನೆ, ವಿಜೃಂಭಣೆಯ ಮೆರವಣಿಗೆಯಲ್ಲಿ. ನೂರಾರು ಗಣಪತಿಗಳು, ತೇರು ಬೀದಿಯ ಮೊದಲಿಗೆ ಸೇರಿ, ಆ ಬೀದಿಯ ಅಂಗಡಿ, ದೇವಸ್ಥಾನ, ಚರ್ಚು, ಮಸೀದಿಗಳ ದಾಟಿ, ಮೋತಿ ಸರ್ಕಲ್ಲಿನಲ್ಲಿ ಬೆಂಗಳೂರು ರೋಡಿಗೆ ತಿರುಗಿ, ಮೂರ್ನಾಕು ಕಿಲೋಮೀಟರ್ ದೂರದ ತುಂಗಭದ್ರೆಯ ದೊಡ್ಡ ಕಾಲುವೆಗೆ ಗಣಪತಿಯನ್ನ ಒಪ್ಪಿಸೋದು ಆ ಮೆರವಣಿಗೆಯ ಕೊನೆ. ಸಂಜೆಗೆ ಶುರುವಾಗುವ ಮೆರವಣಿಗೆ ಮುಗಿಯುವದು ಮುಂಜಾವಿಗೆ ಹತ್ತಿರಕ್ಕೆ. ನಮ್ಮ ಮನೆ ಮೋತಿ ಸರ್ಕಲ್ಲಿನ ತಿರುವಿನಲ್ಲಿ ಇದ್ದದರಿಂದ ಅದೊಂದು ವಾಂಟೇಜ್ ಪಾಯಿಂಟ್ ನಮ್ಮ ಹತ್ತಿರದವರಿಗೆ. 

ಆ ದಿನ, ಕತ್ತಲೇರುತ್ತಿದ್ದಂತೆ ಮನೆ ತುಂಬಾ ಜನ. ಎಷ್ಟೆಂದರೆ, ೧೩ಮನೆ ದಾಯ್ ಆಟಕ್ಕೆ ಬೇಕಾಗುವಷ್ಟು ಕೈ, ಮತ್ತೆ ಅವರಿಗೆ ಬೇಕಾದಂತೆ, ಕಾಫಿ ಚಾ ಮಾಡಲಿಕ್ಕೆ, ಹೊರಗಡೆ ನಿಲ್ಲುತ್ತಿದ್ದ ಮಂಡಕ್ಕಿ ಗಾಡಿಯಿಂದ ಮಸಾಲೆ ಮಂಡಕ್ಕಿ ತಂದು ಕೊಡೋಕೆ, ಮತ್ತೆ, ದೊಡ್ಡ-ದೊಡ್ಡ ಗಣಪತಿಗಳ ಮೆರವಣಿಗೆ ಬಂದಾಗ ಅವರಿಗೆ ಹೇಳಲಿಕ್ಕೆ ಬೇಕಾದಷ್ಟು ಜನ. ದಾಯ್ ಆಟದ ಮಂದಿ ಪಳಗಿದ ಕೈ ಗಳಾದ್ದರಿಂದ, ನಮ್ಮಂತ ಮಕ್ಕಳು ಒಂದೋ ಆಟಕ್ಕುಂಟು ಲೆಕ್ಕಕಿಲ್ಲ ಅಥವಾ ಅರ್ಜೆಂಟಿಗೆ ಒಂದಿಷ್ಟು ನಿಮಿಷ ಬೇಕಾದಾಗ ಕವಡೆಯ ಕರಡಿಗೆ ಮಗಚುವ ಕೈ. ಉಳಿದ ಸಮಯದಲ್ಲಿ, ಮಂಡಕ್ಕಿ-ಸೋಡಾ ಮಜಾ ಮಾಡುತ್ತಾ, ಗಣಪತಿಗಳ ಟ್ರಾಕ್ಟರ್ ಜೊತೆಗೆ, ತಿನ್ನುತ್ತಿದ ಮಂಡಕ್ಕಿ ಪ್ಯಾಕೇಟಿನ ಲೆಕ್ಕ ಇಡುವದು ನಮ್ಮ ಕೆಲಸ. 

ಹದಿಮೂರು ಮನೆಯ ದಾಯ್ ಆಟಕ್ಕೆ, ಮನೆಗೆ ಮೂರು ಕೈ. ಕೈ ತುಂಬುವಷ್ಟು ಕವಡೆಯಾದ್ದರಿಂದ ದಾಳ ಉರುಳಿಸಲು ಒಂದು ಕರಡಿಗೆ. ಮೊದಮೊದಲು ಕೈ ಬೇಗ ಬೇಗ ಬದಲಿಸುತ್ತಾ ಮನೆಯ ಕಾಯಿಗಳನ್ನ ಹೊರಡಿಸುತ್ತವೆ. ಆ ಕಾಯಿಗಳು ಇನ್ನೊಬ್ಬರನ್ನು ಹೊಡೆಯದೆ ಹಣ್ಣಾಗಲು ಸಾಧ್ಯವಿಲ್ಲದ ಕಾರಣ, ಹೊಡೆಯುವ ಆಟ ಒಂದಿಷ್ಟು ಸುತ್ತಿನಲ್ಲಿ ಶುರುವಾಗುತ್ತದೆ. ಪಳಗಿದ ಕೈಗಳಿಗೆ ಶಕ್ತಿ, ಉತ್ಸಾಹ ಉಕ್ಕುವದು ಆಗಲೇ. 'ನಾಲ್ಕ್ ಹಾಕಿ', ' ಹೊಡಿ, ಬಿಡ್ಬೇಡ ಹಣ್ ಆಪ್ಕೆ', 'ಹ್ವಾಯ್, ತುಂಬಾ ಗೆರ್ಚ್ ಬೇಡಿ'. . .ಹೀಗೆ ಕೈಯಿಂದ ಕೈ ಗೆ ಸಾಗುವ ಕವಡೆಗಳ ರಿಥಮ್, ಆಟ ರಂಗೇರಿದಂತೆ ತಾರಕ್ಕೇರುವ ಆ ಕೈಗಂಟಿದ ಗಂಟಲುಗಳ ದನಿ, ಹೊರಗಿನ ಮೆರವಣಿಗೆಯ ವಾಲಗ, ಬ್ಯಾಂಡು, ಅದಕ್ಕೆ ಕುಣಿಯುವ ಜನ, ಅದನ್ನು ನೋಡುತ್ತಾ, ಬಾಯೊಳಿಳಿದ ಮಂಡಕ್ಕಿಯ ಖಾರಕ್ಕೆ ಸುರಿಯುತ್ತಿದ್ದ ಕಣ್ಣು ಮೂಗುಗಳನ್ನು ಒರೆಸಿಕೊಳ್ಳುತ್ತ ಕಳೆಯುತ್ತಿದ್ದ ರಾತ್ರಿಗಳು, ಆಗಾಗ ನೆನಪಿನ ತೆರೆಯಲ್ಲಿ 4D ಸಿನೆಮಾ ರೂಪದಲ್ಲಿ ಮೂಡುತ್ತವೆ. ಸ್ವಲ್ಪ ನಗುವಿನ ಜೊತೆಗೆ ಒಂದಿಷ್ಟು ಪ್ರಶೆಗಳನ್ನ ಬಿಟ್ಟು ಹೋಗುತ್ತವೆ. 

ಮತ್ತೆ ಸಿಕ್ಕಬಲ್ಲುದೆ ಆ ಹಬ್ಬಗಳ ಸಮಯ, ಹಳ್ಳಿಗಳೆಲ್ಲ ನಗರಗಳಾಗಿ, ಮನೆಗಳೆಲ್ಲ ಪೆಟ್ಟಿಗೆಗಳಾಗಿ, ನಮಗೂ ನಾವು ಸಿಕ್ಕದಷ್ಟು ಮೊಬೈಲಿನಲ್ಲಿ ಕಳೆದು ಹೋಗಿರುವ ಈ ದಿನಗಳಲ್ಲಿ? ಆಸೆಯ ಕೈಗಳ ಲೆಕ್ಕಾಚಾರದ ಕವಡೆಯಾಟದಲ್ಲಿ ಊರೂರೇ ದಾಯ್ ಆಟದ ಮನೆಗಳಾಗಿ; ದೇವರೂ, ಹಬ್ಬಗಳೂ ಕಾಯಿಗಳಾಗಿ, ಹೊಡಿ-ಬಡಿ ಆಟದಲ್ಲಿ ಒಂದಿಷ್ಟು ಹಣ್ಣಾಗಿ, ಒಂದಿಷ್ಟು ಸುಣ್ಣವಾಗಿ ಸುತ್ತುತ್ತಿರುವ ಈ ಕಾಲದಲ್ಲಿ, ಹಳೆಯ ಕೌಟುಂಬಿಕ ಸಿನೆಮಾವೊಂದರ ಸೆಟ್ಟೊಂದನ್ನು ಮತ್ತೆ ಕಟ್ಟಿ ಅದೇ ಸಿನಿಮಾ ಶೂಟಿಂಗಿನ ಬಯಕೆಯೇ ಅರ್ಥವಿಲ್ಲದ, ಮೌಲ್ಯವಿಲ್ಲದ ಆಲೋಚನೆ ಎನ್ನುವದು ಮನದೊಳಗಿನ ಸಿನಿಕನ ವಾದ. ಅಥವಾ, ಹಾಗೆನ್ನಿಸುವುದೇ ಹಳೆಯ ನೆನಪುಗಳ ದೋಷವೋ? . 

ಮೊಬೈಲಿನ ಸಣ್ಣ-ದೊಡ್ಡ ಬೀದಿಗಳಲ್ಲಿ, ಹತ್ತು ಹಲವು ರೂಪದಲ್ಲಿ ಈ ಕಾಲದ ಜನ-ಜನ ಸೇರುತ್ತಿದ್ದರೂ, ಹಳೆಯ ಆಪ್ತತೆ ಕಳೆದುಹೋಗಿದೆ ಎನ್ನಿಸುತ್ತಿದೆ. ಕಳೆದುಹೋಗಿರುವ ಆ ಆಪ್ತತೆಯನ್ನ ಮತ್ತೆ ಹುಟ್ಟಿಸಿ, ಬೆಳೆಸಿ; ಗಣಪತಿಗಳ ಕುಳಿಸಿ, ಮೆರೆಸಿ, ಮೆರವಣಿಗೆ ಮಾಡಿಸಿ, ಹಳೆಯ ನೆನಪುಗಳು ಮೆಚ್ಚಿ, ಒಂದು ವೇಳೆ ಮೆಚ್ಚದಿದ್ದರೆ ಕೊಚ್ಚಿ ಹೋಗುವಷ್ಟು, ಹೊಸ ನೆನಪುಗಳು ಮೂಡಿಸುವ ಗಾರುಡಿಯೊಬ್ಬ ಎಲ್ಲಿಂದಾದರೂ -- appಪಿನಿಂದಾದರೂ ಅಡ್ಡಿಯಿಲ್ಲ -- ಹಾರಿಬಂದು, ಬರುವದು ತಡವಾದರೆ, ಬರುವವರೆಗೆ, ಬರುವರೆಂಬ ನಂಬಿಕೆಯ ಕೊಡೆ ಕಳೆದು ಹೋಗದೆ ಜೊತೆಯಲ್ಲೇ ಇಟ್ಟುಕೊಳ್ಳುವಷ್ಟು ನೆನಪಿನ ಮನೆಯಲ್ಲಿ ಜಾಗ ಇರಲಿ . . . ಹೀಗೆ ಓಡುತ್ತಿದ್ದ ಆಲೋಚನಯ ಲಯದ ತಾಳಕ್ಕೆ, ಹಳೆಯ ನೆನಪಿನ ಜ್ಯೂಕ್ ಬಾಕ್ಸ್ ಹಾಡೊಂದನ್ನು ಹುಡುಕಿಕೊಟ್ಟಿತು:

ಗಜಮುಖನೆ ಗಣಪತಿಯೇ ನಿನಗೆ ವಂದನೆ 
ನಂಬಿದವರ ಪಾಲಿನ ಕಲ್ಪತರು ನೀನೆ. . . 


*****
ಫಲಾವಳಿ (ಚಿತ್ರ ಕೃಪೆ: ಗೂಗಲ್)
ನಯನ ಮನೋಹರ ಅಂಕೋಲೆಯ ಚೌತಿ ಹಬ್ಬ 
 - ಡಾ. ರಾಮ್ ಶರಣ್ 

ಭಾರತದಲ್ಲಿ ಗಣಪ ಸೂಪರ್ ಸ್ಟಾರ್ ದೇವ. ನಾನು ಹುಟ್ಟಿ, ಬೆಳೆದು, ಓದಿದ ಸ್ಥಳಗಳಲ್ಲೆಲ್ಲ ಗಣೇಶ ಚತುರ್ಥಿ ಅತ್ಯಂತ ಜನಪ್ರಿಯ ಹಬ್ಬ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ, ಚೌತಿ ಹಬ್ಬ ಎಂದೇ ಕರೆಯಲ್ಪಡುತ್ತದೆ. ದಾಂಡೇಲಿಯಲ್ಲಿದ್ದಾಗ ಚೌತಿ ಹಬ್ಬದ ಸಮಯದಲ್ಲಿ ಅರ್ಧಕ್ಕರ್ಧ ಊರೇ ಕರಾವಳಿಗೆ ಗುಳೆ ಹೋಗುತ್ತಿದ್ದುದು ಬೇರೆ ಹಬ್ಬಗಳಲ್ಲಿ ಕಾಣುತ್ತಿರಲಿಲ್ಲ. ನಾನು ಬಾಲ್ಯವನ್ನು ಕಳೆದಿದ್ದು ಕರಾವಳಿಯ ಅಂಕೋಲ ಎಂಬ ಊರಿನಲ್ಲಿ. ಅಂಕೋಲೆಯ ಚೌತಿ ಹಬ್ಬದ ಸೊಗಡನ್ನು ನಾನು ಬೇರೆಡೆ ನೋಡಿಲ್ಲ. ಚೌತಿ ಹಬ್ಬ ಎಂದರೆ ಈಗಲೂ ನನಗೆ ಅಂಕೋಲೆಯದೇ ನೆನಪು. 

ಶಾಲೆಯ ಮಕ್ಕಳಾದ ನಮಗೆ ಚೌತಿ ಹಬ್ಬದ ಮೊಗ್ಗರಳುತ್ತಿದ್ದುದು ಮಹಾಲೆ ಮನೆಯಲ್ಲಿ ಮೂಡುತ್ತಿದ್ದ ಗಣೇಶನ ಮೂರ್ತಿಗಳಲ್ಲಿ. ಪೇಟೆಯ ಮುಖ್ಯ ರಸ್ತೆಯ ಹಿಂದೆ ಅಡಗಿದ್ದ ಓಣಿಯಲ್ಲಿತ್ತು ಮಹಾಲೆ ಮನೆ. ಗಣಪತಿ ಮಾಡುವುದರಲ್ಲಿ ಈ ಮನೆಯವರು ಸಿದ್ಧ ಹಸ್ತರು. ದೂರದ ಭದ್ರಾವತಿಗೂ ಗಣಪತಿ ಮೂರ್ತಿಯನ್ನು ಸಪ್ಲಾಯ್ ಮಾಡುವಷ್ಟು ಪ್ರಸಿದ್ಧರು ಅವರು. ಕಟಾಂಜನದ ಹಿಂದಿನ ಮನೆಯ ಹಜಾರದ ಮೇಲೆ ಕಪ್ಪು ಮಣ್ಣಿನ ಕಣಗಳು ಒತ್ತಟ್ಟಿಗೆ ಬಂದು, ಅಡಿಯೆತ್ತರದಿಂದ ಆಳೆತ್ತರದವರೆಗೆ ಸಾಲಾಗಿ ತಯಾರಾಗುವ ಮೂರ್ತಿಗಳ ಪ್ರಗತಿಗೆ ದಿನವೂ ಹಾಜರಿ ಹಾಕದಿದ್ದರೆ ತಿಂದ ಅನ್ನ ಗಂಟಲಿನಿಂದ ಕೆಳಗೆ ಇಳಿಯುತ್ತಿರಲಿಲ್ಲ. 

ಚೌತಿ ಹಬ್ಬಕ್ಕೆ ಊರಾದ ಕುಮಟೆಗೆ ಹೋದರೂ ಮನಸ್ಸೆಲ್ಲ ಅಂಕೋಲೆಯಲ್ಲೇ. ಚೌತಿ ರಜೆ ಮುಗಿಸಿ ವಾಪಸ್ಸಾದ ಕೂಡಲೇ ಗಣಪತಿ ದರ್ಶನ ಯಾತ್ರೆ ಶುರುವಾಗುತ್ತಿತ್ತು. ಕರಾವಳಿಯಲ್ಲಿ ಗಣಪತಿ ಪ್ರತಿಷ್ಠಾಪಿಸಿದಲ್ಲೆಲ್ಲ ಮಂಟಪದ ಎದುರಿನ ಮಾಡಿಗೆ ಫಲಾವಳಿ ಕಟ್ಟುವುದು ಪದ್ಧತಿ. ಚಚ್ಚೌಕ ಆಕಾರದ ಬಣ್ಣಬಣ್ಣದ ಬಟ್ಟೆಯ ಹಿನ್ನೆಲೆಗೆ ಥರಾವರಿ ತರಕಾರಿ, ಹಣ್ಣುಗಳನ್ನು ತೂಗು ಬಿಡುವುದೇ ಫಲಾವಳಿ. 
(ಮೇಲಿನ ಚಿತ್ರವನ್ನು ಗಮನಿಸಿ) 

ಗಣಪತಿ ಮಂಟಪದ ಅಲಂಕಾರ ಮಾಡುವುದು ಎಲ್ಲಡೆ ಸಾಮಾನ್ಯ. ಇದರೊಟ್ಟಿಗೆ ಗಣಪತಿಯ ಮುಂಭಾಗದಲ್ಲಿ ಪೌರಾಣಿಕ ಕಥಾನಕಗಳ ಗೊಂಬೆಗಳ ಅಲಂಕಾರವೂ ನಮಗೆ ಹೆಚ್ಚಿನ ಆಕರ್ಷಣೆಯಾಗಿತ್ತು. ಭಕ್ತ ಮಾರ್ಕಂಡೇಯ, ಅಹಲ್ಯೆಯ ಶಾಪ ವಿಮೋಚನೆ ಇತ್ಯಾದಿ ಕಥೆಗಳ ರಿವಿಶನ್ ಆಗುತ್ತಿತ್ತು. ವೆಂಕಟರಮಣ ದೇವಸ್ಥಾನದ ಸಿಂಧೂರ ಗಣಪತಿ; ನಾರ್ವೇಕರ್ ಮಾಸ್ತರ್ ಮನೆಯ ಭಜನೆ, ಸಂಗೀತ ಕಾರ್ಯಕ್ರಮ, ಗುಮಟೆ ಪಾಂಗು (ಅಂಕೋಲೆ ಕಡೆಯ ವಿಶಿಷ್ಟ ಚರ್ಮ ವಾದ್ಯ); ಶೇಟ್ ಮಾಸ್ತರ್ (ನಮಪ್ಪ-ಅಮ್ಮನ ಶಾಲೆಯ ಮಾಸ್ತರ್) ಮನೆಯಲ್ಲಿ ಶಾಲೆಯ ಮಾಸ್ತರರ ಕುಟುಂಬದವರಿಗೆ ನೀಡುತ್ತಿದ್ದ ಸ್ಪೆಷಲ್ ಔತಣ; ಸಾರ್ವಜನಿಕ ಗಣಪತಿ ಮಂಡಲದಲ್ಲಿ ನಡೆಯುವ ನಾಟಕ - ಆರ್ಕೆಸ್ಟ್ರಾಗಳು; ಒಂದೇ, ಎರಡೇ? ಚೌತಿಯಿಂದ ಅನಂತನ ನೋಪಿಯವರೆಗೂ ನಮಗೆ ಹಬ್ಬ ಎಳೆದು ಹೋಗುತ್ತಿತ್ತು. ಶಾಲೆ ಹೆಸರಿಗೆ ಮಾತ್ರ. 

ಅನಂತನ ಚತುರ್ದಶಿಯಂದು ಹಲವಾರು ಮನೆಗಳ ಗಣಪತಿ ವಿಸರ್ಜನೆಯಾಗುತ್ತಿದ್ದುದು ಸಂಜೆ ಕೇಣಿ ಹಳ್ಳದಲ್ಲಿ. ಹಳ್ಳಕೆ ಹೋಗುವ ಹಾದಿ ನಮ್ಮ ಮನೆಯ ಪಕ್ಕದಲ್ಲೇ ಸಾಗುತ್ತಿತ್ತು. ಪಾಗಾರದ ಮೇಲೆ ಕುಳಿತು ಸಾಗುವ ಗಣಪತಿಗಳನ್ನು ಯಾರ ಮನೆಯದೆಂದು ಗುರುತಿಸುವ ಸ್ಪರ್ಧೆ ನಮ್ಮಲ್ಲೇ ನಡೆಯುತ್ತಿತ್ತು. ಮನೆಯವರೆಲ್ಲ ಒಟ್ಟಾಗಿ, ಜಾಗಟೆ ಬಡಿಯುತ್ತ ಗಣಪತಿಯನ್ನು ಹೊಳೆಯತ್ತ ಹೊತ್ತು ನಡೆಯುತ್ತಿದ್ದರು. ಮಳೆ ಬಡಿಯುತ್ತಿದ್ದರೆ, ಗಣಪತಿಗೆ ಕೊಡೆಯ ಆಶ್ರಯವಿರುತ್ತಿತ್ತು. ರಾತ್ರಿ ಒಂಭತ್ತರ ನಂತರ ಬರುವವು ಸಾರ್ವಜನಿಕ ಗಣಪತಿಗಳ ಮೆರವಣಿಗೆ. ಅವುಗಳ ಅಬ್ಬರವೇ ಬೇರೆ. ಬಾಜಾ - ಭಜಂತ್ರಿಗಳ ನಡೆದಾಡುವ ಆರ್ಕೆಸ್ಟ್ರಾ, ಟ್ಯೂಬ್ ಲೈಟ್- ಬಣ್ಣದ ಲೈಟುಗಳಿಂದ ಅಲಂಕೃತ ಲಾರಿಗಳ ಮೇಲೆ ಆಸೀನನಾಗಿ ವಿಸರ್ಜನೆಗೆ ಸಜ್ಜಾಗಿ ಬರುತ್ತಿದ್ದ ಗಣಪ. ಆ ಲಾರಿಗಳ ಎದುರು ಕುಣಿದು ಕುಪ್ಪಳಿಸುವವರ ತಂಡವೇ ಇರುತ್ತಿತ್ತು. ಕಡೆಯಲ್ಲಿ ಬರುತ್ತಿದ್ದ ಕೆ.ಈ.ಬಿ ಆಫೀಸಿನ ಗಣಪತಿಯ ಮೆರವಣಿಗೆಯ ಜರ್ಬು ಎಲ್ಲದವುಕ್ಕಿಂತ ಜಾಸ್ತಿ. ಅವರು ಹುಬ್ಬಳ್ಳಿಯಿಂದ ಬ್ಯಾಂಡ್ ಸೆಟ್ ತರಿಸುತ್ತಿದ್ದರು. ಅವರ ಹಾಡಿಗೆ ನರ್ತಿಸುವವರೂ ಆ ಸೆಟ್ ಜೊತೆಗೇ ಬರುತ್ತಿದ್ದರು. ಹೊಸ ಸಿನಿಮಾ ಹಾಡುಗಳನ್ನೆಲ್ಲ ಅವರು ನುಡಿಸುತ್ತಿದ್ದುದು ನಮಗೆ ಹೆಚ್ಚಿನ ಆಕರ್ಷಣೆಯಾಗಿತ್ತು. ನಾವೂ ಸ್ವಲ್ಪ ದೂರ ಆ ಮೆರವಣಿಗೆಯ ಜೊತೆಗೂಡಿ ಆದಷ್ಟು ಹೆಚ್ಚು ಹಾಡುಗಳನ್ನು ಕೇಳಿ ಸಮಾಧಾನ ಪಟ್ಟು, “ಗಣಪತಿ ಬಪ್ಪ ಮೋರೆಯಾ ಪುಡಚೆ ವರ್ಷೇ ಲವ್ಕರ್ ಯಾ” ಎಂದು ಭಾರವಾದ ಮನಸಿನಿಂದ ಗಣಪತಿಗೆ, ಚೌತಿ ಹಬ್ಬಕ್ಕೆ ವಿದಾಯ ಹೇಳಿ ಮುಸುಕೆಳೆಯುತ್ತಿದ್ದೆವು. 

ಸುಮಾರು ಆರು ವಾರಗಳ ಕಾಲ ನಮ್ಮನ್ನು ಕನಸಿನ ಲೋಕದಲ್ಲೇ ತೇಲಿಸುತ್ತಿದ್ದ ಅಂಕೋಲೆಯ ಗಣಪತಿ ಹಬ್ಬವನ್ನು ಇಂದಿಗೂ ಮೆಲುಕು ಹಾಕುತ್ತಲೇ ಆಚರಿಸುವುದು ಸಂಪ್ರದಾಯದ ಭಾಗವಾಗಿದೆ. 

*****
ಫೋಟೋ ಕೃಪೆ ಗೂಗಲ್
ಚಕ್ಕುಲಿ ಚರಿತ್ರೆ 
- ಅಮಿತ ರವಿಕಿರಣ್ 

 ನಾವು ವರ್ಷ ಪೂರ್ತಿ ಹಲವಾರು ಹಬ್ಬಗಳನ್ನ ಆಚರಿಸುತ್ತೇವೆ. ಪ್ರತಿ ಹಬ್ಬ ಹೊತ್ತು ತರುವ ಸಂಭ್ರಮ ಮತ್ತು ಅದು ಉಳಿಸಿ ಹೋಗುವ ನೆನಪು, ಕೊಡಮಾಡುವ ಚೈತನ್ಯ, ಸಾಮಾನ್ಯ ದಿನಗಳಿಗೂ ಹರುಷ ತುಂಬುತ್ತದೆ.
 ಹಬ್ಬಗಳು ಬರುವುದೇ ನಮ್ಮ ತನು ಮನಗಳಲ್ಲಿನ ಜಡತ್ವವನ್ನು ದೂರ ಮಾಡಲೇ ಇರಬೇಕು.ಹಬ್ಬ ಯಾವುದಾದರಾಗಲಿ ಅದು ಒಂದಷ್ಟು ತಯಾರಿ ಸಮಯ,ಮತ್ತು ಏಕಾಗ್ರತೆ ಬೇಡುತ್ತದೆ. ಪ್ರತಿಬಾರಿ ಮಾಡುವುದಕ್ಕಿಂತ ಚನ್ನಾಗಿ ಮಾಡಬೇಕು ಅನ್ನೋ ಒಂದು ಹುಮ್ಮಸ್ಸು ಇದ್ದರೇನೇ ಹಬ್ಬದ ವಾತಾವರಣ ಇನ್ನೂ ಚಂದಗಾಣುವುದು. 

ಹಬ್ಬಗಳಿಗೂ ತಿಂಡಿಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಹಬ್ಬಕ್ಕೂ, ಆ ದಿನ ಮಾಡಲೇ ಬೇಕಾದ ವಿಶೇಷ ಪದಾರ್ಥ ತಿಂಡಿ ತಿನಿಸುಗಳಿವೆ. ಇವತ್ತು ಗಣಪತಿ ನಮ್ಮೆಲ್ಲರ ಮನೆಗೆ ಬರುತ್ತಾನೆ ಅವನು ಬರುವ ಮೊದಲೇ ನಾವು ಅವನಿಗಿಷ್ಟ ಎಂದು ಉಂಡೆ,ಚಕ್ಕುಲಿ,ಕಡಬು,ಕೋಡುಬಳೆ, ಕರ್ಚಿಕಾಯಿ,ಕಜ್ಜಾಯ,ಮೋದಕ ಅಂತೆಲ್ಲ ಖುಷಿಯಿಂದಲೋ ಅಥವಾ ಮಾಡಲೇ ಬೇಕು ಅನ್ನುವ ಕಾಟಾಚಾರಕ್ಕೋ ಒಟ್ಟಿನಲ್ಲಿ ಮಾಡಿಯೇ ಮಾಡುತ್ತೇವೆ. 
 
 ಊಟ ತಿಂಡಿ ಎಂದರೆ ಜೀವ ಬಿಡುವ,ಅದಕ್ಕೆಂದೇ ಜೀವ ಹಿಡಿದುಕೊಂಡಿರುವ ನನ್ನಂಥವರು ಯಾವ ತಿನಿಸಿನ ಬಗ್ಗೆಯೂ ಪುಟಗಟ್ಟಲೆ ಬರೆಯಬಹುದು,ಘಂಟೆಗಟ್ಟಲೆ ಮಾತಾಡಬಹುದು. ಆದರೆ ಇವತ್ತು ನನ್ನ ಮನಸ್ಸನ್ನು ಚಕ್ಕುಲಿ ಎಂಬ ದಿವ್ಯ ತಿನಿಸು ಆವರಿಸಿಕೊಂಡಿದೆ.

ಚಕ್ಕುಲಿ ಮತ್ತು ಹೊಳಿಗೆ (ಪೂರನ ಪೋಳಿ) ಇವೆರಡು ತಿಂಡಿಗಳಿಗೆ ನಾವು ಹಬ್ಬಗಳನ್ನೂ ಬ್ರಾಂಡ್ ಮಾಡಿದ್ದೇವೆ ,ಅಮ್ಮ ಚವತಿಗೆ ಚಕ್ಕುಲಿ, ಯುಗಾದಿಗೆ ಹೊಳಿಗೆ ಮಾಡೋದು ವಾಡಿಕೆ.ಆದರೆ ಆ ಚಕ್ಕುಲಿಯ ಕತೆಗಳು ಮಾತ್ರ ಸಿಕ್ಕಾಪಟ್ಟೆ ರಸವತ್ತಾಗಿವೆ. ಚಕ್ಕುಲಿಯ ಪ್ರತಿ ಸುತ್ತಿಗೂ ನನ್ನ ಹತ್ತಿರ ಕತೆಯೊಂದಿದೆ. ಒಂದಷ್ಟು ನಿಮ್ಮೊಂದಿಗೂ ಹಂಚಿಕೊಳ್ಳುವ ಅನಿಸಿತು. 

ಊರಿನಲ್ಲಿ ನಮ್ಮ ಮನೆ ಮುಂದೆ ಸಾರಸ್ವತ ಕುಟುಂಬವೊಂದು ನೆಲೆಸಿತ್ತು ಅವರ ಮನೆಯನ್ನ ನಾವು 'ಎದುರುಮನೆ' ಅನ್ನೋದೇ ರೂಡಿ. ಆ ಮನೆಯ ಹಿರಿಯರನ್ನ ಅವರ ಮಕ್ಕಳು ಕರೆದಂತೇ ನಾವು ಕೂಡ ಆಯಿ, ಪಪ್ಪಾ ಅಂತಲೇ ಕರೆಯುತ್ತಿದ್ದೆವು. ನಮ್ಮಲ್ಲಿ ಗಣಪತಿ ಇಲ್ಲದ ಕಾರಣ ಚವತಿಯ ಸಕಲ ಸಂಭ್ರಮ ನಾನು ಕಂಡಿದ್ದು ಅವರ ಮನೆಯಲ್ಲಿ. ಚವತಿಗೆ ಚಕ್ಕುಲಿ ಮಾಡುತ್ತಿದ್ದಾಗ ಅವರು ಹರಕೆ ಹೊರುತಿದ್ದರು, ಕೆಲವೊಮ್ಮೆ ಸರಿ ಆಗದಿದ್ದರೆ ''ಯಾವಳ್ ಹಾಳಾದ ಕಣ್ಣೋ ......'' ಅಂತ ಬೈಯ್ಯೋಕ್ ಶುರು ಮಾಡಿದ್ರೆ ಕೂತ ಗಣಪ್ಪ ಎದ್ದು ಓಡಿ ಹೋಗಿ ಮತ್ತೆರಡು ವರ್ಷ ಬರಬಾರದು ಆ ರೀತಿ ವಟ ವಟ ಮಾಡೋರು. 

ಇನ್ನೊಂದು ಚಕ್ಕುಲಿ ಕತೆ ನನ್ನ ಅಕ್ಕವರ (ಟೀಚರ್) ಮನೇದು. ಅವರು 'ಅಮಿತಾ ನಮ್ಮನೆ ಚಕ್ಕುಲಿ ರುಚಿ ನೋಡ್ತೀಯ?' ಅಂತ ಕೇಳಿ ೨ ಚಕ್ಕುಲಿ ಅದೇ ಸೈಜಿನ ಪ್ಲೇಟ್ ನಲ್ಲಿ ಹಾಕಿ ತಂದು ಮುಖದ ಮುಂದೆ ಆರತಿ ತಟ್ಟೆ ಥರ ಹಿಡಿಯೋರು. ಈ ಮೊದಲೇ ಹೇಳಿದಂತೆ ಅದು ರುಚಿ ನೋಡೋಕಷ್ಟೆ ಸಿಗೋ ಚಕ್ಕುಲಿ, ಅಪ್ಪಿ ತಪ್ಪಿ ರುಚಿ ಇಷ್ಟ ಆಗಿ ನಿಮಗೆ ಮತ್ತೆ ಆ ರುಚಿ ಕಾಣಬೇಕೆಂದರೆ ಒಂದ ವರ್ಷ ಕಾಯಬೇಕು. ಕಾಯುವಿಕೆಯ ಸುಖದ ಅಂತ್ಯಕ್ಕೆ ಮತ್ತೆ ಸಿಗುವುದು ಮತ್ತೆರಡೆ ಚಕ್ಕುಲಿ. 

ನಾನು ತಿಂದ ಸೂಪರ್ ಡ್ಯೂಪರ ಚಕ್ಕುಲಿ ಅಂದರೆ ನನ್ನ ಪಪ್ಪನ ಆತ್ಮೀಯ ಸ್ನೇಹಿತ ವಾಮನ್ ಮಾಮನ ಮನೇದು ಅದೇನು ಹಾಕ್ತಿದ್ರೋ, ಬಾಯಲ್ಲಿಟ್ಟರೆ ನೀರು ಆಗೋದು ಚವತಿಯಲ್ಲಿ ಗಣಪ್ಪನಿಗಿಂತ ನಾನು ನನ್ನ ತಂಗಿ ಅವರ ಮನೇ ಚಕ್ಕಲಿ ಬರೋದೆ ಕಾಯುತ್ತಿದ್ದೆವು.

 ಮತ್ತೊಂದು ಚಕ್ಕುಲಿ ನೆನಪು ನನ್ನ ಮಮ್ಮಮ್ಮ (ಅಮ್ಮಮ್ಮ ) ಮಾಡೋ ಚಕ್ಕುಲಿದು. ಆಕೆ ಚಕ್ಕುಲಿಗಿಂತ ತೆಂಗೊಳೋಲು ಅನ್ನೋ ಚಕ್ಕುಲಿಯ ಸೋದರ ಸಂಬಂಧಿಯನ್ನು ಜಾಸ್ತಿ ತಯಾರಿಸೋಳು.ಅಕ್ಕಿ ನೆನೆಸಿಟ್ಟು ಮಾಡುವ ಈ ತಿಂಡಿಗೆ ಬೇಕಾಗೋ ಹಿಟ್ಟನ್ನು ಆ ಬಾವಿ ಬಾಯಿಯ ಒರಳಲ್ಲಿ ರುಬ್ಬಿ ರುಬ್ಬಿಯೇ ಇರಬೇಕು ನನ್ನ ಮಮ್ಮಮ್ಮ ೧೨ ಹೆತ್ತರೂ ಆಕೆಯ ಹೊಟ್ಟೆ ಸಪಾಟು. 

 ಈ ಚಕ್ಕುಲಿ ಬಗೆಗೆ ತೀರದ ಆಕರ್ಷಣೆ ಹುಟ್ಟಿಸಿದ್ದು ಅವರಿವರ ಬಯಕೆ ಊಟದ ಆರತಿಗೆಂದು ಮಾಡುತ್ತಿದ್ದ ೫/೭/೯ ಸುತ್ತಿನ ಚಕ್ಕುಲಿಗಳು. ಒಮ್ಮೆ ಅಷ್ಟು ದೊಡ್ಡ ಚಕ್ಕುಲಿ ಮಾಡಿ ಒಬ್ಬಳೇ ತಿನ್ನಬೇಕು ಅನ್ನೋ ಕನಸು ಇನ್ನೂ ನನಸಾಗಿಲ್ಲ. 

ಇನ್ನು ನನ್ನ ಅಮ್ಮನ ಚಕ್ಕುಲಿ ತಯಾರಿ ಬಗ್ಗೆ ಹೇಳದಿದ್ದರೆ ನನ್ನ ಬರಹ ಅಪೂರ್ಣ ,ಅಮ್ಮ ಚವತಿಗೆ ಒಂದು ವಾರ ಮೊದಲು ಅಕ್ಕಿ,ಹುರಿದ ಉದ್ದಿನಬೇಳೆ ಸ್ವಲ್ಪ ಪುಟಾಣಿ ಸೇರಿಸಿ ದೊಡ್ದ ಸ್ಟೀಲಿನ ಡಬ್ಬಿಯಲ್ಲಿ ಹಾಕಿ ಗಿರಣಿಗೆ ಒಯ್ಯಲು ಆಜ್ಞೆ ಮಾಡುತ್ತಿದ್ದಳು. ಅದರೊಂದಿಗೆ ಪಾಲಿಸಲೇ ಬೇಕಾದ ಕೆಲವು ನಿಯಮ/ಕಂಡೀಷನ್ ಇರುತ್ತಿದ್ದವು 

1.ಆ ಡಬ್ಬಿಯನ್ನು ನಮ್ಮ ಪಟಾಲಂ ನ ಯಾರು ಮುಟ್ಟಬಾರದು.

2.ಆ ಚಕ್ಕುಲಿ ಹಿಟ್ಟು ಬೀಸುವ ಮೊದಲು ನಮ್ಮದೇ ಮನೆಯ ಅಕ್ಕಿ ಅಥವಾ ಗೋದಿ ಬೀಸಬೇಕು.

3.ತಪ್ಪಿಯೂ ಕೂಡ ಅದರಲ್ಲಿನ ಅಕ್ಕಿಗೂ ನಮ್ಮ ಬಾಯಿಗೂ ಯಾವುದೇ ಮುಖಾ ಮುಖಿ ಆಗಬಾರದು .

4.ಚಕ್ಕುಲಿ ಸರಿಯಾಗದಿದ್ದರೆ ಸಿದ್ದ ಮಾಡಿದ ಹಿಟ್ಟಾದರೂ ಸರಿ ಅದನ್ನ ಗಿರಣಿಯವನ ತಲೆಗೆ ತಂದು ತಿಕ್ಕುತ್ತೇವೆ ಎಂದು ಹೇಳು. ಅನ್ನುವ ಮಾತು ಹೇಳಿದ ನಂತರ.
 ೨ ನಿಮಿಷ ಬಿಟ್ಟು ,ಹೇಳಗೀಳೀಯ ಜಾಗ್ರತೆ! ಅಂದಾಗ ಅಮ್ಮ ತುಂಬ ಮುದ್ದಾಗಿ ಕಾಣಿಸುತ್ತಿದ್ದಳು.

ಈ ೪ ಆಜ್ಞೆಗಳಲ್ಲಿ ನಾವು ಎರಡನೆಯ ಮಾತನ್ನು ಮಾತ್ರ ಪಾಲಿಸುತ್ತಿದ್ದುದು. 
ಉಳಿದಿದ್ದು ನಮ್ಮ ಮತ್ತು ಗಣಪನ understanding. ಅಕ್ಕಿಯೊಂದಿಗೆ ಹುರಿದ ಉದ್ದಿನಬೇಳೆ ಬರಿ ಬಾಯಲ್ಲಿ ಎಂದಾದರೂ ತಿಂದಿದ್ದೀರ? ಅದೊಂಥರ ಸಿನಿಮ ನೋಡ್ತಾ ಕಡಲೆ ಬೀಜ ತಿಂದಂತ ಅನುಭವ ಕೊಡುತ್ತೆ.ಗಿರಣಿಯಲ್ಲಿ ನಮ್ಮ ಸರದಿ ಬರೊ ತನಕ ನಾವು ಅದನ್ನು ಅಷ್ಟೇ ಅಪ್ಯಾಯಮಾನವಾಗಿ ಸವಿಯುತ್ತಿದ್ದೆವು.ಉಳಿದದ್ದು ಅಮ್ಮನ ಬಾಯಲ್ಲಿ ಕೇಳಲಷ್ಟೇ ಚಂದ.ಇದು ಚಕ್ಕುಲಿ ತಯಾರಾಗುವ ಕತೆ. ತಯಾರಾದ ಮೇಲೆ ಅದರ ನಿಜವಾದ ಮಜ ಅಲ್ವೇ??

ಚಕ್ಕುಲಿ ಯಾವತ್ತು ಬಿಸಿ ಬಿಸಿ ತಿನ್ನಬಾರದು,ರವೆ ಉಂಡೆ ಕಡಬು ಕರ್ಜಿಕಾಯಿ ,ಚಕ್ಕುಲಿ ಹಿಟ್ಟಲ್ಲಿ ಮಾಡಿದ ಪೈಸೆ ವಡೆ ಎಲ್ಲವು ಖಾಲಿ ಆಗುತ್ತಿದ್ದಾಗ ,ಮಾತ್ರ ಆ ಚಕ್ಕುಲಿಯ ನಿಜ ರುಚಿ ಅರಿವಾಗೋದು. ಚಕ್ಕುಲಿ ಡಬ್ಬಿ ತಳ, ಪಾತಾಳ ರಸಾತಳ ಅನ್ನೋ ಶಬ್ಧಗಳ ಮೂರ್ತ ರೂಪ.

ಇನ್ನು ಚಕ್ಕುಲಿಯನ್ನು ಹೇಗೆ ಹೇಗೆ ತಿನ್ನಬಹುದು?('ಬಾಯಿಂದ' ಅನ್ನೋ Funny ಉತ್ತರದ ನಂತರ ಮುಂದೆ ಓದಿಕೊಳ್ಳಿ ) ಹಸಿ ಕೊಬ್ಬರಿ ತುರಿಯೊಂದಿಗೆ ಮೊದಲ ಪ್ರಯೋಗ ,ಅಮ್ಮ ಸಾರಿಗೆ ಅಂತ ತುರಿದಿಟ್ಟ ಕೊಬ್ಬರಿ ಇಟ್ಟಲ್ಲೇ ಮಾಯ. ನಂತರ ಆ ದಿನದ ಸಾಂಬಾರ್ ಜೊತೆಗೆ ಅದ್ದಿ ಚಕ್ಕುಲಿಯನ್ನ ಸಾಂಬಾರನಲ್ಲಿ ಸ್ವಿಮ್ಮಿಂಗ್ ಮಾಡಿಸಿ ತಿನ್ನದಿದ್ದರೆ ಅದನ್ನು ಚಕ್ಕುಲಿ ಸೀಸನ್ ಅನ್ನೋದೇ ಇಲ್ಲ ಬಿಡಿ. 
ಪಂಚಕಜ್ಜಾಯದಲ್ಲಿ ಚಕ್ಕುಲಿಯನ್ನ ಚಮಚೆಯಂತೆ ಬಳಸಿ ತಿನ್ನುವುದು ಇನ್ನೊಂದು ರೀತಿ.
ಚಕ್ಕುಲಿ ಘಟ್ಟಿ ಇದ್ದರು ,ನುರಿ ನುರಿ ಆಗಿ ಬಾಯಲ್ಲೇ ನೀರಾಗುತ್ತಿದ್ದರೂ ಯಾವುದೇ ಭೇದವಿಲ್ಲದೆ ಪ್ರಯೋಗಿಸಬಹುದಾದ ರುಚಿ ಚಹಾ ಕಪ್ಪಿನಲ್ಲಿ ಚಕ್ಕುಲಿ ಹಾಕಿ 1 ನಿಮಿಷ ವಿರಮಿಸಲು ಬಿಟ್ಟು ಚಹಾ ಕುಡಿಯುತ್ತಲೇ ಅದರಲ್ಲೇ ನೆನೆದ ಚಕ್ಕುಲಿ ತಿನ್ನುವುದು. ವಿಚಿತ್ರ ಅನ್ನಿಸಿದರೂ ಇದರ ರುಚಿ ಸವಿದವನಿಗೆ ಈಗಾಗಲೇ ಚಕ್ಕುಲಿ ಚಹಾ ಕೈಬೀಸಿ ಕರೆದಿರುತ್ತದೆ. 

ಇನ್ನು, ನನ್ನ ಅಜ್ಜಿ! ಆಕೆಗೆ ಹಲ್ಲಿಲ್ಲ ಆದರವಳು ನನ್ನಜ್ಜಿ! ನನ್ನಲ್ಲಿ ಅಡುಗೆ ಬಗೆಗೆ ಪ್ರೀತಿ, ಊಟ ತಿಂಡಿಗಳ ಬಗ್ಗೆ ಅಪರಿಮಿತ ಭಕ್ತಿ ಬರಲು ಅವಳೇ ಕಾರಣ. ಅವಳ ನಾಲಿಗೆಗೂ ಅಮಿತ ರುಚಿಯ ಬಯಕೆ ,ಬಾವಿ ಮುಖದ ಅಷ್ಟೇ ಆಳದ ಆ ರುಬ್ಬುಗುಂಡಿನ ಮೇಲೆ ಇಟ್ಟಿರುವ ಪುಟ್ಟ ಗುಂಡಕಲ್ಲನ್ನು ಉರುಟುರೂಟು ಚಕ್ಕುಲಿ ಮೇಲೆ ನಿರ್ದಯತೆಯಿಂದ ಜಜ್ಜಿ ಜಜ್ಜಿ ಅದರ ಪುಡಿ ತಿಂದು ಆಸ್ವಾಧಿಸುತ್ತಾಳೆ,ಮತ್ತೆ ಆ ಚಕ್ಕುಲಿಯ ಬಗ್ಗೆ ಧೀರ್ಘವಾದ ಅನಿಸಿಕೆ ವ್ಯಕ್ತಪಡಿಸಿ ಇನ್ನೆರಡು ಚಕ್ಕುಲಿ ಜಜ್ಜಿ ಸಮಾರೋಪ ಸಮಾರಂಭವನೂ ನಡೆಸಿ ಬಿಡ್ತಾಳೆ. 
 .
ಇನ್ನು ನಾನು ಮೊದಲ ಬಾರಿ ಚಕ್ಕುಲಿ ಮಾಡಿದ ಕಥೆ ಇಂತಿದೆ. ೨೦೧೧ ರಲ್ಲಿ ನಾವು ನ್ಯೂರಿ ಎಂಬ ಊರಿನಲ್ಲಿ ಇದ್ದೆವು. ಚವತಿಗೆ ಒಂದಷ್ಟು ಸ್ನೇಹಿತರನ್ನು ನಮ್ಮ ಮನೆಗೆ ಊಟಕ್ಕೆ ಕರೆದಿದ್ದೆವು. ಚವತಿ ಅಂದ ಮೇಲೆ ಚಕ್ಕುಲಿ ಇಲ್ಲದಿದ್ದರೆ? ಇಲ್ಲಿ ಗಿರಣಿಯು ಇಲ್ಲ ಮಿಕ್ಸಿಯೂ ಇಲ್ಲ ಎರಡರ ಅಗತ್ಯ ಇರದೇ ಆಗುವಂಥ ರೆಸಿಪಿಯನ್ನು youtube ಅಲ್ಲಿ ಹುಡುಕಿ, ಒಟ್ಟಿನಲ್ಲಿ ಚಕ್ಕುಲಿ ಹಿಟ್ಟು ರೆಡಿ ಮಾಡಿದೆ, ಚಕ್ಕುಲಿ ಅಚ್ಚು ,ಒತ್ತು ಎರಡು ಇರಲಿಲ್ಲ ಅದಕ್ಕೇನಂತೆ ಅನ್ನೋ ಉಡಾಫೆಯಲ್ಲಿ ಕೇಕ್ ಡೆಕೋರೇಟ್ ಮಾಡುವ ಪೈಪಿಂಗ್ ಬ್ಯಾಗ್ ನಲ್ಲಿ ಚಕ್ಕುಲಿ ಹಿಟ್ಟು ಹಾಕಿ ಕೊನೆಪಕ್ಷ ಚಕ್ಕುಲಿಯಂತೆ ಕಾಣುವಂಥದ್ದು ಏನಾದರೊಂದು ಮಾಡೋಣ ಅಂತ ಪ್ರಯತ್ನಿಸಿದೆ , ಆದರೆ ಅದು ಜಲೆಬಿಯಂತೆ ಕಾಣುತಿತ್ತು, ಸಿಹಿಯಲ್ಲದ ಜಲೇಬಿ! ಚಕ್ಕುಲಿ ಪ್ರಯೋಗ ವಿಫಲವಾಗಿದ್ದಕ್ಕೆ ಖೇದವಾಗಿತ್ತು. 

ಆ ನಂತರದ ವರುಷ ಭಾರತಕ್ಕೆ ಹೋದಾಗ ತಂದ ಚಕ್ಕುಲಿ ಅಚ್ಚಿನಲ್ಲಿ ಚಕ್ಕುಲಿ ತಯಾರಿಗೆ ಬೋಣಿ ಮಾಡಿ ಬಿಡೋಣ ಅನ್ನಿಸಿತು ,ಆಗ ಮಾತ್ರ ಚಕ್ಕುಲಿ ಚಕ್ಕುಲಿಯಂತೆಯೇ ಕಂಡು ರುಚಿಯು ಅದರಂತೆಯೇ ಇತ್ತು. 

 ಆ ದಿನ ಚಕ್ಕುಲಿ ತುಂಬಿದ ಡಬ್ಬಿಯನ್ನ ಪಕ್ಕದಲ್ಲಿ ಇಟ್ಟುಕೊಂಡು ನನ್ನ ಕಾರ್ಯಕ್ರಮದ ರಿಹರ್ಸಲಗೆಂದು ನಾನು, ಪತಿದೇವ, ಮತ್ತು ಮಗ ಬೆಲ್ಫಾಸ್ಟ್ ಗೆ ಹೊರಟೆವು, ಆ ದಿನ ಆ ಚಕ್ಕುಲಿ ಡಬ್ಬಿಯಲ್ಲಿ ಕೈಯ್ಯಾಡಿಸಿದಷ್ಟು ಮದುವೆ ದಿನ ಓಕುಳಿ ನೀರಿನಲ್ಲಿ ಚಿನ್ನದುಂಗುರಕ್ಕೂ ನಾವಿಬ್ಬರು ತಡಕಾಡಿರಲಿಲ್ಲ, ಶತಶತಮಾನಗಳಿಂದ ಹಸಿದಿರುವವರಂತೆ ವರ್ತಿಸುವ ನಮ್ಮಿಬ್ಬರ ಮುಖ ನೋಡುತ್ತಿದ್ದ ನನ್ನ ಮಗ, 'ಅಷ್ಟು ಹಸಿವೆ ಆಗಿದ್ರೆ ಹೋಟೆಲ್ ಗೆ ಹೋಗೋಣ್ವ?' ಅನ್ನೋ ಪ್ರಸ್ತಾಪ ಮುಂದಿಟ್ಟಿದ್ದ .

ಉಪಸಂಹಾರ 
ಚಕ್ಕುಲಿ ಅನ್ನೋದು ಸೊಕ್ಕು ಮುರಿಯೋ ಖಾದ್ಯ, ಎಷ್ಟು ಅನುಭವವಿದ್ದರೂ ಒಮ್ಮೊಮ್ಮೆ ಕೈಕೊಡುವುದುಂಟು. ಒಮ್ಮೆ ಕಲ್ಲುಗುಂಡು , ಮತ್ತೊಮ್ಮೆ ಹೂವಿನಂತೆ ಹಗುರ , ಕೆಲವೊಮ್ಮೆ ಎಣ್ಣೆಯಲ್ಲಿ ಹಾಕಿದ ಚಕ್ಕುಲಿ ಅಲ್ಲೇ ಮಾಯ, ಮಗದೊಮ್ಮೆ ಎಣ್ಣೆ ಕುಡಿದು ಫುಲ್ ಟೈಟ್ ಆದ ಚಕ್ಕುಲಿಗಳು, ಈ ಚಕ್ಕುಲಿ ನಮ್ಮ ಮನಸ್ಥಿತಿಯನ್ನು ಸೂಚಿಸುತ್ತವಾ? ಮಹತ್ತರ ಜೀವನ ಪಾಠ ಕಲಿಸುತ್ತವಾ? ಅನ್ನೋ ಉಚ್ಛ ಆಲೋಚನೆ ತಲೆಯಲ್ಲಿ ಬಂದಾಗ ನಾನು ನನ್ನನು ತತ್ವ ಬಾರದ ಜ್ಞಾನಿ ಆದೇನೇನೋ ಅನ್ನುವ ಭಯವು ಕಾಡುವುದುಂಟು. 

ಮೊದಲ ಚಕ್ಕುಲಿ ರೆಸಿಪಿ ನಂತರ ನಾನು ಏನೇನೋ ಪ್ರಯೋಗ ಮಾಡಿ ಬಹುಮಟ್ಟಿಗೆ ಅದನ್ನ ಒಲಿಸಿಕೊಂಡಿದ್ದೇನೆ. ರೆಸಿಪಿ ಇಲ್ಲಿದೆ.ಹಬ್ಬಕ್ಕೆ ಕಾಯಬೇಕಂತ ಇಲ್ಲ ಮನಸು ಬಂದಾಗ ಮಾಡಿ ಸವಿಯಿರಿ. ಚನ್ನಾಗಿ ಬಂದರೆ ನನ್ನ ನೆನೆಸಿಕೊಳ್ಳಿ, ಹಿಟ್ಟಿನ ಹದ ತಪ್ಪಿ ಚಕ್ಕುಲಿ ಸರಿ ಬರಲಿಲ್ಲ ಅಂತಾದರೆ ಈ ರೆಸಿಪಿಗೂ ನನಗೂ ಸಂಬಂಧ ಇಲ್ಲ ಅಂತ ಮೊದ್ಲೇ ಹೇಳಿಬಿಡ್ತೀನಿ!

೩ಕಪ್ ಅಕ್ಕಿ ಹಿಟ್ಟು 
೧ ಕಪ್ ಉದ್ದಿನಬೇಳೆ ಹುರಿದು ಮಾಡಿದ ಪುಡಿ.
ಬಿಳಿ ಎಳ್ಳು, ಜೀರಿಗೆ ,ಒಂದೊಂದು ಚಮಚ , ಚಿಟಿಕೆ ಇಂಗು
ಸ್ವಲ್ಪ ಬೆಣ್ಣೆ 
ಉಪ್ಪು ರುಚಿಗೆ ,
(optional - ಶುಂಟಿ ಬೆಳ್ಳುಳ್ಳಿ ಕರಿಬೇವು ಹಸಿಮೆಣಸು ಜೀರಿಗೆ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಂಡ್ ಮಸಾಲೆ ಸೇರಿಸಬಹುದು.)

 ೧, ಅಕ್ಕಿ ಹಿಟ್ಟು +ಉದ್ದಿನ ಹಿಟ್ಟು+ಬೆಣ್ಣೆ +ಜೀರಿಗೆ+ಬಿಳಿ ಎಳ್ಳು +ಉಪ್ಪು=ಎಲ್ಲ ಸೇರಿಸಿ 
 ಚನ್ನಾಗಿ ಕಲಿಸಿಕೊಳ್ಳಿ ,ಈಗ ಮಿದುವಾದ ಹಿಟ್ಟು ಸಿದ್ಹವಾಗುತ್ತದೆ,
ಚಕ್ಕುಲಿ ಒತ್ತಲ್ಲಿ ಹಾಕಿ ಚಕ್ಕುಲಿ ಮಾಡಿ ಗರಿ ಗರಿಯಾಗಿ ಕರಿದು ಸವಿಯಿರಿ. 

 ಈ ಬರಹ ಓದಿದ ಮೇಲೆ ನಾನು ಅದೆಷ್ಟು ಭೂಕಿ ಪ್ಯಾಸಿ ,ಅನ್ನೋದು ನಿಮಗೇ ಗೊತ್ತಾಗಿರುತ್ತದೆ ಇನ್ನುಮೇಲೆ ಯಾರಾದರು ತಮ್ಮ ಮನೆಗೆ ನನ್ನ ಕರೆಯುವ ಮುನ್ನ ನೂರು ಬಾರಿ ಯೋಚಿಸೋದಂತು ಖಂಡಿತ. ಆದರೂ ನನ್ನಂಥ ಮನಸವರು ಬಹಳಷ್ಟು ಜನ ಇರ್ತಾರೆ ಅನ್ನೋ ಭರವಸೆ ಮೇಲೆ ಇದನ್ನು ಬರೆಯುವ ಧೈರ್ಯ ಮಾಡಿದೆ. 
ಅನಿವಾಸಿ ಬಳಗದ ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. 
*****
ಶ್ರೀರಂಜನಿ ಅವರ ಗೀತ ನಮನ

3 thoughts on “ಗೌರಿ ಗಣೇಶ ಹಬ್ಬದ ವಿಶೇಷಾಂಕ ಭಾಗ ೨ – ನೆನಪುಗಳ ಮೆರವಣಿಗೆ

 1. ಗಣೇಶನೊಂದಿಗೆ ಎಲ್ಲರ ನೆನಪುಗಳ ಮೆರವಣಿಗೆಯೂ ಜೋರಾಗಿದೆ. ಮುರಳಿಯವರು ಮೊದಲ ಪ್ಯಾರಾದಲ್ಲಿ ಬರೆದಂತೆ ನೆನಪುಗಳ ಜಾಡಿ ಮಾಂತ್ರಿಕ ಛಡಿಯಿದ್ದಂತೆ. ಭೂತಕಾಲದ ರೀಲನ್ನು ಜುಯ್ ಅಂತ ತಿರುಗಿಸಿ ವರ್ತಮಾನಕ್ಕೆ ತಂದು ಬಿಡುತ್ತವೆ. ರಾಮ್ ಅವರ ಅಂಕೋಲಾ ನಮಗಿಲ್ಲಿ ಯುಕೆಯಲ್ಲಿಯೇ ನೋಡಸಿಕ್ಕಿತು. ಫಲಾವಳಿ ಬಗ್ಗೆ ಈಗಲೇ ಗೊತ್ತಾದದ್ದು. ಇನ್ನು ಯಾಮಿನಿಯ ಗಣಪ್ಪ ಅವಳ ಅಪ್ಪನನ್ನೂ ಮೀರಿಸಿದ್ದು ಬಹಳ ಹೆಮ್ಮೆಯ ವಿಷಯ. ಬೆಳೆವ ಸಿರಿ ಮೊಳಕೆಯಲ್ಲಿ. ಅಮಿತಾರ ಚಕ್ಕುಲಿ ಪುರಾಣದ ಸುತ್ತುಗಳು ಲೆಕ್ಕಕ್ಕೇ ಸಿಗಲಿಲ್ಲ..ಸುತ್ತಿನ ಲೆಕ್ಕವೇಕೆ ಸುಮ್ಮನೇ ಸವಿದರಾಯ್ತಲ್ಲವೇ? ನಿಜ ಹೇಳಬೇಕೆಂದರೆ ಚಕ್ಕುಲಿ ನನಗೊಲಿಯದ ಖಾದ್ಯ. ಈ ಸಲ ಅಮಿತಾರ ರೆಸಿಪಿ ಅನುಸರಿಸಿ ಅದನೊಲಿಸಿಕೊಳ್ಳುವ ಪ್ರಯತ್ನ ಮಾಡುವೆ. ರಂಜಿನಿಯವರ ಗಾಯನ ಎಂದಿನಂತೆ ಸುಶ್ರಾವ್ಯ. ವಿದ್ಯಾಧಿದೇವತೆಯ ಹಬ್ಬದಂದು ಇಂಥ ವೈವಿಧ್ಯಮಯ ಅಕ್ಷರದೂಟವನ್ನು ತಮ್ಮ ಹಸಿರಾದ, ಹಸನಾದ ಸಂಪಾದಕೀಯದೊಂದಿಗೆ ಉಣಬಡಿಸಿದ ಪ್ರಸಾದ್ ಅವರಿಗೆ ಅಭಿನಂದನೆಗಳು. 💐 ಗೌರಿಪ್ರಸನ್ನ.

  Like

 2. ಗಣೇಶ ಹಬ್ಬಕ್ಕೆ ಬಂದ ‘ಬಂಪರ್’ಸಂಚಿಕೆ ಇದು! ಕೃಶವಾಗಿದ್ದ ಹೋದವರದ ಗೌರಿಗೆ ಕಾಂಪೆನ್ಸೇಟ್ ಮಾಡುವಂತೆ!

  ಮೊತ್ತ ಮೊದಲಾಗಿ – ಗಣಪನಿಗಿಂತ- ಗೌರಿ ಪ್ರಸನ್ನ ಅವರಿಗೆ ಹ್ಯಾಪಿ ಬರ್ತ್ ಡೇ! ಅದೃಷ್ಟವಂತರು, ಅವರ ಹೆಸರಿನಲ್ಲಿ ಎಲ್ಲರಿಗೂ ಮನೆಯಲ್ಲಿ ಸಿಹಿ ಕಡಬು ತಿಂಡಿ ಎಲ್ಲ. ಅವರ ಹುಟ್ಟಿನಲ್ಲೂ ಪರಫೆಕ್ಟ್ ಟೈಮಿಂಗ್ – ಟೈಮ್ ಪ್ರಕಾರ ಬಂದ ಬರಹದ ತುಂಬ ನೊಸ್ಟಾಲ್ಜಿಯಾ! ಬಳೆದು ಬಳೆದು ತಿನ್ನುವಷ್ಟು. ಇಜಾರದ ವಿಜಾಪುರದಲ್ಲಿ ಅದೆಂಥ ಸಹಿಷ್ಣುತೆ! ಅವರ ಲಿಸ್ಟಿನ ಮೀಟರಿನಷ್ಟು ಬರೆಯಲಾರೆ. ಲೇಖನದ ಕೊನೆಯಲ್ಲಿ ಆ ಮುಗ್ಧ ಸಂಭ್ರಮಕ್ಕೆ ಕೊರಗಿದವರು ಅವರಲ್ಲದೆ, ಅಷ್ಟೇ ಸುಂದರ ನೆನಪುಗಳ ಮೆರವಣಿಗೆಯ ಮೇಲೆ ನಮ್ನನ್ನು ತೇಲಿಸಿದ ಮುರಳಿ ಸಹ. ಪುಂಖಾನು ಪುಂಖ!

  ಹಾಗೆಯೇ ಇನ್ನೂ ತೇಲಿಸಿದವರು ತಮ್ಮ ಆರು ವಾರಗಳ ಕನಸಿನ ಲೋಕದಲ್ಲಿ- ರಾಮ್ ಶರಣ್ ಅವರ ಕರಾವಳಿಯ ಅಲೆಗಳಂತೆ ಮತ್ತೆ ಮತ್ತೆ ಅಪ್ಪಳಿಸುತ್ತವೆ ಅವರ ಬಾಲ್ಯದ ನೆನಪುಗಳೂ ಸಹ. ಅದೆಂಥ ವೈಭವ, ಅಮಿತ ಆನಂದ! ಅದು ಮಿತಿಮೀರಿದ್ದು ಅಮಿತಾ ರವಿಕಿರಣ್ ಅವರ ಚಕ್ಕುಲಿಯನ್ನು ನುರಿವಲ್ಲಿ! ಚಕ್ಕುಲಿಯನ್ನು ಚಮಚವನ್ನಾಗಿ ಮಾಡುವದು, ಡಂಕಿನ್ ಚಕ್ಕಲಿ ( ಡೋನಟ್ಟಲ್ಲ), ಇಂಥ ಅನೇಕ ವಿವರಗಳು. ಹೀಗೆ ಈ ಸಲದ ಹಬ್ಬದ ವರ್ಣನೆಯ ಜೊತೆಗೆ ತಮ್ಮ ಅಸಫಲ- ನಂತರ ಸಫಲ ಚಕ್ಕುಲಿಯ 5/7/11 ಸುತ್ತನ್ನು ಹಾಕಿ ಅದರ ರೆಸಿಪಿಯನ್ನು ಸಹ – ಅದಕ್ಕೆ disclaimer ಬೇರೆ!- ಕೊಟ್ಟು ಕೈಬಿಟ್ಟಿದ್ದಾರೆ!

  ಒಬ್ಬರಲ್ಲ ಇಬ್ಬರು ಗುಡೂರರ (ತಂದೆ-ಮಗಳು) ರೇಖಾ ಚಿತ್ರಗಳು ಕಳೆಯನ್ನು ಏರಿಸಿವೆ. ಉಚ್ಚ ಥಳಿ ಜೀನ್ಸು -ಬರೀ ತಿನ್ನಲಿಕ್ಕಲ್ಲ ಈ ವಾರ, ನೋಡಲಿಕ್ಕೂ. ಇವೆಲ್ಲಕ್ಕೂ ಒಳ್ಳೆಯ ಸಮೀಚೀನವಾದ ಸಂಪಾದಕೀಯದೊಂದಿಗೆ ಕಲರ್ ಕಾಂಬಿನೇಷನ್ block editing ಸಹ ಕೊಟ್ಟು ಸಂಪಾದಕರು ಬಣ್ಣ ಹೆಚ್ಚಿಸಿದ್ದಾರೆ. ಗುಡೂರರ ಗಣೇಶನ ಕೇಸರಿಗೆ ಒಪ್ಪವಾಗಿ ಒಂದು ಬ್ಲಾಕ್ ಬಣ್ಣ; ಗೌರಿಮನೆಯ ಪ್ರಸನ್ನ ತಿಂಡಿಯ ಅರಿಶಿನಕ್ಕೆ ಅವರ ಬರಹದ ಫಲಕದ pastel colours; ರಾಮ್ ಅವರದು ಹಸಿರು – ಗ್ರೀನ್ ಫಲಾವಳಿಯಂತೆ; ಮರ್ಸಿಡಿಸ್ ಗುಡೂರ ಜೊತೆಗೆ ಹತ್ವಾರ ಮುರಳಿಯ ಗ್ರೇ ಕಲರ್, ಕೊನೆಯಲ್ಲಿ ಭೂಖಿ – ಪ್ಯಾಸಿ ಅಮಿತಾರ ಹಳದಿ ಡಬಲ್ ರೋ ಚಕ್ಕಲಿ combo … ಈ ಗಣೇಶನ ಹೊಟ್ಟೆಯಷ್ಟೇ ಉದ್ದವಾಯಿತು ಈ ಕಮೆಂಟು ಸಹ. ಕ್ಷಮಿಸಿ! ಶ್ರೀವತ್ಸ ದೇಸಾಯಿ

  Like

  • ಕೊನೆಯಲ್ಲಿ ಅದ್ಭುತವಾಗಿ ಜೋಷಿನಿಂದ ಹಾಡಿದ ಶ್ರೀರಂಜಿನಿಯವರ ಗಣೇಶ ನಮನವನ್ನು ಮೊದಲೇ ಹೇಳಬೇಕಿತ್ತಲ್ಲವೇ? ಚಂದ್ರನ ನೋಡಿದಂತೆ ತಪು ಮಾಡಿದೆನೇ? ಪ್ರಾಯಶ್ಚಿತ್ತ?

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.