ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.
ವಕ್ರತುಂಡ, ಮಹಾಕಾಯ, ಏಕದಂತ, ಡೊಳ್ಳುಹೊಟ್ಟೆಯ ಗಜವದನನಾದರೂ ಗಣೇಶ ವಿಘ್ನೇಶ್ವರ ಮತ್ತು ಎಲ್ಲರ ಪ್ರೀತಿಯ ಗಣ( ಜನರ) ಈಶ ( ನಾಯಕ). ಹಿಂದೂ ಧರ್ಮದ ಒಳಗೆ ಅದೆಷ್ಟೋ ಪಂಗಡಗಳಿದ್ದರೂ, ಅವೆಲ್ಲಕ್ಕೂ ಬೇರೆ ಬೇರೆ ದೇವರುಗಳಿದ್ದರೂ ಗಣೇಶ ನಮ್ಮೆಲ್ಲರನ್ನೂ ಒಂದುಗೂಡಿಸಿದ ದೇವರು! ಈ ಗೌರಿ ಪುತ್ರನಿಗೆ ಜೈವಿಕ ತಂದೆ ಇಲ್ಲದೆ, ಸ್ವತಃ ಗೌರಿಯೇ ತನ್ನ ಶಕ್ತಿಯಿಂದ ಅವನನ್ನು ಸೃಷ್ಟಿಸಿದ್ದರೂ, ಕುಪಿತನಾದ ಶಿವ ಅವನ ತಲೆತೆಗೆದು ಆನೆ ತಲೆ ಜೋಡಿಸಿದ್ದರೂ, ಅವನಲ್ಲಿ ಹಲವಾರು ಅಪೂರ್ಣತೆಗಳಿದ್ದರೂ ಅವನನ್ನು ಜನ ಸಾಮಾನ್ಯರು ದೇವರೆಂದು ಒಪ್ಪಿಕೊಂಡಿರುವುದು ನಮ್ಮಲ್ಲಿಯ ಸಹಿಷ್ಣುತೆಗೆ ಸಾಕ್ಷಿಯಾಗಿದೆ. ಗಣೇಶ ಜನ ಸಾಮಾನ್ಯರರಾದ ನಮ್ಮೊಳಗೇ ಇರುವ ಕುಂದು ಕೊರತೆಗಳ, ನಮ್ಮ ನಮ್ಮ ವಿಕಲತೆಯ, ನ್ಯೂನತೆಗಳ, ಅಪೂರ್ಣತೆಯ ತದ್ರೂಪ. ಬಹುಶ ಈ ಕಾರಣಕ್ಕಾಗಿ ಅವನು ಎಲ್ಲರ ಕಲ್ಪನೆಗೆ ನಿಲುಕುವ ದೈವ ಎನ್ನ ಬಹುದು. ದೇವರು ಎಂದ ಕೂಡಲೇ ಸ್ಫುರದ್ರೂಪಿಯಾಗಿ, ಪ್ರಕೃತಿಯ ವೈಭವಗಳ ನಡುವೆ ಕೈಲಾಸದಲ್ಲಿ, ಹಿಮಾವೃತ ಉತ್ತುಂಗ ಶಿಖರಗಳಲ್ಲಿ ಅಥವಾ ವೈಕುಂಠದಲ್ಲಿ ಇಲ್ಲವೇ ಬೃಂದಾವನದಲ್ಲಿ ಸುಂದರನಾಗಿ ಗೋಪಿಕಾ ಸ್ತ್ರೀಯರ ನಡುವೆ ಇರಬೇಕಿಲ್ಲ! ಗಣೇಶನಂತೆ ವಕ್ರವಾಗಿದ್ದರೂ ಅವನು ಇತರರಿಗಿಂತ ಹೆಚ್ಚು ಪ್ರಸ್ತುತ ! ಅವನಿಗೆ ಎಲ್ಲ ದೇವರಿಗಿಂತ ಅಗ್ರಸ್ಥಾನ. ವಿಘ್ನಗಳು ನಮ್ಮ ಬದುಕಿನ ಹಾಸುಹೊಕ್ಕು, ಅದನ್ನು ಎದುರಿಸುತ್ತಲೇ ಸಾಗುವುದು ನಮ್ಮ ಪಯಣ. ಅದನ್ನು ಹತ್ತಿಕ್ಕಲು ನಾವು ಮೊರೆಹೋಗುವ ದೈವ ವಿನಾಯಕ. ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನವೆಂಬ ಬೆಳಕು ಮೂಡ ಬೇಕಾದರೆ ನಮಗೆ ವಿನಾಯಕನ ಕೃಪೆ ಬೇಕು. ಈ ಕಾರಣಕ್ಕಾಗಿಯೇ ಅವನನ್ನು "ಸಿದ್ಧಿ ವಿನಾಯಕ ಬುದ್ಧಿ ಪ್ರಕಾಶಕ" ಎಂದು ಸಂಭೋದಿಸುತ್ತೇವೆ. ಈ ಮೇಲಿನ ಕಾರಣಕ್ಕಾಗಿ ಶಾಲಾ ಮಕ್ಕಳಿಗೆ ಗಣೇಶ ಇಷ್ಟ ದೈವ ವಾಗಿದ್ದಾನೆ. ಅಂದ ಹಾಗೆ ಸಿದ್ಧಿ ಬುದ್ಧಿ ಎಂಬ ಇಬ್ಬರ ಹೆಂಡಿರನ್ನು ಗಣೇಶ ಮದುವೆಯಾಗಿದ್ದಾನೆ. ಶಾರೀರಿಕವಾಗಿ ಅಷ್ಟು ದೊಡ್ಡ ದೇಹವುಳ್ಳ ಗಣಪತಿ ಒಂದು ಸಣ್ಣ ಇಲಿಯನ್ನು ವಾಹನವನ್ನಾಗಿ ಮಾಡಿಕೊಂಡಿರುವುದು ಕುತೂಹಲವಾದ ವಿಷಯ. ಇಲಿ ಸಣ್ಣದಾದರೂ ಅದು ಎಲ್ಲಕಡೆ ತೂರಿ ಅಡಚಣೆಗಳನ್ನು ದಾಟಿ ತನಗೆ ಬೇಕಾದುದನ್ನು ಪಡೆಯಲು ಶಕ್ತವಾಗಿರುವ ಪ್ರಾಣಿ, ಹೀಗಾಗಿ ವಿನಾಯಕನಿಗೆ ವಾಹನವಾಗಿರುವುದು ಸಾಂಕೇತಿಕವಾಗಿ ಸರಿಯಾಗಿದೆ.
ಗಣೇಶ ಹಬ್ಬದ ಮುಂಚೆ ಬರುವ ಗೌರಿ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ನಾವು ಸ್ತ್ರೀಯರಿಗೆ, ತಾಯಿಗೆ ನೀಡಿರುವ ಗೌರವ, ಸ್ಥಾನಮಾನಗಳ ಪ್ರತೀಕ ಎನ್ನಬಹುದು. ಹೆಣ್ಣಿಗೆ ಗಂಡನ ಮನೆ ಕರ್ಮಭೂಮಿಯಾದರೆ, ತವರು ಮನೆ ಜನ್ಮ ಭೂಮಿ. ಅವಳ ಮೂಲ ಬೇರು, ಬಾಂಧವ್ಯಗಳು ಇರುವದೇ ಅಲ್ಲಿ. ಗೌರಿ ವರ್ಷಕೊಮ್ಮೆಯಾದರೂ ತವರುಮನೆಗೆ ಬಂದು ಹೋಗುವ ಈ ಆತ್ಮೀಯ ಘಳಿಗೆಯೇ ಗೌರಿ ಹಬ್ಬ. ಗೌರಿ ಹಬ್ಬದ ಆಚರಣೆಯಲ್ಲಿ ಗೌರಿಗೆ ಯಾವ ಆಕಾರ, ರೂಪ ಕೊಡುವುದು? ಎಂಬ ವಿಚಾರ ಹಿಂದೆ ಸಮಸ್ಯೆಯಾಗಿರಬಹುದು. ಒಂದು ಆಕಾರ ಕೊಟ್ಟಮೇಲೆ ಅದನ್ನು ಹೇಗೆ ಸಿಂಗರಿಸುವುದು ಎನ್ನುವುದು ಇನ್ನೊಂದು ಜಟಿಲವಾದ ಸಮಸ್ಯೆ. ಅಕಾರ ಕೊಟ್ಟ ಸುಂದರ ಶಿಲಾಕೃತಿಯನ್ನು ಹಣ್ಣ ಕೊಟ್ಟು ಎಲ್ಲರೂ ಪಡೆಯಲು ಸಾಧ್ಯವಾಗದಿರಬಹುದು. ಹೀಗಾಗಿ ಬಡವರನ್ನು ಒಳಗೊಂಡಂತೆ, ಪ್ರತಿಯೊಂದು ಮನೆಯನ್ನು ಗೌರಿ ತಲುಪಲು ಸಾಧ್ಯವಾಗುವಂತಹ ಒಂದು ತಂಬಿಗೆಯಲ್ಲಿ, ತೆಂಗಿನಕಾಯಿ ಕಳಶವಿಟ್ಟು ಸೀರೆ ಅರಿಶಿನ ಕುಂಕುಮ ಬಳೆಗಳನ್ನು ಇರಿಸಿ ಗೌರಿ ಎಂದು ಭಾವಿಸುವುದು ಸರಳವಾದ ಕಲ್ಪನೆ. ಮುತ್ತೈದಿಯರಿಗೆ ಬಾಗಿಣ ಕೊಡುವ ಪದ್ಧತಿ ಸಮೃದ್ಧಿಯ, ಫಲವಂತಿಕೆಯ ಪ್ರತೀಕವಾಗಿದೆ. ಇತ್ತೀಚಿಗೆ ನಗರಗಳಲ್ಲಿ ಗಣೇಶನ ಜೊತೆ ಗೌರಿ ಕಲಾಕೃತಿಗಳು ದೊರೆಯುತ್ತವೆ. ನಮ್ಮ ನಮ್ಮ ಭಾವನೆಗಳಿಗೆ ಕಲ್ಪನೆಗಳಿಗೆ ಯಾವಾ ಯಾವ ಆಕಾರ, ರೂಪ ನಿಲುಕುವುದೋ ಅದೇ ದೇವರು! ಆದಿವಾಸಿಗಳಿಗೆ ಒಂದು ಕಲ್ಲು, ಮರದ ತುಂಡು, ಒಂದು ಮರ, ಒಂದು ನದಿ ಅದೇ ದೇವರು!
ಈ ವಾರದ ಅನಿವಾಸಿ ತಾಣದ ಗೌರಿ-ಗಣೇಶ ವಿಶೇಷ ಸಂಚಿಕೆ ಭಾಗ ಒಂದರಲ್ಲಿ, ಹಬ್ಬದ ಈ ಸಂದರ್ಭದಲ್ಲಿ ಕಿರಣ ರವಿಶಂಕರ್ ಆ ಹಬ್ಬದ ನೆನಹುಗಳನ್ನು ಕುರಿತು ಒಂದು ಕಿರು ಲೇಖನದ ಜೊತೆ ಒಂದು ಕವಿತೆಯನ್ನು ಸಹ ಬರೆದಿದ್ದಾರೆ. ಅವರಿಗೆ ಅನಿವಾಸಿ ಬಳಗದ ಪರವಾಗಿ ಸುಸ್ವಾಗತ. ಅವರ ಕಿರು ಪರಿಚಯವನ್ನು ಒದಗಿಸಿದ ಡಾ.ದೇಸಾಯಿ ಅವರಿಗೆ ಕೃತಜ್ಞತೆಗಳು. ಡಾ.ದಾಕ್ಷಾಯಿಣಿಯವರು ಗಣೇಶ ಹಬ್ಬದ ಕೆಲವು ಬಾಲ್ಯ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಶ್ರೀ ರಂಜನಿ ಸಿಂಹ ಅವರು ಗಣೇಶ ಸ್ತುತಿಯನ್ನು ಸುಮಧುರವಾಗಿ ಹಾಡಿ ಹಬ್ಬಕ್ಕೆ ಒಪ್ಪುವ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅವರ ವಿಡಿಯೋವನ್ನು ಕೆಳಗೆ ಒದಗಿಸಲಾಗಿದೆ.
-ಸಂಪಾದಕ
ಫೋಟೋ ಕೃಪೆ ಡಾ. ಕಿರಣ ರವಿಶಂಕರ್
ಗೌರಿ ಹಬ್ಬದ ನೆನಪುಗಳು - ಡಾ ಕಿರಣ ರವಿಶಂಕರ್, ಡೋಂಕಾಸ್ಟರ್
(’ನೀವು ಕನ್ನಡ ಮಾತಾಡುತ್ತೀರಾ?’ ನಮ್ಮೂರಿನ ಕೆರೆಯ ದಂಡೆಗುಂಟ ಮಾತನಾಡುತ್ತ ಹೊರಟ ನಮ್ಮ ಕಿವಿಯ ಮೇಲೆ ಬಿದ್ದ ಈ ವಾಕ್ಯವನ್ನು ಆನಂದಾಶಚರ್ಯದಿಂದ ಕೇಳಿ ತಿರುಗಿ ನೋಡಿದಾಗ ಕಂಡರು ತನ್ನಿಬ್ಬರು ಮಕ್ಕಳೊಂದಿಗೆ ಹೊರಟಿದ್ದ ಕಿರಣ! ಆಗ (2007) ನಮ್ಮ ಊರಲ್ಲಿ ಕನ್ನಡಿಗರು ಅಪರೂಪ. ಕನ್ನಡ ಬಳಗದ ಯಾರ್ಕ್ ಶೈರ್ ಶಾಖೆ (YSKB) ಆಗಿನ್ನೂ ಹುಟ್ಟಿರಲಿಲ್ಲ. ಅಂದಿನಿಂದ ಅಪ್ಪಟ ಕನ್ನಡ ಮಾತಾಡುವ, ಸಂಪ್ರದಾಯ ತಿಳಿದ ಕಿರಣ ಮತ್ತು ರವಿಯವರ ಮೈತ್ರಿ ಮತ್ತು ಅಡಿಗೆಯನ್ನು ಸವಿಯುತ್ತ ಬಂದಿದ್ದೇನೆ.ಇಲ್ಲಿ ಅವರು ತಮ್ಮ ಗೌರಿ ಹಬ್ಬದ ಸುಂದರ ನೆನಪುಗಳನ್ನು ಹಂಚಿ ಕೊಂಡಿದ್ದಾರೆ. -- ಶ್ರೀವತ್ಸದೇಸಾಯಿ)
ನಾವು ಪರದೇಶಕ್ಕೆ ಹೋಗುವಾಗ ನಮ್ಮ ಜೊತೆಗೆ ಭಾಷೆಯನ್ನಷ್ಟೇ ಅಲ್ಲದೆ ನಮ್ಮ ಮನೆ, ಕುಟುಂಬ, ಸಂಸ್ಕಾರ ಮತ್ತು ಬಾಲ್ಯದ ಹಿಂದಿನ ನೆನಪುಗಳನ್ನು ಸಹ ಒಯ್ದು ಗೂಡು ಕಟ್ಟಿಕೊಂಡಿರುತ್ತೇವೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಹಬ್ಬ-ಹರಿದಿನಗಳ ಆಚರಣೆ ತವರಿನ ನೆನಪಿಗೆ ಮುಖ್ಯ. ನಮ್ಮ ತಂದೆತಾಯಿಗಳಿಗೆ ದೊಡ್ಡ ಬಳಗ. ಅಜ್ಜಿ ತಾತರ ಒಂದು ಪುಟ್ಟ ಮನೆಯಲ್ಲಿ ಎಲ್ಲರೂ ಸೇರಿ 30ರಿಂದ 40 ಜನ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದುದು ಮತ್ತು ಭಜನೆ, ಸ್ತೋತ್ರ, ಹಾಡುಗಳನ್ನು ಹಾಡುತ್ತಿದ್ದುದರ ನೆನಪು ಇಂದಿಗೂ ಹಚ್ಚ ಹಸಿರಾಗಿದೆ. ಆ ಶಿವ -ಪಾರ್ವತಿಯರ ಸರಸ ಸಲ್ಲಾಪದ ಸಂಪ್ರದಾಯದ ಹಾಡಿನಲ್ಲಿ ಮತ್ತೆ ಮತ್ತೆ ಬರುವ ”ನಮ್ಮವರು ಬಡವರು ಇನ್ನೇನು ಕೊಡುವರು” ಅನ್ನುವ ಸಾಲನ್ನು ಭಾವಪೂರ್ವಕವಾಗಿ ನನ್ನ ತಾಯಿ ಹಾಡುತ್ತಿದ್ದುದು ನನ್ನ ತಲೆಯಲ್ಲಿ ಸ್ಥಿರವಾಗಿ ಉಳಿದಿದೆ. ಜಗನ್ಮಾತೆಯಾಗಿದ್ದರೂ ತವರಿನಿಂದ ಬಂದ ಪಾರ್ವತಿಗೆ ಶಿವ ’ಬೇಗನೆ ಹೇಳು, ಈಗಲೇನಿತ್ತರು, ಇನ್ನೇನು ಕೊಡುವರು?’ ಅನ್ನುವ ಪ್ರಶ್ನೆಗೆ ಆಕೆ ಕೊಡುವ ಉತ್ತರದಲ್ಲಿ ಬರುವ ಸಾಲುಗಳಲ್ಲಿ ’ನನ್ನ ತಂದೆ ಮುದುಕ, ಬಡವ ನಮಗೇನು ಕೊಟ್ಟರೆಂದು ಭಾವಪೂರ್ವಕವಾಗಿ ಹಾಡುತ್ತಿದ್ದರು. ಆನಂತರ ಬರುವ ಕೊನೆಯ ಸಾಲುಗಳಲ್ಲಿ ಕೊಟ್ಟದ್ದು ಸಮೃದ್ಧವಾಗಿಯೇ ಇರುತ್ತದೆ, ಲೋಕನಾಥನಿಗೆ ಇನ್ನೇನು ಕೊಟ್ಟಾರು,ಅದೇನೋ ನಿಜ. ಅದೇ ಥರ ಈ ದೇಶದಲ್ಲಿ ಬಂದಾಗ ಪ್ರತಿವರ್ಷವೂ ಗೌರಿ ಹಬ್ಬವನ್ನು ಸಾಧ್ಯವಾದ ಮಟ್ಟಿಗೆ ತಪ್ಪದೆ ಆಚರಿಸುತ್ತ ಬಂದಿದ್ದೇನೆ. 1999ರಲ್ಲಿ ಡಾನ್ ನದೀತೀರದ ಡಾಂಕಾಸ್ಟರಿಗೆ ಬಂದೆವು. ನಂತರ ವರ್ಷಗಳಲ್ಲಿ ಸಹ ಗೌರಿಗಾಗಿ ಊರಲ್ಲಿದ್ದಂತೆ ಬೆಳ್ಳಿ ಮುಖವಾಡವಾಗಲಿ, ಸರಿಯಾದ ದೇವರ ಮನೆಯಾಗಲಿ, ಪೀಠವಾಗಲಿ ಇರಲಿಲ್ಲ. ಈ ತರಹ ’ಇಂಪ್ರೋವೈಸ್’ ಮಾಡಿ ಆಚರಿಸಿದ ಗೌರಿ ಗಣೇಶ ಹಬ್ಬದ ಸಂಕ್ಷಿಪ್ತ ವರ್ಣನೆ ಇಲ್ಲಿದೆ. 2015ರಲ್ಲಿ ಮುತ್ತೈದೆಯರನ್ನು ಕರೆದು ಗೌರಿ ಹಬ್ಬ ಮಾಡಿದಾಗ ಕಪಾಟಿನಡಿಯ ವರ್ಕ್ ಟಾಪ್ ಮೇಲೆಯೇ ಗೌರಿಯನ್ನು ಸ್ಥಾಪಿಸಿದ್ದೆ; ಕೆಳಗೆ ಕೂಡ್ರಲು ಗ್ರನೈಟ್ ಕುಟಾಣಿ, ಮೇಲೆ ಕಳಸಕ್ಕೆ ಇಟ್ಟ ತೆಂಗಿನಕಾಯಿಗೆ ಕಣ್ಣು ಮೂಗು ಬರೆದು, ಆ ಸಲ ಊರಿಗೆ ಹೋದಾಗ ನನ್ನ ತಮ್ಮ ಕೊಟ್ಟ ಹೊಸ ಸೀರೆಯನ್ನು ಸಡಗರದಿಂದ ಉಡಿಸಿ, ಮಾಂಗಲ್ಯ, ಬಳೆ, ಸೇವಂತಿಗೆಗಳಿಂದ ಸಿಂಗರಿಸಿಕೊಂಡಿದ್ದ ನನ್ನ ಪುಟ್ಟ ಗೌರಿ ನನ್ನ ಮನೆ ಮತ್ತು ಎಲ್ಲರ ಮನ ತುಂಬಿದ್ದಳು. ಎಲ್ಲರಿಗೂ ಜಗನ್ಮಾತೆಯಾಗಿದ್ದ ಗೌರಿ, ನಮ್ಮ ಮಗಳಾಗಿ ಬಂದಿದ್ದು, ನಾನಿತ್ತ ವೈಭವ ಅನುಭವಿಸಿ ನಮ್ಮನ್ನೆಲ್ಲ ಹರಸಿದ್ದಳು. ಮುತ್ತೈದೆಯರಿಗೆಲ್ಲ ಬಾಗಣ ಕೊಟ್ಟಿದ್ದಾಯಿತು. ಮರು ದಿನ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ಗಣೇಶನ ಪೂಜೆ. ಒಂದು ಪುರಾಣ ಕಥೆಯ ಪ್ರಕಾರ ಗೌರಿ ನಮ್ಮಗಳ ಮನೆಮಗಳಾಗಿ ಬರುವುದು ತವರು ಮನೆಗೆ ಹೋಗುವದರ ಪ್ರತೀಕ. ಅವಳನ್ನು ಮತ್ತೆ ಕರೆತರಲು ಶಿವನ ಆದೇಶವನ್ನು ಶಿರಸಾ ವಹಿಸಿ ಗಣೇಶ ಮನೆ ಮನೆಗೆ ಬರುತ್ತಾನೆ (ಅದಕ್ಕೇ ಮರುದಿನ ಆತನ ಪೂಜೆ). ಆತನೊಡನೆ ತಾಯಿಯನ್ನು ವಾಪಸ್ ಕಳಿಸಲಾಗುತ್ತದೆ.ಇಷ್ಟು ಕಥೆ. ’ನಮ್ಮ ಪರದೇಶಿ ಪುಟ್ಟ ಗೌರಿ’ ನನಗೆ ಒಂದು ಕವಿತೆಯನ್ನು ಬರೆಯಲು ಸಹ ಸ್ಫೂರ್ತಿಯಿತ್ತಿದ್ದಳು ಅದನ್ನೇ ಇಲ್ಲಿ ಕೆಳಗೆ ಚಿತ್ರದೊಂದಿಗೆ ಹಂಚಿಕೊಂಡಿರುವೆ. ನನ್ನ ತಾಯಿ ಹಾಡಿದ ಅಪರೂಪದ ಸಂಪ್ರದಾಯದ ಹಾಡನ್ನು ಕೊಂಡಿ ಒತ್ತಿ ಕೇಳಿರಿ. (ಕ್ಷಮೆಯಿರಲಿ, ಅವರಿಗೆ ಆ ದಿನ ಇನ್ನೂ ನೆಗಡಿ ಇತ್ತು.)
ನಮ್ಮ ಪುಟ್ಟ ಗೌರಿ - ಬರೆದರು ಕಿರಣ ರವಿಶಂಕರ್
ಕಿಚನ್ ವರ್ಕ್ ಟಪ್ ಮೇಲೆ ಹಾರಿ
ಕಪಾಟಿ ನ ಅಡಿಯಲ್ಲಿ
ಅಡುಗಿ ಕುಳಿರುವ ಈ ನಮ್ಮ ತುಂಟ ಪುಟ್ಟ ಗೌರಿ
ತ್ತರವಾಗಿ ತೋರಲು ಹಸಿರು ಬಣ್ಣದ
ಗ್ರಾನೈಟ್ ಕುಟ್ಟಾಣಿಯನ್ನೇ
ಸಿಂಹಾಸನವೆಂದು ತಿಳಿದು
ಹೆಮ್ಮೆಯಿಂದ ಕುಳಿತಿರುವ
ಈ ನಮ್ಮ ಮುಗ್ಧ ಪುಟ್ಟ ಗೌರಿ
ಸೇವಂತಿಗೆ ಹೂವಿನ ಜಡೆಯನ್ನೇ
ಕೇಶರಾಶಿಯೆಂದು ತಿಳಿದು
ಗತ್ತಿನಿಂದ ಕುಳಿತಿರುವ
ಈ ನಮ್ಮ ಜುಟ್ಟಿಲ್ಲದ ಪುಟ್ಟ ಗೌರಿ
ನನ್ನ ಸೋದರ ಕೊಡಿಸಿದ
ಅಪ್ಪಟ ಮೈಸೂರಿನ ರೇಶಿಮೆಯ ಸೀರೆಯನ್ನು ಮೈಧರಿಸಿ
ಮಾಂಗಲ್ಯ, ಅರಿಶಿನ-ಕುಂಕುಮ ಬಳೆಗಳನ್ನು ತೊಟ್ಟು
ಇತರೇ ಮುತ್ತೈದೆ ಶೃಂಗಾರ ಸಿಂಗರಿಸಿ
ಪೂಜಿಸಿಕೊಳ್ಳಲು ಕಾದಿರುವ ತಾಯಿ
ಈ ನಮ್ಮ ಮುತ್ತೈದೆ ಪುಟ್ಟ ಗೌರಿ
ನಮ್ಮ ಮನೆಯ ಗೌರಿಯ ಕಳಸದಲ್ಲಿಟ್ಟ
ಡಾಂಕಾಸ್ಟರ್ ನ ಡಾನ್ ನದಿಯ ನೀರನ್ನೇ
ಕೈಲಾಸವಾಸಿ ಶಿವನ ಜಟೆಯ
ಗಂಗಾಜಲವೆಂದು ತಿಳಿದು,
ನಮ್ಮ ಮನೆಯಂಗಳದಿ ಬೆಳೆದ
ದೇಸಿ ಹೂ-ಹಣ್ಣುಗಳನ್ನು
ಸ್ವರ್ಣಗೌರಿ ಪೂಜೆಗಾಗಿ ಅರ್ಪಿಸಿಕೊಂಡಿರುವ
ಈ ನಮ್ಮ ಪರದೇಶಿ ಪುಟ್ಟ ಗೌರಿ!
ನಾನು ಕೆಲಸಕ್ಕೆ ಹೋಗಿ ಬರುವ ತನಕ
ಕಾದು ಹಸಿದು ಸೋತು ಮುನಿದು
ಹೊತ್ತು ಗೊತ್ತಿಲ್ಲದ ವೇಳೆಯಲ್ಲಿ ಪೂಜಿಸಿಕೊಂಡಿದ್ದರೂ
ಭಾವ ಪೂರ್ಣ ಭಕ್ತಿಗೊಲಿದು ಹಸನ್ಮುಖಳಾಗಿ
ಮನೆಬೆಳಗಿ ನಮ್ಮನ್ನೆಲ್ಲ ಹರಸಿದ
ದಯಾಮಯಿ ಈ ನಮ್ಮ ಪುಟ್ಟ ಗೌರಿ!
ಹೇಗಿರುವಳು ಈ ನಮ್ಮ ಪರದೇಶಿ ಪುಟ್ಟ ಗೌರಿ?
ಡಾ ಕಿರಣ ರವಿಶಂಕರ್
****************************************
ಗಣೀಶ ಬಂದ...
ಡಾ ದಾಕ್ಷಾಯಿಣಿ ಬಸವರಾಜ್
ಗಣಪತಿ ಹಬ್ಬವೆಂದರೆ ಈಗ ನನ್ನ ಮನ ಗುಣುಗುಣಿಸುವುದು ಕನಕದಾಸರ '' ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮಳಗಿಹನ್ಯಾರಮ್ಮ'' ಎನ್ನುವ ಹಾಡು. ನಮ್ಮ ಮನೆಯಲ್ಲಿ ಗಣೀಶನಿಗಿರುವಷ್ಟೇ ಆದ್ಯತೆ ಗೌರಮ್ಮನಿಗೂ ಉಂಟು. ಹಾಗಾಗಿ ಹಬ್ಬದ ಸಂಭ್ರಮ ಹಿಂದಿನ ದಿನವೇ ಶುರುವಾಗಿಬಿಡುತ್ತಿತ್ತು . ಅಮ್ಮನ ಹಿಂದೆಯೇ ಕಡುಬು ತಿನ್ನಲು ಬರುವ ''ಹೊಟ್ಟೆಯ ಗಣನಾಥ ' ನಷ್ಟು ಮುಖ್ಯವಾದ ಹಿಂದೂ ದೈವವಿಲ್ಲ. ಭಾರತದಾದ್ಯಂತ ಗಣಪತಿಗೆ ಪೂಜೆ ಸಲ್ಲುತ್ತದೆ. ವಿದ್ಯಾದಾನ ಮಾಡುವ, ವಿಘ್ನಗಳನ್ನ ನಿವಾರಿಸುವ, ಓದದ್ದಿದ್ದರೂ ಪರೀಕ್ಷೆಗಳಲ್ಲಿ ಉತ್ತೀರ್ಣಗೊಳಿಸುವ ಗಜಾನನನಿಗಿಂತ ಒಳ್ಳೆಯ ದೇವರುಂಟೆ?
ಬಡವರು ಸಿರಿವಂತರೆನ್ನದೆ, ಗಣೀಶ ಎಲ್ಲರ ಮನೆಗೂ ಭೇಟಿ ಇತ್ತು ಹರಸುತ್ತಾನೆ ಗಣೀಶ ಚತುರ್ಥಿಯ ದಿನ.
ನನ್ನ ಬಾಲ್ಯದ ನೆನೆಪೆಂದರೆ ' ಗಣೀಶ ಬಂದ, ಕಾಯಿಕಡುಬು ತಿಂದ' ಎಂದು ಹಾಡಿಕೊಂಡು ಅಮ್ಮ ಹಸಿಕಾಯಿ ತುರಿದು, ಹುರಿದು, ಬೆಲ್ಲ ಏಲಕ್ಕಿ ಸೇರಿಸಿ ಮಾಡಿದ ಕಾಯಿ ಕರ್ಜಿಕಾಯಿಗಳನ್ನು ಪ್ರಸಾದವೆನ್ನುವ ಹೆಸರಿನಲ್ಲಿ ರುಚಿ ನೋಡಿ ಅದರ ಜೊತೆಗೇ ತಯಾರಾಗುವ ಮತ್ತಿತರ ತಿಂಡಿಗಳನ್ನು ತಿಂದು ತೇಗಿ, ಕೆಲ ಕಾಲ ವಿಶ್ರಮಿಸಿದ ನಂತರದ ಮುಖ್ಯ ಕೆಲಸವೆಂದರೆ, ನನ್ನ ಪ್ರಾಥಮಿಕ ಶಾಲೆಯ ಕೆಲ ಸ್ನೇಹಿತರೊಡನೆ ೧೦೧ ಗಣಪತಿಗಳಿಗೆ ಅಕ್ಷತೆ ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು. ಭಕ್ತಿಗಿಂತ ಸ್ನೇಹಿತರ ಜೊತೆ ಕಾಲಕಳೆದು ಓದು ತಪ್ಪಿಸಿಕೊಳ್ಳುವ ಸಂಭ್ರಮವೇ ಹೆಚ್ಚು.
ಒಂದು ಸಣ್ಣ ಬಟ್ಟಲಲ್ಲಿ ಅಕ್ಷತೆ ಹಿಡಿದು, ಯಾವ ರೀತಿಯ ಆಹ್ವಾನವಿಲ್ಲದೆ ರಾಜಾರೋಷವಾಗಿ ಸಿಕ್ಕಿದ ಮನೆಗಳಿಗೆಲ್ಲ ನುಗ್ಗುತ್ತಿದ್ದೆವು. ಈಗಿನ ಹಾಗೆ ಗೇಟುಗಳು ಇದ್ದ ಮನೆಗಳು ಕಡಿಮೆ. ಸೆಕ್ಯೂರಿಟಿ ಕ್ಯಾಮೆರಾದ ಬಗ್ಗೆ ಕೇಳಿಯೂ ತಿಳಿದಿರುವಂತ ಕಾಲವದು. ನಮ್ಮ ಗಲಾಟೆಯಿಂದ ಕೆಲ ಅಜ್ಜಿ, ತಾತಗಳಿಂದ ಬೈಗುಳ ಆಶೀರ್ವಾದವು ಸಹ ದೊರೆಯುತ್ತಿತ್ತು. ಹಬ್ಬಗಳು, ಸಿರಿವಂತಿಕೆಯ ಹೆಗ್ಗಳಿಕೆಯನ್ನು ತೋರಿಸಿಕೊಳ್ಳಲು ಬಳಸುವ ಆಯುಧವಲ್ಲದ ಕಾಲವಾಗಿರಲಿಲ್ಲ ಅದು. ಈಗಿನ ಕಾಲದ ಜನ ಲಕ್ಷ್ಮಿ ಹಬ್ಬದ ದಿನ ಅವರ ಬೆಳ್ಳಿ, ಬಂಗಾರದ ಜೊತೆಗೆ ಕಂತೆ, ಕಂತೆ ಹಣದ ಪ್ರದರ್ಶನ ಮಾಡುವುದನ್ನು ನೀವು ನೋಡಿರಬಹುದು, ಭಾಗವಹಿಸಿರಬಹುದು ಅಥವಾ ಕೇಳಿರಬಹುದು. ಬಹಳ ಜನರ ಬಳಿ ಹಣವೂ ಕಡಿಮೆಯಿದ್ದು, ದೇಶದಲ್ಲೇ ಬಡತನ ಹೆಚ್ಚಿದ್ದ ದಶಕಗಳವು. ಗಣೀಶನನ್ನು ಮಂಟಪದಲ್ಲಿ ಕೂರಿಸಿರದ ಮನೆಗಳವರು( ಬಡತನದ ಕಾರಣದಿಂದಿರಬಹುದು), 'ಅಕ್ಷತೆಯನ್ನು ಗೋಡೆಯ ಮೇಲಿರುವ ಗಣೀಶನ ಫೋಟೋಗೆ ಹಾಕಿ' ಎಂದು ಹೇಳಿದರೆ ನಮಗೆಲ್ಲಿಲ್ಲದ ಕೋಪ ನಿರಾಸೆ. ನಮ್ಮ ೧೦೧ ಸಂಖ್ಯೆಯಿಂದ ಫೋಟೋಗಳ ಗಣಪನನ್ನು, ನಿರ್ದ್ಯಾಕ್ಷಿಣ್ಯವಾಗಿ ಮೈನಸ್ ಮಾಡಿಬಿಡುತ್ತಿದ್ದೆವು. ನಮ್ಮ ಅಜ್ಞಾನದ ಬಗ್ಗೆ, ನಮಗರಿಯದೆಯೇ ಕೆಲ ಮಕ್ಕಳ ಮತ್ತು ಹಿರಿಯರ ಮನ ನೋಯಿಸಿರಬಹುದಾದ ಸಾಧ್ಯತೆಯ ಬಗ್ಗೆ ನೆನೆದರೆ ಈಗಲೂ ಮನಸ್ಸಿಗೆ ಖೇದವಾಗುತ್ತದೆ. ಏಕದಂತ ತನ್ನ ಎಣೆಯಿಲ್ಲದ ಕರುಣೆಯಿಂದ ನಮ್ಮನ್ನು ಕ್ಷಮಿಸಿದನೆನ್ನುವುದರ ಬಗೆಗೆ ಅನುಮಾನ ನನಗಿಲ್ಲ.
ಅಕ್ಷತೆ ಹಿಡಿದು ಸಾಯಂಕಾಲವೆಲ್ಲ ತಿರುಗಿ, ರಾತ್ರಿಯೇ ಮನೆಗೆ ಮರಳುತ್ತಿದುದು. ಮೋಡಗಳಿಲ್ಲದ ಆ ರಾತ್ರಿಯ ದಿನ, ಚಂದ್ರನ ಕಡೆಗೆ ಅಪ್ಪಿತಪ್ಪಿಯೂ ಕಣ್ಣು ಹಾಯಿಸುವಂತಿಲ್ಲ. ಅಕಸ್ಮಾತ್ ಚಂದ್ರನನ್ನ ನೋಡಿಯೇ ಬಿಟ್ಟರೆ, ಏನಾಗುತ್ತದೋ ಎನ್ನುವ ಭಯದಿಂದ ' ಶಮಂತಕ ಮಣಿ ಮತ್ತು ಕೃಷ್ಣ ' ಕತೆಯನ್ನು ದೋಷನಿವಾರಣೆಗಾಗಿ ಗಮನವಿಟ್ಟು ಕೇಳುತ್ತಿದ್ದ ನೆನಪು ಮನದಲ್ಲಿ, ಕಡುಬಿನ ರುಚಿಯಷ್ಟೇ ಸಿಹಿ ಮತ್ತು ಹಸಿ.
ಸ್ನೇಹಿತರೆ, ಮೋದಕ ಹಸ್ತದ ಆಶೀರ್ವಾದವು ನಿಮಗೆ ಲಭಿಸಲಿ. ಚತುರ್ಥಿಯ ದಿನ ಚಂದ್ರನ ಕಡೆಗೆ ಕಣ್ಣು ಹಾಯಿಸಬಾರದೆಂದು ನೆನಪಿರಲಿ.
ದಾಕ್ಷಾಯಿಣಿ
ಗಣೇಶಹಬ್ಬದ ಬಗ್ಗೆ ಪ್ರಸಾದ್ ಅವರ ಮುನ್ನುಡಿ ಅದೆಷ್ಟೋ ವಿಷಯಗಳನ್ನು ಸಂಗ್ರರಹಿಸಿ ಒಳ್ಳೆಯ ಪೀಠಿಕೆ ಕೊಟ್ಟಿದೆ. ಕಿರಣ ರವಿಶಂಕರ್ ಅವರು ತಮ್ಮ”ಪುಟ್ಟ ಗೌರಿಯ” ಹಬ್ಬದ ಆಚರಣೆಯನ್ನು ಭಕ್ತಿ, ಪ್ರೀತಿಪೂರ್ವಕವಾಗಿ ವರ್ಣಿಸಿದ್ದಾರಲ್ಲದೆ ತಮ್ಮ ತಾಯಿಯಿಂದ ಅದು ಹೇಗೋ ಪುಸಲಾಯಿಸಿ ಹಾಡಿಸಿ ಮತ್ತೆ ತಮ್ಮ ಬಾಲ್ಯದ ಸಂಪ್ರದಾಯದ ಹಾಡನ್ನು ನೆನಪಿಸಿಕೊಂಡು ನಮಗೂ ಹಂಚಿದ್ದಾರೆ. ಅವರ ಬರಹ ಹಿಡಿಸಿತು. ಬಾಲ್ಯದ ನೆನಪುಗಳು ಯಾವಾಗಲೂ ಅಜರಾಮರ ಎನ್ನುವದಕ್ಕೆ ದಾಕ್ಷಾಯಿಣಿಯವರು ನೆನಪಿಸಿಕೊಂಡ ರೀತಿಯೇ ಸಾಕ್ಷಿ. ಬಾಲ್ಯ ಮತ್ತು ಗಣಪತಿ ಹಬ್ಬದ ಆಚರಣೆ ಎಂದೂ ಎಲ್ಲರಿಗೂ ಹಾಸುಹೊಕ್ಕಾಗಿರುತ್ತವೆ! ಶ್ರೀರಂಜಿನಿಯವರು ತನ್ಮಯರಾಗಿ ಸುಶ್ರಾವ್ಯವಾಗಿ ಹಾಡಿದ ಗಣೇಶಸ್ತುತಿ ಹಬ್ಬದ ಆಚರಣೆಗೆ ನಾಂದಿಯಾಗಿದೆ.
೧೯೮೧ ಅಥವಾ ೮೨ ರಲ್ಲಿ , ಕೆಲವು ಕನ್ನಡದವರು ಗಣೇಶನ ಹಬ್ಬವನ್ನು ಆಚರಿಸುವ ಆಲೋಚನೆ ಬಂತು. ಆಗ ಕನ್ನಡಿಗರ ಸಂಖ್ಯೆ ಹೆಚ್ಚಾಗಿರಲಿಲ್ಲ , ಕನ್ನಡ ಬಳಗ ಇನ್ನೂ ಆರಂಭವಾಗಿರಲಿಲ್ಲ , ನಾವು ಕೆಲವರು ಭಾರತೀಯ ವಿದ್ಯಾ ಭವನದ ಮತ್ತೊರು ಕೃಷ್ಣಮೂರ್ತಿ ಗಳನ್ನೂ ಭೇಟಿ ಮಾಡಿ ಈ ವಿಚಾರವನ್ನು ಪ್ರಸ್ತಾಪಿಸಿದಾಗ ಅವರು ಇಲ್ಲೇ basement ನಲ್ಲಿ ಮಾಡಿ ಅಂದರು. ನಮ್ಮ ಮಕ್ಕಳು ಆಗ ಚಿಕ್ಕವವರು , ಇವರಿಗೆ ಈ ಹಬ್ಬದ ಮೊದಲ ಪರಿಚಯ. ಸುಮಾರು ೪-೫ ವರ್ಷ ಇಲ್ಲೇ ಈ ಹಬ್ಬ ನಡೆಯಿತು. ಈಗ , ೪೦ ವರ್ಷದ ನಂತರ ನಮ್ಮ ಮನೆಯಲ್ಲಿ ಈಗಲೂ ಹಬ್ಬದ ಸಂಭ್ರಮ ಇದೆ .ಆದರೆ ೫೦-೬೦ ಜನರನ್ನು ಕರೆಯುವುದು ನಿಂತು ಮೂರು ವರ್ಷಗಳಾಯಿತು. ಈಗ ಮನೆಯವರು ಮಾತ್ರ, ನಮ್ಮ ಇಬ್ಬ ಮೊಮ್ಮಕ್ಕಳು ಬಹಳ ಆಸಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ.
ಒಂದು ಇತಿಹಾಸದ ಸಂಗತಿ , ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ಚಳುವಳಿ ಕಾರಣಕ್ಕೆ ದೊಡ್ಡ ದೊಡ್ಡ ಸಭೆಗಳು ಸೇರುವದನ್ನು ಸರ್ಕಾರ ನಿಷೇಸಿದ್ದಿರು . ಆದರೆ ಲೋಕಮಾನ್ಯ ತಿಲಕ್ ಅವರು ಪುಣೆ ಯಲ್ಲಿ ಗಣೇಶನ ಉತ್ಸವ ಮಾಡುವ ನೆಪದಿಂದ ಜನರನ್ನು ಸೇರಿಸುತ್ತಿದ್ದರು . ಇದು ರಾಜಕೀಯ ಪ್ರಶ್ನೆ ಅಲ್ಲ ನಮ್ಮ ಸಂಪ್ರದಾಯ ಎಂದು ವಾದಿಸಿದರು!
ಈ ವಾರದ ಅನಿವಾಸಿ ಬಳಗದ ಲೇಖಕರು ಗೌರಿ ಗಣೇಶ ಹಬ್ಬಕ್ಕೆ ತುಂಬ ಛಂದದ ಉಡುಗೊರೆ ಕೊಟ್ಟು ಹಬ್ಬದ ಸಂಭ್ರಮ ಹೆಚ್ಚಿಸಿಬಿಟ್ಟಿದ್ದಾರೆ.ಡಾ. ಪ್ರಸಾದ ಅವರು ಹೇಳಿದಂತೆ ಗಣಪ ಅಚ್ಚುಮೆಚ್ಚಿನ ದೈವ ಪ್ರತಿಯೊಬ್ಬರಿಗೂ. ಗೌರಿಯ ಮೈ ಮಣ್ಣಿಂದ ರೂಪುಗೊಂಡ ಗಣಪನೂ ಬ್ರಹ್ಮ, ಲಕುಮಿ ಮುಂತಾದ ದೇವತೆಗಳಂತೆ ಅಯೋನಿಜನೇ. ಪುಟ್ಟ ಬಾಲ ಗಣಪನ ಮಾತೃ ವಚನ ಪರಿಪಾಲನೆ ಆತನನ್ನು ಗಜಮುಖನನ್ನಾಗಿ ಮಾಡಿ ಗಣಗಳ ಈಶನನ್ನಾಗಿಸಿತು ಶಿವನಿಂದ. ವಿಘ್ನೇಶ್ವರನಾಗೆಂಬ ವರ ಪಡೆದ ಸಿದ್ಧಿ ಬುದ್ಧಿ ಪ್ರದಾಯಕ ಗಣಪ . ಆತನಿಗಿಂತ ಮೊದಲೇ ಬರುವ ಗೌರಿಯ ತವರ ಸಂಭ್ರಮ ಡಾ.ಕಿರಣ ಅವರ ಲೇಖನದಲ್ಲಿ ತುಂಬ ಮುದ್ದಾಗಿ ಮೂಡಿ ತೌರ ಹಂಬಲ ಮನದಲ್ಲಿ. ನಮ್ಮ ಉತ್ತರ ಕರ್ನಾಟಕದ ಕಡೆ ಈ ಗೌರಿ ಹಬ್ಬ ಕಡಿಮೆ. ಶ್ರಾವಣ ಗೌರಿ, ಜ್ಯೇಷ್ಠಾ ಗೌರಿ ಉಂಟು. ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಹರತಾಲಿಕಾ ಗೌರಿ ಪೂಜೆ ಉಂಟು. ಅದೂ ಪಾರ್ವತಿಯೇಗೌರಿಯಾಗಿ ಪೂಜೆಗೊಳ್ಳುವ ವ್ರತ. ಆಗ ತಾಳಿ, ಕಾಲುಂಗುರ,ಪಿಲ್ಲೆ, ಅರಿಶಿನ ಕುಂಕುಮ, ಮೊದಲಾದ ಮಂಗಲದ್ರವ್ಯಗಳೊಂದಿಗೆ ಕೊಡುವ ಮೊರದ ಬಾಗಿಣ ಮಾಂಗಲ್ಯಭಾಗ್ಯ ಅಕ್ಷಯವಾಗಿರಿಸುತ್ತದೆ ಎಂಬ ನಂಬಿಕೆ. ನಮ್ಮಪ್ರತಿ ಹಬ್ಬದಲ್ಲೂ ಒಂದೊಂದು ಸುಂದರ ನಂಬಿಕೆ, ಸಂಪ್ರದಾಯ.
ದಾಕ್ಷಾಯಿಣಿ ಅವರ ಗಣೇಶನ ಹಬ್ಬದ ಸಂಭ್ರಮ ನಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು. ನಾವು ಬರೀ ಇಪ್ಪತ್ತೊಂದು ಗಣೇಶ ದರ್ಶನ ಮಾಡಿ ಅಕ್ಷತೆ ಹಾಕಿ ಬರ್ತಿದ್ವಿ. ಬೇಡ ಬೇಡ ಅಂದ್ರೂ ಕಣ್ಣು ಆಕಾಶದಲ್ಲಿನ ಚಂದ್ರನತ್ತಲೆ ಓಡೋದು. ಯಾರದಾದರೂ ಮನೆ ಹಂಚಿನ ಮೇಲೆ ಕಲ್ಲೆಸೆದು ಬಂದರೆ ಅವರ ಸಿಟ್ಟಿನ ಬೈಯ್ದಾಟ ನಮ್ಮ ದೋಷ ಪರಿಹಾರ ಮಾಡ್ತದೆ ಅನ್ನೋ ನಂಬಿಕೆ ಆ ಅಬೋಧ ವಯಸ್ಸಿನಲ್ಲಿ.
ಕಿರಣ್ ಅವರ ಅಮ್ಮ ಹಾಡಿದ ಶಿವ ಪಾರ್ವತಿ ಸಂವಾದ, ಸುಂದರ ಲೇಖನಗಳು, ಶ್ರೀರಂಜಿನಿಮವರ ಹಾಡು, ಚಿಂತನಪೂರ್ಣ ಪ್ರಾಸ್ತಾವಿಕ ಸಂಪಾದಕೀಯ ಎಲ್ಲಾ ಸೇರಿ ರಂಗು ರಂಗಿನ ಕಂತು ಇದು.
ಅನಿವಾಸಿ ಬಳಗಕ್ಕೆ ಗೌರಿ- ಗಣೇಶ ಹಬ್ಬದ ಶುಭಾಶಯಗಳು; ಜೊತೆಗೆ ಕಿರಣ್, ದಾಕ್ಷಾಯಿಣಿ, ಶ್ರೀರಂಜಿನಿಯವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.
ಸರೋಜಿನಿ ಪಡಸಲಗಿ.
ಈ ವಿಶೇಷಾಂಕ ಗೌರಿಗಣೇಶ ಹಬ್ಬದ ಸಂಭ್ರಮವನ್ನು ನಾಲ್ಕು ದಿನ ಮೊದಲೇ ಮನೆಯಂಗಳದಲ್ಲಿ ತಂದು ತುಂಬಿದೆ. ಪ್ರಸಾದ್ ಅವರ ಜಿಜ್ಞಾಸಾ ಭರಿತವಾದ ಪ್ರೌಢ ಸಂಪಾದಕೀಯ ಈ ವಿಶೇಷಾಂಕಕ್ಕೆ ವಿಶೇಷ ಕಳೆ ತಂದಿದೆ. ಕಿರಣ್ ಅವರ ಗೌರೀಪೂಜೆಯ ಕವಿತೆ ಭಾವಪೂರ್ಣವಾಗಿದೆ. ಹೃದಯಾಂತರಾಳದಲ್ಲಿ ಪ್ರೀತಿ-ಭಕ್ತಿಗಳಿದ್ದರೆ ಗೌರಮ್ಮನಿಗೆ ಕುಟ್ಟಾಣಿಯೂ ಸಿಂಹಾಸನವೇ ಆಲ್ಲವೇ? ತಾಯಿಯವರ ‘ಜಯಮಂಗಳ ನಿತ್ಯ ಶುಭಮಂಗಳ’ ಹಾಡು ನನ್ನಜ್ಜಿ-ಅಮ್ಮರನ್ನು ನೆನಪಿಸಿತು. ದಾಕ್ಷಾಯಣಿಯವರ ಬಾಲ್ಯದ ನೆನಪುಗಳು ಮುದ ನೀಡಿ ನನ್ನನ್ನೂ ನನ್ನ ಬಾಲ್ಯಕ್ಕೆ ಕರೆದೊಯ್ದವು. ನಿಜ ..ಅವರೆಂದಂತೆ ನಮಗೂ ಸ್ನೇಹಿತರೊಡನೆ ತಿರುಗಲೊಂದು ನೆಪವಾಗಿತ್ತು ಗಣಪತಿ ದರ್ಶನ. ರಂಜಿನಿಯವರ ಗಣೇಶ ಸ್ತುತಿ ಸೊಗಸಾಗಿದೆ. ಎಲ್ಲರಿಗೂ ಅಭಿನಂದನೆಗಳು.
ಗೌರಿಪ್ರಸನ್ನ.

LikeLike

ರಾಮಮೂರ್ತಿ
ಬೇಸಿಂಗ್ ಸ್ಟೋಕ್
LikeLiked by 1 person
ಯಾಕೆ ಪುಣೆಯಲ್ಲಿಲೊಕಮಾನ್ಯ ಟಿಳಕ್ ಅವರು ದೊಡ್ಡಾ ಗಣೇಶ ಹಬ್ಬ ಪ್ರ್ರಾಂಭಿಸಿದರು ಎನ್ನುವದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು, ರಾಮಮೂರ್ತಿಯವ್ರೇ. ಅದಲ್ಲದೆ ಮತ್ತೂರು ಕೃಷ್ಣಮೂರ್ತಿಯರ ಕಾಲದಲ್ಲಿ ಗಣೇಶ ಹಬ್ಬ ಆಚರಿಸಿದ್ದೂ ಗೊತ್ತಿರಲಿಲ್ಲ. ನೀವು ಇತಿಹಾಸದ ಕಣಜ!
LikeLike
ಪ್ರಸಾದ್ ಅವರು ಬರೆದ ಮುನ್ನುಡಿಯೇ ಒಂದು ಪೂರ್ಣ ಲೇಖನ. ನಾವೇಕೆ ಗಣೇಶನನ್ನು ಇಷ್ಟಪಡುತ್ತೇವೆ ಎನ್ನುವುದನ್ನು ಆಪ್ತವಾಗಿ ವಿವರಿಸಿದ್ದಾರೆ.
ಕಿರಣ ಮತ್ತು ದಾಕ್ಷಾಯಿಣಿ ಅವರ ನೆನಪುಗಳು ನಮ್ಮನ್ನೆಲ್ಲ ನಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತವೆ.
‘ಕಿಚನ್ ವರ್ಕ್ ಟಾಪ್’ ಪದಗಳು ಆಧುನಿಕ ಕಾಲದಲ್ಲಿ ಸಂಪ್ರದಾಯವು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದು ತೋರಿಸುತ್ತದೆ.
– ಕೇಶವ