ಭಾರತ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಪ್ರಶ್ನೆಗಳು ಮತ್ತು ನೆನಪುಗಳು

ಇತ್ತೀಚಿಗಷ್ಟೇ  ಭಾರತ ತನ್ನ ೭೬ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಈ ೭೬ ವರ್ಷಗಳಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಭಾರತೀಯರ ಆತ್ಮ ವಿಶ್ವಾಸ ಸ್ವಾಭಿಮಾನ ಹೆಚ್ಚಾಗಿದೆ. ಇದು ಅತ್ಯಂತ ಹೆಮ್ಮೆಯ ವಿಷಯ. ಭಾರತದ ನಗರಗಳಲ್ಲಿ ಮಧ್ಯಮ ವರ್ಗದವರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಸಾಂಸಾರಿಕ ಜೀವನಗಳಲ್ಲಿ ನೆಮ್ಮೆದಿ ಸಂತೋಷಗಳಿವೆ. ಈ ಪ್ರಗತಿಗೆ ಯಾವುದೇ ಒಬ್ಬ ಜನ ನಾಯಕ ಅಥವಾ ರಾಜಕೀಯ ಪಕ್ಷ ಕಾರಣವಲ್ಲ. ಕಳೆದ ಹಲವಾರು ದಶಕಗಳಲ್ಲಿ ಹಲವಾರು ಜನನಾಯಕರ, ರಾಜಕೀಯ ಪಕ್ಷಗಳ, ದಕ್ಷ ಅಧಿಕಾರಿಗಳ, ವಿವಿಧ ಧಾರ್ಮಿಕ ಹಿನ್ನೆಲೆಯ ಪ್ರಾಮಾಣಿಕ ಜನಸಾಮಾನ್ಯರ, ವಿಜ್ಞಾನಿಗಳ, ಕಲಾವಿದರ ಪರಿಶ್ರಮ, ಧಾರ್ಮಿಕ ಸಹಿಷ್ಣುತೆ ಮತ್ತು ಜಾತ್ಯಾತೀತ ಭಾವನೆಗಳು ಮತ್ತು ಕರ್ತವ್ಯ ನಿಷ್ಠೆ ಈ ಪ್ರಗತಿಗೆ ಕಾರಣವಾಗಿದೆ. ನಾವು ನಿಂತ ನೆಲೆಯ ಹಿನ್ನೆಲೆ ಮತ್ತು  ಪರಂಪರೆಯನ್ನು ಅರಿಯಬೇಕಾಗಿದೆ. ಇಂದಿನ ಪ್ರಸಕ್ತ ಸಾಮಾಜಿಕ -ರಾಜಕೀಯ ಸನ್ನಿವೇಶದಲ್ಲಿ ಕೆಲವು ವಿಚಾರಗಳನ್ನು ತಮ್ಮ ನಿಲುವಿಗೆ ಒಪ್ಪುವಂತೆ ಬದಲಾಯಿಸುವ ಪ್ರಯತ್ನ ಕೆಲವರಿಂದ ನಡೆದಿದೆ. ಕೆಲವರಿಗೆ ಗಾಂಧಿ ಒಬ್ಬ ಕ್ಷುಲಕ ಮತ್ತು ಅಪ್ರಸ್ತುತ ವ್ಯಕ್ತಿಯಾಗಿದ್ದಾರೆ, ಸ್ವಾತಂತ್ರ್ಯ ಹೋರಾಟ ನಡೆಸಿದ ಪಿತಾಮಹರನ್ನು ಪಕ್ಕಕ್ಕೆ ತಳ್ಳಿ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿರುವುದು ವಿಪರ್ಯಾಸವಾದ ಮತ್ತು ವಿಷಾದದ ಸಂಗತಿ. ಒಂದು ದೇಶ ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರೂ ಅಲ್ಲಿ ಎಲ್ಲರಿಗೂ ವೈಯುಕ್ತಿಕ ನೆಲೆಯಲ್ಲಿ ಸ್ವಾತಂತ್ರ್ಯ ದೊರಕಿದೆ ಎಂದು ಹೇಳಲಾಗುವುದಿಲ್ಲ. ದೇಶವನ್ನು ಆಳುವ, ಸ್ವಾತಂತ್ರ್ಯವನ್ನು ನಿಯಂತ್ರಿಸುವ ರಾಜಕೀಯ,ಆರ್ಥಿಕ, ಧಾರ್ಮಿಕ, ಜಾತಿ ಮುಂತಾದ ವ್ಯವಸ್ಥೆ ಈ ಸ್ವಾತಂತ್ರ್ಯವನ್ನು ಕಸಿದು ಕೊಳ್ಳಬಹುದು. ಒಂದು ದೇಶ ಒಟ್ಟಾರೆ ಪರಿಶ್ರಮದಿಂದ ಗಳಿಸಿದ ಸ್ವಾತಂತ್ರ್ಯ ಯಾರಿಗೆ? ಎಷ್ಟರ ಮಟ್ಟಿಗೆ ತಲುಪಿದೆ? ಎಂಬುದನ್ನು ಕುರಿತು ಕವಿ ಸಿದ್ದ ಲಿಂಗಯ್ಯ ಹೀಗೆ ಬರೆಯುತ್ತಾರೆ; 
( ಆಯ್ದ ಸಾಲುಗಳು) 

ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ 
 ಜನಗಳ ತಿನ್ನುವ ಬಾಯಿಗೆ ಬಂತು, ಕೋಟ್ಯಧೀಶರ ಕೋಣೆಗೆ ಬಂತು 
ಮಹಡಿಯ ಮನೆಗಳ ಸಾಲಿಗೆ ಬಂತು, ಪೋಲಿಸರ  ಬೂಟಿಗೆ ಬಂತು 
ಬಂದೂಕದ ಗುಂಡಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ 

ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ 
ಗೋಳಿನ ಕಡಲನು ಬತ್ತಿಸಲಿಲ್ಲ, ಸಮತೆಯ ಹೂವನು ಅರಳಿಸಲಿಲ್ಲ  
ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ 

 
ಕವಿ ಸಿದ್ದಲಿಂಗಯ್ಯ ಈ ಕವಿತೆಯನ್ನು ಬರೆದು ಹಲವಾರು ವರ್ಷಗಳು ಸಂದಿವೆ. ಇದೇ ಮೇಲಿನ ಪ್ರಶ್ನೆಯನ್ನು ಡಾ ಗುರುಪ್ರಸಾದ್ ಪಟ್ವಾಲ್ ಅವರು ಭಾರತದ ಪ್ರಸಕ್ತ ರಾಜಕೀಯ-ಸಾಮಾಜಿಕ  ಪರಿಸ್ಥಿತಿಗೆ ಹೋಲಿಸಿ ತಮ್ಮ ಕವನದಲ್ಲಿ ಚಿಂತಿಸಿದ್ದಾರೆ ಮತ್ತು ತಮ್ಮ ವ್ಯಥೆಯನ್ನು ದಾಖಲಿಸಿದ್ದಾರೆ. " ಎಲ್ಲಿದೆ ಸ್ವಾಮೀ ಸ್ವಾತಂತ್ರ್ಯ?" ಎಂಬ ಪ್ರಶ್ನೆಯಲ್ಲಿ ಕೊನೆಗೊಳ್ಳುವ ಈ ಕವಿತೆಯನ್ನು ಓದಿ, ನಮ್ಮ ದೇಶದಲ್ಲಿ ಯಾರಿಗೆ? ಎಷ್ಟರ ಮಟ್ಟಿಗೆ? ಸ್ವಾತಂತ್ರ್ಯ ಇದೆ ಎನ್ನುವುದನ್ನು  ಓದುಗರೇ ಅರಿತುಕೊಳ್ಳಬೇಕು.   

ಸ್ವಾತಂತ್ರ್ಯ ದಿನಾಚರಣೆ ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯ. ಅದರಲ್ಲೂ ಶಾಲಾ ಮಕ್ಕಳಿಗೆ  ದಿನಾಚರಣೆಯ ಸಡಗರ ಸಂಭ್ರಮಗಳು, ಸಿದ್ಧತೆಗಳು, ಉತ್ಸವದ ಆಚರಣೆ ಉಲ್ಲಾಸಕರವಾಗಿದ್ದು, ಅಲ್ಲಿ ಇತಿಹಾಸ, ಶಿಸ್ತು, ಕವಾಯಿತು, ಮತ್ತು ದೇಶಭಕ್ತಿ ಗೀತೆಗಳ ಪರಿಚಯವಾಗುತ್ತದೆ. ಅಲ್ಲಿಯ ಸಾಮೂಹಿಕ ಆಚರಣೆ ಮಕ್ಕಳಲ್ಲಿ ಒಗ್ಗಟ್ಟಿನ ಮತ್ತು ಸಮತೆಯ ಭಾವನೆಯನ್ನು ನೀಡುತ್ತದೆ. ರಾಧಿಕಾ ಜೋಶಿ ಅವರು ಹಿಂದೆ ತಾವು ಖುದ್ದಾಗಿ ಭಾಗವಹಿಸಿದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು,  ಹಳೆ ನೆನಪುಗಳನ್ನು  ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

            - ಸಂಪಾದಕ 
***
ಫೋಟೋ ಕೃಪೆ ಗೂಗಲ್
ಸ್ವಾತಂತ್ರ್ಯ..?


ಅತಂತ್ರ ಕುತಂತ್ರಗಳ ದಿನಗಳ ನಡುವೆ 
ಬಂತು ಸ್ವಾತಂತ್ರ್ಯದ ದಿನ

ಎಲ್ಲೆಂದೆರಲ್ಲಿ ಧ್ವಜ 
ಕೆಲಸಕ್ಕಿಂದು ರಜ 

ಅಂದು ಯಾರದ್ದೋ ಬಲಿದಾನ
ಇಂದು ಯಾರಿಗೋ ಸನ್ಮಾನ

ಕೆಂಪು ನೆತ್ತರು ಹರಿಸಿದವರಾರೋ
ಕೆಂಪು ಕೋಟೆ ದರ್ಪದಿ ಹತ್ತಿದವರಾರೋ 

ತಿರಂಗದ ಬಣ್ಣಗಳಲ್ಲೇ ವರ್ಣಭೇದ
ಹಸಿರು ಕೇಸರಿಯಲ್ಲೇ ಜಾತಿವಾದ 

ಹುಟ್ಟಬಹುದೇ ಇಂದು ರಾಮವಾಣಿಯ ಕಬೀರ
ರಾಮ ರಹೀಮರು ಸರಿದರೇ ಇನ್ನೂ ದೂರ

ಕಬೀರನ ರಾಮವಾಣಿಗೆ ಇಂದು ಬೆಲೆ ಎಲ್ಲಿ
ಸಂತ ಶರೀಫನಿಗಿಂದು ನೆಲೆ ಎಲ್ಲಿ

ಸಿಹಿ ಉಣಿಸುವ ಉರ್ದು ಇಂದು ವಾರ್ತೆ ಮಾತ್ರ
ನೋವಳಿಸುವ ಯೋಗವಾಯಿತು ಹಿಂದೂ ಮಂತ್ರ
ಎಲ್ಲಿದೆ ಸ್ವಾಮೀ  ಸ್ವಾತಂತ್ರ್ಯ..?

ಡಾ . ಗುರುಪ್ರಸಾದ್ ಪಟ್ವಾಲ್

ಸುವರ್ಣ ವರ್ಷದ ನೆನಪು ಅಮೃತ ಘಳಿಗೆಯಲ್ಲಿ 
-  ರಾಧಿಕಾ ಜೋಷಿ 
ये शुभ दिन है हम सबका
लहरा लो तिरंगा प्यारा  

 
ನಮ್ಮ ದೇಶದ ಸ್ವತಂತ್ರ ಹೋರಾಟದ ಇತಿಹಾಸ ನಮ್ಮ ಪಠ್ಯದಲ್ಲಿ ಹಾಗು ಸಿನೆಮಾಗಳಲ್ಲಿ ನೋಡಿದ್ದೇವೆ. ನಮ್ಮ ಸ್ವತಂತ್ರ ಹೋರಾಟದ ಕಥೆಗಳು ನಮ್ಮನ್ನು ಭಾವುಕರನ್ನಾಗಿಸುವುದರ  ಜೊತೆಗೆ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ. ಆದರೆ ಭಾರತ ಈಗ ಪ್ರಪಂಚವನ್ನೇ ಎದುರಿಸಿ ಎಲ್ಲ ಕ್ಷೇತ್ರದಲ್ಲೂ ಬೃಹದ್ಸಾಧನೆ ಮಾಡುತ್ತಲೇಯಿದೆ. ಆಗಸ್ಟ್ ೧೫ ಹತ್ತಿರ ಬಂದಂತೆ ನಮ್ಮಲಿ ದೇಶ ಪ್ರೇಮ ಹೆಚ್ಚಾಗಿ ಹುಚ್ಚಾಗುತ್ತೇವೆ. ಆದರೆ ಈ ಬಾರಿ ''ಹರ್ ಘರ್ ತಿರಂಗ'' ಅಭಿಯಾನ ಒಂದೇ ವಿಶೇಷ ವಿಚಿತ್ರ ಭಾವನೆ ನಮ್ಮೆಲ್ಲರ ಮನದಲ್ಲಿ ಮೂಡಿಸುತು.
ಎಲ್ಲರು ಹೋರಾಡಿದ ಭಾರತೀಯರೆಂಬ ಹೆಮ್ಮ ಸಹಜವಾಗಿಯೇ ಮೂಡಿತು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲವಾದರೂ ಅದರ ಶಾಲೆಯ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಅಂತ ಹೆಮ್ಮೆಯಿಂದೆ ಹೇಳಿಕೊಳ್ಳುತ್ತೇನೆ.  ''ಏ ಮೇರೇ ವತನ್ ಕೆ ಲೋಗೋ ಝರ ಆಂಖ ಮೇ ಭರಲೋ ಪಾನಿ''  ಈಹಾಡು ನಾನು ಮೊದಲ ಬಾರಿಗೆ ಯಾವಾಗ ಕೇಳಿದ್ದೇನೋ ಗೊತ್ತಿಲ್ಲ ಆದರೆ ಎಂಟನೆಯ ತರಗತಿಯಲ್ಲಿ ಸ್ವಾತಂತ್ರ  ದಿನದ  ಅಂಗವಾಗಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿದ್ದು ಒಂದು ದೊಡ್ಡ ಸುದ್ದಿ. ಈ ಕಾರ್ಯಕ್ರಮ ನಮ್ಮ ಶಾಲೆಯ ಕ್ರೀಡಾ ಮೈದಾನದಲ್ಲ! ಮೈಸೂರಿನ ಪ್ರತಿಷ್ಠಿತ ಬನ್ನಿ ಮಂಟಪದಲ್ಲಿ. ಏಕೆಂದರೆ ಆ ವರ್ಷ ಸ್ವಾತಂತ್ರ ಸಿಕ್ಕ ಸುವರ್ಣ ವರುಷ ಅಂದರೆ 1997. ಮೈಸೂರು ಕೂಡ ದೊಡ್ಡ ಪ್ರಮಾಣದಲ್ಲಿ ತಯ್ಯಾರಿ ನಡೆಸಿತ್ತು. ನಗರದ ಸಚಿವರು ಮತ್ತು ಗಣ್ಯರು ಅಲ್ಲಿ ನೆರೆದು ಅಧಿಕೃತ ಧ್ವಜಾರೋಹಣ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿತ್ತು. ನಮಗೆ ಈವೆಲ್ಲರ ಅರಿವಿರಲಿಲ್ಲ.ತಿಂಗಳ ಮುಂಚಿತವಾಗಿಯೇ ಇಡೀ ಶಾಲೆಯ ಮಕ್ಕಳಿಗೆ ನೃತ್ಯಾಭ್ಯಾಸ. ನಮಗೆ ಖುಷಿನೋ ಖುಷಿ. ಯಾಕಂದ್ರೆ ಪಾಠವಿಲ್ಲ ಹೋಂ ವರ್ಕ್ ಇಲ್ಲ. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೂ ಬಾದಾಮಿ ಹಳದಿಯ ಚೂಡಿ ದಾರ್ ಸಮವಸ್ತ್ರ ಈ ನೃತ್ಯ ಪ್ರದರ್ಶನದ ಸಲುವಾಗು. ನಮ್ಮ ಶಾಲೆಯ ಆಡಿಟೋರಿಯಂ ಅನ್ನು ಒಂದು ಪುಟ್ಟ ಕಾರ್ಖಾನೆಯನ್ನಾಗಿ  ಪರಿವರ್ತಿಸಿ ೧೦-೨೦ ದರ್ಜಿಯನ್ನು ಕರೆತಂದು ನಮ್ಮ ಅಳತೆಯ  ಪ್ರಕಾರ ಚೂಡಿ ದಾರ್ ಹೋಲಿಸಲಾಯಿತು. ಇಡೀ  ದಿನ ಮೈದಾನದಲ್ಲಿ ಡಾನ್ಸ್ ಪ್ರಾಕ್ಟೀಸ್ !  2-3 ತಿಂಗಳು ಬೆಳಗಿನಿಂದ  ಸಂಜೆಯತನಕ ''ಏ ಮೇರೇ ವತನ್ ಕೆ ಲೋಗೋ ಝಾರ ಆಂಖ ಮೇ ಭರಲೋ ಪಾನಿ''!. ಎಲ್ಲಾ ಮಕ್ಕಳಿಗೂ ಬಾಯಿಪಾಠ. ನಮ್ಮ ಹಿಂದಿ ಬಹಳ ಶುದ್ಧವಾದ ಕರಣ ಪದಗಳ   ಅರ್ಥ ಸರಿಯಾಗಿ ತಿಳಿಯದೆ ಬರಿ ಕುಣಿದ್ದಾಯ್ತು. ಕನ್ನಡದ ಹಾಡು ಬದಲು ಹಿಂದಿ ಹಾಡು ಯಾಕೆ ಹಾಡಿನ ಅರ್ಥ ಪೂರ್ತಿಯಾಗಿ ತಿಳಿಯುವ ತಿಳುವಳಿಕೆ ಕೂಡ ಇರಲಿಲ್ಲ,ಯಾರನ್ನಾದರೂ ಕೇಳೋಣ ಅಂತ ನಮ್ಮ ತಲೆಗೆ ಬರಲೇ ಇಲ್ಲ. ಆದರೆ ಈ ದಿನಗಳು ಮಾತ್ರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ.
ಭಾರತದ ನಕ್ಷೆ ಮಾಡಿ ಎಲ್ಲ ಮಕ್ಕಳನ್ನು ಅದ್ರೊಳಗೆ ನಿಲ್ಲಿಸಿ ಒಂದು ರಾಜ್ಯದಿಂದ ಮತ್ತೊಂದಕ್ಕೆ ಕುಣಿಯುತ್ತ ಹೋಗೋದು.ಮೈದಾನಲ್ಲಿ NCC ಕ್ಯಾಡೆಟ್ಸ್ ಸೈನಿಕರಾಗಿ ಗಡಿಯಲ್ಲಿ  ನಕಲಿ ಬಂದೂಕು ಗುಂಡಿನ ಸದ್ದು, ಅಶ್ರುವಾಯು ಎಲ್ಲವೂ  ಒಂದು ನೃತ್ಯ ನಾಟಕ ರೂಪಕ ಒಂದು ಸಮರದ ನೈಜ ದೃಶ್ಯಾವಳಿ ಸೃಷ್ಟಿಸಿತ್ತು. ನಮ್ಮ ನೃತ್ಯ ಪ್ರದರ್ಶನಕ್ಕೆ ನಮ್ಮ ಶಾಲೆಗೆ ಪ್ರಥಮ ಸ್ಥಾನ! ಅಷ್ಟೇ ಅಲ್ಲ .. ಇದೇ ಮತ್ತೆ ರಿಪೀಟ್ ದಸರಾ ಉತ್ಸವಕ್ಕೆ. ನಮಗೆ ಮಜಾ.. ಓದಿಲ್ಲ ಬರಿಯಿಲ್ಲ ! 

ಈ ಹಾಡು ಕೆಲ ವರಷುಗಳ ಹಿಂದೆ ಮತ್ತೆ ಕೇಳಿದೆ ಮೈ ಝಂಮ್ ಅಂತು! ಕವಿ ಪ್ರದೀಪ್ ಮನಸ್ಸಿನ್ನಲ್ಲಿ ಅದೆಷ್ಟು ದುಃಖ ರೋದನೆ! 1962 ರಲ್ಲಿ ಭಾರತ ಚೀನಾ ನಡುವಿನ ಯುದ್ಧದಲ್ಲಿ ಹುತಾತ್ಮರಾದ ವೀರ ಸೇನಾನಿಗಳಿಗೆ   ಶ್ರದ್ಧಾಂಜಲಿ ರೂಪದಲ್ಲಿ ಹೊರಬಂದ ಅಕ್ಷರ ಕಂಬನಿ. ಈ ಹಾಡನ್ನು ರಾಷ್ಟ್ರ ಗೀತೆಯಷ್ಟೇ ಸರಾಗವಾಗಿ ಹಾಡಬಲ್ಲ ನಾನು ಅರ್ಥಗೊತಿಲ್ಲದೆ ಬಡಬಡಿಸುತ್ತಿದ್ದೆ. ಈ ಗೀತೆಯ ಹಿನ್ನೆಲೆ ತಿಳಿದಿರಲಿಲ್ಲ. ಬಹಳಷ್ಟು ರೋಚಕ ಕಥೆಗಳಿವೆ. ಇವೆಲ್ಲವೂ ಈಗ ಬಹುಷಃ ಮುಖ್ಯವಲ್ಲ. ಆದರೆ 1963  ಗಣತಂತ್ರ ದಿನದ ಕಾರ್ಯಕ್ರಮದಲ್ಲಿ ಹಾಡಿದ ಲತಾ ಮಂಗೇಶ್ಕರ್ ಅವರಿಗೆ ಈ ಹಾಡಿನ ಯಶಸ್ಸಿನ ಮೇಲೆ ನಂಬಿಕೆಯಿರಲಿಲ್ಲ ಯಾಕೆಂದರೆ ಈಹಾಡು ಯಾವುದೇ ಸಿನಿಮಾಕ್ಕೆ ಬಳಸಿರಲಿಲ್ಲ.ಆದರೆ ಜವಾಹರ್ ಲಾಲ್ ನೆಹರು  ಅವರ ಪ್ರತಿಕ್ರಿಯೆ ಹಾಗು ಪದಗಳ ಸೂಕ್ಷ್ಮ ಹಾಗು ದೇಶಭಕ್ತಿಯ ಭಾವನೆ ಈ ಹಾಡನ್ನು ತಕ್ಷಣವೇ ಜನಪ್ರಿಯ ಮಾಡಿತು. ಈ ಹಾಡು ಈ ಪ್ರಸ್ತುತ ದಿನಕ್ಕೂ ಅಳವಡಿಸುತ್ತದೆ. ಪ್ರಪಂಚದ ಎಲ್ಲೋ ಮೂಲೆಯಲ್ಲಿ ಇಂತಹ  ಪರಿಸ್ಥಿತಿ ಇದ್ದೇಇದೆ. ಆದರೆ ನಾವು ಆಚರಿಸಬಹುದಾದ ಎಷ್ಟೋ ಹೆಮ್ಮೆಯ ವಿಷಯಗಳು ಇವೆ. ಭಾರತದ ಹಿರಿಮೆ ಗರಿಮೆಯ ಬಗ್ಗೆ ಮಾತಾಡಲು ನಾವು ಹಂಜರಿದಿದ್ದರೆ ನಾವು ಎಲ್ಲೇ ಇದ್ದರೂ  ಅದೇ ನಮ್ಮನ್ನು ಮತ್ತಷ್ಟು ಭಾರತದ ಸಮೀಪ ಕರೆದೊಯ್ಯುತ್ತದೆ. 
ಈಗ ಪ್ರತಿಬಾರಿ ಈ ಹಾಡು ಕೇಳಿದಾಗ ನನಗೆ ನಮ್ಮ ಶಾಲೆಯ ಆ ಅಮೃತ ದಿನಗಳು ಅಜಾದಿಯ ಮಹೋತ್ಸವ ಎಲ್ಲಾ ಕಣ್ಣ ಮುಂದೆ ಬರುತ್ತದೆ. ಭಾರತದ ಮೇಲೆ ಮತ್ತಷ್ಟು ಪ್ರೀತಿ ಗೌರವ ಹೆಚ್ಚಾಗುತ್ತದೆ.

***

ಫೋಟೋ ಕೃಪೆ ಕವಿತ ಕುಮಾರ್

4 thoughts on “ಭಾರತ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಪ್ರಶ್ನೆಗಳು ಮತ್ತು ನೆನಪುಗಳು

  1. ಭಾರತದ ಸ್ವಾತಂತ್ರ್ಯ ದಿನಾಚರಣೆಯ ೭೫ನೆಯ ವರ್ಷದ ಅಮೃತಮಹೋತ್ಸವದ ಸಂಧರ್ಭದಲ್ಲಿ, ಅದರ ಬಗ್ಗೆ ನಮ್ಮ ಅನಿವಾಸಿಯ ಸದಸ್ಯರು ಬರೆದ ಲೇಖನ ಮತ್ತು ಕವನಗಳು ಬಹಳ ಸಮಯೋಚಿತವಾದದ್ದು. ಶಿವಪ್ರಸಾದ್ ಅವರ ಸಂಪಾದಕೀಯ ಲೇಖನ ನಮ್ಮ ದೇಶದಲ್ಲಿರುವ ಪ್ರಸ್ತುತ ರಾಜಕೀಯ ಪರಿಸ್ಥಿಯನ್ನು ಗಣನೆಗೆ ತಂದುಕೊಂಡು ಬರೆದಿರುವುದು ಸರಿಯಾಗಿದೆ. ಅವರು ಬರೆದಿರುವಂತೆ, ಹಲವಾರು ಪೀಳಿಗೆಯ ಜನರ ದುಡಿಮೆ, ತ್ಯಾಗಗಳು ಇಂದಿನ ಜನಗಳ ಆರ್ಥಿಕ ಸುಧಾರಣೆಗೆ
    ಕಾರಣ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಇಡೀ ದೇಶವನ್ನೇ ತಮ್ಮ ನಾಯಕತ್ವದಲ್ಲಿ ಮುನ್ನಡೆಸಿ, ನಮ್ಮ ದೇಶವನ್ನು ದಾಸ್ಯದಿಂದ ವಿಮುಕ್ತಿಗೊಳಿಸಲು ಕಾರಣರಾದ ರಾಷ್ಟ್ರ ಪಿತಾಮಹರನ್ನು ಗಣನೆಗಿಟ್ಟುಕೊಳ್ಳದೆ ನಡೆಸಿದ ಈ ಬಾರಿಯ ಆಡಂಬರದ ಮಹೋತ್ಸವ ನಿಜಕ್ಕೂ ನಾಚಿಕೆಗೇಡಿನ ವಿಷಯ. ದೇಶದ ಧ್ವಜವನ್ನು ಮನೆಮನೆಯ ಮೇಲೆ ಹಾರಿಸಿದರಷ್ಟೇ ಸಾಕೆ? ದೇಶದ ವಿಚಾರವಂತರು, ಲೇಖಕರನ್ನು ಸೆರೆಮನೆಗೆ ತಳ್ಳಿ, ಧರ್ಮದ ಹೆಸರಲ್ಲಿ, ದೇಶವನ್ನು ಕೂಪದತ್ತ ತಳ್ಳುತ್ತಿರುವ ರಾಜಕೀಯ ಶಕ್ತಿಗಳಿಗೆ ನಮ್ಮ ಸ್ವಾತಂತ್ರ್ಯದ ಬಗ್ಗೆ ಯಾವ ಗೌರವವು ಇದ್ದಂತಿಲ್ಲ! ಮಹಾತ್ಮಾ ಗಾಂಧಿಯ ಹೆಸರ ಉಲ್ಲೇಖವಿಲ್ಲದೆ ನಮ್ಮ ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರಲಿಲ್ಲ. ಅಂದೆಲ್ಲ ಮನೆಮನೆಯ ಮುಂದೆ, ಎಲ್ಲರ ಕೈಯಲ್ಲೂ ಧ್ವಜದ ಆಡಂಬರದ ಪ್ರದರ್ಶನಗಳಿರಲಿಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಜನಗಳ ತ್ಯಾಗದ ಬಗ್ಗೆ ಜನಗಳಿಗೆ ಸ್ವಲ್ಪವಾದರೂ ಮರ್ಯಾದೆ ಮನ್ನಣೆಗಳ ಭಾವನೆಗಳಿದ್ದವು. ನಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಹೈಸ್ಕೂಲಿನ ದಿನಗಳಲ್ಲಿ, ಆಗಸ್ಟ್ ೧೫ನೆಯ ದಿನದಂದು ಹಾಡುತ್ತಿದ್ದ ಹಿಂದಿ ಗೀತೆ – “ಕೈಸಾ ಸಂತ್ ಹಮಾರಾ ಗಾಂಧಿ, ಕೈಸಾ ಸಂತ ಹಮಾರಾ”, ಸಾಲುಗಳು ಇಂದಿಗೂ ನನ್ನ ಕಿವಿಯಲ್ಲಿ ಗುನುಗುನಿಸುತ್ತಿವೆ. ೧೯೭೨ನೆಯ ಇಸವಿಯಲ್ಲಿ ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಇದೆ ಸ್ವಾತಂತ್ರೋತ್ಸವದ ಬೆಳ್ಳಿ ಹಬ್ಬವನ್ನು ನಾವೆಲ್ಲ ಆಚರಿಸಿದ್ದೆವು. ಅಂದು ನಾವು ಶಾಲೆಯಲ್ಲಿ ಹಾಡಿದ್ದ ಕನ್ನಡದ ನಿತ್ಯೋತ್ಸವದ ಕವಿ ಡಾ. ನಿಸಾರ್ ಅಹಮದ್ ಅವರ “ಸದಾ ಉರಿಯುತ್ತಿರುವ ಹಾಗೆ ಸ್ವಾತಂತ್ರ್ಯದ ಹಣತೆ” ಕವನ ಎಷ್ಟು ಅರ್ಥವತ್ತಾಗಿತ್ತು? ಅವರ ಕವನದಲ್ಲಿ ಬರುವ ಒಂದು ಸಾಲು – “ಮುಳ್ಳಿನಿಂದ ಅರಿವೇ ಬಿಡಿಸಿದಂತೆ ಬಂತೆ ಮುಕ್ತಿ, ಹುಲಿಯ ಭಯ ಮೇವ ಕಸಿಯುವಂಥ ಧೀರ ಶಕ್ತಿ” ನಿಜಕ್ಕೂ ಅರ್ಥಗರ್ಭಿತವಾದ ಸಾಲುಗಳು. ಬ್ರಿಟಿಷ್ ಹುಲಿಯ ಬಾಯಿಯಿಂದ ಕಸಿದುಕೊಂಡ ಸ್ವಾತಂತ್ರ್ಯದ ಮೇವನ್ನು, ಇಂದು ನಮ್ಮ ರಾಜಕೀಯ ಶಕ್ತಿಗಳು, ತಿಂದು ತೇಗಿ, ಮತ್ತೊಮ್ಮೆ ನಮ್ಮನ್ನು ದಾಸ್ಯದತ್ತ ತಳ್ಳುತ್ತಿರುವುದು ಸರಿಯೇ?

    ಈ ೭೫ ವರ್ಷಗಳಲ್ಲಿ, ನಮ್ಮವರು ನಮ್ಮ ದೇಶ ಮತ್ತು ಹೊರದೇಶಗಳಲ್ಲಿ ಗಳಿಸಿರುವ ಗೌರವ, ಮನ್ನಣೆಗಳ ಹಿಂದೆ, ನಮ್ಮ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಾಣ ತ್ಯಾಗ ಮಾಡಿರುವವರ ಕೈವಾಡವಿದೆ ಎನ್ನುವುದನ್ನು ಮರೆತರೆ, ನಾವು ನಿಜಕ್ಕೂ ವಿಶ್ವಾಸಘಾತುಕರಾಗುತ್ತೇವೆ. ಇದೆ ರಾಜಕೀಯ ಪರಿಸ್ಥಿತಿ ಮುಂದುವರೆದು, ಧರ್ಮದ ಹೆಸರಿನಲ್ಲಿ ದೇಶದ ವಿಭಜನೆಯಾದಲ್ಲಿ ನಾವು ಮತ್ತೊಮ್ಮೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಚಳುವಳಿ ನಡೆಸಬೇಕಾಗುತ್ತದೆ. ಆದರೆ ಅಂತಹ ಸನ್ನಿವೇಶದಲ್ಲಿ ನಮ್ಮನ್ನು ಮುನ್ನಡೆಸಲು ಗಾಂಧಿಯಂತಹ ನಾಯಕರಿಲ್ಲ ಎನ್ನುವುದು ವಾಸ್ತವಿಕ ಸಂಗತಿ. ಪರಿಣಾಮಕಾರಿ ಸಂಪಾದಕೀಯ ಮತ್ತು, ಡಾ ಗುರುಪ್ರಸಾದ ಅವರ ಕವನ ಮತ್ತು ರಾಧಿಕಾ ಜೋಶಿ ಅವರ ಲೇಖನಗಳು ಮನಮುಟ್ಟುವಂತಿವೆ. ಧನ್ಯವಾದಗಳು.
    ಉಮಾ ವೆಂಕಟೇಶ್

    Liked by 1 person

  2. ಭಾರತದ ಸ್ವಾತಂತ್ರ್ಯ ದಿನಾಚರಣೆಯ ೭೫ನೆಯ ವರ್ಷದ ಅಮೃತಮಹೋತ್ಸವದ ಸಂಧರ್ಭದಲ್ಲಿ, ಅದರ ಬಗ್ಗೆ ನಮ್ಮ ಅನಿವಾಸಿಯ ಸದಸ್ಯರು ಬರೆದ ಲೇಖನ ಮತ್ತು ಕವನಗಳು ಬಹಳ ಸಮಯೋಚಿತವಾದದ್ದು. ಶಿವಪ್ರಸಾದ್ ಅವರ ಸಂಪಾದಕೀಯ ಲೇಖನ ನಮ್ಮ ದೇಶದಲ್ಲಿರುವ ಪ್ರಸ್ತುತ ರಾಜಕೀಯ ಪರಿಸ್ಥಿಯನ್ನು ಗಣನೆಗೆ ತಂದುಕೊಂಡು ಬರೆದಿರುವುದು ಸರಿಯಾಗಿದೆ. ಅವರು ಬರೆದಿರುವಂತೆ, ಹಲವಾರು ಪೀಳಿಗೆಯ ಜನರ ದುಡಿಮೆ, ತ್ಯಾಗಗಳು ಇಂದಿನ ಜನಗಳ ಆರ್ಥಿಕ ಸುಧಾರಣೆಗೆ
    ಕಾರಣ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಇಡೀ ದೇಶವನ್ನೇ ತಮ್ಮ ನಾಯಕತ್ವದಲ್ಲಿ ಮುನ್ನಡೆಸಿ, ನಮ್ಮ ದೇಶವನ್ನು ದಾಸ್ಯದಿಂದ ವಿಮುಕ್ತಿಗೊಳಿಸಲು ಕಾರಣರಾದ ರಾಷ್ಟ್ರ ಪಿತಾಮಹರನ್ನು ಗಣನೆಗಿಟ್ಟುಕೊಳ್ಳದೆ ನಡೆಸಿದ ಈ ಬಾರಿಯ ಆಡಂಬರದ ಮಹೋತ್ಸವ ನಿಜಕ್ಕೂ ನಾಚಿಕೆಗೇಡಿನ ವಿಷಯ. ದೇಶದ ಧ್ವಜವನ್ನು ಮನೆಮನೆಯ ಮೇಲೆ ಹಾರಿಸಿದರಷ್ಟೇ ಸಾಕೆ? ದೇಶದ ವಿಚಾರವಂತರು, ಲೇಖಕರನ್ನು ಸೆರೆಮನೆಗೆ ತಳ್ಳಿ, ಧರ್ಮದ ಹೆಸರಲ್ಲಿ, ದೇಶವನ್ನು ಕೂಪದತ್ತ ತಳ್ಳುತ್ತಿರುವ ರಾಜಕೀಯ ಶಕ್ತಿಗಳಿಗೆ ನಮ್ಮ ಸ್ವಾತಂತ್ರ್ಯದ ಬಗ್ಗೆ ಯಾವ ಗೌರವವು ಇದ್ದಂತಿಲ್ಲ! ಮಹಾತ್ಮಾ ಗಾಂಧಿಯ ಹೆಸರ ಉಲ್ಲೇಖವಿಲ್ಲದೆ ನಮ್ಮ ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರಲಿಲ್ಲ. ಅಂದೆಲ್ಲ ಮನೆಮನೆಯ ಮುಂದೆ, ಎಲ್ಲರ ಕೈಯಲ್ಲೂ ಧ್ವಜದ ಆಡಂಬರದ ಪ್ರದರ್ಶನಗಳಿರಲಿಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಜನಗಳ ತ್ಯಾಗದ ಬಗ್ಗೆ ಜನಗಳಿಗೆ ಸ್ವಲ್ಪವಾದರೂ ಮರ್ಯಾದೆ ಮನ್ನಣೆಗಳ ಭಾವನೆಗಳಿದ್ದವು. ನಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಹೈಸ್ಕೂಲಿನ ದಿನಗಳಲ್ಲಿ, ಆಗಸ್ಟ್ ೧೫ನೆಯ ದಿನದಂದು ಹಾಡುತ್ತಿದ್ದ ಹಿಂದಿ ಗೀತೆ – “ಕೈಸಾ ಸಂತ್ ಹಮಾರಾ ಗಾಂಧಿ, ಕೈಸಾ ಸಂತ ಹಮಾರಾ”, ಸಾಲುಗಳು ಇಂದಿಗೂ ನನ್ನ ಕಿವಿಯಲ್ಲಿ ಗುನುಗುನಿಸುತ್ತಿವೆ. ೧೯೭೨ನೆಯ ಇಸವಿಯಲ್ಲಿ ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಇದೆ ಸ್ವಾತಂತ್ರೋತ್ಸವದ ಬೆಳ್ಳಿ ಹಬ್ಬವನ್ನು ನಾವೆಲ್ಲ ಆಚರಿಸಿದ್ದೆವು. ಅಂದು ನಾವು ಶಾಲೆಯಲ್ಲಿ ಹಾಡಿದ್ದ ಕನ್ನಡದ ನಿತ್ಯೋತ್ಸವದ ಕವಿ ಡಾ. ನಿಸಾರ್ ಅಹಮದ್ ಅವರ “ಸದಾ ಉರಿಯುತ್ತಿರುವ ಹಾಗೆ ಸ್ವಾತಂತ್ರ್ಯದ ಹಣತೆ” ಕವನ ಎಷ್ಟು ಅರ್ಥವತ್ತಾಗಿತ್ತು? ಅವರ ಕವನದಲ್ಲಿ ಬರುವ ಒಂದು ಸಾಲು – “ಮುಳ್ಳಿನಿಂದ ಅರಿವೇ ಬಿಡಿಸಿದಂತೆ ಬಂತೆ ಮುಕ್ತಿ, ಹುಲಿಯ ಭಯ ಮೇವ ಕಸಿಯುವಂಥ ಧೀರ ಶಕ್ತಿ” ನಿಜಕ್ಕೂ ಅರ್ಥಗರ್ಭಿತವಾದ ಸಾಲುಗಳು. ಬ್ರಿಟಿಷ್ ಹುಲಿಯ ಬಾಯಿಯಿಂದ ಕಸಿದುಕೊಂಡ ಸ್ವಾತಂತ್ರ್ಯದ ಮೇವನ್ನು, ಇಂದು ನಮ್ಮ ರಾಜಕೀಯ ಶಕ್ತಿಗಳು, ತಿಂದು ತೇಗಿ, ಮತ್ತೊಮ್ಮೆ ನಮ್ಮನ್ನು ದಾಸ್ಯದತ್ತ ತಳ್ಳುತ್ತಿರುವುದು ಸರಿಯೇ?

    ಈ ೭೫ ವರ್ಷಗಳಲ್ಲಿ, ನಮ್ಮವರು ನಮ್ಮ ದೇಶ ಮತ್ತು ಹೊರದೇಶಗಳಲ್ಲಿ ಗಳಿಸಿರುವ ಗೌರವ, ಮನ್ನಣೆಗಳ ಹಿಂದೆ, ನಮ್ಮ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಾಣ ತ್ಯಾಗ ಮಾಡಿರುವವರ ಕೈವಾಡವಿದೆ ಎನ್ನುವುದನ್ನು ಮರೆತರೆ, ನಾವು ನಿಜಕ್ಕೂ ವಿಶ್ವಾಸಘಾತುಕರಾಗುತ್ತೇವೆ. ಇದೆ ರಾಜಕೀಯ ಪರಿಸ್ಥಿತಿ ಮುಂದುವರೆದು, ಧರ್ಮದ ಹೆಸರಿನಲ್ಲಿ ದೇಶದ ವಿಭಜನೆಯಾದಲ್ಲಿ ನಾವು ಮತ್ತೊಮ್ಮೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಚಳುವಳಿ ನಡೆಸಬೇಕಾಗುತ್ತದೆ. ಆದರೆ ಅಂತಹ ಸನ್ನಿವೇಶದಲ್ಲಿ ನಮ್ಮನ್ನು ಮುನ್ನಡೆಸಲು ಗಾಂಧಿಯಂತಹ ನಾಯಕರಿಲ್ಲ ಎನ್ನುವುದು ವಾಸ್ತವಿಕ ಸಂಗತಿ. ಪರಿಣಾಮಕಾರಿ ಸಂಪಾದಕೀಯ ಮತ್ತು, ಡಾ ಗುರುಪ್ರಸಾದ ಅವರ ಕವನ ಮತ್ತು ರಾಧಿಕಾ ಜೋಶಿ ಅವರ ಲೇಖನಗಳು ಮನಮುಟ್ಟುವಂತಿವೆ. ಧನ್ಯವಾದಗಳು.
    ಉಮಾ ವೆಂಕಟೇಶ್

    Like

  3. ಪ್ರಸಾದ್ ಅವರ ಸಂಪಾದಕೀಯ/ಪೀಠಿಕೆ ಮಾರ್ಮಿಕವಾಗಿದೆ. ಸಿದ್ಧಲಿಂಗಯ್ಯನವರ ಅಂದಿನ ಕವಿತೆಯನ್ನು ಇಂದಿಗೂ ಪ್ರಸ್ತುತ ಎಂದು ಪ್ರಸಾದ್ ನೊಂದು ಬರೆಯುತ್ತಾರೆ.

    ಗುರುಪ್ರಸಾದ್ ಅವರು ಬಹಳ ದಿನಗಳಾದ ಮೇಲೆ ಮತ್ತೆ ಅನಿವಾಸಿಗೆ ಬರೆದಿದ್ದಾರೆ. ಕವನದ ಧ್ವನಿ ತೀಕ್ಷ್ಣವಾಗಿದೆ, ನೋವಿನ ಆಕ್ರೋಶವಿದೆ. ಅಂತ್ಯಪ್ರಾಸಗಳು ಒತ್ತಾಯಪೂರ್ವಕ ಅನಿಸುವುದಿಲ್ಲ. ಕವನವನ್ನು ಇನ್ನೂ ಬೆಳಸಬೇಕಿತ್ತು, ಅದಕ್ಕೊಂದು ಪೂರ್ಣತೆಯನ್ನು ಕೊಡಬಹುದಿತ್ತು. `ಎಲ್ಲಿದೆ ಸ್ವಾಮೀ ಸ್ವಾತಂತ್ರ್ಯ…?` ಎನ್ನುವ ಸಾಲು ಯಾಕೋ ಕವನದ ಇದ್ದಕ್ಕಿದ್ದಂತೆ ಬಂದು ಕವನವನ್ನು ಕೊಂದು ಬಿಡುತ್ತದೆ. ಅಥವಾ ಅದೇ ಈ ಕವನದ ಆಶಯವೋ?

    ರಾಧಿಕಾ ಜೋಷಿಯವರು ನೆನಪಿಸಿಕೊಂಡ `ಏ ಮೇರೆ ವತನ್ ಕೆ ಲೋಂಗೊಂ` ಹಾಡಿನ ಬರಹ ನಾಸ್ಟಾಲ್ಜಿಕ್ ಆಗಿದೆ. ಈ ಹಾಡಿನ ಬಗ್ಗೆ ಒಂದು ಗ್ರಂಥಕ್ಕಾಗುವಷ್ಟು ವಸ್ತು ಅಂತರಜಾಲದಲ್ಲೇ ಸಿಗಬಹುದು. ಇಂದಿಗೂ ಎಷ್ಟೊಂದು ಹಾಡುಗಾರರು ಪ್ರತಿ ಅಗಸ್ಟ್ ೧೫ಕ್ಕೆ ತಮ್ಮ ತಮ್ಮ ಚಾನೆಲ್ಲುಗಳಲ್ಲಿ ಹಾಡುತ್ತಾರೆ ಎಂದರೆ ಈ ಹಾಡಿನ ಜನಪ್ರೀಯತೆಯ ಅಂದಾಜು ಸಿಗುತ್ತದೆ.

    – ಕೇಶವ

    Liked by 1 person

  4. ಸ್ವಾತಂತ್ರ್ಯ ದಿವಸದ ಆಚರಣೆಯ ಸಂದರ್ಭದಲ್ಲಿಯೇ ಎರಡು ಭಿನ್ನ ಪ್ರಸ್ತುತಿಗಳು. ಬಹಳ ದಿನಗಳ ನಂತರ ಡಾ ಗುರುಪ್ರಸಾದರ ಕವಿತೆ ಬಂದಿದೆ ಅನಿವಾಸಿಯಲ್ಲಿ. ಅವರಿಗೆ ಮರು ಸ್ವಾಗತ! ಸ್ವತಃ ಯಕ್ಷಗಾನದ ಪಟುಗಳಾದ ಅವರು ವೇದಿಕೆಯ ಮೇಲೆ ವೇಷ ಹಾಕಿಕೊಂಡು ಪೌರಾಣಿಕ ನಾಟಕಗಳ ನಾಯಕ- ಖಳನಾಯಕರಾಗಿ ಕುಣಿದ ಅನುಭವವಿರಬೇಕು. All the world is a stage ಅನ್ನುವ ಶೇಕ್ಸ್ಪಿಯರನ ಮಾತು ಸರ್ವವಿದಿತ ಮತ್ತು ಸಾರ್ವಕಾಲಿಕ. ಅವರ ಕವಿತೆಯಲ್ಲಿ ಖಂಡಿಸುವ ಪುರಾಣ ಕಾಲದಿಂದಲೂ ಈ ಮುಖವಾಡ ಧರಿಸಿದ ‘ನಟ’ರ ಆಟೋಟಾಪ ನಡೆದೇ ಇದೆ. ರಂಗಮಂದಿರದಲ್ಲಿ ಆಟ ಮುಗಿದು ಬೆಳಕು ಬಂದರೂ, ಸಿದ್ಧಲಿಂಗಯ್ಯನವರು ಮಾರ್ಮಿಕವಾಗಿ (?ಹತಾಶರಾಗಿ) ತಮ್ಮ ಕವಿತೆಯಲ್ಲಿ ಹೇಳುವಂತೆ ಬಡವರ ಮನೆಯಲ್ಲಿ ಬರಲಿಲ್ಲ. ಈ ತಾರತಮ್ಯದ ಕೊರಗು, ಅಸಮಾನತೆಯ ಅಂಧಕಾರ 75 ವರ್ಷಗಳಲ್ಲಿ ಹೋಗಿಲ್ಲ ನಿಜ. ಅದೇ ರೀತಿ ಇಂದಿಗೂ ಹೋರಾಡುತ್ತಿರುವ ಬುಡಕಟ್ಟಿನ ಆಸ್ಟ್ರೇಲಿಯಾ- ನ್ಯೂಜಿಲ್ಯಾಂಡಿನ ಪ್ರಜೆಗಳಿಗೂ, ಅಮೆರಿಕೆಯ ‘ಇಂಡಿಯನ್’ ಮೂಲದವರದೂ ಅದೇ ಬೇಡಿಕೆ. ಕವಿಗಳು, ಮತ್ತು ಜನರು ಪ್ರತಿಭಟಿಸುತ್ತಲೇ ಇರಬೇಕೆ? ಆ ‘ಗೀತೆ’ಯ ‘ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್ ‘ ಮತ್ತು ‘ಸತ್ಯ ಧರ್ಮಕ್ಕೆ ‘ ವಿಜಯ ಆಗುವ ವರೆಗೆ ಅದೆಷ್ಟು ಕಾಲ ಕಾಯಬೇಕೆ?
    ಇನ್ನು ರಾಧಿಕಾ ಅವರಿಗೆ ಶಾಲೆಯ ಸವಿನೆನಪುಗಳು ಇಂದು ಮೈ ಜುಮ್ಮೆನಿಸುವಂತೆ ಮಾಡಿದ್ದಾರೆ ಆಶ್ಚರ್ಯವಿಲ್ಲ. 1962 ರ ಚೀನಾದ ಅತಿಕ್ರಮಣ ಮತ್ತು 1963 ರ ಆ ಹಾಡು ಕಾಲೇಜು ಯುವಕರು ನಮ್ಮೆಲ್ಲೆಬ್ಬಿಸಿದ ರೋಮಾಂಚನ ಇಂದಿಗೂ ಅನುಭವಿಸುತ್ತೇನೆ. ಆಗ ವಾಟ್ಸಾಪ್ಪಿದ್ದಿದ್ದರೆ ಮರುದಿನ ನಾವು ಪತ್ರಿಕೆಗಳಲ್ಲಿ ನೋಡಿದ ಕಣ್ಣೊರೆಸುತ್ತಿರುವ ಪ್ರಧಾನಿಯ ಚಿತ್ರ ವೈರಲ್ ಆಗಿರ ಬಹುದಾದ ಘಟನೆ. ಪ್ರಾಡ್ ಅವರು ತಮ್ಮ ಪ್ರಭಾವಿ ಸಂಪಾದಕೀಯದಲ್ಲಿ ಉಲ್ಲೇಖಿಸಿದಂತೆ ಕೆಲ ನೇತಾರರ ಹೆಸರನ್ನು ಹೇಳುವದೂ ಅಪರಾಧವೆನಿಸುವ ವಾತಾವರಣ ಹುಟ್ಟಿಸಿ ಅಜ್ಞಾನವೇ ಬೆಳಕೆನ್ನುವ ಕಾಲ ಇದು. ಆದರೂ 75 ವರ್ಷದ ಕೆಲವಾದರೂ ಸಾಧನೆಗಳನ್ನು ಮೆರೆಯೋಣ. ಈ ಚರ್ಚೆ, ಸ್ವ- ಅವಲೋಕನ ಸ್ವಾಗತಾರ್ಹವೇ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.