ನುಡಿದಂತೆ ನಡೆವುದು,,.  (ಕವನ)

ಒಬ್ಬ ಕವಿಯ ಕಥೆಗಾರನ ಲೇಖಕನ ಬರಹ ಅವನ ಬದುಕಿನ ವಿಸ್ತರಣೆಯಷ್ಟೆ. ಲೇಖಕನ ಬದುಕನ್ನು ಬರಹವನ್ನು ಬೇರ್ಪಡಿಸದೆ ಒಟ್ಟಾಗಿ ಗ್ರಹಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಹೀಗಿರುವಾಗ ಆ ಲೇಖಕ 'ಹೇಳುವುದು ಆಚಾರ ಮಾಡುವುದು ಅನಾಚಾರವಾದಾಗ' ಅವನ ಲೇಖನ ತನ್ನ ಮೌಲ್ಯವನ್ನು ಕಳೆದುಕೊಂಡು ಬಿಡುತ್ತದೆ. ಫ್ಯಾಸಿಸ್ಟ್ ಆದ ಹಿಟ್ಲರ್ ತನ್ನ ಕಾಲದ ನಾಜೀ ಜರ್ಮನಿಯನ್ನು  ಕುರಿತು "ಸರ್ವ ಜನಾಂಗದ  ಶಾಂತಿಯ ತೋಟ" ಎಂದು ಕವನ ಬರೆದಿದ್ದರೆ ಅಥವಾ ಕೋಮು ಸೌಹಾರ್ದತೆಯ ಬಗ್ಗೆ ಇಲ್ಲ  ವಿಶ್ವ ಶಾಂತಿಯ ಬಗ್ಗೆ ಮಹಾ ಗ್ರಂಥವನ್ನು ಬರೆದಿದ್ದರೆ ಆ ಕೃತಿ ಸಾಹಿತ್ಯಿಕವಾಗಿ ಎಷ್ಟೇ ಉತ್ಕೃಷ್ಟವಾಗಿದ್ದರೂ ಅದು ಅಸಂಗತವೆಂದು ತಿರಸ್ಕಾರಗೊಳ್ಳುತ್ತಿತ್ತು ಮತ್ತು ಕಸದ ಬುಟ್ಟಿಗೆ ಲಾಯಕ್ಕಾಗುತ್ತಿತ್ತು. ಲೇಖಕನಿಗೆ ಒಂದು ನೈತಿಕ ಹೊಣೆಗಾರಿಕೆ ಇರುತ್ತದೆ. “Practice what you preach” ಎಂಬ ಪುರಾತನವಾದ ಲೋಕೋಕ್ತಿ ತಿಳಿಸುವಂತೆ ಒಬ್ಬ ಕವಿ, ಲೇಖಕ, ಬೋಧಕ, ಧಾರ್ಮಿಕ ಗುರು, ಜನ ನಾಯಕ, ಮತ್ತು  ಜನ ಸಾಮಾನ್ಯರ ನುಡಿ ಮತ್ತು ನಡೆಗಳಲ್ಲಿ ಸಾಮರಸ್ಯವಿರಬೇಕು, ಪ್ರಾಮಾಣಿಕತೆ ಇರಬೇಕು. ಒಂದು ಆದರ್ಶವಿರಬೇಕು ಅಷ್ಟೇ ಅಲ್ಲದೇ ಆ ಆದರ್ಶದ ಪರಿಪಾಲನೆಯಾಗಬೇಕು. ಬದುಕಿನುದ್ದಕ್ಕೂ ಈ ಆದರ್ಶ ಪರಿಪಾಲಿಸುವ ವ್ಯಕ್ತಿ ಮಹಾತ್ಮನಾಗುತ್ತಾನೆ. ಸಮಾಜದ  ನಿರೀಕ್ಷೆ, ಸಾಮಾಜಿಕ ಮೌಲ್ಯಗಳು ಕಾಲ ಕಾಲಕ್ಕೆ ಬದಲಾದರೂ ಮೂಲಭೂತ ಮಾನವೀಯ ಮೌಲ್ಯಗಳು ಬದಲಾಗುವುದಿಲ್ಲ, ಆ ಕಾರಣಕ್ಕಾಗಿಯೇ ಕ್ರಿಸ್ತ, ಬುದ್ಧ ಬಸವಣ್ಣ, ಗಾಂಧಿ ನಮಗೆ ಇಂದಿಗೂ ಪ್ರಸ್ತುತವಾಗಿರುತ್ತಾರೆ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದಲ್ಲಿ "ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ದೇವನೆಂತು ಒಲಿಯುವನಯ್ಯಾ" ಎಂದು ಹೇಳಿರುವುದನ್ನು ಇಲ್ಲಿ ನೆನೆಯುವುದು ಸೂಕ್ತ. ಡಾ. ದಾಕ್ಷಾಯಿಣಿ  ಅವರ "ನುಡಿದಂತೆ ನಡೆವುದು" ಎಂಬ ಕವನ ಮೇಲಿನ ವಿಚಾರಗಳ ಬಗ್ಗೆ ಸಂಬಂಧಿಸಿದೆ. ಇತ್ತೀಚಿನ ಕವನಗಳಲ್ಲಿ  ಪ್ರಾಸ ವಿರಳವಾಗಿರುವಾಗ ಪ್ರಾಸತುಂಬಿದ ಈ ಕವಿತೆ ಓದುಗರಿಗೆ ವಿಶೇಷ ಅನುಭವ ನೀಡಿದೆ.   
-	ಸಂಪಾದಕ





ನುಡಿದಂತೆ ನಡೆವುದು,,.  (ಕವನ)

ನುಡಿದಂತೆ ನಡೆಯುವುದು ಬಹು ಕಷ್ಟ,
ಬಾಳ್ವೆ, ಬದುಕು ನಡೆಸಿದರೆಡೆಗೆ, ಅದು ಅದೃಷ್ಟ.

ಕಣಿ ಹೇಳುವವರ ಸಂಖ್ಯೆ ಬಹಳ
ತಕ್ಕಂತೆ ಕುಣಿಯುವವರು ವಿರಳ.

ಕತೆಯಲ್ಲಿ ಬರೆಯಬಹುದು ಪೊಳ್ಳು,
ಬದುಕುವ ರೀತಿಯಲ್ಲಿದ್ದರೂ ಬಹು ಟೊಳ್ಳು.

ಕವನದ ಅಂಚಿಗೂ ಸಲ್ಲುವುದು ಕವಿಗಳ ನ್ಯಾಯ,
ನಡೆನುಡಿಯಲ್ಲಿ ತುಂಬಿದ್ದರೂ ಬರಿ ಅನ್ಯಾಯ.

ಸಿಹಿ, ಸಿಹಿ ನುಡಿಮುತ್ತುಗಳು ಕಾಗದದಲ್ಲಿ,
ಕಹಿ,ಕಹಿ ಕಷಾಯದ ಕಪ್ಪು ಮಾತುಗಳಲ್ಲಿ.

ಪ್ರೀತಿ,ವಿಶ್ವಾಸ, ವಿಧೇಯತೆಯ, ವೈಭವ ಬರಹದಲ್ಲಿ,
ಭೀತಿ, ಹಠ, ಅಸೂಯೆಯ ಆಳದ ಶಂಕೆಯಲ್ಲಿ.

ಅಕ್ಷರಗಳ ನಾಡಿನಲ್ಲಿ ಆದರ್ಶ ಸಾಧನೆಗೆ ಬಹು ಬಣ್ಣನೆ, 
ದೇವಾ ಬರೆದಂತೆ ಬದುಕುವ ಮಾನವನಿಗೆ ಸಿಗಲಿ ಎಲ್ಲಾ  ಮನ್ನಣೆ.

(ಕತೆಗಾರರ, ಕವಿವರ್ಯಯರ ಕ್ಷಮೆ ಕೋರಿ)

ದಾಕ್ಷಾಯಿಣಿ

4 thoughts on “ನುಡಿದಂತೆ ನಡೆವುದು,,.  (ಕವನ)

  1. ಹೂವಿನಿಂದ ನಾರೂ ಸ್ವರ್ಗ ಸೇರಿದ ಹಾಗೆ , ಡಾ. ದೇಸಾಯಿಯವರ ಅರ್ಥಗರ್ಭಿತ, ಉತ್ತಮ ಸಂಪಾದಕೀಯದಿಂದ ನನ್ನ ಕವಿತೆಗೆ ಹೊಸ ಮೆರುಗು, ಬಹು ಅರ್ಥ ಬಂದಂತಿದೆ. ಧನ್ಯವಾದಗಳು ಸಂಪಾದಕರಿಗೆ. ಅನಿವಾಸಿಯ ನಿವಾಸಿಗಳಿಗೆ ಅದರಿಂದ ದೂರವಾಗುವ ಯೋಚನೆಯೂ ಬರಲಾರದು, ಕೆಲದಿನಗಳ ರಜೆಯಷ್ಟೇ .
    ವಂದನೆಗಳು ಗುಡೂರ್ ರವರಿಗೆ, ಮುರಳಿಯವರಿಗೆ ಮತ್ತು ಅಮಿತಾರವರಿಗೆ.

    Like

  2. ಕವನ ಚೆನ್ನಾಗಿದೆ, ದಾಕ್ಷಾಯಣಿ ಅವರೇ, ನೀವು ಸತ್ಯ ಹೇಳಿದ್ದಕ್ಕೆ ಕ್ಷಮೆ ಕೇಳುವ ಅಗತ್ಯವಿಲ್ಲ.

    Like

  3. ದಾಕ್ಷಾಯಿಣಿಯವರು ಕತೆಗಾರರ, ಕವಿವರ್ಯಯರನ್ನಷ್ಟೇ ಏಕೆ ಕ್ಷಮೆ ಕೋರುತ್ತಾರೆ? ಅವರು ಬರೆದ ಸಾರ್ವತ್ರಿಕ ಸತ್ಯವನ್ನು ಎಲ್ಲರೂ ಪಾಲಿಸಬೇಕಾದುದೇ! ಬರೆದಂತಲೇ ಅಷ್ಟೇ ಅಲ್ಲ ಮಾತಿನಂತೆಯೂ ನಡಾವಳಿಯಲ್ಲಿ ತೋರಿಸಬೇಕು ಎಲ್ಲರೂ ಅಂತ ಎಚ್ಚರಿಸುವ ಸಮಯೋಚಿತ- ಏಕೆ, ಸಾರ್ವಕಾಲಿಕ ಕವನ ಇದು. ಸರಳವಾಗಿ ಪ್ರಾಸದೊಂದಿಗೆ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು ಮತ್ತು ದಾಕ್ಷಾಯಿಣಿಯವರನ್ನು ಮತ್ತೆ ಅನಿವಾಸಿಯಲ್ಲಿ ಭೇಟಿಮಾಡುವಾ ಎಂದು ಆಶಿಸುವೆ!

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.