ಐತಿಹಾಸಿಕವಾಗಿ ಯು.ಕೆ ಅಥವಾ ಯುನೈಟೆಡ್ ಕಿಂಗ್ಡಮ್ ಅದರ ಹೆಸರು ಸೂಚಿಸುವಂತೆ ರಾಜ ಮನೆತನಗಳ ಒಕ್ಕೊಟ ಎನ್ನಬಹುದು. ಈ ರಾಜಮನೆತನಗಳ ಇತಿಹಾಸವನ್ನು ಪರಿಶೀಲಿಸಿದಾಗ ಅಲ್ಲಿ ಎಲಿಜಬೀತನ್, ಜಾರ್ಜಿಯನ್, ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ಕಾಲ ಘಟ್ಟಗಳು ಕಂಡುಬರುತ್ತವೆ. ಈ ಕಾಲಘಟ್ಟಗಳಲ್ಲಿ ವಿಕ್ಟೋರಿಯನ್ ಸಮಯ ಅತ್ಯಂತ ಮಹತ್ವವಾದದ್ದು. ಅಂದು ಸಾಮಾಜಿಕವಾಗಿ, ರಾಜಕೀಯ ಕ್ಷೇತ್ರದಲ್ಲಿ, ಸಾಹಿತ್ಯ, ಕಲೆ, ವಿಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಮುನ್ನಡೆಗಳು ಸಂಭವಿಸಿದವು. ಜಾರ್ಜಿಯನ್ ಕಾಲಘಟ್ಟದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಪ್ರಪಂಚದ ದಕ್ಷಿಣ ಮತ್ತು ಪೂರ್ವ ನೆಲಗಳಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವುದಲ್ಲದೆ ಅಲ್ಲಿಯ ಸಂಪತ್ತನ್ನು ತಮ್ಮದಾಗಿಸಿಕೊಂಡು ಶ್ರೀಮಂತಗೊಂಡಿತು. ಅದೇ ಸಮಯದಲ್ಲಿ ಹೇಯ ಕೃತ್ಯವಾದ ಗುಲಾಮಗಿರಿ ಮತ್ತು ಇತರ ವ್ಯಾಪಾರಗಳು ಕುದುರಿ ದಲ್ಲಾಳಿಗಳು ಶ್ರೀಮಂತರಾದರು. ಆರ್ಥಿಕವಾಗಿ ಇರುವವರ ಮತ್ತು ಇಲ್ಲದವರ ನಡುವೆ ಕಂದರಗಳು ಮೂಡಿತು. ರಾಜರು, ಸಾಮಂತರು, ಶ್ರೀಮಂತರು ಇಂಗ್ಲೆಂಡಿನಲ್ಲಿ ಭವ್ಯ ಬಂಗಲೆಗಳನ್ನು ಕಟ್ಟಿಕೊಂಡು ಮೇಲಿನ ಹಂತಗಳಲ್ಲಿ ತಾವು ವೈಭವದ ಬದುಕನ್ನು ಅನುಭವಿಸುತ್ತ ವಾಸಿಸುತ್ತಿದ್ದರೇ, ಅದೇ ಮನೆಗಳಲ್ಲಿ ಬಡವರು ತಮ್ಮ ಪ್ರಭುಗಳ ಸೇವೆಗೈಯುತ್ತ ಕೆಳಹಂತದಲ್ಲಿ ಸಾಧಾರಣವಾಗಿ ಬದುಕುತ್ತಿದ್ದರು. ಸಮಾಜದಲ್ಲಿ ಹೀಗೆ ಅಸಮತೆ ಇದ್ದು ಜನ ಅದನ್ನು ಒಪ್ಪಿಕೊಂಡು ಬದುಕುತ್ತಿದ್ದರು. ವಿಕ್ಟೋರಿಯನ್ ಕಾಲಘಟ್ಟದಲ್ಲಿ ರಾಯಲ್ ಹಾರ್ಟಿಕಲ್ಚರಲ್ ಸಂಸ್ಥೆ ಹುಟ್ಟಿಕೊಂಡು ಅದು ಈ ಶ್ರೀಮಂತರ ಮನೆಗಳ ಹೂದೋಟದ ವಿನ್ಯಾಸಕ್ಕೆ ಹೊಸ ಆಲೋಚನೆಗಳನ್ನು, ಸಾಧ್ಯತೆಗಳನ್ನು ಒದಗಿಸಿತು. ಹಳೆ ಮನೆಗಳನ್ನು ಕೆಡವಿ ನೂತನವಾದ ಕಟ್ಟಡಗಳು, ಮತ್ತು ಅದರ ಸುತ್ತಣ ನೂರಾರು ಎಕರೆ ಪ್ರದೇಶಗಳಲ್ಲಿ ಹಸಿರು ಹಾಸು, ಹಲವು ಜಾತಿಯ ಮರಗಳು, ಸರೋವರಗಳು, ಸಂದರ ಅಲಂಕೃತ ಹೂದೋಟಗಳು, ಶಿಲ್ಪಾಕೃತಿಗಳು, ಜಿಂಕೆಗಳು, ನವಿಲುಗಳು ಸೇರಿಕೊಂಡವು. ಈ ಅರಮನೆಗಳು ಅನುವಂಶೀಯವಾಗಿ ಮುಂದಿನ ಪೀಳಿಗೆಗಳಿಗೆ ಹಸ್ತಾಂತರಗೊಂಡವು. ಕಾಲಕ್ರಮೇಣ ಈ ಭವ್ಯವಾದ ಮನೆಗಳನ್ನು ಸುಸ್ಥಿತಿಯಲ್ಲಿ ಇಡಲು ಬೇಕಾದ ಹಣ, ಜನಬಲ ಇವುಗಳ ಕೊರತೆಯಿಂದಾಗಿ ಈ ಕಟ್ಟಡಗಳು ಶಿಥಿಲಗೊಳ್ಳಲು ಶುರುವಾದವು. ಈ ಭವ್ಯವಾದ ಮನೆಗಳನ್ನು ಉಳಿಸಿಕೊಳ್ಳಲು ಅವುಗಳನ್ನು ದತ್ತಿ ಸಂಸ್ಥೆಗೆ ಮಾರಿಕೊಳ್ಳುವುದು ಅನಿವಾರ್ಯವಾಯಿತು. ಇಪ್ಪತನೆ ಶತಮಾನದಲ್ಲಿ ಹಲವಾರು ಸರ್ಕಾರದ ಹೊರಗಿರುವ ಸಂಘಟನೆಗಳಾದ ನ್ಯಾಷನಲ್ ಟ್ರಸ್ಟ್, ಇಂಗ್ಲಿಷ್ ಹೆರಿಟೇಜ್ ಸಂಸ್ಥೆಗಳು ಈ ಕಟ್ಟಡಗಳನ್ನು ಮತ್ತು ವಿಸ್ತಾರವಾದ ತೋಟಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸಿ ಸಾರ್ವಜನಿಕರು ಹಣ ಕೊಟ್ಟು ವೀಕ್ಷಿಸುವ ಒಂದು ವ್ಯಾಪಾರವಾಗಿ ಮಾರ್ಪಾಟು ಮಾಡಬೇಕಾಯಿತು. ಈ ವ್ಯವಸ್ಥೆ ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕದವಾದ ಆಯೋಜನೆ ಎನ್ನಬಹುದು. ಈ ರೀತಿಯ ನೂರಾರು ಭವ್ಯ ಮನೆಗಳು ಯು.ಕೆ.ಯ ಹಲವಾರು ಪ್ರದೇಶಗಳಲ್ಲಿ ಕಟ್ಟಲಾಗಿದ್ದು ಈಗ ಅವು ಸ್ಥಳೀಯ ಪ್ರೇಕ್ಷಣೀಯ ತಾಣವಾಗಿವೆ. ಇಂತಹ ಒಂದು ತಾಣವಾದ ಬ್ರಾಡ್ಸ್ ವರ್ತ್ ಹಾಲ್ ಕುರಿತು ಡಾ.ದೇಸಾಯಿಯವರು ಲೇಖನವನ್ನು ಬರೆದು ಓದುಗರಿಗೆ ಪರಿಚಯಿಸಿದ್ದಾರೆ. ಈ ಬರಹದಲ್ಲಿ ಬ್ರಾಡ್ಸ್ ವರ್ತ್ ಹಾಲಿನ ಇತಿಹಾಸ, ಮಾಹಿತಿ, ಮತ್ತು ಹೂದೋಟದ ಸುಂದರ ವರ್ಣನೆ ಇವೆ. ಈ ಲೇಖನ ಎರಡು ಕಂತಿನಲ್ಲಿ ಪ್ರಕಟವಾಗುತ್ತಿದೆ. ಎರಡನೇ ಕಂತನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ. -ಸಂಪಾದಕ
ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 1 – ಶ್ರೀವತ್ಸ ದೇಸಾಯಿ
ಈ ಲೇಖನದ ಕೊನೆಯಲ್ಲಿ ವಿಡಿಯೋ ಇದೆ
ನಾನು ಹೇಳ ಹೊರಟಿದ್ದು ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿರುವ ನಮ್ಮೂರಾದ ಡೋಂಕಾಸ್ಟರ್ ದಲ್ಲಿರುವ ಬ್ರಾಡ್ಸ್ ವರ್ತ್ ಎನ್ನುವ ಹೆಸರಿನ ಕಂಟ್ರಿ ಹೋಂ (Country Home) ಅಥವಾ ‘ಜಮೀನುದಾರರ ಮನೆ’. ಆ ಅಕರ್ಷಕ ಮನೆ ಮತ್ತು ಅದರ ಸುತ್ತಲಿನ ಸ್ಥಿರಾಸ್ತಿ (ಎಸ್ಟೇಟ್) ನಮ್ಮೂರಿನ ಗುಟ್ಟು. Doncaster’s best kept secret ಎಂದು ಕೆಲವರೆಂದರೆ, ಅಮೀರ್ ಖುಸ್ರೋನ ಮಾತುಗಳನ್ನೇ ಬಳಸಿ ’ಗರ್ ಫಿರ್ದೌಸ್ ಬರ್- ರುಯೇ-ಜಮೀ -ಅಸ್ತ್; ಹಮೀ ಅಸ್ತೋ, ಹಮೀ ಅಸ್ತೋ ಹಮೀ ಅಸ್ತ್’ ಅಂತ ಮೂರು ಬಾರಿ ಅದು ”ಭೂಲೋಕದ ಸ್ವರ್ಗ” ಎಂದು ಫೇಸ್ ಬುಕ್ಕಿನಲ್ಲಿ ಉತ್ಪ್ರೇಕ್ಶೆ ಮಾಡಿದವರೂ ಇದ್ದಾರೆ. ಮೇಲೆ ಉಲ್ಲೇಖಿಸಿದ ಆ ವರ್ಣನೆ ಜಹಾಂಗೀರ ಕಂಡ ಕಾಶ್ಮೀರ್ ಅಂತ ಕೆಲವರ ವಾದ. ಅದೇನೇ ಇರಲಿ ಜಹಾಂಗೀರನಂತೆ ಎಂಟು ಸಲ ಅಲ್ಲದಿದ್ದರೂ ಪ್ರತಿಯೊಬ್ಬರೂ ಒಮ್ಮೆಯಾದರೂ ಬಂದು ನೋಡುವಂಥ ಸ್ಥಳ ಅದು. ನಾನಂತೂ ಹಲವಾರು ಸಲ ಭೇಟಿಕೊಟ್ಟಿದ್ದೇನೆ ’ನಮ್ಮೂರ ರತ್ನ’ಕ್ಕೆ. ಮೇ ತಿಂಗಳ ಹೂಬಿಸಿಲಲ್ಲಿ ಹಳದಿ ಹೂಗಳ ಲೆಬರ್ನಂ ಕಮಾನಿನ ಕೆಳಗೆ ನಿಂತು ನೋಡಿದಾಗ ಆ ಹಳದಿ ಕಲ್ಲಿನ ಕಟ್ಟಡ ಕಂಗೊಳಿಸುವ ಆ ದೃಶ್ಯವೊಂದೇ ಸಾಕು ನೀವು ತೆತ್ತ ಹದಿನಾಲ್ಕು ಪೌಂಡುಗಳ ಪ್ರವೇಶ ದರ ವಸೂಲಾಗಲು! ಬನ್ನಿ, ಈಗ ಈ ಮಹಲಿನ ಕಥೆಯನ್ನು ಅರಿಯೋಣ.

ಈ ಮನೆಯ ಇತಿಹಾಸ ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಆರಂಭವಾಗುತ್ತದೆ. ಎಂಟು ಸಾವಿರ ಎಕರೆಗಳ ಎಸ್ಟೇಟ್ ಮತ್ತು ಅದರ ಮಧ್ಯದ ’ಹಾಲ್’ (ಇಲ್ಲಿ ತಾವು ವಾಸಿಸುವ ಭವ್ಯ ಮನೆಗೆ ’ಹಾಲ್’ ಎಂದು ಕರೆಯುವ ವಾಡಿಕೆ) ಸ್ವಿಸ್ಸರ್ಲೆಂಡಿನ ಜೆನೀವಾದಲ್ಲಿ ಬ್ಯಾಂಕರ್ ಆಗಿದ್ದ ಪೀಟರ್ ಥೆಲುಸ್ಸನ್ ಎನ್ನುವವನ ಪಾಲಿಗೆ ಬಂದದ್ದು 1790 ರಲ್ಲಿ. ಫ್ರಾನ್ಸ್ ದೇಶದ ಲಿಯಾನ್ ದಿಂದ ಕ್ಯಾಥೊಲಿಕ್ ಫ್ರೆಂಚರ ಮತಾಂಧತೆಗೆ ಗುರಿಯಾಗಿ ಹೊರದೂಡಲ್ಪಟ್ಟು ಇಂಗ್ಲೆಂಡಿಗೆ ವಲಸೆ ಹೋದ ಹ್ಯೂಗೆನೋ (Hugenot) ಎನ್ನುವ ಪ್ರಾಟೆಸ್ಟಂಟ ಕ್ರಿಸ್ತ ಮತದ ಅನುಯಾಯಿಗಳ ಮನೆತನದಲ್ಲಿ ಹುಟ್ಟಿದ ಆತನ ಕುಟುಂಬ ಈ ದೇಶಕ್ಕೆ ಬಂದು ನೆಲೆಸಿ ಶ್ರೀಮಂತರಾದರು. ಆ ಶ್ರೀಮಂತಿಕೆಯ ಹಿಂದಿನ ರಹಸ್ಯವನ್ನು ಮುಂದಿನ ಕಂತಿನಲ್ಲಿ ನೋಡುವಾ. ತಾನು ಗಳಿಸಿದ ಸೊತ್ತು ತನ್ನ ತರುವಾಯ ತನ್ನ ವಂಶಜರಿಂದ ಜಾರಿಹೋಗದಿರಲೆಂದು ಆತ ಚತುರತೆಯಿಂದ ಬರೆದ ಚರಿತ್ರಾರ್ಹ ಉಯಿಲಿನ ಪ್ರಕಾರ ಅರ್ಧ ಶತಮಾನದ ನಂತರ ಆತನ ಮೊಮ್ಮಗ ಆಗರ್ಭ ಶ್ರೀಮಂತ ಚಾರ್ಲ್ಸ್ ಥೆಲುಸ್ಸನ್ ಅದರ ವಾರಸುದಾರನಾದ. ಹಳೆಯ ಮನೆಯನ್ನು ಕೆಡವಿಸಿ ಹೊಸದಾಗಿ ಈಗ ನಾವು ನೋಡುವ ಮನೆ ಮತ್ತು ಅದರ ಸುತ್ತಲಿನ ಅತ್ಯಂತ ಸುಂದರ ತೋಟಗಳನ್ನು ತನ್ನ ಅಂತಸ್ತಿಗೆ ತಕ್ಕಂತೆ ನಿರ್ಮಿಸಿದ. ಅದು ಶ್ರೀಮಂತರ ಆಡುಂಬೊಲವಾಯಿತು. ಆ ನಂತರ ತಲೆತಲಾಂತರವಾಗಿ ಈ ಆನುವಂಶಿಕ ಸೊತ್ತು ಆ ಮನೆತನದಲ್ಲಿ ಉಳಿದವು. ಅದನ್ನು ಬಿಟ್ಟಗಲದೆ ಅದರ ಒಂದು ಕೋಣೆಯಲ್ಲಿ ಮಾತ್ರ ತಾನೊಬ್ಬಳೇ ವಾಸವಾಗಿದ್ದ ಕೊನೆಯ ಮಾಲಕಿ ಸಿಲ್ವಿಯಾ 1988 ರಲ್ಲಿ ತೀರಿಕೊಂಡಾಗ ಆ ಭವ್ಯ ವಿಕ್ಟೋರಿಯನ್ ಮಹಲು ಮತ್ತು ಒಳಗಿನ ಬೆಲೆ ಬಾಳುವ ಸಂಗ್ರಹಗಳು ಅ ಕಾಲಘಟ್ಟದಲ್ಲೇ ಹೆಪ್ಪುಗಟ್ಟಿ ನಿಂತಿದ್ದವು. ಪಾಳು ಬೀಳುತ್ತಿದ್ದ ಸೋರುತ್ತಿದ್ದ ಸೂರು ಮತ್ತು ಧೂಳಿನಿಂದಾವೃತವಾದ ಬೆಲೆಬಾಳುವ ಮಹೋಗನಿ ಪೀಠೋಪಕರಣ, ಸಜ್ಜು-ಸರಂಜಾಮುಗಳು ಬಿಕೋ ಎನ್ನುತ್ತಿದ್ದವು. ಅವಳ ಮಗಳು ಇಂಗ್ಲಿಷ್ ಹೆರಿಟೇಜ್ (English Heritage) ಎನ್ನುವ ಚ್ಯಾರಿಟಿ ಸಂಸ್ಥೆಗೆ ಅದನ್ನು ಕೊಟ್ಟು ಪುನರುಜ್ಜೀವನಗೊಳಿಸಿದ ನಂತರ ಸಾವಿರಾರು ಪ್ರೇಕ್ಷಕರನ್ನು ವರ್ಷವಿಡೀ ಆಕರ್ಷಿಸುತ್ತಿದೆ. ಕೋವಿಡ್ ನಂತರದ ಈ ವರ್ಷದಲ್ಲಿ ಮರಳಿ ಬಂದ ಜನ ಸಂದಣಿ ಅದರ ಜನಪ್ರಿಯತೆಗೆ ಸಾಕ್ಷಿ.
ನವನವೋನ್ಮೇಷಶಾಲಿನಿ ಬ್ರಾಡ್ಸ್ ವರ್ತ್
ಕಳೆದ ನಾಲ್ಕು ದಶಕಗಳಲ್ಲಿ ಅಲ್ಲಿಗೆ ನಾನು ಅನೇಕ ಸಲ ಭೆಟ್ಟಿಕೊಟ್ಟಿದ್ದೇನೆ. 15 ಏಕರೆ ಗಾರ್ಡನ್ ವಿವಿಧ ಋತುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನವವವಧುವಿನಂತೆ ಸಿಂಗರಿಸಿಕೊಳ್ಳುತ್ತದೆ. ಅದಕ್ಕೆ ಅದರಲ್ಲಿಯ landscaped gardens ಕಾರಣ. ಭೂಮಿಯ ಏರಿಳಿತಕ್ಕನುಗುಣವಾಗಿ ನಿರ್ಮಿಸಿದ ಹೂವಿನ ತೋಟಗಳು, ಹೂವಿನ ಬಳ್ಳಿಯ ಮತ್ತು ಕಲ್ಲಿನ ಕಮಾನುಗಳು, ಉದ್ದನ್ನ ಗುಲಾಬಿಗಳ ಬಳ್ಳಿಮನೆ (pergola), ಧನುರ್ ವಿದ್ಯೆ (archery)ಗಾಗಿಯೇ ನಿರ್ಮಿಸಿದ ಟಾರ್ಗೆಟ್ ಹೌಸ್, ಹಸಿರು ಮಲ್ಮಲ್ ನಂತೆ ’ಕ್ರೋಕೆ’ ಆಟಕ್ಕಾಗಿ ನಿರ್ಮಿಸಿದ ಹುಲ್ಲಿನ ಮೈದಾನ, ಬೇಲಿಗುಂಟ ವಿವಿಧ ಭಂಗಿಗಳಲ್ಲಿ ಮುದ್ದಿನ ಪ್ರಾಣಿ, ಪಕ್ಷಿಗಳೊಂದಿಗೆ ಅಲ್ಲಲ್ಲಿ ನಿಂತ ಯುವತಿಯರ ಬಿಳಿ ಕಲ್ಲಿನ ಶಿಲ್ಪಗಳು; ಇವೆಲ್ಲ ಒಂದು ತರಹದ ’ರಾಜವೈಭವವನ್ನು’’ ಸಾರುತ್ತವೆ. 19ನೆಯ ಶತಮಾನದ ಮಧ್ಯದಲ್ಲಿ ಒಂದೇ ದಶಕದಲ್ಲಿ ಈ ಮನೆ ಮತ್ತು ಸುತ್ತಲಿನ ತೋಟವನ್ನು ನಿರ್ಮಿಸಿದ ಕೀರ್ತಿ ಆ ಬ್ಯಾಂಕರ್ ನ ಮೊಮ್ಮಗ ಚಾರ್ಲ್ಸ್ ಸಾಬಿನ್ ಆಗಸ್ಟಸ್ ಥೆಲುಸ್ಸನ್ ಗೆ ಸಲ್ಲುತ್ತದೆ. ತನ್ನ ಕುಟುಂಬದ ವಾಸಸ್ಥಾನವಾದ ಮೂರಂತಸ್ತಿನ ’ಹಾಲ್’ ಅಂದರೆ ಮಹಲನ್ನು ಮ್ಯಾಗ್ನೀಸಿಯನ್ ಸುಣ್ಣದ ಕಲ್ಲಿನಿಂದ ಕಟ್ಟಿಸಿದ. ಅದರ ಸುತ್ತಲೂ ವಿಶಾಲವಾದ ತೋಟ. ಮೇ ತಿಂಗಳಿನಲ್ಲಿ ಲೆಬರ್ನಮ್ (ಕುಕ್ಕೆ) ಹೂ ಮರದ ಕಮಾನಿನ ತೋರಣದಲ್ಲಿ ಹಳದಿ ಹೂಗಳು ಜೋತು ಬಿದ್ದಾಗ ತೆಗೆದ ಫೋಟೋಗಳನ್ನು ಪ್ರತಿವರ್ಷವೂ ಫೇಸ್ ಬುಕ್ ತುಂಬ ನೋಡ ಬಹುದು. ವಸಂತಋತುವಿನಲ್ಲಿ ಉದ್ಯಾನದ ಉದ್ದಗಲಕ್ಕೂ ರಚಿಸಿದ ಪಾತಿಗಳ ತುಂಬ ಬಣ್ಣ ಬಣ್ಣದ ಹೂಗಳು. ಅದನ್ನು ನೋಡಲು ಜನ ಹಿಂಡು ಹಿಂಡಾಗಿ ಬಂದು ಸೇರುತ್ತಾರೆ. ಅವುಗಳನ್ನು ದಾಟಿ ಮುಂದೆ ಹೋದರೆ ಮೆಟ್ಟಲುಗಳ ಇಕ್ಕೆಲಗಳಲ್ಲಿ ಕಿರುಕಂಟಿ ಫರ್ನ್ ಪ್ರಭೇದಗಳಿಂದ ತುಂಬಿದ ಗ್ರೋಟೋ (grotto). ಕೆಲವರಿಗೆ ಜೂನ್ ತಿಂಗಳಿನಲ್ಲಿ ಸುಗಂಧ ಬೀರುವ ಗುಲಾಬಿಗಳ ಛಾವಣಿಯಡಿ ನಡೆದಾಡಲು ಬಲು ಖುಶಿ. ಅದರ ಇನ್ನೊಂದು ತುದಿಯಲ್ಲಿ ಎತ್ತರದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿದ ಪುಟ್ಟ ಸಮ್ಮರ್ ಹೌಸ್ ದಲ್ಲಿ ನಿಂತು ಪುನರ್ನಿರ್ಮಿಸಿದ ತೋಟ ಮತ್ತು ಮಹಲಿನ ಗಾಂಭೀರ್ಯ ಸೌಂದರ್ಯವನ್ನು ಸವಿಯಬಹುದಾಗಿದೆ.

ಬ್ರಾಡ್ಸ್ ವರ್ತ್ ಹಾಲ್
ವಿಕ್ಟೋರಿಯಾ ಕಾಲದ ಒಬ್ಬ ಸಿರಿವಂತ ”ಜಮೀನ್ದಾರಿ’’ ಮನೆತನದ ವೈಭವವನ್ನು ನೋಡಬೇಕೆಂದರೆ ಇಂಥದೊಂದು ಭವ್ಯ ಮನೆಯಯೊಳಗೆ ಕಾಲಿಡಬೇಕು. ಅದು ಸಣ್ಣದೊಂದು ಗುಡ್ಡದ ಮೇಲೆ ನಿಂತಿದೆ. ಹಸಿರುಟೊಂಗೆಗಳನ್ನು ಕೈಚಾಚಿ ಕನಿಷ್ಠ ಪಕ್ಷ 350 ವಸಂತಗಳನ್ನು ನೋಡಿದ ಲೆಬನೀಸ್ ಸಿಡಾರ್ ಜಾತಿಯ ಮಹಾವೃಕ್ಷ ಅದರದ್ವಾರದಲ್ಲಿ. ಅದನ್ನು ಬಳಸಿದ ಡ್ರೈವ್ ಮೇಲೆ ಕುದುರೆಗಳ ಸಾರೋಟಿನಲ್ಲಿ ಆರೂಢನಾಗಿ ಬಂದ ’ಸಾಹೇಬ’ನನ್ನು ಪೋರ್ಟಿಕೋದಲ್ಲಿ ಸ್ವಾಗತಿಸಲು ನಿಂತಿರುತ್ತಿದ್ದ ಅದರ ಮನೆಯಾಳು (footman). ಘನವಾದ ಮಹೋಗನಿ ಬಾಗಿಲನ್ನು ತೆರೆದು ಒಳಗೆ ಹೋದವರನ್ನು ಸ್ವಾಗತಿಸುವ ’ಮೊಗಸಾಲೆಯಲ್ಲಿ ಹಲವಾರು ಇಟಲಿಯ ಅಮೃತಶಿಲೆಯ ಶಿಲ್ಪಗಳು ಕಣ್ಸೆಳೆಯುತ್ತವೆ. ಅವುಗಳಲ್ಲಿ ಒಂದೇ ಕಲ್ಲಿನಲ್ಲಿ ಶಿಲ್ಪಿ ಪಿಯಟ್ರೋ ಮ್ಯಾಗ್ನಿ ಕೊರೆದ ”ಉಯ್ಯಾಲೆಯಾಡುತ್ತಿರುವ ಕುವರಿ” ಯ ಶಿಲ್ಪ ಅತ್ಯಂತ ಆಕರ್ಷಕ. ಅದರಾಚೆಗೆ ಮೇಲ್ಮನೆಗೆ ಹೋಗುವ ಮೆಟ್ಟಿಲುಗಳು ಕಾಣುತ್ತವೆ. ಕೆಳಮನೆಯ ಕೋಣೆಗಳನ್ನೆಲ್ಲ ಎತ್ತಿ ಹಿಡಿದ ಸ್ಕಾಗ್ಲಿಯೊ ಎನ್ನುವ ಇಮಿಟೇಷನ್ ಮಾರ್ಬಲ್ ’ಶಿಲಾ” ಸ್ತಂಭಗಳು; ನೆಲದ ಮೇಲೆ ಮೆತ್ತನೆಯ ರತ್ನಗಂಬಳಿ, ಅನೇಕ ಶಿಲ್ಪಗಳು; 400ಕ್ಕೂಹೆಚ್ಚಿನ ಮರದ ಫರ್ನಿಚರ್ಗಳು ’ಮಹೋಗನಿ ಗಾನ’ದ ನಿಟ್ಟುಸಿರನ್ನು ಬಿಡುತ್ತವೆ (ಮುಂದಿನ ಕಂತಿನಲ್ಲಿ ಓದಿ). ಅದೇ ಮರದಿಂದ ಕೆತ್ತಿದ ಡೈನಿಂಗ್ ಟೇಬಲ್, ಕುರ್ಚಿ, ಊಟದ ಮನೆಯ ಪೀಠಗಳು, ದಿವಾನ ಖಾನೆಯಲ್ಲಿ ಓಟೋಮನ್ ಆಸನಗಳು, ಅವಕ್ಕೆ ’ಚಿನ್ಜ್’ ಹೊದಿಕೆಗಳು; ಗೋಡೆಯಮೇಲಿನ ಬೆಲೆಬಾಳುವ ಚಿತ್ರಗಳು; ಅವುಗಳಲ್ಲಿ ಹಲವಾರು ಮಾಲಕರ ರೇಸ್ ಕುದುರೆಗಳ ಚಿತ್ರಗಳು ಬಿಲಿಯರ್ಡ್ ರೂಮಿನ ಗೋಡೆಗಳ ಮೇಲೆ; ಅಮೂಲ್ಯ ವಸ್ತುಸಂಗ್ರಹಗಳು; ಬೆಳ್ಳಿ ಪಾರಿತೋಷಕಗಳು (Trophies) ವಿವಿಧ ಕೋಣೆಗಳನ್ನು ತುಂಬಿವೆ. ಈ ಮನೆ ಮೂರು ಅಂತಸ್ತಿನಲ್ಲಿದ್ದರೂ ಪ್ರಮುಖವಾಗಿ “Upstairs and Downstairs Life Style” ಅನ್ನು ಪ್ರತಿನಿಧಿಸುತ್ತದೆ. ಅದೊಂದು ಪ್ರಖ್ಯಾತ ಟೆಲಿವಿಷನ್ ಸರಣಿಯ ಶೀರ್ಷಿಕೆಯಾಗಿತ್ತು ಸಹ. ಮೇಲ್ಮನೆಗಳಲ್ಲಿ ಶ್ರೀಮಂತರ ವಾಸ. ಅಂದರೆ ನೆಲಮಾಳಿಗೆಯಲ್ಲಿ ಬಟ್ಲರ್ ಮತ್ತು ಸೇವಕರು. ಕೆಳಮನೆಯಲ್ಲಿ(basement) ವಿಶಾಲವಾದ ಕಿಚನ್. ಅದರಾಚೆಗೆ ಸೇವಕ ಸೇವಕಿಯರ ವಾಸಸ್ಥಳ, ವಿಶ್ರಾಂತಿ ಕೋಣೆಗಳು. 1990ರಲ್ಲಿ ಇದನ್ನು ಕೊಂಡು ನಿರ್ವಹಿಸುತ್ತಿರುವ ಇಂಗ್ಲಿಷ್ ಹೆರಿಟೇಜ್ ಸಂಸ್ಥೆ ಸೋರುತ್ತಿದ್ದ ಸೂರುಗಳಿಗೆ ಆವಶ್ಯಕ ದುರಸ್ತಿ-ರಿಪೇರು ಮಾಡಿದ ನಂತರ ಕೊನೆಯ ಮಾಲಕರು ಬಿಟ್ಟ ಸ್ಥಿತಿಯಲ್ಲೇ ಮನೆಯನ್ನು ಇಟ್ಟಿದ್ದಾರೆ. ಗೋಡೆಯ ಮೇಲಿನ ವಾಲ್ ಪೇಪರುಗಳು ಅಲ್ಲಲ್ಲಿ ಮಾಸಿದ್ದು ಕಾಣಿಸುತ್ತದೆ. ಆದರೆ ಕೆಂಪು-ಕಂದು ಬಣ್ಣದ ಪಾಲಿಶಿನಿಂದ ಮಿರಿ ಮಿರಿ ಮಿಂಚುವ ಮಹೋಗನಿ ಬಾಗಿಲು ಟೇಬಲ್ಗಳು ಮಾತ್ರ ಕಳೆದ ವರ್ಷವಷ್ಟೇ ತಂದು ಕಟ್ಟಿದಂತೆ ಭ್ರಮೆ ಹುಟ್ಟಿಸುತ್ತವೆ.

ಮೋಡಿಮಾಡಿದ ರಾತ್ರಿಯ ತೋಟ (Enchanted Garden)
ಇದು ಬ್ರಾಡ್ಸ್ವರ್ತ್ ತೋಟದ ಶರದೃತುವಿನ ವಾರ್ಷಿಕ ಆಕರ್ಷಣೆಯಾಗಿತ್ತು. ಅಕ್ಟೋಬರ್ ತಿಂಗಳ ಎರಡು ವಾರ ರಾತ್ರಿ ಸಮಯದಲ್ಲಿ ತೋಟದ ತುಂಬೆಲ್ಲ ವಿವಿಧ ಬಣ್ಣದ ವಿದ್ಯುತ್ ಬಲ್ಬುಗಳಿಂದ ದೀಪಾಲಂಕಾರ ಮಾಡಿರುತ್ತಾರೆ! ಅದೆಷ್ಟೋ ಸಲ ಹಗಲಿನಲ್ಲಿ ಆ ತೋಟದ ಸೊಬಗನ್ನು ಕಣ್ಣಾರೆ ಕಂಡಿದ್ದರೂ ಆ ಸಮಯದಲ್ಲಿ ಅದೊಂದು ಇಂದ್ರನ ನಂದನವನವಾಗಿ ಮಾರ್ಪಟ್ಟಿರುತ್ತದೆ. ಆ ನೋಟವನ್ನು ಸವಿಯಲು ಮೊದಲೇ ಸ್ಪೆಶಲ್ ತಿಕೀಟು ಕೊಳ್ಳದಿದ್ದರೆ sold out ಆಗುವ ಸಾದ್ಯತೆ ಹೆಚ್ಚು. ಈಗ ಕೋವಿಡ್ನಿಂದಾಗಿ ಈ ವಾರ್ಷಿಕ ಸಂಭ್ರಮ ನಿಂತು ಹೋಗಿರಬಹುದು. ಇಷ್ಟರಲ್ಲಿ ಇದನ್ನು ಮತ್ತೆ ಪ್ರಾರಂಭವಾಗಲೆಂದು ಆಶಿಸುವೆ.

ಮುದ್ದು ಪ್ರಾಣಿಗಳ ಕಬ್ರಸ್ತಾನ (Animal cemetery)
ಬ್ರಿಟಿಶರಿಗೆ ಸಾಕು ಪ್ರಾಣಿಗಳೆಂದರೆ (pets) ಪಂಚಪ್ರಾಣ. ದೇಶದ ವಿವಿಧ ಕಡೆಗಳಲ್ಲಿ ತಮ್ಮ ಮುದ್ದು ಪ್ರಾಣಿಗಳಿಗಾಗಿಯೇ ಗೋರಿಗಳನ್ನು ಕಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಲಂಡನ್ನಿನ ಹೈಡ್ ಪಾರ್ಕಿನಲ್ಲಿ 300ನಾಯಿಗಳನ್ನು ಹೂತಿದ್ದಾರೆ. ಪ್ರಸಿದ್ಧ ಆಂಗ್ಲ ಕವಿ ಬೈರನ್ ತನ್ನ ಮುದ್ದು ನಾಯಿ ಬೋಟ್ಸ್ ವೇನಿಗೆ ಸಂಗಮರವರಿ ಕಲ್ಲಿನ ಸ್ಮಾರಕವನ್ನು ಕಟ್ಟಿಸಿದ. ಬ್ರಾಡ್ಸ್ವರ್ತ್ ನಲ್ಲಿ ತೀರಿಕೊಂಡ ಮುದ್ದು ಪ್ರಾಣಿಗಳಿಗಾಗಿಯೇ ತೋಟದ ಒಂದು ಮೂಲೆಯಲ್ಲಿ ಸ್ಪೇಶಲ್ ಕಬ್ರಸ್ತಾನವಿದೆ. ಅಲ್ಲಿ ‘ಕೂಪ್’ ಎನ್ನುವ ನಾಯಿಯಿಂದ ಮೊದಲ್ಗೊಂಡು ಪಾಲಿ ಎನ್ನುವ ಗಿಣಿಯ ವರೆಗೆ ಸಾಲಾಗಿ ಮಣ್ಣುಮಾಡಿದ ಹತ್ತಿಪ್ಪತ್ತು ಪ್ರಾಣಿಗಳ ಹೆಸರುಗಳನ್ನು ಗೋರಿಗಳ ಮೇಲೆ ಕಾಣಬಹುದು. ಕೂಪ್ ನ ಪೇಂಟಿಂಗ್ ಸಹ ’ಹಾಲ್’ ನ ಮೊದಲ ಕೋಣೆಯಲ್ಲಿದೆ.

ಅವನತಿಯತ್ತ ಸರಿದ ಬ್ರಾಡ್ಸ್ವರ್ತ್
ಇಂಗ್ಲಿಷ್ ಹೆರಿಟೇಜ್ ನವರು 1990ರಲ್ಲಿ ಇದನ್ನು ಕೊಳ್ಳುವ ಮೊದಲು ಒಂದುಕಾಲದಲ್ಲಿ ’ರಾಜವೈಭವ’ದಿಂದ ಮೆರೆದ ಈ ಎಸ್ಟೇಟ್ ಬರಬರುತ್ತ ಪೂರ್ತಿಯಾಗಿ ಅವನತಿಯತ್ತ ಸರಿಯಲಾರಂಭಿಸಿತ್ತು. ಒಂದು ಕಾಲದಲ್ಲಿ ಚಾರ್ಲ್ಸ್ ಥೆಲ್ಲುಸನ್ ಕಾಲದಲ್ಲಿ ಹತ್ತಾರು ಸೇವಕರು, ಅಡಿಗೆಯವರು, ಆಳುಗಳಿಂದ ಮತ್ತು ತೋಟಗಾರರಿಂದ ತುಂಬಿರುತ್ತಿತ್ತು. ಪಕ್ಷಿಗಳ ಶೂಟಿಂಗ್ ಸೀಸನ್ನಿನಲ್ಲಿ ಆತನೇರ್ಪಡಿಸಿದ ಅದ್ದೂರಿ ಪಾರ್ಟಿಗೆಂದು ಬಂದ ಅಂತಸ್ತಿನ ಜನರಲ್ಲಿ ಈತನ ಆತಿಥ್ಯ ಮನೆಮಾತಾಗಿತ್ತು. ಮನೆಯ ಮಾಲೀಕರ ನಡತೆಯಲ್ಲೂ ಆಢ್ಯತೆ ಇತ್ತು. ತನಗೆ ಇಷ್ಟವಿದ್ದ ರೀತಿಯಲ್ಲಿ ಮಾಂಸವನ್ನು ರೋಸ್ಟ್ ಮಾಡಿರದಿದ್ದರೆ ಅದನ್ನು ಅಸಿಸ್ಟಂಟ್ ಕುಕ್ ಟೇಬಲ್ಲಿನ ಮೇಲಿಟ್ಟು ಸಜ್ಜುಗೊಳಿಸಿ ಬರುವಷ್ಟರಲ್ಲೇ ಆಕೆಯೇ ಹಿಂದೆಯೇ ಆ ಜಾಯಿಂಟು ರವಾನಿಯಾಗಿ ಬಂದು ಬೀಳುತ್ತಿತ್ತು! ಅದರ ಜೊತೆಗೇ ’ಸಾಹೇಬನ’ ಅಬ್ಬರ, ಬೈಗುಳ, ಇತ್ಯಾದಿ. ಕಾಲಕ್ರಮೇಣ ಎಸ್ಟೇಟಿನ ಆಮದು ಕಡಿಮೆಯಾಯಿತು. ಮಾಲಕರ ಸ್ವಾಮಿತ್ಯದಲ್ಲಿದ್ದ ಕಲ್ಲಿದ್ದಲು ಗಣಿಗಳ ಆಮದು ಕುಂಠಿತವಾಯಿತು. ಇಂಗ್ಲಿಷ್ ಕಾಯಿದೆಯ ಪ್ರಕಾರ ತೆತ್ತಬೇಕಾದ ಮರಣ ಸುಂಕ (ಡೆತ್ ಡ್ಯೂಟಿ) ಇಂಥ ಎಲ್ಲ ”ಕಂಟ್ರಿ ಜೆಂಟ್ಸ್” ಗಳಿಗೆ ಮಾರಕವಾಗಿ ಪರಿಣಮಿಸಿತು. ದೊಡ್ಡ ಮನೆಗಳ ಮೇಲ್ಛಾವಣಿಗಳು ಸೋರಿ ರಿಪೇರಿ ಕೆಲಸದ ವೆಚ್ಚ ದುಬಾರಿಯಾಯಿತು. ಚಳಿಗಾಲದಲ್ಲಿ ಇಡೀ ಮನೆಯಯನ್ನು ಕಾಯಿಸುವ ಬದಲು ವಾಸದ ಕೋಣೆಗಳನ್ನಷ್ಟೇ ಬೆಚ್ಚಗಿಡಬೇಕಾದ ಪ್ರಸಂಗ ಬಂತು. ಕೊನೆಯ ಮಾಲಕಿ ಸಿಲ್ವಿಯಾ ಗ್ರಾಂಟ್-ಡಾಲ್ಟನ್ ಒಂಟಿಯಾಗಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದಳು. ಪಾಳು ಬೀಳುತ್ತಿದ್ದ ಬ್ರಾಡ್ಸ್ವರ್ತ್ ಹಾಲ್ ಗೆ ಪುನರ್ಜನ್ಮ ಕೊಟ್ಟಿದ್ದು ಇಂಗ್ಲಿಷ್ ಹೆರಿಟೇಜ್ ದತ್ತಿ ಸಂಸ್ಥೆ.

ಈಗ ಬ್ರಾಡ್ಸ್ ವರ್ತ್ ನಲ್ಲಿ ಬ್ರಿಟಿಷ್ ಬೇಸಿಗೆಯ ಪ್ರತಿ ಆದಿತ್ಯವಾರ ಮಧ್ಯಾಹ್ನ ಹೊರಾಂಗಣದಲ್ಲಿ ಬ್ರಾಸ್ ಬ್ಯಾಂಡ್ ಸಂಗೀತ ಕಚೇರಿ ನಡೆಯುತ್ತಿದೆ. ಪ್ರೇಕ್ಷಕರು ಅದನ್ನು ಕೇಳುತ್ತ ಬಿಸಿಲಿನಲ್ಲಿ ಕುರ್ಚಿಯಲ್ಲಿ ಕುಳಿತು ಮಧ್ಯಾಹ್ನದ ಎರಡೂವರೆಗೆ ಚಹ ಸೇವಿಸುತ್ತ ಕೇಕ್ ತಿನ್ನುವದು ಈಗ ಕಂಡುಬರುವ ಸರ್ವೇ ಸಾಮಾನ್ಯ ದೃಶ್ಯ. ಇದೇನಾ ಅಮೀರ್ ಖುಸ್ರೋವಿನ ಕನಸಿನ ’ಹಮೀ ಅಸ್ತ, ಹಮೀ ಅಸ್ತ, ಹಮೀ ಅಸ್ತ್?
ಅನಿವಾಸಿಯಲ್ಲಿನ ಈ ವಾರದ ಲೇಖನ ವಿಶಿಷ್ಟ ಅನಿಸ್ತು ನಂಗೆ. ಒಂದು ಕಾಲಘಟ್ಟದ ಸಾಮಾಜಿಕ, ಆರ್ಥಿಕ ಸ್ಥಿತಿ ಗತಿ, ಅದರಲ್ಲಿನ ಅಂತರ ನಿರ್ಮಿಸಿದ ಜೀವನಶೈಲಿಯಲ್ಲಿನ ವ್ಯತ್ಯಾಸದ ಚಿತ್ರಣದೊಂದಿಗೆ ಆ ಜಮೀನ್ದಾರಿ ಭವನಗಳ ರಾಜವೈಭವ, ಅವು ತಲೆತಲಾಂತರದಿಂದ ಬಂದಿರುವ ರೀತಿ ತುಂಬ ಕುತೂಹಲಕಾರಿ ಅನಿಸಿದ್ದಂತೂ ಖಂಡಿತ. ಇವನ್ನೆಲ್ಲ ಒಳಗೊಂಡ ಆ ಭವನದ ವರ್ಣಮಯ ವರ್ಣನೆ ಸುತ್ತಲಿನ ಹೂದೋಟದಂತೆಯೇ ರಂಗುರಂಗಾಗಿ ಮೋಡಿ ಮಾಡ್ತ, ಒಂದು ಸಂಶೋಧನಾತ್ಮಕ, ಐತಿಹಾಸಿಕ ಮಾಹಿತಿ ಪೂರ್ಣ ಲೇಖನದ ಓದುವಿಕೆಯ ದಟ್ಟ ಅನುಭವ ನೀಡುವದಂತೂ ನಿಜ.ಓದುತ್ತಿದ್ದಂತೆ ಶ್ರೀವತ್ಸ ದೇಸಾಯಿಯವರು ಎಷ್ಟು ಆಳ ಅಧ್ಯಯನ ಮಾಡಿರಬಹುದು ಎಂಬ ಅಚ್ಚರಿಯೂ ಮೂಡಿತು. ಭಾರತೀಯರಲ್ಲೂ ಈ ವೈಭವೀಕರಿಸುವ, ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ಜಾಗ್ರತೆ ಮೂಡಿದರೆಷ್ಟು ಚೆನ್ನ ಎಂದು ಒಂದು ಸಣ್ಣ ಆಶೆಯೂ ಹಣಿಕ್ತು.ಇಂತಹ ಲೇಖನ ನೀಡಿದ್ದಕ್ಕೆ ತುಂಬ ಧನ್ಯವಾದಗಳು ಹಾಗೂ ಅಭಿನಂದನೆಗಳು ಶ್ರೀವತ್ಸ ದೇಸಾಯಿಯವರಿಗೆ.
ಸರೋಜಿನಿ ಪಡಸಲಗಿ
LikeLiked by 1 person
ಅನಿವಾಸಿಯ ಓದುಗಿ ಸರೋಜಿನಿ ಪಡಸಲಗಿಯವರ ಉತ್ಸಾಹಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು. ಇವೆಲ್ಲವನ್ನು ನೋಡಿದರೆ ಅಚ್ಚರಿಯಾಗ ಬಾರದು, ಏಕೆಂದರೆ ಆ ಪ್ರಶಂಸೆ ಆ ಡೋಂಕಾಸ್ಟರಿನ ’ರಹಸ್ಯದ ಗೂಡಿ’ಗೆ ಸಲ್ಲ ಬೇಕು. ಆ Pandora box ನಲ್ಲಿ ಇನ್ನೂ ಏನೇನು ಅಡಗಿದೆಯೋ! ನೋಡುವ ತಿಳಿದುಕೊಳ್ಳುವ ಆಸ್ಥೆಯಿದ್ದರೆ, ಸಮಯವಿದ್ದರೆ ನಾವು ಏನೆಲ್ಲ ಸವಿಯಲಾರೆವು? ಈ ಮಹಲುಗಳನ್ನು ನೋಡಿದಾಗೆಲ್ಲ (ಅವುಗಳ ಸಂಖ್ಯೆ ಈ ದೇಶದಲ್ಲೇ 3 ಸಾವಿರದಷ್ಟು ಕೆಲವಂತೂ ದಿಗ್ಭ್ರಮೆ ಕೊಡುವಂಥವು) ನಮ್ಮ ದೇಶದ ಅಬರ್ಘ್ಯ ರತ್ನಗಳು ಪಾಳು ಬಿದ್ದೋ, ಘೂಳು ಮುಸುಕಿಯೋ ನಾಮೋನಿಶಾನೆಯಿಲ್ಲದೆ ಬಿದ್ದಿರುತ್ತವೆಯಲ್ಲ ಅಂತ ಅನಿಸಿದೆ. ನೀವು ಅನಿಸಿಕೆಗಳನ್ನು ಬರೆದು ತಿಳಿಸಿದ್ದಕ್ಕೆ,ಶ್ರಮಕ್ಕೆ ಮತ್ತೊಮ್ಮೆ ಧನ್ಯವಾದಗಳು
LikeLike
ಲೇಖನ ತುಂಬ ಸುಂದರವಾಗಿದೆ. ಧಾರವಾಡದಲ್ಲಿ ಧಾರಾಮಹಲ ಹಾಗೂ ಮಂಗನಮಹಲ ಇವೆ. ಇವನ್ನು ಯಾರಾದರೂ ದತ್ತಿ ತೊಗೊಳಿಕ್ಕೆ ಸಿದ್ಧರಿದ್ದಾರೆಯೇ?
LikeLiked by 1 person
ದತ್ತಿ? ಎತ್ತಿ ತಂದಿಟ್ಟರೆ ಇಲ್ಲಿ ನೋಡಿಕೊಳ್ಳುವೆ! ಇನ್ನು ಸೀರಿಯಸ್ಸಾಗಿ — ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಉಲ್ಲೇಖಿಸಿದ ಧಾರಾ ಮಹಲು ನಿಜವಾಗಿಯೂ ಅದ್ಭುತ ಕಟ್ಟದ. ನನಗೆ ಕನ್ನಡದ ಅಕ್ಷರ ಮುಹೂರ್ತ ಮಾಡಿದ ತಂದೆಯವರ ಕಚೇರಿ ಅಲ್ಲಿದ್ದಾಗ ಅದರ ಒಳಗೆ ಸಹ ಹೋಗಿದ್ದೆ. ಧಾರವಾಡಕ್ಕೆ ತನ್ನ ಹೆಸರನ್ನು ಕೊಟ್ವವ ಧಾರವ ಎನ್ನುವ ’ರಾಜ’ ಎನ್ನುವ ಐತಿಹ್ಯ. ಅಂದ ಮೇಲೆ ಅದರ ಬಗ್ಗೆ ನನಗೂ ಗೌರವ. ನಿಮಗೆ ಹತ್ತಿರ ಅಂತ ತಿಳಿದು ಸಂತೋಷ. ಚಿಕ್ಕಂದಿನಲ್ಲಿ ನಾನು ’ಮಂಗ್ಯಾತನ ’ ಮಾಡಿದ ಆ ಊರಿನ ಇನ್ನೊಂದು ಮಹಲ ಬಗ್ಗೆ ನಾನರಿಯೆ. ಸಂಶೋಧನೆ ಮಾಡಿ ತಿಳಿದುಕೊಳ್ಳುವೆ. ಮತ್ತೊಮ್ಮೆ ಧನ್ಯವಾದಗಳು. ನಮ್ಮ ಇನ್ನೊಬ್ಬ ಓದುಗರು (ರಾಂ) ತಳುಕು ಹಾಕಿದಂತೆ ನಮ್ಮೂರ”ದೇಸಾಯಿವಾಡೆ’ಗೂ ನಿಮ್ಮೂರ ಧಾರಾಮಹಲಿಗೂ ಸೇತುಬಂಧನ ಆಯಿತಿಂದು!
LikeLike
Very good and informative.
LikeLike
Thank you, B H Katti for reading and taking the trouble to comment.
LikeLike
ದೇಸಾಯಿ ಅವರ ಕಥೆ ಹೇಳುವ ಶೈಲಿ ಅಧ್ಬುತ. ಅವರ ‘ದೇಸಾಯರ ವಾಡಿ’ ಕಥೆ ಹಾಗೂ ಲೇಡಿ ಸಿಲ್ವಿಯಾಳ ಕಡೆಯ ಕಾಲ ಡಿಕನ್ಸನ ‘ಗ್ರೇಟ್ ಎಕ್ಸ್ ಪೆಕ್ಟೇಷನ್’ ಹಾಗೂ ಮಿಸ್ ಹ್ಯಾವಿಶಾಮ್ ಅವರನ್ನು ನೆನಪಿಗೆ ತಂದಿತು.
ಆಂಗ್ಲರಿಗೆ ಸಾಕುಪ್ರಾಣಿಗಳಿಗೆ ಕಬ್ರಸ್ಥಾನ ಕಟ್ಟುವ ಮೋಹ. ಅದಕ್ಕೆ ಜಗತ್ತನ್ನು ಶೋಷಿಸಿ, ಲೂಟಿ ಮಾಡಿದ ಸಂಪತ್ತಿನ ಆಧಾರವೂ ಇದೆ. ಆ ಅಕ್ಕರೆ ಇತರ ದೇಶಗಳಲ್ಲಿ ಎಸಗಿದ ಕ್ರಾರ್ಯಕ್ರೆ ವಿರೋಧಾಭಾಸವಾಗಿ ಪ್ರತಿಫಲಿಸುತ್ತದೆ.
ಸುವರ್ಣ ವರ್ಷ ಪುಷ್ಪದ ಹಂದರ ಪೂರ್ವ ಪ್ರಾಚ್ಯದ ವಿಸ್ಟೀರಿಯಾ ಹಂದರದಂತೇ ಇದೆ. ಕೊನೆಯಲ್ಲಿನ ವಿಡಿಯೋ ಲೇಖನಕ್ಕೆ ದರ್ಶನ. ಮುಂದಿನ ಕಂತಿನಲ್ಲಿ ಜಾಹೀರಾಗುವ ವಿಚಾರಗಳಿಗೆ ಕಾತುರನಾಗಿರುವೆ.
– ರಾಂ
LikeLiked by 1 person
ಧನ್ಯವಾದಗಳು, ರಾಂ. ನೀವು country house ಗೆ ಸರಿಯಾದ ಪರ್ಯಾಯ ಪದವನ್ನು ಹುಡುಕಿದ್ದೀರಿ! ”ದೇಸಾಯಿವಾಡಾ”, ಸರಿಯಾದ ಪದವೇ! ಇನ್ನೊಂದು ಪದ ಠಾಕುರ್ ಹವೇಲಿ ಅನ್ನ ಬಹುದು. ನಿಜ, ಆ ಡಿಕ್ಕಿನ್ಸ್ ಎಲ್ಲೆಡೆಯಲ್ಲೂ ನುಸುಳುತ್ತಾನೆ. ಆ ತರದ ವಯಸ್ಸಾದ ಒಂಟಿ recluse ನಂಥ ಸಿಲ್ವಿಯಾಗಳ ಕಥೆ ಈ ದೇಶಗಳಲ್ಲಿ ಅಪರೂಪವಲ್ಲ. ಹೌದು, ವಿಸ್ಟಿರಿಯಾಗೂ ಲೆಬರ್ನಮ್ ನ ತೂಗುಬಿಟ್ಟ ಹಳದಿ ಹೂ ಸರಗಳಿಗೂ ಹೋಲಿಕೆಯಿದೆ. ನಿಮ್ಮ ತೂಕದ ಕಮೆಂಟುಗಳಿಗೆ ಯಾವಾಗಲೂ ಸ್ವಾಗತ!
LikeLike
What great read written brilliantly by my friend Shrivatsa Desai. Enjoyed it immensely.
There is no limit to his talents. I wonder what next.
Best wishes.
LikeLiked by 1 person
Thank you, Jayakumar, avare, for your interest and for writing in your comments, some exaggerated!. I too wonder!
LikeLike
Inspired to go and visit Broadsworth Hall and Gardens.
LikeLike
ನಿಮ್ಮ ಮಾಹಿತಿಪೂರ್ಣ ಲೇಖನವನ್ನು ವಿಮಾನ ನಿಲ್ದಾಣದಲ್ಲಿ ಕುಳಿತು ಓದಿದೆ.
ಇಂತಹ ಮನೆಗಳು ನಿಜಕ್ಕೂ ಐಶಾರಾಮದ ಸಂಕೇತಗಳು. ಬರೇ ಪಾಳೇಗಾರರು ಕೂಡ ರಾಜರಂತೆ ಬದುಕಿದ್ದುದನ್ನು ನೋಡಬಹುದು. ಅವರ ನಡಾವಳಿ ಇತ್ಯಾದಿ ಕೂಡ ಬಹಳ ಕುತೂಹಲಕಾರಿ.
ಪ್ರವೇಶವನ್ನು ಹೆಚ್ಚೆನಿಸಿದರು ಇಂತಹ ಮನೆಗಳು ಪೂರ್ಣ ವೈಭವವನ್ನು ನೋಡಲು ಒಂದಿಡೀ ದಿನ ಬೇಕಾಗುವುದು ಸುಳ್ಳಲ್ಲ. ಇಂತಹ ಬರಹಗಳನ್ನು ನೀವು ಬಹಳ ಚೆನ್ನಾಗಿ ಬರೆಯುತ್ತೀರಿ.
ಪ್ರಸಾದರ ಸಂಪಾದಕೀಯ ನಿಮ್ಮ ಬರಹಕ್ಕೆ ಉತ್ತಮ ಪರಿಚಯವನ್ನು ನೀಡುತ್ತದೆ.
LikeLiked by 1 person
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಪ್ರೇಮಲತಾ ಅವರೇ. ವಿಮಾನ ನಿಲ್ದಾಣದಲ್ಲಿ ನಿಮ್ಮ ಕಣ್ಸೆಳೆಯಿತೆಂದರೆ ಮತ್ತೇನು ಬೇಕು? ಈ ತರದ ‘ಮನೆಗಳು’ ಈ ನಾಡಿನ ವೈಶಿಷ್ಠ್ಯವೇನೋ! ನಿಜ, ಪ್ರಸಾದರ ಸಂಪಾದಕೀಯದ ‘ಕಮಾನು’ ಸಹ ಸ್ಪೆಷಲ್
LikeLike