ನಾನು  ಸ್ವಾರ್ಥಿ

ಪ್ರೀತಿಯಲ್ಲಿ ಎರಡು ಬಗೆ. ಒಂದು ನಿಸ್ವಾರ್ಥ ಪ್ರೇಮ, ಇನ್ನೊಂದರಲ್ಲಿ ಸ್ವಾರ್ಥ ಅಡಗಿರುವ ಸಾಧ್ಯತೆಗಳಿವೆ. ಒಂದು ತಾಯಿ ಮಗುವಿಗೆ ತೋರುವ ಪ್ರೇಮ ನಿಸ್ವಾರ್ಥ ಪ್ರೇಮದ ಉತ್ತಮ ನಿದರ್ಶನ. ಆಧ್ಯಾತ್ಮಿಕ ನಿಲುವಿನಲ್ಲಿ, ಭಕ್ತಿ ರಸದಲ್ಲಿ ದೇವರ ಬಗೆಗಿನ ಪ್ರೀತಿ ಕೂಡ ಇದೇ ನಿಸ್ವಾರ್ಥ ಪ್ರೇಮದ ಪ್ರತೀಕವಾಗಿ ನಿಲ್ಲುತ್ತದೆ.  ಗಂಡು-ಹೆಣ್ಣಿನ ಮಧ್ಯೆ ಉಂಟಾಗುವ ಅನುರಕ್ತಿಯಲ್ಲಿ, ಪ್ರೇಮದಲ್ಲಿ ಒಂದು ಸ್ವಾರ್ಥತೆ ಇರಬಹುದು. ಲೌಕಿಕ ನೆಲೆಯಲ್ಲಿ ಕಾಣ ಬಹುದಾದ ರಾಧಾ-ಕೃಷ್ಣೆಯರ ಪ್ರೇಮದಲ್ಲಿ ಆ ಸ್ವಾರ್ಥವನ್ನು ಗುರುತಿಸಬಹುದು. ದಾಸಿಯಾಗಿ ಕೃಷ್ಣನಿಗಾಗಿ ಪರಿತಪಿಸುವ ಮೀರಾಳ ಪ್ರೀತಿ ಆಧ್ಯಾತ್ಮಿಕ ನಿಲುವಿನಲ್ಲಿ ನಿರ್ಮಲವಾಗಿ, ನಿಷ್ಕಳಂಕವಾಗಿ ಮತ್ತು ನಿಸ್ವಾರ್ಥವಾಗಿ ಕಾಣುತ್ತದೆ. ಗಂಡು ಹೆಣ್ಣಿನ ಪರಸ್ಪರ ಸಂಬಂಧಗಳಲ್ಲಿ ಮೈ ಮನಸ್ಸುಗಳು ಒಂದಾದರೂ ಅದು ಅನೇಕ ಬದ್ಧತೆಗಳನ್ನು ಬೇಡುತ್ತದೆ. ಪರಸ್ಪರ ಕೊಡುವಿಕೆ, ತ್ಯಾಗ, ಹೊಂದಾಣಿಕೆಗಳು ಅಗತ್ಯವಾಗುತ್ತದೆ. ಪ್ರೇಮಾಂಕುರವಾದ ಇಬ್ಬರಲ್ಲಿ, ಒಬ್ಬರ ಪ್ರೀತಿ ಹೆಚ್ಚು ಏಕಮುಖವಾಗಿ ಹರಿಯತೊಡಗಿದಾಗ, ಅಥವಾ ಇನ್ನೊಬ್ಬರು ಆ ಸಂಬಂಧದಲ್ಲಿ ವಿಮುಖಿಯಾದಾಗ ಅಲ್ಲಿ ಅಪೇಕ್ಷೆ, ನೀರೀಕ್ಷೆಗಳ, ನಿರಾಸೆಗಳ ಮತ್ತು ಶಂಕೆಗಳ ಪ್ರವಾಹವೇ ಮೂಡಿ ಬಂದು  ಭಾವನೆಗಳ ಅಲ್ಲೋಲ ಕಲ್ಲೋಲವಾಗಬಹುದು. ಕೆಲವೊಮ್ಮೆ ಹೆಣ್ಣು (ಅಥವಾ ಗಂಡು) ತೋರುವ ಆ ಪ್ರೀತಿಗೆ ಭಾವನೆಗಳಿಗೆ ಸ್ಪಂದಿಸಲಾಗದೆ  ತಟಸ್ಥವಾಗಿ ಉಳಿಯುವ ಗಂಡು (ಅಥವ ಹೆಣ್ಣು) ಆ ಪ್ರೀತಿಗೆ ಪಾತ್ರರಾಗದೆ ಉಳಿಯುವುದು ಶೋಚನೀಯ. ಒಂದು ಸಂಬಂಧ ಹದವಾಗಿರುವಾಗ ಅಲ್ಲಿ ಹೆಚ್ಚಿನ ನಿರೀಕ್ಷೆ ಸ್ವಾರ್ಥತೆಯನ್ನು ತರಬಹುದು. ಸಂಬಂಧದಲ್ಲಿ  ಹೊಂದಾಣಿಕೆಗಳು ಸಾಧ್ಯವಾಗದಿದ್ದಲ್ಲಿ ಬಿರುಕುಗಳು ಉಂಟಾದಲ್ಲಿ ಅದಕ್ಕೆ ಜೋತು ಬೀಳುವುದಕ್ಕಿಂತ, ಅದನ್ನು ಕಡಿದು ಮುಂದಕ್ಕೆ ಸಾಗುವುದು ಇಬ್ಬರಿಗೂ ಒಳಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಹಜ ಸ್ವಭಾವದಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚು ತ್ಯಾಗಮಯಿ. ಅವಳಿಂದ ಹೆಚ್ಚು ಹೊಂದಾಣಿಕೆಯನ್ನು ನಮ್ಮ ಸಮಾಜ ನಿರೀಕ್ಷಿಸುತ್ತದೆ. ಪ್ರೀತಿಯ ಪ್ರವಾಹ ಹರಿದಿರುವಾಗ, ಒಬ್ಬರು ಇನ್ನೊಬ್ಬರನ್ನು ಹೆಚ್ಚು ಪ್ರೀತಿಸಿದಾಗ ಅವಲಂಬಿಸಿದಾಗ ನಾನು ಸ್ವಾರ್ಥಿ ಎಂಬ ಭಾವನೆ ಉಂಟಾಗಬಹುದು. ನಿಜವಾದ ಅರ್ಥದಲ್ಲಿ ಪ್ರೀತಿ ಪ್ರೇಮಗಳಲ್ಲಿ ತರತಮಗಳಿಲ್ಲ, ಬಡತನ ಸಿರಿತನವಿಲ್ಲ, ಹೆಚ್ಚು ಕಡಿಮೆ ಎಂಬುದು ನಿರರ್ಥಕ! ಕಾಯುವಿಕೆಯಲ್ಲಿ ಮತ್ತು ಅಗಲಿಕೆಯಲ್ಲಿಯೂ ಒಂದು ಖುಷಿ ಅನುಭವ ಅಡಗಿರಬಹುದು. ಪ್ರೀತಿ ಎಂದರೇನು? ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರವಿಲ್ಲ ಅದು ಮಾತುಗಳನ್ನು, ತರ್ಕವನ್ನು ಮೀರಿದ ಭಾವನಾತ್ಮಕ ಅನುಭವ, ಅದನ್ನು ಅನುಭವಿಸಿಯೇ ಉತ್ತರವನ್ನು ಕಂಡುಕೊಳ್ಳಬೇಕು. ಕೆ.ಎಸ್.ಎನ್ ಅವರ " ಒಂದು ಗಂಡಿಗೊಂದು ಹೆಣ್ಣು, ಹೇಗೋ ಸೇರಿ ಹೊಂದಿಕೊಂಡು ಮಾತಿಗೊಲಿಯದಮೃತ ಉಂಡು ಬಾಳು ಹಗುರವೆನಿಸಿರೆ" ಎಂಬ ಕವನದ ಸಾಲುಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರೇಮಲತಾ ಅವರ “ನಾನು ಸ್ವಾರ್ಥಿ” ಎಂಬ ಕವನವನ್ನು ಗ್ರಹಿಸಬೇಕಾಗಿದೆ.  ಈ ಕವನಕ್ಕೆ  ಸಕಾಲದಲ್ಲಿ ಸಮಂಜಸವಾದ ರೇಖಾ ಚಿತ್ರವನ್ನು ಡಾ ಲಕ್ಷ್ಮೀ ನಾರಾಯಣ ಗುಡೂರ್ ಅವರು ಒದಗಿಸಿದ್ದಾರೆ. 
  -ಸಂಪಾದಕ 
ರೇಖಾ ಚಿತ್ರ ಕೃಪೆ- ಡಾ ಲಕ್ಷ್ಮೀ ನಾರಾಯಣ ಗುಡೂರ್
ನಾನು  ಸ್ವಾರ್ಥಿ

ಹೆರಳನೆದೆಯ ಮೇಲೆಸೆದುಕೊಂಡು
ಕಣ್ಣ ಫಲಕದಲಿ ಮಿಂಚ ಹೊದ್ದು
ಎದೆಗೊತ್ತಿದ ಪಟದ ಅಂಚಿಗೆ ತುಟಿಯನೊತ್ತಿದ
ತೇವ ಆರದಂತೆ ಮೆಲುಕು ಹಾಕುತ್ತೇನೆ  
ತಿಳಿಸದಂತೆಯೇ ಬರಸೆಳೆದು
ತಬ್ಬಿಕೊಳ್ಳುತ್ತೇನೆ, ನಾನು ಸ್ವಾರ್ಥಿ

ಗಾಳಿ ಗಂಧದಲಿ ಉಸಿರ ಬಿಸಿ
ಮೈಯೇರಿ ಧಗಧಗಿಸಿ
ಕನಸುಗಳು ಪಕಳೆ ಬಿರಿತು ಅರಳಿದಂತೆ
ಬೆವೆತ ಸುಖದ ಮತ್ತಿನಲಿ
ಅನುಮತಿಯಿಲ್ಲದೆಯೂ ನಿನ್ನ
ಅತಿಥಿಯೆಂದುಕೊಳ್ಳುವ ನಾನು ಸ್ವಾರ್ಥಿ

ಬಯಸಿದ್ದನ್ನೆಲ್ಲ ಬಳುವಳಿಯಾಗಿಸಿ
ನೀಡಿ, ಕಿಂಚಿತ್ತೂ ಬೇಡದ ನಿನ್ನ
ಎದೆ ಕಪಾಟಿನಲಿ ಮುಚ್ಚಟೆ ಬಚ್ಚಿಟ್ಟು
ಸವಿ ಬುತ್ತಿಯಾಗಿಸಿ, ಇಹದಿ
ಬಿಮ್ಮನೆ ನಿರ್ಲ್ಯಕ್ಷಿಸಿ ನಡೆವ  
ಸದಭಿಮಾನದ ಪ್ರತೀಕ, ನಾನು ಸ್ವಾರ್ಥಿ

ಆಗೀಗ ಒಗೆವ ನೋಟವನೂ ಕಣ್ತಪ್ಪಿಸಿ
ಅಪ್ಪಿ ತಪ್ಪಿಯೂ ಒಪ್ಪಿಕೊಳ್ಳದೆ
ಎದೆತುಂಬಿಸಿಕೊಂಡು, ನಿನ್ನ ಚುಂಬಿಸಿ
ರಾಗಗಳಿಗೆಲ್ಲ ಭಾವ ತುಂಬಿಸುತ
ನನ್ನ ಕನಸುಗಳ ಹೊಲಿದು ತೊಡಿಸಿ
ಸುಖಿಸಿ ನಲಿವ ನಾನು ಕಡು ಸ್ವಾರ್ಥಿ

ಹೆದರಿಕೆಯೇನಿಲ್ಲ, ಕೆಲವೊಮ್ಮೆ
ತಯಾರಿಯಿಲ್ಲದೆಯೂ ನಮ್ಮದಾಗುವ  
ಅನುಭವಗಳೇ ಹಾಗೆ
ಬಹು ಜಟಿಲ, ಈ ಜಗ ಬಲು ಕುಟಿಲ
ಕಾಯುತಿರುವಂತೆ ನಮಗೆ ನಾವೇ

ಕನಸಿಸುವುದೆಲ್ಲ ಕೂಡುವಿಕೆಯ ಪವಿತ್ರತೆ
ಅಧಿಕಾರವಾಣಿಯಿಲ್ಲದ ಮುಕ್ತತೆ
ಅದು ನನ್ನದೂ ಮತ್ತು ನಿನ್ನದೂ
ಇಲ್ಲದಿದ್ದರೆ ಕಥೆ, ಕವಿತೆ
ನಾನೆಷ್ಟು ಅವಿತುಕೊಂಡರೂ
ಸರ್ವಾಧಿಕಾರಿಯಂತೆ, ಆಳುತ್ತಿದ್ದವೇ ಹೀಗೆ?

ಎಂದೂ ಮುಗಿಯದ  ಪ್ರೀತಿಯೆಂದರೆ,
ಅರಿವಿಲ್ಲದೆ ಹಂಬಲಿಸಿ ಕಾಯುವಿಕೆ
ಚರ್ಮದಡಿ ಹೊಕ್ಕ ನಮ್ಮದೇ ಸೊಕ್ಕು
ಭಾವತೇರುಗಳ, ಬೇಕು ಬೇಡಗಳ  
ಪ್ರೇಮಿಸುವುದರ ಜಾಣ ಕಾಣ್ಕೆ
ಬಣ್ಣಿಸಿ ಹೇಳಲೆಚ್ಚೇನಿದೆ ನಾನು ಪರಮ ಸ್ವಾರ್ಥಿ
-------------------------------------ಡಾ.ಪ್ರೇಮಲತ ಬಿ.

One thought on “ನಾನು  ಸ್ವಾರ್ಥಿ

  1. ಒಲವಿಗೆ ಸ್ವಾರ್ಥದ ಪ್ರಮಾಣ 👌

    ಅದೇ ಸ್ಫೂರ್ತಿಯಲ್ಲಿ:

    ನೀ ನೀನಲ್ಲ ನಾ
    ನನ್ನೆದೆಯೊಳಗೆ
    ನನ್ನೊಳಗಿನ ಸ್ವಾರ್ಥ
    ನಿನಗಾದರೆ ಅರ್ಥ
    ನನಗೆ ನೀ ನಲ್ಲ
    ನಿನಗೆ ನಾ ನಲ್ಲ!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.