ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಮೂಡಿ ಬರುವ ಗುಲಾಬಿ ಮನಮೋಹಕವಾಗಿ ನವುರಾಗಿ ಪದರುಗಳಲ್ಲಿ ಅರಳಿ ಸುವಾಸನೆಯನ್ನು ಬೀರುತ್ತಾ, ತಿಳಿಗಾಳಿಯಲ್ಲಿ ಬಳುಕುತ್ತ ವಿಜೃಂಭಿಸುವ ಪುಷ್ಪವಾಗಿದೆ. ಗುಲಾಬಿಗೆ ಸಂಪಿಗೆಯಂತೆ, ಮಲ್ಲಿಗೆಯಂತೆ ನಿರ್ದಿಷ್ಟ ಬಣ್ಣದ ಬದ್ಧತೆಗಳಿಲ್ಲ. ಹೀಗಾಗಿ ಅದು ಹೊಸ ಹೊಸ ತಳಿಗಳನ್ನು ಕಂಡಂತೆ ಹಲವಾರು ರಂಜಕ ಬಣ್ಣಗಳನ್ನು ಪಡೆಯುತ್ತಾ ವಿಕಾಸಗೊಂಡಿದೆ. ಹಲವಾರು ಸಂಸ್ಕೃತಿಗಳಲ್ಲಿ ಅದಕ್ಕೆ ವಿಶೇಷ ಸ್ಥಾನಮಾನಗಳಿವೆ. ಇದು ಒಂದು ಪುರಾತನವಾದ ಹೂವು ಕೂಡ. ಇಂಗ್ಲಿಷ್ ಇತಿಹಾಸವನ್ನು ಗಮನಿಸಿದಾಗ ೧೫ನೇ ಶತಮಾನದ ರಾಜಮನೆತನಗಳಾದ ಹೌಸ್ ಆಫ್ ಯಾರ್ಕ್ ಬಿಳಿ ಗುಲಾಬಿಯನ್ನು ಮತ್ತು ಹೌಸ್ ಆಫ್ ಲ್ಯಾಂಕಾಸ್ಟರ್ ಕೆಂಪು ಗುಲಾಬಿಯನ್ನು ತಮ್ಮ ಲಾಂಛನಗಳಾಗಿ ಮಾಡಿಕೊಂಡಿದ್ದು ಮುಂದಕ್ಕೆ ಈ ಎರಡು ಮನೆತನಗಳ ನಡುವೆ ಸಂಭವಿಸಿದ ಯುದ್ಧವು 'ವಾರ್ ಆಫ್ ರೋಸಸ್ ಎಂದು ಪ್ರಖ್ಯಾತಿಗೊಂಡಿತು. ಗುಲಾಬಿ ಹೂವು ಪ್ರೇಮ ಪ್ರಣಯಗಳ ಸಂಕೇತ ಕೂಡ. ಪ್ರತಿ ವರ್ಷ ವ್ಯಾಲಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿಗಳ ನಡುವೆ ಕೆಂಪು ಗುಲಾಬಿ ಹೂಗಳ ವಿತರಣೆ ನೆಡಯುತ್ತದೆ.
ಗುಲಾಬಿ ಹೂವಿನ ಉಲ್ಲೇಖ ಪ್ರಪಂಚದ ಹಲವಾರು ಸಾಹಿತ್ಯಗಳಲ್ಲಿ ಬೆಸೆದುಕೊಂಡಿದೆ. ಇಂಗ್ಲಿಷ್ ಸಾಹಿತ್ಯದ ಮೇರು ಕವಿ ರಾಬರ್ಟ್ ಬರ್ನ್ಸ್ ಅವರ 'ಎ ರೇಡ್ ರೇಡ್ ರೋಸ್' ಒಂದು ಅವಿಸ್ಮರಣೀಯ ಪ್ರೇಮಗೀತೆಯಾಗಿ ಅದರ ಕೆಲವು ಸಾಲುಗಳು ಹೀಗಿವೆ;
O my luve is like a red, red rose
That’s newly sprung in June
O my luve is like the melody
That’s sweetly played in tune
ಇದೇ ಕವಿತೆಯನ್ನು ಬಿ.ಆರ್.ಎಲ್ ಅವರು "ಕೆಂಪು ಕೆಂಪು, ಕೆಂಗುಲಾಬಿ ನನ್ನ ಪ್ರೇಯಸಿ, ಮಧುರವಾದ ವೇಣು ನಾದ ನನ್ನ ಪ್ರೇಯಸಿ" ಎಂದು ಅನುವಾದಿಸಿ ಸಿ. ಅಶ್ವಥ್ ಅವರ ಧ್ವನಿಯಲ್ಲಿ ಈ ಅನುವಾದಿತ ಕವಿತೆ ಸುಂದರವಾದ ಭಾವಗೀತೆಯಾಗಿದೆ. ಗುಲಾಬಿ ಹೂವನ್ನು ಸಿನಿಮಾ ದೃಶ್ಯಗಳಲ್ಲಿ ಯಥೇಚ್ಛವಾಗಿ ಬಳಸಿಕೊಂಡು ಅದು ಸಿನಿಮಾ ಸಾಹಿತ್ಯದಲ್ಲೂ ವಿಜೃಂಭಿಸಿದೆ. ಚಿ.ಉದಯ ಶಂಕರ್ ಅವರು ರಚಿಸಿರುವ " ನಗುವಾ ಗುಲಾಬಿ ಹೂವೆ, ಮುಗಿಲಾ ಮೇಲೇರಿ ನಗುವೇ, ನಿನಗೆ ನನ್ನಲ್ಲಿ ಒಲವೋ, ಅರಿಯೆ ನನ್ನಲ್ಲಿ ಛಲವೋ, ನಲಿವಾ ಗುಲಾಬಿ ಹೂವೆ ' ಎಂಬ ಚಿತ್ರಗೀತೆ ಎಸ್.ಪಿ.ಬಿ ಅವರ ಧ್ವನಿಯಲ್ಲಿ ಅಮರತ್ವವನ್ನು ಪಡೆದಿದೆ. ಅಂದ ಹಾಗೆ ಗುಲಾಬಿ ಹೂವಿನ ಕೋಮಲತೆ ಮತ್ತು ಸೌಂದರ್ಯದ ಜೊತೆ ಮುಳ್ಳುಗಳು ಬೆರೆತಿವೆ! ಜೈವಿಕವಾಗಿ ಈ ಒಂದು ಸುಂದರ ಹೂವು ತನ್ನ ರಕ್ಷಣೆಗೆಂದು ಅದನ್ನು ಪಡೆದುಕೊಂಡಿರಬಹುದು. ಗುಲಾಬಿ ಹೂವನ್ನು ಪಡೆಯಲು ಹೋಗಿ ಮುಳ್ಳು ಚುಚ್ಚಿದ್ದಾಗ ಅದನ್ನು ಭಗ್ನಪ್ರೇಮಿಗಳ ವಿಫಲ ಪ್ರಯತ್ನದ ಸಂಕೇತವಾಗಿ, ಮಾರ್ಮಿಕವಾಗಿ, ರೂಪಕವಾಗಿ ವ್ಯಾಖ್ಯಾನಿಸುವುದು ಸಾಮಾನ್ಯ.
ಇದೇ ಗುಲಾಬಿ ಹೂವಿನ ವಿಶೇಷತೆಯನ್ನು ಅನಿವಾಸಿ ಕವಿಯಿತ್ರಿ ಶ್ರೀಮತಿ ರಾಧಿಕಾ ಜೋಶಿ ಅವರು ತಮ್ಮ ಒಂದು ಕವಿತೆಯಲ್ಲಿ ಬಣ್ಣಿಸಿದ್ದಾರೆ. ಗುಲಾಬಿ ಹೂವು ನಮ್ಮೆಲ್ಲರ ಮನೆಯಂಗಳದಲ್ಲಿ ಅರಳಿರುವ ಈ ಸಂದರ್ಭದಲ್ಲಿ ಅವರ ಕವನ ಸಮಯೋಚಿತವಾಗಿದೆ. ರಾಧಿಕಾ ಅವರು ತಮ್ಮ ಕವನದ ಕೊನೆಗೆ ಗುಲಾಬಿ ಹೂವನ್ನು ಆರೈಕೆ ಮಾಡಿ ಬೆಳೆಸಿದ ಮಾಲಿಗೆ; ಗುಲ್ಮಾಲಿಗೆ ( ಗುಲ್ (ಬಿ) + ಮಾಲಿ = ಗುಲ್ಮಾಲಿ ) ಧನ್ಯತೆಯನ್ನು ಸೂಚಿಸಿದ್ದಾರೆ. ರಾಧಿಕಾ 'ಗುಲ್ಮಾಲಿ' ಎಂಬ ಹೊಸ ಪದವನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಈ ಪದ ಕನ್ನಡ ನಿಘಂಟಿನಲ್ಲಿ ಇಲ್ಲ ಎಂದು ತರ್ಕಿಸುವ ಬದಲು "ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ” ಎಂಬ ಕವಿ ವಾಣಿಯನ್ನು ಒಪ್ಪಿಕೊಳ್ಳುವುದು ಒಳಿತು.
-ಸಂಪಾದಕ
ವಸಂತದ ಸುವಾಸಂತಿ
ಮಲ್ಲಿಗೆಯೆಂದೇ ಭ್ರಾಂತಿ
ಮುಗಿಲೆತ್ತರಕ್ಕೆ ಹಂದರ
ಮನೆಯಂಗಳಕ್ಕೆ ಚಪ್ಪರ
ನಾಜೂಕು ಗೋಂಚುಲು ಬಾಗಿ
ನೂರಾರು ಬಗೆಯ ಗುಲಾಬಿ
ಸುವಾಸನೆಯಲ್ಲಿ ಸೌಗಂಧಿಕಾ
ಈ ಆಂಗ್ಲನಾಡಿನ ಮಣಿಮುಕ್ತಾ
ಮುಗ್ಧ ಗುಲಾಬಿ ಬಿಳಿ ತಿಳಿ ಹಳದಿ ನಸು ಪಾಟಲ
ಸೂಕ್ಷ್ಮ ಪಕಳೆಯ ಮನಮೋಹಕ ಗೊಂಚಲ
ಹೂವಿನ ತಳಿಗಳ ನಾಮಕರಣ ಗೌರವಾರ್ಥ
ಐತಿಹಾಸಿಕ ಘಟನೆಗಳ ಹೆಮ್ಮೆಯ ಸ್ಮರಣಾರ್ಥ
ಯಾವ ಬೀದಿ ತಿರುಗಿದರೂ ಗುಲಾಬಿಯ ಸರಮಾಲೆ
ನಾನಿಂತು ಆನಂದಿಸಿದರೆ ಗುಲ್ಮಾಲಿಗೆ ಚಪ್ಪಾಳೆ
ಈ ವಸಂತದ ಸುವಾಸಂತಿ
ಮಲ್ಲಿಗೆಯೆಂದೇ ಭ್ರಾಂತಿ
ರಾಧಿಕಾ ಜೋಶಿ
ರಾಧಿಕಾ ಅವರ ಕವನ
ಸಂಪಾದಕರು ತಮ್ಮ scholarly ಸಂಪಾದಕೀಯದಲ್ಲಿ ಹೇಳಿದಂತೆ ಪ್ರಸ್ತತ ನಮ್ಮ ಸುತ್ತಲೂ ಗಲಾಬಿ ಹೂವಿನ ಸುಗಂಧ ಪಸರಿಸುತ್ತಿರುವಾಗ ರಾಧಿಕಾ ಅವರ ಕವನ ಓದುವದೇ ಮಜ. ಮಲ್ಲಿಗೆಯಂತೆ ಭ್ರಾಂತಿಯಾದರೂ ಅದರಷ್ಟು ಅಥವಾ ಅದಕ್ಕಿಂತ ಹೆಚ್ಚು ನಾಟುವ ಗಂಧವಿರದ ಗುಲಾಬಿಗೆ ತನ್ನದೇ ಆದ ಆಕರ್ಷಣೆಸಿದೆ. ಅವೆರಡು ಹೂಗಳಿಗಿಂತಲೂ ಈಗಿನ ಕಾಲದಲ್ಲಿ ಅಗಣಿತ ವರ್ಣಗಳಲ್ಲಿ ಮತ್ತು ಆಕಾರಗಳಲ್ಲಿ ಅದು ಲಭ್ಯ. ಆದರೂ ಗುಲ್ ಗೆ ಮತ್ತು ಪಾಟಲ ಶಬ್ದಕ್ಕೆ ತನ್ನ ಹೆಸರನ್ನು ಕೊಟ್ಟ ಈ ಪುಷ್ಪ ರೋಜಾ ಅಂತಲೂ ಕವಿಗಳ ಮತ್ತು ಸಿನಿಮಾಗಳ ಕವಿತೆಗಳಲ್ಲಿ ಶಾಶ್ವತ ಸ್ಥಾನ ಗಳಿಸಿದೆ. ಇಲ್ಲಿಯ ವರೆಗೆ ಎದೆಯ ಭಾವವನ್ನು ತೆರೆದಿಟ್ಟ ಮೇಲೆ ಇನ್ನು ನಿಘಂಟಿನತ್ತ ಹೊರಳುವಾ. ಸಂಸ್ಕೃತದಲ್ಲಿ ಪಾಟಲಂ ಎಂದೆನಿಸಿಕೊಳ್ಳುವ ಹೂವಿಗೆ ಸ್ವಿಸ್ ಪಾದ್ರಿ ಕಿಟಲ್ ತನ್ನ ಹೆಸರಾಂತ ಕನ್ನಡ ನಿಘಂಟಿನಲ್ಲಿ ಅದು ಪಾದರಿ ( ಪಾಟಲ ಅದರ ತದ್ಭವ ಇರಲಿಕ್ಕೆ ಸಾಕು) ಎನ್ನುವ ಹೂವಿಗೆ ಸಸ್ಯಶಾಸ್ತ್ರದ ಹೆಸರು Begonia suaveolens ಎಂದು ಕೊಚ್ಚಿದ್ದಾನೆ. ನಾನು ನೋಡಿದ ಗೂಗಲ್ ಚಿತ್ರಗಳಲ್ಲಿ ಅದರ ಗುಲಾಬಿ ಹೂ ಕಾಣಲಿಲ್ಲ. ನಿಮ್ಮ ಕವಿತೆಯಲ್ಲಿ ಗುಲ್ಮಾಲಿಯ ಜೊತೆಗೆ ಅಂತೂ ಇನ್ನೊಂದು (ನನಗೆ) ಹೊಸ ಶಬ್ದವನ್ನರಿತೆ -ಮಣಿಮುಕ್ತಾ ಎನ್ನುವ ಆಭರಣ! ಈ ಕವಿತೆಯನ್ನು ಕನ್ನಡಮ್ಮನಿಗೆ ತೋಜೆಂದು ತೊಡಿಸಿದ್ದೀರಿ, ವಿವಿಧ ಎಳೆಗಳನ್ನು ಜೋಡಿಸಿ. ಕೊನೆಯದಾಗಿ ಇಂಗ್ಲಿಷ್ ಮಹಾಕವಿ ರೋಮಿಯೋ ಜೂಲಿಯಟ್ ನಲ್ಲಿ ಹೇಳಿದಂತೆ
What’s in a name? that which we call a rose
By any other name would smell as sweet. ಅಂತ ಸೌಗಂಧಿಕೆಗೇ ಬರೋಣ!
ಶ್ರೀವತ್ಸ ದೇಸಾಯಿ

LikeLike
Very nice
LikeLike