ಸೊಗಸಿನ ಕ್ಷಣಗಳು( ಕವಿತೆ) ಮತ್ತು ಒಂದು ನಗೆ ಹನಿ (ಸ್ವಾಮಿ)

ಕನ್ನಡ ಕಾವ್ಯಲೋಕವನ್ನು ಅವಲೋಕಿಸಿದಾಗ ಅಲ್ಲಿ ಸೊಗಸು ಮತ್ತು ಸೌಂದರ್ಯಗಳ ಉಲ್ಲೇಖವನ್ನು ಯಥೇಚ್ಛವಾಗಿ ಕಾಣಬಹುದು. ಬದುಕಿನ ಸೊಗಸುಗಳನ್ನು ಇಂದ್ರಿಯಗಳ ಮೂಲಕ ಗ್ರಹಿಸಿ ಭಾವನೆಗಳ ಲೋಕದಲ್ಲಿ ಅದನ್ನು ಅನುಭವಿಸಿ ಕೊನೆಗೆ ಅದನ್ನು ಪದಗಳ ಮೂಲಕ ಕವನವಾಗಿ ಅಭಿವ್ಯಕ್ತಗೊಳಿಸುವುದು ಕವಿಯ ವಿಶೇಷ ಸಾಮರ್ಥ್ಯ. ಈ ಸೊಗಸನ್ನು ಅನುಭವಿಸಲು ಬದುಕಿನ ಬಗ್ಗೆ ಪ್ರೀತಿ ಇರಬೇಕು. ಇಲ್ಲದಿದ್ದಲ್ಲಿ ಅದು ನಮ್ಮ ದಿನನಿತ್ಯ ಬದುಕಿನ ಯಾಂತ್ರಿಕತೆಯಷ್ಟೇ ಆಗಿ ಉಳಿದುಬಿಡುತ್ತದೆ. ಕವಿತೆಯಲ್ಲಿಯ ರಸಿಕತೆ, ಬದುಕಿನ ಪ್ರೀತಿ ಎಂಬ ವಿಚಾರಗಳು ಯುರೋಪ್ ಸಾಹಿತ್ಯವಲಯಗಳಲ್ಲಿ ಸಂಭವಿಸಿದ ಸಾಹಿತ್ಯ ಕ್ರಾಂತಿಯಲ್ಲಿ ರೊಮ್ಯಾಂಟಿಕ್ ಪೊಯೆಟ್ರಿ ಎಂಬ ಹೆಸರಿನಲ್ಲಿ ಮೂಡಿಬಂದಿದೆ. ಈ ಸೊಗಸಿನ ಕ್ಷಣಗಳನ್ನು ಕುವೆಂಪು, ಬೇಂದ್ರೆ ಮತ್ತಿತರ ಕವಿಗಳ ಕವನಗಳಲ್ಲಿ ಕಾಣಬಹುದು. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ಅವರ ಕವಿತೆ ಇದಕ್ಕೆ ಉತ್ತಮ ನಿದರ್ಶನ. ಇದೇ ಕವನದಲ್ಲಿ 'ಸೂರ್ಯೋದಯ, ಚಂದ್ರೋದಯ ದೇವರ ದಯೆಕಾಣೋ' ಎನ್ನುವ ಈ ಸಾಲಿನಲ್ಲಿ ಕವಿ ಬರಿ ನಿಸರ್ಗ ಸೌಂದರ್ಯವನ್ನಷ್ಟೇ ಅಲ್ಲ, ಅಲ್ಲಿ ಒಂದು ಆಧ್ಯಾತ್ಮಿಕ ಅನುಭಾವವನ್ನೂ ಪಡೆಯುತ್ತಾನೆ. ಕುವೆಂಪು ಹೇಳುವಂತೆ ‘ರವಿ ವದನವು ಶಿವವದನವೂ ಕೂಡ. ಶಿವನಿಲ್ಲದೆ ಸೌಂದರ್ಯವು ಇಲ್ಲ. ಶಿವ ಕಾವ್ಯದ ಕಣ್ಣೋ, ಶಿವ ಕಾಣದ (ಸೌಂದರ್ಯವನ್ನು ಕಾಣದ) ಕವಿ ಕುರುಡನೋ!’ ಈ ಒಂದು ಪರಿಕಲ್ಪನೆ "ಸತ್ಯಂ ಶಿವಂ ಸುಂದರಂ" ಎಂಬ ಸಾಲುಗಳಲ್ಲಿ ಕೂಡ ಅಭಿವ್ಯಕ್ತಗೊಂಡಿದೆ. ಕುವೆಂಪು ಅವರ ಇನ್ನೊಂದು ಕವನದಲ್ಲಿ ನಿಸರ್ಗದ ಸೊಗಸನ್ನು, ಬೆಳಕ್ಕಿಗಳು ನೀಲಾಕಾಶದಲ್ಲಿ ತೂಗುತ್ತ ಬರುವುದನ್ನು ನೋಡಿ ಭಾವ ಪರವಶರಾಗಿ 'ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು'ಎಂದು ಬರೆಯುತ್ತಾರೆ. ಬೇಂದ್ರೆ ಅವರು 'ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ಬಾಗಿಲು ತೆರೆದು ಬೆಳಕು ಹರಿದೂ ದೇವನು ಜಗವೆಲ್ಲ ತೊಯ್ದ' ಎಂದು ಸೂರ್ಯೋದಯದ ಬಗ್ಗೆ ಬರೆಯುತ್ತಾರೆ. ‘ಶ್ರಾವಣ ಬಂತು ಶ್ರಾವಣ’ ಎಂದು ಸಂತಸಪಡುತ್ತಾರೆ. ಈ ರೀತಿಯ ಅನೇಕ ಸೊಗಸಿನ ಕ್ಷಣಗಳನ್ನು ಕುವೆಂಪು ಮತ್ತು ಬೇಂದ್ರೆ ಅವರ ಪದ್ಯ-ಗದ್ಯ ಕೃತಿಗಳಲ್ಲಿ ಕಾಣಬಹುದು.

ಬಾಬ್ ಥೀಲ್ ಮತ್ತು ಜಾರ್ಜ ವೀಸ್ ರಚಿಸಿರುವ, ಖ್ಯಾತ ಗಾಯಕ ಲೂಯಿಸ್ ಆರ್ಮ್ ಸ್ಟ್ರಾಂಗ್ ಹಾಡಿರುವ ಈ ಗೀತೆಯ ಮೊದಲ ಪಂಕ್ತಿಯ ಸಾಲುಗಳು ಹೀಗಿವೆ;   
I see trees of green, red roses too
I see them bloom for me and you 
And think to myself 
What a wonderful world! 

ಈ ಒಂದು ಗೀತೆ ಬಹಳ ಜನಪ್ರೀಯವಾಗಿದೆ, ಇದು ಕೂಡ ಬದುಕಿನ ಪ್ರೀತಿಯ ಬಗ್ಗೆ ಬರೆದ ಕವನ ಎನ್ನಬಹುದು.  
ಡಾ. ಸತ್ಯವತಿ ಅವರು ಬದುಕಿನ ಹಲವಾರು ದೈನಂದಿಕ ಆಗು ಹೋಗುಗಳಲ್ಲಿ ಮತ್ತು ಸಾಧಾರಣ ಸರಳ ವಿಚಾರಗಳಲ್ಲಿ ಸೊಗಸಿನ ಕ್ಷಣಗಳನ್ನು ಕಂಡಿದ್ದಾರೆ ಮತ್ತು ತಮ್ಮ ಕೆಳಗಿನ (ಸೊಗಸಾದ) ಕವಿತೆಯಲ್ಲಿ ನಮಗೂ ಕಾಣಿಸಿದ್ದಾರೆ.


                                                                        *

ಬದುಕಿನ ಸೊಗಸಿನ ಕ್ಷಣದೊಂದಿಗೆ ಒಂದು ನಗುವನ್ನು ಸೇರಿಸಿ ನಕ್ಕು ಬಿಡೋಣ. ಉಮೇಶ್ ಅವರು ಬರೆದಿರುವ 'ಸ್ವಾಮಿ' ಎಂಬ ಕಿರು ಪ್ರಸಂಗ ಒಂದೇ  ಹೆಸರಿನಲ್ಲಿ ಅಡಗಿರುವ ಮತ್ತೊಂದು ಅರ್ಥ ಹೇಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿ ಒಂದು ತಿಳಿ ಹಾಸ್ಯ ಪ್ರಸಂಗವಾಗಿ ಮೂಡಿಬಂದಿದೆ.  

****

ಸೊಗಸಿನ ಕ್ಷಣಗಳು

ಮಾಗಿಯ ಚಳಿಯಲ್ಲಿ ಕುಳಿತು ಬಿಸಿ ಬಿಸಿ ಕಾಫಿಯನು
ಕೋಡುಬಳೆಯೊಂದಿಗೆ ಸವಿಯುವುದೊಂದು ಸೊಗಸು

ಬೆಳಗಾಗೆದ್ದು ಕಿಟಕಿಯಾಚೆಗೆ ಮುಖವನ್ನಿಟ್ಟು ಅಳಿದುಳಿದ 
ಕಾಳುಗಳ ಹೆಕ್ಕುತಿರುವ ಹಕ್ಕಿಗಳ ನೋಡುವುದೊಂದು ಸೊಗಸು

ಮನೆಯ ಮುಂದಿನ ಅಂಗಳದಿ ನಿಂತು ರಸ್ತೆಯಲಿ ಒಡಾಡುವ 
ಕಾರುಗಳ ಬಣ್ಣಗಳ ಗುರುತಿಸುವುದೊಂದು ಸೊಗಸು

ಮುಳುಗಿಹೋಗಿದೆ ಜಗವೆಂಬ ಗಾಬರಿಯಲಿ ಧಾವಿಸುವ
ಜನರ ಧಾವಂತಿಕೆ ನೋಡುವುದೊಂದು ಸೊಗಸು

ಲಲ್ಲೆ ಹೊಡೆಯುತ ಗೆಳೆಯರೊಡನೆ ಶಾಲೆಗೆ ನಿರ್ಯೋಚನೆಯಲಿ 
ಕುಣಿಯುತ ನಡೆವ ಮಕ್ಕಳ ನೋಡುವುದೊಂದು ಸೊಗಸು

ಭೂಮಿಯಲಿ ನಡೆವ ವ್ಯಾಪಾರವನು ಮೌನದಲಿ 
ನೋಡುವಾ ಆಗಸವ ನಿರುಕಿಸುವುದೊಂದು ಸೊಗಸು

ತನ್ನೆಲ್ಲ ಆಟದೀ ಗೊಂಬೆಗಳ ಆಟವನು ನೋಡುತ್ತ ತನ್ನಷ್ಟಕ್ಕೆ
ನಗುತಿರಬಹುದಾದ ಸೃಷ್ಟಿಕರ್ತನನು ನೆನೆಯುವುದೊಂದು ಸೊಗಸು

ಮತ್ತೆ ಬಾರದ ಜೀವನದ ಸೊಗಸಿನೀ ಕ್ಷಣಗಳನು 
ಮೆಲುಕು ಹಾಕುತ ಬದುಕುವ ಸಂಭ್ರಮದ ಸೊಗಸು

ಡಾ.ಸತ್ಯವತಿ ಮೂರ್ತಿ

****
ನನ್ನ ಸ್ವಾಮಿ 

ಈ ಕಥೆಯನ್ನು ನಾನು ಮ್ಯಾಂಚೆಸ್ಟರ ಹತ್ತಿರ ಕೆಲಸ ಮಾಡುವಾಗ ಭೆಟ್ಟಿಯಾದ ಕನ್ನಡಿಗ ಗೆಳೆಯರು ಹೇಳಿದರು. 

ಒಂದು ಸಮ್ಮೇಳನದಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳಾ ತಜ್ಞ ವೈದ್ಯೆಯರು ಭೆಟ್ಟಿಯಾದರು. ಮಧ್ಯಾಹ್ನ ಊಟದ ವೇಳೆ ಮಾತನಾಡುವಾಗ ಪರಸ್ಪರ ಇಬ್ಬರೂ ಕನ್ನಡಿಗರೆಂದು ಗೊತ್ತಾಗಿ ಸಂತೋಷವಾಗಿ ಮುಂದಿನ ಸಂಭಾಷಣೆ ಕನ್ನಡದಲ್ಲೇ ಮುಂದುವರೆಯಿತು. ಸಂಜೆ ಊಟಕ್ಕೆ ಕುಳಿತಾಗ ಒಬ್ಬ ಕನ್ನಡತಿ “ನನ್ನ ಸ್ವಾಮಿಗೆ ಈ ಪಲ್ಯ ಬಹಳ ಇಷ್ಟ, ನನ್ನ ಸ್ವಾಮಿ ಇವತ್ತು ಮಕ್ಕಳನ್ನು ಶಾಲೆಗೆ ಬಿಡಲು ಸ್ವಲ್ಪ ತಡವಾಯಿತು“ಎಂದೆಲ್ಲ ಹೇಳತೊಡಗಿದಳು. 
ಆ ತಾಯಿ ಪ್ರತಿ ಸಲ ತನ್ನ ಗಂಡನಿಗೆ “ಸ್ವಾಮಿ“ಎಂದೇ ಸಂಭೋಧಿಸುತ್ತಿದ್ದಳು. ಇಬ್ಬರೂ ಒಂದೇ ಹೋಟೆಲಿನಲ್ಲಿ ಉಳಿದುಕೊಂಡಿದ್ದರಿಂದ ಇಬ್ಬರೂ ಒಂದೇ ಟ್ಯಾಕ್ಸಿಯಲ್ಲಿ ಹೊರಟರು. ಮಾರ್ಗದ ಮಧ್ಯೆಆ ತಾಯಿ ಗಂಡನಿಗೆ ಫೋನ್ ಮಾಡಿ “ಸ್ವಾಮಿ ಊಟ ಮಾಡಿದಿರಾ? “ಎಂದೆಲ್ಲಾ ವಿಚಾರಿಸಿದಳು. ಇನ್ನೊಬ್ಬ ಮಹಿಳೆ ಇದನ್ನೆಲ್ಲಾ ಗಮನಿಸುತ್ತಾ ಮನದಲ್ಲೇ “ಏನಪ್ಪಾ ಇವಳು ಬಹುಶಃ ಪಕ್ಕಾ ಪತಿ ಭಕ್ತೆ ಇದ್ದಾಳೆ, ಇಂಗ್ಲೆಂಡಿಗೆ ಬಂದರೂ ಏನೂ ಬದಲಾಗಿಲ್ಲ“ಎಂದುಕೊಂಡು ಸುಮ್ಮನಿದ್ದಳು .

ಇಬ್ಬರು ಮತ್ತೆ ಸುಮಾರು ಆರು ತಿಂಗಳ ನಂತರ ಇನ್ನೊಂದು ಸಮ್ಮೇಳನದಲ್ಲಿ ಭೆಟ್ಟಿಯಾದರು . 
ಆಗ ಮತ್ತೆ ಆ ತಾಯಿ “ನನ್ನ ಸ್ವಾಮಿಗೆ ಪ್ರಮೋಷನ್(ಬಡ್ತಿ )ಆಯಿತು, ನನ್ನ ಸ್ವಾಮಿ ಹೊಸ ಟೆಸ್ಲಾ ಕಾರು ತೆಗೆದುಕೊಂಡ “ಎಂದೆಲ್ಲಾ ಹೇಳಿದಳು. ಈಗ ಈ ಮಹಿಳೆಗೆ ತಡೆಯಲಾಗಲಿಲ್ಲ. ಅವಳು ಕೇಳಿಯೇ ಬಿಟ್ಟಳು “ಅಲ್ಲಾ, ಇಂದಿನ ದಿನಗಳಲ್ಲಿ ಭಾರತದಲ್ಲಿಯೇ ಪತಿ ಭಕ್ತೆ ಸಿಗೋದಿಲ್ಲ, ಅಂತದರಲ್ಲಿ ಇಷ್ಟೊಂದು ಕಲಿತ ವೈದ್ಯೆಯಾದ ನೀವು ಇಂಗ್ಲೆಂಡಿನಲ್ಲಿ ಇದ್ದುಕೊಂಡು ಗಂಡನಿಗೆ ಎಷ್ಟೊಂದು ಮಾನ ಮರ್ಯಾದೆ ಕೊಡುತ್ತೀರಲ್ಲಾ”. 

ಅದನ್ನು ಕೇಳಿ ಆ ತಾಯಿ ಬಿದ್ದು ಬಿದ್ದು ನಗುತ್ತ “ಅಯ್ಯೋ ನನ್ನ ಗಂಡನಿಗೇನೂ ನಾನು ಸ್ಪೇಶಿಯಲ್ ಮರ್ಯಾದೆ ಕೊಡ್ತಾ ಇಲ್ಲ, ಅವನ ಹೆಸರೇ ಸ್ವಾಮಿ!” ಎಂದಳು . 
ಇದನ್ನು ಕೇಳಿದ ಇನ್ನೊಬ್ಬ ಕನ್ನಡತಿಗೆ ತಲೆ ಜಜ್ಜಿಕೊಳ್ಳುವುದೊಂದು ಬಾಕಿ ಇತ್ತು. 😀😀

ಡಾ. ಉಮೇಶ್ ನಾಗಲೋತಿಮಠ್

4 thoughts on “ಸೊಗಸಿನ ಕ್ಷಣಗಳು( ಕವಿತೆ) ಮತ್ತು ಒಂದು ನಗೆ ಹನಿ (ಸ್ವಾಮಿ)

  1. ಬೆಚ್ಚಗಿನ ಬಿಸಿಲಿನಲಿ ಚಹಾ
    ಟೈಮಿನಲಿ ಸತ್ಯವತಿಯವರ ಕವನ
    ಸಮೋಸಾದಂತೆ ಸೊಗಸು

    ‘ಸ್ವಾಮಿ’ ಯ ಕಥೆಯನ್ನು ಓದುತ್ತ
    ಮನಸಿನಲ್ಲೇ ನಸುನಗುತ ಸಮಯ
    ಕಳೆಯುವುದು ಇನ್ನೂ ಸೊಗಸು

    Like

  2. ಪ್ರಸಾದ್ ಅವರದು ನವಿರಾದ ಅಷ್ಟೇ ಪ್ರಬುದ್ಧವಾದ ಮುನ್ನುಡಿ. ಕವಿತೆಗಳ ಬಗ್ಗೆ ಅವರ ಜ್ಞಾನದ ಆಳಗಲ ಗೊತ್ತಾಗುತ್ತದೆ.

    ‘ಸೊಗಸಿ’ನ ಕವನ ಸೊಗಸಾಗಿದೆ. ಸರಳ, ಸುಂದರ.‌ಚಿಕ್ಕ ಚಿಕ್ಕ ಚಿತ್ರಗಳನ್ನು ಕಟ್ಟುವ ಹಾಡು. ಕೆ ಎಸ್ ಎನ್ ಅವರ ‘ಹಕ್ಕಿಯ ಹಾಡಿ’ನಲ್ಲಿ ಬರುವ ರೂಪಕಗಳು ನೆನಪಾದವು‌.

    ಹೆಸರಿನಲ್ಲೇನಿದೆ ಎಂದು ಶೇಕ್ಷ್-ಪಿಯರ್ ಕೇಳಿದರೆ, ಅದರಲ್ಲಿ ಹಾಸ್ವವಿದೆ ಎಂದು ಈ ಪುಟ್ಟ ಬರಹವನ್ನು ಧಾರಾಳವಾಗಿ ತೋರಿಸಬಹುದು.

    – ಕೇಶವ

    Like

  3. ಪ್ರಸಾದ್ ಅವರು ಯಾವುದು ಸೊಗಸು ಎನ್ನುವದರ ಬಗ್ಗೆ ಗಂಭೀರವಾದ ವಿಚಾರಗಳನ್ನು ಸೊಗಸಾಗಿ ಹೇಳುತ್ತ ಸತ್ಯವತಿಯವರ ಸರಳ ಸುಂದರ ಕವನಕ್ಕೆ ಒಪ್ಪುವ ಸಂಪಾದಕೀಯವನ್ನು ಬರೆಯುತ್ತಿದ್ದಾರೆ. Enjoying simple pleasures in life is as important as that of what one considers as great pleasures ಅಂತ ಎಷ್ಟು ಸುಂದರವಾಗಿ ಬರೆಯುತ್ತಾ ಸಾಾಬೀತು ಮಾಡುವರು ಕವಯಿತ್ರಿ ಸತ್ಯವತಿಯವರು. ಉಮೇಶ್ ಅವರು ಹೇಳಿದ ‘ ಒಂದೇ ನಾಮಧೇಯ, ಪದೇ ಪದೇ ಉಚ್ಚರಣೆ’ ಮುದ ಕೊಟ್ಟಂತೆ ಕನ್ಘಡ ಬಳಗದ ಕಾರ್ಯಕ್ರಮದಲ್ಲಿ ಒಮ್ಮೆ “ಹಲವರಿಗೂ ಒಂದೇ ನಾಮಧೇಯವೇ?” ಅನ್ನುವ ಪ್ರಶ್ನೆ ಹಿಂದೊಮ್ಮೆ ನಡೆದುದನ್ನು ನೆನಪಿಸಿತು. “ಏನ್ರಿ” ಅಂತ ಎಲ್ಲ ಹೆಂಗಸರೂ ತಮ್ಮ ತಮ್ಮ ಪತಿಯನ್ನು ಕರೆದದ್ದು Henry ಅಂತ ಕೇಳಿಸಿಕೊಂಡ ಕನ್ನಡ ಬಳಗಕ್ಕೆ ಅತಿಥಿಯಾಗಿ ಬಂದಿದ್ದ ಬಿಳಿಯನೊಬ್ಬ ಆ ಎಲ್ಲ ಪತಿಯರ ಹೆಸರಗಳೂ ‘ಹೆನ್ರಿ’ ಅನ್ನುವ ತಪ್ಪು ನಿರ್ಧಾರಕ್ಕೆ ಬಂದು ಬಾಯಿಬಿಟ್ಟು ಕೇಳಿಯೂ ಬಿಟ್ಟಿದ್ದ!

    Like

  4. ಆಹಾ…ಬದುಕಿನ ಮಹತ್ವದ ಸುಖಗಳೆಲ್ಲ ಅತ್ಯಂತ ಸರಳವಾದ ವಿಚಾರಗಳಲ್ಲೇ ಅಡಗಿವೆ.
    ಮನಸ್ಸಿನಲ್ಲಿ ಸಂತೋಷ, ಬದುಕಿನ ಬಗ್ಗೆ ಸಂಭ್ರಮ, ಹೃದಯದಲ್ಲಿ ರಸಿಕತೆ ಇದ್ದಲ್ಲಿ ಎಲ್ಲವೂ ಸುಖಮಯವೇ.
    ಸತ್ಯವತಿಯ ಕವನದಲ್ಲಿ ಈ ಎಲ್ಲ ಸತ್ಯಗಳನ್ನು ಕಾಣಬಹುದು.
    ಉಮೇಶ್ ರು ಬರೆದಂತ ಘಟನೆ, ಅಪ್ಪಟ ಕನ್ನಡತಿ ವೈದ್ಯೆಯ ಮನಸ್ಸಿನ ಕಲ್ಪನೆಗಳಲ್ಲಿ ಸೃಷ್ಟಿಸಿದ ಗೊಂದಲ ನಗು ಬರಿಸುತ್ತದೆ.
    ಪ್ರಸಾದರ ಸಂಪಾದಕೀಯ ಕಾವ್ಯ ಪ್ರಕಾರ ವೊಂದನ್ನೇ
    ನಮಗೆ ಕಟ್ಟಿಕೊಟ್ಟಿದೆ. ಈ ಪ್ರಕಾರದ ಕಾವ್ಯ ಮನಸ್ಸನ್ನು ಅರಳಿಸುತ್ತದೆ. ಪ್ರಸಿದ್ಧ ಕವಿಗಳು ಅನುಭವಿಸಿದ ಆ ರಸ ನಿಮಿಷಗಳು ನಿತ್ಯ ಸತ್ಯವಾಗಿವೆ. ಎಲ್ಲರಿಗೂ ತಲುಪುತ್ತವೆ.
    ಅತಿ ಹೆಚ್ಚಿನ ಬೌದ್ದಿಕ ಕಸರತ್ತು ಗಳು ಕೂಡ ಸರಳ ಸೌಂದರ್ಯದ ಮುಂದೆ ಕಾಲೂರುವುದು ಇದಕ್ಕೇ ಅಲ್ಲವೇ? 👏👏👏

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.