ಚಿತ್ರಕವನಗಳು; ಚಿತ್ತ ಮತ್ತು ಚಿತ್ತಾರಗಳ ಸಮಾಗಮ   

ಈ ವಾರದ ಸಂಚಿಕೆಯ ವಿಶೇಷ – ‘ಫೋಟೋ (ಚಿತ್ರ) ಕವನ’. ಒಂದು ಚಿತ್ರಕಲೆಯನ್ನು ನೋಡಿದಾಗ ನಮ್ಮ ಮನಸ್ಸುಗಳು ನಮ್ಮ ಜೀವನ ಅನುಭವಕ್ಕೆ ತಕ್ಕಂತೆ ಮತ್ತು ಆ ಒಂದು ಕ್ಷಣದಲ್ಲಿ ನಮ್ಮ ಚಿತ್ತ ಸ್ಥಿತಿಯ ಆಧಾರದ ಮೇಲೆ ಕಲೆಯನ್ನು ವಿಶ್ಲೇಷಿಸಲು ಶುರುಮಾಡುತ್ತವೆ. ಹಲವಾರು ಭಾವನಾ ತರಂಗಳು ಉದ್ಭವಿಸುತ್ತವೆ. ಕೆಲವೊಮ್ಮೆ ನಾಲ್ಕಾರು ಸಾಧ್ಯತೆಗಳೂ ಮೂಡುತ್ತವೆ. ಒಮ್ಮೊಮೆ ಆ ಕಲೆ ಗೋಜಲಾಗಿ ಅದರ ಅರ್ಥ ಹೊಳೆಯದಿರಬಹುದು. ಅರ್ಥ ಹೊಳೆಯಲೇ ಬೇಕೆಂದಿಲ್ಲ. ಆ ಚಿತ್ರ ಒಂದು ವಿಶೇಷ ಅನುಭವನ್ನು ಕೊಡಬಹುದು, ಅದು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಾಗದೆ ಇರಬಹುದು. ಈ ವಿಚಾರ ಒಂದು ಕವಿತೆಯ ಓದಿಗೂ ಅನ್ವಯವಾಗಬಹುದು. ಇನ್ನು ಫೋಟೋ ಕರ್ತೃ (ಕ್ಯಾಮರಾ ಹಿಡಿದು ಹೊರಟವರು) ನೋಡುವ ನೋಟಕ್ಕೆ ಬೇರೊಂದು ದೃಷ್ಟಿಕೋನವೇ ಇರಬಹುದು. ಒಂದು ರೂಪಕ ಅಥವಾ ಪ್ರತಿಮೆಯಾಗಿ ಕಾಣುತ್ತಿರುವ ಚಿತ್ರ ವಾಸ್ತವವನ್ನೂ ಮೀರಿ ಇನ್ನೊಂದು ವಿಚಾರವನ್ನು ಹೇಳುತ್ತಿರಬಹುದು. ಹೀಗೆ ಒಂದು ಚಿತ್ರ ಕಲೆ ಹಲವಾರು ವ್ಯಾಖಾನಗಳನ್ನು ಮೂಡಿಸುತ್ತದೆ. ಫೋಟೋ ಕಲೆಯನ್ನು ಭಾವನಾತ್ಮಕ ನೆಲೆಯಲ್ಲಷ್ಟೇ ಅಲ್ಲದೆ ತಾಂತ್ರಿಕ ನೆಲೆಯಲ್ಲೂ ಅಳೆಯಬಹುದು. ಕತ್ತಲೆ, ನೆರಳು, ಬೆಳಕು, ಬಣ್ಣ, ಕೋನ, ಆಳ, ವಿಸ್ತಾರ ಹೀಗೆ ಅನೇಕ ತಾಂತ್ರಿಕ ಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಜನ ಸಾಮಾನ್ಯರು ತೆಗೆಯಬಹುದಾದ ಹಲವಾರು ಫೋಟೋಗಳ ಹಿಂದೆ ಯಾವ ಉದ್ದೇಶವು ಇಲ್ಲದೆ ಅದು ಒಂದು ಉಲ್ಲಾಸ ಘಳಿಗೆಯ ನೆನಪಿನ ಗುಚ್ಛವಾಗಿರಬಹುದು. ಸ್ಮರಣ ಸಂಚಿಕೆಯಾಗಿರಬಹುದು. ಒಂದು ಫೋಟೋ ನಮ್ಮದೇ ವ್ಯಕ್ತಿಚಿತ್ರವಾದಾಗ ನಮ್ಮ ರೇಖಾರೂಪಗಳನ್ನು ನೋಡಿಕೊಂಡು ನಮ್ಮ ಆತ್ಮವಿಶ್ವಾಸ ಹಿಗ್ಗಿ ಅರಳಬಹುದು ಅಥವಾ ಒಪ್ಪಿಗೆಯಾಗದಿದ್ದಲ್ಲಿ ಬೇಸರವೂ ಉಂಟಾಗಬಹುದು. 

 ಡಾ.ಲಕ್ಷ್ಮಿನಾರಾಯಣ ಗುಡೂರ್ ಅವರು ತೆಗೆದಿರುವ ಸುಂದರ ಚಿತ್ರಗಳಿಗೆ ಅವರೇ ಶೀರ್ಷಿಕೆಯನ್ನು ಕೊಟ್ಟು ನೋಡುಗರ ಕಲ್ಪನೆಗಳಿಗೆ ರೆಕ್ಕೆಯನ್ನು ಒದಗಿಸಿದ್ದಾರೆ. ಈ ಚಿತ್ರಗಳನ್ನು ಸಂಪಾದಕರು, ಡಾ. ಗುಡೂರ್ ಅವರ ಅನುಮತಿ ಪಡೆದು ನಮ್ಮ ಆಶುಕವಿಗಳಾದ ಡಾ.ಮುರಳಿ ಹತ್ವಾರ್ ಅವರಿಗೆ ಕವನವನ್ನು ಬರೆಯಲು ಕೋರಿ ಅವರು ಸಮ್ಮತಿಸಿ ಚಿತ್ರಕ್ಕೆ ಸರಿದೂಗುವ ಒಂದಲ್ಲ, ಎರಡು ಕವಿತೆಯನ್ನು ಬರೆದುಕೊಟ್ಟಿದ್ದಾರೆ ಮತ್ತು ಅವರು ತಮ್ಮ ಬರಹದ ಕೊನೆಗೆ ಟಿಪ್ಪಣಿಯಲ್ಲಿ ಇದರ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಕವಿಯ ಇಂಗಿತವನ್ನು ಅರ್ಥಮಾಡಿಕೊಳ್ಳಲು ಈ ಟಿಪ್ಪಣಿಯನ್ನು ಓದುವುದು ಒಳಿತು. 
 -ಸಂಪಾದಕ
ಬುದ್ಧನಂತೆ ಕುಳಿತಿದೆ


ರೆಕ್ಕೆ ಬಿಚ್ಚಿ ಹಾರಲು
ನೀಲ ಗಗನ ಕರೆದಿದೆ
ಹಸಿರ ತೇರನೇರಿ ನಭಕೆ
ಕನಸ ತೂರು ಎಂದಿದೆ

ಹಕ್ಕಿ ಲಯದ ಯಾನಕೆ
ನೀರಿನಲೆಯ ನರ್ತನ
ವಾದ್ಯ ಬೆಳೆದ ಗಾನಕೆ
ರಾಗದಲೆಯ ತನನನ

ಸಂಜೆ ಇಳಿದು ಕಡಲಿಗೆ
ನೆರಳ ಹಾಸು ಹರಡಿದೆ
ಇರುಳ ಕಾಯ್ವ ಕೊಂಬಿಗೆ
ದೀಪವಂಟಿ ಬೆಳಗಿದೆ

ಕೆರೆಯ ತುದಿಯ ಪೀಠಕೆ
ಮರದ ನೆರಳು ಚಾಚಿದೆ
ದಡವ ಹಿಡಿದ ಮನವದು
ಬುದ್ಧನಂತೆ ಕುಳಿತಿದೆ

 -ಮುರಳಿ ಹತ್ವಾರ್
*
ಕಥೆಗಳು ಸಾರ್ ಕಥೆಗಳು


ಕಥೆಗಳು ಸಾರ್ ಕಥೆಗಳು
ತಳ ಕಾಣದ ಬಾವಿಯ ಕಪ್ಪೆಗಳು
ವಟಗುಟ್ಟುವ ಕಥೆಗಳು
 
ಆಸೆಯ ಕೈ ಹಿಗ್ಗಿಸುತ ಚಾಚಿ
ಸಿಕ್ಕ ಮೋಡವನೆಲ್ಲ ಆಪೋಶನ ಮಾಡಿ
ಊದಿದ ಬಿಸಿಯುರಿಗೆ ಹಂಡೆಯ ನೀರೆಲ್ಲ ಬಿಸಿ.
ಆಹಾ! ಎಂದು ಅಲೆ-ಅಲೆಯಲಿ ಮಿಂದ ಮೈಗಳು
 
ರಾಕೆಟ್ಟು ಹಾರಿಸಲು ತೋಡಿದ ಗುಂಡಿಯ ತುಂಬಾ
ಪ್ಲಾಸ್ಟೀಕಿನ ಸರಕುಗಳ ದುರ್ನಾತದ ರಾಶಿ
ದೂರದ ಚುಕ್ಕಿಯಲೊಂದು ಮನೆ ಕಟ್ಟುವ
ಹುಚ್ಚು ಕನಸಿನ ಮನಸುಗಳು

ಬುದ್ಧನ ಮರ, ಪೋಪನ ನಗರ
ಎಲ್ಲೆಂದರಲ್ಲಿ ವಾಲಗ ಊದಿ
ಜಂಗಮ ಗುರುವಿಗೆ ಸ್ಥಾವರ ಕಟ್ಟುವ
ಹಮ್ಮಿನ ಖಾಲಿ ಕತ್-ತಲೆಗಳು

ಬಣ್ಣ-ಬಣ್ಣದ ಬಾಂಬುಗಳ ಸ್ಫೋಟದಲಿ
ಮನೆಯ ಗೋಡೆ ತಾರಸಿಯೆಲ್ಲಾ ತೂತು
ಚಿತ್ರ ವಿಚಿತ್ರ ಫೋಟೋಗಳಲೆಲ್ಲ ಮುಚ್ಚಿಟ್ಟು
ನಕ್ಕ ಹಾಗೆ ನಟಿಸುವ ಮುಖಗಳು
 
ತಾನೆಷ್ಟೇ ಬೆಳಕೆಂದುಕೊಂಡರೂ, ಮಾನವ ಜಾತಿ,
ದಿನ ಕಳೆದಂತೆ ಮಲಗುವ ಉದ್ದುದ್ದ ನೆರಳು;
ತಿರುಳಿಲ್ಲದ ಕರಿ ಇರುಳು ಬರೆದ ಹುರುಳಿಲ್ಲದ ಕಥೆಗಳು 
ಹಳಿಯ ಮೇಲೂ ಉರುಳದ ಚಕ್ರಗಳು

ತಳ ಒಡೆದು ನೀರುಕ್ಕಿ ಹರಿವ ಅಕ್ಷರಗಳು
ಬರೆವ ಹೊಸ ಹಗಲಿನ ಕಥೆಗಳಿಗೆ
ಕಾದಿವೆ ಬಾವಿಯ ಕಪ್ಪೆಗಳು.

 -ಮುರಳಿ ಹತ್ವಾರ್
*
ಟಿಪ್ಪಣಿ


1. ಪ್ರಸಾದರು ಚಿತ್ರ-ಕವಿತೆ ಬೇಕೆಂದು ಕೇಳಿ ಸ್ವಲ್ಪ ಸಮಯಕ್ಕೆ ಬಂದ ಗೂಡೂರರ ಚಿತ್ರ ಸರಣಿಯ ಮೊದಲ ಚಿತ್ರ ಏಂಜೆಲ್ ಅಫ್ ದ ನಾರ್ಧ್. ಅದನ್ನು ನೋಡಿದಾಗ ಕಣ್ಕಟ್ಟಿದ್ದು ದೊಡ್ಡ ಕಪ್ಪು ರೆಕ್ಕೆಗಳು. ಬಿಳಿಯ ಮೋಡವನ್ನೆಲ್ಲ ನುಂಗುತ್ತಿರುವ ದುರಾಸೆಯ ರಕ್ಕಸನಂತೆ ಕಂಡ ಆ ಕಪ್ಪು ಬೆಳೆದ ಮಸೂರದಲ್ಲೇ ಉಳಿದ ಚಿತ್ರಗಳನ್ನು ನೋಡಿದ್ದರಿಂದ ಎಲ್ಲಾ ಚಿತ್ರಗಳ ಕಪ್ಪು ನೆರಳು ‘ಕಥೆಗಳು ಸಾರ್ ಕಥೆಗಳು’ಕವಿತೆಯ ಭಾವ ಮತ್ತು ಅಕ್ಷರಗಳಾದವು. ಹಾಗಾಗಿ ಕಪ್ಪೇ ಇಲ್ಲದ ಹಾರಲು ನಿಂತ ಹಕ್ಕಿಯ ಚಿತ್ರದಲ್ಲೂ, ಶೀರ್ಷಿಕೆಯ ‘ವ್ಯಾಟಿಕನ್ ಅಲ್ಲಿ ಕಪ್ಪು ಹುಡುಕಿದ್ದು.

2. ಎರಡನೇ ಬಾರಿ, ಉದ್ದೇಶ ಪೂರ್ವಕವಾಗಿ ಆ ಹಾರುವ ಹಕ್ಕಿಯ ಚಿತ್ರದಿಂದ ಮೊದಲು ಮಾಡಿ ಬೆಳಕನ್ನು ದಿಟ್ಟಿಸಿದಾಗ, ಹುಟ್ಟಿದ ಭಾವ ಗಗನ ದಾಟುವ ಹೆಬ್ಬಯಕೆ (ambition). ಆ ಮಸೂರದಲ್ಲಿ ಬೆಳೆದದ್ದು ಬೆಳಕನ್ನು ಬರೆದ ಕವನವಾಯಿತು. 

3. ಹತ್ತು-ಹನ್ನೆರಡು ವರ್ಷದ ಹಿಂದೆ ಬೆಳೆಸಿಕೊಂಡ ಫೋಟೋಗ್ರಪಿ ಹವ್ಯಾಸದ ಅಭ್ಯಾಸದಲ್ಲಿ ನನ್ನ ತಿಳುವಳಿಕೆಯನ್ನ ಹೆಚ್ಚಿಸಿದ್ದು ರಾಬರ್ಟ ಆಡಮ್ಸನ ಈ ಸಾಲುಗಳು:

" the photography I care most about shares some assumptions with painting of the past. The effort, as I see it, is to document coherence in an apparently incoherent situation. Which means that first you have to believe in coherence, though that can't itself be photographed, and then you have to find a visual metaphor to suggest it. Of course when you're working you don't think at all about doing such a thing, or what you'd end up with a piece of mystical goo"

Robert Adams. Landscape: theory. 1980. P8.

ಮೇಲಿನ ಸಾಲುಗಳನ್ನು ಮೊದಲ ಬಾರಿ ಓದಿದಾಗ ನೆನಪಾದದ್ದು ಮಂಕುತಿಮ್ಮನ ಈ ಕಗ್ಗ:

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಲಿ ಸಮನ್ವಯ ಸೂತ್ರ ನಯವ
ವ್ಯಸನಮಯ ಸಂಸಾರದಲಿ ವಿನೋದವ ಕಾಣ್ವ ರಸಿಕತೆಯೇ ಯೋಗವೆಲೋ ಮಂಕುತಿಮ್ಮ

ಹೀಗೆ, ಆಗಾಗ ಓದಿದ್ದು, ನೋಡಿದ್ದು, ಮಾಡಿದ್ದು ಎಲ್ಲ ಸೇರಿ ಮೂಡಿಸಿದ್ದು ಮೇಲಿನ ಎರಡು ಕವನಗಳು

-ಮುರಳಿ ಹತ್ವಾರ್

5 thoughts on “ಚಿತ್ರಕವನಗಳು; ಚಿತ್ತ ಮತ್ತು ಚಿತ್ತಾರಗಳ ಸಮಾಗಮ   

 1. ಗುಡೂರರ ಚಿತ್ರ ಗುಚ್ಛಕ್ಕೆ ಮುರಳಿಯವರ ಕವನದ ಚೌಕಟ್ಟು ಊಹಾ ಲೋಕದ ಕುದುರೆಯನ್ನು ಲಗಾಮು ಹಾಕದೇ ಸ್ವೇಚ್ಚೆಯಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷ ತಾಂತ್ರಿಕತೆ ಬಳಸಿ, ವಿಶಿಷ್ಟವಾಗಿ ಫ್ರೇಮಿಸಿ ಗುಡೂರರು ತೆಗೆದ ಛಾಯಾಚಿತ್ರಗಳನ್ನು ಶಬ್ದಗಳಲ್ಲಿ ಪೋಣಿಸಿದ ಕಂಠೀಹಾರದಂಥ ಕವನಗಳು ಮತ್ತೆ ಮತ್ತೆ ಓದಲು, ಚಿಂತಿಸಲು ಪ್ರೇರೇಪಿಸಿವೆ.

  – ರಾಂ

  Like

 2. ಪ್ರಸಾದ್ ಅವರ ಸಂಪಾದೀಕ ನುಡಿಗಳು ಚಿತ್ರ-ಕವನಗಳಿಗೆ ತುಂಬ ಒಳ್ಳೆಯ ಪೀಠಿಕೆ. ನಾವೇಕೆ ಛಾಯಾಚಿತ್ರಗಳನ್ನು ತೆಗೆಯುತ್ತೇವೆ ಎನ್ನುವುದನ್ನು ತುಂಬ ಸುಂದರವಾಗಿ ಬರೆದಿದ್ದಾರೆ.

  ಒಂದಕ್ಕಿಂತ ಒಂದು ಸುಂದರ ಚಿತ್ರಗಳು. ಛಾಯಾಚಿತ್ರಗಳಲ್ಲಿ ಪರಿಣಿತಿ ಪಡೆದಿರುವ ಗುಡೂರ್ ಅವರದು ಮೈಕ್ರೋಚಿತ್ರದಲ್ಲೂ ಆಸಕ್ತರು. ಛಾಯಚಿತ್ರಗಳಿಗೆ ಕೊಟ್ಟಿರುವ ಅಡಿಟಿಪ್ಪಣೇ (ಅಡಿಶೀರ್ಷಿಕೆ?) ಕೂಡ ಸೊಗಸಾಗಿವೆ. `ಬಾನಿಗೆ ಏಣಿಯೇ` ಚಿತ್ರ ಗುಡೂರ್ ಅವರ ಪ್ರಯೋಗಶೀಲತೆಗೆ ಸಾಕ್ಷಿಯಾಗಿದೆ. `ರೆಕ್ಕೆ ಬಿಚ್ಚಿ` ಹಾರುವ ಹಕ್ಕಿಯ ಟೇಕ್ ಆಫ್ ಆಗುವ ಕ್ಷಣವನ್ನು ಹಿಡಿದು ನಿಲ್ಲಿಸಿಬಿಟ್ಟಿದ್ದಾರೆ. ಸೂರ್ಯನನ್ನು ಕಟ್ಟಿಹಾಕಿರುವ ಎರಡೂ ಚಿತ್ರಗಳು ಅದ್ಭುತ ಪರಿಕಲ್ಪನೆ. `ನಿವೃತ್ತಿ` ಚಿತ್ರ ಬಣ್ಣದಿಂದ ಕಪ್ಪು-ಬಿಳುಪಾಗುವ ರೀತಿ ಕೂಡ ನೂರಾರು ಅರ್ಥಗಳನ್ನು ಕೊಡುತ್ತದೆ.

  ಒಂದಕ್ಕೊಂದು ಸಂಬಂಧವಿಲ್ಲದ ಛಾಯಾಚಿತ್ರಗಳನ್ನು ತಮ್ಮ ಭಾವಲೋಕದ ಪಾತ್ರಯಲ್ಲಿ ಹಾಕಿ ಬೌದ್ಧಿಕ ಬೆಂಕಿಯಲ್ಲಿ ಬೇಯಿಸಿ ಒಂದಕ್ಕಿಂತ ಒಂದು ಸುಂದರ ಕವನಗಳನ್ನು ಉಣಬಡಿಸಿದ್ದಾರೆ.

  ಮೊದಲ ಚಿತ್ರದಿಂದ ಕೊನೆಯ ಚಿತ್ರದ ಪಯಣ `ಬುದ್ದನಂತೆ ಕುಳಿತಿದೆ` ಎನ್ನುವ ಕವನದಲ್ಲಿ ಹತ್ವಾರ್ ಅವರು ಅದೆಷ್ಟು ಚೆನ್ನಾಗಿ ಪೋಣಿಸಿದ್ದಾರೆ ಅಂದರೆ, ಅದೊಂದು ಸುಂದರ ಸ್ವತಂತ್ರ ಕವನವಾಗಿದೆ. ಕವನದಲ್ಲಿ ಭಾವಗೀತೆಯ ಗೇಯತೆ ಇದೆ, ಅಂತ್ಯಪ್ರಾಸವಿದೆ, ಆಶಾಭಾವವಿದೆ.

  ಅದಕ್ಕೆ ವ್ಯತಿರಿಕ್ತವಾಗಿ, `ಕಥೆಗಳು ಸಾರ್ ಕಥೆಗಳು` ಕವನ ಡಾರ್ಕ್ ಆಗಿದೆ. ಈ ಕವನದ ತುಂಬ ಅಚ್ಚಹೊಸ ಪ್ರತಿಮೆಗಳಿವೆ. `ಮೋಡಕ್ಕೆ ಆಪೋಶನ` ಮಾಡುವ ಕಲ್ಪನೆಯೇ ಅದ್ಭುತ, ಅಂಥದರಲ್ಲಿ, `ಮೋಡಗಳನ್ನು ಊದಿದ ಬಿಸಿಯುಸಿರಿಗೆ ಹಂಡೆಯ ನೀರೆಲ್ಲ ಬಿಸಿಯಾಗುವುದು` ಎಂದರೇನು! ಬುದ್ಧನನ್ನು ಪೋಪನ ಪಕ್ಕ ನಿಲ್ಲಿಸಿ ನೋಡಬಲ್ಲರು ಹತ್ವಾರರು. ಕೊನೆಯ ಸಾಲುಗಳಲ್ಲಿ ಮತ್ತೆ ಕವನದ ಮೊದಲಿಗೆ ಬಂದು ಕವಿತೆಗೊಂದು ಬಂಧ ಕೊಡುತ್ತಾರೆ.

  – ಕೇಶವ

  Like

 3. Wow! A visual and intellectual feast ಅನಿವಾರ್ಯವಾಗಿ ಕೆಲವೊಂದಿಷ್ಟು ಇಂಗ್ಲಿಷನಲ್ಲೇ ಬರೆಯಬೇಕಾಗಿದೆ. Where to start? Editorial, Photomontages and poetry each stands on its own as an essay in 3 (p’s) different areas- prose, pictures and poetry- pictures are poetic, poems are visual and write up a combination, in a way. 1) photos are more of a montages rather than collages. There is a lot of work gone not just in taking the pictures but also in grouping and titling them : starting from the bottom; the three apparently conflicting images in this montage but individually strong, and photographically stunning. At first glance mundane but the sax artist is bouncing the red moon in the concavity, which I missed initially till the title gave away! Buddha statue would bd dull without the flower. The next two have unity in shape and the diagonal rails make it as do the ‘rule of thirds’ in this and throughout the collections. The water theme runs in sunset and sea lighthouse but the composition and painstaking cropping is effective. The first three are the best especially the collage of the very first photo done with artistry and imagination. (Can one call it a pastiche?). 2) We are all used to Murali’s instant poetry and same here with effect. The second poem is thoughtful and a bit dark, as LN comments but goes deep. Being himself a good photographer helps to interpret the collection here in an ind Wow! A visual and intellectual feast ಅನಿವಾರ್ಯವಾಗಿ ಕೆಲವೊಂದಿಷ್ಟು ಇಂಗ್ಲಿಷನಲ್ಲೇ ಬರೆಯಬೇಕಾಗಿದೆ. Where to start? Editorial, Photomontages and poetry each stands on its own as an essay in 3 (p’s) different areas- prose, pictures and poetry- pictures are poetic, poems are visual and write up a combination, in a way. 1) photos are more of a montages rather than collages. There is a lot of work gone not just in taking the pictures but also in grouping and titling them : starting from the bottom; the three apparently conflicting images in this montage but individually strong, and photographically stunning. At first glance mundane but the sax artist is bouncing the red moon in the concavity, which I missed initially till the title gave away! Buddha statue would bd dull without the flower. The next two have unity in shape and the diagonal rails make it as do the ‘rule of thirds’ in this and throughout the collections. The water theme runs in sunset and sea lighthouse but the composition and painstaking cropping is effective. The first of the three is the best especially the collage of the very first photo done with artistry and imagination. (Can one call it a pastiche?).
  2) Murali’s instant poetry we are all well used to and admire. Here both poems are thoughtful and artistic in their own way and second one is ‘darker’ but burns deep! 3)!Prasad sets high standard with his own thoughtful piece in addition to collecting poetry. It is a tough act to follow!

  Like

 4. Very nice edition.First of its kind.
  ಪ್ರಸಾದರ ಸಂಪಾದಕೀಯ ನುಡಿಗಳು ಚಿತ್ರ ಕವನದ ನಾನಾ ಹೊಳಹುಗಳನ್ನು ವಿವರಿಸುತ್ತದೆ.
  ಗೂಡೂರರ ಚಿತ್ರಗಳು ಅದರಲ್ಲು ಚಿಗುರಿ ನಿಂತ ಯುವತಿಯೊಂದಿಗೆ ಕಾಣುವ ಮರದ ಚಿತ್ರ ಬಹಳ ಚೆನ್ನಾಗಿದೆ.
  ಅನಿವಾಸಿಯ ಆಶು ಕವಿ ಮುರಳಿಯವರು. ಇಂತದ್ದೇ ಚಿತ್ರ ವೆಂದು ಆಯ್ಕೆ ಮಾಡದೆ, ಇಡೀ ಚಿತ್ರಗುಚ್ಛ ವನ್ನೇ ಬಳಸಿ ಕವನ ಬರೆದಿರುವುದು
  ‘ಚಿತ್ರ ಗುಚ್ಛ ಕವನ’ ದ ಸಾಧ್ಯತೆಯನ್ನು ಬಿಚ್ಚಿಟ್ಟಿದೆ.
  ಅಂತೆಯೇ ಅಮಿತಾ ಮತ್ತಿತರರ ಚಿತ್ರ ಗುಚ್ಛ ಗಳನ್ನು ಎದುರು ನೋಡುವಂತೆ ಮಾಡಿದೆ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.