ಗಿರೀಶ್ ಕಾರ್ನಾಡರ ಜನ್ಮ ದಿನೋತ್ಸವ;  ಯಯಾತಿ, ಹಯವದನ ಒಂದು ನೆನಪು

ಚಿತ್ರ ಕೃಪೆ: ಗೂಗಲ್
ಮೇ ೧೯ ಗಿರೀಶ್ ಕಾರ್ನಾಡ್ ಅವರ ೮೪ ನೇ ಜನ್ಮ ದಿನೋತ್ಸವ. ಕಾರ್ನಾಡರು ಭಾರತದ ಒಬ್ಬ ಶ್ರೇಷ್ಠ ನಾಟಕಕಾರ, ಲೇಖಕ, ನಟ, ಚಿತ್ರ ನಿರ್ದೇಶಕ ಮತ್ತು ಸಮಾಜವಾದಿ. ೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು. ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ ಮತ್ತು ಇನ್ನೂ ಅನೇಕ ಪ್ರಶಸ್ತಿಯನ್ನು ಪುರಸ್ಕಾರಗಳನ್ನು ಪಡೆದವರು. ಇಂಗ್ಲೆಂಡಿನ ಕೆಲವು ಅನಿವಾಸಿ ಕನ್ನಡಿಗರಿಗೆ ಕಾರ್ನಾಡರು ಲಂಡನ್ನಿನ ನೆಹರು ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದಾಗ ಅವರ ಪರಿಚಯವಿರಬಹುದು. ಯಯಾತಿ, ತುಘಲಕ, ಹಯವದನ, ನಾಗಮಂಡಲ, ತಲೆದಂಡ ಹೀಗೆ ಇನ್ನು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕಾರ್ನಾಡರಿಗೆ ತಮ್ಮ ಕಾಲೇಜ್ ದಿನಗಳಲ್ಲಿ ಒಬ್ಬ ಕವಿಯಾಗ ಬೇಕೆಂಬ ತೀವ್ರ ಹಂಬಲ ಇತ್ತು. ಅದೇ ವಿಚಾರವಾಗಿ ಅವರ ಆಡಾಡತ ಆಯುಷ್ಯ ಎಂಬ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ; "ನನಗೆ ನೆನಪಿದ್ದಾಗಿನಿಂದಲೂ ನಾನು ಬಯಸಿದ್ದು ಕವಿಯಾಗಬೇಕು ಎಂದು. ಕಾಲೇಜಿನಲ್ಲಿ ಕವಿತೆಗಳನ್ನು ಬರೆದೆ, ಓದಿದೆ, ಅನುಕರಿಸಿದೆ, ಕವಿಗಳನ್ನು ಕಂಡು ಅಸೂಯೆ ಪಟ್ಟೆ. ಆದರೆ ಈಗ ಹಿಂದಿರುಗಿ ನೋಡಿದಾಗ ನನ್ನ ವ್ಯಕ್ತಿತ್ವದ ವಿಕಾಸವಾದದ್ದೆಲ್ಲ ನಾಟಕಗಳಿಂದಾಗಿಯೇ ಎಂಬುದು ಅರಿವಾಗುತ್ತದೆ." ಬಹಳ ಎಳೆ ವಯಸ್ಸಿನಿಂದ ನಾಟಕ ಯಕ್ಷಗಾನ ನೋಡಿಕೊಂಡು ಬೆಳೆದ ಕಾರ್ನಾಡರಿಗೆ ತಾವು ನಾಟಕ ಬರೆಯುವವರೆಗೆ ಅವರ ಸಾಮರ್ಥ್ಯದ ಅರಿವು ಬಹುಶ ಇರಲಿಲ್ಲ.  ಅವರ ಮೊದಲ ನಾಟಕ ಯಯಾತಿ ಬರೆದಾಗ ಅವರಿಗೆ ಕೇವಲ ೨೨ವರ್ಷ ವಯಸ್ಸಾಗಿತ್ತು. ಆ ನಾಟಕ ಬರೆಯುವ ಹೊತ್ತಿಗೆ ಗಿರೀಶ್ ಕಾರ್ನಾಡರು ಇಂಗ್ಲೆಂಡಿಗೆ ಹೊರಟು ನಿಂತಿದ್ದರು. ಅವರ ತಂದೆ ತಾಯಿ ಅವರಿಗೆ ಇಂಗ್ಲೆಂಡಿನಲ್ಲಿ ನೆಲೆಸಬಾರದು, ಅಲ್ಲಿ ಬಿಳಿ ಹೆಂಗಸೊಂದಿಗೆ ಮದುವೆ ಮಾಡಿಕೊಳ್ಳಬಾರದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು ಈ ನಾಟಕ ಬರೆಯಲು ಪ್ರೇರಣೆ ನೀಡಿತು ಎಂಬುದಾಗಿ ತಿಳಿಸಿದ್ದಾರೆ.  ಯಯಾತಿ ನಾಟಕದಲ್ಲಿ ತಂದೆಗಾಗಿ ಯೌವನ್ನವನ್ನು ತ್ಯಜಿಸುವ ಮಗ, ಮತ್ತು ತಂದೆ ತಾಯಿಯ ನಿರೀಕ್ಷೆ ನಿರ್ಬಂಧಗಳ ನಡುವೆ ತ್ಯಾಗ ಮನೋಭಾವದಿಂದ ಇಂಗ್ಲೆಂಡಿಗೆ ಹೋರಾಟ ಯುವಕ ಕಾರ್ನಾಡ್ ಈ ಎರಡು ಸನ್ನಿವೇಶದಲ್ಲಿ ಅವರು ಸಾದೃಶ್ಯವನ್ನು ಕಂಡುಕೊಳ್ಳುತ್ತಾರೆ. 'ಈ ನಾಟಕ ಬರೆಯುವ ವೇಳೆಗೆ ಯಾವುದೋ ಅಗೋಚರ ಶಕ್ತಿ ಮೈಮೇಲೆ ಬಂದು ಆವರಿಸಿಕೊಂಡಿತ್ತು. ಕಣ್ಣೆದುರೇ ಯಯಾತಿ, ಪುರು ಈ ಪಾತ್ರಗಳೆಲ್ಲ ಮಾತನಾಡಲು ಶುರು ಮಾಡಿತ್ತು. ನಾನು ಒಬ್ಬ ಗುಮಾಸ್ತನಂತೆ ಈ ಸಂಭಾಷಣೆಗಳನ್ನು ಬರೆಯುತ್ತಿದೆ' ಎಂದು ಹೇಳಿದ್ದಾರೆ.

ಅಲ್ಲಿಂದ ಮುಂದಕ್ಕೆ ಕಾರ್ನಾಡರ ಯಯಾತಿಗೆ ಉತ್ತಮ ಪ್ರತಿಕ್ರಿಯೆಗಳ ಪ್ರವಾಹವೇ ಹರಿದುಬಂತು. ಇಂಗ್ಲೀಷಿನಲ್ಲಿ ಬರೆಯುವ ಮತ್ತು ಇಂಗ್ಲೆಂಡಿನಲ್ಲಿ ನೆಲೆಸುವ ತೀವ್ರ ಆಸೆ ಇದ್ದ ಕಾರ್ನಾಡರಿಗೆ ಭಾರತ ಬಿಟ್ಟು ವಿದೇಶದಲ್ಲಿ ನೆಲಸಬೇಕು ಎಂಬ ಯೋಚನೆ ನಿರರ್ಥಕ ಮಾತ್ರವ್ಲಲ ತಕ್ಕ ಮಟ್ಟಿಗೆ ಆತ್ಮಘಾತಕವೆಂಬಂತೆ ಮನದಟ್ಟಾಯಿತು. ಅವರಿಗೆ ಆಕ್ಸ್ ಫೋರ್ಡ್ ಮುಗಿಸಿ ಭಾರತಕ್ಕೆ ಮರಳುವುದು ಎಂಬ ನಿರ್ಧಾರ ಮಾಡುವುದು ಸುಲಭವಾಯಿತು. (ಆಡಾಡತಾ ಆಯುಷ್ಯ ಪುಟ ೧೨೦) ಯಯಾತಿ ನಾಟಕ ಕಾರ್ನಾಡರ ಲೇಖನಿಯಿಂದ ಬಂದದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಒಬ್ಬ ಶ್ರೇಷ್ಠ ಲೇಖಕನ ಪ್ರತಿಭೆ ಅನಾವರಣ ಗೊಂಡಿತು, ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಶ್ರೀಮಂತಗೊಂಡಿತು. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಈ ಕ್ಷೇತ್ರಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಮಾನವತಾವಾದಿ, ಬಾಲಿವುಡ್ಡಿನ ಗ್ಲಾಮರ್ ತಾರೆಗಳ ನಡುವೆ ಹೆಸರು ಮಾಡಿದ್ದ  ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಕಾರ್ನಾಡರು ಸಾವಿನಲ್ಲಿ ಯಾವುದೇ ಆಡಂಬರ, ಅಲಂಕಾರ, ಮೆರವಣಿಗೆ, ಗಣ್ಯರ ಶ್ರದ್ಧಾಂಜಲಿ ಇವೆಲ್ಲವನ್ನು  ತಿರಸ್ಕರಿಸಿ ಸದ್ದಿಲ್ಲದೆ  ಮುಳುಗುವ ಸೂರ್ಯನಂತೆ ಜಾರಿಕೊಂಡದ್ದು ಅವರ ವಿನಯ ಶೀಲ ಬದುಕಿಗೆ ಸಾಕ್ಷಿಯಾಗಿತ್ತು.

ಅವರ ಈ ೮೪ ಹುಟ್ಟು ಹಬ್ಬದ ಸಂಧರ್ಭದಲ್ಲಿ ಯಯಾತಿ ನಾಟಕದ ಬಗ್ಗೆ ಕೇಶವ್ ಕುಲಕರ್ಣಿ ತಮ್ಮ ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸ್ಮರಣೀಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
*

ಕಾರ್ನಾಡರ ಹಯವದನ ನಾಟಕದ ಗೀತೆ 'ಬಂದಾನೋ ಬಂದ ಸವಾರ' ಮತ್ತು 'ಗಜವದನ ಹೇ ರಂಭಾ' ಈ ರಂಗಗೀತೆಗಳನ್ನು ನಾಟಕದಲ್ಲಿ ಅಥವಾ ಬರಿ ಗೀತೆಯಾಗಿ ನೀವೆಲ್ಲಾ ಕೇಳಿರಬಹುದು. ಬಿವಿ ಕಾರಂತರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು ಅತ್ಯಂತ ಜನಪ್ರಿಯವಾಗಿವೆ. ಇಲ್ಲಿ ಅಳವಡಿಸಿರುವ ಜಾನಪದ ಶೈಲಿ ಮತ್ತು ಕೋರಸ್ ಬಹಳ ಪರಿಣಾಮಕಾರಿಯಾಗಿದೆ. ಖ್ಯಾತ ರಂಗ ನಟಿ, ಗಾಯಕಿ ಶ್ರೀಮತಿ ಬಿ ಜಯಶ್ರೀ ಅವರು 'ಗಜವದನ ಹೇ ರಂಭಾ' ಎಂಬ ಗೀತೆಯನ್ನು  ಕನ್ನಡ ಬಳಗದ ಯುಗಾದಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದು ಹಲವರ ನೆನಪಿನಲ್ಲಿ ಉಳಿದಿರಬಹುದು. ಅಮಿತ ಅವರು ಇಂದಿನ ಕಾರ್ನಾಡರ ಜನ್ಮ ದಿನೋತ್ಸವ ಸಂಚಿಕೆಯಲ್ಲಿ 'ಬಂದಾನೋ ಬಂದ ಸವಾರ' ಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ.  
    - ಸಂಪಾದಕ 

**************************************************************************************

ಕಾರ್ನಾಡರ ಯಯಾತಿ - ಡಾ. ಕೇಶವ್ ಕುಲಕರ್ಣಿ 

ಪುರಾಣ, ಜನಪದ ಮತ್ತು ಇತಿಹಾಸದ ಪುಟಗಳಿಂದ ತಮಗೆಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು, ತಾವು ನಂಬಿಕೊಂಡಿರುವ ವಾದಗಳನ್ನು ಎತ್ತಿಕೊಂಡು, ಅವುಗಳನ್ನು ಆಧುನಿಕ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಕಾಲಕ್ಕೆ ಪ್ರಚಲಿತವನಿಸುವಂತೆ ಬರೆದು ಭಾರತದ, ಅದರಲ್ಲೂ ಕನ್ನಡದ, ಓದುಗರನ್ನು, ನಾಟಕದ ಪೇಕ್ಷಕರನ್ನು ಮತ್ತು ಒಂದು ಜನಾಂಗದ ರಂಗಕಲಾವಿದರನ್ನು ಬಡಿದೆಬ್ಬಿಸಿದರು ಕಾರ್ನಾಡರು.

ಅವರ ಮೊದಲ ನಾಟಕ, `ಯಯಾತಿ`; ಬರೆದದ್ದು ೧೯೬೧ ರಲ್ಲಿ, ಅದೂ ಇಂಗ್ಲೆಂಡಿನ ಆಕ್ಸ್-ಫರ್ಡ್-ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ. ವಿ.ಸ. ಖಾಂಡೇಕರ್ ಅವರು `ಯಯಾತಿ` ಕಾದಂಬರಿಯನ್ನು ಬರೆದದ್ದು ೧೯೫೯ರಲ್ಲಿ, ಕಾರ್ನಾಡ್ ಅವರಿಗೆ ಮರಾಠಿಯೂ ಬರುತ್ತಿತ್ತು. `ಯಯಾತಿ` ನಾಟಕವನ್ನು ಬರೆಯುವ ಮೊದಲು `ಯಯಾತಿ` ಕಾದಂಬರಿಯನ್ನು ಅವರು ಓದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಕಾರ್ನಾಡರ `ಯಯಾತಿ`ಗೂ ಖಾಂಡೇಕರರ ‘ಯಯಾತಿ`ಗೂ ಸಾಕಷ್ಟು ಸಾಮ್ಯತೆಗಳಿವೆ. ಹಾಗೆಯೇ ಬೇಧಗಳೂ ಇವೆ. ಇದರ ಬಗ್ಗೆ ಯಾರಾದರೂ ಕನ್ನಡ ಅಥವಾ ಭಾರತದ ವಿಮರ್ಶಕರು ಬರೆದಿದ್ದಾರೆ ಎಂದುಕೊಂಡಿದ್ದೇನೆ. `ಯಯಾತಿ`ಯನ್ನು ಪ್ರಕಟಿಸಿದ್ದು ಧಾರವಾಡದ ಪ್ರಸಿದ್ಧ `ಮನೋಹರ ಗ್ರಂಥಮಾಲೆ` (ಅಲ್ಲಿಯೇ ನಾನು ಕಾರ್ನಾಡರನ್ನೂ ಭೀಟಿಯಾಗಿದ್ದೆ ಎನ್ನುವುದೂ ನನಗೆ ಮರೆಯಲಾಗದ ಅನುಭವ).

ನಾನು `ಯಯಾತಿ’ ನಾಟಕವನ್ನು ನೋಡುವ ಮೊದಲು ಓದಿರಲಿಲ್ಲ. ಆಗ ನನಗಿನ್ನೂ ಹದಿನಾರೋ ಹದಿನೇಳೋ  ವಯಸ್ಸು. ವಿಚಿತ್ರವೆಂದರೆ ಅದೇ ಸಮಯದಲ್ಲಿ ಕನ್ನಡ ವಾರಪತ್ರಿಕೆಯಲ್ಲಿ (ತರಂಗ ಇರಬೇಕು)  ಖಾಂಡೇಕರರ `ಯಯಾತಿ` ಧಾರಾವಾಹಿಯಾಗಿ ಬರುತ್ತಿತ್ತು ಅಥವಾ ಬಂದಿತ್ತು. ಈ ಎರಡೂ ಕೃತಿಗಳು ಬರೆದ ಸುಮಾರು ೨೫ ವರ್ಷಗಳಾದ ಮೇಲೆ ನಾನು ಅವುಗಳನ್ನು ನೋಡಿದ್ದು ಮತ್ತು ಓದಿದ್ದು. ಅದೇ ಹರೆಯಕ್ಕೆ ಕಾಲಿಡುತಿದ್ದ ನನ್ನ ಮೇಲೆ ಈ `ಯಯಾತಿಗಳು` ಮಾಡಿದ ಪ್ರಭಾವ ಅಪಾರ, ಅಲ್ಲೋಲಕಲ್ಲೋಲ ಅಗಾಧ.

ಕಾರ್ನಾಡರ `ಯಯಾತಿ` ನಾಲ್ಕು ಅಂಕಗಳ ನಾಟಕ. ಯಯಾತಿಯ ಕತೆಯು ಎಲ್ಲರಿಗೂ ಗೊತ್ತಿರುವದರಿಂದ ಅದನ್ನು ಬರೆದು ಬೋರು ಹೊಡೆಸುವುದಲ್ಲ. ಆದರೆ ಈ ನಾಟಕದಲ್ಲಿ ಬರುವ ಕೆಲವು ಸಂಭಾಷಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ:

ಸೂತ್ರಧಾರ ಆರಂಭದಲ್ಲೇ, `ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು.` ಎಂದು ಸ್ವವಿಮರ್ಶೆಯೊಂದಿಗೇ ನಾಟಕವನ್ನು ಆರಂಭಿಸುತ್ತಾನೆ. 

ಯಯಾತಿಗೆ ಶರ್ಮಿಷ್ಠೆ ಹೇಳುತ್ತಾಳೆ,` ನೀವು ನನ್ನ ಕತೆಯನ್ನು ನಂಬಬೇಕೆಂದು ಹಟವಿಲ್ಲ. ದೇವಯಾನಿ ತನ್ನ ಕತೆಯನ್ನು ನಿಮಗೆ ಹೇಳಿರಬಹುದು. ಅದನ್ನು ನಂಬರಿ.`

ಇನ್ನೊಂದು ಸಲ ಶರ್ಮಿಷ್ಠೆ ಹೇಳುತ್ತಾಳೆ, `ಈಗ ದಾಸ್ಯ ನನಗೆ ಚಟವಾಗಿ ಬಿಟ್ಟಿದೆ. ದಾಸ್ಯದಲ್ಲಿ ಹೊಣೆಯ ಭಾರವಿಲ್ಲ. ಈಗ ನನಗೆ ಸ್ವಾತಂತ್ರ್ಯದಲ್ಲೇ ಶೃಂಖಲೆ ಕಾಣುತ್ತಿದೆ.`

ದೇವಯಾನಿ ಇನ್ನೊಂದು ಸಲ ಶರ್ಮಿಷ್ಠೆಗೆ ಹೇಳುತ್ತಾಳೆ, `ನಿನ್ನನ್ನು ದಾಸ್ಯದಿಂದ ಬಿಡಿಸಿದ್ದೇನೆ. ಬೇಕಿದ್ದರೆ ಈ ಸ್ವಾತಂತ್ರ್ಯದಿಂದ ಉರುಲು ಹಾಕಿಕೊ.`

ಪುರುವಿನ ಪತ್ನಿ ಚಿತ್ರಲೇಖೆ ಒಂದು ಕಡೆ ಹೇಳುತ್ತಾಳೆ, `ಹೇಡಿಗಳಿಗೆ ಮತ್ತು ಸುಳ್ಳು ಹೇಳುವವರಿಗೆ ತರ್ಕ ಅನಿವಾರ್ಯವಾಗುತ್ತದೆ.`

ಕಾರ್ನಾಡರು ಯಯಾತಿ ಮತ್ತು ಪುರು ಎನ್ನುವ ಎರಡು ಗಂಡು ಪಾತ್ರಗಳು ಮತ್ತು ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಮತ್ತು ದಾಸಿ ಎನ್ನುವ ಹೆಣ್ಣು ಪಾತ್ರಗಳ ಮೂಲಕ ಒಂದು ಸಂಕೀರ್ಣವಾದ ತೊಳಲಾಟವನ್ನು ನಮ್ಮೊಳಗೆ ಉರಿಯಲು ಬಿಟ್ಟು ನಾಟಕವನ್ನು ಮುಗಿಸುತ್ತಾರೆ.

`ಯಯಾತಿ` ನಾಟಕವು ಮೊದಲ ಬಿಡುಗಡೆ ಆದಾಗ, ಮೊದಲ ಸಲ ರಂಗಪ್ರಯೋಗವಾದಾಗ ರಂಗಭೂಮಿಯಲ್ಲಿ ಸಂಚಲನವನ್ನೇ ಉಂಟುಮಾಡಿತ್ತು ಎಂದು ಓದಿದ್ದೇನೆ. ಬಹುಭಾಷಾ ಕೋವಿದರೂ ಆಗಿದ್ದ ಕಾರ್ನಾಡರು ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ, ತಮ್ಮ ಅಕಾಡೆಮಿಕ್ ಹಿನ್ನೆಲೆಯ ಮೂಲಕ ಪ್ಯಾನ್-ಇಂಡಿಯನ್ ನಾಟಕಕಾರರಾದರು. `ಯಯಾತಿ` ಹಿಂದಿಯ ರಂಗಭೂಮಿಯಲ್ಲೂ ಅಗಾಧವಾದ ಪ್ರಭಾವವನ್ನು ಬೀರಿತು. ನಾಟಕವನ್ನು ಕನ್ನಡದಲ್ಲಿ ಬರೆದರೂ ಮೊದಲ ನಾಟಕದಲ್ಲೇ ಕಾರ್ನಾಡ್ ಇಡೀ ಭಾರತವನ್ನು ಆವರಿಸಿದರು. ಮುಂದೆ ಆದದ್ದು ಈಗ ಇತಿಹಾಸ.  ಹಿಂದಿಯ ಮೋಹನ್ ರಾಕೇಶ್, ಮರಾಠಿಯ ವಿಜಯ್ ತೆಂಡೂಲ್ಕರ್ ಅವರಿಗೆ ಸರಿಸಮಾನರಾಗಿ ಕಾರ್ನಾಡ್ ಭಾರತದ ರಂಗಭೂಮಿಯನ್ನು ಬೆಳೆಸಿ ಭಾರತದ ರಂಗಭೂಮಿಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಪಡೆದರು. ಈಗ ಈ `ಯಯಾತಿ` ನಾಟಕ ಎಷ್ಟರ ಮಟ್ಟಿಗೆ ಪಸ್ತುತ ಎನ್ನುವುದನ್ನು ಈಗಿನ ಓದಗ ಮತ್ತು ಪ್ರೇಕ್ಷಕ ನಿರ್ಧರಿಸಬೇಕು. 

******************************************************************************

ಹಯವದನ ನಾಟಕದ ಗೀತೆ ಬಂದಾನೋ ಬಂದ ಸವಾರ - ಅಮಿತಾ ರವಿಕಿರಣ  

******************************************************************************

6 thoughts on “ಗಿರೀಶ್ ಕಾರ್ನಾಡರ ಜನ್ಮ ದಿನೋತ್ಸವ;  ಯಯಾತಿ, ಹಯವದನ ಒಂದು ನೆನಪು

  1. ಲೇಖನವನ್ನು ಓದಿ ಪ್ರತಿಕ್ರಿಯೆ ಮತ್ತು ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. – ಕೇಶವ

    Like

  2. ಇದು ಮಹಾನ್ ನಾಟಕಕಾರ ಮತ್ತು ಕನ್ನಡದ ಅದ್ಭುತ ಪ್ರತಿಭೆ ಗಿರೀಶ್ ಕಾರ್ನಾಡರಿಗೆ ಸಮಯೋಚಿತ ನುಡಿ ನಮನ ಮತ್ತು ವಿಮರ್ಶೆ. ಪ್ರಸಾದ ಅವರ ತೂಕದ ಪೀಠಿಕೆ ಮಾಹಿತಿ ಪೂರ್ಣ ಸಹ. “ಆಡಾಡುತಾ ಆಯುಷ್ಯ” (ಆ.ಆ)ಲೋಕಾರ್ಪಣಕೊಂಡಾಗ ನಾನು ಧಾರಾವಾಡದಲ್ಲಿದ್ದುದು ಆಕಸ್ಮಿಕ. ಆಗ ಅದರಲ್ಲಿ ತಾವು ಬರೆದ ‘ಇಂಗ್ಲಿಷ್ ಪಬ್’ ಪುಟಗಳನ್ನ ಓದಿದ್ದರು. ಮುಂದೆ ಆ ಆತ್ಮ ಚರಿತ್ರೆ Talk of the town and drawing rooms ಆದದ್ದರಲ್ಲಿ ಆಶ್ಚರ್ಯವಿಲ್ಲ. ಅದರಲ್ಲಿ ಓದಿದಾಗಲೇ ಯಯಾತಿಯನ್ನು ಓದುವಾಗ ( ಅದರ ರಂಗ ಪ್ರಯೋಗ ನೋಡಿಲ್ಲ) ನಾನು ದಂಗು ಬಡಿದದ್ದು, ಕೊನ್ರ್ಯಾಲ್ಲಿ ಬರುವ ಶರ್ಮಿಷ್ಠೆ- ಯಯಾತಿಯರ ಸಂವಾದದ ಸ್ಫೂರ್ತಿ ಜೀನ್ ಅನೂಯಿಯ ‘ ಅಂತಿಗೊನೆ’ ಎಂದು ತಿಳಿಯಿತು. (ಪು. ೮೧ ) ಆದರೆ ಆ ನಾಟಕದ ಮಹತ್ವ ಮರೆಯಲಾಗದು. -ವಯಸ್ಸು ೨೨ರಲ್ಲಿ ಬರೆದದ್ದನ್ನು ಮರೆತರೂ –
    ಕೇಶವ ಕುಲಕರ್ಣಿಯವರ ಒಳ್ಳೆಯ ವಿಶ್ಲೇಷಣೆ ಅಭ್ಯಸಿಸಿ ಬರೆದದ್ದು. ಉದ್ಧರಣೆಗಳು ಸೂಕ್ತ. ಶಾಲೆಗೆ ಹೋಗುತ್ತಿದ್ದ ನನಗೆ ಕಾರ್ನಾಡರು ಕರ್ನಾಟಕ ಕಾಲೇಜಿನಲ್ಲಿದ್ದಾಗಲೇ ಆಗಿನ ಕಾಲದಲ್ಲೂ ಹೆಸರು ಮಾಡಿದ್ದು ಗೊತ್ತಿತ್ತು. ಆ.ಆ. ದಲ್ಲೂ ವಿವರ ಇದೆ. ಇನ್ನೊಂದು ಮೈಲುಗಲ್ಲಾದ ‘ಹಯವದನ’ (ದುಬೆ-ಕಾರಂತ ಪ್ರಸ್ತುತಿ) ನಾಟಕವನ್ನು ಮುಂಬಯಿಯಲ್ಲಿ ಹಿಂದಿಯಲ್ಲಿ, ‘೧೯೭೨ ರಲ್ಲಿರಬೇಕು , ನೋಡಿದಾಗ ಆ ಹಾಡುಗಳು ಸಂಚಲನವನ್ನು ಮಾಡಿದ್ದವು. ಅದನ್ನು ಕನ್ನಡದಲ್ಲಿಇಂದು ಏಕ್ತಾರಿ ಹಿಡಿದ ಅಮಿತಾ ಅವರ ದನಿಯಲ್ಲಿ ಏಕೈಕ ಶೈಲಿಯಲ್ಲಿ ಕೇಳಿ ಮತ್ತೆ ಆನಂದವಾಯಿತು. ಈ ಮೂವರ ಪರಿಶ್ರಮ (ಗೌರಿಯವರದೂ?) ಎಬ್ಬಿಸಿದ ಪ್ರತಿಕ್ರಿಯೆಗಳ ಅಲೆಗಳಿಗೆ ಸಾಕ್ಷಿ. ಮೆಲುಕು ಹಾಕಿದ ಅನುಭವಗಳು; ಹಾಕುವಂತ ಸಂಚಿಕೆ.

    Like

  3. ಕಾರ್ನಾಡರ ಬಹು ಮುಖ್ಯ ಕೊಡುಗೆ ನಾಟಕಗಳು. ಪೌರಾಣಿಕ, ಐತಿಹಾಸಿಕ, ಜಾನಪದ ಕಥೆಗಳನ್ನು ವಿಶಿಷ್ಟವಾಗಿ ನಾಟಕದ ಮೂಸೆಗಿಳಿಸಿದ ಮಹಾನುಭಾವ. ಅವರ ಚೊಚ್ಚಲ ಕೃತಿಯನ್ನಾಯ್ದು ಕೇಶವ ಅವರ ಜನ್ಮದಿನದಂದು ಕಾರ್ನಾಡರನ್ನು ನೆನೆದಿರುವ ಬರಹ ಆಪ್ತವಾಗಿದೆ. ಖಾಂಡೇಕರರ ಕಾದಂಬರಿಯ ಸಮಾನಾಂತರಗಳನ್ನು ತಂದಿರುವ ಲೇಖನ ಲೇಖಕರ ಓದಿನ ಹರವಿನ ಪರಿಚಯ ಮಾಡಿಕೊಟ್ಟಿದೆ.

    ಅಮಿತಾ ಅವರ ಹಾಡುಗಾರಿಕೆ, ಧ್ವನಿ ಮಾರ್ಪಾಡಾಗುವ ಬಗೆ ಈ ಹಾಡಿನ ವೈಶಿಷ್ಟ್ಯ. ಏಕತಾರಿಯ ಉಪಯೋಗ ಹಾಡಿಗೆ ಪೂರಕ.

    – ರಾಂ

    Like

  4. ಗಿರೀಶ್ ಕಾರ್ನಾಡ್ ಭಾರತ ರಂಗಭೂಮಿಯ ಒಂದು ಉಜ್ವಲ-ತಾರೆ. ಹದಿಹರಯದಲ್ಲೇ ಯಯಾತಿ ನಾಟಕವನ್ನು ಬರೆದು, ರಂಗಭೂಮಿಯಲ್ಲಿ ತಮ್ಮ ಛಾಪನ್ನು ಶಾಶ್ವತವಾಗಿ ಒತ್ತಿದ ವ್ಯಕ್ತಿ. ಅವರ ಆತ್ಮಕಥೆ ಆಡಾಡುತಾ ಆಯುಷ್ಯ ಪುಸ್ತಕವನ್ನು ನಾನು ಎರಡು ಬಾರಿ ಓದಿದ್ದೇನೆ. ಪ್ರತಿ ಬಾರಿ ಓದಿದಾಗಲೂ ಅವರ ಜೀವನ ಕಥೆ ನನಗೆ ನೂತನವೆನಿಸುತ್ತದೆ. ತಮ್ಮ ಜೀವನದ ಘಟನೆಗಳನ್ನು ತುಂಬಾ ಪ್ರಾಮಾಣಿಕವಾಗಿ ಬರೆದಿದ್ದಾರೆ. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡ್ ಅವರ ಯಯಾತಿ ನಾಟಕವನ್ನು ನಾನು ನೋಡಿಲ್ಲ. ಆದರೆ ಅದರ ಬಗ್ಗೆ ಅನೇಕ ವಿಮರ್ಶೆಗಳನ್ನು ಓದಿದ್ದೇನೆ. ಕೇಶವ್ ಅವರು ಯಯಾತಿಯ ಬಗ್ಗೆ ತಮ್ಮದೇ ಶೈಲಿಯಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಗಿರೀಶ್ ಅವರ ಆತ್ಮಕಥೆಯಲ್ಲಿ ಮನೋಹರ ಗ್ರಂಥಮಾಲೆ ಕಟ್ಟಡದ ಅಟ್ಟಣಿಗೆ ಅವರ ಕಾಲೇಜಿನ ದಿನಗಳಲ್ಲಿ ಎಷ್ಟು ಪ್ರಮುಖ ಪಾತ್ರವನ್ನು ವಹಿಸಿತ್ತು ಎನ್ನುವುದನ್ನು ಅವರ ಮಾತುಗಳಲ್ಲೇ ಓದಬೇಕು. ಅವರ ಆಕ್ಸ್ಫರ್ಡಿನ ದಿನಗಳ ಅಧ್ಯಾಯವು ಕೂಡ ಅಷ್ಟೇ ಸೊಗಸಾಗಿದೆ. ಭಾರತೀಯ ರಂಗಭೂಮಿ ಕಂಡ ಒಬ್ಬ ಅನನ್ಯ ವ್ಯಕ್ತಿ ಗಿರೀಶ್ ಕಾರ್ನಾಡ್. ಅವರ ಚಲನಚಿತ್ರಗಳು ಕೂಡ ಅಷ್ಟೇ ಸ್ಮರಣೀಯವಾದದ್ದು. ಕನ್ನಡದ ಕೆಲವು ಅದ್ಭುತ ಕಾದಂಬರಿಗಳನ್ನು ರಜತಪರದೆ ಮೇಲೆ ತಂದು, ಕನ್ನಡಿಗರ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಕೀರ್ತಿ ಅವರದು. ಭಾರತದ ಅನೇಕ ಕಲಾವಿದರು ತಮ್ಮ ವೃತ್ತಿಜೀವನದ ಯಶಸ್ಸನ್ನು ಗಿರೀಶ್ ಅವರಿಗೆ ಅರ್ಪಿಸಿದ್ದಾರೆ. ಪುಣೆಯ ಫಿಲಂ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿದ್ದಾಗ, ಕೇವಲ ಪ್ರತಿಭೆಗೆ ಒತ್ತುಕೊಟ್ಟು, ಅವರು ಆಯ್ಕೆ ಮಾಡಿದ್ದ ನಂತರದ, ಓಂ ಪುರಿ, ನಾಸಿರುದ್ದೀನ್ ಶಾ ಜೊತೆಗೆ, ಅಮರಿಶಾ ಪುರಿ, ಕನ್ನಡದ ಶಂಕರ್ ನಾಗ್, ಅನಂತ್ ನಾಗ್, ಸುಂದರಕೃಷ್ಣ ಅರಸ್ ಹೀಗೆ ಹಲವು ಹತ್ತು ಕಲಾವಿದರ ಪ್ರತಿಭೆಯನ್ನು ಬೆಳಕಿಗೆ ತಂಡ ಯಶಸ್ಸು ಗಿರೀಶರಿಗೆ ಸಲ್ಲಬೇಕು. ೮೦ರ ದಶಕದಲ್ಲಿ, ದೂರದರ್ಶನದಲ್ಲಿ ಪ್ರತಿ ಭಾನುವಾರ ಅವರು ಪ್ರಸ್ತುತ ಪಡಿಸುತ್ತಿದ್ದ ವಿಜ್ಞಾನದ ಕಾರ್ಯಕ್ರಮಕ್ಕೆ ವಿಶ್ವಸಂಸ್ಥೆಯ ಪ್ರಶಸ್ತಿ ದೊರಕಿತ್ತು. ಅವರ ಆ ಕಾರ್ಯಕ್ರಮವನ್ನು ನಾನು ತಪ್ಪದೆ ನೋಡುತ್ತಿದ್ದೆ. ಖಂಡಿತವಾದಿಯಾಗಿದ್ದ ಗಿರೀಶ ಕಾರ್ನಾಡ್ ಅವರ ನೇರನುಡಿಗಳು ಅವರನ್ನು ಅನೇಕ ಬಾರಿ ಮಾಧ್ಯಮದ ತೀವ್ರ ಟೀಕೆಗೊಳಪಡಿಸಿದರೂ, ಗಿರೀಶರೆಂದೂ ಹಿಂಜರಿದವರಲ್ಲ. ಸಾಹಿತ್ಯ, ರಂಗಭೂಮಿ, ಚಲನಚಿತ್ರಗಳಲ್ಲಿ ಶಾಶ್ವತವಾಗಿ ತಮ್ಮ ಕೀರ್ತಿಯನ್ನು ಗಳಿಸಿ ಉಳಿಸಿಹೋಗಿರುವ ಗಿರೀಶ್ ಕನ್ನಡದ ಪ್ರಜೆ ಎನ್ನುವುದು ನಿಜಕ್ಕೂ ಹೆಗ್ಗಳಿಕೆಯ ವಿಷಯ. ಅಮಿತ ರವಿಕಿರಣ್ ಅವರ ಸುಮಧುರ ಧ್ವನಿಯಲ್ಲಿ ಹಯವದನ ನಾಟಕದ ಗೀತೆ ಬಹಳ ಚೆನ್ನಾಗಿ ಮೂಡಿಬಂದಿದೆ. ಶಿವಪ್ರಸಾದ್ ಅವರ ಸಂಪಾದಕೀಯದ ನುಡಿಗಳು ಬಹಳ ಚೆನ್ನಾಗಿದೆ.
    ಉಮಾ ವೆಂಕಟೇಶ್

    Like

  5. ಕಾರ್ನಾಡ್ ಎಂದರೆ ಅವರು ಒಬ್ಬ ವ್ಯಕ್ತಿ ಯಲ್ಲ. ಅವರು ಒಂದು ಸಂಚಲನೆಯೇ ಆಗಿದ್ದರು.
    ಭಾರತದ ಕಲಾಭೂಮಿಯನ್ನು ಶ್ರೀಮಂತಗೊಳಿಸಿದ, ಕರ್ನಾಟಕವನ್ನು ಪ್ರಪಂಚದ ನಕ್ಷೆಯಲ್ಲಿ ನಕ್ಷತ್ರದಂತೆ ಬೆಳಗಿಸಿದ ವ್ಯಕ್ತಿ. ಅವರ ಮುಖದಲ್ಲಿದ್ದ ತೇಜಸ್ಸು ಆ ವ್ಯಕ್ತಿ ತ್ವದ ಅಂತಸ್ಸತ್ವವೇ ಆಗಿತ್ತು ಎನ್ನುವಂತಹ ಚೆಲುವ ಕೂಡ.
    ಅವರ ಯಯಾತಿಯನ್ನು ಓದಿದ್ದೇನೆ. ಆದರೆ ನಾಟಕ ನೋಡಿಲ್ಲ. ಇದನ್ನು ಅವರು 22 ರ ವಯಸ್ಸಲ್ಲಿ ಬರೆದಿದ್ದು ಎಂದು ಈಗ ತಿಳಿಯಿತು.
    ಪ್ರಸಾದ್ ಮತ್ತು ನೀವು ಉದ್ಧರಿಸಿರುವ ಆ ವಾಕ್ಯಗಳು ಎಂತಹ ಸಂಕೀರ್ಣ ಅಭಿವ್ಯಕ್ತಿ ಗಳು!
    ಉತ್ತಮ ಲೇಖನ. ಹಾಡು ಕೂಡ ಬಹಳ ಅರ್ಥಪೂರ್ಣವಾಗಿದೆ. ಅಮಿತಾರ ಧ್ವನಿಯಲ್ಲಿ ಚೆನ್ನಾಗಿ ಕೇಳಿಸುತ್ತದೆ.

    Like

  6. ಕೇಶವ ನಿನ್ನ ಲೇಖನ ಎಂದಿನಂತೆ ತುಂಬಾ ಚೆನ್ನಾಗಿದೆ. ೧೯೬೬ ರಿಂದ ೧೯೭೮ ವರೆಗೆ ನಾನು ಧಾರಾವಾಡದಲ್ಲಿದ್ದೆ. ೪ ನೇ ಇಯತ್ತೆ ಮುಗಿಸಿ ೫ ನೇ ಕ್ಲಾಸ್ ಗೆ ಹರಿಹಾರಕ್ಕೆ ಹೋದಿವಿ. ಈ ಯಯಾತಿ ನಾಟಕಕ್ಕೆ ನನ್ನನ್ನ ಕೆರೆದುಕೊಂಡು ಹೋದ ನೆನಪು. ಆದರೆ ನಾಟಕ ನೋಡಿದ ನೆನಪು ಇಲ್ಲ. ಕಾರ್ನಾಡರ ಸಮಗ್ರ ನಾಟಕ ಸಂಗ್ರಹ ಇದೆ. ಯಯಾತಿ ನಾಟಕ ಓದಲು ನಿನ್ನ ಬರಹ ಪ್ರೇರೇಪಿಸಿದೆ. ಈ ಶನಿವಾರ ಓದುತ್ತೇನೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.