ಕಲಿಯಬೇಕಿದೆ…

ಬದುಕಿನ ಪ್ರತಿ ಕ್ಷಣದಲ್ಲೂ ಕಲಿಕೆಯ ಅವಕಾಶವಿದೆ. ನಮ್ಮ ಹಲವಾರು ಕಲಿಕೆಗಳು ಇತರರ ಸಜ್ಜನಿಕೆಯಿಂದ, ಆದರ್ಶದಿಂದ, ಸರಳ ಬದುಕಿನ ರೀತಿ ನೀತಿಗಳಿಂದ ಉಂಟಾಗುತ್ತವೆ. ಈ ರೀತಿಯ ಕಲಿಕೆ ಸಾಮಾನ್ಯವಾಗಿ ನಾವು ಕಿರಿಯರಾಗಿದ್ದಾಗ ನಮ್ಮ ವಿವೇಚನಾ ಶಕ್ತಿಯನ್ನು ಬೆಳಸಿಕೊಳ್ಳಲು ಗುರು-ಹಿರಿಯರ ಮಾರ್ಗದರ್ಶನದಿಂದ ನಮಗೆ ಒದಗಿಬರುತ್ತದೆ. ಇದು ಗುಣಾತ್ಮಕ ಕಲಿಕೆ. ನಮ್ಮ ಬಾಲ್ಯಾವಸ್ಥೆಯಿಂದ ಆಚೆ ಬೆಳೆದಾಗ ನಮ್ಮ ಸಮಾಜದಲ್ಲಿ ಇತರರ  ದುಷ್ಟತನ, ಅಹಂಕಾರ, ಸ್ವಾರ್ಥ, ದ್ವೇಷ ಈ ಲಕ್ಷಣಗಳನ್ನು ಗುರುತಿಸಲು ಸಮರ್ಥರಾಗಿರುತ್ತೇವೆ. ಬದುಕಿನ ಹಲವಾರು ಸನ್ನಿವೇಶಗಳನ್ನು ಭಾವನೆಗಳನ್ನು ನಮ್ಮ ಒಳ ಮನಸ್ಸಿನ ಸೂಕ್ಷ್ಮ ತೀಕ್ಷ್ಣ ತಕ್ಕಡಿಯಲ್ಲಿ ಇಟ್ಟು ಅಳೆಯಲು ಪ್ರಾರಂಭಿಸುತ್ತೇವೆ. ಹಲವಾರು ನಕಾರಾತ್ಮಕ ಅನುಭವಗಳು ನಮಗೆ ಪಾಠ ಕಲಿಸುತ್ತವೆ. ಹೀಗೆ ಪರಿಪಕ್ವವಾದ ಮನಸ್ಸು ತನ್ನ ವಿವೇಚನಾ ಶಕ್ತಿಯನ್ನು ರೂಢಿಸಿಕೊಳ್ಳುತ್ತದೆ. ಇದನ್ನು ಮನೋವಿಕಾಸ ಎಂದು ಕರೆಯಬಹುದು. ಇಲ್ಲಿ ಒಂದು ನೈತಿಕ ಜವಾಬ್ದಾರಿ ಉಂಟಾಗಿರುತ್ತದೆ. ಒಬ್ಬ ಹಿರಿಯ ಕವಿ ಹೇಳಿದ ಹಾಗೆ "ದೇವ ದಾನವ ಗುಣದ ಮಿಲನದಿ ಮೂಡಿ ಬಂದನೋ ಮಾನವ" ಕೆಲವೊಮ್ಮೆ ಆ ಮಾನವನ ದೈವತ್ವವು ಹಿಮ್ಮೆಟ್ಟಿ ಕ್ಷುದ್ರ ಸ್ವಾರ್ಥದ ದಾನವನಾಗುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಆ ನೈತಿಕ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಗಾಳಿಗೆ ತೂರುತ್ತಾನೆ. ಒಂದು ವೈಯುಕ್ತಿಕ ನೆಲೆಯಲ್ಲಿ ಶುರುವಾಗುವ ಈ ಅಹಂಕಾರ, ಸ್ವಾರ್ಥ ಒಂದು ಸಂಸಾರವನ್ನು, ಒಂದು ಸಮುದಾಯವನ್ನೂ ಆವರಿಸಿಕೊಳ್ಳಬಹುದು. ಒಬ್ಬರು ಇನ್ನೊಬ್ಬರನ್ನು ವಂಚನೆ, ಸುಲಿಗೆ ಇವುಗಳ ನೆಪದಲ್ಲಿ ಶೋಷಿಸಿದಾಗ ಶೋಷಿಸುವವನು ಜಾಣನೆಂದು ಶೋಷಿತಗೊಂಡವನು ಪೆದ್ದನೆಂದು ಪರಿಗಣಿಸುತ್ತೇವೆ. ಕೆಲವೊಮ್ಮೆ ಪರಿಸ್ಥಿತಿಯ ಪರಿಣಾಮಗಳಿಂದಾಗಿ, ಸಂಕೀರ್ಣತೆಯಿಂದಾಗಿ ನಾವು ಸಹನೆಯಿಂದ ವರ್ತಿಸಬೇಕಾಗುತ್ತದೆ. ಇನ್ನೊಬ್ಬರ ಸಣ್ಣತನದ ಬಗ್ಗೆ ಆಕ್ರೋಶಕ್ಕಿಂತ ವ್ಯಥೆ ಮತ್ತು ಕನಿಕರದ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗುತ್ತದೆ.ಅರಿವಿನಲ್ಲೂ ಮುಗ್ಧತೆ ಎಂಬ ಮುಖವಾಡವನ್ನು ಧರಿಸಬೇಕಾಗುತ್ತದೆ. 

ಈ ಹಿನ್ನೆಲೆಯಲ್ಲಿ ಅಮಿತ ಅವರ 'ಕಲಿಯಬೇಕಿದೆ' ಎಂಬ ಕವನವನ್ನು ನಾವು ಓದುವುದು ಉಚಿತ. ಬದುಕಿನ ಹಲವಾರು ಸನ್ನಿವೇಶಗಳ ಮೂಲಕ ಈ ಮೇಲಿನ ಅಂಶಗಳನ್ನು ಪರಿಣಾಮಕಾರಿಯಾಗಿ ಕವನದಲ್ಲಿ ಕಟ್ಟುಕೊಟ್ಟಿದ್ದಾರೆ. 

-ಸಂಪಾದಕ






ನಾನು ಕಲಿಯಬೇಕಿದೆ,ಇಂಥವರ ನಡುವೆ 
ಬೆಳೆಯಲು ಬೆಳಗಲು 
ಮುಂದೆ ನಗುತ್ತಲೇ ಇರುವುದು 
ಅವರು ತೆರಳಿದ ಬೆನ್ನಿಗೆ 
ಉಫ್ಫ್!! ಎಂದು ಉಸಿರುಬಿಟ್ಟು,
ಚಾಡಿ ಮಾತಾಡಿ ಅದರಲ್ಲೇ ಊಟ ,
ನಿದ್ದೆಯ ಸುಖ ಪಡೆಯುವುದನ್ನ.
ನಾನು ಕಲಿಯಬೇಕಿದೆ 
ಗೊತ್ತಿಲ್ಲದ್ದನ್ನು ಗೊತ್ತಿದೆ …
ಎಲ್ಲಾ ನನಗೇ ಗೊತ್ತಿದೆ 
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು 
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....
ಕಲಿಯಬೇಕಿದೆ 
ಸುಳ್ಳುಗಳ ಮೂಟೆಯಲ್ಲಿ ಸತ್ಯ ಹುಡುಕುವ 
ವ್ಯರ್ಥ ಪ್ರಯತ್ನ ಮಾಡುವುದನ್ನ 
ಮಿಥ್ಯದ ಕನ್ನಡಿಯಲ್ಲಿ ಸತ್ಯ ತೋರಲು ಒದ್ದಾಡಿ,
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆಯನ್ನ 
ಕಲಿಯಬೇಕಿದೆ 
ಏಳಿಗೆ ಆದರೆ ಅದು ನನ್ನದೇ ಆಗಬೇಕು,
ಜಗದಲ್ಲಿ ನನ್ನ ಹೊರತು ಏಳಿಗೆಗೆ ಅರ್ಹರ್ಯಾರು?
ಎಂದು ಬೀಗುವುದನ್ನ...
ರೋಗವನ್ನುಆರೋಗ್ಯ ಎನ್ನುವುದನ್ನ 
ಕಾಗೆ ಬಂಗಾರವನ್ನು ಚಿನ್ನ ಎನ್ನುವುದನ್ನ 
ಮತ್ಯಾರಿಗಾದರೂ ಸಿಕ್ಕೀತು ದಕ್ಕಿಬಿಟ್ಟೀತು 
ಎನ್ನುವ ಹಪಹಪಿಯಲ್ಲಿ 
ಹಳಸಿದ್ದನ್ನು ಉಣ್ಣುವ ತೆವಲನ್ನ 

ಕಲಿಯಬೇಕಿದೆ,
ದುರ್ಗಂಧವನ್ನು ಸೌಗಂಧಿಕೆ ಎನ್ನುವ 
ಅನಿವಾರ್ಯತೆಯನ್ನ 
ನೀನೆ, ನೀನೆ, ನೀನೆ 
ಎಂಬ ಹೊಗಳಿಕೆಯ ನುಡಿಯನ್ನ 
ಕಲಿಯಬೇಕಿದೆ 
ಬೆಳೆಯಲು- ಬೆಳಗಲು 
ಆದರೆ ಇಷ್ಟೆಲ್ಲ ಕಲಿತ ದಿನ ನಾ 
ಬೆಳೆಯುವೆನೆ?ಬೆಳಗುವೆನೆ?
ಕೊನೆಗೆ ನನ್ನ ನಾನು
ಗುರುತಿಸಬಲ್ಲೆನೇ?
ಬಿಡು, ಹೀಗೆ ಇದ್ದು ಬಿಡುವೆ
ಪೆದ್ದು ಪೆದ್ದಾಗಿ. 
- ಅಮಿತ ರವಿಕಿರಣ್ 

5 thoughts on “ಕಲಿಯಬೇಕಿದೆ…

  1. ನೂತನ ಸಂಪಾದಕರಾದ ಪ್ರಸಾದ್ ಅವರಿಗೆ ಸ್ವಾಗತ. ಕವನಕ್ಕೆ ಸೂಕ್ತ ಮುನ್ನುಡಿಯನ್ನು‌ ಬರೆದು ಕವನದ ಆಳಗಲಗಳನ್ನು ಹೆಚ್ಚಿಸಿದ್ದೀರಿ.

    ಅಮಿತಾ ಅವರ ಕವನಲ್ಲಿನ ವಿಡಂಬನೆ ಹರಿತವಾಗಿದೆ.

    ೨೧ನೇ ಶತಮಾನದಲ್ಲಿ, ಕವಿತಗಳು ನಿರಾಭರಣರಾಗಿ ರೂಪಕಗಳನ್ನು ಪ್ರತಿಮೆಗಳನ್ನು ಅದಷ್ಟು ಕಡಿಮೆ ಉಪಯೋಗಿಸಿ ಇದ್ದುದನ್ನು ಇದ್ದಂತೆಯೇ ಗಪದ್ಯ ರೂಪದಲ್ಲಿ ಹೆಚ್ಚು ಹೆಚ್ಚಾಗಿ ಮೂಡಿ ಬರುತ್ತಿವೆ. ಜಾಗತಿಕವಾಗಿ ಕವನ ಬರೆಯುವ ಶೈಲಿಯಲ್ಲಿ‌ ಅಗಾಧ ಬದಲಾವಣೆಗಳಾಗುತ್ತಿವೆ.

    ಕನ್ನಡ ಭಾಷೆಯೂ ಇದೇ ಹಾದಿಯಲ್ಲಿ ಸಾಗುತ್ತಿದೆ. ಅಮಿತಾ ಅವರ ಈ ಕವನ ಇರುವಂತೆ ಇದೆ. ವಾಚನ ಮಾಡಲು ಕೂಡ ಯೋಗ್ಯವಾಗಿದೆ (performance poetry). …ಗಳ ಪ್ರಯೋಗದ ಕಡೆಗೆ ಸ್ವಲ್ಪ ಗಮನ ಕೊಡಬಹುದು ಎನಿಸುತ್ತದೆ.

    – ಕೇಶವ

    Like

  2. ಶಿವಪ್ರಸಾದ್ ಗೆ ಸ್ವಾಗತ. ಉತ್ತಮ ಸಂಪಾದಕೀಯ ಬಂಗಾರದಂಥ ಕವಿತೆಗೆ.

    ಗೌರಿ ಅವರು ಹೇಳಿದಂತೆ, ಮುಗ್ಧರಾಗೇ ಇರಿ. ಆಧುನಿಕ ಬದುಕಿನಲ್ಲಿ ಎದುರಾಗುವ ಕ್ಲಿಷ್ಟ ವ್ಯಕ್ತಿಗಳ, ವಿಷಯಗಳ ನಡುವೆ ನರಳುವ ಸರಳ ಮನಸ್ಸಿನ ವಿಚಾರಗಳನ್ನು ಸುಂದರವಾಗಿ ಹೆಣೆದಿದ್ದೀರಿ. ಮತ್ತೆ ಮತ್ತೆ ಓದುವಂತಹ ಕವನ.

    – ರಾಂ

    Like

  3. ಸುಳ್ಳುಲೋಕದ ಸತ್ಯ ಇದು! ಸರಳ ಮನದ ದ್ವಂದ್ವ.
    ಇದನ್ನೆಲ್ಲ ಕಲಿಯುವುದು ಅಗತ್ಯವೆಂದು ಜಗತ್ತು ಹೇಳಿದರೂ ಎಲ್ಲರಿಗೂ ಆಗದು! ಕಲಿತಷ್ಟೂ ಹಳಸನ್ನ ಉಂಡು ಹೊಟ್ಟೆ ಕೆಡಿಸಿಕೊಂದಂತೆ, ನಮ್ಮ ಮನವೇ ಕೊಚ್ಚೆಯಾಗುವುದು ನಿಜ. ಅದಕ್ಕಿಂತ ‘ಪೆದ್ದು ಪೆದ್ದಾಗಿ’ ಇರುವುದೇ ಮೆಲೇನೋ?
    ಉತ್ತಮ ಕವಿತೆ. ಅಭಿನಂದನೆಗಳು.

    Like

  4. ನಿಜ, ಕಲಿಯುವದು ಬಹಳ ಇದೆ. ಅಮಿತ ಅವರ ಅದ್ಭುತ ಕವಿತೆ ಮತ್ತು ಅಷ್ಟೇ ಮೌಲ್ಯಯುತ ಪ್ರಸಾದರ ಸಂಪಾದಕೀಯ ಎರಡೂ ವಿಚಾರಪ್ರಚೋದಕವಾಗಿವೆ. ನಾವು ಉತ್ತರಗಳನ್ನು ಹುಡುಕುತ್ತಲೇ ಇರುತ್ತೇವೆ, ಹೇಗೆ ಬದುಕಬೇಕು, ಬೆಳಗಬೇಕು ಅಂತ. ಆ ಶಬ್ದಗಳು ಮತ್ತು ಸಂಪಾದಕರು ಉಲ್ಲೇಖಿಸಿದ ಕವಿವಾಣಿ ಬೃಹದಾರಣ್ಯಕ ಉಪನಿಷತ್ತಿನ ಕಥೆಯಲ್ಲಿ ಪ್ರಜಾಪತಿಯ ಹತ್ತಿರ ಹೋಗಿದ್ದ ದೇವ, ದಾನವ, ಮನುಷ್ಯರು ತಮ್ಮ ಸಮಸ್ಯೆಗಳಿಗೆ ಪಡೆದ ಒಂದೇ ಅಕ್ಷರದ ‘ದ’ ಉತ್ತರ ನೆನಪಾಯಿತು. ಮೂವರೂ ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದಂತೆ – ದತ್ತ , ದಾಮ್ಯತಾಮ್, ದಯಧ್ವಂ – ನಮ್ಮದೇ ಅರ್ಥ ಹುಡುಕಬೇಕು. ನಮ್ಮ ಸುತ್ತಲಿರುವವರಿಗೆ ಆಯಾ ಪ್ರಸಂಗಗಳಲ್ಲಿ ದಯೆ, ಸಹನೆ ಅಥವಾ ಚಾರಿಟಿ ತೋರಿಸಲು ಕಲಿಯ ಬೇಕಾಗುತ್ತದೆ! ಕೊನೆಗೆ ನಾವಿರುವದೇ ಹೀಗೆ ಅನ್ನಬಹುದು- ಅದು ಪೆದ್ದುತನವಲ್ಲವೇ ಅಲ್ಲ ಅಂತ ‘ಸಖಿಸಮಯದ’ ಜಾಣ ಸಖೀಗೆ ಸಮಾಧಾನ ಹೇಳುವೆ!

    Like

  5. ‘ ಸಬ್ ಕುಛ್ ಸೀಖಾ ಹಮ್ ನೆ ನಾ ಸೀಖಿ ಹೋಶಿಯಾರಿ’ ಯ ರಾಜಕಪೂರ್ ನೆನಪಾಯಿತು. ಪ್ರಸಾದ್ ಅವರ ಅರ್ಥಗರ್ಭಿತ ಮುನ್ನುಡಿಗಳೊಂದಿಗೆ ಕವನ ಮನ ಮುಟ್ಟುವಲ್ಲಿ ಇನ್ನಷ್ಟು ಯಶಸ್ವಿಯಾಗುತ್ತದೆ. ನಮಗೆ ಬೇಕಾಗಲಿ ಬಿಡಲಿ ಒಂಚೂರು ದುನಿಯಾದಾರಿ ಕಲಿಸೇಬಿಡುತ್ತದೆ ಬದುಕು. ಅಮಿತಾ ಅವರೇ ನೀವು ಹೀಗೇ ‘ಪೆದ್ದುಪೆದ್ದಾಗೇ’ ಇದ್ದುಬಿಡಿ. ❤️
    ಗೌರಿ ಪ್ರಸನ್ನ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.