ಕನ್ನಡ ಬಳಗದಲ್ಲಿ ಸಂಭ್ರಮದ ಚೈತ್ರ ಕಲರವ

ಮಾನವ ಮೂಲತ: ಸಂಘಜೀವಿ. ತನಗಿಷ್ಟವಾದ ವಸ್ತು-ವಿಷಯ-ದಿರಿಸು-ತಿನಿಸುಗಳನ್ನು ತನ್ನಿಷ್ಟದವರೊಂದಿಗೆ ಹಂಚಿಕೊಂಡಾಗಲೇ ತೃಪ್ತಿ. ಕಷ್ಟ, ನೋವು, ತಾಪತ್ರಯಗಳನ್ನು ಅದ್ಹೇಗೋ ಏಕಾಕಿಯಾಗಿ ಅವಡುಗಚ್ಚಿ ಸಹಿಸಿಬಿಡಬಹುದು. ಆದರೆ ಸಂತಸ, ಸಂಭ್ರಮ, ನಗುವನ್ನು ಸಮಾನಮನಸ್ಕ ನಾಲ್ಕು ಜನರೊಡನೆ ಹಂಚಿಕೊಂಡರಷ್ಟೇ ಧನ್ಯತೆ. ಅದಕ್ಕೇ ಅಲ್ಲವೇ ನಮ್ಮ ಕಗ್ಗಬ್ರಹ್ಮ ಹೇಳುವುದು-

‘ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ
ಇಬ್ಬರಾಗುವೆನೆಂದನಂತೆ ಪರಬೊಮ್ಮಂ |
ಹೆಬ್ಬದುಕನೊಂಟಿತನದೊಳದೇನು ಬದುಕುವುದೋ?
ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ’

ಬಂದವರೆಲ್ಲರನ್ನೂ ತಬ್ಬಿಕೊಂಡು ಹೆಬ್ಬದುಕಿಗೆ ಅನುವು ಮಾಡಿಸುವ ಇಂಥ ಸವಿಯೂಟವನ್ನು ವರ್ಷಕ್ಕೆರಡು ಬಾರಿ  ನಮ್ಮ ಹೆಮ್ಮೆಯ ಕನ್ನಡ ಬಳಗ ಅನಿವಾಸಿಗಳಿಗೆ ಉಣಬಡಿಸುವುದು ತಮ್ಮೆಲ್ಲರಿಗೂ ಗೊತ್ತಿದ್ದದ್ದೇ. ಕೋವಿಡ್ ರಕ್ಕಸನ ಕಬಂಧ ಬಾಹು ಕಳೆದೆರಡು ವರುಷದಿಂದ ಆ ಸಂಭ್ರಮಕ್ಕೆ ಅಡ್ಡಿ ಮಾಡಿತ್ತಾದರೂ ಈ 2022 ರ ಯುಗಾದಿ ಸಂಭ್ರಮಾಚರಣೆ ನಿರ್ವಿಘ್ನವಾಗಿ ನೆರವೇರಿದ್ದು ಸಂತಸ ಹಾಗೂ ಸಮಾಧಾನ ತಂದ ವಿಷಯ.

ಇಂದಿನ ಈ ಸಂಚಿಕೆಯಲ್ಲಿ ಕಾರ್ಯಕ್ರಮದ ಸಂಪೂರ್ಣ ಚಿತ್ರಣ ನಿಮ್ಮೆದಿರು ಇಟ್ಟಿದ್ದಾರೆ ಶ್ರೀರಂಜಿನಿಯವರು. 
ಅದ್ಭುತ ನೃತ್ಯಗಾತಿ ಶ್ರೀಮತಿ ವಸುಂಧರಾ ದೊರಸ್ವಾಮಿ ಅವರು ಪ್ರದರ್ಶಿಸಿದ  ಭಾರತದ ಅತೀ ಪುರಾತನ ಆಸ್ತಿಗಳಾದ ಯೋಗ ಹಾಗೂ ಭರತನಾಟ್ಯಗಳ ಸಮ್ಮಿಲನದ ಅಪೂರ್ವ ಭಂಗಿಗಳ ಕುರಿತಾಗಿ, ಅವರ ಸಾಧನೆಗಳ ಕುರಿತಾಗಿ ಆತ್ಮೀಯವಾಗಿ ಬರೆದಿದ್ದಾರೆ ಅವರದೇ ಶಿಷ್ಯೆ ರಶ್ಮಿ ಮಂಜುನಾಥ ಅವರು.

ಗಾಯಕ ಶ್ರೀಹರ್ಷ ಮಾಡಿದ ಮೋಡಿಯ ಬಗ್ಗೆ ಬರಹದ ಮೂಲಕ ಮಾತನಾಡಿದ್ದಾರೆ ಸ್ವತ: ಉತ್ತಮ ಗಾಯಕಿಯಾದ ಪೂಜಾ ತಾಯೂರ್ ಅವರು.

ಏಕಪಾತ್ರಾಭಿನಯದ ಮೂಲಕ ಕ್ರಿ.ಶ.1800 ರ ಕಿತ್ತೂರಿನ ಚೆನ್ನಮ್ಮನನ್ನು 2022ರಲ್ಲಿ ಡಾರ್ಬಿಯ ಸಭಾಂಗಣದಲ್ಲಿ ತಂದಿಳಿಸಿದ ವಸುಂಧರಾ ಅವರ ಬಗ್ಗೆ ನಮ್ಮ ಅಪೂರ್ವ ನೃತ್ಯಪಟುವಾದ ಸುಮನಾ ಅವರು ಏನು ಹೇಳುತ್ತಿದ್ದಾರೆಂದು ಕೇಳೋಣ ಅಲ್ಲಲ್ಲ ಓದೋಣ ಬನ್ನಿ.

ಸಮಾರಂಭದ ಗಡಿಬಿಡಿ ಗದ್ದಲದ ನಂತರದ ಆತ್ಮೀಯ, ಅತ್ಯಾಪ್ತ ಕಳುವೂಟದ ಪ್ರಥೆಯನ್ನು ಅನೂಚಾನವಾಗಿ ಪಾಲಿಸುತ್ತಿರುವ  ಸುಮನಾ-ಗಿರೀಶ್ ದಂಪತಿಗಳ ಮನೆಯಲ್ಲಿ ನಡೆದ ಗೋಷ್ಠಿಯನ್ನು ಸುಂದರವಾದ ವಿಡಿಯೋ ಹಾಗೂ ಬರಹದಿಂದ ಪ್ರಸ್ತುತ ಪಡಿಸಿದ್ದಾರೆ ಶ್ರೀವತ್ಸ ದೇಸಾಯರು.

ಬನ್ನಿ..ಭೂರಿಭೋಜನ ಸವಿದು ಸಂತೃಪ್ತರಾಗಿ.

~ ಸಂಪಾದಕಿ

ಕನ್ನಡ ಬಳಗದಿಂದ ಯುಗಾದಿ ರಸದೌತಣ

ದೀಪವನು ಬೆಳಗು ಸುತ್ತ ಕವಿದಿಹ ಇರುಳ।।

ಕಾವಳವು ಅಳಿವಂತೆ ಕಾಂತಿ ಅರಳೆ…

ಹೃದಯ ಬೆಸೆಯುವ ನಗೆಯು ತುಂಬಿಬರಲಿ।।

ಎಂಬ ಎಸ್. ಅನಂತನಾರಾಯಣ ಅವರ ಕವಿತೆಯ ಭಾವದಂತೆ ಕಳೆದ ಎರಡು ವರ್ಷಗಳ ನಂತರದ ಮೊದಲ Live eventನಿಂದಾಗಿ ’ಹೃದಯ ಬೆಸೆಯುವ ನಗೆಯು ತುಂಬಿಬಂದಿತ್ತು’. ಅದನ್ನು ಮಾಡುವ ಜವಾಬ್ದಾರಿಯನ್ನು ನಮ್ಮ ಕನ್ನಡಬಳಗಯುಕೆ  ಹಾಗು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯು (KSSVV) ಜೊತೆಗೂಡಿ ಎಲ್ಲಾ ಯುಕೆ ಕನ್ನಡಿಗರಿಗೆ ತಮ್ಮ ನೆಲ, ತಮ್ಮ ಜನ ಹಾಗು ತಮ್ಮ ಸಂಸ್ಕೃತಿಯ  ಆ ದಿನಗಳಿಗೆ ಕರೆದುಕೊಂಡು ಹೋದರು. 
23 ಏಪ್ರಿಲ್, 2022ರಂದು  ಕನ್ನಡ ಬಳಗ ಯುಕೆ ವತಿಯಿಂದ ಈ ಯುಗಾದಿ ಸಂಭ್ರಮವು ಡಾರ್ಬಿ ನಗರದ ರಿವರ್ಸೈಡ್ ಸಭಾಂಗಣದಲ್ಲಿನಡೆಯಿತು. ಅಂದಹಾಗೆ ಇದು ನನ್ನ ಮೊದಲ ಯುಗಾದಿ ಹಬ್ಬ ಯುಕೆ ಯಲ್ಲಿನಾನಂತೂ ಖಂಡಿತ ಈ ಅನುಭವವನ್ನು ಮರೆಯಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿನ 
ಮುಖ್ಯ ಕಲಾವಿದರಾದ ನಾಟ್ಯ ವಿದುಷಿ ಡಾ  ವಸುಂಧರಾ ದೊರಸ್ವಾಮಿಯವರು, ಶ್ರೀ ಶ್ರೀಹರ್ಷ ಅವರು ಹಾಗು ಕನ್ನಡ ಬಳಗ ಯುಕೆಯ ಗಣ್ಯ ಸದಸ್ಯರು ದೀಪವನ್ನು ಬೆಳಗುವುದರ ಮೂಲಕ ಪ್ರಾರಂಭಿಸಿದರು. ದೇವಿಯ ನಮನವನ್ನು ನಮ್ಮ ಕನ್ನಡ ಬಳಗದ ಪೂಜಾ ತಾಯೂರ್  ಸುಶ್ರಾವ್ಯವಾಗಿ ಹಾಡಿ ಎಲ್ಲರ  ಮನಸೆಳೆದರು. 

ಅನಂತರ ಡಾ  ವಸುಂಧರಾ ದೊರಸ್ವಾಮಿ ಅವರಿಂದ  "ನಾಟ್ಯ ಯೋಗ ದರ್ಶನ" ಕುರಿತು ಭಾಷಣ ಮತ್ತು ಪ್ರಾತ್ಯಕ್ಷಿಕೆ. ಈ ಪ್ರದರ್ಶನವು  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು. (ಇದರ ವಿವರವನ್ನು ಡಾ ರಶ್ಮಿ ಮಂಜುನಾಥ ಅವರ ಲೇಖನದಲ್ಲಿ ಕೊಟ್ಟಿದೆ). ಈ ಪ್ರದರ್ಶನ ಒಂದು ಕಡೆಯಲ್ಲಿ ಆದರೆ, ಮತ್ತೊಂದು ಕಡೆ ಕನ್ನಡ ಬಳಗ ಸದಸ್ಯರ ಪುಟಾಣಿ ಮಕ್ಕಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ. ಭರತನಾಟ್ಯ ದಿಂದ ಬಾಲಿವುಡ್, ಶ್ಲೋಕದಿಂದ ಫಿಲಂ ಹಿಟ್ಸ್ ನಂತೆ ಈ ಕಾಲದ ಮಕ್ಕಳು ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಎಂಬಂತೆ ಎಲ್ಲರ ಮನ ಗೆದ್ದರು. ಇದಾದ ನಂತರ ಕನ್ನಡ ಬಳಗದ ವಾರ್ಷಿಕ ಸಾಮಾನ್ಯ ಸಭೆ ಸೇರಿತ್ತು. ಇತ್ತೀಚಿನ ಚುನಾವಣೆಯಲ್ಲಿ ಆಯ್ಕೆಯಾದ ಹೊಸ ಪದಾಧಿಕಾರಿಗಳ ಘೋಷಣೆ ಆಯಿತು.

ಊಟದ ವಿರಾಮದನಂತರ ಕನ್ನಡ ಬಳಗ ಸದಸ್ಯರಿಂದ ಸಾಂಸೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ನಮ್ಮ ಸಾಂಸ್ಕೃತಿಕ  ಕಾರ್ಯದರ್ಶಿಯಾದ ಸುಮನಾ ನಾರಾಯಣರವರು  ಆಯೋಜಿಸಿದ ಎಲ್ಲಾ  ಪ್ರದರ್ಶನಗಳು ಒಂದಕ್ಕಿಂದ ಮತ್ತೊಂದು ಅದ್ಭುತ ಎಂಬಂತೆ ಇದ್ದವು. ಭರತನಾಟ್ಯ ಪ್ರದರ್ಶನದಲ್ಲಿ ನರಸಿಂಹ ಕೌತ್ವಂ ಪ್ರದರ್ಶನ, ಹಾಗೆಯೇ Live ಹಾಡುಗಾರಿಕೆಗೆ ಭರತನಾಟ್ಯ ಕೂಚುಪುಡಿ ನೃತ್ಯ ಪ್ರದರ್ಶನವು ಸಹ ಎಲ್ಲರಿಗೆ ಅಚ್ಚರಿ ಮೂಡಿಸಿತು. ಇಂತಹ ಪ್ರದರ್ಶನಗಳನ್ನು ನೋಡಿದರೆ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಕನ್ನಡದ ಕಲೆ - ಕಲಾವಿದರ ಪರಿಶ್ರಮ - ಪ್ರಯತ್ನಗಳು ಸಾಗರದಿಂದಾಚೆಯೂ ಮೆರೆಯುತ್ತಿದೆ. ಭಾರತಾಂಬೆಯೇ ಧನ್ಯೆ, ಜೈ ಕರ್ನಾಟಕ ಮಾತೆ, ಇದಲ್ಲದೆ ಮತ್ತೊಂದು ಮನರಂಜನೆಯ ನೃತ್ಯ-ನಾಟಕ ಪ್ರದರ್ಶನ ಇತ್ತು. ಕರ್ನಾಟಕದ ಹಲವು ರಾಜ್ಯಗಳ ಸೊಗಡನ್ನು ದಂಪತಿಯ ವೈವಾಹಿಕ ಜೀವನಕ್ಕೆ ಹೋಲಿಸಿ ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ಡಾ ರಾಜ್ ಕುಮಾರ್, ಅನಂತ್ ನಾಗ್ ಹಾಗು ಸಾಹಸ ಸಿಂಹ ವಿಷ್ಣುವರ್ಧನ್  ಹಾಡುಗಳನ್ನು ಮೆಲಕುಹಾಕುವಂತೆ ಮಾಡಿಸಿತು. 

ಅಬ್ಬಬ್ಬಾ ಇಷ್ಟನ್ನೇ ನೋಡಿ ಅಚ್ಚರಿಯಾದ ನಾನು  - ಕಾರ್ಯಕ್ರಮದ ಅಂತಿಮ  ಪ್ರದರ್ಶನಗಳಿಗೆ ಕಾಯುತ್ತಿದ್ದೆ. ಡಾ.ವಸುಂಧರಾ ಅವರ ನೃತ್ಯ ಪ್ರದರ್ಶನಕ್ಕೆ ಸಾಟಿಯೇ ಇಲ್ಲ - ಕಿತ್ತೂರು ರಾಣಿ ಚೆನ್ನಮ್ಮನೇ  ಒಂದು ಕ್ಷಣ ಕಣ್ಣ ಮುಂದೆ ಬಂದಂತಾಯಿತು. ಎಲ್ಲರಿಗೂ  ರಾಣಿ ಚೆನ್ನಮ್ಮನೇ ತನ್ನ ಜೀವನದ ಕಥೆಯನ್ನು ನೃತ್ಯ ರೂಪಕದಲ್ಲಿ  ವಿವರಿಸುತ್ತಿದ್ದಾರೆ ಎನಿಸಿತು.  ಕರ್ನಾಟಕದ  ವೀರ ವನಿತೆಯಾದ ಚೆನ್ನಮ್ಮನ ಕಥೆ ನೃತ್ಯ ರೂಪಕದಲ್ಲಿದ್ದು , ಸಂದರ್ಭಕ್ಕೆ ತಕ್ಕ ಸಂಗೀತ, ಸಂಗೀತಕ್ಕೆ ತಕ್ಕ ಹಾವ ಭಾವ ಇವೆಲ್ಲವೂ ಅಲ್ಲಿ ಅದನ್ನು  ವೀಕ್ಷಿಸಿದ ಪ್ರೇಕ್ಷಕರಲ್ಲಿ  ಹುಚ್ಚೆಬ್ಬಿಸಿತು. ಇಂತಹ ಪ್ರದರ್ಶನದ  ಹಿಂದೆ ಅಡಗಿರುವ ನಮ್ಮ ಮೈಸೂರಿನ ಹೆಮ್ಮೆಯ ವಸುಂಧರಾ ಅಮ್ಮನಿಗೆ ಒಂದು ಸಲಾಂ! (ಇದರ ಬಗ್ಗೆ ಸುಮನಾಾರಾಯಣ್ ಅವರ ಅನಿಸಿಕೆಗಳನ್ನು ಕೆಳಗಿನ ಲೇಖನದಲ್ಲಿ ಓದಿರಿ) 

।।ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮ್ ಉಚ್ಯತೇ ।। - ಭರತನ ನಾಟ್ಯಶಾಸ್ತ್ರ 

ನೃತ್ಯದ ನಂತರ ಸಂಗೀತ, ಸಂಗೀತದ ನಂತರ ನೃತ್ಯವೋ ಎಂಬಂತೆ ಮುಂದಿನ ಪ್ರದರ್ಶನ ಶ್ರೀಹರ್ಷರವರ ಹಾಡುಗಾರಿಕೆ. Zee ಕನ್ನಡ ಸರೆಗಮಪ ಹೆಮ್ಮಯ ಗಾಯಕ, ಅತ್ಯುತ್ತಮ್ಮ ನಾಟಕ ಕಲಾವಿದರು ಆದ ಶ್ರೀಹರ್ಷರವರು ತಮ್ಮ ಕಾರ್ಯಕ್ರಮಯನ್ನು ಶಿವನ  ಮೃತ್ಯುಂಜಯ ಮಂತ್ರದಿಂದ ಆರಂಭಿಸಿ ಕನ್ನಡ ಹಾಗೂ  ಹಿಂದಿ  ಚಿತ್ರರಂಗದ ಹಲವು ಸಮಾನವಾದ ಸಂಗೀತ ಸಂಯೋಜನೆಯುಳ್ಳ Medley ಯನ್ನು ಪ್ರಸ್ತುತ ಪಡಿಸಿದರು. ಅವರ ಬಹುಮುಖ ಪ್ರತಿಭೆಗೆ ಸಾಟಿಯೇ ಇಲ್ಲ, ಇವರೊಡನೆ ನಮ್ಮ ಯುಕೆ ಕನ್ನಡ ಬಳಗ ಮತ್ತು ಕನ್ನಡಿಗರು ಯುಕೆ ಹಾಡುಗಾರರು ಸಹ ಯುಗಳ ಗೀತಗಳನ್ನು ಪ್ರಸ್ತುತ ಪಡಿಸಿದರು. (ವಿವರಗಳನ್ನು ಪೂಜಾ ತಾಯೂರ್ ಅವರ ಲೇಖನದಲ್ಲಿ ಓದಿರಿ)

ಒಟ್ಟಾರೆ ಯುಗಾದಿ ಸಂಭ್ರಮಕ್ಕೆ ಪಾಯಸದ  ಸಿಹಿ, ಮಿರ್ಚಿ ಬಜ್ಜಿಯ ತಿನಿಸು, ತಿಳಿ ಸಾರು ಎಲ್ಲವೂ ಬಾಳೆ ಎಲೆಯ ಮೇಲೆ ಸವಿಯಲು ಸಿದ್ಧವಾದಂತೆ ನಮ್ಮ ಕನ್ನಡ ಬಳಗದ ಈ  ಕಾರ್ಯಕ್ರಮವು ಕಲೆಗಳ ರಸದೌತಣವನ್ನು ಉಣ ಬಡಿಸಿತು. ನಾನು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಣೆಯನ್ನು ಮಾಡಿದ ಹೆಮ್ಮೆಯೂ ಇದೆ. ಕನ್ನಡ ಬಳಗ ಯುಕೆಗೆ ಮುಂದಿನ ವರುಷ ನಲವತ್ತರ ಹರುಷ - ಇನ್ನೂ ಹೆಚ್ಚು ಕಲಾವಿದರಿಗೆ ಅವಕಾಶ ಸಿಗಲಿ ಮತ್ತಷ್ಟು ಸಂಭ್ರಮದ ಕಾರ್ಯಕ್ರಮಗಳು ಮೂಡಿಬರಲಿ ಎಂದು ಆಶಿಸುವೆ.     

~ ಶ್ರೀರಂಜಿನಿ ಸಿಂಹ 

ಮನ ಮುಟ್ಟಿದ ನಾಟ್ಯ ಯೋಗ ಸಮನ್ವಯ ಪ್ರಾತ್ಯಕ್ಷಿಕೆ

ಕನ್ನಡ ಬಳಗ ಯು ಕೆ, ದಿನಾಂಕ ಎಪ್ರಿಲ್ 23, 2022 ರಂದು ಡಾರ್ಬಿಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ (KSSVV) ಅಡಿಯಲ್ಲಿ ಏರ್ಪಡಿಸಿದ್ದ ವಿಶೇಷ ಯುಗಾದಿ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ನೃತ್ಯ ಗುರು ಡಾ ವಸುಂಧರಾ ದೊರಸ್ವಾಮಿಯವರು ”ನಾಟ್ಯ ಯೋಗ ದರ್ಶನ” ಈ ವಿಷಯದ ಬಗ್ಗೆ ಭಾಷಣ ಮತ್ತು ಪ್ರಾತ್ಯಕ್ಷಿಕಾ ಕಾರ್ಯಕ್ರಮವನ್ನು ನೀಡಿದರು.
ಮೊದಲಿಗೆ, ನಾಟ್ಯದ ಉಗಮ,  ವಿಕಾಸ, ಬೆಳವಣಿಗೆಗಳನ್ನು ಹಂತ ಹಂತವಾಗಿ ಎಲ್ಲಾ ವೀಕ್ಷಕರಿಗೂ ಅರ್ಥವಾಗುವಂತೆ ಅಚ್ಚುಕಟ್ಟಾಗಿ ವಿವರಿಸಿದರು. ಭರತನಾಟ್ಯವು ಶಾಸ್ತ್ರೀಯ ಕಲೆಯಾಗಿದ್ದು ಇದು ಭಕ್ತಿ ಮಾರ್ಗವೂ ಹಾಗೂ ಮೋಕ್ಷದಾಯಕವೂ ಆಗಿದೆ ಎಂದರು. ಋಗ್, ಯಜುರ್, ಸಾಮ, ಅಥರ್ವಣ -ಈ ನಾಲ್ಕು ವೇದಗಳಿಂದ ಒಂದೊಂದು ಮುಖ್ಯ ಸಾರವನ್ನು ಆಯ್ದು ಉದ್ಭವವಾದ ಐದನೆಯ ವೇದವೇ ಪಂಚಮ ವೇದ -ಅದುವೇ ನೃತ್ಯ. ಈ ವಿಷಯದ ಬಗ್ಗೆ ಸವಿಸ್ತಾರವಾಗಿ ವಸುಂಧರಾರವರು ತಿಳಿಸಿಕೊಟ್ಟರು. ಈ ನೃತ್ಯವನ್ನು ಬ್ರಹ್ಮನು ಭರತಮುನಿಗೆ ಮನವರಿಕೆ ಮಾಡಿ, ಭರತ ಮುನಿಯು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಅಭಿನಯಗಳನ್ನು ಒಳಗೊಂಡ ಈ ನೃತ್ಯ ಕಲೆಯನ್ನು ತನ್ನು ನೂರು ಮಕ್ಕಳಿಗೆ ಹೇಳಿಕೊಟ್ಟು, ಅಂತೆಯೇ ಭೂಮಿಯ ಮೇಲೆ ನಾಟ್ಯಪ್ರಸಾರಕ್ಕೆ ಅನುವು ಮಾಡಿಕೊಟ್ಟನೆಂದು ತಿಳಿಸಿದರು.
ನೃತ್ಯವು ಮೊದಲು ಷೋಡಷೋಪಚಾರಗಳಲ್ಲಿ ಒಂದಾಗಿದ್ದು, ಕಾಲಕ್ರಮೇಣ ದೇವಸ್ಥಾನಗಳಲ್ಲಿ ದೇವರಿಗೇ ಮುಡುಪಾಗಿಟ್ಟ ನೃತ್ಯಗಾರ್ತಿಯರಿಂದ ಪ್ರಚಲಿತವಾಗಿ ಪ್ರಸಾರವಾಗಲು ತೊಡಗಿತು. ನಂತರ ಭರತನಾಟ್ಯ ಕಲೆಗೆ ಶಾಸ್ತ್ರೀಯತೆ ಹಾಗೂ ಗೌರವಯುತ ಸ್ಥಾನ ಲಭ್ಯವಾಗಿ ಜನಸಾಮಾನ್ಯರಿಗೂ ನಿಲುಕುವಂತಾಯಿತು ಎಂದು ಹೇಳಿದರು.
ಮುಂದುವರೆದು, ಡಾ ವಸುಂಧರಾರವರು ಯೋಗದ ಬಗ್ಗೆ ವಿವರಣೆ ನೀಡಿದರು. ತಮ್ಮ ಬಾಲ್ಯದಲ್ಲಿ ಮೂಡಬಿದ್ರೆಯ ಹತ್ತಿರದ ಹಳ್ಳಿಯಲ್ಲಿ ವಾಸವಾಗಿದ್ದ ಅವರು, ಮನೆಯಲ್ಲಿ ತಮ್ಮ ತಂದೆಯವರ ನಿರ್ದೇಶನದಂತೆ ವ್ಯಾಯಾಮ, ಆಸನಗಳನ್ನು ಕಲಿಯಲಾರಂಭಿಸಿದರು. ಆದರೆ ಈ ಆಸನಗಳು ಯೋಗದ ಆಸನಗಳೆಂದು ಅವರಿಗೆ ತಿಳಿದಿರಲಿಲ್ಲ. ಮದುವೆಯಾಗಿ ಮೈಸೂರಿಗೆ ಬಂದ ನಂತರ ಭರತನಾಟ್ಯ ಮುಂದುವರಿಕೆಯ ಸಂದರ್ಭದಲ್ಲಿ, ಭರತನಾಟ್ಯ ಭಂಗಿಗಳ ಹಾಗು ಯೋಗ ಆಸನಗಳ ನಡುವೆ ಇರುವ ಸಮನ್ವಯವನ್ನು ಗುರುತಿಸಿದರು. ಅಷ್ಟಾಂಗ ಯೋಗ ಗುರು ಶ್ರೀ ಪಟ್ಟಾಭಿ ಜೋಯಿಸ್ ಅವರಲ್ಲಿ ಯೋಗಾಭ್ಯಾಸವನ್ನು ಮಾಡಿದರು. ಮುಂದುವರೆದು. ”ನಾಟ್ಯ ಯೋಗ ಸಮನ್ವಯ” ಎಂಬ ವಿಷಯದಲ್ಲಿ ತೊಡಗಿ, ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಯೋಗದ ಆಸನಗಳನ್ನು ಭರತನಾಟ್ಯಕ್ಕೆ ಅಳವಡಿಸಿ ಈ ಎರಡೂ ಕಲೆಗಳನ್ನು ಸಮೀಕರಿಸಿದ ಕೀರ್ತಿಗೆ ಭಾಜನರಾದವರು ಡಾ ವಸುಂಧರಾ ಅವರು. ನಾಟ್ಯವು ಒಂದು ವಿಧದಲ್ಲಿ ಯೋಗವೇ ಎಂದು ಪ್ರತಿಪಾದಿಸಿದ ವಸುಂಧರಾರವರು, ಅಷ್ಟಾಂಗ ಯೋಗದಲ್ಲಿ ಇರುವ ಎಂಟು ಸ್ಥರಗಳಾದ ಯಮ, ನಿಯಮ,ಆಸನ, ಪ್ರಾಣಾಯಾಮ, ಪಥ್ಯಾಹಾರ, ಧ್ಯಾನ, ಧಾರಣ ಹಾಗೂ ಸಮಾಧಿ -ಈ ಹಂತಗಳನ್ನು ವಿವರಿಸಿದರು.
ಎಪ್ಪತ್ತೆರಡರ ಹರೆಯದ ಡಾ ವಸುಂಧರಾ ದೊರಸ್ವಾಮಿಯವರು ತಮ್ಮ ಅತ್ಯುತ್ತಮ ಭಂಗಿಗಳಿಂದ, ಉತ್ಕೃಷ್ಟ ಅಭಿನಯದಿಂದ ಮನಮುಟ್ಟುವಂತೆ ವಿವಿಧ ಆಸನಗಳ ಹಾಗೂ ಭಂಗಿಗಳ ಪ್ರಾತ್ಯಕ್ಷಿಕೆ ನೀಡಿ ರಂಜಿಸಿದರು. ಇದಕ್ಕೆ, ಅವರ ಶಿಷ್ಯೆ ವಿದ್ಯಾರಾಣಿ ಸಹಕರಿಸಿದರು.
ವೈಯಕ್ತಿಕವಾಗಿ ಹೇಳುವುದಾದರೆ, ನಾನು ಕೂಡ ಈ ಮಹಾನ್ ಕಲಾವಿದೆಯ ಶಿಷ್ಯೆ. ಇವರು ಗುರು ಸ್ಥಾನದಲ್ಲಿ ಅಂತೆಯೇ ಮಾತೃ ಸ್ಥಾನದಲ್ಲಿ ನಿಂತು ಭರತನಾಟ್ಯವನ್ನು ಕಲಿಸಿದ ಆ ಸುಂದರ ಸಮಯವು ನನ್ನ ಮನಸ್ಸಿನಲ್ಲಿ ಇಂದಿಗೂ ಹಚ್ಚ  ಹಸಿರಾಗಿದೆ.
ಇನ್ನು, ನನ್ನ ತಾಯಿ ಡಾ ಸರ್ವಮಂಗಳಾ ಶಂಕರ್ ರವರು ಮೈಸೂರಿನ ಡಾ ಗಂಗೂಬಾಯಿ ಹಾನಗಲ್ ಸಂಗೀತ ಹಾಗು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ಡಾ ವಸುಂಧರಾ ಅವರಿಗೆ ತಾವು ನೀಡಿದ ”ನಾಟ್ಯ ಕುಲೋತ್ತುಂಗ” ಪ್ರಶಸ್ತಿ ಸಮಾರಂಭವನ್ನು ಹಾಗೂ ವಸುಂಧರಾ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ-ವಿಶ್ವಾಸಗಳನ್ನು ನೆನೆದು ಸಂತೋಷಿಸುತ್ತಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಅಹರ್ನಿಶಿ ನೃತ್ಯಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವ ಅಪೂರ್ವ ಕಲಾವಿದೆ ಡಾ ವಸುಂಧರಾ ದೊರಸ್ವಾಮಿ ಅವರು ನೃತ್ಯಗಾರರಿಗೆ ಸ್ಫೂರ್ತಿದಾಯಕ. ಅವರು ನೀಡಿದ ಅಚ್ಚುಕಟ್ಟಾದ, ಚಿಕ್ಕ, ಚೊಕ್ಕ ಪ್ರಾತ್ಯಕ್ಷಿಕಾ ಕಾರ್ಯಕ್ರಮಕ್ಕಾಗಿ ಅವರಿಗೂ, ಅದನ್ನು ಏರ್ಪಡಿಸಿದ್ದ ಕನ್ನಡ ಬಳಗ ಯುಕೆ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (KSSVV), ಅವರನ್ನು ಸ್ವಾಗತ ಮಾಡಿ ಪರಿಚಯ ಭಾಷಣ ಮಾಡಿದ ಡಾ ಜಿ ಎಸ್ ಶಿವಪ್ರಸಾದ್ ಅವರಿಗೆ ಮತ್ತು ವಂದನಾರ್ಪಣೆ ಮಾಡಿದ ಡಾ ಶ್ರೀವತ್ಸ ದೇಸಾಯಿಯವರಿಗೆ ಧನ್ಯವಾದಗಳು.

~ ಡಾ ರಶ್ಮಿ ಮಂಜುನಾಥ
 MBBS, MRCP, MRCP ( Diabetes and Endocrinology), FRCP
Consultant Endocrinologist
Coventry. UK

ಹರುಷ ತಂದ ಶ್ರೀಹರ್ಷ

ನಾನು 'ಇಂಗ್ಲೆಂಡ್'ಗೆ ಬಂದು ಎರಡು ವರ್ಷಗಳಾಗಿದ್ದು, ಕೋವಿಡ್-19ನಿಂದಾಗಿ ಸಾಮಾಜಿಕ ಸಂವಹನವೇ ಇಲ್ಲದ ಹಾಗೆ ಆಗಿತ್ತು. 'ಫೇಸ್ಬುಕ್'ನಿಂದಾಗಿ ನನಗೆ 'ಇಂಗ್ಲೆಂಡ್'ನಲ್ಲಿ ವಾಸವಾಗಿರುವ ಎಷ್ಟೋ ಜನರ ಪರಿಚಯವಾಯಿತು.   ಶತ ಪ್ರಯತ್ನ ಮಾಡಿದ್ದರೂ, ಸಾಮಾಜಿಕ ಜಾಲತಾಣವಿಲ್ಲದೆ ನನಗೆ ಇಷ್ಟೊಂದು ಕನ್ನಡ ಬಳಗದವರ ಪರಿಚಯ ಆಗುತ್ತಿರಲಿಲ್ಲ. ಕನ್ನಡ ಬಳಗ UK ಅವರು ಆಯೋಜಿಸಿದ್ದ 'ಯುಗಾದಿ ಸಂಭ್ರಮ 2022'ಯಲ್ಲಿ ಭಾಗಿಯಾಗಲು ಒಂದು ಸುವರ್ಣ ಅವಕಾಶ ದೊರಕಿದಾಗ, ನನಗೆ ನೀಡಿದ ಪ್ರಾರ್ಥನಾ ಗೀತೆ ಹಾಡುಗಾರಿಕೆ ಮತ್ತು ಕಾರ್ಯಕ್ರಮ ನಿರ್ವಹಣೆಯ ಅವಕಾಶಕ್ಕಿಂತಲೂ, ನನಗೆ ತಿಳಿದಿದ್ದ ಎಲ್ಲ ಹೆಸರುಗಳಿಗೆ ಜೀವಂತ ಮುಖ ಕಾಣಬಹುದು, ಮಾತನಾಡಬಹುದು ಎಂಬ ಸಂತೋಷವೇ ಹೆಚ್ಚು! ಜೊತೆಗೆ ಮುಖ್ಯ ಅತಿಥಿಗಳಾದ ಶ್ರೀ ಶ್ರೀಹರ್ಷ ಅವರ ಜೊತೆ ಸಂಜೆಯ ಕಾರ್ಯಕ್ರಮದಲ್ಲಿ ಚಿತ್ರಗೀತೆ  ಹಾಡಲು ಒಂದು ಸದವಕಾಶ ದೊರೆತಿತು. ವೇದಿಕೆಯ ಮೇಲೆ ಶಾಸ್ತ್ರೀಯ ಸಂಗೀತ, ದೇವರನಾಮ, ಭಾವಗೀತೆಗಳನ್ನು ಮಾತ್ರ ಹಾಡುವ ನನಗೆ, ಇದು ಚೊಚ್ಚಲ ಚಿತ್ರಗೀತೆ ಗಾಯನಾವಕಾಶ. ಶ್ರೀ ಶ್ರೀಹರ್ಷ ಅವರ ಬಗ್ಗೆ, ನಿಜ ಹೇಳಬೇಕು ಅಂದ್ರೆ ನನಗೆ ಅಷ್ಟು ಪರಿಚಯ ಇರ್ಲಿಲ್ಲ. ರಿಯಾಲಿಟಿ ಶೋಗಳಲ್ಲಿ ಆಸಕ್ತಿಯನ್ನು ಬಹಳ ವರ್ಷಗಳ ಮುಂಚೆಯೇ ಕಳೆದುಕೊಂಡುಬಿಟ್ಟಿದ್ದೆ. ತಂತ್ರಜ್ಞಾನದಿಂದ ಏನು ಸಾಧ್ಯ ಇಲ್ಲ ಹೇಳಿ? ಶ್ರೀಹರ್ಷ ಅವರ ಹಾಡುಗಳನ್ನು ಯೌಟ್ಯೂಬ್ನಲ್ಲಿ  ನೋಡಿ ನನಗೆ ಅವರ ಧ್ವನಿ ಬಹಳ ಇಷ್ಟವಾಯಿತು ! ನನ್ನ ಜೊತೆ ಇನ್ನೂ ಮೂವರು ಅವರ ಜೊತೆ ಯುಗಳ ಗೀತೆ ಹಾಡಬೇಕಿತ್ತು. ಕಾರಣಾಂತರದಿಂದ ನಮ್ಮ ಕಾರ್ಯಕ್ರಮ ತುಂಬಾ ತಡವಾಗಿ ಶುರು ಆದರೂ, ಶ್ರೀಹರ್ಷರವರ 'ನಾದಮಯ'  ಬೇರೆ ಲೋಕಕ್ಕೆ ಕರೆದೊಯ್ದಿತು. ಹಾಡನ್ನು ಕಣ್ಮುಚ್ಚಿ ಕೇಳಿ, ಆನಂದಿಸಿದವರಲ್ಲಿ ನಾನೂ ಒಬ್ಬಳು. ಎಂಥ ಗಾಯನ, ಎಂಥ ಪ್ರಬುದ್ಧತೆ! ಹಿಂದಿ ಹಾಗು ಕನ್ನಡ ಭಾಷೆಯಲ್ಲಿ ಸಾವಿರಾರು ಸಮಾನವಾಗಿರುವ ಹಾಡುಗಳಿವೆ. ಶ್ರೀಹರ್ಷ ಅವರು ಅಂತಹ ೨೪ ಹಾಡುಗಳ ಝಲಕ್ (ಸಮಾನ ರಾಗ-ತಾಳದ ಒಂದು ಹಿಂದಿ ಹಾಗು ಒಂದು ಕನ್ನಡ ಹಾಡು) ನೀಡಿದರು. ಅವರ ಸುಮಧುರವಾದ ಧ್ವನಿಯಲ್ಲಿ ಎಲ್ಲಾ ಹಾಡುಗಳು ಅದ್ಭುತವಾಗಿ ಕೇಳಿಸಿದವು. ಈ ಅಸಾಮಾನ್ಯ ಪ್ರಸ್ತುತಿ ಎಲ್ಲರಿಗೂ ಇಷ್ಟವಾಗಿದ್ದು, ಜೋರಾದ ಚಪ್ಪಾಳೆ, ಶಿಳ್ಳೆಗಳಿಂದ ಅಭಿವ್ಯಕ್ತವಾಯಿತು. ಶ್ರೀಹರ್ಷರವರು ಕೇವಲ ಒಬ್ಬ ಗಾಯಕನಲ್ಲ, ಒಬ್ಬ ಪ್ರದರ್ಶಕ. ಪ್ರೇಕ್ಷಕರನ್ನು ಸೆಳೆಯುವ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಕಾರ್ಯಕ್ರಮ ಸಂವಾದಾತ್ಮಕವಾಗಿ ಇದ್ದಿದ್ದು ನನಗೆ ಬಹಳ ಹಿಡಿಸಿತು. ಇದೇನಪ್ಪ, ಎಲ್ಲ ಅಷ್ಟು ಚೆನ್ನಾಗಿತ್ತಾ? ಹಾಗಾದರೆ ನಮಗೆ ಖಂಡಿತ ಈ ಕಾರ್ಯಕ್ರಮ ಮಿಸ್ ಆಯ್ತಾ ಅನ್ಕೊಂಡ್ರಾ? ಅದೇನೋ ಹೌದು. ಆದರೆ ಇಷ್ಟು ಚೆನ್ನಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ, ನನಗೆ ತುಸು ನಿರಾಶೆ ಉಂಟು ಮಾಡಿದ್ದು ಕೇವಲ ಒಂದು ವಿಚಾರ. ಒಂದೊಂದು ಯುಗಳ ಗೀತೆಯ ಮಧ್ಯೆ, ಒಂದೆರಡು 'ಟಪಾಂಗುಚಿ' ಗೀತೆಗಳನ್ನು ಹಾಡಿದ್ದು. ನನ್ನ ಪ್ರಕಾರ, ಕುಣಿದು ಕುಪ್ಪಳಿಸಿದ ಮೇಲೆ ಪ್ರೇಕ್ಷಕರನ್ನು ಮತ್ತೆ ಆಸೀನರಾಗಿರಿಸಲು ಕಷ್ಟ. ಯುಗಳಗೀತೆಗಳನ್ನು ಮುಗಿಸಿ, ನಂತರ 'ಟಪಾಂಗುಚಿ' ಹಾಡಬಹುದಿತ್ತೇನೋ ಅಂತ ನನ್ನ ಅನಿಸಿಕೆ.  ಪ್ರೇಕ್ಷಕರು ಒಂದು ಯುಗಳ ಗೀತೆಯ ನಂತರ ಕುಣಿದು ಕುಪ್ಪಳಿಸಿ, ಊಟಕ್ಕೆ ತೆರಳಿದರು. ಮಿಕ್ಕ ಯುಗಳ ಗೀತೆಗಳನ್ನು ಕೇಳೋ ಶ್ರೋತೃಗಳು ಬೆರಳೆಣಿಕೆಯಷ್ಟು ಮಾತ್ರ. ಇರಲಿ, ಒಬ್ಬ ಗಾಯಕನಿಗೆ ತನ್ನ ಹಾಡಿಗೆ ಜನ ಮನಸ್ಸು ಬಿಚ್ಚಿ ಕುಣಿದರೆ ಅದಕ್ಕಿಂತ ಇನ್ನೇನು ಬೇಕು ಅಲ್ಲವೇ? ಒಟ್ಟಿನಲ್ಲಿ ಹೇಳೋದಾದರೆ, ಕನ್ನಡ ಬಳಗಕ್ಕೆ ಶ್ರೀಹರ್ಷ ಹರುಷ ತಂದು ಕೊಟ್ಟರು. ನನಗೆ ಅವರ ಜೊತೆ ಹಾಡಲು ಸದಾವಕಾಶ ಕಲ್ಪಿಸಿಕೊಟ್ಟದಕ್ಕೆ ಕನ್ನಡ ಬಳಗ UK ಗೆ ನಾನು ಸದಾ ಚಿರ ಋಣಿ.

~ ಪೂಜಾ ತಾಯೂರ್

ಕಿತ್ತೂರ ರಾಣಿ ಚೆನ್ನಮ್ಮ

ಕನ್ನಡ ಬಳಗ ಯುಗಾದಿ ಕಾರ್ಯಕ್ರಮದ ಮುಖ್ಯ ಆಕರ್ಷಣೆ, ಅಂದು  ಸಂಜೆ ಮೂಡಿ ಬಂದ ಡಾ. ವಸುಂಧರಾ ದೊರೆಸ್ವಾಮಿ  ರವರ  ನೃತ್ಯ ರೂಪಕ "ಕಿತ್ತೂರು ರಾಣಿ ಚೆನ್ನಮ್ಮ." ಇದು ಏಕಪಾತ್ರಾಭಿನಯವೂ ಆಗಿತ್ತು. ನಮ್ಮ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವ ಪಾತ್ರ ಕಿತ್ತೂರು ಚೆನ್ನಮ್ಮನ ದು. ಕೇವಲ ಹೆಸರು ಕೇಳಿದರೆ ಸಾಕು, ದೇಶ ಭಕ್ತಿಯ ನೆತ್ತರು ಮೈಮನಗಳಲ್ಲಿ ಹರಿದಾಡಿ, ಹೆಮ್ಮೆಯಿಂದ ಎದೆಯುಬ್ಬಿ, ಪರಕೀಯರಿಗೆ ಸಿಂಹಸ್ವಪ್ನವಾಗಿ ಕತ್ತಿ ಹಿಡಿದು ನಿಂತ ವೀರ ಮಹಿಳೆಯ  ಚಿತ್ರ ಕಣ್ಣಿಗೆ ಬರುತ್ತದೆ. ಏಪ್ರಿಲ್ ೨೩ರ ಸಂಜೆ Derby ಯಲ್ಲಿ, ಆ ಪಾತ್ರಕ್ಕೆ ಜೀವಬಂದು , ಸ್ವತಃ ಕಿತ್ತೂರು ರಾಣಿ ಚೆನ್ನಮ್ಮನನ್ನೇ ಕಣ್ಮುಂದೆ ಕಂಡ ಅನುಭವ ಆಯಿತು ವೀಕ್ಷಕರಿಗೆ. 

ನಿರೂಪಣೆಯಿಂದ ಆರಂಭವಾಗಿ ಚೆನ್ನಮ್ಮನ ಬಾಲ್ಯ, ಮದುವೆ, ತಾಯ್ತನ, ರಾಜ್ಯಭಾರ, ಹೋರಾಟ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಹೆಣೆದಿರುವ ಕಥಾನಕ, ಸುಮಧುರ  ಸಂಗೀತ, ಅದ್ಭುತ ನೃತ್ಯ ಹಾಗು ಅಮೋಘವಾದ ಅಭಿನಯ ಸೇರಿ ನೋಡುಗರ  ಕಣ್ಣಾಲಿಗಳು ತುಂಬಿ ಬಂದವು. ಪ್ರತಿ ಹಂತದಲ್ಲೂ  ಕಂಡು ಬಂದ ಅಚ್ಚರಿ ಮೂಡಿಸುವ ಯೋಗಾಸನಗಳು ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿಸಿದವು.
ಏಕಪಾತ್ರಾಭಿನಯವಾದರೂ,  ಇಲ್ಲಿ  ಮೂಡಿ ಬಂದ ಎಲ್ಲಾ ಪಾತ್ರಗಳೂ - ಮಗು ಚೆನ್ನಮ್ಮನಿಂದ ಹಿಡಿದು, ಮಲ್ಲಸರ್ಜ, ರಾಣಿ ಚೆನ್ನಮ್ಮನ ವರೆಗೆ , ಅಷ್ಟೇ ಅಲ್ಲದೆ ಹುಲಿ, ಕುದುರೆ ಸೇರಿದಂತೆ ವಿವಿಧ ಪ್ರಾಣಿಗಳೂ ಸಹ ಜೀವತಳೆದು ನಮ್ಮ ಮುಂದೆ ನರ್ತಿಸಿದಂತಿತ್ತು. ಕುದುರೆಯ ಚಿತ್ರಣವಂತೂ  ಅವಿಸ್ಮರಣೀಯ. ಪ್ರತಿ ಪಾತ್ರದಲ್ಲೂ ಪರಕಾಯ ಪ್ರವೇಶ ಮಾಡಿ, ಪಾತ್ರದೊಳಗೆ ತಾವೇ ಹೊಕ್ಕು ಸಂಪೂರ್ಣ  ತನ್ಮಯರಾಗಿ ತಮ್ಮದೇ ಭಾವವನ್ನು ನಮ್ಮೆಲ್ಲರಿಗೂ ಉಣಬಡಿಸಿದರು. ಚೆನ್ನಮ್ಮನ ಮದುವೆ ಇರಬಹುದು, ಅವಳು ಮಗುವನ್ನು ಆಡಿಸುವ ಪರಿ, ಮಗನನ್ನು  ಕಳೆದು ಕಂಡ ವೇದನೆ, ಠಾಕರೆಯ ಜೊತೆಗಿನ ವಾಗ್ವಾದ ಇವೆಲ್ಲವನ್ನೂ ನಾವೇ ಸ್ವತಃ ಮಾಡುತ್ತಿದ್ದೀವೇನೋ ಎನ್ನುವ ಅನುಭವ! ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಕ್ಷಣಾರ್ಧದಲ್ಲಿ ಅನಾಯಾಸವಾಗಿ ಪರಿವರ್ತನೆಗೊಂಡ   ಪರಿ ಅಂತ್ಯಂತ ಶ್ಲಾಘನೀಯ. ಅದರೊಂದಿಗೆ ಬಂದ  ಉಪಕರಣಗಳು  ಅತ್ಯಂತ ಪೂರಕವಾಗಿದ್ದು ನೃತ್ಯಕ್ಕೆ ಮತ್ತೊಂದು ಆಯಾಮವನ್ನ ತಂದು ಕೊಟ್ಟಿತು. 
 
ಇನ್ನು ನೃತ್ಯಕ್ಕೆ ಬಂದರೆ ರೇಖಾ  ಗಣಿತವೇ  ಅಡವಿನ ರೂಪದಲ್ಲಿ ಬಂದು ನರ್ತಿಸಿದಂತಿತ್ತು, ಪ್ರತಿ ಸಾಲುಗಳಲ್ಲೂ  ಹಾಸು ಹೊಕ್ಕಿದ್ದ ಅದ್ಭುತ ಯೋಗಾಸನಗಳು, ಅವನ್ನು ಲೀಲಾಜಾಲವಾಗಿ ಪ್ರಯೋಗಿಸಿದ ಬಗೆ, ಆರಂಭದಿಂದ ಅಂತ್ಯದವರೆಗೂ ಕಾಯ್ದುಕೊಂಡು ಬಂದ ದೈಹಿಕ ಶಕ್ತಿ ಹಾಗು ಕಲಾಸಹಿಷ್ಣುತೆ ನೋಡುಗರನ್ನು ನಿಬ್ಬೆರಗಾಗಿಸಿತು. ಚೂರೂ  ಯಾಂತ್ರಿಕವೆನಿಸದೆ ಪಾದರಸದಂತೆ ಸರಿದಾಡುತಿದ್ದ ಪರಿ ಹದಿಹರೆಯದವರನ್ನೂ ನಾಚಿಸುವಂತಿತ್ತು. ಕಲರಿಪಯಟ್ಟುವಿಂದ ಕೂಡಿದ ಕತ್ತಿವರಸೆ ಕಣ್ಣು ಮಿಟುಕಿಸದೆ ನೋಡುವಂತೆ ಇದ್ದರೆ, ಕಟ್ಟಕಡೆಯ ದ್ರಶ್ಯದಲ್ಲಿ ಕಣ್ಣು ತೇವ ಆಗದೆ ಇದ್ದವರೇ ಇಲ್ಲ.

ಈ ಸುಂದರ ರೂಪಕವನ್ನು  ಬರೆದವರು ಮೈಸೂರಿನ ಪ್ರೊಫೆಸರ್ ಜ್ಯೋತಿ ಶಂಕರ್ ಮತ್ತು ಸಂಗೀತ ರಚನೆ ಶ್ರೀವತ್ಸ ಅವರದು.

ಒಟ್ಟಿನಲ್ಲಿ ಇದೊಂದು ಅಭೂತಪೂರ್ವ ವಿಸ್ಮಯ ಹುಟ್ಟಿಸುವ ಅದ್ಭುತ ಅನುಭವವೆಂದರೆ ಅತಿಶಯೋಕ್ತಿ ಅಲ್ಲ. 
ಡಾ. ವಸುಂಧರಾರವರ ಕಲಾಸೇವೆ ಹೀಗೇ ಮುಂದುವರೆದು ನಮಗೆ ಹೀಗೆಯೇ ಕಲೆಯ ರಸದೌತಣವನ್ನ ಉಣಬಡಿಸುತ್ತ ಇರಲಿ ಎಂದು ಆಶಿಸೋಣ

~  ಸುಮನಾ ನಾರಾಯಣ್
ನರಸಿಂಹಕೌತ್ವಂ

ನಮ್ಮೂರಿನ ಕೋಕೆನ್ ಹಾಫ್ ದಲ್ಲಿ ಶ್ರೀಹರ್ಷಧ್ವನಿ!

ಕನ್ನಡ ಬಳಗದ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಬಂದ ಅತಿಥಿಗಳನ್ನು ತಮ್ಮ ಮನೆಗೂ ಆಹ್ವಾನಿಸಿ ಗೌರವಿಸಿ ಕೆಲವೊಂದು ಆಪ್ತ ಮಿತ್ರರೊಂದಿಗೆ ಅವರ ಅನುಸಂಧಾನವನ್ನು ಏರ್ಪಡಿಸಿ ಸವಿಯುವ ಪರಿಪಾಠ ಡೋಂಕಾಸ್ಟರಿನ ಕನ್ನಡಾಭಿಮಾನಿ ದಂಪತಿಗಳಾದ ಸುಮನಾ ಮತ್ತು ಗಿರೀಶ್ ದಂಪತಿಗಳು ಇಟ್ಟುಕೊಂಡಿದ್ದರ ಲಾಭವನ್ನು ನಾನು ಅನೇಕ ಸಲ ಪಡೆದಿದ್ದೇನೆ. ಈ ಸಲವೂ (ಎಪ್ರಿಲ್, 2022) ಡಾ ವಸುಂಧರಾ ದೊರೆಸ್ವಾಮಿ ಮತ್ತು ಶ್ರೀಹರ್ಷ ದಂಪತಿಗಳೂ ಸಹ ಆಗಮಿಸಿದ್ದರು. 
ಶನಿವಾರದ ಡಾರ್ಬಿ ಕಾರ್ಯಕ್ರಮದ ಮರು ದಿನ ಹಲವಾರು ಕನ್ನಡ ಬಳಗ ಮತ್ತು ಅದರ ಯಾರ್ಕ್ ಶೈರ್ ಚ್ಯಾಪ್ಟರ್ ದ ಸದಸ್ಯರು ಕಿಕ್ಕಿರಿದು ನೆರೆದಿದ್ದರು ಆ ''ಟ್ಯೂಲಿಪ್ ಕಿಚನ್’''ನಲ್ಲಿ. ವಿಶಾಲವಾದ ಅಡಿಗೆಯ ಮನೆಯ ಒಂದು ಗೋಡೆಯಮೇಲಿನ ಹಸಿರು ಟ್ಯೂಲಿಪ್ಪುಗಳ ಸಾಲಿನ ಚಿತ್ರ  ಹಾಲಂಡಿನ ಸುಪ್ರಸಿದ್ಧ  ಕೋಕೆನ್ ಹಾಫ್ ತೋಟವನ್ನು ನೆನಪಿಸುತ್ತದೆ.  ಕೋಕೆನ್ ಹಾಫ಼ (Keukenhof) ಅಂದರೆ ಡಚ್ ಭಾಷೆಯಲ್ಲಿ 'ಕಿಚನ್ ಗಾರ್ಡನ್ ಅಥವಾ ಕೋರ್ಟ್’ ಎಂದು. ಆ ಗೋಡೆಯ ಮುಂದೆ ನೆರೆದ ಎಲ್ಲ ಅತಿಥಿಗಳು ಮತ್ತು ಕನ್ನಡ ಮನಸ್ಸುಗಳು ಸಂಭ್ರಮದಿಂದ ಫೋಟೊ ತೆಗೆಸುಕೊಳ್ಳುವದೂ ಒಂದು ರಿಚುಅಲ್ ಆಗಿದೆ. ಈ ಹಿಂದೆ ಇಲ್ಲಿಗೆ ಬಂದಿದ್ದ  ಕೆಲವು ಅತಿಥಿಗಳೆಂದರೆ ಗುರುರಾಜ ಕರ್ಜಗಿ, ನಾಗತಿಹಳ್ಳಿ ಚಂದ್ರಶೇಖರ್, ಸುಮನ್ ನಗರ್ಕರ್ ದಂಪತಿಗಳು, ಚಕ್ರವರ್ತಿ ಸೂಲಿಬೆಲೆ, ಸೃಜನ್, ರಾಜೇಶ್ ಕೃಷ್ಣನ್, ಬಿ ಆರ್ ಛಾಯಾ ಮುಂತಾದವರು. ಈ ಸಲ ವಸುಂಧರಾ ಅವರು ತಮ್ಮ ಚಿಕ್ಕದಾದರೂ ಮನಮುಟ್ಟುವ, ಅತ್ಮೀಯ ಭಾಷಣದ ನಂತರ ಮೃಷ್ಟಾನ್ನವನ್ನು ಸೇವಿಸಿ ಹೊರಟಾದ ಮೇಲೆ ಶ್ರೀಹರ್ಷ ಅವರ ಹರಟೆ ಮಾತುಕತೆಯಲ್ಲಿ ನಮ್ಮೊಡನೆ ತಮ್ಮ ಮನಸ್ಸು, ವಿದ್ವತ್ತು ಅಲ್ಲದೇ ಸರಳ ವ್ಯಕ್ತಿತ್ವವನ್ನೇ ತೆರೆದಿಟ್ಟರು. ಶನಿವಾರದ ಸಭೆಯ ವೇದಿಕೆಯ ಮೇಲಿಂದ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ  ’ಪ್ರೂ ಸೆಲೆಬ್ರಿಟ” ಶ್ರೀಹರ್ಷ ಇವರೇನಾ ಅನ್ನುವಷ್ಟು ಅವರ ವಿಭಿನ್ನ ಪಾರ್ಶ್ವವನ್ನು ನೋಡಿದೆ. ಅವರ ಜೊತೆಗೆ ಕಡಲು ದಾಟಿ ಅರ್ಧ ದಾರಿ ಅಮೇರಿಕೆಯಿಂದ ಹಾರಿ ಬಂದಿದ್ದ ಅವರ ಪತ್ನಿ ಶ್ರೀಮತಿ ಸ್ವರ್ಣಲತಾ ಸಹ ತಮ್ಮ ಸರಳ ಆತ್ಮೀಯ ಮಾತುಕತೆಯಿಂದ ನೆರೆದ ಸ್ನೇಹಿತರ ಮನಸ್ಸನ್ನು ಸೂರೆಗೊಂಡರು. ಅವರಿಬ್ಬರ ಮಿಲನದ ಪ್ರೇಮಕಥನವನ್ನು ಸಹ ಹಂಚಿಕೊಂಡು ಬೆರಗು ಹುಟ್ಟಿಸಿದರು. ಮೂರು ನಾಲ್ಕು ಹಾಡುಗಳು, ಮಿಮಿಕ್ರಿ, ವ್ಯಂಗೋಕ್ತಿ,ಭಗವದ್ಗೀತೆಯ ಶ್ಲೋಕಗಳು, ಮಂಕುತಿಮ್ಮನ ಕಗ್ಗಗಳನ್ನು ಉದ್ಧರಿಸುತ್ತ ನಮ್ಮೊಡನೆ ಕಳೆದ ನಾಲ್ಕೈದು ತಾಸಿನ ಅವಿಸ್ಮರಣೀಯ ಅನುಭವದೊಂದಿಗೆ ನಾನು ಇವರೇ ನಮ್ಮ ಸಂಸ್ಕೃತಿಯ ನಿಜವಾದ ರಾಯಭಾರಿ ಅಂದುಕೊಳ್ಳುತ್ತ ಮನೆಗೆ ಮರಳಿದೆ.  

~ ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್


ಫೋಟೋಕೃಪೆ :'ಡಾ ದಿವ್ಯತೇಜ; ಡಾ LN ಗುಡೂರ್; ಡಾ. ರಾಂಶರಣ್ ; ಶ್ರೀವತ್ಸ ದೇಸಾಯಿ; ಡಾ ನವೀನ್ C

5 thoughts on “ಕನ್ನಡ ಬಳಗದಲ್ಲಿ ಸಂಭ್ರಮದ ಚೈತ್ರ ಕಲರವ

  1. ನಾಟಿಂಗ್ ಹ್ಯಾಮ್ ನಿಂದ ಟಿ ಆರ್ ನಾರಾಯಣ್ ‘ಲಕ್ಷೀ ನರಸಿಂಹ ಕೌತ್ವಂ’ ನೃತ್ಯ ಪ್ರದರ್ಶನದ ಬಗ್ಗೆ ಬರೆಯುತಾರೆ.

    ಎಪ್ರಿಲ್ 23, 2022 ಡಾರ್ಬಿಯ ರಿವರ್ ಸೈಡ್ ಸಭಾಂಗಣದಲ್ಲಿ ಕನ್ನಡ ಬಳಗ ಯು ಕೆ ರವರ ಯುಗಾದಿ ಮಹೊತ್ಸವ ಆಚರಣೆಯ ಸಂಭ್ರಮದಲ್ಲಿ ನನಗೊದಗಿತೊಂದು ಮಧುರ ಸುಯೋಗ. ನೂರಾರು ಪ್ರೇಕ್ಷಕರೆದುರು ಒಂದೇ ವೇದಿಕೆಯ ಮೇಲೆ ಪ್ರೀತಿಯ ಮಗಳು ಮೊಮ್ಮಕ್ಕಳ ನೃತ್ಯ ಪ್ರದರ್ಶನ ‘ಲಕ್ಷೀ ನರಸಿಂಹ ಕೌತ್ವಂ’ ವೀಕ್ಷಿಸುವ ಸೌಭಾಗ್ಯ ನನಗಾಯಿತು. ವಿದುಷಿ ಸುಮನಾ ಸಂಯೋಜಿಸಿದ ಸಂಚಾರಿ ಭಾವಪೂರ್ಣ ಅಮೋಘ ಶುದ್ಧ ಶಾಸ್ತ್ರೀಯ ಭರತ ನಾಟ್ಯ ಪ್ರೇಕ್ಷಕರ ಮನ ಸೆಳೆಯಿತು. ಪ್ರಹ್ಲಾದನಾಗಿ ಕುಮಾರಿ ಮಾಧುರ್ಯಳ ಭಕ್ತಿರಸ ಸಹಿತ ನೃತ್ಯ ಹಿರಣ್ಯಕಶಿಪುವಾಗಿ ಕುಮಾರಿ ಅನನ್ಯಳ ದರ್ಪ ಕೋಪಾವೇಶಸಹಿತ ಮನೋಹರ ನೃತ್ಯ ಮನಸೋರೆಗೊಂಡಿತು. ನರಸಿಂಹಾವತಾರದ ವೈಭವ ಕಣ್ಣಿಗೆ ಕಟ್ಟುವಂತೆ ವಿದುಷಿ ಸುಮನಾಳ ನೃತ್ಯ ಸೊಗಸಾಗಿ ಮೂಡಿ ಬಂದಿತು.ನಮ್ಮ ಕುಟುಂಬದ ಮೂರೂ ನೃತ್ಯಪಟುಗಳು ವೇದಿಕೆ ಹಂಚಿಕೊಂಡು ನಡೆಸಿದ ಪ್ರದರ್ಶನ ಅಭೂತ ಪೂರ್ವವೆನಿಸಿ ಮನ ಸಂತೋಷಾತಿರೇಕದಿಂದ ನಲಿಯಿತು. ವಿದುಷಿ ಸುಮನಾ ಈ ಮಕ್ಕಳಿಗೆ ನಾಟ್ಯ ಗುರುವಾಗಿ ಶಿಕ್ಷಣವಿತ್ತು ಸಮರ್ಥ ಪಟುಗಳನ್ನಾಗಿಸಿದಾನಂದದ ಜೊತೆಗೆ ತಾಯಿಯಾಗಿ ತನಗೆ ಸ್ಪರ್ಧಿಯಂತೆ ನರ್ತಿಸಿದ ಪರಿಯ ಕಂಡು ಪರಮ ಧನ್ಯತೆಯನ್ನನುಭವಿಸಿದ ಸಂತೋಷ ವರ್ಣಿಸಲಸದಳವೆಂದೆನಿಸಿದ ಭಾವ ಕಂಡೆನಗೆ ಪರಮಾನಂದ ವಾಯಿತು. ಹೃದಯ ತುಂಬಿದ ಮನದಾನಂದ ಅಭಿವ್ಯಕ್ತಿಗೊಳಿಸಲಾಗದ ಸ್ಥಿತಿ ತಲುಪಿತು. ಮನೋಹರ ಚೇತೋಹಾರಿಕೆಯ ಭಾವ ನನ್ನ ಜೀವನದ ಮಹಾನುಭೂತಿಯ ಧನ್ಯತೆಗೆ ಸಾಕ್ಷಿಯಾಯಿತು . —- ಟಿ. ಆರ್. ನಾರಾಯಣ್ 04-05-2022; ನಾಟಿಂಗ್ ಹ್ಯಾಮ್ ಯು.ಕೆ
    (ಟಿ ಆರ್ ನಾರಾಯಣ್ ಅವರು ಸುಮನಾ ನಾರಯಣ್ ಅವರ ತಂದೆ. ಕನ್ನಡ ಬಳಗದ ಯುಗಾದಿ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚಿ ಅಭಿಮಾನದಿಂದ ಈ ಅನಿಸಿಕೆಗಳನ್ನುನನ್ನೊಡನೆ ಹಂಚಿಕೊಂಡರು. ಅದನ್ನುಇಲ್ಲಿ ಸೇರಿಸುವುದೇ ಉಚಿತ ಅಂತ ಇಲ್ಲಿ ಕೊಟ್ಟಿದೆ.)

    Liked by 1 person

  2. ಗೌರಿಯವರ ಅರ್ಥಪೂರ್ಣ ಸಂಪಾದಕೀಯ ಇಡೀ ಸಂಚಿಕೆಯ ತೋರಣ.

    ಶ್ರೀರಂಜನಿ ಸಿಂಹ ಅವರ ವರದಿ ಚೇತೋಹಾರಿಯಾಗಿದೆ. ರಶ್ಮಿ ಮಂಜುನಾಥ ಅವರು ವಸುಂಧರಾ ಅವರ ನಾಟ್ಯ ಮತ್ತು ಭರತನಾಟ್ಯದ ಒಳಸುಳಿವುಗಳನ್ನು ಸುಂದರವಾಗಿ ನಿರೂಪಿಸಿದ್ದಾರೆ. ಪೂಜಾ ತಾಯೂರ್ ಅವರು ಬರೆದಿರುವ ಶ್ರೀಹರ್ಷ ಅವರ ಸಂಗೀತ ಕಾರ್ಯಕ್ರಮದ ವಿವರಗಳು ಹರ್ಷವನ್ನು ತರುತ್ತವೆ. ಸುಮನಾ ನಾರಾಯಣ ಅವರು ವಸುಂಧರಾ ಅವರ ಕಿತ್ತೂರು ಚೆನ್ನಮ್ಮ ನೃತ್ಯರೂಪಕದ ರುಚಿಯ ಅನುಭವ ಮಾಡಿಕೊಟ್ಟಿದ್ದಾರೆ. ದೇಸಾಯಿಯವರು ಟ್ಯೂಲಿಪ್ ಕಿಚನ್ನಿನ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

    ಇಷ್ಟು ಲೇಖಕರಿಂದ ಇಷ್ಟೊಂದು ಕಡಿಮೆ ಸಮಯದಲ್ಲಿ ಬರೆಸಿ ಪ್ರಕಟಿಸಿದ ಗೌರಿಯವರ ಉತ್ಸಾಹ ಮತ್ತು ಸಮಯೋಚಿತ ಸಂಪಾದಕೀಯವನ್ನು ಎಷ್ಟು ಹೊಗಳಿದರೂ ಕಡಿಮೆಯೇ.

    ನನಗೆ ಅನಿವಾರ್ಯ ಕಾರಣಗಳಿಂದ ಬರಲಾಗದಿದ್ದರೂ, ಕಾರ್ಯಕ್ರಮವನ್ನು ನೋಡಿದ ಅನುಭವವನ್ನು ಕೊಟ್ಟಿದೆ ಈ ವಾರಾಂತ್ಯದ ’ಅನಿವಾಸಿ’.

    – ಕೇಶವ

    Like

  3. ಕಳೆದ ಎರಡು ವರ್ಷಗಳ ನಂತರ ಕನ್ನಡಬಳಗದ ಕಾರ್ಯಕ್ರಮದಲ್ಲಿ ಹೊಸ ಹಳೆಯ ಮಿತ್ರರೊಂದಿಗೆ ಕಲೆತು ಮನರಂಜನೆಯ ಮತ್ತು ಕಲಾತ್ಮಕವಾದ ಪ್ರಸ್ತುತಿಗಳನ್ನು ನೋಡಿ ನಲಿಯುವಂತಾಯಿತು ಡಾರ್ಬಿಯಲ್ಲಿ ಕಳೆದ ಶನಿವಾರ. ಅದರ ನೆನಪುಗಳನ್ನು ಮೇಲುಕು ಹಾಕುತ್ತಿರುವಾಗಲೇ ಒಂದು ವಾರದೊಳಗೇ ಅದರ ‘ವರದಿ’ ಗಿಂತ ಆಯ್ದ ಘಟನೆಗಳ ಬಣ್ಣಿಸುವ ಬರಹಗಳನ್ನು ಓದುವುದು ಇನ್ನೊಂದು ತರದ ಖುಷಿ ಕೊಡುತ್ತಿದೆ. ಕೊಟ್ಟ ಗಡುವಿನಲ್ಲಿಯೇ ತಮ್ಮ ಕೆಲಸಗಳನ್ನು ಬದಿಗೊತ್ತಿ ಅಥವಾ ಅದರ ಮಧ್ಯದಲ್ಲೆಯೇ ಹಾಗೂ ಹೀಗೂ ಬರೆದ ನಾಲ್ವರಿಗೂ ಅಭಿನಂದನೆಗಳು. ಮುಖ್ಯ ಅತಿಥಿಗಳ ಬಗ್ಗೆ ಆಯಾ ವಿಷಗಳ ‘ಸ್ಪೆಷಲಿಸ್ಟ್”ಗೆ ವಹಿಸಿಕೊಟ್ಟು ಬರೆಸಿದ್ದು ಸಫಲವಾಗಿದೆ. ನನಗಂತೂ ರಶ್ಮಿ, ಸುಮನಾ, ಪೂಜಾ ಮತ್ತು ಈಗಷ್ಟೆ ಪ್ರವರ್ಧಮಾನದ ಕಡೆಗೆ ಕಾಲಿಡುತ್ತಿರುವ ಶ್ರೀರಂಜನಿ (ಕ್ಷಮೆಯಿರಲಿ) ಅವರ ಬರಗಳನ್ನು ಮತ್ತೆ ಮತ್ತೆ ಓದಿ ಸಂತೋಷವಾಗಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ರೀತಿ ಶ್ಲಾಘನೀಯ. ಸುಮನಾ ಅವರ ಸೂಕ್ಷ್ಮ ಅವಲೋಕನವಾಗಲಿ ರಶ್ಮಿಯವರ ಕೂಲಂಕಶ ವಿಶ್ಲೇಷಣೆಯಾಗಲಿ, -ಜೊತೆಗೆ ತಮ್ಮವೈಯಕ್ತಿಕ ‘ಟಚ್’- ಸುಲಭ ಸಾಧ್ಯವಲ್ಲ. ಪತ್ರಕರ್ತರು ‘ಬೈಲೈನ್’ (ವರದಿಯಡಿಯಲ್ಲಿ ತಮ್ಮ ಹೆಸರು) ಗೆ ಕಾಯುತ್ತಿರುತ್ತಿದ್ದರಂತೆ. ನಮ್ಮ ಅನಿವಾಸಿಯ ಸಂಪಾದಕರು ಪ್ರಕಟಣೆಯ ಸಮದ ಡೆಡ್ ಲೈನ್ ದ ಅಂಜಿಕೆಯಲ್ಲೇ ಬೃಹಸ್ಪತಿವಾರದರಾತ್ರಿ ಕಳೆಯುತ್ತಾರೆ. ಈ ಸಲವೂ ಅಪವಾದವಲ್ಲ ಅಂತ ಗುಟ್ಟಾಗಿ ಅರಿತಿದ್ದೇನೆ. ತಾವು ಅಲ್ಲಿರದಿದ್ದರೂ ಬರಹಗಾರರ ಲೇಖನಿಯಮುಖಾಂತರ ಪರಕಾಯ ಪ್ರವೇಶ ಮಾಡಿ ಕಣ್ಣಾರೆ ಕಂಡಂತೆ ಸಂಕ್ಷಿಪ್ತವಾದ, ಚೊಕ್ಕದಾದ, ಮತ್ತು ಮಂಕು ತಿಮ್ಮನನ್ನು ಮರೆಯದೆ ಸಂಪಾದಕೀಯ ಬರೆದ ಗೌರಿಯವರಿಗೂ ಕ್ರೆಡಿಟ್ ಕೊಡಬೇಕು. ಎದುರಿಗಿರುವ ವಿಪುಲವಾದ ಫೋಟೋಗಳಲ್ಲಿ ಯಾವುದು ಆರಿಸುವುದು ಯಾವುದು ಬಿಡಬಹುದು ಅಂತ ಅನೇಕಸಲ ಯೋಚಿಸಬೇಕಾಗುತ್ತದೆ. ಅವರ ಕಾಲಾವಧಿಯ End is nigh! ಮುಂದಿನ ಸಂಪಾದಕರಾಗಿ ಪ್ರಸಾದವರನ್ನು ಎರಡು ವಾರದಲ್ಲಿ ಸ್ವಾಗತಿಸೋಣವಂತೆ..

    Like

  4. ಇವತ್ತಿನ ಅನಿವಾಸಿ ಸಂಚಿಕೆಯಲ್ಲಿ ಮೂಡಿ ಬಂದಿರುವ ಕನ್ನಡ ಬಳಗದ ಯುಗಾದಿ ಬಗೆಗಿನ ವರದಿ ಅನ್ನುವುದಕ್ಕಿಂತ ಸವಿವರ ಬರಹಗಳು ಕಾರ್ಯಕ್ರಮಕ್ಕೆ ಬರಲಾಗ ದವರಿಗೆ ಕಾರ್ಯಕ್ರಮದ ಪೂರ್ಣಪ್ರಮಾಣದ ಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಕಾರ್ಯಕ್ರಮದಲ್ಲಿ ಹಾಜರಿದ್ದು ಭಾಗವಹಿಸಿದವರಿಗೂ ಈ ಬರಹಗಳು ಸವಿನೆನಪನ್ನು ತಂದಿವೆ. ಇಲ್ಲಿ ವಿಶೇಷವೆಂದರೆ ಈ ಬರಹಗಾರ್ತಿಯರು ತಾವೇ ಈ ಸಂಗೀತ ನೃತ್ಯ ಕಲೆಯಲ್ಲಿ ಪರಿಣತಿ ಪಡೆದವರು ಹಾಗಾಗಿ ಈ ವರ್ಚುಯಲ್ ಅನುಭವ ಹೆಚ್ಚು ಅಥೆಂಟಿಕ್ ಆಗಿದೆ ಎನ್ನಬಹುದು. ರಶ್ಮಿ ಅವರು ವಸುಂಧರಾ ಅವರ ಶಿಷ್ಯೆಯಾಗಿ ಬರೆದದ್ದು ಇಲ್ಲಿ ಒಂದು ವೈಯುಕ್ತಿಕ ದೃಷ್ಟಿ ಕೋನವು ದೊರೆಕಿದಂತಾಯಿತು. ಸುಮನಾ ನಾರಾಯಣ್ ಅವರು ಕಿತ್ತೂರು ಚೆನ್ನಮ್ಮ ನೃತ್ಯ ರೂಪಕವನ್ನು ಆಳವಾಗಿ ವಿಶ್ಲೇಷಿಸಿದ್ದಾರೆ. ಶ್ರೀ ಹರ್ಷ ಅವರ ಕಚೇರಿಯ ಬಗ್ಗೆ ಪೂಜಾ ಬರೆದಿರುವಂತೆ ಹರ್ಷ ಅವರು ಇನ್ನು ಹೆಚ್ಚು ಯುಗಳ ಗೀತೆಗಳನ್ನು ಭಾವಗೀತೆಯನ್ನು ಹಾಡಬಹುದಾಗಿತ್ತು. ಕನ್ನಡ ಬಳಗದ ಸಂಗೀತ ಕಾರ್ಯಕ್ರಮದಲ್ಲಿ ಅಕಾಡಕ್ಕಿಳಿದು ಮೈ ಕುಲುಕುವವರ ಹುರುಪಿನಿಂದಾಗಿ ಸಂಗೀತ ಪ್ರಿಯರಿಗೆ ಹೆಚ್ಚು ಸುಮಧುರ ಹಾಡುಗಳನ್ನು ಕೇಳಲು ಅವಕಾಶವಿಲ್ಲದಂತಾಗಿದೆ. ಇದು ಸಂಗೀತ ಪ್ರಿಯರಿಗೆ ನಿರಾಸೆಯ ಸಂಗತಿ. ಇನ್ನು ಮುಂದಕ್ಕೆ ಡ್ಯಾನ್ಸ್ ನಂಬರ್ಗಳನ್ನು ಕೊನೆಗೆ ಇಟ್ಟುಕೊಳ್ಳುವುದು ಒಳಿತು. ಪೂಜಾ ಗಮನಿಸಿರುವ ಹಾಗೆ ಒಮ್ಮೆ ಶ್ರೋತೃಗಳು ಕುರ್ಚಿಯಿಂದ ಎದ್ದು ಬಿಟ್ಟರೆ ಮತ್ತೆ ಅವರು ಕುರ್ಚಿಗೆ ಮರಳುವುದು ಕಷ್ಟ. ಊಟಕ್ಕೆ ಕಾತುರರಾಗಿರುವವರು ಕಲಾವಿದರ ಹಾಡಿನ ನಡುವೆಯೇ ಈ ನೆಪದಲ್ಲಿ ಸಭಾಂಗಣವನ್ನು ತ್ಯಜಿಸುತ್ತಾರೆ. ಅದು ಶೋಭೆ ತರುವುದಿಲ್ಲ. ಇದನ್ನು ಡ್ಯಾನ್ಸ್ ಆಸಕ್ತರು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇಂತಹ ನೃತ್ಯ ಆಸಕ್ತರಿಗೂ ಅವಕಾಶ ಇರಬೇಕು ಸರಿಯೇ. ಮುಂದಕ್ಕೆ ಅರ್ಧ ಕಾರ್ಯಕ್ರಮ ಯುಗಳ ಗೀತೆಗೆ ಇನ್ನರ್ಧ ಕಾರ್ಯಕ್ರಮ ಟಪಾಂಗುಚಿ ಗೀತೆಗಳಿಗೆ ಮೀಸಲಾಗಿಡುವುದು ಒಳಿತು. ಇದು ಆಯೋಜಕರ ಅಥವಾ ಕಾರ್ಯನಿರ್ವಹಕರ ತಪ್ಪಲ್ಲ ಅಥವಾ ವಿಮರ್ಶೆಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನಾನು ಕಾರ್ಯಕಾರಿ ಸಮಿತಿಯಲ್ಲಿದ್ದಾಗಲೂ ಈ ಸಮಸ್ಯೆಯನ್ನು ಎದುರಿಸಿದ್ದೇವೆ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.