‘ಹರ ಮುನಿದರೆ ಗುರು ಕಾಯ್ವ..ಗುರು ಮುನಿದರೆ ಹರ ಕಾಯ್ವನೇ?’ ಎಂಬ ಮಾತಿದೆ. ಬದುಕ ಹಸನಾಗಿಸಲು, ಗುರಿಯೊಂದ ತೋರಲು, ಅರಿವೊಂದ ಮೂಡಿಸಲು, ತಪ್ಪುಗಳ ಒಪ್ಪ ಮಾಡಲು, ನಮ್ಮ ಗರಿಗಳಿಗೆ ವೈನತೇಯನ ಬಲ ತುಂಬಲು ಗುರುವೊಬ್ಬ ಬೇಕೇಬೇಕು. ವಿಶ್ವಾಮಿತ್ರ ಗುರುವಾಗಿ ದೊರೆಯದಿದ್ದರೆ ತಾಟಕೀ ಸಂಹಾರದಂಥ ದುಷ್ಟ ಶಿಕ್ಷಣೆಯ, ಅಹಲ್ಯೋದ್ಧಾರದಂಥ ಶಿಷ್ಟರಕ್ಷಣೆಯ ಛಲ-ಬಲಗಳು ಬಾಲಕ ರಾಮನಿಗೆ ಸಿದ್ಧಿಸುವುದು ಸಾಧ್ಯವಿತ್ತೇ? ನಮ್ಮೊಳಗನ್ನು ಬೆಳಗುವ ಗುರು ಪರಬ್ರಹ್ಮನಲ್ಲದೇ ಮತ್ತೇನು? ಗುರು ಸ್ಮರಣೆಗೆ ಸಮಯಾಸಮಯಗಳಿಲ್ಲ. ಅದಕ್ಕೆಂದೇ ‘ಗುರು ಕರುಣೆಯೆಂಬ ತರಣಿ ಉದಯವಾಗಿ ಪರಿಹಾರವಾಯಿತು ಅಜ್ಞಾನವೆಂಬ ಕತ್ತಲೆಯಿಂದು’ ಎಂತಲೂ, ‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂತಲೂ ದಾಸರು ಹಾಡಿದ್ದು. ತಮ್ಮ ಸಂಗೀತ ಗುರುಗಳನ್ನು ಮನತುಂಬಿ ನೆನೆದು, ಅಕ್ಷರದ ಅಕ್ಷಯ ಕಾಣಿಕೆ ಸಲ್ಲಿಸಿದ್ದಾರೆ ಪೂಜಾ ತಾಯೂರ್ ಅವರು. ‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ ಜನಕರಾಯನಲ್ಲಿ ಚಾಪು ತುಣುಕು ಮಾಡಿದ ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ ಹೀಗೆ ಅಚ್ಚಗನ್ನಡದಲ್ಲಿ ನಾಲ್ಕಾರು ನುಡಿಗಳಲ್ಲಿ ಇಡಿಯ ವಾಲ್ಮೀಕಿ ರಾಮಾಯಣ ನನ್ನಜ್ಜಿ, ನನ್ನವ್ವರ ಬಾಯಲ್ಲಿ ನಲಿದಾಡುತ್ತಿತ್ತು. ಬೆಳಗಾದರೆ ಮತ್ತೆ ಬರಲಿದೆ ಅದೇ ಚೈತ್ತ ಶುದ್ಧ ಹಗಲುನವಮಿ-ಶ್ರೀರಾಮನವಮಿ. ರಾಮ ಮಹಿಮೆಯ, ಕೇಳಿದಷ್ಟು ಸಲವೂ ಹೊಸ ಹೊಸ ಅರ್ಥ ಹೊಳೆಯಿಸುತ್ತಲೇ ಇರುವ ‘ಅಲ್ಲಿ ನೋಡಲು ರಾಮ’ ಎನ್ನುವ ಪುರಂದರ ದಾಸರ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರಸ್ತುತ ಪಡಿಸಿದ್ದಾರೆ ಪೂಜಾ ಅವರು. ಮೈ ನವಿರೇಳಿಸುವ ಸಹಜ-ಸುಂದರ ಶೈಲಿಯ ಜೊತೆಗೆ ನಮ್ಮನ್ನೂ ಹಿಮಾಲಯದ ಬರ್ಫ್ ನಲ್ಲಿ ಸುತ್ತಾಡಿಸುತ್ತಿದ್ದಾರೆ..ಶೇಷನಾಗನ ಅದ್ಭುತ ದರ್ಶನ ಮಾಡಿಸುತ್ತಿದ್ದಾರೆ ಅಮ್ಮ ಪದ್ಮಾವತಮ್ಮನವರು. ಬನ್ನಿ, ಹಿಮಾಲಯದಲ್ಲೊಂದು ಸುತ್ತು ಹೊಡೆದು ‘ಅಮರನಾಥ್ ಬಾಬಾ ಕೀ ಜೈ’ ಎಂದು ಬರೋಣವೇ? ~ ಸಂಪಾದಕಿ

ಪೂಜಾ ತಾಯೂರ್ ಅವರು ಮೂಲತ: ಬೆಂಗಳೂರಿನವರಾಗಿದ್ದು ಕರ್ನಾಟಕೀ ಸಂಗೀತದಲ್ಲಿ ಸುಮಾರು 20 ವರುಷಗಳಿಂದ ತೊಡಗಿಕೊಂಡಿದ್ದು ಹಲವಾರು ಆಲ್ಬಂ ಗಳಲ್ಲಿ ತಮ್ಮ ಕಂಠಸಿರಿಯನ್ನು ಮೆರೆದಿದ್ದಾರೆ. ನೀಡಿದ್ದಾರೆ. ಶ್ರೀ ವಿದ್ಯಾಭೂಷಣರು, ಉಪಾಸನಾ ಮೋಹನ್, ವಿದುಷಿ ಜ್ಯೋತಿ ಮಾ, ವಿದುಷಿ ತಿರುಮಲೆ ಶಾರದೆ ಇತ್ಯಾದಿ ಮಹಾನ್ ಸಂಗೀತಗಾರರ ಶಿಷ್ಯೆಯಾದ ಯೋಗ ಇವರದು. ಇವರಿಗೆ ದೇವರನಾಮ, ದಾಸಸಾಹಿತ್ಯದಲ್ಲಿ ವಿಶೇಷ ಅಭಿರುಚಿಯಿದ್ದು ನಮ್ಮೊಳಗನ್ನು ಕಾಣಲು ಅದರಿಂದ ಸಾಧ್ಯ ಎಂಬ ನಂಬಿಕೆ ಅವರದು.
ತಸ್ಮೈಶ್ರೀಗುರವೇನಮ:
ನಮ್ಮದು ಕೇವಲ ಆರೆಂಟು ತಿಂಗಳ ಒಡನಾಟವಾದರೂ, ಶಾರದಾ ಮೇಡಂ ನನ್ನ ಕಲಿಕೆಯ ಜೀವನ ಮತ್ತು ವೈಯಕ್ತಿಕ ಜೀವನ, ಎರಡರಲ್ಲೂ ತುಂಬಾಪ್ರಭಾವ ಬೀರಿದ ವ್ಯಕ್ತಿ. ನನಗೆ ಇವರ ಪರಿಚಯವಾದದ್ದು ನನ್ನ ಅತ್ತೆ, ಅಂದರೆ ಗಂಡನ ತಾಯಿಯಿಂದ. ಶಾರದಾ ಮೇಡಂ, ಅವರಿಗೂ ಗುರುಗಳು.ಮದುವೆಯಾಗಿ ಗಂಡನ ಮನೆಗೆ ಬಂದ ಕೆಲ ತಿಂಗಳ ಬಳಿಕ, ನನ್ನ ಅತ್ತೆ – ನೀನು ಸಂಗೀತ ಮುಂದುವರಿಸಲೇಬೇಕು. ನಿನಗೆ ನಮ್ಮ ಶಾರದಾ ಮೇಡಂಗು ಒಳ್ಳೆಯ ಗುರು ಎಲ್ಲೂ ಸಿಗುವುದಿಲ್ಲ ಎಂದು ಹೇಳಿ ಒಂದು ದಿನ ಅವರ ಮನೆಗೆ ಕರೆದುಕೊಂಡು ಹೋದರು. ಓದು, ಕೆಲಸದ ಮಧ್ಯೆ senior exam ಮುಗಿಸಿ ಅಲ್ಲಿಗೆ ನಿಲ್ಲಿಸಿದ್ದ ನನಗೆ ಏನೋ ದಿಗಿಲು. ದಾಸವಾಣಿ ಕಾರ್ಯಕ್ರಮಗಳೇನೋ ಕೊಡುತ್ತಿದ್ದೆ. ಸಾಧನೆ ಮಾಡಿರುವವರಿಗೆಹೋಲಿಸಿದರೆ, ಶಾಸ್ತ್ರೀಯ ಸಂಗೀತದಲ್ಲಿ ನಾನು zero ಎಂದರೂ ತಪ್ಪೇನಿಲ್ಲ. ಇವರು ನೋಡಿದರೇ ಮಹಾನ್ ಕಲಾವಿದೆ. ವೀಣೆ, ಹಾಡುಗಾರಿಕೆಎರಡರಲ್ಲೂ ಅತ್ತ್ಯುನ್ನತ ಸಾಧನೆ ಮಾಡಿರುವವರು. ನನಗೆ ಏನಾದರೂ ಹಾಡು ಎಂದು, ಅಥವಾ ಪಠ್ಯಕ್ರಮದಿಂದ ಏನಾದರೂ ಕೇಳಿದರೆ ಏನಪ್ಪಾ ಗತಿ! ಇವರು ನನಗೆ ಪಾಠ ಹೇಳಿಕೊಡಲು ಒಪ್ಪುತ್ತಾರಾ? ಹೀಗೆ ಹಲವಾರು ಯೋಚನೆಗಳ ಮಧ್ಯೆಯೇ ನನ್ನ ಅತ್ತೆ ಹಾಗೂ ಗಂಡನ ಜೊತೆ ಮೇಡಂ ಮನೆಗೆಕಾಲಿಟ್ಟೆ. ಮುಂಚೆಯೇ ಕರೆ ಮಾಡಿ 7.30 ಗಂಟೆಗೆ ಬರುತ್ತೇವೆ ಎಂದು ಹೇಳಿ ಹೋಗಿದ್ದೆವು. ಬಾಗಿಲು ತೆಗೆದರು. ನಗು ತುಂಬಿದ ಅವರ ಮುಖ ನೋಡಿನನಗೆ ಏನೋ ಆನಂದವಾಯಿತು. ಓಹ್, ಮೇಡಂ strict ಅಲ್ಲ ಅನಿಸುತ್ತೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಮಾತಿನ ಮಧ್ಯೆ, ನಾವು ಈ ಹೊತ್ತಿಗೆಬಂದದ್ದು ನಿಮಗೆ ತೊಂದರೆ ಆಯ್ತೋ ಏನೋ ಅಂತ ಹೇಳಿದೆವು. ಮೇಡಂ ಅದಕ್ಕೆ “ತೊಂದರೆ ಕೊಟ್ಟಾಯಿತಲ್ಲ. ಬಿಡಿ” ಎಂದು ನಕ್ಕಿದರು. ಸಾಮಾನ್ಯವಾಗಿ ನಾವು ಇದಕ್ಕೆ “ಅಯ್ಯೋ ಇಲ್ಲ ಬಿಡಿ” ಎಂದು ಹೇಳಿ, ಎಲ್ಲೋ ಮನಸ್ಸಿನೆಲ್ಲೆಡೆ “ಹೌದು” ಎಂದುಕೊಳ್ಳುತ್ತೇವೆ. ಆದರೆ ಮೇಡಂ ಇದ್ದಿದ್ದನ್ನುಇದ್ದ ಹಾಗೆ ಹೇಳಿ ತಮ್ಮ straight forwardness ತೋರಿಸಿಕೊಂಡರು. ನನಗೆ ಇದೂ ತುಂಬಾ ಇಷ್ಟವಾಯಿತು. ಪಾಠ ಹೇಳಿಕೊಡುವಾಗಲೂ ಅಷ್ಟೇ. ಬಹಳ ಸೂಕ್ಷ್ಮವಾಗಿ ಗಮನಿಸಿ, ತಪ್ಪುಗಳನ್ನು straight forward ಆಗಿ ಹೇಳಿ ತಿದ್ದುತ್ತಾರೆ. “ಎಲ್ಲಿ, ಒಂದು ಹಾಡಮ್ಮ” ಎಂದರು. ಮೊದಲೇ ದಿಗಿಲಿದ್ದನನಗೆ ಅಂದುಕೊಂಡ ಕ್ಷಣ ಬಂದೆ ಬಿಡ್ತಲ್ಲಪ್ಪಾ! ಎಂಬ ಯೋಚನೆ. ಒಂದು ದೇವರನಾಮ ಹಾಡಿದೆ. ತಮ್ಮ ಶಿಷ್ಯೆ ಯಾಗಿ ನನ್ನನ್ನು ತೊಗೊಳ್ತರೋಇಲ್ವೋ ಅಂತ ಯೋಚನೆ ಮಾಡಿ ಮುಗಿಸುವಷ್ಟರಲ್ಲಿ “ಆಯ್ತಮ್ಮ. ನಾನು ಹೇಳ್ಕೊಡ್ತೀನಿ. ಆದರೆ ಚೆನ್ನಾಗಿ ಅಭ್ಯಾಸ ಮಾಡ್ಬೇಕು” ಅಂತ ಹೇಳಿದರು. ನನಗೆ ಕುಣಿದಾಡುವಷ್ಟು ಖುಷಿ. ಪಾಠ ಶುರುವಾಯಿತು. ಕಲಿಯಲು ಆರಂಭಿಸಿದೆ. ಸಂಗೀತ ಪಾಠದ ಜೊತೆ ಜೀವನದ ಎಷ್ಟೋ ಪಾಠಗಳನ್ನು ಮೇಡಂ ನನಗೆ ಹೇಳಿಕೊಟ್ಟರು. ನಾನುಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ company ಅಲ್ಲಿ ತೊಂದರೆ ಅನುಭವಿಸುತ್ತಿದ್ದ ನನಗೆ ಬಹಳಷ್ಟು ನೈತಿಕ ಬೆಂಬಲ ನೀಡಿದವರು ಶಾರದಾ ಮೇಡಂ. ನಿನಗೆ ಹತ್ತಿರವಿರುವ ಒಳ್ಳೆಯ, ಆರಾಮಾದ ಕೆಲಸ ಸಿಕ್ಕೇ ಸಿಗತ್ತೆ ಅಂತ ಹೇಳಿದ್ರು. ಅದು ನಿಜವಾಗಿದೆ, ಇಂದು. ಅವರು ಏನೇ ಹೇಳಿದರೂ ಒಳ್ಳೆಯಮನಸ್ಸಿನಿಂದ ಹೇಳ್ತಾರೆ.ಅದು ಆಗೇ ಆಗತ್ತೆ ಅನ್ನೋದು ನನ್ನ ನಂಬಿಕೆ. ನನಗೆ ಹೇಗೆ ಕಲಿಯಬೇಕು, ಹಾಗೆಯೇ ಮತ್ತೊಬ್ಬರಿಗೆ ಹೇಗೆ ಹೇಳಿಕೊಡಬೇಕು ಎಂದು ಹಂತ ಹಂತವಾಗಿ ಹೇಳಿಕೊಟ್ಟರು. ಮೇಡಂ ಇಂದ ಹಲವಾರುವಿಷಯಗಳನ್ನು ತಿಳಿದುಕೊಂಡೆ. ಕೇವಲ ಹಾಡಿದರೆ ಸಾಲದು. ತಕ್ಕ ಮಟ್ಟಿಗೆ theory ಕೂಡ ತಿಳಿದಿರಬೇಕು ಎಂದು ಅವರ ಭಾವನೆ. ಇಂತಹ ಒಳ್ಳೆಯಮಾರ್ಗದರ್ಶನ ಕೊಡುವ ಗುರು ಈಗಿನ ದಿನಗಳಲ್ಲಿ ಸಿಗುವುದು ಅಸಾಧ್ಯದ ಹತ್ತಿರವೇ! ಕೇಳಿ ಅಚ್ಚರಿ ಆಗಬಹುದು.. ಮೇಡಂ ತಾವು ಮಾಡುವಪಾಠಕ್ಕೆ fees ತೆಗೆದುಕೊಳ್ಳುವುದಿಲ್ಲ. ವಿದ್ಯೆ ಕಲಿಯಿರಿ. ಅಷ್ಟೇ ಸಾಕು ಅನ್ನುತ್ತಾರೆ. ಅವರು ಒಂದು knowledge bank. ಏನು ಕೇಳಿದರೂ, ಪುಸ್ತಕತೆಗೆದು ಹಾಡುವ ನನಗೆ, ಇವರು ಈ ವಯಸ್ಸಿನಲ್ಲೂ ಏನು ಕೇಳಿದರೂ ಫಟ್ ಅಂತ ಹಾಡಲು ಶುರು ಮಾಡ್ತಾರಲ್ಲಪ್ಪ!! ಎಂದು ಅಚ್ಚರಿ ಆಗಿರುವಸನ್ನಿವೇಶಗಳು ಬಹಳ ಇವೆ. ಅವರ ನೆನಪಿನ ಶಕ್ತಿಗೆ ಒಂದು ದೊಡ್ಡ ನಮಸ್ಕಾರ! ಹಾಗೆಯೇ, ಅವರಲ್ಲಿರುವ ಜ್ಞಾನ ಎಲ್ಲರಿಗೂ ಹರಡಬೇಕು ಎಂಬಮನೋಭಾವನೆ ಇರುವ ಕೆಲವು ವ್ಯಕ್ತಿಗಳಲ್ಲಿ ಮೇಡಂ ಒಬ್ಬರು.ಒಮ್ಮೆ ಶಿವಮೊಗ್ಗದಲ್ಲಿ ಒಂದು ಸ್ಪರ್ಧೆ ಉಂಟು ಎಂದು ನನಗೆ ಸಿದ್ಧತೆಯನ್ನು ಸ್ವಯಂ ಅವರೇ ಮಾಡಿಸಿದ್ದರು. ಎಷ್ಟೋ ಹಾಡುಗಳಿಗೆ ರಾಗ ಹಾಕಿ, ಸ್ವರದ ಸಮೇತ ಹೇಳಿಕೊಟ್ಟರು. ಒಂದು ಸ್ಪರ್ಧೆ ಉಂಟು, ನೀನು ತಯಾರಿ ಮಾಡಿಕೋ ಎಂದು ಹೇಳಿ ಸುಮ್ಮನಾಗಬಹುದಿತ್ತು. ತಾವೇ ಆಸಕ್ತಿ ತೋರಿಸಿನನಗೆ ಅಷ್ಟೂ ತಯಾರಿ ಮಾಡಿಸಿದರು. ನಾನು ಆ ಸ್ಪರ್ಧೆಯಲ್ಲಿ ಗೆಲ್ಲಲಿಲ್ಲ. ಆದರೆ ನನಗೆ ಅಲ್ಲಿ ಸಿಕ್ಕ ಬಹುಮಾನ ಏನೆಂದರೆ – ಮೇಡಂ ಗೆ ಗೊತ್ತಿರುವಸಂಸ್ಥೆಯೇ ಸ್ಪರ್ಧೆಯ ಆಯೋಜಕರು. ಅವರು ಮಾಡುತ್ತಿರುವ ಈ ಒಳ್ಳೆಯ ಕೆಲಸ ನೋಡಿ ನನ್ನ ಜೊತೆ ತಮ್ಮ ಕಾಣಿಕೆಯಾಗಿ ಒಂದು cheque ಕಳಿಸಿದರು. ಅಲ್ಲಿ, ನಾನು Prof. ಟಿ. ಶಾರದಾ ಅವರ ಶಿಷ್ಯೆ. ನಿಮಗಾಗಿ ಇದನ್ನು ಕಳಿಸಿದ್ದಾರೆ ಎಂದು ಹೇಳಿದ ಮರು ಕ್ಷಣ ನನಗೆ ಸಿಕ್ಕ ಮರ್ಯಾದೆವರ್ಣಿಸಲು ಸಾಧ್ಯವಿಲ್ಲ!! ಅನುಭವಿಸಿಯೇ ನೋಡಬೇಕು! ಬೇರೆ ಎಲ್ಲೆಡೆಯೂ ಅಷ್ಟೇ. ಟಿ. ಶಾರದಾ ಅವರ ಶಿಷ್ಯೆ ಎಂದರೆ ಮರ್ಯಾದೆಯೇ ಬೇರೆ. ಅಷ್ಟು ದೊಡ್ಡ ಹೆಸರು ನಮ್ಮ ಮೇಡಂನದ್ದು.ಸಂಗೀತ ಕ್ಷೇತ್ರದಲ್ಲಿ ಅವರಿಗೆ ಗೊತ್ತಿಲ್ಲದ ವ್ಯಕ್ತಿ ಇಲ್ಲ. ಎಲ್ಲರಿಗು ಅವರು ಯಾರು ಎಂದು ಗೊತ್ತು. ಅವರ ಒಂದು phone call ಸಾಕು. ನಮಗೆ ಏನುಬೇಕೋ ಅದು ಆಗುವುದಕ್ಕೆ. ಆದರೆ, ಮೇಡಂ ಎಂದೂ ಅದನ್ನು ಪ್ರೋತ್ಸಾಹಿಸಿಲ್ಲ. ಗೆದ್ದರೆ ಒಳ್ಳೆಯದು. ಗೆಲ್ಲದಿದ್ದರೆ ಅದು ಒಂದು ಅನುಭವ, ಪಾಠಎಂದು ನನಗೆ ಹೇಳಿಕೊಟ್ಟರು. ಅಯ್ಯೋ. ನನಗೂ ಯಾರಾದರೂ ಗೊತ್ತಿದ್ದರೆ ನಾನು ಇಲ್ಲಿ pass / ಗೆಲ್ಲುತ್ತಿದ್ದೆ ಎಂಬ ಮನೋಭಾವನೆ ಇದ್ದ ನನಗೆ, ಭಾಗವಹಿಸಿದ್ದು ಮುಖ್ಯ. ಗೆಲ್ಲುವುದು ಬಿಡಿವುದು ಮುಖ್ಯವಲ್ಲ ಎಂದು ಮೇಡಂ ತೋರಿಸಿಕೊಟ್ಟರು. ಸಂಗೀತ ಒಂದು ಸುಂದರ ಅನುಭವ. ವ್ಯಾಪಾರವಲ್ಲ ಎಂದು ಮೇಡಂನಿಂದ ಕಲಿತೆ.ಜೊತೆಯಲ್ಲಿ, ಮೇಡಂ ಹಾಗೆ ನನ್ನ ಗೆಳೆತನ ಶುರುವಾಗಿತ್ತು. ಮೇಡಂ ತುಂಬಾ friendly. ಸದಾ ಹಸನ್ಮುಖಿ. ನೋಡಲು ಬಹಳ ಸುಂದರವಾಗಿದ್ದರೆ. ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಅವರ ಮನೆ ಬಾಗಿಲು ತಟ್ಟಬಹುದು. ಸದಾ ಸಿದ್ಧ ನಮ್ಮ ಮೇಡಂ. ಆದರೆ, ನರೇಂದ್ರ ಮೋದಿ ಇದ್ದರೆ, ನಮಗೆಬೇರೆ ಸಮಯ ನಿರ್ಧರಿಸುತ್ತಾರೆ. ಏನಪ್ಪಾ ಇದು ಅಂದುಕೊಂಡರ?? ಮೇಡಂ ನರೇಂದ್ರ ಮೋದಿ ಅವರ fan. ಅವರ man ki baat ತಪ್ಪದೆಕೇಳಿಸಿಕೊಳ್ಳುತ್ತಾರೆ.ನನಗೆ ದಿನೇ ದಿನೇ ಅವರ ಮೇಲಿದ್ದ ಭಯ ಹೋಗಿ ಆತ್ಮೀಯತೆ ಹೆಚ್ಚುತ್ತಾ ಹೋಯಿತು. ಅಷ್ಟು ಸಾಧನೆ ಮಾಡಿದರೂ, ಮೇಡಂ ಬಹಳ down to earth. ನನ್ನ ಎಷ್ಟೋ ವೈಯಕ್ತಿಕ ವಿಷಯಗಳನ್ನು ಅವರ ಬಳಿ ಚರ್ಚಿಸುತ್ತೇನೆ. ಅವರ advice ಇಂದ ಮನಸ್ಸಿಗೆ ಎಷ್ಟೋ ನೆಮ್ಮದಿ. ಹೆಣ್ಣು ಮಕ್ಕಳುindependent ಆಗಿ ಇರಬೇಕು. ಕೆಲಸ ಮಾಡಬೇಕಮ್ಮ ಅನ್ನುತ್ತಾರೆ. ಅವರು ಏನು ಹೇಳುತ್ತಾರೋ ಅದು ಆಗೇ ಆಗುತ್ತದೆ. ಯಾವಾಗಲೂಒಳ್ಳೆಯದನ್ನೇ ಬಯಸುವ ಇಂತಹ ವ್ಯಕ್ತಿ, ಲಕ್ಷಕ್ಕೆ ಒಬ್ಬರು. ಅಂತಹ ಲಕ್ಷಕ್ಕೆ ಒಬ್ಬರು ನನಗೆ ಪರಿಚಯವಾಗಿರುವುದು ನನ್ನ ಭಾಗ್ಯವಲ್ಲದೆ ಮತ್ತೇನು?
~ ಪೂಜಾ ತಾಯೂರ್
ನನ್ನಮ್ಮನ ಪ್ರವಾಸ ಕಥನ – ಶ್ರೀ ಅಮರನಾಥ್ ಯಾತ್ರೆ
(ಮುಂದುವರಿಕೆ) ಚಂದನವಾಡಿಯಲ್ಲಿ ಅಂಗಡಿಗಳು, ಹೋಟೆಲ್ಗಳು ಎಲ್ಲವೂ ಇವೆ. ಅರ್ಧಗಂಟೆಯ ನಮ್ಮ ವಿಶ್ರಾಂತಿ ಮತ್ತು ಕುದುರೆಗಳಿಗೆ ಆಹಾರ ಕೊಟ್ಟು ಅವು ಸುಧಾರಿಸಿಕೊಂಡ ನಂತರ ಮತ್ತೆ ಹೊರಟೆವು. ಮುಂದಿನ ದಾರಿ ಪಿಸುಘಾಟ್. ಇದು ಕಠಿಣವಾದ ದಾರಿ. ಜೈ ಅಮರನಾಥ್ ಎಂಬ ಶಬ್ದವೇ ನಮಗೆ ಧೈರ್ಯವನ್ನು ನೀಡುತ್ತಿತ್ತು. ಕಿರಿದಾದ ಕೊರಕುಲುಗಳಲ್ಲಿ, ಇಳಿಜಾರುಗಳಲ್ಲಿ ಬರುವಾಗ ಜೀವದ ಹಂಗು ತೊರೆದಿದ್ದೆವು. ಆಗ ನಡೆದುಕೊಂಡು ಬರುವವರಿಗೆ ಆಯಾಸವೇ ಹೊರತು ಅಪಾಯವಿಲ್ಲವೆನಿಸಿತು. ಪಿಸುಘಾಟ್ ದಾಟಿ ಒಂದೆಡೆ ನಿಂತೆವು. ಅಲ್ಲಿ ಮೊದಲೇ ನಡೆದು ಬಂದವರು ನಮ್ಮವರು ಮೂವರು ಸಿಕ್ಕರು. ಏಕಾದಶಿ ಎಂದು ಒಂದಿಬ್ಬರು ತಿನ್ನಲು ಏನೂ ಬೇಡವೆಂದರು. ನಾನು ರಾಗಿ ಹುರಿಟ್ಟು ಕಲೆಸಿ ತಿಂದೆನು. ಅಲ್ಲಿಂದ ಮುಂದೆ ಒಂದು ನದಿಯನ್ನು ದಾಟಿ ಗುಡ್ಡವನ್ನು ಹತ್ತಿ, ಇಳಿದು ನಡೆದು ದಾಟಿದೆವು. ಮತ್ತೆ ಕುದುರೆ ಹತ್ತಿ ಪಯಣ. ಅಷ್ಟುಹೊತ್ತಿಗೆ ನಾವು ಹಿಮಾಲಯದ ಗರ್ಭದೊಳಗಿದ್ದೆವು. ಎಲ್ಲೆಲ್ಲೂ ಹಿಮ ತುಂಬಿದ ಶಿಖರಗಳು. ಮುಂದೆ ಮಹಾಪಶುಪತ್ತೇರಿ ಘಾಟ್ ಗೆ ಬಂದೆವು. ಇಲ್ಲಿ ಕೂಡ ಹೋಟೆಲ್, ಮೈಕೈ ಕಾಯಿಸಲು ಕೆಂಡ ಎಲ್ಲವೂ ಸಿಗುತ್ತಿತ್ತು. ನಾವು ಇಳಿಯಲಿಲ್ಲ. ಸಾಗಿದ ನಮ್ಮ ಪಯಣದಲ್ಲಿ ಮಹಾಗುಣಾಸುಘಾಟ್ ಅತಿ ಎತ್ತರವಾದುದು- ಹದಿನಾಲ್ಕೂವರೆ ಸಾವಿರ ಅಡಿಗಳ ಎತ್ತರ. ಎಲ್ಲೆಲ್ಲೂ ಹಿಮ. ಮುಂದೆ ಪಯಣಿಸುತ್ತಾ ಸಂಜೆಯ ವೇಳೆಗೆ ಪ್ರಸಿದ್ಧ ಶೇಷನಾಗ್ ಸರೋವರದ ಬಳಿಗೆ ಬಂದೆವು. ಧನ್ಯೋಸ್ಮಿ. ಶೆರ್ಪನೂ ಕೂಡ ಜೈ ಶೇಷನಾಗ್ ಸರೋವರ್ ಕೀ ಜೈ ಎಂದು ಕೂಗಿ ಹೇಳಿದನು. ***** ೮ - ಹರ ಕೊಲ್ಲಲ್ ಪರ ಕಾಯ್ವನೇ? ಶೇಷನಾಗ್ ಸರೋವರದ ದೃಶ್ಯ ಹಿಮಾಲಯದಲ್ಲೇ ಅತಿ ಮನೋಹರವಾದುದೆಂದು ಬಲ್ಲವರು ಹೇಳುವರು. ಮಹಾಶಿವನು ಗೌರಿ, ಗಣೇಶರನ್ನು ಪಹಲ್ ಗಾವ್ ನಲ್ಲಿ ಬಿಟ್ಟು ಈ ಸ್ಥಳದಲ್ಲಿ ಶೇಷನನ್ನು ತೊರೆದು ಒಂಟಿಯಾಗಿ ತಪಃಗೈಯಲು ಗುಹೆಗೆ ಹೋದನೆಂದು ಪ್ರತೀತಿ. ಅಲ್ಲಿ ಬಿದ್ದ ಐದು ಹೆಡೆಗಳ ಶೇಷನು ಐದು ಮಂಜುಬೆಟ್ಟಗಳಾಗಿ ಮಾರ್ಪಾಟಾಗಿದೆ. ಈ ಐದು ಬೆಟ್ಟಗಳ ನಡುವೆ ಇರುವ ಶೇಷನಾಗ ಸರೋವರವು ನೀಲಿಹಸಿರು ನೀರಿನಿಂದ, ಸ್ಫಟಿಕ-ಪಚ್ಚೆ ಹರಡಿದ ಅಸದಳ ಸೌಂದರ್ಯದಿಂದ ಕಂಗೊಳಿಸುತ್ತದೆ. ನಾನು ಇಂತಹ ದೃಶ್ಯವನ್ನು ಚಿತ್ರಗಳಲ್ಲಿ ನೋಡಿದ್ದೆ. ಆ ಕ್ಷಣದಲ್ಲಿ ನಾನೆಂಬುದು ಮರೆತು ಈ ದೈವೀಕ ಸೌಂದರ್ಯದಲ್ಲಿದ್ದು ಅಂತರ್ಗತಳಾಗಿದ್ದೆ. ನಮ್ಮ ದಾರಿ ಎತ್ತರದಲ್ಲಿದ್ದುದರಿಂದ ಸರೋವರದ ನೋಟ ಸ್ಪಷ್ಟವಾಗಿ ಕಾಣುತ್ತಿತ್ತು. ಹತ್ತಿರ ಹೋಗುವ ಮಾತೇ ಇಲ್ಲ! ಈ ಶೇಷನಾಗ್ ಸರೋವರದಿಂದಲೇ ಲಂಬೋದರಿ ನದಿಯು ಹುಟ್ಟುವುದು. ಇಲ್ಲಿಯವರೆಗಿನ ಪ್ರಯಾಣದಲ್ಲಿ ಒಮ್ಮೊಮ್ಮೆ ನದಿ ಕಾಣುತ್ತಿತ್ತು. ಒಮ್ಮೊಮ್ಮೆ ಮಂಜಿನಲ್ಲಿ ಮುಚ್ಚಿರುತ್ತಿತ್ತು. ಒಂದು ಕಡೆ ದಾರಿಗೆ ದೂರದಲ್ಲಿ ಮಂಜಿನಿಂದಾದ ಎರಡು ದೊಡ್ಡ ಹೊಂಡಗಳಿದ್ದವು. ಅವುಗಳಿಂದ ನೀರು ಧುಮುಕುತ್ತಿತ್ತು. ಅದು ಲಂಬೋದರಿ ನದಿ ಎಂದಾಗ ನಮಗೆ ಆಶ್ಚರ್ಯದೊಡನೆ ಭಯವೂ ಆಯಿತು. ಶೇಷನಾಗ್ ಸರೋವರದ ದಡದಲ್ಲಿ ಟೆಂಟುಗಳಿದ್ದವು. ನಾವು ಹೋಗಿ ನಮಗೆ ಶೆರ್ಪಾ ಗೊತ್ತು ಮಾಡಿದ್ದ ಟೆಂಟಿನಲ್ಲಿಳಿದೆವು. ಅಷ್ಟುಹೊತ್ತಿಗೆ ಎಲ್ ಕೆ ರವರು ತುಂಬಾ ಸುಸ್ತಾಗಿದ್ದರು. ಆದರೆ ಏನನ್ನೂ ತಿನ್ನುವುದಿಲ್ಲವೆಂದರು. ನಾವೆಲ್ಲಾ ಕಾಲಿನ ಶೂಸ್, ಸಾಕ್ಸ್, ತಲೆಯ ಟೋಪಿ, ಶಾಲುಗಳನ್ನು ಬಿಚ್ಚಿ ಕಾಲು ಚಾಚಿದೆವು. ನಡೆದು ಬರುವವರಿಗಾಗಿ ಬಿಸಿನೀರು, ಹಾಸಿಗೆಗಳನ್ನು ಹಾಸಿ ರೆಡಿ ಮಾಡಿದ್ದೆವು. ನೆಲದ ಮೇಲೆ ಮೊದಲು ರೈನ್ ಕೋಟುಗಳನ್ನು, ಪ್ಲಾಸ್ಟಿಕ್ ಶೀಟುಗಳನ್ನು ಹಾಕಿ ಆನಂತರ ಕಂಬಳಿಗಳನ್ನು ಹರಡಿದ್ದೆವು. ನಮ್ಮ ಎಲ್ಲಾ ವಸ್ತುಗಳನ್ನು ನಮ್ಮ ದೇಹಕ್ಕೆ ತಗುಲಿದಂತೆ ಇಟ್ಟಿದ್ದೆವು. ನಮ್ಮ ಟೆಂಟಿನಿಂದ ಸರೋವರದ ನೋಟ ಕಾಣುತ್ತಿತ್ತು. ಭಾಗ್ಯವಿದು ಅಲ್ಲವೇ! ನನಗೇನೂ ಆಯಾಸವಾಗಿರಲಿಲ್ಲ. ಸರೋವರವನ್ನು ನೋಡುತ್ತಾ ಇದ್ದೆ. ಅಲ್ಲಿ ನಮಗೆ ಕಲ್ಕತ್ತಾದ ದಂಪತಿಗಳು ಇಬ್ಬರು ದೊರೆತರು. ಅವರು ಹಿಂದಿನ ದಿನ ಗುಹೆಗೆ ಹೋಗಿ ಲಿಂಗದರ್ಶನ ಮಾಡಿದವರಲ್ಲಿ ಮೊದಲಿಗರು. ಮುಂದಿನ ದಾರಿ ಬಹಳ ಕಠಿಣ ಹಾಗೂ ಅಪಾರ ಮಂಜಿನಿಂದ ಕೂಡಿದೆ. ಆದರೆ ದರ್ಶನ ಭಾಗ್ಯ ಎಲ್ಲರಿಗೂ ದೊರಕುವುದೆಂದು ಹೇಳಿದರು. ರಾತ್ರಿ ಎಂಟು ಗಂಟೆಯ ವೇಳೆಗೆ ನಡೆದು ಬಂದವರು ಬಂದು ನಮ್ಮನ್ನು ಸೇರಿದರು. ಎಲ್ಲರಿಗೂ ಅದೂಇದೂ ಮಾತನಾಡಲೂ ಆಗದಷ್ಟು ಚಳಿ, ಆಯಾಸ. ಇಷ್ಟು ಹೊತ್ತಿಗೆ ನಮಗೆ ಹಸಿವು, ಬಾಯಾರಿಕೆ, ಒಂದು-ಎರಡು ಎಲ್ಲವೂ ಬಂದಾಗಿತ್ತು. ರಾತ್ರಿ ೧೧ ಗಂಟೆ ವೇಳೆಗೆ ನಮ್ಮ ಟೆಂಟು ಬೀಳುವಂತಾಗಿ ಭಯವಾಗಿ ಶ್ರೀನಿವಾಸರು ಹೋಗಿ ಶೆರ್ಪಾನನ್ನು ಕರೆತಂದರು. ನಾವು ಮಿಕ್ಕವರು ಟೆಂಟಿನ ಮಧ್ಯದ ಕಂಬ ಕುಸಿಯದಿರಲೆಂದು ಭದ್ರವಾಗಿ ಹಿಡಿದಿದ್ದೆವು. ಹತ್ತು ನಿಮಿಷಗಳೊಳಗೆ ನಮ್ಮನ್ನು ಪಕ್ಕದ ಟೆಂಟಿಗೆ ಕರೆತಂದರು. ಆದರೆ ಹೊರಗೆ ಚಳಿಯಲ್ಲಿ ಹೋಗಿಬಂದು ಮಾಡಿದ ಶ್ರೀನಿವಾಸರ ದೇಹ ಮರಗಟ್ಟಿದಂತಾಗಿ ಚಿಂತೆಯಾಯಿತು. ರಮೇಶರು ಅವರಿಗೆ ಉಪಚಾರ ಮಾಡಿ ತ್ರಾಣ ಬರುವಂತೆ ಮಾಡಿದರು. ಈ ಶೇಷನಾಗ್ ಪ್ರಾಂತ್ಯದಲ್ಲಿ ಗಾಳಿಯು (ಅಥವಾ ಆಮ್ಲಜನಕ) ವಿರಳವಾಗಿತ್ತು. ಉಸಿರಾಡಲು ಒಮ್ಮೊಮ್ಮೆ ಕಷ್ಟವೆನಿಸತೊಡಗಿತು. ಇಲ್ಲಿ ಶೇಷನು ತನ್ನನ್ನು ಬಿಟ್ಟು ಹೋದ ಮಹಾಶಿವನ ಮೇಲಿನ ಕೋಪವನ್ನು ತೋರಿಸದೆ ಬಿಡನು ಎನ್ನುವರು. ಇಲ್ಲಿಯವರೆಗೆ ಬಂದು ಆಗೊಲ್ಲಾ ಎಂದು ಹಿಂದಿರುಗುವವರು ಬಹಳ ಮಂದಿ. ನಾವೂ ಅಂತಹವರನ್ನು ಮಾರ್ಗಮಧ್ಯದಲ್ಲಿ ನೋಡಿ, ನಮಗೆ ದರ್ಶನ ಭಾಗ್ಯವು ದೊರಕಲೆಂದು ಆ ಶಿವನನ್ನೇ ಧ್ಯಾನಿಸಿ ಮನದಲ್ಲೇ ಪ್ರಾರ್ಥಿಸುತ್ತಿದ್ದೆವು. ಅಂದು ರಾತ್ರಿ ಕಳೆದು ಬೆಳಗಾದಾಗ ನಮಗೆ ಇಂದು ಎಂಟನೇ ತಾರೀಕು, ದರ್ಶನದ ದಿನವೆಂದು ಖುಷಿ, ಹುರುಪು. ನೀರು ಮುಟ್ಟುವಂತಿರಲಿಲ್ಲ ಅಷ್ಟು ಕೊರೆತ. ಬಿಸಿನೀರು ಸಿಗಲಿಲ್ಲ. ಹೇಗೋ ಬಾಯಿ, ಮುಖ ತೊಳೆದು ಒಗೆದ ಶುಭ್ರ ಬಟ್ಟೆಗಳನ್ನುಟ್ಟು ಹೊರಟೆವು. ***** ಶೇಷನಾಗ್ ನಿಂದ ಬರೀ ಹಿಮ ಮುಸುಕಿದ ದಾರಿ. ಅದರ ಮೇಲೆ ಕುದುರೆಗಳು ನಡೆಯುವಾಗ ನಮಗೆ ಬಹಳ ಭಯವಾಗುತ್ತಿತ್ತು. ನಾವು ಕ್ರಮಿಸಬೇಕಿದ್ದ ೧೨ ಮೈಲಿಗಳಲ್ಲಿ ೮-೯ ಮೈಲಿಗಳಂತೂ ದಪ್ಪ ಹಿಮವಿದ್ದ ಮಂಜಿನ ದಾರಿ. ಎದ್ದುಬಿದ್ದು ಹೋಗುತ್ತಿದ್ದ ಕುದುರೆಗಳ ಪಾಡು ಅಯ್ಯೋ ಎನಿಸುವಂತಿತ್ತು. ಪಹಲ್ ಗಾವ್ ನಲ್ಲಿ ದೂರದಲ್ಲಿ ಆಕಾಶಕ್ಕೆ ಏಕವಾದಂತೆ ಇದ್ದ ಹಿಮಪರ್ವತಗಳ ನಡುವೆಯೇ ಈಗ ನಾವಿದ್ದೇವೆಂದು ತಿಳಿದು ಆಶ್ಚರ್ಯವಾಯಿತು. ಸಂತೋಷವೂ ಆಯಿತು. ಒಂದೆಡೆ ಅತಿ ಎತ್ತರದ ಪುಟ್ಟದಾರಿಯಿದ್ದು, ಯಾತ್ರಿಗಳು ಕಾಣಿಸದೆ ಬರಿಯೆ ಜೈ ಅಮರನಾಥ್ ಎಂಬ ಧ್ವನಿಯು ಮಾತ್ರ ಕೇಳಿಬರುತ್ತಿತ್ತು. ಸುಮಾರು ೧೧.೩೦ ರ ವೇಳೆಗೆ ಪಂಚತರಣಿಗೆ ಬಂದಾಗ ನಿರಾಳವಾಯಿತು. ಪಂಚತರಣಿಯಿಂದ ಸ್ವಲ್ಪ ದೂರದವರೆಗೆ ಬಯಲುಪ್ರದೇಶ. ಇಲ್ಲಿ ಐದು ನದಿಗಳು ಬಂದು ಸೇರುವುದು ವಿಶೇಷ. ಟೆಂಟಿನಲ್ಲಿ ತಂಗಿದ್ದು ಸ್ವಲ್ಪ ಏನೋ ಒಂದಿಷ್ಟು ಆಹಾರ ತಿಂದೆವು. ಅರ್ಧ ಗಂಟೆಯ ನಂತರ ಹೊರಟಾಗ ಇಲ್ಲಿಂದ ಮುಂದೆ ದಾರಿ ಅಷ್ಟು ಕಠಿಣವಿಲ್ಲ, ಮಂಜು ಕೂಡ ಕಡಿಮೆ ಎಂದು ಹೇಳಿ ನಮ್ಮ ಶೆರ್ಪಾ ಸಮಾಧಾನ ಮಾಡಿದನು. ಅಷ್ಟುಹೊತ್ತಿಗೆ ಹಿಂದಿನ ದಾರಿಯಲ್ಲಿ ಬಿದ್ದು ನೊಂದಿದ್ದ ಸುಬ್ಬಮ್ಮನವರ ಕೈ ಮುರಿದಂತೆ ಕಂಡು ಊದಿತ್ತು. ನೋವು, ಭಯದಿಂದ ಒದ್ದಾಡುತ್ತಿದ್ದರು. ಎಲ್ ಕೆ ರವರ ಆರೋಗ್ಯವಂತೂ ತೀರಾ ಹದಗೆಟ್ಟಿತ್ತು. ನಡೆದು ಬರುತ್ತಿದ್ದ ಆ ಮೂರು ಮಂದಿಯ ಪಾಡು ಹೇಗೋ ಎಂದೆನಿಸುತ್ತಿತ್ತು. ನಾವೆಲ್ಲರೂ ಪ್ರಕೃತಿಯ ಸುಂದರ ಮತ್ತು ಭಯಂಕರ ರೂಪಗಳೆರಡನ್ನೂ ಕಂಡಿದ್ದೆವು. ದೇವರಧ್ಯಾನ ಮಾತ್ರ ನಮ್ಮ ಮಂತ್ರವಾಗಿತ್ತು. ಅದರಿಂದ ನನ್ನ ಮನಸ್ಸಿಗೆ ಸಮಾಧಾನವಾಗಿತ್ತು. ಅಂದು ಒಂದೂವರೆ ಗಂಟೆಯ ವೇಳೆಗೆ ಒಂದು ಕಿಮೀ ದೂರದಿಂದಲೇ ಗುಹೆಯನ್ನು ಕಂಡಾಗ ಎಲ್ಲರ ಕಣ್ಣಲ್ಲೂ ನೀರು ಬಂದಿತ್ತು. ಆ ಭವ್ಯವಾದ ಹಿಮಗಲ್ಲಿನ ಗುಹೆಯನ್ನು ಕಂಡು ನನಗೆ ಕುವೆಂಪುರವರು ಹೇಳಿದ “ಪ್ರಕೃತಿಯ ಆರಾಧನೆ ಪರಮನ ಆರಾಧನೆ ಮತ್ತು ಮುಕ್ತಿಯ ಸಾಧನೆ” ಎಂಬ ಮಾತು ನೆನಪಿಗೆ ಬಂದಿತು. ಎರಡೂಕಾಲು ಗಂಟೆಗೆಲ್ಲಾ ನಾವು ಗುಹೆಯನ್ನು ತಲುಪಿದೆವು. ಶ್ರೀ ಅಮರನಾಥ್ ಗುಹೆಯು ಬೆಟ್ಟದ ಮಧ್ಯಭಾಗದಲ್ಲಿದೆ. ಹತ್ತಲು ಮಾನವನಿರ್ಮಿತ ಸುಮಾರು ೪೦ ಮೆಟ್ಟಿಲುಗಳಿವೆ. ಹತ್ತಿ ತಲುಪಿದಾಗ ಕಂಡಿದ್ದು ಇದು ಸಹಜವಾಗಿ ಆಗಿರುವ ಪ್ರಕೃತಿನಿರ್ಮಿತ ಗುಹೆ. ಸುಮಾರು ೧೫೦ ಅಡಿ ಅಗಲ, ೮೦ ಅಡಿ ಎತ್ತರವಿರುವ ಗುಹೆಯಲ್ಲಿ ಮೂರು ಹಂತಗಳಿವೆ. ಮೊದಲ ಹಂತವು ಒದ್ದೆಯಾಗಿದೆ. ಚಪ್ಪಲಿಗಳನ್ನು, ಬೂಟು-ಶೂಸ್ ಗಳನ್ನು ಅಲ್ಲಿಯೇ ಬಿಚ್ಚಿಟ್ಟು ೨ ರೂ ಬಾಡಿಗೆಗೆ ಮರದ ಚಪ್ಪಲಿಗಳನ್ನು ಪಡೆದು ಹಾಕಿಕೊಂಡು ಹೊರಡಬೇಕು. ಎರಡು ಬಾಗಿಲು ತರದ ದ್ವಾರಪ್ರವೇಶವಿದೆ. ಅವುಗಳ ಮೂಲಕ ಒಳಹೊಕ್ಕರೆ ನೀರು ನಿಂತಿರುವ (ಪಾದ ಮುಳುಗುವಷ್ಟು) ಎರಡನೇ ಹಂತವನ್ನು ಸೇರುತ್ತೇವೆ. ಇದು ವಿಶಾಲವಾಗಿದೆ. ಇಲ್ಲಿಂದ ನಮಗೆ ಭಗವಂತನ ದರ್ಶನವಾಗುವುದು. ಮೂರನೇ ಹಂತವು ೪-೫ ಅಡಿ ಎತ್ತರದ ಜಗುಲಿ. ಇದು ಗುಹೆಯ ಒಂದು ಕೊನೆ ಪಾರ್ಶ್ವದಲ್ಲಿದೆ. ಆ ಜಗುಲಿಯ ಬಲಮೂಲೆಯಲ್ಲಿ ಹಿಮದ ಲಿಂಗವೂ, ಎಡಮೂಲೆಯಲ್ಲಿ ಪಾರ್ವತಿ ಅಮ್ಮನವರೂ ನಡುವೆ ಗಣೇಶನೂ ಇದ್ದಾರೆ. ಪಾರ್ವತಿಯು ಲಿಂಗಾಕಾರದಲ್ಲಿದ್ದು ೩ ಅಡಿಗಳಷ್ಟು ಮುಂದೆ ಸೀರೆಯ ನೆರಿಗೆ ಹರಡಿದಂತೆ ಮಂಜು ಪದರಗಳಿವೆ. ಗಣೇಶನು ಸರಿಯಾದ ಆಕೃತಿಯಲ್ಲಿ ಇನ್ನೂ ಮೂಡುತ್ತಿದ್ದನು. ಬಲಮೂಲೆಯಲ್ಲಿ ಭವ್ಯವಾದ ಹಿಮದ ಲಿಂಗವು ಬೆಳೆದಿತ್ತು. ಗುಹೆಯ ಮೇಲಿನಿಂದ ಅಮರಗಂಗೆ ನದಿಯ ನೀರು ತೊಟ್ಟಿಕ್ಕುತ್ತಿರುತ್ತದೆ. ಅಮರಗಂಗಾ ನದಿಯು ಗುಹೆಯ ಬಳಿಯಿಂದ ಹರಿದು ಶೇಷನಾಗ್ ಸರೋವರಕ್ಕೆ ಸೇರುವುದು. ಜಗುಲಿಪೂರ್ತಿ ಒಂದೇ ಪಾಣಿವಟ್ಟದಂತೆ ದಟ್ಟವಾದ ಹಿಮದಿಂದ ಕೂಡಿತ್ತು. ಜಗುಲಿಯ ಕೆಳಗೆ ಈ ಹಿಮವು ಕರಗುತ್ತಿರುವ ಕೊರೆಯುವ ಮಂಜಿನ ನೀರಿನಲ್ಲಿ ನಾವು ನಿಂತಿದ್ದೆವು. ಶ್ರೀ ಅಮರನಾಥೇಶ್ವರ ಲಿಂಗವು ಸುಮಾರು ಆರೂವರೆ ಅಡಿ ಎತ್ತರವಿತ್ತು. ದೊಡ್ಡ ನೀರಿನ ಕೊಳಗದಷ್ಟು (ಅಥವಾ ಡ್ರಮ್) ದಪ್ಪವಿತ್ತು. ಪಾರದರ್ಶಕವಾದ, ನಯವಾದ ಮಂಜಿನಿಂದಾಗಿತ್ತು. ಆ ಸಮಯದಲ್ಲಿ ಲಿಂಗವನ್ನು ನಾವು ಮುಟ್ಟುವಂತಿರಲಿಲ್ಲ. ಪಾಣಿವಟ್ಟ ಕರಗುವವರೆಗೆ ಈ ರೀತಿ. ದೂರದಿಂದಲೇ ಅಮರನಾಥೇಶ್ವರನಿಗೆ ಗಂಗೆಯ ನೀರು ಹಾಕಿ ಪೂಜೆ, ಪ್ರಾರ್ಥನೆ ಮಾಡಿ ಕೊಬ್ಬರಿ ನೈವೇದ್ಯ ಮಾಡಿದೆವು. ಈ ರೀತಿ ಪ್ರತಿವರ್ಷವೂ ಅಮರನಾಥೇಶ್ವರ ಲಿಂಗವು ಮೂಡುತ್ತದೆ, ಕರಗುತ್ತದೆ. ಜಾತ್ರೆಯ ದಿನದ ವೇಳೆಗೆ ಲಿಂಗವನ್ನು ಮುಟ್ಟಿಮುಟ್ಟಿ ಕೊನೆಯ ಸಾವಿರಾರು ಜನರಿಗೆ ಲಿಂಗದರ್ಶನವಿಲ್ಲದೆ ಅದು ಅದಾಗಲೇ ಕರಗಿಹೋಗಿರುತ್ತದೆ. ಯುಗಯುಗಾಂತರಗಳಿಂದ ಈ ರೀತಿ ಭಗವಂತನು ಮೂಡುತ್ತಲೇ ಇರುವುದರಿಂದೇನೊ ಅಮರನಾಥ ಎನ್ನುವುದು. ಒಟ್ಟಿನಲ್ಲಿ ರೋಮಾಂಚನಕಾರಿ ಅನುಭವವಾಯಿತು. ಎಲ್ಲರನ್ನು ನೆನೆಸಿಕೊಂಡು ಅವರವರ ಅಭೀಷ್ಟೆಗಳು ನೆರವೇರುವಂತೆ ಪ್ರಾರ್ಥಿಸಿಕೊಂಡೆನು. ನಮ್ಮವರೆಲ್ಲರ, ಅಲ್ಲಿದ್ದವರ ಎಲ್ಲರ ಮುಖಗಳಲ್ಲೂ ತೃಪ್ತಿಯೂ, ಸಾರ್ಥಕತೆಯೂ, ನೆಮ್ಮದಿಯೂ ನೆಲೆಸಿತ್ತು. ಹೆಚ್ಚು ಹೊತ್ತು ನಿಲ್ಲಲಾಗದು ಆ ಹಿಮಕೊರೆತದ ನೀರಿನಲ್ಲಿ! ನಾವು ಹಿಂದಿರುಗಿದೆವು. ಸುಮಾರು ೫ ಗಂಟೆಯ ವೇಳೆಗೆ ಪಂಚತರಣಿಗೆ ಬಂದು, ವಿಶ್ರಾಂತಿಗಾಗಿ ಅಲ್ಲಿಯೇ ರಾತ್ರಿ ಕಳೆಯುವುದುದೆಂದು ನಮಗೆ ಮೊದಲೇ ಹೇಳಿದ್ದರು. ರಾತ್ರಿ ಎಂಟೂವರೆಯ ವೇಳೆಗೆ ಎಸ್ ಎಲ್ ರವರು, ಶ್ರೀನಿವಾಸ್ ಮತ್ತು ರಮೇಶ್ ನಡೆದು ಬಂದು ನಮ್ಮನ್ನು ಸೇರಿದರು. ಮೂವರೂ ತುಂಬಾ ಸುಸ್ತಾಗಿದ್ದರು. ಏನೋ ಒಂದು ಚೂರು ಆಹಾರ ತಿಂದು ಬಿದ್ದುಕೊಂಡೆವು. ಒಂಭತ್ತನೇ ತಾರೀಕು ಮತ್ತೊಂದು ಬೆಳಗು. ಆ ದಿನ ಗುಣಾಸುಘಾಟ್, ಶೇಷನಾಗ್, ಪಿಸುಘಾಟ್, ಚಂದನವಾರಿ ಮೂಲಕವೇ ಮರುಪ್ರಯಾಣ ಮಾಡಿ ೭ ಗಂಟೆಯ ವೇಳೆಗೆ ಪಹಲ್ ಗಾವ್ ಬಳಿಯಿದ್ದ ಶೆರ್ಪಾ ಮನೆ ಸೇರಿದಾಗ ನಮ್ಮ ಶ್ರೀ ಅಮರನಾಥ್ ಯಾತ್ರೆ ಮುಗಿದಿತ್ತು. ನಾವೆಲ್ಲಾ ಸ್ನಾನ ಮಾಡಿ, ಬಟ್ಟೆ ಒಗೆದುಕೊಂಡೆವು. ನಮ್ಮ ಶೆರ್ಪಾ ನಮಗಾಗಿ ಅನ್ನ ಮಾಡಿಸಿದ್ದನು. ಸರಿಯಾದ ಬಿಸಿ ಊಟ ಮಾಡಿ ಮೂರು ದಿನಗಳಾಗಿದ್ದವು. ಎಲ್ಲರೂ ಮೊಸರನ್ನವನ್ನು ತಿಂದೆವು. ಆ ಶೆರ್ಪಾನ ಅಣ್ಣ ಸುಬ್ಬಮ್ಮನವರ ಮುರಿದ ಹಸ್ತಕ್ಕೆ ಮಂತ್ರ, ಔಷಧಿಗಳನ್ನು ಹಾಕಿದನು. ಎಲ್ಲರೂ ನಿರಾತಂಕವಾಗಿ ಮಲಗಿದೆವು. ***** ೧೦. ೭. ೧೯೮೭ ರಂದು ಬೆಳಗ್ಗೆ ೮ ಗಂಟೆಯ ವೇಳೆಗೆ ಟ್ರಕ್ ನಲ್ಲಿ ಪಹಲ್ ಗಾವ್ ನ ಕೇಂದ್ರಕ್ಕೆ ಬಂದೆವು. ಬರುವ ಮೊದಲು ನಾನು ತಂದಿದ್ದ ಜಮಖಾನ, ರಗ್ಗು, ಸ್ವೆಟರ್, ಶೂಸ್, ಸಾಕ್ಸ್ ಇತ್ಯಾದಿಗಳನ್ನು ನಮ್ಮ ಶೆರ್ಪಾನಿಗೆ ಕೊಟ್ಟೆ. ನಾವೆಲ್ಲರೂ ಸೇರಿ ಶೆರ್ಪಾನಿಗೆ ಒಂದು ಒಳ್ಳೆಯ ಮಾತನ್ನು ಇಂಗ್ಲೀಷಿನಲ್ಲಿ ಬರೆದುಕೊಟ್ಟೆವು. ನಾವು ತಂದಿದ್ದ ಔಷಧಿಗಳು, ಮುಲಾಮುಗಳನ್ನು ಕೊಟ್ಟೆವು. ನಿಜವಾಗಿಯೂ ಅಂತಹ ಒಳ್ಳೆಯ ಶೆರ್ಪಾ ಸಿಕ್ಕಿದ್ದರಿಂದಲೇ ನಾವು ಶ್ರೀ ಅಮರನಾಥೇಶ್ವರನನ್ನು ನೋಡಿ ತಣಿದೆವು. ಆತನು ಸುಬ್ಬಮ್ಮನವರ ಕೈ ಹಿಡಿದುಕೊಂಡು ಲಿಂಗದ ಬಳಿಯವರೆಗೂ ಕರೆತಂದನು. ಒಮ್ಮೆ ಆಕೆಯನ್ನು ಕೂಸುಮರಿ ಮಾಡಿತಂದು ತಂಗುದಾಣಕ್ಕೆ ಬಿಟ್ಟನು. ಒಟ್ಟಿನಲ್ಲಿ ಹವಾಗುಣ, ಅದೃಷ್ಟ, ಒಳ್ಳೆಯ ಜೊತೆಗಾರರು, ನಿಷ್ಠಾವಂತನಾದ ಶೆರ್ಪಾ, ಮುಖ್ಯವಾಗಿ ಪರಮಾತ್ಮನ ಕೃಪೆ ಇದ್ದುದ್ದರಿಂದ ನಮ್ಮ ಸಾಹಸ ಪುಣ್ಯಯಾತ್ರೆಯು ಸಫಲವಾಗಿ ಮುಗಿಯಿತು. ಇಲ್ಲಿಂದ ಮುಂದಕ್ಕೆ ಜಮ್ಮು ಪ್ರಯಾಣ, ವೈಷ್ಣೋದೇವಿಯ ದರ್ಶನ. ~ ವಿನತೆ ಶರ್ಮ
ವಿನತೆ ನಿಮ್ಮ ಮತ್ತು ನಿಮ್ಮ ತಾಯಿ ಅವರ ಅಮರನಾಥ್ ಯಾತ್ರೆಯ ಪ್ರವಾಸ ಅನುಭವ ಮೈ ಜುಮ್ಮೆನಿಸುವಂತಿದೆ. ಅದೊಂದು ಅಧ್ಭುತ ಅನುಭವವೆನಿಸಿರಬೇಕು. ನನಗೆ ನಮ್ಮ ಬದರಿ ಅಮ್ತ್ತು ಕೇದಾರನಾಥ್ ಪ್ರವಾಸದ ನೆನಪಾಯಿತು. ಮತ್ತೊಮ್ಮೆ ಹೋಗಬೇಕು ಎನ್ನಿಸುತ್ತಿದೆ. ಇಂತಹ ಪ್ರವಾಸ ಕಥನವನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಉಮಾ ವೆಂಕಟೇಶ್
LikeLike
ಅಬ್ಬಬ್ಬಾ ಎಂಥ ಸೊಗಸಾದ ಅಮರನಾಥ್ ಪ್ರವಾಸ , ಓದುತ್ತಿದ್ದರೆ ವರ್ಣಿಸಿರುವ ಧೃಶ್ಯಗಳು ಕಣ್ಣುಮುಂದೆ ಬರುತಿತ್ತು
ನಾನು ಅಲ್ಲಿಗೆ ಹೋಗುವ ಪ್ರಯತ್ನ ಮಾಡಲಿಲ್ಲ ಆದರೆ ಇದು ಓದಿದ ಮೇಲೆ ಅಮರನಾಥ ಲಿಂಗ ದರ್ಶನ ಮಾಡಿದ ಹಾಗೆ ಆಯಿತು
ಕೆಲವು ಪ್ರವಾಸಗಳ ಬಗ್ಗೆ ನಾನು ಬರೆದ್ದಿದ್ದೇನೆ ಅದರೆ
ಈ ಲೇಖನದ ಮುಂದೆ ನನ್ನ ಬರವಣಿ ಲೆಕ್ಕಕ್ಕೇ ಇಲ್ಲ !!
ರಾಮಮೂರ್ತಿ
LikeLike
ವುನ್ತೆಯವರ ತಾಯಿಯ ಪ್ರವಾಸದ ಡೈರಿಯಿಂದ ಆಯ್ದ ಪುಟ ಕಣ್ಣು ಕಟ್ಟುವಂತಿದೆ. ಇದು ಒಂದು ಕಾಲದ ಇತಿಹಾಸದ ದಾಖಲೆಯೂ ಹೌದು.
‘ಶ್ರೀ ಅಮರನಾಥನಿಗೆ ಉರುಳುಸೇವೆ ಮಾಡಿದೆನು. ಮೂರು ನಾಲ್ಕು ಸಲ ಬಿದ್ದವರನ್ನು ನೋಡಿ ಮರುಕಪಟ್ಟು ಸದ್ಯ ನಾನು ಬೀಳಲಿಲ್ಲವೆಂದುಕೊಂಡೆನು. ತಕ್ಷಣವೇ ಬಿದ್ದೆನು! ಅಹಂ ಕೂಡದಲ್ಲವೇ?’ ಎನ್ನುವ ಸಾಲುಗಲಲ್ಲಿ ಇರುವ ವಿನಯ ಮತ್ತು ಪ್ರಾಮಾಣಿಕತೆ ಗಮನ ಸೆಳೆಯುತ್ತದೆ.
’ಅಂದು ಒಂದೂವರೆ ಗಂಟೆಯ ವೇಳೆಗೆ ಒಂದು ಕಿಮೀ ದೂರದಿಂದಲೇ ಗುಹೆಯನ್ನು ಕಂಡಾಗ ಎಲ್ಲರ ಕಣ್ಣಲ್ಲೂ ನೀರು ಬಂದಿತ್ತು. ಆ ಭವ್ಯವಾದ ಹಿಮಗಲ್ಲಿನ ಗುಹೆಯನ್ನು ಕಂಡು ನನಗೆ ಕುವೆಂಪುರವರು ಹೇಳಿದ “ಪ್ರಕೃತಿಯ ಆರಾಧನೆ ಪರಮನ ಆರಾಧನೆ ಮತ್ತು ಮುಕ್ತಿಯ ಸಾಧನೆ” ಎಂಬ ಮಾತು ನೆನಪಿಗೆ ಬಂದಿತು. ಎರಡೂಕಾಲು ಗಂಟೆಗೆಲ್ಲಾ ನಾವು ಗುಹೆಯನ್ನು ತಲುಪಿದೆವು” ಅತ್ಯುತ್ತಮ ಸಾಲುಗಳು.
– ಕೇಶವ
LikeLike
ಪೂಜಾ ತಾಯೂರ್ ಅವರ ಸಂಗೀತದ ದಾರಿ ಮತ್ತು ಅವರ ಗಾಯನ ಎರಡೂ ಅದ್ಭುತ.
ಗೌರಿಯವರ ಸಂಪಾದಕೀಯ ಯಥಾಪ್ರಕಾರ ಒಂದು ಉತ್ತಮ ಲೇಖನ.
ಕೇಶವ
LikeLike
ಈ ವಾರದ ಸಂಚಿಕೆಯಲ್ಲಿ ಈ ವಾರಾಂತ್ಯದ ರಾಮನವಮಿಯ ನೆನಪಿಸಿ ಆರಂಭ ಮಾಡಿ ಹೊಸ ಲೇಖಕಿ ಪೂಜಾ ತಾಯೂರ್ ಅವರನ್ನು ಪರಿಚಯಿಸಿದ್ದಾರೆ ಸಂಪಾದಕಿ ಗೌರಿ ಪ್ರಸನ್ನ ಅವರು. ಗುರುವನ್ನು ಯಾರು ನೆನೆದರೂ ಓದಲು ಚಂದ. ಗುರು- ಶಿಷ್ಯರ ಸಂಬಂಧ ಅನ್ಯೋನ್ಯ; ಅದರಲ್ಲೂ ಸಂಗೀತ ಪರಂಪರೆಯಲ್ಲಿ ಇನ್ನೂ ಗಾಢ ಸಂಬಂಧವಿರುತ್ತದೆ. ಅದರಲ್ಲೂ ಪೂಜಾ ಅಂಥ ಅದೃಷ್ಟಶಾಲಿಗೆ ಗುರುವಾಗಿ ದೊರಕಿದ್ದು ಅಪರೂಪ ವ್ಯಕ್ತಿಗಳು. ಅದಕ್ಕೇ ಭಕ್ತಿ ಪ್ರೀತಿಯಿಂದ. ಅವರು ಬರೆಯುವ ಲೇಖನ ಓದಲು ಆಪ್ತವೆನಿಸುತ್ತದೆ. ಅದರ ಕೊನೆಯಲ್ಲಿ ಕೊಟ್ಟ ಕೊಂಡಿ ಅವರ ಸುಶ್ರಾವ್ಯ ಗಾಯನಕ್ಕೆ ಒಯ್ದು ಅವರ ಪ್ರತಿಭೆಯ ಒಂದು ಝಲಕ್ ಕೊಟ್ಟಮೇಲೆ ಹೊಸಬರಿಗೆ ಲವಲೇಶವೂ ಅವರ ವಿದ್ವತ್ತಿನ ಬಗ್ಗೆ ಸಂಶಯ ಉಳಿಯುವದಿಲ್ಲ! ಅನಿವಾಸಿಯ ಹಲವಾರು ಸದಸ್ಯರು ಈ ಮೊದಲು ಅಮಿತಾ ಅವರು ಏರ್ಪಡಿಸಿದ ಜಗುಲಿಯಲ್ಲಿ ಅವರನ್ನು ಕಂಡು ಕೇಳಿದ್ದೇವೆ. ಪೂಜಾ ಅವರಿಗೆ ಸುಸ್ವಾಗತ ಮತ್ತು ಅವರಿಂದ ಇನ್ನೂ ಹಲವು ಲೇಖನಗಳೂ ಬಂದಾವು ಅಂತ ಭರವಸೆಯಿದೆ!
ಪದ್ಮಾವತಮ್ಮನವರ ಪ್ರವಾಸ ಕಥನ ಆಡಂಬರವಿಲ್ಲದೆ ಸರಳ ಗತಿಯಲ್ಲಿ ನಡೆದಿದೆ. ಅಂತ ದುಸ್ಸಾಧ್ಯ ಪ್ರವಾಸವನ್ನು ತಮ್ಮ ನೇರ ಮಾತಿನ ಶೈಲಿಯಿಂದ ಹೇಳುವಾಗ ಸುಲಭ ಅನಿಸಿವಂತೆ ಮಾಡಿದ್ದಾರೆಂದರೆ ಅವರ ಬರವಣಿಗೆ ಗೆದ್ದಿದೆ ಎನ್ನುವದರ ಪುರಾವೆ. ಕೆಲವೊಂದು ಕಡೆ ಆ ಕಡುಚಳಿಯಳ್ಳಿ ಅವರ ತಂಡದವರ ಕಷ್ಟವನ್ನು, ಆ ಕಣ್ಣಿಗೆ ಕಟ್ಟುವ ಆ ವರ್ಣನೆಯನ್ನು ಓದುತ್ತಿದ್ದಂತೆ ನಮಗೇ ಬೆವರಿಳಿಯುತ್ತದೆ – ಆ ಸುಯೋಧನನಂತೆ ‘ಬರ್ಫಿನಲ್ಲಿರದಿದ್ದರೂ ಬೆವರ್ದಮ್ ‘ಅನ್ನುವಂತೆ! ವಿನತೆಯವರು ‘ಮಸಿಯಿಂದ’ಬಸಿ’ ಗೆ ಇಳಿಸುತ್ತಿರುವ ಅವರ ತಾಯಿಯ ಇನ್ನೂ ಸ್ವಾರಸ್ಯಕರ ಕಥನಗಳನ್ನು ನಮಗೆ ಕೊಡಲೆಂದು ಆಶಿಸುವೆ. ಒಬ್ಬ ಅಧ್ಯಾಪಿಕೆಯ ಛಾಪು ಪದ್ಮಾವತಮ್ಮರ ಬರವಣಿಗೆಯಲ್ಲಿದೆ. ಅಮರನಾಥನ ದರ್ಶನ ಸಿದ್ಧಿಸಿದ ಅವರಿಗೂ ಒಂದು ಜೈಕಾರ ಹಾಕುವಾ! ಶ್ರೀವತ್ಸ್ ದೇಸಾಯಿ
LikeLike
ಈ ವಾರದ ಸಂಚಿಕೆಯಲ್ಲಿ ಈ ವಾರಾಂತ್ಯದ ರಾಮನವಮಿಯ ನೆನಪಿಸಿ ಆರಂಭ ಮಾಡಿ ಹೊಸ ಲೇಖಕಿ ಪೂಜಾ ತಾಯೂರ್ ಅವರನ್ನು ಪರಿಚಯಿಸಿದ್ದಾರೆ ಸಂಪಾದಕಿ ಗೌರಿ ಪ್ರಸನ್ನ ಅವರು. ಗುರುವನ್ನು ಯಾರು ನೆನೆದರೂ ಓದಲು ಚಂದ. ಗುರು- ಶಿಷ್ಯರ ಸಂಬಂಧ ಅನ್ಯೋನ್ಯ; ಅದರಲ್ಲೂ ಸಂಗೀತ ಪರಂಪರೆಯಲ್ಲಿ ಇನ್ನೂ ಗಾಢ ಸಂಬಂಧವಿರುತ್ತದೆ. ಅದರಲ್ಲೂ ಪೂಜಾ ಅಂಥ ಅದೃಷ್ಟಶಾಲಿಗೆ ಗುರುವಾಗಿ ದೊರಕಿದ್ದು ಅಪರೂಪ ವ್ಯಕ್ತಿಗಳು. ಅದಕ್ಕೇ ಭಕ್ತಿ ಪ್ರೀತಿಯಿಂದ. ಅವರು ಬರೆಯುವ ಲೇಖನ ಓದಲು ಆಪ್ತವೆನಿಸುತ್ತದೆ. ಅದರ ಕೊನೆಯಲ್ಲಿ ಕೊಟ್ಟ ಕೊಂಡಿ ಅವರ ಸುಶ್ರಾವ್ಯ ಗಾಯನಕ್ಕೆ ಒಯ್ದು ಅವರ ಪ್ರತಿಭೆಯ ಒಂದು ಝಲಕ್ ಕೊಟ್ಟಮೇಲೆ ಹೊಸಬರಿಗೆ ಲವಲೇಶವೂ ಅವರ ವಿದ್ವತ್ತಿನ ಬಗ್ಗೆ ಸಂಶಯ ಉಳಿಯುವದಿಲ್ಲ! ಅನಿವಾಸಿಯ ಹಲವಾರು ಸದಸ್ಯರು ಈ ಮೊದಲು ಅಮಿತಾ ಅವರು ಏರ್ಪಡಿಸಿದ ಜಗುಲಿಯಲ್ಲಿ ಅವರನ್ನು ಕಂಡು ಕೇಳಿದ್ದೇವೆ. ಪೂಜಾ ಅವರಿಗೆ ಸುಸ್ವಾಗತ ಮತ್ತು ಅವರಿಂದ ಇನ್ನೂ ಹಲವು ಲೇಖನಗಳೂ ಬಂದಾವು ಅಂತ ಭರವಸೆಯಿದೆ!
ಪದ್ಮಾವತಮ್ಮನವರ ಪ್ರವಾಸ ಕಥನ ಆಡಂಬರವಿಲ್ಲದೆ ಸರಳ ಗತಿಯಲ್ಲಿ ನಡೆದಿದೆ. ಅಂತ ದುಸ್ಸಾಧ್ಯ ಪ್ರವಾಸವನ್ನು ತಮ್ಮ ನೇರ ಮಾತಿನ ಶೈಲಿಯಿಂದ ಹೇಳುವಾಗ ಸುಲಭ ಅನಿಸಿವಂತೆ ಮಾಡಿದ್ದಾರೆಂದರೆ ಅವರ ಬರವಣಿಗೆ ಗೆದ್ದಿದೆ ಎನ್ನುವದರ ಪುರಾವೆ. ಕೆಲವೊಂದು ಕಡೆ ಆ ಕಡುಚಳಿಯಳ್ಳಿ ಅವರ ತಂಡದವರ ಕಷ್ಟವನ್ನು, ಆ ಕಣ್ಣಿಗೆ ಕಟ್ಟುವ ಆ ವರ್ಣನೆಯನ್ನು ಓದುತ್ತಿದ್ದಂತೆ ನಮಗೇ ಬೆವರಿಳಿಯುತ್ತದೆ – ಆ ಸುಯೋಧನನಂತೆ ‘ಬರ್ಫಿನಲ್ಲಿರದಿದ್ದರೂ ಬೆವರ್ದಮ್ ‘ಅನ್ನುವಂತೆ! ವಿನತೆಯವರು ‘ಮಸಿಯಿಂದ’ಬಸಿ’ ಗೆ ಇಳಿಸುತ್ತಿರುವ ಅವರ ತಾಯಿಯ ಇನ್ನೂ ಸ್ವಾರಸ್ಯಕರ ಕಥನಗಳನ್ನು ನಮಗೆ ಕೊಡಲೆಂದು ಆಶಿಸುವೆ. ಒಬ್ಬ ಅಧ್ಯಾಪಿಕೆಯ ಛಾಪು ಪದ್ಮಾವತಮ್ಮರ ಬರವಣಿಗೆಯಲ್ಲಿದೆ. ಅಮರನಾಥನ ದರ್ಶನ ಸಿದ್ಧಿಸಿದ ಅವರಿಗೂ ಒಂದು ಜೈಕಾರ ಹಾಕುವಾ! ಶ್ರೀವತ್ಸ ದೇಸಾಯಿ
LikeLike