
..ಯುಗಾದಿ ಮತ್ತೆ ಮರಳಿ ಬರುತಿದೆ
ತರುಲತೆಗಳಲ್ಲಿ ಚೈತ್ರದ ಚಿಗುರು ಪಲ್ಲವಗಳು, ಹೊಂಗೆ ಮರದ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿಗಳು, ಬೇವು-ಮಾವುಗಳ ಸೊಗಸು-ಸಂಭ್ರಮಗಳು ..ಇವೆಲ್ಲವನ್ನೊಳಗೊಂಡು ಮತ್ತೆ ಬಂದಿದೆ ಯುಗಾದಿ. ನವ ವಸಂತದ ನವಿರು ಗಾಳಿ ಮನಮನಗಳನ್ನೂ ಪುಲಕಗೊಳಿಸಿದೆ. ಬೇವು-ಬೆಲ್ಲದೊಂದಿಗೆ ಹಳೆಯ ನೂರಾರು ಸ್ಮೃತಿಗಳನ್ನು ತನ್ನೊಡನೆ ಮತ್ತೆ ಹೊತ್ತು ತಂದಿದೆ ಈ ಯುಗಾದಿ. ಬೆಳಿಗ್ಗೆ ಎದ್ದೊಡನೆಯೇ ಬಟ್ಟಲು ತುಂಬ ಬೆಚ್ಚನೆಯ ಖೊಬ್ರಿಎಣ್ಣೆಯನ್ನು ಅಜ್ಜಿ ನೆತ್ತಿಗೊತ್ತಿ ‘ಅಶ್ವತ್ಥಾಮೋ ಬಲೀರ್ವ್ಯಾಸೋ’ ಅಂತ ಚಿರಂಜೀವಿಗಳ ಹೆಸರಲ್ಲಿ ಹರಸಿದ ಮೇಲೆ ಬಚ್ಚಲುಮನೆಯಲ್ಲಿ ನಮ್ಮ ರಂಗಪ್ರವೇಶ. ಅಲ್ಲಿ ದೆವ್ವನಂಥಾ ತಾಮ್ರದ ಹಂಡೆಯಲ್ಲಿ ಬೇವಿನೆಲೆ ತೇಲುತ್ತಿರುವ ಬಿಸಿ ಬಿಸಿ ನೀರು. ಹೊಗೆಯಾಡುತ್ತಿರುವ ಆ ನೀರನ್ನು ಹಿತ್ತಾಳೆಯ ಗಂಗಾಳದಲ್ಲಿ ಮಾಮಿಯೋ, ಮಾಂಶಿಯೋ ತೋಡುತ್ತಿದ್ದರೆ ಚಿಕ್ಕವರಾದ ನಮಗೆ ಅಗಾಧ ಅಚ್ಚರಿ ..ಕೈ ಸುಡಲಿಕ್ಕಿಲ್ಲವೇ ಇವರಿಗೆ ಎಂದು.ಜೊತೆಗೇ ಆತಂಕ- ಎಲ್ಲಿ ಇಂಥ ಸುಡುಸುಡು ನೀರನ್ನೇ ತಲೆಮೇಲೆ ಸುರಿದು ಬಿಡುತ್ತಾರೋ ಎಂದು.’ಥಣ್ಣೀರು ಹಾಕು’ ಎಂದು ಹತ್ತು ಸಲ ಕೂಗಿಕೊಂಡರೂ ‘ಇನ್ನೂ ಎಂಥ ಥಣ್ಣೀರs ಈಗೇ ಆರಿ ಕತ್ತಿ ಉಚ್ಚಿ ಆಗ್ಯಾವ’ ಎಂದು ಜಬರಿಸಿ ಮೈಮೇಲೆ ಬಿಸಿನೇರು ಸುರಿದರೆ ಆಹಾ! ನಮ್ಮ ಬಚ್ಚಲು ಮನೆಯ ಆ ಕಥಕ್ಕಳಿ, ಭರತನಾಟ್ಯ.. ತಲೆಬಾಗಿಲಿನ ಹಸಿರಾದ ಮಾವಿನ ತೋರಣ, ಅಂಗಳದ ರಂಗವಲ್ಲಿ, ಹೊಸ್ತಿಲಿನ ಕೆಮ್ಮಣ್ಣು, ದೇವರ ಮನೆಯ ಥಳಥಳ ಹೊಳೆವ ಉಪಕಾರಣಿಗಳು, ತುಪ್ಪದ ಬತ್ತಿ, ಎಣ್ಣೆಯ ದೀಪ, ಊದಿನಕಡ್ಡಿಯ ಸುಗಂಧಗಳು, ಅಜ್ಜನ ‘ಆಚಾರ್ಯಾ ಶ್ರೀಮದಾಚಾರ್ಯಾ ಸಂತು ಮೇ ಜನ್ಮಜನ್ಮನೀ’ ಎಂಬ ರಿಂಗುಣಿಸುವ ಮಂತ್ರ, ಪಡಸಾಲೆಯ ರೇಡಿಯೋದಲ್ಲಿ ‘ ಯುಗ ಯುಗಾದಿ ಕಳೆದರೂ’ ಹಾಡಿನ ದನಿ, ಅಡಿಗೆಮನೆಯಲ್ಲಿ ಬೇಳೆ ರುಬ್ಬುವ ಸದ್ದು, ಹೂರಣ ಕುದಿವ ನರುಗಂಪು, ಬಾಳೆಲೆ-ರಂಗೋಲಿಗಳ ಸಂಭ್ರಮ, ಬೇವು-ಬೆಲ್ಲದ, ಹೋಳಿಗೆ-ಬುರಬುರಿಗಳ ಭರ್ಜರಿ ಊಟ, ಸಂಜೆಯಾಗುತ್ತಿದ್ದಂತೆಯೇ ಲಕ್ಷ್ಮಿಗುಡಿಯ ಪಾಳಿಯ ಸಂಭ್ರಮ. ಲಕ್ಷ್ಮೀದೇವಿಯ ಕಣ್ಮನ ಸೆಳೆವ ಅಲಂಕಾರ,ಆ ಪಟ್ಟೆಸೀರೆ-ಸರ-ಡಾಬು ಆಭರಣಗಳು, ಗಂಟೆ-ಜಾಗಟೆಗಳ ನಿನಾದ, ಮಂಗಳಾರತಿ, ಆ ಅಂಗಾರದ ರುಚಿ, ಹೊರಗಿನ ಸಾಲು ಸಾಲು ಅಂಗಡಿಗಳ ಪ್ಲಾಸ್ಟಿಕ್ ಬಳೆ,ರಿಬ್ಬನ್ನುಗಳು.. ಒಂದೊಂದೂ ಎಂಥ ಮಧುರ!! ‘ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ ಅಖಿಲ ಜೀವಜಾತಕೆ ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?’ ನಲ್ಮೆಯ ಓದುಗರೇ ತಮಗೆಲ್ಲ ಯುಗಾದಿಯ ಹಾರ್ದಿಕ ಶುಭಾಶಯಗಳು. ಇಂದಿನ ಸಂಚಿಕೆಯಲ್ಲಿ ಸವಿತಾ ಸುರೇಶ್ ಅವರು ಒಂದು ಅಪರೂಪದ ‘ಸವಿರುಚಿ’ಯನ್ನು ಹಂಚಿಕೊಂಡಿದ್ದಾರೆ. ಈ ಯುಗಾದಿಯಂದು ಮಾಡಿ ಸವಿದು ಹೇಗಿತ್ತೆಂದು ಹೇಳಲು ಮರೆಯದಿರಿ. ಉಮೇಶ ನಾಗಲೋತಿಮಠ ಅವರು ಯುಗಾದಿಯ ವೈಜ್ಞಾನಿಕ ಸಂಗತಿಗಳ ಕುರಿತಾಗಿ ಬಹಳ ಆಸಕ್ತಿಭರಿತವಾದ ಲೇಖನವೊಂದನ್ನು ಅನಿವಾಸಿಗಾಗಿ ಹೊತ್ತು ತಂದಿದ್ದಾರೆ. ಎತ್ತರದ ಬೆಟ್ಟದ ಬದರಿ-ಕೇದಾರ-ಅಮರನಾಥಗಳಿರಲಿ, ಸಮುದ್ರ ದಂಡೆಯ ರಾಮೇಶ್ವರ-ಕನ್ಯಾಕುಮಾರಿಗಳಿರಲಿ, ಭೋರ್ಗರೆವ ನದೀತಟದ ಕಾಶಿ-ಹೃಷಿಕೇಶಗಳಿರಲಿ ..ಯಾತ್ರೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯ ರೌದ್ರ-ರಮಣೀಯತೆಗಳ ಮುಖೇನ ‘ಶಿವರುದ್ರನಾದ ಭಗವಂತ’ನನ್ನು ಅರಿವ ಪ್ರಯಾಸ, ಮಹತ್ತರವಾದ ಆ ನಿಸರ್ಗ ದ ಭವ್ಯತೆಯಲ್ಲಿ ನಮ್ಮ ಅಲ್ಪತೆಯನ್ನು ಕರಗಿಸಿ ನಿಸರ್ಗದೊಡೆಯನ ಮಹತ್ತಿನಲ್ಲಿ ಮೈಮರೆವ ರೀತಿ, ಸಹಬಾಳ್ವೆಯ ಕಲಿಕೆ..ಏನೆಲ್ಲ ಅಡಕ ಈ ಯಾತ್ರೆಯಲ್ಲಿ..ಬನ್ನಿ, ವಿನತೆಯವರು ತಮ್ಮಮ್ಮನೊಡನೆ ನಮ್ಮನ್ನೂ ‘ಅಮರನಾಥ ಯಾತ್ರೆ’ಗೆ ಕರೆದೊಯ್ಯಲಿದ್ದಾರೆ. ಹೊಸ ವರುಷದ ಆರಂಭಕ್ಕೆ ಇದಕ್ಕಿಂತ ಶುಭಪ್ರದ ಮತ್ತೆನಿದ್ದೀತು? ~ ಸಂಪಾದಕಿ

ಗೋಡಂಬಿ-ಗುಲ್ಕಂದ್ ಲಡ್ಡು
ಬೇಕಾಗುವ ಸಾಮಗ್ರಿಗಳು : ಗೋಡಂಬಿ-200ಗ್ರಾಂ ಕಲ್ಲು ಸಕ್ಕರೆ ಪುಡಿ- 100ಗ್ರಾಂ ಹಾಲಿನ ಪುಡಿ- 50 ಗ್ರಾಂ ಗುಲ್ಕಂದ್- 4ಚಮಚ ಕಂಡೆಂನ್ಸ್ಡ್ ಮಿಲ್ಕ್- 5ಚಮಚ ಸ್ವಲ್ಪ ಏಲಕ್ಕಿ ಪುಡಿ ಗುಲಾಬಿ ಹೂವಿನ ಪುಡಿ ಮಾಡುವ ವಿಧಾನ : ಮೊದಲಿಗೆ ಗೋಡಂಬಿಯನ್ನು ಮಧ್ಯಮ ಉರಿಯಲ್ಲಿ ಹುರಿದು ರವೆಯ ರೀತಿಯಲ್ಲಿ ಪುಡಿ ಮಾಡಿ ಒಂದು ಅಗಲವಾದ ತಟ್ಟೆಗೆ ವರ್ಗಾಯಿಸಿ. ನಂತರ ಕಂಡೆಂನ್ಸ್ಡ್ ಮಿಲ್ಕ್, ಕಲ್ಲು ಸಕ್ಕರೆ ಪುಡಿ, ಹಾಲಿನ ಪುಡಿ ಮಿಶ್ರಿಸಿ ಉಂಡೆಯ ಆಕಾರಕ್ಕೆ ಮಾಡಿ ಹೆಬ್ಬೆರಳಿಂದ ಮಧ್ಯದಲ್ಲಿ ಹಳ್ಳ ಮಾಡಿ ಸ್ವಲ್ಪ ಗುಲ್ಕಂದ್ ತುಂಬಿ. ನಂತರ ಲಡ್ಡು ಆಕಾರಕ್ಕೆ ಉಂಡೆ ಮಾಡಿ. ಇನ್ನೊಂದು ತಟ್ಟೆಯಲ್ಲಿ ಒಣಗಿದ ಗುಲಾಬಿ ಹೂವಿನ ಪುಡಿಯನ್ನು ಹರಡಿ. ಮಾಡಿಟ್ಟ ಲಾಡುಗಳನ್ನು ಇದರಲ್ಲಿ ಹೊರಳಿಸಿ. ಚಿತ್ರದಲ್ಲಿ ಕಾಣುವಂತೆ ಅಲಂಕಾರ ಮಾಡಿ ಸವಿಯಿರಿ. ~ ಸವಿತ ಸುರೇಶ್

ಡಾ ಉಮೇಶ ನಾಗಲೋಟಿಮಠ ಬೆಳಗಾವಿಯಲ್ಲಿ ೧೦ನೇ ತರಗತಿ ವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ , MBBS , MS (ENT ) ಮುಗಿಸಿ ಮುಂಬೈನಲ್ಲಿ ಹೆಚ್ಚಿನ ತರಬೇತಿ , ಹುಬ್ಬಳ್ಳಿಯ KMC (ಕಿಮ್ಸ್ ಈಗ ) ಯಲ್ಲಿ ಸುಮಾರು ೧೭ವರ್ಷ ಸೇವೆ ENT ವಿಭಾಗದ ಮುಖ್ಯಸ್ಥರಾಗಿ ಸ್ವಯಂ ನಿವೃತ್ತಿ . ಹುಬ್ಬಳ್ಳಿಯ ಸುಶ್ರುತ ಬಹುತಜ್ಞ ಆಸ್ಪತ್ರೆ ನಿರ್ದೇಶಕ . ಸಾಹಿತ್ಯ ಆಸಕ್ತಿ . ಹಲವು ರೇಡಿಯೋ ಕಾರ್ಯಕ್ರಮ , ಹಲವು ವೈದ್ಯಕೀಯ ಬರಹಗಳು , ವೈದ್ಯಕೀಯದಲ್ಲಿ ಹಾಸ್ಯ ಬರಹಗಳು , ಕೆಲವೊಮ್ಮೆ ಕವನದ ಕೆಮ್ಮು . ಸೋರುವ ಕಿವಿ ಎಂಬ ಪುಸ್ತಕ ಪ್ರಕಟಣೆ . ಆಂಗ್ಲನಾಡಿಗೆ ಆಗಮನವಾಗಿ ಆಯ್ತೆಳುವರುಷ . ಏಕಪತ್ನಿ , ಏಕಪುತ್ರ 😀. ಇದೆ ವಿರಲ್ (wirral ) ವಾಸ ಸಾಕಾಗಿದೆ ಪುಸ್ತಕ ಉಪವಾಸ ಬೇಕಾಗಿದೆ ಸಾಹಿತಿಗಳ ಸಹವಾಸ ಅದಕೆಂದೇ ಇರುವುದು ಈ ಅ-ನಿವಾಸ(ಸಿ)
ಹೊಸ ವರ್ಷ ಯಾವುದು ?
ಯುಗಾದಿ ಅಥವಾ ಜನೆವರಿ ಭಾರತೀಯರೆಲ್ಲರಿಗೂ ಯುಗಾದಿ ಹೊಸ ವರ್ಷ ಎಂದು ಗೊತ್ತು . ಇನ್ನು ಹಲವರ ಪ್ರಕಾರ ಯುರೋಪಿಯನ್ ಜನರಿಗೂ ಯುಗಾದಿ ಆಸು ಪಾಸೇ ಹೊಸ ವರ್ಷ ಇತ್ತು ಎಂಬ ಬಗ್ಗೆ ಅನುಮಾನಗಳಿವೆ . ನಾವು ನಮ್ಮ ಗ್ರೆಗೋರಿಯನ್ ಕ್ಯಾಲೆಂಡರನ್ನೇ ತಳಹದಿಯಾಗಿ ಇಟ್ಟುಕೊಂಡು ಸಂವಾದ ನಡೆಸೋಣ . ನಾವು ಮಾರ್ಚ್ ತಿಂಗಳನ್ನು ವರ್ಷದ ಮೊದಲ ತಿಂಗಳು ಎಂದು ಪರಿಗಣಿಸುವಾ . ಆಗ ಪ್ರತಿ ಗ್ರೆಗೋರಿಯನ್ ತಿಂಗಳು ಯಾವ ಕ್ರಮದಲ್ಲಿ ಬರುತ್ತದೆ ಎಂದು ನೋಡೋಣ . ಮಾರ್ಚ್ -೧ನೇ ತಿಂಗಳು ಏಪ್ರಿಲ್ -೨ನೇ ತಿಂಗಳು ಮೇ -೩ನೇ ತಿಂಗಳು ಜೂನ್ -೪ನೇ ತಿಂಗಳು ಜೂಲೈ -೫ನೇ ತಿಂಗಳು ಅಗಸ್ಟ್ -೬ನೇ ತಿಂಗಳು ಸೆಪ್ಟೆಂಬರ್ -೭ನೇ ತಿಂಗಳು ಲ್ಯಾಟಿನ್ ಭಾಷೆಯಲ್ಲಿ ಸಂಖ್ಯೆ ಏಳು ಇದಕ್ಕೆ septem ಎನ್ನುತ್ತಾರೆ ಹಾಗು ಗ್ರೀಕ್ ಭಾಷೆಯಲ್ಲಿ epta ಎನ್ನುತ್ತಾರೆ . ಸಂಸ್ಕೃತದಲ್ಲಿ ಸಪ್ತ ಎನ್ನುತ್ತಾರೆ . (ಸಪ್ತ ಸ್ವರಗಳು , ಸಪ್ತ ಪದಿ ಇತ್ಯಾದಿಗಳು ಇತರ ಉದಾಹರಣೆ ) ಅಕ್ಟೋಬರ್ -೮ನೇ ತಿಂಗಳು ಲ್ಯಾಟಿನ್ ಭಾಷೆಯಲ್ಲಿ ಸಂಖ್ಯೆ ಎಂಟು ಇದಕ್ಕೆ octingenti ಎನ್ನುತ್ತರೆ. ಗ್ರೀಕ್ ಭಾಷೆಯಲ್ಲಿ okto ಹಾಗು ಸಂಸ್ಕೃತದಲ್ಲಿ ಅಷ್ಟ ಎನ್ನುತ್ತಾರೆ . (ಆಕ್ಟೋಪಸ್ =ಎಂಟು ಪಾದ ಹೊಂದಿರುವ ಪ್ರಾಣಿ . ಅಷ್ಟ ದಿಕ್ಕುಗಳು ) ನವೆಂಬರ್ -೯ನೇ ತಿಂಗಳು ಲ್ಯಾಟಿನ್ ಭಾಷೆಯಲ್ಲಿ novem ಎನ್ನುತ್ತರೆ . ಗ್ರೀಕ್ ಭಾಷೆಯಲ್ಲಿ ennea ಎಂದರೆ ಸಂಸ್ಕೃತದಲ್ಲಿ ನವ ಎನ್ನುವರು . (ನವರಾತ್ರಿ , ನವರಂದ್ರ ಇತ್ಯಾದಿಗಳು ಉದಾಹರಣೆಗಳು ) ಡಿಸೆಂಬರ್ -೧೦ನೇ ತಿಂಗಳು ಲ್ಯಾಟಿನ್ ಭಾಷೆಯಲ್ಲಿ decem ಎನ್ನುತ್ತರೆ . ಗ್ರೀಕ್ ಭಾಷೆಯಲ್ಲಿ deka ಎಂದರೆ ಸಂಸ್ಕೃತದಲ್ಲಿ ದಶ ಎನ್ನುವರು . (ದಶಮುಖ =ಹತ್ತು ತಲೆ ಉಳ್ಳವ , ದಶಮಾನ ಸಂಖ್ಯಾ ಪದ್ದತಿ ; Deciliter , decimeter ಇವು ಹತ್ತರ ಮೇಲೆ ನಿರ್ಭರವಾಗಿವೆ ) ಜನೆವರಿ -೧೧ನೇ ತಿಂಗಳು ಫೆಬ್ರವರಿ -೧೨ನೇ ತಿಂಗಳು ಇದನ್ನು ನೋಡಿದರೆ ಆಶ್ವರ್ಯದ ಜೊತೆ ಕುತೂಹಲವು ಮೂಡಿ ಅನೇಕ ತಿಂಗಳುಗಳಿಗೆ ಅವುಗಳ ನಿಜ ಅರ್ಥ ಸರಿಯಾಗಿ ಹೊಂದುತ್ತವೆ . ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಒಂದು ದಿನವನ್ನು ಡಿಸೆಂಬರ್ ಬದಲಾಗಿ ಫೆಬ್ರವರಿ ತಿಂಗಳಿಗೆ ಯಾಕೆ ಸೇರಿಸುತ್ತಾರೆ ? ಫೆಬ್ರವರಿ ತಿಂಗಳಲ್ಲಿ ಎಲ್ಲಕಿಂತ ಕಡಿಮೆ ದಿನಗಳು ಯಾಕೆ ಇದ್ದಾವೆ ? ಇವುಗಳ ಬಗ್ಗೆ ನನಗಿನ್ನೂ ಮಾಹಿತಿ ಸಿಕ್ಕಿಲ್ಲ . ಇನ್ನು ಯುಗಾದಿ ಸಮಯಕ್ಕೆ ಪ್ರಕೃತಿ ತನ್ನನ್ನು ತಾನೇ ಸಿಂಗರಿಸಿಕೊಂಡಿರುತ್ತದೆ . ಎಲ್ಲಡೆ ಹೊಸ ಚಿಗುರು , ಹೊಸ ಹೂವು ಬಂದಿರುತ್ತದೆ . ಯುಗಾದಿ ಹೆಸರೇ ಸೂಚಿಸುವಂತೆ ಅದು ಯುಗ (ವರ್ಷ )ದ ಆದಿ (ಪ್ರಾರಂಭ ). ಇನ್ನೂ ಯುಗಾದಿಯ ಆಚರಣೆಗಳ ಬಗ್ಗೆ , ಅವುಗಳ ವೈಜ್ಞಾನಿಕತೆಯ ಬಗ್ಗೆ ಬರೆಯುತ್ತ ಹೋದರೆ ಪುಟಗಳು ಸಾಲವು . ಯುಗಾದಿಗೆ ಎಲ್ಲರಿಗು ಶುಭವಾಗಲಿ . ~ ಡಾ -ಉಮೇಶ ನಾಗಲೋಟಿಮಠ
ನನ್ನಮ್ಮನ ಪ್ರವಾಸ ಕಥನ – ಶ್ರೀ ಅಮರನಾಥ್ ಯಾತ್ರೆ
ನನ್ನ ಅಮ್ಮನ ಹೆಸರು ಪದ್ಮಾವತಮ್ಮ. ಅಮ್ಮ ೩೭ ವರ್ಷಗಳಷ್ಟು ದೀರ್ಘಕಾಲ ಶಾಲಾಶಿಕ್ಷಕಿಯಾಗಿ ದುಡಿದರು. ತಮ್ಮ ಅನ್ನದಾತ ಶಾಲೆಯನ್ನು, ವಿದ್ಯಾರ್ಥಿಗಳನ್ನು ಬಹುವಾಗಿ ಪ್ರೀತಿಸುತ್ತ, ಅವರ ಸಹೋದ್ಯೋಗಿಗಳೊಡನೆ ವಿಶ್ವಾಸ, ಗೌರವದ ಸಂಬಂಧವನ್ನು ರೂಢಿಸಿಕೊಂಡಿದ್ದರು. ಅದೇ ಶಾಲೆಯಲ್ಲಿ ನನ್ನಂತೆ ಅನೇಕ ಶಿಕ್ಷಕವೃಂದದ ಮಕ್ಕಳು ಓದಿದ್ದು, ಸ್ನೇಹ ಸಂಪಾದಿಸಿದ್ದು ನಿತ್ಯನೂತನ ನೆನಪು! ತಮ್ಮ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅಮ್ಮ ‘ಸದಾ ಸಂಸಾರ, ಸಂಪಾದನೆ’ ಎಂಬುದರ ಆಚೆ ಇರುವ ಪ್ರವಾಸವೆಂಬ ಅನುಭವ ಲೋಕವನ್ನು ಆಯ್ದುಕೊಂಡು ತಮ್ಮ ಜೀವನದ ಸಾರ್ಥಕತೆಯನ್ನು ವಿಸ್ತರಿಸಿಕೊಂಡರು. ಅವರ ಕಾಲಕ್ಕೆ, ಅನುಸರಿಸುತ್ತಿದ್ದ ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಅನುಗುಣವಾಗಿ ಅವರು ಮತ್ತು ಶಾಲೆಯ ಮೂರ್ನಾಲ್ಕು ಸಹೋದ್ಯೋಗಿಗಳು ಒಂದಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಭಕ್ತಿ ಯಾತ್ರೆಗಳನ್ನು ಕೈಗೊಂಡರು. ೧೯೮೦ ದಶಕದ ಆದಿಯಲ್ಲಿ ಆರಂಭವಾದ ಅವರ ತೀರ್ಥಯಾತ್ರೆಗಳು ೧೯೯೮ ನೇ ಇಸವಿ ಆಗಸ್ಟ್ ತಿಂಗಳಲ್ಲಿ ಕೈಗೊಂಡಿದ್ದ ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿ ಮುಕ್ತಾಯವಾಯ್ತು. ಮಾನಸ ಸರೋವರದಲ್ಲಿ ಮಿಂದು, ಕೈಲಾಸನಾಥನನ್ನು ನೋಡಿ ಕಣ್ತುಂಬಿಸಿಕೊಳ್ಳುವ ಮುನ್ನವೇ ಅವರು ಇಲ್ಲವಾದರು. ಯಾತ್ರಾರ್ಥಿಗಳು ರಾತ್ರಿ ತಂಗಿದ್ದ, ಹಿಮಾಲಯ ಪರ್ವತಗಳಲ್ಲಿ ಅಡಗಿದ್ದ ಮಾಲ್ಪ ಎನ್ನುವ ಹಳ್ಳಿಯು ಆಗಸ್ಟ್ ತಿಂಗಳ ೧೮ನೇ ತಾರೀಕು ಬೆಳಗಿನ ಜಾವ ಸಂಭವಿಸಿದ ಬೃಹತ್ ಭೂಭಾಗ ಕುಸಿತಕ್ಕೆ ಒಳಗಾಗಿ ಸಂಪೂರ್ಣವಾಗಿ ನಿಶ್ಯೇಷವಾಗಿತ್ತು. ಸಾಹಿತ್ಯವನ್ನು ಮೆಚ್ಚುತ್ತಿದ್ದ ನಮ್ಮ ತಾಯಿ ಬಹು ಚೆನ್ನಾಗಿ ಬರೆಯುತ್ತಿದ್ದರು. ೧೯೮೦ ದಶಕದಿಂದ ತಾವು ಪ್ರವಾಸದ ಸಮಯದಲ್ಲಿ ನಮಗೆಲ್ಲ ಬರೆಯುತ್ತಿದ್ದ ಪತ್ರಗಳನ್ನು ಆಧರಿಸಿ ಮತ್ತು ಅವರ ಡೈರಿ, ನೆನಪುಗಳನ್ನು ಹೆಕ್ಕಿ, ತಮ್ಮ ಪ್ರವಾಸ ಅನುಭವ ಕಥನಗಳನ್ನು ಲೇಖಕ್ ನೋಟ್ ಬುಕ್ ಗಳಲ್ಲಿ ಬರೆದು ದಾಖಲಿಸಿದ್ದರು. ಅವುಗಳಲ್ಲಿ ವಿವರವಾಗಿ ತಾವುಗಳು ಹೇಗೆ ಯಾತ್ರಾಸ್ಥಳವನ್ನು, ಪ್ರವಾಸದ ದಿನಾಂಕಗಳನ್ನು ಗೊತ್ತುಮಾಡಿಕೊಳ್ಳುತ್ತಿದ್ದರು ಎಂಬುದರಿಂದ ಹಿಡಿದು ಬಹುಬಗೆಯ ವಿವರಗಳು ಇವೆ. ಯಾತ್ರೆಯ ಸಿದ್ಧತೆ, ಹಣಕಾಸು, ಮನೆಮಂದಿಯಿಂದ ಒಪ್ಪಿಗೆ, ತಾವು ಪಯಣಿಸುವ ದಾರಿಯ ಸ್ಥೂಲ ನಕ್ಷೆ, ಹಿಂದೆ ಪಯಣಿಸಿ ಬಂದ ಯಾತ್ರಾರ್ಥಿಗಳ ಪರಿಚಯ ಮತ್ತು ಮನೆಭೇಟಿ, ಅವರ ಅನುಭವಗಳ ವಿವರಗಳು, ಬಾಯಿಮಾತಿನಿಂದ ತಿಳಿದ ದೂರದೂರಿನ ಸಂಪರ್ಕ ವ್ಯಕ್ತಿಗಳು, ಗೈಡ್, ರೈಲು ಪಯಣಕ್ಕೆಂದು ಆಹಾರ, ಒಣಗಿದ ಆಹಾರದ ಸಿದ್ಧತೆ (ಅವಲಕ್ಕಿ, ಉಪ್ಪಿಟ್ಟು ಮಿಕ್ಸ್, ಹುರಿಹಿಟ್ಟು ಇತ್ಯಾದಿ), ತಮಗೆ ಸಹಾಯ ಮಾಡುವ ಕೂಲಿ ಜನರು, ಕುದುರೆ ಜನರು, ದೇವಾಲಯಗಳಲ್ಲಿ ಕಾಣುವ ಭಿಕ್ಷಕರು, ವಿಧವೆಯರು ಎಲ್ಲರಿಗೂ ಕೊಡಲು ಒಂದಷ್ಟು ಹಣ, ಹಳೆಬಟ್ಟೆ, ಕಾಲುಚಪ್ಪಲಿ, ಶೂಸ್, ಔಷಧಗಳು ಇತ್ಯಾದಿ ಶೇಖರಣೆ … ಅಬ್ಬಬ್ಬಾ ಒಂದೇ ಎರಡೇ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ತೀರಾ ಅಪರೂಪಕ್ಕೆ ಬಳಸುತ್ತಿದ್ದ ದೂರವಾಣಿ ಬಿಟ್ಟರೆ ಬೇರೆ ಊರಿನವರೊಂದಿಗೆ ಇವರ ಸಂಪರ್ಕವಿದ್ದದ್ದು ಕೇವಲ ಅಂಚೆಯ ಮೂಲಕವಷ್ಟೇ! ಮಧ್ಯಮ ವರ್ಗದ, ಶಾಲಾಶಿಕ್ಷಕ ಮಂದಿ ಇವರುಗಳು ಸುಮಾರು ಎರಡು ದಶಕಗಳ ಕಾಲ ನಡೆಸಿದ ವ್ಯವಸ್ಥಿತ ಯಾತ್ರೆಗಳು, ಪ್ರವಾಸಗಳು ಅಚ್ಚರಿಯೊಂದಿಗೆ ರೋಮಾಂಚನವನ್ನೂ, ಹೆಮ್ಮೆಯನ್ನೂ ಹುಟ್ಟಿಸುತ್ತದೆ. ಅವರ ಅನುಭವಗಳಲ್ಲಿ ಭಕ್ತಿಭಾವ, ಧರ್ಮ-ದೇವರು, ಪರಂಪರಾನುಗತ ಆಚರಣೆಯೊಂದಿಗೆ ಮಿಳಿತವಾದ ವೈಚಾರಿಕತೆ, ಹೊರಾಂಗಣ ಸಾಹಸ, ಪ್ರಕೃತಿ ಆರಾಧನೆ, ಸಮುದಾಯ ಪ್ರಜ್ಞೆ, ಪರಸ್ಪರ ಹೊಂದಾಣಿಕೆ, ಗುಂಪು-ಕೆಲಸ, ಪಡೆದಿದ್ದಕ್ಕಿಂತಲೂ ಕೊಟ್ಟಿದ್ದೇ ಹೆಚ್ಚು ಎನ್ನುವ ವಿಶಾಲ ಮನೋಭಾವ, ದೈವದರ್ಶನದ ಕೊಂಡಾಟ-ಪರವಶ ಭಾವ, ಅದರೊಂದಿಗೆ ಇಣುಕುವ ಆಧ್ಯಾತ್ಮಿಕತೆ, ದೈವಿಕ ಶಕ್ತಿಯಲ್ಲಿ ಎಷ್ಟು ನಂಬಿಕೆಯೋ ಅಷ್ಟೇ ನಂಬಿಕೆ ಮತ್ತು ಶ್ರದ್ಧೆ ಮಾನವ ಪ್ರಯತ್ನದಲ್ಲೂ ಇರಬೇಕು ಎನ್ನುವ ನಿಲುವು, ಎಲ್ಲವೂ ಕಾಣುತ್ತದೆ. ಆ ಕಥನಗಳನ್ನು ನಮ್ಮ ಬಂಧುಬಳಗ, ಮಿತ್ರರಲ್ಲಿ ಅನೇಕರು ಓದಿದ್ದಾರೆ. ಇತ್ತೀಚೆಗೆ, ‘ನೋಡೆ, ಅಷ್ಟು ವರ್ಷಗಳಿಂದಲೂ ನನ್ನ ಬಳಿ ಇರುವ ಆ ನೋಟ್ ಬುಕ್ ಗಳು ಮಾಸುತ್ತಿವೆ. ಅಂಚುಗಳು ಬಿರಿಯುತ್ತಿವೆ. ಅಮ್ಮನ ನೆನಪುಗಳನ್ನು ಕಾಪಿಡಬೇಕು. ಅವನ್ನು ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಗಳನ್ನಾಗಿಸಬೇಕು,’ ಎಂದು ಅಕ್ಕ ಕಳವಳಿಸಿದಾಗ ‘ಅವನ್ನು ನನಗೆ ಕಳಿಸು, ನಾನು ಆ ಕೆಲಸ ಮಾಡುತ್ತೀನಿ, ಅವನ್ನೆಲ್ಲ ಟೈಪ್ ಮಾಡಿ ಕಂಪ್ಯೂಟರಿನಲ್ಲಿ ಶೇಖರಿಸಿ ಕಳಿಸುತ್ತೀನಿ, ಇದು ನಮ್ಮಮ್ಮನ ಸೇವೆ’, ಎಂದೆ ನಾನು. ಇದು ನಾನು ಮೊಟ್ಟ ಮೊದಲು ಟೈಪ್ ಮಾಡಿದ ಕಥನ. ಇಲ್ಲಿ ಬರುವುದು ಅಮ್ಮನ ಶ್ರೀ ಅಮರನಾಥ ಯಾತ್ರೆ ಕಥನದ ಒಂದು ತುಣುಕು ಮಾತ್ರ. ಆಕೆಯ ಬರಹವನ್ನು ನಾನು ಯಥಾವತ್ತಾಗಿ ಟೈಪ್ ಮಾಡಿದ್ದರೂ, ಯಾತ್ರೆಯ ಮೊದಲ ಹಂತಗಳನ್ನೂ ಮತ್ತು ಖಾಸಗಿ ವಿಷಯಗಳನ್ನು ತೆಗೆದುಹಾಕಿ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದೀನಿ. ವಿನತೆ ಶರ್ಮ ೧.೦೭.೧೯೮೭ ರಿಂದ ೧೯.೦೭.೧೯೮೭ ರವರೆಗೆ ಕೈಗೊಂಡ ಶ್ರೀ ಅಮರನಾಥ ಪುಣ್ಯಯಾತ್ರೆ ‘ಭಾರತದ ಸ್ವಿಟ್ಜರ್ಲ್ಯಾಂಡ್’, ‘ಪ್ರವಾಸಿಗರ ಸ್ವರ್ಗ’, ‘ಪ್ರಕೃತಿ ಸೌಂದರ್ಯದ ನೆಲವೀಡು’, ‘ಝರಿ-ಜಲಪಾತಗಳ ಖನಿ’ ಮುಂತಾಗಿ ಬಿರುದುಬಾವಲಿಗಳನ್ನು ಜನರಿಂದ ಪಡೆದಿರುವ ಕಾಶ್ಮೀರವನ್ನು ನೋಡುವ ಅವಕಾಶ ನನಗೆ ಮತ್ತೊಮ್ಮೆ ಬಂದಿತು. ನಿನಗೆ ತಿಳಿಸಿದ್ದಂತೆ ಶಾಲೆಯಲ್ಲಿ ೫-೬ ಜನರು ಅಮರನಾಥ್ ಯಾತ್ರೆಯ ಮಾತನಾಡುತ್ತಿದ್ದರು. ೧೯೭೮ರಲ್ಲಿ ಹೋಗಿ ಬಂದಿದ್ದ ದೊಡ್ಡ ಭಾವನವರು ತುಂಬಾ ಆಶಾದಾಯಕವಾಗಿ ಹೇಳಿದುದಲ್ಲದೆ ಶ್ರೀ ಅಮರನಾಥ್ ಯಾತ್ರೆಗೆ ಆಷಾಢಮಾಸದ ಹುಣ್ಣಿಮೆಯು ಸೂಕ್ತವಾದುದೆಂದೂ ತಿಳಿಸಿದರು. ಅವರಿಂದಲೇ ಶ್ರೀ ಅಮರನಾಥ್ ಪುಸ್ತಕವನ್ನು ಪಡೆದು ಬಂದು, ಈ ಎಲ್ಲಾ ವಿಚಾರಗಳನ್ನು ನನ್ನ ಗೆಳತಿಯರಿಗೆ ತಿಳಿಸಿ ಪುಸ್ತಕ ಕೊಟ್ಟೆನು. ೧೯೮೩ರಲ್ಲಿ ಶ್ರಾವಣದ ಹುಣ್ಣಿಮೆಯಂದು ಯಾತ್ರೆ ಮಾಡಿದ್ದ ಇಬ್ಬರೂ ಅಮರನಾಥ ಲಿಂಗದರ್ಶನವಾಗದೆ ನಿರಾಶರಾಗಿದ್ದರು. ಅವರು ಬರಲು ಸಿದ್ಧರಾದರು. ಸರಿ, ಎಲ್ಲರೂ ಆಷಾಢದಲ್ಲಿ ಯಾತ್ರೆ ಮಾಡಲು ನಿರ್ಧರಿಸಿದರು. ಆಗ ನನ್ನ ಮನದಲ್ಲಿ ಆಸೆಯ ಗರಿಗೆದರಿತು. ***** ೧೯೮೭ರ ಜುಲೈ ೧ನೇ ತಾರೀಕು ಸಂಜೆ ೭.೩೦ ಗೆ ಹೊರಡುವ ಕೆ ಕೆ ಎಕ್ಸ್ಪ್ರೆಸ್ ನಲ್ಲಿ ನಮ್ಮ ಪ್ರಯಾಣ ಶುರು. ***** ಶ್ರೀ ಅಮರನಾಥ್ ಯಾತ್ರೆಯು ಪಹಲ್ ಗಾವ್ ನಿಂದಲೇ ಪ್ರಾರಂಭವಾಗುವುದು. ಇದು ಚಿಕ್ಕ ಊರು. ಅನೇಕ ಹೋಟೆಲ್ಗಳೂ, ಸರ್ಕಾರಿ ತನಿಖಾ ಕಚೇರಿ, ಪೋಸ್ಟ್ ಆಫೀಸ್ ಇತ್ಯಾದಿ ಆಫೀಸುಗಳಿದ್ದವು. ದೂರದಲ್ಲಿ ಆಕಾಶಕ್ಕೆ ಮುತ್ತಿಡುವಂತಿದ್ದ ಮಂಜಿನ ಶಿಖರಗಳೂ, ಅದರ ಮುಂದೆ ೨-೩ ಸಾಲು ನೀಲಿ ಬೆಟ್ಟಗಳೂ, ಅದರ ಮುಂದೆ ಚೆನ್ನಾಗಿ ಗೋಚರಿಸುವ ಇಳಿಜಾರಿನ ಹಸಿರು ಬೆಟ್ಟಗಳೂ, ಅವುಗಳ ಮುಂದೆ ಬೆಳೆದ ಪೈರುಗಳಿಂದಿರುವ ಗದ್ದೆಗಳೂ, ಅವುಗಳ ಮುಂದೆ ಕಪ್ಪನೆಯ ನೀರು ಹರಿಯುತ್ತಿರುವ ಲಂಬೋದರಿ ನದಿ. ಅದರ ಪಕ್ಕ ಫುಟಪಾಟಿನಲ್ಲಿ ನಾವು ನಿಂತಿದ್ದೆವು. ನನಗಂತೂ ಆ ಸೌಂದರ್ಯ ನೋಡಿ ಪರಮಾನಂದವೂ, ಪರಮಾಶ್ಚರ್ಯವೂ ಆಯಿತು. ಇಬ್ಬರು ವಿಚಾರಣೆಗೆ ತೆರಳಿದರು. ಇಬ್ಬರು ವಿಶ್ರಾಂತಿ ಹಾಗೂ ಸಾಮಾನು ಕಾವಲಿಗೆ ಕುಳಿತರು. ನಾನು ೧೦ ನಿಮಿಷಗಳ ಕಾಲ್ ಸುತ್ತಮುತ್ತ ನೋಡಿ ಮನತಣಿದ ಮೇಲೆ ಎಸ್ ಎಲ್ ಮನೆಗೆ, ನಮ್ಮ ...ಗೆ ಟೆಲಿಗ್ರಾಂ ಕೊಟ್ಟು ಬಂದೆ. ದಾರಿ ಪೂರ್ತಿ ಕುದುರೆ ಸವಾರರೂ, ಅಪರಿಚಿತರೂ, ಪ್ರವಾಸಿಗರ ಗುಂಪು ಕಾಣ ಸಿಗುತ್ತಿತ್ತು. ವಾತಾವರಣವು ಜಿಲ್ ಎಂದು ತಣ್ಣಗಿತ್ತು. ಶಾಲುಗಳನ್ನು ಈಚೆಗೆ ತೆಗೆದೆವು. ಸುಮಾರು ಒಂದೂಕಾಲು ಗಂಟೆಯ ನಂತರ ವಿಚಾರಿಸಲು ಹೋದವರು ಬಂದರು. ಸರ್ಕಾರದ ಕಡೆಯಿಂದ ಯಾವ ಸೌಲಭ್ಯವಿಲ್ಲವೆಂದು ತಿಳಿಯಿತು. ಆದರೆ ಒಬ್ಬ ಒಳ್ಳೆಯ ಶೆರ್ಪಾನನ್ನು ತೋರಿಸಿಕೊಟ್ಟಿದ್ದರು. ಒಂದು ಕುದುರೆಗೆ ೪೦೦ ರೂಪಾಯಿ, ಎಲ್ಲರ ಸಾಮಾನು ಹೊರುವ ಕುದುರೆಗೆ ೪೦೦ ರೂ, ಎರಡು ತಂಗುದಾಣಗಳಿಗೆ ಬಾಡಿಗೆ ಇತ್ಯಾದಿಗಳನ್ನು ಮಾತನಾಡಿದೆವು. ಅಲ್ಲಿಂದ ೩ ಕಿಮೀ ಇರುವ ಅಬ್ದುಲ್ಲಾ ಶೆರ್ಪಾನ ಮನೆಗೆ ಹೊರೆಟೆವು. ನಡೆಯುವ ಮೂರು ಜನರು ಕೋಲುಗಳನ್ನು ಕೊಂಡರು. ಅಲ್ಲಿ ಕರ್ನಾಟಕದ ಪೂರ್ಣಿಮಾ ಹೋಟೆಲ್ ಹುಡುಗ ಬಂದು ಕನ್ನಡದಲ್ಲಿ ಮಾತನಾಡಿಸಿದಾಗ ನಮಗೇನೋ ಆನಂದ! ಶೆರ್ಪಾನ ಸಹಾಯದಿಂದ ಒಂದು ಮಿಲಿಟರಿ ಟ್ರಕ್ ನಲ್ಲಿ ಸಾಮಾನುಗಳೊಡನೆ ನಾವೂ ಕುಳಿತು ಆ ಹಳ್ಳಿಗೆ ಹೋಗಿ ಸೇರುವ ವೇಳೆಗೆ ಕತ್ತಲಾಗುವಂತಿತ್ತು. ಅಲ್ಲಿ ಇನ್ನೂ ರಮಣೀಯವಾದ ದೃಶ್ಯ ನೋಡಿ ದಂಗಾದೆವು. ಒಂದು ದೊಡ್ಡ ಕೊಠಡಿ ಪ್ರವಾಸಿಗರಿಗಾಗೆ ಮೀಸಲಾಗಿಟ್ಟಿದ್ದರು. ಅಲ್ಲಿ ಎಲ್ಲರೂ ತಂಗಿದೆವು. ಆನಂತರ ನಾವು ಭಜನೆ ಪ್ರಾರ್ಥನೆಗಳನ್ನು ಮಾಡಿ ಹುರಿಟ್ಟು ತಿಂದು ಮಲಗಿದೆವು. ಪಹಲ್ ಗಾವ್ ನಿಂದ ಶ್ರೀ ಅಮರನಾಥ್ ಕ್ಷೇತ್ರವು ೩೨ ಮೈಲಿಗಳು ಅಥವಾ ೫೦ ಕಿಲೋಮೀಟರುಗಳು. ಕೆಲವರು ಇಲ್ಲಿಂದ ೧೦ ಮೈಲಿ ಮಿಲಿಟರಿ ಟ್ರಕ್ಕುಗಳಲ್ಲಿ ಹೋಗಿ ಅಲ್ಲಿಂದ ನಡೆಯುವರು. ಎಲ್ಲರಿಗೂ ಧಾವಂತ, ಆತಂಕ. ಈ ಸಾಹಸದ ಯಾತ್ರೆ ನಡೆಸುವುದು ಭಗವಂತನೆಂದು ನಂಬಿ ಮಲಗಿದ ನಮಗೆ ನಿದ್ದೆಯೇ ಬರಲಿಲ್ಲ. ಬೆಳಗಿನ ೫ ಗಂಟೆಗೇ ಎಡೆವು. ಶ್ರೀನಿವಾಸ್, ರಮೇಶ್, ಎಸ್ ಎಲ್ ರವರು ಶೂಸ್, ಸಾಕ್ಸ್, ಟೋಪಿ, ಕೋಟುಗಳನ್ನು ಹಾಕಿಕೊಂಡು ಹೊರಟರು. ನಾವು ಹುಶಾರೆಂದು ಹೇಳಿ ಅವರಿಗೆ ಶುಭ ಕೋರಿದೆವು. ಎಲ್ಲರದೂ ಮಿತವಾದ ಬಟ್ಟೆಬರೆ, ತಿಂಡಿ-ಕಂಬಳಿಗಳನ್ನು ಸೇರಿಸಿ ಲಗ್ಗೇಜ್ ರೆಡಿ ಮಾಡಿದೆ. ಮಿಕ್ಕಿದ್ದನ್ನು ಅಲ್ಲೇ ಬಿಟ್ಟೆವು. ಬೆಳಗ್ಗೆ ಆರೂವರೆ ಗಂಟೆ ವೇಳೆಗೆ ಕುದುರೆಗಳು ಬಂದವು. ನಾವು ಮೂವರು - ಸುಬ್ಬಮ್ಮ, ಲಲಿತಕುಮಾರಿ ಮತ್ತು ನಾನು - ಅಗತ್ಯವಾದ ಉಡುಪು ಧರಿಸಿ ಹೊರೆಟೆವು. ಇದೆ ಮೊದಲು ನಾನು ಶೂಸು, ಟೋಪಿಗಳನ್ನು ಹಾಕಿಕೊಂಡದ್ದು. ನಿಂತಿದ್ದ ಕುದುರೆಗಳಿಗೆ ಮುಟ್ಟಿ ನಮಸ್ಕಾರ ಮಾಡಿ ಜೈ ಅಮರನಾಥ್ ಎನ್ನುತ್ತಾ ಹತ್ತಿದೆನು. ಅಮರನಾಥ್ ಕ್ಷೇತ್ರದ ಕಡೆಗೆ ಪ್ರಯಾಣ ಶುರುವಾಯಿತು. ***** ಪಹಲ್ ಗಾವ್ ನಿಂದ ಚಂದನವಾಡಿ ಎಂಬ ಹಳ್ಳಿಯವರೆಗೆ ೧೦ ಮೈಲಿಗಳ ಡೋರ್ ಟ್ರಕ್ ಗಳು ಓಡಾಡುವಷ್ಟು ಒಳ್ಳೆಯ ರಸ್ತೆ ಇದೆ. ತುಂಬಾ ಸುಂದರವಾದ ತಾಣ. ಈ ಪ್ರದೇಶವು ಚಲಚಿತ್ರಗಳ ಚಿತ್ರೀಕರಣ ಕೇಂದ್ರ. ‘ರಾಮ್ ತೇರಿ ಗಂಗಾ ಮೈಲಿ’, ‘ಬೇತಾಬ್’ ಮುಂತಾದ ಅನೇಕ ಹಿಂದಿ ಸಿನಿಮಾಗಳ ಶೂಟಿಂಗ್ ಇಲ್ಲಾಗಿದೆ. ಚಂದನವಾಡಿವರೆಗಿನ ಕಣಿವೆಯು ಅತಿ ಸುಂದರವಾಗಿದೆ. ಬೆಳಗಿನ ತಂಪು ಹವೆ, ಹೂ ಬಿಸಿಲು ಪ್ರಕೃತಿಯ ಅಂದವನ್ನು ಹೆಚ್ಚಿಸಿತ್ತು. ಎಲ್ಲವೂ ಚೆನ್ನಾಗಿದೆ, ಹೆಜ್ಜೆಹೆಜ್ಜೆಗೂ ಫೋಟೋ ತೆಗೆಯಬೇಕಿತ್ತು! ಇರಲಿ, ನನ್ನ ಮನವೆಂಬ ಕ್ಯಾಮೆರಾದಲ್ಲಿ ಎಲ್ಲಾ ಫೋಟೋಗಳೂ ಪ್ರಿಂಟಾಗಿ ನೆನಪೆಂಬ ಕಣ್ಣಿಂದ ಬೇಕಾದಾಗ ನೋಡಿಕೊಳ್ಳುವೆ. ಆ ಸುಂದರ ನೋಟದ ಅನುಭವಕ್ಕೆ ಭಂಗ ಬಾರದಂತೆ ನಾನು ಮೂಕಳಾಗಿ ವಿಸ್ಮಿತಳಾಗಿ ನೋಡುತ್ತಿದ್ದೆ. ಆಗ ಹಿಮಾಲಯವು ಕಣ್ಣಿಗೆ ಕಾಣುವ ಬರಿ ಬೆಟ್ಟಗಳಾಗಿರದೆ ಶ್ರುತಿ, ಸ್ಮೃತಿಗಳಲ್ಲಿ ವಿವರಿಸಿರುವಂತಹ ಪರಮಾತ್ಮನ ವಾಸಸ್ಥಳವಾಗುತ್ತದೆ. ಹಿಮಾಲಯದಲ್ಲಿ ಅನೇಕ ಅಂತರ್ಗತವಾದ ರಹಸ್ಯಗಳು ಹುದುಗಿವೆ. ಒಳಹೊಕ್ಕು ಪಯಣಿಸಿದಾಗ ಒಂದೊಂದೇ ಅರಿವಾಗುವುದು. ನಾನು ಆದಷ್ಟೂ ನನ್ನ ಬುದ್ಧಿಗೆ ಹೊಳೆದಷ್ಟು ನೋಡಿನೋಡಿ ಅರಿತೆನು. ಆನಂದಿಸಿದೆನು. ಆಗ ನನ್ನ ಮನಸ್ಸು ತುಂಬಾ ತೃಪ್ತಿಯಾಗಿತ್ತು. ನನಗೆ ಮಸ್ತಾನ ಎಂಬ ಕುದುರೆ ಕೊಟ್ಟಿದ್ದರು. ಎರಡು ಕುದುರೆಗೆ ಒಬ್ಬ ಶೆರ್ಪಾ. ನನ್ನ ಹಾಗೂ ಲಲಿತಕುಮಾರಿಯವರಿಗೆ ಸೇರಿದಂತೆ ಅಬ್ದುಲ್ಲಾ ನೋಡಿಕೊಳ್ಳುತ್ತಿದ್ದನು. ಈತನು ಪಕ್ಕಾ ಕಾಶ್ಮೀರ ಯುವಕ. ಹಿಂದಿ ಬರುತ್ತಿತ್ತು. ತುಂಬಾ ನಂಬಿಕಸ್ಥ. ನಿಮ್ಮ ಯಾತ್ರೆಯು ನನಗೆ ಸೇರಿದ್ದು, ನಾನು ಗುಹೆಯವರೆಗೆ ತಲುಪಿಸಿ, ವಾಪಸ್ಸು ಕರೆ ತರುವೆನು, ನೀವೇನೂ ಯೋಚನೆ ಮಾಡಬೇಡಿ ಮಾಜಿ, ಎಂದು ಹಲವು ಸಲ ಧೈರ್ಯ ಹೇಳಿದ್ದನು. ದಾರಿಯಲ್ಲಿ ಅದೇನೋ ಕಾಶ್ಮೀರಿ ಪದಗಳನ್ನು ಕೂಗಿ ಹಾಡುತ್ತ ಹೇಳಿಕೊಳ್ಳುತ್ತಿದ್ದನು. ಕುದುರೆ ಹತ್ತಿದ ತಕ್ಷಣ ಲಗಾಮಿನ ಪ್ರಯೋಗವನ್ನು ಹೇಳಿಕೊಟ್ಟನು. ನಾನು ಅನೇಕರಂತೆ ಸರಾಗವಾಗಿ ಕುದುರೆಯನ್ನು ನಡೆಸಿದೆನು. ಇಲ್ಲಾ, ಅದೇ ನನ್ನನ್ನು ನಡೆಸಿತು! ಆತನ ಗಮನವೆಲ್ಲ ಸ್ಥೂಲಕಾಯದ ಎಲ್ ಕೆ ರವರ ಕಡೆಗಿತ್ತು. ಅವರಿಗೆ ಮೈ ಹುಷಾರಿರಲಿಲ್ಲ ಬೇರೆ. ಅಬ್ದುಲ್ಲಾ ಕಷ್ಟದ ದಾರಿಗಳಲ್ಲಿ ಓಡಿಬಂದು ನನ್ನ ಕುದುರೆಯನ್ನು ಹಿಡಿದುಕೊಳ್ಳುತ್ತಿದ್ದನು. ಸಣ್ಣ ಸೇತುವೆಗಳು ಬಂದಾಗ ನಾವು ಭಯದಿಂದ ತತ್ತರಿಸುತ್ತಿದ್ದೆವು. ಒಂದೆರೆಡು ಬಾರಿ ಇಳಿಸಿ ನಡೆದು ಬರಲು ಹೇಳಿದನು. ಒಟ್ಟಿನಲ್ಲಿ ನಾನು ಕುದುರೆ ಸವಾರಿಯಲ್ಲಿ ಪಳಗಿದವಳೆಂದು ಹೇಳಿ ಮೆಚ್ಚಿಕೊಂಡನು! ಹೋಗುತ್ತಾ, ಬರುತ್ತಾ ಒಟ್ಟು ೯೦ ಕಿಮೀ ಕುದುರೆಸವಾರಿ. ಅದು ಓಡುವಂತಿಲ್ಲ! ಪಕ್ಕದಲ್ಲಿ ಆತನು ನಡೆದು ಬರುತ್ತಿದ್ದನು. ನಾನೂ ಒಮ್ಮೆ ಕುದುರೆಯಿಂದ ಮಂಜಿನಲ್ಲಿ ಬಿದ್ದು ಸ್ಕೇಟಿಂಗ್ ಅನುಭವ ಪಡೆದೆನು. ಶ್ರೀ ಅಮರನಾಥನಿಗೆ ಉರುಳುಸೇವೆ ಮಾಡಿದೆನು. ಮೂರು ನಾಲ್ಕು ಸಲ ಬಿದ್ದವರನ್ನು ನೋಡಿ ಮರುಕಪಟ್ಟು ಸದ್ಯ ನಾನು ಬೀಳಲಿಲ್ಲವೆಂದುಕೊಂಡೆನು. ತಕ್ಷಣವೇ ಬಿದ್ದೆನು! ಅಹಂ ಕೂಡದಲ್ಲವೇ? (ಮುಂದುವರೆಯುವುದು) ~ ವಿನತೆ ಶರ್ಮ
A rare but very good rendering! Thanks!
On Fri, Apr 1, 2022 at 1:55 PM ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ wrote:
> Gouri Prasanna posted: ” ..ಯುಗಾದಿ ಮತ್ತೆ ಮರಳಿ ಬರುತಿದೆ ತರುಲತೆಗಳಲ್ಲಿ ಚೈತ್ರದ
> ಚಿಗುರು ಪಲ್ಲವಗಳು, ಹೊಂಗೆ ಮರದ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿಗಳು, ಬೇವು-ಮಾವುಗಳ
> ಸೊಗಸು-ಸಂಭ್ರಮಗಳು ..ಇವೆಲ್ಲವನ್ನೊಳಗೊಂಡು ಮತ್ತೆ ಬಂದಿದೆ ಯುಗಾದಿ. ನವ ವಸಂತದ ನವಿರು
> ಗಾಳಿ ಮನಮನಗಳನ್ನೂ ಪುಲಕಗೊಳಿಸಿದೆ. ಬೇವು-ಬೆಲ್ಲದೊಂದಿಗೆ ಹಳೆಯ ನೂರಾರು”
>
LikeLike
ಹೊಸ ವರ್ಷವನ್ನು ತಳಿರು- ತೋರಣ, ಎಣ್ಣೆ ಸ್ನಾನ, ಹೋಳಿಗೆ ಊಟವನ್ನಟ್ಟಿ ಆರಂಭಿಸಿದ್ದಾರೆ ಗೌರಿಯವರು ಸಂದರ್ಭೋಚಿತವಾಗಿ. ಗುಲ್ಕಂದದ ಲಡ್ಡು ಕಟ್ಟಿ ತಿನ್ನುವ exta ಕೆಲಸ ಕೊಟ್ಚಿರುವ ಸವಿತಾರಿಗೆ ಧನ್ಯವಾದ ಹೇಳಲೋ, ಹೊಸರುಚಿಯನ್ನು ಶ್ರೀಮತಿಗೆ ತೋರಿ ಜವಾಬ್ದಾರಿ ವರ್ಗಾಯಿಸಲೇ ಎಂದು ಯೋಚಿಸುತ್ತಿದ್ದೇನೆ.
ಲೇಖನದೊಂದಿಗೆ ಅನಿವಾಸಿಯನ್ನು ಪ್ರವೇಶಿಸಿರುವ ಉಮೇಶ್ ಅವರಿಗೆ ಸ್ವಾಗತ. ಗ್ರೆಗೇರಿಯನ್ ಮಾಸಗಳ ಸರಣಿಯನ್ನು ಮರು ಹೊಂದಾಣಿಕೆ ಮಾಡಿಟ್ಟು ಇಷ್ಟು ಕಾಲ ನಾವೆಲ್ಲ ಫೂಲ್ ಆಗಿದ್ದೆವಲ್ಲ ಎಂಬ ಭಾವನೆ ಮೂಡಿಸಿದ್ದಾರೆ.
ತಮ್ಮ ತಾಯಿಯವರ ಅಮರನಾಥ ಯಾತ್ರೆಯ ಕಥನವನ್ನು ಅನಿವಾಸಿಯಲ್ಲಿ ಪ್ರಕಟಿಸಿರುವ ವಿನತೆಗೆ ನನ್ನ ಧನ್ಯವಾದಗಳು. ಈ ಯಾತ್ರೆಯ ಕಾಠಿಣ್ಯವನ್ನು ಕೆಲವು ವರ್ಷಗಳ ಹಿಂದೆ ಮಾಡಿಬಂದ ನನ್ನ ಗೆಳೆಯನಿಂದ ಕೇಳಿ ಬಲ್ಲೆ. ಅವರಿಗೆ ಲಿಂಗ ದರ್ಶನವಾಯಿತೇ ಎಂದು ಕಾತುರನಾಗಿ ಕಾಯುತ್ತಿರುವೆ.
– ರಾಂ
LikeLike
‘ಅನಿವಾಸಿಯ’ಯುಗಾದಿ ಪಾಡ್ಯೇ ಸಂಚಿಕೆ “ಏಪ್ರಿಲ್ ಫೂಲ್” ದಿನ ಪ್ರಕಟವಾಗಿ ನಾನಂತೂ ಓದಿ ‘ಫುಲ್’ ಖುಷ್! ಮೊದಲು ಓದುವದೇ ಗೌರಿಯವರ ಸಂಪಾದಕೀಯ. ಕಾರಣಾಂತರಗಳಿಂದ ಬಾಲ್ಯದಲ್ಲಿ ಟ್ರೆಡಿಷನಲ್ ಯುಗಾದಿ ಮಿಸ್ ಮಾಡಿಕೊಂಡ ಕೆಲ ವರ್ಷಗಳ ಅನುಭವವನ್ನು ನಿಮ್ಮ ಅತ್ಯದ್ಭುತ ಮತ್ತು ಸುಂದರ ವರ್ಣನೆಗಳಿಂದ ಪರೋಕ್ಷವಾಗಿ ಅನುಭವಿಸಿದೆ. ಸುಡು ಬಿಸಿನೀರಿನ ಅನುಭವ ಸಹ ಆಯಿತೆಂದ ಮೇಲೆ ಕಣ್ಣೆಗೆ ಕಟ್ಟಿದಂತೆಯೇ! ಅದರಲ್ಲಿ ಆ ಕತ್ತೆ ಎಲ್ಲಿಂದ ಬಂತೋ, ಶನಿ, ಅಪದ್ದಪಾದ್! ‘ಸವಿ’ ಯವರ ಗೋಡಂಬಿ- ಗುಲಕಂದ – ಲಡ್ಡು ರೆಸಿಪಿ ಬಾಯೂರಿಸಿತು. ರಿಚ್ – ಮತ್ತು ‘ಸ್ಥೂಲ’ವಾಗ”ಹೇಳಬೇಕಂದರೆ ಒಂದು ದಿನ ತಾನೇ, ಆಮೇಲೆ ಇನ್ನೆರಡು ಮೈಲು ನಡೆದರಾಯಿತು ಅಂತ ಸವಿತಾ ಅವರನ್ನು ಕ್ಷಮಿಸಬಹುದು! ಚಂಡ್ಸ್ನಂಸ್ ಫೋಟೋ ಇರುತ್ತದೆ ಯಾವಾಗಲೂ ಅವರ ರೆಗ್ಯುಲರ್ ಕಾಲಂ ನಲ್ಲಿ. ನೋಡಿಯೇ ಸಂತೃಪ್ತಿ ನನಗೆ. ರೆಸಿಪಿ ರಸಿಕರು ನನ್ನ ಪಾಲನ್ನೂ ‘ಸವಿ’ಯಲಿ.👏👏 ಇನ್ನು ಹೊಸ ಬರಗಾರರನ್ನು ಸ್ವಾಗತಿಸುವೆ ಎಂದಿನಂತೆ- ಇಂದು ಉಮೇಶ್ ಅವರನ್ನು. ಅವರ ತಂದೆ ನಮ್ಮ ‘ಪ್ರೊಫೆಸರ್’ ಆಗಿದ್ದರು ಆದರೆ ನಮಗೆ ಕಲಿಸಲಿಲ್ಲ. ಆದರೆ ಅವರ ಜೀವನವನ್ನೇ ನೋಡಿ ಕಲಿಯಬೇಕು ಅನ್ನುವ ಖ್ಯಾತಿಯ ಪುಣ್ಯಾತ್ಮರು. ಅವರ ಸಂಸ್ಕಾರ (ಬದುಕು- ಬರಹ ಎರಡರದೂ) ಪಡೆದು ಅವರ ‘ಜೋಳಿಗೆ ತುಂಬಿದಂತಿದೆ!’ ಸುಪ್ತ ಮನಸ್ಸನ್ನೆಬ್ಬಿಸಿ ಸಂಖ್ಯೆಗಳ ವೃತ್ತದಲ್ಲಿ ತಿರುಗಿಸಿ ಯುಗಾದಿಯ ಮರ್ಮವನ್ನು ಈ ಸಪ್ತಜೆನೆರಿಯನ್ನನಿಗೂ (septugenerian) ತಿಳಿಸಿದ್ದಾರೆ, ಅಷ್ಟಿಷ್ಟು. ಇನ್ನೊಬ್ಬರು ಸಾಹಿತ್ಯವನ್ನು ಜೀನ್ಸ್ ನಲ್ಲೆ ಪಡೆದು ಜೀರ್ಣಿಸಿಕೊಂಡವರೆಂದರೆ ವಿನತೆಯವರು.ಮನಸೆಮ್ಬ ಕ್ಯಾಮರಾದಿಂದ ಸೆರೆಹಿಡಿದು (ಮಿದುಳಿನ ಮೆಮರಿಯಲ್ಲಿ ಕಾಯ್ದಿಟ್ಟು) ಬೇಕಾದಾಗ ಕಣ್ಣಿಂದ ರಿಕಾಲ್ ಮಾಡಿ ನೋಡುವ ಅವರ ತಾಯಿಯ ರೂಪಕ ಅದ್ಭುತ ಮತ್ತು ನನಗೂ ಬಹಳ ಹಿಡಿಸಿತು ಅಂತ ನಾನೂ ರಿಪ್ರಿಂಟ್ ಮಾಡಿಬಿಟ್ಟೆ! ಇನ್ನೂ ಪಯಣ ಆರಂಭವಾಗಿದೆ. ಅಷ್ಟರಲ್ಲಿ ಎಷ್ಟು ಕುತೂಹಲಕರ ಮತ್ತು ಓದಲು ರೋಚಕ! ಅಂಚು ಬಿರಿಯುತ್ತಿರುವ ಹಾಳೆಗಳಿಂದ ಆ ಅ ಅಕ್ಷರಗಳನ್ನು ಬೆರಳಚ್ಚುಗಳಿಂದ ಶಾಶ್ವತೀಕರಿಸುವ ಪುಣ್ಯದ ಕೆಲಸ ಮಾಡುತ್ತಿದ್ದೀರಿ; ನಮಗೂ ಆ ಸಿಹಿ ಪ್ರಸಾದ ಹಂಚಿ ಧನ್ಯರಾಗಿದ್ದೀರಿ. ಮುಂದುವರಿಯಲಿ ಈ ಕೈಂಕರ್ಯ!
ನಾಳೆ ಹೊಸ ಯುಗಾದಿಯ ಬೆಳಗು!
LikeLike
Thumba sogasaagi sundaravaagi Yugadi habbada visheshate yannu tiLisideera!!! Excellent article!!
LikeLike