ಆ ಗಹನ ತತ್ವಕೆ ಶರಣು – ಮಂಕುತಿಮ್ಮ


ಸಹೃದಯಿ ಓದುಗರಿಗೆಲ್ಲ ನಮಸ್ಕಾರ. 

ಒಮ್ಮೆ ಡಿ.ವಿ.ಜಿ.ಯವರ ಮನೆಗೊಬ್ಬ ಜಪಾನಿ ಯುವಕ ಬಂದ.ಅವರೊಡನೆ ಮಾತನಾಡಿದ.ಡಿ.ವಿ.ಜಿ.ಅವನಿಗೆ ಕಾಫಿ ಕೊಟ್ಟರು. ಅದನ್ನು ಹೀರಿದ ಆ ಯುವಕ ‘The coffee is good'ಎಂದ. ಅವನು ಹೊರಟು ನಿಂತಾಗ ಡಿ.ವಿ ಜಿಯವರು ‘God bless you’ ಎಂದರು. ಹೊರಟಿದ್ದ ಯುವಕನು ‘ನಿಮಗೆ ದೇವರಲ್ಲಿ ಹೇಗೆ ನಂಬಿಕೆ ಸಾಧ್ಯ? ನೀವು ಅವನನ್ನು ಕಂಡಿದ್ದೀರಾ?’ಎಂದು ಪ್ರಶ್ನಿಸಿದ. ಡಿ.ವಿ.ಜಿ  ಉತ್ತರ ಕೊಟ್ಟರು:’The coffee is good ‘ಎಂದಿರಲ್ಲ,ಅದರಲ್ಲಿರುವ goodness..ನೀವು ಸಾವಿರಾರು ಮೈಲು ಆಚೆ ಇರುವವರು ಇದುವರೆಗೆ ನನ್ನನ್ನು ಕಾಣದಿದ್ದವರು ಕಾಣಬೇಕೆಂದು ವಿಶ್ವಾಸದಿಂದ ಬಂದಿರಲ್ಲ, ಆ goodness ..ಈ ಎಲ್ಲ goodness ದೇವರು’ ಆ ಜಪಾನಿ ಯುವಕ ಒಳಕ್ಕೆ ಬಂದ.ಒಂದು ಗಂಟೆ ಕುಳಿತು ತನ್ನ ತೊಡಕು ತಾಕಲಾಟಗಳನ್ನು ಅವರಲ್ಲಿ ಹೇಳಿಕೊಂಡು ಸಮಾಧಾನವನ್ನು ಪಡೆದು ಹೊರಟ (ಆಧಾರ ಬ್ರಹ್ಮಪುರಿಯ ಭಿಕ್ಷುಕ).  ಹೀಗೆ ಒಳಿತೆಲ್ಲ ದೇವರು ಎಂದು ನಂಬಿದ, ಬಾಳಿದ ಧೀಮಂತ ಚೇತನ ಈ ನಮ್ಮ ಕಗ್ಗಾಚಾರ್ಯ ಡಿ.ವಿ.ಗುಂಡಪ್ಪನವರು. ಅವರು ಮೂರಡಿಗಳಿಂದಲೇ ಮೂರು ಲೋಕಗಳನ್ನಳೆದು ಅದನ್ನೂ ಮೀರಿದ ತ್ರಿವಿಕ್ರಮನಂತೆ ಎಂದು ಪ್ರಾಜ್ಞರ ಹೇಳಿಕೆ. ಅವರ ಹುಟ್ಟಿಗಿಂದು ನೂರಾಮೂವತ್ತೈದು ಸಂದಿತು. ಸೃಷ್ಟಿಸಿದ ಸಾಹಿತ್ಯವೆಲ್ಲ ಇನ್ನೂ ಚಿರನೂತನ.

ಅವರ ಕಗ್ಗದ ಅಭಿಮಾನಿಯಾದ ವಿಜಯ ನಾರಸಿಂಹ ಅವರು ಬಹಳ ಅಭಿಮಾನದಿಂದ ನುಡಿನಮನ ಸಲ್ಲಿಸಿದ್ದಾರೆ. ಕಗ್ಗಗಳು ಅದ್ಹೇಗೆ ತಮ್ಮನ್ನು ಆಕ್ರಮಿಸಿಕೊಂಡಿವೆಯೆಂಬುದನ್ನು ಹೇಳುತ್ತಿದ್ದಾರೆ ಕೇಳಿ.

ಸತ್ವಪೂರ್ಣವಾದ ಕೆಲವು ಕಗ್ಗದ ಪದ್ಯಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಗಮಕವಾಚನ ಮಾಡಿದ್ದಾರೆ ನವ್ಯ ಆನಂದ ಅವರು. 
‘ಶ್ರೀರಮಣನೇ ನಮ್ಮ ಚೆನ್ನಕೇಶವರಾಯ ಓರೆಗಣ್ಣಿಂ ಸನ್ನೆ ತೋರುತಲಿಹನೇನೇ..ಏನೀ ಮಹಾನಂದವೇ’ ಎಂದು ಕವಿ ಹಾಡುತ್ತಾರೆ ತಮ್ಮ ‘ಅಂತ:ಪುರ ಗೀತೆ’ಯಲ್ಲಿ. ಬನ್ನಿ..ಬೇಲೂರ ಬಾಲಿಕೆಯರನ್ನೂ, ಚೆನ್ನಕೇಶವನನ್ನೂ ನಾವೂ ನೋಡೋಣ ಪ್ರಸನ್ನ ಅವರ ‘ಆನಂದೋಬ್ರಹ್ಮ’ ಕಥೆಯಲ್ಲಿ.
ಅರೇ, ಇದೇನಪ್ಪಾ! ನಾವಿಷ್ಟುದಿನ ‘ ಪ್ಯಾಪ್ಯಾ’, ‘ಬ್ಲಾ ಬ್ಲಾ’ ಮಾತು ಕೇಳಿದ್ದೆವು. ಇಂದು ಪ್ರಮೋದ್ ಅವರು ಅದೇನೋ ‘ಪೈ ಪೈ’  ಮಾತು ಹೇಳುತ್ತಾರಂತೆ ಮಾರ್ಚ್ 13 ರ ಹಿನ್ನೆಲೆಯಲ್ಲಿ. ಏನಂತ ಕೇಳೋಣವೇ?

ಬನ್ನಿ..ಓದಿ,ಕೇಳಿ,ಮಾತಾಡಿ. ಖುಷಿಪಡಿ.ಏಕೆಂದರೆ ನಮ್ಮ ಡಿ.ವಿ.ಜಿ. ಅಪ್ಪಣೆ ಕೊಡಿಸಿದ್ದಾರಲ್ಲವೇ ‘ಆನಂದವಾತ್ಮಗುಣ ಮಂಕುತಿಮ್ಮ’ ಎಂದು.

~ ಸಂಪಾದಕಿ

ಎಲ್ಲರೊಳಗೊಂದಾಗು ಮಂಕುತಿಮ್ಮ

ಸಾಹಿತ್ಯ,ತತ್ವಜ್ಞಾನ, ಪತ್ರಿಕೋದ್ಯಮ,ಶಾಸ್ತ್ರ ಜ್ಞಾನ, ಸಮಾಜ ಸೇವೆ,ಬಹು ಭಾಷಾ ಪಾಂಡಿತ್ಯ ಹೀಗೆ ಹತ್ತು ಹಲವು  ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಆದರ್ಶಯುತ ಜೀವನವನ್ನು ನಡೆಸಿ ಕನ್ನಡ ಸಾಹಿತ್ಯಕ್ಷೇತ್ರ ಮತ್ತು ಪತ್ರಿಕಾ ರಂಗಕ್ಕೆ ಅನರ್ಘ್ಯ ಕೊಡುಗೆಯನ್ನು ಕೊಟ್ಟ ದಿವ್ಯ ಚೇತನ ಡಿ.ವಿ.ಜಿ (ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ ) ಅವರು ಜನಿಸಿದ್ದು  ೧೮೮೭ ಮಾರ್ಚ್ ೧೭ರಂದು.
ಕನ್ನಡ ಸಾಹಿತ್ಯ ಲೋಕದಲ್ಲಿ ಡಿ.ವಿ.ಜಿ ಕಿರೀಟಮುಕಟಪ್ರಾಯರು ಎಂದರೆ ಅತಿಶಯೋಕ್ತಿಯಲ್ಲ.
ಬಡವರ ಭಗವದ್ಗೀತೆ ಎಂದೇ ಪ್ರಖ್ಯಾತಿಗೊಂಡಿರುವ ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳ ಮುನಿಯನ ಕಗ್ಗ' ವನ್ನು ರಚಿಸಿದ ನಂತರ  ಕನ್ನಡದ ಕಗ್ಗಾಚಾರ್ಯರಾಗಿ ಗೋಚರಿಸಿದರು.
ಅವರ ‘ಉಮರನ ಒಸಗೆ' , ‘ಜೀವನ ಧರ್ಮ ಯೋಗ', ‘ಅಂತಃಪುರ ಗೀತೆಗಳು' ಕನ್ನಡ ಸಾಹಿತ್ಯಕ್ಕೆ ದಕ್ಕಿದ ರತ್ನಗಳು.
ನಾನು ಶಾಲಾದಿನದಲ್ಲಿ ಓದಿದ ಕಗ್ಗದ ಪದ್ಯ 
‘ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆಯಾಗು|
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು-ಮಂಕು ತಿಮ್ಮ||’
ಈ ಪದ್ಯವು ನನ್ನನು ಬಹಳವಾಗಿ ಆಕರ್ಷಿಸಿತು , ಒಂದೊಂದು ಸಾಲಿನ ಒಂದೊಂದು ಪದವೂ ಅರ್ಥ ಗರ್ಭಿತ, ವ್ಯಷ್ಟಿಯಲ್ಲಿ ಓದಿದಾಗ ಪದಚ್ಛೇದದ/ಪದಸಂಕುಚಿತಗಳ ಮೋಡಿ ಸಮಷ್ಟಿಯಲ್ಲಿ ಓದಿದಾಗ ತತ್ವಜ್ಞಾನದ ಸಾರ, ಪದ ಲಾಲಿತ್ಯ, ಕಾವ್ಯ ಸೌಂದರ್ಯ, ನಾಲಿಗೆಯ ಮೇಲೆ ನಲಿದಾಡುವ, ಮನಸಿಗೆ ಮುದ ನೀಡುವ, ಬುದ್ಧಿಗೆ ಪ್ರಶ್ನೆ ಹಾಕಿ ಬುದ್ಧಿ ಕಲಿಸುವ, ಪಾಠ ಹೇಳುವ, ಜೀವನಧರ್ಮವನ್ನು ತಿಳಿಸುವ ಇನ್ನೂ ಸಾಕಷ್ಟು ಅವ್ಯಕ್ತ ಅನುಭವ ನನಗೆ ಆಗತೊಡಗಿತು. ಇದರಿಂದಾಗಿ ಇನ್ನಷ್ಟು ಕಗ್ಗ ಪದ್ಯಗಳನ್ನು ಓದುವ ಹಂಬಲ ನನ್ನಲ್ಲಿ ಹುಟ್ಟಿತು.
ಕಗ್ಗದ ಮೋಡಿಯೇ ಅಂತಹುದು,ಒಂದು ಬಾರಿ ಓದಿದರೆ ಮತ್ತೆ ಮತ್ತೆ ಓದಬೇಕೆನ್ನುವ ಪರಮಾಕರ್ಷಣೆಯನ್ನು ಅದರಲ್ಲಿ ಅಡಗಿಸಿಟ್ಟಿದ್ದಾರೆ ಮಾನ್ಯ ಡಿ.ವಿ.ಜಿ.
ಕಗ್ಗವನ್ನು ಬರೆಯುವಾಗ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದೆ ಎಂದು ಸ್ವತಃ ಡಿ.ವಿ.ಜಿ ಅವರೇ ಈ ಕೆಳಗಿನ ಪದ್ಯದಲ್ಲಿ ಹೇಳಿದ್ದಾರೆ
‘ ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ|
ಲೋಕತಾಪದಿ ಬೆಂದು ತಣಿಪನೆಳಸಿದವಂ||
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು|
ಸ್ವೀಕರಿಕೆ ಬೇಳ್ಪವರು-ಮಂಕು ತಿಮ್ಮ ||’
ಕಗ್ಗವು ಪಂಡಿತರಿಗೆ , ಜ್ಞಾನಿಗಳಿಗೆ, ಶಾಸ್ತ್ರಜ್ಞರಿಗೆ ಬರೆದದ್ದಲ್ಲ ಬದಲಾಗಿ ಸಾಮಾನ್ಯರಲ್ಲಿ ಅತಿಸಾಮಾನ್ಯರು 
ಜೀವನದ ಬೇಗೆಯಲ್ಲಿ ನೊಂದು ಬೆಂದು ತಂಪನು ಬಯಸುವವರಿಗೆ ಎನ್ನುತ್ತಾರೆ ಕಗ್ಗಾಚಾರ್ಯ ಡಿ.ವಿ.ಜಿ
ಕಗ್ಗಗಳನ್ನು ಓದುವಾಗ ಒದುಗರಿಗೆ ರಸಾನುಭವವಾಗುವುದು ಒಂದೋ ಎರಡೋ ಬಾರಿ ಕಣ್ಣಾಡಿಸಿಯೋ ಅಥವಾ ಬಾಯಾಡಿಸಿದಾಗ ಅಲ್ಲ ಬದಲಿಗೆ ಮತ್ತೆ ಮತ್ತೆ ಓದಿ, ವಿವಿಧ ದೃಷ್ಟಿ ಕೋನದಿಂದ ಅರ್ಥಗ್ರಹಿಸಬೇಕು, ಕಗ್ಗದ ಸಾಲುಗಳೊಂದಿಗೆ ನಮ್ಮ ಜೀವನದ ಅನುಭವಗಳನ್ನು ಬೆಸೆದು ಸವಿಯಬೇಕು.
ನಾವು ಫಿಲ್ಟರ್ ಕಾಫಿಯನ್ನು ಒಮ್ಮೆಗೇ ಕುಡಿದರೆ ಅದರ ರಸಾಸ್ವಾದ ಅಗುವುದಿಲ್ಲ ಒಂದೊಂದು ಗುಕ್ಕನ್ನೂ ನಾಲಗೆಯ ಮೇಲೆ  ಕೆಲವು ಸೆಕೆಂಡುಗಳ ಕಾಲ ಕುಳ್ಳಿರಿಸಿ  ರಸಗ್ರಂಥಿಗಳು ಹೀರಿ ಆನಂದಿಸಿ ಚಪ್ಪರಿಸಿದಾಗ ಮೆದುಳಿಗೆ ಕಾಫಿಯ ರಸವು ಉನ್ಮತ್ತ ಭಾವದ ಪರಾಕಾಷ್ಠೆಯ ಪ್ರತೀ ಸಂದೇಶವನ್ನೂ  ಕಳಿಸುತ್ತದೆ , ಇದೇ ರೀತಿ ನಾವು ಕಗ್ಗಪದ್ಯಗಳನ್ನು ಸವಿಯಬೇಕು.
ಇಂತಹ ಶ್ರೇಷ್ಠ ಕೃತಿಯನ್ನು ರಚಿಸಿದ್ದರೂ ಡಿ.ವಿ.ಜಿ ಯವರು ಅದು ಪರಮಶ್ರೇಷ್ಠವಲ್ಲ ಎಂದು ತಮ್ಮ ನಿರಹಂಕಾರದ ನಿಲುವನ್ನು ಮತ್ತು ತಮ್ಮನ್ಮು ತಾವು ತಿದ್ದಿಕೊಳ್ಳುವ ಔದಾರ್ಯವನ್ಮು ಓದುಗರಲ್ಲಿ ಈ ಕೆಳಗಿನಂತೆ ಬಿನ್ನಹಿಸುತ್ತಾರೆ
‘ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ|
ಇಂದು ನಂಬಿಹುದೆ ಮುಂದೆಂದುಮೆಂದಲ್ಲ||
ಕುಂದು ತೋರ್ದದನು ತಿದ್ದಿಕೊಳೆ ಮನಸುಂಟು|
ಇಂದಿಗೀ ಮತವುಚಿತ-ಮಂಕುತಿಮ್ಮ ||’
ಇನ್ನು ಕಗ್ಗವನ್ನು ಒಂದು ಶಾಸ್ತ್ರ ಗ್ರಂಥವಾಗಿಯೋ ಇಲ್ಲವೇ ಪಠ್ಯವಾಗಿಯೋ ರಚಿಸದೆ ನಾಲ್ಕೇ ಸಾಲುಗಳ ಮುಕ್ತಕ ರೂಪವಾಗಿ ಅಥವಾ ಚುಟುಕು ಕವನದ ರೂಪಾವಾಗಿ ರಚಿಸಿದ್ದರ ಹಿಂದಿನ ಉದ್ದೇಶವನ್ನು ಈ ಕೆಳಕಂಡಂತೆ ಡಿ.ವಿ.ಜಿ ಹೇಳಿದ್ದಾರೆ
‘ಕವಿಯಲ್ಲ ವಿಜ್ಞಾನಿಯಲ್ಲ ಬರಿಯ ತಾರಾಡಿ|
ಅವನರಿವಿಗೆಟುಕುವೊಲೊಂದಾತ್ಮನಯವ||
ಹವಣಿಸಿದನಿದನು ಪಾಮರಜನದ ಮಾತಿನಲಿ|
ಕವನ ನೆನಪಿಗೆ ಸುಲಭ-ಮಂಕುತಿಮ್ಮ ||’

ಕಗ್ಗವು ಡಿ.ವಿ.ಜಿ ಯವರ ಅಖಂಡ ಜೀವನಾನುಭವಾಮೃತದ ಸಾರವೆನ್ನುವುದು ಬಲ್ಲವರಿಗೆ ಗೋಚರವಾಗುತ್ತದೆ. ಕಗ್ಗವನ್ನು ರಚಿಸುವ ಹಿಂದಿನ ಸ್ಫೂರ್ತಿ ಮತ್ತು ವಿಧಾನವನ್ನು ಬಹಳ ಸೊಗಸಾಗಿ ಈ ಕೆಳಗಿನ ಪದ್ಯದಲ್ಲಿ ತಿಳಿಸಿದ್ದಾರೆ
‘ವಿಶದಮಾದೊಂದು ಜೀವನಧರ್ಮದರ್ಶನವ|
ನುಸುರಿಕೊಳೆ ತನ್ನ ಮನಸ್ಸಿಗೆ ತಾನೆ ಬಗೆದು||
ನಿಸದವಂ ಗ್ರಂಥಾನುಭವಗಳಿಂದಾರಿಸುತೆ|
ಹೊಸೆದನೀ ಕಗ್ಗವನು-ಮಂಕುತಿಮ್ಮ||’
ಆಧುನಿಕ ಯುಗದಲ್ಲಿ  ವಿಜ್ಞಾನ, ತಂತ್ರ ಜ್ಞಾನದ ಉತ್ತುಂಗದಲ್ಲಿರುವ ಕಾಲಘಟ್ಟದಲ್ಲಿ ಮನುಕುಲವು ಮನುಜಮತದಿಂದ ದೂರ ಸರಿಯುತ್ತಿರುವುದನ್ನು,ಮಾನವಸಂಬಂಧಗಳು ದುರ್ಬಲವಾಗುತ್ತಿರುವುದನ್ನು, ಮನೆಯೊಳಗಿನ ಮನಸ್ಸುಗಳು ಕೋಟೆಯನು ಕಟ್ಟಿಕೊಳ್ಳುತ್ತಿರುವುದನ್ನು,ಮನುಷ್ಯನ ದುರಾಸೆಗೆ ಪ್ರಕೃತಿಯನ್ನು ನಾಶದ ಅಂಚಿಗೆ ದೂಡುತ್ತಿರುವುದನ್ನು ಡಿ.ವಿ.ಜಿ ಹಲವು ದಶಕಗಳ ಹಿಂದೆಯೇ ಕಗ್ಗದಲ್ಲಿ ತಿಳಿಯಪಡಿಸಿದ್ದಾರೆ, ಈ ಕೆಳಗಿನ ಪದ್ಯಗಳು ಅದಕ್ಕೆ ಒಂದು ನಿದರ್ಶನ 
‘ಭೌತವಿಜ್ಞಾನಿ ರವಿತಾರೆಧರೆಗಳ ಚಲನ|
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್||
ಪ್ರೀತಿರೋಷಗಳವನಳೆವನೇನ್?|
ಚೇತನವನರಿವನೇಂ-ಮಂಕುತಿಮ್ಮ||’

‘ನಂಟು ತಂಟೆಗಳ ಗಂಟೀ ಬ್ರಹ್ಮ ಭಂಡಾರ|
ಅಂಟಿಲ್ಲ ವೆನಗಿದರೊಳೆನ್ನದಿರದೆಂದೆಂದುಂ||
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ|
ಒಂಟಿಸಿಕೊ ಜೀವನವ-ಮಂಕುತಿಮ್ಮ||’
ಹೆಣ್ಣು ಗಂಡುಗಳ ನಡುವಿನ ಭೇದವನ್ನು ನಾವು ಇಂದಿಗೂ ಕಾಣುತ್ತಿದ್ದೇವೆ, ಪುರುಷ ಪ್ರಧಾನದ ಸಮಾಜಕ್ಕೆ  ಹೆಣ್ಣು ಗಂಡುಗಳ ಅರ್ಧನಾರೀಶ್ವರ ತತ್ವವನ್ನು ಈ ಕೆಳಗಿನ ಪದ್ಯದಲ್ಲಿ ತಿಳಿಸಿದ್ದಾರೆ
‘ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ |
ಬೆರಕೆಯೆಲ್ಲರುಮರ್ಧನಾರಿಶನಂತೆ|
ನರತೆಯಣು ನಾರಿಯಲಿ ನಾರೀತ್ವನರನೊಳಗನು
ತಿರಿಚುತಿರುವುದು ಮನವ- ಮಂಕುತಿಮ್ಮ||’
ಕಗ್ಗಗಳಲ್ಲಿ ಇಲ್ಲದ ವಿಷಯಗಳಿಲ್ಲ ತತ್ವಜ್ಞಾನ, ವಿಜ್ಞಾನ, ಜೀವನಾನುಭವ, ನೀತಿ, ಕಾವ್ಯ, ಧರ್ಮ, ಶಾಸ್ತ್ರ ಹೀಗೆ ಯಾರು ಯಾವ ವಿಷಯವನ್ನು ಅರಸುತ್ತಾರೊ ಅವೆಲ್ಲವನ್ನೂ ಕಗ್ಗದ ಗಣಿಯಲ್ಲಿ ಹೆಕ್ಕಿ ತಗೆಯಬಹುದು 
‘ಮಂಕು ತಿಮ್ಮನ ಕಗ್ಗ' ಮತ್ತು ‘ಮರುಳ ಮುನಿಯನ ಕಗ್ಗ’ಗಳು ಅವಳಿ ಕೃತಿಗಳಾಗಿದ್ದರೂ ಜನಪ್ರಿಯತೆಯಲ್ಲಿ ಮಂಕುತಿಮ್ಮನದ್ದೇ  ಮಾತು ಜಾಸ್ತಿ ಆದರೆ ಮರುಳ ಮುನಿಯನಲ್ಲಿಯೂ ನಾವು ಅನೇಕ ಮುತ್ತುಗಳನ್ನು ಗಣಿಗಾರಿಕೆ ಮಾಡಿ ನೋಡಬಹುದು.
ಡಿ.ವಿ.ಜಿ ಅವರು ತಮ್ಮ ಮನಸ್ಸಿನಲ್ಲಿ ಕಗ್ಗಗಳು ಎಗ್ಗಿಲ್ಲದೇ ನುಗ್ಗಿ ಅನುಭವ ಬುಗ್ಗೆಗಳಾಗಿ ಹೊರಬರುತ್ತಿದ್ದುದನ್ನು ಹೀಗೆ ಹೇಳಿದ್ದಾರೆ
‘ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ|
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು ||
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ಧಾಳಿ|
ಉಗ್ಗು ಬಾಯ್ಚಪಲವಿದು- ಮರುಳಮನುನಿಯ||’
ಒಟ್ಟಿನಲ್ಲಿ  ಡಿ.ವಿ.ಜಿ ಯವರ ಕಗ್ಗಗಳು ಎಲ್ಲ ದೇಶಗಳ,ಎಲ್ಲ ಭಾಷೆಗಳ, ಎಲ್ಲ ಕಾಲಗಳ , ಎಲ್ಲ‌ ಸಾಹಿತ್ಯಗಳ ಮಧ್ಯೆ ಅದ್ವಿತೀಯ ಕೃತಿಗಳು ಎಂದರೆ ಅತಿಶಯೋಕ್ತಿಯಾಗಲಾರದು.
ಕಗ್ಗದ ಜನಪ್ರಿಯತೆ ಇರುವುದು ಅದರ ಪ್ರಸ್ತುತೆಯಲ್ಲಿ ಮತ್ತು ಜೀವನಾನುಭವದಲ್ಲಿ ಸಾರ್ವಕಾಲಿಕ ಸತ್ಯಗಳ ಒಳತಿರುಳನ್ನು ಬಗೆದು ಬಿಡಿಸಿ ಕನ್ನಡಿಗರಿಗೆ ಉಣಬಡಿಸಿದ್ದಾರೆ, ಅವರ ಶಿಷ್ಯಪರಂಪರೆಯು ಕಗ್ಗಗಳನ್ನು ಇತರೆ ಭಾಷೆಗಳಿಗೂ ಅನುವಾದಿಸಿ ಮತ್ತಷ್ಟು ಜನಪ್ರಿಯತೆಗೆ ಕಾರಣರಾಗಿದ್ದಾರೆ. ಕನ್ನಡಿಗರ ಹೆಮ್ಮೆಯ ಡಾ|ಗುರುರಾಜ ಕರ್ಜಗಿ ಅವರ ಮಾತಿನಲ್ಲಿ ಕಗ್ಗಗಳ ರಸಧಾರೆ ಧಾರಾಕಾರವಾಗಿ ಹರಿದು ನಮ್ಮನ್ನು ಮತ್ತೆ ಮತ್ತೆ ಕಗ್ಗದ ಧಾರೆಯಲ್ಲಿ ಮುಳುಗೇಳಿಸುತ್ತದೆ. 
ಡಿ.ವಿ.ಜಿ ಯವರನ್ನು ಪಡೆದ  ಕನ್ನಡಿಗರು ನಾವೇ ಧನ್ಯರು.

~ ವಿಜಯ ನರಸಿಂಹ

ಹುಲ್ಲಾಗು ಬೆಟ್ಟದಡಿ

ಡಾ ನವ್ಯ ಆನಂದ್ ಅವರು ಲಂಡನ್ ನಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಡಾಕ್ಟರೇಟ್ ಪದವಿ ಮುಗಿಸಿ ಈಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸಣ್ಣ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಇಂಗ್ಲೆಂಡಿನಲ್ಲಿರುವ ಶ್ರೀಮತಿ ಮನೋರಮಾ ಪ್ರಸಾದ್ ಅವರಿಂದ ಕಲಿಯುತ್ತಿದ್ದಾರೆ. ಅವರು ಗಮಕ ಕಲಿಕೆಯನ್ನು ತಮ್ಮ ಅಜ್ಜಿಯವರಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರಿಂದ ಮೂರು ವರ್ಷದ ಹಿಂದೆ ಶುರು ಮಾಡಿದರು. ನವ್ಯ ಅವರು ಗಮಕ ಕಾರ್ಯಕ್ರಮಗಳನ್ನು ಬೆಂಗಳೂರು ಹಾಸನ ಹಾಗೂ ಇಂಗ್ಲೆಂಡಿನಲ್ಲಿ ಕೊಟ್ಟಿರುತ್ತಾರೆ. ಅವರು ಕುಮಾರವ್ಯಾಸ ಭಾರತ, ಕುವೆಂಪು ರಾಮಾಯಣ, ಕನಕ ದಾಸರ ನಳ ಚರಿತ್ರೆ, ರನ್ನನ ಗಧಾಯುದ್ದ ಮುಂತಾದ ಕಾವ್ಯಗಳಿಂದ ಕಥಾಭಾಗಗಳನ್ನ ಅಭ್ಯಾಸ ಮಾಡಿದ್ದಾರೆ.

ಆನಂದೋಬ್ರಹ್ಮ(ಡಿ.ವಿ.ಜಿ. ಅವರ‘ಅಂತ:ಪುರಗೀತೆ’ ಆಧಾರಿತ)

ಮುನ್ನುಡಿ.
ಕನ್ನಡಿ ನೋಡುತ್ತ ತನ್ನ ಸೌಂದರ್ಯಕ್ಕೆ ತಾನೇ ಮರುಳಾದ ಮುಕುರಮುಗ್ಧೆ(ಕನ್ನಡಿಗೆ ಮರುಳಾದವಳು), ಹಗಲಿರುಳೂ ತನ್ನ ನಲ್ಲನ ಬಗ್ಗೆಯೇ ಮಾತಾಡಿ ದಣಿಯದ ಹರಟೆಮಲ್ಲಿ ಶುಕಭಾಷಿಣಿ(ಗಿಳಿಯೊಂದಿಗೆ ಮಾತಾಡುವವಳು ಅಥವಾ  ಗಿಳಿಯಂತೆಯೇ ಆಡಿದ್ದನ್ನೇ ಮತ್ತೆ ಮತ್ತೆ ಆಡುವವಳು), ಕಪಿಚೇಷ್ಟೆಗೆ ಸಿಟ್ಟಿಗೆದ್ದು ಕೆಂಪಾದ ಅಲಂಕಾರಪ್ರಿಯೆ ವಾಸಂತಿ, ಡಮರುಗ ಬಾರಿಸುವವಳೊಬ್ಬಳು, ಕೊಳಲನ್ನೂದುವವಳೊಬ್ಬಳು, ಕೇಶಾಲಂಕಾರ ಪ್ರಿಯೆಯೊಬ್ಬಳು..ಬೇಲೂರಿನ ಈ ಶಿಲಾಬಾಲಿಕೆಯರಿಗೆ ಜೀವತುಂಬಿದ್ದು ಡಿ.ವಿ.ಜಿ.ಯವರ ಅಂತ:ಪುರಗೀತೆ. 7‘ಶರಣ ಸತಿ ಲಿಂಗ ಪತಿ’ ಎನ್ನುವಂತೆ ಇಲ್ಲಿ ಬಾಹ್ಯತೋರಿಕೆಗೆ ಕಂಡುಬರುವ ಶೃಂಗಾರ, ಸರಸ-ಸಲ್ಲಾಪಗಳು ಜೀವಾತ್ಮ-ಪರಮಾತ್ಮರ ಸಂಗಮದ ಪ್ರತೀಕಗಳಾಗಿವೆ. ಅನ್ನಮಯದಿಂದ ಆನಂದಮಯದವರೆಗಿನ ಪಯಣವಾಗಿದೆ. ‘ಅಣುರಣೀಯೋ ಮಹತೋಮಹತ್’ ಎಂಬ ಅನುಭಾವ ಮೂಡಿಸುವ ಸಚ್ಚಿದಾನಂದ ಬ್ರಹ್ಮನ ಅದ್ವೈತವಾಗಿದೆ. ಒಟ್ಟಿನಲ್ಲಿ ‘ ಏನೀ ಮಹಾನಂದವೇ ಓ ಭಾಮಿನಿ ಏನೀ ಸಂಭ್ರಮದೊನ್ನವೇ, ಬಲು ಚಂದವೇ’..       

ಪ್ರಸನ್ನ ಅವರು ವೃತ್ತಿಯಿಂದ ಇಂಜನೀಯರ್. ಇಂಗ್ಲೀಷ್ ಹಾಗೂ ಕನ್ನಡ ಸಾಹಿತ್ಯದೆಡೆ ಅಪಾರ ಒಲವು. ವಿಶ್ವದೆಲ್ಲ ಭಾಷೆಗಳ ಚಲನಚಿತ್ರ ಹಾಗೂ ಸರಣಿ(series) ವೀಕ್ಷಣೆ ಇವರ ಬಹುದೊಡ್ಡ ಹುಚ್ಚು. ಸಂಗೀತ, ಚಿತ್ರಕಲೆಯಲ್ಲೂ ಆಸಕ್ತರು. ಸಧ್ಯ ಕಳೆದಾರೇಳು ವರುಷಗಳಿಂದ Slough ನಲ್ಲಿ ವಾಸವಾಗಿದ್ದಾರೆ.

‘ಮುಕುರಮುಗ್ಧೆ’- ನಗು ಬರುತ್ತದೆ. ನನಗೀ ಹೆಸರೇ? ಛೇ!ಅಲ್ಲ, ನನ್ನ ಕಣ್ಣ ಕನ್ನಡಿಯಲ್ಲಿ ತನ್ನ ರೂಪು ನೋಡಿಕೊಳ್ಳುವ ಆ ತುಂಟನಿಗೆ ಇಡಬೇಕು ಆ ಹೆಸರನ್ನು. ಇಲ್ಲಾ, ನಾನೇ ಅವನ ಕಣ್ಣಲ್ಲಿ ನನ್ನನ್ನು ನೋಡಿಕೊಳ್ಳುತ್ತಿರುವಿನೇನು ಮತ್ತೆ? ಏನೋಪ್ಪ! ಅಂತೂ ನನ್ನ ಕಣ್ಣಲ್ಲಿ ಅವನು, ಅವನ ಕಣ್ಣಲ್ಲಿ ನಾನು ಹೀಗೆ ಜಗದ ಆಟ-ಓಟವನ್ನು ಮರೆತು ಕುಳಿತರೆ..ಕುಳಿತರೇನು? ಕುಳಿತ ಮೇಲೆ ಏನಾದರೂ ನೆನಪಿದ್ದರೆ ತಾನೇ? ನನ್ನ ಕಂಗಳು ಅವನ ಕನ್ನಡಿಯಿಂದು. ಕಾಡಿಗೆ ಬಹಳವಾದರೆ ಅವನೇನು ನೋಡುತ್ತಾನೆ ಇಲ್ಲಿ? ಸ್ವಲ್ಪ ಹಚ್ಚಿದರೆ ಹಚ್ಚಿದಂತೆಯೇ ಅನ್ನಿಸುವುದಿಲ್ಲ. ಕಣ್ಣಂಚಿನಲ್ಲಿ ಈ ಕೆಂಪೇನು? ಹೊಳಪೇನು? ಓ! ಅವನ ನೆನಪೇ ನಿನ್ನ ನಾಚಿಕೆಗೆ ಕಾರಣವೇ? ಓ ಕಣ್ಣೇ! ನಾಚಬೇಡ. ಈಗ ಬರುವ ಅವನು ನಿನ್ನಲ್ಲೇ ಮನೆ ಮಾಡಿ ಕೂಡುವವನಿದ್ದಾನೆ ಈ ಇರುಳುಪೂರ್ಣ. ‘ಅಮ್ಮಾ! ಎಷ್ಟು ಜೋರಾಗಿ ಹೊಡೆದಳು ಈ ಶುಕಭಾಷಿಣಿ. ಬರೀ ಹೊಟ್ಟೆಕಿಚ್ಚು. ನನ್ನ ಕನ್ನಡಿಯಲ್ಲಿ ನಾನು ಮೈಮರೆತರೆ ನಿನಗೇನೇ ಮಹಾತಾಯಿ?’  ‘ಇಲ್ಲಿ ಬಂದು ನನ್ನ ಕಷ್ಟವನ್ನು ಕೇಳುವವರು 
ಯಾರೂ ಇಲ್ಲ. ಎಲ್ಲರಿಗೂ ತಮ್ಮದೇ ತಮಗೆ.’  ‘ಕೋಪ ಬೇಡ ಶುಕಭಾಷಿಣಿ. ಎಲ್ಲಿ ನಿನ್ನ ಹರಟೆಮಲ್ಲ, ಪ್ರಭುವನ್ನು ಕರೆತರಲು ಓಡಿದನೇನು?’   ‘ಅದೇ ನನಗೆ ತೊಂದರೆಯಾಗಿರುವುದು. ನನ್ನ ಅಳಲು ಕೇಳಲು ಇದ್ದೊಂದ ಶುಕವೂ ಕಾಣುತ್ತಿಲ್ಲವಲ್ಲ??’  ‘ಓ! ಅಲ್ಲಿ ನೋಡು. ಆ ಗಿಡದ ಮೇಲೆ. ಅದೇ ಅಲ್ಲವೇ ನಮ್ಮ ಗೆಳೆಯ ?’  
‘ಅಬ್ಬಾ! ಎಲ್ಲಿಗೆ ಹೋಗಿದ್ದೆ ನೀನು? ಎಷ್ಟು ಬಯ್ಯಿಸಿಕೊಂಡೆ ಗೊತ್ತಾ ನಾನೀ ಮುಕುರಮುಗ್ಧೆಯ ಬಳಿ? ಆಕೆಗೆ ತನ್ನ ಅಲಂಕಾರದ ಹುಚ್ಚು. ನನಗೆ ನನ್ನ ಗೆಳೆಯನ ಕುರಿತು ಮಾತಾಡುವ ಹುಚ್ಚು. ನೀನು ಇರದಿದ್ದರೆ ನನ್ನ ಮಾತು ಕೇಳುವವರಾರು?  ನನ್ನ  ಮಾಧವನನ್ನು ಕಂಡಿದ್ದೆಯಲ್ಲವೇ ಅಂದು ಅವನಿಲ್ಲಿ ಬಂದಾಗ.ಅವನ ಮೈಯನ್ನಲಂಕರಿಸಿದ್ದ ಆ ಹಳದೀ ವಸ್ತ್ರದ ಬಂಗಾರದ ಶೋಭೆಯಿಂದ ನಾನು ಚಿನ್ನದಲ್ಲಿ ಮೀಯ್ದಂತಾಗಿದ್ದೆ. ನನ್ನೀ ದೇಹದಲ್ಲಿ ಹೊಸ ಕಾಂತಿಯೊಂದು ಪ್ರವೇಶಿಸಿದಂತಾಗಿತ್ತು. ಅವನೋ ಹುಣ್ಣಿಮೆಯ ಚಂದಿರನಿದ್ದ ಆಕಾಶದಂತಿದ್ದ. ನನ್ನನ್ನು ಮೋಹದಲ್ಲಿ ಕೆಡವಿ, ನಾನವನ ನೆನಪಲ್ಲಿ ಹೀಗೆ ಕನವರಿಸಬೇಕೆಂದೇ ಹಾಗೆ ರೂಪ ತಳೆದಿದ್ದನೇನೋ ಅವನು! ಅವನ ಕೊರಳ ಮಣಿಹಾರ-ಮುತ್ತಿನ ಹಾರ ಆ ವಿಶಾಲ ಎದೆಯ ಮೇಲೆ ತೂಗುತ್ತ ಬೆಟ್ಟದ  ಮೇಲಿಂದ ಬೀಳುವ ಜಲಪಾತಗಳ ಆಟದಂತೆ ಕುಣಿಯುತ್ತಿದ್ದವು. ತೋಳುಗಳ ಮೇಲೆ ತನ್ನೆಡೆ ಲಕ್ಷ್ಯ ಕೊಡುತ್ತಿಲ್ಲವಲ್ಲ ಮೋಹನ ಎಂಬ ಸಿಟ್ಟಿನಿಂದಲೋ ಎಂಬಂತೆ ಅಸ್ತವ್ಯಸ್ತವಾದ ಮೇಲ್ ವಸ್ತ್ರದ ಸೊಬಗು. ಹಣೆಯ ಗಂಧ ಆ ನೀಲಿಮೊಗದಲ್ಲಿ ತಂಪು ತಂಗದಿರನಾಗಿತ್ತು. ಅವನ ತುಟಿಯಲ್ಲಾಠುವ ಕಿರುನಗೆಯು ನನಗೆ ‘ಇಂದು ನಿನಗಿಲ್ಲಿ ಸ್ಥಾನವಿಲ್ಲ’ ಎಂದು ಹೇಳುತ್ತಿರುವಂತಿತ್ತು. ಅವನ ನಗುವೇ ಹಾಗೆ..ಮೋಹಗೊಳಿಸಿ ಮರೆಯಾಗಿಬಿಡುವುದು.ಆಗ ಹೋದವನು ಇಂದು ಬರುತ್ತಿದ್ದಾನೆ. ಇಂದು ಅವನು, ಅವನ ಚೆಂದುಟಿಗಳು ಎಲ್ಲಾ ನನ್ನವೇ ಅಲ್ಲವೇ ಶುಕರಾಜ? ಓ ಶುಕರಾಜ, ಅಲ್ಲಿ ನೋಡು ಆ ವಾಸಂತಿಯನ್ನು! ಆಕೆಯ ಆಟಕ್ಕೆ ಮನಸೋತೋ, ಬೆದರಿಯೋ ಅವಳ ವಸ್ತ್ರಕ್ಕೇ ಕೈ ಹಾಕಿದಂತೆ ಕಾಣುತ್ತಿದೆ ಆ ಕಪಿರಾಯ. ಬಾ ಅಲ್ಲೇ ಹೋಗಿ ನೋಡೋಣ.’
‘ಸಖೀ, ವಾಸಂತಿ, ಜೋಪಾನ. ಅರೇ, ನಿನ್ನ ಮೇಲ್ ಹೊದ್ದಿಕೆಯನ್ನು ಸೆಳೆದೇ ಬಿಟ್ಟಿತಾ ಈ ಕಪಿರಾಯ!  ಏಯ್! ಬೇಡ..ಬೇಡ..ನೀನು  ಕಪಿಕುಪಿತೆಯಾಗಬೇಡ. ಈಗಲೇ ನಿನ್ನೀ ದೇಹ ಸೌಂದರ್ಯದ ರಂಗು ಹೆಣ್ಣಾದ ನನ್ನನ್ನೇ ಮೋಹದಲ್ಲಿ ಸಿಲುಕಿಸಿದೆ; ಇನ್ನು ಆ ರಸಿಕ ರಂಗನ ಗತಿ? ಇನ್ನೇನು ಆ ತುಂಟ ಬರುವ ಹೊತ್ತಾಯಿತು..ಅವನು ನಿನ್ನ ಈ ಅವತಾರದಲ್ಲಿ ನೋಡಿದರೆ ನಮಗೆಲ್ಲ ಇಂದು ಕನಸೇ ಜೊತೆ. ನಿನ್ನ ಇಚ್ಛೆಯೂ ಅದೇ ಏನು ಮತ್ತೆ? ಇದೇನು ಭಂಗಿ! ಇದೇನು ಭಾವ!! ಅಬ್ಬಬ್ಬಾ! ‘
‘ಏಯ್! ಸುಮ್ಮನೇ ಕಾಡುತ್ತೀಯಾ ನನ್ನ. ಇಷ್ಟೊತ್ತು ಆ ಕಪಿರಾಯನದಾಯಿತು..ಇನ್ನು ಈಗ ನೀನು..ಆಮೇಲೆ ನಂತರ ಆ ಕೃಷ್ಣ.  ಮೊನ್ನೆ ಏನು ಮಾಡಿದ ಗೊತ್ತೆ? ಊಟಕ್ಕೆ ಅಂತ ಕುಳಿತ. ನನಗೋ ಸಂಭ್ರಮವೋ ಸಂಭ್ರಮ. ದೇವದೇವನ ಹಸಿವು ಇಂದು ಈ ಪಾಮರಳಿಂದ ಹಿಂಗುವುದಲ್ಲ ಎಂಬ ಭ್ರಮೆ. ನಾನು ಮೊಸರನ್ನು ಇಳಿಸಲು ನೆಲುವಿಗೆ ಕೈ ಹಾಕಿದರೆ ಏನನ್ನುತ್ತಾನೆ ಗೊತ್ತೇ?’ವಾಸಂತಿ,ನೀನು ನೆಲುವಿನಿಂದ ಮೊಸರು-ಬೆಣ್ಣೆ ತೆಗೆಯಲೂ ಬೇಡ..ಮತ್ತೆ ಅಲ್ಲಿಂದ ಕೈ ಕೆಳಗಿಳಿಸಲೂ ಬೇಡ. ನಿನ್ನೀ ಭಂಗಿ ಕಣ್ಗೆ ಹಬ್ಬ’ ಎನ್ನಬೇಕೇ? ನನ್ನ ಮೈಯಲ್ಲೆಲ್ಲ ನಾಚಿಕೆ ಹರಿದಾಡಿತು. ನಾಚಿ ನೀರಾಗಿ ಕೈಯಿಳಿಸುವಷ್ಟರಲಿ ಸೊಂಟದ ಸುತ್ತ ಸುತ್ತಿದ ಅವನ ತೋಳುಗಳಲ್ಲಿ ನಾ ಆಜನ್ಮ ಬಂಧಿ. ಇಂದವನ ಆಗಮನದ ಸುದ್ದಿ ಕೇಳಿ ಸಿಂಗರಿಸಿಕೊಳ್ಳುವಷ್ಟರಲಿ ಈ ಕಪಿರಾಯನಾಟ ಶುರುವಾಗಬೇಕೇ?’ 
‘ಏನು? ವಾಸಂತಿ-ಶುಕಭಾಷಿಣಿಯರ ಚರ್ಚೆ ಮುರಲೀಮೋಹನನ ಆಗಮನದ ಕುರಿತೆ? ಈ ಮುಕುರಮುಗ್ಧೆಯ ಕನ್ನಡಿಯಲ್ಲಿನ ಚೆಲುಮೊಗವೂ ಅದನ್ನೇ, ಅವನಾಗಮನದ ಘಳಿಗೆಯನ್ನೇ ಕಾಯುತ್ತಿದೆ ಸಖೀ. ದಿನದಿನವೂ, ಕ್ಷಣಕ್ಷಣವೂ ಅಂತ್ಯದೆಡೆ ಜರಗುತ್ತಿರುವ ಈ ಯೌವನ, ಈ ರೂಪವನ್ನು ಆ ದೇವದೇವನಿಗೆ, ಕಾಮಜನಕನಿಗೆ ಆದಷ್ಟು ಬೇಗ ಅರ್ಪಿಸುವ ಆಸೆ.ಈ ತನು-ಮನ-ಜೀವನವೆಲ್ಲವನ್ನೂ ಅದೊಂದು ಸುಂದರ ಗಳಿಗೆಯಲ್ಲಿ ಅವನಿಗರ್ಪಿಸಿ ಅವನ ಕಣ್ಣಲ್ಲಿ ನನ್ನನ್ನೇ ನೋಡುತ್ತ ಎಲ್ಲವನ್ನೂ ಮರೆಯುವ ಆಸೆ.’
‘ನಮ್ಮೆಲ್ಲರ ಆಸೆಯೂ ಅದೇ ಅಲ್ಲವೇ ಮುಕುರಮುಗ್ಧೆ?  ನಿನ್ನ ಸಿಂಗಾರ, ಶುಕಭಾಷಿಣಿಯ ಕಾತರತೆ, ಈ ವಾಸಂತಿಯ ಲಾವಣ್ಯ  ಯಾವುದೂ ನಿರರ್ಥಕವಾಗುವುದಿಲ್ಲ. ಆ ಚೆಲುವ- ಚೆನ್ನಿಗರಾಯ ಬಂದೇ ಬರುತ್ತಾನೆ. ಅದಕ್ಕೇ ಈ ದಿನ ಇಂಥ ಸಡಗರ-ಸಂಭ್ರಮ.ಅಲ್ಲಿ ನೋಡಿ..ಏನು ನಡೆಯುತ್ತಿದೆ! ಬನ್ನಿ;ಅಲ್ಲಿಗೇ ಹೋಗಿ ನೋಡೋಣ. 
 ಮುರಜಾಮೋದೆ, ಮುರಳೀಧರೆ, ಕುಟಿಲಕುಂತಲೆ, ರಸಿಕಶಬರಿ, ಉಲ್ಲಾಸಿನಿ, ಪುಂವಿಡಂಬಿನಿ ಎಲ್ಲರೂ ಇದ್ದರು ಅಲ್ಲಿ. ಮುರಜಾಮೋದೆಯ ಡಮರುಗನಾದ, ಮುರಳೀಧರೆಯ ಮುರಳೀಗಾನ, ಇದಕ್ಕೆ ಸರಿಸಾಟಿಯಾಗಿ ಆ ತಾಂಡವೇಶ್ವರಿಯ ನರ್ತನ. ಚೆಲುವ ಚೆನ್ನಕೇಶವನ ಆಗಮನಕ್ಕಾಗಿ  ನಡೆಯುತ್ತಿದ್ದ ಉಲ್ಲಾಸಭರಿತ ಸಂಭ್ರಮೋತ್ಸಾಹ ಅದು. ಕುಟಿಲಕುಂತಲೆ ವೈಯ್ಯಾರ, ಮುಡಿಯ ಮಲ್ಲಿಗೆ, ಆಕೆಯ ಸುಂದರ  ಗುಂಗುರು ಕೇಶರಾಶಿ ಮೇಘರಾಜನಿಗೆ ಸಸವಾಲೊಡ್ಡುತ್ತಿತ್ತು.ಮೋಡಗಳಿಂದ ಸುತ್ತುವರೆದ ಚಂದಿರನಂತೆ ಆಕೆಯ ಮುಖಕಮಲ ಆ ಕೇಶರಾಶಿಯ ಮಧ್ಯೆ ಶೋಭಿಸುತ್ತಿತ್ತು. ಅವನಾಗಮನದ ಸಂತಸವೇ ಆ ಶೋಭೆಯ ನಿಜ ಕಾರಣ.
  ರಸಿಕಶಬರಿಯ ಮೈಕಾಂತಿ ಹೊಳಪುಗೊಂಡಿತ್ತು ಇಂದು.ಅವಳ ಬಿಗಿಯುಡುಪಿನ ಮೈಯ್ಯ ಬಿಸುಪು ಅವನ ನೆನಪಿಂದ ಇನ್ನಷ್ಟು ಬಿಗಿಗೊಂಡಂತಿತ್ತು. ಅವಳ ಕಿರುಸೊಂಟ ಹರೆಯದ ಹೊರೆ ತಾಳದೇ ಬಳುಬಳುಕುತ್ತಿದ್ದರೂ ತಾಂಡವೇಶ್ವರಿಯೊಡನೆ ಸಂತಸದಿಂದ ಕುಣಿದಾಡುತ್ತಿದ್ದಳವಳು. ಮುರಜಾಮೋದೆಯದಂತೂ ಕೇಳುವುದೇ ಬೇಡ. ಆಕೆಯ ಕೈಗಳು ಡಮರುಗ ಬಡಿಬಡಿದು ಎಷ್ಟು ನೊಂದಿದ್ದವೋ ಏನೋ? ಕೇಶವನ ಸ್ಪರ್ಶಸುಖದಿಂದಲೇ ನೋವು ನಿವಾರಣೆ ಅವುಗಳಿಗೆ. ಉಲ್ಲಾಸಿನಿ, ಪುಂವಿಡಂಬಿನಿಯ ಉತ್ಸಾಹಕ್ಕೆ ಮೇರೆಯೇ ಇಲ್ಲ. ಪುರುಷ ವೇಷದಲ್ಲಿನ ಪುಂವಿಡಂಬಿನಿ ಇತರರನ್ನು ಛೇಡಿಸಿ, ಕಾಡಿಸುತ್ತ ನಡೆದರೆ ಉಲ್ಲಾಸಿನಿ ಅವಳಿಗೆ ಪ್ರೋತ್ಸಾಹ ಕೊಡುತ್ತ ನಗುತ್ತ ಸಾಗಿದ್ದಾಳೆ.ಇಬ್ಬರದೂ ಮಿತಿಮೀರಿದ ತುಂಟತನ ಇಂದು. ಆಕೆ ಮೋಹನನಂತೆ ಮುರಳೀಧರೆಯ ವಸ್ತ್ರದ ಗಂಟನ್ನು ಸಡಿಲಿಸಿದರೆ ಈಕೆ ಅದನ್ನೆಳೆದು ಅವಳನ್ನು ಛೇಡಿಸಿ ನಗುವುದು.ಪಾಪ! ಮುರಳೀಧರೆಯ ಕೊಳಲಗಾನ ಆಕೆಯ ವಿವಸ್ತ್ರವಾಗುವ ಭಯದಿಂದ ನಿಂತೊಡನೆ ಇವರ ಚಿನ್ನಾಟ ಬೇರೆಯವರೊಡನೆ. 
ನಗು-ನೃತ್ಯ-ಸಂಗೀತ-ಸುಂದರಿಯರು..ಪ್ರಭುವಿನ ಅಂತ:ಪುರ ಜಗದೆಲ್ಲ ಸಂಭ್ರಮಗಳಿಂದ ತುಂಬಿತುಳುಕುತ್ತಿತ್ತು. ಪ್ರತಿಯೊಬ್ಬರ ಮನದಲ್ಲೂ ಶ್ರೀಕೃಷ್ಣನಾಗಮನದ ಸಂತಸ..ಸಂಭ್ರಮ..ಕಾತರದ ಕಾಯುವಿಕೆ. ಅವನ ಹೆಸರಿನಿಂದ, ನೆನಪಿನಿಂದ, ಒಲವಿನಿಂದ ಹುಚ್ಚಾದ ಮನಸ್ಸನ್ನು ಸಂಪ್ರದಾಯಸ್ಥ ಮನೆತನದ ಹೆಂಗಳೆಯರಾದ ಇವರೂ ಅದರ ಪಾಡಿಗದನ್ನು ಹರಿಯಲು ಬಿಟ್ಟಿದ್ದರು. ಅವರಿಗೆ ಗೊತ್ತು – ಎಲ್ಲವೂ ಕಡೆಗೆ ಸೇರಬೇಕಾದದ್ದು ಆ ಗೋಪಾಲನನ್ನೇ ಎಂದು. ಇನ್ನೇಕೆ ಚಿಂತೆ? ಯಾರ ಹೆದರಿಕೆ, ಯಾವ ಹಿಂಜರಿಕೆ ಅವರಿಗೆ??
  ಮುರಜಾಮೋದೆಯ ಡಮರುಗದ ನಾದ ಅಲೆಅಲೆಯಾಗಿ ಹರಿದು ಸಂದೇಶವನ್ನು ಹೊತ್ತೊಯ್ಯಿತು.ಅದರ ಲಯಬದ್ಧವಾದ ಸಂಗೀತ ಪ್ರೇಮವಾಹಿನಿಯಾಯಿತು. ತಂಗಾಳಿಯ ಸವಾರಿಯೇರಿದ  ಮುರಳೀಧರೆಯ ಮುರಲಿನಾದ ಮೋಹನನ ಮುರಲಿಗೆ ಸಂವಾದಿಯುಯ್ತು. ಮುಕುರಮುಗ್ಧೆಯ ಭಕ್ತಿ ಅವನನ್ನು ಹಿಡಿದೆಳೆಯಿತು. ಶುಕಭಾಷಿಣಿಯ ಹಂಬಲಿಕೆ ತಪವಾಗಿ ಶುಕರೂಪ ಸಂದೇಶವಾಗಿ ಸಖನೆದೆ ತಲುಪಿತು.ವಾಸಂತಿಯ ಆರ್ದ್ರ ಬೇಡಿಕೆ , ಉಲ್ಲಾಸಿನಿ, ಪುಂವಿಡಂಬಿನಿಯರ ಬೇಟದಾಟಗಳು ಶ್ರೀಕೃಷ್ಣನನ್ನು ಆ ಅಂತ:ಪುರಕ್ಕೆ ಸೆಳೆದವು. ಜಗದ ಜಂಜಡದಲ್ಲಿ ಮೈಮರೆತು, ಕುಟಿಲನೀತಿಗಳನ್ನು  ರೂಪಿಸುತ್ತ, ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆಯಲ್ಲಿ ತೊಡಗಿದ್ದ ಮುರಾರಿ ಇತ್ತ ಕಡೆ ನೋಡಿದ. ಅವನ ಚೆಲುವ ರೂಪು, ಮನಸೆಳೆವ ಮೋಹಕ ನಗು ಇಂದು ಅವರದಾಯಿತು..ಕೇವಲ ಅವರದು. ಆನಂದವು ಪ್ರವಾಹದೋಪಾದಿಯಲ್ಲಿ ಧರೆಗಿಳಿಯಿತು. ಅದನ್ನಷ್ಟೇ ಪ್ರೀತಿ-ತನ್ಮಯತೆಗಳಿಂದ ಧರಿಸಿದರಾ ಗೋಪಿಕೆಯರು.
  ಮೋಹನ ಮುರಳಿ ತನ್ನ ಕೊಳಲನ್ನೂದೂತ್ತ ಇವರ ಜೊತೆಯಲ್ಲಿ ರಾಸಲೀಲೆಯಾಡಿದ. ಪ್ರತಿಯೊಬ್ಬರನ್ನೂ ಅಪ್ಪಿ,ಮುದ್ದಿಸಿ, ಸಂತೈಸಿದ.ಅವಳ ಜಡೆಯೆಳೆದ..ಇವಳ ಮುಂಗುರುಳು ತೀಡಿದ..ಅವಳ ಸೆರಗೆಳೆದ..ಇವಳ ಕೈಹಿಡಿದು ಬರಸೆಳೆದಪ್ಪಿದ.ಸಂಭ್ರಮೋತ್ಸಾಹದಲಿ ಮೈಮರೆತರು ಗೋಪಿಯರು. ಆನಂದದ ತುತ್ತ ತುದಿಯನೇರಿದರು..ಪೂರ್ಣನೊಂದಿಗೆ ಬೆರೆತು ಪರಿಪೂರ್ಣರಾಗಿದ್ದರು.ಈ ಕ್ಷಣಕ್ಕಾಗಿ ಅದೆಷ್ಟು ಯುಗ ಕಾದಿದ್ದರೋ ಯಾರು ಬಲ್ಲರು? ‘ಈ ಕ್ಷಣ ಶಾಶ್ವತವಾಗಲಿ ದೇವ’ ಎಂದು ಒಮ್ಮನದಿಂದ ಮೊರೆಯಿಟ್ಟರು. ‘ನಮ್ಮೀ ಮಧುರ ಮಿಲನ ಹೀಗೇ ಅನವರತವಾಗಿರಲಿ;ಚಿರಂತನವಾಗಲಿ’ ಎಂದು ಬೇಡಿಕೊಂಡರು.ಅವನೆಂದು ಭಕ್ತಿಯಿಂದ ಬೇಡಿದವರಿಗೆ ಇಲ್ಲವೆಂದಿದ್ದಾನೆ?! ಚೆನ್ನಕೇಶವ ತನ್ನ ಬಾಲೆಯರೊಡನೆ ಬೇಲೂರಿನಲ್ಲಿ ಶಾಶ್ವತನಾದ.ಈ ಅಶಾಶ್ವತ, ನಶ್ವರ ಜಗತ್ತಿನಲ್ಲಿ ಅನಂತ ಸುಖದ, ಅಮಿತಾನಂದದ ರಹದಾರಿಯಾದ. ಆನಂದಬ್ರಹ್ಮನಾದ.

~ ಪ್ರಸನ್ನ 

‘ಪೈ..ಪೈ’ ಮಾತು

ಮುಂಜಾನಿ ಪೇಪರ್ ನಲ್ಲಿ ಮುಳುಗಿದ್ದ ಗಂಡ ಒದರಿದ "ಏ... ಏನೇ... ಮಂದಿ "ದಿನ"ಕ್ಕೊಂದು ಏನೇನೂ ಹೆಸರಿಡ್ತಾರಲ್ಲೇ? ಇಂದ ನೋಡ ಪೈ ದಿನ ಅಂತ"
ಒಳಗಿನಿಂದ ಹೆಂಡ್ತಿ ತಿರುಗಿ ಕೂಗಿದ್ಲು "ಏನ್? ಪುದಿನಾ? ಖಾಲಿ ಕೂತು ಏನೇನಾರ ಕೇಳ್ತೀರಲ್ಲ? ಏನ ಬೇಕ್ ನಿಮಗ?"

ಅಡಗಿ ಮನಿಯಿಂದ ಪಡಸಾಲಿಗೆ ಬಂದ ಹೆಂಡ್ತಿ ಕೇಳಿದ್ಲು "ಏನ್ ಬೇಕು ನಿಮಗ?"

ಗಂಡ: "ನನಗೆ ಏನ್ ಬೇಕಿಲ್ಲ, ಇಂದ ಪೈ ದಿನ ಅಂತ ಹೇಳಿದೆ, ಪೇಪರ್ ನಲ್ಲಿ ಬಂದದ ನೋಡ ss ..." 

ಹೆಂಡತಿ: ಅಂದ್ರ ಗೋವಿಂದ ಪೈ ಅವರ ದಿನ ಏನ್ರಿ?

ಗಂಡ: ಅಲ್ಲ ಮಾರಾಯ್ತಿ  ಗೋವಿಂದ ಪೈ ಅವರ ಹುಟ್ಟು ದಿನ ೨೩ ಮಾರ್ಚ್, ಇವತ್ತು ೧೪ ಮಾರ್ಚ್ ಅಲ್ಲೇನು?
ಆದ್ರೂ ನಿನ್ನ ಈ ಮಾತಿನಿಂದ ಒಂದು ನೆನಪು ಖುಷಿ ತಂದಿತು ನೋಡ...

ಸಣ್ಣಗೆ ಹಾಡು ಗುನು ಗುನು ಸುರು ಆಯಿತು...
"ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ"

ನಿನಗ ಗೊತ್ತ ಇರತದ, ಗೋವಿಂದ ಪೈ ಅವರು ಕನ್ನಡದ ಪ್ರಥಮ ರಾಷ್ಟ್ರ ಕವಿ...ಇವತ್ತಿನ ಪೈ ದಿನ ಅವರದಲ್ಲ 

ಹೆಂಡತಿ: ಹಂಗಾದರ ಅದೇನೋ ಅಂತಾರಲ್ಲ ಆಪಲ್ ಪೈ ಅಂತ, ಅದರ ದಿನ ಏನು? ತಿನ್ನೂ ವಿಷಯ ಬಂದ್ರ ಅಯ್ತ ನಿಮಗ, ಅದನ್ನ ಮಾಡ್ ಅಂತ ಹೇಳಾಕ ಕರದ್ರ ಏನ್ರಿ ಮತ್ತ?

ಗಂಡ: ಅಲ್ಲ ಇದು ಮತ್ತೊಂದು ಪೈ, ವಿಶೇಷ ಪೈ 

ಹೆಂಡತಿ: ಏನ್ರಿ ವಿಶೇಷ?

ಗಂಡ: ನೋಡಾ, ಇದರ ವಿಶೇಷ ಅಂದ್ರ ಅದರ ಒಂದು ಮುಖ್ಯ ಗುಣ "ಅನಂತ"

ಹೆಂಡತಿ: ಅಂದ್ರ ನೀವು ಅನಂತ ಪೈ ಬಗ್ಗೆ ಹೇಳಕಾತಿರೇನು?

ಗಂಡ: ಎಂತಾ ಒಳ್ಳೆ ಮಂದಿ ಹೆಸರು ನೆನಪಿಸ್ತಿ ನೀನು? ಶಭಾಷ್... ಅದರ ಇಂದಿನ ದಿನ "ಅಮರ ಚಿತ್ರ ಕಥಾ" ದ ಅನಂತ್ ಪೈ ಅವ್ರಿಗೂ ಸಂಬಂಧ ಇಲ್ಲ.
ಇಂದು ಒಂದು ವಿಸ್ಮಯದ ಗಣಿತದ ಸಂಖ್ಯಾ ದಿನ, ಪೈ ಅಂದ್ರ ೩.೧೪ ಸಂಖ್ಯಾ... ನೆನಪದನೋ ಅಥವಾ ಇಲ್ಲೋ?

ಹೆಂಡತಿ: ಈಗ ಗೊತ್ತಾಯತು ನೋಡ್ರಿ... ಸಾಲ್ಯಾಗ ನಮ್ಮ ಮಾಸ್ತರ್ ವರ್ತುಲ ಬಗ್ಗೆ ಕಲಿಸದಾಗ ಇದನ್ನು ಓದಿದ್ದೆ ನೋಡ್ರಿ 

ಗಂಡ: ಹೌದು, ವರ್ತುಲದ ಸುತ್ತಳತೆ ಮತ್ತು ನಡುಗೆರೆ ಇಂದ ಬಂದ ಸಂಖ್ಯಾ ನೋಡ್ ಇದು

ಆಗಲೇ ನನ್ನ ಚಡ್ಡಿ ಗೆಳೆಯ ಗುಂಡ ಬಂದ. ಗುಂಡ ಒಳಗೆ ಬರೋದು, ನನ್ನ ಮಗನ ಪ್ರಶ್ನೆ ನನಗೆ ಬರೋದು ಎರಡು ಒಂದೇ ಸಮಯಕ್ಕೆ ಆಯಿತು

ಮಗ: ಅಪ್ಪಾ.. ಅವತ್ತು ನೀನು ಬ್ಯಾಂಕಿನ ಸಾಲ ಪೈ ಪೈ ತೀರಿಸ್ತೀನಿ ಅಂತ್ತಿದ್ದಿ, ಪೈ ಅಂದ್ರ ನೀನು ಬರೀ ೩ ರೂಪಾಯಿ ೧೪ ಪೈಸೆ ಸಾಲ ಮಾಡಿಯೇನು ?

ಅಪ್ಪ: ಸಾಲ ಎಷ್ಟು ಅಂತ ಕೇಳುವಷ್ಟು ದೊಡ್ಡವನಾದಿಯೇನ ಮಗನೆ? ಆದ್ರೂ ಹೇಳ್ತೀನಿ ಕೇಳಪ್ಪ, ಆ ಪೈ ಪೈ ಅಂದ್ರ ಪ್ರತಿ ಪೈಸೆ ಮಗನೆ, ನಾನು ಎಲ್ಲಾ ಸಾಲ ತೀರಿಸಿ ಬರ್ತೀನಿ ಅಂತ ಹೇಳಿದೆ ಅವತ್ತು 

ಗುಂಡ: ಅಲ್ಲೋ ಸತ್ಯಾ, ಏನು ಸಾಲ, ಪಾಲ ಅಂತ ಮನ್ಯಾಗ ಮಾತ್ ನಡೆದಾದ?

ಸತ್ಯಾ: ಸಾಲ ಅಲ್ಲಪ್ಪಾ,  ನಾನು ಪೈ ದಿನದ ಬಗ್ಗೆ ಮಾತಾಡಕ್ಕ ಹತ್ತೀನಿ, ಇವರಿಗೆ ತಿಳಸಾಕತ್ತೀನಿ ಪೈ ಅಂದ್ರ ಏನು ಅಂತ

ಗುಂಡ: ಛಲೋ ಆತು ನಾನು ಈಗ ಬಂದಿದ್ದು. ನಾನು ಸ್ವಲ್ಪ ತಿಳ್ಕೋತೀನಿ, ಮತ್ತ ಗೊತ್ತಿದ್ರ ತಿಳಿಸ್ತೀನಿ 

ಹೆಂಡತಿ: ಅಲ್ರಿ, ಅದೇನೂ ಅನಂತ, ಅಚ್ಯುತ ಅಂದ್ರಲ್ಲ, ಅದೇನು ವಿಶೇಷ?

ಸತ್ಯಾ:  ಪೈ ಸಂಖ್ಯಾ ಭಾಗಾಕಾರ ಮಾಡಿದಾಗ ಸಿಗುವ ದಶಮಾಂಶ ಬಿಂದು ನಂತರದ ಅಂಕಿ ಕೊನೆಗೊಳ್ಳುವದೇ ಇಲ್ಲ. ಗೂಗಲ್ ಸಂಸ್ಥೆಯ ಉದ್ಯೋಗಿ "ಎಮ್ಮಾ ಹರುಕಾ" ಪೈ ಸಂಖ್ಯೆ ೩೧೫ ಟ್ರಿಲಿಯೆನ್ ಅಂಕಿಯಲ್ಲಿ ಲೆಕ್ಕ ಹಾಕಿದ್ದು ಒಂದು ದಾಖಲೆ. ಅದಕ್ಕೆ ಅದನ್ನು ಅನಂತ, ಅಂದ್ರೆ ಕೊನೆಯಿಲ್ಲದ್ದು ಅಂತ ಹೇಳ್ತಾರೆ ಅಲ್ಲದೆ ಇದು ಗಣಿತದ ಒಂದು ವಿಸ್ಮಯ ಕೂಡಾ ನೋಡ.

ಮತ್ತೊಂದು ಮಜಾ ಕೇಳಿ, ನೀವು ಮೈಯ್ಯಾಗ ದೇವರು ಬಂದದ ಅಂತಾನೋ, ದೆವ್ವ ಬಂದದ ಅಂತಾನೋ ಕೇಳಿರಿ, ಅದ್ರ ಮೈಯ್ಯಾಗ ಕಂಪ್ಯೂಟರ್ ಬಂದದ್ ಕೇಳಿರೇನು? 
ನಮ್ಮ ಶಕುಂತಲಾ ದೇವಿ ಕೇಳಿರಲ್ಲ, ಅವರ ಹಂಗೆ ನಮ್ಮ ರಾಜವೀರ್ ಮೀನಾ ಪೈ ಸಂಖ್ಯಾದ ದಶಮಾಂಶ ಬಿಂದು ನಂತರದ ೭೦೦೦೦ ಅಂಕಿ ನೋಡದ ಹೇಳಿ ಅವ್ನೂ ದಾಖಲೆ ಮಾಡ್ಯಾನ... ಅದಕ್ಕ ಅಂದದ್ದು ಕಂಪ್ಯೂಟರ್ ಇವರ ಮಯ್ಯಾಗ ಬರ್ತದ ಅಂತ (ನಕ್ಕೋತ)

ಗುಂಡ: ಇನ್ನೊಂದು ಆಶ್ಚರ್ಯದ ಸಂಗತಿ ಅಂದ್ರ, ಪೈ ಸಂಖ್ಯಾದ ದಶಮಾಂಶ ಬಿಂದು ನಂತರದ ಅಂಕಿಗೆ ಯಾವುದೇ ಒಂದು ಕ್ರಮಬದ್ಧತೆ ಇಲ್ಲ, ಅದಕ್ಕ ನಾವು ತರ್ಕಾತೀತ ಅನ್ನಬಹುದೇನೋ...

ಸತ್ಯಾ: ಮಂದಿ ಪೈ ವಿಷಯದ ಮೇಲೆ ಬಹಳ ಕೆಲಸ ಮಾಡ್ಯಾರ. ಅವರು "ಪೈ-ಲಿಷ್" ಅಂತ ಭಾಷಾ ಹುಡುಕ್ಯಾರ, ಪೈ ದಾಗ ಬರುವ ಸಂಖ್ಯಾ ದಷ್ಟೇ ಇಂಗ್ಲಿಷ್ ಅಕ್ಷರ ಉಪಯೋಗಿಸಿ ಬರೀತಾ ಹೋಗೋದೇ ಈ ಭಾಷಾ ಸ್ವರೂಪ. ಅಮೆರಿಕನ್ ಮೈಕ್ ಕೀತ್ ಬರೆದ ಪುಸ್ತಕ " Not A Wake: A Dream Embodying π’s Digits Fully For 10000 Decimals "  (೩.೧೪೧೫೯೨೬೫೩೫೮ - ಪುಸ್ತಕದ ಹೆಸರ್ ಕೋಡಾ ಪೈ ಲಿಷ್ ನಲ್ಲಿ ಬರೆದದ್ದು)  ಪೈ ಲಿಷ್ ನಲ್ಲಿ ಬರೆದದ್ದು 

ನಮ್ಮ ಗಣಿತಜ್ಞ ಭಾಸ್ಕರ, ಆರ್ಯಭಟ್ಟ ಮತ್ತು ಮಾಧವ ಎಲ್ಲರೂ ಕೂಡಾ ಪೈ ಕುರಿತು ಬಹಳ ಶೋಧನೆ ಮಾಡ್ಯಾರ. ಅವರನ್ನಂತೂ ಇವತ್ತು ಮರೆಯೋಕ್ಕಾಗಲ್ಲ

ಹೆಂಡತಿ: ನಡೀರಿ ಎಲ್ಲಾರೂ, ಇಲ್ಲಿ ಹತ್ತಿರ್ದಾಗ ಹವನ ಮಾಡ್ಯಾರ. ಬಾ ಅಂತ ಕರೆದಾರ 

ಎಲ್ಲರೂ ಅಲ್ಲಿಗೆ ಹೋದಾಗ ಅಲ್ಲಿ ಕಂಡ ಮಂಡಳಗಳ ತುಂಬೆಲ್ಲ ಕಂಡಿದ್ದು "ಪೈ". 
ಸೋಮವಾರ, ಶಿವನ ವಾರ - ನೆನಪಾದ ಹಾಡು " ಶಿವ ಶಿವ ಎಂದರೆ ಭಯ ಇಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ"
ಪೈ ದಿನ  ಅಂತ ನಾನು ಅವತ್ತ ಮನಸಾಗ ಹಾಡಿದ್ದು 

ಪೈ ಪೈ ಇಲ್ಲದ ಜಗವಿಲ್ಲ,
ಪೈ ಸಂಖ್ಯಾ ಗೆ ಸಾಟಿ ಬೇರಿಲ್ಲ, 
ಪೈ ಇಲ್ಲದ್ ವರ್ತುಲಾ ಇಲ್ಲ, 
ವರ್ತುಲ ಇಲ್ಲದ್ ರೇಖಾ ಗಣಿತ ಇಲ್ಲ...

ಪೈ ಪೈ ಇಲ್ಲದ ಜಗವಿಲ್ಲ,
ಪೈ ಸಂಖ್ಯಾ ಗೆ ಸಾಟಿ ಬೇರಿಲ್ಲ.

~ ಪ್ರಮೋದ್

4 thoughts on “ಆ ಗಹನ ತತ್ವಕೆ ಶರಣು – ಮಂಕುತಿಮ್ಮ

  1. ಡಿವಿಜಿ ಅವರ ಜನ್ಮದಿನಕ್ಕೆ ಬಂದ ಸಂಚಿಕೆ ಕಗ್ಗ ಹಾಗೂ ಅಂತಃಪುರ ಗೀತೆಗಳನ್ನು ಸಮಯೋಚಿತವಾಗಿ ಪ್ರತಿಫಲಿಸಿದೆ. ಗೌರಿ ಅವರ ಉಲ್ಲೇಖ ಭರಿತ ಸಂಪಾದಕೀಯದ ಚೌಕಟ್ಟು ಸಂಚಿಕೆಗೆ ಕಳಸಪ್ರಾಯ.

    ಅನಿವಾಸಿಯ ಕಗ್ಗ ಪ್ರೇಮಿ ಹಾಗೂ ಪಂಡಿತ ವಿಜಯ ನಾರಸಿಂಹರ ಲೇಖನವಿಲ್ಲದಿದ್ದರೆ ಈ ವಾರದ ಸಂಚಿಕೆ ಅಪೂರ್ಣವಾಗುತ್ತಿತ್ತು ಎನ್ನಿಸುವುದು ಸಹಜ. ನವ್ಯಾ ಕಗ್ಗವನ್ನು ಹಾಡಿದ ಗಮಕ ಶೈಲಿ ಕವನಗಳ ಅರ್ಥವನ್ನು ಅನಾವರಣಗೊಳಿಸುತ್ತ ಹೋಗುವಲ್ಲಿ ಯಶಸ್ವಿಯಾಗಿದೆ. ಪ್ರಸನ್ನ ಅವರಿಗೆ ಸ್ವಾಗತ ಅನಿವಾಸಿಗೆ. ಅವರ ಲೇಖನ ಗುಂಡಪ್ಪನವರ ಕಾವ್ಯ ಕೃಷಿಯ ಇನ್ನೊಂದು ಮಗ್ಗಲನ್ನು ಧೇನಿಸಿದೆ.

    ಪ್ರಮೋದರ “ಪೈ” ಪುರಾಣ ಓದುಗರನ್ನು ನಗಿಸುತ್ತದೆ. ಅವರ ಗಣಿತ – ವಿಜ್ಞಾನದ ಪ್ರೇಮಕ್ಕೆ ಕನ್ನಡಿ ಹಿಡಿದಿದೆ. ಕೊನೆಯ ಅಣಕು ಪದ್ಯ ಅವರ ಹಾಸ್ಯ ಪ್ರಜ್ಞೆಗೆ ಸಾಕ್ಷಿ.
    – ರಾಂ

    Like

  2. ಈ ವಾರದ ಅನಿವಾಸಿ ಸಂಚಿಕೆ ಮೂರಕ್ಷರದ ಡಿ ವಿ ಜಿಯವರ ಹುಟ್ಟು ದಿನವನ್ನು ನೆನೆಸುತ್ತ ಒಬ್ಬ ಸಂಪಾದಕಿ ನಾಲ್ವರ ಕೊಡುಗೆಯನ್ನು (ಪೈಲಿಷ್ ಭಾಷೆಯಲ್ಲಿ ಈಗಾಗಲೇ 3,1,4 ಆಯಿತು) ತಮ್ಮ ಈಗಾಗಲೇ ಸಂಪಾದಕೀಯಕ್ಕೇ ಹೆಸರು ಗಳಿಸಿದ ಗೌರಿಯವರ ಮುನ್ನುಡಿಯೊಂದಿಗೆ ಹೊರಬಂದಿದೆ! ಅವುಗಳ ವೈವಿಧ್ಯ ಅನನ್ಯ.
    ಈ ಮೊದಲೇ ನಮಗೆ ವಿಜಯನರಸಿಂಹರ ಡಿವಿಜಿಯವರ ಬಗೆಗಿನ ಅವರ ಗೌರವ ಮತ್ತು ಪ್ರೀತಿಯ ಸುಳುವನ್ನು ತಮ್ಮ Vlog ಗಳಿಂದ ಕೊಟ್ಟಿದ್ದಾರೆ. ಕಾರಣಾಂತರಗಳಿಂದ ಅದು ಅಲ್ಲಿಗೇ ನಿಂತು ಹೋಯಿತೇನೋ. ಅವರ ಇಂದಿನ ತೌಲನಿಕ ತೂಕದ ಬರಹ ನೋಡಿದರೆ ಅದನ್ನು ಮತ್ತೆ ಆರಂಭಮಾಡಿಯಾರು ಎನ್ನುವ ಆಶಯವಿದೆ.
    ಯುವ ಗಮಕಿ ನವ್ಯಾ ಅವರು ಬೆಂಗಳೂರಲ್ಲಿದ್ದರೂ ಸಂಪಾದಕರ ಆಹ್ವಾನಕ್ಕೆ ಓಗೊತ್ತು ನಾಲ್ಕು ಕಗ್ಗಗಳನ್ನು ಹಾಡಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಇದನ್ನು ಎದುರು ನೋಡುತ್ತಿದ್ದ ನನಗೆ ಕೇಳಿ ಖುಶಿಯಾಯಿತು. ಚಿರಪರಿಚಿತ ಕಗ್ಗಳಾದರೂ ಮಾಸಿಲ್ಲ, ಅವುಗಳಲ್ಲಿ ಇನ್ನೂ ಹೊಸ ಹೊಳಹನ್ನು ತೋರುವ ಪ್ರಯತ್ನವಿದೆ ಇಲ್ಲಿ.
    ’ಅನಿವಾಸಿ ’ ಯಲ್ಲಿ ಬರೆಯುತ್ತಿರುವ ಇನ್ನೊಬ್ಬ ಹೊಸ ಲೇಖಕರು -ಪ್ರಸನ್ನ. ಆ ಬರವಣಿಗೆಯನ್ನು ನೋಡಿದರೆ, ಮುರಜಾಮೋದೆ, ಮುರಳೀಧರೆ, ಕುಟಿಲಕುಂತಲೆ, ರಸಿಕಶಬರಿ, ಉಲ್ಲಾಸಿನಿ, ಪುಂವಿಡಂಬಿನಿ ಅವರ ವರ್ಣನೆ
    ಓದಿದರೆ ಪಳಗಿದ ಕೈ ಎನಿಸುತ್ತದೆ. ಆ ಶಿಲಾಬಾಲಕಿಯರ ಲಾವಣ್ಯವನ್ನೆಲ್ಲ ತಮ್ಮ ಶೃಂಗಾರ ಭರಿತ ಲೇಖನದಲ್ಲಿ ’ತೆರೆದಿಟ್ಟಿದ್ದಾರೆ. ಅದರಲ್ಲಿ ಹುದುಗಿದ ನವಿರಾದ ಆ ಭಾವಗಳನ್ನು ಅಭಿವ್ಯಕ್ತಿಪಡಿಸಿದ್ದನ್ನು ನೋಡಿದರೆ ರಸಿಕರಂತೆ ಕಾಣುತ್ತಾರೆ!
    ಇನ್ನು ಕೊನೆಯಲ್ಲಿ ಸೇರಿಕೊಂಡಿರುವ ಆ ಕೊನೆಯಿಲ್ಲದ ಅಂಕಿಯ ಕಥೆಯನ್ನು ಪೈಲಿಷ್ ಭಾಷೆಯಲ್ಲಿ ಬರೆದವರು ಯಾರು,
    ’ಪ್ರಮೋದ್? ಓ, ನಮ್ಮವರೇ ಆ ವಿವಿಡ್ಲಿಪಿ, ಇಲ್ಲ, ವಿವಿಧತರದಪುಸ್ತಕ ಬ್ರಹ್ಮ, ಮಾರಾಟಗಾರರು …’ ಗಮನಿಸಿದಿರಾ, ಈ ವಾಕ್ಯದ ಪದಗಳಲ್ಲಿಯ ಅಕ್ಷರಗಳ ಸಂಖ್ಯೆ ಸಹ ’ಪೈ’ದ ಅಂಕಿಯಂತೆಯೇ ( 3 1 4 1 5 9 2 6) ಇದನ್ನು ಮೈಕ್ ಕೀಥ್ ನಂತೆ ಆ ಪೈಲಿಷ್ ಭಾಷೆಯಲ್ಲಿ ಮುಂದುವರಿಸಲಾರೆ. Pi ಅಂಕಿ ಹಳೆಯದಾದರೂ ಲೇಖನದ ದೃಷ್ಟಿ ಹೊಸತು. ಆ ಕಥೆಯನ್ನು ಹೇಳಿದ್ದೂ ಹೊಸರೀತಿಯಲ್ಲಿ. ಮೊದಲ ಬಾರಿ ಆ ’ಪೈಲಿಷ್ ಭಾಷ” ಅದನ್ನು ಕೇಳಿದ ನನ್ನ ಕುತೂಹಲ ಕೆರಳಿಸಿ ಸ್ವಲ್ಪವಾದರೂ ಅದರ ಬಗ್ಗೆ ತಿಳಿಕೊಳ್ಳುವಂತೆ ಮಾಡಿದ ಪ್ರಮೋದ್ ಅವರಿಗೆ ಧನ್ಯವಾದಗಳು ಮತ್ತು ಪ್ರಸನ್ನ, ನವ್ಯ ಮತ್ತು ವಿಜಯ ನರಸಿಂಹ ಅವರಿಗೂ ಅಭಿನಂದನೆಗಳು. ಪೈ ಅಂದಕೂಡಲೇ ಇನ್ನೊಂದು ಮಾತು ನೆನಪಾಗುತ್ತದೆ. ಇಂಗ್ಲೆಂಡಿಗೆ ಬಂದ ಹೊಸತರಲ್ಲಿ ನಾನು ಮೊದಲ ಸಲ ಸ್ಟೋನ್ ಹೆಂಜ್ ದಲ್ಲಿ ಮೂರು ಕಲ್ಲಿನ ಸ್ತಂಭಗಳನ್ನು ನೋಡಿದಾಗ ನನಗೆ ಮೂರು ಗೆರೆಗಳ ಪೈಯೇ (π) ನೆನಪಾಗಿತ್ತು!
    ಶ್ರೀವತ್ಸ ದೇಸಾಯಿ

    Like

  3. ಡಿವಿಜಿಯವರ ಕಗ್ಗಕ್ಕೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ, ವಾಟ್ಸ್ಯಾಪ್ ಗುಂಪುಗಳಿವೆ. ಕಗ್ಗದ ಅರ್ಥ ಮತ್ತು ತಾತ್ಪರ್ಯಗಳನ್ನು ಕುರಿತು ಹತ್ತಾರು ಪುಸ್ತಕಗಳು ಪ್ರಚಲಿತದಲ್ಲಿವೆ. ಗುರುರಾಜ ಕರ್ಜಗಿಯವರು, ಸಾಕಷ್ಟು ಧರ್ಮಗುರುಗಳು ಒಂದೊಂದು ಕಗ್ಗದ ಬಗ್ಗೆಯೇ ಗಂಟೆಗಟ್ಟಲೇ ಮಾತಾಡಬಲ್ಲರು. ಯುಟ್ಯೂಬಿನಲ್ಲಿ ಸಾವಿರಾರು ವಿಡಿಯೋಗಳು ಕಗ್ಗದ ಮೇಲೆ ನೋಡಲು ಸಿಗುತ್ತವೆ.

    ಕರ್ಜಗಿಯವರು ಇಂಗ್ಲೆಂಡಿಗೆ ಬಂದಾಗ ’ಅನಿವಾಸಿ’ಯು ’ಕಗ್ಗದ’ ಗೋಷ್ಠಿಯನ್ನು ಮಾಡಿತ್ತು, ಆಗ ನಾವೆಲ್ಲರೂ ನಮಗಿಷ್ಟವಾದ ಕಗ್ಗವನ್ನು ಓದಿ, ಅದೇಕೆ ನಮಗೆ ಇಷ್ಟ ಎಂದು ಹೇಳಿದ್ದೆವು, ನಂತರ ಕರ್ಜಗಿಯವರು ಕಗ್ಗಗಳ ವಿಶ್ಲೇಷಣೆ ಮಾಡಿದ್ದರು.

    ಡಿವಿಜಿಯವರ ಈ ಸಂಚಿಕೆ, ಗೌರಿಯವರ ಪರಿಶ್ರಮದ ಫಲ. ಅವರ ಸಂಪಾದಕೀಯದಲ್ಲಿ ಡಿವಿಜಿಯವರ ಜೀವನದ ಘಟನೆಯನ್ನು ತುಂಬ ಆಪ್ತವಾಗಿ ಬರೆದಿದ್ದಾರೆ.

    ವಿಜಯ ನಾರಸಿಂಹ ಅವರು ಕಗ್ಗದ ಬಗ್ಗೆ ಯುಟ್ಯೂಬ್ ಸರಣಿಯನ್ನು ಆರಂಭಿಸಿದ್ದರು. ಅವರ ಲೇಖನ ಮತ್ತೊಮ್ಮೆ ಕಗ್ಗವನ್ನು ಕೈಗೆತ್ತಿಕೊಳ್ಳಬೇಕೆನ್ನುವ ಹಂಬಲವನ್ನು ತಂದಿದೆ.

    ನವ್ಯಾ ಅವರು ಯು.ಕೆಯ ಅನನ್ಯ ಗಮಕ ಗಾಯಕಿ. ಗಮಕದ ಶೈಲಿಯಲ್ಲಿ ಹಾಡಿದ ಕಗ್ಗಗಳು ಮತ್ತೆ ಮತ್ತೆ ಕೇಳುವಂತಿವೆ. ಅವರ ಶ್ರುತಿ ಮತ್ತು ಭಾವಪೂರ್ಣತೆ ಕಗ್ಗದ ಅರ್ಥವನ್ನು ವಿಸ್ತರಿಸುತ್ತವೆ.

    ಪ್ರಸನ್ನ ಅವರಿಗೆ ’ಅನಿವಾಸಿ’ಗೆ ಸ್ವಾಗತ. ಅಂತಃಪುರ ಗೀತೆಯ ಜಾಡನ್ನು ಹಿಡಿದು ಬರೆದ ಪ್ರಬಂಧ ಮುದನೀಡುತ್ತದೆ. ಇನ್ನೂ ಹೆಚ್ಚು ಬರೆಯಿರಿ.

    ಪ್ರಮೋದ ಅವರು ’ಪೈ’ ಬಗ್ಗೆ ಹಾಸ್ಯ್ಮಯವಾಗಿ, ಕುತೂಹಲಕಾರಿಯಾಗಿ ಬರೆದಿದ್ದಾರೆ. ಓದುತ್ತ ಮುಗುಳ್ನಗು ಮೂಡುತ್ತದೆ. ಪೈ ದಿನದ ನೆನಪಿನಲ್ಲಿ ಗಣಿತದ ಪೈನ ಕುತೂಹಲಕಾರಿ ಅಂಶಗಳನ್ನು ಹೇಳಿದ್ದಲ್ಲದೇ, ಎಷ್ಟೊಂದು ಪೈಗಳನ್ನು ನೆನಪಿಸಿಕೊಟ್ಟಿದ್ದಾರೆ!

    ಈ ಶುಕ್ರವಾರ ಇಂಥ ಉತ್ಕೃಷ್ಟ ಸಂಚಿಕೆಯನ್ನು ಸಂಪಾದಿಸಿ ಉಣಬಡಿಸಿದ ಗೌರಿಯವರಿಗೆ ಅಭಿನಂದನೆಗಳು ಮತ್ತು ವಂದನೆಗಳು.

    – ಕೇಶವ

    Like

  4. ಎನ್ನಂತರಂಗದ ಮುರಳಿ
    ಉಲಿವ ಭಾವದಲೆಗೆ ನೀ ಬೊಮ್ಮ
    ನಿನ್ನ ಗುಡಿಯಲುರುಳಿ
    ನಲಿವ ಮಂಕು ನಾ, ನೀ ನನ್ನ ತಿಮ್ಮ!

    ತತ್ವ ಸಾರದ ಮಂಕರಿಯನ್ನ ಮಂಡೆಯೊಳಿಳಿಸಿದ ಗುಂಡಪ್ಪರಿಗೆ ನಿತ್ಯ ನಮನ.

    ಅನಿವಾಸಿಯ ಅಂಗಳದಲ್ಲಿ ‘ತಿಮ್ಮ’ನುತ್ಸವಮೂರ್ತಿಯನ್ನು ಹೊತ್ತು ಕುಣಿದ ಭಕ್ಕವೃಂದಕ್ಕೆ ಕೃತಜ್ಞತೆಯ ಬಹುಮಾನ.

    ಮುದ ನೀಡುವ ಪ್ರಮೋದರ ‘ಪೈ’ಯಂತೆ ಕಗ್ಗ ಬಿಡಿಸಿದಷ್ಟೂ ಬೆಳೆಯುವ, ಬೆಳಿಸಿದಷ್ಟೂ ಬೆಳೆಸಿಕೊಳ್ಳುವ ‘ಪೈ’ಯಣಿಗ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.