ನಿನಗೆ ಬೇರೆ ಹೆಸರು ಬೇಕೇ? ‘ಸ್ತ್ರೀ’ ಎಂದರೆ  ಅಷ್ಟೇ ಸಾಕೇ??..

ನಲುಮೆಯ ಓದುಗರೇ ನಮಸ್ಕಾರ. ಸರ್ವರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. 
‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’,  ‘ಮಹಿಳೆಯರಿಗೆ ವೇದಾಧಿಕಾರವಿಲ್ಲ’, ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ,  ಶಿಕ್ಷಣ ಸೌಲಭ್ಯವಿಲ್ಲ, ವೇತನ ಸಮಾನತೆಯಿಲ್ಲ, ಆಸ್ತಿಯಲ್ಲಿ ಹಕ್ಕಿಲ್ಲ, ಮತದಾನದ ಹಕ್ಕಿಲ್ಲ..ಇಂಥವೇ ಹತ್ತು ಹಲವಾರು ಶೋಷಣೆಗಳಿಗೆ ಶತಶತಮಾನಗಳಿಂದಲೂ ಒಳಗಾಗುತ್ತಿದ್ದರೂ ‘ಎತ್ತರದಲ್ಲಿಟ್ಟು ಪೂಜಿಸಬೇಡಿ; ನೆಲದಲ್ಲಿಟ್ಟು ತುಳಿಯಬೇಡಿ. ನಿಮ್ಮ ಹೆಗಲಿಗೆ ಹೆಗಲಾಗಿ ನಡೆಯಲನುವು ಮಾಡಿಕೊಡಿ’ ಎಂದು ತನ್ನತನವನ್ನು ಉಳಿಸಿಕೊಳ್ಳಲು ಇನ್ನಿಲ್ಲದಂತೆ ಹೆಣಗಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿರುವ ‘ಸ್ತ್ರೀ’ ಯ ಯಶೋಗಾಥೆ ಅನನ್ಯ;ಅದ್ಭುತ.
ನಮ್ಮ ವರಕವಿಗೆ ಬ್ರಹ್ಮಾಂಡದ ಶಕ್ತಿಗಳೆಲ್ಲವೂ, ಸೃಷ್ಟಿಯೆಲ್ಲವೂ ಹೆಣ್ಣು..
ಚಳಿಯಾಕೆ,ಬಿಸಿಲಾಕೆ, ಮಳೆಯಾಕೆ,ಕೈ ಹಿಡಿದಾಕೆ, ಕೈ ಬಿಡದಾಕೆ, ಮಾಹೂರಗಡದಾಕೆ,ಗುಂಗು ಹಿಡಿಸಿದಾಕೆ, ಹುಚ್ಚು ಬಿಡಿಸಿದಾಕೆ,ಓಹೋ ಮುಗಿಲಿಗೆ ಜಿಗಿದಾಕೆ, ಸೂರ್ಯನ ಬೆಳಕಿಗೂ ಸಿಗದಾಕೆ..ಈಕೆ. ಇಂದು ಶ್ರೀವತ್ಸ ದೇಸಾಯಿಯವರು ಅದ್ಯಾರೋ ‘ಆಕೆ’ಯನ್ನು ನೆನೆಯುತ್ತಿದ್ದಾರೆ. ಬನ್ನಿ, ನೋಡೋಣ ಯಾರವಳು? ‘ಮಾನಸ ಸರಸಿನ ನೆನಪಿನ ನೆರಳಾಕೆ..ಎಳೆತಂತಿಯ ಮಿಡಿದಾಕೆ ಯಾರೀಕೆ?..ನನ್ನೊಳಗೇ ನನ್ನೆಳೆದಾಕೆ ಯಾರಾಕೆ??’ ಆ ‘ಆಕೆ’ಗೊಂದು ತಮ್ಮ ಮಾಂತ್ರಿಕ ಕುಂಚದಿಂದ ಚಂದದ ರೂಪ ಕೊಟ್ಟಿದ್ದಾರೆ ಲಕ್ಷ್ಮೀನಾರಾಯಣ ಗುಡೂರ ಅವರು.
 ಅನುದಿನ ಬೆಳಗಿನಲ್ಲಿ ಪೂರ್ವದಲ್ಲಿ ಸೂರ್ಯ ಹುಟ್ಟಿ, ಬೆಳೆದು, ಏರಿ,ಇಳಿದು ಮುಸ್ಸಂಜೆ ಪಡುವಣಗಡಲಲ್ಲಿ ಮುಳುಗಿದರೂ ..ಅವನ ಸುತ್ತಲೇ ಸುತ್ತುವ ವಸುಂಧರೆಯ ಕಾಯಕ ಮುಗಿಯುವುದೇ ಇಲ್ಲ. ಸುಂದರ-ಸತ್ವಯುತ ಪ್ರತಿಮೆಗಳೊಂದಿಗೆ  ‘ಅಪೂರ್ವ’ ಕವನವನ್ನು ಕಟ್ಟಿಕೊಟ್ಟಿದ್ದಾರೆ. ಹೆಸರಾಂತ ಕವಯತ್ರಿ ಶ್ರೀಮತಿ ಹೇಮಾ ಪಟ್ಟಣಶೆಟ್ಟಿ. ಅದನ್ನು ನಿಮ್ಮೆದಿರು ಪ್ರಸ್ತುತಪಡಿಸುತ್ತಿದ್ದಾಳೆ ಕುಮಾರಿ.ಅಕ್ಷತಾ ಲಕ್ಕುಂಡಿ. 
ಸಾಧನೆಗಳು,ಸಾಧಕಿಯರು ಅಂದೊಡನೆ ಹಲಕೆಲವರ ಹೆಸರುಗಳನ್ನಷ್ಟೇ ಮತ್ತೆ ಮತ್ತೆ ಉಚ್ಚರಿಸುತ್ತೇವೆ. ನಮ್ಮ ಸುತ್ತಮುತ್ತಲೇ ಇರುವ  ನಮ್ಮಂಥದೇ ಸಾಮಾನ್ಯರ ಸಾಧನೆಗಳು ನಮ್ಮರಿವಿಗೆ ಬರುವುದೇ ಇಲ್ಲ. ನಮ್ಮದಲ್ಲದ ದೇಶದಲ್ಲಿದ್ದುಕೊಂಡು, ತೀರ ಭಿನ್ನ ಸಂಸ್ಕೃತಿಯ ಮಧ್ಯದಲ್ಲಿದ್ದೂ ಅವೆರಡನ್ನೂ ಮೇಳೈಸಿಕೊಂಡು ನಮ್ಮ ಸಾಹಿತ್ಯಸಂಗೀತಗಳ ಸತ್ವವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಅಮಿತಾ.ರವಿಕಿರಣ್ ಅವರ ಗಾಯನದ ಗುಂಗು ಅನಿವಾಸಿಗೆ ಹೊಸದೇನಲ್ಲ. ಇತ್ತೀಚೆಗೆ ಕನ್ನಡದ ಹೆಸರಾಂತ ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದ ಕುರಿತು ಅಭಿಮಾನದಿಂದ ಬರೆದಿದ್ದಾರೆ  ಶ್ರೀರಂಜಿನಿಯವರು.
ಬನ್ನಿ..ಓದಿ..ಅನಿಸಿಕೆ ಹಂಚಿಕೊಳ್ಳಿ.
~ ಸಂಪಾದಕಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ನನ್ನ ‘ಆಕೆ’!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Women's Day - IWD) ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಆ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಭಾರತದಲ್ಲಿ ಮಾತ್ರ ಫೆಬ್ರುವರಿ 13 ರಂದು ಸರೋಜಿನಿ ನಾಯ್ಡು ಅವರ ಹುಟ್ಟುಹಬ್ಬದ ದಿನದಂದು ರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಇದು ಎಂದು ಪ್ರಾರಂಭವಾಯಿತು? ನಾನು ಓದಿದ ಒಂದು ಇತಿಹಾಸದ ಪ್ರಕಾರ 1909 ಫೆಬ್ರುವರಿ 28 ರಂದು ಅಮೇರಿಕೆಯ ರಾಷ್ಟ್ರಿಯ ಮಹಿಳಾ ದಿನದಂದು ಯುಕ್ರೇನಿನ ಮೂಲದ ಕ್ಲಾರಾ ಲೆಮ್ಲಿಚ್ ಎನ್ನುವ ಮಹಿಳೆಯ ಧುರೀಣತ್ವದಲ್ಲಿ ಹದಿನೈದು ಸಾವಿರ ಕಾರ್ಮಿಕರು ಸಂಪು ಹೂಡಿದರು. ಮರು ವರ್ಷ ಆ ಸಂಘಟನೆ ಅಧಿಕೃತವಾಗಿ ಆ ಹೆಸರಿನಿಂದ ಅಂಗೀಕೃತವಾಗಿ ಮುಂದೆ ಜಗತ್ತಿನಾದ್ಯಂತ ಪಸರಿಸಿತು. ವಾರ್ಷಿಕ ಕೆಲೆಂಡರಿನಲ್ಲಿ ಆ ತಾರೀಕು ಶಾಶ್ವತ ಸ್ಥಾನ ಪಡೆಯಿತು. IWD ಹೆಸರಿಸುವ ಹತ್ತು ಮೌಲ್ಯಗಳಲ್ಲಿ* ಮೆಚ್ಚುಗೆ (appreciation) ಸಹ ಒಂದು. ಅದಕ್ಕೇ ಇದು ಆಕೆಗೊಂದು ಬಿನ್ನವತ್ತಳೆ (ಮಾನ ಪತ್ರ).
ಇತ್ತೀಚಿನ ಒಂದು ’ಸಖಿ ಸಮಯದಲ್ಲಿ’ ಅಮಿತಾ ಅವರು ಅಂದಂತೆ: ”ಈಗಿರೋ ನಮ್ಮನ್ನು ರೂಪಿಸಲು ಅದೆಷ್ಟೋ ಒಳ್ಳೆ ಮನಸ್ಸುಗಳು ಸಹಕರಿಸಿಲ್ಲ ಹೇಳಿ? ಆದರೆ ಆ ವ್ಯಕ್ತಿಯ ಒಳ್ಳೆತನವನ್ನ ಶ್ಲಾಘನೆ ಮಾಡಲಿಕ್ಕೆ, ಥ್ಯಾಂಕ್ಯೂ ಹೇಳಲಿಕ್ಕೆ ಜನ್ಮ ದಿನ, ಆನ್ನಿವರ್ಸಿರಿಯನ್ನೇ ಏಕೆ ಕಾಯ್ತಿರುತ್ತೇವೆ? ಸಾಧ್ಯವಾದರೆ ಆ ವ್ಯಕ್ತಿಯಬಗ್ಗೆ ಮನಸ್ಸು ಬಿಚ್ಚಿ ಮಾತಾಡಿ. ನಿಸ್ಪೃಹತೆ ನಮ್ಮೆಲ್ಲರನ್ನು ಕಾಯಲಿ!” ಅದಕ್ಕೇ ಇಲ್ಲಿ ಮನಸ್ಸು ಬಿಚ್ಚಿ ಒಂದು ವ್ಯಕ್ತಿಯ ಬಗ್ಗೆ ನಾಲ್ಕು ಮಾತಗಳನ್ನಾಡುತ್ತಿದ್ದೇನೆ. 
’ಆಕೆ” ಬಹಳ ಕಾಲದ ವರೆಗೆ ನನ್ನ ವೈಯಕ್ತಿಕ ಮತ್ತು ವೃತ್ತಿಜೀವನದ ಅವಿಭಾಜ್ಯ ಅಂಗವಾಗಿದ್ದಳು. ಅವಳಿಗೆ ನನ್ನ ಬಗ್ಗೆ  ಗೊತ್ತಿರದ ಗುಟ್ಟಿಲ್ಲ; ನನ್ನ ಶಕ್ತಿ-ದೌರ್ಬಲ್ಯಗಳನ್ನು ಅವಳಂತೆ ಯಾರೂ ಅರಿತಿಲ್ಲ. ನನ್ನ ಪ್ರತಿದಿನದ ಕಾರ್ಯಕ್ರಮವನ್ನು ರೂಪಿಸಿದವಳೇ ಆಕೆ ಇದ್ದಷ್ಟು ವರ್ಷಗಳು. ನನ್ನ ತಪ್ಪುಗಳನ್ನು ಕ್ಷಮಿಸಿ, ತಿದ್ದಿ, ಆದರೂ ನೋಡಿಯೂ ನೋಡದವರಂತೆ ವರ್ತಿಸಿ ಹೆಗ್ಗಳಿಕೆಯಿಂದ ಬೀಗದವಳು.(ಆಕೆಯ ಸ್ಪೆಲ್ಲಿಂಗನ್ನು ನಾನು, ನನ್ನ ವ್ಯಾಕರಣವನ್ನು ಆಕೆ ತಿದ್ದಿದ್ದೂ ಇದೆ, ಆ ಮಾತು ಬೇರೆ.) ನನ್ನ ಬೆನ್ನೆಲುಬಾಗಿ, ಮೆದುಳಾಗಿ, ಲಿಪಿಕಾರಳಾಗಿ, ನನ್ನ ವೃತ್ತಿಜೀವನದ ಶಿಲ್ಪಿಯಾಗಿ ಬಾಳಿದಾಕೆ, ಆಕೆಗೆ ಇದರ ಮೂಲಕ ಥ್ಯಾಂಕ್ಯೂ ಹೇಳುತ್ತೇನೆ. ಆಕೆ ಯಾರೆಂದು ತಿಳಿದಿರಿ? ಆಕೆಯೇ ನನ್ನ ಪರ್ಸನಲ್ ಮೆಡಿಕಲ್ ಸೆಕ್ರೆಟರಿ! ನಾನು ಹೆಚ್ಚು ಕಡಿಮೆ ಐದು ದಶಕಗಳ ಕಾಲ ದುಡಿದ ಯು ಕೆದ ನ್ಯಾಷನಲ್ ಹೆಲ್ಥ್ ಸರ್ವಿಸ್ ನ(National Health Service -NHS) ಅನುಭವದಲ್ಲಿ ಮೆಡಿಕಲ್ ಸೆಕ್ರೆಟರಿಗಳ ಸೇವೆಯನ್ನು ಮೆಚ್ಚಿ  ಮೇಲೆ ಅಮಿತಾ ಹೇಳಿದಂತೆ  ಅವರ ನಿಸ್ಪೃಹತೆಯನ್ನು ಶ್ಲಾಘಿಸಿ  ಒಂದೆರಡು ಮಾತುಗಳನ್ನಾದರೂ ಬರೆಯುವದು ನನ್ನ ಕರ್ತವ್ಯವಲ್ಲವೆ? ನಾನು 1982ರಲ್ಲಿ ಕನ್ಸಲ್ಟಂಟನಾಗಿ ಕೆಲಸ ವಹಿಸಿದಿಗಾಗಿನಿಂದ ನನ್ನೊಡನೆ ಪರ್ಸನಲ್ ಸೆಕ್ರೆಟರಿಯಾಗಿ ಕೆಲಸ ಮಾಡಿದ ಐದಾರು ಮಹಿಳೆಯರನ್ನು (ಸೇರಾ, ಜೂಲಿ, ಕೇ, ಶೀಲಾ) ಸಾಮೂಹಿಕವಾಗಿ ನನ್ನ ವೃತ್ತಿ ಜೀವನದ ಸಿಂಹಭಾಗವನ್ನು ಆಳಿದ ’ಜೇನ್” ಅನ್ನುವ ಒಬ್ಬಾಕೆಯ ಹೆಸರಿನಲ್ಲೇ ಹೂ ಏರಿಸುತ್ತೇನೆ. ಎಪ್ಪತ್ತರ (1970) ದಶಕಗಳಿಂದಲೂ ಆಸ್ಪತ್ರೆಗಳಲ್ಲಿ ಕೆಲಸಮಾಡಿದವರಿಗಂತೂ ಡಾಕ್ಟರ್ ಮತ್ತವರ ಪರ್ಸನಲ್ ಸೆಕ್ರೆಟರಿ ನಡುವಿನ ಈ ಅವಿನಾಭಾವದ ಸಂಬಂಧದ ಅನುಭವ ಆಗಿರಲಿಕ್ಕೆ ಸಾಕು. ಈ ಲೇಖನದಲ್ಲಿ ನಿಮಗೆ ಅದರೊಂದಿಗೆ ಆಗಿನ NHS ದ ಸ್ವಲ್ಪ ಪರಿಚಯವೂ ಆದೀತು.
ಸೆಕ್ರೆಟರಿ ದೇವರಾದರೆ, ದೇವರ ಅವತಾರಗಳು ಅನೇಕ! ಮೊದಲು ಅವತರಿಸಿದಾಕೆ ಸೇರಾ. ನಮ್ಮ ಸ್ಪೇಷಲ್ ಸರ್ಜರಿ ಡಿಪಾರ್ಟ್ ಮೆಂಟಿನಲ್ಲಿ ನಾವಿಬ್ಬರು ಜೊತೆಗೇ ಸೇರಿದ ಸಮವಯಸ್ಕ ಕನ್ಸಲ್ಟಂಟ್ಗಳು. ನಮ್ಮಿಬ್ಬರಿಗೂ ಅವಳೊಬ್ಬಳೇ ಸೆಕ್ರೆಟರಿ ಆಗ. ಇಬ್ಬರಿಗೂ ತನ್ನ 50-50% ಸಮಯ ಹಂಚಿಕೊಂಡಿದ್ದಳು. ಹೊಸ ’ಬಾಸ್”ಗೆ ಆಕೆಯದೇ ಶಿಕ್ಷಣ - ಆಸ್ಪತ್ರೆಯ ಎಲ್ಲ ವಿವರ, ಕೆಲಸದ ಆಗು ಹೋಗುಗಳಿಂದ ಹಿಡಿದು ಡಿಕ್ಟಫೋನಿನಲ್ಲಿ ಹೇಗೆ ಪೇಶಂಟ್ಸ್ ಲೆಟರ್ ದಿಕ್ಟೇಟ್ ಮಾಡ ಬೇಕು ಅಂತ ತೋರಿಸಿಕೊಟ್ಟದ್ದಲ್ಲದೆ ನಮ್ಮಿಬ್ಬರ ಜೀವನದ ’ಡಿಕ್ಟೇಟರ್’ ಸಹ ಆಗಿದ್ದಳು. ಮೋಬೈಲ್ ಐಲ್ಲದ ಆ ಕಾಲದಲ್ಲಿ ನಾನಿಲ್ಲದಾಗ ಫೋನುಗಳನ್ನು ರಿಸೀವ್ ಮಾಡಿ ನಾನಿರುವ ಜಾಗವನ್ನು ಗುಪ್ತವಾಗಿಟ್ಟು (ಒಮ್ಮೊಮ್ಮೆ ಮಡದಿಯಿಂದಲೂ!) ಮ್ಯಾಜೇಜರರ ಕಾಟದಿಂದ ರಕ್ಷಿಸಿ, ಚಹ ಕಾಫಿ ಸರಬರಾಜು ಮಾಡಿ, ವರ್ಕ್ ಡೈರಿಯನ್ನು ಶಿಸ್ತಾಗಿ ಇಟ್ಟು, ಅಸ್ತವ್ಯಸ್ತವಾಗಿದ್ದ ನನ್ನ ಕೆಲಸದ ಟೇಬಲ್ಲನ್ನು ಓರಣವಾಗಿಟ್ಟು  ಪ್ರೈವೇಟ್ ಪ್ರಾಕ್ಟಿಸ್ ದೇಶಸೇವೆಗೆ ಅಡ್ಡಿ ಬರದಂತೆ ನನ್ನ ಕರ್ತವ್ಯ ಪಾಲನೆಯಲ್ಲಿ ಸಹಕರಿಸಿ, ಕನ್ಸಲ್ಟಂಟನ ಗಾಲ್ಫಿಗೂ ಸಮಯ ಒದಗಿಸಿ(ನನಗಲ್ಲ-ನಾನೆಂದೂ Golf ಆಡಿಲ್ಲ), ಆಪರೇಶನ್ ಥಿಯೇಟರಿನ ಒತ್ತಡಕ್ಕೆ ನನ್ನ ಸುತ್ತ firewall ಆಗಿ, ಡೊಮಿಸೀಲಿಯರಿ ವಿಜಿಟ್ಟುಗಳಿಗೆ ಕರೆ ಬಂದಾಗ ನಾನು ವಾಸಿಸುವ ಊರಿನ ರಸ್ತೆಗಳನ್ನು, ಸಂದು ಗೊಂದುಗಳನ್ನು ಪರಿಚಯಿಸಿ (ರೋಗಿಗಳನ್ನು ಮನೆಯಲ್ಲೇ ನೋಡುವದೂ NHS ಕೆಲಸವೇ ಆಗಿತ್ತು ಮತ್ತು ಸ್ಯಾಟ್ ನಾವ್ ದ  ನೀಲಿ ನಕ್ಷೆ ಸಹ ಆಗಿದ್ದಿಲ್ಲ, ಆಗ) ... ಒಂದೇ ಎರಡೇ ಆಕೆಯ ಕೆಲಸ, ತನ್ನ ಪ್ರೀತಿ ಪರಿಶ್ರಮದಿಂದ ಈ ಶಿಲ್ಪವನ್ನೇ ಕಟೆದಿದ್ದಳು! 
ಆಗಿನ ನನ್ನ ಒಬ್ಬ ಬಿಳಿಯ ಸಹೋದ್ಯೋಗಿ ಹೇಳಿದ ಮಾತು: ”ಒಬ್ಬ ಒಳ್ಳೆಯ ಸೆಕ್ರೆಟರಿ ಸಿಕ್ಕರೆ ನಿಮ್ಮ ಜೀವನ ಸಾರ್ಥಕ ಆಯಿತೆಂದು ತಿಳಿಯಿರಿ! ನಿಮಗೆ ತಪ್ಪದೆ ಪ್ರತಿ ವರ್ಷ ಕಾರ್ಡು ಕೊಟ್ಟರೂ ನಿಮ್ಮ ಬರ್ತ್ ಡೇಯನ್ನು ಉಳಿದವರಿಂದ ರಹಸ್ಯವಾಗಿಟ್ಟು; ಆದರೆ ನಿಮ್ಮ ಮತ್ತು ನಿಮ್ಮ ಪಾರ್ಟ್ನರ್ ಹುಟ್ಟು ಹಬ್ಬ, ಅನ್ನಿವರ್ಸರಿಗೆ ತಪ್ಪದೆ ಹೂಗುಚ್ಛ ಕಳಿಸಿ, ನಿಮಗೆ ವೇಲಂಟೈನ್ ದಿನದ ಪ್ರೆಸೆಂಟ್ ಕೊಳ್ಳಲು ಮರೆಯ ಬೇಡೆಂದು ನೆನಪಿಸಿ ಹೆಂಡತಿಯ ಸಿಟ್ಟಿನಿಂದ ಬಚಾವ್ ಮಾಡಿ, ಕ್ರಿಸ್ಮಸ್ ಪಾರ್ಟಿ ವ್ಯವಸ್ಥೆ ಮಾಡಿ (ಆದರೆ ತಪ್ಪಿಯೂ ನಿಮಗೆ ಆಗದವರನ್ನು ಬರಲಾಗದಂಥ ವ್ಯವಸ್ಥೆ ಮಾಡಿ), ನಿಮ್ಮ ಮಕ್ಕಳ ಹೆಸರನ್ನು ನೆನಪಿಟ್ಟುಕೊಂಡು, ಅವರ ಬೆಳವಣಿಗೆಯಲ್ಲಿ ಆಸ್ಥೆಯಿಟ್ಟು ಸಂಸ್ಕೃತ ಶ್ಲೋಕ ಹೇಳುವ** ಸನ್ಮಿತ್ರಲಕ್ಷಣಗಳೆಲ್ಲವನ್ನೂ ಹೊಂದಿದವಳು ಆಕೆ!”
ಜೇನ್ ಗೆ ಚಾಣಕ್ಯನೀತಿ ಕರತಲಾಮಲಕ. ಎಲ್ಲರಿಗೂ ಆಸ್ಪತ್ರೆಯಲ್ಲಿ ವಿಪರೀತ ಕೆಲಸ ಆಗ. ನಾನು ದಿನಕ್ಕೆ ಎರಡು ಕ್ಲಿನಿಕ್ ಮಾಡಿ ರಾಶಿ ರಾಶಿ ರೋಗಿಗಳ ಬಗ್ಗೆ ಅವರಿವರಿಗೆ ಪತ್ರಗಳನ್ನು ಡಿಕ್ಟಫೋನಿನಲ್ಲಿ ಹೇಳಿ ಆ ಕೆಲಸದಲ್ಲಿ ಮುಳುಗಿ ನನ್ನನ್ನೇ ಮರೆತಿರುತ್ತಿದ್ದೆ. ರಾತ್ರಿ ಕನಸಿನಲ್ಲಿ ಯಾರ್ಯಾರ ಹೆಸರು, ಏನೇನು ಬಡಬಡಿಸುತ್ತಿದ್ದೆನೋ, ಮಡದಿಯಿಂದ ಏನೂ ಕಂಪ್ಲೇಂಟ್ ಬಂದಿರಲಿಲ್ಲ! ಮರುದಿನ ಬೆಳಿಗ್ಗೆ ಎಂದಿನಂತೆ ಮುಗುಳ್ನಗುತ್ತ, ಕೈಯಲ್ಲಿ ಎರಡು ಕಾಫಿ ಮಗ್ಗುಗಳನ್ನು ಹಿಡಿದು ತನ್ನ ಮುಖದಲ್ಲಾಗಲಿ ದನಿಯಲ್ಲಾಗಲಿ ಲವ ಲೇಶವೂ ಕುಹಕ, ದುಃಖ, ದುಗುಡ ತೋರದೆ ಕೊಂಕು ಇಲ್ಲದೆ ಸವತಿ ಮತ್ಸರ ತೋರದೆ ”ನೆನ್ನೆಯ ಡಿಕ್ಟೇಶನ್ನಿನಲ್ಲಿ ನೀವು ನನ್ನನ್ನು ಆರು ಬಾರಿ ಶೀಲಾ (ಹಿಂದಿನ ದೀರ್ಘ ಕಾಲದ ಸೆಕ್ರೆಟರಿಯ ಹೆಸರು) ಎಂದು ಕರೆದಿರಿ, ಗೊತ್ತಾ?” ಅನ್ನ ಬೇಕೆ? ತಪ್ಪು ತಿಳುವಳಿಕೆ ಏನೂ ಹಾಯದಂಥ ಅನ್ಯೋನತೆಯನ್ನು ಹುಟ್ಟಿಸುವ ಜಾದೂ ಇರುತ್ತದೆ ಆ NHS ವಾತಾವರಣದಲ್ಲಿ! 
ಸಹೋದ್ಯೋಗಿಗಳು ಕೆಲವರು ಕನ್ಸಲ್ಟಂಟರನ್ನು ಅವರು ಓಡಿಸುವ ದುಬಾರಿ ಫ್ಯಾನ್ಸಿ ಕಾರಿನಿಂದ ಗುರುತಿಸಿದರೆ ಇನ್ನುಳಿದವರು ಅವರವರ ಸೆಕ್ರೆಟರಿಯಿಂದ ಖ್ಯಾತಿ ಪಡೆದವರು. ’ಓಹೊ, ನೀವು ಆ ಸೆಕ್ರೆಟರಿಯ ಬಾಸೋ?’ ಅಂತ ಉದ್ಗಾರ ತೆಗೆದವರುಂಟು. ನಾರಿನಿಂದ ಹೂ ಸ್ವರ್ಗಕ್ಕೆ? 
ಆಕೆ ಆಕರ್ಷಕವಾಗಿದ್ದರೆ ’Oh, that ’’bird”?’ಎನ್ನುವ”ರಸಿಕರೂ’ ಇರುತ್ತಾರೆ. ನಿಜವಾಗಿಯೂ ಸೆಕ್ರೆಟರಿ ಬರ್ಡ್ ಎನ್ನುವ ಪಕ್ಷಿ ಸಹ ಆಫ್ರಿಕದಲ್ಲಿದೆ. ಕರಿಯ ಬಣ್ಣದ ಪುಕ್ಕಗಳ, ಉದ್ದನ್ನ ಕಾಲುಗಳ ಒಯ್ಯಾರಿ ಹಕ್ಕಿ; ಅದು ನಡೆಯುವಾಗ ಬಿಲ್ಲುಗಾರನನ್ನು ಹೋಲುತ್ತದೆಯೆಂದು ಅದನ್ನು Sagittarius (ಧನುರ್ಧಾರಿ) serpentarius ಅಂತಲೂ ಕರೆಯುತಾರಂತೆ. ಹೈ ಹೀಲ್ಡ್ ಪಾದರಕ್ಷೆಗಳನ್ನು ಹಾಕಿಕೊಂಡು ನಡೆದರೆ ಸೆಕ್ರೆಟರಿ ಒಮ್ಮೊಮ್ಮೆ ಹಾಗೆ ಕಂಡರೂ ಆಶ್ಚರ್ಯವಿಲ್ಲ! ಅದರ ತಲೆಯ ಸುತ್ತಿನ ಗರಿಗಳು ಹಿಂದಿನಕಾಲದ ಕಾರಕೂನರು ಕಿವಿಯ ಹಿಂದೆ ಸಿಗಿಸಿದ ಕ್ವಿಲ್ (ಗರಿಬರಿಗೆ) ಅಥವಾ ಬತ್ತಳಿಕೆಯ ಬಾಣಗಳನ್ನು ಹೋಲುತ್ತದೆ ಅಂತ ಆ ಹೆಸರಿರಬಹುದು.
I am lost without my secretary, I don't  know what I'll do if she goes ಎಂದು ಹೇಳುವ ವೈದ್ಯಪ್ರಮುಖರೇ ಹೆಚ್ಚು NHS ತುಂಬ! ಬೆಳಿಗ್ಗೆ ಬಂದ ಕೂಡಲೇ ತನ್ನ ಸಂಗ್ರಹದಲ್ಲಿಂದ ಒಂದು ಮಗ್ಗನ್ನು ಆರಿಸಿ ಚಹವನ್ನು ಅದರಲ್ಲಿ ಹಾಕಿಕೊಂಡು ತಣ್ಣಾಗಾದ ನಂತರವೆ ಕುಡಿದು ಅಥವಾ ಕುಡಿದು ಮುಗಿಸುವದರಲ್ಲಿ ತಣ್ಣಗಾಗಿರಬೇಕು! ತದನಂತರ ಆಕೆಯ ಮೆದುಳು ಚುರುಕಾಗಿ ಅವಿರತವಾಗಿ ಕೆಲಸಗಳನ್ನು ಮಾಡುವ ಆಕೆಯ ಮಲ್ಟಿ ಟಾಸ್ಕಿಂಗ್ ಕುಶಲತೆಯನ್ನು ನೋಡಿಯೇ ಮೆಚ್ಚಬೇಕು. ಚೀಟಿಯ ಮೇಲೆ ಮೆಸೇಜುಗಳನ್ನು ನಯವಾಗಿ ಬರೆದು ನನ್ನ ಕಣ್ಣ ಮುಂದೆ ಹಾಯಿಸುವುದು ಅವಳ ರೂಢಿ. ಒಮ್ಮೊಮ್ಮೆ ಅವುಗಳ ಮಧ್ಯೆ ಕೀಟಲೆಗೆಂತೆಯೇ ಕೆಲವು ಸಹ ಇರುವದುಂಟು! ಹಿಂದೊಮ್ಮೆ ನನ್ನ ಕಣ್ಣಿಗೆ ಬಿದ್ದಿತು ಹೀಗೊಂದು (ರಿಸೈಕಲ್ಡ್) ಜಂಬ: "Consultant: Leaps short buildings in a single bound, is more powerful than a speeding bullet, walks on water if the sea is calm, talks with God. 
ಆದರೆ ಸೆಕ್ರೆಟರಿ? Secretary lifts buildings and walks under them, kicks locomotives off their tracks, catches speeding bullets in teeth and eats them, freezes water in a single glance, SHE IS GOD!"
ನಿಜ ನನ್ನ ಪಾಲಿಗೆ ’ಆಕೆ’ ದೇವಿಯೇ ಆಗಿದ್ದಳು, ಸೈ. ಇಂದಷ್ಟೇ ಅಲ್ಲ, ಈ ಮೊದಲೂ ಅವಳಿಗೆ ಅದನ್ನೇ ಹೇಳಿದ್ದೇನೆ. ಆ ಹತ್ತು ಮೌಲ್ಯಗಳಲ್ಲಿ ಕೊನೆಯದು ಕ್ಷಮೆ (forgiveness) ಅಂತೆ. ಅದಸ್ನೂ ಪಾಲಿಸಿದ್ದೇನೆ!

*  10 values of IWD: Justice, Dignity, Hope, Equality, Collaboration, Tenacity, Appreciation, Respect, Empathy, Forgiveness
** ”ಪಾಪಾನ್ನಿವಾರಯತಿ ಯೋಜಯತೆ ಹಿತಾಯ/ ಗುಹ್ಯಂ ನಿಗೂಹಯತಿ ಗುಣಾನ್ ಪ್ರಕಟಿಕರೋತಿ/ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ/ ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ”
(ಸನ್ಮಿತ್ರರ ಲಕ್ಷಣಗಳೆಂದರೆ: ಹಿತವನ್ನೇ ಬಯಸಿ, ಪಾಪಗಳಿಂದ ರಕ್ಷಿಸಿ,ರಹಸ್ಯಗಳನ್ನು ಗುಪ್ತವಾಗಿಟ್ಟು, ಇನ್ನೊಬ್ಬರ ಸದ್ಗುಣಗಳನ್ನೇ ಪ್ರಕಟಿಸಿ, ಕಷ್ಟದಕಾಲದಲ್ಲಿ ಕೈಬಿಡದೆ, ಅವಶ್ಯಕತೆಯಿದ್ದಲ್ಲಿ ಸಮಯ, ಸಹಾಯವನ್ನು ಕೊಡುವದು, ಎನ್ನುತ್ತಾರೆ ಸಂತರು.)

~ ಶ್ರೀವತ್ಸ ದೇಸಾಯಿ

ಅಪೂರ್ವ

ಅಕ್ಷತಾ ಲಕ್ಕುಂಡಿ GCSE ವಿದ್ಯಾರ್ಥಿನಿ.  ಭಾಷಾಶಾಸ್ತ್ರ ಅವಳಿಗೆ ಇಷ್ಟದ ವಿಷಯ. ಸಧ್ಯಕ್ಕೆ ಕನ್ನಡದಲ್ಲಿ ಸ್ವಂತ ಬರೆಯುವಷ್ಟು,  ಅವಳಮ್ಮನಿಂದ ಕೇಳಿದ 'ರೂಪದರ್ಶಿ' ಕಾದಂಬರಿಯನ್ನೋದುವಷ್ಟರ ಮಟ್ಟಿಗೆ ಕನ್ನಡ ಕಲಿಯಬೇಕೆನ್ನುವುದು ಅವಳ ಗುರಿ. ಫ್ರೆಂಚ್ ಭಾಷೆಯಲ್ಲಿ ಉನ್ನತ ಅಧ್ಯಯನ ಅವಳ ಕನಸು. ನೃತ್ಯ, ಬಾಲಿವುಡ್ ಮೆಚ್ಚಿನ ವಿಷಯಗಳು. ಇವಳು ಅನಿವಾಸಿಯ ಸದಸ್ಯೆ ಗೌರಿಪ್ರಸನ್ನ ಅವರ ಮಗಳು.

ವಿಶ್ವವಾಣಿಯಲ್ಲಿ ಮೊಳಗಿದ ಅನಿವಾಸಿ ಕನ್ನಡತಿಯ ಸ್ವರ ಸಲ್ಲಾಪ

ಎಲ್ಲರಿಗೂ ನಮಸ್ಕಾರ. ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.  ಕೆಲವೊಂದು ವರ್ಷಗಳ ಹಿಂದೆ ನೋಡಿದ ಒಂದು ಆಫೀಸಿನ ಸೆಕ್ರೆಟರಿಯ ಗೋಡೆಯ ಮೇಲಿನ ಸ್ಟಿಕರ್ ಹೀಗಿತ್ತು : You don't need to be mad to work here, but helps if you are! ಅದೇ ತರ ಇತ್ತೀಚಿಗಷ್ಟೇ ಸುಮಾರು ತಿಂಗಳುಗಳ ಹಿಂದೆ ಹೊಸದೊಂದು ಹುಚ್ಚಾಸ್ಪತ್ರೆ ಅಡ್ಮಿಶನ್ ಬೆಳೆದಂತೆ ಬೆಳೆಯುತ್ತಿರುವ ಹೊಸ application/ ಮಾಧ್ಯಮ ಅಂದರೆ clubhouse.

 ಈ applicationನ ವಿಶೇಷವೆಂದರೆ ಸಾಧಾರಣ ಧ್ವನಿಯನ್ನು ಮಾಧ್ಯಮವಾಗಿಟ್ಟುಕೊಂಡು ಪ್ರಪಂಚದ ಎಲ್ಲೆಡೆ ಮಾತನಾಡಬಹುದು. Clubhouseನ ಮತ್ತೊಂದು ವಿಶೇಷ ಅಂದರೆ ಉತ್ಕೃಷ್ಠ ಮಟ್ಟದ ಧ್ವನಿ, ಯಾವ appನಲ್ಲೂ ನಾವು ಈವರೆಗೂ ಕಂಡಿಲ್ಲ. ನಮಗೆ ಈಗ ಯಾಕೆ Clubhouse ಹುಚ್ಚರ ಸಂತೆಯಾಗಿದೆ ಎಂದು ಬಹುಷಃ ಮನವರಿಕೆ ಆಗುತ್ತದೆ. 

'Never forget human values and elements while chasing technology. Always be curious and creative,but also human' ಅನ್ನೋ ಹಾಗೆ ಕಾಲ ಕ್ರಮೇಣ technologyಯಲ್ಲಿ  ಇಂದು ಹೊಸ ಆವಿಷ್ಕಾರಗಳು ನಡೆಯುತ್ತಾ ಇವೆ. ರೇಡಿಯೋ ಕೇಳುವ ಕಿವಿಗಳು ಈಗ Clubhouse nomination ಇಂದ ಹೊಸ Club ಹುಟ್ಟುಹಾಕಿ ಅದರಲ್ಲಿ Open room/closed room ಎಂಬಂತೆ ಪ್ರತಿದಿನವೂ, ವಾರಕೊಮ್ಮೆಯೋ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನಾನು ಅನುಸರಿಸುವ ಕೆಲವು Clubಗಳು ವಿಶ್ವವಾಣಿ, ಸಂಗೀತ ಮತ್ತು ಕಲೆ, ಗಾಂಚಲಿ ಬಿಡಿ ಕನ್ನಡ ಮಾತಾಡಿ, Half circle, ನಕ್ಷತ್ರ, ಗೈರ್ವಾಣಂ ವಯಂ(ಸಂಸೃತಮ್),ಗೀತಕಥನ ಹಾಗು ನೆರಳು ಬೆಳಕು. ಇತ್ತೀಚಿಗಷ್ಟೇ clubhouseನಲ್ಲಿ ಹೊಸದಾಗಿ ಬಂದ feature ಎಂದರೆ replays ಹಾಗು share, ಇದರಿಂದಾಗಿ ಹಲವು ಹಳೆಯ ಕಾರ್ಯಕ್ರಮಗಳನ್ನು ಆಲಿಸಬಹುದು. 

ಡಿಸೆಂಬರ್ ೨೭ ೨೦೨೧ರಂದು ವಿಶ್ವವಾಣಿ Clubನಲ್ಲಿ ನಮ್ಮ ಅನಿವಾಸಿ ಕನ್ನಡತಿ ಅಮಿತ ರವಿಕಿರಣ್ ನಡೆಸಿಕೊಟ್ಟ ಸ್ವರ ಸಲ್ಲಾಪ - ಹರಿದಾಸರ ಪದಗಳ ಕಂಪು ವಚನಗಳ ಇಂಪು ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತಿದ್ದೇನೆ. ಅಂದೂ ಕೂಡ ಕೇಶವ ಕುಲ್ಕರ್ಣಿ sirನ ವಿಮರ್ಶೆ ತರಹ ಎಂದಿನಂತೆ ವಿಶ್ವವಾಣಿ Clubhouseನಲ್ಲಿ ದೇಶದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಂತರ ಸಣ್ಣಗೆ ಶ್ರುತಿ ಪೆಟ್ಟಿಗೆಯ ಧ್ವನಿ ಪ್ರಾರಂಭವಾಯಿತು. 

ಎಲ್ಲಾ ಗಣಗಳಿಗೂ ಅಧಿಪತಿಯಾದ ಗಣೇಶನ ಸ್ತುತಿಯಿಂದ  ಆರಂಭವಾದ ಕಾರ್ಯಕ್ರಮ ನಿಜಕ್ಕೂ ನಿರ್ವಿಘ್ನವಾಗಿ ಸಾಗಿತು. ದಾಸರಪದಗಳನ್ನು ಕೇಳಲು, ಹಾಡಲು ಯಾರು ತಾನೇ ಇಲ್ಲಾ ಎನ್ನುತ್ತಾರೆ! ಅಲ್ಲವೇ ? ಮುಂದಿನ ಗೀತೆ ಹರಪ್ಪನಹಳ್ಳಿ ಭೀಮವ್ವನವರ ಒಂದು ಪದ, ಒಂದು ಹೆಣ್ಣು ದೇವರನ್ನು ಬೀಡುವ ಪರಿ ಹೀಗೆಲ್ಲ ಇರಬಹುದು ಎಂದು ವರ್ಣನೆ ಮಾಡಿದ್ದೂ ಅಮಿತರವರ ಭಾವನೆ ಅಂಬೆ ನೇ ನನ್ನ ಪಾಲಿಸೆ ಪಾದದಲ್ಲಿ ತುಂಬಿ ಬಂದಹಾಗೆ ಆಯಿತು. ಕಾರ್ಯಕ್ರಮವು ಮುಂದಿನ ಗೀತೆ ಎಲ್ಲರ ಮನ ಮುಟ್ಟುವ ಗೀತೆ, ಈ ಗೀತೆಯನ್ನು ಸಿನಿಮಾದಲ್ಲೂ ಕೇಳಿದ್ದೇವೆ. ದಾಸರಪದಗಳು ಒಂದು ರೀತಿಯಲ್ಲಿ ಮಾನಸಿಕ ಚಿಕಿತ್ಸೆಯ ತರಹ. ಆ ಪದ ಜೋಡಣೆಗಳು ಒಂದು stress buster ಎಂದರೆ ತಪ್ಪಲ್ಲ. ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ದಿಯ ಬಿಡು ನಾಲಿಗೆ ಎನ್ನುವ ಪದವನ್ನು ಎಷ್ಟು ಸಲ ಹಾಡಿದರೂ, ಪದಗಳಲ್ಲಿ  ಓದಿದರೂ ಬೇಸರವಾಗದ ಪದ. 

ಒಂದಷ್ಟು ದಾಸರ ಕಂಪನ್ನು ಬೀರಿದ ನಂತರ, ವಚನಗಳತ್ತ ಇಂಪನ್ನು ಬೀರುವ ಮೂಲಕ ಹಾಡಿದ ಗೀತೆ - ಲೋಕದ ಡೊಂಕ ನೀವೇಕೆ ತಿದ್ದುವಿರಿ. ಈ ಬಸವಣ್ಣನವರ ವಚನ ನನ್ನ ಮನಸಿಗೂ ಬಹಳ ಹತ್ತಿರವಾದ ಸಾಲುಗಳು. ಜೀವನ ಅಂತ ಅಂದ್ರೆ ಅದು ಕಲಿಕೆಯ ಪ್ರಯಾಣ, ನಮ್ಮನ್ನು ನಾವೇ ಅರಿತು ತಿಳಿದುಕೊಳ್ಳುವ ಪಯಣ.
Behind every successful man there will be women ಅನ್ನೋ ತರಹ ಎಲ್ಲರಂಥವನಲ್ಲ ನನ ಗಂಡ ಎಂಬ ಶಿಶುನಾಳ ಶರೀಫರ ಗೀತೆಯನ್ನು ಅರ್ಪಿಸಿದರು. ಮುಂದೆ ಪ್ರೇಕ್ಷಕರ ಮೇರೆಗೆ ನಾಗಮಂಡಲ ಚಿತ್ರದ ಗೀತೆಯನ್ನು ಹಾಡಿದರು. ಇದಕ್ಕೆ ಸರಿ ಸಮನಾಗಿ ಗಂಡಸರಿಗೆ ಹೆಣ್ಣು ಹುಡುಕುವಾಗ ಕಾಡುವ ವಿಷಯಗಳ ಕುರಿತು ಮತ್ತೊಂದು ಗೀತೆಯನ್ನು - ಮಾಣಿ ಎಂಬ  ಹವ್ಯಕ ಕನ್ನಡ ಭಾಷೆಯಲ್ಲಿ ಪ್ರಸ್ತುತ ಪಡಿಸಿದರು.  ಪ್ರತಿ ಹಾಡಿಗೂ ಅದರದೇ ಆದ ಕಂಪಿರುತ್ತದೆ ಅದರ ಜೊತೆಗೆ ಕೆಲವು ನೆನಪುಗಳು ಇರುತ್ತವೆ. ನವರಾತ್ರಿಯ ಕಾರ್ಯಕ್ರಮ ಆರತಿಯ ಸಮಯದಲ್ಲಿ ಕೇಳಿ ಕಲಿತ ಹಾಡು - ಅಖಂಡ ದೇವಿಗೆ ಆರತಿ ಮಜಲ ತಾಯಿ ದ್ಯಾಮವ್ವ. ಈ ಜಾನಪದ ಗೀತೆ ಶೀರ್ಷಿಕೆಯಿಂದ ಸ್ವಲ್ಪ ಪ್ರತ್ಯೇಕವಾಗಿದ್ದರೂ ದೇವಿಯ ಆರಾಧನೆಯನ್ನು ಯಾರು ತಾನೇ ಮಾಡಲಾರರು. 

Last but not the least  ಎನ್ನುವ ಹಾಗಿ ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ವಚನವು ಕಾರ್ಯಕ್ರಮ ಮೆರಗನ್ನು ಇನ್ನು ಹೆಚ್ಚಿಸಿತು. ಬೇವಿನ ಬೀಜ ಬಿತ್ತಿದರೆ ಬೇವನ್ನೇ ಸವಿಯಬೇಕು ಎಂಬ ಮಾತು ಅಕ್ಷರ ಸಹ ಸತ್ಯ. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವೇಶ್ವರ ಭಟ್, ಮೋಹನ್ ಹಾಗು ರೂಪ ಅವರಿಗೂ ಧನ್ಯವಾದಗಳು. 

ಒಟ್ಟಿನಲ್ಲಿ ಹೇಳಬೇಕೆಂದರೆ ನನ್ನ ಅನಿವಾಸಿಯ ಪಯಣ ಕೂಡ ಅಮಿತ ಅವರಿಂದ ಪ್ರಾರಂಭವಾಗಿದ್ದು ಅವರ ಸಾಧನೆಗೆ ಒಂದು ಸೈ ಹೇಳುತ್ತಾ ಅವರಿಗೂ ಹಾಗು ಅನಿವಾಸಿ ಬಳಗದ ಎಲ್ಲಾ ಕನ್ನಡತಿಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. 

https://www.clubhouse.com/room/MwV0R16B - link if anyone wants to replay the program.

~ ಶ್ರೀರಂಜಿನಿ.

7 thoughts on “ನಿನಗೆ ಬೇರೆ ಹೆಸರು ಬೇಕೇ? ‘ಸ್ತ್ರೀ’ ಎಂದರೆ  ಅಷ್ಟೇ ಸಾಕೇ??..

    • Thank you, Ajay.for reading and responding. It is an occasion to pay tribute to women, but not just on anniversary or occasionally but from time to time or whenever to be acknowledged. This was the purpose of this issue! Keep reading and encouraging!

      Like

  1. ಅಕ್ಷತಾಳ ಲಕ್ಷ್ಯಗಳಿಗೆ
    ಗೌರೀ ಹುಣ್ಣಿಮೆ ಕಾವಿದೆ
    ಆಕೆಯಾ ಲಕ್ಷ ಘಳಿಗೆ
    ಬೆಳಗುವಾ ಉರಿ ನೂರಿದೆ

    ಶುಭಾಶಯಗಳು, ಎಲ್ಲರ ‘ಆಕೆ’ಯರಿಗೆ ಮತ್ತು ಅಮ್ಮನಕ್ಕರೆಯ, ಮಡದಿಯೊಲುಮೆಯ, ಮಗಳ ಪ್ರೀತಿಯ ಸವಿಯ ಸಿರಿವಂತರಿಗೆ.

    ಮುರಳಿ ಹತ್ವಾರ್

    Liked by 1 person

    • ಡಾ ದೇಸಾಯ್‌ರವರ secretary ತರಹದ secretary ನನ್ನ ವೃತ್ತಿಜೀವನದಲ್ಲೊ ಇದ್ದಳು. ಪ್ರತಿದಿನಪು ನನ್ನ ಕೆಲಸಗಳ ಟಿಪ್ಪಣಿ ಹಾಕಿ ಮೇಜಿನ ಮೇಲೆಯಿಟ್ಟು, ಕಾಫಿ ಮತ್ತು Biscuits ತಂದು ಕೊಡುತ್ತಿದ್ದಳು ನಮ್ಮ Maragaret. ಮತ್ತೊಬ್ಬ ಮಹಿಳೆ ನನ್ನ ಜೀವನಕ್ಕೆ ರೊಪು ಕ್ಕೊಟ್ಟವರು ನನ್ನ Highschool Teacher. ಹೆಂಗಸು ಅಂತ ನಿಮ್ಮ ಆಸೆ ಅಭಿಲಾಷೆಗಳನ್ನು ತುಳಿದು ಹಾಕಬೆೇಡಿ ಅಂತ ನಮ್ಮಂಥವರಿಗೆ ಹುರುಪು ತುಂಬಿದರು. ನಾನು ಅವರ ಬೆಂಬಲವಿರದಿದ್ದರೆ
      ಖಂಡಿತವಾಗಿಯೂ ವೈದ್ಯಳಾಗುತ್ತಿರಲ್ಲಿಲ್ಲ. ೪೫ವರುಷದ ಹಿಂದೆ ಹೆಣ್ಣು ಮಗಳನ್ನು ಓದಿಸಲು ಅನುಮನಿಸುತ್ತಿದ್ದ ಕಾಲ. ಮದುವೆ ಮಾಡಿಕ್ಕೋಳ್ಳಲ್ಲೇ ಬೆೇಕು ಏನ್ನುವ ಹಿರಿಯರು. ಈಗ ನಾಪು ತುಂಬಾ ಮುಂದುವರಿದ್ದೇವೆ. ಇದಕ್ಕೆಲ್ಲ ಹೋರಾಡಿದ ಎಲ್ಲಾ ಮಹಿಳೆಯರಿಗೂ ವಂದನೆಗಳು.
      VathsalaRamamurthy

      Like

      • ವತ್ಸಲಾ ಅವರೇ, ಓದಿ ಪ್ರತಿಕ್ರಿಯೆಸಿದ್ದಕ್ಕೆ, ಜೊತೆಗೆ ನಿಮ್ಮ ಅನುಭವಗಳನ್ನೂ ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ವತ್ಸಲಾ ಅವರೆ. ಒಂದಿಬ್ಬರು ಈಗಾಗಲೇ ಪ್ರಶ್ನಿಸಿದಂತೆ (ಅಂಥ ಸೆಕ್ರೆಟರಿಗಳುಇನ್ನೂ ಇದ್ದಾರಾ?) ಅವರು ಈಗ ಅಪರೂಪವೇ. ನಿಮ್ಮ ನಮ್ಮ ಕಾಲದಲ್ಲಿ ಇದ್ದರು. ನಿಜವಾಗಿಯೂ ನಿಮ್ಮ ಸಮರ್ಥನೆಗೆ, ನನ್ನದು ಉತ್ಪ್ರೇಕ್ಷೆಯಲ್ಲ ಅಂತ ಪುರಾವೆ ಕೊಟ್ಟದ್ದಕ್ಕೂ ಧನ್ಯವಾದಗಳು. ನಿಮ್ಮನ್ನು ಪ್ರೋತ್ಸಾಹಿಸಿದ ನಿಮ್ಮ ಟಿಚರ್ ಅಂಥ ಕನ್ಯಾಮಣಿಗಳು ನಿಮಗಶ್ಟೇ ಅಲ್ಲ, ಎಲ್ಲರಿಗೂ ಪ್ರಾತಃಸ್ಮರಣೀಯರು!

        Like

    • ನಿಮ್ಮಂತೆ ಕಾವ್ಯಮಯವಾಗಿ, ಮಿತವಾಗಿ ಬರೆಯುವವರು ಅತಿ ವಿರಳ. ಧನ್ಯವಾದಗಳು, ಮುರಳಿ.

      Like

Leave a comment

This site uses Akismet to reduce spam. Learn how your comment data is processed.