ಬದುಕು ಜಟಕಾಬಂಡಿ

ನಲುಮೆಯ ಓದುಗರೇ ನಮಸ್ಕಾರ.
‘ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ
ಈಯವನಿಯೊಲೆಯೊಳೆಮ್ಮಯ ಬಾಳ-
ನಟ್ಟು ವಿಧಿ
ಬಾಯ ಚಪ್ಪರಿಸುವನು ಮಂಕುತಿಮ್ಮ|’
ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ ನಿರಂತರತೆ, ಸದೈವ ಜೀವಂತತೆ ಬದುಕಿನ ಲಕ್ಷಣ. ಎಂದೂ, ಎಲ್ಲೂ , ಯಾವ ಪ್ರಸಂಗದಲ್ಲೂ ಬದುಕ ಬಂಡಿ ನಿಲ್ಲುವುದಿಲ್ಲ; ಚಲಿಸುತ್ತಲೇ ಇರುತ್ತದೆ..ಏರು-ತಗ್ಗಿನಲಿ, ಕಾಣದಿಹ ಅನಂತ ತಿರುವುಗಳಲ್ಲಿ, ಬಿಸಿಲು-ಮಳೆಗಳಲ್ಲಿ, ವಸಂತ-ಗ್ರೀಷ್ಮಗಳಲ್ಲಿ..ನಾವಿದ್ದರೂ..ಇಲ್ಲದಿದ್ದರೂ

‘ಬದುಕು ಸೂಜಿದಾರದಂತೆ.ಒಂದು ಕಡೆ ಚುಚ್ಚುತ್ತ ಹಿಂದೆಯೇ ಹೊಲೆಯುತ್ತ ಹೋಗುತ್ತದೆ ಸಾರ್’ ಎನ್ನುತ್ತಾನೆ ನಮ್ಮ ಕೆ.ನಲ್ಲತಂಬಿಯವರ ಕೋಶಿ’ಸ್ ಕವಿತೆಗಳ ವಿನ್ಸಂಟ್. ನಿಜವಲ್ಲವೇ?

ಅಂಥದೇ ಒಂದು ಸುಂದರ ಹಾಗೂ ಸಶಕ್ತ ಚಿತ್ರಕವನವೊಂದನ್ನು ತಮ್ಮೆದಿರು ತಂದಿದ್ದಾರೆ ಪ್ರೇಮಲತಾ ಅವರು. ಅದು 2021ರ 3K ಫೋಟೊ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ  ಪಡೆದದ್ದು ನಮ್ಮೆಲ್ಲ ಅನಿವಾಸಿಗಳಿಗೂ ಹೆಮ್ಮೆಯ  ವಿಷಯ.

ದೊಡ್ಡವರ ಜೀವನ, ನಡೆನುಡಿ ಅದೆಷ್ಟು ಸರಳ ಹಾಗೂ ಸಹಜ ಎಂಬುದನ್ನು ಉಮಾ ಅವರು ತಮ್ಮ ಲೇಖನದಲ್ಲಿ ತೋರಿಸಿದ್ದಾರೆ. ಇತ್ತೀಚೆಗಷ್ಟೇ ನಿಧನರಾದ , ‘ಚಂದ್ರ’ಪುಸ್ತಕದ ಲೇಖಕರಾದ  ಶ್ರೀಯುತ ಕಾಮೇಶ್ವರ ವಾಲಿ ಅವರೊಂದಿಗಿನ ತಮ್ಮ ಆತ್ಮೀಯ ನಂಟನ್ನು ತುಂಬ ಆಪ್ತವಾಗಿ ಹಂಚಿಕೊಳ್ಳುವುದರ ಮೂಲಕ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಂಥ ಮಹಾನ್ ಚೇತನಗಳು ಮನುಕುಲದ ಆಸ್ತಿ.ಅವರ ಬಗೆಗೆ ಇನ್ನೂ ಹೆಚ್ಚು ಬರಹಗಳು ಬರಲಿ, ಅವರ ಕೃತಿಗಳ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಯುವಂತಾಗಲಿ ಎಂಬ ಸದಾಶಯದೊಂದಿಗೆ ಇಂದಿನ ಸಂಚಿಕೆಯನ್ನು ನಿಮ್ಮ ಕೈಯ್ಯಲ್ಲಿಡುತ್ತಿರುವೆ. ಓದಿ..ಅನಿಸಿಕೆಗಳನ್ನು ಹಂಚಿಕೊಳ್ಳಿ.

~ ಸಂಪಾದಕಿ

ತೊಯ್ಯಲಾರದು ಘನತೆ..

ಹಿಡಿದ ಮೇಲೆ ಬಿಡದೆ ಜಡಿವ ಮಳೆ,ಈ ಇಳೆ
ನಾಳೆಗಳ ಭಯದಿ ಇಂದು ಬದುಕುವ ಜನಕೆ
ಜೀವಸೆಲೆಯ ಬೆಂಕಿ, ಆರದಂತೆ ಕೊಡೆಹಿಡಿದ ಭರವಸೆಗೆ
ಬೆಚ್ಚಗಿನ ಕನಸ ಮಾರುವ ಚಿಂತೆ

ಜೀವನ ಚಕ್ರಕೆ ಸಿಕ್ಕ ಕಾಲುಗಳಿವು, ಕಸುವು
ಕಳೆಯುವವರೆಗೆ ತುಳಿಯಬೇಕು
ಹೊತ್ತೊಯ್ವ ಸರುಕುಗಳು ನೆನೆಯದಂತೆ
ಜತನ ಮಾಡಿ ಗುರಿ ತಲುಪುವವರೆಗೆ

ನೀರು ತುಂಬಿದ ಹೊಂಡಗಳು, ನೊರಜು ಗಲ್ಲಿನ
ರಸ್ತೆಗಳು, ದಾರಿ ಮರೆಯಾಗಿಸಿ
ರಾಚಿ ಹೊಡೆವ ಮಳೆಯಲ್ಲು ರಹದಾರಿ
-ಯ ನಿಲ್ದಾಣಗಳ ತಲುಪಬೇಕು

ರಸ್ತೆಯುದ್ದಕು ತರತಮದ ತಕ್ಕಡಿಗಳು
ತೂಗುವ ಮನುಜ ಮಾನದಂಡನೆಗಳು
ಉರಿವ ಕೆಂಡ, ಸೂರಿಲ್ಲದ ಇಹಕೆ ಮಳೆ ಬಿಸಿಲೇನು
ಹಾದಿ ಕ್ರಮಿಸಲು ತೊಡಲಿಲ್ಲ ಪಾದರಕ್ಷೆ

ಬದುಕಿಗೊಂದು ತೂಗುವ ಫಲಕ
ಬಿಕರಿಗೆಂದೇ ಇರುವ ಜಾಹೀರಾತು
ನೆನೆ ನೆನೆದು ನಿಂತು ನೀರಾಗುವ ಹೊತ್ತು
ತಟ್ಟನೆ ಭಣಗುಡುವ ಭರವಸೆಯ ಗಲ್ಲಿಗಳು

ಹೆಗಲೇರಿ,ಮೈಗಂಟಿ ಜಂಟಿಯಾಗುವ ಬಟ್ಟೆ
ಒದ್ದೆಯೋ, ಒಣಗಿತೋ ಅರಿಯಲಾಗದ ಹೊಟ್ಟೆ
ಮಿಂಚೊ, ಸಿಡಿಲೋ ಕೈ ಬಿಡದೆ ಪೊರೆವ
ಕಾಯಕದಿ ತೊಯ್ಯಲಾರದು ಜೀವಶ್ರಮದ ಘನತೆ!

~ ಡಾ.ಪ್ರೇಮಲತ ಬಿ.


(2021 ರ 3K ಫೋಟೋ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವನ. ಬರಹಗಾರ್ತಿ ಮತ್ತು ರಂಗಕಲಾವಿದೆ ಜಯಲಕ್ಷ್ಮಿ ಪಾಟೀಲರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು)

“ಚಂದ್ರ ಜೀವನ-ಚರಿತ್ರೆಯ” ಲೇಖಕ ಪ್ರೊಫ಼ೆಸರ್ ಕಾಮೇಶ್ವರ್ ವಾಲಿ ೧೯೨೭- ೨೦೨೨

೨೦೧೦ರಲ್ಲಿ ನನ್ನ ಕೈಯಿಗೆ "ಚಂದ್ರ" ಎನ್ನುವ ಪುಸ್ತಕ ಸಿಕ್ಕಿತ್ತು. ಈ ಪುಸ್ತಕವನ್ನು ಓದಲು ಶುರುಮಾಡಿದ ಮೇಲೆ ಅದನ್ನು ಕೆಳಕ್ಕಿಡುವ ಮನಸ್ಸಾಗಿರಲಿಲ್ಲ. ನನ್ನ ಗಮನವನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಹಿಡಿದಿಟ್ಟು, ನನ್ನ ಮನಸ್ಸನ್ನು ಸೆಳೆದ ಆ ಪುಸ್ತಕದ ಲೇಖಕ ಒಬ್ಬ ಕನ್ನಡಿಗ. ತಾವು ಜೀವಂತವಾಗಿದ್ದಾಗಲೆ, ಒಂದು ದಂತಕಥೆಯೆನಿಸಿದ್ದ, ನೋಬೆಲ್ ಪ್ರಶಸ್ತಿ ವಿಜೇತ ಪ್ರೊಫ಼ೆಸರ್. ಸುಬ್ರಮಣ್ಯ ಚಂದ್ರಶೇಖರ್ ಅವರ ಜೀವನ ಚರಿತ್ರೆಯನ್ನು ಸೊಗಸಾಗಿ ಬರೆದು, ಈ ಮಹಾನ್ಮೇಧಾವಿಯ ಸಾಧನೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದ ಅದರ ಲೇಖಕ ಪ್ರೊಫ಼ೆಸರ್ ಕಾಮೇಶ್ವರ್ ವಾಲಿ ಅವರನ್ನು ಮುಖತ: ಭೇಟಿ ಮಾಡುವ ಹಂಬಲವೂ ಹುಟ್ಟಿತು. 

ನನ್ನ ಪತಿ ಒಬ್ಬ ಖಭೌತಶಾಸ್ತ್ರಜ್ಞ. ಸುಮಾರು ೩೦ ವರ್ಷಗಳ ನನ್ನ ದಾಂಪತ್ಯ ಜೀವನದಲ್ಲಿ, ಅನೇಕ ಮೇಧಾವಿ ವಿಜ್ಞಾನಿಗಳನ್ನು ಭೇಟಿ ಮಾಡುವ ಒಂದು ಸುಯೋಗ ನನಗೆ ಅವರಿಂದ ಲಭಿಸಿದೆ. ಹಾಗಾಗಿ, ಕಾಮೇಶ್ವರ್ ಅವರ ಪರಿಚಯವನ್ನು ಗಳಿಸುವುದು ಕಷ್ಟವಾಗಲಿಲ್ಲ. ಅವರ ಪರಿಚಯ ಈಗಾಗಲೇ ನನ್ನ ಪತಿಗಿದ್ದದ್ದರಿಂದ, ಅವರ ಈಮೇಲ್ ವಿಳಾಸ ಸುಲಭವಾಗಿ ನನ್ನ ಕೈಸೇರಿತು. ಪುಸ್ತಕ ಮುಗಿದೊಡನೆ, ಪುಸ್ತಕದ ಬಗ್ಗೆ ನನ್ನ ಮನಸ್ಸಿನ ಮಾತುಗಳನ್ನು ಒಂದು ವಿವರವಾದ ಈಮೇಲ್ ಮೂಲಕ ಅವರಿಗೆ ಮುಟ್ಟಿಸಿದೆ. ಈ ಪುಸ್ತಕ ಓದಿದ ಅನೇಕರು ಅವರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಈಮೇಲ್ ಬರೆದಿದ್ದಿರಬಹುದು. ಹಾಗಾಗಿ ನಾನು ಅವರಿಂದ ನನ್ನ ಈಮೇಲಿಗೆ ಉತ್ತರ ಬರಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಚಂದ್ರ ಜೀವನಚರಿತ್ರೆ ನನ್ನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತೆಂದರೆ, ನನ್ನ ಮನಸ್ಸಿನಲ್ಲಿ ಆದಷ್ಟು ಬೇಗನೆ, ಆ ಪುಸ್ತಕದ ಬಗ್ಗೆ ಕನ್ನಡದಲ್ಲಿ ಬರೆಯಲೇ ಬೇಕು ಎನ್ನುವ ತೀವ್ರವಾದ ಹಂಬಲ ಹುಟ್ಟಿತು. ಆದರೆ, ನನ್ನ ನಿರೀಕ್ಷೆ ಸುಳ್ಳಾಗಿತ್ತು. ಕಾಮೇಶ್ವರ್ ನನ್ನ ಈಮೇಲ್ ತಲುಪಿದೊಡನೆಯೇ, ಬಹಳ ಸುಂದರವಾದ, ಅತ್ಯಂತ ವಿನಮ್ರವಾದ ಉತ್ತರವನ್ನು ನನಗೆ ಬರೆದಿದ್ದರು. ಅವರ ಬರವಣಿಗೆಯ ಶೈಲಿ ಬಹಳ ಆಕರ್ಷಕ. ಇಂಗ್ಲೀಷ್ ಭಾಷೆಯ ಮೇಲೆ ಅವರ ಹಿಡಿತ ಎಷ್ಟು ಬಿಗಿ ಎಂದರೆ, ಅದನ್ನು ನೋಡಿಯೇ ಚಂದ್ರಶೇಖರ್ ಅವರಿಗೆ ತಮ್ಮ ಜೀವನ ಚರಿತ್ರೆ ಬರೆಯಲು ಅನುಮತಿ ನೀಡಿದ್ದಿರಬೇಕು. ಚಂದ್ರ ಅವರಂತಹ ಮೇಧಾವಿಯ ಕೈಯಲ್ಲಿ ಭಲೇ ಎನ್ನಿಸಿಕೊಳ್ಳುವುದು ಸುಲಭವಲ್ಲ. ಈಮೇಲ್ ಮೂಲಕ ಪ್ರಾರಂಭವಾದ ಅವರ ಪರಿಚಯ, ಮುಂದೆ ೨೦೧೪ರಲ್ಲಿ ನಾವು ಅಮೆರಿಕೆಗೆ ೬ ತಿಂಗಳ ಕಾಲ ನನ್ನ ಪತಿಯ ಸಬಾಟಿಕಲ್ ಸಲುವಾಗಿ ಹೋಗಿದ್ದಾಗ ಅವರನ್ನು ಸೈರಕ್ಯೂಸ್ನಲ್ಲಿ ಅವರ ಮನೆಯಲ್ಲೇ ಭೇಟಿ ಮಾಡುವಲ್ಲಿಗೆ ತಲುಪಿತು. ಸೈರಕ್ಯೂಸ್ ವಿಶ್ವವಿದ್ಯಾಲಯದಲ್ಲಿ, ಭೌತಶಾಸ್ತ್ರ ವಿಭಾಗದಲ್ಲಿ ಸುಮಾರು ೩೦ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಮೇಲೆ, ಅಲ್ಲೇ ತಮ್ಮ ನಿವೃತ್ತ ಜೀವನ ನಡೆಸಿದ್ದ ಅವರನ್ನು ಅವರ ಮನೆಯೆಲ್ಲೇ ನೋಡಿದಾಗ, ಅವರ ಸರಳ ವ್ಯಕ್ತಿತ್ವಕ್ಕೆ ನಾವು ಮಾರುಹೋಗಿದ್ದೆವು. ಚಂದ್ರ ಅವರ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಂಡುಬಿಡುವ ಆಸಕ್ತಿ ಮತ್ತು ಅಭಿಲಾಷೆಯಿದ್ದ ನಮಗೆ, ಅವರೊಡನೆ ಕಳೆದ ಸಮಯ ಸಾಲದಾಯಿತು. ಅವರ ಮನೆಯ ಗ್ರಂಥ-ಭಂಡಾರ ನಿಜಕ್ಕೂ ಅಪೂರ್ವವಾಗಿದೆ. ಚಂದ್ರ ಅವರ ಬಗ್ಗೆ ಲೇಖನಗಳನ್ನು ಕನ್ನಡದಲ್ಲಿ ಬರೆಯುವ ನನ್ನ ಆಕಾಂಕ್ಷೆಗೆ ಅವರಿಂದ ಬಹಳ ಉತ್ತೇಜನ ನನಗೆ ಸಿಕ್ಕಿತ್ತು. ಚಂದ್ರ ಅವರ ಬಗ್ಗೆ ಅವರು ನನಗೆ ನೀಡಿದ ಮಾಹಿತಿಯ ಬೆಂಬಲದಿಂದಲೇ, ಮುಂದೆ ಅನಿವಾಸಿ ವೇದಿಕೆಯಲ್ಲಿ ಈ ಮಹಾನ್ ವಿಜ್ಞಾನಿಯ ಬಗ್ಗೆ ನಾನು ಲೇಖನಗಳನ್ನು ಬರೆದೆ.

೧೯೨೭ರಲ್ಲಿ, ಬಿಜಾಪುರದಲ್ಲಿ ಜನಿಸಿದ ಕಾಮೇಶ್ವರ್ ವಾಲಿ ಅವರು, ತಮ್ಮ ಕಾಲೇಜಿನ ಶಿಕ್ಷಣವನ್ನು ಬೆಳಗಾವಿಯ ಲಿಂಗರಾಜ ಸೊಸೈಟಿ ಸಂಸ್ಥೆಯಲ್ಲಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ, ಭೌತಶಾಸ್ತ್ರದಲ್ಲಿ ಉನ್ನತ ದರ್ಜೆಯಲ್ಲಿ ಎಮ್.ಎಸ್.ಸಿ ಪದವಿ ಪಡೆದು, ೧೯೫೫ರಲ್ಲಿ, ಭೌತಶಾಸ್ತ್ರದ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಮೆರಿಕೆಗೆ ಹೋದ, ಕಾಮೇಶ್ವರ್ ಮತ್ತು ಅವರ ಪತ್ನಿ ಶ್ರೀಮತಿ. ಕಾಶಿ ಇಬ್ಬರೂ ವಿಜ್ಞಾನಿಗಳಾಗಿ ಅಮೆರಿಕೆಯಲ್ಲಿ ನೆಲಸಿದರು. ಮೂವರು ಹೆಣ್ಣುಮಕ್ಕಳ ಮಾತಾ-ಪಿತೃಗಳಾದ ಅವರ ನೆಮ್ಮದಿಯ ಜೀವನ ಅಮೆರಿಕೆಯಲ್ಲಿ ಮುಂದುವರೆಯಿತು. ಅವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿದ್ದಾಗ, ಚಂದ್ರ ಅವರ ಪರಿಚಯವಾಗಿ, ಮುಂದೆ ಸ್ನೇಹದಲ್ಲಿ ಪರಿವರ್ತನೆಯಾದ ಅವರ ನಡುವಿನ ಸಂಬಂಧ ಎಷ್ಟು ನಿಕಟವಾಗಿತ್ತೆಂದರೆ, ಚಂದ್ರಶೇಖರ್ ದಂಪತಿಗಳು, ನೋಬೆಲ್ ಪ್ರಶಸ್ತಿ ಪಡೆಯಲು, ಸ್ಟಾಕ್ ಹೋಮಿಗೆ ಹೋದಾಗ, ತಮ್ಮ ಜೊತೆಯಲ್ಲಿ ಕಾಮೇಶ್ವರ್ ಮತ್ತು ಅವರ ಪತ್ನಿ ಕಾಶಿ ಅವರನ್ನು ಕರೆದೊಯ್ದಿದ್ದರಂತೆ. ಚಂದ್ರ ಅವರ ಜೀವನ ವೃತ್ತಾಂತವನ್ನು ಜಗತ್ತಿಗೆ ಪರಿಚಯಿಸಿದ ಕಾಮೇಶ್ವರ್ ಅವರಿಗೆ ಈ ಗೌರವ ಸಲ್ಲಬೇಕಾದದ್ದೇ! ಚಂದ್ರಶೇಖರ್ ಅವರ ಜೀವನ ಚರಿತ್ರೆಯಲ್ಲಿ, ಮಹಾನ್ ಖಭೌತಶಾಸ್ತ್ರಜ್ಞನ ಸಾಧನೆಗಳನ್ನು ಸವಿಸ್ತಾರವಾಗಿ, ಅತ್ಯುತ್ತಮವಾಗಿ ಸಂಗ್ರಹಿಸಿ ಓದುಗರ ಮನಮುಟ್ಟಿಸಿರುವ ಕಾಮೇಶ್ವರ್ ಅವರು, ಮುಂದೆ ಮತ್ತೊಬ್ಬ ಪ್ರಸಿದ್ಧ ಭಾರತೀಯ ಭೌತಶಾಸ್ತ್ರಜ್ಞ ಡಾ. ಎಸ್. ಎನ್. ಬೋಸ್ ಅವರ ಜೀವನದ ಬಗ್ಗೆಯೂ ಬರೆದು, ತಾವೊಬ್ಬ ಪಳಗಿದ ಬರಹಗಾರರೆಂಬುದನ್ನು ತೋರಿಸಿದ್ದಾರೆ. ೨೦೨೦ರಲ್ಲಿ, ಚಂದ್ರಶೇಖರ್ ಮತ್ತು ಅವರ ತಂದೆಯ ನಡುವೆ ೧೯೨೮ರಿಂದ, ೧೯೩೬ರ ವರೆಗೆ  ಪತ್ರಗಳ ಮೂಲಕ ನಡೆದ ಸಂಭಾಷಣೆಗಳು, ಮತ್ತು ಚಂದ್ರ ತಮ್ಮ ಭಾವಿ ಪತ್ನಿ ಮತ್ತು ತಮ್ಮ ಸಂಶೋಧನಾ ಸಹಭಾಗಿಗಳ ಜೊತೆ ನಡೆಸಿದ್ದ ಪತ್ರ ವ್ಯವಹಾರಗಳನ್ನು ಸಂಗ್ರಹಿಸಿ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ. World Scientific publication ಅವರು ಪ್ರಕಟಿಸಿರುವ S. Chandrashekhar - Selected Correspondance and Conversations ಎನ್ನುವ ಶೀರ್ಷಿಕೆಯ ಈ ಪುಸ್ತಕವನ್ನು, ತಮ್ಮ ಮಿತ್ರರ ಜೊತೆಯಲ್ಲಿ, ಝೂಮ್ ಸಂಪರ್ಕದ ನೆರವಿನಿಂದ ಆಯೋಜಿಸಲಾಗಿದ್ದ ಮೀಟಿಂಗ್ ಒಂದರಲ್ಲಿ, ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಹಾಜರಾಗಿದ್ದ ನಮಗೆ, ೯೨ರ ಇಳಿವಯಸ್ಸಿನಲ್ಲೂ ಅವರಿಗಿದ್ದ ಆಸಕ್ತಿ ಮತ್ತು ಹುರುಪನ್ನು ನೋಡಿ ಬಹಳ ಸಂತೋಷವಾಗಿತ್ತು. ವಯಸ್ಸಿನ ಪ್ರಭಾವ, ಇಳಿಮುಖವಾಗಿದ್ದ ಆರೋಗ್ಯ ಅವರ ಹುರುಪನ್ನು ಕುಂದಿಸಿರಲಿಲ್ಲ. ಕೆಲ ದಿನಗಳ ಹಿಂದೆ  ಕಾಮೇಶ್ವರ್ ಅವರ ಕಿರಿಯ ಪುತ್ರಿ, ಮನೋನಾ ವಾಲಿ ನಮಗೆ ಈಮೇಲ್ ಮೂಲಕ ಕಾಮೇಶ್ವರ್ ಅವರ ನಿಧನದ ಸುದ್ದಿಯನ್ನು ತಲುಪಿಸಿದಾಗ, ಬಹಳ ಆಪ್ತ ಮಿತ್ರರನ್ನು ಕಳೆದುಕೊಂಡೆವಲ್ಲಾ ಎಂದು ಮನಸ್ಸು ಕೊರಗಿತು. ಆದರೆ, ತುಂಬು ಜೀವನ ನಡೆಸಿ, ತಮ್ಮ ಬರಹಗಳ ಮೂಲಕ, ವೈಜ್ಞಾನಿಕ ಲೋಕಕ್ಕೆ ಮತ್ತು ಸಾಮಾನ್ಯ ಜನಗಳಿಗೆ, ಮೇಧಾವಿಗಳ ಜೀವನದಲ್ಲಿ ಇಣುಕಿನೋಡುವ ಸುವರ್ಣ ಅವಕಾಶವನ್ನು ಕಲ್ಪಿಸಿದ ಅವರ ಸಾಧನೆಗಳನ್ನು ಸಂಭ್ರಮಿಸುವ ಒಂದು ಉತ್ತಮವಾದ ಅವಕಾಶವೂ ಹೌದು ಎನ್ನುವ ನೆನಪಾಗಿ, ಈ ಲೇಖನ ಬರೆಯುವ ಮನಸ್ಸಾಯಿತು. ಅನಿವಾಸಿಯ ಲೇಖಕರಿಗೆ, ಚಂದ್ರಶೇಖರ್ ಮತ್ತು ಅವರ ಪತ್ನಿ ಲಲಿತಾರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸಿದ್ದ ನನ್ನ ಲೇಖನಗಳಿಗೆ, ಕಾಮೇಶ್ವರ್ ಅವರ ಈ ಪುಸ್ತಕವೇ ಸ್ಫೂರ್ತಿ. ಅಷ್ಟೇ ಅಲ್ಲದೇ, ಕಳೆದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ಜನಪ್ರಿಯ ಖಭೌತಶಾಸ್ತ್ರದ ಜನಪ್ರಿಯ ಪುಸ್ತಕ The Edge of Physics ದ ನನ್ನ ಕನ್ನಡ ಅನುವಾದ "ವಿವೇಕದ ಅಂಚಿನೆಡೆಗೆ" ಪುಸ್ತಕದ ಹಿಂದೆಯೂ, ಕಾಮೇಶ್ವರ್ ಅವರ ಚಂದ್ರ ಜೀವನ ಚರಿತ್ರೆಯ ಪ್ರಭಾವವಿದೆ. ಅಮೆರಿಕೆಯಲ್ಲಿದ್ದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಕಡೆಗೆ ಅವರಿಗಿದ್ದ ಒಲವು ನಿಜಕ್ಕೂ ಹೆಮ್ಮೆಯ ಸಂಗತಿ. ಬಸವಣ್ಣನವರ ವಚನಗಳು ಮತ್ತು ಸರ್ವಜ್ಞನ ಪದಗಳು ತಮಗೆ ಬಹಳ ಅಚ್ಚುಮೆಚ್ಚು ಎಂದು ನನ್ನೊಡನೆ ಹೇಳಿದ್ದ ನೆನಪು. ಅವರ ಪತ್ನಿ ಕಾಶಿ, ಬಹಳ ವಿನೋದಮಯಿ ಮಹಿಳೆ. ಅತಿಥಿಗಳನ್ನು ಸತ್ಕರಿಸುವ ಅವರ ವೈಖರಿ ನಮ್ಮ ಮನದಲ್ಲಿ ಸದಾ ಉಳಿದಿರುತ್ತದೆ. ೨೦೧೬ರಲ್ಲಿ ನಾವು ಅಮೆರಿಕೆಗೆ ಬಂದ ನಂತರ, ಅವರನ್ನು ಎರಡು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆ ಎರಡೂ ಸಂದರ್ಭಗಳೂ, ನಮ್ಮ ನೆನಪಿನಲ್ಲಿ ಎಂದಿಗೂ ಮರೆಯದ ಕ್ಷಣಗಳು. ಮಹಾನ್ ವ್ಯಕ್ತಿಗಳ ಜೀವನಗಾಥೆಯ ಬಗ್ಗೆ ಕೇಳಿ, ಅವರ ಸಾಧನೆಗಳ ಬಗ್ಗೆ ತಿಳಿದವರ ಜೊತೆ ನಡೆಸುವ ಮಾತುಕತೆಗಳು ಜೀವನದಲ್ಲಿ ಸದಾ ನಮ್ಮ ಜೊತೆಗಿರುವ ಸವಿನೆನಪುಗಳು. ಕಾಮೇಶ್ವರ್ ವಾಲಿ ಅವರ ಜೊತೆ ನಾವು ಕಳೆದ ಸಮಯವೂ ಅಷ್ಟೇ, ಬಹಳ ಅಮೂಲ್ಯವಾದದ್ದು. "ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಳ್ಪವರಿಂದ ಕಂಡು, ಮತ್ತೆ ಹಲವಂ ತಾನೇ ಸ್ವಂತಃ ಮಾಡಿ ತಿಳಿ" ಎಂದ ಸರ್ವಜ್ಞ! ಕಾಮೇಶ್ವರ್ ಅವರ ನೆಚ್ಚಿನ ಸರ್ವಜ್ಞನ ಪದಗಳಲ್ಲಿ ಎಷ್ಟೊಂದು ಸತ್ಯವಡಗಿದೆ ಎನ್ನುವುದನ್ನು, ಅವರಂತಹ ಸನ್ಮಿತ್ರರ ಪರಿಚಯವಾದಾಗಲೇ ಅರಿವಾಗಿದ್ದು. 

‘ದೇಶ ಕಾಲಗಳೆಲ್ಲದರ ಮಿತಿಗಳನ್ನು ಮೀರುವ ಚಟುವಟಿಕೆಗಳನ್ನು ಕೂಡಿದ ರಹಸ್ಯ ಸಮಾಜವೊಂದಿದೆ. ಡಾ. ಚಂದ್ರಶೇಖರ್ ಅದರ ಒಬ್ಬ ಸದಸ್ಯರು. ಅದೊಂದು ಮೇಧಾವಿಗಳಿಂದ ಕೂಡಿದ, ಆದರ್ಶ ಸಮಾಜ. ಆ ಸದಸ್ಯರು ಸದಾ ನಮ್ಮ ಸಂಸ್ಕೃತಿಯ ಪದರುಗಳನ್ನು ವಿನ್ಯಾಸಗೊಳಿಸುತ್ತಾ, ನೇಯುತ್ತಾ ಇರುತ್ತಾರೆ’ - ಎನ್ನುವ ಈ ಮಾತುಗಳನ್ನು ಕಾಮೇಶ್ವರ್ ವಾಲಿ ಚಂದ್ರ ಜೀವನ ಚರಿತ್ರೆಯ ಪುಸ್ತಕದ ಪ್ರಾರಂಭದಲ್ಲಿ ಬರೆದಿದ್ದಾರೆ. ಈ ರಹಸ್ಯವಾದ ಮನೋಜ್ಞ ಸಮಾಜದ ಸದಸ್ಯರಲೊಬ್ಬರಾದ ಮೇಧಾವಿ ವಿಜ್ಞಾನಿ ಚಂದ್ರರಂತಹ ವ್ಯಕ್ತಿಯನ್ನು ನಮ್ಮಂತಹ ಸಾಮಾನ್ಯರಿಗೆ ಪರಿಚಯಿಸಿದ, ಕಾಮೇಶ್ವರ್ ವಾಲಿ ಅವರ ಜೀವನವೂ ಸಾರ್ಥಕವಾದದ್ದೇ. 

~ ಡಾ. ಉಮಾ ವೆಂಕಟೇಶ್ 

7 thoughts on “ಬದುಕು ಜಟಕಾಬಂಡಿ

  1. ಗೌರಿಯವರ ಸಂಪಾದಕೀಯ ಸಂಧರ್ಭೋಚಿತವಾಗಿ ಎಂದಿನಂತೇ ಪಾಂಡಿತ್ಯಪೂರ್ಣವಾಗಿದೆ.

    ಪ್ರೇಮಲತಾರ ಚಿತ್ರಕವನ ಅಗೋಚರವಾದ ವಿಷಯಗಳನ್ನು ಅನಾವರಣಗೊಳಿಸುತ್ತ, ಓದುಗನ ದೃಷ್ಟಿಯನ್ನು ಪುನರವರೋಕಿಸುವಂತೆ ಪ್ರಚೋದಿಸಿದೆ. ಇದು ಅವರ ಉತ್ತಮ ಕವನಗಳಲ್ಲೊಂದು ಎಂಬುದು ನನ್ನಂಬೋಣ.

    ಉಮಾ ವಿಜ್ಞಾನ ಜಗತ್ತಿನಾಳದಿಂದ ಕಾಮೇಶ್ವರ ಎಂಬ ರತ್ನವನ್ನಾರಿಸಿ ನಮ್ಮ ಮುಂದಿಟ್ಟಿದ್ದಾರೆ. ತಮ್ಮ ವೃತ್ತಿಯಲ್ಲಿ ಕಣ್ಬರುವ ಮಹಾ ವ್ಯಕ್ತಿಗಳ ಪರಿಚಯ ಹೀಗೆ ಮುಂದೆಯೂ ಮಾಡುತ್ತಿರಿ. ಅವರ ಪುಸ್ತಕಗಳನ್ನು ಓದಲು ನಿಮ್ಮ ಬರಹ ದಾರಿದೀಪವಾಗಿದೆ.

    – ರಾಂ

    Liked by 1 person

  2. ಪ್ರೇಮಲತಾರ ಕವನ ಬಹಳ ಚೆನ್ನಾಗಿದೆ. ಪದಪುಂಜಗಳ ಜೋಡಣೆ, ಅರ್ಥೈಸುವಿಕೆ ಮತ್ತು ನಿವೇದನೆ ಕಳಕಳಿ ಹುಟ್ಟಿಸುತ್ತಾ ಕವಯತ್ರಿಯ ಅಭಿವ್ಯಕ್ತಿಯೊಡನೆ ನಮ್ಮನ್ನೂ ಮಿಳಿತವಾಗಿಸಿಬಿಡುತ್ತದೆ. ಈ ದಿನವಂತೂ ನಮ್ಮಲ್ಲಿ ಬೀಳುತ್ತಿರುವ ಸತತ ಮಳೆಯ ಹಾವಳಿಯಲ್ಲಿ ಸಿಕ್ಕಿಕೊಂಡು ಚಿಂತೆಯಲ್ಲಿರುವ ನನಗೆ ಈ ಕವನ ಬಹಳ ಹತ್ತಿರವಾಯ್ತು!

    ಉಮಾರ ಲೇಖನದಲ್ಲಿ ಅವರು ಬಿಡಿಸಿರುವ ಪ್ರೊಫ಼ೆಸರ್ ಕಾಮೇಶ್ವರ್ ವಾಲಿಯವರ ವ್ಯಕ್ತಿಚಿತ್ರ ಆಪ್ತ ಮತ್ತು ಪ್ರಾಮಾಣಿಕ ಭಾವನೆಗಳನ್ನು ಬಿಚ್ಚಿಡುತ್ತದೆ. ವಿಜ್ಞಾನಲೋಕದಲ್ಲಿ ತಮ್ಮ ಪ್ರತಿಭೆ ಮತ್ತು ಸೂಕ್ಷ್ಮ ಸಂವೇದನೆಯೊಡನೆ ಸಂಚರಿಸುವ ಉಮಾರವರು ವಾಲಿಯವರನ್ನು ಪರಿಚಯಿಸಿಕೊಂಡದ್ದೇ ಕುತೂಹಲಕಾರಿಯಾಗಿದೆ. ಅದೇ ಕುತೂಹಲವನ್ನು ಮುಂದುವರೆಸಿ ಅವರು ಮತ್ತೊಬ್ಬ ಮೇರು ವಿಜ್ಞಾನಿಯನ್ನು ಪರಿಚಯಿಸಿದ್ದು ವಿಶೇಷವಾದ ಓದು.
    ಲೇಖಕಿಯರಿಗೆ ಮತ್ತು ಸಂಪಾದಕರಿಗೆ ಧನ್ಯವಾದಗಳು.
    ವಿನತೆ ಶರ್ಮ

    Liked by 2 people

  3. ಪ್ರೇಮಲತಾರ ಕವನ ಬಹಳ ಚೆನ್ನಾಗಿದೆ. ಪದಪುಂಜಗಳ ಜೋಡಣೆ, ಅರ್ಥೈಸುವಿಕೆ ಮತ್ತು ನಿವೇದನೆ ಕಳಕಳಿ ಹುಟ್ಟಿಸುತ್ತಾ ಕವಯತ್ರಿಯ ಅಭಿವ್ಯಕ್ತಿಯೊಡನೆ ನಮ್ಮನ್ನೂ ಮಿಳಿತವಾಗಿಸಿಬಿಡುತ್ತದೆ.
    ಉಮಾರ ಲೇಖನದಲ್ಲಿ ಅವರು ಬಿಡಿಸಿರುವ ಪ್ರೊಫ಼ೆಸರ್ ಕಾಮೇಶ್ವರ್ ವಾಲಿಯವರ ವ್ಯಕ್ತಿಚಿತ್ರ ಆಪ್ತ ಮತ್ತು ಪ್ರಾಮಾಣಿಕ ಭಾವನೆಗಳನ್ನು ಬಿಚ್ಚಿಡುತ್ತದೆ. ವಿಜ್ಞಾನಲೋಕದಲ್ಲಿ ತಮ್ಮ ಪ್ರತಿಭೆ ಮತ್ತು ಸೂಕ್ಷ್ಮ ಸಂವೇದನೆಯೊಡನೆ ಸಂಚರಿಸುವ ಉಮಾರವರು ವಾಲಿಯವರನ್ನು ಪರಿಚಯಿಸಿಕೊಂಡದ್ದೇ ಕುತೂಹಲಕಾರಿಯಾಗಿದೆ. ಅದೇ ಕುತೂಹಲವನ್ನು ಮುಂದುವರೆಸಿ ಅವರು ಮತ್ತೊಬ್ಬ ಮೇರು ವಿಜ್ಞಾನಿಯನ್ನು ಪರಿಚಯಿಸಿದ್ದು ವಿಶೇಷವಾದ ಓದು.
    ಲೇಖಕಿಯರಿಗೆ ಮತ್ತು ಸಂಪಾದಕರಿಗೆ ಧನ್ಯವಾದಗಳು.
    ವಿನತೆ ಶರ್ಮ

    Like

  4. ಲೇಖನಗಳನ್ನು ಇದೇ ಮೇಲ್ ಗೆ ಕಳುಹಿಸಬಹುದಾ ತಿಳಿಸಿ.

    On Thu, 24 Feb, 2022, 10:10 pm ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ, wrote:

    > Gouri Prasanna posted: ” ನಲುಮೆಯ ಓದುಗರೇ ನಮಸ್ಕಾರ. ‘ತೋಯಿಸುತ ಬೇಯಿಸುತ ಹೆಚ್ಚುತ್ತ
    > ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು
    > ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ|’ ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ
    > ನಿರಂತರತೆ, ಸದೈವ ಜೀವಂತತೆ ಬದುಕಿನ ಲಕ್ಷಣ. ಎಂದೂ, ಎಲ್ಲೂ , ಯಾವ ಪ್ರಸಂಗ”
    >

    Like

  5. ಈ ವಾರದ ಅನಿವಾಸಿ ಸಂಚಿಕೆ ಗೌರಿಯವರ ಕಾವ್ಯಭರಿತ ಮುನ್ನುಡಿಯೊಂದಿಗೆ ಆರಂಭವಾಗಿ ನಾನು ಓದಿದ ಪ್ರೇಮಲತಾ ಅವರ ಎಲ್ಲ ಕವನಗಳಲ್ಲಿ ಅತ್ಯುತ್ತಮ ಕವನ ಎಂದು ನಾನು ಹೇಳಬಲ್ಲ ಕವನ, ತದ ನಂತರ ವಾಲಿಯವರ ಆತ್ಮೀಯ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವುದರ ಜೊತೆಗೆ ನೋಬಲ್ ಪುರಸ್ಕೃತ ಚಂದ್ರಶೇಖರ್ ಅವರ ಜೀವನವನ್ನೂ ವಿಜ್ಞಾನವನ್ನೂ ಪರಿಚಯಿಸುವ ಉಮಾ ವೆಂಕಟೇಶ್ ಲೇಖನ- ಹೀಗೆ ಮೂರು ಕೋರ್ಸಿನ ಮೃಷ್ಠಾನ್ನವನ್ನು ಉಣಬಡಿಸುತ್ತದೆ. ಇನ್ನೇನು ಬೇಕು?
    ಕೇಶವ್ಜ್ ಅವರು ಈಗಾಗಲೇ ಬರೆದು ತುಂಬಿಸಿದ ಮೇಲೆ ಇನ್ನೂ ಹೇಳುವದು ಉಳಿದಿದೆ! ಪ್ರೇಮಲತಾ ಕಾವನದಲ್ಲಿ alliteration ತುಂಬಿದೆ. ಕೊನೆಯ ಚರಣದಲ್ಲಿ ಟ-ಕಾರದ ಅಂತ್ಯ ಪ್ರಾಸ, ಅದಕ್ಕೂ ಮೊದಲಿನದರಲ್ಲಿ ನ ಕಾರದ alliteration, ಮರೆಯುವಂತಿಲ್ಲ. ಈಗಾಗಲೇ ಕೇಶವ ಉಲ್ಲೇಖಿಸಿದಂತೆ ‘ತರ ತಮಗಳ ತಕ್ಕಡಿ’ ರೂಪಕ ಇಲ್ಲಿ ನೋಡಿದ್ದೇ ಮೊದಲ ಸಲ! ಕಟ್ಟ ಕಡೆಯ ಪದ ಕವಿತೆಯ ‘ಘನತೆ’ಯನ್ನೂ ಏರಿಸುತ್ತದೆ ಎಂದರೆ ತೂಕದ ತಕ್ಕಡಿಯಲ್ಲಿ ಉಲ್ಟಾ ಅರ್ಥವನ್ನು ಕೊಡುತ್ತದೆಯೇನೋ! ಉಮಾ ಅವರ ವಿಜ್ನಾನದ ಮತ್ತು ವಿಜ್ನಾನಿಗಳ ಬಗೆಗಿನ ಅದೆಷ್ಚು ಲೇಖನಗಳನ್ನು ನಾವು ‘ಅನಿವಾಸಿ’ಯಲ್ಲಿ ಓದಿಲ್ಲ. ಅದು ಅವರ speciality ಆಗಿದೆಯಲ್ಲವೇ? ಇಲ್ಲಿ ಇತ್ತೀಚಿಗೆ ಸೇರಿದ ಹೊಸಬರು ಹುಡುಕಿ ಹಳೆಯ ಸಂಚಿಕೆಗಳನ್ನು ಓದಲು ಶಿಫಾರಿಸು ಮಾಡುವೆ. Botany, physics, astrophysics ಇವೆಲ್ಲ ವಿಷಯಗಳು ಬರುತ್ತವೆ ಅವರ ಲೇಖನಗಳಲ್ಲಿ. ಉಮಾ ಅವರು ಈ ಸಲ ದಿ ವಾಲಿಯವರ ಬಗ್ಗೆ ಬರೆದಿದ್ದಾರೆ. ಅವರ ಬಾಯಲ್ಲಿ ಐದಾರು ವರ್ಷಗಳಿಂದ ವಾಲಿಯವರ ಕಾರ್ಯ ಬದುಕು ಕೇಳುತ್ತಲೇ ಬಂದಿದ್ದೇನೆ. ಈ ಲೇಖನವನ್ನು ಓದುತ್ತಿದ್ದಂತೆ ಆ ಫೋಟೋದ ಹಿರಿಯರ ಕಾಲಡಿ ಕುಳಿತು ಅವರ ಕಥೆಯನ್ನು ಕೇಳಿದಂತೆ ಅನಿಸುವ ಶೈಲಿ ಉಮಾ ಅವರದು! Memorable issue!

    Liked by 2 people

  6. ಗೌರಿಯವರ ಕಾವ್ಯಪೂರ್ಣ ಸಂಪಾದಕೀಯದಲ್ಲಿ ಹಳೆಬೇರು ಹೊಸಚಿಗುರು ಸೇರಿಕೊಂಡು ಚಳಿಗಾಲದಲ್ಲೂ ವಸಂತನಗಾಮನದಂತೆ.
    ————————————————————-
    ಪ್ರೇಮಲತಾ ಅವರ ಕವನಗಳನ್ನು ಓದುತ್ತ ಅನಿವಾಸಿಯಲ್ಲಿ, ಅವಧಿಯಲ್ಲಿ ಮತ್ತು ಬೇರೆ ಜಾಲಗಳಲ್ಲಿ ಓದುತ್ತ ಬಂದಿದ್ದೇನೆ. ಅವರ ಕವನಸಂಕಲನಕ್ಕೆ ಎದುರು ನೋಡುತ್ತಿದ್ದೇನೆ. ಚಿತ್ರಕವನವೊಂದು ಇಷ್ಟು ಗಾಢವಾಗಿ ಅನೇಕ ಪ್ರತಿಮೆಗಳಿಂದ ಇದುವರೆಗೂ ಓದಿದ ನೆನಪಿಲ್ಲ. ’ಮಯೂರ’ದಲ್ಲಿ ಬರುವ ಚಿತ್ರಕವನಗಳನ್ನು ಓದುವುದನ್ನೇ ಬಿಡುವಷ್ಟರ ಮಟ್ಟಿಗೆ ಈ ಚಿತ್ರಕವನಗಳ ಗುಣಮಟ್ಟವಿದೆ. ಅಂಥದರಲ್ಲಿ, ಪ್ರೇಮಲತಾ ಅವರ ಈ ಕವನ ಚಿತ್ರವನ್ನು ನೋಡದಿದ್ದರೂ ನಡೆಯುತ್ತದೆ; ಅದೊಂದು ಬಿಡಿಗವಿತಯಾಗಿಯೇ ಯಶಸ್ವಿಯಾಗಿದೆ.

    ಮೊದಲೆರೆಡು ಸಾಲಿನಲ್ಲಿ ಬರುವ ಅಂತರಿಕ ಆದಿಪ್ರಾಸಗಳು ಕವನವದ ಆರಂಭವನ್ನು ಜಡಿಮಳೆಯಷ್ಟೇ ಜೋರಾಗಿ ಸುರಿಯುತ್ತವೆ (ಹಿಡಿದ, ಬಿಡದೇ, ಜಡಿವ; ಮಳೆ, ಇಳೆ, ನಾಳೆ). ’ಜೀವನಚಕ್ರ’ ಕ್ಲೀಷೆಯಾದ ರೂಪಕವಾದರೂ, ಕಸುವು ಕಳೆಯುವವರೆಗೆ ತುಳಿಯಬೇಕು ಅನ್ನುವ ಸಾಲಿನಲ್ಲಿ ಜೀವಪಡೆಯುತ್ತದೆ (ಇಲ್ಲಿ ಕೂಡ ಆದಿಪ್ರಾಸ ಚೆನ್ನಾಗಿ ಕೆಲಸ ಮಾಡಿದೆ”ಕಸು’ ಮತ್ತು ’ಕಳೆ’ಗಳಲ್ಲಿ ಬರುವ ’ಕ’, ಮತ್ತು ’ಕಳೆ’ ಮತ್ತು ’ತುಳಿ’ಯಲ್ಲಿ ಬರುವ ’ಳ’). ತರತಮದ ತಕ್ಕಡಿ, ಬಿಕರಿಗಾಗಿರುವ ಜಾಹೀರಾತು, ಭಣಗುಡುವ ಭರವಸೆಯ ಗಲ್ಲಿಗಳು ಆ ಚಿತ್ರದಿಂದಲೇ ಹೊಸ ರೂಪಕಗಳನ್ನು ಸುರಿಸಿವೆ.
    ———————————————————————-
    ಉಮಾ ವೆಂಕಟೇಶ್ ಅವರ ವ್ಯಕ್ತಿಚಿತ್ರಗಳನ್ನು ಓದುವುದೇ ಖುಷಿಯ ಕೆಲಸ. ವಾಲಿಯವರ ಹೆಸರೇ ಕೇಳಿರಲಿಲ್ಲ. ಲೇಖನ ಮುಗಿಸುವಷ್ಟರಲ್ಲಿ ಅವರು ನಮಗೆ ಆಪ್ತರೇನೋ ಅನ್ನುವಷ್ಟರ ಮಟ್ಟಿಗೆ ಲೇಖನವನ್ನು ಬರೆದಿದ್ದಾರೆ. ವಿಜ್ಞಾನದ ಸಾಧಕರನ್ನು ಹತ್ತಿರದಿಂದ ನೋಡಿದ ಮಾತನಾಡಿಸಿದ ಉಮಾ ಅವರ ಅಪರಿಮಿತ ಆಸಕ್ತಿ ಅವರ ಬರವಣಿಗೆಗಳಲ್ಲಿ ಕಾಣಿಸುತ್ತದೆ. ಜೊತೆಗೆ ಚಂದ್ರಶೇಖರ್ ಅವರ ಪರಿಚವೂ ಆಯಿತು. ಇಂಥ ಅಪರೂಪದ ಲೇಖನಗಳನ್ನು ಅನಿವಾಸಿಗೆ ಬರೆಯುವವರು ಇವರೊಬ್ಬರೇ.

    – ಕೇಶವ

    Liked by 2 people

  7. ಅತಿ ಶ್ರೇಷ್ಠ ಜೀವಿಯೊಬ್ಬರ ಪರಿಚಯವನ್ನ ವಿನಮ್ರ ಆತ್ಮೀಯತೆಯಲ್ಲಿ ಹಂಚಿಕೊಂಡ ಉಮಾರಿಗೆ ಕೃತಜ್ಞತೆಯ ನಮನ.

    ಪ್ರೇಮಲತಾ ತಮ್ಮ ಬತ್ತದ ಬಹುಮಾನದ ಬುಟ್ಟಿಯ ಬುತ್ತಿಯೊಂದನ್ನು ಬಡಿಸಿದ್ದು ನಮ್ಮ ಪುಣ್ಯ.

    ಮೇಲಿನಿಬ್ಬರ ಅನುಭವದ ಖಜಾನೆಯಲೊಂದಿಷ್ಟು ತಂದ ಗೌರಿಯಿಂದ ‘ಅನಿವಾಸಿ’ ಧನ್ಯ!

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.