ಒಲವೇ ಜೀವನ ಸಾಕ್ಷಾತ್ಕಾರ 💕

ನಲುಮೆಯ ಓದುಗರಿಗೆಲ್ಲ ವ್ಯಾಲಂಟೈನ್ಸ್ ಡೇ ಯ ಶುಭಾಶಯಗಳು.

ತೊಂಬತ್ತರ ದಶಕದಲ್ಲಿ ನಮ್ಮೂರ ವ್ಯಾಪಾರ ಮಳಿಗೆಯ ಸಂಕೀರ್ಣದಲ್ಲಿದ್ದ ಒಂದೇ ಒಂದು ಆರ್ಚಿಸ್ ಗ್ಯಾಲರಿಯಲ್ಲಿ ನಾನು ಮೊಟ್ಟಮೊದಲು ಈ ವ್ಯಾಲಂಟೈನ್ಸ್ ಡೇ ಯ ಹಾರ್ಟ್ ಶೇಪಿನ ಬಣ್ಣದ ಬಲೂನುಗಳನ್ನೂ, ಜೋಡಿ ಹೃದಯದ ಚಿತ್ರಗಳನ್ನೂ ಹಾಗೂ ಅರ್ಥಗರ್ಭಿತ ಮೆಸೇಜುಗಳನ್ನೂ ಹೊತ್ತ ಸುಂದರ ಗ್ರೀಟಿಂಗ್ ಕಾರ್ಡುಗಳನ್ನು ನೋಡಿದ್ದು;ನೋಡಿ ಮನಸೋತಿದ್ದು. ಇವನ್ನೆಲ್ಲ ಕೊಡಲಾದರೂ, ಇಸಿದುಕೊಳ್ಳಲಾದರೂ ಒಬ್ಬ ಬಾಯ್ ಫ್ರೆಂಡ್ ಇರೇಬೇಕು ಅನ್ನಿಸಿಬಿಟ್ಟಿತ್ತು.

‘ಯಾರಿಂದಲೋ ಪ್ರೀತಿಸಲ್ಪಡುತ್ತಿದ್ದೇವೆ’ ಎನ್ನುವ ಭಾವವೇ ಮಧುರವಾದದ್ದು. ಆ ಭಾವ ನೀಡುವ ಭರವಸೆ, ಚೈತನ್ಯ, ಆತ್ಮತೃಪ್ತಿಗಳಿಗೆ ಸಾಟಿ ಬೇರಾವುದೂ ಇಲ್ಲ. ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ?’ ಕ್ರಿಸ್ತನ ಕರುಣೆ ಅರ್ಥವಾಗಲೂ ಪ್ರೀತಿ ಬೇಕೆನ್ನುತ್ತದೆ ಕವಿವಾಣಿ.
 
ಒಟ್ಟಿನಲ್ಲಿ ‘ಒಂದು ಹೆಣ್ಣಿಗೊಂದು ಗಂಡು, ಹೇಗೋ ಏನೋ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದಮೃತವುಂಡು ದು:ಖ ಹಗುರ ಎನುತಿರೆ ಪ್ರೇಮವೆನಲು ಹಾಸ್ಯವೇ?’ ಎನ್ನುವುದು ಅಕ್ಷರಶ: ಸತ್ಯ.

‘ ಮಿಡಿಯುವ ಮನಗಳು ಎರಡು; ಮಿಡಿತದ ರಾಗವು ಒಂದೇ..ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೇ..’ ಆಕಾಶವಾಣಿಯ ಅಭಿಲಾಷಾದಲ್ಲಿ ಈ ಗೀತೆ ಹರಿದು ಬರುತ್ತಿದ್ದರೆ ನಮ್ಮ ಎದೆಯಲ್ಲೂ ಎಂಥದೋ ಮಧುರ ಮಿಡಿತ, ಕಾಣದ ಒಲವಿಗಾಗಿ ತುಡಿತ..ಕಂಗಳಲ್ಲಿ ತೇಲುವ ಹಗಲುಗನಸು,ಹುಚ್ಚೆದ್ದು ಕುಣಿಯುವ ಹರೆಯದ ವಯಸು-ಮನಸು. ಪುಸ್ತಕಕ್ಕೊಂದು ಕಥೆ ಮಾಲಿಕೆಯಲ್ಲಿ ಹೊಂಬಿಸಿಲಿನ ನವಿರಾದ ಕಚಗುಳಿ ಹರಿಸಿದ್ದಾರೆ ಉಮಾ ವೆಂಕಟೇಶ್ ಅವರು.’ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ’ ಅಂತ ಹಲಬುವಂತೆ ಮಾಡಿದ್ದಾರೆ.

ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಚೀಸಿನ ಕಥೆಯೊಂದನ್ನು ನಿಮಗಾಗಿ ಉಣಿಸಬಂದಿದ್ದಾರೆ ರಾಂ ಅವರು.

ಬನ್ನಿ, ಅಕ್ಷರದ ಎಡೆ ರೆಡಿ ಇದೆ. ಉಂಡೂಟ ಹೇಗಿತ್ತು ಮರೆಯದೇ ಹೇಳಿ.
~ ಸಂಪಾದಕಿ

ಹುಚ್ಚೆಬ್ಬಿಸಿದ್ದ “ಹೊಂಬಿಸಿಲು”!

೬೦ - ೮೦ರ ದಶಕಗಳ ಮೈಸೂರಿನಲ್ಲಿ ಹುಟ್ಟಿ, ಬೆಳೆದು ವಿದ್ಯಾಭ್ಯಾಸ ಮಾಡಿದವರಿಗೆ ಮನೆಯಲ್ಲಿ ಕನ್ನಡದಲ್ಲಿ ಮಾತಾಡುವುದು, ಕನ್ನಡ ಪುಸ್ತಕ ಓದುವುದು ಸಹಜವಾಗಿತ್ತು. ಶಾಲೆಯಲ್ಲೂ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ನಮಗೆ, ಕನ್ನಡ ಜೀವನದ ಪ್ರಮುಖ ಅಂಗವೆನಿಸಿತ್ತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ,ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿಯುತ್ತಿದ್ದರೂ,ಅದು ಅನೇಕರ ಪಾಲಿಗೆ ಸ್ವಲ್ಪ ಕಬ್ಬಿಣದ ಕಡಲೆಯಾಗಿತ್ತು. ನಮ್ಮಲ್ಲಿ ಅನೇಕರು ಇಂಗ್ಲೀಷ್ ಕಲಿಯಲು ಪಡುತ್ತಿದ್ದ ಕಷ್ಟವನ್ನು ನೆನೆಸಿಕೊಂಡರೆ ನಮ್ಮ ಮೇಲೆ ಈ ಭಾಷೆಯನ್ನು ಹೇರಿದ ಬ್ರಿಟಿಷರ ಮೇಲೆ ಸಿಟ್ಟು ಬರುತ್ತದೆ. ನಮ್ಮ ಸಹಪಾಠಿಗಳಲ್ಲಿ ಅನೇಕರು, Could, Would, Should ಪದಗಳನ್ನು ಕುಲ್ಡ್, ವುಲ್ಡ್, ಶುಲ್ಡ್ ಎಂದು ಉಚ್ಛರಿಸಿ ಇಂಗ್ಲೀಷ್ ಟೀಚರುಗಳ ಕೈಯಲ್ಲಿ ತಿನ್ನುತ್ತಿದ್ದ ಬೈಗುಳವನ್ನು ಇಂದಿಗೂ ಮರೆತಿಲ್ಲ. ನನಗೆ ಕನ್ನಡ ಕಥೆಗಳನ್ನು ಓದುವ ವಾಡಿಕೆ ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಪ್ರಾರಂಭವಾಯಿತು. ಸುಮಾರು ೧೯೬೬ರ ಮಧ್ಯದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಕನ್ನಡದ ಅತ್ಯಂತ ಜನಪ್ರಿಯ ವಾರ ಪತ್ರಿಕೆ "ಸುಧಾ"ಳ ಆಗಮನದಿಂದ ಮನೆಮಂದಿಯೆಲ್ಲಾ ಅದಕ್ಕಾಗಿ ಜಗಳವಾಡುತ್ತಿದ್ದದ್ದು ಮರೆಯದು. ಪ್ರತಿ ಗುರುವಾರ ಸುಧಾ ಪತ್ರಿಕೆ ಬರುವ ಹೊತ್ತಿಗೆ ಮನೆಯ ಗೇಟ್ ಬಳಿ ನಿಂತು, ನಾ ಮುಂದು,ತಾ ಮುಂದು ಎನ್ನುತ್ತಾ ಪತ್ರಿಕೆಯನ್ನು ಗಬಕ್ಕನೆ ಎಳೆದುಕೊಂಡು,ಬಾಲವಿಹಾರದ ಕಥೆಗಳನ್ನು ಓದಿ ಆನಂದಿಸುತ್ತಿದ್ದ ಆ ದಿನಗಳನ್ನು ಮರೆಯಲು ಸಾಧ್ಯವೇ?ಹೈಸ್ಕೂಲ್ ಮೆಟ್ಟಿಲು ಹತ್ತಿದೊಡನೆ,ನನ್ನ ಓದುವ ಗೀಳು ಬಾಲವಿಹಾರದಿಂದ ಮುಂದುವರೆದು,ಕಾದಂಬರಿಗಳ ಕಡೆಗೆ ಹರಿಯಲಾರಂಭಿಸಿತ್ತು. ಕನ್ನಡದ ಜನಪ್ರಿಯ ಲೇಖಕಿ ಶ್ರೀಮತಿ. ಉಷಾ ನವರತ್ನರಾಂ ಹೆಸರನ್ನು ಕೇಳದ ಕನ್ನಡಿಗರಿಲ್ಲ ಎನ್ನುವುದು ನನ್ನ ಭಾವನೆ. ಉಷಾ ನವರತ್ನರಾಂ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದಾದ "ಹೊಂಬಿಸಿಲು" ೧೯೭೨ರಲ್ಲಿ, ವಾರದ ಕಾದಂಬರಿಯಾಗಿ ಕಂತುಗಳಲ್ಲಿ ಪ್ರಕಟವಾಗುತ್ತಿತ್ತು. ಆಗ ಹೈಸ್ಕೂಲಿನ ೮ನೆಯ ತರಗತಿಯಲ್ಲಿದ್ದ ನನಗೆ ಆ ಕಾದಂಬರಿಯ ಪ್ರಭಾವ ಎಳೆಯ ಹದಿಹರೆಯದ ಮನಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎನ್ನುವುದನ್ನು ಈಗ ಜ್ಞಾಪಿಸಿಕೊಂಡಾಗಲೆಲ್ಲ ಸ್ವಲ್ಪ ನಗುಬಂದರೂ,ಪ್ರತಿ ವಾರ ಕಾದಂಬರಿಯ ಕಂತನ್ನು ಓದುತ್ತಿದ್ದ ಹುಡುಗಿಯರು ಆ ದಿನ ಶಾಲೆಯಲ್ಲಿ ಕಥೆಯ ಬಗ್ಗೆ ನಡೆಸುತ್ತಿದ್ದ ಚರ್ಚೆ ನಿಜಕ್ಕೂ ಆಮೋಘವಾಗಿರುತ್ತಿತ್ತು. ಆ ಕಥೆಯ ಸನ್ನಿವೇಶಗಳು ನಮ್ಮ ಎಳೆಯ ಮನಗಳಲ್ಲಿ ಎಬ್ಬಿಸಿದ್ದ ಪ್ರಣಯ ಭಾವನೆಗಳ ಬಿರುಗಾಳಿ ಅದೆಷ್ಟು ಪರಿಣಾಮಕಾರಿ ಎನ್ನುವುದನ್ನು ಈಗಲೂ ನಾನು ನನ್ನ ಅಕ್ಕನ ಬಳಿ ಮಾತನಾಡುತ್ತಲೇ ಇರುತ್ತೇನೆ. ಕಥೆಯ ನಾಯಕಿ ಡಾ. ರೂಪಾ ಒಬ್ಬ ಸ್ವಾಭಿಮಾನಿ,ಪ್ರತಿಭಾಶಾಲಿ ವೈದ್ಯೆ. ಅವಳನ್ನು ತನ್ನ ನರ್ಸಿಂಗ್ ಹೋಮಿನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ಮತ್ತೊಬ್ಬ ಮಹಿಳಾ ವೈದ್ಯೆಗೆ ಅವಳ ಮೇಲೆ ಇನ್ನಿಲ್ಲದ ವಿಶ್ವಾಸ ಮತ್ತು ನಂಬಿಕೆ. ನಾಯಕ ಡಾ. ನಟರಾಜ ಈ ಮಹಿಳಾ ವೈದ್ಯೆಯ ಸೋದರ ಸಂಬಂಧಿ. ಒಮ್ಮೆ ತಾನು ನಡೆಸುತ್ತಿದ್ದ ನರ್ಸಿಂಗ್ ಹೋಮಿನಲ್ಲಿ ಪ್ರಸೂತಿತಜ್ಞೆಯ ಅಗತ್ಯ ಬಿದ್ದಾಗ,ತನ್ನ ಚಿಕ್ಕಮ್ಮನನ್ನು ಹುಡುಕಿಕೊಂಡು ಬಂದ ಅವನಿಗೆ ಡಾ. ರೂಪಾಳ ಭೇಟಿ ಮತ್ತು ಪರಿಚಯವಾಗುತ್ತದೆ. ಮೊದಲೇ ಅವಳ ಬಗ್ಗೆ ಪ್ರಶಂಸೆಯ ಮಾತುಗಳನ್ನು ಕೇಳಿದ್ದ ಡಾ. ನಟರಾಜ ತನ್ನ ಮೊದಲ ಭೇಟಿಯಲ್ಲೇ ಡಾ. ರೂಪಾಳ ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವಳನ್ನು ಮದುವೆಯಾಗುತ್ತಾನೆ. ಮಿಂಚಿನ ವೇಗದಲ್ಲಿ ನಡೆದುಹೋಗುವ ಈ ವಿವಾಹ ಸಂಬಂಧದಲ್ಲಿ, ತೀವ್ರವಾದ ಆಕರ್ಷಣೆಯಿದ್ದರೂ,ಇಬ್ಬರ ವ್ಯಕ್ತಿತ್ವಗಳ ಘರ್ಷಣೆಯಿಂದಾಗಿನಾಯಕ ನಾಯಕಿಯರ ನಡುವೆ ಉದ್ಭವವಾಗುವ ಭಿನ್ನಾಭಿಪ್ರಾಯ ಮತ್ತು ತಪ್ಪು ಕಲ್ಪನೆಗಳ ವಿಸ್ತಾರವೇ ಈ ಕಥೆಯ ಕಥಾವಸ್ತು. ೭೦ರ ದಶಕದ ಹದಿಹರಯದ ಮನಗಳಿಗೆ ಲೀಲಾಜಾಲವಾಗಿ ಲಗ್ಗೆಯಿಟ್ಟು ಕಥೆಯನ್ನು ಸುಲಭವಾಗಿ ಓದಿಸಿಕೊಂಡು ಹೋಗುವಲ್ಲಿ ಲೇಖಕಿ ಯಶಸ್ವಿಯಾಗಿದ್ದರು. ಕಡೆಯಲ್ಲಿ ನಾಯಕ-ನಾಯಕಿಯ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ,ಅವರಿಬ್ಬರ ಸಮಾಗವಾಗುತ್ತದೆ ಎನ್ನುವಲ್ಲಿಗೆ ಸಮಾಪ್ತವಾಗುವ ಈ ಕಾದಂಬರಿ ಒಂದು ವಿಶಿಷ್ಟವಾದ ಪ್ರಣಯ ಕಥೆ. ಈ ಕಾದಂಬರಿಯ ಪರಿಣಾಮ ಎಳೆಯಮನಗಳಲ್ಲಿ ಎಂತಹ ತೀವ್ರವಾದ ಬಿರುಗಾಳಿಯನ್ನೆಬ್ಬಿಸಿತ್ತು ಎಂದರೆ ನನ್ನ ಶಾಲೆಯ ಗೆಳತಿಯರಲ್ಲಿ ಗುಂಪುಗಾರಿಕೆ ಶುರುವಾಗಿತ್ತು. ಕೆಲವರಂತೂ ತಾವೇ ಡಾ. ರೂಪಾ ಎನ್ನುವಂತೆ ವರ್ತಿಸಲಾರಂಭಿಸಿದ್ದರು. ನಮ್ಮಲ್ಲಿ ಅನೇಕ ಹುಡುಗಿಯರು,ವೈದ್ಯವೃತ್ತಿಯೇ ನಮ್ಮ ಮುಂದಿನ ಗುರಿ ಎಂದು ಪ್ರತಿಜ್ಞೆ ತೊಟ್ಟಿದ್ದೂ ಉಂಟು. ಕಾದಂಬರಿಯಲ್ಲಿ ಅವರು ಓದುತ್ತಿದ್ದ ಆಸ್ಪತ್ರೆ,ಅಲ್ಲಿನ ವಾತಾವರಣ,ಡಾಕ್ಟರ್ ಮತ್ತು ನರ್ಸುಗಳ ನಡುವಿನ ಪ್ರಣಯ ಸಂಬಂಧಗಳು ಹುಡುಗಿಯರ ಮನಗಳಲ್ಲಿ ನಿಜಕ್ಕೂ ವೈದ್ಯ ವೃತ್ತಿಯ ಬಗ್ಗೆ ಬಹಳ ಮಧುರವಾದ ಭಾವನೆಗಳನ್ನು ಕೆರಳಿಸಿದ್ದವು. ಈ ಕಥೆಯಲ್ಲಿ,ಆಸ್ಪತ್ರೆಯಲ್ಲಿ ಕಂಡುಬರುವ ನೋವು ಮತ್ತು ಸಾವುಗಳ ಸನ್ನಿವೇಶಗಳ ಬಗ್ಗೆ ಲೇಖಕಿ ಅಷ್ಟಾಗಿ ಬರೆಯದೆ, ಕೇವಲ ನಾಯಕ ನಾಯಕಿಯರ ವೈಯಕ್ತಿಕ ಸಂಬಂಧ ಮತ್ತು ಆಕರ್ಷಣೆಗಳ ಬಗ್ಗೆ ಬರೆದು,ಓದುಗರ ಚಿತ್ತವಿಕ್ಷೇಪಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇನೆ ಇರಲಿ,ಶಾಲೆಯ ಹುಡುಗಿಯರ ವರ್ತನೆ ವಿನೋದಮಯವೆನಿಸಿದರೂ,ಖುಷಿಯಾಗುತ್ತಿತ್ತು. ಒಟ್ಟಿನಲ್ಲಿ ಪ್ರತಿ ಗುರುವಾರ ಕಥೆಯ ಬಗ್ಗೆ ದಾರಿಯುದ್ದಕ್ಕೂ ನಡೆಯುತ್ತಿದ್ದ ವಾಗ್ವಾದ ಪ್ರತಿವಾದಗಳು,ನಡಿಗೆಯ ದೂರವನ್ನು ಕಡಿಮೆ ಮಾಡಿದ್ದವೆಂದರೆ ಅಚ್ಚರಿಯಲ್ಲ. ಮನೆಯಲ್ಲಿ ಹಿರಿಯರ ಮುಂದೆ, ಕಥೆಯಲ್ಲಿ ಬರುವ ಪಾತ್ರಗಳ ಪ್ರಣಯ ವ್ಯವಹಾರಗಳನ್ನು ಚರ್ಚಿಸಲು ಒಪ್ಪಿಗೆಯಿರಲಿಲ್ಲ. ಹಾಗಾಗಿ ಶಾಲೆಗೆ ನಡೆದು ಹೋಗುವ ಸಮಯ ನಮ್ಮ ಪಾಲಿಗೆ ಬಹಳ ಅಮೂಲ್ಯವಾಗಿತ್ತು. ಅನೇಕ ವಾರಗಳು ಪ್ರಕಟವಾದ ಈ ಕಥೆಯಲ್ಲಿ ಕಡೆಗೊಮ್ಮೆ ನಾಯಕ-ನಾಯಕಿಯರ ಸಮಾಗಮವಾದಾಗ,ಹುಡುಗಿಯರ ಮನಗಳು ಸಮಾಧಾನಗೊಂಡು ನಿಟ್ಟುಸಿರು ಬಿಟ್ಟಿದ್ದೆವು. ಈ ಕಾದಂಬರಿ ನಿಜಕ್ಕೂ ನನ್ನ ಮಟ್ಟಿಗೆ ಅನೇಕರಲ್ಲಿ ಕನ್ನಡ ಪುಸ್ತಕ ಓದುವ ಗೀಳನ್ನು ಹುಟ್ಟುಹಾಕಿತ್ತು ಎಂದರೆ ಸುಳ್ಳಲ್ಲ. ಮುಂದೆ ೧೯೭೭ರಲ್ಲಿ ಈ ಕಾದಂಬರಿಯನ್ನು, ಜನಪ್ರಿಯ ನಟಿ ಆರತಿ ಮತ್ತು ನಟ ವಿಷ್ಣುವರ್ಧನ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿ ಚಲನಚಿತ್ರವಾದಾಗ,ಕಾಲೇಜಿನ ಹುಡುಗ ಹುಡುಗಿಯರು,ಸಿನಿಮಾ ಥಿಯೇಟರುಗಳಿಗೆ ಮುಗಿಬಿದ್ದಿದ್ದನ್ನು ನೆನೆಸಿಕೊಂಡಾಗ,ಟಿವಿ ಇಲ್ಲದ ಆ ದಿನಗಳಲ್ಲಿ,ಚಲನಚಿತ್ರ ಅದೆಷ್ಟು ಪ್ರಭಾವಶಾಲಿಯಾಗಿತ್ತು ಎನ್ನುವುದು ಅರಿವಾಗುತ್ತದೆ. ಮಹಾರಾಣಿ ಕಾಲೇಜಿನ ಹುಡುಗಿಯ ಹೇರ್ ಸ್ಟೈಲ್,ಮಹಾರಾಜಾ ಕಾಲೇಜ್,ಮೈಸೂರ್ ಮೆಡಿಕಲ್ ಕಾಲೇಜ್ ಹುಡುಗರು,ನಟ ವಿಷ್ಣುವರ್ಧನನಂತೆಯೇ ಕಣ್ಣಿಗೆ ದೊಡ್ಡ ಫ಼್ರೇಮಿನ,ಪ್ಲೇನ್ ಗ್ಲಾಸ್ ಧರಿಸಿ ಹುಡುಗಿಯರಿಗೆ ಲೈನ್ ಹೊಡೆಯುತ್ತಿದ್ದದ್ದು ಆ ದಿನಗಳ ಸುಂದರ ನೆನಪುಗಳು. ಮುಂದೆ ಉಷಾ ನವರತ್ನರಾಂ ರಚಿಸಿದ್ದ ಅನೇಕ ಪ್ರಣಯ ಕಾದಂಬರಿಗಳು ಪ್ರಕಟವಾಗಿ ನಾವೆಲ್ಲಾ ಅದನ್ನು ಓದಿದ್ದರೂ, "ಹೊಂಬಿಸಿಲು" ಪುಸ್ತಕ,೭೨-೭೩ರಲ್ಲಿ ಹದಿಹರೆಯದ ಮನಗಳನ್ನು ಅಪಹರಿಸಿದ ವಿಷಯ ಈ ಲೇಖನಕ್ಕೆ ಸ್ಫೂರ್ತಿ. ಕಾಲೇಜಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಅನೇಕ ಜನಪ್ರಿಯ ಕಾದಂಬರಿಕಾರರ ಹೆಸರುಗಳನ್ನು ಪಟ್ಟಿಮಾಡುತ್ತಾ ಹೋದರೆ ನಾನು ಹಲವು ಹತ್ತು ಲೇಖನಗಳನ್ನು ಬರೆಯಬಹುದೇನೋ! ಬಹುಶಃ,೬೦-೮೦ರ ದಶಕಗಳಲ್ಲಿ ಕನ್ನಡ ಕಾದಂಬರಿಲೋಕ ಒಂದು ರೀತಿಯ ಸುವರ್ಣಯುಗದಲ್ಲಿತ್ತು. ಒಮ್ಮೆ ಹತ್ತಿದ್ದ ಕನ್ನಡ ಕಾದಂಬರಿಗಳ ಗೀಳು ಪ್ರತಿ ಬೇಸಿಗೆಯಲ್ಲೂ,ಪ್ರತಿ ಮೊಹಲ್ಲಾಗಳಲ್ಲೂ ಇರುತ್ತಿದ್ದ ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ದೊರೆಯುತ್ತಿದ್ದ ಕಾದಂಬರಿಗಳನ್ನು ದಿನಕ್ಕೊಂದರಂತೆ ಓದಿ ಮುಗಿಸುವಷ್ಟರ ಮಟ್ಟಿಗೆ ನನಗೆ ಹುಚ್ಚುಹಿಡಿಸಿತ್ತು. ಕ್ರಮೇಣ ನನ್ನ ಮನ ನಿಧಾನವಾಗಿ,ಉಷಾ ನವರತ್ನರಾಂ ಪುಸ್ತಕಗಳಿಂದ ಸರಿದು ಯು.ಆರ್.ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ತ.ರಾ.ಸು, ತ್ರಿವೇಣಿ, ಎಂ.ಕೆ.ಇಂದಿರಾ, ಆ.ನ.ಕೃ ಅವರಂತಹ ಪ್ರಬುದ್ಧ ಲೇಖಕರ ಅತ್ಯದ್ಭುತ ಪುಸ್ತಕಗಳ ಸೊಗಡನ್ನು ಆಸ್ವಾದಿಸಲು ಪ್ರಾರಂಭಿಸಿತು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಓದುವ ಗೀಳಿದ್ದರೆ ಅವರ ಮನಸ್ಸನ್ನು ತಟ್ಟುವ ಒಂದು ಪುಸ್ತಕವಿದ್ದೇ ಇರುತ್ತದೆ. ನನ್ನ ತಾಯಿಗೆ ಕನ್ನಡ ಕಾದಂಬರಿಗಳನ್ನು ಓದುವ ಹುಚ್ಚಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಕನ್ನಡಪ್ರಭ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ, ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಥೆಯನ್ನು ಪ್ರತಿ ದಿನ ಸಂಜೆ ಪಕ್ಕದ ಮನೆಯ ಮಹಿಳೆಯರೊಂದಿಗೆ ಚರ್ಚಿಸುತ್ತಿದ್ದದ್ದು ನೆನಪಿದೆ. ನಮಗೆ ಆ ಕಥೆಯನ್ನು ಓದಿ ಅರ್ಥಮಾಡಿಕೊಳ್ಳುವ ವಯಸ್ಸಾಗಿರಲಿಲ್ಲ. ಆದರೂ, ನಮ್ಮ ತಾಯಿಯ ಬಾಯಲ್ಲಿ ಆ ಕಥೆಯ ವಿಶ್ಲೇಷಣೆಯನ್ನು ಕೇಳುತ್ತಿದ್ದಾಗ, ಪುಸ್ತಗಳ ಬಗ್ಗೆ ಒಂದು ರೀತಿಯ ಒಲವು ಮೂಡಿತ್ತು. ನನ್ನ ತಾಯಿಯ ಅಕ್ಕ, ಒಬ್ಬ ಉತ್ಸಾಹಭರಿತ ಓದುಗರಾಗಿದ್ದರು. ಅವರ ಮನೆಗೆ ಹೋದರೆ, ಅಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವೇ ಇರುತ್ತಿತ್ತು. ಒಮ್ಮೆ ನಮ್ಮ ಕಸಿನ್ ಗಳ ಮುಖ ನೋಡಿ ಹಲೋ ಹೇಳಿದನಂತರ, ನಾನು ನನ್ನ ಅಕ್ಕ, ಆ ಪುಸ್ತಕಗಳಲ್ಲಿ ಒಂದನ್ನು ಕೈಯಲ್ಲಿ ಹಿಡಿದು ಕುಳಿತೆವೆಂದರೆ, ಕಡೆಯಲ್ಲಿ ನಮ್ಮ ತಾಯಿ ಮನೆಗೆ ವಾಪಸ್ ಹೋಗುವಾಗಲೇ ನಮಗೆ ಎಚ್ಚರವಾಗುತ್ತಿದ್ದದ್ದು. ನನ್ನ ಕಸಿನ್ನುಗಳು, "ಈ ಉಮಾ ಮತ್ತು ಲಕ್ಷ್ಮಿ ನಮ್ಮ ಮನೆಗೆ ಬಂದ್ರೆ, ಬರೀ ಪುಸ್ತಕದೊಳಗೆ ಮುಖ ಇಟ್ಕೋಂಡು ಕೂತೀರ್ತಾರೆ ಚಿಕ್ಕಮ್ಮ" ಎಂದು ನಮ್ಮ ತಾಯಿಯ ಹತ್ತಿರ ದೂರುತ್ತಿದ್ದರು. ನನಗಂತೂ, ತ.ರಾ.ಸು ಅವರ ಮೂರು ಭಾಗದಲ್ಲಿ ಪ್ರಕಟವಾಗಿದ್ದ, ಸರ್ಪಮತ್ಸರ, ಎರಡು ಹೆಣ್ಣು ಒಂದು ಗಂಡು ಮತ್ತು ನಾಗರಹಾವು ಕಾದಂಬರಿಗಳನ್ನು, ಅವರ ಮನೆಯ ರೂಮಿನಲ್ಲಿ ಕುಳಿತು ಓದಿದ್ದು ನನ್ನ ಕಾಲೇಜಿನ ದಿನಗಳ ಸವಿನೆನಪುಗಳಲ್ಲಿ ಒಂದು. ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಬಳ್ಳಾರಿಯಲ್ಲಿ, ನಮ್ಮ ಮನೆಯಲ್ಲಿದ್ದ ; ಕವಿ ಕುವೆಂಪು ಸಂಪಾದಕೀಯದ ಸಂಪೂರ್ಣ ರಾಮಾಯಣದ ಪುಸ್ತಕವನ್ನು ನನ್ನ ಅಜ್ಜಿಗೆ ಓದಿ ಹೇಳಿದ್ದ ನೆನಪು ಹಸಿರಾಗಿದೆ. ಅಯೋಧ್ಯಾ-ಕಾಂಡದಲ್ಲಿ, ಕೈಕೇಯಿ, ದಶರಥನನ್ನು ರಾಮನ ಅರಣ್ಯವಾಸಕ್ಕೆ ಪೀಡಿಸುತ್ತಿದ್ದ ಭಾಗವನ್ನು ಓದುತ್ತಿದ್ದಾಗ, ಬಹಳ ಭಾವುಕಳಾಗಿ - "ಅಜ್ಜಿ ಈ ಕೈಕೇಯಿಗೆ ದಶರಥ ನಾಲ್ಕು ಬಾರಿಸಿ ಸುಮ್ಮನಿರಸಲು ಸಾಧ್ಯವಾಗಲಿಲ್ಲವೇ" ಎಂದು ಕೇಳಿದ್ದೆ. ಅದನ್ನು ಕೇಳಿ ನನ್ನ ತಾಯಿ ಮತ್ತು ಅಜ್ಜಿ ನಕ್ಕಿದ್ದರು. ಇಂದು ಮಕ್ಕಳು ಅದೇ ವಯಸ್ಸಿನಲ್ಲಿ, ಹ್ಯಾರಿ ಪಾಟರ್ ಪುಸ್ತಕವನ್ನು ಓದಿ ಮುಗಿಸಿರುತ್ತಾರೆ. ಅವರಿಗೆ ಕನ್ನಡದಲ್ಲಿ ಸಂಪೂರ್ಣ ರಾಮಾಯಣ ಓದುವ ಅವಕಾಶ ಸಿಗುವುದು ಅಪರೂಪ. ಮೊಮ್ಮಕ್ಕಳ ಕೈಯಲ್ಲಿ ರಾಮಾಯಣ ಮಹಾಭಾರತದ ಕಥೆಯನ್ನು ಓದಿಸಿ ಕೇಳುವ ಅಜ್ಜ-ಅಜ್ಜಿಯರೂ ಕಾಣಸಿಗುವುದು ಕಡಿಮೆ. ಟಿ.ವಿ ಮತ್ತು ಇಂಟರ್-ನೆಟ್, ನೆಟ್-ಫ಼್ಲಿಕ್ಸ್ ಸ್ಟ್ರೀಮಿಂಗ್ ಹಾವಳಿಯಲ್ಲಿ ಆ ಸಂಸ್ಕೃತಿ ಮರೆಯಾಗಿದೆಯೇನೋ!. ಈಗಲೂ ಪುಸ್ತಕ ಮನುಷ್ಯನ ಅತ್ಯಂತ ಸ್ನೇಹಮಯಿ ಒಡನಾಡಿ. ಪುಸ್ತಕಗಳ ಪ್ರಭಾವ ಮಾನವನ ಮನಸ್ಸಿನ ಬೆಳವಣಿಗೆಯಲ್ಲಿ ಅತ್ಯಂತ ಪ್ರಭಾವಶಾಲಿ ಪಾತ್ರವಹಿಸುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. "ಅಯ್ಯೋ ನೀನೇನು ಪುಸ್ತಕದ ಹುಳು" ಎನ್ನುವ ಅಪಹಾಸ್ಯದ ಮಾತನ್ನು ನಾವೆಲ್ಲಾ ಬಳಸುತ್ತಿದ್ದರೂ, ಪುಸ್ತಕದಂತಹ ವಸ್ತುವನ್ನು ಮಾನವ ಸೃಷ್ಟಿಸಿ ತನ್ನ ಏಕಾಂಗಿತನವನ್ನು ಮರೆಸುವಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾನೆ ಅನ್ನಬಹುದೇನೋ! 

~ ಡಾ ಉಮಾ ವೆಂಕಟೇಶ್

ಹೀಗೊಂದು ಚೀಸೀ ಕಥೆ

ಸೋಮಣ್ಣನಿಗೆ ಊರ ಹತ್ತಿರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದಾಗ ತುಂಬಾ ಖುಷಿ ಆಗಿತ್ತು. ಆದರೂ ಹೊಸ ಜಾಗಕ್ಕೆ ಹೋಗುವುದು, ಹೇಗೆ ಇರ್ತದೇನೋ ಅಂತನೂ ಸ್ವಲ್ಪ ಟೆನ್ಷನ್ ಇತ್ತು. ಅಪ್ಪ, “ಆಚೆ ಮನೆ ಮಾಧವನ ಮಗ ಪ್ರಸಾದ ಅಲ್ಲಿಯೇ ಓದಿದ್ದಲ್ವಾ, ಅವನಿಗೆ ಗುರ್ತದವರು ಇರ್ತಾರೆ ನೀನೆಂತಕೆ ಚಿಂತೆ ಮಾಡ್ತಿ” ಅಂತ ಸಮಾಧಾನ ಮಾಡಿದ್ರು. ಮಾಧವ ಮಾಮ, “ಪ್ರಸಾದನ ಗೆಳೆಯ ಅವಿನಾಶ ಇದ್ದಾನೆ. ಒಳ್ಳೆ ಹುಡುಗ, ಭಾರಿ ಹುಷಾರಿ. ಎಂತ ಚಟ ಕೂಡ ಇಲ್ಲ, ನಮ್ಮ ಪ್ರಸಾದನ ಹಾಗೆಯೇ. ನಾನು ಚೀಟಿ ಕೊಡ್ತೇನೆ, ಹೋಗಿ ಸಿಕ್ಕಿ” ಅಂತ ಅಭಯ ತೋರಿದ್ರು. ಸೋಮಣ್ಣನಿಗೂ ಮನಸ್ಸು ನಿರುಮ್ಮಳವಾಯ್ತು. ಅವಿನಾಶ ಒಳ್ಳೆಯವನೇ, ಸ್ವಲ್ಪ ಪಿರ್ಕಿ ಅಂತ ಕೆಲವರು ಹೇಳಿದ್ರೂ, ಸೋಮಣ್ಣನಿಗೆ ಹೊಂದಿಕೊಳ್ಳಲಿಕ್ಕೇನೂ ತೊಂದರೆ ಆಗಲಿಲ್ಲ. “ಒಳ್ಳೇ ಓದಬೇಕು, ರೇಂಕು ತೆಗ್ದರೆ ಲಾಯಕ್ಕು ಕೆಲಸ ಸಿಗ್ತದೆ” ಎಂದು ಬ್ರಹ್ಮೋಪದೇಶ ಮಾಡಿದ. 
ಅವಿನಾಶನ ಕ್ಲಾಸಲ್ಲಿ ಅನನ್ಯ ಎಂಬ ಚಂದದ ಹುಡುಗಿ ಇದ್ದಳು. ಒಳ್ಳೆ ಲಕ್ಷಣವಾಗಿ, ತಿರುಗಿ ನೋಡುವ ಹಾಗೆ ಇದ್ದಳು. ಸುಮಾರು ಹುಡುಗರು ಅವಳ ಹಿಂದೆ ಬಿದ್ದಿದ್ರೂ, ಅವಳು ತಾನಾಯ್ತು, ಓದಾಯ್ತು ಅಂತ ಇದ್ದಳು. ಅವಳಿಗೂ ಅವಿನಾಶನಿಗೂ ಕ್ಲಾಸಿನಲ್ಲಿ ಸ್ಪರ್ಧೆ. ಇಬ್ಬರೂ ಜೊತೆಯಲ್ಲೇ ಕೆಲವೊಮ್ಮೆ ಓದುವುದೂ ಇತ್ತು. ಪ್ರಾಜೆಕ್ಟ್ ಕೆಲಸನೂ ಒಂದೊಂದ್ಸಲ ಒಟ್ಟಿಗೇ ಇರುತ್ತಿತ್ತು. ಕೆಲವರು “ಓ, ಇವರು ಲವರ್ಸ್ ಮಾರಾಯ” ಎಂದರೆ, ಅವಿನಾಶ ಸಿಡುಕುತ್ತಿದ್ದ. ಸೋಮಣ್ಣನೇ, “ಎಂತ ಅವಿನಾಶಣ್ಣ, ನಿಮ್ಮದು ಎಂತಾದ್ರೂ ಇದೆಯಾ” ಎಂದು ಜೋಕ್ ಮಾಡಿದ್ರೆ; “ಎಂತ ಸಾವು ನಿಂದು, ಬ್ಯಾವರ್ಸಿ! ಅವಳದ್ದು ಬೆಳಗಾಂ, ನನಗೆ ಊರಿನ ಹುಡುಗಿ ಬೇಕು ಮಾರಾಯ. ಅವರಿಗೆಲ್ಲ ಅಮ್ಮನ ಹಾಗೆ ಬಂಗುಡೆ ಫ್ರೈ ಗಮ್ಮತ್ತಾಗಿ ಮಾಡ್ಲಿಕ್ಕೆ ಬರ್ತದಾ? ನನಗೆ ಮತ್ತೆ ಈ ಲವ್ವು-ಗಿವ್ವು ಇದೆಲ್ಲ ನಂಬಿಕೆ ಇಲ್ಲ. ಸುಮ್ಮನೆ ಕೂತುಕೋ” ಎಂದು ಗರಂ ಆಗಿದ್ದ. ಇಂಥ ಸಂದರ್ಭಗಳಲ್ಲಿ ಮತ್ತೆ ಸೋಮಣ್ಣನೇ ಅವನನ್ನು ನಾಯ್ಕರ ಹೋಟೆಲ್ಲಿನಲ್ಲಿ ಮೀನೂಟಕ್ಕೋ, ಬೀಚಿನ ಹತ್ತಿರ ಇದ್ದ ಭಟ್ರ ಕೇಂಟೀನಿನಲ್ಲಿ ಬಿಸ್ಕುಟಂಬಡೆ-ಚಾ ಕುಡಿಲಿಕ್ಕೋ ಕರಕೊಂಡು ಹೋಗಿ ಸಮಾಧಾನ ಮಾಡುತ್ತಿದ್ದ. 
ವರ್ಷ ಕಳೆಯುವುದರಲ್ಲಿ ಸೋಮಣ್ಣ ಕಾಲೇಜಿಗೆ ಹೊಂದಿಕೊಂಡಿದ್ದ. ಅವನದ್ದೇ ಗೆಳೆಯರ ಗುಂಪು ಇತ್ತು. ಅವಿನಾಶ, ಸೋಮಣ್ಣ ಹಾಸ್ಟೆಲ್ಲಿನ ಒಂದೇ ಮಜಲಿನಲ್ಲಿದ್ದಿದ್ದರಿಂದ, ದಿನವೂ ಸಿಗುತ್ತಿದ್ದರು. ಸೋಮಣ್ಣನಿಗೆ ಅವನ ಕ್ಲಾಸಿನ ರೇಖಾ ಎಂಬ ಹುಡುಗಿಯ ಪರಿಚಯ ಜೋರಾಗಿತ್ತು. ಇವರಿಬ್ಬರ ಇಷ್ಟಾಶಿಷ್ಟಗಳ ಮೇಳಾ-ಮೇಳಿ ಹೇಳಿ ಮಾಡಿಸಿದ ಹಾಗಿತ್ತು. ಕಾಲೇಜಿನ ಕೆಮ್ಮಣ್ಣಿನ ಕಾಲ್ದಾರಿಗಳು ಇವರಿಗೆ ಕೆಂಪು ಹಾಸಿನ ಹಾಗೆ ಕಾಣುತ್ತಿದ್ದವು. ದಾರಿಯುದ್ದಕ್ಕೂ ನೆಟ್ಟ ಗುಲ್ಮೊಹರ್ ಮರಗಳು ಇವರ ಪ್ರೇಮಕ್ಕೆ ಆಸರೆಯಾಗಿ ಹೂ ಮಳೆಗರಿಯುತ್ತಿದ್ದವು. ಅವಿನಾಶನಿಗೂ ಸೋಮಣ್ಣನ ಪ್ರೇಮ ಸಲ್ಲಾಪದ ಘಮಲು ತಲುಪಿತು. “ಎಂತ ಮಾರಾಯ, ನೀನು ಇಲ್ಲಿ ಓದಲಿಕ್ಕೆ ಬಂದಿದ್ದೀಯೋ, ಲವ್ ಮಾಡಲಿಕ್ಕೋ? ಈ ಹುಡುಗಿಯರ ಪಾಶಕ್ಕೆ ಬಿದ್ದು ಹಾಳಾಗ್ತಿಯ ಅಷ್ಟೇ. ಎಲ್ಲ ಬಿಟ್ಟು ಬಿಡು” ಎಂದು ಉಪದೇಶ ಮಾಡಿದ್ದ. ಸೋಮಣ್ಣ ಸುಮ್ಮನೆ ಗೋಣು ಹಾಕಿ, ಕೇಳಿದ್ದನ್ನೆಲ್ಲ ಇನ್ನೊಂದು ಕಿವಿಯಿಂದ ಬಿಟ್ಟು ಸುಮ್ಮನಾದ. ಅವಿನಾಶ ಸುಮ್ಮನೆ ಇರಲಿಲ್ಲ. ರಕ್ಷಾಬಂಧನದ ದಿನ ಸೋಮಣ್ಣನನ್ನು ಕರೆದುಕೊಂಡು ಲೈಬ್ರರಿಯಲ್ಲಿ ಕುಳಿತಿದ್ದ ರೇಖಾಳ ಬಳಿಗೆ ಕರೆದೊಯ್ದ. ರೇಖಾಳ ಕೈಗೆ ರಾಖಿ ತುರುಕಿ, “ಇವನಿಗೆ ಕಟ್ಟು” ಅಂತ ದಬಾಯಿಸಿದ. ರೇಖಾ ತಬ್ಬಿಬ್ಬಾಗಿ, ಏನು ಹೇಳಬೇಕೋ ತಿಳಿಯದೆ ಗೊಳೋ ಎಂದು ಅಳಲು ಸುರು ಮಾಡಿದಳು. ಸೋಮಣ್ಣನ ಪಿತ್ತ ನೆತ್ತಿಗೇರಿ, “ಎಂತ ನೀನು ಬ್ಯಾವರ್ಸಿ, ನಿನಗೆ ಮಂಡೆ ಸರಿ ಇದೆಯಾ?” ಎಂದು ಚೀರಾಡಿದ. ಲೈಬ್ರರಿಯನ್ ಬಂದು ಇಬ್ಬರನ್ನೂ ಹೊರಗಟ್ಟಿದರು. ಅಲ್ಲೇ ಇದ್ದ ಅನನ್ಯ, ಅವರಿಬ್ಬರ ಜಗಳ ಬಿಡಿಸಿ, ರೇಖಾಳನ್ನು ಸಮಾಧಾನ ಮಾಡುತ್ತ ಹಾಸ್ಟೆಲಿಗೆ ಕರೆದೊಯ್ದಳು. ಸೋಮಣ್ಣನಿಗೆ ಈ ಪ್ರಸಂಗವೆಲ್ಲ ಹೇಸಿಗೆಯಾಗಿ ಅವಿನಾಶನ ಜೊತೆ ಮಾತು ಬಿಟ್ಟ. 
ಅದೇ ವರ್ಷ ವ್ಯಾಲಂಟೈನ್ ದಿನದಂದು ಸೋಮಣ್ಣ ಗಡಬಡ್ ಹಾಗೂ ಚೀಸ್ ಸ್ಯಾಂಡ್ವಿಚ್ ತಿನ್ನಿಸುತ್ತ ಚೀಸಿಯಾಗೆ ರೇಖಾಳ ಎದುರು ಮದುವೆಯ ಪ್ರಸ್ತಾಪವಿಟ್ಟ. ಪ್ರಸ್ತಾಪ ಒಪ್ಪಿಗೆ ಆಯ್ತು ಅಂತ ಬೇರೆ ಹೇಳ್ಬೇಕಾ? ಇಬ್ಬರೂ ನೌಕರಿ ಹಿಡಿದು ರಾಜಧಾನಿಯಲ್ಲಿ ನೆಲೆಸಿದರು. ಅಲ್ಲಿ ಬಂಗುಡೆ ಫ್ರೈ ಹೋಟೆಲಿಗೇನು ಕೊರತೆಯಿರಲಿಲ್ಲ, ನಾಯ್ಕರ ಹೋಟೆಲ್ಲಿನ ನೆನಪೂ ಬರುತ್ತಿರಲಿಲ್ಲ. ಸೋಮಣ್ಣ ವ್ಯಾಲಂಟೈನ್ ದಿನವನ್ನು ಮಾತ್ರ ಮದುವೆಯ ವಾರ್ಷಿಕೋತ್ಸವಕ್ಕಿಂತಲೂ ಆಸ್ಥೆಯಿಂದ ಆಚರಿಸುತ್ತಿದ್ದ. ರೇಖಾಳಿಗೆ ಉಡುಗೊರೆ, ಉತ್ತಮ ಹೋಟೆಲ್ಲಿನಲ್ಲಿ ಊಟ ಖಾಯಂ ಹಾಕಿಸುತ್ತಿದ್ದ. ಈ ವರ್ಷ ಅವನಿಗೆ ದೊಡ್ಡ ಭಡ್ತಿ ಸಿಕ್ಕಿತ್ತು. ಈ ಖುಷಿಯಲ್ಲಿ ನಗರದ ಪ್ರತಿಷ್ಠಿತ ಹೋಟೆಲ್ಲಿನಲ್ಲಿ ಟೇಬಲ್ ಬುಕ್ ಮಾಡಿದ್ದ. ಸಭಾಂಗಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಜೋಡಿಗಳನ್ನು ಕೆಂಪು ಗುಲಾಬಿಯೊಂದಿಗೆ ಸ್ವಾಗತಿಸಿದರು. ಲೈವ್ Jazz ಸಂಗೀತ ಪ್ರಣಯಿಗಳಿಗೆ ಮತ್ತು ಹತ್ತಿಸುತ್ತಿತ್ತು. ಊಟಕ್ಕೆ ಬಗೆ ಬಗೆಯ ಖಾದ್ಯಗಳನ್ನು ಟೇಬಲ್ಲಿಗೇ ಬಂದು ಬಡಿಸುತ್ತಿದ್ದರು. ಕೊನೆಯಲ್ಲಿ ಲಕ್ಕೀ ಡ್ರಾ ಬೇರೆ ಇತ್ತು. ಸೋಮಣ್ಣ - ರೇಖಾ ಇಬ್ಬರೂ ಅಂದಿನ ಅನುಭವದಿಂದ ಸಂತೃಪ್ತರಾಗಿದ್ದರು. ಕೊನೆಯಲ್ಲಿ ಚೀಸ್ ಕೇಕ್ ತಿನ್ನುವಾಗ ಲಕ್ಕಿ ಡ್ರಾ ನಡೆಯಿತು. ವಿಜೇತರು ಟೇಬಲ್ ನಂಬರ್ ೧೦ ಎಂದು ಘೋಷಿಸಿದರು. ಟೇಬಲ್ ನಂಬರ್ ೧೦ರ ಮೇಲೆ ಝಗ್ಗನೆ ಬೆಳಕಾಯಿತು. ಯಾರು ಲಕ್ಕಿ ಜೋಡಿ ಎಂದು ಸೋಮಣ್ಣ ಕೇಕ್ ತಿನ್ನುತ್ತಾ ತಲೆ ಎತ್ತಿದ. ಅವನ ಬಾಯಿಂದ “ಏ ಬ್ಯಾವರ್ಸಿ” ಎಂಬ ಉದ್ಗಾರ ಮೂಡಿತ್ತು, ಚೀಸ್ ಕೇಕ್ ಕೆಳಗೆ ಬಿದ್ದಿತ್ತು. ಫಳಫಳಿಸುವ ಬೆಳಕಿನ ಹೊನಲಲ್ಲಿ ಅವಿನಾಶ-ಅನನ್ಯ ಚುಂಬಿಸುತ್ತಿದ್ದರು. 

-ರಾಂ

 

6 thoughts on “ಒಲವೇ ಜೀವನ ಸಾಕ್ಷಾತ್ಕಾರ 💕

 1. Uma Venketesh Writing stired memories of my adolescent and youth. I have been reading kannada newspapers Novels and magazines .since the age of 15yrs.I used to love Triveni.s stories Bellimoda,SoothuGeddavalu Eradu Kanasu Also Arayambha Pattibi, MK Indira, Aanya Kru ,Tara’su and Niranjana, BYRAPPA. IN all the books especially Women writers evoked Wonderful Romantic emotions. Only you can describe it like enjoying badam BurfI. It was subtle descriptions and metaphor made it more attractive. We were very innocent to the extent of being ignorant about adult life. It was a Taboo subject. Thanks Uma .Rams language
  is new to me. Enjoyed throughly. Gowre avarege introducing new sunjects Vandanegalu.

  Like

 2. ಈ ಸಲ ಗೌರಿಯವರು ಪ್ರೀತಿಯಿಂದ ಉಣಬಡಿಸಿದ ಪ್ರೇಮ- ಪ್ರಣಯಗಳ ಜುಗಲ್ಬಂದಿ ಭರ್ಜರಿ ಭೋಜನಕ್ಕೆ pinkish ಮೆನು ಕಾರ್ಡಿನ ಅಂಚಿಗೆ ರೋಮಾಂಟಿಕ್ ವೇಲೆಂಟೈನ್ ಕೆಂಪು ಬೇರೆ! ಸಂಪಾದಕೀಯಕ್ಕೇ ಕಾಯುವಂತೆ ಅವರ ಬರಹ ಬೇರೆ!
  ಉಮಾ ವೆಂಕಟೇಶರ ಲೇಖನ ಓದುತ್ತಿದ್ದಂತೆ ಸುಧಾ ಧಾರಾವಾಹಿ ಓದುಗರ ಮತ್ತು ಹೊಂಬಿಸಿಲಿನ ಸಿನಿಮಾ ಪ್ರೇಮಿಗಳ ನಿಟ್ಟುಸಿರು ಸಹ ಕೇಳಿಸುತ್ತದೆ. ಮೈಸೂರಿನಲ್ಲಿ ಅದಕ್ಕೂ ಮೊದಲೂ ಆಂಗ್ಲರ ಕಾಲದಿಂದಲೂ ‘ರೊಮಾಂಟಿಕ್’ ಫೀವರ್ ಇತ್ತು ಅಂತ ನನ್ನ ಹೆಂಡತಿಯ ಅಜ್ಜಿಯ ಮನೆಗೆ ಮೊದಲ ಸಲ ಹೋದಾಗ ಗೊತ್ತಾಯಿತು! ಅವರ ಒಂದು ಕಣ್ಣು ಅದರ ಜೋಡಿಗಿಂತ ಸ್ವಲ್ಪ ಸಣ್ಣದು. ‘ವಿಂಕ್ ‘ಮಾಡುತ್ತಿರುವಂತೆಇತ್ತು. ಏಕೋ ಅಂದೆ . ‘ನನಗೆ ಚಿಕ್ಕಂದಿನಲ್ಲಿ ರೊಮಾಂಟಿಕ್ ಫೀವರ್ ಆಗಿತ್ತು’ ಅಂದಾಗ ನಂಬಲಾಗಲಿಲ್ಲ. ‘ಅಲ್ಲ ಅಜ್ಜಿ, ಅದಕ್ಕೆ rhuematic fever ಅಂತಾರೆ’ ಅಂತ ನನ್ನ ಡಾಕ್ಟರ್ ಪತ್ನಿ ಸರಿಪಡಿಸಿದಳು! ಆ ಕಣ್ಣು ಸ್ವಲ್ಪ ಬಿಳಿ ಇತ್ತು (scar). ರೊಮಾಂಟಿಕ್ ಫೀವರ್ ನಮ್ಮ ಕಾಲಕ್ಕೂ ಇತ್ತಾದರೂ ‘ಲೈಬ್ರರಿಯಲ್ಲಿ ರಾಖಿ’ ಪ್ರಸಂಗಗಳಾಗಲಿ ಪಂಚತಂತ್ರದ ಕಾಗೆಯ ‘ಚೀಸ್ ಡ್ರಾಪ್’ ನೆನಪಿಸುವ ಚುಂಬನಗಳಾಗಲಿ ಇನ್ನೂ ಉದಯವಾಗಿರಲಿಲ್ಲ. ವಿ- ಕಾರ್ಡ್ ಈ ದೇಶದಲ್ಲೇ ಮೊದಲು ನೋಡಿದ್ದು! ಮುರಳಿಯವರು ಬರೆದಂತೆ, ಇಲ್ಲಿ ಅನಿವಾಸಿಯ ಮೊದಲ ಲಿಖಿತ ಚುಂಬನ ( CD ಯಲ್ಲಿ ಚುಂಬನ (ಕ ) ಇತ್ತು ಅನ್ನಿ.) ಇದು re-collector’s item! .

  Liked by 1 person

 3. ನಮಸ್ಕಾರ ಅನಿವಾಸಿ ವೇದಿಕೆಯ ಸ್ನೇಹಿತರಿಗೆ. ಈ ವಾರ ವೇದಿಕೆಯ ಸಂಪಾದಕಿ ಗೌರಿ ಅವರ “ಒಲವೇ ಜೀವನ ಸಾಕ್ಷಾತ್ಕಾರ” ಶೀರ್ಷಿಕೆಯಲ್ಲಿ ವ್ಯಾಲಂಟೈನ್ ದಿನದ ಅಂಗವಾಗಿ ಬರೆದ ಅರ್ಥಪೂರ್ಣವಾದ ನುಡಿಗಳು ನಿಜಕ್ಕೂ ನಮ್ಮ ಹರೆಯದ ಮಧುರ ಭಾವನೆಗಳನ್ನು ಬಡಿದೆಬ್ಬಿಸಿದೆ. ನಮ್ಮ ಲೇಖನಗಳನ್ನು ಓದಿ ಅದರ ಬಗ್ಗೆ ಬರೆದ ನಿಮ್ಮೆಲ್ಲರ ಹೃದಯಪೂರ್ವಕ ಮೆಚ್ಚುಗೆಯ ಮಾತುಗಳಿಗೆ ನನ್ನ ಧನ್ಯವಾದಗಳು. ನಾನೀಗ ಅನಿವಾಸಿ ವೇದಿಕೆಯಲ್ಲಿ ಲೇಖನಗಳನ್ನು ಓದುತ್ತಿರುವೆ. ಆದರೆ, ಲೇಖನಗಳ ಬಗ್ಗೆ ನನ್ನ ಮನಸ್ಸಿನ ನುಡಿಗಳನ್ನು ಬರೆಯಲಾಗುತ್ತಿಲ್ಲ. ವಾಟ್ಸ್ ಅಪ್ ಗುಂಪಿನಲ್ಲಿ ನಡೆಯುವ ಸಂವಾದಗಳನ್ನು ಓದುತ್ತಿರುವೆ. ಆದರೆ ಸಕ್ರಿಯವಾಜಿ ಭಾವವಹಿಸಲಾಗಿಲ್ಲ. ಅದಕ್ಕೆ ಕ್ಷಮೆ ಕೋರುವೆ. ಅನಿವಾಸಿ ದಿನದಿಂದ ದಿನಕ್ಕೆ ಬಹಳ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಅದನ್ನು ನೋಡಿ ತುಂಬಾ ಹೆಮ್ಮೆ ಎನಿಸುತ್ತಿದೆ. ನಮ್ಮ ಅನಿವಾಸಿ ಈಗ ನಿಜಕ್ಕೂ ಪ್ರಬುದ್ಧವಾದ ವ್ಯಕ್ತಿಯಾಗಿದ್ದು, ಅನೇಕ ಪ್ರತಿಭಾವಂತ ಲೇಖಕ-ಲೇಖಕಿಯರ ಬರಹಗಳಿಂದ ತನ್ನ ಪರಿಮಳವನ್ನು ಕರ್ನಾಟಕದ ವಾರಪತ್ರಿಕೆಗಳಲ್ಲಿ ಹರಡುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಮೇಟಿ, ಅಮಿತಾ, ಗೌರಿ, ಸ್ಮಿತಾ, ಸುಮನಾ ಮುರಳಿ, ಸವಿತಾ, ಗುಡೂರ್ ಹೀಗೆ ಅನೇಕರು ಅನಿವಾಸಿಯಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿ, ವೇದಿಕೆಯನ್ನು ಸಂಪನ್ನಗೊಳಿಸುತ್ತಿದ್ದಾರೆ. ನಮ್ಮ ಮಿತ್ರರಾದ ದೇಸಾಯಿ, ಶಿವಪ್ರಸಾದ್, ಕೇಶವ್, ಪ್ರೇಮಲತಾ, ರಾಮಶರಣ್ ಅವರೆಲ್ಲ ಮುಂಚೂಣಿಯಲ್ಲಿದ್ದುಕೊಂಡು ನೂತನ ಲೇಖಕರಿಗೆ ಸ್ಫೂರ್ತಿ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಶಿವಪ್ರಸಾದ್ ಅವರ ಲೇಖನ ಜಿ.ಎಸ.ಎಸ ಬದುಕಿನ ವಿಶೇಷ ಮೌಲ್ಯಗಳು ೨೦೧೪ರಲ್ಲಿ ನಾವು ಕನ್ನಡ ಬಳಗದಲ್ಲಿ ನಡೆಸಿದ ಜಿ.ಎಸ.ಎಸ ನುಡಿ-ನಮನದ ಕಾರ್ಯಕ್ರಮವನ್ನು ಜ್ಞಾಪಿಸಿತು. ಮೇಟಿ ಅವರ ೩ ಕಂತಿನ “ವೊ ಕೌನ್ ಥಿ ” ಕಥೆಯಾ ಮೂರೂ ಕಂತುಗಳನ್ನು ಒಂದೇ ಬಾರಿ ಓದಿದೆ. ಮೇಟಿ ಅವರು ನಮ್ಮ ದೇಶದ ಸಾಮಾಜಿಕ ಸಮಸ್ಯೆಯ ಒಂದು ಕುರೂಪ ಮುಖವನ್ನು, ತಮ್ಮ ಕಲ್ಪನೆಯಲ್ಲಿ ಬಂಧಿಸಿ, ಕಥೆಯನ್ನು ಬಹಳ ಚೆನ್ನಾಗಿ ಹೆಣೆದಿದ್ದಾರೆ. ಸುಮನಾ ಅವರ ಉಡುಗಣ ವೇಷ್ಟಿತ ಕೂಡ ಅಷ್ಟೇ ಸೊಗಸಾಗಿದೆ. ಜಿ.ಎಸ.ಎಸ ಅವರ ಈ ಕವನದ ಆಳವನ್ನು ಅರ್ಥಮಾಡಿಕೊಂಡು ಅದನ್ನು ವಿಶ್ಲೇಷಿಸುವುದು ಸುಲಭವಲ್ಲ. ಪ್ರತಿಯೊಬ್ಬರೂ ಅದನ್ನು ತಮ್ಮ ತಮ್ಮ ಭಾವಕ್ಕನುಗುಣವಾಗಿ ಮಾಡಬಹುದು. ಸುಮನಾ ಒಬ್ಬ ಪ್ರತಿಭಾವಂತ ನರ್ತಕಿ. ತಮ್ಮ ನೃತ್ಯದ ಮೂಲಕ ಅದನ್ನು ಸೊಗಸಾಗಿ ವಿಶ್ಲೇಷಿಸಿದ್ದಾರೆ. ಒಟ್ಟಾರೆ, ಅನಿವಾಸಿ ತನ್ನ ಬಹುಮುಖ ಪ್ರತಿಭೆಗಳಿಂದ ನಳನಳಿಸುತ್ತಿದೆ. ಅದನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ನಿಮ್ಮೆಲ್ಲರಿಗೂ ನನ್ನ ಅನಂತಾನಂತ ವಂದನೆಗಳು. ನನ್ನ ಲೇಖನವನ್ನು ಪ್ರಕಟಿಸಿದ್ದಕ್ಕೆ ಗೌರಿ ಅವರಿಗೆ ಧನ್ಯವಾದಗಳು.
  ಉಮಾ ವೆಂಕಟೇಶ್

  Liked by 1 person

 4. ಕನ್ನಡದಲ್ಲಿ ಅಲೆಯನ್ನು ಸೃಷ್ಟಿಸಿ ಯುವ ಜನರನ್ನು ಪುಳಕಿಸಿದ ಉಷಾ ನವರತ್ನಾರಾಮರನ್ನು ವ್ಯಾಲಂಟೈನ್ ದಿನದ ನೆಪದಲ್ಲಿ ನೆನೆಸಿದ ಉಮಾ ಅವರ ಲೇಖನ ಹಳೆಯ ನೆನಪುಗಳನ್ನು ಮೆಲುಕು ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
  – ರಾಂ

  Liked by 1 person

 5. ‘ಒಲವೇ ಜೀವನ ಸಾಕ್ಷಾತ್ಕಾರ’ ಎನ್ನುವ ಸಾಲೇ (ಬರೆದವರು ವಿಜಯ ನಾರಸಿಂಹ ಇರಬಹುದೇ?) ಎಷ್ಟು ಅರ್ಥಪೂರ್ಣವಾಗಿದೆ. ಮೂರೇ ಶಬ್ದಗಳಲ್ಲಿ ಬದುಕಿನ ಮತ್ತು ಪ್ರೇಮದ ವ್ಯಾಖ್ಯಾನ! ಉತ್ತಮ ತಲೆಬರಹ.

  ಗೌರಿಯವರ ಸಂಪಾದಕರ ನುಡಿ ಪ್ರೇಮಮಯವಾಗಿದೆ. ನಮ್ಮೂರಿನಲ್ಲಿ ಗ್ರೀಟಿಂಗ್ ಕಾರ್ಡ್ ಎಂದರೇನು ಎಂದು ಯಾವನಿಗೂ ಗೊತ್ತಿರಲಿಲ್ಲ. ನಾನು ಮೊಟ್ಟಮೊದಲು ನೋಡಿದ್ದೇ ಹುಬ್ಬಳ್ಳಿಯಲ್ಲಿ, ನಾನು ಮೆಡಿಕಲ್ ಓದಲು ಬಂದಾಗ. ಆ ಅಂಗಡಿಯ ಹೆಸರು ‘ಮುಮೆಂಟೋ’ ಎಂದು ನೆನಪು. ಅಲ್ಲಿ ಹೋಗಿ ಆರ್ಚೀಸ್ ಕಂಪನಿಯ ಕಾರ್ಡುಗಳನ್ನು ನೋಡಿ ಆ ಕಾರ್ಡುಗಳ ಸೃಜನಶೀಲತೆಗೆ ಮಾರುಹೋಗಿದ್ದೆ ಮತ್ತು ಅವುಗಳ ಬೆಲೆಯನ್ನು ನೋಡಿ ಹೌಹಾರಿದ್ದೆ. ಕಾರ್ಡು ಕೊಂಡುಕೊಳ್ಳುವಷ್ಟು ದುಡ್ಡೂ ಇರಲಿಲ್ಲ ಮತ್ತು ಕಾರ್ಡು ಕೊಡಲು ಯಾರೂ ಇರಲಿಲ್ಲ!

  ಉಮಾ ಅವರು ಮತ್ತೆ ಅನಿವಾಸಿಗೆ ಬರೆದಿದ್ದಾರೆ. ‘ಹೊಂಬಿಸಿಲು’ ಬೀಸಿದ ಪ್ರೇಮದ ನವಿರು ಭಾವಗಳನ್ನು, ಪುಸ್ತಕ ಪ್ರೀತಿಯನ್ನು ಉಮಾ ಅವರು ತುಂಬ ಚೆನ್ನಾಗಿ ಬರೆದಿದ್ದಾರೆ. ವಾರಪತ್ರಿಕೆಗಳಲ್ಲಿ ಆಗ ಬರುತ್ತಿದ್ದ ಧಾರಾವಾಹಿಗಳು ಮುಂದಿನ ಸಂಚಿಕೆ ಬರುವವರೆಗೂ ಚರ್ಚೆಯ ವಿಷಯವಾಗಿರುತ್ತಿದ್ದವು. ಪ್ರಜಾಮತ, ಸುಧಾ, ತರಂಗ ಮತ್ತು ರಾಗಸಂಗಮದ ಎಲ್ಲ ಧಾರಾವಾಹಿಗಳನ್ನೂ ಓದುವ ಮತ್ತು ಚರ್ಚಿಸುವವರ ಎಷ್ಟೊಂದು ಜನರಿದ್ದರು. ಪುಸ್ತಕ ಏಕಾಂಗಿತನವನ್ನು ಮರೆಸುವಲ್ಲಿ ಯಶಸ್ವಿಯಾಗಿರುವುದೇನೋ ನಿಜ, ಆದರೆ ಪುಸ್ತಕವನ್ನು ಓದುವ ಸಲುವಾಗಿಯೇ ಏಕಾಂತವನ್ನು ಅರಸುವವರಿಗೆ ಏನೆನ್ನೋಣ?

  ರಾಂ ಬರೆದ ಚೀಸೀ ಕತೆ ಹುಬ್ಬಳ್ಳಿಯ ಕ್ಯಾಂಪಸ್ಸನ್ನು ನೆನಪಿಸಿತು. ಹವ್ಯಕ ಭಾಷೆಯ ಸಂಭಾಷಣೆ ಮತ್ತು ಆ ಕಾಲದ ವಿವರಗಳು ದಟ್ಟವಾಗಿ ಮೂಡಿಬಂದಿವೆ. ಕತೆಯ ಕೊನೆಯಂತೂ ಚೆರ್ರಿ ಆನ್ ದ ಕೇಕ್! ವೆಲೈಂಟೈನ್ ದಿನಕ್ಕೆ ಉತ್ತಮ ಕತೆ.

  – ಕೇಶವ

  Liked by 2 people

 6. ಉಮಾ ಟಿವಿ ಪೂರ್ವ ಸಮಯದಲ್ಲಿ ಪಡ್ಡೆ ಹುಡುಗ ಹುಡುಗಿಯರಿಗೆ ಪ್ರೀತಿ ಪ್ರೇಮಗಳ ಅಮಲನ್ನು ಉಣಿಸಲು ಕಾದಂಬರಿಗಳು ಸಿನಿಮಾಗಳು ಹೇಗೆ ಪೂರಕವಾಗಿದ್ದವು ಎನ್ನುವುದನ್ನು ಚೆನ್ನಾಗಿ ಗ್ರಹಿಸಿ ಬರೆದಿದ್ದೀರಿ. ೭೦ರ ದಶಕದಲ್ಲಿ ನಾನು ಪಡ್ಡೆ ಹುಡುಗನಾಗಿದ್ದು ಪುಸ್ತಕಗಳಿಗಿಂತ ಸಿನಿಮಾದಿಂದ ಪ್ರಭಾವಿತನಾದವನು. ಆಗಿನ ಕಾಲಕ್ಕೆ ಬಂದ ಬಾಬಿ, ಮೇರಾ ನಾಮ್ ಜೋಕರ್ ಮುಂತಾದ ಚಿತ್ರಗಳಲ್ಲಿನ ಜುವಿನೈಲ್ ರೊಮ್ಯಾಂಟಿಸಿಸಂ ನಮ್ಮನ್ನೆಲ್ಲಾ ಹಿಡಿದಿಟ್ಟಿತ್ತು. ಪ್ರೇಮಲೋಕವೆಂಬ ಕನಸಿನ ಲೋಕದಲ್ಲಿ ಸುಂದರ ಕನಸುಗಳನ್ನು ಕಾಣುವ ವಯಸ್ಸು. ಸಧ್ಯ ಈ ಕನಸುಗಳಲ್ಲಿ ಅಪ್ಪ ಅಮ್ಮ ಬಂದು ಈ ಕನಸು ಕಾಣ ಬೇಡ ಎಂದು ಹೇಳುವಂತಿರಲಿಲ್ಲ! ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸು ಸರಿದ ಕೂಡಲೇ ನಮ್ಮ ಮುಂದೆ ನಿಲ್ಲುತ್ತಿದುದು ತೂಕದ ಗ್ರೇಸ್ ಅನಾಟಮಿ ಮತ್ತು ಇತರ ಪುಸ್ತಕಗಳು. ರಾಮ್ ಅವರ ವಾಲಂಟೈನ್ಸ್ ಡೇ ಚೀಸಿ ಕಥೆ ನಮ್ಮ ಕನಸಿನ ಕಥೆಗಳಷ್ಟೇ ಚೀಸೀಯಾಗಿದೆ.

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.