
ನಲ್ಮೆಯ ಓದುಗರಿಗೆ ವಂದನೆಗಳು. ಆಕಾಶಕ್ಕೆದ್ದು ನಿಂತ ಹಿಮಪರ್ವತ ಮೌನದಲ್ಲಿ ಕರಾವಳಿಗೆ ಮುತ್ತನಿಡುವ ಬೆಳ್ದೆರೆಗಳ ಗಾನದಲ್ಲಿ ಬಯಲ ತುಂಬ ಹಸಿರದೀಪ ಹಚ್ಚಿ ಹರಿವ ನದಿಗಳಲ್ಲಿ ಒಂದೇ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ ಎಲ್ಲೇ ಇರಲಿ ನಾವು ಒಂದು ನಾವು ಭಾರತೀಯರು ಕಣ್ಣು ಬೇರೆ ನೋಟ ಒಂದು ನಾವು ಭಾರತೀಯರು ನಮ್ಮ ಮಲ್ಲಿಗೆಯ ಕವಿಗಳ ಚಂದದ ಸಾಲುಗಳ ಮೂಲಕ ತಮಗೆಲ್ಲ 73 ನೆಯ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿರುವೆ. ಜನೆವರಿ 26 ಕೆ.ಎಸ್. ನರಸಿಂಹಸ್ವಾಮಿಗಳ ಜನುಮದಿನ. ತಮ್ಮ ಗೀತೆಗಳ ಮೂಲಕ ‘ನಮ್ಮಕಷ್ಟದಲ್ಲೂ ನೆರೆಗೆ ನೆರವನೀವ ಕರುಣೆಯನ್ನೂ, ಒಲವ ಜೀವ ಜಲವನ್ನೂ ನೀಡಿದ, ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನ್ನಿಟ್ಟ ಕವಿಗೆ ಹೃತ್ಪೂರ್ವಕ ನಮನಗಳು. ಪ್ರಜಾತಂತ್ರ ದಿನಾಚರಣೆಯ ಈ ಸಂದರ್ಭದಲ್ಲಿ ತಮ್ಮ ಕವನದ ಮೂಲಕ ವಿಜಯಲಕ್ಷ್ಮಿ ಶೇಡಬಾಳ ಅವರು ‘ಭಾರತಾಂಬೆಗೆ ನಮನ’ ಸಲ್ಲಿಸುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಎಲ್ಲರ ಕುತೂಹಲ ಕೆರಳಿಸಿದ್ದ ..ಮಿಂಚಿನ ಬಳ್ಳಿಯಂತೆ ಅಚಾನಕ್ ಆಗಿ ಮಿಂಚಿ ಮಾಯವಾಗುತ್ತಿದ್ದ ಅದೇ ಅವಳು ಮತ್ತೆ ಬಂದಿದ್ದಾಳೆ ಶಿವ ಮೇಟಿಯವರ ಯಾರಿವಳು?? ನೀಳ್ಗತೆಯ ಮುಂದುವರೆದ ಭಾಗದಲ್ಲಿ. ಆ ಅವಳು ನಿಮ್ಮ ಕುತೂಹಲ ತಣಿಸುತ್ತಾಳೋ, ಇನ್ನಷ್ಟು ಕೆರಳಿಸುತ್ತಾಳೋ ನೀವೇ ಓದಿ ತಿಳಿಯಿರಿ. ನುಡಿದು ಬೇಸತ್ತಾಗ ದುಡಿದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಾಂವ ನಿನ್ಹಾಂಗ ಆಡಾಕ..ನಿನ್ಹಂಗ ಹಾಡಾಕ ಪಡೆದು ಬಂದವ ಬೇಕ ಗುರುದೇವ ಜನೆವರಿ 31.ಕವಿದಿನ;ಬೇಂದ್ರೆ ಜನುಮದಿನ. ತನ್ನಿಮಿತ್ತವಾಗಿ ಅವರ ಗಾಯತ್ರಿ ಸೂಕ್ತ ಅನುಭಾವ ಗೀತೆಯೊಂದನ್ನು ಸುಶ್ರಾವ್ಯವಾಗಿ ಹಾಡಿ ಪ್ರಸ್ತುತಪಡಿಸಿದ್ದಾರೆ ಅಮಿತಾ ರವಿಕಿರಣ್ ಅವರು. ಓದಿ..ಕೇಳಿ..ಅನಿಸಿಕೆ ಹಂಚಿಕೊಳ್ಳಿ ~ ಸಂಪಾದಕಿ
ಭಾರತಾಂಬೆಗೆ ನಮನ
ಭಾರತಾಂಬೆಯ ಮುದ್ದಿನ ಮಗಳು ನಾನು। ಭಾರತಾಂಬೆಯ ಪ್ರೀತಿ ವಾತ್ಯಲ್ಯದಲ್ಲಿ ಬೆಳೆದವಳು ಹಾಗೂ ಮೆರೆದವಳು ನಾನು।। ಭಾರತಾಂಬೆಯ ಇತಿಹಾಸ ತಿಳಿದವಳು ನಾನು। ಭಾರತಾಂಬೆಯ ಪುರಾಣ, ಪುಣ್ಯ ಶ್ಲೋಕ ತಿಳಿದು ನಮಿಸುವೆನು ನಾನು।। ಮರ, ಗಿಡಗಳು ಹಸಿರು ಸೀರೆ ಉಟ್ಟುಕೊಂಡ ಸಂಪದ್ಭರಿತ ಹಸಿರು ದೇಶ ನನ್ನದು। ಗುಡಿ ಗೋಪುರ, ನದಿಗಳನ್ನು ಆಭರಣಗಳಂತೆ ಧರಿಸಿರುವ ಈ ನನ್ನ ಭಾರತ।। ಭಾರತಾಂಬೆಯ ಒಂದು ಅಂಗ( ಭಾಗ) ನನ್ನ ‘ಕರುನಾಡು। ಅಕ್ಕ ಮಹಾದೇವಿ, ರಾಣಿ ಚೆನ್ನಮ್ಮ, ಒನಕೆ ಓಬವ್ವ ಹೋರಾಡಿದ ಪವಿತ್ರನಾಡು ನನ್ನ ಕರುನಾಡು।। ಭಾರತಾಂಬೆಯನ್ನು ಪೂಜಿಸುವವರಿಗೆ ಗೌರವಿಸುವೆನು ನಾನು। ಭಾರತಾಂಬೆಯನ್ನು ದ್ವೇಷಿಸುವವರಿಗೆ ‘ಕಾಳ ಭೈರವಿ’ ಯಾಗುವೆನು ನಾನು।। ಅರಿತುಕೋ ಭಾರತಾಂಬೆಯ ಮಡಿಲಲ್ಲಿ ಜನಿಸಿದ ಬೆಲೆಯನ್ನು, ಆ ಬೆಲೆ ಕಟ್ಟಲು ಸಾಲದು ಈ ‘ಜನುಮ’।। ಎಲ್ಲೇ ಇರಲಿ, ಹೇಗೆ ಇರಲಿ ನನ್ನ ಭಾರತಾಂಬೆಯ ಹೆಮ್ಮೆಯ ಮಗಳಾಗಿ ನಾನು ಮೆರೆಯುವೆನು।। ಜೈ ಭಾರತಾಂಬೆ । ಜೈ ಕರ್ನಾಟಕ।। ~ ವಿಜಯ ಲಕ್ಷ್ಮಿ ಶೇಡ್ಬಾಳ್
ಯಾರಿವಳು??(ವೊ ಕೌನ್ ಥಿ?)..2
ಮನೆಗೆ ಬಂದು ಅಲ್ಮೇರಾದಲ್ಲಿದ್ದ ಹಳೆಯ ಭಾವಚಿತ್ರಗಳ ಆಲ್ಬಮ್ ತೆಗೆದು ಅವಳ ಫೋಟೋ ಹುಡುಕಾಡಿದೆ . ಸುಮಾರು ಐದು ವರ್ಷಗಳ ಹಿಂದಿನ ಚಿತ್ರ, ಅವಳು ಮಂಜುನೇ ಎಂದು ಖಾತ್ರಿಪಡಿಸಿತು . ಅವಳ ಪೂರ್ತಿ ಹೆಸರು ಮಂಜುಶ್ರೀ ಆದರೆ ನಾವೆಲ್ಲಾ ಅವಳನ್ನು ಪ್ರೀತಿಯಿಂದ ' ಮಂಜು ಎಂದು ಕರೆಯುತ್ತಿದ್ದೆವು. ನಮ್ಮ ಚಿಕ್ಕ ಹಳ್ಳಿಯಿಂದ ಮೊದಲು ಕಾಲೇಜು ಕಟ್ಟೆ ಏರಿದ ಹೆಣ್ಣು ಮಗು . ರೂಪದ ಜೊತೆಗೆ ದೇವರು ಒಳ್ಳೆಯ ಬುದ್ಧಿಯನ್ನೂ ಕೊಟ್ಟಿದ್ದ. ಪದವಿ ಪೂರ್ವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರ್ ಪದವಿ ಮುಗಿಸಿದ್ದಳು. ಅವರ ತಂದೆ - ವಾಸುದೇವ್ ಕುಲಕರ್ಣಿಯವರು, ನನ್ನ ಪ್ರಾಥಮಿಕ ಶಾಲೆಯ ಗುರುಗಳು ಮತ್ತು ನಮ್ಮ ಮನೆಯ ಆಪ್ತಮಿತ್ರರು . ಅವರನ್ನು ಊರ ಜನರೆಲ್ಲರೂ ಆಚಾರ್ಯರೆಂದು ಕರೆಯುತ್ತಿದ್ದರೆ ನಾನು ಮಾತ್ರ ಗುರ್ಜಿ ಎನ್ನುತ್ತಿದ್ದೆ. ( ಬೆಳಗಾವಿ ಜಿಲ್ಲೆಯ ಹಳ್ಳಿಗಳಲ್ಲಿ ಗುರುಗಳಿಗೆ ಕರೆಯುವ ರೀತಿ). ಅವಳ ಅಣ್ಣ ' ರಘು 'ಅಷ್ಟೇನು ಓದದಿಲ್ಲವಾದರೂ ಬೆಳಗಾವಿಯ ಕಚೇರಿಯೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ವಾಸು ಗುರ್ಜಿ ತುಂಬಾ ಸಂಪ್ರದಾಯಸ್ಥರು. ಬೈಲಹೊಂಗಲದ ಪದವೀಧರನಿಗೆ ಮಂಜುಳನ್ನು ಕೊಟ್ಟು ಸಾಂಪ್ರದಾಯಕವಾಗಿ ಮದುವೆ ಮಾಡಿಸಿದ್ದರು. ನಾನೂ ಮದುವೆಗೆ ಹೋಗಿದ್ದೆ. ಲಕ್ಷಣವಾಗಿದ್ದ ವಧು ವರರನ್ನು ಕಂಡು ಆಶೀರ್ವದಿಸಿ ' ಜನುಮದ ಜೋಡಿ ' ಎಂದು ಸಂಭ್ರಮಿಸಿದ್ದೆ. ಆದರೆ; ಮಂಜುನ ಮದುವೆಯ ಸಂಭ್ರಮ ಬಹಳ ದಿನ ಉಳಿದಿರಲಿಲ್ಲ . ಅತ್ತೆಯ ಮನೆಯವರು ಅನುಕೂಲವಂತರಿದ್ದರೂ , ಧನದ ದಾಹ ಹೆಚ್ಚಾಗಿತ್ತು . ಮನೆಯಲ್ಲಿಯ ಕಿರುಕುಳ ದಿನ ದಿನಕ್ಕೂ ಹೆಚ್ಚಾಗುತ್ತಾ ಹೋಗಿತ್ತು. ಗಂಡನೂ ಸಹ ಸಂಪೂರ್ಣವಾಗಿ ಅತ್ತೆಯ ಹಿಡಿತದಲ್ಲಿದ್ದನು . ಸಿಹಿ ದಿನಗಳಕ್ಕಿಂತಲೂ ಕಹಿ ಅನುಭವಗಳೇ ಹೆಚ್ಚಾಗಿದ್ದವು . ತವರಿನವರಿಗೆ ತೊಂದರೆ ಕೊಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡು ನಡೆದಿದ್ದಳು. ಸಮಯ ಕಳೆದಂತೆ ಪರಿಸ್ಥಿತಿ ಇನ್ನೂ ಹದಗೆಟ್ಟಿತು, ಕೌಟುಂಬಿಕ ಹಿಂಸೆ (domestic violence) ನುಂಗಲಾರದ ತುತ್ತಾಗಿತ್ತು. ಇನ್ನು ಆ ಮನೆಯಲ್ಲಿ ಇರಲು ಸಾಧ್ಯವಿಲ್ಲವೆಂದು ಹಳ್ಳಿಗೆ ಮರಳಿ ಬಂದಿದ್ದಳು . ಗಂಡನು ಬಂದು ಸಾಂತ್ವನ ಹೇಳಬಹುದೆಂಬ ನಿರೀಕ್ಷೆ ಸಮಯ ಕಳೆದಂತೆ ಸುಳ್ಳಾಯಿತು. ಹಳ್ಳಿಯಲ್ಲಿ ಕೆಲವು ಜನ ' ಗಂಡ ಬಿಟ್ಟವಳು' ಎಂದರೆ ಇನ್ನೂ ಕೆಲವರು ಮೊಸಳೆಯ ಮರುಕವನ್ನು ತೋರಿಸಿ ಮನಸ್ಸನ್ನು ನೋಯಿಸತೊಡಗಿದ್ದರು. ಇದನ್ನು ಸಹಿಸಲಾಗದೆ ಅವಳು ಮನೆಯನ್ನು ಬಿಟ್ಟು ಹೊರಗೆ ಹೋಗುವದನ್ನು ನಿಲ್ಲಿಸಿಬಿಟ್ಟಿದ್ದಳು . ಗುರ್ಜಿಗೆ ಏನು ಮಾಡಬೇಕೆಂದು ತೋರದೆ ನಿಸ್ಸಾಯಕರಾಗಿಬಿಟ್ಟಿದ್ದರು . ಬೀಗರ ಜೊತೆಗೆ ಮಾತನಾಡಿದ್ದು ಏನೂ ಪ್ರಯೋಜನವಾಗಿರಲಿಲ್ಲಾ . ಕಳೆದ ಸಲ ಹಳ್ಳಿಗೆ ಹೋದಾಗ ವಿಷಯವೆಲ್ಲ ಗೊತ್ತಾಗಿ ಗುರ್ಜಿಯ ಮನೆಗೆ ಹೋಗಿದ್ದೆ ಅವರೇ ಮಾತು ಸುರು ಮಾಡಿದ್ದರು . " ಯಾವಾಗ್ ಬಂದೆ ಶಂಕ್ರಪ್ಪಾ ! ಆರಾಮ್ ಅದಿಯಲ್ಲ ? ನೋಡಪ್ಪಾ, ಮಂಜುಗ ಆಕಿ ಗಂಡಾ ಭಾಳ ಮೋಸಾ ಮಾಡಿದ . ಅವಳನ್ನ ಸಾಲಿ ಓದಿಸಿ , ಅದ್ದೂರಿ ಆಗಿ ಮದುವಿ ಮಾಡಿಕೊಟ್ಟೆ. ಅದು ಸಾಲದಂತ ವರದಕ್ಷಿಣಿ ತಗೊಂಡು ಬಾ ಅಂತಾ ಒಂದ ಸವನ ಪೀಡಿಸಿ ಮನೆಯಿಂದ ಹೊರಗ ಹಾಕಿದಾರ್. ಅವಳ ಅತ್ತೆ ಮಾವಂದಿರು ಧನಪಿಶಾಚಿಗಳು. ಈಗ ಅವನು ಯಾರೋ ಇನ್ನೊಬ್ಬಳ ಜೊತೆಗಿ ಓಡಾಡಾಕತ್ತಾನಾಂತ್ , ಇವರಿಗೆ ಏನಾದರೂ ಮನುಷತ್ವಾ ಐತಿ ಏನ ?" ಎಂದು ದುಃಖ ತೋಡಿಕೊಂಡರು. ನನಗೆ ಏನು ಮಾತನಾಡಬೇಕೆಂದು ತೋಚಲಿಲ್ಲ . ಹೊರಗೆ ಹೋಗಿದ್ದ ರಘುನೂ ನಮ್ಮನ್ನು ಸೇರಿಕೊಂಡ,ಆದರೆ ಮಂಜು ಮಾತ್ರ ಕೋಣೆಯಿಂದ ಹೊರಗೆ ಬರಲಿಲ್ಲ . "ಸರಿ , ಕೇಳಿದ ವರದಕ್ಷಿಣೆ ಕೊಟ್ಟು ಬಿಟ್ಟು ಮಂಜುನ ವಾಪಸ್ ಕಳಿಸಿ ಬಿಡ್ರಿ" ಎಂದೆ . ಗುರ್ಜಿ ಅಂದರು -“ ಏನಪ್ಪಾ ಅಷ್ಟೊಂದು ರೊಕ್ಕಾ ಎಲ್ಲಿಂದ ತರಲಿ , ಈಗ ಕೊಟ್ಟರೂ ಮತ್ತ ಇನ್ನಷ್ಟು ತಗೊಂಡು ಬಾ ಅನ್ನು ಮುಂಡೇಮಕ್ಕಳವರು ". ಅಪ್ಪನ ಮಾತಿಗೆ ರಘುನೂ ಕೂಡಾ ದನಿಗೂಡಿಸಿದ. "ಹಾಗಾದರೆ ಕೋರ್ಟಿಗೆ ಹೋಗೋನು , ನ್ಯಾಯಾ ಕೇಳೋನು ಇಲ್ಲಾ ಅಂದ್ರ ಕೌಟುಂಬಿಕ ಹಿಂಸೆ , ವರದಕ್ಷಿಣೆಯ ಕಿರುಕುಳ ಎಂದು ಹೇಳಿ ವಿವಾಹ ವಿಚ್ಛೇದನಿಗೆ ಅರ್ಜಿ ಹಾಕೋನು " ಎಂದೆ . ಗುರ್ಜಿ ನಕ್ಕು ಹೇಳಿದರು - "ಶಂಕ್ರಪ್ಪ ! 'ಕೋರ್ಟಲ್ಲಿ ಗೆದ್ದಾವಾ ಸೋತ , ಸೋತಾವ ಸತ್ತಾ 'ಅಂತ ಗಾದಿ ಮಾತ ಐತಿ ಕೇಳಿದಿಲ್ಲೊ. ಕೋರ್ಟಿನ ತೀರ್ಪು ಬರೂದರೊಳಗ ನಾವೆಲ್ಲಾ ಮ್ಯಾಲ ಹೋಗಿರ್ತಿವಿ" ಎಂದರು. ಅವರ್ಯಾಕೆ ಆ ಮಾತು ಹೇಳಿದರು ಎಂಬುದರ ಅರಿವು ನನಗಿತ್ತು . 'ಊಳುವವನೇ ಹೊಲದ ಮಾಲಕ 'ಎಂಬ ಕಾಯಿದೆ ಬಂದಾಗ , ಕೋರ್ಟಿನ ಕಟ್ಟೆ ಏರಿ ೨೦ ಎಕರೆ ಜಮೀನಿನಲ್ಲಿ ೧೫ ಎಕರೆ ಜಮೀನನ್ನು ಕಳೆದುಕೊಂಡು ಕೈ ಸುಟ್ಟುಕೊಂಡಿದ್ದರು. ವಕೀಲರ ವಾದಕ್ಕೆ ವರ್ಷಗಟ್ಟಲೆ ಓಡಾಡಿ ಸುಮಾರು ಹಣವನ್ನು ಖರ್ಚು ಮಾಡಿದರೂ ಪ್ರಯೋಜನವಾಗಿರಲಿಲ್ಲ. " ಸರಿ! ಹಾಗಾದರೆ ಅವಳಿಗೆ ಏನು ಮಾಡುವದು " ಎಂದು ಕೇಳಿದೆ . "ಅವಳ ಹಣೆಬರದಾಗ ಇದ್ದಂಗ ಆಗತೈತಿ ಬಿಡು, ದೇವರು ಏನೋ ದಾರಿ ತೋರಸ್ತಾನ್ "ಎಂದರು. "ಬರೀ ದೇವರ ಮೇಲೆ ಭಾರ ಹಾಕಿದರೆ ಹೇಗೆ? , ನಾವೂ ಸಹ ಪ್ರಯತ್ನ ಮಾಡಬೇಕು ತಾನೆ ? ಆ ನರಕದಲ್ಲಿ ಒದ್ದಾಡೋಕ್ಕಿಂತ ವಿವಾಹ ವಿಚ್ಛೇದನೆ ಪಡೆದು ಅವಳಿಗೆ ಇನ್ನೊಂದು ಗಂಡು ನೋಡಿ ಮದುವೆ ಮಾಡಿದರ ಹೇಗೆ” ಅಂತ ಕೇಳಿದಕ್ಕೆ , “ನಮ್ಮ ಸಂಪ್ರದಾಯದಲ್ಲಿ ಅದು ಹ್ಯಾಂಗ್ ಸಾಧ್ಯಪ್ಪ “ಎಂದರು. ಇವರಿಗೆ ಮಗಳ ಭವಿಷ್ಯಕ್ಕಿಂತ ಸಂಪ್ರದಾಯವೇ ಹೆಚ್ಚಾಗಿದ್ದಿದ್ದನ್ನು ಕೇಳಿ ಬೇಸರವಾಯಿತು ಅಪ್ಪ ಹಚ್ಚಿದ ಆಲದ ಮರ ಅಂತಾ ನೇಣು ಹಾಕೊಳಲಿಕ್ಕೆ ಆಗುತ್ತೇನು ಅಂತ ಹೇಳಿದ್ದಕ್ಕೆ "ನೀನು ಪರದೇಶಕ್ಕ ಹೋಗಿದಿಯಲ್ಲ ಅದಕ್ಕ ಹಿಂಗ ಮಾತಾಡಕತಿ " ಅಂತ ಸಿಟ್ಟು ಮಾಡಿಕೊಂಡರು. ಇನ್ನು ಇವರ ಜೊತೆಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಅಂದುಕೊಂಡೆ . ರಘುನನ್ನು ಹೊರಗೆ ಕರೆದುಕೊಂಡು ಬಂದು ಮಾತನಾಡಿದೆ " ನೋಡು ರಘು ಇರುವವಳು ಒಬ್ಬಳೇ ತಂಗಿ , ಹೇಗೋ ಒಂದಿಷ್ಟು ಜಮೀನು ಇದೆ ಅವಳಿಗೂ ಒಂದಿಷ್ಟು ಪಾಲನ್ನು ಕೊಟ್ಟುಬಿಟ್ಟು ಅವರತ್ತೆಯ ಮನೆಯವರಿಗೆ ಬಿಸಾಕಿ ಅವಳನ್ನು ಗಂಡನ ಮನೆಗೆ ಕಳಿಸಿಬಿಡು " ಎಂದೆ . ನನ್ನ ಮಾತಿನಿಂದ ಅವನಿಗೆ ಸಿಟ್ಟು ಬಂತು . " ಏನು ಶಂಕ್ರಣ್ಣ ಹಿಂಗ ಅಂತೀಯಾ ನಮ್ಮದೇನು ದೊಡ್ಡ ಜಾಮೀನು ? ನನಗ ಇರೋದು ಒಂದು ಸಣ್ಣ ನೌಕರಿ , ಆಸ್ತಿ ಸೇರಬೇಕಾಗಿರೋದು ಗಂಡು ಮಕ್ಕಳಿಗೆ ತಾನೆ ? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ " ಎಂದು ಹೇಳಿ ಮಾತು ಮುಗಿಸಿದ . ಹೆಣ್ಣು ಮಕ್ಕಳಿಗೂ ಸಮನಾದ ಪಾಲು ಇದೆ ಎಂದು ಹೇಳಬೇಕೆಂದುಕೊಂಡೆ ಆದರೆ ಮನಸು ಬರಲಿಲ್ಲ . ಮಂಜುಳ ಪರಿಸ್ಥಿತಿಯನ್ನು ಕಂಡು ಬೇಜಾರೆನಿಸಿತು . ಸಂಪ್ರದಾಯದ ಜುಟ್ಟು ಹಿಡಿದಿರುವ ತಂದೆ ಮತ್ತು ಆಸ್ತಿಯನ್ನು ನುಂಗಲು ನಿಂತಿರುವ ಅಣ್ಣನಿಂದ ಅವಳಿಗೆ ಏನೂ ಸಹಾಯ ಸಿಗುವದಿಲ್ಲವೆಂಬುವದು ಖಚಿತವಾಯಿತು . ಸರಿ ಅವಳ ಜೊತೆಗೊಮ್ಮೆ ಮಾತನಾಡಿಬಿಡೋಣವೆಂದು ಅವಳಿದ್ದ ಕಡೆಗೆ ಹೋದೆ. ತುಂಬಾ ಸೊರಗಿ ಹೋಗಿದ್ದಳು. ಮುಖದಲ್ಲಿ ನಿರಾಸೆಯ ಛಾಯೆ ಇತ್ತು . ' ಮುಂದೇನೆಂಬ ' ಚಿಂತೆಯ ಗೆರೆಗಳು ಎದ್ದು ಕಾಣುತ್ತಿದ್ದವು . ನನ್ನನ್ನು ನೋಡಿಯೂ ಮಾತನಾಡಲಿಲ್ಲ ಆದರೆ ಕಣ್ಣುಗಳು ತೇವಗೊಂಡಿರುವುದು ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು. ನಾನೇ ಮಾತು ಆರಂಭಿಸಿದೆ " ನಾನು ನಿನ್ನನ್ನು ನೋಡಿ ಅಯ್ಯೋ ಅನ್ನಲು ಬಂದಿಲ್ಲ ಬದಲು ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಲು ಬಂದಿರುವೆ " ಎಂದೆ . "ಶಂಕ್ರಣ್ಣ ! ಒಳ್ಳೆಯದೇನು ಉಳಿದಿದೆ ನನ್ನ ಜೀವನದಲ್ಲಿ ಎಲ್ಲಾ ಹಾಳಾಗಿ ಹೋಗಿದೆ " ಎಂದಳು . "ಜೀವನ ನಾವು ನಿರ್ಧರಿಸಿದಂತೆ ಇರುತ್ತೆ. ಹೊರಗೆ ಬಂದು ದಾರಿ ಹುಡುಕಿದರೆ ಸಾವಿರ ಬಯಲು ದಾರಿಗಳು ತೆರೆದುಕೊಳ್ಳುತ್ತವೆ , ಹೀಗೆ ನಾಲ್ಕು ಗೋಡೆಗಳ ಮಧ್ಯ ಕುಳಿತರೆ ಕತ್ತಲೆ ಮಾತ್ರ ಕಾಣಿಸುತ್ತೆ. ನೀನು ವಿದ್ಯಾವಂತಳು ಬುದ್ಧಿವಂತಳು ಮನಸು ಮಾಡಿದರೆ ಏನನ್ನಾದರೂ ಸಾಧಿಸುವ ಶಕ್ತಿ ನಿನ್ನಲ್ಲಿದೆ. ಈಗ ತಾನೆ ಅರಳಿರುವ ನಿನ್ನ ಬದುಕಿನ ಹೂವನ್ನು ಕಮರಲು ಬಿಡಬೇಡಾ " ಎಂದೆ . " ಈ ಸಮಾಜ ನನ್ನನ್ನು ಬಿಟ್ಟರೆ ತಾನೆ ?" ಅವಳ ಮಾತಿನಲ್ಲಿ ರೋಷವಿತ್ತು, ಅಸಹಾಯಕತೆಯ ಅಳುವಿತ್ತು. " ನಿನ್ನ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ ನಿನಗೆ ಮಾತ್ರ ಇದೆ . ಈ ಸಮಾಜದಲ್ಲಿರುವ ಕಂದಾಚಾರಣೆ , ಕೌಟುಂಬಿಕ ಹಿಂಸೆ, ಸಂಪ್ರದಾಯಗಳ ಉರುಳಿಗೆ ನೀನು ಬಲಿಯಾಗಬಾರದು . ಆ ಕಟ್ಟಳೆಗಳಿಂದ ನೀನು ಹೊರಗೆ ಬರಬೇಕು . ನಿನ್ನಂತೆಯೇ ಈ ಸಮಾಜದ ಕಪಿಮುಷ್ಟಿಯಲ್ಲಿ ಸಿಕ್ಕಿರುವ ಸಾವಿರಾರು ಅಸಹಾಯಕ ಹೆಣ್ಣು ಮಕ್ಕಳಿಗೆ ನೀನು ಮಾದರಿಯಾಗಬೇಕು " ಎಂದೆ . "ಹಾಗಾದರೆ ನನಗೇನು ಮಾಡು ಅಂತೀಯಾ ?" ಎಂದಳು . " ನೀನು ಈ ಹಳ್ಳಿಯಿಂದ ದೂರ ಹೋಗಬೇಕು , ದೇಶ ಬದಲಾಗುತ್ತಿದೆ ಪಟ್ಟಣಗಳಲ್ಲಿ ನಿನ್ನಂತ ವಿದ್ಯಾವಂತರಿಗೆ ಸಾವಿರಾರು ಅವಕಾಶಗಳಿವೆ . ಬಹುತೇಕ ಪಟ್ಟಣಗಳಲ್ಲಿ ಸಮಾಜ ಬದಲಾಗುತ್ತಿದೆ . ಕೆಲಸಕ್ಕೆ ಅರ್ಜಿ ಹಾಕು. ಬೆಂಗಳೂರಿನಲ್ಲಿ ನನ್ನ ಗೆಳೆಯನೊಬ್ಬ ಅಂತಾರಾಷ್ಟ್ರೀಯ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಇದ್ದಾನೆ ಬೇಕಾದರೆ ಸಹಾಯ ಮಾಡಲು ಹೇಳುತ್ತೇನೆ" ಎಂದೆ . ಏನನ್ನು ಮಾತನಾಡಲಿಲ್ಲವಾದರೂ ಅವಳ ಕಣ್ಣಂಚಿನ ಮೂಲೆಯೊಂದರಲ್ಲಿ ಆಶಾ ಕಿರಣ ಮೂಡಿದಂತೆ ಇತ್ತು. " ನಿಮಗೆ ಏನು ಮಾಡಲು ಆಗದಿದ್ದರೂ ಅವಳಿಗೆ ಕೆಲಸಕ್ಕೆ ಹೋಗಲು ಅವಕಾಶ ಕೊಡಿ " ಎಂದು ಗುರ್ಜಿಗೆ ಹೇಳಿ ಬಂದಿದ್ದೆ. ನಾಲ್ಕೈದು ವರ್ಷಗಳು ಉರುಳಿ ಹೋಗಿದ್ದವು.ಅವಳ ಸಂಪರ್ಕವೂ ಕಳೆದು ಹೋಗಿತ್ತು. ಅಪ್ಪ ಅವ್ವ ಇದ್ದಾಗ ಆಗಾಗ್ಯೆ ಊರಿಗೆ ಹೋಗುತ್ತಿದ್ದೆ, ಅವರು ಹೋದ ಮೇಲೆ ಕೆಲವು ವರ್ಷಗಳಿಂದ ಊರಿಗೆ ಹೋಗುವದು ನಿಂತೇ ಹೋಗಿದೆ ಸರಿ! ಮಂಜು ಇಷ್ಟು ದಿನವಾದ ಮೇಲೆ ಸಿಕ್ಕಿದ್ದು ಸಂತೋಷವಾಗಿತ್ತು. ಅವಳು ಈ ದೇಶಕ್ಕೆ ಬಂದಿದ್ದು ದೊಡ್ಡ ಸಾಧನೆಯೇ ಎನಿಸಿತ್ತು. ಆದರೆ ಅರೆಕ್ಷಣಗಳಲ್ಲಿ ಅವಳು ಮಾಯವಾಗುತ್ತಿದ್ದಿದ್ದು ಮಾತ್ರ ಯಕ್ಷಪ್ರಶ್ನೆಯಾಗಿತ್ತು. ಅವಳ ಹತ್ತಿರ ಫೋನ್ ನಂಬರ್ ಇಸಿದುಕೊಳ್ಳದಿದ್ದಕ್ಕೆ ಬೇಜಾರು ಎನಿಸಿತು . ಅಡ್ರೆಸ್ಸಂತೂ ಇದೆಯಲ್ಲ ಭೇಟಿಯಾಗೋಣವೆಂದು ಒಂದು ದಿನ ಅವಳ ಮನೆಗೆ ಹೋದೆ.೨೪೮ , ಮೆರ್ನ್ಸ್ ರೋಡ್ ನಮ್ಮ ಮನೆಯಿಂದ ೧೦ ನಿಮಿಷಗಳ ಡ್ರೈವಿಂಗ್ . ಆ ಮನೆಯನ್ನು ತಲುಪಿದಾಗ , ಭಾನುವಾರದ ಸಂಜೆ ನಾಲ್ಕು ಘಂಟೆ ಆಗಿತ್ತು. ಹೊರಗಿನ ಬೆಲ್ ಒತ್ತಿದೆ , ಯಾರೋ ಇಳಿ ವಯಸ್ಸಿನ ಬಿಳಿಯ ಹೆಣ್ಣು ಮಗಳು ಬಾಗಿಲು ತೆರೆದಳು . ನನಗೆ ಒಂದು ಸಲ ಮನಸಿನಲ್ಲಿ ಗೊಂದಲವಾಯಿತು . ಸರಿಯಾದ ವಿಳಾಸಕ್ಕೆ ಬಂದಿರುವೆನೋ ಇಲ್ಲವೋ ಎಂದು ಇನ್ನೊಮ್ಮೆ ಮನೆಯ ನಂಬರನ್ನು ಪರೀಕ್ಷಿಸಿದೆ . ವಿಳಾಸ ಸರಿಯಾಗಿಯೇ ಇತ್ತು. ನಾನು ಹಾಗೆಯೇ ನಿಂತುಕೊಂಡಿದ್ದನ್ನು ನೋಡಿ ಅವಳೇ ಇಂಗ್ಲಿಷಿನಲ್ಲಿ ಮಾತನಾಡಿಸದಳು " ಯಾರು ನೀವು ? ಯಾರು ಬೇಕಾಗಿತ್ತು?" " ನಾನು ಡಾಕ್ಟರ್ ಮೇಟಿಯಂತ , ಮಂಜುನ ಊರಿನವನು ಅವಳನ್ನು ಭೇಟಿಯಾಗಲು ಬಂದಿದ್ದೆ , ಇಲ್ಲಿಯೇ ಹತ್ತಿರದಲ್ಲಿ ಇದ್ದೀನಿ" ಅಂತ ಇಂಗ್ಲಿಷಿನಲ್ಲಿ ಹೇಳಿದೆ. ಒಳಗೆ ಬನ್ನಿ ಎಂದು ಸೋಫಾದಲ್ಲಿ ಕೂರಲು ಹೇಳಿದಳು . ಲಿವಿಂಗ್ ರೂಮಲ್ಲಿ ಬಿಳಿಯ ಹುಡುಗನ ಜೊತೆಗೆ ಮಂಜುನ ಭಾವಚಿತ್ರವಿತ್ತು . ಅದನ್ನು ನೋಡಿದ ಮೇಲೆ ವಿಳಾಸ ಸರಿಯಾಗಿದೆ ಎಂಬುದು ಖಚಿತವಾಯಿತು. ಒಳಗೆ ಹೋದ ಅವಳು ಇನ್ನಾರನ್ನೋ ಕರೆಯುತ್ತಿದ್ದಳು ಅಷ್ಟರಲ್ಲಿಯೇ ಇಳಿವಯಸ್ಸಿನ ಬಿಳಿ ಗಂಡಸರೊಬ್ಬರು ಮಹಡಿಯಿಂದ ಕೆಳಗೆ ಬಂದರು . "ಹಲೋ" ಎಂದೆ ಅವರೂ ತಿರುಗಿ "ಹಲೋ"ಎಂದರು. ನಾನು ಮಂಜುನನ್ನು ನೋಡಲು ಬಂದಿರುವೆ ಅವಳನ್ನು ಸ್ವಲ್ಪ ಕರೆಯುತ್ತೀರಾ ಎಂದು ಇಂಗ್ಲೀಷಿನಲ್ಲಿ ಕೇಳಿದೆ " ಅವಳು ಇಲ್ಲಿ ಇಲ್ಲ " ಎಂದರು. ನಾನು ಇನ್ನೊಮ್ಮೆ ‘ಅವಳ್ಯಾರು ಎಂಬುವಂತೆ’ ಅವಳ ಭಾವಚಿತ್ರದತ್ತ ನೋಡಿದೆ "ಅವನು ನನ್ನ ಮಗ ಮತ್ತು ಅವಳು ನನ್ನ ಸೊಸೆ , ಇಬ್ಬರೂ ಈ ಲೋಕದಲ್ಲಿ ಇಲ್ಲ . ಬೋಥ್ ಆರ್ ಡೆಡ್ "ಎಂದರು . ನನಗೆ ದೊಡ್ಡ ಆಗಾಧವಾಯಿತು . ಅವರು ಹೇಳಿದ್ದನ್ನು ನಂಬಲು ನನ್ನ ಕಿವಿಗಳು ಒಪ್ಪಲಿಲ್ಲ. ಅವರನ್ನು ಇನ್ನೇನೋ ಕೇಳಬೇಕೆನಿಸಿತು. ಆದರೆ ಅವರ ಭಾವದಿಂದ ಗೊತ್ತಾಯಿತು , ಅವರಿಗೆ ಅದರ ಬಗ್ಗೆ ಮಾತನಾಡಲು ಇಷ್ಟ ಇಲ್ಲವೆಂದು . ಮಾತನಾಡಿದ್ದಕ್ಕೆ ಧನ್ಯವಾದಗಳನ್ನು ಹೇಳಿ ಭಾರವಾದ ಹೃದಯದಿಂದ ಹೊರಗೆ ಬಂದೆ . ಮನಸು ಕೇಳತೊಡಗಿತು - ' ಮಂಜು ಈ ಲೋಕದಲ್ಲಿ ಇಲ್ಲವೆಂದರೆ ನನಗೆ ಭೇಟಿಯಾಗಿ ಮಾತನಾಡಿದವಳು ಯಾರು ? ಅವಳ ತದ್ರೂಪದಂತೆ ಇದ್ದಿದ್ದವಳು ಯಾರು ? ಈ ಮನೆಯ ವಿಳಾಸ ಕೊಟ್ಟವರು ಯಾರು ? ಇವಳು ಯಾರು? ವೊ ಕೌನ್ ಥಿ ?’ (ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ ) ~ ಶಿವ ಮೇಟಿ
ಗಾಯತ್ರಿ ಸೂಕ್ತ
ಗಾಯತ್ರಿ ಸೂಕ್ತ – ದ ರಾ ಬೇಂದ್ರೆ
ಸಂಯೋಜನೆ, ಗಾಯನ : ಅಮಿತಾ ರವಿಕಿರಣ್
ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ ಕನ್ನಡ ಕಾವ್ಯ ಲೋಕಕ್ಕೆ ಶ್ರೇಷ್ಠ ಕವಿಗಳನ್ನು ಕಾಣಿಸಿದೆ. ಕೆಎಸ್ಎನ್ ಮತ್ತು ದರಾ ಬೇಂದ್ರೆಯವರನ್ನು ಸ್ಮರಿಸಿರಿವುದು ಸೂಕ್ತವಾಗಿದೆ.
ಭಾರತಾಂಬೆಯ ಮತ್ತು ಅವಳ ತನುಜಾತೆಯಾದ ಕರ್ನಾಟಕ ಮಾತೆಯನ್ನು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೊಂಡಾಡಿದ ವಿಜಯ ಲಕ್ಷ್ಮಿ ಅವರಿಗೆ ಸ್ವಾಗತ. ನಿಮ್ಮ ಬರಹ ಹಿಂದೆ ಕಂಡ ನೆನಪಿಲ್ಲ. ಮೇಟಿ ಅವರು ಈ ಎರಡನೇ ಭಾಗದಲ್ಲಿ ಕಥೆಯಲ್ಲಿನ ನಿಗೂಢತೆಯನ್ನು ಹೆಚ್ಚಿಸಿ ಜೊತೆಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತಿಸಿದ್ದಾರೆ. ಅಮಿತ ಹಾಡಿದ ಸುಶ್ರಾವ್ಯ ಗೀತೆ ಬೇಂದ್ರೆ ಅವರ ಇನ್ನೊಂದು ಗೀತೆ “ಇಳಿದು ಬಾ ತಾಯಿ” ಯನ್ನು ನೆನಪಿಗೆ ತಂದಿದೆ. ತಾಯಿಗೆ ಅದೆಷ್ಟು ಹೆಸರು! ಅದೆಷ್ಟು ಸಾಮರ್ಥ್ಯಗಳು!
LikeLike
ಗಣರಾಜ್ಯೋತ್ಸವದಂದು ಭಾರತಾಂಬೆ – ಕನ್ನಡಾಂಬೆಯರಿಗೆ ನಮನ ಸಲ್ಲಿಸಿದ ವಿಜಯಲಕ್ಷ್ಮಿ ಅವರ ಕವನ ಸರಳ ಸುಂದರ.
ಮೇಟಿಯವರ ಕಥೆ ಹಿಂದೆ ಹೇಳಿದಂತೆ “ತಲಾಶ್” ದಿಕ್ಕಿನಲ್ಲಿ ಸಾಗಿದ್ದರೂ ‘ಫಿಲ್ ಇಂದ ಬ್ಲ್ಯಾಂಕ್ಸ್ ‘ ಏನು ಎಂಬ ಕುತೂಹಲ ತಣಿದಿಲ್ಲ.
ಅಮಿತಾ ಅವರ ಗಾಯನ ಘನ ಗಂಭೀರ ಹಾಗೂ ಶಕ್ತಿಯತ. ಕವನದ ಭಾವಕ್ಕೆ ತಕ್ಕಂತೆ ಧ್ವನಿಯನ್ನು ಬದಲಿಸುತ್ತಾ ಹಾಡುವ ಅವರ ಶೈಲಿ ಕವನವನ್ನು, ಕೇಳುಗರನ್ನು ಇನ್ನೊಂದು ಮಜಲಿಗೆ ಏರಿಸುತ್ತದೆ.
– ರಾಂ
LikeLike
ಧನ್ಯವಾದಗಳು.🙏
LikeLike
ಈ ವಾರದ ‘ಅನಿವಾಸಿ’ ಮತ್ತೊಂದು ವೈಶಿಷ್ಠ್ಯಪೂರ್ಣ ಸಂಚಿಕೆ! ಪ್ರಾರಂಭದಲ್ಲೇ ಪರ್ಣ-ಪುಷ್ಪಗಳಿಂದಲೇ ತಿರಂಗಾದ ವಿನ್ಯಾಸ ಗಣರಾಜ್ಯ ದಿನವನ್ನು ನೆನಪಿಸಿದೆ. ಅಶೋಕಚಕ್ರವನ್ನು ಏಕೈಕ ನೀಲಿ ಪಕಳೆ ಪ್ರತಿನಿಧಿಸಿದ್ದು ಕಲಾಕಾರನ ಕುಶಲತೆಗೆ ಕಳಶವಿಟ್ಟಂತಿದೆ! ಅದಕ್ಕೆ ಸಾಟಿಯಾಗಿ ತ್ರಿವಿಧದ ಪದಾರ್ಥಗಳು, ಅವುಗಳ ಸುತ್ತ ಸುಂದರ ಘನವಾದ ಸಂಪಾದಕೀಯ. ವಿಜಯಲಕ್ಷ್ಮಿಯವರ ದೇಶಭಕ್ತಿಯ ಕವನ ‘ಭಾಳ’ ಚಂದ. ದೇಶದ್ರೋಹಿಗಳ ಸೇಡು ತೀರಿಸುವ ಪಣತೊಟ್ಟವರು ಕಾಳಭೈರವದ shade ತೋರಿಸುವ ಶೇಡಬಾಳರ ಕೆಚ್ಚು, ಚೆನ್ನಾಗಿ ಮೂಡಿ ಬಂದಿದೆ!
ಬರಿ ‘ಫೋಟೋದಲ್ಲಾದರೂ ಮೊಗವ ತೋರೇ, ಬಾರೆ ಮಂಜುತಾಯೆ’ ಅಂತ ಈ ವಾರ ಸಮಾಧಾನ ಪಟ್ಟುಕೊಳ್ಳಬೇಕು ಮೇಟಿಯವರ ‘ಸಿಲ್ ಸಿಲಾ’ ಥ್ರಿಲ್ಲರ್ ಓದುಗರು, ಸೀಟಿನ ತುದಿಗೆ ಕೂತಿರುವವರು! ಇವೆರಡಕ್ಕೂ ಬ್ಯಾಲನ್ಸ್ ಮಾಡಲೇನೋ ಎಂಬಂತೆ ಅಮಿತಾ ಅವರ ಬೇಂದ್ರೆ ಅನುಭಾವಿ ಗಾಯತ್ರಿ ಸೂಕ್ತದ ಸುಶ್ರಾವ್ಯ ಗಾಯನ ದೈವೀ ಅನುಭವ ಕೊಡುತ್ತದೆ. ಶ್ರೀವತ್ಸ ದೇಸಾಯಿ
LikeLike
ಗಣರಾಜ್ಯೋತ್ಸವದ ಸಂಚಿಕೆಯನ್ನು ಗೌರಿಯವರು ಸುಂದರವಾಗಿ ಹೊರತಂದಿದ್ದಾರೆ. ವಿಜಯಲಕ್ಷ್ಮಿಯವರಿಗೆ ಸ್ವಾಗತ. ಸರಳ ಕವನ. ಮೇಟಿಯವರ ಧಾರಾವಾಹಿಯ ಮುಂದಿನ ಕಂತನ್ನು ಎದುರು ನೋಡುತ್ತಿದ್ದೇನೆ. ಅಮಿತಾ ಅವರು ಬೇಂದ್ರೆಯವರ ಕ್ಲಿಷ್ಟದ ಕವನವನ್ನು ಬಹುಸುಂದರವಾಗಿ ಹಾಡಿದ್ದಾರೆ. ಕೆ ಎಸ್ ಎನ್ ಮತ್ತು ಬೇಂದ್ರಯವರನ್ನು ಮತ್ತು ದೇಶವನ್ನೂ ನೆನೆಯುತ್ತ ವೀಕೆಂಡ್.
ಕೇಶವ
LikeLike