ಕವನ ಮತ್ತು ಬದುಕು ಬದಲಿಸಿದ ಪುಸ್ತಕ.

ಆತ್ಮೀಯ ಓದುಗರೇ, 
ಈ ವಾರ ತಮ್ಮ ಓದಿಗೆ ಶ್ರೀಯುತ ವಿಜಯನರಸಿಂಹ ಅವರು ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಕುರಿತು ಬರೆದ ಕವಿತೆ ''ಸಿದ್ಧ ಪುರುಷ''.
ಮತ್ತು ಬದುಕು ಬದಲಿಸಿದ ಸರಣಿಗೆ ಅರ್ಪಿತಾ ಅಭಿರಾಮ ಅವರು ಇದೆ ಮೊದಲ ಬಾರಿಗೆ ಅನಿವಾಸಿಯಲ್ಲಿ ಬರೆದಿದ್ದಾರೆ. 
ಈವಾರದ ಎರಡೂ ಬರಹಗಳು ಚುಟುಕಾಗಿದ್ದರೂ ಚುರುಕಾಗಿವೆ. 
ಇದು ಅನಿವಾಸಿ ಸಂಪಾದಕಿಯಾಗಿ ನಾನು ನಿರೂಪಿಸುತ್ತಿರುವ ಕೊನೆಯ ಸಂಚಿಕೆ, ನನ್ನ ಸಂಪಾದಕತ್ವದ ಅವಧಿಯಲ್ಲಿ ಕಾಲಕಾಲಕ್ಕೆ ಅಕ್ಷರ ಬೊಕ್ಕಸಕ್ಕೆ ದೇಣಿಗೆ ಕಳಿಸಿ ಅಕ್ಷಯವಾಗಿಟ್ಟ ಎಲ್ಲ ಸಹೃದಯರಿಗೆ ಧನ್ಯವಾದಗಳು. ಮುಂದಿನ ವಾರದಿಂದ ಶ್ರೀಮತಿ ಗೌರಿ ಪ್ರಸನ್ನ ಅವರು ಅನಿವಾಸಿಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಆದರದ ಸ್ವಾಗತ. ಅವರ ಸಾರಥ್ಯದಲ್ಲಿ ಅನಿವಾಸಿಯ ಅಕ್ಷರತೇರು ಮೆರೆಯಲಿ ಎಂಬ ಸದಾಶಯದೊಂದಿಗೆ, ಈ ವಾರದ ಸಂಚಿಕೆಗೆ ತಮಗೆಲ್ಲ ಸ್ವಾಗತ. 
-ಸಂಪಾದಕಿ 

ಸಿದ್ಧ ಪುರುಷ

-ವಿಜಯನರಸಿಂಹ

ಹೆತ್ತ ಮಕ್ಕಳ ಹಸಿವನು ನೀಗಿಸಲು ಕಷ್ಟ 
ಎಂದರು ಹೆತ್ತವರು 

ನಮ್ಮ ಬಳಿ ಕಳಿಸಿ, ಅನ್ನದ ಅಕ್ಷಯವಿದೆ
ಎಂದು ಕೈಬೀಸಿ ಕರೆದರು 

ಅನ್ನಕ್ಕೆ ಸಾಕಾಗುತ್ತದೆ, ವಸನಕ್ಕೆ ಕಾಸಿಲ್ಲ
ಮಕ್ಕಳ ಮೈ-ಮಾನವ ಮುಚ್ಚಲಾರೆವು ಎಂದರು

ನಮ್ಮ ಬಳಿ ಕಳಿಸಿ ಮಾನಕ್ಕೆ ತಕ್ಕಂತೆ 
ಮಿತಿಗೆ ಮೀರದಂತೆ ಪವಿತ್ರದ ಸಮವಸ್ತ್ರವ ತೊಡಿಸಿ
ನಿತ್ಯ ಮೈ ಮನಸು ಶುಚಿಯಾಗಲಿದೆ ಎಂದು 
ಮನಬಿಚ್ಚಿ ಕರೆದರು 

ಅಸನಕ್ಕೆ, ವಸನಕ್ಕೆ ಸಾಕಾದೀತಷ್ಟೆ, ವಿದ್ಯೆಗಿಲ್ಲ 
ನಮ್ಮಲ್ಲಿ ವ್ಯವಸ್ಥೆಯಿಲ್ಲ, ಕಲಿಸುವವರಿಲ್ಲ ಎಂದರು

ನಮ್ಮ ಬಳಿ ಕಳಿಸಿ, ಜ್ಞಾನ ದೇಗುಲವು ಇಲ್ಲಿದೆ 
ಶಿಕ್ಷಣದಿಂದ ಬದುಕು ಹಸನಾಗಲಿದೆ ಎಂದು
ಅಭಯಕೊಟ್ಟು ಕರೆದರು

ಕಾಯಕದಲಿ ಕೈಲಾಸ ಕಂಡು 
ಅನ್ನ, ಅರಿವೆ, ಅಕ್ಷರದ ತ್ರಿದಾಸೋಹದ
ಹರಿಕಾರನಾಗಿ ಸಿದ್ಧಗಂಗೆಯ ಸಿದ್ಧಪುರುಷನಾದ
ಗುರುವೆ ಇದೊ ನಿಮಗೆ ಮನ ಬಾಗಿ ವಂದನೆ!

ಬದುಕು ಬದಲಿಸಿದ ಪುಸ್ತಕ

-ಶ್ರೀಮತಿ ಅರ್ಪಿತಾ ಅಭಿರಾಮ್

(ಅರ್ಪಿತಾ ಮೂಲತಃ ಶಿವಮೊಗ್ಗೆಯವರು, ಎಂ. ಟೆಕ್ ಪದವೀಧರೆಯಾದ ಇವರು ಪ್ರಸ್ತುತ ಬೆಲ್ಫಾಸ್ಟ್ ನಗರದಲ್ಲಿ ಪತಿ ಅಭಿರಾಮ್ ಮತ್ತು ಮಗಳು ಆರಭಿಯೊಂದಿಗೆ ವಾಸವಾಗಿದ್ದಾರೆ. ಮಧುರ ಕಂಠದ ಗಾಯಕಿ, ಸಾಹಿತ್ಯ ಪ್ರೇಮಿ.ಸಂ)
ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದರೆ ಅದು ಬಹಳ ಕಷ್ಟ ಏಕೆಂದೆರೆ ನನ್ನ ಬದುಕನ್ನ ರೂಪಿಸಿದ ಪುಸ್ತಕಗಳು ಅನೇಕ. ಅವಗಳಲ್ಲಿ ಒಂದನ್ನು ಹೇಳಲೇಬೇಕು ಅಂದರೆ ಅದು'ಯೋಗಿಯ ಆತ್ಮಕಥೆ'.
ಬಹುಶಃ ನಾನು ಹತ್ತು ವರ್ಷದವಳಿರುವಾಗ ಆ ಪುಸ್ತಕದ ಕೆಲವು ಪುಟಗಳನ್ನ ನನ್ನ ಮಾವನ ಮನೆಯಲ್ಲಿ ಓದಿದ್ದೆ. ಆಗಲೇ ಅದು ನನ್ನ ಮನದ ಮೇಲೆ ವಿಶೇಷವಾದ ಛಾಪನ್ನು ಬಿಟ್ಟಿತ್ತು.
ನಂತರ ನಾನು ಓದು ಮುಗಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಒಂದಷ್ಟು ಸಮಯ ಖಿನ್ನತೆಗೆ ಒಳಗಾಗಿದ್ದೆ. ಜೀವನ ನಿರರ್ಥಕ ನೀರಸ ಎನಿಸುತ್ತಿತ್ತು. ಉಣ್ಣು, ತಿನ್ನು, ಮಲಗು ಮತ್ತೆ ಕೆಲಸಕ್ಕೆ ಹೋಗು ಬರೀ ಇಷ್ಟೇನಾ ಜೀವನ ಎಂದೆನಿಸುತ್ತಿತ್ತು. ಎಲ್ಲ ಕಡೆ ಸಿಕ್ಕು ಸುಳಿಗಳು ಬಂಧನಗಳೇ ಕಾಣುತ್ತಿದ್ದವು. ಒಂದುಕಡೆ ಏನೋ ಸಂತೋಷ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಮಾಯ. ಯಾವುದೂ ಶಾಶ್ವತವಲ್ಲ ಎಂಬ ಖಾಲಿ ಭಾವ ಆವರಿಸುತ್ತಿತ್ತು. 
ಆ ಸಮಯದಲ್ಲಿ 'ಯೋಗಿಯ ಆತ್ಮಕಥೆ' ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ಓದಲು ಶುರುಮಾಡಿದೆ. ಆ ಓದು ನಾನು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು. ಜೀವನದ ಹಲವು ಆಯಾಮಗಳನ್ನೂ ಕೆಲವು ನಿತ್ಯ,ನಿರಂತರ ಅಭ್ಯಾಸಗಳಿಂದ ಪರಿಶೋಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿತು. 
ಅಂದು ಪ್ರಾರಂಭಿಸಿದ ಆ ಅಭ್ಯಾಸ, ಸಾಧನಾ ಪಥ ಇಂದಿಗೂ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಒಳ್ಳೆಯ ಪರಿಣಾಮ ಬೀರುತ್ತಲೇ ಬಂದಿದೆ. 
ಇಂದಿಗೂ ಯಾವುದೇ ಗೊಂದಲದಲ್ಲಿದ್ದಾಗ ಆ ಪುಸ್ತಕದ ಪುಟವೊಂದನ್ನು ತೆರೆಯುತ್ತೇನೆ, ಪ್ರತಿಬಾರಿಯೂ ಮನಸಿಗೆ ಚೈತನ್ಯವನ್ನು ತುಂಬಿ ಸಮಸ್ಯೆ ಎದುರಿಸುವ ಉತ್ಸಾಹ ಧೈರ್ಯ ಆ ಪುಸ್ತಕ ತುಂಬುತ್ತದೆ. 
 

3 thoughts on “ಕವನ ಮತ್ತು ಬದುಕು ಬದಲಿಸಿದ ಪುಸ್ತಕ.

 1. ಹಸಿವಿಗೆ, ಮಾನಕ್ಕೆ, ವಿದ್ಯೆಗೆ ವ್ಯವಸ್ಥೆಯನ್ನು ಕಲ್ಪಿಸಿ ಲಕ್ಷಾಂತರ ಕುಟುಂಬಗಳನ್ನು ಜತನದಿಂದ ಉದ್ಧರಿಸಿದ ಸಿದ್ದಗಂಗಾ ಸ್ವಾಮಿಗಳ ಕಾವ್ಯಾಂಜಲಿಯನ್ನು ವಿಜಯ ನಾರಸಿಂಹ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ.

  ಅರ್ಪಿತಾ ಅವರಿಗೆ ಸುಸ್ವಾಗತ. ಯೋಗಿಯ ಆತ್ಮಕಥೆಯನ್ನು ಓದಲು ಆರಂಭಿಸಿ ಮೊದಲ ಅಧ್ಯಾಯಕ್ಕೇ ಕೈಬಿಟ್ಟಿದ್ದೇನೆ. ನಿಮ್ಮ ಲೇಖನವನ್ನು ಓದಿದ ಮೇಲೆ ಇನ್ನೊಂದು ಸಲ ಪ್ರಯತ್ನಿಸುವೆ. ಇದು ಸ್ಟೀವ್‌ ಜಾಬ್ನನ ಅತ್ಯಮತ ಪ್ರೀತಿಯ ಪುಸ್ತಕವಾಗಿತ್ತು.

  – ಕೇಶವ

  Like

 2. ಸಿದ್ದಗಂಗಾ ಸ್ವಾಮೀಜಿಗಳಿಗೆ ನಮನ ಸಲ್ಲಿಸುವ ಕವನ ಮನ ಮುಟ್ಟುವಂತಿದೆ.
  ಸಾವಿರಾರು ಬಡ ಮತ್ತು ನಿರ್ಗತಿಕ ಮಕ್ಕಳು ಈ ಮಠದಲ್ಲಿ ಉಂಡು, ವಿದ್ಯಾವಂತರಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ವಾದದ್ದು ಶಿವಕುಮಾರ ಸ್ವಾಮೀಜಿ ಅವರಿಂದ.
  ನನ್ನ ಮಾಧ್ಯಮಿಕ ಶಾಲೆಯ ಎಲ್ಲ ಶಿಕ್ಷಕರು ಈ ರೀತಿಯವರಾಗಿದ್ದರು. ಆದರ್ಶ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡಿದ್ದರು.
  ಎರಡನೇ ಬರಹ ಯಾವ ಸಂದರ್ಭದಲ್ಲಿ ಒಂದು ಪುಸ್ತಕ ಲೇಖಕಿಯ ಮೇಲೆ ಪರಿಣಾಮ ಬೀರಿತು ಎಂದು ಹೇಳುತ್ತದೆ. ಪುಸ್ತಕದ ಯಾವ ಅಂಶಗಳು ಅಥವಾ ಕಾರಣಗಳು ಎಂದು ಹೇಳುವುದಿಲ್ಲ. ಆ ಕಾರಣಕ್ಕೆ ತುಂಡರಿಸಿದ ಬರಹವೇನೋ ಅನ್ನಿಸಿತು.
  ಅಮಿತಾಗೆ ಯಶಸ್ವೀ ನಿರ್ವಹಣೆ ಗಾಗಿ ಅಭಿನಂದನೆಗಳು. ಗೌರಿಯ ವರಿಗೆ ಸ್ವಾಗತ. ಅವರ ಸಾಹಿತ್ಯ ವಿದ್ವತ್ತಿನ ಝಲಕು ಈ ಮೂಲಕ ನಮಗೂ ತೆರೆದುಕೊಳ್ಳಲಿ.

  Like

 3. ಈ ವಾರದ ಎರಡು ಕೊಡುಗೆಗಳು ‘ಚಿಕ್ಕವು‘ ಏನಲ್ಲ. ಸಿದ್ಧಗಂಗಾ ಸ್ವಾಮಿಗಳ ಮೂರನೆಯ ವರ್ಷಾಂತಿಕ ಹತ್ತಿರ ಬಂದಂತೆ ಬರೆದ ವಿಜಯನರಸಿಂಹರ ಕವನ ಸರಳ ಸುಂದರವಾಗಿದೆ, ಭಾವಪೂರ್ಣವಾಗಿದೆ, ಅರ್ಥಗರ್ಭಿತ ಸಹ. ಆ ಮಹಾನ್ ಜೀವಕ್ಕೆ ಸಾತ್ವಿಕ ಶ್ರದ್ಧಾಂಜಲಿ ಇದು. ಅರ್ಪಿತಾ ಅಭಿರಾಮ್ ಅವರ ಮೊದಲ ಲೇಖನ ಅನಿವಾಸಿಗೆ. ಅವರಿಗೆ ಹೃತ್ಪೂರ್ವಕ ಸ್ವಾಗತ. ತಮ್ಮ ಎಳೆಯ ವಯಸ್ಸಿನ ಮನಸ್ಸಿನ ಮೇಲೆ ಪರಿಣಾಮ ಬೀರಿದ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ಸರಳ ಶೈಲಿಯಲ್ಲಿ ಬರೆದು ಬಿಚ್ಚಿಟ್ಟಿದ್ದಾರೆ. ಯಾರೇ ಆಗಲಿ, ಯಾವುದೇ ವಸ್ಸಿನಲ್ಲೇ ಆಗಲಿ ಮಾನಸಿಕ ಗೊಂದಲ, ಪೇಚಾಟಗಳಲ್ಲಿ ಸಿಕ್ಕಿಕೊಳ್ಳುವುದು ಸಹಜ. ಆಗ ಸಹಯವಾಗುವ ಪುಸ್ತಕದ ಮಾತುಗಳು ಜೀವನಕ್ಕೇ ತಿರುವು ಕೊಡುವುದರಲ್ಲಿ ಸಂದೇಹವಿಲ್ಲ. ಇನ್ನೊಮ್ಮೆ ಅದರ ಬಗ್ಗೆ ವಿವರವಾಗಿ ಬರೆಯಬಹುದೇನೋ. ಬಹು ಮುಖ ಪ್ರತಿಭೆಗೆ ಅಭಿನಂದನೆಗಳು.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.