ವೈಚಾರಿಕ ಲೇಖನ ಮತ್ತು ಹೊಸ ಬರಹಗಳ ಸರಣಿ ‘ಬದುಕು ಬದಲಿಸಿದ ಪುಸ್ತಕ’.

ಆತ್ಮೀಯ ಓದುಗರೇ, 
ಕಳೆದ ವಾರ ಪ್ರಕಟಗೊಂಡ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಲೇಖನದ ಮೊದಲ ಭಾಗವನ್ನು ತಾವೆಲ್ಲರೂ ಓದಿ ಮೆಚ್ಚಿಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದ್ದೀರಿ. ನೀವೆಲ್ಲರೂ ಕಾಯುತ್ತಿರುವ ಈ ಲೇಖನದ ಎರಡನೇ ಭಾಗ ಈ ವಾರ ಪ್ರಕಟವಾಗುತ್ತಿದೆ. ಜೊತೆಗೆ ಕೆಲ ವಾರಗಳ ಹಿಂದೆ ಓದುಗರಿಗೆ ಅವರ ಮೆಚ್ಚಿನ, ಬದುಕಿನ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡಿದ ಆ ಬದುಕು ಬದಲಿಸಿದ ಪುಸ್ತಕದ ಬಗ್ಗೆ ಕಿರು ಲೇಖನವನ್ನು ಬರೆಯುವಂತೆ ವಿನಂತಿಯನ್ನು ಮನ್ನಿಸಿ ಹಲವಾರು ತಮ್ಮ ಆ ಸರಣಿಯ ಮೊದಲ ಬರಹ ಈ ವಾರ ಪ್ರಕಟವಾಗುತ್ತಿದೆ. ಶ್ರೀರಂಜನಿ ಸಿಂಹ ಅವರು ತಮ್ಮ ಮನಸಿಗೆ ಸಾಂತ್ವನ ನೀಡಿ ಆಶಾಭಾವ ಹೊಮ್ಮಿಸಿದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. 
ಈ ಸರಣಿಗೆ ತಾವೆಲ್ಲರೂ ಬರೆಯಿರಿ. ಈ ರೀತಿಯಲ್ಲಿ ಹೊಸ ಪುಸ್ತಕಗಳ ಬಗ್ಗೆ ನಾವೆಲ್ಲರೂ ತಿಳಿಯುವಂತಾಗಲಿ ಎಂಬ ಆಶಯದೊಂದಿಗೆ 
ಈ ವಾರದ ಓದಿಗೆ ತಮಗಿದೋ ಸ್ವಾಗತ. 
-ಸಂಪಾದಕಿ  

ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ-ಭಾಗ ೨

ಲೇಖಕರು-ಡಾ ಜಿ ಎಸ್ ಶಿವಪ್ರಸಾದ್,ಶೇಫೀಲ್ಡ್ ಯು.ಕೆ

ಉದಾರತೆ, ವೈಚಾರಿಕತೆ, ಮತ್ತು ಸಾಮಾಜಿಕ ಜವಾಬ್ದಾರಿ ಈ ಮೂರು ಏಕ ಕಾಲಕ್ಕೆ ಮೇಳವಿಸಿದ್ದು ೧೨ನೇ ಶತಮಾನದ ಬಸವಕೇಂದ್ರಿತ ಶರಣ ಚಳುವಳಿಯಲ್ಲಿ, ಇವು ಶರಣ ತತ್ವದ ಮೂರು ಮುಖಗಳು ಎಂದು ಜಿ. ಎಸ್. ಎಸ್. ಕರೆದಿದ್ದಾರೆ. ಅವರು ಇದನ್ನು ಮುಂದಕ್ಕೆ ವಿಸ್ತರಿಸಿ ಸಮಾಜದ ಎಲ್ಲ ಸ್ತರಗಳನ್ನು ಸಮಾನವೆಂದು ಪರಿಗಣಿಸಲು ಉದಾರತೆ ಬೇಕು, ವ್ಯವಸ್ಥೆಯೊಳಗಿನ ತಾರತಮ್ಯಗಳನ್ನು ಪ್ರಶ್ನಿಸುವುದಕ್ಕೆ ವೈಚಾರಿಕತೆ ಬೇಕು, ಇದಕ್ಕೆ ಅನುಗುಣವಾಗಿ ಹೊಸ ಸಮಾಜವೊಂದನ್ನು ನಿರ್ಮಿಸಲು ಸಾಮಾಜಿಕ ಜವಾಬ್ದಾರಿ ಬೇಕು ಎನ್ನುತ್ತಾರೆ. ಜಿ.ಎಸ್.ಎಸ್ ಚಿಂತನೆಗಳ ಸಂಗ್ರಹವಾದ 'ಶರಣ ಪಥ' ಎಂಬ ಸಂಕಲನದಲ್ಲಿ ಈ ವಿಚಾರಗಳು ಪ್ರಸ್ತಾಪಗೊಂಡಿವೆ. 

ಈ ವೈಜ್ಞಾನಿಕ ಯುಗದಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಅವಶ್ಯವಾಗಿದೆ. ಅಮೇರಿಕದ 'ನ್ಯಾಸ' ಕೇಂದ್ರದವರು ಉಡಾಯಿಸಿದ ಅಪೋಲೊ ೧೩ ರಾಕೆಟ್ ವಿಫಲಗೊಂಡ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ೧೩ ಎಂಬ ಸಂಖ್ಯೆಯ ಬಗ್ಗೆ ಮೂಢನಂಬಿಕೆಗಳು ಹುಟ್ಟಿಕೊಂಡಿವೆ. ಇಲ್ಲಿಯ ವಸತಿಗಳಲ್ಲಿ, ಬಹು ಅಂತಸ್ತಿನ ಕಟ್ಟಡಗಳಲ್ಲಿ, ಹೋಟೆಲ್ ಕೊಠಡಿಗಳಲ್ಲಿ ೧೩ ಸಂಖ್ಯೆ ಕಾಣೆಯಾಗಿದೆ. ೧೩ ಎಂಬ ಸಂಖ್ಯೆ ದುರದೃಷ್ಟದ ಕುರುಹಾಗಿ ಅದು ಅಮಂಗಳವೆಂದು ಪರಿಗಣಿಸಲಾಗಿದೆ. ಹೀಗೆ ವೈಜ್ಞಾನಿಕವಾಗಿ ಮುನ್ನಡೆದ ಸುಶೀಕ್ಷಿತ ಪಾಶ್ಚಿಮಾತ್ಯ  ದೇಶಗಳಲ್ಲಿ ಮೂಢನಂಬಿಕೆ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿರುವಾಗ ಅಭಿವೃದ್ಧಿ ಗೊಳ್ಳುತ್ತಿರುವ ಮತ್ತು ಧಾರ್ಮಿಕ ನಂಬಿಕೆಗಳಿಂದ ತುಂಬಿರುವ ಭಾರತದಲ್ಲಿ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದ ಮನೆಮಾಡಿಕೊಂಡಿವೆ. ೮೦೦ ವರ್ಷಗಳ ಹಿಂದೆಯೇ ಈ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕ ಮನೋಭಾವವನ್ನು ಜನರಲ್ಲಿ ಬೆಳೆಸುವ ಪ್ರಯತ್ನವನ್ನು ಬಸವಾದಿ ಶರಣರು ಮಾಡಿದ್ದಾರೆ. 
'ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತೆ ಉಂಟೆ'? ಎಂದು ಪ್ರಶ್ನಿಸಿ ಮುಂದಕ್ಕೆ ‘ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿವುದೇ ಮರ್ತ್ಯ ಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎನ್ನುತ್ತಾ ಇಹ-ಪರ ಲೋಕಗಳ ಪರಿಕಲ್ಪನೆಗಳನ್ನು ಶರಣರು ತಿರಸ್ಕರಿಸಿದ್ದಾರೆ. ಇಂದಿನ ದಿನಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚಾಲನೆಯಲ್ಲಿರುವ ಎಷ್ಟೋ ಸಂಗತಿಗಳನ್ನು ನಾವು ನಂಬುವುದೇ ಕಷ್ಟೆ. ಕೆಲವರು ತಮ್ಮ ಆಲೋಚನಾ ಕ್ರಮಕ್ಕೆ, ತಮ್ಮ ಸಿದ್ಧಾಂತಕ್ಕೆ, ರಾಜಕೀಯ ನಿಲುವಿಗೆ ಸರಿದೂಗುವಂತೆ ನಿಜವಾದ ಸಂಗತಿಗಳನ್ನು ತಿರುಚಿ ವ್ಯವಸ್ಥಿತವಾಗಿ ಅದನ್ನು ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿ ಪ್ರಚಾರಕ್ಕಾಗಿ ಬಳೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಮಿಥ್ಯ ನುಡಿವುದೇ ಮರ್ತ್ಯಲೋಕ' ಎಂಬ ಬಸವ ತತ್ವದ ಬಗ್ಗೆ ನಾವೆಲ್ಲಾ ಧೀರ್ಘವಾಗಿ ಚಿಂತಿಸಬೇಕಾಗಿದೆ.

'ಭಕ್ತನಿರ್ದ ತಾಣವೇ ದೇವಲೋಕ, ಭಕ್ತನಂಗಳವೇ ವಾರಣಾಸಿ, ದೇಹವೇ ದೇಗುಲ' ಎಂದು ಹೇಳುತ್ತಾ ದೇವಸ್ಥಾನಗಳನ್ನು ಶರಣರು ನಿರಾಕರಿಸಿದ್ದಾರೆ. ದೇವಸ್ಥಾನದ ಒಂದು ಚೌಕಟ್ಟಿನಲ್ಲಿ ಮೂರ್ತವಾದ ದೇವರನ್ನು ಧಿಕ್ಕರಿಸಿ, ಬಯಲೆಂಬ ಮುಕ್ತ ಪರಿಸರದಲ್ಲಿ, ನಿರಾಕಾರದಲ್ಲಿ, ಇಷ್ಟಲಿಂಗದಲ್ಲಿ ದೇವರನ್ನು ಕಾಣುವ ಪರಿಕಲ್ಪನೆಯನ್ನು ಒದಗಿಸಿದ್ದಾರೆ. ನಾವು ಆಚರಿಸುವ ಕೆಲವು ಪೂಜೆ ಪುನಸ್ಕಾರಗಳ, ಧಾರ್ಮಿಕ ವಿಧಿಗಳ ಬಗ್ಗೆ ಆಲೋಚಿಸಿ; 
 

ಕಲ್ಲ ನಾಗರ ಕಂಡರೆ ಹಾಲನೆರೆಯಂಬರು 
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ 
ಉಂಬ ಜಂಗಮ ಬಂದರೆ ನಡೆಯಂಬರು 
ಉಣ್ಣದ ಲಿಂಗಕೆ ಬೋನವ ಹಿಡಿ ಎಂಬರಯ್ಯ 

ಎನ್ನುತ್ತಾ ನಮ್ಮ ಆಚರಣೆಗಳನ್ನು ವಿಮರ್ಶಿಸಿದ್ದಾರೆ. ಇನ್ನು ಕೆಲ ಶರಣರು ವೇದ ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು , ಪಾಪ -ಪುಣ್ಯ ಕರ್ಮವೆಂಬ ಕಲ್ಪನೆಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ನಮ್ಮ ಸಮಾಜದಲ್ಲಿ ಅರ್ಥಹೀನವಾದ ಅವೈಜ್ಞಾನಿಕ ನಂಬಿಕೆಗಳು ಅನುಷ್ಠಾನ ದಲ್ಲಿದ್ದು ಈ ವೈಜ್ಞಾನಿಕ ಯುಗದಲ್ಲಿ, ಬದಲಾಗುತ್ತಿರುವ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಾಗಿದೆ. ಧರ್ಮದ ನೆಪದಲ್ಲಿ ಮೂಡುವ ಭಾವೋದ್ವೇಗವನ್ನು ಪಕ್ಕಕ್ಕಿಟ್ಟು ಚಿಂತಿಸಬೇಕಾಗಿದೆ.

'ಎನಗಿಂತ ಕಿರಿಯರಿಲ್ಲಯ್ಯ ಮತ್ತು ತನ್ನ ಬಣ್ಣಿಸಬೇಡ'ಎಂಬ ವಚನದ ಸಾಲುಗಳು ತನ್ನ ಪ್ರಸ್ತುತತೆಯನ್ನು ಇಂಗ್ಲೆಂಡಿನಲ್ಲಿ ವಿಶೇಷವಾಗಿ ಕಂಡುಕೊಂಡಿದೆ. ಈ ಭಾವನೆಗಳನ್ನು ನಾವು ಅನಿವಾಸಿಗಳು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ವೃತ್ತಿಯ ಪರಿಸರದಲ್ಲಿ ಕಿರಿಯರು ಹಿರಿಯರಿಗೆ 'ಸರ್' ಎನ್ನುತ್ತಾ ತಲೆಬಾಗಿಸುವುದಿಲ್ಲ, ಅತಿಯಾದ ವಿನಮ್ರತೆ ಮತ್ತು ವಿಧೇಯತೆಗಳನ್ನು ತೋರುವುದು ಇಲ್ಲಿ ಕಂಡುಬರುವುದಿಲ್ಲ. ಹಿರಿಯರು ಅದನ್ನು ನಿರೀಕ್ಷಿಸುವುದೂ ಇಲ್ಲ. ಒಂದು ಕಛೇರಿಯಲ್ಲಿ ಮೇಲಧಿಕಾರಿಯೂ ಸಾಮಾನ್ಯ ಉದ್ಯೋಗಿಯೂ ಬಿಡುವಿನ ವೇಳೆಯಲ್ಲಿ ಒಟ್ಟಿಗೆ ಕುಳಿತು ಕಾಫಿ ಹೀರುವುದು, ಹರಟುವುದು ಮತ್ತು ಎಲ್ಲರು ಒಂದು ತಂಡದಂತೆ ಕೆಲಸ ಮಾಡುವುದನ್ನು ಕಾಣಬಹುದು. ಇವರ ವ್ಯಕ್ತಿತ್ವದಲ್ಲಿ ದರ್ಪವಾಗಲಿ ಅಥವಾ ಆಡಂಬರವಾಗಲಿ ಇರುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತು ನೋಬಲ್ ಪ್ರಶಸ್ತಿ ಪಡೆದ ಪ್ರಖ್ಯಾತ ನಾಯಕರು, ಸಾಹಿತಿಗಳು, ವಿಜ್ಞಾನಿಗಳು ಬಾಳಿ ಬದುಕಿದ್ದಾರೆ. ಇವರು ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹೆಗ್ಗಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಹೊಗಳಿಕೆ ಇವರಿಗೆ ಸಂಕೋಚದ ವಿಚಾರವಾಗಿರುತ್ತದೆ. ಈ ವಿನಯಶೀಲರು 'ಎನಗಿಂತ ಕಿರಿಯರಿಲ್ಲಯ್ಯ' ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ. 'ತನ್ನ ಬಣ್ಣಿಸಬೇಡ' ಎಂಬ ಸಾಲುಗಳ ಬಗ್ಗೆ ಚಿಂತಿಸುವಾಗ ಪ್ರಪಂಚದ ನಾನಾ ದೇಶಗಳಲ್ಲಿ ನೂರಾರು ವರ್ಷಗಳಿಂದ ರಾಜ ಮಹಾರಾಜರಿಗೆ ಹೊಗಳು ಭಟ್ಟರು ಇದುದ್ದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಿನ ಕಾಲಕ್ಕೆ ಆ ಹೊಗಳುಭಟ್ಟರ ಹೊಗಳಿಕೆಗಳ ಹಳೆಯ ಸಂಪ್ರದಾಯವನ್ನು ರಾಜಕಾರಣಿಗಳ ಅನುಯಾಯಿಗಳು ಉಳಿಸಿಕೊಂಡಿದ್ದಾರೆ. ಇದನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು

'ಎನ್ನವರೊಲಿದು ಹೊನ್ನ ಶೂಲದಲಿ ಇಕ್ಕಿದರೆನ್ನ 
ನಿಮ್ಮ ಮನ್ನಣೆಯೇ ಅಲುಗಾಗಿ ತಾಕಿತ್ತಲ್ಲಾ 
ಅಯ್ಯ ನೊಂದೆನು ಸೈರಿಸಲಾರೆನು 
ನೀ ನನಗೆ ಒಳ್ಳಿದನಾದರೆ 
ಎನ್ನ ಹೊಗಳತೆಗೆ ಅಡ್ಡ ಬಾರ'

ಎನ್ನುವ ಈ ಬಸವಣ್ಣನವರ ಸರಳ ವಚನ ಜನ ಸಾಮಾನ್ಯರಿಂದ ಹಿಡಿದು ಅಧಿಕಾರದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ಎಲ್ಲರಿಗೂ ಪ್ರಸ್ತುತವಾದ ಸಂದೇಶ ಎನ್ನಬಹುದು. ಒಮ್ಮೆ ‘ಸೂರ್ಯ ಮುಳುಗದ ಸಾಮ್ರಾಜ್ಯ’ವೆಂದು ತಮ್ಮನು ತಾವು ಹೊಗಳಿಕೊಂಡು, ತಮ್ಮ ದೇಶವನ್ನು ಗ್ರೇಟ್ ಬ್ರಿಟನ್ ಎಂಬ ಹೆಸರಿನಲ್ಲಿ ಕರೆದು ಕೊಳ್ಳುತ್ತಿದ್ದ ಇಂಗ್ಲೆಂಡ್ ಈಗ ಕಾಲ ಬದಲಾದಂತೆ ತನ್ನ ಹಿಂದಿನ ತಪ್ಪುಗಳನ್ನು, ಸ್ವಾಭಿಮಾನವನ್ನು ಸಂಕೋಚದಿಂದ ಪಕ್ಕಕ್ಕೆ ತಳ್ಳಿ ಈಗ ವಿನಮ್ರವಾಗಿದೆ. 'ಕಾಯಕವೇ ಕೈಲಾಸ' ಎಂಬ ಬಸವ ತತ್ವ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಷ್ಠಾನದಲ್ಲಿದೆ. ಇಲ್ಲಿ ಎಲ್ಲ ವೃತಿಯೂ ಸಮಾನವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿ ವೃತ್ತಿಗಿಂತ ಅದರ ಹಿಂದೆ ಇರುವ ವ್ಯಕ್ತಿ, ಅವನ ಶ್ರದ್ಧೆ ಮುಖ್ಯವಾಗುತ್ತದೆ. ಇಲ್ಲಿಯ ಜನ ಸಂಭಾಷಣೆಯಲ್ಲಿ ತೊಡಗಿದಾಗ; 'ನೀನು ಯಾವ ವೃತ್ತಿಯಲ್ಲಿದ್ದೀಯಾ? ನಿನಗೆ ಸಂಬಳವೆಷ್ಟು? ಎಂಬ ಪ್ರಶ್ನೆಯನ್ನು ಯಾರು ಯಾರಿಗೂ ಕೇಳುವುದಿಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಹಂಬಲ ಮತ್ತು ಛಲ ಇವು ಇಲ್ಲಿಯ ಬದುಕಿನ ರೀತಿ ನೀತಿಗಳಾಗಿವೆ. 

ಅನಿವಾಸಿಗಳಾದ ನಮಗೆ ಕನ್ನಡ ಮಾತೃಭಾಷೆಯಾದರೆ ಇಂಗ್ಲಿಷ್ ಪರಿಸರದ ಭಾಷೆ. ಹಾಗೆ ನಮ್ಮ ಧರ್ಮ ಹಿಂದೂ ಧರ್ಮವಾದರೆ ಪರಿಸರದ ಧರ್ಮ ಕ್ರೈಸ್ತ ಧರ್ಮವಾಗಿದೆ. ಕ್ರೈಸ್ತ ಧರ್ಮಧ ಕೆಲವು ಬೋಧನೆಗಳನ್ನು ಗಮನಿಸಿದಾಗ ಅಲ್ಲಿ ನಮಗೆ ಬಸವಣ್ಣನವರ ತತ್ವ ಕಾಣಿಸಿಕೊಳ್ಳುತ್ತದೆ. "ದಯವೇ ಧರ್ಮದ ಮೂಲವಯ್ಯ' ಎಂದು ಬಸವಣ್ಣ ಹೇಳಿದ್ದರೆ, ಕ್ರೈಸ್ತ ಧರ್ಮವು, ‘ದೇವರಿಗೆ ಧನ್ಯತೆಯನ್ನು ಸೂಚಿಸು, ಅವನ ದಯೆ ಎಂದೆಂದಿಗೂ ಇರುತ್ತದೆ, ದಯೆ, ನ್ಯಾಯ ತೀರ್ಪುಗಳನ್ನು ಮೀರಿದ್ದು’ ಎಂಬುದಾಗಿ ಸಾರುತ್ತದೆ. ‘ಕ್ರೈಸ್ತ ಧರ್ಮದಲ್ಲಿ ನಿನ್ನ ದೇಹವು ನಿನ್ನ ಪವಿತ್ರ ಚೇತನದ ಮಂದಿರ, ಆ ಚೇತನವನ್ನು ವಿಜೃಂಭಿಸಿ ಆರಾಧಿಸು’ ಎಂದು ಹೇಳಿದರೆ, ಬಸವಣ್ಣನವರು 'ದೇಹವೇ ದೇಗುಲ' ಎಂಬ ಕಲ್ಪನೆಯನ್ನು ಒದಗಿಸಿದ್ದಾರೆ. "ಯಾರಾದರೂ ನಿನ್ನ ಬಲ ಕೆನ್ನೆಗೆ ಹೊಡೆದರೆ ಅವರಿಗೆ ನಿನ್ನ ಎಡಕೆನ್ನೆಯನ್ನು ತೋರಿಸು ಎಂಬ ಸಹನೆಯ ಮಾತನ್ನು ಜೀಸಸ್ ಹೇಳಿದ್ದಾರೆ ಇದೇ ಮಾತನ್ನು;

" ತನಗೆ ಮುನಿದವರಿಗೆ ತಾ ಮುನಿಯಲೇಕೆಯ್ಯಾ 
ತನುವಿನಕೋಪ ತನ್ನ ಹಿರಿಯತನದ ಕೇಡು 
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ 
ನೆರೆಮನೆಯ ಸುಡದು, ಕೂಡಲ ಸಂಗಮದೇವ" 

ಎಂದು ಬಸವಣ್ಣ ಹೇಳುತ್ತಾರೆ. ಎರಡು ಸಾವಿರ ವರುಷಗಳ ಹಿಂದೆ ದೂರದ ಬೆಥ್ಲೆಹೆಮ್ ನಗರದಲ್ಲಿ ಹುಟ್ಟಿದ ಮಹಾನ್ ಪುರುಷ ಜೀಸಸ್ ಮತ್ತು ಅಲ್ಲಿಂದ ಒಂದುಸಾವಿರ ವರುಷಗಳ ನಂತರ ಕರ್ನಾಟಕದಲ್ಲಿ ಹುಟ್ಟಿದ ಮಹಾನುಭಾವಿ ಬಸವಣ್ಣನವರ ತತ್ವಗಳು ಎಷ್ಟು ಸಾದೃಶ್ಯವಾಗಿವೆ ಎನ್ನುವ ವಿಚಾರ ಆಶ್ಚರ್ಯಕರವಾಗಿದೆ. 'ದೇವನೊಬ್ಬ ನಾಮ ಹಲವು' ಎಂದು ಬಸವಣ್ಣ ಹೇಳಿದ್ದರೇ 'ಎಷ್ಟು ಮತಗಳೋ ಅಷ್ಟು ಪಥಗಳು ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. "ಅವರವರ ದರುಶನಕೆ, ಅವರವರ ದೇಶದಲಿ, ಅವರವರಿಗೆಲ್ಲ ಗುರು ನೀನೊಬ್ಬನೇ" ಎಂದು ಮುಪ್ಪಿನ ಷಡಕ್ಷರಿ ಹೇಳಿದ್ದಾರೆ. ಹೀಗೆ ಪ್ರಪಂಚದ ಸಾಧು ಸಂತರ, ಮಹಾಪುರುಷರ ಅನುಭಾವದಲ್ಲಿರುವ ಸಾಮ್ಯ ಗಮನಾರ್ಹವಾದದ್ದು ಮತ್ತು ಎಲ್ಲ ಮತಗಳನ್ನು ಗೌರವದಿಂದ ಸಮಾನವಾಗಿ ಕಾಣುವ ಸಂದೇಶ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಪ್ರಸ್ತುತವಾಗಿದೆ. 

ಇಂಗ್ಲೆಂಡಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೂಡಿದ 'ಸಫ಼್ರಜೆಟ್ ಚಳುವಳಿ' ಚಾರಿತ್ರಿಕವಾಗಿ ಮಹತ್ವವಾದದ್ದು. ೧೯೧೮ ರಲ್ಲಿ ತೀವ್ರವಾದ ಈ ಚಳುವಳಿಯಿಂದ ಸ್ತ್ರೀಯರ ಸ್ಥಾನಮಾನಗಳಿಗೆ ವಿಶೇಷ ಅರ್ಥದೊರಕಿತು. ಸ್ತ್ರೀಯರು ಚುನಾವಣೆಯಲ್ಲಿ ಮತಚಲಿಸುವುದಕ್ಕೆ ಅನುವುಮಾಡಿಕೊಟ್ಟಿತು. ಇತಿಹಾಸದ ಎಲ್ಲ ಹಂತಗಳಲ್ಲಿ ಸ್ತ್ರೀಯರು ಸಮಾಜದಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಯಿತು. ಈ ಆಧುನಿಕ ಯುಗದಲ್ಲೂ ಮೂಲಭೂತವಾದಿ ಧಾರ್ಮಿಕ ಆಲೋಚನೆಯುಳ್ಳ ಕೆಲವು ದೇಶಗಳಲ್ಲಿ ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಮತ್ತು ಮೂಲಭೂತ ಹಕ್ಕುಗಳನ್ನು   ಉಳಿಸಿಕೊಳ್ಳುವುದರ ಬಗ್ಗೆ ಆತಂಕವಿದೆ. ಈ ಹೋರಾಟ ಇನ್ನೂ ನಡೆಯುತ್ತಿದೆ. ಆದರೆ ೮೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸ್ತ್ರೀಯರಿಗೆ ಸಮಾಜದಲ್ಲಿ ಪುರುಷ ಸಮಾನ ಹಕ್ಕುಗಳನ್ನು ಒದಗಿಸಿ ಕೊಟ್ಟರು. ಪೂಜೆ ಮಾಡಲು ಸ್ತ್ರೀ ಅರ್ಹಳಲ್ಲ ಎಂಬ ಪರಿಸ್ಥಿತಿಯಲ್ಲಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ 'ಶರಣ
ಸತಿ-ಲಿಂಗ ಪತಿ' ಎಂಬ ಪರಿಕಲ್ಪನೆಯನ್ನು ಕೊಟ್ಟು ಗಂಡು ಹೆಣ್ಣಿನ ಮಧ್ಯ ಇರುವ ಭೇದಗಳನ್ನು ತೊಡೆದು ಹಾಕಿದರು. 

ಪ್ರಜಾಪ್ರಭುತ್ವದ ತವರೂರಾದ ಇಂಗ್ಲೆಂಡಿನಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ ಯೋಚಿಸುವಾಗ ೮೦೦ ವರ್ಷಗಳ ಹಿಂದೆ ಬಸವಣ್ಣನವರು ಜ್ಯಾತ್ಯಾತೀತವಾದ, ಲಿಂಗ ಬೇಧವಿಲ್ಲದ ವಿಚಾರವಂತರ, ವೇದಿಕೆಯನ್ನು ಕಲ್ಪಿಸಿದ್ದರು, ಅಲ್ಲಿ ಜನಪರ ಸಾಮಾಜಿಕ ಹಾಗು ಆಧ್ಯಾತ್ಮಿಕ ವಿಚಾರಗಳನ್ನು ಅನುಭವ ಮಂಟಪದಲ್ಲಿ ವಿನಿಮಯ ಮಾಡಿಕೊಂಡು ಚರ್ಚಿಸುತ್ತಿದ್ದರು ಎಂಬ ವಿಚಾರ ಅತ್ಯಂತ ಶ್ಲಾಘನೀಯವಾದದ್ದು. ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಅಲ್ಲಿ ಪ್ರಧಾನವಾಗಿದ್ದು ಅದು ಪ್ರಜಾಪ್ರಭುತ್ವದ ಒಂದು ಮಾದರಿಯಾಗಿತ್ತು. ಈ ವಿಚಾರಗಳು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

ದಯೆ, ಕರುಣೆ, ಅನುಕಂಪೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಕಾಯಕದಲ್ಲಿ ಶ್ರದ್ಧೆ, ದಾಸೋಹ, ವಿನಯ ಶೀಲತೆ ಮುಂತಾದ ಉತ್ತಮ ಮೌಲ್ಯಗಳನ್ನು ಬಸವಾದಿ ಶರಣರು ಎತ್ತಿ ಹಿಡಿದಿದ್ದಾರೆ. ಈ ಮೌಲ್ಯಗಳು ಪ್ರಪಂಚದ ಯಾವ ದೇಶದಲ್ಲಾದರೂ ಒಂದು ಆರೋಗ್ಯಕರವಾದ ಸಮಾಜವನ್ನು ಕಟ್ಟಲು ಬೇಕಾಗಿರುವ ಅಡಿಗಲ್ಲುಗಳು. ಹೀಗಾಗಿ ಈ ಮೌಲ್ಯಗಳನ್ನು ಒಳಗೊಂಡ ಶರಣ ತತ್ವ ವೈಯುಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಪ್ರಸ್ತುತವಾದದ್ದು.

ಬದುಕು ಬದಲಿಸಿದ ಪುಸ್ತಕ

ಲೇಖಕಿ-ಶ್ರೀರಂಜನಿ ಸಿಂಹ

ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು,'ನಮ್ಮ ಬದುಕಿನಲ್ಲಿ ಸ್ನೇಹಿತರ ಕೊರತೆ ಯಾವತ್ತೂ ಇರಲ್ಲ ಪುಸ್ತಕ ಒಂದಿದ್ದರೆ ಸಾಕು'ಎಂದು. ಬೇಸಿಗೆ ರಜೆ ಬರಲಿ, ದಸರಾ ರಜೆ ಇರಲಿ ಆ ರಜೆಯಲ್ಲಿ ಪುಸ್ತಕ ಓದುವುದು, ಗ್ರಂಥಾಲಯಕ್ಕೆ ಹೋಗಿ ಪುಸ್ತಕ ತರುವುದು ನನ್ನ ದೈನಂದಿನ ಕೆಲಸವಾಗಿತ್ತು. ನಾನು ಸದ್ವಿದ್ಯಾ ಶಾಲೆಯಲ್ಲಿ ಓದುತ್ತಿದ್ದಾಗ ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಯಿತು,tinkle ಪಂಚತಂತ್ರ Competitive success, Wisdom, Tell me why ನಂತಹ ಪುಸ್ತಕಗಳನ್ನು ಓದುತ್ತಿದ್ದೆ. ಇವೆಲ್ಲ ಪುಸ್ತಕಗಳಲ್ಲಿ ಯಾವುದಾದರೂ ಪದ ಅರ್ಥ ಆಗದೆ ಇದ್ದರೆ, ಆ ಪದವನ್ನು Oxford Dictionary ( ಆಂಗ್ಲ ಭಾಷೆ -ಕನ್ನಡ) ಯಲ್ಲಿ ಹುಡುಕಿ ಹೊಸ ಪದಗಳೆಂದು ಕಲಿಯುವ ವಾಡಿಕೆ. (ಇವೆಲ್ಲ tables, square root, cube root ಜೊತೆಗೆ ಓದುತ್ತಿದ್ದ ಪದಗಳು). ಕಾಲ ಕಳೆದಂತೆ ಪುಸ್ತಕ ಓದುವ ಆಸಕ್ತಿ ಹೆಚ್ಚಾಗಿ, ನನಗೆ ಇಷ್ಟವಾಗುವ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ.

ನನಗೆ ತುಂಬಾ ಬೇಸರ ಆದಾಗ ಮೂರು ಕೆಲಸ ಮಾಡುತ್ತೇನೆ - ಗಿಡಗಳನ್ನು ಬೆಳೆಸುವುದು, ಗಿಡಗಳ ಜೊತೆ ಮಾತನಾಡುವುದು, ಅಡುಗೆ ಮಾಡುವುದು, ಪುಸ್ತಕ ಓದುವುದು. ಪುಸ್ತಕ ಎಂದರೆ ಸ್ನೇಹಿತರಿದ್ದಹಾಗೆ, ಈವಾಗಲಂತೂ ಎಲ್ಲೆಂದರಲ್ಲಿ digital ರೂಪದಲ್ಲಿ ಪುಸ್ತಕ ಓದುವ ಅನುಕೂಲವಿದೆ, ಹೀಗಾಗಿ ಪುಸ್ತಕ ಓದುವುದರಿಂದ ವಿಚಾರ ವಿನಿಮಯ, ದೇಶದ ಆಗು ಹೋಗುಗಳ ಬಗ್ಗೆ ತಿಳುವಳಿಕೆ, ಹೊಸಪದ ಪರಿಚಯ, ಸಾಂಸ್ಕೃತಿಕ ವೈವಿಧ್ಯತೆ ಎಲ್ಲದರ ಅನುಭವವಾಗುತ್ತದೆ. ಅಂತಹ ಪುಸ್ತಕಗಳಲ್ಲಿ ನನಗೆ ಬಹಳ ಹತ್ತಿರವಾದ ಪುಸ್ತಕಗಳು ಎಂದರೆ - You can Win (By Shiv Khera) , ನಾ ಕಂಡ ಕಲಾವಿದರು - ಶ್ರೀ ಮೈಸೂರು ವಾಸುದೇವಾಚಾರ್ಯರು, What Can I give? - (By Abdul Kalam Sir Personal Assistant - Srijan Pal Singh)

ನಾನು ನಮ್ಮ ತಂದೆಯನ್ನು ಕಳೆದುಕೊಂಡ ನಂತರ ಓದಿದ ಪುಸ್ತಕ ಎಂದರೆ - You can Win. ನನ್ನ ವಿಚಲಿತವಾದ ಮನಸನ್ನು, ಆ ಪುಸ್ತಕವನ್ನು ಓದಿ ನಿಧಾನವಾಗಿ ಸಮಾಧಾನ ಮಾಡಿಕೊಂಡೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತುಗಳು, ಹೇಳಕ್ಕೆ ಕೇಳಕ್ಕೆ ಚಂದ ಆದರೆ ಅಂತಹ ಪರಿಸ್ಥಿತಿ ನಮಗೆ ಬಂದಾಗ ನಮ್ಮ ಮನಸ್ಸು ತುಂಬಾ ನಿಧಾನ ಗತಿಯಲ್ಲಿ ಒಪ್ಪಿಕೊಳ್ಳುತ್ತದೆ. ಈ ಪುಸ್ತಕದಿಂದ ನನಗೆ ನಿಧಾನವಾಗಿ ಈ ವಿಷಯ ಅರಿವಾಯಿತು, ಮತ್ತೊಂದು ವಿಷಯ ಎಂದರೆ " Always count on blessings" ನಾವು ಹಿರಿಯರಲ್ಲಿ ಯಾವಾಗಲೂ ಆಶೀರ್ವಾದ ಪಡೆಯುತ್ತೇವೆ. ಯಾಕೋ ಏನೋ ನಮ್ಮ ತಂದೆಯವರನ್ನು ಕಳೆದುಕೊಂಡ ನಂತರ ನನಗೆ ಆಶೀರ್ವಾದ ಇಲ್ಲವೇನೋ ಅನ್ನಿಸುತಿತ್ತು, ಈ ವಾಕ್ಯ ಮತ್ತೆ ಮತ್ತೆ ಓದಿದ ನಂತರ ಒಂದಂತೂ ಅನ್ನಿಸಿದ್ದು ನಿಜ ಲಕ್ಷ್ಮೀನರಸಿಂಹ ಕಾಪಾಡಪ್ಪ ಎಂದು ಕೇಳಿಕೊಂಡೆ ಎಲ್ಲ ನೆರವೇರಿದೆ. 

ನಾನು ದ್ವಿತೀಯ ಪದವಿ ಪೂರ್ವ ಮುಗಿಸಿದ ನಂತರ, BE in Industrial Production ಅಧ್ಯಯನ ಮಾಡಿದ್ದು SJCE ಕಾಲೇಜ್ ನಲ್ಲಿ. ಹದಿ ಹರೆಯದ ವಯಸ್ಸಿನಲ್ಲಿ ಬರೀ fiction ಪುಸ್ತಕಗಳೇ ಓದಿದ್ದು, ಮಧ್ಯದಲ್ಲಿ ನಾ ಓದಿದ ಒಂದು ಪುಸ್ತಕ - ''ನಾ ಕಂಡ ಕಲಾವಿದರು''ನಮ್ಮ ಊರಿನ ವಿದ್ವಾಂಸರಾದ ಶ್ರೀ ವಾಸುದೇವಾಚಾರ್ಯರು ಬರೆದ ಈ ಪುಸ್ತಕದಲ್ಲಿ ಅವರು ಕಂಡ ಹಲವಾರು ಕಲಾವಿದರ ಬಗ್ಗೆ ಬರೆದಿದ್ದಾರೆ. ಅವರು ಕಲಿಕೆಯ ಮಹತ್ವವನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಅಂಥ ವಿದ್ವಾಂಸರೇ ವಯಸ್ಸಿನ ಅಡ್ಡಿಯಿಲ್ಲದೇ ಕಲಿಯುವ ಪ್ರಯತ್ನ ಮಾಡುತ್ತಾರೆ ಅಂದರೆ ನಮ್ಮ ಕೈಯಲ್ಲೂ ಸಾಧ್ಯ ಎಂದು ಮನದಟ್ಟು ಮಾಡಿಸಿದ ಪುಸ್ತಕ ಇದು . ಈ ಪುಸ್ತಕ ನನ್ನನು ಮುಂದೆ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಿಲ್ಲ.

ನನಗಿಷ್ಟವಾದ ಇನ್ನೊಂದು ಪುಸ್ತಕ - What Can I give? by Sir Srijan Pal Singh. ಈ ಪುಸ್ತಕ ನಾನು ಮೊಟ್ಟ ಮೊದಲ ಬಾರಿಗೆ ಓದಿದ್ದು ಚುನಾವಣೆಯಲ್ಲಿ ಮತ ಚಲಾಯಿಸುವ ಮೊದಲು. ದಿವಂಗತ ರಾಷ್ಟ್ರಪತಿ A P J Abdul Kalam sir ಅವರ ಒಂದೊಂದು ಅನುಭವದ ಮಾತು, ದೇಶಕ್ಕೆ ನಾವು ಎಂತಹ ಪ್ರಜೆಗಳಾಗಿ ಇರಬೇಕೆನ್ನುವ ಕುರಿತು ನನ್ನನು ಚಿಂತನೆ ಮಾಡಲು ಹಚ್ಚಿತು. 
...................................................................................................................................................
3 thoughts on “ವೈಚಾರಿಕ ಲೇಖನ ಮತ್ತು ಹೊಸ ಬರಹಗಳ ಸರಣಿ ‘ಬದುಕು ಬದಲಿಸಿದ ಪುಸ್ತಕ’.

 1. ಸಮಾಜಮುಖಿಯಾಗಿ ಕೆಲಸ ಮಾಡದ ವೈಚಾರಿಕತೆ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುತ್ತದೆ ಸಮಾಜ. ಜಾತಿಯ ಹೆಸರಿನಲ್ಲಿ ಸಮಾಜದಲ್ಲಿರುವ ತಾರತಮ್ಯಗಳನ್ನು ತೊಡೆದುಹಾಕಲು 12ನೇ ಶತಮಾನದಲ್ಲೇ ಕರ್ನಾಟಕದಲ್ಲಿ ಕ್ರಾಂತಿಯಾದದ್ದು ಒಂದು ‘ಪವಾಡ‘ವೇ ಸರಿ. 12ನೇ ಶತಮಾನದ ವಚನಗಳನ್ನು ಆಧುನಿಕ ಕಾಲಕ್ಕೆ, ಅದರಲ್ಲೂ ಇಂಗ್ಲೆಂಡಿನಲ್ಲಿ ನೆಲೆಸಿರುವ ‘ಅನಿವಾಸಿ‘ಗಳ ಬದುಕಿಗೆ ಹೋಲಿಸಿ ನೋಡುವ ಪರಿಯೇ ಒಂದು ಸೋಜಿಗ. ಯಾವುದೇ ಆಡಂಬರವಿಲ್ಲದೇ ಪ್ರಸಾದ್ ಅವರು ನಿರರ್ಗಳವಾಗಿ ಬರೆದಿದ್ದಾರೆ. ಉಲ್ಲೇಖಿಸಿರುವ ವಚನದ ಸಾಲುಗಳೂ ಕೂಡ ಬಹುತೇಕ ಎಲ್ಲರೂ ಓದಿರಬಹುದಾದ ಅಥವಾ ಕೇಳಿರಬಹುದಾದ ವಚನಗಳೇ ಆಗಿರುವುದರಿಂದ, ಲೇಖನ ಇನ್ನಷ್ಟು ಶಕ್ತಿಶಾಲಿ ಸಂದೇಶವನ್ನು ಕೊಡುತ್ತದೆ.

  ಶ್ರೀರಂಜನಿ ಸಿಂಹ ಅವರ ಲೇಖನ ಅವರು ಇಷ್ಟಪಟ್ಟ ಪುಸ್ತಕಗಳ ಕಿರುಪರಿಚಯವಿದೆ. ‘ಅನಿವಾಸಿ‘ಗೆ ಸ್ವಾಗತ.

  – ಕೇಶವ

  Like

 2. ಪ್ರಸಾದ ಅವರ ಲೇಖನದ ಎರಡನೆಯ ಭಾಗವೂ ಮೊದಲಿನದರಂತೆಯೇ ಸಾಗಿದೆ. ಒಮ್ಮೊಮ್ಮೆ very obvious ವಿಷಯಗಳ ಬಗ್ಗೆ ಬರೆಯುವುದು ಅಷ್ಟು ಸುಲಭವವಲ್ಲ. ಇಲ್ಲಿ ಉದಾಹರಣೆಗಳೊಂದಿಗೆ ಬಸವ ತತ್ವವನ್ನು ನೆನಪಿಟ್ಟು ಹೇಗೆ ನಮ್ಮ ದೈನಂದಿನ ನಡವಳಿಕೆಯಲ್ಲಿ ಸಮಾಜಮುಖಿ ವರ್ತನೆಯನ್ನು ಸುಧಾರಿಸಿಕೊಳ್ಳ ಬಹುದು ಎಂದು ತಿಳಿಸಿದ್ದಾರೆ. ನನಗೆ ಎಲ್ಲ ಗೊತ್ತು ಅನ್ನುತ್ತಿರುವಾಗಲೇ ನಾವು ಎಡವುತ್ತೇವೆ. ಇಂದಿನ ವಿಜ್ಞಾನಯುಗದಲ್ಲೂ ಹೇಗೆ ಬುದ್ಧಿವಂತರನ್ನು ಸಹ triskaidekaphobia (ಅಂಕಿ ಹದಿಮೂರರ ಭಯ) ಆಳುತ್ತದೆ ಅಂತ ಹೇಳಿರುವುದು ನಿಜ. ಈ ದೇಶದಲ್ಲಿಯೂ ಆ ‘dreaded day’ ಬಂದಾಗೆಲ್ಲ ಪದೇ ಪದೇ Friday the 13th today, ಅನ್ನುವ ನುಡಿಗಟ್ಟನ್ನು ಅದೆಷ್ಟು ಸಾರಿ ನಾವು ಕೇಳಿಲ್ಲ? ಇವೆರಡು ಭಾಗಗಳು ಒಳ್ಳೆಯ ವೈಚಾರಿಕ ಬರವಣಿಗೆ.
  ಶ್ರೀರಂಜನಿ ಅವರು ತಮ್ಮ ಮೇಲೆ ಪ್ರಭಾವ ಬೀರಿದ ಮೂರು ಪುಸ್ತಕಗಳ ಬಗ್ಗೆ ಸಂಕ್ಷಿಪ್ತವಾದರೂ ಸ್ಪಷ್ಟಬರವಣಿಗೆಯಲ್ಲಿ ತಿಳಿಸಿದ್ದಾರೆ. ಲೇಖನದ ಆರಂಭಿಸಿದ ರೀತಿನ್ನು ನೋಡಿದರೇನೆ ಅವರ ತಂದೆಯ ಪ್ರಭಾವದ ಅರಿವಾಗುತ್ತದೆ. ಅಂತ ವ್ಯಕ್ತಿಯನ್ನು ಸಣ್ಣ ವಯಸ್ಸಿನಲ್ಲಿ ಕಳೆದುಕೊಂಡ ಸಮಯದಲ್ಲಿ ಅವರೋದಿದ ಪುಸ್ತಕ ಅವರಿಗೆ ಹೇಗೆ ಸಹಾಯವಾಯಿತು ಅಂತ ಹೇಳಿದ್ದಾರೆ. ಕರ್ನಾಟಕ ಸಂಗೀತದ ಬಗೆಗಿನ ಪುಸ್ತಕದ ಪ್ರಭಾವದಿಂದ ಆ ಕಲೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆಂದರೆ ಅದು ಗಾಢವಾದ ಪರಿಣಾಮ ಮಾಡಿತೆಂದು ಸಾಬೀತು ಪಡಿಸಿದ್ದಾರೆ. ಮೊದಲ ವೋಟಿನ ಹೊಸ್ತಲದಲ್ಲಿದ್ದಾಗ ಅಬ್ದುಲ್ ಕಲಾಮ್ ಅವರ ಬಗ್ಗೆ ಓದಿ ಒಳ್ಳೆಯ ನಾಗರಿಕಳಾಗಿ ರೂಪುಗೊಂಡಂತಿದೆ, ಈ ನವ ಸದಸ್ಯೆ! ಈ ಪ್ರಾಮಾಣಿಕ ಲೇಖನ ಮುಂದೆಯೂ ಇವರಿಂದ ಇನ್ನಿಷ್ಟು ಲೇಖನಗಳನ್ನು ಖಂಡಿತ ನೋಡುವ ಭರವಸೆ ಕೊಟ್ಟಿದೆ!

  Like

 3. ಶಿವಪ್ರಸಾದ್ ಮತ್ತು ಶ್ರೀರಂಜನಿ ಇಬ್ಬರು ಬರೆದಿರುವ ಲೇಖನಗಳು ಎಷ್ಟು ಸತ್ಯವಾಗಿವೆ ಎಂದರೆ ಪ್ರತಿ ವಿಚಾರವನ್ನು ಒಪ್ಪಿ ಮೆಚ್ಚಿಕೊಳ್ಳುತ್ತ ಅಹುದಹುದು” ಎನ್ನುವಷ್ಟು! ಇಬ್ಬರಿಗೂ ಅಭಿನಂದನೆಗಳು💐💐

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.