ಕವನ ಮತ್ತು ವೈಚಾರಿಕ ಲೇಖನ.

ಪ್ರಿಯ ಓದುಗರೇ, 
ಈ ವಾರ 'ಅನಿವಾಸಿ' ಸಂಚಿಕೆಯಲ್ಲಿ ನಿಮ್ಮ ಓದಿಗೆ, ಶ್ರೀಮತಿ ರಾಧಿಕಾ ಜೋಶಿ ಅವರ ಕವನ 'ಸಮರಸ'. ಮತ್ತು ಡಾ ಜಿ ಎಸ್ ಶಿವಪ್ರಸಾದ್ ಅವರು ಬರೆದಿರುವ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಎಂಬ ಮಾಹಿತಿ ಪೂರ್ಣ ವೈಚಾರಿಕ ಬರಹವಿದೆ. ಓದಿ ತಮ್ಮ ಅಭಿಪ್ರಾಯಗಳನ್ನು ಮರೆಯದೆ ತಿಳಿಸಿ. 
ಈ ವಾರದ ಓದಿಗೆ ತಮಗಿದೋ ಸ್ವಾಗತ.  
- ಸಂಪಾದಕಿ
ಸಮರಸ 
 
  -  ಶ್ರೀಮತಿ ರಾಧಿಕಾ ಜೋಶಿ 

ಹುಟ್ಟಿದ ಸಮಯ ಬೇರೆ ಇರುವಾಗ 
ಬಿಟ್ಟು ಹೋಗುವ  ಸಮಯ ಒಂದೇ ಆಗಬಹುದೇ?

ಹುಟ್ಟಿಬಿಟ್ಟು ಬಿಡುವ ಸಮಯದ ನಡುವೆ ನೀ ಇರುವೆ 
ಗಮ್ಯ ಗೋಚರವಾದರೆ ನಿನಗೆ, ನನ್ನನ್ನೂ ಜೊತೆಗೊಯ್ಯುವೆಯೇ?

ನಿನ್ನ ಬಿಟ್ಟು ಹುಟ್ಟಿ, ಈಗ ನನ್ನ ಬಿಟ್ಟು ನೀ ಹೊರಟರೆ ದಾರಿಯಲಿ 
ಹೂವಿನ ಹಾಸಿಗೆಯು ಮುಳ್ಳಾಗಿ, ನಡೆಯಲು ಸಾಧ್ಯವಾದೀತೆ?

ಹೆಜ್ಜೆ ಮುಂದಕ್ಕೆ ನೋಟ ಹಿಂದಕ್ಕೆ ಅಂತ್ಯಕ್ಕೆ ದೃಷ್ಟಿ ನೆಟ್ಟು 
ತಲುಪೇನೆಲ್ಲಿಗೂ ನೀನಿಲ್ಲದೆ, ಕಣ್ಣು ಮಚ್ಚಿದಾಗ ನೀ ಗೋಚರ 
ಕಣ್ತೆರೆದರೆ ವಾಸ್ತವ್ಯದ ಸತ್ಯ ನಿನ್ನ ನೆನಪಿನಲ್ಲೇ ಮುಳ್ಳಲ್ಲಿ ಹೂ ನೋಡುತ ಸಾಗುವೆ!

ಈ ಜೀವ ಜೀವನಕ್ಕೆ ಅರ್ಥ ಕೊಟ್ಟು ಕೃತಾರ್ಥನನ್ನಾಗಿ ಮಾಡಿ 
ಕೂಡಿದ್ದ ಘಳಿಗೆ ಹೂಡಿದ್ದ ಸಂಭ್ರಮ ಮನ ಮನೆಯ ಮೂಲೆಮೂಲೆಯಲಿ 
ನೆನಪಿನ ಮಲ್ಲಿಗೆಯ ಹಂದರದಡಿ ಕೂತು ನಿಂತು ನನ್ನ ಉಸಿರೇ ನಿನ್ನ ಶ್ರೀಗಂಧ.


ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ – ಭಾಗ ೧

  • ಡಾ ಜಿ ಎಸ್ ಶಿವಪ್ರಸಾದ್, ಶೇಫೀಲ್ಡ್
ಕಳೆದ ಸುಮಾರು ೫೦ -೬೦ ವರ್ಷಗಳಿಂದ ಕನ್ನಡಿಗರು ಇಂಗ್ಲೆಂಡ್, ಅಮೇರಿಕ, ಯುರೋಪ್, ಆಸ್ಟ್ರೇಲಿಯ, ಮಧ್ಯಪೂರ್ವ ದೇಶಗಳಿಗೆ ವೃತ್ತಿ ಅವಕಾಶಗಳಿಂದ, ಆರ್ಥಿಕ ಉನ್ನತಿಗಾಗಿ, ಶಿಕ್ಷಣಕ್ಕಾಗಿ ಹೀಗೆ  ಅನೇಕ ಕಾರಣಗಳಿಂದ ವಲಸೆ ಬಂದಿದ್ದಾರೆ. ಅವರು ಯಾವ ಕಾರಣಕ್ಕಾಗಿ ವಲಸೆ ಬಂದಿದ್ದರೂ, ಈ ಅನಿವಾಸಿ ನೆಲೆಗಳಲ್ಲಿ ಅವರಿಗೆ ತಮ್ಮ ತಾಯ್ನಾಡಿನ ಭಾಷೆ, ಸಂಸ್ಕೃತಿ, ಆಧ್ಯಾತ್ಮ, ಸಂಸಾರ, ಸಂಬಂಧಗಳ ತುಡಿತಗಳು ಕಾಡುವುದು ಸಹಜ. ಅಲ್ಲದೆ ತಮ್ಮ ಮಕ್ಕಳು ಈ ವಿದೇಶಿ ಸಂಸ್ಕೃತಿಯ ಪರಿಸರದಲ್ಲಿ ಬೆಳೆಯುತ್ತಿರುವಾಗ  ತಮ್ಮ ಮೂಲ ಬೇರುಗಳನ್ನು ಕಳೆದುಕೊಳ್ಳುವುದರ ಬಗ್ಗೆ ಆತಂಕವಿರುವುದೂ ಸಹಜ. 

ಈ ಹಿನ್ನೆಲೆಯಲ್ಲಿ ವಲಸೆ ಬಂದ ಸಮುದಾಯ ವಿದೇಶಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನವನ್ನು ಮಾಡಿದೆ. ಅದು ಸಾಕಷ್ಟು ಸಫಲವಾಗಿದೆ. ನಾನು ನೆಲೆಸಿರುವ ಇಂಗ್ಲೆಂಡಿನಲ್ಲಿ ಕೆಲವು ಕನ್ನಡಿಗರು ಶರಣ ತತ್ವದ ಪರಿಕಲ್ಪನೆಗಳನ್ನು ಇಟ್ಟುಕೊಂಡು ಜ್ಯಾತ್ಯತೀತವಾದ ವೀರಶೈವ ಸಮಾಜ ಯು.ಕೆ ಎಂಬ ಸಂಘವನ್ನು ಹುಟ್ಟುಹಾಕಿದ್ದಾರೆ. ಇಲ್ಲಿ ಕಾಲ ಕಾಲಕ್ಕೆ ಶರಣ ಸಾಹಿತ್ಯ, ವಚನ, ಶರಣರ ಬದುಕು ಬರಹ ಈ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇಲ್ಲಿ ವೀರಶೈವ ಮತದವರು ಎಂಬ ಭಾವನೆಯನ್ನು ಮೀರಿ ಎಲ್ಲ ಸಹೃದಯ ಕನ್ನಡಿಗರಿಗೂ, ಭಾರತೀಯರಿಗೂ ಆಹ್ವಾನವಿದೆ. ಇಲ್ಲಿ ಎಲ್ಲರನ್ನು ತಲುಪುವ ಉದ್ದೇಶದಿಂದ ಕೆಲವೊಮ್ಮೆ ಕಾರ್ಯಾಕಲಾಪಗಳು ಇಂಗ್ಲಿಷಿನಲ್ಲೂ ನಡೆಯುವುದುಂಟು.  ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಲ್ಯಾಮ್ ಬತ್ ಎಂಬ ಪ್ರದೇಶದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಮತ್ತು ಇತರ ಶರಣರು ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸಿ ಅದನ್ನು ಭಾರತದ ಪ್ರಧಾನಿ ಮೋದಿ ಅವರು ಅನಾವರಣ ಗೊಳಿಸಿದ್ದಾರೆ. ಈ ಹಿನ್ನೆಲೆ ವಿಚಾರಗಳು ಯು.ಕೆ.ಯಲ್ಲಿರುವ  ಕನ್ನಡಿಗರ ಮತ್ತು ಭಾರತೀಯರ  ಬಸವ ತತ್ವದ  ಅರಿವಿಗೆ ಮತ್ತು ಪ್ರಸ್ತುತತೆಗೆ ಸಾಕ್ಷಿಯಾಗಿದೆ. 

ವಚನಗಳ ಮೂಲಕ ಪ್ರತಿಪಾದಿಸುವ ಶರಣ ತತ್ವವನ್ನು ಗಮನಿಸಿದಾಗ ಎರಡು ಅಂಶಗಳು ಎದ್ದುತೋರುತ್ತದೆ; 
೧. ಭಕ್ತಿರಸ ಪ್ರಧಾನವಾದ, ಅಧ್ಯಾತ್ಮಕ್ಕೆ ಸಂಬಂಧಿಸಿದ  ವಚನಗಳು 
೨.  ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ವಚನಗಳು  

ಈ ಒಂದು ಬರಹದಲ್ಲಿ ಧರ್ಮ ಮತ್ತು ಭಕ್ತಿರಸವನ್ನು ಪಕ್ಕಕ್ಕೆ ಇರಿಸಿ, ಶರಣರ ಸಾಮಾಜಿಕ ಚಿಂತನೆಗಳು ಹೇಗೆ ನಮ್ಮ ಇಂದಿನ ಬದುಕಿಗೆ ಪ್ರಸ್ತುತವಾಗಿದೆ ಎಂಬದರ ಬಗ್ಗೆ  ಇಲ್ಲಿ ಚರ್ಚಿಸಲಾಗಿದೆ. ಇದು 'ವೀರಶೈವ, ಲಿಂಗಾಯಿತ' ಎಂಬ ಸಂಕುಚಿತ ಜಾತಿ ಕಟ್ಟಳೆಗಳನ್ನು ಮೀರಿ ಬಸವ ತತ್ವದಲ್ಲಿರುವ ಸಾರ್ವತ್ರಿಕ ಸಾಮಾಜಿಕ ವಿಚಾರಗಳ ಬಗ್ಗೆ ಒಂದು ಪಕ್ಷಿನೋಟವನ್ನು ಒದಗಿಸುವ ಪ್ರಯತ್ನ. 

ಯು.ಕೆ ಯ ಅತ್ಯಂತ ಹಳೆಯ ಮತ್ತು ಹಿರಿದಾದ ಕನ್ನಡ ಸಂಸ್ಥೆ ಎಂದರೆ ಕನ್ನಡ ಬಳಗ ಯು.ಕೆ. ಈ ಒಂದು ದಾನಶೀಲ ಮತ್ತು ಸಾಂಸ್ಕೃತಿಕ ಸಂಸ್ಥೆ ಹಲವಾರು ದಾನಶೀಲ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಬಸವ ತತ್ವದ ಮೂಲಭೂತ ಧ್ಯೇಯಗಳಲ್ಲಿ ಒಂದಾದ 'ದಾಸೋಹ' ಯು.ಕೆ ಕನ್ನಡ ಬಳಗದಲ್ಲಿ ಮತ್ತು ಯು.ಕೆ.ಯ ವೀರಶೈವ ಸಮಾಜದಲ್ಲಿ ವಿಶೇಷ ಅರ್ಥವನ್ನು ಪಡೆದುಕೊಂಡಿದೆ. ಬರ, ಪ್ರವಾಹಗಳಿಗೆ ಪರಿಹಾರ ನಿಧಿ, ಅನಾಥಾಶ್ರಮಗಳಿಗೆ ಆರ್ಥಿಕ ಸಹಾಯ, ಮತ್ತು ಕರೋನ ಪಿಡುಗಿನ ಮಧ್ಯೆ ಬೇಕಾದ ಆಕ್ಸಿಜನ್ ಮತ್ತು ವೆಂಟಿಲೇಟರ್ ಉಪಕರಣಗಳನ್ನು ಕೊಟ್ಟು ನೆರವಿಗೆ ಬಂದಿದೆ. ಹೀಗೆ ಕಾಲ ಕಾಲಕ್ಕೆ ಅನುಕಂಪೆಯಿಂದ ವೀರಶೈವ ಸಮಾಜ ಮತ್ತು ಯು.ಕೆ. ಕನ್ನಡ ಬಳಗ ಸ್ಪಂದಿಸಿದೆ. ಈ ಒಂದು ಅನುಕಂಪೆ ಕೂಡ ಬಸವ ತತ್ವದ ವಿಶೇಷ ಲಕ್ಷಣ. ಪಡೆಯುವುದಕ್ಕಿಂತ ಕೊಡುವುದರಲ್ಲೇ ಸಾರ್ಥಕತೆಯನ್ನು ಕಂಡು ಕೊಳ್ಳುವ ವಿಚಾರವನ್ನು ಬಸವಣ್ಣನವರ ಈ ವಚನದಲ್ಲಿ ಕಾಣಬಹುದು. 

"ತನುವ ಬೇಡಿದೆಡೆ ಇವೆ, ಮನವ ಬೇಡಿದೆಡೆ ಇವೆ 
ಧನವ ಬೇಡಿದೆಡೆ ಇವೆ, ಕಣ್ಣ ತಲೆ ಬೇಡಿದೆಡೆ ಇವೆ 
ಕೂಡಲ ಸಂಗಮ  ದೇವಾ ನಿಮಗಿತ್ತು ಶುದ್ಧನಾಗಿದ್ದೆ 
ನಿಮ್ಮ ಪುರಾತನ ಮನೆಯಲ್ಲಿ" 


ಈ ನಿಸ್ವಾರ್ಥ ಕೊಡುವಿಕೆ , ಆರ್ಥಿಕವಾಗಿ ಅನುಕೂಲವಾಗಿರುವ ಅನಿವಾಸಿಗಳಿಗೆ ಒಂದು ನೈತಿಕ ಜವಾಬ್ದಾರಿ ಅಥವಾ ಹೊಣೆ ಎಂದು ಪರಿಗಣಿಸಬಹುದು. ಕೊಡುವಾಗ ಅದರ ಹಿಂದೆ ಯಾವ ಉದ್ದೇಶವು ಇರಬಾರದು, ಕೊಡುವಿಕೆ ಒಂದು ಪ್ರಚಾರವಾದಾಗ ಆ ನಿಸ್ವಾರ್ಥತೆಯನ್ನು ಅದು ಕಳೆದು ಕೊಂಡು ಬಿಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕೆಲವು  ದಾನಿಗಳು ಆನ್ ಲೈನ್ ಡೊನೇಶನ್ ಕೊಡುವಾಗ ತಮ್ಮ ಹೆಸರನ್ನು ಬಹಿರಂಗ ಪಡಿಸಬಾರದೆಂದು ಕೋರುವುದನ್ನು  ಕಾಣಬಹುದು. ಇನ್ನು ಕೆಲವರು ತಮ್ಮ ದಾನಶೀಲತೆಯ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಅಂತಹವರನ್ನು ಕಂಡಾಗ ಬಸವಣ್ಣನವರ ಈ ವಚನ ನೆನಪಿಗೆ ಬರುತ್ತದೆ. 
 
"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ 
ಮಾಡಿದನೆಂಬುದು ಮನದಲಿ ಹೊಳೆದರೆ 
ನೀಡಿದನೆಂಬುದು ನಿಜದಲಿ ತಿಳಿದರೆ 
ಏಡಿಸಿಕಾಡಿತ್ತು ಶಿವನ ಡಂಗುರ 
ಮಾಡಿದೆನೆನ್ನದಿರಾ ಲಿಂಗಕೆ 
ನೀಡಿದೆ ನೆನ್ನದಿರಾ  ಜಂಗಮಕೆ
ಮಾಡುವ ನೀಡುವ ನಿಜಗುಣ  ಉಳ್ಳವರ 
ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಯ್ಯ”

ದಶಕಗಳ ಹಿಂದೆ ನನ್ನನ್ನೂ ಒಳಗೊಂಡಂತೆ ಇಂಗ್ಲೆಂಡಿಗೆ ವಲಸೆ ಬಂದವರಲ್ಲಿ ವೈದ್ಯರೇ ಹೆಚ್ಚು. ಈ ವೈದ್ಯರೆಲ್ಲಾ ಇಲ್ಲಿಯ ರಾಷ್ಟೀಯ ಆರೋಗ್ಯ ಸಂಸ್ಥೆಯ ವಿವಿಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ನಮಗೆಲ್ಲಾ ಇಲ್ಲಿ ರೋಗಿಗಳ ತಪಾಸಣೆ, ಔಷಧಿ ಮತ್ತು ಶೃಶೂಷೆಯ ಜೊತೆಗೆ ಹೇಗೆ ಮಾತಿನಲ್ಲಿ ವ್ಯವಹರಿಸಬೇಕು ಎಂದು ಹೇಳಿಕೊಡುತ್ತಾರೆ. ಹಲವಾರು ಕಮ್ಯುನಿಕೇಷನ್ ಕೋರ್ಸ್ ಗಳಲ್ಲಿ ಈ ತರಬೇತು ನಡೆಯುತ್ತದೆ. ಇಲ್ಲಿ ಆಸ್ಪತ್ರೆಯಲ್ಲಿರುವ ರೋಗಿ ಬರಿಯ ಸಂಖ್ಯೆಯಲ್ಲ. ರೋಗಿಯನ್ನು ಪರೀಕ್ಷಿಸುವುದಕ್ಕೆ ಮುಂಚೆ ಅವರ ಹೆಸರನ್ನು ತಿಳಿದು ಸಂಬೋಧಿಸಬೇಕು. ರೋಗಿಯ ಜೊತೆ ನಡೆಸುವ ಸಂಭಾಷಣೆಯಲ್ಲಿ  ನಯ, ನಾಜೂಕು, ಆತ್ಮೀಯತೆ ಇವು ಇರಬೇಕು. ನಾವು ಹೇಳುವುದನ್ನು ನಿರ್ದಿಷ್ಟವಾಗಿ ಅರ್ಥವಾಗುವ ಹಾಗೆ ತಿಳಿಸಬೇಕು. ಈ ಒಂದು ಅಂಶವನ್ನು ಗಮನಿಸಿದ ನನಗೆ ಬಸವಣ್ಣನವರು ಈ ವಿಚಾರವನ್ನು ೧೨ನೇ ಶತಮಾನದಲ್ಲೇ ತಿಳಿಸಿದ್ದರು  ಎಂದೆನಿಸಿ ಈ ವಚನ ನೆನಪಿಗೆ ಬಂತು;

ನುಡಿದರೆ ಮುತ್ತಿನ ಹಾರದಂತಿರಬೇಕು 
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು 
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು 
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು 

ಹೀಗೆ ನಮ್ಮ ಮಾತು ಸುಂದರವಾಗಿ ದೀಪ್ತಿಯಂತೆ ಬೆಳಕನ್ನು ನೀಡುತ್ತಾ, ಜ್ಞಾನವನ್ನು ವಿಸ್ತರಿಸುತ್ತ, ನಿರ್ದಿಷ್ಟವಾಗಿ, ದೇವರನ್ನೂ (ಈಗಿನ ಕಾಲಕ್ಕೆ ನಮ್ಮ ನೆಲೆಯಲ್ಲಿ ಸಹೃದಯರನ್ನೂ) ಮೆಚ್ಚಿಸುವಂತೆ ಇರಬೇಕು ಎಂಬುದು ಈ ವಚನದ ಇಂಗಿತ. ಈ ಒಂದು ವಚನವನ್ನು ಹಿನ್ನೆಲೆಯಾಗಿಟ್ಟುಕೊಂಡು ಗಮನಿಸಿದರೆ; ಸುಸಂಸ್ಕೃತ ರಾಷ್ಟ್ರಗಳಾದ ಇಂಗ್ಲೆಂಡ್ , ಯೂರೋಪ್ , ಅಮೇರಿಕಗಳಲ್ಲಿ ಜನರ ಸಂಭಾಷಣೆ ಮತ್ತು ಭಾಷೆಯ ಬಳಕೆಯಲ್ಲಿ ಸೌಜನ್ಯ ಎದ್ದು ತೋರುತ್ತದೆ. ಶಿಷ್ಟಾಚಾರದ ಜೊತೆಗೆ ಸಜ್ಜನಿಕೆಯೂ ಇವೆ. ಇಲ್ಲಿ ಜನ ತಮ್ಮಿಂದ ಸಂಭವಿಸಿದ ಕನಿಷ್ಠ ಲೋಪಗಳಿಗೆ 'ಸಾರಿ' ಎಂದು ಕ್ಷಮೆ ಯಾಚಿಸುವುದು, ನಮ್ಮ ದೃಷ್ಟಿಯಲ್ಲಿ ಗೌಣವೆಂದೆನಿಸುವ ವಿಚಾರಗಳಿಗೆ ‘ಥ್ಯಾಂಕ್ಸ್’ ಎನ್ನುತ್ತಾ ಧನ್ಯತೆಯನ್ನು ಸೂಚಿಸುವುದು ಸಾಮಾನ್ಯ. ಈ ಬಸವ ತತ್ವ ಇಲ್ಲಿ ಆಚರಣೆಯಲ್ಲಿದೆ. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಕೊನೆ ಸಾಲುಗಳನ್ನು ಗಮನಿಸಿದರೆ; "ನುಡಿಯೊಳಗಾಗಿ ನಡೆಯದಿದ್ದರೆ ದೇವನೆಂತು ಒಲಿಯುವನಯ್ಯಾ" ಎಂದು ಈ ವಚನ ಕೊನೆಗೊಳ್ಳುತ್ತದೆ.  ಪಾಶ್ಚಿಮಾತ್ಯ ದೇಶಗಳಲ್ಲಿ ನುಡಿಯೊಳಗಾಗಿ ನಡೆಯದಿದ್ದರೆ ದೇವರೇಕೆ ಸಮಾಜ ಕೂಡ ಒಲಿಯುವುದಿಲ್ಲ, ಒಪ್ಪುವುದಿಲ್ಲ. ಈ ದೇಶಗಳಲ್ಲಿ ಜನ ಕೊಟ್ಟ ಮಾತಿಗೆ ಬಹಳಷ್ಟು ಬೆಲೆ ನೀಡುತ್ತಾರೆ. ಇದು ಮೂಲತಃ ಮಾಡುವ ಕೆಲಸದಲ್ಲಿರುವ ಶ್ರದ್ಧೆ ಮತ್ತು ಸಮಯಪ್ರಜ್ಞೆ ಯಿಂದ ಮೂಡುವ ಮೌಲ್ಯಗಳು. ಭಾರತದಲ್ಲಿ ಕೆಲವು ಕಡೆ ಕಛೇರಿಗಳಲ್ಲಿ  ನಮ್ಮ ಒಂದು ಕೆಲಸವಾಗಬೇಕಾಗಿದ್ದಲ್ಲಿ ಎಷ್ಟುಬಾರಿ ಅಲೆಯ ಬೇಕು ಎಂಬುದು ನಮಗೆಲ್ಲಾ ತಿಳಿದಿದೆ. ಆಲಸ್ಯ ಮತ್ತು ಲಂಚಕೋರತನಗಳು ಇದರ ಹಿನ್ನೆಲೆ ಕಾರಣವಿರಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ಕಾಫಿ ತಿಂಡಿ ವಿರಾಮಗಳ ನೆಪದಲ್ಲಿ ಕೆಲಸ ಕದಿಯುವವರಿಲ್ಲ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳುವವರೂ ಇಲ್ಲ. ನುಡಿಯೊಳಗಾಗಿ ನಡೆಯುವ ಬಸವ ತತ್ವ ಇಲ್ಲಿ ಅನುಷ್ಠಾನದಲ್ಲಿದೆ.


ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲ ಸಜ್ಜನರೇ ಮತ್ತು ಇಲ್ಲಿ ಎಲ್ಲವೂ ಕ್ಷೇಮ ಎಂದು ಹೇಳಲಾಗುವುದಿಲ್ಲ. ಇಲ್ಲಿಯೂ ದುಷ್ಟ ಜನರಿದ್ದಾರೆ, ಕಳ್ಳರು, ಖದೀಮರು ಇದ್ದಾರೆ.  ವಲಸೆ  ಬಂದ  ಜನರ ಬಗ್ಗೆ ತಿರಸ್ಕಾರ ಮತ್ತು ಕೀಳು ಮನೋಭಾವ ಕೆಲವರಿಗೆದೆ. ಕೆಲವು ಸ್ಥಳೀಯ ಬಿಳಿ ಜನಕ್ಕೆ ವಲಸೆ ಬಂದ ಅನ್ಯರು ತಮ್ಮಿಂದ ಉದ್ಯೋಗ ಅವಕಾಶಗಳನ್ನು ಕಸಿದು ಕೊಳ್ಳುತ್ತಿದ್ದಾರೆ ಎಂಬ ಆತಂಕವಿದೆ. ನಮ್ಮ ಯಶಸ್ಸಿನ ಬಗ್ಗೆ ಅವರಿಗೆ ಅಸೂಯೆಯಿದೆ. ಕಳೆದ ವರುಷ ಅಮೇರಿಕ ಸಂಸ್ಥಾನದ ಮಿನಿಯಾಪೋಲಿಸ್  ಎಂಬ ನಗರದಲ್ಲಿ  ಕ್ಯಾರಿಬಿಯನ್  ಮೂಲದ ಜಾರ್ಜ್ ಫ್ಲ್ಯಾಯ್ಡ್ ಎಂಬ ಚಿಕ್ಕ ಕಳ್ಳ ಎಸಗಿದ ತಪ್ಪಿಗೆ ಅವನನ್ನು ಅರೆಸ್ಟ್ ಮಾಡಲು ಬಂದ  ಪೊಲೀಸರು ಅವನ ಕುತ್ತಿಗೆಯ ಮೇಲೆ ಮಂಡಿಯೂರಿ ಹೆಚ್ಚಿನ ಬಲ ಪ್ರಯೋಗ ಮಾಡಿದ ಪರಿಣಾಮದಿಂದ ಜಾರ್ಜ್ ಉಸಿರುಕಟ್ಟಿ ಅಲ್ಲಿಯೇ ಪ್ರಾಣ ಬಿಟ್ಟ! ಪೋಲೀಸರ ಈ ದೌರ್ಜನ್ಯದಿಂದಾಗಿ ಎಲ್ಲೆಡೆ ಗಲಭೆಗಳಾದವು. ಇಲ್ಲಿ ಒಬ್ಬ ಬಿಳಿ ಪೊಲೀಸನು ಒಬ್ಬ ಕರಿ ಅಪರಾಧಿಯ ಮೇಲೆ ಮಾಡಿದ ದೌರ್ಜನ್ಯ ವರ್ಣಬೇಧ ಅಥವಾ ರೇಸಿಸಂ ಉದ್ದೇಶದಿಂದ ಕೂಡಿದ್ದು ಎಂದು ಪರಿಗಣಿಸಲಾಯಿತು. ಹಾಗೆ 'ಬ್ಲಾಕ್ ಲೈವ್ಸ್ ಮ್ಯಾಟರ್' ಅಂದರೆ ಕರಿಯರ ಜೀವಕ್ಕೊ ಬೆಲೆ ಇದೆ ಎಂಬ ಚಳುವಳಿ ತೀವ್ರವಾಯಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಥಳೀಯ ಬಿಳಿ ಜನರಿಗೂ ಮತ್ತು ವಲಸೆ ಬಂದ ಇತರರಿಗೂ ಆಗಾಗ್ಗೆ ವರ್ಣಬೇಧ ಘರ್ಷಣೆಗಳು ನಡೆಯುವುದನ್ನು ಕಾಣ ಬಹುದು. ವರ್ಣ ಬೇಧ ಮತ್ತು ಧರ್ಮದ ಹೆಸರಿನಲ್ಲಿ ಘರ್ಷಣೆಗಳು  ಪ್ರಪಂಚದ ನಾನಾ ಭಾಗಗಳಲ್ಲಿ ನಡೆಯುತ್ತಾ ಬಂದಿವೆ. ಐರ್ಲೆಂಡಿನಲ್ಲಿ ಕ್ರೈಸ್ತ ಧರ್ಮದ ಒಳಗೆ ಇರುವ ಎರಡು ಪಂಗಡಗಳಲ್ಲಿ ಘರ್ಷಣೆ ಇಂದಿಗೂ ನಡೆಯುತ್ತಿದೆ. ಭಾರತದಲ್ಲಿ ಹಿಂದೆ ಜಾತಿಯ ಹೆಸರಿನಲ್ಲಿ ಶೋಷಣೆಗಳು ನಡೆದಿವೆ. ಸ್ವತಂತ್ರ ಭಾರತದಲ್ಲಿ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿವೆ. ಮಧ್ಯಪೂರ್ವದಲ್ಲಿ ಇಸ್ರೇಲಿನ ಜ್ಯೂ ಧರ್ಮದವರಿಗೂ ಮತ್ತು ಪ್ಯಾಲೆಸ್ಟೀನ್ ದೇಶದ ಮುಸ್ಲಿಂಗಳಿಗೂ ತಿಕ್ಕಾಟಗಳಾಗುವುದು ಸಾಮಾನ್ಯ. ಹಲವಾರು ದೇಶಗಳಲ್ಲಿ ಜನ ತಮ್ಮ ಧರ್ಮ, ಸಂಸ್ಕೃತಿ ಶ್ರೇಷ್ಠ ಎಂಬ ಗರ್ವದಲ್ಲಿ ಮೆರೆಯುತ್ತಿದ್ದಾರೆ. ಪ್ರಪಂಚದಲ್ಲಿ ಅಸಹಿಷ್ಣುತೆ, ಅಂಧ ಶ್ರದ್ಧೆ ಹೆಚ್ಚಾಗಿ ಭಯೋತ್ಪಾದನೆ ಹುಟ್ಟಿಕೊಂಡಿದೆ. ವಿಶ್ವ ಶಾಂತಿಗೆ ಧಕ್ಕೆ ಒದಗಿದೆ. ಈ ಹಿನ್ನೆಲೆ ವಿಚಾರವನ್ನು ಗಮನಿಸಿದಾಗ ಬಸವಣ್ಣನವರ ಈ ವಚನ ತಟ್ಟನೆ ನೆನಪಿಗೆ ಬರುತ್ತದೆ; 

"ಇವನಾರವ ಇವನಾರವ ಎಂದೆನಿಸದಿರಯ್ಯ 
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ 
ಕೂಡಲ ಸಂಗಮ ದೇವಾ ನಿಮ್ಮ ಮನೆಯ ಮಗನೆನಿಸಯ್ಯ"

ಅಮೇರಿಕ, ಇಂಗ್ಲೆಂಡ್ ದೇಶಗಳಲ್ಲಿ ಹಲವು ಭಾಷೆಯ, ಹಲವು ಬಣ್ಣಗಳ, ಹಲವು ಸಂಸ್ಕೃತಿಗಳ ಜನರಿದ್ದಾರೆ. ಭಾರತ, ಶ್ರೀ ಲಂಕಾ, ಪಾಕಿಸ್ತಾನ, ಮಲೇಷಿಯಾ, ಪೋಲೆಂಡ್, ಕ್ಯಾರಿಬಿಯನ್, ಆಫ್ರಿಕಾ ಪ್ರದೇಶ ಹೀಗೆ ಅನೇಕ ರಾಷ್ಟ್ರಗಳಿಂದ ಜನ ವಲಸೆ ಬಂದಿದ್ದಾರೆ. ಈ ವೈವಿಧ್ಯಮಯವಾದ ಸಂಸ್ಕೃತಿಯನ್ನು ‘ಕರಗುವ ಕಡಾಯಿ’ ಎಂದು ಬಣ್ಣಿಸಲಾಗಿದೆ. ಈ ಸಂಸ್ಕೃತಿಗಳ ನಡುವೆ ಸಮನ್ವಯತೆ ಇದೆ. ಇಂತಹ ಒಂದು ಸಮೃದ್ಧಿಯಾದ ಸಂಸ್ಕೃತಿಯಲ್ಲಿ 'ಇವನಾರವ'? ಎಂದು ಪ್ರಶ್ನಿಸಲು ಶುರು ಮಾಡಿದರೆ ಘರ್ಷಣೆಗಳು ಸಹಜ. ಇಲ್ಲಿ ಪರಸ್ಪರ ಗೌರವ, ಸಹಿಷ್ಣುತೆ, ಪ್ರೀತಿ ವಿಶ್ವಾಸಗಳು, ಹೊಂದಿಕೆಗಳು ಅತ್ಯಗತ್ಯ. 

ಇದೇ ಮೇಲಿನ ‘ಇವನಾರವ’ ಎಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಇನ್ನೊಂದು ವಚನದ ಸಾಲುಗಳನ್ನು ನೆನೆಯ ಬಹುದು, ಅದು ಹೀಗಿದೆ;

'ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ'. 

ಈ ವಚನದ ಸಾಲುಗಳು ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗುವಂತಹ ಸಾಲುಗಳು. ಈ 'ಅನ್ಯರು' ಅಂದರೆ ಯಾರು? ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ಬಸವಣ್ಣನವರ ಕಾಲಕ್ಕೆ, ೧೨ನೇ ಶತಮಾನದಲ್ಲಿ ಅನ್ಯರು ಅಂದರೆ  ಅಂತ್ಯಜರು, ಶೋಷಿತವರ್ಗದವರು ಎಂದು ವ್ಯಾಖ್ಯಾನಿಸಬಹುದು .  ಈ ೨೧ನೇ ಶತಮಾನದಲ್ಲಿ ಈ ‘ಅನ್ಯ’ರು ಯಾರು? ಎಂಬುದನ್ನು ದೇಶ, ಗಡಿ, ಭಾಷೆ, ಬಣ್ಣ, ಧರ್ಮ, ಜಾತಿ ವ್ಯವಸ್ಥೆ, ಸಂಸ್ಕೃತಿ, ರಾಜಕೀಯನಿಲುವು, ಬಲ ಪಂಥ, ಎಡ ಪಂಥ ಆಲೋಚನೆಗಳು ನಿರ್ಧರಿಸುತ್ತವೆ. ಭಾರತವನ್ನು ಬಿಟ್ಟು ಇಂಗ್ಲೆಂಡಿಗೆ ವಲಸೆ ಬಂದ ನಾನು ಈ ಹೊರದೇಶದಲ್ಲಿ  ಕೆಲವು ಸಂಕುಚಿತ ಮನಸ್ಸುಗಳಿಗೆ ಅನ್ಯನಾಗಿರಬಹುದು. ಭಾರತದಲ್ಲೇ ಇದ್ದು ಅಲ್ಲಿ ಕೂಡ ನನ್ನ ಕೆಲವು ಆಲೋಚನೆಗಳ ಹಿನ್ನೆಲೆಯಲ್ಲಿ, ಅಲ್ಲಿಯೂ ಅನ್ಯನಾಗಬಹುದು. ಹೀಗೆ ಅನ್ಯ ಎಂಬುದು ನಮ್ಮ ನಮ್ಮ ಮನಸ್ಸಿನ ಭಾವನೆಗಳಷ್ಟೇ. ಈ 'ಅನ್ಯ', 'ತನ್ನ' ವನಾಗಬೇಕಾದರೆ, 'ಇವ', 'ನಮ್ಮ'ವನಾಗಬೇಕಾದರೆ  ಕುವೆಂಪು ಹೇಳಿದ ಹಾಗೆ ನಮ್ಮ ಚೇತನಗಳು;

"ರೂಪ ರೂಪಗಳನು ದಾಟಿ 
ನಾಮಕೋಟಿಗಳನು ಮೀಟಿ 
ನೂರು ಮತದ ಹೊಟ್ಟ ತೂರಿ 
ಎಲ್ಲ ತತ್ವದೆಲ್ಲೆ ಮೀರಿ"

ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಂಡಾಗಲೇ ಅದು ಸಾಧ್ಯ, ಇದೇ ವಿಚಾರಗಳನ್ನು ಹಿಂದೆ ಪ್ರತಿಪಾದಿಸಿದ     ಬಸವತತ್ವವನ್ನು ಅರ್ಥಮಾಡಿಕೊಂಡಾಗಲೇ ಅದು ಸಾಧ್ಯ!  ಈ ವಿಶ್ವಮಾನವ ಪ್ರಜ್ಞೆಯ ಹಿನ್ನೆಲೆಯಲ್ಲಿ ಸರ್ವಜ್ಞರ ವಚನವನ್ನುಇಲ್ಲಿ ಪ್ರಸ್ತಾಪಿಸುವುದು ಸೂಕ್ತ;

"ಊರೆಲ್ಲಾ ನೆಂಟರು, ಕೇರಿಯಲ್ಲವೂ ಬಳಗ 
ಧಾರಿಣಿಯು ಎಲ್ಲ ಕುಲದೈವವಾಗಿನ್ನು 
ಯಾರನ್ನು ಬಿಡಲೋ ಸರ್ವಜ್ಞ”

………ಮುಂದುವರೆಯುವುದು ಮುಂದಿನ ಕಂತಿನಲ್ಲಿ ಭಾಗ ೨ನ್ನು ನಿರೀಕ್ಷಿಸಿ

6 thoughts on “ಕವನ ಮತ್ತು ವೈಚಾರಿಕ ಲೇಖನ.

  1. ಡಾಕ್ಟರ ಪ್ರಸಾದ ಅವರ ಲೆಖನ ಬಹಳ ಸುಂದರ ಹಾಗು ಸರಳವಾಗಿದೆ. ಬಸವನ್ನನ ತತ್ವಗಳನ್ನು ಸರಿಯಾಗಿ ಬಿಡಿಸಿ ನಮ್ಮೆಲ್ಲರಿಗೂ ತಿಳಿಯುವ ಹಾಗೆ ಬರೆದಿದ್ದಿರಿ.
    ತಮ್ಮ ಮುಂದಿನ ಲೆಖನವನ್ನು ಒದಲು ಆತುಕರಾದ್ದೇವೆ.
    ಇದು ನನ್ನ ಕನ್ನಡದಲ್ಲಿ ಬರೆಯುವ ಮೊದಲ ಪ್ರಯತ್ನ. ತಪ್ಪುಗಳಿದ್ದರೆ ಋಮಿಸಿ.

    Like

  2. ಸಂಪಾದಕರಾದ ಅಮಿತಾ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

    1. ರಾಧಿಕಾ ಅವರ ಗಪದ್ಯ ಸರಳವಾಗಿದ್ದರೂ ಕೆಲವು ಸಾಲುಗಳು ಶಬ್ದಗಳು ಗಮನ ಸೆಳೆಯುತ್ತವೆ. ಉದಾಹರಣೆಗೆ ‘ಗಮ್ಯ‘ ಎನ್ನುವ ಶಬ್ದ. ಕನ್ನಡದ ಕವನಗಳಲ್ಲಿ ಅಷ್ಟಾಗಿ ಬಳಕೆಯಿಲ್ಲದ ಪದ. ಹಿಂದಿಯಲ್ಲಿ ‘ಮಂಜ಼ಿಲ್‘ ಶಬ್ದವನ್ನು ಮೇಲಿಂದ ಮೇಲೆ ಹಾಡುಗಳಲ್ಲಿ ಕೇಳುತ್ತಲೇ ಇರುತ್ತೇವೆ. ಹೂವು, ಮುಳ್ಳು ಮತ್ತು ಗಂಧದ ರೂಪಕಗಳು ಕವನದಲ್ಲಿ ಪುನರಾವರ್ತಿಯಾಗುತ್ತದೆ, ಹುಟ್ಟು-ಬಿಟ್ಟುಗಳ ತರಹ.

    2. ಪ್ರಸಾದ್ ಅವರ ಲೇಖನಗಳನ್ನು ನಾನು ಕಾತುರದಿಂದ ಎದುರು ನೋಡುತ್ತೇನೆ. ಅವರು ಎತ್ತಿಕೊಳ್ಳುವ ವಿಷಯಗಳು ಗಹನ ಮತ್ತು ಅವರ ಅಧ್ಯಯನವೂ ಆಳ. ಬಸವತತ್ವಗಳ ಪ್ರಸ್ತುತತೆಯನ್ನು ಪ್ರಸಾದ್ ಬಹಳ ಜನರಿಗೆ ಪರಿಚಯವಿರುವ ವಚನಗಳನ್ನು ಎತ್ತಿಕೊಂಡು ಪರಿಚಯಿಸಿದ್ದಾರೆ. ಎರಡನೇಭಾಗವನ್ನು ಎದುರು ನೋಡುತ್ತಿದ್ದೇನೆ.

    – ಕೇಶವ

    Like

  3. ೧) ಮೊದಲಿಗೆ ರಾಧಿಕಾ ಅವರ ಕವನ. ಈಗಾಗಲೇ ಕೆಲವು ಪ್ರತಿಕ್ರಿಯೆಗಳು ಬಂದಿವೆ. ಓದಿದವರ ಎಲ್ಲರದೂ ಒಂದೊಂದು ತರಹದ ಅನುಭವ.ಇದ್ದರೂ ಬಹಿರಂಗಗೊಳಿಸುವದು ಸುಲಭವವಲ್ಲ. ‘ಕವಿ’ ರವಿಕಾಣದ್ದನ್ನೇ ಕಂಡಿರುವಾಗ ಭಾವನೆಗಳನ್ನು ಅನುಭವಿಸಿಯೇ ಬರೆಯ ಬೇಕೇ? ಸೂಕ್ಷ್ಮವಾಗಿ ಅವಲೋಕಿಸಿ, ಗ್ರಹಿಸಿಯೂ ಊಹಿಸಬಹುದಲ್ಲವೇ? ಇದ್ಯಾವದೂ ಮಾಡದೆಯೂ ಕವಿತೆಯಲ್ಲಿ ವ್ಯಕ್ತಮಾಡುವ ಸ್ವಾತಂತ್ರ್ಯ ಇದ್ದೇ ಇರುತ್ತದೆಯಲ್ಲವೇ? ಮೇಲೆ ಪ್ರೇಮಲತಾ ಅವರು ಹೇಳಿದಂತೆ ಆ ಅಗಲಿಕೆ ನೋವಿಗಿಂತ ವಿಶಾಲ; ಅದು ಒಂದು ಅನುಭೂತಿಯೇ ಯಾಕಾಗಲಿಕ್ಕಿಲ್ಲ? ಅದರ ಒಂದು ಝಲಕ್ಕಾದರೂ ರಾಧಿಕಾ ಅವರ ಕವನದಲ್ಲಿದ್ದರೂ ಅದನ್ನು ವ್ಯಕ್ತಪಡಿಸಿದ ರೀತಿ ಸುಂದರವಾಗಿದೆ. ಆ ಪರಿಮಳವನ್ನು ಸೂಸುವಂತೆ ಮಾಡಿದ್ದಾರೆ. ಮುಳ್ಳಿನಿಂದ ಗೀರಿಸಿದರೂ ರಕ್ತ ಹರಿದಿಲ್ಲ! ಅದರಲ್ಲಿಯೂ, (ನೋವಿನಲ್ಲಿಯೂ)ಒಂದು ಆನಂದ, masochist ಆಗದೆಯೂ ಅನುಭವಿಸಬಹುದು. ಈ ಕವಿತೆಯಲ್ಲಿ ಅದರ ಒಂದು ಮುಖ- a presentable facet only, perhaps. ಇದು ನನ್ನ ಅಭಿಪ್ರಾಯ. ಆ ಸಂವೇದನೆಯ ಅಪರೂಪದ ಅಭಿವ್ಯಕ್ತಿ ಇದು ಅಂತ ಅವರನ್ನು ಅಭಿನಂದಿಸುತ್ತೇನೆ.

    ಇನ್ನು ೨) ಈ ವಾರದ ಪ್ರಸಾದ ಅವರ ವೈಚಾರಿಕ ಲೇಖನ: ವಚನಗಳು, ದಾಸರ ಪದಗಳು, ಕಗ್ಗ, ಭಗವದ್ ಗೀತೆ ಇವನ್ನು didactic poetry (ನೀತಿಬೋಧಕ) ಸಾಲಿಗೆ ಸೇರಿಸಬಹುದೇನೋ. ಅವುಗಳು ಎಲ್ಲ ಭಾಷೆಗಳಲ್ಲಿಯೂ ಕಾಣಬಹುದು ಮತ್ತು ಅವು ಸರ್ವಕಾಲಿಕ (timeless). ಆದರೆ ಬಸವ ತತ್ವ ಹೇಗೆ ಇಂದಿನಕಾಲದಲ್ಲೂ ಮತ್ತು ಅನಿವಾಸಿಗಳ ಬದುಕಿನಲ್ಲೂ ಪ್ರಸ್ತುತ ಅನ್ನುವದನ್ನು ಮಾತ್ರ ಇಷ್ಟು ಸರಳವಾಗಿ ಮತ್ತು ಸುಲಲಿತವಾಗಿ ಓದಿಸಿಕೊಂಡು ಹೋಗುವ ಬರಹವನ್ನು ನಾನು ಓದಿಲ್ಲ. ನಮ್ಮ ದೈನಂದಿನ ಜೀವನದ ಉದಾಹರಣೆಗಳೊಂದಿಗೆ ನೀವು ಸ್ಪಷ್ಟ ಪಡಿಸಿದ್ದು ಅನನ್ಯ. ಮುಂದಿನ ಕಂತಿಗೆ ನಾನೂ ಪಾಳಿ ಹಚ್ಚೀನಿ!
    ಶ್ರೀವತ್ಸ ದೇಸಾಯಿ

    Like

  4. ‘ಇಷ್ಟ ವಿರಹಕೆ ಮಿಗಿಲ್ ಶಿಕ್ಷೆಯಂ ಸೃಜಿಪನೇನ್ ನರಕ ಶಿಕ್ಷಾಚಾರ್ಯನಾದೊಡಂ’ ಅಂತ ಹೇಳುತ್ತಾರೆ ಕುವೆಂಪು ರಾಮಾಯಣ ದರ್ಶನಂ ದಲ್ಲಿ. ಯಮಧರ್ಮನಿಗೂ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡಲು ಸಾಧ್ಯವಿಲ್ಲವಂತೆ. ಕವನ ಹೃದಯಸ್ಪರ್ಶಿಯಾಗಿದೆ ರಾಧಿಕಾ ಅವರೇ..ಮುಳ್ಳಲ್ಲಿ ಹೂ ನೋಡುತ ಸಾಗಲೇಬೇಕು ಜೀವನ.
    ಬಸವ ತತ್ವಗಳು ಯಾವಾಗಲೂ ಪ್ರಸ್ತುತವೇ..ತುಂಬ ಚೆನ್ನಾಗಿ ಅದನ್ನು ತಮ್ಮ ಬರಹದಲ್ಲಿ ಅನಾವರಣಗೊಳಿಸಿದ್ದೀರಿ ಪ್ರಸಾದ್ ಅವರೇ. ವಚನಗಳನ್ನು ಸಮಯೋಚಿತವಾಗಿ ಬಳಸಿಕೊಳ್ಳುವುದರ ಮೂಲಕ ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿಸಿದ್ದೀರಿ. ವಚನ ಹಾಗೂ ದಾಸ ಸಾಹಿತ್ಯಗಳು ಒಳಗೊಳ್ಳದ ವಿಷಯಗಳೇ ಇಲ್ಲ. ಆದರೆ ಆ ಎಲ್ಲ ಸಿದ್ಧಾಂತಗಳನ್ನು ಬದಿಗಿಟ್ಟು ಕನಕ-ಬಸವಾದಿಗಳ ಹೆಸರಲ್ಲಿ ರಾಜಕೀಯ ಮಾಡುವುದ ಕಂಡು ಬಹಳ ಬೇಸರವಾಗುತ್ತದೆ. ಮುಂದಿನ ಕಂತು ಓದಲು ಉತ್ಸುಕಳಾಗಿದ್ದೇನೆ.

    Like

  5. ರಾಧಿಕ ನಿಮ್ಮ ಕವನದಲ್ಲಿ ಬರುವ ಭಗ್ನ ಪ್ರೇಮಿಯ ವ್ಯಥೆ, ವಿಷಾದದ ಎಳೆ ಓದುಗರನ್ನು ಕಾಡುತ್ತದೆ. ಕಾಲ ಬಹಳ ಕಠೋರವಾದದ್ದು. ಅದು ಎಷ್ಟೋ ಮಿಲನಗಳನ್ನು ಅಳಿಸಿ ಹಾಕುತ್ತದೆ. ಆದರೆ ನೆನಪಿಗಿರುವ ಶಕ್ತಿ ಅಗಾಧವಾದದ್ದು. ಅಳಿದವರು ಉಳಿಯುವುದು ನಮ್ಮ ಕನಸಿನ ಲೋಕದಲ್ಲಿ ಮತ್ತು ನೆನಪಿನಲ್ಲಷ್ಟೇ. ನೆನಪುಗಳು ಶ್ರೀಗಂಧದ ಪರಿಮಳದಂತೆ ಮಧುರ. ಕಣ್ತೆರೆದರೆ ಉಳಿಯುವುದು ವಾಸ್ತವ ಸತ್ಯ! ದೇಹ ನಶ್ವರ ಪ್ರೇಮ ಅಮರ.

    Like

    • ಡಾ॥ಪ್ರಸಾದ್‌ರವರ ಲೇಖನ ಸಮಯೋಚಿತವಾಗಿದೆ. ಬಸವಣ್ಣರವರ ವಚನಗಳಲ್ಲಿ ಸಾಮಜಿಕ ಪ್ರಜ್ಞೆ ಜನ ಸಾಮನ್ಯರಿಗೆ ಅಥ್ಥವಾಗುವಹಾಗೆ ವಿವರಿಸಿದ್ದಾರೆ. ಇವನಾರಯ್ಯ? ಎನ್ನಬೇಡ ಇವನಮ್ಮವ ಎನ್ನುವ ಬಾವನೆ
      ಭಗದ್‌ಗಿೇತ ತತ್ತವವನ್ನು “ಏಲ್ಲರೊಳಲು ಯಿರುವ ದೇವರು ಓಬ್ಬನೆ “ ಯನ್ನುವುದನ್ನು ಸರಳ ಬಾಷೆಯಲ್ಲಿ ಹೇಳಿದ್ದಾರೆ
      ಈ ಮುಖ್ಯವಾದ ಅಂಶವನ್ನು ವಿವರಿಸಿದ ಪ್ರಸಾದ್‌ರವರಿಗೆ ವಂದನೆಗಳು. ಮುಂದಿನ ಲೇಖನಕ್ಕೆ ಕಾಯುತ್ತಿರುತ್ತೇನೆ.
      VathsalaRamamurthy

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.