ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಎನಿತು ಇನಿದು ಈ ಕನ್ನಡ ನುಡಿಯು 

ಮನವನು ತಣಿಸಿದ ಮೋಹನ ಸುಧೆಯು

 ಗಾನವ ಬೆರೆಯಿಸಿ ವೀಣೆಯ ದನಿಯೊಳು

ವಾಣಿಯ ನೇಪುರ ನುಡಿಸುತೆ ಕುಣಿಯಲು

 ಮಾಣದೆ ಮೆರೆಯುವ ಮಂಜುಲ ರವವೋ

 ಎನಿತು ಇನಿದು ಈ ಕನ್ನಡ ನುಡಿಯು

 – ಆನಂದಕಂದ 
ಇಂಥ ಮಧುರವಾದ ಭಾಷೆಯನ್ನು ಬಳುವಳಿಯಾಗಿ ಪಡೆದ ನಾವೇ ಧನ್ಯರು! ಅನಿವಾಸಿಯಲ್ಲಿ ರಾಜ್ಯೋತ್ಸವ ವಿಶೇಷ ಸಂಚಿಕೆಗೆಂದು ಲೇಖನ, ಕವನ,ನಾಡಗೀತೆ,ಅನುಭವ ಕಥನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಕೇಳಿದಾಗ ಪ್ರೀತಿ ಅಭಿಮಾನದಿಂದ ಬರೆದು,ಹಾಡಿ ಕಳಿಸಿದ ಅನಿವಾಸಿ ಓದುಗರೆಲ್ಲರಿಗೂ ವಂದನೆಗಳು. 
ಈ ಸಂಚಿಕೆಯಲ್ಲಿ ಗೌರಿ ಪ್ರಸನ್ನ ಮತ್ತು ಗಿರೀಶ್ ಪ್ರಸಾದ್ ಅವರು ರಾಜ್ಯೋತ್ಸವದ ನವಿರು ನೆನಪುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಡಾ ರಾಮಶರಣ್ ಅವರು ಬರೆದ ”ಕಂಡಲ್ಲಿ ಕನ್ನಡ”ಎಂಬ ಸುಂದರ ಕವನವಿದೆ. ಜೊತೆಗೆ ‘ಅನಿವಾಸಿ’ಗೆ ಇದೇ  ಮೊದಲ ಬಾರಿ ಬರೆಯುತ್ತಿರುವ ಡಾ ಶ್ರೀಕಾಂತ ಕೃಷ್ಣಮೂರ್ತಿ ಅವರು ತಾಯಿ ‘ಕಾವೇರಿ’ ಯನ್ನು ತ್ರಿಪದಿಯಲ್ಲಿ ಪೋಣಿಸಿ ತಂದಿದ್ದಾರೆ. ಇದಲ್ಲದೆ ಈ ಸಂಚಿಕೆಯಲ್ಲಿ ತಮ್ಮರಾಜ್ಯೋತ್ಸವದೆನಪುಗಳನ್ನು ಬರೆಯುತ್ತಾ ಕನ್ನಡದ ಹಿರಿಯ ಕವಿಗಳಾದ ಸಾಲಿ ರಾಮಚಂದ್ರ ರಾಯರ – ಕನ್ನಡದ ನೆಲದ ಪುಲ್ಲೆನಗೆ. ಈ ಗೀತೆಯ ಹಿನ್ನೆಲೆ, ಇತಿಹಾಸವನ್ನ ಕವಿಯ ಮೊಮ್ಮಗ ಡಾ ಶ್ರೀವತ್ಸ ದೇಸಾಯಿ ಅವರು ಬರೆದಿದ್ದಾರೆ. ಮತ್ತು ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪನವರು ಅನಿವಾಸಿ ಕನ್ನಡಿಗರಿಗೆಂದೆ ಬರೆದಿರುವ – ”ಕಡಲಾಚೆಯ ಕನ್ನಡಿಗರ ಸ್ವಗತ” ಎನ್ನುವ ಎರಡು ಕನ್ನಡ ಗೀತೆಗಳಿವೆ. ಇವೆರಡನ್ನೂ ಈ ಸಂಚಿಕೆಗಾಗಿಯೇ ಹಾಡಿದ ವಿಡಿಯೋಗಳನ್ನು ಕೊಂಡಿಯನ್ನೊತ್ತಿ ’ಅನಿವಾಹಿನಿ’ಯಲ್ಲಿ ಕೇಳಿರಿ.

ಅನಿವಾಸಿ ಓದುಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

ಈ ವಿಶೇಷ ಸಂಚಿಕೆಯ ಓದಿಗೆ ನಿಮಗಿದೋ ಸ್ವಾಗತ 

-ಸಂಪಾದಕಿ 

 

ನನ್ನ ರಾಜ್ಯೋತ್ಸವದ ನೆನಪುಗಳು ಮತ್ತು ‘ನಾಡಗೀತೆ’ಯ ಪೂರ್ವೇತಿಹಾಸ – ಡಾ ಶ್ರೀವತ್ಸ ದೇಸಾಯಿ

ಇವೆಲ್ಲ ಹಳೆಯ ಮಾತುಗಳಾದರೂ ಈ ಲೇಖನದಲ್ಲಿ ಕೆಲವು ಎಲ್ಲರಿಗೂ ಗೊತ್ತಿರದ ಒಂದೆರಡು ಹೊಸ ಮಾಹಿತಿಯಿದೆ.

1956 ರಲ್ಲಿ ರಾಜ್ಯ ಏಕೀಕರಣಗೊಂಡರೂ ಕನ್ನಡ ಮಾತಾಡುವ ಈ ನಾಡನ್ನು ಅಧಿಕೃತವಾಗಿ ’ಮೈಸೂರು ಪ್ರಾಂತ ’ ಎಂದೇ ನಾವು ಶಾಲೆಯಲ್ಲಿದ್ದಾಗ ಕರೆಯುತ್ತಿದ್ದೆವು. ಆಗ ಒಂದು ಅಧಿಕೃತ ನಾಡಗೀತೆಯಿರಲಿಲ್ಲ. ’ಹಳೆಯ ಮೈಸೂರಲ್ಲಿ’ ಕುವೆಂಪು ಅವರು ಬರೆದ ’ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆ ಪ್ರಚಲಿತವಿದ್ದರೆ ಬೇರೆ ಕೆಲವು ಕನ್ನಡದ ದೇಶಭಕ್ತಿಯ ಗೀತೆಗಳು ಸಹ ನಾಡಗೀತೆಯೆಂದು ಕೆಲವರಿಂದ ಕರೆಯಲಾಗುತ್ತಿದ್ದವು. ಉದಾಹರಣೆಗಾಗಿ “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ” ಎಂಬ ಮೊದಲ ರಾಷ್ಟ್ರಕವಿ ಗೋವಿಂದ ಪೈ ವಿರಚಿತ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದ್ದ ’ನಾಡ ಭಕ್ತಿಗೀತೆ’ಯಾಗಿತ್ತು.  ಆ ಮೊದಲು ಮುಂಬಯಿ ಕರ್ನಾಟಕದಲ್ಲಿ ಸೇರ್ಪಡೆಯಾಗಿದ್ದ ನಾಲ್ಕು ಜಿಲ್ಹೆಗಳಲ್ಲಿ ಹುಯಿಲಗೋಳು ನಾರಾಯಣರಾಯರು ರಚಿಸಿದ ”ಉದಯವಾಗಲಿ ನಮ್ಮ ಕನ್ನಡ ನಾಡು” ಗೀತೆಯನ್ನೇ ಆಗ ನಾಡಗೀತೆಯೆಂದು ಕರೆಯಲಾಗುತ್ತಿತ್ತು ಮತ್ತು ನಾವೆಲ್ಲ ಶಾಲೆಯಲ್ಲಿ ಅದನ್ನು ಉತ್ಸಾಹದಿಂದ ಹಾಡುತ್ತಿದ್ದ ನೆನಪು. ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿಯೂ ಅದನ್ನೇ ಹಾಡಲಾಗುತ್ತಿತ್ತು.  ’ಕರ್ನಾಟಕದ ಗತ ವೈಭವ’ವನ್ನು ಬರೆದು ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದು ಕರ್ನಾಟಕದ ಕುಲಪುರೋಹಿತರೆಂದೇ ಜನರು ಕರೆಯುತ್ತಿದ್ದ ಆಲೂರು ವೆಂಕಟರಾಯರು ಸಾಧನಕೇರಿಯಿಂದ ಬೆಳಿಗ್ಗೆ ವಾಕಿಂಗ್ಘೋಗುತ್ತಿರುವಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದರು. ಅವರು ಯಾವಾಗಲೂ ಬಿಳಿ ಗಡ್ಡ, ಶುಭ್ರವಾದ ಬಿಳಿ ನಿಲುವಂಗಿ, ಬಿಳಿ ಧೋತರ ಉಟ್ಟು, ನೆಟ್ಟನೆ ಬೆನ್ನು, ಕೈಯಲ್ಲೊಂದು ಕೋಲು ಹಿಡಿದು ಹೊರತರೆ ಅದೇನು ಗಾಂಭೀರ್ಯ! ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದೆ. ಹುಯಿಲಗೋಳು ನಾರಾಯಣರಾಯರದೋ ತಲೆಗೆ ರುಮಾಲು, ಬಿಳಿ ಕೋಟು ಮತ್ತು ಧೋತರ ಉಟ್ಟು ಒಂದು ಸಮಾರಂಭಕ್ಕೆ ಬಂದಾಗ ನೋಡಿದ ನೆನಪು. ಅವರು ಬರೆದ ನಾಡಗೀತೆಯ ಮೊದಲ ಸಾಲು ’ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’. ಚಲುವ, ಚೆಲುವ ಎರಡೂ ಪದಗಳು ಚಾಲ್ತಿಯಲ್ಲಿದ್ದರೂ ಅವರು ಬರೆದದ್ದು ’ಚಲುವ’. ಅದನ್ನು ತಪ್ಪಾಗಿ ಚೆಲುವ ಅಂತ ಬರೆದವರೇ ಹೆಚ್ಚು. ಅದು ಮೊದಲ ಬಾರಿ ಸ್ವಾಗತಗೀತೆಯಾಗಿ  1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ 43ನೆಯ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅದರ ಉಗಮದ ಕಥೆ ಸ್ವಾರಸ್ಯಕರವಾಗಿದೆ. ಸ್ವಾಗತ ಕಮಿಟಿಯವರು ಒಂದು ಸ್ಪರ್ಧೆಯನ್ನಿಟ್ಟು ಹಾಡುಗಳನ್ನು ಆಹ್ವಾನಿಸಲಾಯಿತು. ಆಗ ನಾರಾಯಣರಾಯರು ಮಲೇರಿಯಾದಿಂದ ಹಾಸಿಗೆ ಹಿಡಿದಿದ್ದರು. ಅವರ ಮಿತ್ರರು ವೃತ್ತಪತ್ರಿಕೆಯನ್ನು ತೋರಿಸಿ ಅವರ ಗೆಳೆಯರು ’ನೀವು ಏಕೆ ಬರೆಯಬಾರದು’ ಎಂದು ಕೇಳಿಕೊಂಡರಂತೆ. ಅದೇ ಪ್ರೇರಣೆಯಾಗಿ ಅವರು ಬರೆದರು. ಅದು ಆಯ್ಕೆಯಾಯಿತು. ಅದನ್ನು ಅಲ್ಲಿ ಹಾಡಿದವರು ಧಾರವಾಡದ ಗವಯ್ಯಿ ಸುಬ್ಬರಾಯರು, ಸಾಮಾಜಿಕ ತಾಣಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಕಾಣ ಬರುವ ಹೆಸರು ’ಹನ್ನೊಂದು ವರ್ಷದ ಗಂಗೂ ಬಾಯಿ ಹಾನಗಲ್’ ಎನ್ನುವದು ತಪ್ಪು (ಆಧಾರ: ಡಾ ಜಿ ಡಿ ಜೋಶಿ ಬರೆದ ಪಿ ಹೆಚ್ ಡಿ ಗಾಗಿ ಬರೆದ ಪುಸ್ತಕ -ಮುಂಬಯಿ ವಿಶ್ವ ವಿದ್ಯಾಲಯ,1996). ಅದರಲ್ಲಿ ನಾರಯಣರಾಯರ ಸ್ವಹಸ್ತದಿಂದ ಬರೆದ ಆ ಗೀತೆ ಇದೆ. ಒಮ್ಮೆ ಎನ್ಕೆ ಕುಲಕರ್ಣಿಯವರು ಗಂಗೂಬಾಯಿಯವರ ಸಂದರ್ಶನದಲ್ಲಿ ಬರೆದ ಕೆಲ ಸಾಲುಗಳೆ ಆ ತಪ್ಪು ಗ್ರಹಿಕೆಗೆ ಮೂಲ ಎಂದು ನನಗೆ ತಿಳಿದು ಬಂದಿದೆ.

ಮೇಲೆ ಹೇಳಿದ ಆ 1924 ರ ಬೆಳಗಾವಿಯ ಅಧಿವೇಶನಕ್ಕೆ ಗಾಂಧೀಜಿಯವರು ಪ್ರಥಮ ಬಾರಿ ಕನ್ನಡ ನಾಡಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಹೆಮ್ಮೆ (ನನ್ನ ಅಜ್ಜ) ಸಾಲಿ ರಾಮಚಂದ್ರರಾಯರದಾಗಿತ್ತು (1888-1978) . ”ಅವರ ದೇಶಭಕ್ತಿ, ಗಾಂಧೀ ಪ್ರೀತಿ, ಭಾಷಾ ಪರಿಣತಿ ಮತ್ತು ಇತ್ತೀಚೆಗೆ ಸಾಧಿಸಿದ್ದ ಹಿಂದೀಭಾಷಾಜ್ಞಾನಕ್ಕಾಗಿ ಅವರನ್ನು ಆರಿಸಲಾಗಿತ್ತು”. (ಹೇಮಾ ಪಟ್ಟಣಶೆಟ್ಟಿ: ಸಾಲಿ ರಾಮಚಂದ್ರ ರಾಯ, ಸಾಹಿತ್ಯ ಅಕಾದೆಮಿ, 2012). ಅವರು 1939ರಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚಿಸಿದ  ”ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ” ಎಂದು ಆರಂಭವಾಗುವ ಕವನವನ್ನು ಹಲವುಕಡೆ ’ನಾಡಗೀತೆ’ಯೆಂದು ಉಲ್ಲೇಖಿಸಲಾಗಿದೆ. ಅದಕ್ಕೆ ರಾಗಸಂಯೋಜನೆ ಮಾಡಿ ಅಮಿತಾ ರವಿಕಿರಣ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -1) ಅವರ ಹಸ್ತಾಕ್ಷರದಲ್ಲಿಯೇ ಬರೆದ ಕವನವನ್ನೂ ಇಲ್ಲಿ ಕೊಟ್ಟಿದೆ.

  ಭಾಷಾವಾರು ಪ್ರಾಂತಗಳ ವಿಂಗಡನೆಯಾದ ನಂತರ ಹೊಸ ಹೆಸರಿಡುವ ಆಂದೋಲನ ಶುರುವಾಯಿತು. ವಿಧಾನ ಸಭೆಯಲ್ಲಿ ’ಕರ್ನಾಟಕ’ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೆದಾಗ ದಕ್ಷಿಣ ಭಾಗದ ಸದಸ್ಯರು ವಿರೋಧಿಸಿ ಮಾತಾಡಿದ್ದು ನೆನಪಿದೆ. ಒಬ್ಬರ ವಾದ ಈಗಲೂ ಹಾಸ್ಯಾಸ್ಪದವೆನಿಸುತ್ತದೆ: ’ತಮಿಳಿನಲ್ಲಿ ಕರ್ನಾಡಗಮ್ ಎಂದರೆ ಹಳ್ಳಿ ಗಮಾರ ಎಂದು ಅಭಿಪ್ರಾಯ” ಎನ್ನುವ ನೆಪ. ಕರ್ನಾಟಕ ಎನ್ನುವ ಹೆಸರು ಅಧಿಕೃತವಾಗಿ ಅಂಗೀಕಾರವಾದದ್ದು 1973 ರಲ್ಲಿ. 1971-72 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರ ಗೀತೆಯನ್ನು ’ನಾಡಗೀತೆ’ ಎಂದು ಘೋಷಿಸಿಯಾಗಿತ್ತು. ಆದರೆ ಸರಕಾರ ಹಾಗೆ ಮಾಡಿದ್ದು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ 2004 ರಲ್ಲಿ. ಆನಂತರವೂ ಆಗಿಂದಾಗ ಚರ್ಚೆ ವಿವಾದ ನಡೆದಿವೆ. ಅದು ಈ ಕಿರುಲೇಖನದ ವಸ್ತು ಅಲ್ಲವೆಂದು ಕೈಬಿಟ್ಟಿದ್ದೇನೆ.

( Govind Pai’s handwritten poem : “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ”By Mysore University Declaration certificate.pdf – Mysore University Declaration certificate.pdf, CC BY-SA 3.0, https://commons.wikimedia.org/w/index.php?curid=33265882 below

ಕವಿಗಳ ಹಸ್ತಾಕ್ಷರಗಳಲ್ಲಿ

ಕಡಲಾಚೆಯ ಕನ್ನಡ ಕುಲ ನಾವು – ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಎರಡು ವರ್ಷಗಳ ಹಿಂದೆ ಕುವೈತ್ ನಿಂದ ಸ್ನೇಹಿತೆಯೊಬ್ಬರು ನನಗೆ ರಾಗ ಸಂಯೋಜನೆ ಮಾಡಿಕೊಡಲಾದೀತೇ ಎಂದು ಒಂದು ಕವಿತೆಯನ್ನು ಕಳಿಸಿದ್ದರು.ಕಡಲಾಚೆಯ ಕನ್ನಡಿಗರ ಸ್ವಗತ ಎನ್ನುವ ಈ ಕವಿತೆಯನ್ನು ಮೊದಲಬಾರಿ ಓದಿದಾಗಲೇ ತುಂಬಾ ಇಷ್ಟವಾಗಿತ್ತು. ಅನಿವಾಸಿ ಕನ್ನ್ನಡಿಗರ ಮನಸ್ಥಿತಿ, ವ್ಯಾಕುಲತೆ, ದೂರವಿದ್ದು ನಾಡಿನ ಗುಂಗಿನಲ್ಲಿರುವ ನಮ್ಮೆಲ್ಲರ ಮನದ ಮಾತಿನಂತಿದೆ ಈ ಕವಿತೆ. ನನ್ನ ಸಂಯೋಜನೆಯನ್ನ ‘ಅನಿವಾಸಿ’ಯ ಹೊಸ ಸದಸ್ಯೆ ಲೇಖಕಿ – ಗಾಯಕಿ ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -2)

 -ಅಮಿತಾ ರವಿಕಿರಣ್ 

ರಾಜ್ಯೋತ್ಸವದ ಸವಿ ನೆನಪು – ಗೌರಿ ಪ್ರಸನ್ನ

ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ. ಹೊರನಾಡಿನ ಕನ್ನಡಿಗರು, ಕನ್ನಡ ಸಂಘಗಳು ನಾಡು-ನುಡಿಯ ಪ್ರೇಮದಲ್ಲಿ ಮತ್ತೆ ಮಿಂದೇಳುವ ಶುಭ ಸಮಯ. ಎಲ್ಲರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

     ‘ಅ ಆ ಇ ಈ ಕನ್ನಡದ ಅಕ್ಷರಮಾಲೆ -ಅಮ್ಮಾ ಎನುವುದೇ ಕಂದನ ಕರುಳಿನ ಕರೆಯೋಲೆ’ ಎನ್ನುವ ಗೀತೆ ಕೇಳುತ್ತಲೇ ಬಾಲ್ಯ ಕಳೆದದ್ದು. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ‘ ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡಿಗೆ ಮಾರುಹೋಗಿ ಏನೇ ಆದರೂ ಕನ್ನಡ ನಾಡಿನಿಂದ ಹೊರಗೆ ಹೋಗೆನೆಂಬ ಧೃಢಸಂಕಲ್ಪವನ್ನು ಮಾಡಿದ್ದೆಷ್ಟು ಬಾರಿಯೋ? ‘ಕೃಷ್ಣ  ಶರಾವತಿ ತುಂಗಾ ಕಾವೇರಿಯ ವರರಂಗಾ’ ಎಂದು ಮಧ್ಯಾಹ್ನ 11:00 ಗಂಟೆಗೆ ಶಾಲೆಯ ಪ್ರಾರ್ಥನೆಯಲ್ಲಿ  ನಾಡಗೀತೆಯನ್ನು ಹಾಡುತ್ತಿರುವಾಗ ಬಿಜಾಪೂರದ ಬಿರುಬಿಸಿಲಿನಲ್ಲೂ ಎದೆಯಲ್ಲಿ ತಣ್ಣನೆಯ ನದಿಯ ಪ್ರವಾಹವೊಂದು ಹರಿಯುತ್ತಿದ್ದುದು ಸುಳ್ಳಲ್ಲ. ನಿತ್ಯೋತ್ಸವದ ಕ್ಯಾಸೆಟ್ ‘ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ’ ಎಂದು ಹಾಡುತ್ತಿದ್ದರೆ ಮೈಯೆಲ್ಲ ಮುಳ್ಳೆದ್ದು ಹೃದಯದ ತುಂಬ ಹೆಮ್ಮೆಯ ಸಂಚಾರ.

  ಜೀವನದ ಮೊದಲ ಮೂರು ದಶಕಗಳಲ್ಲಿ ನಾಡು-ನುಡಿಗಳಿಂದ ದೂರವಾಗಬಹುದಾದ ಕಿಂಚಿತ್ ಕಲ್ಪನೆಯೂ ಇರಲಿಲ್ಲ. ಆದರೆ ನೆಲ-ನೀರು-ಅನ್ನದ ಋಣಗಳು ನಮ್ಮನ್ನು ಒಂದೆಡೆ ಇರಗೊಡುವುದಿಲ್ಲವೇನೋ? ನಾಡಿನಿಂದ ದೂರ ಬಹುದೂರವಿದ್ದರೂ ನುಡಿ ಮಾತ್ರ ಈಗಲೂ ಜೀವನಾಡಿ ಎಂಬುದೇ ಸಧ್ಯಕ್ಕಿರುವ ಸಮಾಧಾನ. ಕನ್ನಡದ ಹೊರತೆನಗೆ ಮತಿಯಿಲ್ಲ-ಗತಿಯಿಲ್ಲ.ನನ್ನ ಮಟ್ಟಿಗೆ ನನ್ನ ಇರವು,ಅರಿವು, ಖೂನು ಗುರುತು, ಮೂಲ ಬೇರು ಎಲ್ಲವೂ ಕನ್ನಡವೇ. ಕನ್ನಡದಿಂದ ಪ್ರತ್ಯೇಕಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ?

  ಕನ್ನಡವನ್ನು ನಾವು ಉಳಿಸಬೇಕು, ಬೆಳೆಸಬೇಕು ಅನ್ನುವುದು ಬಾಲಿಶವೆನಿಸುತ್ತದೆ ಒಮ್ಮೊಮ್ಮೆ. ನಮ್ಮನ್ನು ಉಳಿಸಿದ್ದು,ಬೆಳೆಸಿದ್ದು, ಬಾಳಿಸಿದ್ದೇ ಕನ್ನಡವೆನ್ನವುದು ಸೂಕ್ತವೆನ್ನಬಹುದೇನೋ?

 ಸಧ್ಯಕ್ಕೆ ನನ್ನಾಶೆ..’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ಬದುಕಿದರೆ ಕನ್ನಡ ನೆಲದಲ್ಲೇ ಬದುಕಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಮತ್ತದೇ ಮಣ್ಣಲ್ಲಿ ಮಣ್ಣಾಗಬೇಕು.’

“ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.”

*******************************************************************

ನನ್ನೂರಿನ ರಾಜ್ಯೋತ್ಸವದ ನೆನಪು ಗಳು – ಗಿರೀಶ ಪ್ರಸಾದ್

ನವೆಂಬರ್ ತಿಂಗಳಿಗೂ ನನಗೂ ಬಹಳ ವಿಶೇಷವಾದ ನಂಟು. ನಾನೊಬ್ಬ ಕನ್ನಡಿಗ ಎಂಬುದು ಒಂದು ಮುಖ್ಯ ಕಾರಣವಾದರೆ, ಆ ತಿಂಗಳಲ್ಲಿ ನನ್ನ ಹುಟ್ಟಿದ ದಿನ ಎಂಬುದು ಮತ್ತೊಂದು ಕಾರಣವಿರಬಹುದು. ರಾಜ್ಯೋತ್ಸವವೆಂದರೆ ನನಗೆ ಹುಟ್ಟಿದ ದಿನವಿದ್ದಂತೆ. ಹೇಗೆ ನಾವು ಕೇವಲ ಒಂದು ದಿನ ನಮ್ಮ ಹುಟ್ಟಿದ ದಿನ ಆಚರಿಸಿದರೂ ಪ್ರತಿ ನಿತ್ಯ ಜೀವನವನ್ನು ಸಂಭ್ರಮಿಸುತ್ತೇವೆಯೋ ಹಾಗೇ ರಾಜ್ಯೋತ್ಸವ ಕೂಡ. ಭಾಷೆಯನ್ನು ಸಂಭ್ರಮಿಸುವ, ಪ್ರೀತಿಸುವ , ಆಚರಿಸುವ ದಿನ. ನಾನು ಕಂಡಿರುವ ಸಂಭ್ರಮಿಸಿರುವ ರಾಜ್ಯೋತ್ಸವವೇ ಬೇರೆ ರೀತಿಯದು. “ನಾನು ನವೆಂಬರ್ ಕನ್ನಡಿಗನಲ್ಲ ” ಎಂದು ಹೇಳುವ ಪ್ರಮೇಯವೇ ಬರದಂಥ ಸ್ಥಳದಲ್ಲಿ ಹುಟ್ಟಿದವನು ನಾನು. ಅನೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು, ಒಂದೇ ಒಂದು ಆಂಗ್ಲ ಮಾಧ್ಯಮ ಶಾಲೆ ಇದ್ದ ಊರು ನನ್ನದು. ಸ್ವಾಭಾವಿಕವಾಗಿ ಕನ್ನಡವೇ ಪ್ರಧಾನ ವ್ಯವಹಾರ ಭಾಷೆ. ಯಾರಿಗೂ ಬೇರೆ ಭಾಷೆ ಕಲಿಯುವ ಧಾವಂತ ಇದ್ದಂತೆ ಕಾಣದ ಕಾಲವದು. ಇಂಥ ಒಂದು ಊರಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯ ರಚನೆ ಆದ ದಿನ ಆಗದೆ, ನಮ್ಮತನವನ್ನ ಆಚರಿಸುವ ಹಬ್ಬದಂತಿರುತಿದ್ದುದು ವಿಶೇಷ. ಇಡೀ ಊರಿಗೇ ಊರೇ ಸೇರಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದುದ್ದು , ಎಲ್ಲಾ ಬಸ್ ಮಾಲೀಕರು, ಆಟೋ ಚಾಲಕರು ತಮ್ಮ ವಾಹನಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಊರಲೆಲ್ಲಾ ಓಡಾಡುತ್ತಿದ್ದುದ್ದು ನನ್ನ ಮನಸಲ್ಲಿ ಅಚ್ಚಳಿಯದೆ ಉಳಿದಿದೆ.

ಒಂದು ತಿಂಗಳಿಂದಲೇ ಎಲ್ಲಾ ೧೫ ಶಾಲೆಗಳಲ್ಲೂ ಕವಾಯಿತು , ವಿಶೇಷ ವೇಷ ಭೂಷಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ದತೆಗಳು ಜೋರಾಗಿರುತ್ತಿದ್ದವು. ಹಬ್ಬದ ದಿನ ಬೆಳಿಗ್ಗೆ ೭ ಗಂಟೆಗೆ ಎಲ್ಲಾ ಶಾಲೆಗಲ್ಲಿ ಧ್ವಜಾರೋಹಣದ ನಂತರ ಸಾಲಾಗಿ ಊರಿನ ಕೋಟೆ ಮೈದಾನದಲ್ಲಿ ಒಟ್ಟಿಗೆ ಸೇರಿ ಮತ್ತೊಮ್ಮೆ ಅಲ್ಲಿ ಧ್ವಜಾರೋಹಣದ ನಂತರ ಊರಿನ ಎಲ್ಲಾ ರಾಜಬೀದಿಗಳಲ್ಲಿ ಕವಾಯಿತು ನಡೆಸುವ ಸಂಭ್ರಮ ನೋಡಿಯೇ ತಿಳಿಯಬೇಕು. ಶಾಲಾ ಮಕ್ಕಳ ಕವಾಯಿತಿನ ಜೊತೆಗೆ ಅನೇಕ ಜಾನಪದ ಕಲೆ ಪ್ರಕಾರಗಳು ಅನಾವರಣ ಗೊಳ್ಳುತ್ತಿದ್ದ ರೀತಿ ಬಹಳ ವಿಸ್ಮಯಕಾರಿಯಾಗಿರುತಿತ್ತು .
ಒಂದು ವರ್ಷದ ವೇಷಭೂಷಣ ಸ್ಪರ್ಧೆಯಲ್ಲಿ ನನ್ನ ಕೃಷ್ಣ ದೇವರಾಯ ವೇಷಕ್ಕೆ ಬಹುಮಾನ ವಿಜೇತನಾಗಿದ್ದಲ್ಲದೆ ನನ್ನ ವೇಷದ ವೈಖರಿಗೆ ಮನಸೋತ ಆಯೋಜಕರು ನಮ್ಮ ಇಡೀ ಊರಿನಲ್ಲಿ ಆನೆಯ ಮೇಲೆ ನನ್ನ ಮೆರವಣಿಗೆ ನಡೆಸಿದ್ದು ಮನಸ್ಸಲ್ಲಿ ಅಚ್ಚ ಹಸಿರಾಗಿ ಉಳಿದಿರುವ ರಾಜ್ಯೋತ್ಸವ ನೆನಪುಗಳಲ್ಲೊಂದು .
ಬಹುಷಃ ಕಳೆದ 20 ವರ್ಷಗಳಲ್ಲಿ ನನ್ನೂರು ಬದಲಾಗಿರಬಹುದು .ಅಲ್ಲಿನ ಆಚರಣೆಗಳು ಬದಲಾಗಿರಬಹುದು, ಆದರೆ ಊರಿನ ಜನರ ಮನದಲ್ಲಿ ಈಗಲೂ ಭಾಷೆಯ ಬಗ್ಗೆ ಇರುವ ಒಲವು ಕಡಿಮೆ ಆಗಿಲ್ಲ.

ಈಗೀಗ ನನ್ನ ನಿರೂಪಣೆಯನ್ನು ನೋಡಿ, ಕೇಳಿ ಯಾರಾದರೂ ಬಂದು, ನಿಮ್ಮ ಕನ್ನಡ ಬಹಳ ಚೆನ್ನಾಗಿದೆ, ಭಾಷೆಯನ್ನ ಕಾಪಾಡಿಕೊಂಡಿದ್ದೀರಿ ಎಂದರೆ, ಹೆಮ್ಮೆ ಹಾಗೂ ಬೇಸರ ಎರಡೂ ಒಟ್ಟಿಗೆ ಆಗುತ್ತೆ. ಭಾಷೆಯ ಬಗ್ಗೆ ಹೆಮ್ಮೆ ಎನಿಸಿದರೆ, ಎಲ್ಲರ ಮನಸಲ್ಲಿ, ಮನೆಯಲ್ಲಿ ಮುಕ್ತವಾಗಿ, ಸುಲಲಿತವಾಗಿ ಹರಿದಾಡ ಬೇಕಿರುವ ಭಾಷೆಯನ್ನು ಕಾಪಾಡಿಕೊಳ್ಳುವ ಪ್ರಮೇಯ ಬಂದಿದೆಯಲ್ಲ ಎನ್ನುವುದು. ಅದೇನೇ ಇರಲಿ ಭಾಷೆಯ ಬಳಕೆ ನಿತ್ಯ ಮಂತ್ರವಾಗಿ ಮನ ಮನಗಳಲ್ಲಿ ಕನ್ನಡದ ಬೆಳಕು ಪಸರಿಸಲಿ .

ಜೈ ಕನ್ನಡಿಗ

ಕಂಡಲ್ಲಿ ಕನ್ನಡ – ಡಾ ರಾಮ್ ಶರಣ್

ದೂರದೂರಿನಲಿ ಮಿಡಿಯುತಿದೆ ಮನ
ಬೇಕೆಲ್ಲೆಲ್ಲೂ ಕನ್ನಡ ಪ್ರತಿದಿನ
ಕನ್ನಡಿಯಲ್ಲೇ ಕನ್ನಡ ಪ್ರತಿಫಲನ?
ಬಂದಿರುವುದೇಕೆಂಬುದೇ ನಿತ್ಯ ಮಥನ


ಮಂಜು ಹಾಕಿದ ಮುಸುಕಿನಲಿ
ಬಾಗಿ ಮರಗಳ ಸಾಲಿನಲಿ
ಚೆಲ್ಲಿ ಹರಡಿದ ಎಲೆಗಳಲಿ
ನಾಡ ಬಣ್ಣಗಳು ಕಂಡವಲ್ಲಿ


ಹಗುರು ಬಿಸಿಲಿನ ಕಾವಿನಲಿ
ರೆನ್, ರಾಬಿನ್ನುಗಳ ಇಂಚರದಿ
ವೀಕೆಂಡ್ ಕನ್ನಡ ಸಾಲೆಯಲಿ
ಚಿಣ್ಣರ ಕನ್ನಡ ಕಂಠದಲಿ


ದೂರದೂರಿನಲಿ ಮಿಡಿಯುತಿದೆ ಮನ
ದಿಟ್ಟಿಸಿದಲ್ಲಿಹುದು ಕನ್ನಡತನ
ಇರುವಲ್ಲಿ ಬಿತ್ತಿ ಬೆಳೆಯುವೆ ಅಣ್ಣ
ಕಂಡಲ್ಲಿ ಕನ್ನಡದ ಬಣ್ಣ
-ರಾಂ

( ಚಿತ್ರ ; ಡಾ ರಾಮ್ ಶರಣ್ )

*********************************************************************************

ಶ್ರೀಕಾಂತ್ ಕೃಷ್ಣಮೂರ್ತಿ ಅವರು ಬರ್ಮಿಂಗಹ್ಯಾಮ್ನಲ್ಲಿ consultant psychiatrist ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತದ ವಾಗ್ಗೇಯಕಾರರಾಗಿರುವ ಶ್ರೀಕಾಂತ್ ಅವರು ಕನ್ನಡ, ತಮಿಳು, ಸಂಕೇತಿ ಭಾಷೆಗಳಲ್ಲಿ ಹಾಡುಗಳನ್ನು ಬರೆದು ಸಂಯೋಜಿಸಿದ್ದಾರೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನ ಸಂಕೇತಿ ಅನುವಾದ ಮಾಡಿದ್ದಾರೆ. ಹೈಕು ಕವಿಗಳಾಗಿರುವ ಇವರು ಎರಡುವರ್ಷಗಳ ಕಾಲ British Haiku Society ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.”ephemere” ಎಂಬ ಹೈಕು ಪತ್ರಿಕೆಯನ್ನು ಕೂಡ ಪ್ರಕಟಿಸಿದ್ದಾರೆ.-ಸಂ

ಕಾಯೇ ಕಾವೇರೀ! – ಡಾ ಶ್ರೀಕಾಂತ್ ಕೃಷ್ಣಮೂರ್ತಿ

ಕುಣಿಯುತ್ತ ಸಾಗಿದ ಫಣಿವೇಣಿ ಹೆಣ್ಣಿಗೆ
ಮಣಿದು ತಾ ಬಂದು ಮಳೆರಾಯ ಕೂಡಿದ
ಅಣಿಯಾಗಾಷಾಡ ಮಾಸದಿ

ಅಮ್ಮ ನೀನೀವಾಗ ಬಿಮ್ಮನಸೆಯು ಜೋಕೆ
ಧುಮ್ಮಿಕ್ಕುವಾಗ ದುಡುಕೇಕೆ ದಯೆಮಾಡೆ
ನಮ್ಮಯ ಬಾಳು ನಲಿಯೋಕೆ

ಜಂಬವ ಬಿಟ್ಟೀಗ ತುಂಬಿದ ಬಸುರಿ ನೀ
ಅಂಬೋಧಿ ಕಡೆಗೆ ಹಾಯಾಗಿ ಎಲ್ಲರಿ-
ಗುಂಬುದಕಿತ್ತು ಹೊರಟೆಯಾ

ತಡೆದುಕೋ ದಮ್ಮಯ್ಯ ಮಿಡುಕದಿರಮ್ಮಯ್ಯ
ಹಡೆವಾಗ ನಮ್ಮ ಭಾಗ್ಯವನಾಚೀಚೆ
ದಡಗಳನೊಡೆದು ದಾಟೀಯ

ಹಸುಗೂಸು ಹುಟ್ಟಿದೆ ಹಸುರನು ತೊಟ್ಟಿದೆ
ತುಸು ಈಗ ತಲೆಯನೆತ್ತಿದೆ ತೊಡೆಮೇಲೆ
ಸಿಸುವಿಟ್ಟು ಉಣಿಸಿ ಹರಸಮ್ಮ

ಹೆಚ್ಚಿಗೆ ಕೊಟ್ಟೀಯ ಉಚ್ಚಿಕೊಂಡಾಮೇಲೆ
ಕೊಚ್ಚಿ ಹೋದೀತು ಕೂಸೆಮ್ಮ ಭಾಗ್ಯಕೆ
ಕಿಚ್ಚಿಡ ಬೇಡ ಕಾವೇರಿ

*********************************************************************

ಕೃಪೆ: ಹುಯಿಲಗೋಳ ನಾರಾಯಣರಾಯರ ಕವಿತೆಯ ಫೋಟೋ ಮತ್ತು ಮಾಹಿತಿ: ಹರ್ಷ ಡಂಬಳ್ ಅವರಿಂದ

1. ’ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ’ -ಅಮಿತಾ ರವಿಕಿರಣ ಅವರು ಹಾಡಿದ್ದಾರೆ

2 ‘ಕಡಲಾಚೆಯ ಕನ್ನಡಿಗರ ಸ್ವಗತ” – ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ

11 thoughts on “ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  1. ತಾಯಿ ಬಾರೆ ಮೊಗವ ತೋರೆ ಕವಿತೆಯನ್ನು ಬರೆದವರು ಗೋವಿಂದ ಪೈ ಗಳು. ತಪ್ಪಿ ಪಂಜೆ ಮಂಗೇಶ ಪೈ ಬರೆದಿರುವೆ. ಮನ್ನಿಸಬೇಕು

    Like

  2. ಈ ವಾರದ ಅನಿವಾಸಿ ಅಂಕಣ ಓದಿ ಖುಷಿಯ ಜೊತೆಗೇ ನಿಮ್ಮೆಲ್ಲರ ಆಳವಾದ ಭಾವಗಳ ಭೋರ್ಗರೆತ ನನ್ನನ್ನು ತುಂಬಾ ಭಾವುಕಳನ್ನಾಗಿಸಿ ಬಿಡ್ತು. ಪ್ರತಿಯೊಬ್ಬರ ಲೇಖನವೂ ಒಂದೊಂದು ವೈಶಿಷ್ಟ್ಯ ಹೊತ್ತು ಬಂದಿದೆ. ಶ್ರೀವತ್ಸ ದೇಸಾಯಿಯವರ ಬರಹ ಪ್ರತಿ ಸಲದಂತೆ ಮಾಹಿತಿಯ ಕಣಜವೇ ! ಅವರ ಅಭ್ಯಾಸ ಆಸಕ್ತಿಗಳು ಅಲ್ಲಿ ಸಂಪೂರ್ಣ ಪ್ರತಿಫಲಿತ ಅನಿಸ್ತು ನಂಗೆ. ಗೌರಿಯವರು ಶಾಲಾದಿನಗಳಿಂದ ಶುರು ಮಾಡಿ ಇಂದಿನ ವರೆಗಿನ ರಾಜ್ಯೊತ್ಸವದ ಸಂಪೂರ್ಣ ಚಿತ್ರಣ ನೀಡಿದ್ದು ಭಾವನೆ ಗಳ ತೀವ್ರತೆಗೆ ಕನ್ನಡಿ ಹಿಡಿದಂತೆ. ಗಿರೀಶ ಪ್ರಸಾದ ಅವರದೂ ಅಂಥದೇ ವೈಶಿಷ್ಟ್ಯ ಪೂರ್ಣ ಬರಹ. ರಾಮಶರಣ ಹಾಗೂ ಶ್ರೀಕಾಂತ ಕೃಷ್ಣ ಮೂರ್ತಿ ಅವರ ಕವನಗಳೂ ಮನತಟ್ಟುವ ಕವನಗಳು . ತುಂಬ ಖುಷಿ ನೀಡಿದ ಅಪರೂಪದ ಅಭಿಮಾನದ ದರ್ಶನ ಮಾಡಿಸಿದ ಸಂಚಿಕೆ ನೀಡಿದ ಎಲ್ಲಾ ಬರಹಗಾರರಿಗೂ, ಸಂಪಾದಕಿ ಅಮಿತಾ ಅವರಿಗೂ, ವಿಶೇಷ ವಾಗಿ ಅವರ ಗಾಯನ ಕ್ಕೆ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.ರಂಜಿನಿಯವರು ಹಾಡಿದ ರಾಷ್ಟ್ರಕವಿ ಶಿವರುದ್ರಪ್ಪ ಅವರ ಹಾಡು ಕೇಳಲಾಗಲಿಲ್ಲ.ಯಾಕೋ ತಿಳೀಲಿಲ್ಲ. ಅನಿವಾಸಿ ಬಳಗಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಜೊತೆಗೆ ದೀವಳಿಗೆಯ ಶುಭಾಶಯಗಳು.
    ಸರೋಜಿನಿ ಪಡಸಲಗಿ

    Liked by 1 person

    • ಈಗ ಪ್ರಯತ್ನ ಮಾಡಿ. ನನಗೇನೋ ಶ್ರೀರಂಜನೀಯವರ ವಿಡಿಯೋ ಸರಿಯಾಗಿಯೇ ಇದೆ ಅನಿಸುತ್ತದೆ.

      Like

  3. ಪ್ರಸಾದ್., ರಾಂಶರಣ್, ಪ್ರೇಮಲತಾ ಮತ್ತು ರಾಮಮೂರ್ತಿಯವರೆಲ್ಲರ ಪ್ರತಿಕ್ತ್ರಿಯೆ ಸ್ಫೂರ್ತಿಯನ್ನು ಕೊಡುತ್ತಿವೆ. ಹೃತ್ಪೂರ್ವಕ ಧನ್ಯವಾದಗಳು.

    Like

  4. ಅದ್ಭುತವಾದ ಲೇಖನ ಮತ್ತು ಕವಿತೆಗಳು, ಶ್ರೀವತ್ಸ ಅವರ ಹತ್ತಿರ ಒಂದು Tresure Trove ಇದ್ದಹಾಗಿದೆಇವು priceless
    ನಾನು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ( ಯಾವಾಗ ಅಂತ ಕೇಳಬೇಡಿ !) ಹಾಡುತ್ತಿದ್ದ ಒಂದೇ ನಾಡಗೀತೆ “ ಕಾವೈ ಶ್ರೀ ಗೌರಿ ಕರುಣಾ ಲಹರಿ…. “ God save our gracious queen ….”. ಅನ್ನುವ ಶೈಲಿಯಲ್ಲಿ ಈ ಹಾಡು ,
    ಸಂಪಾದಕಿ ಅಮಿತ ರಾಜ್ಯೋತ್ಸವದ ಈ ಸಂಚಿಕೆಯನ್ನು ಬಹಳ ಚೆನ್ನಾಗಿ ತಂದಿದ್ದಾರೆ

    Liked by 1 person

  5. ಕನ್ನಡ ಹಬ್ಬ ‘ಅನಿವಾಸಿ’ ಯಲ್ಲಿ ಇಂದು. ನಾಡಗೀತೆಯ ಇತಿಹಾಸ ದೇಸಾಯಿಯವರ ಕಲಮಿನಲ್ಲಿ ಎಂದಿನಂತೆ ಕೇಳರಿಯದ ವಿಶೇಷತೆಗಳೊಂದಿಗೆ ಮೆರಗನ್ನಿತ್ತಿದೆ. ಗೌರಿಯವರ ರಾಜ್ಯೋತ್ಸವದ ನೆನಪುಗಳು ಮತ್ತೆ ಬಾಲ್ಯಕ್ಕೆ ಎಳೆದೊಯ್ದು ನಿಲ್ಲಿಸುತ್ತದೆ. ಅವರ ಹಂಬಲಗಳು ನಮ್ಮೆಲ್ಲರದ್ದೂ ಆಗಿವೆಯಲ್ಲವೇ! ಅನಿವಾಸಿಗೆ ಹೊಸಬರಾದ ಗಿರೀಶರ ನೆನಪಿನ ದೋಣಿಯ ವಿಹಾರ ಚೇತೋಹಾರಿಯಾಗಿದೆ. ಶ್ರೀಕಾಂತರ ಕಾವೇರಿ ಕವನ ಶಾಂತಿ, ಸೌಹಾರ್ದತೆಗೆ ಸಾಕ್ಷಿ.

    ಅಮಿತಾರ ಅಮಿತ ಗಾಯನ ಹಾಗೂ ಸಂಗೀತ ಸಂಯೋಜನೆ ಪ್ರತಿಭೆ, ರಂಜನಿ ಅವರ ಗೀತೆ ಇಂದಿನ ವಿಶೇಷ ಸಂಚಿಕೆಗೆ ಚಿನ್ನದ ಚೌಕಟ್ಟು ಕಟ್ಟಿವೆ.

    -ರಾಂ

    Liked by 1 person

  6. ನಾಡ ಹಬ್ಬ- ಅದಕ್ಕೆ ತಕ್ಕನಾಗಿ ಅನಿವಾಸಿಯಲ್ಲಿ ಮತ್ತೊಂದು ಸುಗ್ಗಿ. ಸಂಪಾದಕಿ ಅಮಿತಗೆ ಇನ್ನೊಮ್ಮೆ ಅಭಿನಂದನೆಗಳು. ಅವರ ಕಂಠದ ಹಾಡಿನ ಸ್ಪಷ್ಠ ಉಚ್ಚಾರದ ಶಬ್ದಗಳೂ ಅಷ್ಟೇ ಮಧುರ. ರಂಜನಿ ಹಾಡಿರುವ ಜಿ.ಎಸ್.ಎಸ್.ರ ಹಾಡು ಬಹಳ ಇಷ್ಟವಾಯಿತು. ಅನಿವಾಸಿಗಳ ಪರವಾಗಿ ಅವರು ಬರೆದ ಕವನ ನಮ್ಮೆಲ್ಲರ ಮಿಡಿತ .
    ರಾಂ ನವೆಂಬರ್ ಎಲೆಗಳ ಬಣ್ಣದಲ್ಲೂ ಕನ್ನಡದ ಬಣ್ಣವನ್ನು ಕಂಡಿರುವುದೇ ಇದಕ್ಕೆ ಸಾಕ್ಷಿ. ಇದನ್ನೇ ಗೌರಿಯವರು ಶಬ್ದಗಳಲ್ಲಿ ಹೇಳಿದ್ದಾರೆ. ಕನ್ನಡದ ಬಗೆಗಿನ ಎಲ್ಲ ಸುಂದರ ಹಾಡುಗಳೂ ನಾಡಗೀತೆಗಳೇ. ದೇಸಾಯಿಯವರು ಕೊಟ್ಟಿರುವ ಪಟ್ಟಿಯಲ್ಲಿಲ್ಲದ ಇನ್ನೊಂದು ಹಾಡನ್ನುಗೌರಿಯವರು ನೆನೆದಿರುವುದೇ ಇದಕ್ಕೆ ಸಾಕ್ಷಿ. ಗಿರೀಶ ಪ್ರಸಾದ್‌ ಹೇಳುವ ಮಾತೆಷ್ಟು ನಿಜ. ಕನ್ನಡಿಗರು ಕನ್ನಡವನ್ನು ಚೆನ್ನಾಗಿ ಬಲ್ಲ ಕೆಲವರನ್ನು ವಿಚಿತ್ರವಾಗಿ ಅಭಿನಂದಿಸುವಾಗ ಎರಡೆರಡು ಭಾವಗಳು ಕಾಡುವುದು ನಿಜ! ಕಾವೇರಿಯ ಹಾಡಿನೊಂದಿಗೆ ಹರಿದು ಬಂದ ಶ್ರೀಕಾಂತರಿಗೆ ಸ್ವಾಗತ. ಸರ್ವರಿಗೂ ನಾಡಹಬ್ಬದ ಶುಭಾಶಯಗಳು.

    Liked by 1 person

  7. ನಾಡಗೀತೆಯ ಮತ್ತು ಆಗಿನ ಕಾಲಘಟ್ಟದ ಹಿನ್ನೆಲೆಯನ್ನು, ಉತ್ತರ ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಧುರೀಣರನ್ನು, ಇತಿಹಾಸವನ್ನು ಶ್ರೀವತ್ಸ ಅವರು ಮಾಹಿತಿಗಳ ಮೂಲಕ ನಮಗೆ ಪರಿಚಯಿಸಿದ್ದಾರೆ. ಕುವೆಂಪು ರಚಿಸಿದ ನಾಡಗೀತೆಯನ್ನು ಸರ್ಕಾರ ಅಧಿಕೃತ ಗೊಳಿಸಿದ್ದರೂ ಇತರ ಹಿಂದಿನ-ಇಂದಿನ ಕವಿಗಳು ಬರೆದ ನಾಡ ಭಕ್ತಿಗೀತೆಗಳು ಅಷ್ಟೇ ಸ್ಪೂರ್ತಿದಾಯಕವಾಗಿ ಚಾಲನೆಯಲ್ಲಿದೆ ಎಂದು ಹೇಳಬಹುದು.
    ಗೌರಿ ಅವರ ನೆನಪುಗಳು ತುಡಿತಗಳು ಅವರ ಭಾವನೆಗಳಿಗಷ್ಟೇ ಸೀಮಿತವಾಗದೆ ಅದು ಇಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರ ತುಡಿತ , ಆಶಯಗಳಾಗಿವೆ. ಸಂಕ್ಷಿಪ್ತವಾದ ಈ ಬರಹದಲ್ಲಿ ಅವರ ತುಡಿತದ ಆಳವನ್ನು ಅಳಲನ್ನು ಗ್ರಹಿಸಬಹುದು.
    ಗಿರೀಶ್ ಅವರ ನೆನಪಿನ ಮೆರವಣಿಗೆ ಅವರ ವೈಯುಕ್ತಿಕ ಆನೆ ಮೆರವಣಿಗೆಯಷ್ಟೇ ಸ್ಪಷ್ಟವಾಗಿದೆ
    ಇಂಗ್ಲಿಷ್ ಕನ್ನಡಿಯಲ್ಲಿ ಕನ್ನಡವನ್ನು ಕಾಣುವ ಮತ್ತು ಇಲ್ಲಿಯ ಪರಿಸರದಲ್ಲೂ ಕನ್ನಡವನ್ನು ಕಾಣುವ ಹಂಬಲ ಹೆಮ್ಮೆಯ ಕವಿ ರಾಮ್ ಶರಣ್ ಅವರದಾಗಿದೆ.
    ಹಿಂಗಾರಿನ ಮಳೆಯಲ್ಲಿ ಭೋರ್ಗರೆಯುವ ಕಾವೇರಿಯನ್ನು ಪ್ರಶಾಂತವಾಗಿ ಹರಿಯುವಂತೆ ಬೇಡಿಕೊಳ್ಳುವ ಕವಿಯ ಧ್ವನಿ ನೆರೆಯ ಅಬ್ಬರದಲ್ಲೂ ತಾಯಿಗೆ ಕೇಳಿಸಲಿ ಎಂದು ನಾವೆಲ್ಲಾ ಆಶಿಸುತ್ತೇವೆ. ಶ್ರೀಕಾಂತ್ ಅವರಿಗೆ ಸ್ವಾಗತ
    ಅಮಿತ ಮತ್ತು ರಂಜನಿ ಅವರ ಕನ್ನಡ ಗೀತೆಗಳು ರಾಜ್ಯೋತ್ಸವದ ಸಂಭ್ರಮವನ್ನು ಮೆರುಗನ್ನು ಹೆಚ್ಚಿಸಿದೆ. ಸಮಯೋಚಿತವಾದ ಪ್ರಯತ್ನ ಶ್ಲಾಘನೀಯ

    Liked by 1 person

    • ಎಲ್ಲ ಲೇಖನಗಳು ತುಂಬಾ ಸುಂದರವಾಗಿವೆ. ಕರ್ನಾಟಕದಲ್ಲಿ ಇರುವ ನಮಗೆ ಇದು ಪ್ರತಿ ನಡೆಯುವ ಒಂದು ಸಮಾರಂಭ. ಆದರೆ ಅನಿವಾಸಿಗಳು ಇದನ್ನು ನೆನೆಸಿಕೊಂಡು ಬರೆದಿರುವದು ತುಂಬಾ ಸಂತೋಷ. ನಾವು ಪ್ರತಿ ಶುಕ್ರವಾರ ಅನಿವಾಸಿ ಲೇಖನಕ್ಕಾಆಗಿ ಕಾಯುತ್ತಿರುತ್ತೇವೆ. ಶ್ರೀವತ್ಸ ಅವರು ಲೇಖನ ಬರೆಯುವಾದಕ್ಕಾಗಿ ಸಾಕಷ್ಟು ಜನರ ಜತೆ ಚರ್ಚಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಹುಯಿಲ್ಗೊಳ ನಾರಾಯಣರಾಯರ ಹಾಗೂ ಪಂಜೆ ಮಂಗೇಶ ಪೈ ಅವರ ಕವಿತೆಗಳ ಮೂಲ ಪ್ರತಿಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿರುವದು ಅತ್ಯಂತ ಸಂತಸ ತಂದಿದೆ. ನವೆಂಬರ 1, ಇನ್ನು ಒಂದು ಮುಖ್ಯ ದಿನ. ಅದು ಡೆಪ್ಯುಟಿ ಚನಬಸಪ್ಪನವರ ಹುಟ್ಟುಹಬ್ಬ. ಅವರನ್ನು ನಾವು ನೆನೆಯಬೇಕು.

      Like

    • ಸವಿಸ್ತಾರವಾಗಿ ಪ್ರತಿಯೊಬ್ಬರ ಬರಹದ ವಿಮರ್ಶೆ ಮಾಡಿದವರಿಗೆಲ್ಲ ಅಭಿನಂದನೆಗಳು. ಆನೆಯ ಮೇಲೆ ಮೆರೆದ ಗಿರೀಶರ ಅನುಭವ ಚಂದ ರೋಚಕ ಮತ್ತು ಅಸೂಯೆಕೊಡುವಂಥದು! ಗೌರಿಯವರ ಬರಹದಲ್ಲಿ ಬರೆದ ಅನುಭವ ನಿಜ. ನಮಗೆಲ್ಲ ಅನಿಸಿದ ಇಲ್ಲಿ ಹೇಗೆ ಬಂದೆ, ಏಕೆ ಮತ್ತು ರಾಂ ಅವರ ಕವನದಲ್ಲಿ ಬರೆದಂತೆ ಇಲ್ಲಿ ಎಲ್ಲದರಲ್ಲೂ ಅಲ್ಲಿಯದನ್ನೇ ನೆನಪಿಸುತ್ತ ದಿನ ಕಳೆಯುವ ಪರಿ ರೂಢಿಯಾಗಿ ಹೋಗುತ್ತದೆ! ಕೇಳಿ ಅನುಭವದ ಮಾತು ಇದು!ಮೊದಲ ಕವನದಲ್ಲೇ ತಮ್ಮ ಛಾಪು ತೋರಿಸಿದ ಶ್ರೀಕಾಂತ್ ಮತ್ತು ಗಾಯನ ಪ್ರತಿಭೆಯರಳಿಸಿದ ಶ್ರೀರಂಜನಿ ಇವರೆಲ್ಲ ಮೆರುಗು ಕೊಟ್ಟು ಈ ಸಲದ ರಾಜ್ಯೋತ್ಸವ ಕೊಡುಗೆಯ ಶೋಭೆ ಹೆಚ್ಚಿಸಿದ್ದಾರೆ. ಎಲ್ಲದರ ಹಿಂದೆ ಮತ್ತು ಮುಂದೆ ಸಹ ಕಾಣಿಸಿದ ಇದರ ಸೂತ್ರಧಾರಿ ಅಮಿತಾ ಅಂತೂ ಸರಿಯೇ, ನಮ್ಮ ಹೆಮ್ಮೆ ಅಂತೂ ಖರೆ!

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.