ಆತ್ಮೀಯ ಓದುಗರೇ ,
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನಿಮ್ಮ ಓದಿಗಾಗಿ ನಾಲ್ವರು ಕವಿಗಳ ಅತ್ಯದ್ಭುತ ಕವನಗಳಿವೆ. ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರರ ಸಂಘ ಸಂಪಾದಿಸಿ ಪ್ರಕಟಿಸಿರುವ ‘’ಕಾವ್ಯಾಮೃತ-ವೈದ್ಯಲೋಕದ ಭಾವ ಸಂಚಲನ” ಎಂಬ ಕವನಸಂಕಲನದಲ್ಲಿ ನಮ್ಮ ಅನಿವಾಸಿಯ ನಾಲ್ಕು ಜನ ವೈದ್ಯಕವಿಗಳ ಕವನಗಳು ಆಯ್ಕೆಯಾಗಿ ಪ್ರಕಟಣೆ ಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ . ಡಾ ಜಿ ಎಸ್ ಶಿವಪ್ರಸಾದ, ಡಾ ಕೇಶವ ಕುಲ್ಕರ್ಣಿ, ಡಾ ಮುರಳಿ ಹತ್ವಾರ್ ಹಾಗು ಡಾ ರಾಮಶರಣ್ ಲಕ್ಷ್ಮಿನಾರಾಯಣ್ ಅವರಿಗೆ ಅನಿವಾಸಿ ಬಳಗದ ಹಾರ್ದಿಕ ಅಭಿನಂದನೆಗಳು.
ಈ ವಾರದ ಓದಿಗೆ ನಿಮಗಿದೋ ಸ್ವಾಗತ
-ಸಂಪಾದಕಿ
1) ಮುಸಲ ಧಾರೆ - ರಾಮಶರಣ್ಹೊಳೆ ಹೊಳೆವ, ಆಕರ್ಷಕ ಕೊಳ ಎಲ್ಲಿಂದಲೋ ಬೀಸಿ ಬಂತಂದು ಮಾಳ ತಂತು ಕಾರ್ಮೋಡದಿ ಹುದುಗಿದ್ದ ವರ್ಷಾ ಜಾಲ. ಹನಿ ಹನಿಯಾಯ್ತು ಮುಸಲ ಧಾರೆ ಹನಿಯಲ್ಲ; ಚಿತ್ತ ಕ್ಷೊಭೆ, ನಾ ತಾಳಲಾರೆ ತಳದಲ್ಲಿ ಹಣಿ ನಿಂತ ಕಸ-ಮೃತ್ತಿಕೆ ಮೇಲೆದ್ದು ಇರಿಯಿತು ಖಡ್ಗವ ಮನಕೆ ಬೇಡೆನಗೆ ಈ ಚಿತ್ರಹಿಂಸೆ, ಮಳೆಗಿಲ್ಲ ಇದಾವುದರ ಚಿಂತೆ ಕೊಡೆಯಿಲ್ಲೆಂಬ ಪರಿವಿಲ್ಲದೆ ಹೊಡೆಯುತಿದೆ ಭರ್ತಿ ಹೋಗಿನ್ನು ಬರಬೇಡವೆನಲೂ ಎನಗಿಲ್ಲ ಶಕುತಿ ಬರಗಾಲ ಬಂದೆಲ್ಲ ಬರಡಾದರೆಂಬ ಭೀತಿ ಡೋಲಾಯಮಾನ ಮನ, ಕಣ್ಬರದು ಮುಂದಿನ ದಿನ ಬೊಂಕಿಯಲಿ ಬೆಂದು, ಪ್ರಹಾರಗಳ ತಿಂದು ಅಭರಣವಾದಂತೆ ಚಿನ್ನ ಕಾರ್ಮೋಡದಂಚಿನಲಿ ನೇಸರನ ಬಣ್ಣ ************************************************************ 2) ವೈದ್ಯ ವೃತ್ತಿಗೆ ನಮನ- ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ
ಹಗಲಿರುಳೆನ್ನದೆ ಹಸಿವೆ ನಿದ್ರೆಗಳ ಲೆಕ್ಕಿಸದೆ ತುರ್ತು ಕರೆಗಳಿಗೆ ಓಗೊಟ್ಟು ಸಹನೆಯ ಕಿವಿಗೊಟ್ಟು ಅನುಕಂಪೆಯ ಹಸ್ತವ ನೀಡಿ ಸವಿಮಾತುಗಳನಾಡಿ ಕರುಣೆಯ ಕಣ್ಗಳ ಹಾಯಿಸಿ ಆಶ್ವಾಸನೆಗಳನಿರಿಸಿ ಅಲ್ಲಿ ಇಲ್ಲಿ ತಡಕಿ ದೇಹದಾಳಕೆ ಇಳಿದು ರಕ್ತದಲ್ಲಿ ಕೈ ತೊಳೆದು ವಿಧಿ ಲಿಖಿತ ದಿಕ್ಕುಗಳ ಬದಲಿಸುತ ತನ್ನೆಚರದಲಿ ನೊಂದ ಜೀವರಿಗೆ ಮಿಡಿಯುವ ತುಡಿಯುವ ವೈದ್ಯ ಯೋಗಿಗೆ ಶರಣು ಶರಣು ರೋಗ ರುಜಿನಗಳು ಕಳೆದು ನೋವು ತಾಪಗಳು ಅಳಿದು ಧನ್ಯ ರೋಗಿಯು ಕೈ ಮುಗಿವ ವೇಳೆಯಲಿ ಗೆಲುವ ಛಲವ ಮೇಲೆತ್ತಿ ಹಿಡಿಯುವ ವೈದ್ಯ ವೃತ್ತಿಗೆ ನೂರಾರು ನಮನಗಳು ************************************************* 3) ಡಾ ಕೇಶವ್ ಕುಲ್ಕರ್ಣಿ ಅವರ ಎರಡು ಕವಿತೆಗಳು ೧ ಮೆದುಳಿನ ಸ್ಕ್ಯಾನ್ - 1 ಸಿ.ಟಿ ಸ್ಕ್ಯಾನ್‍ನಲ್ಲಿ ಎಂ.ಆರ್.ಐ ಸ್ಕ್ಯಾನ್‍ನಲ್ಲಿ ಮೆದುಳು ಕಾಣಿಸಿಕೊಳ್ಳುವುದು ಕಪ್ಪು ಬಿಳುಪಿನ ನಡುವಿನ ಸಹಸ್ರಾರು ‘ಶೇಡ್‘ಗಳಾಗಿ, ಥೇಟು - ಬದುಕಿನಂತೆ. 2 ಎಂಬತ್ತು ಬಿಲಿಯನ್ ನರಗಳು ಅಕ್ಟೋಪಸ್ಸಿನಂತೆ ಸಹಸ್ರಾರು ಕೈ ಕಾಲುಗಳನ್ನು ಚಾಚಿ ಒಂದೊಕ್ಕೊಂದು ಸುತ್ತಿ ಹೊಸೆದು ಗಂಟು ಹಾಕಿ ನೂರಿಪ್ಪತ್ತು ಟ್ರಿಲಿಯನ್ ನರಮಂಡಲಗಳಾಗಿ ಬುರುಡೆಯೊಳಗೆ ಅವಿತು ಕೂತಿರುವ ಈ ಮುದ್ದೆ ಸಿ.ಟಿ ಸ್ಕ್ಯಾನ್‍ನಲ್ಲಿ ಎಂ.ಆರ್.ಐ ಸ್ಕ್ಯಾನ್‍ನಲ್ಲಿ ಕಾಣಿಸಿಕೊಳ್ಳುವುದು ಪೈನಾಪಲ್ಲನ್ನೋ ಕ್ವಾಲಿಫ್ಲಾವರನ್ನೋ ಚಾಕುವಿನಿಂದ ನೀಟಾಗಿ ಕತ್ತರಿಸಿಟ್ಟಂತೆ ಬಿಲಿಯನ್ ನರಗಳಲ್ಲಿ ಒಂದು ನರವೂ ಕಾಣಿಸುವುದಿಲ್ಲ ಟ್ರಿಲಿಯನ್ ನರಮಂಡಲಗಳಲ್ಲಿ ಒಂದು ಮಂಡಲವೂ ಗೊತ್ತಾಗುವುದಿಲ್ಲ ಆದರೂ ಒಂದಾದ ಮೇಲೆ ಒಂದು ಸ್ಕ್ಯಾನನ್ನು ರಿಪೋರ್ಟ್ ಮಾಡುತ್ತ ಹೋಗುತ್ತೇನೆ ಎಲ್ಲ ಅರ್ಥವಾದವನಂತೆ ಮೆದುಳನ್ನು ಅರೆದು ಕುಡಿದವನಂತೆ ಸ್ಕ್ಯಾನಿನಲ್ಲಿರುವ ಮೆದುಳು ನನ್ನನ್ನು ಅಣಕಿಸುತ್ತದೆ 3 ನಾನು ರಿಪೋರ್ಟ್ ಮಾಡುವಾಗ ಆರು ವರ್ಷದ ನನ್ನ ಮಗಳು ‘ಇದೇನಪ್ಪಾ?’ ಎಂದು ಕೇಳುತ್ತಾಳೆ. ‘ಮೆದುಳು,’ ಎಂದು ಅವಳಿಗರ್ಥವಾಗುವಂತೆ ವಿವರಿಸಿ ಹೇಳುತ್ತೇನೆ; ಪ್ರಶ್ನೆಗಳನ್ನು ಸುರಿಸುತ್ತಾಳೆ: ಇದು ಮಗುವಿನ ಮೆದುಳೋ ತಾತನ ಮೆದುಳೋ? ಇದು ಗಂಡಿನ ಮೆದುಳೋ ಹೆಣ್ಣಿನ ಮೆದುಳೋ? ಸ್ಕ್ಯಾನ್ ಮಾಡುವಾಗ ಈ ಮೆದುಳು ನಗುತ್ತಿತ್ತೋ ಅಳುತ್ತಿತ್ತೋ ಗೊತ್ತಾಗುತ್ತಾ?
೨ ಹೊಟ್ಟೆಯಲ್ಲಿರುವ ಮಗು
1 ಭ್ರೂಣವಿದೆ ಭ್ರೂಣದ ಎದೆಯೂ ಮಿಡಿಯುತ್ತಿದೆ’ ಎಂದು ಕಪ್ಪು ಬಿಳುಪಿನ ಚಿಕ್ಕ ಆಕೃತಿಯನ್ನು ಸ್ಕ್ಯಾನಿನ ಸ್ಕ್ರೀನಿನ ಮೇಲೆ ತೋರಿಸುತ್ತಿದ್ದೆ. ‘ಕರೆಯಿರಿ ಅವರನ್ನು,’ ಎಂದಳಾಕೆ. ‘ಯಾರನ್ನು? ಗಂಡನನ್ನಾ?’ ‘ಇಲ್ಲ, ನನ್ನ ಅತ್ತೆಯನ್ನು, ಹತ್ತು ವರ್ಷದಿಂದ ಬಂಜೆ ಬಂಜೆ ಎಂದು ಹಂಗಿಸುತ್ತಿದ್ದಾಳೆ,’ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು 2 ‘ಇದು ಕಣ್ಣು ಇದು ಮೂಗು ಇದು ಬಾಯಿ ಇದು ಕೈ ಇದು ಕಾಲು,’ ಎಂದು ಸ್ಕ್ಯಾನ್ ಮಾಡುತ್ತ ತೋರಿಸುತ್ತಿದ್ದೆ ‘ಮೂಗು ನನ್ನಂತೆ ಕಣ್ಣು ನನ್ನ ಅಪ್ಪನಂತೆ ಬಾಯಿ ನನ್ನ ಅಜ್ಜಿಯಂತೆ,’ ಎಂದಳು ‘ಇಲ್ಲವೇ, ಕಣ್ಣು ನನ್ನಂತೆ ಮೂಗು ನನ್ನ ಅಮ್ಮನಂತೆ ಬಾಯಿ ಮಾತ್ರ ನಿನ್ನಂತೆ,’ ಎಂದ ಇಬ್ಬರೂ ಅಲ್ಲೇ ಸರಸದ ಜಗಳ ಶುರು ಮಾಡಿದರು ಸ್ಕ್ಯಾನಿನಲ್ಲಿ ಕೈಕಾಲಾಡಿಸುತ್ತಿರುವ ಮಗು ನಕ್ಕಂತಾಯಿತು ******************************************************** 4 ದೀಪದ ಬತ್ತಿ - ಮುರಳಿ ಹತ್ವಾರ್
ಸುಡು ಬಿಸಿಲಿಗೆ ತನ್ನ ಮೈಯೊತ್ತಿ ಬೀಸುವ ಬಿರುಗಾಳಿಗೆ ಕೈ ಎತ್ತಿ ಬೆಳೆವ ಹಸಿರಲಿ ತೇಲುವ ಬಿಳಿ ಹತ್ತಿ ಜತನದಲಿ ಬಿಡಿಸಿ ನೀವಲು ತಾ ಸುತ್ತಿ ಎಣ್ಣೆಯಲಿ ಮುಳುಗಿ, ಮತ್ತೆ ನೆತ್ತಿಯನೆತ್ತಿ ದೀಪಗಳ ಬೆಳಕಿನ ಬುತ್ತಿಯಾಯಿತು ಬತ್ತಿ ಬೆಂಕಿ ತಾಗಲು ಬೆಳಕಾಗುವದದು ತಾ ಹೊತ್ತಿ ಕತ್ತಲ ಇರುಳಲಿಟ್ಟು ನೂರು ಭರವಸೆಗಳ ತತ್ತಿ ಚಿತ್ತದಾ ಚಿಪ್ಪಿನೊಳು ಮುತ್ತಿನಾ ಸರಪಳಿಯ ಸುತ್ತಿ ತನ್ನೊಡಲ ತಾ ಕಾಯೆ ಹತ್ತಿ, ಅದು ಬತ್ತಿಗಳ ಗುತ್ತಿ ಬತ್ತಿಯಾಗದೆ ಉರಿಯೆ ಹತ್ತಿ, ಬರಿ ಬೂದಿಯ ದತ್ತಿ!